ದಿನೇಶ್ ಅಮಿನ್‌ಮಟ್ಟು ಪ್ರತಿಕ್ರಿಯೆ : ಸಿದ್ಧಾಂತದ ಮಡಿವಂತಿಕೆಗಿಂತ ಸಾರ್ವಜನಿಕ ಹಿತ ನನಗೆ ಮುಖ್ಯ

– ದಿನೇಶ್ ಅಮಿನ್‌ಮಟ್ಟು

ತನಗೆ ತಪ್ಪೆಂದು ಕಂಡ ನನ್ನ ನಡವಳಿಕೆಯನ್ನು ಮುಲಾಜಿಲ್ಲದೆ ಪ್ರಶ್ನಿಸಿದ್ದ ನನ್ನ ಮೆಚ್ಚಿನ ಕಿರಿಯ ಗೆಳೆಯ ನವೀನ್ ಸೂರಿಂಜೆ ಅವರಿಗೆ ಅಭಿನಂದನೆಗಳು. ಆದರೆ ಸದಾ ಶಿಷ್ಯಾವಸ್ಥೆಯಲ್ಲಿಯೇ ಉಳಿದುಬಿಡಬೇಕೆಂದು ನಾನು ನಿರ್ಧರಿಸಿರುವುದರಿಂದ ನವೀನ್ ನೀಡಿರುವ ‘ಗುರು’ವಿನ ಪಟ್ಟವನ್ನು ವಿನಮ್ರತೆಯಿಂದ ನಿರಾಕರಿಸುತ್ತಿದ್ದೇನೆ.

ನವೀನ್ ನನಗೆ ಮೇಲ್ ಮಾಡಿದ್ದ ಪತ್ರವನ್ನು ಓದದೆ ಇದ್ದದ್ದು ನನ್ನ ಮೊದಲ ತಪ್ಪು. naveen-shettyಇಂತಹ ಸಂದರ್ಭದಲ್ಲಿ ಪೋನ್ ಮಾಡುವ ನವೀನ್ ಅದನ್ನು ಮಾಡದೆ ಇದ್ದದ್ದು ಅವರದ್ದೂ ತಪ್ಪು. ಆ ಪತ್ರವನ್ನು ಓದಿದ್ದರೂ “ಮುಸ್ಲಿಮ್ ಲೇಖಕರ ಸಂಘ”ದ ಸಮಾರಂಭಕ್ಕೆ ಹೋಗುತ್ತಿದ್ದೆ. ಆದರೆ ನವೀನ್ ಕೇಳಿರುವ ಪ್ರಶ್ನೆಗಳನ್ನು ಖಂಡಿತ ಭಾಷಣದಲ್ಲಿ ಎತ್ತುತ್ತಿದ್ದೆ. ಬೇರೆ ಯಾರೋ ಗೆಳೆಯರು ‘ಲೇಖಕರು ಕೂಡಾ ಜಾತಿ-ಧರ್ಮದ ಹೆಸರಲ್ಲಿ ಸಂಘಟನೆಯನ್ನು ಕಟ್ಟಿಕೊಳ್ಳುವುದು ಎಷ್ಟು ಸರಿ?’ ಎನ್ನುವ ಇನ್ನೂ ಒಂದು ಪ್ರಶ್ನೆಯನ್ನೂ ಎತ್ತಿದ್ದರು. ಯೋಚಿಸಬೇಕಾದ ಪ್ರಶ್ನೆ. ಆದರೆ ಈ ಪ್ರಶ್ನೆಗಳನ್ನು ಕೇಳುವವರು, ನಮ್ಮ ಪ್ರಕಾಶನ ಸಂಸ್ಥೆಗಳು ಮುಸ್ಲಿಮ್ ಲೇಖಕರ ಎಷ್ಟು ಪುಸ್ತಕಗಳನ್ನು ಪ್ರಕಟಿಸಿವೆ? ಮಾಧ್ಯಮ ಕ್ಷೇತ್ರದಲ್ಲಿ ಎಷ್ಟು ಮುಸ್ಲಿಮ್ ಪತ್ರಕರ್ತರಿಗೆ ವೃತ್ತಿಯ ಅವಕಾಶವನ್ನು ಕಲ್ಪಿಸಿವೆ? ಎಷ್ಟು ಮುಸ್ಲಿಮ್ ಲೇಖಕರ ಕತೆ-ಕವನ, ಕಾದಂಬರಿ, ಲೇಖನಗಳನ್ನು ಪ್ರಕಟಿಸುತ್ತಿವೆ? ಹಿಂದೂ ಮೂಲಭೂತವಾದದ ನಂಜು ಕಾರುವ ಪುಸ್ತಕಗಳನ್ನು ಸಾಲುಸಾಲು ಜೋಡಿಸಿಡುವ ಪುಸ್ತಕದಂಗಡಿಗಳಲ್ಲಿ ಮುಸ್ಲಿಮ್ ಲೇಖಕರ ಎಷ್ಟು ಪುಸ್ತಕಗಳನ್ನು ಮಾರಾಟಕ್ಕಿಟ್ಟಿವೆ? ಎಂಬ ಪ್ರಶ್ನೆಗಳಿಗೂ ಉತ್ತರ ನೀಡಬೇಕಾಗುತ್ತದೆ.

ಮುಸ್ಲಿಮ್ ಲೇಖಕರ ಸಂಘ ನನಗೆ ಅಪರಿಚಿತವಾದುದೇನಲ್ಲ, ಅದರ ಚಟುವಟಿಕೆಗಳ ಬಗ್ಗೆ ಒಂದಷ್ಟು ಮಾಹಿತಿ ನನಗಿತ್ತು. ಮೊದಲನೆಯದಾಗಿ ಇದನ್ನು ಸ್ಥಾಪಿಸಿದವರು ಜಮಾತೆ ಇಸ್ಲಾಮ್ ಹಿಂದ್ ಅಲ್ಲ. ಇದರ ಸ್ಥಾಪಕ ಅಧ್ಯಕ್ಷ ಸಿ.ಕೆ.ಹುಸೇನ್ ಎನ್ನುವ ಪತ್ರಕರ್ತ ಜಮಾತೆ ಇಸ್ಲಾಮ್ ಸಂಘಟನೆಯವರಲ್ಲ ಎನ್ನುವುದು ಗೊತ್ತಿತ್ತು. ಈಗ ಈ ಸಂಘದ ಸದಸ್ಯರಾಗಿರುವವರೆಲ್ಲರೂ ಜಮಾತೆ ಇಸ್ಲಾಮ್‌ಗೆ ಸೇರಿದವರಲ್ಲ, ಉಳಿದವರ ಜತೆಯಲ್ಲಿ ಅವರೂ ಸದಸ್ಯರಾಗಿರಬಹುದು. ಜಮಾತೆ ಇಸ್ಲಾಮ್ ಗೆ ಸೇರಿರುವ ‘ಹಿದಾಯತ್ ಸೆಂಟರ್’ ಕಟ್ಟಡದಲ್ಲಿ ಸಂಘದ ಕಚೇರಿ ಇರುವುದೊಂದೇ ಆ ಸಂಘಟನೆಯ ಜತೆಗೆ ಮುಸ್ಲಿಮ್ ಲೇಖಕರ ಸಂಘದ ಸಂಬಂಧ ಇರುವುದಕ್ಕೆ ನಮಗೆ ಮೇಲ್ನೋಟಕ್ಕೆ ಸಿಗುವ ಪುರಾವೆ.

