Monthly Archives: February 2014

ಲೋಕ್‌ಸತ್ತಾದಿಂದ ಆಮ್ ಆದ್ಮಿಯೆಡೆಗೆ…

ಸ್ನೇಹಿತರೇ,

ನಿಮಗೆಲ್ಲಾ ನನ್ನ ಸಕ್ರಿಯ ರಾಜಕೀಯ ಹೋರಾಟದ ಬಗ್ಗೆ ಗೊತ್ತೇ ಇದೆ. ಒಂದೂವರೆ ವರ್ಷದ ಹಿಂದೆ ನಾನು ಮೌಲ್ಯಾಧಾರಿತ ರಾಜಕಾರಣವನ್ನು ಪ್ರತಿಪಾದಿಸುವ ಲೋಕಸತ್ತಾ ಪಕ್ಷದ ಜೊತೆ ಗುರುತಿಸಿಕೊಂಡು ಕೆಲಸ ಮಾಡುತ್ತ ಬಂದಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದು, ಇತ್ಯಾದಿಗಳನ್ನು ನೀವು ಗಮನಿಸಿರುತ್ತೀರಿ.

ಕಳೆದ ಮೇ ತಿಂಗಳಿನಲ್ಲಿ ನಡೆದ ಚುನಾವಣೆಯಲ್ಲಿ ನಮ್ಮ ರಾಜ್ಯದ ಜನ ಭ್ರಷ್ಟ ಬಿಜೆಪಿಯನ್ನು ಬದಿಗೊತ್ತಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಕೊಟ್ಟರು. ಆದರೆ ಆಡಳಿತದ ವಿಷಯದಲ್ಲಾಗಲಿ ಮತ್ತು ಭ್ರಷ್ಟಾಚಾರದ ವಿಷಯದಲ್ಲಾಗಲಿ ಈಗಿನ ಕಾಂಗ್ರೆಸ್ ಸರ್ಕಾರ ಹಿಂದಿನ ಬಿಜೆಪಿ ಪಕ್ಷಕ್ಕಿಂತ ಉತ್ತಮ ಎನ್ನುವ ಭಾವನೆ ಜನಕ್ಕೆ ಇಲ್ಲಿಯ ತನಕ ಬರದ ಹಾಗೆಯೇ ಕಾಂಗ್ರೆಸ್ ನಡೆದುಕೊಂಡಿದೆ. ಹೇಳಬೇಕೆಂದರೆ, ನಮ್ಮ ನಾಡಿನ ಜನರೂ ಕಾಂಗ್ರೆಸ್ ಮೇಲೆ ಬಹಳಷ್ಟು ನಿರೀಕ್ಷೆಗಳನ್ನಿಟ್ಟುಕೊಂಡೇನೂ ಅವರನ್ನು ಆರಿಸಲಿಲ್ಲ. ಭ್ರಷ್ಟ ಬಿಜೆಪಿಗೆ ಮತ್ತದರ ಪರಮಾತಿಪರಮ ಭ್ರಷ್ಟರಿಗೆ ಪಾಠ ಕಲಿಸಬೇಕೆಂಬ ಉದ್ದೇಶದಿಂದಷ್ಟೇ ಕಾಂಗ್ರೆಸ್ ಅನ್ನು ಬೆಂಬಲಿಸಿದರು. ಬೇರೆ ಇನ್ನೊಂದು ಪಕ್ಷವನ್ನು ಬೆಂಬಲಿಸುವುದಕ್ಕೆ ಇಲ್ಲಿ ಗಟ್ಟಿಯಾದ ಪರ್ಯಾಯವೇ ಇರಲಿಲ್ಲ. ಹಾಗೆ ನೋಡಿದರೆ, ಉತ್ತಮವಾದ ಪರ್ಯಾಯವೊಂದನ್ನು ಕಟ್ಟುವ ಜವಾಬ್ದಾರಿ ಮತ್ತು ಚಾರಿತ್ರಿಕ ಅವಕಾಶವೊಂದು ನಾಡಿನ ಸಾಮಾಜಿಕ ಮತ್ತು ರಾಜಕೀಯ ಹೋರಾಟಗಾರರಿಗೆ ಇತ್ತು. ಆದರೆ, manishsisodia-yogendrayadav-arvindkejriwal-prashantbhushanಈ ಗುಂಪಿನ ಜನರು ತಮ್ಮ ಸಿನಿಕತನ, ಜವಾಬ್ದಾರಿ ನಿಭಾಯಿಸಲಾಗದ ಹೊಣೆಗೇಡಿತನ, ಮತ್ತು ಕೆಲವು ಸ್ವಕೇಂದ್ರಿತ ಸ್ವಾರ್ಥಮನೋಭಾವಗಳಿಂದಾಗಿ ಆ ಅವಕಾಶವನ್ನು ಹಾಳುಮಾಡಿಕೊಂಡಿದ್ದಷ್ಟೇ ಅಲ್ಲದೆ ಕ್ರಮೇಣವಾಗಿ ರಾಜ್ಯದ ಸಾಮಾಜಿಕ ಮತ್ತು ರಾಜಕೀಯ ರಂಗದಲ್ಲಿ ಅಪ್ರಸ್ತುತರಾಗಿಬಿಟ್ಟರು. ಇದು ಅವರ ಸೋಲು ಮತ್ತು ನಿಷ್ಕ್ರಿಯೆಗಿಂತ ಹೆಚ್ಚಾಗಿ ರಾಜ್ಯದ ಸೋಲಾಗಿ ಪರಿಣಮಿಸಿರುವುದನ್ನು ರಾಜ್ಯದಲ್ಲಿ ಮುಂದುವರೆದ ದುರಾಡಳಿತ, ನಿರಾಡಳಿತ, ಕುಸಿಯುತ್ತಲೇ ಇರುವ ಸಾಮಾಜಿಕ ಮೌಲ್ಯಗಳು, ಹಾಗೂ ನಮ್ಮ ಸಂವಿಧಾನಬದ್ಧ ಪ್ರಜಾಸತ್ತಾತ್ಮಕ ಸಂಸ್ಥೆಗಳ ಅವನತಿಯಲ್ಲಿ ಕಾಣಬಹುದು.

