Daily Archives: March 6, 2014

ಮುಸ್ಲಿಂ ಲೇಖಕರ ಸಂಘ – ಜಮಾತೇ ಇಸ್ಲಾಂ ಹಾಗೂ “ಮೂಲಭೂತವಾದ”

– ಇರ್ಷಾದ್

ಜಮಾತೇ ಇಸ್ಲಾಮೀ ಹಿಂದ್ ಸಂಘಟನೆಯ ಪರೋಕ್ಷ ಹಿಡಿತದಲ್ಲಿರುವ ಮುಸ್ಲಿಂ ಲೇಖಕರ ಸಂಘ ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಖ್ಯಾತ ಪತ್ರಕರ್ತ ಪ್ರಗತಿಪರ ಚಿಂತಕ ಹಾಗೂ ನಮ್ಮ ಮಾರ್ಗದರ್ಶಕರಾಗಿರುವ ದಿನೇಶ್ ಅಮೀನ್ ಮಟ್ಟು ಅವರ ಭಾಷಣದ ನಿರೀಕ್ಷೆಗಳಲ್ಲಿ ಆರಂಭವಾದ ಚರ್ಚೆಯ ಹಿನ್ನಲೆಯಲ್ಲಿ ಈ ಲೇಖನ ಬರೆಯೋದು ಸಮಯೋಚಿತ ಎಂದನಿಸಿತು. ಜಮಾತೇ ಇಸ್ಲಾಮೀ ಹಿಂದ್ ಸಂಘಟನೆ ಮತ್ತು ಅದರ ಉದ್ದೇಶ ಹಾಗೂ ಆದರ್ಶಗಳ ಕುರಿತಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ, ಈ ಹಿಂದೆಯೂ ನಡೆದಿದೆ. jamatಜಾತ್ಯತೀತ ಭಾರತದಲ್ಲಿ ನಮ್ಮದು ಪ್ರಗತಿಪರ ಹಾಗೂ ವಿಶಾಲವಾದದಿಂದ ಕೂಡಿದ ಇಸ್ಲಾಂ ತತ್ವಾದರ್ಶದಲ್ಲಿ ಕಾರ್ಯಾಚರಿಸುತ್ತಿರುವ ಸಂಘಟನೆಯೆಂಬ ಹೆಸರಿನಲ್ಲಿ ಜಮಾತ್ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡುತ್ತಿದೆ. ತಮ್ಮ ಕಾರ್ಯತಂತ್ರದಲ್ಲಿ ಅದು ಯಶಸ್ಸನ್ನೂ ಕಾಣುತ್ತಿದೆ. ಮುಸ್ಲಿಂ ಸಮಾಜದಲ್ಲಿ ಇಸ್ಲಾಂ ಸನಾತನವಾದವನ್ನು ಪ್ರತಿಪಾದಿಸುವ ಜಮಾತ್ ಹೊರವಲಯದಲ್ಲಿ ತಮ್ಮನ್ನು ಜ್ಯಾತ್ಯಾತೀತವಾದಿ ಹಾಗೂ ಪ್ರಗತಿಪರ ಎಂದು ಬಿಂಬಿಸಿಕೊಳ್ಳುತ್ತಿರುವ ರೀತಿ ನೀತಿಗಳ ಕುರಿತಾಗಿ ಯಾವುದೇ ಪೂರ್ವಾಗ್ರಹವಿಲ್ಲದೆ ಚರ್ಚೆ ನಡೆಸಬೇಕಾದ ಅಗತ್ಯ ಇದೆ.

ಭಾರತೀಯ ಮುಸ್ಲಿಮರು ಶಾಂತಿ ಪ್ರಿಯರು. ಬಹುಸಂಸ್ಕೃತಿಗೆ ಒಗ್ಗಿಕೊಂಡು ಜೀವನ ನಡೆಸುವವರು ಎಂಬುವುದನ್ನು ನಾಡಿಗೆ ಸಾಬೀತು ಪಡಿಸಿದವರೇ ಸೂಫಿ ಸಂತರು. ಅರಬ್ ನಾಡಿನಲ್ಲಿ ಹುಟ್ಟಿದ ಇಸ್ಲಾಂ ಧರ್ಮವನ್ನು ಭಾರತಕ್ಕೆ ತಂದವರೇ ಈ ಸೂಫಿ ಸಂತರು. ಜನರ ನೋವು ನಲಿವುಗಳಿಗೆ ಸ್ಪಂದಿಸಿ ಅವರಲ್ಲಿ ತಾವೂ ಒಬ್ಬರಾಗಿ ಧರ್ಮದ ಸಾರವನ್ನು ಭಿತ್ತಿ ಎಲ್ಲಾ ಧರ್ಮ ತತ್ವಾದರ್ಶಕರುಗಳ ಜೊತೆಗೂಡಿ ಸಹಭಾಳ್ವೆ ನಡೆಸಿದವರು. ಬಾಬಾ ಬುಡನ್ ಗಿರಿ, ಬಂದೇ ನವಾಜ್, ಅಜ್ಮೀರ್ ಚಿಸ್ತಿ ಸೇರಿದಂತೆ ಭಾರತದಾದ್ಯಂತ ಇರುವ ಸಾಕಷ್ಟು ಸಂತರ ದರ್ಗಾಗಳು ಇಂದಿಗೂ ಬಹುಸಂಸ್ಕೃತಿಯ ಬೀಡಾಗಿವೆ. ಈ ದರ್ಗಾಗಳಿಗೆ ಮುಸ್ಲಿಮರು ಬರುತ್ತಾರೆ ಹಿಂದೂಗಳೂ ಬರುತ್ತಾರೆ. ಇದನ್ನು ಹಿಂದೂ ಮುಸ್ಲಿಂ ಎಂಬ ಪರಿಭಾಷೆಯಲ್ಲಿ ಕರೆಯೋದು ಸಮಂಜಸ ಅಲ್ಲ, ಯಾಕೆಂದರೆ ಇವರೆಲ್ಲಾ ಧರ್ಮ, ಜಾತಿಯ ಗಡಿಯನ್ನು ದಾಟಿ ನಿತ್ಯ ಜೀವನದ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡವರು, ತಮ್ಮ ಕಷ್ಟಗಳನ್ನು ಪರಿಹರಿಸಿದ ಎಂಬ ನಂಬಿಕೆ ಇಟ್ಟುಕೊಂಡು ಸಂತನ ಬಳಿಗೆ ಹೋಗಿ ಆತನನ್ನು ಗೌರವದಿಂದ ಕಾಣುತ್ತಾರೆ. ಬಹುಸಂಸ್ಕೃತಿಯ ದರ್ಗಾ ಪರಂಪರೆಯನ್ನು ಭಾರತೀಯ 90 ಶೇಕಡಕ್ಕಿಂತಲೂ ಅಧಿಕ ಮುಸ್ಲಿಮರು ಒಪ್ಪುತ್ತಾರೆ ಮತ್ತು ಅದನ್ನು ಆಚರಿಸಿಕೊಂಡು ಬರುತ್ತಿದ್ದಾರೆ.