ಮುಸ್ಲಿಮ್ ಲೇಖಕರ ಸಂಘ ಮುಸ್ಲಿಮ್ ಲೇಖಕರಿಗೆ ನೀಡಿದ್ದ ಮೊದಲ ಪ್ರಶಸ್ತಿಯನ್ನು ಪ್ರದಾನ ಮಾಡಿದವರು nudisiri-ananthamurthyಹಿರಿಯ ಸಾಹಿತಿಗಳಾಗಿರುವ ಯು.ಆರ್.ಅನಂತಮೂರ್ತಿ, ಆ ವರ್ಷ ಪ್ರಶಸ್ತಿ ಸ್ವೀಕರಿಸಿದವರು ಇನ್ನೊಬ್ಬ ಪ್ರಖ್ಯಾತ ಮುಸ್ಲಿಮ್ ಲೇಖಕ ಅಬ್ದುಲ್ ರಷೀದ್, ನಂತರದ ದಿನಗಳಲ್ಲಿ ಪ್ರಶಸ್ತಿ ಸ್ವೀಕರಿಸಿದವರಲ್ಲಿ ಬಿ.ಎ.ಸನದಿ, ಅಕ್ಬರ್ ಅಲಿ, ರಮ್ಜಾನ್ ದರ್ಗಾ, ಪ್ರೊ.ಶೇಖ್ ಅಲಿ, ಪ್ರೊ.ಗಜೇಂದ್ರಗಢ, ಕವಿ ನಿಸಾರ್ ಅಹ್ಮದ್ ಮೊದಲಾದವರು ಸೇರಿದ್ದಾರೆ. ಸಾಹಿತಿಗಳಾದ ದೇವನೂರು ಮಹಾದೇವ, ಜವರೇಗೌಡ ಹಾಗೂ ನಿಡುಮಾಮಿಡಿ ಸ್ವಾಮಿಗಳು, ತರಳಬಾಳು ಸ್ವಾಮಿಗಳು ಸಂಘದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದರು. ಇದೇ ಸಂಘ ಆಯೋಜಿಸಿದ್ದ ಕರ್ನಾಟಕ ಮುಸ್ಲಿಮ್ ಲೇಖಕರು ಮತ್ತು ಪತ್ರಕರ್ತರ ಸಮ್ಮೇಳನದ ಅಧ್ಯಕ್ಷರಾಗಿದ್ದವರು ಕವಿ ನಿಸಾರ್ ಅಹ್ಮದ್. ಅದರಲ್ಲಿ ಬಾನು ಮುಷ್ತಾಕ್ ಸೇರಿದಂತೆ ಅನೇಕ ಮುಸ್ಲಿಮ್ ಲೇಖಕ-ಲೇಖಕಿಯರು ಪಾಲ್ಗೊಂಡಿದ್ದರು. ಸಂಘದ ಸಮಾರಂಭಗಳಲ್ಲಿ ನಮ್ಮ ನಡುವಿನ ಪ್ರಗತಿಪರ ಚಿಂತಕರಾದ ಶಿವಸುಂದರ್, ಫಣಿರಾಜ್, ಜಿ.ರಾಜಶೇಖರ್ ಅವರಲ್ಲದೆ ಪತ್ರಕರ್ತರಾದ ಈಶ್ವರಯ್ಯ, ಮನೋಹರ ಪ್ರಸಾದ್, ಚಿದಂಬರ ಬೈಕಂಪಾಡಿ, ಎನ್.ಎ.ಎಂ.ಇಸ್ಮಾಯಿಲ್ ಮೊದಲಾದವರು ಭಾಗವಹಿಸಿದ್ದರು. ನಾನು ಮುಸ್ಲಿಮ್ ಲೇಖಕರ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಲು ಈ ಹಿನ್ನೆಲೆ ಮೊದಲ ಕಾರಣ. ನಾನು ಉಲ್ಲೇಖಿಸಿರುವ ಸಾಹಿತಿಗಳು, ಚಿಂತಕರು, ಪತ್ರಕರ್ತರೆಲ್ಲರೂ “ಸಮಯ ಸಾಧಕರು’ ಎನ್ನುವುದಾದರೆ (ನವೀನ್ ಪತ್ರಕ್ಕೆ ಪ್ರತಿಕ್ರಿಯಿಸಿದವರೊಬ್ಬರು ಈ ಆರೋಪ ಮಾಡಿದ್ದರು) ‘ಸಮಯಸಾಧಕ’ ನೆಂಬ ಕೀರ್ತಿಕಿರೀಟ ನನ್ನ ತಲೆಯ ಮೇಲೂ ಇರಲಿ.

ಸಾರಾ ಅಬೂಬಕರ್, ಬೊಳುವಾರು, ಕಟ್ಪಾಡಿ ಮೊದಲಾದವರನ್ನು ಯಾಕೆ ಗುರುತಿಸಿ ನೀವು ಗೌರವಿಸಿಲ್ಲ ಎಂದು ನಾನೂ ಸಂಘಟಕರನ್ನು Sara-Abubakarಪ್ರಶ್ನಿಸಿದ್ದೆ. ‘ಈ ಬಾರಿ ಬೊಳುವಾರು ಅವರನ್ನು ಸನ್ಮಾನಿಸಲು ಕಾರ್ಯಕಾರಿ ಸಮಿತಿಯಲ್ಲಿ ನಿರ್ಧಾರವಾಗಿತ್ತು. ಆದರೆ ಅವರು ಅಮೆರಿಕದಲ್ಲಿರುವುದರಿಂದ ಸಾಧ್ಯವಾಗಲಿಲ್ಲ. ಸಾರಾ ಅಬೂಬಕರ್ ಒಪ್ಪಿಕೊಂಡರೆ ನಾವು ಖಂಡಿತ ಅವರನ್ನು ಕರೆಸಿ ಗೌರವಿಸುತ್ತೇವೆ’ ಎಂದು ಸಂಘದ ಕಾರ್ಯದರ್ಶಿ ಉಮರ್ ನನಗೆ ತಿಳಿಸಿದರು. ಅದೇ ರೀತಿ ಪ್ರಗತಿಪರರೆನಿಸಿಕೊಂಡ ಲೇಖಕರ ಕೃತಿಗಳಿಗೆ ಯಾಕೆ ಪ್ರಶಸ್ತಿ ನೀಡಿಲ್ಲ ಎಂದೂ ಅವರನ್ನು ಕೇಳಿದ್ದೆ. ‘ಪ್ರಶಸ್ತಿಗೆ ಅರ್ಜಿ ಹಾಕಲು ಪತ್ರಿಕಾ ಪ್ರಕಟಣೆ ನೀಡುತ್ತೇವೆ, ಆ ಅರ್ಜಿಗಳ ಆಧಾರದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಅವರು ಪ್ರಶಸ್ತಿಗೆ ಆಯ್ಕೆಯಾಗದಿರಲು ಅರ್ಜಿ ಹಾಕದಿರುವುದು ಕಾರಣ ಇರಬಹುದು’ ಎಂದು ಉಮರ್ ಹೇಳಿದರು. ಪ್ರಶಸ್ತಿಯ ಆಯ್ಕೆಗಾಗಿ ಅವರು ರೂಪಿಸಿರುವ ವ್ಯವಸ್ಥೆ ತಪ್ಪಿರಬಹುದು, ಆದರೆ ಪೂರ್ವಗ್ರಹದಿಂದ ಇಂತಹದ್ದೊಂದು ವ್ಯವಸ್ಥೆ ರೂಪಿಸಿದ್ದಾರೆಂದು ನನಗೆ ಅನಿಸುತ್ತಿಲ್ಲ.

