ಸುದ್ದಿ ಪವಿತ್ರವಾದುದು… : ದಿನೇಶ್ ಅಮಿನ್ ಮಟ್ಟು

”ಟೀಕೆಗೆ ಸ್ವಾತಂತ್ರ್ಯ ಇದೆ, ಸುದ್ದಿ ಮಾತ್ರ ಪವಿತ್ರವಾದುದು.” ಇದು ಪತ್ರಕರ್ತರು ಮೊದಲು ಕಲಿತುಕೊಳ್ಳಬೇಕಾದ ಪಾಠ. ಸಾಮಾನ್ಯವಾಗಿ ನನಗಿಂತ ಕಿರಿಯ ಪತ್ರಕರ್ತರಿಗೆ ಹೇಳುತ್ತಿರುವ ಈ ಮಾತನ್ನೇ ಗೆಳೆಯ ನವೀನ್ ಸೂರಿಂಜೆ ಅವರಿಗೂ ಹೇಳುತ್ತಿದ್ದೇನೆ. naveen-shettyಮಂಗಳೂರಿನ ಮುಸ್ಲಿಮ್ ಲೇಖಕರ ಸಂಘದ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಂಡ ಹಿನ್ನೆಲೆಯಲ್ಲಿ ಬರೆದಿರುವ ಎರಡೂ ಬರವಣಿಗೆಗಳಲ್ಲಿ ಸುದ್ದಿಯನ್ನು ತಿರುಚುವ ತುಂಟತನವನ್ನು ನವೀನ್ ಮಾಡಿದ್ದಾರೆ. ತಮ್ಮ ಮೊದಲ ಪತ್ರಕ್ಕೆ ”ಶಾಂತಿ ಪ್ರಕಾಶನದ ಕಾರ್ಯಕ್ರಮದಲ್ಲಿ ಪಾಲ್ಗೊಂಡ….” ಎಂಬ ತಲೆಬರಹವನ್ನು ಅವರು ಕೊಟ್ಟಿದ್ದಾರೆ. ಆ ಪತ್ರದುದ್ದಕ್ಕೂ ಮುಸ್ಲಿಮ್ ಲೇಖಕರ ಸಂಘದ ಬಗ್ಗೆ ಹೆಚ್ಚೇನೂ ಬರೆಯದೆ, ಉದ್ದಕ್ಕೂ ಜಮಾತೆ ಇಸ್ಲಾಂ ಹಿಂದ್ ಮತ್ತು ಶಾಂತಿ ಪ್ರಕಾಶನದ ವಿರುದ್ಧ ದಾಳಿ ನಡೆಸಿದ್ದಾರೆ.

ನನ್ನ ಪ್ರತಿಕ್ರಿಯೆಯಲ್ಲಿ ”ಮುಸ್ಲಿಮ್ ಲೇಖಕರ ಸಂಘವನ್ನು ಸ್ಥಾಪಿಸಿರುವುದು ಜಮಾತೆ ಇಸ್ಲಾಮ್ ಗೆ ಸೇರಿರದ ಸಿ.ಕೆ.ಹುಸೇನ್ ಎಂಬ ಪತ್ರಕರ್ತ” ಎನ್ನುವುದನ್ನು ಉಲ್ಲೇಖಿಸಿದ್ದೆ. ಕಳೆದ 28 ವರ್ಷಗಳಿಂದ ಅಸ್ತಿತ್ವದಲ್ಲಿರುವ ಮುಸ್ಲಿಮ್ ಲೇಖಕರ ಸಂಘದಲ್ಲಿ ಸುಮಾರು 20 ವರ್ಷಗಳಿಂದ ಪ್ರಧಾನ ಕಾರ್ಯದರ್ಶಿಯಾಗಿರುವ ಉಮರ್ ಅವರೂ ಜಮಾತೆ ಇಸ್ಲಾಮ್ ಸಂಘಟನೆಗೆ ಸೇರಿದವರಲ್ಲ ಎನ್ನುವುದೂ ನವೀನ್‌ಗೆ ಗೊತ್ತು. ಈ ಸತ್ಯವನ್ನು ನಿರಾಕರಿಸಲು ಹೋಗದ ನವೀನ್, ತನ್ನ ಎರಡನೇ ಪ್ರತಿಕ್ರಿಯೆಯಲ್ಲಿಯೂ ಅದೇ ”ತುಂಟತನ”ವನ್ನು ಮುಂದುವರಿಸಿದ್ದಾರೆ. ”ಜಮಾತೆ ಇಸ್ಲಾಂ ಸ್ಥಾಪಿತ ಮುಸ್ಲಿಮ್ ಲೇಖಕರ ಸಂಘದ ಕಾರ್ಯಕ್ರಮದಲ್ಲಿ… ” ಎಂದೇ ಅವರು ತಮ್ಮ ಲೇಖನವನ್ನು ಪ್ರಾರಂಭಿಸುತ್ತಾರೆ. ಅವರ ಎರಡು ಲೇಖನಗಳನ್ನು ಓದಿದವರಿಗೆ ನಾನು ಜಮಾತೆ ಇಸ್ಲಾಂ ಇಲ್ಲವೇ ಶಾಂತಿ ಪ್ರಕಾಶನದ ಕಾರ್ಯಕ್ರಮದಲ್ಲಿ ಭಾಗವಹಿಸಿರಬಹುದೆಂಬ ಸಂಶಯ ಮೂಡಿದರೆ ಆಶ್ಚರ್ಯ ಇಲ್ಲ. ಸುದ್ದಿಯನ್ನು ಅಪವಿತ್ರಗೊಳಿಸಬಾರದು.