ಆದರೆ, ಇದೇ ಸಮಯದಲ್ಲಿ ದೇಶದಲ್ಲಿ ರಕ್ತರಹಿತ ಕ್ರಾಂತಿಯೊಂದು ಜಾರಿಯಲ್ಲಿದೆ. ಮೂರು ವರ್ಷಗಳ ಹಿಂದೆ ದೇಶದಲ್ಲಿಯ ಮಿತಿಮೀರಿದ ಭ್ರಷ್ಟಾಚಾರದ ವಿರುದ್ಧ ರೂಪುಗೊಂಡ ಹೋರಾಟ ಕಳೆದ ವರ್ಷದ ಅಂತ್ಯದಲ್ಲಿ ದೆಹಲಿಯ ಜನ ಕೊಟ್ಟ ಪ್ರಜಾಸತ್ತಾತ್ಮಕ ತೀರ್ಮಾನದ ಮೂಲಕ ಪ್ರಮುಖ ಘಟ್ಟವನ್ನು ತಲುಪಿದೆ. ಇದು ಈ ರಾಷ್ಟ್ರದ ಜನ ಒಂದು ನಂಬಲರ್ಹ ಪರ್ಯಾಯಕ್ಕಾಗಿ ಕಾಯುತ್ತಿದ್ದದ್ದನ್ನು ಮತ್ತು ಅಂತಹುದೊಂದನ್ನು ಬೆಂಬಲಿಸಲು ಸಿದ್ದವಿರುವುದನ್ನು ತೋರಿಸುತ್ತದೆ. ರಾಷ್ಟ್ರವ್ಯಾಪಿಯಾಗಿ ಈ ಚಳವಳಿ ಕೇವಲ aamadmipartyಆಮ್ ಆದ್ಮಿ ಪಾರ್ಟಿಯ ರೂಪದಲ್ಲಿ ಮಾತ್ರವಲ್ಲ, ಬೇರೆ ಪಕ್ಷಗಳಲ್ಲಿಯೂ ಗಮನಾರ್ಹ ಮತ್ತು ಗುಣಾತ್ಮಕ ಬದಲಾವಣೆಗಳ ರೂಪದಲ್ಲಿ ಕಾಣಿಸುತ್ತಿದೆ. ಅದನ್ನು ಗಮನಿಸದ ಪಕ್ಷಗಳು ಮತ್ತು ತಮ್ಮ ಕೋಮುವಾದಿ ಮತ್ತು ವಂಶಪಾರಂಪರ್ಯ ನೆಲೆಗಳಿಂದ ಹೊರಬಂದು ಆಂತರಿಕ ಪ್ರಜಾಪ್ರಭುತ್ವದ ಮೂಲಕ ಸರ್ವಜನರ ಪರವಾಗಿ ರಾಜಕಾರಣ ಮಾಡಲಾಗದ ಪಕ್ಷಗಳು ಇತಿಹಾಸದ ಕಸದಬುಟ್ಟಿಗೆ ಸೇರಲಿವೆ. ಇಂತಹುದೇ ಒಂದು ಸಂದರ್ಭದಲ್ಲಿ ಕರ್ನಾಟಕವೂ ಬಂದು ನಿಂತಿದೆ.

ಇದೆಲ್ಲವನ್ನೂ ಮತ್ತು ರಾಜ್ಯದ ರಾಜಕೀಯ ವಾಸ್ತವಗಳನ್ನು ಗಮನಿಸಿ ನಾನು ಕಳೆದ ವಾರ ಲೋಕಸತ್ತಾ ಪಕ್ಷಕ್ಕೆ ರಾಜಿನಾಮೆ ನೀಡಿ, ಇಂದು ಆಮ್ ಆದ್ಮಿ ಪಕ್ಷದ ಸದಸ್ಯನಾಗಿ ಅಧಿಕೃತವಾಗಿ ಸೇರ್ಪಡೆ ಆಗಿದ್ದೇನೆ. ಇದು ಒಂದು ರೀತಿಯಲ್ಲಿ ತಾಂತ್ರಿಕವಾಗಿ ಪಕ್ಷಾಂತರವಾದರೂ ಲೋಕಸತ್ತಾ ಮತ್ತು ಆಮ್ ಆದ್ಮಿ ಪಾರ್ಟಿಗಳ ನಡುವೆ ಹೇಳಿಕೊಳ್ಳುವಂತಹ ಗಂಭೀರ ವ್ಯತ್ಯಾಸಗಳಿಲ್ಲ; ಅದರಲ್ಲೂ ಮೌಲ್ಯಾಧಾರಿತ ಮತ್ತು ಭ್ರಷ್ಟಾಚಾರಮುಕ್ತ ರಾಜಕಾರಣದ ವಿಚಾರದಲ್ಲಿ ಇಲ್ಲವೇ ಇಲ್ಲ. aap-pressmeet-01022014ಆದರೆ, ಕೆಲವು ಕಾರಣಾಂತರಗಳಿಂದಾಗಿ ಈ ಎರಡೂ ಪಕ್ಷಗಳು ಕೂಡಿ ಕೆಲಸ ಮಾಡುವ ಸ್ಥಿತಿ ಈಗ ಕರ್ನಾಟಕದಲ್ಲಿ ಇಲ್ಲ ಎನ್ನುವ ವಾತಾವರಣದಲ್ಲಿ, ದೇಶದಲ್ಲಿ ಮತ್ತು ರಾಜ್ಯದಲ್ಲಿ ಬದಲಾವಣೆಗೆ ತುಡಿಯುತ್ತಿರುವ ಮತ್ತು ಆ ದಿಸೆಯಲ್ಲಿ ಗಟ್ಟಿಯಾದ ಚಳವಳಿಯೊಂದು ರೂಪುಗೊಳ್ಳುತ್ತಿರುವ ಸಂದರ್ಭದಲ್ಲಿ ಅಂತಹ ಚಳವಳಿಯೊಂದರಿಂದ ಹೊರಗಿರುವುದು ನೈತಿಕವಾಗಿ ಸರಿಯಾದ ನಿರ್ಧಾರ ಅಲ್ಲ ಮತ್ತು ಅದನ್ನು ಬೆಂಬಲಿಸುವುದು ಮತ್ತು ಪಾಲ್ಗೊಳ್ಳುವುದು ಚಳವಳಿಯೆಡೆಗಿನ ನನ್ನ ಬದ್ಧತೆಯೂ ಹೌದು ಎನ್ನುವ ಕಾರಣಕ್ಕಾಗಿ ನಾನು ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದೇನೆ. ನಾನು ನಂಬುವ ಮತ್ತು ನಾನು ತಪ್ಪು ಮಾಡಬಹುದಾದ ಸಂದರ್ಭದಲ್ಲಿ ನನ್ನನ್ನು ಕೈಹಿಡಿದು ಸರಿಯಾದ ಮಾರ್ಗದಲ್ಲಿ ನಡೆಸಬಲ್ಲ ಆತ್ಮೀಯರು ಮತ್ತು ಸ್ನೇಹಿತರು ನನ್ನ ಈ ನಿರ್ಧಾರವನ್ನು ಬೆಂಬಲಿಸಿದ್ದಾರೆ ಮತ್ತು ಇದು ಪಕ್ಷಾಂತರವಲ್ಲ, ತಾರ್ಕಿಕವಾಗಿ ಮುಟ್ಟಬೇಕಿದ್ದ ಗುರಿಯೇ ಎಂದು ಹೇಳಿದ್ದಾರೆ. ಹಾಗಾಗಿ ಯಾವುದೇ ಗೊಂದಲಗಳಿಲ್ಲದೆ ರಾಜ್ಯ ಆಮ್ ಆದ್ಮಿ ಪಕ್ಷದಲ್ಲಿಯ ಕೆಲವು ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ.