ಇಷ್ಟಕ್ಕೆ ಸುಮ್ಮನಾಗದ ನಾನು ‘ಮುಸ್ಲಿಮ್ ಲೇಖಕರ ಸಂಘ’ದ ಸಂವಿಧಾನವನ್ನು ತರಿಸಿ ಓದಿದೆ. ಅದರಲ್ಲಿರುವ ಸಂಘದ ಉದ್ದೇಶದ ಮುಖ್ಯಾಂಶಗಳು ಹೀಗಿವೆ:

  1. ಮುಸ್ಲಿಮ್ ಸಮುದಾಯದಲ್ಲಿ ಸಾಹಿತ್ಯದ ಅಭಿರುಚಿಯನ್ನು ಬೆಳೆಸುವುದು
  2. ಮುಸ್ಲಿಮ್ ಸಮುದಾಯದಲ್ಲಿ ಧರ್ಮದ ನೈಜ ತಿಳುವಳಿಕೆಯನ್ನು ಮೂಡಿಸುವುದು ಮತ್ತು ಮೂಢನಂಬಿಕೆ, ಕಂದಾಚಾರಗಳನ್ನು ಹೋಗಲಾಡಿಸಲು ಪ್ರಯತ್ನಿಸುವುದು
  3. ದೇಶಬಾಂಧವರಲ್ಲಿ ಇಸ್ಲಾಮ್ ಧರ್ಮದ ಬಗ್ಗೆ ಸರಿಯಾದ ತಿಳುವಳಿಕೆ ಮೂಡಿಸುವುದು ಮತ್ತು ಅವರಲ್ಲಿರಬಹುದಾದ ತಪ್ಪು ಕಲ್ಪನೆಯನ್ನು ದೂರೀಕರಿಸಲು ಪ್ರಯತ್ನಿಸುವುದು.
  4. ಮಾಧ್ಯಮಗಳಲ್ಲಿ ಪ್ರಕಟವಾಗುವ ಧಾರ್ಮಿಕ ವಿಧಿನಿಯಮಗಳ ಬಗೆಗಿನ ಅಪಪ್ರಚಾರಕ್ಕೆ ಸೂಕ್ತ ಉತ್ತರ ನೀಡುವುದು
  5. ಒಳಿತಿನ ಕಾರ್ಯಗಳಲ್ಲಿ ಸಂಘ ಸಂಸ್ಥೆಗಳೊಂದಿಗೆ ಸಹಕರಿಸುವುದು
  6. ಮುಸ್ಲಿಮ್ ಸಂಘ ಸಂಸ್ಥೆಗಳ ನಡುವ ಐಕ್ಯ ಸಾಮರಸ್ಯ ಮೂಡಿಸಲು ಪ್ರಯತ್ನಿಸುವುದು
  7. ದೇಶಬಾಂಧವರ ಮಧ್ಯೆ ಕೋಮು ಸಾಮರಸ್ಯವನ್ನು ಬಲಪಡಿಸಲು ಪ್ರಯತ್ನಿಸುವುದು….

ಈ ಸಂವಿಧಾನದ ಆಧಾರದಲ್ಲಿ ಮುಸ್ಲಿಮ್ ಲೇಖಕರ ಸಂಘ ‘ಕೋಮುವಾದಿ ಸಂಘಟನೆ’ ಎಂಬ ತೀರ್ಮಾನಕ್ಕೆ ಬರಲು ನನಗೆ ಸಾಧ್ಯವಾಗಲಿಲ್ಲ. ಇನ್ನು ನವೀನ್ ಸೂರಿಂಜೆ ಅವರು ಉಲ್ಲೇಖಿಸಿರುವುದು ‘ಶಾಂತಿ ಪ್ರಕಾಶನ’ದ ಪುಸ್ತಕಗಳನ್ನು. ಇದೇ ಚರ್ಚೆಗೆ ಹೆಚ್ಚು ಗ್ರಾಸ ಒದಗಿಸಿರುವುದು. ಈ ಪ್ರಕಾಶನ ಸಂಸ್ಥೆಗೂ ಮುಸ್ಲಿಮ್ ಲೇಖಕರ ಸಂಘಕ್ಕೂ ಸಂಬಂಧ ಇರುವುದಕ್ಕೆ ನನಗೆ ಪುರಾವೆಗಳು ಸಿಕ್ಕಿಲ್ಲ. shantiprakashanaಸಂಘದ ಪದಾಧಿಕಾರಿಗಳು ಕೂಡಾ ಈ ಸಂಬಂಧವನ್ನು ನಿರಾಕರಿಸುತ್ತಾರೆ. ನಾನು ಭಾಗವಹಿಸಿದ್ದ ಸಮಾರಂಭದ ವೇದಿಕೆಯಲ್ಲಿ ಜಮಾತೆ ಇಸ್ಲಾಮ್ ಹಿಂದ್ ಇಲ್ಲವೇ ಶಾಂತಿ ಪ್ರಕಾಶನದ ಯಾವ ಬ್ಯಾನರ್, ಭಿತ್ತಿಪತ್ರಗಳಿರಲಿಲ್ಲ. ಸಮಾರಂಭದ ಸಂಘಟಕರಲ್ಲಿ ಯಾರೂ ತಪ್ಪಿಯೂ ಈ ಸಂಸ್ಥೆಗಳ ಹೆಸರನ್ನೂ ಉಲ್ಲೇಖಿಸಿಲ್ಲ. ಆದರೆ ತುಂಬಿತುಳುಕಾಡುತ್ತಿದ್ದ ಪುರಭವನದಲ್ಲಿ ಸೇರಿದವರಲ್ಲಿ ಬಹುಸಂಖ್ಯೆಯಲ್ಲಿ ಜಮಾತೆ ಇಸ್ಲಾಮ್ ಸದಸ್ಯರಿದ್ದರು ಎಂಬ ಸ್ನೇಹಿತರ ಸಂಶಯವನ್ನು ಸಂಘಟಕರೂ ನಿರಾಕರಿಸಿಲ್ಲ.

ಕೊನೆಯದಾಗಿ ನಾನು ಮುಸ್ಲಿಮ್ ಲೇಖಕರ ಸಂಘದ ಸಮಾರಂಭದಲ್ಲಿ ಭಾಗವಹಿಸಲು ಇನ್ನೂ ಒಂದು ಕಾರಣ ಇದೆ. ಸಿದ್ದಾಂತಗಳ ಬಗ್ಗೆ ನನಗೆ ಮಡಿವಂತಿಕೆ ಇಲ್ಲ. ಸಾರ್ವಜನಿಕ ಹಿತ ಮತ್ತು ಸಿದ್ದಾಂತಗಳ ನಡುವೆ ಆಯ್ಕೆ ಎದುರಾದಾಗ ನಾನು ಸಾರ್ವಜನಿಕ ಹಿತವನ್ನೇ ಆಯ್ಕೆ ಮಾಡುತ್ತೇನೆ. ಯಾಕೆಂದರೆ ಕಾಲಾಂತರದಲ್ಲಿ ಸಿದ್ಧಾಂತಗಳು ಬದಲಾಗುತ್ತವೆ. ‘ಜಾತಿಯೇ ಇಲ್ಲ, ವರ್ಗವೇ ಎಲ್ಲ’ ಎನ್ನುತ್ತಿದ್ದ ಕಮ್ಯುನಿಸ್ಟ್ ಗೆಳೆಯರು ಈಗ ಜಾತಿ ಆಧಾರದಲ್ಲಿಯೇ ಚುನಾವಣೆಯಲ್ಲಿ ಟಿಕೆಟ್ ಹಂಚುವ ಸಿದ್ದಾಂತವನ್ನು ಒಪ್ಪಿಕೊಂಡ ನಂತರ ಅದನ್ನು ಜಾತಿವಾದಿ ಪಕ್ಷ ಎಂದು ಹೀಗಳೆಯಬಹುದೇ? ಅದೇ ರೀತಿ ಬ್ರಾಹ್ಮಣ-ಬನಿಯಾ ಪಕ್ಷ ಎಂಬ ಆರೋಪಕ್ಕೆ ಬಲಿಯಾಗಿದ್ದ ಭಾರತೀಯ ಜನತಾ ಪಕ್ಷ ಶೂದ್ರವರ್ಗಕ್ಕೆ ಸೇರಿರುವ ನರೇಂದ್ರ ಮೋದಿಯನ್ನು ಮುಂದಿನ ಪ್ರಧಾನಿ ಎಂದು ಘೋಷಿಸುವ ಮೂಲಕ ಸಾಮಾಜಿಕ ನ್ಯಾಯದ ಸಿದ್ದಾಂತವನ್ನು ಒಪ್ಪಿಕೊಂಡಿದ್ದೇವೆ ಎಂದು ಹೇಳುವ ಕಾರಣಕ್ಕೆ ಅದನ್ನು ಜಾತ್ಯತೀತ ಪಕ್ಷ ಎಂದು ಸ್ವೀಕರಿಸಬಹುದೇ?