ನಾನು ಭಾಗವಹಿಸಿರುವುದು ಮುಸ್ಲಿಮ್ ಲೇಖಕರ ಸಂಘದ ಕಾರ್ಯಕ್ರಮದಲ್ಲಿ. dinesh-amin-mattu”ಜಮಾತೆ ಇಸ್ಲಾಂಗೆ ಸೇರಿರುವ ಹಿದಾಯತ್ ಸೆಂಟರ್ ಕಟ್ಟಡದಲ್ಲಿ ಸಂಘದ ಕಚೇರಿ ಇರುವುದೊಂದೇ ಆ ಸಂಘಟನೆಯ ಜತೆಗೆ ಮುಸ್ಲಿಮ್ ಲೇಖಕರ ಸಂಘದ ಸಂಬಂಧ ಇರುವುದಕ್ಕೆ ನಮಗೆ ಮೇಲ್ನೋಟಕ್ಕೆ ಸಿಗುವ ಪುರಾವೆ” ಎಂದು ನನ್ನ ಪ್ರತಿಕ್ರಿಯೆಯಲ್ಲಿ ಬರೆದಿದ್ದೆ. ನವೀನ್ ತನ್ನ ಎರಡೂ ಬರವಣಿಗೆಗಳಲ್ಲಿಯೂ ಈ “ಅಪವಿತ್ರ ಸಂಬಂಧದ” ಬಗ್ಗೆ ಹೆಚ್ಚುವರಿ ಪುರಾವೆಗಳನ್ನು ಕೊಟ್ಟಿಲ್ಲ. ಹೀಗಿದ್ದರೂ ಈ ಮೂರೂ ಸಂಘಟನೆಗಳು ಒಂದೇ ಎನ್ನುವ ತೀರ್ಮಾನಕ್ಕೆ ಅಂಟಿಕೊಂಡೇ ಅವರು ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಮುಸ್ಲಿಮ್ ಲೇಖಕರ ಸಂಘ ಒಂದು ಮೂಲಭೂತವಾದಿ ಸಂಘಟನೆ ಎನ್ನುವುದನ್ನು ನವೀನ್ ಸೂರಿಂಜೆ ಅವರು ಸಾಬೀತುಪಡಿಸಿದ್ದಲ್ಲಿ ಚರ್ಚೆಯನ್ನು ಮುಂದುವರಿಸುವೆ. ಅಲ್ಲಿಯ ವರೆಗೆ ವಿರಾಮ.