ಆಮ್ ಆದ್ಮಿ ಪಾರ್ಟಿಯೆನ್ನುವುದು ಈಗ ವಾಸ್ತವ. ಸಾವಿರಾರು ಜನ ಆ ಪಕ್ಷಕ್ಕೆ ಯಾವುದೇ ವೈಯಕ್ತಿಕ ಲಾಭದ ನಿರೀಕ್ಷೆಗಳಿಲ್ಲದೆ ಸೇರುತ್ತಿದ್ದಾರೆ. ಅನೇಕ ಜನ ತಾವು ಮಾಡುತ್ತಿದ್ದ ನೌಕರಿಯಿಂದ ರಜೆ ಪಡೆದು ಮತ್ತು ಅದಾಗದ ಸಂದರ್ಭದಲ್ಲಿ ರಾಜೀನಾಮೆ ನೀಡಿ ಪೂರ್ಣಾವಧಿ ಕಾರ್ಯಕರ್ತರಾಗಿ ಒಂದು ಘನ ಉದ್ದೇಶಕ್ಕಾಗಿ ದುಡಿಯುತ್ತಿದ್ದಾರೆ. ನನ್ನ ಇಲ್ಲಿಯತನಕದ ಜೀವನದಲ್ಲಿ ವೈಯಕ್ತಿಕವಾಗಿ ಅನುಭವಕ್ಕೆ ಬಾರದಿದ್ದ ವಿದ್ಯಮಾನವೊಂದನ್ನು ಇಲ್ಲಿ ಕಾಣುತ್ತಿದ್ದೇನೆ. ಇದನ್ನು ಇತಿಹಾಸದ ಹಿನ್ನೆಲೆಯಲ್ಲಿ ಕೇಳಿದ್ದೆ, ಓದಿದ್ದೆ. ಆದರೆ ಸ್ವತಃ ನೋಡಿರಲಿಲ್ಲ. ಸಮಾಜದ ನಾನಾವರ್ಗದ ಜನರು ಒಂದು ಧ್ಯೇಯೋದ್ದೇಶಕ್ಕಾಗಿ ನಿಸ್ವಾರ್ಥವಾಗಿ ತೊಡಗಿಸಿಕೊಂಡು ತಮ್ಮೆಲ್ಲ ಹಮ್ಮುಬಿಮ್ಮು, ನೋವುನಲಿವುಗಳನ್ನು ಬದಿಗೊತ್ತಿ ತಮ್ಮೆಲ್ಲ ಎಚ್ಚರದ ಸ್ಥಿತಿಯನ್ನು ಈ ಚಳವಳಿಗೆ ದುಡಿಯುತ್ತಿರುವುದನ್ನು ಕಂಡು ನಾನು ಆಶ್ಚರ್ಯಪಟ್ಟಿದ್ದೇನೆ, ಹೆಮ್ಮೆಪಟ್ಟಿದ್ದೇನೆ. ಇದು ನಮ್ಮ ಕಾಲದ ಚಳವಳಿ. ನಮ್ಮದೇ ಚಳವಳಿ.

ನಾನು ಆಮ್ ಆದ್ಮಿ ಪಾರ್ಟಿಗೆ ಸೇರಿರುವ ಸಂಗತಿ ವರ್ತಮಾನ.ಕಾಮ್‌ನ ಮೇಲೆ ಯಾವುದೇ ಪರಿಣಾಮ ಬಿರುವುದಿಲ್ಲ (ನನ್ನ ಸಮಯವನ್ನೊಂದು ಬಿಟ್ಟು). ಮೊದಲಿನಿಂದಲೂ ನಾವು ನಮ್ಮ ಬಳಗದ ಎಲ್ಲಾ ಪ್ರಮುಖ ಲೇಖಕರ ಲೇಖನಗಳನ್ನು ಎಡಿಟ್ ಮಾಡದೇ ಪ್ರಕಟಿಸುತ್ತ ಬಂದಿದ್ದೇವೆ (ಕಾಗುಣಿತ ಮತ್ತು ಕೆಲವು ಭಾಷಾಪ್ರಯೋಗಗಳನ್ನು ಹೊರತುಪಡಿಸಿ). ಅದು ಮುಂದೆಯೂ ಮುಂದುವರೆಯುತ್ತದೆ. ನಮ್ಮಲ್ಲಿ ಈಗಾಗಲೇ ಬರೆಯುತ್ತಿರುವ ಲೇಖಕರಿಂದ ಇಲ್ಲಿ ಆಮ್ ಆದ್ಮಿ ಪಾರ್ಟಿಯ ಪರವಾಗಿ ಏನಾದರೂ ಕೆಲವು ಲೇಖನಗಳು ಬಂದರೆ ಅದು ಅವರ ಬರವಣಿಗೆ ಮತ್ತು ಸ್ವತಂತ್ರ ಅಭಿಪ್ರಾಯದ ಮುಂದುವರೆಕೆಯೇ ಹೊರತು ಬೇರಲ್ಲ, ಇದೊಂದು ಸ್ವತಂತ್ರ ವೇದಿಕೆ ಮತ್ತು ಹಾಗೆಯೇ ಮುಂದುವರೆಯುತ್ತದೆ; ನನ್ನ ವೈಯಕ್ತಿಕ ಆಯ್ಕೆಗಳ ಹೊರತಾಗಿ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

ಅನಾರ್ಕಿಸ್ಟೋ ಅಥವಾ ಆಕ್ಟಿವಿಸ್ಟೋ?

