ಯಾರ ಜೊತೆ ಸಿದ್ದಾಂತದ ಮಡಿವಂತಿಕೆ ಬಿಡಬೇಕು? : ನವೀನ್ ಸೂರಿಂಜೆ

ಜಮಾತೆ ಇಸ್ಲಾಮೀ ಹಿಂದ್ ಸ್ಥಾಪಿತ ಮುಸ್ಲಿಂ ಲೇಖಕರ ಸಂಘದ ಕಾರ್ಯಕ್ರಮದಲ್ಲಿ ನಮ್ಮ ನೆಚ್ಚಿನ ಪತ್ರಕರ್ತ, ಚಿಂತಕ ದಿನೇಶ್ ಅಮೀನ್ ಮಟ್ಟುರವರು ಭಾಗವಹಿಸುವ ಸಂದರ್ಭದಲ್ಲಿ ಪತ್ರವೊಂದನ್ನು ಬರೆದಿದ್ದೆ. ಪತ್ರದಲ್ಲಿ ಜಮಾತೆ ಇಸ್ಲಾಮೀ ಹಿಂದ್, ಶಾಂತಿ ಪ್ರಕಾಶನ, ಮುಸ್ಲಿಂ ಲೇಖಕರ ಸಂಘದ ಉದ್ದೇಶಗಳು ಮತ್ತು ಹಿಡನ್ ಅಜೆಂಡಾಗಳ ಬಗ್ಗೆ ದಿನೇಶ್ ಅಮೀನ್ ಮಟ್ಟುರವರಿಗೆ ವಿವರಿಸಿದ್ದೆ. naveen-shettyಅವರು ಈಮೇಲ್ ಪತ್ರವನ್ನು ನೋಡದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪತ್ರ ಓದಿದ್ದರೂ ಕೂಡಾ ಭಾಗವಹಿಸುತ್ತಿದ್ದೆ ಎಂದು ಅವರು ಹೇಳಿದ್ದಾರೆ. ಅವರು ಭಾಗವಹಿಸಬಾರದು ಎಂದು ಅವರ ಅಭಿಮಾನಿಯಾದ ನಾನೆಲ್ಲೂ ಒತ್ತಾಯಿಸಿಲ್ಲ. ಕೆಲವೊಂದು ವಿಚಾರಗಳ ಬಗ್ಗೆ ಹಂಚಿಕೊಂಡಿದ್ದೇನೆ ಎಂದಷ್ಟೇ ಹೇಳಿದ್ದೇನೆ. ಇರಲಿ… ದಿನೇಶ್ ಅಮೀನ್ ಮಟ್ಟುರವರು ಕಾರ್ಯಕ್ರಮದಲ್ಲಿ ಭಾಗವಹಿಸಿ ನನ್ನ ಪತ್ರಕ್ಕೆ “ಸಿದ್ಧಾಂತದ ಮಡಿವಂತಿಕೆಗಿಂತ ಸಾರ್ವಜನಿಕ ಹಿತ ನನಗೆ ಮುಖ್ಯ” ಎಂದು ಉತ್ತರವನ್ನು ಬರೆದಿದ್ದಾರೆ. ಕೋಮುವಾದ ಮತ್ತು ಮೂಲಭೂತವಾದ ಅತಿರೇಕಕ್ಕೇರಿರುವ ಇಂದಿನ ಸಂಧರ್ಭದಲ್ಲಿ ದಿನೇಶ್ ಅಮೀನ್ ಮಟ್ಟರಂತಹ ಹಿರಿಯ ಪತ್ರಕರ್ತ, ಚಿಂತಕರ ಪತ್ರ ಚರ್ಚೆಯಾಗುವುದು ಅತೀ ಅಗತ್ಯವಾಗಿದೆ.

ಯಾರ ಜೊತೆ ಸಿದ್ದಾಂತದ ಮಡಿವಂತಿಕೆ ಬಿಡಬೇಕು? ಯಾಕೆ ?

ದಿನೇಶ್ ಅಮೀನ್ ಮಟ್ಟುರವರು ಹೇಳಿದಂತೆ ಸಾರ್ವಜನಿಕ ಹಿತದ ಸಂಧರ್ಭದಲ್ಲಿ ಸಿದ್ದಾಂತದ ಮಡಿವಂತಿಕೆ ಬಿಡಬೇಕು. ಜಾಗತೀಕರಣ, ಕೋಮುವಾದ, ಬಂಡವಾಳವಾದದ ಈ ಸಂಧರ್ಭದಲ್ಲಿ ಸಾಮಾಜಿಕ ಹಿತಕ್ಕಾಗಿ ಸಿದ್ದಾಂತದ ಮಡಿವಂತಿಕೆ ಬಿಟ್ಟು ವಿಶಾಲವಾಗಿ ನೋಡಬೇಕು ಎಂಬುದು ಅಕ್ಷರಶಃ ಸತ್ಯ. ಆದರೆ ಯಾರ ಜೊತೆ ಮಡಿವಂತಿಕೆಯನ್ನು ಬಿಟ್ಟು ವಿಶಾಲ ದೃಷ್ಠಿಕೋನದಲ್ಲಿ ಯೋಚಿಸಿ ಬೆರೆಯಬೇಕು ಎಂಬುದು ಅತೀ ಮುಖ್ಯ.

ನಾವೆಲ್ಲಾ ಪ್ರಗತಿಪರರ ಹಲವಾರು ಗುಂಪುಗಳ ಮಧ್ಯೆ ಒಂದೇ ಉದ್ದೇಶದ ಈಡೇರಿಕೆಗಾಗಿ ಸಿದ್ದಾಂತದ ಮಡಿವಂತಿಕೆ ಬಿಟ್ಟು ಒಟ್ಟು ಸೇರುವವರು ಎಂಬುದು ನನ್ನ ಭಾವನೆ. ನಮ್ಮಲ್ಲಿ ಪ್ರಗತಿಪರರು, ಜನಪರರು ಎನ್ನುವ ಹಲವಾರು ಗುಂಪುಗಳಿದ್ದರೂ ಕೂಡಾ ಕೋಮುವಾದದ ವಿರುದ್ಧ, ಮೂಲಭೂತವಾದದ ವಿರುದ್ಧ ನಾವೆಲ್ಲಾ ಲೋಹಿಯಾವಾದ, ಮಾಕ್ಸ್ ವಾದ, ಅಂಬೇಡ್ಕರ್ ವಾದ, ಗಾಂಧೀವಾದ, ಸಮಾಜವಾದ, ಜಾತ್ಯಾತೀತವಾದ, ವಿಶಾಲ ಜಾತ್ಯಾತೀತವಾದ ಗಳ ಜೊತೆ ಸಿದ್ದಾಂತದ ಮಡಿವಂತಿಕೆ ಬಿಟ್ಟು ಒಟ್ಟು ಸೇರಿದ್ದೇವೆ. ಕೋಮುವಾದದ ವಿರುದ್ಧ ಕೋಮುವಾದಿಗಳ dinesh-amin-mattuಜೊತೆ, ಮೂಲಭೂತವಾದಿಗಳ ವಿರುದ್ಧ ಮೂಲಭೂತವಾದದ ಜೊತೆ ಸಿದ್ದಾಂತದ ಮಡಿವಂತಿಕೆ ಬಿಟ್ಟು ಸೇರಿಕೊಳ್ಳುವುದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ನಾವು ಸಿದ್ದಾಂತದ ಮಡಿವಂತಿಕೆಯನ್ನು ಬಿಟ್ಟು ಪಕ್ಕಾ ಇಸ್ಲಾಮಿಸ್ಟ್ ಗಳು, ಮೂಲಭೂತವಾದಿಗಳ ಜೊತೆ ಬೆರೆಯುವುದು ಹೇಗೆ ಸಾಧ್ಯ ? ಮತ್ತು ಅದರಿಂದ ಸಾಧಿಸುವುದಾದರೂ ಏನನ್ನು ?

ಮುಸ್ಲಿಂ ಲೇಖಕರು ಮತ್ತು ಪ್ರಕಾಶನ ಸಂಸ್ಥೆಗಳು

”ನಮ್ಮ ಪ್ರಕಾಶನ ಸಂಸ್ಥೆಗಳು ಮುಸ್ಲಿಮ್ ಲೇಖಕರ ಎಷ್ಟು ಪುಸ್ತಕಗಳನ್ನು ಪ್ರಕಟಿಸಿವೆ? ಮಾಧ್ಯಮ ಕ್ಷೇತ್ರದಲ್ಲಿ ಎಷ್ಟು ಮುಸ್ಲಿಮ್ ಪತ್ರಕರ್ತರಿಗೆ ವೃತ್ತಿಯ ಅವಕಾಶವನ್ನು ಕಲ್ಪಿಸಿವೆ? ಎಷ್ಟು ಮುಸ್ಲಿಮ್ ಲೇಖಕರ ಕತೆ-ಕವನ, ಕಾದಂಬರಿ, ಲೇಖನಗಳನ್ನು ಪ್ರಕಟಿಸುತ್ತಿವೆ? ಹಿಂದೂ ಮೂಲಭೂತವಾದದ ನಂಜು ಕಾರುವ ಪುಸ್ತಕಗಳನ್ನು ಸಾಲುಸಾಲು ಜೋಡಿಸಿಡುವ ಪುಸ್ತಕದಂಗಡಿಗಳಲ್ಲಿ ಮುಸ್ಲಿಮ್ ಲೇಖಕರ ಎಷ್ಟು ಪುಸ್ತಕಗಳನ್ನು ಮಾರಾಟಕ್ಕಿಟ್ಟಿವೆ? ಎಂಬ ಪ್ರಶ್ನೆಗಳಿಗೂ ಉತ್ತರ ನೀಡಬೇಕಾಗುತ್ತದೆ” ಎಂದು ದಿನೇಶ್ ಅಮೀನ್ ಮಟ್ಟು ಕೇಳಿದ್ದಾರೆ.
ಇದು ಪಕ್ಕಾ ಜಮಾತೆಯ ಕಾರ್ಯಕರ್ತನ ಪ್ರಶ್ನೆ. ಇದೇ ಪ್ರಶ್ನೆಯನ್ನು ಗೆಳೆಯ ಜಮಾತೆಯ ಕಾರ್ಯಕರ್ತನೊಬ್ಬ ನನಗೂ ಕೇಳಿದ್ದ.

ಬೊಳುವಾರು ಮಹಮ್ಮದ್ ಕುಂಞ, ಫಕೀರ್ ಮಹಮ್ಮದ್ ಕಟ್ಪಾಡಿ, ಸಾರಾ ಅಬೂಬಕ್ಕರ್, ಬಿ ಎಂ ರಶೀದ್, ಬಿ ಎಂ ಬಶೀರ್, ಅಬ್ದುಲ್ ರಶೀದ್ ಪುಸ್ತಕಗಳನ್ನು ಯಾವುದೇ ಮೂಲಭೂತವಾದಿ ಪ್ರಕಾಶಕ ಸಂಸ್ಥೆಗಳು ಪ್ರಕಟಿಸಿದ್ದಲ್ಲ. ಇವರೆಲ್ಲಾ ಪ್ರಗತಿಪರ ಸಾಹಿತಿಗಳು ಎಂದು ಲೆಕ್ಕ ಹಾಕಿದರೂ ಮಹಮ್ಮದ್ ಕುಳಾಯಿಯವರ ಬರಹಗಳು ಉದಯವಾಣಿಯಂತಹ ಪತ್ರಿಕೆಯೂ ಪ್ರಕಟ ಮಾಡುತ್ತದೆ ಮತ್ತು ಮಹಮ್ಮದ್ ಕುಳಾಯಿಯವರೆಗೆ ದೊಡ್ಡದಾದೊಂದು ಓದುಗರ ಸಮೂಹವನ್ನು ಸೃಷ್ಠಿ ಮಾಡುತ್ತದೆ. ಇದಲ್ಲದೆ rahamath-tarikereರಹಮತ್ ತರೀಕೆರೆ, ನಯೀಮ್ ಸುರಕೋಡು, ಆರೀಫ್ ರಾಜಾರಂತಹ ಬರಹಗಾರರ ಲೇಖನಕ್ಕಾಗಿ ರಾಜ್ಯದ ಪ್ರಮುಖ ದಿನ ಪತ್ರಿಕೆಗಳು ಜಾತಕ ಪಕ್ಷಿಯಂತೆ ಕಾದು ಕುಳಿತು ಸ್ಪರ್ಧೆಯ ಭರಾಟೆಯಲ್ಲಿ ಪ್ರಕಟ ಮಾಡುತ್ತದೆ. ಪ್ರಕಾಶನ ಸಂಸ್ಥೆಗಳಂತೂ ಇವರೆಲ್ಲರ ಪುಸ್ತಕ ಪ್ರಕಟನೆಗಾಗಿ ಪರಸ್ಪರ ಸ್ಪರ್ಧೆಯನ್ನೇ ಮಾಡುತ್ತಾರೆ..

ಹಿಂದೂ ದೇವರ ಪುಸ್ತಕಗಳನ್ನು ಪ್ರಕಟ ಮಾಡುವ ಪ್ರಕಾಶನ ಸಂಸ್ಥೆಗಳು ಇದ್ದಾವೆ ಎಂಬ ಕಾರಣಕ್ಕಾಗಿ ಶಾಂತಿ ಪ್ರಕಾಶನ ಇದೆ ಎಂದರೆ ಅಭ್ಯಂತರ ಇಲ್ಲ. ಆದರೆ ಅವರಿಗೆ ನಮ್ಮವರು ರಾಯಭಾರಿಗಳಾದರೆ ನಮಗೆ ನೋವಾಗುತ್ತದೆ. ಅಹರ್ನಿಶಿ ಪ್ರಕಾಶನ, ಚಿಂತನ ಪ್ರಕಾಶನ, ಲಡಾಯಿ ಪ್ರಕಾಶನ, ನವಕರ್ನಾಟಕ ಪ್ರಕಾಶನ, ಕ್ರಿಯಾ ಪ್ರಕಾಶನದಂತಹ ಹತ್ತಾರು ಪ್ರಕಾಶನ ಸಂಸ್ಥೆಗಳು ಪ್ರಗತಿಪರ ಸಾಹಿತಿಗಳ ಸಾಹಿತ್ಯವನ್ನು ಪ್ರಕಟ ಮಾಡುತ್ತದೆ. ಇಂತಹ ಪ್ರಕಾಶನ ಸಂಸ್ಥೆಗಳೆಲ್ಲಾ ಮುಸ್ಲೀಮರ ಪುಸ್ತಕಗಳನ್ನು ಪ್ರಕಟ ಮಾಡಬೇಕು ಎಂಬ ಭರದಲ್ಲಿ ದೇವರ ಜೀತ ಮಾಡಿ ಸ್ವರ್ಗಕ್ಕೆ ಕರೆದೊಯ್ಯವ ಪುಸ್ತಕಗಳನ್ನು ಪ್ರಕಟ ಮಾಡಬೇಕೇ? ದಿನೇಶ್ ಅಮೀನ್ ಮಟ್ಟುರವರ ಈ ಪ್ರಶ್ನೆಯೇ ಅಪ್ರಸ್ತುತ.

”ಮುಸ್ಲಿಂ ಲೇಖಕರ ಸಂಘವನ್ನು ಸ್ಥಾಪಿಸಿದವರು ಜಮಾತೆ ಇಸ್ಲಾಮ್ ಹಿಂದ್ ಅಲ್ಲ. ಇದರ ಸ್ಥಾಪಕ ಅಧ್ಯಕ್ಷ ಸಿ.ಕೆ.ಹುಸೇನ್ ಎನ್ನುವ ಪತ್ರಕರ್ತ ಜಮಾತೆ ಇಸ್ಲಾಮ್ ಸಂಘಟನೆಯವರಲ್ಲ ಎನ್ನುವುದು ಗೊತ್ತಿತ್ತು. ಈಗ ಈ ಸಂಘದ ಸದಸ್ಯರಾಗಿರುವವರೆಲ್ಲರೂ ಜಮಾತೆ ಇಸ್ಲಾಮ್‌ಗೆ ಸೇರಿದವರಲ್ಲ, ಉಳಿದವರ ಜತೆಯಲ್ಲಿ ಅವರೂ ಸದಸ್ಯರಾಗಿರಬಹುದು. ಜಮಾತೆ ಇಸ್ಲಾಮ್ ಗೆ ಸೇರಿರುವ ‘ಹಿದಾಯತ್ ಸೆಂಟರ್’ ಕಟ್ಟಡದಲ್ಲಿ ಸಂಘದ ಕಚೇರಿ ಇರುವುದೊಂದೇ ಆ ಸಂಘಟನೆಯ ಜತೆಗೆ ಮುಸ್ಲಿಮ್ ಲೇಖಕರ ಸಂಘದ ಸಂಬಂಧ ಇರುವುದಕ್ಕೆ ನಮಗೆ ಮೇಲ್ನೋಟಕ್ಕೆ ಸಿಗುವ ಪುರಾವೆ” ಎನ್ನುತ್ತಾರೆ ದಿನೇಶ್ ಅಮೀನ್ ಮಟ್ಟರವರು.

ಮುಸ್ಲಿಂ ಲೇಖಕರ ಸಂಘವು ಕಟ್ಟರ್ ಇಸ್ಲಾಮಿಕ್ ವಾದಿ ಜಮಾತೆ ಇಸ್ಲಾಮೀ ಹಿಂದ್‌ನ ಘಟಕ ಎಂಬುದಕ್ಕೆ ಅಧಿಕೃತ ಪುರಾವೆ ಇಲ್ಲ. ದಿನೇಶ್ ಅಮೀನ್ ಮಟ್ಟುರವರು ಈ ಹಿಂದೆ ಹೇಳಿರುವ ಮಾತುಗಳನ್ನು ಇಲ್ಲಿ ಜ್ಞಾಪಿಸಿಕೊಳ್ಳಬೇಕಾಗುತ್ತದೆ. ”ಕೋಮುವಾದ ಮತ್ತು ಮೂಲಭೂತವಾದ, ಪುರೋಹಿತಶಾಹಿ ಮನಸ್ಸುಗಳು ವಿವಿದ ರಂಗಗಳಲ್ಲಿ ಹಲವಾರು ವೇಷಗಳಲ್ಲಿ ಹೊಕ್ಕಿವೆ. ಆದುದರಿಂದ ನಾವು ಬಹಳ ಜಾಗರೂಕರಾಗಿರಬೇಕು. ಆರ್.ಎಸ್.ಎಸ್ ಯಾರಿಗೂ ಗೊತ್ತಾಗದ ರೀತಿಯಲ್ಲಿ ಮಹಾಲಕ್ಷ್ಮಿ ಪೂಜೆಯ ಹೆಸರಿನಲ್ಲಿ, ಆದಿವಾಸದಿ ಮಂಚ್ ನ ಹೆಸರಿನಲ್ಲಿ, ಶಿಶುಮಂದಿರದ ಹೆಸರಿನಲ್ಲಿ ಕಾರ್ಯಾಚರಿಸುತ್ತಿದೆ. ಎಲ್ಲಾ ಕೋಮುವಾದಿಗಳು, ಮೂಲಭೂತವಾದಿಗಳೂ ಇದನ್ನೇ ಮಾಡುತ್ತಿದ್ದಾರೆ. ಇವೆಲ್ಲವನ್ನೂ jamate-mangaloreನಾವು ಜಾಗರೂಕತೆಯಿಂದ ಅನುಮಾನದ ದೃಷ್ಠಿಯಲ್ಲಿ ನೋಡಬೇಕು”…. ಇದು ನನ್ನ ಮಾತಲ್ಲ. ದಿನೇಶ್ ಅಮೀನ್ ಮಟ್ಟುರವೇ ಹೇಳಿದ್ದು. ಈ ಮಾತಿನಲ್ಲಿ ನಂಬಿಕೆ ಇಟ್ಟುಕೊಂಡೇ ನಾವು ಮುಸ್ಲಿಂ ಲೇಖಕರ ಸಂಘದ ಕಾರ್ಯಕ್ರಮವನ್ನು ನೋಡಬೇಕಾಗುತ್ತದೆ. ದಿನೇಶ್ ಅಮೀನ್ ಮಟ್ಟು ಬಾಗವಹಿಸಿದ ಕಾರ್ಯಕ್ರಮದಲ್ಲಿ ಜಮಾತೆ ಸದಸ್ಯರೇ ಅತ್ಯಧಿಕ ಸಂಖ್ಯೆಯಲ್ಲಿದ್ದರು ಎಂದು ಮಟ್ಟುರವರೇ ಒಪ್ಪಿಕೊಳ್ಳುತ್ತಾರೆ. ಇನ್ನೊಂದು ವಿಚಾರ ಅವರಿಗೆ ಗೊತ್ತಿಲ್ಲ. ಕಾರ್ಯಕ್ರಮ ನಡೆಯುತ್ತಿದ್ದ ಸಭಾಂಣಗಣದ ಸುತ್ತ ನೀಟಾಗಿ ನಿಂತು ಸಭೀಕರನ್ನು ಮ್ಯಾನೇಜ್ ಮಾಡುತ್ತಿದ್ದ ಸ್ವಯಂ ಸೇವಕರೆಲ್ಲರೂ ಜಮಾತೆ ಸದಸ್ಯರು. ಅದೂ ಇರಲಿ. ಕಾರ್ಯಕ್ರಮದ ಆಮಂತ್ರಣ ಪತ್ರಿಕೆಗಳನ್ನು ಪತ್ರಕರ್ತರಿಗೆ ನೀಡಿದ್ದು, ಕಾರ್ಯಕ್ರಮದ ದಿನ ಪತ್ರಕರ್ತರಿಗೆ ಫೋನಾಯಿಸಿದ್ದು, ಪತ್ರಕರ್ತರು ಕಾರ್ಯಕ್ರಮಕ್ಕೆ ಬಂದ ನಂತರ ಅವರಿಗೆ ಆಸನ, ನೀರು, ಉಪಚಾರದ ವ್ಯವಸ್ಥೆ ಮಾಡಿದ್ದು ಯಾವ ಲೇಖಕ, ಬರಹಗಾರನೂ ಅಲ್ಲ. ಅವರೆಲ್ಲಾ ಜಮಾತೆಯ ಕಾರ್ಯಕರ್ತರು. ಅಷ್ಟೇ ಅಲ್ಲ. ಕಾರ್ಯಕ್ರಮವನ್ನು ನಿರೂಪನೆ ಮಾಡಿದ್ದೂ ಜಮಾತೆಯ ಕಾರ್ಯಕರ್ತ. ಇನ್ನೂ ದಾಖಲೆಗಳ ಪುರಾವೆಗಳು ಬೇಕು ಎಂದಾರೆ ನಾವು ರಾಷ್ಟ್ರೋತ್ಥಾನ ಪರಿಷತ್, ಹೊಸದಿಗಂತ, ಶಿಶುಮಂದಿರಗಳಿಗೆ ಆರ್‌ಎಸ್‌ಎಸ್ ನಂಟು ಇರುವ ಬಗ್ಗೆ ಅಧಿಕೃತ ಪುರಾವೆಯನ್ನು ಹುಡುಕಿದಂತಾಗುತ್ತದೆ ಮತ್ತು ದಿನೇಶ್ ಅಮೀನ್ ಮಟ್ಟು ಈ ಹಿಂದೆ ಹೇಳಿದ ಮಾತಿಗೆ ಅವಮಾನವಾಗುತ್ತದೆ.

”ಯು.ಆರ್.ಅನಂತಮೂರ್ತಿ, ಅಬ್ದುಲ್ ರಷೀದ್, ಬಿ.ಎ.ಸನದಿ, ಅಕ್ಬರ್ ಅಲಿ, ರಮ್ಜಾನ್ ದರ್ಗಾ, ಪ್ರೊ.ಶೇಖ್ ಅಲಿ, ಪ್ರೊ.ಗಜೇಂದ್ರಗಢ, ಕವಿ ನಿಸಾರ್ ಅಹ್ಮದ್ ಮೊದಲಾದವರು ಮುಸ್ಲಿಂ ಲೇಖಕರ ಸಂಘದ ಪ್ರಶಸ್ತಿ ಸ್ವೀಕರಿಸಿದ್ದಾರೆ. ಸಾಹಿತಿಗಳಾದ ದೇವನೂರು ಮಹಾದೇವ, ಜವರೇಗೌಡ ಹಾಗೂ ನಿಡುಮಾಮಿಡಿ ಸ್ವಾಮಿಗಳು, ತರಳಬಾಳು ಸ್ವಾಮಿಗಳು ಸಂಘದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದರು. devanurಇದೇ ಸಂಘ ಆಯೋಜಿಸಿದ್ದ ಕರ್ನಾಟಕ ಮುಸ್ಲಿಮ್ ಲೇಖಕರು ಮತ್ತು ಪತ್ರಕರ್ತರ ಸಮ್ಮೇಳನದ ಅಧ್ಯಕ್ಷರಾಗಿದ್ದವರು ಕವಿ ನಿಸಾರ್ ಅಹ್ಮದ್. ಅದರಲ್ಲಿ ಬಾನು ಮುಷ್ತಾಕ್ ಸೇರಿದಂತೆ ಅನೇಕ ಮುಸ್ಲಿಮ್ ಲೇಖಕ-ಲೇಖಕಿಯರು ಪಾಲ್ಗೊಂಡಿದ್ದರು. ಸಂಘದ ಸಮಾರಂಭಗಳಲ್ಲಿ ನಮ್ಮ ನಡುವಿನ ಪ್ರಗತಿಪರ ಚಿಂತಕರಾದ ಶಿವಸುಂದರ್, ಫಣಿರಾಜ್, ಜಿ.ರಾಜಶೇಖರ್ ಅವರಲ್ಲದೆ ಪತ್ರಕರ್ತರಾದ ಈಶ್ವರಯ್ಯ, ಮನೋಹರ ಪ್ರಸಾದ್, ಚಿದಂಬರ ಬೈಕಂಪಾಡಿ, ಎನ್.ಎ.ಎಂ.ಇಸ್ಮಾಯಿಲ್ ಮೊದಲಾದವರು ಭಾಗವಹಿಸಿದ್ದರು. ನಾನು ಮುಸ್ಲಿಮ್ ಲೇಖಕರ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಲು ಈ ಹಿನ್ನೆಲೆ ಮೊದಲ ಕಾರಣ” ಎಂದು ದಿನೇಶ್ ಅಮೀನ್ ಮಟ್ಟು ತಮ್ಮ ಭಾಗವಹಿಸುವಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ದಿನೇಶ್ ಅಮೀನ್ ಮಟ್ಟು ಭಾಗವಹಿಸಬಾರದು ಎಂದು ನಾನು ಎಲ್ಲೂ ಒತ್ತಾಯಿಸಿಲ್ಲ. ಕಾರ್ಯಕ್ರಮದಲ್ಲಿ ಭಾಗವಹಿಸಿದ ದಿನೇಶ್ ಅಮೀನ್ ಮಟ್ಟು ಒಬ್ಬ ಸಮಯ ಸಾಧಕ ಎಂದು ಕಮೆಂಟಿಗನ ಮಾತನ್ನು ಯಾವ ರೀತಿಯಲ್ಲೂ ಒಪ್ಪಲು ಸಾಧ್ಯವಿಲ್ಲ. ದಿನೇಶ್ ಅಮಿನ್ ಮಟ್ಟುರವರ ಬರಹಗಳು, ಚಿಂತನೆಗಳು ಸದಾ ನಮಗೆ ಮಾರ್ಗದರ್ಶಿ.