ರಾಜ್ಯದ ವಿವಿಧ ಕಡೆಯಲ್ಲಿರುವ ದರ್ಗಾಗಳಿಗೆ ಭೇಟಿ ನೀಡುವಾಗ ನಮಗೆ ನೈಜ್ಯ ಜಾತ್ಯತೀತ ನಿಲುವಿನ ಅರಿವಾಗುತ್ತದೆ. ಎಲ್ಲಾ ಧರ್ಮ ಸಂಸ್ಕೃತಿಗಳ ಜನಸಾಮಾನ್ಯರು ಜೊತೆ ಜೊತೆಗೆ ಸೇರುವ ಹಾಗೂ ಸಂತನ ಸಮಾಧಿಯನ್ನು ಗೌರವಿಸುವ ಪದ್ದತಿ ನಮಗಲ್ಲಿ ಕಂಡುಬರುತ್ತದೆ. ಚಿಕ್ಕಮಗಳೂರು ಹಾಗೂ ಶಿವಮೊಗ್ಗದಲ್ಲಿರುವ ಅನ್ನಿಗೇರಿ, ಮಾಲೂರು, ಚೌಡೇಶ್ವರಿ ದರ್ಗಾಗಳಿಗೆ ಇತ್ತೀಚೆಗೆ ನಾನು ಹಾಗೂ ಗೆಳೆಯರು ಭೇಟಿ ಕೊಟ್ಟಾಗ ನನಗೆ ನಿಜಕ್ಕೂ ಅಲ್ಲಿಯ ವಾತಾವರಣ ನೋಡಿ ಆಶ್ವರ್ಯವಾಯಿತು. ಎರಡೂ ಧರ್ಮ ಭಾಂಧವರು ನಡೆದುಕೊಳ್ಳುವ ಬಹುಸಂಸ್ಕೃತಿಯ Ajmer-Dargah-Sharifಬೀಡಿನಂತೆ ಅದು ಕಂಡುಬಂತು. ಈ ಎಲ್ಲಾ ದರ್ಗಾಗಳಲ್ಲಿ ಸಂತನ ಸಮಾಧಿಯನ್ನು ಗೌರವಿಸುವುರದ ಜೊತೆಗೆ ದರ್ಗಾದಲ್ಲಿರುವ ಚೌಡೇಶ್ವರಿ , ಭೂತನಾಥ ದೈವಗಳನ್ನು ಅಲ್ಲಿಗೆ ಆಗಮಿಸುವ ಹಿಂದೂ ಮುಸ್ಲಿಂ ಭಕ್ತರು ಗೌರವಿಸುತ್ತಾರೆ. ಇಲ್ಲಿ ನಮಗೆ ಗೋಚರವಾಗುತ್ತಿರುವ ಸತ್ಯ ಏನೆಂದರೆ, ಹಿಂದಿನ ಕಾಲದಲ್ಲಿ ಆ ಕ್ಷೇತ್ರದಲ್ಲಿದ್ದ ಭಾವೈಕ್ಯ . ಸೂಫಿ ಸಂತನ ಜೊತೆಯಲ್ಲಿ ಅನ್ಯ ಧರ್ಮೀಯ ಸಂತ, ಮಹಾತ್ಮರೂ ಜೊತೆ ಜೊತೆಯಾಗಿ ಸಹಬಾಳ್ವೆಯನ್ನು ನಡೆಸುತ್ತಿದ್ದರು ಎಂಬುವುದು. ಆದರೆ ಜಮಾತ್‌ ನಂತಹಾ ಸಂಘಟನೆಗಳು ಇಂಥಹಾ ಜಾತ್ಯತೀತತೆಯನ್ನು ಎಂದೂ ಒಪ್ಪಿಕೊಳ್ಳುವುದಿಲ್ಲ. ಅವರ ಪ್ರಕಾರ ಇದು ಗೊಡ್ಡು ಜಾತ್ಯಾತೀತತೆ. ಜಾತ್ಯತೀತತೆಯ ಪ್ರತೀಕವಾದ ದರ್ಗಾ ಸಂಸ್ಕೃತಿಯನ್ನು ನಾಶ ಮಾಡಲು ಪರಿಶುದ್ಧ ಇಸ್ಲಾಂಮಿನ ಹೆಸರಲ್ಲಿ ಮೌದೂದಿ ಇಸ್ಲಾಂ ಪ್ರತಿಪಾದಕರು ಪ್ರಯತ್ನ ಪಡುತ್ತಿರುವುದು ಇದೀಗ ಅಲ್ಲಲ್ಲಿ ಕಂಡುಬರುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ದರ್ಗಾ ಸಂಸ್ಕೃತಿಯ ವಿರುದ್ಧ ಜಮಾತ್ ಸೇರಿದಂತೆ ಕೆಲವೊಂದು ಸಂಘಟನೆಗಳ ಹಿಂದಿನಿಂದಲೂ ಧ್ವನಿ ಎತ್ತುತ್ತಾ ಬಂದಿವೆ.

