ಸಣ್ಣ ಪತ್ರಿಕೆಗಳ ಉಳಿವು ಮತ್ತು ಸರ್ಕಾರದ ಇಚ್ಚಾಶಕ್ತಿ

 -ಎನ್. ರವಿಕುಮಾರ್, ಶಿವಮೊಗ್ಗ

ಭಾರತದ ಮಾಧ್ಯಮ ಲೋಕ (Electronic & Print Media) ತನ್ನ ಸ್ವರೂಪವನ್ನು ಬದಲಿಸಿಕೊಂಡಿದೆ. ತಂತ್ರಜ್ಞಾನ ಆಧುನೀಕರಣ ದ ನಾಗಾಲೋಟಕ್ಕೆ ತನ್ನನ್ನು ತಾನು ಸಮರ್ಥವಾಗಿ ಒಡ್ಡಿಕೊಳ್ಳುವತ್ತ ದಾಪುಗಾಲು ಹಾಕತೊಡಗಿದೆ. ಭಾರತದ ಮಾಧ್ಯಮಕ್ಷೇತ್ರಕ್ಕೆ ವಿದೇಶಿ ಬಂಡವಾಳ ಹೂಡಿಕೆಯಿಂದ ಪ್ರಸ್ತಾಪಗಳು ನಡೆಯುತ್ತಿರುವ ಸಂದರ್ಭದ ಜೊತೆಗೆ ದೇಶದ ಬಂಡವಾಳ ಶಾಹಿಗಳು, ರಾಜಕೀಯ ಅಧಿಕಾರಸ್ಥರು ಮಾಧ್ಯಮ ಕ್ಷೇತ್ರದಲ್ಲಿ ಬಂಡವಾಳ ಹೂಡಿ ಲಾಭದ ವೃತ್ತಿಪರ ಕ್ಷೇತ್ರವನ್ನಾಗಿಸಿಕೊಳ್ಳತೊಡಗಿದ್ದಾರೆ. ಮಾಧ್ಯಮ ಕ್ಷೇತ್ರ ಇಂದು tv-mediaಉದ್ದಿಮೆಯಾಗಿ ಬೆಳಯತೊಡಗಿದೆ. ಒಂದು ಕಾಲದಲ್ಲಿ ಸೇವಾಕ್ಷೇತ್ರವಾಗಿ ಗುರುತಿಸಲ್ಪಡುತ್ತಿದ್ದ ಮಾಧ್ಯಮ ಕ್ಷೇತ್ರ ಇಂದು ಕೋಟ್ಯಾಂತರ ರೂ.ಗಳ ಬಂಡವಾಳ ಹೂಡಿಕೆಯ, ಲಾಭ ತೆಗೆಯುವ ಕೈಗಾರಿಕೆ ಮತ್ತು ವಾಣಿಜ್ಯ ವಲಯವಾಗಿ ಎದ್ದು ನಿಲ್ಲತೊಡಗಿದೆ.

ಭಾರತದ ಪತ್ರಿಕೋದ್ಯಮ ದೇಶದ ಸ್ವಾತಂತ್ರ್ಯದ ಮಹಾಆಶಯಗಳ ನೆಲೆಯಲ್ಲಿ ಸೈದ್ದಾಂತಿಕ ಪ್ರಜ್ಞೆಯಿಂದ ಹುಟ್ಟಿದ್ದು ಇತಿಹಾಸ. ಸ್ವತಂತ್ರ ಭಾರತದ ಪತ್ರಿಕೋದ್ಯಮ ತನ್ನದೆ ಆದ ವಿಶಿಷ್ಟ ರೂಪದಲ್ಲಿ ಬೆಳೆದು ನಿಂತಿದೆ. ದೇಶದಲ್ಲಿ ಈಗ 94067 ಪತ್ರಿಕೆಗಳು ಭಾರತೀಯ ವೃತ್ತ ಪತ್ರಿಕೆ ನೋಂದಣಿ ಇಲಾಖೆಯಲ್ಲಿ (Registrar of Newspapers for India) ನೋಂದಣಿಯಾಗಿವೆ. ಇತರೆ ಕ್ಷೇತ್ರಗಳಲ್ಲಿರುವಂತೆ ಮಾಧ್ಯಮ ಕ್ಷೇತ್ರದಲ್ಲೂ ಪೈಪೋಟಿಯ ಯುಗ ಆರಂಭಗೊಂಡಿದೆ. ಇಂತಹ ಕಾಲ ಘಟ್ಟದಲ್ಲಿ ಕನ್ನಡ ಭಾಷಾ ಪತ್ರಿಕೋದ್ಯಮಕ್ಕೆ ಗಟ್ಟಿ ನೆಲೆಯನ್ನು ಕೊಟ್ಟಿರುವ ಸಣ್ಣ (ಜಿಲ್ಲಾ ಮಟ್ಟ) ಮತ್ತು ಮಧ್ಯಮ ಪತ್ರಿಕೆಗಳ (ಪ್ರಾದೇಶಿಕ) ಬೇರುಗಳು ಸಡಿಲಗೊಳ್ಳತೊಡಗಿವೆ. ಅಧುನೀಕರಣದ ನಾಗಾಲೋಟ, ಸಣ್ಣ ಪತ್ರಿಕೆಗಳ ಅಸ್ತಿತ್ವವನ್ನೆ ಅಲುಗಾಡಿಸತೊಡಗಿದ್ದರೆ, ಇಂದಿನ ಸ್ಪರ್ಧಾತ್ಮಕ ಯುಗ ಸಣ್ಣ ಪತ್ರಿಕಗಳಿಗೆ ಬಹುದೊಡ್ಡ ಸವಾಲುಗಳನ್ನೆ ಮುಂದಿಟ್ಟಿದೆ. ಕ್ಷಿಪ್ರವಾಗಿ ಬೆಳೆಯುತ್ತಿರುವ ತಂತ್ರಜ್ಞಾನ. ಇಂದಿನ ವಾಣಿಜ್ಯೀಕರಣದ ಮನೋಧರ್ಮದ ಇಕ್ಕಟ್ಟಿನಲ್ಲಿ ಸಿಲುಕಿರುವ ಸಣ್ಣ ಪತ್ರಿಕೆಗಳು ಅವಸಾನದ ಆತಂಕವನ್ನೆ ಎದುರಿಸುವಂತಾಗಿದೆ.

ಆತ್ಮ ವಂಚನೆಯಿಲ್ಲದೆ ನಾವುಗಳು ನಮ್ಮನ್ನು ವಿಮರ್ಶೆಗೊಳಪಡಿಸಿಕೊಳ್ಳಬೇಕಿದೆ. ಟಿಆರ್‌ಪಿ ಹಿಂದೆ ಬಿದ್ದಿರುವ ವಾಹಿನಿಗಳು, ಜಾಹೀರಾತು ಕಂಪನಿಗಳ ಮರ್ಜಿಯನ್ನೆ ಅವಲಂಬಿಸಿಕೊಂಡರುವ ಪತ್ರಿಕೆಗಳು ಸಮಾಜ ಮುಖಿಯಾದ ನೈಜ ಆಶಯಗಳನ್ನು, ಸಧೃಢ ಜನಾಭಿಪ್ರಾಯವನ್ನು ಜನರ ಮನಸ್ಸಿನಲ್ಲಿ ಬಿತ್ತುವಲ್ಲಿ ವಿಮುಖರಾಗುತ್ತಿವೆ ಎಂಬುದನ್ನು ನೋವಿನಿಂದ ಅರಗಿಸಿಕೊಳ್ಳುತ್ತಲೆ ಇವುಗಳ ಮಧ್ಯೆಯೆ ಈಜುತ್ತಿರುವ ಸಣ್ಣ ಮತ್ತು tv-mediaಮಧ್ಯಮ ಪತ್ರಿಕೆಗಳ ಪಾಡು ಹೇಳತೀರದಂತಾಗಿದೆ. ಕನ್ನಡ ಭಾಷೆಯ ಬೆಳವಣಿಗೆ ಮತ್ತು ಅಸ್ತಿತ್ವಕ್ಕೆ ಕನ್ನಡ ಸಾಹಿತ್ಯದಷ್ಟೆ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಭಾಷಾ ಪತ್ರಿಕೋದ್ಯಮದ ಕೊಡುಗೆ ಇದೆ. ಕೇವಲ ಒಂದು ಸೀಮಿತ ಪ್ರದೇಶ, ಜಿಲ್ಲಾ ಅಥವಾ ಪ್ರಾದೇಶಿಕ ಮಟ್ಟಕ್ಕೆ ಸೀಮಿತವಾಗಿರುವ ಸಣ್ಣ ಪತ್ರಿಕೆಗಳು ದಿನೆ ದಿನೆ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳತೊಡಗಿವೆ. ತಂತ್ರಜ್ಞಾನದ ವೇಗಕ್ಕೆ ತಕ್ಷಣವೆ ತನ್ನನ್ನು ತಾನು ತುರ್ತಾಗಿ ಒಗ್ಗಿಸಿಕೊಳ್ಳಲಾಗದ, ಮತ್ತೊಂದೆಡೆ ಬಂಡವಾಳಶಾಹಿಗಳ ಕಂಪನಿ ಶೇರ್‌ಗಳಲ್ಲಿ ನಡೆಯುವ ರಾಜ್ಯ ಮಟ್ಟದ ಪತ್ರಿಕೆಗಳ ದಾಳಿಯಿಂದಾಗಿ ಸಣ್ಣ ಪತ್ರಿಕೆಗಳು ನೆಲೆ ಕಳೆದುಕೊಳ್ಳತ್ತಿವೆ. ಬೇಕು-ಬೇಡಗಳ ಆಯ್ಕೆಗೆ ಅವಕಾಶವಿಲ್ಲದಂತೆ ಅಮರಿಕೊಳ್ಳತ್ತಿರುವ ತಂತ್ರಜ್ಞಾನ ಬೆಳೆದಷ್ಟೆ ದುಬಾರಿಕೂಡ. ಸಣ್ಣ ಪತ್ರಿಕೆಗಳು ಮೂಲತಃ ಬಂಡವಾಳದ ಕೊರತೆಯನ್ನು ಎದುರಿಸುತ್ತಲೆ ಉಸಿರಾಡುತ್ತಿರುತ್ತವೆ. ಮಾರುಕಟ್ಟೆಯ ಸೀಮಿತ ವಿಸ್ತರಣೆಯ ಮಿತಿಯನ್ನು ಅವಲಂಬಿಸಿಕೊಂಡು ತಂತ್ರಜ್ಞಾನದ ವೇಗಕ್ಕೆ ಒಡ್ಡಿಕೊಳ್ಳುವುದು ಕಷ್ಟಕರ. ಇತ್ತ ಬದುಕಲೂ ಆಗದೆ, ಸಾಯಲೂ ಆಗದೆ ವಿಲವಿಲ ಒದ್ದಾಡುವ ಸ್ಥಿತಿ ಸಣ್ಣ ಪತ್ರಿಕೆಗಳದ್ದಾಗಿದೆ. ಆಯಾ ಕಾಲಕ್ಕೆ ಮಾಧ್ಯಮ ಕ್ಷೇತ್ರದಲ್ಲಿ ಬದಲಾಗುತ್ತಿರುವ ತಂತ್ರಜ್ಞಾನವನ್ನು ಸಣ್ಣ ಪತ್ರಿಕೆಗಳು ಮೈಗೊಡಿಸಿಕೊಂಡು ಎದ್ದು ನಿಲ್ಲಬೇಕಾದರೆ ಇಂದು ಸರ್ಕಾರದ ನೆರವು ಬೇಕೆ ಬೇಕು.

ಸಣ್ಣ ಪತ್ರಿಕೆಗಳ ಸ್ವರೂಪವಾದರೂ ಹೇಗಿದೆ ಗೊತ್ತಾ? ಬಹಳಷ್ಟು ಸಣ್ಣ ಪತ್ರಿಕೆಗಳು ಒನ್ ಮ್ಯಾನ್ ಆರ್ಮಿಯಂತೆ ಓದುಗನ ಅಕ್ಷರ ದಾಹವನ್ನು ತೀರಿಸುತ್ತಿವೆ. ಇಲ್ಲಿ ಪತ್ರಿಕೆಯ ಮಾಲೀಕ, ಪ್ರಕಾಶಕ, ಸಂಪಾದಕ ಹುದ್ದೆಯಿಂದ ಹಿಡಿದು ಪತ್ರಿಕಾಲಯದ ಕಸ ಹೊಡೆಯುವ ಕೆಲಸವನ್ನು ಒಬ್ಬನೆ ನಿರ್ವಹಿಸುವ ಸ್ಥಿತಿ ಇದ್ದೆ ಇದೆ. ಅಥವಾ ಒಂದು ಕುಟುಂಬವೆ ದಿನವಿಡಿ ದುಡಿದು ಧಣಿಯುವ ಸನ್ನಿವೇಶಗಳು ಕಾಣಸಿಗುತ್ತವೆ. ಸಣ್ನ ಪತ್ರಿಕೆಗಳು ದೊಡ್ಡ ದೊಡ್ಡ ಪತ್ರಿಕೆಗಳಿಗೆ, ಚಾನಲ್‌ಗಳಿಗೆ ಗುಣ ಮಟ್ಟದ ವರದಿಗಾರರನ್ನು ಅಣಿಗೊಳಿಸಿಕೊಡುವ ಕಾರ್ಖಾನೆಗಳಂತಾಗಿವೆ. ಪತ್ರಿಕೋದ್ಯಮ ಪದವಿ ಮುಗಿಸಿಕೊಂಡು ಪ್ರಥಮವಾಗಿ ಸಣ್ಣ ಪತ್ರಿಕೆಗಳನ್ನು ಎಡತಾಕುವವರನ್ನು ತಿದ್ದಿ ತೀಡಿ ನಿಪುಣಗೊಳಿಸುತ್ತಿದ್ದಂತೆ ಭರ್ಜರಿ ಸಂಬಳ, ಸವಲತ್ತುಗಳ ರಾಜ್ಯ ಮಟ್ಟದ ಪತ್ರಿಕೆ, ವಾಹಿನಿಗಳಿಗೆ ವಲಸೆ ಹೋಗುತ್ತಿದ್ದಾರೆ. ಸಣ್ಣ ಪತ್ರಿಕೆಗಳಲ್ಲಿನ ಅಲ್ಪ ಭವಿಷ್ಯದೊಂದಿಗೆ ಯಾರು ತಾನೆ ಕೆಲಸ ಮಾಡಲು ಇಷ್ಟ ಪಡುತ್ತಾರೆ? ಅದೆಲ್ಲಕ್ಕಿಂತ ಆರ್ಥಿಕ ಸಂಪನ್ಮೂಲದ ಕೊರತೆ ಸಣ್ಣ ಪತ್ರಿಕೆಗಳನ್ನು ಹೈರಾಣಗೊಳಿಸಿದೆ.