ಕ್ಷಿಪ್ರಗತಿಯಲ್ಲಿ ಬದಲಾಗುತ್ತಲೇ ಇರುವ ಭಾರತದ ಸಾಮಾಜಿಕ ಮತ್ತು ರಾಜಕೀಯ ಸ್ಥಿತಿ-ಗತಿಗಳು ಒಮ್ಮೊಮ್ಮೆ ನಮ್ಮನ್ನು ತಕ್ಷಣಕ್ಕೆ ನಿರ್ಧಾರಕ್ಕೆ ಬರಲಾಗದಷ್ಟು ಸಂಕೀರ್ಣತೆಯ ಕಗ್ಗಂಟಿನಲ್ಲಿ ಕಟ್ಟಿಹಾಕುತ್ತವೆ. ಕಾಲವೊಂದೇ ನಮ್ಮ ಸರಿ-ತಪ್ಪುಗಳ ನಿಜವಾದ ತೀರ್ಪುಗಾರ. ಮುಸ್ಲಿಮ್ ಲೇಖಕರ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನನ್ನ ನಿರ್ದಾರದ ಸರಿ-ತಪ್ಪುಗಳನ್ನು ಈ ಕಾಲವೇ ನಿರ್ಧರಿಸಬಹುದು.

ಆದರೆ ಮೊನ್ನೆಯ ಸಮಾರಂಭದಲ್ಲಿ ಪುರುಷರಷ್ಟೆ ಸಮಸಂಖ್ಯೆಯಲ್ಲಿ ಸೇರಿರುವ ಬುರ್ಖಾಧಾರಿ ಸೋದರಿಯರನ್ನು ಕಂಡಾಗ ನನ್ನಲ್ಲೊಂದು ಆಶಾವಾದ ಹುಟ್ಟಿಕೊಂಡದ್ದನ್ನು ನಾನು ಹೇಳದಿರಲಾರೆ. ಸಂಘದ ಕಾರ್ಯಕ್ರಮಕ್ಕೆ ಪ್ರಾರಂಭದ ದಿನಗಳಲ್ಲಿ ಮುಸ್ಲಿಮ್ ಮಹಿಳೆಯರೇ ಬರುತ್ತಿರಲಿಲ್ಲವಂತೆ. ನಂತರದ ದಿನಗಳಲ್ಲಿ ಬಂದರೂ ಅವರು ಕೆಳಗೆ ಗಂಡಸರ ಜತೆ ಕೂರದೆ ಮೇಲಿನ ಮಹಡಿಯಲ್ಲಿ ಪ್ರತ್ಯೇಕವಾಗಿ ಕೂರುತ್ತಿದ್ದರಂತೆ, ಅದರ ನಂತರ ಅವರನ್ನು ಕೆಳಗೆ ಕೂರಿಸಿ ಅವರೆದುರು ಪರದೆಯೊಂದನ್ನು ನೇತುಹಾಕುತ್ತಿದ್ದರಂತೆ, ಕಳೆದ ವರ್ಷ ಹಿಂದಿನ ಸಾಲಿನಲ್ಲಿ ಬಂದು ಕೂತಿದ್ದರಂತೆ. ಈ ಬಾರಿ ಪುರುಷರಷ್ಟೇ ಸಂಖ್ಯೆಯಲ್ಲಿ ಮುಸ್ಲಿಮ್ ಮಹಿಳೆಯರೂ ಭಾಗವಹಿಸಿದ್ದರು. ವೇದಿಕೆಯಲ್ಲಿ ಇಬ್ಬರು ಮುಸ್ಲಿಮ್ ಮಹಿಳೆಯರು ನಮ್ಮೊಡನಿದ್ದರು. dinesh-amin-mattu-2ಅವರಲ್ಲೊಬ್ಬರಿಗೆ ನನ್ನ ಕೈಯಿಂದಲೇ ಪ್ರಶಸ್ತಿಯನ್ನು ಕೊಟ್ಟೆ. ಇನ್ನೊಬ ಕವಯಿತ್ರಿ ಎರಡು ಕವನಗಳನ್ನು ಓದಿದರು. ಮೊದಲ ಪುಟ್ಟ ಕವನ ‘ಪರಪುರುಷ’ನಾದ ನನ್ನ ಹೆಸರನ್ನು ಪೂರ್ಣವಾಗಿ ಉಲ್ಲೇಖಿಸಿ ನನ್ನ ಬರವಣಿಗೆಯ ಕುರಿತು ಬರೆದುದಾಗಿತ್ತು. ಯಾರಿಗೂ ಕಾಣದ ರೀತಿಯಲ್ಲಿ ಪರದೆಯಾಚೆ ಕೂತಿದ್ದ ಮುಸ್ಲಿಮ್ ಮಹಿಳೆಯರು ಕಣ್ಣುಕುಕ್ಕುವ ಫ್ಲಡ್ ಲೈಟ್ ಮುಂದೆ ವೇದಿಕೆಯಲ್ಲಿ ಅನ್ಯಧರ್ಮದ ಪುರುಷರ ಜತೆ ಕೂರುವ ಮತ್ತು ಕವನ ಓದುವ ವರೆಗೆ ಸಾಗಿಬಂದಿರುವ ಮಂಗಳೂರಿನ ಮುಸ್ಲಿಮ್ ಸೋದರಿಯರ ಬಾಳಪಯಣದ ಬಗ್ಗೆ ಆಶಾವಾದ ಇಟ್ಟುಕೊಳ್ಳದೆ ಇರಲು ಸಾಧ್ಯವೇ? ಮಹಿಳಾ ದಿನಾಚರಣೆಯನ್ನು ಇನ್ನಷ್ಟು ಭರವಸೆಯಿಂದ ಆಚರಿಸಲು ಬೇರೆ ಕಾರಣಗಳು ಯಾಕೆ ಬೇಕು?

14 thoughts on “ದಿನೇಶ್ ಅಮಿನ್‌ಮಟ್ಟು ಪ್ರತಿಕ್ರಿಯೆ : ಸಿದ್ಧಾಂತದ ಮಡಿವಂತಿಕೆಗಿಂತ ಸಾರ್ವಜನಿಕ ಹಿತ ನನಗೆ ಮುಖ್ಯ