ಹಿಂದೂ ಪುರೋಹಿತವಾದ ವಿರುದ್ಧ ಹುಟ್ಟಿಕೊಂಡ ನಾಥ ಹಾಗೂ ದತ್ತ ಪಂಥಗಳನ್ನು ಹಿಂದೂ ಸನಾತನವಾದಿಗಳು ವಿರೋಧಿಸುವ ರೀತಿಯಲ್ಲೇ ಬಹುಸಂಸ್ಕೃತಿಯನ್ನು ಹಾಗೂ ಪ್ರಗತಿಪರ ಚಿಂತನೆಗಳ ಸಾರವನ್ನು ಬಿತ್ತುವ ಸೂಫಿ ಪಂಥವನ್ನು ಜಮಾತೇ ಇಸ್ಲಾಮ್ ಕಟುವಾಗಿ ಧಿಕ್ಕರಿಸುತ್ತಾ ಬಂದಿದೆ. ಸೂಫಿ ಸಾಹಿತ್ಯವನ್ನೂ ಮೌದೂದಿ ಸಿದ್ದಾಂತ ಖಂಡಿತಾ ಒಪ್ಪುವುದಿಲ್ಲ. ಭಾರತೀಯ ಮುಸ್ಲಿಂಮರಲ್ಲಿ ಅರಬ್ ಸಂಸ್ಕೃತಿಯ ಇಸ್ಲಾಮನ್ನು ಹೇರುವ ಪ್ರಯತ್ನ ಜಮಾತ್ ಹಾಗೂ ಅದರ ಸಹಭಾಗಿ ಸಂಘಟನೆಗಳು ನಿರಂತರ ಮಾಡಿಕೊಂಡು ಬರುತ್ತಿರುವುದು ತಿಳಿದಿರುವ ವಿಚಾರ. ಸ್ವತಂತ್ರ ಪೂರ್ವ ಭಾರತದಲ್ಲಿ ಇಂಥಹಾ ಬಹುಸಂಸ್ಕೃತಿಯನ್ನು ತಿರಸ್ಕರಿಸಿ ಪರಿಶುದ್ದ ಇಸ್ಲಾಂ ಕಲ್ಪನೆಯ ಹೆಸರಲ್ಲಿ ಮೌಲಾನಾ ಮೌದೂದಿಯವರು sio_mangaloreಜಮಾತ್ ಇಸ್ಲಾಮೀ ಸಿದ್ದಾಂತವನ್ನು ಹುಟ್ಟು ಹಾಕಿದರು. ದೇಶ ವಿಭಜನೆಯ ಸಂದರ್ಭದಲ್ಲಿ ಧರ್ಮದ ಆಧಾರದಲ್ಲಿ ಮುಸ್ಲಿಂ ರಾಷ್ಟ್ರದ ಸ್ಥಾಪನೆಯ ನಿಲುವನ್ನು ಮೌದೂದಿ ಪ್ರತಿಪಾದಿಸಿರುವುದು ಉಲ್ಲೇಖನಾರ್ಹ. ನಂತರದಲ್ಲಿ ಹಿಂದೂ ಮಹಾಸಭಾ ಹಿಂದೂ ರಾಷ್ಟ್ರದ ಪರಿಕಲ್ಪನೆಯೊಂದಿಗೆ ಸಾಗಿದರೆ ಇತ್ತ ಜಮಾತ್ ಇಸ್ಲಾಂ ರಾಷ್ಟ್ರದ ಪರಿಕಲ್ಪನೆಯನ್ನು ಹೊತ್ತು ಅದನ್ನು ಧಾರ್ಮಿಕ, ರಾಜಕೀಯ ಆಂದೋಲವನ್ನಾಗಿಸಿ ಭಾರತದಾದ್ಯಂತ ಪಸರಿಸುವ ಪ್ರಯತ್ನದಲ್ಲಿದೆ. ಮೌದೂದಿ ವಿಶ್ಲೇಷಿಸುವ ಜಮಾತೇ ಇಸ್ಲಾಮೀ ಚಿಂತನೆಯಲ್ಲಿ ಸೂಫಿಗಳಿಗೆ ಯಾವುದೇ ಸ್ಥಾನಮಾನ ಇಲ್ಲ. ಇವರ ಆಗಮನ ನಂತರ ದರ್ಗಾ ಸಂಸ್ಕೃತಿಗೆ ಸಾಕಷ್ಟು ವಿರೋಧಗಳು ವ್ಯಕ್ತವಾದವು. ಜಮಾತ್ ಹೇಳುವ ಕಂದಾಚಾರ ದರ್ಗಾ ಸಂಸ್ಕೃತಿಯದಾಗಿದೆ. ದರ್ಗಾಗಗಳಲ್ಲಿ ಆಚರಿಸುವ ವಿಧಿ ವಿಧಾನಗಳನ್ನು ಜಮಾತ್ ಖಂಡಿಸುತ್ತಾ ಬಂದಿದೆ. ಅದು ನೈಜ್ಯ ಇಸ್ಲಾಮ್ ತತ್ವಾದರ್ಶಗಳಿಗೆ ವಿರೋಧವಾಗಿದೆ ಎಂಬುವುದು ಜಮಾತ್ ನಿಲುವು. ಈ ನಿಟ್ಟಿಲ್ಲಿ ಸೂಫಿ ಸಾಹಿತ್ಯವನ್ನು ಒಡೆಯಲು ಶಾಂತಿ ಪ್ರಕಾಶನ ಸಾಕಷ್ಟು ಸಾಹಿತ್ಯಗಳು ಪ್ರಮುಖ ಪಾತ್ರ ವಹಿಸಿದೆ. ತಮ್ಮದೇ ಆದ ಸಾಹಿತ್ಯದ ಮೂಲಕ ಜಮಾತೇ ಮೌದೂದಿ ಸಿದ್ದಾಂತವನ್ನು ಅದು ವ್ಯವಸ್ಥಿತವಾಗಿ ಪಸರಿಸುವ ಪ್ರಯತ್ನದಲ್ಲಿದೆ. ಅದಕ್ಕಾಗಿ ಅದು ಮುಸ್ಲಿಂ ಲೇಖಕರ ಸಂಘದಂತಹಾ ಸಾಕಷ್ಟು ಸಾಹಿತ್ಯ ಸಂಘಟನೆಗಳನ್ನು ಭಾರತದಾದ್ಯಂತ ಹುಟ್ಟುಹಾಕಿದೆ. (ಜಮಾತ್ ಸಂಘಟನೆ ಮುಸ್ಲಿಂ ಲೇಖಕರ ಸಂಘ ತನ್ನದಲ್ಲಾ ಎಂದು ಹೇಳುತ್ತಿದ್ದರೂ ಮುಸ್ಲಿಂ ಲೇಖಕರ ಸಂಘವು ಜಮಾತ್ ಅಧೀನದಲ್ಲಿರುವುದು ಬಹಿರಂಗ ಗುಟ್ಟು ಎಂಬುವುದರಲ್ಲಿ ಸಂಶಯವಿಲ್ಲ.