ರಾಜ್ಯ ಮಟ್ಟದ ಪತ್ರಿಕೆಗಳಿಗಿರುವಂತೆ ಸಣ್ಣ ಪತ್ರಿಕೆಗಳಿಗೆ ಜಾಹೀರಾತಿನ ದೊಡ್ಡ ಹರಿವು ಇರುವುದಿಲ್ಲ. ಸ್ಥಳೀಯ ಸಂಸ್ಥೆಗಳು, kannada-news-channelsಉದ್ದಿಮೆದಾರರನ್ನು (ಜಾಹೀರಾತಿಗಾಗಿ) ಅವಲಂಬಿಸಿದರೂ ಪ್ರಾದೇಶಿಕ ಮಿತಿಯ ಕಾರಣ ನಿರೀಕ್ಷಿತ ಆದಾಯ ಬರುವುದು ಸಾಧ್ಯವಿಲ್ಲ. ಅಲ್ಲದೆ ರಾಜ್ಯ ಮಟ್ಟದ ಪತ್ರಿಕೆಗಳ ಜಿಲ್ಲಾ ಅವೃತ್ತಿಗಳು ಜಾಹೀರಾತುದಾರರನ್ನು ಆಕರ್ಷಿಸುತ್ತಾ ತಮ್ಮಡೆಗೆ ಸೆಳೆದುಕೊಳ್ಳತೊಡಗಿವೆ. ಇನ್ನೂ ಉಳಿದಿರುವುದು ಸಣ್ಣ ಪತ್ರಿಕೆಗಳ ಪಾಲಿಗೆ ಚಂದಾದಾರರು ಮಾತ್ರ. ಆದರೆ ಇಂದಿನ ತಂತ್ರಜ್ಞಾನ- ಆಧುನೀಕರಣದ ಬಿರುಗಾಳಿ ನಮ್ಮ ಓದುಗ ಸಮೂಹವನ್ನೆ ಸಮ್ಮೋಹನಗೊಳಿಸಿ ಬಿಟ್ಟಿದೆ. ಟಿ.ವಿ, ಮೊಬೈಲ್ , ಐಪ್ಯಾಡ್, ಪೋರ್ಟಲ್‌ಗಳಲ್ಲಿ ಇಂದಿನ ಪೀಳಿಗೆ ಮೈಮರೆತು ಹೋಗಿದೆ. ಅತ್ಯಂತ ಅಪಾಯಕಾರಿ ಎಂದರೆ ಓದುಗ ಸಂಸ್ಕೃತಿಯನ್ನೆ ಇಂದಿನ ತಂತ್ರಜ್ಞಾನ ನಾಶ ಮಾಡತೊಡಗಿದೆ. “ನೋಡುವ” ಮತ್ತು “ಕೇಳುವ” ಸಂವಹನವನ್ನಷ್ಟೆ ಮೈಗೂಡಿಸಿಕೊಳ್ಳುತ್ತಿರುವ ಇಂದಿನ ಯುವ ಸಮುದಾಯ ಓದುವ ಮತ್ತು ಬರೆಯು ಕ್ರೀಯಶೀಲತೆಯನ್ನು ಮರೆಯ‍ತೊಡಗಿದೆ. ದಿನಪತ್ರಿಕೆಗಳಿಗೆ ದಿನಬೆಳಗ್ಗೆ ಕಾಯುವ ಕಾಲ ಮುಗಿದು ಹೋಗಿದೆ. ಓದುಗ ವಲಯ ಜಾಗತೀಕರಣದ ಆಧುನಿಕ ಸಂವಹನ ಸಾಧನಗಳನ್ನು ಅವಲಂಬಿಸಿ ಕೊಂಡು ತನ್ನ ಸ್ವರೂಪವನ್ನು ಬದಲಿಸಿಕೊಂಡು ಸಣ್ಣ ಪತ್ರಿಕೆಗಳಿಂದ ದೂರವೆ ಉಳಿದಿದೆ. ಇಂದು ಸಣ್ಣ ಪತ್ರಿಕೆಗಳು ಉಚಿತವಾಗಿ ಹಂಚಿ ತನ್ನ ಜೀವಂತಿಕೆಯನ್ನು ಉಳಿಸಿಕೊಳ್ಳುವ ಅನಿವಾರ್‍ಯತೆಗೆ ಬಿದ್ದಿವೆ. ಹೀಗಿರುವಾಗ ಸಣ್ಣ ಪತ್ರಿಕೆಗಳ ಉಳಿವಾದರೂ ಹೇಗೆ?