– ದಿನೇಶ್ ಅಮಿನ್ ಮಟ್ಟು

2 thoughts on “ಸುದ್ದಿ ಪವಿತ್ರವಾದುದು… : ದಿನೇಶ್ ಅಮಿನ್ ಮಟ್ಟು

 1. naveen soorinje

  ಪ್ರೀತಿಯ ಗುರುಗಳಾದ ದಿನೇಶ್ ಅಮೀನ್ ಮಟ್ಟುರವರಿಗೆ….
  ಈ ಚರ್ಚೆಗಳು ನನ್ನ ಮತ್ತು ತಮ್ಮ ಮಧ್ಯೆ ನಡೆಯುತ್ತಿರುವ ವೈಯುಕ್ತಿಕ ಚರ್ಚೆಗಳಲ್ಲ. ನಾನು ಕಿರಿಯನಾಗಿದ್ದರೂ ತಾವು ಹಿರಿಯ ಪತ್ರಕರ್ತರಾಗಿದ್ದರೂ ಮಡಿವಂತಿಗೆ ಬಿಟ್ಟು ಸಾರ್ವಜನಿಕ ಹಿತಕ್ಕಾಗಿ ಚರ್ಚೆ ಮಾಡಬೇಕಾದ ವಿಷಯವಾಗಿದೆ. ಈ ಹಿನ್ನಲೆಯಲ್ಲಿ ತಮಗೆ ಪತ್ರ ಬರೆದಿದ್ದೇನೆ. ಮತ್ತು ಆ ಪತ್ರಕ್ಕೆ ತಾವು ಬರೆದ ಉತ್ತರ ಸಮರ್ಪಕವಾಗಿಲ್ಲ ಎಂದು ಪ್ರಮಾಣಿಕವಾಗಿ ಅನಿಸಿದ್ದರಿಂದ ಮತ್ತೆ ಉತ್ತರ ಬರೆದಿದ್ದೇನೆ.
  ತಾವು ಬರೆದ ಉತ್ತರದಲ್ಲಿ ಎತ್ತಿರುವ ಮುಸ್ಲಿಂ ಲೇಖಕರಿಗೆ ಸಿಗುವ ನ್ಯಾಯ, ಮುಸ್ಲಿಂ ಲೇಖಕರ ಸಂಘ ಮತ್ತು ಜಮಾತೆಯ ಸಂಭಂಧ, ಮಡಿವಂತಿಕೆ, ಮಹಿಳಾ ವಿರೋಧಿ ನಿಲುವು, ಸಂಘದ ಸಂವಿದಾನ ಬಗ್ಗೆ ನಾನು ಸಮರ್ಪಕ ಚರ್ಚೆ ನಡೆಸಿಲ್ಲವಾದರೆ ತಾವು ನನ್ನನ್ನು ತಿದ್ದಬೇಕಿತ್ತು… ಅಥವಾ ಗದರಬಹುದಿತ್ತು. ಆದರೆ ನಾನು ನನ್ನ ಲೇಖನದಲ್ಲಿ ಸುದ್ದಿಯನ್ನು ತಿರುಚಿದ್ದೇನೆ ಎಂದಾಗಲೀ, ತುಂಟತನ ಪ್ರದರ್ಶಿಸಿದ್ದೇನೆ ಎಂಬುದನ್ನಾಗಲಿ ನಾನು ಒಪ್ಪಿಕೊಳ್ಳುವುದಿಲ್ಲ.
  ನಾನು 6 ವರ್ಷಗಳಿಂದ ಪತ್ರಿಕಾ ವೃತ್ತಿಯಲ್ಲಿದ್ದು, ಸುದ್ದಿ ಮತ್ತು ಲೇಖನದ ಬಗ್ಗೆ ನನಗೆ ಸ್ಪಷ್ಟತೆ ಇದೆ. ಮತ್ತು ಲೇಖನದೊಳಗಿನ ಸುದ್ದಿಯ ಬಗೆಗೂ ಸ್ಪಷ್ಟತೆ ಇದೆ. ನಾನು ಮೊದಲು ತಮಗೆ ಬರೆದಿದ್ದು ಪತ್ರ. ಅದನ್ನು ನಿಮಗೂ ಮೇಲ್ ಮಾಡಿದ್ದೇನೆ. ಪತ್ರಕ್ಕೆ ತಲೆಬರಹ ಕೊಡುವ ಕ್ರಮ ಇಲ್ಲ. ನಿಮಗೆ ಮಾಡಿರುವ ಮೇಲ್ ಮತ್ತು ವರ್ತಮಾನ ಸಂಪಾದಕ ರವಿಕೃಷ್ನಾ ರೆಡ್ಡಿಯವರಿಗೆ ಕಳುಹಿಸಿರುವ ಕಾಪಿಯಲ್ಲೂ ಪತ್ರಕ್ಕೆ ತಲೆಬರಹ ಹಾಕಿಲ್ಲ. ಆದರೆ ವರ್ತಮಾನ.ಕಾಮ್ ಅಂತರ್ಜಾಲ ಪತ್ರಿಕೆಯಾದ್ದರಿಂದ ತಲೆಬರಹ ಇರಲೆಂಬ ಉದ್ದೇಶದಿಂದ ನನ್ನ ಗಮನಕ್ಕೆ ತಾರದೆ ತಲೆಬರಹ ಹಾಕಿರಬಹುದು…
  ಇಲ್ಲಿ ತಲೆ ಬರಹದ ಬಗ್ಗೆ ಪ್ರಶ್ನೆಯೇ ಅಲ್ಲ. ಅಥವಾ ನೀವು ಅಲ್ಲಿಗೆ ತೆರಳಿರುವುದೂ ಪ್ರಶ್ನೆಯಲ್ಲ. ಇಲ್ಲಿ ಚರ್ಚೆಯಾಗಬೇಕಾಗಿರುವುದು ಮೂಲಭೂತವಾದದ ಬಗ್ಗೆ… ಇದೇ ಮೂಲಭೂತವಾದದ ಮುಂದುವರಿಕೆಯಾದ ಕೋಮುವಾದದ ಬಗ್ಗೆ…