ಒಂದೆಡೆಯಲ್ಲಿ ನೈಜ್ಯ ಜಾತ್ಯತೀತವಾದವನ್ನು ಬಿಂಬಿಸುವ ದರ್ಗಾ ಬಹುಸಂಸ್ಕೃತಿಯನ್ನು ಕಂದಾಚಾರ ಹಾಗೂ ಮೂಲ ಇಸ್ಲಾಂಗೆ ಸಲ್ಲದ ಸಂಸ್ಕೃತಿ ಎಂದು ವಿರೋಧಿಸುವ ಜಮಾತ್ ಸಂಘಟನೆ ಮುಸ್ಲಿಂ ವಿರುದ್ಧ ದ್ವೇಷವನ್ನು ಹರಡುವ ಹಿಂದುತ್ವವಾದಿ ಸಂಘಟನೆಗಳ jamat-mangaloreಕೆಲ ಮುಖಂಡರನ್ನು ತಮ್ಮ ಸಂಘಟನೆಯ ಕಾರ್ಯಕ್ರಮಗಳಿಗೆ ಆಹ್ವಾನಿಸುವ ಮೂಲಕ ತನ್ನನ್ನು ಜಾತ್ಯತೀತವಾದಿ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ಹಾಸ್ವಾಸ್ಪದ. ಹಿಂದೂ ಮೂಲಭೂತವಾದಕ್ಕೆ ಪ್ರತಿರೋಧವನ್ನು ವಿರೋಧಿಸುವುದು ಮಾತ್ರ ಪ್ರಗತಿಪರತೆ ಎಂದು ವ್ಯಾಖ್ಯಾನಿಸುವ ಜಮಾತ್ ಧರ್ಮ ಪಾಲನೆಯ ಆಚಾರ ವಿಚಾರಗಳ ಕುರಿತಾಗಿ ಅದರ ನಿಲುವು ಗಮನಿಸಿದಾಗ ಹಿಂದೂ ಸನಾತನವಾದಿ ಸಂಘಟನೆಗಳು ಹಾಗೂ ಜಮಾತ್ ನಡುವೆ ಯಾವುದೇ ವ್ಯತ್ಯಾಸವಿಲ್ಲದೇ ಇರುವುದು ಕಂಡುಬರುತ್ತದೆ. ಜಮಾತ್ ಅಧೀನದ ಮುಸ್ಲಿಮ್ ಲೇಖಕರ ಸಂಘದ ಕಾರ್ಯಕ್ರಮದಲ್ಲಿ ನಾಲ್ಕು ಗೋಡೆಯೊಳಗಿದ್ದ ಮುಸ್ಲಿಂ ಮಹಿಳೆಯರನ್ನು ಪರ ಪುರುಷರೊಂದಿಗೆ ವೇದಿಕೆ ಹಂಚಿಕೊಳ್ಳುವಂತೆ ಮಾಡಿದ್ದೇವೆ ಇದು ನಮ್ಮ ಪ್ರಗತಿಪರತೆಗೆ ಸಾಕ್ಷಿ ಎಂದು ಹೇಳಿಕೊಳ್ಳುತ್ತಿರುವಾಗ ಇನ್ನೊಂದೆಡೆಯಲ್ಲಿ ಶಾಂತಿ ಪ್ರಕಾಶನದದಿಂದ ಪ್ರಕಟವಾದ ಪುಸ್ತಕಗಳಲ್ಲಿ ಮಹಿಳೆಯರನ್ನು ಮಾರುಕಟ್ಟೆಯಿಂದ ಪಾರ್ಲಿಮೆಂಟ್ ವರೆಗೂ ಜೊತೆ ಸೇರಲು ಅನುಮತಿ ನೀಡುವುದಿಲ್ಲ ಎಂದು ಬರೆಯುತ್ತಿದೆ. ಮುಸ್ಲಿಂ ಲೇಖಕರ ಸಂಘದ ಕಾರ್ಯಕ್ರಮದಲ್ಲಿ ಮುಸ್ಲಿಂ ಮಹಿಳೆಯರ ಜೊತೆ ಜಮಾತ್ ಮುಖಂಡರು ವೇದಿಕೆ ಹಂಚಿಕೊಂಡರೆ ಅದು ಮೆಚ್ಚತಕ್ಕಂತಹಾ ವಿಚಾರ ಮತ್ತು ಅದಕ್ಕೆ ನಮ್ಮ ಬೆಂಬಲವೂ ಇದೆ. ಆದರೆ ಇನ್ನೊಂದೆಡೆ ದೆಹಲಿಯಲ್ಲಿ ಯುವತಿಯ ಮೇಲೆ ನಡೆದ ಅತ್ಯಾಚಾರ ಸಂದರ್ಭದಲ್ಲಿ ಜಮಾತ್ ಮುಖಂಡರೊಬ್ಬರು ಮಾಧ್ಯಮಗಳಿಗೆ ಶಾಲೆಯಲ್ಲಿ ಬಾಲಕ ಬಾಲಕಿಯರ “ಕೋ-ಎಜುಕೇಷನ್” ಗೆ ವಿರೋಧ ವ್ಯಕ್ತಪಡಿಸುವ ಹೇಳಿಕೆಯನ್ನು ನೀಡುತ್ತಾರೆ.