ಇಂಗ್ಲೀಷ್ ಮೂಲ : ದೀಪಂಕರ್ ಗುಪ್ತ
ಅನುವಾದ : ಬಿ.ಶ್ರೀಪಾದ ಭಟ್

ನೀವು ಇಷ್ಟಪಡಿ ಅಥವಾ ತಿರಸ್ಕರಿಸಿ, ಆದರೆ ನಾವು ಪ್ರಜಾಪ್ರಭುತ್ವದ ಕುರಿತಾಗಿ ಮರುಚಿಂತನೆ ನಡೆಸುವಂತೆ ಮಾಡಿದ ಕೀರ್ತಿ ಆಮ್ ಆದ್ಮಿ ಪಕ್ಷಕ್ಕೆ ಸಲ್ಲಬೇಕು. ಈ ಕ್ಷಣದ ವೈದೃಶ್ಯವನ್ನು ಎಮರ್ಜೆನ್ಸಿಯೊಂದಿಗೆ ಮುಖಾಮುಖಿಯಾಗಿಸಿ ನೋಡಿದಾಗ ಎಲ್ಲವೂ ನಿಚ್ಛಳವಾಗಿ ಗೊತ್ತಾಗುತ್ತದೆ. ಕಟ್ಟಳೆ ಮತ್ತು ಬಂಡಾಯ ಎರಡೂ ಜೀವಂತಿಕೆಯ ಲಕ್ಷಣಗಳಾಗಿ ನiಗಿಂದು ಅವಶ್ಯಕವಾಗಿದೆ. ಇವೆರಡರಲ್ಲಿ ಒಂದನ್ನು ಈ ಸಮೀಕರಣದಿಂದ ತೆಗೆದು ಹಾಕಿದ ಕ್ಷಣದಿಂದ ಪ್ರಜಾಪ್ರಭುತ್ವದ ಕೊನೆದಿನಗಳ ಕ್ಷಣಗಣನೆ ಆರಂಭವಾಗುತ್ತದೆ. ಆಗ ಆರಂಭದಲ್ಲಿ ಲಗಾಟ ಹೊಡೆಯುವ ಪ್ರಜಾಪ್ರಭುತ್ವ ಕಡೆಗೆ ಬಸವಳಿದು ನೆಲಕಚ್ಚುತ್ತದೆ.

ಯಾವ ಕೋನದಿಂದ ಅವಲೋಕಿಸಿದರೂ ಎಮರ್ಜೆನ್ಸಿಯು ನಿರ್ಬಂಧನೆಯನ್ನು ವಿಧಿಸುವ, anna-kejriwalಹತೋಟಿಯಲ್ಲಿಟ್ಟುಕೊಳ್ಳ ಬಯಸುವ ಒಂದು ಶಾಸನ, ಆದರೆ ಇದು ವರ್ತಮಾನದಲ್ಲಿ ಯಾವುದೇ ನಿರ್ಬಂಧನೆಗಳಿಲ್ಲದ ಆಕ್ಟಿವಿಸಂ ಆಗಿ ರೂಪಾಂತರಗೊಂಡಿದೆಯೇ? ಅಣ್ಣಾ ಹಜಾರೆಯವರ ಸತ್ಯಾಗ್ರಹದಿಂದ ಶುರುವಾಗಿ ದೆಹಲಿ ಅತ್ಯಾಚಾರದ ವಿರುದ್ಧದ ಹೋರಾಟದ, ಕಡೆಗೆ ಇತ್ತೀಚೆಗೆ ಮುಖ್ಯಮಂತ್ರಿ ಕೇಜ್ರೀವಾಲ್ ಅವರು ಬೀದಿಯಲ್ಲಿ ನಡುರಾತ್ರಿ ಉಪವಾಸ ಮುಷ್ಕರ ನಡೆಸುವವರೆಗೂ ಈ ವಿಷಯಕ್ಕೆ ಸಂಬಂಧಪಟ್ಟ ಚರ್ಚೆಗಳು, ಸಂವಾದಗಳು ದಿನದಿನಕ್ಕೂ ಕಾವೇರುತ್ತಿದೆ. ಕಡೆಗೆ ಗಣರಾಜ್ಯೋತ್ಸವದಂದು ತಮ್ಮ ಭಾಷಣದಲ್ಲಿ ರಾಷ್ಟ್ರಪತಿಗಳು ಈ ವಿದ್ಯಾಮಾನಗಳು ಸಂವಿಧಾನಬದ್ಧವಾದ ಪ್ರಜಾಪ್ರಭುತ್ವವನ್ನು ಅನಾರ್ಕಿಸಂ ಅಪೋಶನ ತೆಗೆದುಕೊಳ್ಳುತ್ತಿರುವುದರ ಸೂಚನೆಯಾಗಿದೆ ಎಂದು ಕಟುವಾಗಿ ಟೀಕಿಸಿದರು.