ಇರಲಿ… ದಿನೇಶ್ ಅಮೀನ್ ಮಟ್ಟು ಮೇಲೆ ಉಲ್ಲೇಖಿಸಿದ ಹೆಸರುಗಳು ಮುಸ್ಲಿಂ ಲೇಖಕರ ಸಂಘದಲ್ಲಿ ಭಾಗವಹಿಸಿದ್ದರು ಎಂಬ ಕಾರಣಕ್ಕೆ ಅವರ ನಿಲುವುಗಳನ್ನು ಒಪ್ಪಲಾಗುವುದಿಲ್ಲ. ಜಮಾತೆಯ ಕಾರ್ಯಕ್ರಮಕ್ಕೆ ಮುಸ್ಲೀಮರ ಕಟ್ಟಾ ವಿರೋಧಿ ವಜ್ರದೇಹಿ ಸ್ವಾಮಿಜಿ, KPN photoಪೇಜಾವರ ಸ್ವಾಮೀಜಿಯನ್ನೂ ಕರೆದಿದ್ದಾರೆ. ಶಾಂತಿ ಪ್ರಕಾಶನದ ಕಾರ್ಯಕ್ರಮ ಸ್ವಾಗತ ಸಮಿತಿಯಲ್ಲಿ ವಿಶ್ವ ಹಿಂದೂ ಪರಿಷತ್ತಿನ ಮುಖಂಡರನ್ನು ಎಲ್ಲಾ ಜಿಲ್ಲೆಗಳಲ್ಲಿ ಪದಾಧಿಕಾರಿಯನ್ನಾಗಿ ಮಾಡಿದ್ದಾರೆ. ಪ್ರಗತಿಪರರನ್ನೂ ಕರೆಯುತ್ತಾರೆ. ಇದೆಲ್ಲಾ ತಮ್ಮ ಧರ್ಮ ವಿಸ್ತರಣೆಯ ತಂತ್ರಗಾರಿಕೆಗಳು ಎಂಬುದನ್ನು ದಿನೇಶ್ ಸರ್‌ಗೆ ನಾನು ಹೇಳಬೇಕಿಲ್ಲ.

ಮತ್ತು ದಿನೇಶ್ ಅಮೀನ್ ಮಟ್ಟುರವರು ಉಲ್ಲೇಖಿಸಿದ ಹಲವಾರು ಚಿಂತಕರು ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಜೊತೆ ಗುರುತಿಸಿಕೊಂಡವರು. ಆದರೂ ದಿನೇಶ್ ಅಮೀನ್ ಮಟ್ಟು ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾವನ್ನು ಯಾಕೆ ವಿರೋಧಿಸುತ್ತಾರೆ. ವಿರೋಧಿಸಲೇ ಬೇಕು. ಅವರೆಲ್ಲಾ ಬಂದಿದ್ದಾರೆ ಎಂಬುದನ್ನು ಇಟ್ಟುಕೊಂಡೇ ದೇವರ ಮತ್ತು ಮೂಲಭೂತವಾದಿ ಸಿದ್ದಾಂತದ ಮಾರ್ಕೆಟ್ ಮಾಡಲಾಗುತ್ತದೆ. ಈ ಬಾರಿಯ ರಾಯಭಾರಿ ನೀವಾಗಿದ್ದೀರಿ. ಮುಂದಿನ ವರ್ಷ ಮತ್ತೊಬ್ಬ ಪ್ರಗತಿಪರ ಚಿಂತಕನನ್ನು ಕಾರ್ಯಕ್ರಮಕ್ಕೆ ಅತಿಥಿಯಾಗಿ ಕರೆಯುವಾಗ…….. ”ಕಳೆದ ವರ್ಷ ದಿನೇಶ್ ಅಮೀನ್ ಮಟ್ಟು ಬಂದಿದ್ದರು. ಈ ವರ್ಷ ನೀವು ಬರಬೇಕು” ಎನ್ನುತ್ತಾರೆ. ಹೀಗೇ.. ಮುಂದುವರೆಯುತ್ತದೆ…

ದಿನೇಶ್ ಅಮೀನ್ ಮಟ್ಟು ಮುಂದುವರೆದು ಸಮರ್ಥನೆ ನೀಡುತ್ತಾ ಸಂಘಟಕರು ಮತ್ತು ಅಮೀನ್ ಮಟ್ಟು ಮಧ್ಯೆ ನಡೆದ ಮಾತುಕತೆಯನ್ನು ವಿವರಿಸುತ್ತಾರೆ. ಅದು ಹೀಗಿದೆ…

“‘ಈ ಬಾರಿ ಬೊಳುವಾರು ಅವರನ್ನು ಸನ್ಮಾನಿಸಲು ಕಾರ್ಯಕಾರಿ ಸಮಿತಿಯಲ್ಲಿ ನಿರ್ಧಾರವಾಗಿತ್ತು. ಆದರೆ ಅವರು ಅಮೆರಿಕದಲ್ಲಿರುವುದರಿಂದ ಸಾಧ್ಯವಾಗಲಿಲ್ಲ. ಸಾರಾ ಅಬೂಬಕರ್ ಒಪ್ಪಿಕೊಂಡರೆ ನಾವು ಖಂಡಿತ ಅವರನ್ನು ಕರೆಸಿ ಗೌರವಿಸುತ್ತೇವೆ’ ಎಂದು Sara-Abubakarಸಂಘದ ಕಾರ್ಯದರ್ಶಿ ಉಮರ್ ನನಗೆ ತಿಳಿಸಿದರು. ಅದೇ ರೀತಿ ಪ್ರಗತಿಪರರೆನಿಸಿಕೊಂಡ ಲೇಖಕರ ಕೃತಿಗಳಿಗೆ ಯಾಕೆ ಪ್ರಶಸ್ತಿ ನೀಡಿಲ್ಲ ಎಂದೂ ಅವರನ್ನು ಕೇಳಿದ್ದೆ. ‘ಪ್ರಶಸ್ತಿಗೆ ಅರ್ಜಿ ಹಾಕಲು ಪತ್ರಿಕಾ ಪ್ರಕಟಣೆ ನೀಡುತ್ತೇವೆ, ಆ ಅರ್ಜಿಗಳ ಆಧಾರದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಅವರು ಪ್ರಶಸ್ತಿಗೆ ಆಯ್ಕೆಯಾಗದಿರಲು ಅರ್ಜಿ ಹಾಕದಿರುವುದು ಕಾರಣ ಇರಬಹುದು’ ಎಂದು ಉಮರ್ ಹೇಳಿದರು. ಪ್ರಶಸ್ತಿಯ ಆಯ್ಕೆಗಾಗಿ ಅವರು ರೂಪಿಸಿರುವ ವ್ಯವಸ್ಥೆ ತಪ್ಪಿರಬಹುದು, ಆದರೆ ಪೂರ್ವಗ್ರಹದಿಂದ ಇಂತಹದ್ದೊಂದು ವ್ಯವಸ್ಥೆ ರೂಪಿಸಿದ್ದಾರೆಂದು ನನಗೆ ಅನಿಸುತ್ತಿಲ್ಲ” ಎಂದಿದ್ದಾರೆ…

ಈ ಮಾತುಕತೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ”ಸಾರಾ ಅಬೂಬಕ್ಕರ್ ಒಪ್ಪಿಕೊಂಡರೆ ನಾವು ಖಂಡಿತ ಕರೆಸಿ ಗೌರವಿಸುತ್ತೇವೆ” ಎಂಬ ಮಾತನ್ನು ವಿಮರ್ಶೆಗೆ ಒಳಪಡಿಸಬೇಕು. ಜಮಾತೆಯವರು ಒಪ್ಪಿಕೊಂಡರೆ ಸಾರಾ ಅಬೂಬಕ್ಕರ್ ಮಾತ್ರವಲ್ಲ ಕಟ್ಟಾ ಹಿಂದೂ ಕೋಮುವಾದಿಯನ್ನೂ ಕಾರ್ಯಕ್ರಮಕ್ಕೆ ಕರೆಸುತ್ತಾರೆ. ಸಾಹಿತಿ ಏರ್ಯಾ ಲಕ್ಷ್ಮಿನಾರಾಯಣರನ್ನು ಕರೆಸಿಕೊಂಡಿಲ್ವೆ. ಆದರೆ ಸಾರಾ ಅಬೂಬಕ್ಕರ್ ಯಾಕೆ ಮುಸ್ಲಿಂ ಲೇಖಕರ ಸಂಘದ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಮತ್ತು ಒಪ್ಪಿಕೊಳ್ಳುವುದಿಲ್ಲ ಎಂದು ನನಗಿಂತ ಚೆನ್ನಾಗಿ ದಿನೇಶ್ ಅಮೀನ್ ಮಟ್ಟುರವರಿಗೆ ಗೊತ್ತು. ”ಅವರು ಮೂಲಭೂತವಾದಿಗಳು. ಅವರ ಜೊತೆ ನಾನ್ಯಾವತ್ತೂ ಗುರುತಿಸಿಕೊಳ್ಳುವುದಿಲ್ಲ” ಎಂಬುದು ಸಾರಾ ಅಬೂಬಕ್ಕರ್ ನಿಲುವು. ಅದಕ್ಕೆ ಮುಸ್ಲಿಂ ಲೇಖಕರ ಸಂಘ ಬಿಕ್ಕಳಿಸಿ ಹೇಳುತ್ತಿದೆ… “ಒಪ್ಪಿದರೆ ಸನ್ಮಾನಿಸುತ್ತೇವೆ”

ಮುಸ್ಲಿಂ ಲೇಖಕರ ಸಂಘದ ಸಂವಿದಾನ, ಅಲ್ಲಿ ಎರಡು ಭಾಗವಾಗಿ ಮಾಡಿದ್ದ ಸಭಾಂಗಣದಲ್ಲಿ ಒಂಡೆದೆ ಮಹಿಳೆಯರು ಮತ್ತು ಮತ್ತೊಂದೆಡೆ ಪುರುಷರು. ಅವರಿಬ್ಬರೂ ಒಟ್ಟಿಗೆ ಕುಳಿತುಕೊಳ್ಳದಂತೆ ಸಂಭಾಳಿಸೋ ಶಿಸ್ತುಬದ್ಧ ಜಮಾತೆ ಕಾರ್ಯಕರ್ತರು. ಇದೆಲ್ಲದರ ಮಧ್ಯೆ ಮುಸ್ಲಿಂ ಮಹಿಳೆಯರನ್ನು ಕಂಡು ಉಂಟಾದ ಆಶಾವಾದದ ಬಗ್ಗೆ ನಾನೇನೂ ಹೇಳುವುದಿಲ್ಲ. ಅವೆಲ್ಲಾ ಬಾಲಿಶ ಮಾತುಗಳು ಸರ್. ನೀವು ಆರ್‌ಎಸ್‌ಎಸ್ ಅಂಗ ಸಂಸ್ಥೆಗಳಾಗಿರುವ ಸಾಹಿತ್ಯಿಕ ಸಾಮಾಜಿಕ ಸಂಘಟನೆಗಳ ಸಂವಿಧಾನವನ್ನೇನಾದರೂ ತೆರೆದು ನೋಡಿದರೆ ನೀವು ದೇಶ ಸೇವೆಗಾಗಿ PFI-mangaloreನಾಳೆಯೇ ಆ ಸಂಘಟನೆ ಸೇರಬೇಕು ಎಂಬ ನಿಲುವಿಗೆ ಬರಬೇಕಾಗುತ್ತದೆ ಸರ್. ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾದ ಸಂವಿಧಾನ ನೋಡಬೇಕು ಸರ್. ಇದೆಲ್ಲಾ ಸಂಘಟನೆಗಳು ಭಾರತದ ಸಂವಿಧಾನವನ್ನು ಮೀರಿಸುವ ರೀತಿಯಲ್ಲಿ ಸಂವಿಧಾನ ರಚಿಸುವ ಮೂರ್ಖತನವನ್ನು ಮಾಡಲ್ಲ. ಇವರು ಹಿಡನ್ ಅಜೆಂಡಾಗಳನ್ನು ಇಟ್ಟುಕೊಂಡು ಸಾಗುತ್ತಾರೆ. ನೀವೇ ಹೇಳಿದಂತೆ ಇವೆರೆಲ್ಲರನ್ನೂ ತೀರಾ ಜಾಗರೂಕತೆಯಿಂದ ಅನುಮಾನದ ದೃಷ್ಠಿಯಲ್ಲಿ ನೋಡಬೇಕಾಗುತ್ತದೆ.

ಕೋಮುವಾದ ಮೂಲಭೂತವಾದ ನಿವಾರಣೆಗಾಗಿ ಸಿದ್ದಾಂತದ ಮಡಿವಂತಿಕೆ ಬಿಟ್ಟು ಪತ್ರಕರ್ತರು, ಆಕ್ಟಿವಿಸ್ಟ್‌ಗಳು ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ. ಆದರೆ ಮತ್ತೊಬ್ಬ ಮೂಲಭೂತವಾದಿ ಜೊತೆ ನಮ್ಮ ಸಿದ್ದಾಂತದ ಮಡಿವಂತಿಕೆ ಇಟ್ಟುಕೊಳ್ಳೋಣ ಎಂಬ ಆಶಯದೊಂದಿಗೆ ಇಷ್ಟೆಲ್ಲಾ ಚರ್ಚೆ ಮಾಡಿದ್ದೇನೆ..

ನಿಮ್ಮ ಎದುರು ನಿಂತು ಮಾತನಾಡಲೂ ಅರ್ಹನಲ್ಲದಷ್ಟು ಕಿರಿಯವನಾದ ಮತ್ತು ನಿಮ್ಮ ಬರಹಗಳನ್ನು ಓದಿಕೊಂಡೇ ಮಾಧ್ಯಮ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಈ ಕಿರಿಯನಿಂದ ದೊಡ್ಡ ಮಾತುಗಳು ಬಂದಿದ್ದರೆ ಕ್ಷಮೆ ಇರಲೆಂದು ಕೇಳಿಕೊಳ್ಳುತ್ತಾ…..

– ನವೀನ್ ಸೂರಿಂಜೆ

16 thoughts on “ಯಾರ ಜೊತೆ ಸಿದ್ದಾಂತದ ಮಡಿವಂತಿಕೆ ಬಿಡಬೇಕು? : ನವೀನ್ ಸೂರಿಂಜೆ

 1. Ananda Prasad

  ಮುಸ್ಲಿಮರು ಬಹುಸಂಖ್ಯಾತರಾದಾಗ ಬೇರೆ ಅಲ್ಪಸಂಖ್ಯಾತ ಧರ್ಮದ ಜನರನ್ನು ಕಿರುಕುಳ ಕೊಟ್ಟು ಓಡಿಸುವ ಅಥವಾ ಅವರನ್ನು ತಮ್ಮ ಧರ್ಮಕ್ಕೆ ಮತಾಂತರಿಸುವ ಒಂದು ನೀತಿಯನ್ನು ಹೊಂದಿರುವುದು ಕಂಡುಬರುತ್ತದೆ. ಇದು ಧಾರ್ಮಿಕ ಮೂಲಭೂತವಾದದಿಂದ ಪ್ರಭಾವಿತವಾಗಿ ನಡೆಯುವಂಥದ್ದು. ಪಾಕಿಸ್ತಾನದಲ್ಲಿ ಬಹುಸಂಖ್ಯಾತ ಮುಸ್ಲಿಮರು ಅಲ್ಪಸಂಖ್ಯಾತ ಹಿಂದೂಗಳಿಗೆ ಕಿರುಕೊಳ ಕೊಟ್ಟೋ ಅಥವಾ ಮತಾಂತರಿಸಿಯೋ ಅಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಸಂಖ್ಯೆ ನಿರಂತರವಾಗಿ ಸ್ವಾತಂತ್ರ್ಯಾನಂತರ ಕಡಿಮೆಯಾಗುತ್ತಾ ಬಂದಿದೆ. ಇದೇ ಪರಿಸ್ಥಿತಿ ಬಾಂಗ್ಲಾ ದೇಶದಲ್ಲಿಯೂ ಇದೆ. ಕಾಶ್ಮೀರದಲ್ಲಿಯೂ ಅಲ್ಪಸಂಖ್ಯಾತ ಹಿಂದೂಗಳಾದ ಕಾಶ್ಮೀರಿ ಪಂಡಿತರನ್ನು ಕಿರುಕುಳ ಕೊಟ್ಟು ಹೊರಗೆ ಓಡಿಸಲಾಗಿದೆ. ಇದು ಮುಸ್ಲಿಂ ಧರ್ಮದ ಒಂದು ದೊಡ್ಡ ದೌರ್ಬಲ್ಯವಾಗಿದೆ. ಹೀಗಾಗಿಯೇ ಮುಸ್ಲಿಮರ ಸಂಖ್ಯೆ ಹೆಚ್ಚಿದಲ್ಲೆಲ್ಲ ಹಿಂದೂ ಮೂಲಭೂತವಾದವೂ ಹೆಚ್ಚುತ್ತದೆ. ಮುಸ್ಲಿಮರ ಸಂಖ್ಯೆ ಹೆಚ್ಚಳದ ಬಗ್ಗೆ ಹಿಂದೂಗಳಲ್ಲಿ ಅಭದ್ರತೆಯ ಭಾವನೆ ಮೂಡಿಸುವಲ್ಲಿ ಹಿಂದೂ ಮೂಲಭೂತವಾದಿ ಸಂಘಟನೆಗಳು ಯಶಸ್ವಿಯಾಗುವುದು ಮುಸ್ಲಿಂರಲ್ಲಿ ಇರುವ ಈ ದೌರ್ಬಲ್ಯದಿಂದಲೇ. ಮುಸ್ಲಿಮರು ಈ ದೌರ್ಬಲ್ಯದಿಂದ ಹೊರಗೆ ಬಂದು ವಿಶಾಲ ಮನೋಭಾವದಿಂದ ಚಿಂತಿಸಿ ವೈಚಾರಿಕವಾಗಿ ಬೆಳೆಯುವುದೇ ಈ ಸಮಸ್ಯೆಗೆ ಇರುವ ಪರಿಹಾರ. ಪಾಕಿಸ್ತಾನ ಮತ್ತು ಭಾರತದ ನಡುವೆ ಇರುವ ವೈಷಮ್ಯವೂ (ಪಾಕಿಸ್ತಾನದ) ಮುಸ್ಲಿಮರು ವೈಚಾರಿಕವಾಗಿ ಬೆಳೆದರೆ ಪರಿಹಾರವಾಗಬಹುದು. ಹಿಂದೂಗಳಲ್ಲಿ ಇತರ ಅಲ್ಪಸಂಖ್ಯಾತ ಧರ್ಮದವರಿಗೆ ಕಿರುಕುಳ ಕೊಟ್ಟು ಓಡಿಸುವ ಅಥವಾ ಮತಾಂತರಿಸುವ ಪ್ರವೃತ್ತಿ ಇಲ್ಲ.

  Reply
  1. ಓದುಗ

   ಆನಂದ್ ಸರ್ ನೀವು ಹೇಳಿದ್ದರಲ್ಲಿ ತಪ್ಪಿಲ್ಲ, ಆದರೆ ಆ ಅಭಿಪ್ರಾಯವನ್ನು ನೀವು ಸ್ವಲ್ಪ ಸಡಿಲಿಸಬೇಕೆಂದು ನನ್ನ ಅನಿಸಿಕೆ. ನೀವು ಹೇಳುತ್ತಿರುವುದು ನಿಜವಾಗಿರಬಹುದು ಆದರೆ ಅದಕ್ಕಾಗಿ ಎಲ್ಲಾ ಮುಸ್ಲಿಮರನ್ನು ಕಟಕಟೆಯಲ್ಲಿ ನಿಲ್ಲಿಸುವುದು ಸಮಂಜಸವಲ್ಲ. ಧರ್ಮವನ್ನು , ವಿಚಾರಗಳನ್ನು ಅಥವಾ ಸಂಸ್ಕೃತಿಯನ್ನು ಹೇರುವ ಒಂದು ಸಣ್ಣ ವಿಭಾಗ ಎಲ್ಲಾ ಜನಸಮುದಾಯ, ದೇಶಗಳಲ್ಲಿ ಇದೆ.

   Reply
 2. ಓದುಗ

  ಇತ್ತೀಚೆಗೆ ಗಮನಿಸಿದ ಒಂದು ವಿಷಯ; ವಿಷಯ ಸಣ್ಣದಾಗಿರಬಹುದು, ಆದರೆ ಬಹಳ ಗಂಭೀರವಾದುದೆಂದು ನನಗನಿಸುತ್ತದೆ. ಅದಕ್ಕೆ ಬರೆಯಬೇಕಂತನಿಸಿತು. ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರು, ನಮ್ಮ ನಾಡಿನ ಅಪರೂಪದ ಚಿಂತಕರೂ ಆದ ದಿನೇಶ್ ಅಮೀನ್ ಮಟ್ಟುರವರು ಕಳೆದ ವಾರ ಮುಸ್ಲಿಮ್ ಸಂಘಟನೆಯೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕೆಲ ಪ್ರಗತಿಪರರೆನಿಸಿಕೊಂಡವರು, ಮಟ್ಟುರವರು ಆ ಕಾರ್ಯಕ್ರಮದಲ್ಲಿ ಭಾಗವಹಿಸಬಾರದಿತ್ತು ಎಂದು ನೇರವಾಗಿ ಹೇಳದಿದ್ದರೂ, ಬೇರೆ ಬೇರೆ ರೂಪದಲ್ಲಿ ತಮ್ಮ ಆಕ್ಷೇಪಗಳನ್ನು ಹೊರಗೆಡಹಿದರು. ಮಟ್ಟುರವರು ಆ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದೇ ಆ ಪ್ರಗತಿಪರರ ನಿಲುವು ಎಂದು ಮೇಲ್ನೋಟಕ್ಕೆ ಸ್ಪಷ್ಟವಾಗುತಿತ್ತು. ಆಕ್ಷೇಪಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಆ ಆಕ್ಷೇಪಗಳಲ್ಲಿ ಒಂದು ರೀತಿಯ ಅಸಹನೆ ಹಾಗೂ ನೈತಿಕ ಪೋಲಿಸ್ ಗಿರಿ ಕಂಡುಬಂದುದು, ಪ್ರಗತಿಪರರ ಬಗ್ಗೆ ಬಹಳ ಅಭಿಮಾನವಿಟ್ಟುಕೊಂಡಿದ್ದ ನನ್ನಂತಹವನಿಗೆ ಬಹಳ ಅಘಾತಕಾರಿಯಾಗಿ ಕಂಡ ವಿಷಯ.

  ಒಂದು ಕಡೆ ಬಲಪಂಥೀಯ ನೈತಿಕ ಪೋಲಿಸ್ ಗಿರಿಯನ್ನು ಖಂಡಿಸುತ್ತಾ ತಾವು ಕೂಡಾ (ಸದ್ಯಕ್ಕೆ ವೈಚಾರಿಕವಾಗಿ) ಮಾಡುತ್ತಿರುವುದು ಅದನ್ನೇ. ಪ್ರಗತಿಪರರ ಈ ಧೋರಣೆಯನ್ನು ಅಜ್ನ್ಯಾನವೆಂದು ಭಾವಿಸಲೇ ಅಥವಾ ಕಾಪಟ್ಯವೆನ್ನಲೇ ಎಂಬ ದ್ವಂದ್ವ ನನ್ನನ್ನು ಕಾಡುತ್ತಿದೆ. ನಾನು ಕಂಡಂತೆ ಕರಾವಳಿಯಲ್ಲಿನ ಸಾಮಾಜೋ-ಸಾಂಸ್ಕೃತಿಕ ಸಮಸ್ಯೆಗಳ ಮೂಲ ’ಅಸಹನೆ’ಯಲ್ಲಿದೆ. ಈ ಪ್ರದೇಶದಲ್ಲಿ ಬಲಪಂಥೀಯ ಸಂಘಟನೆಗಳು ರಾತೋರಾತ್ರಿ ಆ ಮಟ್ಟಕ್ಕೆ ಬೆಳೆದುದಲ್ಲ. ಮೊದಲು ಅವರು ಜನರ ಮನಸ್ಸಿನಲ್ಲಿ ಬಿತ್ತಿದ್ದು ಅಸಹನೆಯ ಬೀಜ. ಆ ಬೀಜ ಮೊಳಕೆಯೊಡೆದು ಹಿಂಸೆಯ ಹೆಮ್ಮರವಾಗಿ ಬೆಳೆಯುತ್ತಿರುವುದು ನಾವಿಂದು ಕಾಣಬಹುದಾಗಿದೆ. ಕೇರಳ, ಪಶ್ಚಿಮ-ಬಂಗಾಳದಲ್ಲಿ ಪಾಲಿಟಿಕಲ್ ವಾಯೊಲೆನ್ಸ್ ಹೆಚ್ಚಾಗಿರುವುದಕ್ಕೆ ಎಡಪಂಥೀಯ ಅಸಹನೆಯೂ ಒಂದು ಕಾರಣ. (ಕರಾವಳಿಯಲ್ಲಿ ಎಡಪಂಥೀಯ-ಪ್ರಗತಿಪರರು ಹೆಚ್ಚು ಪ್ರಭಾವಶಾಲಿಯಾಗಿರುವುದರಿಂದ ನಾನದನ್ನು ಉಲ್ಲೇಖಿಸಿದ್ದೇನೆ.)

  ಬಲಪಂಥೀಯ ಮೂಲಭೂತವಾದಿಗಳು ಮಾಡಿದ ಇನ್ನೊಂದು ಕೆಲಸ ತಮಗಾಗದವರ ಮೇಲೆ ’ಅನುಮಾನ’ಗಳನ್ನು ಹುಟ್ಟಿಸಿದ್ದು. ಮುಸ್ಲಿಮರನ್ನು ಪಾಕಿಸ್ತಾನಿಗಳೆಂದೂ, ಎಡಪಂಥೀಯರನ್ನು ನಕ್ಸಲರೆಂದು ಜನಸಾಮಾನ್ಯರು ಅನುಮಾನಿಸುವಂತೆ ಮಾಡಿದರು. ಇದೇ ಕೆಲಸವನ್ನು ಒಂದು ಜವಾಬ್ದಾರಿಯುತ ಮುಸ್ಲಿಮ್ ಸಂಘಟನೆಯ ಬಗ್ಗೆ ಲೇಖಕರು ಮಾಡುತ್ತಿದ್ದಾರೆ. ಜಮಾತೆ ತನ್ನ ಕಾರ್ಯಕ್ರಮಕ್ಕೆ ಮುಸ್ಲೀಮರ ಕಟ್ಟಾ ವಿರೋಧಿ ವಜ್ರದೇಹಿ ಸ್ವಾಮಿಜಿ, ಪೇಜಾವರ ಸ್ವಾಮೀಜಿಯನ್ನೂ ಕರೆದಿದ್ದಾರೆಯೆಂದೂ ಹೇಳುತ್ತಾರೆ. ಇನ್ನೊಂದು ಕಡೆ ಜಮಾತೆ ಸಂಘಟನೆಯನ್ನು ಕೋಮುವಾದಿಯೆಂದೂ ಅನುಮಾನ ಹುಟ್ಟಿಸುತ್ತಾರೆ.ಇದಕ್ಕೇನನ್ನಬೇಕು? ನನಗೆ ತಿಳಿದ ಪ್ರಕಾರ ಜಮಾತೆ ಸಂಘಟನೆ ಆರೋಗ್ಯಪೂರ್ಣ ಸಂವಾದದಲ್ಲಿ ನಂಬಿಕೆ ಇಟ್ಟ ಸಂಸ್ಥೆಯಾಗಿದೆ, ಮಾನವಕುಲದ ಹಿತದ ದೃಷ್ಟಿಯಿಂದ ವಿಚಾರ ವಿನಿಮಯವಾಗಬೇಕೆಂಬುವುದು ಸ್ವಾಗತಿಸಬೇಕಾದ ಅಂಶ.

  ಬಲಪಂಥೀಯ ಫ್ಯಾಸಿಸ್ಟರು ಅನುಸರಿಸಿದ ಗೋಬೆಲ್ಸ್ ತಂತ್ರವನ್ನೂ ಪ್ರಗತಿಪರ ಲೇಖಕ ಅನುಸರಿಸುವುದನ್ನು ನಾವು ಕಾಣಬಹುದು. ತಮ್ಮ ಲೇಖನದುದ್ದಕ್ಕೂ ಜಮಾತೆ ಹಾಗೂ ಜಮಾತೆಯ ಸದಸ್ಯರು ಕ್ರಿಮಿನಲ್ ಗಳಂತೆ ಬಿಂಬಿಸುತ್ತಾ ಹೋಗುತ್ತಾರೆ. ಬಲಪಂಥೀಯ ಫ್ಯಾಸಿಸ್ಟರು ಕರಾವಳಿಯಲ್ಲಿ ಮಾಡಿದ್ದೂ ಅದನ್ನೇ. ಒಂದು ಅನುಮಾನ, ಸುಳ್ಳನ್ನು ಸೃಷ್ತಿಸಿ ತಮ್ಮ ಲೇಖಕರ, ಮುಖವಾಣಿಗಳ ಮೂಲಕ ಅದನ್ನು ನೂರು ಬಾರಿ ಪುನಾರವರ್ತಿಸಿ ಜನರು ನಂಬುವ ಹಾಗೆ ಮಾಡಿದ್ದು ಇತಿಹಾಸ ಹಾಗೂ ವರ್ತಮಾನ. ಈ ಹಿಂದೆ ಲೇಖನವನ್ನೋದಿ ಇವರು ಕಟ್ಟರ್ ಎಡಪಂಥೀಯ ಮೂಲಭೂತವಾದಿಯೆಂದು ಅನಿಸುತ್ತಿತ್ತು. ಈ ಲೇಖನದಲ್ಲಿ ಫ್ಯಾಸಿಝಮ್ ಮನೋಭಾವವು ಗೋಚರಿಸುತ್ತಿದೆ.