  ಇರಲಿ… ನೀವು ಎತ್ತಿರುವ ಎಲ್ಲಾ ಪ್ರಶ್ನೆಗಳಿಗೆ ನಾನು ಉತ್ತರ ನೀಡಿದ್ದು ಮಾತ್ರವಲ್ಲದೆ ನಿಮ್ಮ ನಿಲುವಿಗೆ ಆಕ್ಷೇಪ ವ್ಯಕ್ತಪಡಿಸಿದ್ದರೂ ತಾವು ಅದೆಲ್ಲವನ್ನೂ ಮರೆಮಾಚಿ ”ಸುದ್ದಿಯ ಪವಿತ್ರತೆ ಮತ್ತು ನನ್ನ ತುಂಟತನ” ಬಗ್ಗೆ ಮಾತನಾಡಿ ವಿಷಯಾಂತರ ಮಾಡಿದ್ದೀರಿ….
  ಸುದ್ದಿ ಪವಿತ್ರವಾದುದು ಎಂಬುದನ್ನೂ ನಾನು ಒಪ್ಪಿಕೊಳ್ಳುವುದಿಲ್ಲ.ಸುದ್ದಿ ಎನ್ನುವುದು ಸುದ್ದಿಯಷ್ಟೇ… ಅದಕ್ಕೆ ಪವಿತ್ರ – ಅಪವಿತ್ರತೆಯ ಕಲರ್ ಬೇಡ…
  ಇನ್ನು…..
  ಜಮಾತೆಗೂ ಮುಸ್ಲಿಂ ಲೇಖಕರ ಸಂಘಕ್ಕೂ ಕೇವಲ ವಿಳಾಸದ ಪುರಾವೆಯಲ್ಲದೆ ಕಾರ್ಯಕ್ರಮದ ರೀತಿ, ನಿರ್ವಹಣೆಯ ಪುರಾವೆಗಳನ್ನು ನೀಡಿದ್ದೇನೆ. ಹೊಸದಿಗಂತಕ್ಕೂ, ಶಿಶುಮಂದಿರಕ್ಕೂ, ಸಹಕಾರ ಭಾರತೀಗೂ, ಉಡುಪಿ ಮಠಕ್ಕೂ ಆರ್ ಎಸ್ ಎಸ್ ಗೂ ಇರೋ ಸಂಬಂಧದ ಬಗ್ಗೆಯೂ ನಮಗೆ ಯಾವುದೇ ದಾಖಲೆಗಳು ಸಿಗಲಿಕ್ಕಿಲ್ಲ. ಆದರೂ ಸಂಬಂಧ ಇದೆ…
  ಇನ್ನು ಮುಸ್ಲಿಂ ಲೇಖಕರ ಸಂಘದಲ್ಲಿ ಜಮಾತೆಯ ಸದಸ್ಯರು ಮಾತ್ರ ಇದ್ದಾರೆ ಎಂದು ನಾನು ಎಲ್ಲೂ ಹೇಳಿಲ್ಲ. ಈ ಜಮಾತೆಯ ಬಗ್ಗೆ ಪ್ರಾಥಮಿಕ ಮಟ್ಟದಿಂದ ವಿವರಣೆ ನೀಡಬೇಕಾದೀತು ಎಂದು ನನಗೆ ತಿಳಿಯದೆ ಸರಳ ವಿವರಣೆಯಷ್ಠೆ ನೀಡಿದ್ದೆ….
  ಮುಸ್ಲಿಂ ಲೇಖಕರ ಸಂಘದ ಸ್ಥಾಪಕ ಅಧ್ಯಕ್ಷನ ಬಗ್ಗೆ ಮಾತ್ರ ಹೇಳಿದ್ದೀರಿ… ಸ್ಥಾಪಕ ಅಧ್ಯಕ್ಷರೇ ಸ್ಥಾಪಕರಲ್ಲ ಎಂಬುದು ಗೊತ್ತಿರಬೇಕು.
  ಜಮಾತೆ ಇಸ್ಲಾಮೀ ಹಿಂದ್ ಅಷ್ಟು ಸುಲಭದಲ್ಲಿ ಎಲ್ಲರಿಗೂ ಸದಸ್ಯತ್ವ ನೀಡುವುದಿಲ್ಲ. ಎಸ್ ಐಒ ದಂತಹ ಸಂಘಟನೆಗಳಲ್ಲಿ ಕೆಲಸ ಮಾಡಿದ ನಂತರ ಅವರದ್ದೇ ಮಾನದಂಡಗಳ ಅಧಾರದಲ್ಲಿ ಸದಸ್ಯತ್ವ ನೀಡುತ್ತಾರೆ. ನೀವು ಹೇಳಿರುವ ಉಮ್ಮರ್ ಯು ಎಚ್ ಕೂಡಾ ಎಸ್ ಐ ಒ ಸದಸ್ಯರಾಗಿದ್ದವರು… ಅದು ಜಮಾತೆಯ ಸದಸ್ಯತ್ವ ಅಲ್ಲದಿದ್ದರೂ ಅದಕ್ಕಿಂತ ಬಿನ್ನವಲ್ಲ. ಎಸ್ ಐ ಒದಲ್ಲಿ ಇದ್ದವರು ನಾವು ಜಮಾತೆ ಅಲ್ಲ ಎನ್ನುವುದಾದರೆ ಡಿವೈಎಫ್ಐ, ಎಸ್ಎಫ್ಐ ನಲ್ಲಿದ್ದರೂ ಸಿಪಿಐಎಂ ಅಲ್ಲ ಎನ್ನಬಹುದು… ಪಿಎಫ್ಐನಲ್ಲಿದ್ದು ಎಸ್ ಡಿಪಿಐ ಅಲ್ಲ ಎನ್ನಬಹದು. ಭಜರಂಗದಳದಲ್ಲಿದ್ದು ಬಿಜೆಪಿ ಅಲ್ಲ ಎನ್ನಬಹದು ಅಷ್ಟೆ…
  ನೀವು ಕಾರ್ಯಕ್ರಮಕ್ಕೆ ಹೋಗಬಾರದು ಎಂಬ ಅಗ್ರಹವನ್ನಾಗಲೀ, ಸಲಹೆಯನ್ನಾಗಲೀ ನಾನು ಮಾಡಿಲ್ಲ… ವಿಷಯಗಳ ಬಗ್ಗೆ ಚರ್ಚೆ ಮಾತ್ರ ಮಾಡಿದ್ದೇವೆ… ನೋವಾಗಿದ್ದರೆ ಕ್ಷಮೆ ಇರಲಿ….