  1. Salam Bava

    ತ್ಯ೦ತ ಸಮಯೋಚಿತ,ನ್ಯಾಯಬದ್ದ ಬರವಣಿಗೆ. ಮುಸ್ಲಿಮ್ ಲೇಖಕರು ಎ೦ಬ ಹೆಸರಿಟ್ಟ ಮಾತ್ರಕ್ಕೆ,ಅದರಲ್ಲಿ ಲಿಬರಲ್ಸ್ ಭಾಗವಹಿಸ ಬಾರದು ಎ೦ಬುದು .ಇನ್ನು ಕೇವಲ ಹೊರಗಿನಿ೦ದಲೇ ಒ೦ದು ನೋಟ ಹಾಯಿಸಿ ,ಶಾ೦ತಿ ಪ್ರಕಾಶನ ಒ೦ದು ಇಸ್ಲಾ೦ ಮೂಲಭೂತವಾದಿ ಎ೦ದು ಆರೋಪ ಹೊರಿಸಿದರೆ ಅದು ಹೊಣೆಗೇಡಿತನ.ದಿನೇಶ ಅಮೀನ್ ರವರು ಎಲ್ಲವನ್ನು ಎಳೆ,ಎಳೆಯಾಗಿ ಬಿಡಿಸಿ ಹೇಳಿ,ತಕ್ಕ ಪ್ರತ್ಯುತ್ತರ ನೀಡಿದ್ದಾರೆ.
    ಇನ್ನು ಅದರಲ್ಲಿ ಹೆಸರಿಸಿರುವ ಮಹಿಳಾ ಸಾ(ಹಿ)ತಿಯ ವಿಶಯ- ಅತ್ತ ಅರ್ದ ಕಾಸರಕೋಡು
    ಮಲೆಯಾಳ,ಅರ್ದ್೦ಬರ್ದ್೦ ಕನ್ನಡದಲ್ಲಿ ಎನನ್ನೋ ಬರೆದು,ಒದಿದರೆ ತಲೆ ಚಿಟ್ಟು ಹಿಡಿಯುವ೦ಥ
    ಬರವಣಿಗೆ ಅವರದು.ಎಷ್ಟೆಲ್ಲಾ ಸ್ರಜನಶೀಲ ಸಾಹಿತಿಗಳನ್ನು ಪರಿಚಯಸಿರುವ ಲ೦ಕೇಶರು
    ಈ ಸಾಹಿತಿಯನ್ನು ಯಾವ ಪ್ರತಿಭೆ ಕ೦ಡು break
    ಕೊಟ್ಟರೋ ಗೊತ್ತಿಲ್ಲ.
    ಮುಸ್ಲಿ೦ ಸ್ತ್ರಿ ಗಳ ಪುರೋಗಮನದ ಕುರಿತು ಬರೆಯುವ ಅವರು-ತಮ್ಮದೇ ಕುಟು೦ಬದಲ್ಲಿ
    ಒಬ್ಬ ಮ೦ಗಳೂರಿನ ಹುಡಿಗಿಯನ್ನು ಮದುವೆಯಾಗಿ, ಆ ಹುಡಿಗಿಯ ಮೇಲೆ ಎನೆಲ್ಲಾ
    ದ್ರೋಹಿಸಿ ಕೆಲವೇ ತಿ೦ಗಳಲ್ಲಿ ತಲಾಕ್ ಕೊಟ್ಟಾಗೆ ಇವರ ಪ್ರಗತಿಶೀಲತೆ ಎಲ್ಲಿತ್ತು.
    ಇನ್ನು ಬೊಳುವಾರು,ಫಕೀರ್,ರಹ್ಮಮತೆ,ಬಾನು ಇವರಲ್ಲಾ ಖ೦ಡಿತವಾಗಿಯು
    ಪ್ರಶಶ್ತಿಗೆ ಅತ್ಯ೦ತ ಅರ್ಹರಾದವರು,ಅವರನ್ನು ಲೇಖಕರ್ ಸ೦ಘ ಸನ್ಮಾನಿಸಲೇ ಬೇಕು.

    Reply
  2. yammarmanvi

    ಶ್ರೀ ದಿನೇಶ್ ಮಟ್ಟು ಸಾರ‍್ ಅವರಿಗೆ ನಮಸ್ಕಾರಗಳು. ನಿಮ್ಮ ಓದುಗ ಅಭಿಮಾನಿಗಳಲ್ಲಿ ನಾನು ಒಬ್ಬ. ಪ್ರಜಾವಣಿ ಯ ನಿಮ್ಮ ಅಂಕಣಗಳನ್ನು ತಪ್ಪದೆ ಓದುತ್ತ ಅದರಿಂದ ಸಮಾಜದ ಆಗುಹೋಗುಗಳ ಅರಿವು ಮೂಡಿಸಿಕೊಂಡು ಸಂತಸ ಪಡುತ್ತಿರುವವರ ಸಾಲಿನಲ್ಲಿ ನಾನು ಸೇರಿದ್ದೇನೆ ಎಂದು ಹೇಳಿಕೊಳ್ಳುವುದಕ್ಕೆ ನನಗೆ ಹೆಮ್ಮೆ ಅನಿಸುತ್ತಿದೆ.

    ಇತ್ತಿಚೆಗೆ ನಿವು ಭಾಗವಹಿಸಿದ್ದ ಮುಸ್ಲಿಮ್ ಲೇಖಕರ ಸಂಘದ ಕಾರ್ಯಕ್ರಮದ ಕುರಿತಂತೆ ನಿಮ್ಮ ಶಿಷ್ಯನೆಂದು ಹೇಳುಕೊಂಡು ತಿರುಗುತ್ತಿರುವ ನವೀನ್ ಸೂರಿಂಜೆ ಎಂಬ ಮಹಾಶಯ ನಿಮಗೆ ಆ ಕಾರ್ಯಕ್ರಮದಲ್ಲಿ ಭಾಗವಹಿಸಲು ತಡೆಯೊಡ್ಡುವ ನಿಟ್ಟಿನಲ್ಲಿ ಪತ್ರವೊಂದು ಬರೆದಿದ್ದು ಅದು ಈಗ ಚರ್ಚೆಯ ವಿಷಯವಾಗಿದ್ದು ಎಲ್ಲವನ್ನು ನೀವು ಬಲ್ಲೀರಿ ಅದಕ್ಕೆ ನಿಮ್ಮ ಪ್ರತಿಕ್ರಿಯೆಯನ್ನು ನಾನು ನಿರೀಕ್ಷಿಸಿದ್ದೆ. ಇಲ್ಲಿ ತಮ್ಮ ಪ್ರತಿಕ್ರಿಯೆ ನೀಡಿದ್ದು ಸಮಂಜವಾಗಿದೆ. ಮತ್ತು ನೀವು ಹೇಳಿದಂತೆ ಈತನ ಪತ್ರ ನೋಡಿಲ್ಲ. ಒಂದು ವೇಳೆ ನೋಡಿದ್ದರೂ ಸಾರ್ವಜನಿಕ ಹಿತದೃಷ್ಟಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೆ ಎಂದು ಹೇಳಿದ್ದೀರಿ. ಇದು ನಿಮ್ಮಲ್ಲಿರುವ ಸಾಮಾಜಿಕ ಪ್ರಜ್ಞೆಯನ್ನು ಎತ್ತಿ ತೋರಿಸುತ್ತಿದೆ. ನಿಮ್ಮ ಅಭಿವೃದ್ಧಿಯನ್ನು ಸಹಿಸದ ಕೆಲವರು ನಿಮ್ಮನ್ನು ಸಾಮಾಜಿಕವಾಗಿ ದೂರವಿಡುವ ಷಡ್ಯಂತ್ರವಾಗಿದೆ ಎಂಬುದು ನವೀನ್ ಅವರ ಪತ್ರದಿಂದ ಸ್ಷಷ್ಟವಾಗುತ್ತಿದೆ. ಇಂತಹ ಉಚಿತ ಸಲಹೆ ನೀಡುವವರು ನಮ್ಮಲ್ಲಿ ಬಹಳಷ್ಟು ಜನ ಇದ್ದಾರೆ ಎನ್ನುವುದು ನಿಮಗೆ ತಿಳಿದಿದೆ.
    ಈ ದೇಶದಲ್ಲಿ ಜಮಾಅತೆ ಇಸ್ಲಾಮಿ ಮತ್ತದರ ಸೋದರ ಸಂಘಟನೆಗಳು ಮುಸ್ಲಿಮರಲ್ಲಿನ ಕಂದಾಚಾರ, ಮೂಢನಂಬಿಕೆಯನ್ನು ದೂರ ಮಾಡಲು ಪ್ರಯತ್ನಿಸಿದಷ್ಟು ಮತ್ಯಾವ ಸಂಘಟನೆಗಳು ಮಾಡಿಲ್ಲ ಎನ್ನುವುದಂತೋ ಸ್ಷಷ್ಟ. ಇದರಿಂದಾಗಿ ಇಂದು ಮುಸ್ಲಿಮರಲ್ಲಿ ಹಲವಾರು ಸಾಮಾಜಿಕ ಬದಲಾವಣೆಗಳು ಸಹಾ ಉಂಟಾಗಿವೆ. ಈ ನಿಟ್ಟಿನಲ್ಲಿ ನಿಮ್ಮ ಸ್ಪಷ್ಟ ಅಭಿಪ್ರಾಯ ತಿಳಿಸಿದ್ದೀರಿ. ಧನ್ಯವಾದಗಳು. ಮುಂದೆಯೂ ಸಹ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತ ಸಾಮಾಜಿಕ ಜವಾಬ್ದಾರಿಯನ್ನು ಮೆರೆಯುತ್ತೀರಿ ಎಂದು ಭಾವಿಸುವೆ.