  ಹಿಂದೂ ಕೋಮುವಾದಕ್ಕೆ ಉತ್ತರವಾಗಿ ಬೆಳೆಯುತ್ತಿರುವ ಮುಸ್ಲಿಮ್ ಕೋಮುವಾದ ಇಡೀಯ ಕರಾವಳಿಯನ್ನು ಅಪಾಯದಂಚಿಗೆ ದೂಡಿದೆ. ಕರ್ನಾಟಕ ಕರಾವಳಿಗಿಂದು ಬೇಕಾಗಿರುವುದು ಮುಹಮ್ಮದರ ಶಾಂತಿಯ ಭಾಷೆ, ಜೀಸಸ್ ನ ಪ್ರೀತಿಯ ಭಾಷೆ, ಗಾಂಧೀಜಿಯ ಒಗ್ಗಟ್ಟಿನಯ ಭಾಷೆ ಹಾಗೂ ಮಾರ್ಕ್ಸ್ ನ ಜೀವನದ ಸಹನೆಯ ಭಾಷೆ. ದಿನೇಶ್ ಸರ್ ಅಂದ ಹಾಗೆ ಸಾರ್ವಜನಿಕ ಹಿತಕ್ಕಾಗಿ ಸೈದ್ದಾಂತಿಕ ಮಡಿವಂತಿಕೆಯನ್ನು ಸನ್ನಿವೇಶ ಕರಾವಳಿಯ ಪ್ರಬುದ್ದ ಜನಸಾಮಾನ್ಯ-ಸಂಘಟನೆಗಳ ಮುಂದಿದೆ. ಜಮಾತೆ ಅದನ್ನು ಮಾಡುತ್ತಿದ್ದು (ಲೇಖಕರ ಕೆಂಪು ಕನ್ನಡಕಕ್ಕೆ ಬಿಳಿ ಬಣ್ಣ ಕಾಣದಿರಬಹುದು) ಪ್ರಗತಿಪರವಾಗುತ್ತಿದೆ, ಪ್ರಗತಿಪರರು ಇನ್ನೂ ತಮ್ಮ ಮೂಲಭೂತವಾದದಲ್ಲಿ ಸಿಲುಕಿದ್ದೂ ಅಲ್ಲದೆ ಬೇರಾರೂ ಪ್ರಗತಿಪರರಾಗಕೂಡದು ಎಂಬ ಮನೋಭಾವವನ್ನು ಹೊಂದಿದ್ದಾರೆ.

  Reply
  1. Salam Bava

   very well said,this is what is actually happening in coastal karnataka,and happened in West Bengal.

   Reply
 3. Anand Prasad

  ಪ್ರಪಂಚದ ಎಲ್ಲ ಧರ್ಮ ಹಾಗೂ ದೇಶಗಳಲ್ಲಿಯೂ ಅಲ್ಪಸಂಖ್ಯಾತ ಧರ್ಮದ ಮೇಲೆ ಬಹುಸಂಖ್ಯಾತ ಧರ್ಮೀಯರು ತಮ್ಮ ಆಚಾರ ವಿಚಾರಗಳನ್ನು ಹೇರುವುದು ಕಂಡುಬರುತ್ತದೆಯಾದರೂ ತೀರಾ ಬದುಕಲು ಅಸಾಧ್ಯವಾದ ಕಿರುಕುಳ ನೀಡುವುದಿಲ್ಲ. ಪಾಕಿಸ್ತಾನ ಹಾಗೂ ಬಾಂಗ್ಲಾ ದೇಶಗಳಂಥ ಇಸ್ಲಾಂ ಬಹುಸಂಖ್ಯಾತ ದೇಶಗಳಲ್ಲಿ ಬೇರೆ ಧರ್ಮದ ಅಲ್ಪಸಂಖ್ಯಾತರ ಮೇಲೆ ಬದುಕಲಾರದ ಕಿರುಕುಳ ಕೊಟ್ಟು ಒಂದೋ ಅವರು ಬಹುಸಂಖ್ಯಾತ ಧರ್ಮಕ್ಕೆ ಮತಾಂತರವಾಗುವಂತೆ ಮಾಡುತ್ತಾರೆ ಅಥವಾ ದೇಶ ಬಿಟ್ಟು ಹೋಗುವಂತೆಯೂ ಮಾಡಲಾಗುತ್ತಿದೆ. ಇಂಥ ಪ್ರವೃತ್ತಿಯನ್ನು ಇಸ್ಲಾಂ ಧರ್ಮದವರು ತಮ್ಮ ತಮ್ಮ ದೇಶಗಳಲ್ಲಿ ತಡೆಯಬೇಕಾಗಿದೆ. ಇದಕ್ಕಾಗಿ ಭಾರತದ ಇಸ್ಲಾಂ ಧರ್ಮದ ಪಂಡಿತರು, ಧರ್ಮಗುರುಗಳು ಪಾಕಿಸ್ತಾನ, ಬಾಂಗ್ಲಾ ದೇಶದ ಧರ್ಮಗುರುಗಳು, ಪಂಡಿತರ ಜೊತೆ ಸಮಾಲೋಚನೆ ನಡೆಸಿ ಅವರ ಮೇಲೆ ಪ್ರಭಾವಿಸುವ ಅಗತ್ಯ ಇದೆ. ಇಂದು ಪ್ರಪಂಚದ ಧರ್ಮಗಳಲ್ಲಿ ಧರ್ಮದ ಹೆಸರಿನಲ್ಲಿ ಹೆಚ್ಚಾಗಿ ಹಿಂಸೆ ನಡೆಸುತ್ತಿರುವವರು ಮುಸ್ಲಿಮರೇ ಕಂಡುಬರುತ್ತಾರೆ. ಇದು ಯಾಕೆ ಹೀಗೆ ಎಂದು ಮುಸ್ಲಿಮರು ಯೋಚಿಸಿ ಇದನ್ನು ಕಡಿಮೆ ಮಾಡಲು ಮುಂದಾಗಬೇಕು.

  ಭಾರತದಲ್ಲಿ ಬಹುಸಂಖ್ಯಾತರಾದ ಹಿಂದೂಗಳು ಮೂಲಭೂತವಾದಕ್ಕೆ ಹೆಚ್ಚಿನ ಪ್ರೋತ್ಸಾಹ ಕೊಟ್ಟಿಲ್ಲ ಅಥವಾ ಹಿಂಸೆಯನ್ನು ಉತ್ತೇಜಿಸುವ ನಿಲುವನ್ನು ಹೊಂದಿಲ್ಲ. ಕೆಲವು ಹಿಂದೂ ಮೂಲಭೂತವಾದಿ ಗುಂಪುಗಳು ಇಂಥ ಹಿಂಸೆಯನ್ನು ಉತ್ತೇಜಿಸಿ ಅಧಿಕಾರಕ್ಕೆ ಬರಲು ಯತ್ನಿಸಿದರೂ ಅದು ಭಾರತದಲ್ಲಿ ಯಶಸ್ವಿಯಾಗಿಲ್ಲ. ಹಿಂದೂ ಬಲಪಂಥೀಯ ಗುಂಪುಗಳು ಅಲ್ಪಸಂಖ್ಯಾತರನ್ನು ಅಪಾಯಕಾರಿ ಎಂದು ತೋರಿಸಿ ಬಹುಸಂಖ್ಯಾತರ ವೋಟ್ ಬ್ಯಾಂಕ್ ರಾಜಕೀಯ ರೂಪಿಸುವ ಪ್ರಯತ್ನ ಎಲ್ಲೆಡೆ ಯಶಸ್ವಿಯಾಗಿಲ್ಲ, ಆಗುವುದೂ ಇಲ್ಲ. ಅದಕ್ಕಾಗಿಯೇ ಈಗ ಅವರು ಅಂಥ ಪ್ರಯತ್ನ ಬಿಟ್ಟು ಅಭಿವೃದ್ಧಿಯ ಅಜೆಂಡಾ ಹಿಡಿದುಕೊಂಡು ಅಧಿಕಾರ ವಶಪಡಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ.

  Reply
  1. Mahesha Prasad Neerkaje

   ನಿಮ್ಮ ಅಭಿಪ್ರಾಯಕ್ಕೆ ನೂರರಕ್ಕೆ ನೂರರಷ್ಟು ಸಹಮತವಿದೆ. ಪರಮತ ದ್ವೇಷವನ್ನು ಮುಸ್ಲಿಮರು ಬಿಡದಿದ್ದರೆ ಕೊನೆಗೆ ಭಾಸ್ಮಾಸುರನಂತೆ ಅದು ಅವರನ್ನೇ ಆಪೋಶನ ತೆಗೆದುಕೊಳ್ಳುತ್ತದೆ. ಪಾಕಿಸ್ತಾನದಲ್ಲಿ ಮತ್ತು ಇತರ ಇಸ್ಲಾಮಿಕ್ ಮೂಲಭೂತವಾದಿ ದೇಶಗಳಲ್ಲಿ ಆಗುತ್ತಿರುವುದೂ ಇದುವೇ. ಭಾರತದಲ್ಲಿ ಇಸ್ಲಾಮಿಕ್ ಮೂಲಭೂತವಾದವನ್ನು ಈಗಲೇ ಹೊಸಕಿ ಹಾಕದಿದ್ದರೆ ನಾಳೆ ಕರಾವಳಿಯಲ್ಲಿಯೇ ಗೋರಿಯನ್ನು ಆರಾಧಿಸುವ ಸೂಫಿಗಳನ್ನು ಅಟ್ಟಾಡಿಸಿ ಹೊಡೆದರೆ ಆಶ್ಚರ್ಯವಿಲ್ಲ. ಹಾಗೆಯೇ ಹಿಂದೂ ಗಳ ಮಧ್ಯೆ ಮೂಲಭೂತವಾದಿತನ ಬೆಳೆಯಲು ಸಾಧ್ಯವಾಗದೆ ಇರುವುದು ನಿಜಕ್ಕೂ ಒಂದು ಆಶಾವಾದವಾಗಿದೆ. ಮಂದಿರ ಅಜೆಂಡಾ ಬದಿಗೆ ಸರಿಸಿ ಅಭಿವೃಧ್ಧಿ ಮಾತು ಮುಂದೆ ಬಂದಿರುವುದು ಒಳ್ಳೆಯದೇ. ಇನ್ನು ಮುಂದೆ ಆಗಬೇಕಿರುವುದು ಲಿಬರಲ್ಸ್ ಗಳ ಮನಪರಿವರ್ತನೆ. ಅವರುಗಳು ಹಿಂದೂ ಲಿಬರಲ್ಸ್ ಗಳನ್ನೂ ಪೋಷಿಸಿದಂತೆಯೇ ಮುಸ್ಲಿಂ ಲಿಬರಲ್ಸ್ ಗಳನ್ನೂ ಪೋಷಿಸುವುದಲ್ಲದೆ ಮುಸ್ಲಿಂ ಮೂಲಭೂತವಾದಿಗಳನ್ನು ತೀವ್ರವಾಗಿ ಖಂಡಿಸಲು ಎಂದು ಧೈರ್ಯ ತೋರುತ್ತಾರೋ ಅಂದಿಗೆ ಅವರು ನಿಜವಾದ ಲಿಬರಲ್ಸ್ ಆಗುತ್ತಾರೆ. ಇಲ್ಲದಿದ್ದರೆ ಇನ್ನೊಬ್ಬ ಅಮಿನ್ ಮಟ್ಟು ಆಗುತ್ತಾರೆ.

   Reply
 4. ಮೋಹನ್

  ಆನಂದ ಪ್ರಸಾದರಿಗಾದ ಜ್ಞಾನೋದಯ ವರ್ತಮಾನ್ದ ತಂಡದಲ್ಲಿ ಎಲ್ಲರಿಗೂ ಆದರೆ ಮುಸ್ಲಿಮರನ್ನು ಹಠಮಾರಿ ಮಗುವನ್ನು ಮುದ್ದಿನಿಂದ ಹಾಳು ಮಾಡುತ್ತಿರುವುದು ತಪ್ಪುತ್ತದೆಯೇನೋ? ತಾವು ನ್ಯೂಟ್ರಲ್ ಎಂದು ತೋರಿಸಿಕೊಳ್ಳಲು ಮುಸ್ಲಿಮರನ್ನು ಓಲೈಸುವುದು ಹಿಂದೂಗಳನ್ನು ದೂಷಿಸುವುದು ಬಿಟ್ಟು ತಪ್ಪನ್ನು ತಪ್ಪೆಂದು ನಿಷ್ಠುರವಾಗಿ ಹೇಳಿದಾಗ ಮಾತ್ರ ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಮುದ್ದಿನಿಂದ ಮಗು ಹಾಳಾಗುತ್ತದೆ. ಭಾರತದಲ್ಲಿ ಅನೇಕ ಮತಗಳು ಹುಟ್ಟಿ ಜೊತೆಯಾಗಿ ನಡೆದಿವೆ, ಅದೇಕೆ ಮುಸ್ಲಿಮರು ಮಾತ್ರ ಹೀಗಾಗುತ್ತಿದ್ದಾರೆನ್ನುವುದಕ್ಕೆ ಜಾಗತಿಕ ಸಾಕ್ಷಿಯಿದೆ. ಈಗಲಾದರೂ ನಿಮ್ಮತಂಡ ಎಚ್ಚೆತ್ತುಕೊಳ್ಳುತ್ತದೆಯೆ?