ಬೀದಿಗಿಳಿದಿದ್ದಕ್ಕಾಗಿ ಈ ಮುಖ್ಯಮಂತ್ರಿಯನ್ನು ಅನಾಕಿಸ್ಟ್ ಎಂದು ಟೀಕಿಸಬಹುದಾದರೆ ಪ್ರಾನ್ಸ್ ದೇಶದ, ಎಂಬತ್ತರ ದಶಕದಲ್ಲಿ ರಾಷ್ಟ್ರಪತಿಯಾಗಿದ್ದ ದಿವಂಗತ ಮಿತ್ತೆರಾಂದ್ ಅವರ ನಡೆಗಳನ್ನು ನಾವು ಹೇಗೆ ಅರ್ಥೈಸಬೇಕು? 1980 ರಲ್ಲಿ ಫ್ರಾನ್ಸ್‌ನಲ್ಲಿ ಯಹೂದಿಗಳ ಮೇಲಿನ ದೌರ್ಜನ್ಯವನ್ನು ವಿರೋಧಿಸಿ ನಡೆಯುತ್ತಿದ್ದ ಚಳುವಳಿಯಲ್ಲಿ ಆಡಳಿತದಲ್ಲಿದ್ದ ಸೋಷಿಯಲಿಸ್ಟ್ ಪಕ್ಷದ ನಾಯಕರಾಗಿದ್ದ ಮಿತ್ತೆರಾಂದ್ ಅವರು ಮೈಕೆಲ್ ರೋಕಾರ್ಡ ಜೊತೆಗೆ ಬೀದಿಗಿಳಿದು ಭಾಗವಹಿಸಿದ್ದರು. 1983 ರಲ್ಲಿ ವರ್ಣಬೇಧದ ವಿರುದ್ಧ ಆಡಳಿತರೂಢ ಸರ್ಕಾರದ ವಿರುದ್ಧ ನಡೆದ ಚಳುವಳಿಯಲ್ಲಿ ಆಡಳಿತ ನಡೆಸುತ್ತಿದ್ದ ಸೋಷಿಯಲಿಸ್ಟ್ ಪಕ್ಷದ ರಾಷ್ಟ್ರಪತಿಯಾಗಿದ್ದ ಮಿತ್ತೆರಾಂದ್ ಅವರು ಭಾಗವಹಿಸಿ ಭಾಷಣವನ್ನೂ ಸಹ ಮಾಡಿದರು.ಅವರಿಗೆ ಅಂದು ವೀರೋಚಿತ ಸ್ವಾಗತವೂ ಸಿಕ್ಕಿತು. ಹಾಗಿದ್ದರೆ ಮಿತ್ತೆರಾಂದ್ ಅನಾರ್ಕಿಸ್ಟರೇ? ನೂಕ್ಲಿಯರ್ ಬಾಂಬಿನ ವಿರುದ್ಧದ ಹೋರಾಟವನ್ನು ಹಮ್ಮಿಕೊಂಡ ಬಟ್ರೆಂಡ್ ರಸೆಲ್ ಅನಾಕಿಸ್ಟೋ ಅಥವಾ ಪ್ರಜಾಪ್ರಭುತ್ವವಾದಿಯೋ ?

ಒಂದಂತೂ ನಿಜ. ಒಬ್ಬ ವ್ಯಕ್ತಿಯ ಅನಾರ್ಕಿಸಂ ಮತ್ತೊಬ್ಬ ವ್ಯಕ್ತಿಯ ಅಕ್ಟಿವಿಸಂ ಆಗಿರುತ್ತದೆ. ಜಾಗತಿಕ ಪೌರತ್ವಕ್ಕಾಗಿ, ವರ್ಣಬೇಧದ ವಿರುದ್ಧ, ಗೇಗಳ ಹಕ್ಕುಗಳ ಪರವಾಗಿ ನಡೆದ ಚಳುವಳಿಗಳು ಅನಾರ್ಕಿಸಂ ಎನ್ನುವುದಾದರೆ, ಈ ಚಳುವಳಿಗಳನ್ನು ನಿರ್ಬಂದಿಸುವುದಾದರೆ ಅಷ್ಟರ ಮಟ್ಟಿಗೆ ನಮ್ಮ ಪ್ರಜಾಪ್ರಭುತ್ವ ದುರ್ಬಲಗೊಂಡಿದೆ ಎಂದರ್ಥ. ಏಕೆಂದರೆ ಈ ಬಗೆಯ ಚಳುವಳಿಗಳ, ಹೋರಾಟಗಳ ಸಹಾಯದಿಂದಲೇ ಪ್ರಜಾಪ್ರಭುತ್ವ ಅಗಾಧವಾಗಿ ಮತ್ತಷ್ಟು, ಮಗದಷ್ಟು ಬೆಳೆದಿದೆ. ಎಷ್ಟೆಂದರೆ ಅದರ ನೆರಳಲ್ಲಿ ನಾವೆಲ್ಲ ಕೂಡುವಷ್ಟು. ದಶಕಗಳ ಕಾಲ ಚಳುವಳಿಗಳ, ಹೋರಾಟದ ಫಲವಾಗಿಯೇ ಮಹಿಳೆ ಮತ ಚಲಾವಣೆ ಮಾಡುವಂತಹ, ಕರಿಯರಿಗೆ ಮುಕ್ತವಾಗಿ ಬದುಕುವ ಸ್ವಾತಂತ್ರ ದೊರೆಕಿತು. ಇದಕ್ಕಾಗಿ ನಾವು ಯಾರ ಬಳಿಯಾದರೂ ದೂರುತ್ತಿದ್ದೇವೆಯೇ?

ಇಂದು ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ವಿದ್ಯಾಮಾನಗಳನ್ನು ಗಮನಿಸಿ. ಥಾಯಿಗಳು ಅಲ್ಲಿನ ಭ್ರಷ್ಟ ಸರ್ಕಾರ ತೊಲಗಬೇಕೆಂದು ಚಳುವಳಿ ನಡೆಸುತ್ತಿದ್ದಾರೆ. ಆದರೆ ಅಲ್ಲಿನ ನಾಯಕಿ ತನ್ನ ಭ್ರಷ್ಟ ಸಹೋದರನನ್ನು ಮರಳಿ ಅಧಿಕಾರಕ್ಕೆ ತಂದು ಕೂಡಿಸುವವರೆಗೂ ತಾನು ಕೆಳಗಿಳಿಯುವುದಿಲ್ಲವೆಂದು ಘೋಷಿಸಿದ್ದಾಳೆ. ಹಾಗಿದ್ದರೆ ಆ ಪ್ರತಿಭಟನೆಯು ಅನಾರ್ಕಿಸಂ ಸ್ವರೂಪದ್ದೇ? ಅಥವಾ ಪ್ರತಿಭಟನೆಯನ್ನೇ ನಿರ್ಭಂದಿಸುವ ಮಸೂದೆಯ ವಿರುದ್ಧ ಯುಕ್ರೇನಿನಲ್ಲಿ ನಡೆಯುತ್ತಿರುವ ಚಳುವಳಿಯಲ್ಲಿ ಭಾಗವಹಿಸಿದ್ದ ವಿರೋಧ ಪಕ್ಷದ ನಾಯಕ ಅರ್ಸೇನಿಯೆ ಯಟ್ಸೆನ್ಯುಕ್‌ನ ಮುಂದೆ ಆಡಳಿತ ಪಕ್ಷದವರು ನೀನು ಪ್ರಧಾನ ಮಂತ್ರಿ ಪದವಿಯನ್ನು ಒಪ್ಪಿಕೊಂಡರೆ ದೇಶದಲ್ಲಿ ಶಾಂತಿ ನೆಲೆಸಲು ನಾವು ಸಹಕರಿಸುತ್ತೇವೆ ಎನ್ನುವ ಸಂಧಾನವನ್ನು ಮುಂದಿಟ್ಟಾಗ ಆತ ಆ ಆಹ್ವಾನವನ್ನು ತಿರಸ್ಕರಿಸಿದ. ಇದಕ್ಕಾಗಿ ಅರ್ಸೇನಿಯೆಯನ್ನು ಅನಾರ್ಕಿಸ್ಟ್ ಎಂದು ಕರೆಯಬಹುದೇ? ಬದಲಾಗಿ ಅರ್ಸೇನಿಯೆ ಯಟ್ಸೆನ್ಯುಕ್ ಪ್ರಧಾನ ಮಂತ್ರಿ ಪದವಿಯ ಕೊಡುಗೆಯನ್ನು ತಿರಸ್ಕರಿಸಿ ಕೊರೆಯುವ ಚಳಿಯಲ್ಲಿ ಬೀದಿಯಲ್ಲಿ ಚಳುವಳಿ ನಿರತ ಜನರೊಂದಿಗೆ ಇರಬಯಸಿದ.