ಪ್ರಜಾಪ್ರಭುತ್ವದ ನಾಲ್ಕನೆ ಅಂಗ ಮಾಧ್ಯಮ. ಆರೋಗ್ಯ ಪೂರ್ಣ ಪ್ರಜಾಪ್ರಭುತ್ವಕ್ಕೆ ಇದಲ್ಲದೆ ಮತ್ತೊಂದು ಕಾವಲು ನಾಯಿ ಇರಲು ಸಾಧ್ಯವಿಲ್ಲ. ಆದರೆ ಇದರ ಹಿತ ಕಾಪಾಡ ಬೇಕಾದ ಸರ್ಕಾರ (ಶಾಸಕಾಂಗ) ಅನುಸರಿಸುತ್ತಿರುವ ನೀತಿ ಸಣ್ಣ ಪತ್ರಿಕೆಗಳ ಪಾಲಿಗೆ ಮಾರಕವಾಗುತ್ತಿರುವುದು ದುರದೃಷ್ಟಕರ. ಕರ್ನಾಟಕದ ರಾಜ್ಯ ಸರ್ಕಾರ ಕಳೆದ ವರ್ಷ “ಜಾಹೀರಾತು ನೀತಿ-2013” ವೊಂದನ್ನು ಜಾರಿಗೊಳಿಸಲು ಮುಂದಾಯಿತು. ಹೌದು ಯಾವುದೇ ಸರ್ಕಾರಕ್ಕೆ ಯಾವುದೇ ವಲಯದ ಬಗ್ಗೆ ಒಂದು ನಿರ್ಧಿಷ್ಟ ನೀತಿ-ನಿರೂಪಣೆಗಳು ಇರಬೇಕು. ಆದರೆ ನೀತಿ -ನಿರೂಪಣೆಗಳು ಸಾಮಾಜಿಕ ಜವಾಬ್ದಾರಿಗಳನ್ನು ಫ್ರತಿಫಲಾಪೇಕ್ಷೆ ಇಲ್ಲದೆ ನಿರ್ವಹಿಸುತ್ತಿರುವ ವಲಯದ ಹಿತವನ್ನು ಮತ್ತು ಅವುಗಳ ಬಲವರ್ಧನೆಯ ಕಲ್ಯಾಣವನ್ನು ಒಳಗೊಳ್ಳುವಿಕೆಯಾಗಿರಬೇಕು. ಜಾಹೀರಾತು ನೀತಿ-2013 ಬಹುತೇಕ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಕತ್ತು ಹಿಸುಕುವ ಹಿಡನ್ ಅಜೆಂಡಾವೆ ಆಗಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. (ಜಾಹೀರಾತು ನೀತಿ ವಿರೋಧಿಸಿ ಕರ್ನಾಟಕ ರಾಜ್ಯ ಕಾರ್‍ಯನಿರತ ಪತ್ರಕರ್ತರ ಸಂಘ ಸೇರಿದಂತೆ ವಿವಿಧ ಪತ್ರಿಕಾ ಸಂಘಟನೆಗಳ ಪ್ರತಿಭಟನೆಯ ಫಲವಾಗಿ ಸರ್ಕಾರ ಪರಿಷ್ಕರಿಸಲು ಮುಂದಾಗಿದೆ.) ಪತ್ರಿಕೆಗಳಿಗೆ ಜಾಹೀರಾತು ಮತ್ತಿತರ ಸವಲತ್ತುಗಳನ್ನು ನೀಡಲು ಸರ್ಕಾರ ಜಾರಿಗೆ ತಂದ ಜಾಹಿರಾತು ನೀತಿ ವಿಶೇಷವಾಗಿ ಸಣ್ಣ ಅದರಲ್ಲೂ ಭಾಷಾ ಪತ್ರಿಕೋದ್ಯಮಕ್ಕೆ ದುಬಾರಿಯೆ ಆಗಿತ್ತು. ಯಾವುದೇ ಸರ್ಕಾರ ಕೇವಲ ಆರ್ಥಿಕ ಹೊರೆ ತಗ್ಗಿಸುವ ಕಾರಣ ಮುಂದಿಟ್ಟುಕೊಂಡು ಪತ್ರಿಕೆಗಳಿಗೆ ನೀತಿಯ ಹೆಸರಿನಲ್ಲಿ ಕಡಿವಾಣ ಹಾಕಲು ಹೊರಟ್ಟಿದ್ದು ಮಾತ್ರ ಕ್ಷುಲ್ಲಕ ವೆನಿಸಿತ್ತು.