  Reply
  1. ಮಗು

   ವ್ಹಾ ಮೋಹನ್ ರವರೇ, ಎಂತಹ ಉದಾಹರಣೆ!!!! ಇಲ್ಲಿ ಮಗು ಯಾರು, ಮುದ್ದು ಜಾಸ್ತಿ ಮಾಡುವುದು ಬಿಡಿ ಕನಿಷ್ಟ ಮುದ್ದು ಮಾಡಿದವರು ಯಾರು ಎಂದು ಇತಿಹಾಸವನ್ನು ಪೋಷಕನ ಕಣ್ಣಿನಿಂದ ಓದಿದರೆ ತಿಳಿಯುವುದು. ಅಂದ ಹಾಗೆ ಮಗುವಿಗೆ ಹಠಮಾರಿಯಾಗುವುದಕ್ಕೆ ಹಲಾವಾರು ಕಾರಣಗಳಿವೆ. ಮೊದಲ ಕಾರಣ ಅದರ ಪೋಷಕರ ವರ್ತನೆ. ಪೋಷಕರು ತಮ್ಮ ಮಕ್ಕಳನ್ನು ಅರ್ಥಮಾಡಿಕೊಳ್ಳುವುದಕ್ಕೆ ಎಡವುತ್ತಾರೋ, ಅದರ ನ್ಯಾಯಸಮ್ಮತ ಬೇಕುಬೇಡಗಳಿಗೆ ಸ್ಪಂದಿಸಲು ವಿಫಲರಾಗುತ್ತಾರೋ ಆಗ ಸೌಮ್ಯವಾಗಿರುವ ಮಗುವಿನಲ್ಲೂ ಹಠಮಾರಿತನ ಹೆಚ್ಚಾಗುತ್ತದೆ. ಮಮತೆಯ ಭಾಷೆ ಮಾತ್ರ ಅರ್ಥಮಾಡಿಕೊಳ್ಳುತ್ತಿದ್ದ ಆ ಮುಗ್ದ ಮಗು ಪೋಷಕರಿಂದ ಕೋಪದ, ಸಿಡುಕಿನ ಭಾಷೆಯನ್ನು ಕಲಿಯುತ್ತದೆ. ಇತ್ತೀಚೀಗೆ ನಾ ಕಂಡ ಪೋಷಕರ ಕೆಟ್ಟ ಚಾಳಿ ಎಂದರೆ ಎಲ್ಲಾದಕ್ಕೂ ಅವರು ಮಗುವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಾರೆ ವಿನಹ ತಮ್ಮ ಲೋಪದೋಷಗಳನ್ನು ಆವಲೋಕನ ನಡೆಸುವ ಗೋಜಿಗೆ ಹೋಗಲ್ಲ.

   Reply
 5. shahid

  ದಿನೇಶ್ ಅವಿೂನ್ ಮಟ್ಟುರವರಿಗೆ ನೀವು ಕೇಳಿರುವ ಪ್ರಶ್ನೆ `ಯಾರ ಜೊತೆ ಸಿದ್ಧಾಂತದ ಮಡಿವಂತಿಕೆ ಬಿಡಬೇಕು?’ ಎಂಬ ಲೇಖನ ಓದಿದೆ.
  ಓರ್ವ ವಿದ್ಯಾರ್ಥಿಯಾಗಿ ನನ್ನ ದೃಷ್ಟಿಯಲ್ಲಿ ವಿವಿಧ ವಿಚಾರಧಾರೆಯ, ಸಿದ್ಧಾಂತದ ಜನರು ಮಡಿವಂತಿಕೆ ಬಿಟ್ಟು ವೇದಿಕೆ ಹಂಚಿ ಪರಸ್ಪರ ವಿಚಾರ ವಿನಿಮಯ ನಡೆಸಿದಾಗಲೇ ವೈಚಾರಿಕ ಅಸ್ಪ್ರಶ್ಯತೆ ತೊಲಗುವುದು. ಪರಸ್ಪರ ವಿಚಾರ ವಿನಿಮಯವಾದಾಗಲೇ ತಿಳುವಳಿಕೆ, ನಂಬಿಕೆ ಮೂಡಲು ಸಾಧ್ಯ. ಮುಸ್ಲಿಮ್ ಲೇಖಕರ ಸಂಘವು ವಿವಿಧ ನಂಬಿಕೆಯ, ವಿಚಾರಧಾರೆಯ ಜನರನ್ನು ಲೇಖಕರ ಸಂಘದ ಕಾರ್ಯಕ್ರಮಕ್ಕೆ ಕರೆದು ವಿಚಾರ ಮಂಡನೆಗೆ ಅವಕಾಶ ಕಲ್ಪಿಸಿರುವುದು ಅವರ ಹೃದಯ ವೈಶಾಲ್ಯತೆಗೆ ಹಿಡಿದ ಕನ್ನಡಿಯಾಗಿದೆ. ಪತ್ರಕರ್ತರು ಸಂಶಯದ ದೃಷ್ಟಿಯಿಂದ ನೋಡಬೇಕೆಂದಿಲ್ಲ.
  ನೀವು ಪ್ರಗತಿಪರರೆಂದು ಹೆಸರಿಸಿದವರು ಮುಸ್ಲಿಮ್ ಸಮುದಾಯದ ಏಳಿಗೆಗೆ ಯಾವ ಕೊಡುಗೆ ನೀಡಿದ್ದಾರೆ?. ಎಷ್ಟು ಮುಸ್ಲಿಮ್ ಬರಹಗಾರರನ್ನು ತಯಾರಿಸಿದ್ದಾರೆ?. ಮುಸ್ಲಿಮ್ ಮಹಿಳೆಯರ ಶೈಕ್ಷಣಿಕ ಉನ್ನತಿಗೆ ನೀಡಿದ ಸಂಭಾವಣೆ ಏನು? ಕೆಲವು ದಶಕಗಳ ಹಿಂದೆ ಮುಸ್ಲಿಮ್ ಮಹಿಳೆಯರು ಮನೆಯ ಮೂರು ಗೋಡೆಗಳ ಒಳಗೆ ಬಂಧಿಸಲ್ಪಟ್ಟಿದ್ದ ಕಾಲದಲ್ಲಿ ನೀವು ಸೂಚಿಸಿದ ಮೂಲಭೂತ ಸಂಘಟನೆ ಶೈಕ್ಷಣಿಕ ಸಂಸ್ಥೆಗಳನ್ನು ತೆರೆದಾಗ ಮುಸ್ಲಿಮ್ ಸಮುದಾಯದಲ್ಲಿ ನೂರಾರು ಸಾಹಿತಿಗಳು, ಕವಿಗಳು, ಲೇಖಕರು, ವೈದ್ಯರು ಹುಟ್ಟಿದರು. ಅವರು ಇಂದು ಸಮಾಜದ ಬೇರೆ ಬೇರೆ ಸ್ಥಳಗಳಲ್ಲಿ ಇಂದು ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಸಮುದಾಯದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಬೆಳವಣಿಗೆಯಲ್ಲಿ ಅಹರ್ನಿಶಿ ದುಡಿಯುತ್ತಿದ್ದಾರೆ. ಮುಸ್ಲಿಮ್ ಮೂಲಭೂತವಾದಿಗಳಿಂದ ಸಮಾಜಕ್ಕೆ ಒಳಿತಾಗಿದೆಯೆಂದೇ ನನ್ನ ಭಾವನೆ. ಈ ರೀತಿ ಸಮಾಜ ಕಲ್ಯಾಣದಲ್ಲಿ ತೊಡಗಿಸಿಕೊಂಡವರನ್ನು ಕೋಮುವಾದಿಗಳೆಂದೂ, ಮೂಲಭೂತವಾದಿಗಳೆಂದೂ ಚಿತ್ರಿಸುವುದು ಯಾವ ನ್ಯಾಯ!

  Reply
 6. anamika@gmail.com

  ಈ ನವೀನ್ ಸೂರಿಂಜೆ ಎಂಬ ಆಸಾಮಿ ಬಲು ಕಿಲಾಡಿ ಕಣ್ರಿ. ತಾನು ಫೇಮಸ್ಸು ಆಗಲಿಕ್ಕೆ ಚರ್ಚೆಯಲ್ಲಿರುವುದಕ್ಕೆ ಹೀಗೆಲ್ಲ ಪ್ರಗತಿಪರ ವೆಂಬ ವಾದವನ್ನು ಮಂಡಿಸುತ್ತ ಮತ್ತೊಂದೆಡೆ ಮುಸ್ಲಿಮ್ ಸಮುದಾಯದ ಪ್ರಗತಿಯನ್ನು ಸಹಿಸದ ವ್ಯಕ್ತಿ. ತಾನು ಗುರುವೆಂದು ನಂಬಿದವರನ್ನೇ ಕಟಕಟೆಯಲ್ಲಿ ನಿಲ್ಲಿಸಿ ತಾನು ಒಬ್ಬ ಮಹಾನ್ ಚಿಂತಕ, ಬರಹಗಾರನೆಂದು ಬಿಂಬಿಸಿಕೊಳ್ಳಲು ನೋಡುತ್ತಿದ್ದಾರೆ. ಇವರ ವಿಷಯ ಕುರಿತಂತೆ ಚರ್ಚೆ ಇಲ್ಲಿಗೆ ನಿಲ್ಲಿಸಿದರೆ ಒಳ್ಳೆಯದು. ಸುಮ್ಮನೆ ಈತನ ವರ್ಚಸ್ಸು ಬೆಳಯುವುದಕ್ಕೆ ನಾವೇ ಕಾರಣರಾಗುವುದು ಬೇಡ.

  Reply
 7. deepak

  ಡಾ. ಸಿದ್ದಲಿಂಗಯ್ಯ ಅವರು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆಗೊಂಡದ್ದೇ ತಡ ಅವರ ಲೇಖನಿ ಹರಿತ ಕಳೆದುಕೊಂಡಿದೆ ಎಂಬುದು ನನ್ನ ಅಭಿಪ್ರಾಯ. ಇದ್ಯಾಕೇ ಹೀಗಾಯ್ತು? ಒಂದೋ ಸಮಾಜ ಸುಧಾರಣೆಯಾಗಿರಬೇಕು. ಇಲ್ಲದಿದ್ದಲ್ಲಿ ಅವರು ಸುಧಾರಣೆಯಾಗಿರಬೇಕು!!! ನಾನು ಕಂಡಾಗೆ ಸಮಾಜ ಅಂತೂ ಸುಧಾರಿಸಿಲ್ಲ. ಅವರು………..!!!??? ಗೊತ್ತಿಲ್ಲ. ಹಾಗೆಯೇ ದಿನೇಶ್ ಅಮೀನಮಟ್ಟು ಕೂಡ. ಇದೇ ಯಕ್ಷ ಪ್ರಶ್ನೆಯಾಗಿ ಕಾಡ್ತಾ ಇದೆ. ಆದ್ರೆ ನೀವು ಮಾತ್ರ ಹಾಗ್ಬಾಬೇಡಿ…!!!

  Reply
 8. Shameera Jahan, Mangalore

  ಸಂಶೋಧನಾತ್ಮಕ ಅಧ್ಯಯನದ ಮೂಲಕ ವಿಷಯವನ್ನು ಗ್ರಹಿಸುವವರನ್ನು ಪ್ರಗತಿಪರ ಚಿಂತಕರೆಂದು ಕರೆಯಲಾಗುತ್ತದೆ. ಈ ನಿಟ್ಟಿನಲ್ಲಿ ಜಮಾತೆ ಇಸ್ಲಾಮಿ ಹಿಂದ್ ಪ್ರಗತಿಪರ ಚಿಂತಕರ ಗುಂಪು ಎಂಬುದರಲ್ಲಿ ಸಂದೇಹವಿಲ್ಲ. ಮುಸ್ಲಿಮ್ ಹೆಣ್ಣು ಮಕ್ಕಳಿಗೆ ಶಿಕ್ಷಣ ನಿಷಿಧ್ಧ ಎಂಬಷ್ಟರ ಮಟ್ಟಿಗೆ ಸಮುದಾಯ ತಲುಪಿದ್ದಾಗ, ಮೈಮುಚ್ಚುವ ಉಡುಗೆ ಶಿಕ್ಷಣಕ್ಕೆ ತೊಡಕಾಗಿ ಮಾರ್ಪಟ್ಟಾಗ, ಧಾರ್ಮಿಕ ಪ್ರವಚನ ಮತ್ತು ಮಸೀದಿ ಪ್ರವೇಶಗಳಿಂದ ಮುಸ್ಲಿಮ್ ಮಹಿಳೆಯರನ್ನು ತಡೆದಾಗ, ಅಂಧವಿಶ್ವಾಸ ಮೂಢನಂಬಿಕೆಗಳಿಗೆ ಸಮುದಾಯ ಬಲಿಯಾದಾಗ, ಸುಮಾರು 5 ದಶಕಗಳ ಹಿಂದೆ ಪ್ರಥಮ ಬಾರಿಗೆ ಪವಿತ್ರ ಖುರಾನ್ ಕನ್ನಡ ಅನುವಾದವನ್ನು ಪ್ರಕಟಿಸಿ ಮಹಿಳೆಯರಿಗೆ ಸ್ವಾತಂತ್ರ್ಯ ಸಮಾನತೆಯನ್ನು ಕಲಿಸಿಕೊಟ್ಟು ನಾಲ್ಕು ಗೋಡೆಯ ಮಧ್ಯೆ ಬಂಧಿಯಾಗಿದ್ದ ಮುಸ್ಲಿಮ್ ಮಹಿಳೆಯರನ್ನು ಹೊರತಂದು ಪಂಡಿತಳ ಸ್ಥಾನಕ್ಕೆ ಏರಿಸಿದ ಕೀರ್ತಿ ಜಮಾತೆ ಇಸ್ಲಾಮಿ ಹಿಂದ್ ಸಂಘಟೆನೆಗೆ ಸಲ್ಲಬೇಕು. ಇಂದು ಮುಸ್ಲಿಮ್ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲು ಮಿಂಚುತ್ತಿದ್ದಾರೆ. ಪ್ರಜಾಸತ್ತೆ ಮತ್ತು ಧರ್ಮ ಒಂದು ನಾಣ್ಯದ ಎರಡು ಮುಖಗಳು ಎಂದು ಪ್ರತಿಪಾದಿಸುವ ಈ ಸಂಘಟನೆಯನ್ನು ಮೂಲಭೂತವಾದಿ ಸಂಘಟನೆ ಎಂದು ಕರೆಯುದಾದರೆ ಪ್ರಜಾಸತ್ತೆಯನ್ನು ಮೂಲಭೂತವಾದ ಎಂದು ಒಪ್ಪಿಕೊಳ್ಳಬೇಕಾಗುತ್ತದೆ. ಮೂಢನಂಬಿಕೆ, ಕಂದಾಚಾರ ದುಂದುವೆಚ್ಚಗಳಿಂದ ಧರ್ಮವನ್ನು ಬೇರ್ಪಡಿಸಿ ಧರ್ಮವೆಂದರೆ ಸರ್ವ ಜನರ ಹಿತಾಕಾಂಕ್ಷೆ, ದೇಶದ ರಾಷ್ಟ್ರದ ಹಿತವನ್ನು ಬಯಸುವುದು ಎಂದು ಪ್ರತಿಪಾದಿಸುವ ಜಮಾತೆ ಇಸ್ಲಾಮಿ ಹಿಂದ್ ಜಾತಿ, ಮತ, ಬೇಧ ಇಲ್ಲದೆ ಅನಾಥರ, ನಿರ್ಗತಿಕರ, ದುರ್ಬಲರ, ಶೋಷಿತರ, ದಮನಿತರ, ಹಕ್ಕುವಂಚಿತರ, ಅನ್ಯಾಯಕ್ಕೊಳಗಾದವರ ಪರವಾಗಿ ಹೋರಾಡುತ್ತಿದೆ. ಇದಕ್ಕಿಂತ ದೊಡ್ಡ ದೇಶಪ್ರೇಮ ಬೇರೆ ಯಾವುದು? ಒಳಿತು-ಕೆಡುಕು ಜ್ಞಾನ-ಅಜ್ಞಾನದ ವ್ಯತ್ಯಾಸವನ್ನು ತಿಳಿಯದೆ ಮಿತಿಮೇರೆಗಳಿಲ್ಲದ ಸ್ವಾತಂತ್ರ್ಯವನ್ನು ಬಯಸುವ ಪಾಶ್ಚಾತ್ಯ ಸಾಮ್ರಾಜ್ಯ ಶಾಹಿಗಳು ಇಸ್ಲಾಮ್ ಧರ್ಮದ ಮೇಲೆ ಹೊರಿಸುವ ಆರೋಪವಾಗಿದೆ ‘ಮೂಲಭೂತವಾದ’ ಎಂಬುದು. ಪ್ರಜಾಸತ್ತೆ ಇಸ್ಲಾಮಿನ ಬುನಾದಿಯಾಗಿದ್ದರೆ ಸರ್ವಾಧಿಕಾರವು ಬಂಡವಾಳ ಶಾಹಿತ್ವದ ಬುನಾದಿ. ಇಂದು ನಮ್ಮಲ್ಲಿಯು ಮಿತಿಮೇರೆಗಳಿಲ್ಲದ ಅತಿಯಾದ ಸ್ವಾತಂತ್ರ್ಯವನ್ನು ಬಯಸುವವರೇ ಜಮಾತೆ ಇಸ್ಲಾಮಿ ಹಿಂದನ್ನು ‘ಮೂಲಭೂತವಾದಿ’ ಎಂದು ಆರೋಪಿಸುತ್ತಿದ್ದಾರೆ. ಪ್ರಗತಿಪರರೆಂದು ಹೇಳಿಕೊಳ್ಳುವವರು ಪ್ರಜಾಸತ್ತೆಯ ವಿರೋಧಿಗಳಾಗಿದ್ದಾರೊ ಎಂಬ ಅನುಮಾನ ಮೂಡುತ್ತಿದೆ.