ತಾಹಿರ್ ಸ್ಕೇರ್‌ನ ಚಳುವಳಿ ಒಂದು ಅರ್ಥಹೀನ, ಪ್ರಯೋಜನವಿಲ್ಲದ ಅನಾರ್ಕಿ ವಿಸ್ಪೋಟವಾಗಿತ್ತೆ? ಅರಬ್ ಸ್ಪ್ರಿಂಗ್ ಮೊಳಕೆಯೊಡೆಯಲು ಕಾರಣವಾದ ತ್ಸುನಿಸಿಯಾ ಏನು ಹಾಗಿದ್ದರೆ?

ಒಂದು ಕಾಲದಲ್ಲಿ ಅನಾರ್ಕಿಸ್ಟ್ ಎಂದು ಕರೆಯಲ್ಪಟ್ಟ ಗಾಂಧಿ, 200px-MKGandhi[1]ನೆಲ್ಸನ್ ಮಂಡೇಲಾರಂತಹ ಸ್ವಾತಂತ್ರ ಹೋರಾಟಗಾರರನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಮತ್ತೊಮ್ಮೆ ಪ್ರಸ್ತಾವಿಸಬೇಕಿಲ್ಲ. ಏಕೆಂದರೆ ಇಂದು ನಾವು ವರ್ಣಬೇಧದ ವಿರುದ್ಧ, ಕಲೋನಿಯಲಿಸಂನ ವಿರುದ್ಧ, ಸರ್ವಾಧಿಕಾರದ ವಿರುದ್ಧ ಹೋರಾಡುವಂತಹ ಪರಿಸ್ಥಿತಿಯಂತೂ ಸಧ್ಯಕ್ಕಿಲ್ಲ. ಏಕೆಂದರೆ ಇಂದು ಪ್ರಜಾಪ್ರಭುತ್ವಕ್ಕೆ ಅಪಾಯದಲ್ಲಿರುವುದು ಕಿವಿ ಕೇಳಿಸದಂತೆ, ಕಣ್ಣು ಕಾಣಿಸದಂತೆ, ಮೂಗರಂತೆ ವರ್ತಿಸುತ್ತಿರುವ ರಾಜಕಾರಣಿಗಳು ಮತ್ತು ಅವರ ವಿರುದ್ಧ ತೋರಿಕೆಯ, ಪೊಳ್ಳುತನದ ಘೋಷಣೆ ಕೂಗುತ್ತಿರುವ ಪ್ರಜೆಗಳಿಂದಾಗಿ. ತಾವು ಅಧಿಕಾರದಲ್ಲಿದ್ದೇವೆ ಎನ್ನುವ ಕಾರಣಕ್ಕಾಗಿ ಹಕ್ಕೊತ್ತಾಯ ಮಾಡಿ ನಾಯಕತದ ಅಧಿಕಾರವನ್ನು ದರ್ಪದಿಂದ ಹೆಗಲಿಗೇರಿಸಿಕೊಳ್ಳುವುದರ ಬದಲಾಗಿ ನಾಯಕತ್ವದ ಗೌರವವನ್ನು ಯೋಗ್ಯವಾಗಿ, ಸಹನೆಯಿಂದ ಕಷ್ಟಪಟ್ಟು ಗಳಿಸುವದರಲ್ಲಿ ಪ್ರಜಾಪ್ರಭುತ್ವದ ಗೆಲುವಿದೆ. ಈ ವಿನಯವಂತಿಕೆ ಗುಣವೇ ಪ್ರಜಾಪ್ರಭುತ್ವವನ್ನು ಫ್ಯಾಸಿಸಂನಿಂದ, ರಾಜಪ್ರಭುತ್ವದಿಂದ ಬೇರ್ಪಡಿಸುತ್ತದೆ.

ಇನ್‌ಸ್ಟಿಟ್ಯೂಶನ್ಸ್‌ಗಳು ನಿಯಮಬದ್ಧವಾಗಿ, ನ್ಯಾಯಯುತವಾಗಿ ಕಾರ್ಯ ನಿರ್ವಹಿಸಲು ಸೋತಿದ್ದಕ್ಕಾಗಿಯೇ ಬೀದಿಚಳುವಳಿಗಳು ಹುಟ್ಟಿಕೊಳ್ಳಲು ಕಾರಣ. ಈ ಜನಪ್ರಿಯ ಬೀದಿ ಚಳುವಳಿಗಳನ್ನು ಇನ್‌ಸ್ಟಿಟ್ಯೂಶನ್ಸ್‌ಗಳ ಗೋಡೆಯೊಳಗೆ ಬಂಧಿಸಿಡುವ ಪ್ರಕ್ರಿಯೆ ಎಂದಿಗೂ ಆಪೇಕ್ಷಣೀಯವಲ್ಲ.