ಇದೊಂದು ಉದಾಹರಣೆಯಷ್ಟೇ. ಜಮಾತೇ ಇಸ್ಲಾಮೀ ಹಿಂದ್ ಸಂಘಟನೆಯ ಇಂಥಹಾ ಸಾಕಷ್ಟು ನಿಲುವುಗಳು ಅದರ ಕಾರ್ಯತಂತ್ರವನ್ನು ಸಂಶಯದಿಂದ ನೋಡಲು ಕಾರಣವಾಗಿದೆ. ಬಹುಸಂಸ್ಕೃತಿಯ ಸೂಫಿಸಂ ಅನ್ನು ಕಂದಾಚಾರದ ಹೆಸರಲ್ಲಿ ತಿರಸ್ಕರಿಸಿ. ಮುಸ್ಲಿಂ ಪ್ರಗತಿಪರರನ್ನು ಶರೀಯತ್ ವಿರುದ್ಧ ಎಂಬ ನೆಪದಲ್ಲಿ ತಿರಸ್ಕರಿಸಿ, ಇತರ ಧರ್ಮಿಯರೊಂದಿಗೆ ವೇದಿಕೆ ಹಂಚಿ ಜಮಾತ್ ಸಿದ್ದಾಂತವನ್ನು ಪ್ರತಿಪಾದಿಸುವ ಮೂಲಕ ತನ್ನನ್ನು ಪ್ರಗತಿಪರ ಹಾಗೂ ನೈಜ್ಯ ಇಸ್ಲಾಂ ತತ್ವಾದರ್ಶಗಳನ್ನು ಪಾಲಿಸುವ ಸಂಘಟನೆಯೆಂದು ಬಿಂಬಿಸ ಹೊರಟಿರುವುದು ಸರಿಯಲ್ಲ. ಈ ಕಾರಣಕ್ಕಾಗಿಯೇ ಮುಸ್ಲಿಂ ಸಮುದಾಯದ ಬಹುತೇಕ ಜನರು ಜಮಾತ್‌ಗೆ ಸಾಥ್ ಕೊಟ್ಟಿಲ್ಲ ಎಂಬುವುದು ಉಲ್ಲೇಖನಾರ್ಹ ‍ಅಂಶ. ಜಮಾತ್ ಆರ್.ಎಸ್.ಎಸ್ ಸಂಘಟನೆಯ ರೀತಿಯಲ್ಲೇ ಸಾಮಾಜಿಕ, ಸಾಹಿತ್ಯಿಕ, ಧಾರ್ಮಿಕತೆ ನಿಲುವುಗಳಲ್ಲಿ ನಂಬಿಕೆ ಇಟ್ಟಂತಹಾ ಸಂಘಟನೆ ಎಂಬುವುದರಲ್ಲಿ ಸಂಶಯವಿಲ್ಲ. jamathmlore-blogspotಆರ್.ಎಸ್.ಎಸ್ ತನ್ನ ಸಿದ್ದಾಂತವನ್ನು ಎಲ್ಲರ ಮುಂದೆ ಒಪ್ಪಿಕೊಂಡು ಕಾರ್ಯಾಚರಿಸುತ್ತಿದ್ದರೆ ಜಮಾತ್ ಅದಕ್ಕೆ ತೆರೆಮರೆಯಲ್ಲಿ ತನ್ನ ಸಿದ್ದಾಂತವನ್ನು ವಿವಿಧ ಆಯಾಮಗಳಲ್ಲಿ ಪಸರಿಸುತ್ತಿದೆ. ಈ ಕಾರಣಕ್ಕಾಗಿಯೇ ಮುಸ್ಲಿಂ ಲೇಖಕರ ಸಂಘದ ಕಾರ್ಯವೈಖರಿಯ ಕುರಿತು ಚರ್ಚೆ ಆರಂಭವಾಗಿದ್ದು. ಲೇಖಕರ ಸಂಘದ ಕೆಲವೊಂದು ಪದಾಧಿಕಾರಿಗಳು ಮುಸ್ಲಿಂ ಲೇಖಕರ ಸಂಘವು ಜಮಾತ್‌ಗೆ ಸೇರಿದ ಸಂಘಟನೆ ಅಲ್ಲ ಎಂದು ವಾದಿಸುತ್ತಿದ್ದರೂ ರಾಜ್ಯದ (ಮುಸ್ಲಿಂ) ಬರಹಗಾರರಿಗೆ, ಸಾಹಿತಿಗಳಿಗೆ, ಚಿಂತಕರಿಗೆ ಇದು ಗೊತ್ತಿರುವ ಬಹಿರಂಗ ಗುಟ್ಟು. ಸಂಘದ ಹುಟ್ಟಿಗೆ ಮೂಲ ಕಾರಣ ಜಮಾತ್ ಎಂಬುವುದನ್ನು ಜಮಾತೇ ಇಸ್ಲಾಂ ಸಂಘಟನೆಯು ಒಪ್ಪಿಕೊಳ್ಳದೇ ಇರುವುದು ವಿಪರ್ಯಾಸ. ಜಮಾತೇ ಇಸ್ಲಾಮೀ ಹಿಂದ್ ಮಂಗಳೂರು ಅದರ ಅಂತರ್ಜಾಲ ಪೇಜ್ ಒಂದಲ್ಲೂ ತನ್ನ ಸಹಭಾಗಿ ಸಂಘಟನೆಗಳ ಜೊತೆ ಮುಸ್ಲಿಮ್ ಲೇಖಕರ ಸಂಘದ ಹೆಸರನ್ನೂ ಸೇರಿಸಿಕೊಂಡಿದೆ. ಜಮಾತೇ ಇಸ್ಲಾಂ ಸಂಘಟನೆಯ ಕುರಿತು ನಮಗೆ ಯಾವುದೇ ಪೂರ್ವಾಗ್ರಹವಿಲ್ಲ. ಆದರೆ ಜಮಾತ್ ಮೂಲಭೂತವಾದಿ ಎಂಬುವುದರಲ್ಲಿ ಯಾವುದೇ ಅನುಮಾನವಿಲ್ಲ.

ಮುಸ್ಲಿಂ ಲೇಖಕರ ಸಂಘವು ಜಮಾತೆಯ ಸಹಸಂಘಟನೆ : ಅಮಿನ್ ಮಟ್ಟುರವರಿಗೊಂದು ಪುರಾವೆ

– ನವೀನ್ ಸೂರಿಂಜೆ

ಮುಸ್ಲಿಂ ಲೇಖಕರ ಸಂಘವು ಜಮಾತೆ ಇಸ್ಲಾಮೀ ಹಿಂದ್ ಸಂಘಟನೆಗೆ ಸೇರಿದ್ದು ಎಂದು ನಾನು ದಿನೇಶ್ ಅಮಿನ್ ಮಟ್ಟುರವರಿಗೆ ಮನವರಿಕೆ ಮಾಡಲು ಹೋದರೆ ದಿನೇಶ್ ಅಮೀನ್ ಮಟ್ಟು “ಸುದ್ದಿಯನ್ನು ತಿರುಚುವ ಪತ್ರಕರ್ತ” ಎಂದು ಬರೆದು ಕೈತೊಳೆದುಕೊಂಡಿದ್ದಾರೆ. dinesh-amin-mattuನನ್ನ ಪತ್ರಿಕಾ ಬದುಕನ್ನು ಮೂಲಭೂತವಾದಿಗಳು ಮತ್ತು ಕೋಮುವಾದಿಗಳು ಈ ರೀತಿಯಾಗಿ ಅನೇಕ ಬಾರಿ ಈ ಹಿಂದೆ ಹೀಯಾಳಿಸಿದ್ದಾರೆ. ಆದರೆ ನಾನು ಆದರ್ಶವಾಗಿಟ್ಟುಕೊಂಡ ದಿನೇಶ್ ಅಮೀನ್ ಮಟ್ಟು ಕೂಡಾ ನಾನು ಸುದ್ದಿ ತಿರುಚುವ ತುಂಟತನ ಮಾಡುವವನು ಮತ್ತು ಸುದ್ದಿ ಪವಿತ್ರವಾಗಿರುವಂತದ್ದಾಗಿದ್ದು ಅದನ್ನು ಅಪವಿತ್ರ ಮಾಡಬೇಡ ಎನ್ನುವ ಮೂಲಕ ನಾನು ಸುಳ್ಳು ಸುದ್ದಿ ಬರೆಯುತ್ತಿದ್ದೇನೆ ಎಂಬ ಅರ್ಥದಲ್ಲಿ ಹೇಳಿರುವುದು ನೋವು ತಂದಿದೆ.