  Reply
 9. Ahamed

  ಜಾಗತೀಕರಣದ ಯುಗ, ಎಲ್ಲರನ್ನೂ ಹಣಕಾಸು ಸರಕಿನೊಳಗೆ ಸಿಕ್ಕಿಸಲು ಕ್ರಿಯಾ ಯೋಜನೆ ಸಿದ್ಧಪಡಿಸುತ್ತದೆ ಮಾತ್ರವಲ್ಲ ಬದುಕೇ ಹಣಸಂಪಾದನೆ ಎಂಬ ನಿಯಮಾವಳಿಯೊಳಗೆ ಕೂಡಿಸುತ್ತದೆ. ಹಾಗಾಗಿ ಅಸ್ಮಿತೆಯ ರಾಜಕಾರಣ ಮಾನವನ ಹಂದರದೊಳಗೆ ಸಂಕುಚಿತ ನೆಲೆಗಟ್ಟಿನಲ್ಲಿ ಯೋಚಿಸುವಂತೆ ಮಾಡುತ್ತದೆ. ಹೀಗಾಗಿ ಕಾಲದ ಸವೆತದಲ್ಲಿ ಸಮಾಜವಾದಿ ಸಿದ್ಧಾಂತಗಳು ಭಾಷಣ, ಲೇಕನ ಸಿದ್ಧಾಂತವಾಗಿ ಮಾರ್ಪಟ್ಟು ಕಡೆಯಲ್ಲಿ ವೈಯುಕ್ತಿಕ ಸಿದ್ದಾಂತಗಳಾಗಿ ಸಾಮಾನ್ಯೀಕರಣಗೊಳ್ಳುತ್ತದೆ.
  ಆ ಭಾಷಣ, ಲೇಖನಗಳನ್ನೇ ಆದರ್ಷ ಎನಿಸಿಕೊಂಡವರಿಗೆ ನೆನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು ಇವರು ಬಾಯಿ ಬಿಟ್ಟೊಡನೆ ಅವರ ಬಾಯಿ ಕಟ್ಟಿತು ಎಂದಿದ್ದು ಆ ಜನಕ್ಕೆ ಬೇರೆಯದೇ ಅರ್ಥ ಈಗಿನವರಿಗೆ ಬೇರೆಯದೇ ಅರ್ಥ.
  ಬರಗೂರು, ಸಿದ್ದಲಿಂಗಯ್ಯ, ಅಮೀನಮಟ್ಟು ಇವರೆಲ್ಲರೂ ಧರ್ಮರಹಿತ ವ್ಯವಸ್ಥೆ ಬೇಕೆಂದು ಬಯಸುವವರಿಗೆ ನಿಜವಾಗಿಯೂ ಪ್ರೇರಣೆಯಾಗುತ್ತಾರೆ. ಕಾಲದಜೊತೆ ರಾಜಿಯಾಗುವ ಪ್ರೇರಕರ ಕುರಿತು ಬಹಿರಂಗವಾಗಿ ಕಚ್ಚಾಡುವ ಅಗತ್ಯ ಇಲ್ಲ. ಅವರ ಪ್ರೇರಣಾ ಸಾಹಿತ್ಯ ಅವರಿಗೆ ಉಪಯೋಗವಾಗಲಾರದು ಇತರರಿಗಂತೂ ಇದೆ. ಬೇರ್ಡೆ ಟಿ.ವಿ.ನೋಡಲೇ ಇಲ್ಲ, ಕೊಡಾಕ್ ತನ್ನ ಚಿತ್ರ ತಾನು ತೆಗೆಯಲೇ ಇಲ್ಲ, ಫಿಯೆಟ್ 10ಕಿ.ಮಿ ಕಾರಿನಲ್ಲಿ ಓಡಾಡಲೇ ಇಲ್ಲ.
  ಮಾನವ ಪ್ರೇಮದ ತುಡಿತ ಅವರೆಲ್ಲರಿಗೂ ಖಂಡಿತ ಇದೆ. ಬ್ರಮನಿರಸನರಾಗುವುದು ಬೇಡ. ಜನರ ಜೊತೆ ಕೆಲಸಮಾಡುವ ಸಾಕು.

  Reply
 10. mushira

  ಸಹವಾಸ ಗುಣ, ಸಹವಾಸ ದೋಷ ಬೇರೆ ಬೇರೆ ಅಲ್ಲವೇ?
  ಜಗತ್ತಿನ ಇತಿಹಾಸದಲ್ಲಿ ಅದೆಷ್ಟೋ ವ್ಯಕ್ತಿತ್ವಗಳು ಸಾಂದರ್ಭಿಕವಾದ ಸನ್ನಿವೇಶದಿಂದಲೋ ಅಥವಾ ಸಹವಾಸದಿಂದಲೋ ಬದಲಾದದ್ದು ನಾವು ಕಂಡಿz್ದÉೀವೆ. ಆದರೂ ಈ ಸತ್ಯವನ್ನು ಅರಗಿಸಲು ಸಾಧ್ಯವಿಲ್ಲದ ಕೆಲವು ಪೂರ್ವಾಗ್ರಹ ಪೀಡಿತ ಮನೋಧರ್ಮಗಳು ತಾನಿಚ್ಛಿಸಿದಂತೆ ತನ್ನ ಸಿದ್ಧಾಂತ, ತತ್ವಾದರ್ಶ, ಧರ್ಮ, ಜಾತೀಯತೆ ಇವುಗಳನ್ನು ಸಂಘರ್ಷಿಸುವ ವಿಚಾರಗಳನ್ನು ಒಪ್ಪದಿರುವುದಕ್ಕೆ ಉದಾಹರಣೆ, ಇತ್ತೀಚಿನ ಮುಸ್ಲಿಮ್ ಲೇಖಕರ ಸಂಘದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಿನೇಶ್ ಅವಿೂನ್ ಮಟ್ಟುರವರ ದಿಕ್ಸೂಚಿ ಭಾಷಣಕ್ಕೆ ಬಳಿಕ ಕಂಡು ಬಂದ ಪ್ರತಿಕ್ರಿಯೆಗಳು.
  ಹಲವು ವರ್ಷಗಳ ಕಾಲ ಎಡಪಂಥೀಯ ವಿಚಾರಧಾರೆ ಅಪ್ಪಿ ಒಪ್ಪಿಕೊಂಡು ಬಾಳನ್ನೆ¯್ಲÁ ಅದರಲ್ಲಿ ಸವೆಸಬೇಕೆಂದು ಸ್ವತಃ ತೀರ್ಮಾನಿಸಿದವನು ನಾನು. ಚೇಗುವಾರ, ಭಗತ್‍ಸಿಂಗ್, ವಿಲಿಯಮ್ಸ್‍ರಿಂದ ಮಾತ್ರವಲ್ಲ, ಬಲ್ಲಿದ, ಬಲಾಢ್ಯನ ನಡುವಿನ ಅಂತರದ ನಿರ್ಮೂಲನವೇ ಧ್ಯೇಯವೆಂದುಕೊಂಡವನು. ಮಾಕ್ರ್ಸ್ ಪಂಚಪ್ರಾಣ. ಮೈಥುನಕ್ಕೆ ಸಂಬಂಧಿಸಿದಾಗ ಫ್ರಾಯ್ಡನ್ನು ಗುರುವಾಗಿಸುವವನು. ಯಾವಾಗ ಮುಕ್ತ ಲೈಂಗಿಕತೆಯನ್ನು ಪ್ರಶ್ನಿಸುವ ಮನಸ್ಥಿತಿ ಉಂಟಾಯಿತೋ ಕೆಂಪುದೀಪಕ್ಕೂ, ಮದ್ಯಪಾನಕ್ಕೂ, ಸಮಾಜವಾದದಲ್ಲಿ ಅವಕಾಶವಿದೆಯೆಂದು ಕಂಡುಬಂತೋ ಸಹಜವಾಗಿ ಮನಸ್ಸು ವಿರೋಧಿಸ ತೊಡಗಿತು.
  ಕಾರಣ ಸಹವಾಸ ಗುಣ, ಈ ಹಿಂದಿನ ಸಹವಾಸದಲ್ಲಿ ಪರಸ್ಪರ ಒಪ್ಪಿಗೆಯ ವ್ಯಭಿಚಾರವೂ ತಪ್ಪಲ್ಲವೆಂದೂ, ಇದ್ದರೆ ಹೊಸದಾಗಿ ಬೆರೆಯಲಾದ ಸಹವಾಸದಿಂದ ಆಚಾರ, ಅನಾಚಾರ, ವ್ಯಭಿಚಾರ, ಅತ್ಯಾಚಾರ ಹೀಗೆ ಎಲ್ಲದ್ದಕ್ಕೂ ಬೇರೆ ಬೇರೆ ವ್ಯಾಖ್ಯಾನ ದೊರೆಯಿತು. ಇದನ್ನು ತಪ್ಪೆನ್ನಬಹುದೇ?
  ಹಲವು ವರ್ಷಗಳಿಂದ ಒಂದು ಮುತ್ತು ಕಾಲಡಿಯಲ್ಲಿ ಚಿಪ್ಪೆಂದು ತುಳಿಯುತ್ತಿದ್ದ ಒಬ್ಬ ವ್ಯಕ್ತಿಗೆ ಅದು ಮುತ್ತೆಂದು ಮನವರಿಕೆ ಮಾಡಿದಾಗ ಎತ್ತಿ ಒರಿಸಿ, ತೊಳೆದು ಮುತ್ತಿಕ್ಕುತ್ತಾನೆ. ಸಹಜವಾಗಿಯೇ ಸಹವಾಸ ಗುಣಗಳು ವರ್ಗಾವಣೆಯಾಗಿ ಅದರ ಪ್ರಭಾವ ಬೀರಿ ಆ ಮೂಲಕ ಲೇಖನ, ವ್ಯಕ್ತಿತ್ವ, ಚಾರಿತ್ರ್ಯ ಬದಲಾವಣೆ ರೂಪದ¯್ಲÉೂೀ ಕಂಡುಬಂದಾಗ ಇಷ್ಟಪಟ್ಟ ವ್ಯಕ್ತಿ ಪರಮ ದ್ವೇಷಕ್ಕೀಡಾಗುವುದು ಅಸೂಯಾ ಧರ್ಮವೇ ಹೊರತು ಮಾನವ ಧರ್ಮವೆನ್ನುವಂತಿಲ್ಲ.
  1. ಬದಲಾವಣೆ ನಿರಂತರ ಪ್ರಕ್ರಿಯೆ, ಬದಲಾವಣೆಗೆ ಒಗ್ಗಿಕೊಳ್ಳದವನು ಮೂಲಭೂತವಾದಿಯೆನ್ನುವವರು ಮೂಲಭೂತವಾದಿಯು ನಾಸ್ತಿಕತೆಗೆ ಸಾಗಿ ಬದಲಾವಣೆಯಾಗುವುದನ್ನು ಸ್ವಾಗತಿಸುವುದು ವಿಕಾಸವೆನ್ನಬಹುದೇ?
  2. ವ್ಯಕ್ತಿ ನಿರಂತರ ಹೀಗೆಯೇ ಇರಬೇಕು. ಅವನಲ್ಲಿ ಸಹವಾಸ ದೋಷ, ಗುಣಗಳು ವರ್ಗಾವಣೆಯಾಗಬಾರದೆಂಬುದು ಹಠಮಾರಿತನವಲ್ಲವೇ?
  3. ಎಡಪಂಥೀಯ ಬಲಪಂಥೀಯನಾಗಬಾರದೇ?
  4. ವಿಚಾರವಾದದಲ್ಲಿ ಸ್ಥಿರವಾಗಿ ಇರಲೇಬೇಕೇ? ಎಂದಾದರೂ ಆತನಲ್ಲಿ ಮನಪರಿವರ್ತನೆಯಾದರೆ ಆತ ಮೂಲಭೂತವಾದಿಯೆಂಬ ಹಣೆಪಟ್ಟಿ ಇಲ್ಲವೇ ಪ್ರಮಾಣ ಪತ್ರ್ರ ನೀಡಲು ಅರ್ಹರು ಯಾರು?
  5. ಗೋಳ್ವಾಲ್ಕರ್, ಮೌದೂದಿ, ಮಾಕ್ರ್ಸ್ ಇವರ ವಿಚಾರಧಾರೆಗಳು ಸಮಾಜದಲ್ಲಿ ಪ್ರಭಾವ ಬೀರಿದರೆ, ಮಾಕ್ರ್ಸ್ ಆಗಬಹುದು, ಮೌದೂದಿ ಬೇಡ, ಮೌದೂದಿ ಆಗಬಹುದು, ಗೋಳ್ವಾಲ್ಕರ್ ಬೇಡ ಎನ್ನಬಹುದೇ?
  6.ಪ್ರಜಾಪ್ರಭುತ್ವದಲ್ಲಿ ಮಾಕ್ರ್ಸ್‍ನ ಸಿದ್ಧಾಂತ ಜಾರಿಗೆ ತರಲು ಪ್ರಯತ್ನಿಸಬಹುದು. ಆಗ ಆತ ಎಡಪಂಥೀಯ, ಪ್ರಜಾಪ್ರಭುತ್ವದಲ್ಲಿ ಗೋಳ್ವಾಲ್ಕರ್ ಸಿದ್ಧಾಂತ ಜಾರಿಗೆ ಬರಲು ಸಂಘಟಿತರಾಗಬಹುದು? ಆಗ ಆತ ಬಲಪಂಥೀಯ, ಪ್ರಜಾಪ್ರಭುತ್ವದಲ್ಲಿ ಪ್ರವಾದಿ ಮುಹಮ್ಮದ್‍ರ(ಸ) ತತ್ವಾದರ್ಶ ಜಾರಿಗೆ ತರಲು ಪ್ರಯತ್ನಿಸಿದರೆ ಆತ ಮೂಲಭೂತವಾದಿಯೆಂದು ಗುರುತಿಸಬೇಕೇ?
  7. ಒಂದು ಸಾಹಿತ್ಯವೋ, ದರ್ಶನವೋ ಒಬ್ಬನ ಮೇಲೆ ಹಲವಾರು ವರ್ಷ ಪ್ರಭಾವ ಬೀರಿದರೆ, ಆ ಬಳಿಕ ಆತನಿಗೆ ಅದಕ್ಕಿಂತಲೂ ಉತ್ತಮವಾದ ದರ್ಶನ ದೊರಕಿದರೆ ಹಿಂದಿನದಕ್ಕೆ ಜೋತು ಬೀಳಬೇಕೇ?
  8. ನ್ಯಾಯವು ತಾನು ವಿರೋಧಿಸುವ ವಿಚಾರಧಾರೆಯ ಜನರ ಪರವಾಗಿದ್ದರೂ ತನ್ನ ಹೈಕಮಾಂಡ್ ಇಲ್ಲವೇ ಪೆÇೀಲಿಟ್ ಬ್ಯೂರೋ ಅದಕ್ಕೆ ಅನುಮತಿಸುವುದಿಲ್ಲವೆಂಬ ಕಾರಣಕ್ಕೆ ನ್ಯಾಯ ವಿರೋಧಿಯಾಗಿ ಮಾರ್ಪಾಡಾಗುವುದು ಮಾನವತಾವಾದಿಯ ಲP್ಷÀಣವೇ?
  – ಸಂಚಾರಿ