ಪ್ರಜಾಪ್ರಭುತ್ವ ಪ್ರಕ್ರಿಯೆಯ ಅವಹೇಳನಗಳು ಮತ್ತು ತುಚ್ಛೀಕರಣಗಳು

ಹಿಂದೆಯೂ ಪ್ರಜಾಪ್ರಭುತ್ವವು ಅತ್ಯಂತ ಆತಂಕದ ಕ್ಷಣಗಳನ್ನು ಎದುರಿಸಿತ್ತು. Genuine ಅನಾರ್ಕಿಸಂನಿಂದಾಗಿ ಹಿಂದೆಯೂ ಅದರ ಮೇಲೆ ನಿರಂತರ ಹಲ್ಲೆಗಳು ನಡೆದಿದ್ದವು, ಮುಂದೆಯೂ ಪ್ರಜಾಪ್ರಭುತ್ವವು ಈ ಹಲ್ಲೆಗಳಿಂದ ಪಾರಾಗಲಾರದು. ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದವರು ಅನಾರ್ಕಿಸ್ಟರು, ಧರ್ಮದ ಹೆಸರಿನಲ್ಲಿ ಚಳುವಳಿ ಮಾಡುತ್ತಿರುವವರೂ ಅನಾರ್ಕಿಸ್ಟರೇ. ಮಾವೋವಾದಿಗಳೂ ಅನಾರ್ಕಿಸ್ಟರು. ಈ ಗುಂಪಿಗಿರುವ ಸಮಾನತೆ ಎಂದರೆ ಪ್ರಜಾಪ್ರಭುತ್ವದ ಮೂಲಧಾತುವಾದ ಅಹಿಂಸೆ ಮಾದರಿಯ ಚಳುವಳಿಯ ಕುರಿತಾಗಿ ತಿರಸ್ಕಾರದ, ತುಚ್ಛೀಕರಣದ ಮನೋಧರ್ಮ. ಇಲ್ಲಿ ಅನಾರ್ಕಿಸಂ ಕೇವಲ ದೈಹಿಕ ಹಲ್ಲೆಗಳನ್ನು ಮಾತ್ರ ನಡೆಸುವುದಿಲ್ಲ, ವಾಗ್ದಾಳಿಗಳ ಮೂಲಕ ವ್ಯಕ್ತಗೊಳ್ಳುವ ಹಿಂಸೆಯೂ ಅನಾರ್ಕಿಸಂ ರೂಪ ಪಡೆದುಕೊಳ್ಳುತ್ತದೆ. ಇದನ್ನು ಸಾಮಾನ್ಯವಾಗಿ ಜನತೆ ಮರೆಯುತ್ತಾರೆ. ದೈಹಿಕ ಮತ್ತು ಮೌಖಿಕ ದಾಳಿಗಳು ಆ ಮೂಲಕ ವ್ಯಕ್ತವಾಗುವ ಹಿಂಸೆ ಅನಾರ್ಕಿ ಎನಿಸಿಕೊಳ್ಳುತ್ತವೆಯೇ ಹೊರತು ಅಧಿಕಾರರೂಢ ಪಕ್ಷವು ಬೀದಿಗಿಳಿದು ಹೋರಾಟ ಮಾಡುವುದು, ರಸ್ತೆಗಳ ಮೇಲೆ ತಾತ್ಕಾಲಿಕ ಶೆಡ್‌ಗಳಲ್ಲಿ ಆಡಳಿತಯಂತ್ರ ನಡೆಸುವುದು ಅನಾರ್ಕಿಸಂ ಅಲ್ಲವೇ ಅಲ್ಲ.

ಗಾಂಧೀಜಿಗೆ ನಡೆ ಮತ್ತು ನುಡಿ ಎರಡೂ ಮುಖ್ಯವಾಗಿದ್ದವು. ರಸೆಲ್‌ನಂತೆಯೇ ಗಾಂಧಿ ಸಹ ಹೇಳುತ್ತಿದ್ದರು “ನಾವು ಧ್ವನಿಯನ್ನು ಎತ್ತರಿಸಿ ಚೀರಿಕೊಳ್ಳತೊಡಗಿದ ಕ್ಷಣದಿಂದಲೇ ಹಿಂಸೆ ಹುಟ್ಟಿಕೊಳ್ಳುತ್ತದೆ. ಈ ಕೂಗುಮಾರಿತನ ನಮ್ಮ ದುರ್ಬಲತೆಯನ್ನು ಬಯಲುಗೊಳಿಸುತ್ತದೆ. ಸಂವಾದದ ಮೂಲಕ ಗೆಲ್ಲಬಹುದಾದರೆ ಹೀಗಳಿಕೆಯ ಅವಶ್ಯಕತೆ ಇಲ್ಲ”. ಆದರೆ ’ಆಮ್ ಆದ್ಮಿ’ ಪಕ್ಷದ ಬೆಂಬಲಿಗರು ಈ ಕೂಗುಮಾರಿತನದ ಹಿಂಸೆಯನ್ನು ಕಾಲಕಾಲಕ್ಕೆ ಪ್ರದರ್ಶಿಸುತ್ತಾ ಬಂದಿದ್ದಾರೆ. ಹಿಂಸೆಯ ಸ್ವರೂಪದ ಈ ಮಾದರಿಯ ಕೂಗುಮಾರಿತನದ ಅನಾರ್ಕಿಸಂ ಅನ್ನು ಈ ಬೆಂಬಲಿಗರು ಇಂದು ವ್ಯವಸ್ಥೆಯಲ್ಲಿ ಜಾರಿಗೊಳಿಸಿದ್ದಾರೆ. somnath-bhartiದೆಹಲಿ ಸರ್ಕಾರದ ಕಾನೂನು ಮಂತ್ರಿ ಸೋಮನಾಥ ಭಾರ್ತಿಯ ಅತ್ಯುತ್ಸಾಹವನ್ನು ಅರ್ಥ ಮಾಡಿಕೊಳ್ಳಬಹುದು, ಆದರೆ ಆತನ ಕೂಗುಮಾರಿತನದ, ಕೆಳಮಟ್ಟದ ಭಾಷೆಯನ್ನು ಮಾನ್ಯ ಮಾಡಲು ಸಾಧ್ಯವಿಲ್ಲ. ತನ್ನ ಕೆಳ ಮಟ್ಟದ ಭಾಷೆಯ ಪ್ರಯೋಗದಿಂದ ಸದರಿ ಮಂತ್ರಿ ಇಡೀ ಆಮ್ ಆದ್ಮಿ ಪಕ್ಷಕ್ಕೆ ಈ ಅನಾರ್ಕಿಸಂನ ಕಳಂಕವನ್ನು ಅಂಟಿಸಿದ್ದಾನೆ. ಬಹುಶಃ ಕೇಜ್ರಿವಾಲ್ ತನ್ನ ಹುಡುಗರಿಗೆ ಈ ಉತ್ತಮ ನಡೆತಗಳ ಕುರಿತಾಗಿ ರಾತ್ರಿ ಪಾಳಯದ ಶಾಲೆಗಳನ್ನು ತೆರೆಯಬೇಕಾಗಬಹುದು.

ಕೆಲವು ಕುಪ್ರಸಿದ್ಧ, ಕೊಲೆ, ದರೋಡೆ ಆರೋಪಿಗಳು ಸಹ ಸಂಸತ್ತಿಗೆ ಆಯ್ಕೆಯಾಗಿದ್ದಾರೆಂಬುದನ್ನು ನಾವು ಮರೆಯುವಂತಿಲ್ಲ. ಅದಕ್ಕಾಗಿಯೇ ಪ್ರಜಾಪ್ರಭುತ್ವವು ಕೇವಲ ಮತಗಳ, ವೋಟಿನ ರಾಜಕಾರಣ ಮಾತ್ರವಲ್ಲ, ಅಹಿಂಸೆ ರಾಜಕಾರಣವನ್ನು ಒಳಗೊಂಡಾಗ ಮಾತ್ರ ಪ್ರಜಾಪ್ರಭುತ್ವ ಪರಿಪೂರ್ಣಗೊಳ್ಳುತ್ತದೆ. ಒಂದು ವೇಳೆ ಅನಾರ್ಕಿಸಂ ಮತ್ತು ಸರ್ವಾಧಿಕಾರದ ನಡುವೆ ಸಾಮ್ಯತೆ ಇದ್ದರೆ ಅದು ಸಹಜವೇ, ಏಕೆಂದರೆ ಇವೆರಡೂ ಒಂದೇ ತಾಯಿಯ ಹಾಲನ್ನು ಕುಡಿದು ಬೆಳೆದವರು.

ಹೊಸ ಬಗೆಯ ಚಿಂತನೆಗಳೊಂದಿಗೆ ಕೈಜೋಡಿಸಿ ಪಟ್ಟಭದ್ರ ವ್ಯಕ್ತಿಯೊಬ್ಬನ ಸ್ಥಾನವನ್ನು ಪಲ್ಲಟಗೊಳಿಸುವಲ್ಲಿ ವ್ಯವಸ್ಥೆ ವಿಫಲಗೊಂಡರೆ, ಸಶಕ್ತವಾಗದಿದ್ದರೆ ಅದನ್ನು ಲಿಬರಲ್ ಪ್ರಜಾಪ್ರಭುತ್ವ ಎಂದು ಒಪ್ಪಿಕೊಳ್ಳುವುದು ಕಷ್ಟ. ಲಿಬರಲ್ ಡೆಮಾಕ್ರಸಿಯಲ್ಲಿ ಪ್ರಜೆಗಳು ಚಲನಶೀಲರಾಗಲು, ಮತ್ತೊಂದು ಸಿದ್ಧಾಂತಕ್ಕೆ ಜಿಗಿಯಲು, ಸೈದ್ಧಾಂತಿಕವಾಗಿ ಬೆಳೆಯಲು ಸಂಪೂರ್ಣ ಅವಕಾಶವಿದೆ. ಇದಕ್ಕಾಗಿ ಜನತೆ ಸಕಾರಣವಾಗಿ, ಮುಕ್ತವಾಗಿ, arvind-kejriwalನ್ಯಾಯಯುತವಾಗಿ ತಮ್ಮನ್ನು ಸಮರ್ಥಿಸಿಕೊಳ್ಳಬೇಕಾಗುತ್ತದೆ. ಒಂದು ವೇಳೆ ಇದು ಸಾಧ್ಯವಾದರೆ ಲಿಬರಲ್ ಡೆಮಾಕ್ರಸಿಯ ಕುರಿತಾಗಿ ದೂಷಿಸುವಂತಾದ್ದೇನು ಇಲ್ಲ.

ಆಮ್ ಆದ್ಮಿ ಪಕ್ಷವು ಈ ಎಲ್ಲಾ ವಿಷಯಗಳ ಕುರಿತಾಗಿ ನಾವೆಲ್ಲ ಮರುಚಿಂತನೆ ನಡೆಸುವಂತೆ ಮಾಡಿದೆ. ಇದು ನಿಜಕ್ಕೂ ಆರೋಗ್ಯಯುಕ್ತ ಪ್ರಜಾಪ್ರಭುತ್ವ. ಆದರೆ ಡೆಮಾಕ್ರಸಿಯಲ್ಲಿ ಕೇವಲ ಅಲ್ಪಸ್ವಲ್ಪ ಅನಾರ್ಕಿಗಳಾಗಿ ಕಾಣಿಸಿಕೊಳ್ಳುವುದನ್ನೇ ವೃತ್ತಿಯನ್ನಾಗಿಸಿಕೊಂಡರೆ ಇದು ಬಹುಕಾಲ ಉಳಿಯುವುದಿಲ್ಲವೆಂದು ಕೇಜ್ರಿವಾಲ್ ಮತ್ತವರ ಸಂಗಡಿಗರು ಮನನ ಮಾಡಿಕೊಳ್ಳಬೇಕು. ಈ ರೀತಿಯ ಅನಾರ್ಕಿಸಂ ಮತ್ತೇನಲ್ಲದೆ ದೇಹದ ಎರಡೂ ಕಡೆಗಳಿಂದ ವ್ಯಾಪಿಸಿಕೊಳ್ಳುವ ಫ್ಲೂ ಜ್ವರದಂತೆ. ಒಮ್ಮೆ ಇದು ದೇಹದೊಳಗೆ ಪ್ರವೇಶ ಪಡೆದರೆ ಅದರ ಎಲ್ಲ ಭಾಗಗಳಿಗೂ ಹಬ್ಬತೊಡಗುತ್ತದೆ. ತಮ್ಮೊಳಗಿನ ಈ ಅನಾರ್ಕಿಸಂ ಕುರಿತಾಗಿ ಆಮ್ ಆದ್ಮಿ ಪಕ್ಷವು ಎಚ್ಚರಿಕೆಯಿಂದಿರಬೇಕು. ಹಾಗೆಯೇ ಅಹಿಂಸಾತ್ಮಕ ಪ್ರತಿಭಟನೆಗಳು ಪ್ರಜಾಪ್ರಭುತ್ವದ ಅತ್ಯುತ್ತಮ ಕ್ಷಣಗಳು ಎಂಬುದನ್ನೂ ನಾವು ಮರೆಯಬಾರದು.

( ಕೃಪೆ : ದ ಹಿಂದೂ, 29 ಜನವರಿ, 2014)