ಅದೇನೇ ಆದರೂ ದಿನೇಶ್ ಅಮೀನ್ ಮಟ್ಟುರವರಿಗೆ ಅವರ ಮಾತನ್ನೇ ಹಿಂದಿರುಗಿಸುತ್ತೇನೆ… ಸರ್ ನಿಜವಾಗಿಯೂ ಸುದ್ದಿ ಪವಿತ್ರವಾಗಿರುವುದೇ ಆಗಿದ್ದಲ್ಲಿ ಅದರ ಬಗ್ಗೆ ಪರಾಮರ್ಶಿಸಿ ತೀರ್ಪು ಕೊಡಿ. ತಾವು ಅವರ ಸಂಘಟನೆಯಲ್ಲಿ ಭಾಗವಹಿಸಿದ್ದೀರಿ ಎಂಬ ಕಾರಣಕ್ಕೆ ಸುದ್ದಿ ಸುಳ್ಳು ಆಗುವುದಿಲ್ಲ. ಅಪವಿತ್ರವೂ ಆಗುವುದಿಲ್ಲ…

ಜಮಾತೆ ಇಸ್ಲಾಮೀ ಹಿಂದ್ ಶಾಂತಿ ಪ್ರಕಾಶನ ಎಂಬ ಪ್ರಕಾಶನ ಸಂಸ್ಥೆಯನ್ನು ಹೊಂದಿದೆ. ಆ ಪ್ರಕಾಶನ ಸಂಸ್ಥೆಯಲ್ಲಿ ಮಹಿಳಾ ವಿರೋಧಿ ಸಾಹಿತ್ಯವನ್ನು ಪ್ರಕಟ ಮಾಡಲಾಗುತ್ತದೆ. ಈ ರೀತಿಯ ಸಾಹಿತ್ಯ ಕೃಷಿಗಾಗಿ ಮುಸ್ಲಿಂ ಲೇಖಕರ ಸಂಘವನ್ನು ಸ್ಥಾಪಿಸಿದ್ದಾರೆ. ಅದಕ್ಕೆ ಅವರು ಕಾರ್ಯಾಚರಿಸುವ ವಿಳಾಸವೇ ಪುರಾವೆ ಒದಗಿಸುತ್ತದೆ. ಉಳಿದಂತೆ ಸಂಘದ ಕಾರ್ಯಕ್ರಮದ ಸ್ವಯಂ ಸೇವಕರು, ಆಮಂತ್ರಣ ಪತ್ರಿಕೆ ನೀಡಿದವರು, ಪತ್ರಕರ್ತರನ್ನು ಆಹ್ವಾನಿಸಿದವರೆಲ್ಲರೂ ಜಮಾತೆಯ ಕಾರ್ಯಕರ್ತರೇ ಹೊರತು ಲೇಖಕ, ಸಾಹಿತಿಗಳಲ್ಲ ಎಂದು ದಿನೇಶ್ ಅಮೀನ್ ಮಟ್ಟುಗೆ ಮನವರಿಕೆ ಮಾಡಲು ಯತ್ನಿಸಿದ್ದೆ.

ಈ ಮನವರಿಕೆ ಮಾಡುವ ಯತ್ನ ಬಹಿರಂಗವಾಗಿಯೇ ನಡೆಯುತ್ತಿತ್ತಾದರೂ ಜಮಾತೆ ಇಸ್ಲಾಮೀ ಹಿಂದ್ ಸಂಘಟನೆಯು ಮಧ್ಯ ಪ್ರವೇಶಿಸಿ “ಮುಸ್ಲಿಂ ಲೇಖಕರ ಸಂಘ ನಮ್ಮದಲ್ಲ” ಎಂದು ಹೇಳಿಲ್ಲ. 20 ವರ್ಷದ ಹಿಂದೆ ಎಸ್‌ಐ‌ಒ ಸದಸ್ಯನಾಗಿದ್ದ ಉಮ್ಮರ್ ಯು‍.ಎಚ್ ಎಂಬವರು ಮುಸ್ಲಿಂ ಲೇಖಕರ ಸಂಘದ ಕಾರ್ಯದರ್ಶಿಯಾಗಿದ್ದು ಅವರು ಜಮಾತೆ ಸದಸ್ಯರಲ್ಲ ಎನ್ನುತ್ತಾರೆ ದಿನೇಶ್ ಅಮೀನ್ ಮಟ್ಟು. ಇದು ಒಂದು ರೀರಿಯಲ್ಲಿ “ಭಜರಂಗದಳ ಸದಸ್ಯ, ಆದರೆ ಬಿಜೆಪಿ ಅಲ್ಲ” ಎನ್ನುವಂತೆ. ಇನ್ನು ಮುಸ್ಲಿಂ ಲೇಖಕರ ಸಂಘಕ್ಕೆ ಜಮಾತೆ ಸದಸ್ಯನಲ್ಲದ ಪತ್ರಕರ್ತ ಸ್ಥಾಪಕ ಸದಸ್ಯನಾಗಿದ್ದ ಎನ್ನುತ್ತಾರೆ ದಿನೇಶ್ ಅಮೀನ್ ಮಟ್ಟು. ಆದರೆ ಸ್ಥಾಪಕರು ಯಾರು ಎಂದು ಮಾತ್ರ ಪತ್ರಕರ್ತರಾಗಿ ಅವರು ಕಂಡು ಹಿಡಿಯುವುದಿಲ್ಲ. ನಿಮಗೆ ಮಾಹಿತಿ ನೀಡುವ ಉಮ್ಮರ್ ಯು.ಎಚ್ ನಿಮ್ಮನ್ನು ದಾರಿ ತಪ್ಪಿಸಿದ್ದಾರೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ನಾನು ಮತ್ತು ಸುದೀಪ್ತೋ ಮೊಂಡಲ್ ಮಗು ಮಾರಾಟ ಜಾಲವನ್ನು ಪತ್ತೆ ಹಚ್ಚಿದ ಸಂಧರ್ಭದಲ್ಲಿ ಆರೋಪಿಗಳ ಪರ ವಕಾಲತ್ತು ವಹಿಸಿ ನಮ್ಮನ್ನು ದಾರಿ ತಪ್ಪಿಸಲು ಯತ್ನಿಸಿದ್ದರು. ನಾವು ದಾರಿ ತಪ್ಪಲಿಲ್ಲ ಎಂಬುದು ಬೇರೆ ವಿಚಾರ. ಇರಲಿ. ಇಷ್ಟೆಲ್ಲಾ ದಾಖಲೆ ನೀಡಿದ ನಂತರೂ ದಿನೇಶ್ ಅಮೀನ್ ಮಟ್ಟುಗೆ ನಮ್ಮ ವಾದ ಸುಳ್ಳು ಮತ್ತು ತುಂಟತನದ್ದು ಎಂದು ಆರೋಪಿಸಿ “ಸೂಕ್ತ ಪುರಾವೆ ನೀಡುವವರೆಗೆ ಪ್ರತಿಕ್ರಿಯಿಸುವುದಿಲ್ಲ” ಎಂದರು.