  Reply
 11. Abuqutub

  ನವೀನ್ ಸೂರಿಂಜೆ ಮುಸ್ಲಿಂ ಲೇಖಕರ ಸಂಘವನ್ನು ಮತ್ತು ಜಮಾಅತೇ ಇಸ್ಲಾಮಿಯನ್ನು ಜೋಡಿಸುವ ಮೂಲಕ ಮೂಲಭೂತವಾದ ಮತ್ತು ಪ್ರಗತಿ ಪರ ಚಿಂತನೆಯಲ್ಲಿರುವ ನಿಲುವುಗಳನ್ನು ವ್ಯಕ್ತಪಡಿಸಿದ್ದಾರೆ. ಅಭಿವ್ಯಕ್ತ ಸ್ವಾತಂತ್ರ್ಯ ಎಂಬ ನೆಲೆಯಲ್ಲಿ ಸ್ವಾಗತ. ಆದರೆ
  (1) ಒಬ್ಬ ವ್ಯಕ್ತಿ ಮೂಲಭೂತವಾಗಿದ್ದು ಒಂದು ಸಿದ್ಧಾಂತವನ್ನು ಅನುಸರಿಸುವುದು ಅಥವಾ ಒಬ್ಬ ಪ್ರಗತಿಪರ ಸಿದ್ಧಾಂತವನ್ನು ಅನುಸರಿಸುವುದು ಅಥವಾ ದ್ವೇಷ ಮತ್ತು ಹಿಂಸಾತ್ಮಕ ರಹಿತ ಅಥವಾ ಪರವಾದ ಇತರ ಸಿದ್ಧಾಂತಗಳ ಜೊತೆ ಸೈದ್ಧಾಂತಿಕ ವಿಚಾರ ವಿನಿಮಯ ಮಾಡಿಕೊಳ್ಳುವುದು ತಪ್ಪೇ?
  (2) ನವೀನ ಹೇಳುವ ಮೂಲಭೂತ ವಾದಿಗಳು ಪ್ರಗತಿಪರ ಮುಸ್ಲಿಂ ಲೇಖಕರನ್ನು ಹಲವು ಸಭೆಗಳಲ್ಲಿ ಗೌರವಿಸಿದ್ದಾರೆ. (ಅದರ ಪಟ್ಟಿ ಸಂಘಟಕರಲ್ಲಿ ಇದೆ) ಅದು ಸೈದ್ಧಾಂತಿಕ ಭಿನ್ನಾಭಿಪ್ರಾಯದ ಹೊರತಾಗಿಯೂ ಸೌಹಾರ್ದಯುತ ಮತ್ತು ಆತ್ಮೀಯತೆಯ ಸಂಬಂಧವನ್ನು ಬೆಳೆಸಿಕೊಳ್ಳುವುದಿಲ್ಲವೇ? ವಿಚಾರ ವಿನಿಮಯ ಮತ್ತು ಸಿದ್ಧಾಂತ ವಿನಿಮಯಕ್ಕೆ ಇರುವ ಬಾಗಿಲನ್ನು ನವೀನ್ ಮುಚ್ಚುವ ಸಂದೇಶದಿಂದ ಯಾವ ರೀತಿಯ ಸಾಮಾಜಿಕ ಕ್ರಾಂತಿಯನ್ನು ಮಾಡಲು ಹೊರಟಿದ್ದಾರೆ.
  (3) ಧಾರ್ಮಿಕ ಸಿದ್ಧಾಂತಗಳು ಜಾತಿಯಾಧಾರಿತ ಮಡಿವಂತಿಕೆ ಅಸ್ಪøಶ್ಯತೆ ತೋರುವುದನ್ನು ಖಂಡಿಸುವ ಇಂತಹ ಚಿಂತನೆಗಳು ಇದು ಅವರ ಇನ್ನೊಂದು ರೀತಿಯ ವೈಚಾರಿಕ ಮಡಿವಂತಿಕೆಯನ್ನು (ಒಬ್ಬರು ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಕುರಿತ ನಿಲುವು) ಅಸ್ಪøಶ್ಯತೆಯನ್ನು ತೋರಿಸುವುದಲ್ಲವೇ? ಇಲ್ಲಿ ಯಾರೂ ಜಮಾಅತ್, ಅರೆಸ್ಸೆಸ್, ಅಥವಾ ಇತರ ಸಂಘಟಗಳ ಸದಸ್ಯರಾಗವುದಲ್ಲ ಅಲ್ಲವೇ?
  (4) ಪ್ರಗತಿ ಪರ ಲೇಖಕರೆಸಿಕೊಂಡವರ ಕೃತಿಗಳನ್ನು ಇವರು (ಮೂಲಭೂತವಾದಿಗಳು) ಪ್ರಕಟಿಸುವುದಿಲ್ಲ ಎಂದು ಹೇಳುವ ತಾವು ಮೂಲಭೂತವಾದಿಳ ಸಿದ್ಧಾಂತಗಳಿಗೆ ಪ್ರಗತಿಪರರು ಎಷ್ಟು ಅವಕಾಶ, ಉದಾರತೆ ನೀಡಿದ್ದಾರೆ? ಆ ಬಗ್ಗೆ ಯಾಕೆ ಚಕಾರವೆತ್ತುವುದಿಲ್ಲ? ಎಷ್ಟು ಅವರ ಸಾಮಾಜಿಕ ಭಾಷಾ ಕೊಡುಗೆಗಳಿಗೆ ಪ್ರೋತ್ಸಾಹ ನೀಡಿದ್ದಾರೆ?
  ಎಲ್ಲ ಸಂಸ್ಥೆ ಅಥವಾ ಸಂಘಟನೆಗಳಲ್ಲಿ ಒಂದು ಸಿದ್ಧಾಂತವಿದೆ. ಅದು
  “ನಾವು ಹೇಳುವುದನ್ನು ನೀವು ಒಪ್ಪÅವುದಾದರೆ ನೀವು ಹೇಳುವುದನ್ನು ನಾವು ಒಪ್ಪÅತ್ತೇವೆ. ಮತ್ತು ನೀವು ಹೇಳುವುದನ್ನು ಒಪ್ಪ ಬೇಕಾದರೆ ನಾವು ಒಪ್ಪÅವುದನ್ನು ನೀವು ಹೇಳಬೇಕಾಗುತ್ತದೆ. ಆದರೆ ನವೀನ್ ಮತ್ತು ಅವರ ನಿಲುವಿನ ಪ್ರಗತಿಪರರು “ನಾವು ಹೇಳುವುದನ್ನು ಮಾತ್ರ ಒಪ್ಪಬೇಕು” ಎಂಬಂತಿರುತ್ತದೆ. ಒಂದೆಡೆ ವಿರೋಧಿಸುತ್ತಾರೆ ಇನ್ನೊಂದೆಡೆ ಉದಾರತೆಯ ಮಾತಾಡುತ್ತಾರೆ.
  (5) ಪರಸ್ಪರರನ್ನು ಕರೆಯುವುದು ಧರ್ಮ ವಿಸ್ತರಣೆ ಎಂದು ನವೀನ್ ತಾವು ಹೇಳಿದ್ದೀರಿ? ಸಿದ್ಧಾಂತದದ ಪ್ರಚಾರ ಅಪರಾಧವೇ? ಅಥವಾ ಸಂವಿಧಾನ ವಿರೋಧವೇ?
  ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಬೊಬ್ಬಿಡುವ ತಾವು ಒಬ್ಬ ವ್ಯಕ್ತಿ ಅಥವಾ ಸಂಘಟನೆಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಶಯದಿಂದ ನೋಡುವುದಾದರೂ ಯಾಕೆ?
  (6) ನವೀನ್ ಸೂರಿಂಜೆ ತಾವು ಕೇವಲ ಇಂದಿನ ಸಾಮಾನ್ಯ ಪತ್ರಕರ್ತನಲ್ಲಿರುವ (ಆರೋಪ ಜರ್ನಲಿಸಂ) ಮಾತ್ರ ಮಾಡುತ್ತಿರುವುದು ಕಂಡುಬರುತ್ತಿದೆ. ಸಂಕುಚಿತ ದೃಷ್ಟಿಕೋನವನ್ನು ಬಿಟ್ಟು ಉದಾರವಾಗಿ ವಿಶ್ವ ಮಾನವ ಚಿಂತನೆಯೊಂದಿಗೆ ನೋಡಬೇಕಾಗುತ್ತದೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ ವೈಚಾರಿಕ ಮತ್ತು ಸೈದ್ಧಾಂತಿಕ ವಿನಿಮಯವು ಪ್ರಗತಿಪರರರನ್ನು ಕೋಮುವಾದಿಯನ್ನಾಗಿ, ಕೋಮುವಾದಿಯನ್ನು ಪ್ರಗತಿ ಪರನನ್ನಾಗಿ, ನಾಸ್ತಿಕನನ್ನು ಆಸ್ತಿಕನನ್ನಾಗಿ ಮಾಡುತ್ತದೆ. ಅಂತಹ ಪ್ರಕ್ರಿಯೆಗಳನ್ನು ನಾವು ವಿರೋಧಿಸುವುದರ ಮರ್ಮವೇನೆಂದು ತಿಳಿಯುತ್ತಿಲ್ಲ. ನವೀನ್ ಸ್ವಲ್ಪ ಅಟಚಿim ಎouಡಿಚಿಟಿiಟism ನಿಂದ ಹೊರ ಬಂದು ವಾಸ್ತವಿಕ ಅಧ್ಯಯನದೆಡೆಗೆ ಗಮನ ಕೊಟ್ಟರೆ ಕಿರಿಯವನಾಗಿದ್ದೂ ಹಿರಿಯ ಬರಹಗಳನ್ನು ನೀಡಬಹುದು.

  Reply
 12. abuhamida

  activist karyakramadalli vip galinge pratyeka asana meesalirisiddu avara stanamanakkanusaravadare; mahileyarige pratyeka asanavannu meesalirisuvudu moolbhootavada!!!!! bassalli “mundina nalku seetugalu mahileyarige” meesaliduvudoo vivechane!!!!!

  Reply

Leave a Reply

Your email address will not be published.