  Reply
 2. ನಮ್ಮ ಓದುಗ...........ಅಭಿಮಾನಿ

  ಹಾಗೇ ನೋಡಿದ್ರೆ ಸುದ್ದಿಯನ್ನು ತಿರುಚುವ ಪ್ರಯತ್ನ ದಿನೇಶ್ ಅಮೀನ್ ಮಟ್ಟು ಅವರು ಮಾಡಿದ್ದಾರೆ. ಕಳೆದ ವಿಧಾನ ಸಭಾ ಚುನಾವಣಾ ಸಂಧರ್ಭದಲ್ಲಿ ನೀವು ಬರೆದಂತಹಾ ಲೇಖನ ಎಸ್.ಡಿ.ಪಿ.ಐ ಎಂದರೆ ಬಿಜೆಪಿಗೆ ಪ್ರೀತಿ ಕಾಂಗ್ರೆಸ್ ಗೆ ಭಯ ಚುನಾವಣಾ ಲೇಖನದಲ್ಲಿ ಹಲವಾರು ವಿಚಾರಗಳ ಸತ್ಯಕ್ಕೆ ದೂರವಾದವುಗಳು. ಹಾಗೂ ತಮ್ಮ ಊಹೆಗೇ ಸಿಲುಕುವಂಹತ ವಿಶ್ಲೇಷಣೆಯನ್ನು ಮಾಡಿದ್ದೀರಾ ! ಇದು ನೈಜ್ಯ ಸುದ್ದಿಯನ್ನು ತಿರುಚುವ ಪ್ರಯತ್ನ ವಲ್ಲವೇ ?????????

  Reply

Leave a Reply

Your email address will not be published.