ಜಮಾತೆ ಇಸ್ಲಾಮೀ ಹಿಂದ್ ಮುಸ್ಲಿಂ ಮೂಲಭೂತವಾದಿ ಸಂಘಟನೆ. devanurಸೂಫಿ ಪರಂಪರೆಯನ್ನೇ ತನ್ನ ಸಂವಿಧಾನದಲ್ಲಿ ಮೂಢನಂಬಿಕೆ ಎನ್ನುವ ಜಮಾತೆ ಇಸ್ಲಾಮೀ ಹಿಂದ್ ದೇವನೂರು ಮಹಾದೇವ ಪ್ರಕಾರ “ಜಮಾತೆ ಇಸ್ಲಾಮೀ ಹಿಂದ್ ಮುಸ್ಲೀಂ ಮೂಲಭೂತವಾದಿಗಳಿಗೆ ಆರ್‌ಎಸ್‌ಎಸ್” ಎಂದಿದ್ದರು. ಅದರ ಸಹಭಾಗಿ ಸಂಘಟನೆಯೇ “ಮುಸ್ಲಿಂ ಲೇಖಕರ ಸಂಘ”.

ಈಗ ನಾವು ಪುರಾವೆ ನೀಡುತ್ತೇವೆ… ನಾನು “ಯಾರ ಜೊತೆ ಮಡಿವಂತಿಕೆ ಬಿಡಬೇಕು” ಎಂದು ತಮಗೆ ಬರೆದ ಪತ್ರಕ್ಕೆ ಈಗ ಉತ್ತರ ನೀಡುವಿರೆಂದು ಬಯಸುತ್ತಾ….

http://jamathmlore.blogspot.in

ಇದು ಜಮಾತೆ ಮಂಗಳೂರು ಘಟಕದ ವೆಬ್ ಸೈಟ್… ಅದರಲ್ಲಿ ಜಮಾತೆಯು 22 ಸಹ ಸಂಘನೆಗಳನ್ನು ಹೊಂದಿದೆ. ಅದರಲ್ಲಿ 9 ನೇ ಸಹ ಸಂಘಟನೆ “ಮುಸ್ಲಿಂ ಲೇಖಕರ ಸಂಘ”.

jamathmlore-blogspot

jamathe-mangalore-website

 

ಗಂಗೂರಿನ ಭಾಗ್ಯಮ್ಮ ಮತ್ತು ಸಮಾನತೆ…

– ಮುನೀರ್ ಕಾಟಿಪಳ್ಳ

ಇತ್ತೀಚೆಗೆ ಡಿವೈಎಫ್ಐ ಜಿಲ್ಲಾ ಸಮ್ಮೇಳನದಲ್ಲಿ ಭಾಗವಹಿಸಲು ಹಾಸನ ಜಿಲ್ಲೆಗೆ ಹೋಗಿದ್ದೆ. ಸಮ್ಮೇಳನದ ಉದ್ಘಾಟನೆಗೆ ಭಾಗ್ಯಮ್ಮ ಎಂಬ ಯುವದಲಿತ ಮಹಿಳೆಯನ್ನು ಅಲ್ಲಿನ ಸಂಗಾತಿಗಳು ಆಹ್ವಾನಿಸಿದ್ದರು. ನನಗೆ ಸ್ವಲ್ಪ ಆಶ್ಚರ್ಯವಾಯಿತು. ಯಾರೀಕೆ ಭಾಗ್ಯಮ್ಮ, ಹೆಸರೇ ಕೇಳಿರದ ಸಾಮಾನ್ಯ ಮಹಿಳೆಯನ್ನು ಉದ್ಘಾಟಕರಾಗಿ ಯಾಕೆ ಕರೆದಿದ್ದಾರೆ. ಸಾಹಿತಿಗಳೋ, ಬುದ್ಧಿಜೀವಿಗಳೋ, ಹಿರಿಯ ನಾಯಕರೋ ಮಾಡಬೇಕಿದ್ದ ಉದ್ಘಾಟನೆಗೆ ಈಕೆಯನ್ನೇ ಯಾಕೆ ಆಹ್ವಾನಿಸಿದ್ದಾರೆ? ಎಂಬ ಕುತೂಹಲ ನನ್ನೊಳಗೆ ಮೂಡಿತು. ಅಲ್ಲಿನ ಸ್ಥಳೀಯ ಸಂಗಾತಿಗಳಲ್ಲಿ ಈ ಬಗ್ಗೆ ವಿಚಾರಿಸಿದಾಗ ಭಾಗ್ಯಮ್ಮ ಬಗ್ಗೆ ನನಗೆ ಹೆಮ್ಮೆ ಅನಿಸಿತು, ಆಕೆಯ ಭಾಷಣದ ನಾಲ್ಕೇ ನಾಲ್ಕು ಮಾತು ಆಕೆಯ ಬಗ್ಗೆ ಅಪಾರ ಗೌರವವನ್ನು ನನ್ನೊಳಗೆ ಮೂಡಿಸಿತು. ಹಾಗೆಯೇ ಹಾಸನ ಸಹಿತ ನಮ್ಮ ಕನ್ನಡ ನಾಡಿನಲ್ಲಿ ಹಸಿಹಸಿಯಾಗಿ ಜೀವಂತವಾಗಿರುವ ಫ್ಯೂಡಲ್ ವ್ಯವಸ್ಥೆ, ಜಾತಿ ತಾರತಮ್ಯ, ಅಸ್ಪೃಶ್ಯತೆಯ ಕರಾಳ ಮುಖವನ್ನು ಅನಾವರಣಗೊಳಿಸಿತು. ರಾಷ್ಟ್ರಮಟ್ಟದ ಸುದ್ಧಿಯಾಗಬೇಕಿದ್ದ ಗಂಗೂರು ಪ್ರಕರಣ ಮತ್ತು ಭಾಗ್ಯಮ್ಮ ಕುಟುಂಬದ ನೋವಿನ ಕಥೆಯನ್ನು ಇಲ್ಲಿನ ಮಾಧ್ಯಮಗಳು ಸೇರಿದಂತೆ ಒಟ್ಟು ವ್ಯವಸ್ಥೆ ಹೇಗೆ ಮುಚ್ಚಿ ಹಾಕಿತು. ದಿಕ್ಕು ತಪ್ಪಿಸಿತು, ಸಾಮಾಜಿಕ ನ್ಯಾಯಕ್ಕಾಗಿ ಧೈರ್ಯದಿಂದ ಹೋರಾಟ ಮಾಡಿದವರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಹೇಗೆ ಊರು ಬಿಡಿಸಿತು ಎಂಬ ಕಥೆಯನ್ನು ತೆರೆದಿಟ್ಟಿತು.