    Reply
  3. Sandeep shetty

    What great defence you have done for defending your support for a religion based organisation. Why don’t you put forward similar defence for Hindu based groups? Do you read those groups constitution before calling them communal? How many of their constitution points are backed up by actions? Y did u only preached about Hindus in that function? Y no word about practise in Muslim community! Scared for life? May be you would have lost life there only if u have raised your voice against their ill practices.

    Reply
  4. ಗಿರೀಶ್, ಬಜ್ಪೆ

    ಸಲಾಂ ಬಾವಾರವರೆ, ಲಂಕೇಶರು ಆ ಲೇಖಕಿಗೆ ಬ್ರೇಕ್ ನೀಡಿದ್ದು ಲೇಖನಗಳ ಅಥವಾ ಕಥೆಗಳ ಗುಣಮಟ್ಟ ನೋಡಿ ಅಲ್ಲ. ಬದಲಾಗಿ ಮುಕ್ತವಾಗಿ ಬರೆಯಲು ಆಕೆ ತೋರಿದ ಧೈರ್ಯಕ್ಕಾಗಿ. ಪ್ರಾರಂಭದಲ್ಲಿ ಆ ಲೇಖಕಿ ಬರೆದ ಕಥೆಗಳ ಶಬ್ಧ ಪ್ರಯೋಗಗಳು ಅಷ್ಟೊಂದು ಉನ್ನತ ಮಟ್ಟದಲ್ಲಿರಲಿಲ್ಲ ನಿಜ. ಆದರೆ ಯಾವುದೋ ಅವ್ಯಕ್ತ ನೋವು ಹಾಗೂ ಸಂತಸಗಳ ಸಂದೇಶವನ್ನು ನೀಡುವಂತಿದ್ದವು. ಇದನ್ನು ಬಹುತೇಕ ಎಲ್ಲರೂ ಮೆಚ್ಚಿದ್ದಾರೆ. ತನ್ನ ಕನ್ನಡದ ಬಗ್ಗೆ ಆಕೆ ಎಲ್ಲೂ ಕೊಚ್ಚಿಕೊಂಡಿಲ್ಲ, ತಾನೊರ್ವ ಮಹಾನ್ ಲೇಖಕಿ ಎಂದೂ ಎಲ್ಲೂ ಹೇಳಿಕೊಂಡಿದ್ದನ್ನು ನಾನು ಓದಿಲ್ಲ.

    Reply
    1. Salam Bava

      ಗಿರೀಶ್ ರವರೇ,ವ್ಯಕ್ತ ಮತ್ತು ಅವ್ಯಕ್ತ ನೋವು ನೋಡಬೇಕಾದರೆ ಒಮ್ಮೆ ಬೆಳ್ತ೦ಗಡಿ,ಬ೦ಟ್ವಾಳ ಅಥವಾ ಪುತ್ತೂರಿನ ಹಳ್ಲಿ ಪ್ರದೇಶದ ಬಡ ಮುಸ್ಲಿ೦ ಕುಟು೦ಬಗಳನ್ನು ಸ೦ದರ್ಶಿಸಿ.ಟರ್ಪಾಲಿನ ಚಾವಣಿಯ ಮನೆಯಲ್ಲಿ ವಾಸಿಸುವ,ಹೆ೦ಗಸರು ಬಹಿರ್ದೆಸೆಗೆ ಹೋಗಲು ರಾತ್ರಿಯಾಗುವುದನ್ನೇ ಕಾಯಬೇಕಾದ ಕುಟು೦ಬಗಳವು.ಇವರ ಸಹಾಯಕ್ಕಾಗಿ ,ಯಾವಾಗಲೂ ಧಾವಿಸುವವರು-ಇದೇ-ಜಮಾಯತೆ ಇಸ್ಲಾ೦,ಜಮತುಲ್ ಫಲ್ಹಹ,ಅಬುದಾಬಿಯ ಬ್ಯಾರೀಸ್ ಪೋರ೦,ಹಿದಾಯಾ,ಪಿಎಫೈ,ssf,skssf ಮು೦ತಾದ ಸ೦ಘಟನೆಗಳು ಮಾತ್ರಾ.ಮುಸ್ಲಿ೦ ಸಮುದಾಯದಲ್ಲಿ ಎಲ್ಲವೂ ಸರಿಯಾಗಿದೆ ಎ೦ದು ಹೇಳುತ್ತಿಲ್ಲ,ಆದರೆ ಸಮುದಾಯದ ಪರಿದಿಯೊಳಗಿದ್ದು ,
      ಒಳಗಿದ್ದುಕೊ೦ಡೇ ಸುಧಾರಿಸುವ ಕೆಲ್ಸ್ ಮಾಡಬಹುದಲ್ಲ.! ಸಮುದಾಯದ ಎಸ್ಟೋ ಸ್ತ್ರಿ
      ಸ೦ಘಟನೆಗಳು ಈ ನಿಟ್ಟಿನಲ್ಲಿ ತು೦ಬಾ ಪರಿಣಾಮಕಾರಿಯಾದ ಕೆಲಸ ಮಾಡುತ್ತಿವೆ.
      ಹಿರಾ ಮಹಿಳಾ ಕಾಲೇಜಿನ product ಗಳು ಎ೦ಥಾ ಪ್ರತಿಭಾನ್ವಿತರು ಎ೦ದು ಒಮ್ಮೆ ಅಲ್ಲಿಗೆ ಭೇಟಟ್ಕೊಟ್ಟು ಪರೀಕ್ಕ್ಷಿಸಿ.ಮುಸ್ಲಿ೦ ಮಹಿಳಾ ಸಾಹಿತಿಗಳ ಕೆಲವು ರಚನೆಗಳು ಅತ್ಯ೦ತ ಉನ್ನತ
      ಮಟ್ಟದ್ದು.ಆದರೆ ಅವರು ಸನ್ಮಾರ್ಗ್,ಅನುಪಮ ಅಥವಾ ವಾರ್ತಾಭಾರತಿಯಲ್ಲಿ ಬರೆಯುವುದರ೦ದ
      ಅವರಿಗೆ ಪ್ರಚಾರ ಸಿಕ್ಕಿಲ್ಲ.ಆದರೆ ನೀವು ಹೆಸರಿಸಿರುವ ಸಾಹಿತಿಗೆ ಅನರ್ಹವಾದ ಪ್ರಚಾರ
      ಸಿಕ್ಕಿದ್ದು ಅವರು ಕೇವಲ ಸಮುದಾಯವನ್ನು ದೂಷಿಸಿ ಬರೆದರು ಎ೦ಬ ಒ೦ದೇ ಕಾರಣಕ್ಕೆ!
      ಅವರು ಯಾವುದೇ ನೋವು೦ಡವರಲ್ಲ,ಸಮಾಜದ ಮೇಲುಸ್ತರದಲ್ಲಿರುವವರು.
      ಅವರ ಪ್ರಾರ೦ಭದ ಬರವಣಿಗೆ ಮಾತ್ರವಲ್ಲಾ,ಈಗಿನದ್ದು ಸಹಾ ಟೊಳ್ಳ್?ಗುಜರಾತಿನ
      ಶ್ರೀಕುಮಾರ್ ರವರ ಗುಜರಾತೆ ದ೦ಗೆಯ ಕುರಿತಾದ ಪುಸ್ತಕವನ್ನು ಇವರು ಕನ್ನಡಕ್ಕೆ
      ಅನುವಾದಿಸಿ,ಅದರ ಅ೦ತರಾತ್ಮವನ್ನೇ ಕಿತ್ತು ಒಗೆದ್ದಿದ್ದಾರೆ.
      ನಮಗೆಲ್ಲಾ ಅ೦ದರೇ ಮುಸಲ್ಮಾನರಿಗೆ ದಿನೇಶ್ ಅಮಿನ್,ಅನ೦ತಮೂರ್ತಿ, Gouri Lankesh,Naveen sooringe ಎಲ್ಲಾಪ್ರಿಯರಾಗುವುದು -ಅವರ ಸಾಮುದಾಯಿಕ ಬದ್ದತೆ,ಜನಪರ ಒಲವು,ಅನ್ಯ್ಯಾಯದ ವಿರುದ್ದಎದ್ದು ನಿಲ್ಲುವುದು,ಷೋಷಿತರ ಪರ ವಾದಿಸುವುದು ಈ ಗುಣಕ್ಕಾಗಿ .ಅದು ಬಿಟ್ಟು ಇದರಲ್ಲಿಇನ್ಯ್ಯಾವುದೇ ಸ್ವಾರ್ಥವಿಲ್ಲ.
      ಇದೆಲ್ಲಾ ಯಾಕೆ ದೀರ್ಘವಾಗಿ ಬರೆದೆನೆ೦ದರೆ ನಾವು ಶೋಷಿತರು ಸ್ವಾಮಿ!