ಸರ್ಕಾರದ ಜನಪರ ಕೆಲಸಗಳನ್ನು, ಜನರಿಗೆ ಮತ್ತು ಸರ್ಕಾರದ ಬಗ್ಗೆ ಜನರಿಗಿರಬಹುದಾದ ಜನಾಭಿಪ್ರಾಯಗಳನ್ನು ಸರ್ಕಾರಕ್ಕೆ ತಲುಪಿಸುವ ಕೆಲಸ ಮಾಡುವ ಪತ್ರಿಕೆಗಳ ಹಿತ ಕಾಯುವುದು ಸರ್ಕಾರದ ಕರ್ತವ್ಯ ಕೂಡ, ಸರ್ಕಾರದ ಸಾಧನೆಗಳನ್ನು ಜನರಿಗೆ ಜಾಹೀರಾತು ಮೂಲಕ ತಲುಪಿಸುವಾಗ ಪತ್ರಿಕೆಗಳಿಗೆ ಆರ್ಥಿಕ ಸಹಾಯ ದಕ್ಕುವುದಲ್ಲದೆ ಅಧಿಕಾರದಲ್ಲಿರುವ ಪಕ್ಷಗಳಿಗೆ ರಾಜಕೀಯ ಲಾಭವೂ ಇರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಮುಂದಿನ ದಿನಗಳು ಉಳ್ಳವರ ಪಾಲಿಗೆ ಮಾತ್ರ ಇರುತ್ತವೆ. ಯಾವೂಬ್ಬ ಬಂಡವಾಳಗಾರ ಮಾತ್ರ ಜಿಲ್ಲಾ ಮಟ್ಟದ ಯಾ ಪ್ರಾದೇಶಿಕ ಮಟ್ಟದ ಪತ್ರಿಕೆಗಳ ಸ್ಥಾಪನೆಗೆ ಮುಂದಾಗುತ್ತಾನೆ. ಅದೂ ಉದ್ಯಮವಾಗಿ ಲಾಭತರುವ ಷರತ್ತಿನ ಮೇಲೆಯೆ. ಇದಲ್ಲದೆ ಸಣ್ಣ ಪತ್ರಿಕೆಗಳನ್ನು ನಡೆಸಲು ಯಾರೂ ಮುಂದೆ ಬರುವುದಿಲ್ಲ ,

ನಿಜ, ಎಲ್ಲಾ ಕ್ಷೇತ್ರಗಳಲ್ಲಿರುವಂತೆ ಪತ್ರಿಕಾ ಕ್ಷೇತ್ರದಲ್ಲೂ “ಕಪ್ಪು ಕುರಿಗಳು” ಇದ್ದೆ ಇವೆ. ಅವುಗಳ ನಿಯಂತ್ರಣಕ್ಕೆ ಮೇಟಿ ಬೇಕೆ ಬೇಕು. ಇಂದು ಪತ್ರಿಕೋದ್ಯಮದ ಗಂಧ-ಗಾಳಿ ಗೊತ್ತಿಲ್ಲದವರೆಲ್ಲಾ ಪತ್ರಿಕೆ ಶುರುವಿಟ್ಟುಕೊಂಡು ಏನೆಲ್ಲಾ ಮಾಡುತ್ತಿರುವುದನ್ನು ಮರೆ ಮಾಚಿದರೆ ಅದು ಆತ್ಮ ವಂಚನೆಯಾದೀತು. ಪೀತ ಪತ್ರಿಕ್ಯೋದ್ಯಮ ನೈಜ ಪತ್ರಿಕೋದ್ಯಮವನ್ನೂ ಅನುಮಾನಿಸುವಂತಹ ಸನ್ನಿವೇಶವನ್ನು ತಂದಿಟ್ಟಿದೆ. ಭ್ರಷ್ಟ ರಾಜಕಾರಣಿಗಳಂತೆ, ಅಧಿಕಾರಶಾಹಿಗಳಂತೆ ಭ್ರಷ್ಟ ಪತ್ರಕರ್ತರು ಇಲ್ಲಿದ್ದಾರೆ. ಇಲ್ಲಿ ಕಾನೂನಿಗೆ ಯಾರೂ ಅತೀತರಲ್ಲ. ಅಂತಹವರನ್ನು ಹತ್ತಿಕ್ಕದಿದ್ದರೆ ಪತ್ರಿಕಾ ಕ್ಷೇತ್ರ ಕೂಡ ಇನ್ನಷ್ಟು ಕಲುಷಿತ ಗೊಳ್ಳುತ್ತವೆ. ಪತ್ರಿಕಾ ಕ್ಷೇತ್ರದ ಘನತೆ-ಗೌರವ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಬದ್ದತೆ ತೋರಿಸುವುದನ್ನು ಸ್ವಾಗತಿಸುತ್ತೇವೆ. ಆದರೆ ಜಾಹೀರಾತು ನೀತಿ ಹೆಸರಿನಲ್ಲಿ ಸಣ್ಣ ಪತ್ರಿಕೆಗಳನ್ನು ಹತ್ತಿಕ್ಕುವ ಧೋರಣೆ ಸಲ್ಲದು. ಸಣ್ಣ ಮೀನುಗಳನ್ನು ಕೊಂದು ದೊಡ್ಡ ಮೀನುಗಳಿಗೆ ಉಣ ಬಡಿಸುವುದರ ಹಿಂದೆ ಹಿತಾಸಕ್ತಿ ಇಲ್ಲವೆನ್ನಲಾಗದು.

ಇನ್ನು ಪ್ರಸರಣದ ವಿಷಯಕ್ಕೆ ಬಂದಾಗ ಒಂದು ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾಗಿ ಪ್ರಕಟಗೊಳ್ಳುವ ಸಣ್ಣ ಪತ್ರಿಕೆಗಳು ಪ್ರಸಾರ ಸಂಖ್ಯೆಯೊಂದೆ ಅದಕ್ಕೆ ಮಾನದಂಡವಾಗಬಾರದು. ಭೌದ್ದಿಕ ವಿಸ್ತರಣೆ ಕೇವಲ ಪತ್ರಿಕಗಳ ಭೌತಿಕ ವಿತರಣೆಯಿಂದ ಅಳೆಯಲು ಸಾಧ್ಯವಿಲ್ಲ. ಕೇವಲ ಐದು ಅಂಕೆಗಳನ್ನು ದಾಟದ ಇಂಗ್ಲೀಸ್ ಭಾಷೆಯ ನಿಯತಕಾಲಿಕೆಗಳು ಇಂದು ಬಹುದೊಡ್ಡ ಪತ್ರಿಕೆಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದನ್ನು ನೋಡುತ್ತಿದ್ದೇವೆ. ಎಬಿಸಿ ವರದಿಗಳನ್ನೆ ಪತ್ರಿಕೆಯ ದೊಡ್ಡ ಸಾಧನೆಯೆಂದು ಬಿಂಬಿಸಿಕೊಂಡು ಸ್ವಕುಚಮರ್ಧನ ಮಾಡಿಕೊಳ್ಳುತ್ತಿರುವ ದೊಡ್ಡ ಪತ್ರಿಕೆಗಳ ಲಾಭಕೋರತನಗಳು ಕಣ್ಣ ಮುಂದೆ ಇದೆ.