      Reply
      1. Mahesha Prasad Neerkaje

        ಶೋಶಿತರಲ್ಲ ಸ್ವಾಮೀ .. ಪೋಷಿತರು. ಇಷ್ಟು ವರ್ಷ ಕಾಂಗ್ರೆಸ್ ಸೇರಿ ಎಲ್ಲಾ ಪಕ್ಷಗಳೂ ಮಾಡಿದ್ದು ನಿಮ್ಮ ಪೋಷಣೆಯೇ ಅಲ್ಲವೇ? ಇಂದು ಕರಾವಳಿಯಲ್ಲಿರುವ ವ್ಯಾಪಾರ ವಹಿವಾಟಿನಲ್ಲಿ ಅರ್ಧದಷ್ಟು ನಿಮ್ಮವರದ್ದೆ. ಇನ್ನು ದುಬೈಯಲ್ಲಿ ದಿನಾರ್ ಗಳಿಸುವವರೂ ನೀವೆಯೇ. ಇಷ್ಟೆಲ್ಲಾ ಇದ್ದೂ ಶೋಷಿತರು ಅಂದರೆ ನಂಬಬೇಕಾ?

        Reply
        1. Salam Bava

          ಕಾ೦ಗೇಸ್ ನವರು ನಮಗೇ ಏನು ಕೊಟ್ಟಿದ್ದಾರೆ ಎ೦ದು ತಿಳಿಯಲು ಸ್ವಲ್ಪಸಾಚಾರ್ ವರದಿಯಾನ್ನು ಓದಿ!ನಿಮ್ಮೆಲ್ಲಾ ಬೆದರಿಕೆ,ಹಿ೦ಸೆಯನ್ನು ಸಹಿಸಿಯೂ ನಮ್ಮವರು ವ್ಯಾಪಾರದಲ್ಲಿ ಅಬಿವ್ರಿದ್ದಿಯಾದದ್ದು,ಆದೂ ಅಲ್ಲ ದೇ ಅತ್ಯ೦ತ ಉನ್ನತ ದರ್ಜೆಯ ಶಿಕ್ಕ್ಷಣ ಸ೦ಸ್ಥೆ,ಹಾಸ್ಟಿಟಲ್,ಅತೀ ದಕ್ಸ ವ್ಯೆದರು ನಮ್ಮಲ್ಲಿ ಇರುವುದಕ್ಕೆ ನೀವು ನಮಗೆ ಶಹಭ್ಹಾಶಗಿರಿ ಕೊಡಬೇಕಲ್ಲಾ?ಇನ್ನು ದುಬೈಯಲ್ಲಿ ನಮ್ಮ ಮಕ್ಕಳು ಸ೦ಪಾದಿಸುವುದು ಕೇವಲ ನೂರರ
          ಲೆಕ್ಕದಲ್ಲಿ ದಿರ೦, ಆದ್ರೆ ಅಲ್ಲಿ ಲಕ್ಕಾ೦ತರ ದಿರ೦ ಸ೦ಪಾದಿಸುವುದು ನಿಮ್ಮವರು ಎ೦ಬುದನ್ನು
          ಯಾಕೆ ಮರೆಮಾಚುತ್ತೀರಿ.

          Reply
  5. Irfan Kazi

    –Sandeep Shetty,Of course the name it self says that
    this is a religious organization.what is wrong in the name?but you stoop so low as to highlight that Mr Ameen scared of his life in a muslim writters function!
    By attending & again defending his action he has shown his guts and commitment.There’s a large section of Muslims that is liberal,educated and prograssive.
    He is always stood againist the oppresors,communal fascicm&
    politics of communal hatred.People like him are true nationalists,a true Hindu &
    Above all true human beings.

    Reply
  6. husain

    Naveen soorinjeyavare innadaru nimma moolabhootha dhoraneya bagge awalokane ndesi
    Omme jih na sadasyarodane Muslim lekakarondigeberethu nodi
    E madivanthige bidi
    Innu bekiddalli panisir dinakar rajshekar shivsundaralli keli

    Madivanthike aliyali samanathe beleyali

    Reply
  7. Sandeep shetty

    Mr.irfan, can u help by answering my queries on behalf of nationalist Ameen? I still feel, he might be scared of life to talk against ill practices in minority religion and communal practices of groups of minorities. True nationalist is the one who opposes ill practices of all religions and bad groups of all religions.this gentleman is opportunist, true communal, anti Hindu writer.

    Reply
    1. Salam Bava

      Dear Brother Sandeep,Our society is facing lot of burning issues which is to be addressed. But you are only in to ‘infection of imitation ‘of what Naveen said. Yours is a deeply disturbing criticism of Mr.Dinesh Amin, who to those of us is a loved and revered figure. Again and again I emphasis that he is a gentleman with par,liberal in attitude ,very true hindu by it’s true definition and a secular to the core.

      Reply
  8. ಗಿರೀಶ್, ಬಜ್ಪೆ

    ಸಲಾಂ ರವರಿಗೆ ನಮಸ್ಕಾರ,
    ನನಗೆ ತಿಳಿದ ಮಟ್ಟಿಗೆ ನೀವು ಹೇಳಿರುವ ಲೇಖಕಿ ಗೌರವಾನ್ವಿತರೆನಿಸಿರುವ ವ್ಯಕ್ತಿಗಳ ಬಗ್ಗೆ ಕೀಳಾಗಿ ಬರೆದಿದ್ದನ್ನು ಓದಿರುವ ನೆನಪು ನನಗಿಲ್ಲ. ಅವರು ಹೇಳಿರುವುದು ಕೆಲವು ಅಪ್ರಿಯ ಸತ್ಯಗಳಷ್ಟೆ. ಅಂದ ಹಾಗೆ ಈ ಅಪ್ರಿಯ ಸತ್ಯಗಳು ಕೇವಲ ಮುಸ್ಲಿಂ ಪಂಗಡಕ್ಕೆ ಮಾತ್ರ ಅನ್ವಯಿಸುವಂತಹ ವಿಷಯಗಳಲ್ಲ. ಇತರ ಪಂಗಡಗಳಲ್ಲೂ ಎದ್ದು ಕಾಣುವ ಹಾಗೆ ಸಾಕಷ್ಟು ಇಂತಹ ನೋವು ತುಂಬಿದ ಸತ್ಯಗಳಿವೆ. ಅದನ್ನು ಇತರರು ಬರೆದಿದ್ದಾರೆ, ಬರೆಯುತ್ತಲೂ ಇದ್ದಾರೆ. ಇನ್ನು ಸನ್ಮಾರ್ಗ, ಅನುಪಮದಂತಹ ಪತ್ರಿಕೆಗಳು ಒಂದು ಹಂತ ಮೀರಿ ಯಾವುದೇ ವಿಷಯಗಳನ್ನು, ಸತ್ಯವಾಗಿದ್ದರೂ ಸಹ, ಪ್ರಚರಿಸಬಯಸುವುದಿಲ್ಲ (ರಾಜಕೀಯ ಟೀಕೆಗಳ ಹೊರತಾಗಿ). ಬಡವರ, ಬಡತನದ ಬಗ್ಗೆ ನಮಗೆ ಅರಿವಿದೆ. ಶೋಷಣೆ ಎಲ್ಲಿ ಇಲ್ಲ ಹೇಳಿ ಸ್ವಾಮಿ…? ಒಂದು ಮತಕ್ಕೆ ಸೇರಿದವರಾಗಿ ನಮ್ಮ ನೋವು, ನಲಿವುಗಳನ್ನು ನಾವೇ ಬರೆದರೆ ಮಾತ್ರ ಅದಕ್ಕೊಂದಿಷ್ಟು ಬೆಲೆ. ಇತರರು ಬರೆದರೆ ಅದೂ ಗಲಾಟೆಗೆ ಕಾರಣವಾಗಬಹುದು. ಧನ್ಯವಾದಗಳು.

    Reply
  9. Salam Bava

    ಸಲಾಮ್ ಗಿರೀಶ್,ನಾನು ಯಾರ ವ್ಯೆಯುಕ್ತಿಕ ಬದುಕಿನ ಬಗೆ ಬರೆದಿಲ್ಲಾ,ಆದರೆ ಸಾರ್ವಜನಿಕವಾಗಿ ವ್ಯಕ್ತ ಪಡಿಸುವ ಅಬಿಪ್ರಾಯಗಳಿಗೆ ಮತ್ತು ತಮ್ಮ personal life ನಲ್ಲಿ ಅನುಸರಿಸುವ ವಿಧಾನಗಳಿಗೆ ಇರುವ ವ್ಯೆರುದ್ಯಗಳನ್ನು highlight ಮಾಡಿದೆ ಅಷ್ಟೇ!ಸತ್ಯದ ಸತ್ಯವನ್ನು ತಮ್ಮ ಮೂಗಿನ ನೇರಕ್ಕೆತೀರ್ಮಾನಿಸುದು ಯಾಕೆ? ಅದೇ ಪ್ರಕಾರ ಅನುಪಮ,ಸನ್ಮಾರ್ಗ
    ಕ್ಕೆ ಗೆ ಇರುವ೦ಥೆ ತಮ್ಮ ತತ್ವವನ್ನು ಇನ್ನೊಬ್ಬರಿಗೆ ನೋವಾಗದ೦ಥೆ ಪ್ರಚುರ ಪಡಿಸುವ ಸ್ವಾತ೦ತ್ರ್ಯವನ್ನು ಯಾಕೆ ನಿಷೇದಿಸುತ್ತೀರಿ.ಶಾ೦ತಿ ಪ್ರಕಾಶನ ಮತ್ತು ಮುಸ್ಲಿ೦
    ಲೇಖಕರಿಗೆ ಅವರ ಆಶಯಕ್ಕನುಗುಣವಾಗಿ ಬರೆಯುವ,ಪ್ರಕಟಿಸುವ ಅಬಿವ್ಯಕ್ತಿ ಸ್ವಾತ೦ತ್ರ್ಯ್
    ವನ್ನು ಮೊಟುಕು ಗೊಳಿಸುವ,ಅವರನ್ನು ಅಸ್ವ್ರಶ್ಹ್ಯ್ರ ರನ್ನಾಗಿಸುವ ಪ್ರಯತ್ನ ಯಾಕೆ?ನಮ್ಮ
    ಶೋಷಣೆ- ಸ್ಕೂಲ್,ಕಾಲೇಜಿಗೆ ಹೋದ ಮಕ್ಕಳು,ಕೆಲಸಕ್ಕೆ ಹೋದ ಗ೦ಡಸರು ಹಿ೦ದೆ ಬರುವ ತನಕಕೆ
    ದಿನ ನಿತ್ಯವೂ ನಮ್ಮ ಸ್ರಿಯರು ಅನುಭವಿಸುವ ತಲ್ಲಣವನ್ನು(ಸ೦ಘ ಪರಿವಾರದ ಗೂ೦ಡಗಳಿಗೆ
    ಗೆ ಹೆದರಿ ) ನಿಮ್ಮಿ೦ದ ಮನನ ಮಾಡಲು ಸಾದ್ಯವಿಲ್ಲ .

    Reply
  10. ಗಿರೀಶ್

    ನಮಸ್ಕಾರ ಸಲಾಂರವರೆ…. ಬರೆಯಬಲ್ಲವರು ಬರೆಯಬೇಕು… ಆದರೆ ಅದು ಎಲ್ಲರಿಂದಲೂ ಸಾಧ್ಯವಿಲ್ಲ…. ಹೊಟ್ಟೆ ಬಟ್ಟೆಗೆ ಕಷ್ಟದ ಸ್ಥಿತಿ, ಅದರ ಹೊರತಾಗಿ ನಾವೇ ನಿರ್ಮಿಸಿದ ಕಟ್ಟು ಪಾಡುಗಳು ಇವೆಲ್ಲಾ ಹಲವಾರು ಪ್ರತಿಭಾವಂತ ಮಹಿಳೆಯರನ್ನು ಬರೆಯದಂತೆ ಮಾಡಿವೆ. ಆರ್ಥಿಕವಾಗಿ ಅನುಕೂಲವಂತರಿಗೆ ಕನಿಷ್ಟ ಈ ಬಗ್ಗೆ ಬರಬಹುದಾದ ಪ್ರತಿಭಟನೆಗಳನ್ನು ಸಹಿಸಬಹುದಾದ ಶಕ್ತಿಯಾದರೂ ಇದೆ. ಬಡವರಿಗೆ ಅದೆಲ್ಲಿರುತ್ತದೆ?
    ಇನ್ನು ಸನ್ಮಾರ್ಗ, ಅನುಪಮದಂತಹ ಪತ್ರಿಕೆಗಳು ಗುಣಮಟ್ಟದಲ್ಲಿ ಉತ್ತಮವಾಗಿವೆ ನಿಜ. ಆದರೆ ಅವುಗಳ ಪ್ರಸಾರ ಎಷ್ಟೇ ಇದ್ದರೂ ಓದುಗರ ಬಳಗ ಸೀಮಿತ. (ಇದು ಈ ರೀತಿಯ ಎಲ್ಲಾ ಪತ್ರಿಕೆಗಳಿಗೂ ಅನ್ವಯ). ಹಾಗಾಗಿ ಮುಖ್ಯವಾಹಿನಿಯ ಪತ್ರಿಕೆಗಳಲ್ಲಿ ಬಂದ ಬರಹಗಳು ಎಲ್ಲಾ ವರ್ಗದ ಹೆಚ್ಚಿನ ಜನರನ್ನು ತಲಪುತ್ತವೆ.
    ಇನ್ನು ಕೊನೆಯ ಸಾಲಿನಲ್ಲಿ ನೀವು ಬರೆದಿರುವ ವಿಷಯದ ಬಗ್ಗೆ ನಾನು ಹೇಳಬಯಸುವುದು ಇಷ್ಟೆ… ಇದು ಎಲ್ಲಾ ಪ್ರದೇಶಗಳಿಗೂ ಅನ್ವಯಿಸುವ ಮಾತಲ್ಲ. ಮುಸ್ಲಿಂ ಹುಡುಗಿಯರು ಯಾವುದೇ ತೊಂದರೆಯಿಲ್ಲದೆ ಇತರರಂತೆಯೇ ಸಂತೋಷದಿಂದ ವಿದ್ಯಭ್ಯಾಸ ಮಾಡುತ್ತಿದ್ದುದನ್ನು ನಾವು ಕಂಡಿದ್ದೇವೆ. ಇತರರು ಅವರಿಗೆ ತೊಂದರೆ ಕೊಡಲು ಹೋಗುತ್ತಿರಲಿಲ್ಲ್ಲ. ಇತ್ತಿಚೆಗಷ್ಟೆ ಕೆಲವು ಕಟ್ಟುಪಾಡುಗಳಿಗೆ ಒಳಪಡುತ್ತಿದ್ದಾರೆ ಎಂದೆನಿಸುತ್ತಿದೆ, ಇದು ನಿಮಗೂ ತಿಳಿದಿದೆ. ಧನ್ಯವಾದಗಳು.

    Reply

Leave a Reply to ಗಿರೀಶ್, ಬಜ್ಪೆ Cancel reply

Your email address will not be published. Required fields are marked *