ಕರ್ನಾಟಕದ ಒಟ್ಟಾರೆ ಸಾಕ್ಷರತೆ ಪ್ರಮಾಣ ಶೇ.75.36 ರಷ್ಟಿದೆ. ಇನ್ನೂ ಜಿಲ್ಲೆಗಳಲ್ಲಿನ ಸಾಕ್ಷರತೆ ಸರಾಸರಿ ಶೇ.60. ಹೀಗಿರುವಾಗ ಪತ್ರಿಕೆ ಕೊಂಡು ಓದುವ ವಲಯದ ಪ್ರಮಾಣ ಅತ್ಯಂತ ತಳದಲ್ಲಿದೆ. ಪಕ್ಕದ ತಮಿಳುನಾಡು ಶೇ.80.09, ಕೇರಳ ಶೇ.94 ರಷ್ಟು ಸಾಕ್ಷರತೆ ಹೊಂದಿದ್ದು ಓದುಗ ಸಂಸ್ಕೃತಿ ಶ್ರೀಮಂತವಾಗಿದೆ. ಈ ಕಾರಣದಿಂದಲೆ ಆ ರಾಜ್ಯಗಳ ಸಣ್ಣ ಪತ್ರಿಕೆಗಳು ಸರ್ಕಾರಕ್ಕಿಂತ ಓದುಗರನ್ನು (ಚಂದಾದಾರರನ್ನು ) ಅವಲಂಬಿಸಿಯೆ ಬೆಳೆಯತೊಡಗಿವೆ. ಆದರೂ ಆಯಾ ರಾಜ್ಯ ಸರ್ಕಾರಗಳು ಸಣ್ಣ ಅಂದರೆ ಭಾಷಾ ಪತ್ರಿಕೋದ್ಯಮ ವನ್ನು ಅಸ್ಥೆಯಿಂದ ಸಾಕತೊಡಗಿವೆ. ನೆರೆ ರಾಜ್ಯಗಳಲ್ಲಿ ಸರ್ಕಾರಗಳು ಸಣ್ಣ ಪತ್ರಿಕೆಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಸಣ್ಣ ಪತ್ರಿಕೆಗಳ ಪಾಲಿಗೆ ಏನೇನೂ ಇಲ್ಲ ಎನ್ನಬಹುದು. ಹಿರಿಯ ಪತ್ರಕರ್ತ ಪಿ.ರಾಮಯ್ಯ ನೇತೃತ್ವದ ಸಮಿತಿ (2002) ಸಣ್ಣ ಪತ್ರಿಕೆಗಳ ಹಿತಕ್ಕಾಗಿ ಸರ್ಕಾರ ನೀಡಬಹುದಾದ ನೆರವುಗಳನ್ನು ಶಿಫಾರಸ್ಸು ಮಾಡಿದ್ದರೂ ವರದಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ. ಸಣ್ಣ ಪತ್ರಿಕೆಗಳು ತಮ್ಮ ವ್ಯಾಪ್ತಿಯಲ್ಲಿಯೆ ಜನರ ಸಂಕಷ್ಟಗಳಿಗೆ ಧ್ವನಿಯಾಗುವ , ಸ್ಥಳಿಯ ಜನಪ್ರತಿನಿಧಿಗಳನ್ನು ಸದಾ ಜನಪರಗೊಳಿಸುವ ಹಾಗೂ ಸರ್ಕಾರದ ಯೋಜನೆಗಳನ್ನು ಜನರಿಗೆ ವಿವರಿಸುವ ಕೆಲಸ ವನ್ನು ನಿಷ್ಠೆಯಿಂದಲೆ ಮಾಡುತ್ತಿವೆ. ಸರ್ಕಾರ, ಆಳುವ ಜನ ಸಣ್ಣ ಪತ್ರಿಕೆಗಳ ಬಗ್ಗೆ ತಮಗಿರುವ ತಾತ್ಸಾರ ಮನೋಭಾವದಿಂದ ಹೊರಬರಬೇಕಿದೆ. ರಾಜ್ಯದ ಹಿರಿಯ ಅನುಭವಿ ಪತ್ರಕರ್ತರು, ವಿಶೇಷವಾಗಿ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಅನುಭವಿ ಸಂಪಾದಕ/ಮಾಲೀಕರನ್ನೊಳಗೊಂಡ ಸಮಿತಿಯನ್ನು ನೇಮಿಸಿ ವಾಸ್ತವಿಕ ನೆಲಗಟ್ಟಿನಲ್ಲಿ ಪರಿಪೂರ್ಣ ವರದಿಯೊಂದನ್ನು ಪಡೆದು ಸಣ್ಣ ಪತ್ರಿಕೆಗಳ ಉಳಿವನ್ನೂಳಗೊಂಡಂತೆ ಮಾಧ್ಯಮಕ್ಷೇತ್ರದ ಸಮಗ್ರ ಹಿತಕ್ಕಾಗಿ ಮಾಧ್ಯಮ ನೀತಿಯೊಂದನ್ನು ರೂಪಿಸುವ ತುರ್ತು ಇದೆ. ಈ ದಿಕ್ಕಿನಲ್ಲಿ ಸರ್ಕಾರ ಇಚ್ಚಾಶಕ್ತಿಯನ್ನು ತೋರಬೇಕಿದೆ.

ಭಾಷಾ ಪತ್ರಿಕೋದ್ಯಮದ ದೊಡ್ಡ ಜೀವ ಜಲದಂತಿರುವ ಸಣ್ಣ ಪತ್ರಿಕೆಗಳ ಉಳಿವಿಗೆ ಸರ್ಕಾರ ಉದಾತ್ತ ಧೋರಣೆಯಿಂದಲೆ ಸ್ಪಂದಿಸಬೇಕಾಗಿದೆ.

Leave a Reply

Your email address will not be published. Required fields are marked *