ಗಂಗೂರು ಹಾಸನ ಜಿಲ್ಲೆಯ ಹಳೆಬೀಡು ಸಮೀಪದ ಒಂದು ಗ್ರಾಮ. ಏಳೆಂಟು ನೂರು ಮನೆಗಳಲ್ಲಿ ನಲ್ವತ್ತರಷ್ಟು ಮನೆಗಳು ದಲಿತರಿಗೆ ಸೇರಿದ್ದು. ಇಲ್ಲಿನ ದಲಿತರು ತೀರಾ ಬಡತನದಲ್ಲಿರುವ ಭೂಹೀನರೇನಲ್ಲ. ಒಂದಿಷ್ಟು ಜಮೀನು ಹೊಂದಿರುವ ಇವರು ತಮ್ಮ ಜಮೀನಿನ ಕೆಲಸಗಳು ಮುಗಿದ ಮೇಲೆ ಊರಿನ ಮೇಲ್ಜಾತಿಗಳ ಮನೆ, ಜಮೀನಿನಲ್ಲಿ ದುಡಿಯುತ್ತಾರೆ. ಆರ್ಥಿಕವಾಗಿ ಇವರು ಮೇಲ್ಜಾತಿಗಳಿಗೆ ತೀರಾ ಅವಲಂಭಿತರಾಗಿಲ್ಲದಿದ್ದರೂ ತಮ್ಮ ಕೀಳು ಜಾತಿಯ ಕಾರಣಕ್ಕಾಗಿ ಮೇಲ್ಜಾತಿಗಳು ಹೇರಿದ ಎಲ್ಲಾ ಕಟ್ಟುಪಾಡುಗಳಿಗೆ ಒಳಗಾದವರು. ಹೊಟೇಲ್‌ಗಳಲ್ಲಿ ಎರಡು ಲೋಟ ಪದ್ಧತಿ, Gangoor-1ಊರಿನ ಕ್ಷೌರಿಕನ ಅಂಗಡಿಯಲ್ಲಿ ಕೂದಲು ಕಟ್ಟಿಂಗ್ ಮಾಡಿಸಲು ಅವಕಾಶ ಇಲ್ಲದಿರುವುದು, ಮೇಲ್ಜಾತಿಗಳ ಮನೆಗಳಲ್ಲಿ ಕೆಲಸಕ್ಕೆ ಹೋದಾಗ ತಾವೇ ತಟ್ಟೆ ಹಿಡಿದುಕೊಂಡು ಹೋಗಬೇಕು, ಮೇಲ್ಜಾತಿಗಳ ಮನೆಯಲ್ಲಿ ಮದುವೆ ಮುಂಜಿಗಳು ನಡೆದಾಗ ಕೇರಿಯ ಬಾಗಿಲಲ್ಲಿ ನಿಂತು ತಮಟೆ ಬಾರಿಸುವವ ನೀಡುವ ಆಹ್ವಾನವನ್ನೇ ಸ್ವೀಕರಿಸಿ ಶುಭಕಾರ್ಯಗಳಿಗೆ ಹೋಗಬೇಕು, ಪ್ರತ್ಯೇಕ ಕೂತು ಊಟ ಮಾಡಬೇಕು, ದಲಿತ ಹುಡುಗರು, ಯುವತಿಯರು ಒಳ್ಳೆಯ ಬಟ್ಟೆ ಧರಿಸಿ ಮೇಲ್ಜಾತಿಕೇರಿಗಳಲ್ಲಿ ಅಡ್ಡಾಡಬಾರದು. ಹೀಗೆ ಶತಮಾನಗಳ ಹಿಂದಿನ ಎಲ್ಲಾ ಪಾಳೇಗಾರಿ ಆಚರಣೆಗಳು ಗಂಗೂರಿನಲ್ಲಿ ಈಗಲೂ ಹಸಿಹಸಿಯಾಗಿ ಜೀವಂತವಾಗಿದೆ. ಇದೆಲ್ಲವನ್ನೂ ಯಾವುದೇ ತಕರಾರಿಲ್ಲದೆ ಒಪ್ಪಿ ಪಾಲಿಸಿಕೊಂಡು ಬಂದದ್ದಕ್ಕೆ ಗಂಗೂರಿನ ದಲಿತರು ಇಷ್ಟರವರೆಗೆ ಊರಿನಲ್ಲಿ ‘ನೆಮ್ಮದಿ’ಯಾಗಿ ಬದುಕಿದ್ದರು. ಅವರಿಗೆ ಯಾವುದೇ ಸಮಸ್ಯೆ ಎದುರಾಗಿರಲಿಲ್ಲ. ಆದರೆ ಕಳೆದ ಹತ್ತು ವರ್ಷಗಳ ಹಿಂದೆ ಹಾಸನದ ಆಲೂರು ತಾಲೂಕು ಕೇಂದ್ರದಲ್ಲಿ ಹುಟ್ಟಿ ಅಲ್ಲೇ ಎಸ್.ಎಸ್.ಎಲ್.ಸಿ.ವರೆಗೆ ಓದಿರುವ ಭಾಗ್ಯಮ್ಮ ಎಂಬ ದಲಿತ ಯುವತಿ ಯಾವಾಗ ಗಂಗೂರಿನ ಹುಡುಗನನ್ನು ಮದುವೆಯಾಗಿ ದಲಿತಕೇರಿಗೆ ಕಾಲಿಟ್ಟಳೋ ಆಕೆಗೆ ಇದೆಲ್ಲವನ್ನು ಸಹಿಸಲಾಗಲಿಲ್ಲ. ಅಂಬೇಡ್ಕರ್, ಸಂವಿಧಾನ, ಹೋರಾಟ, ಚಳುವಳಿ, ಸಮಾನತೆ, ದೇವಸ್ಥಾನ ಪ್ರವೇಶ ಹೀಗೆ ಒಂದಿಷ್ಟು ತಿಳಿದುಕೊಂಡಿದ್ದ ಭಾಗ್ಯಮ್ಮ ಈ ರೀತಿಯ ಶೋಷಣೆಯನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ.

ಭಾಗ್ಯಮ್ಮ ಇದನ್ನೆಲ್ಲ ಪ್ರಶ್ನಿಸಬೇಕು ಎಂದುಕೊಳ್ಳುತ್ತಿದ್ದರೂ ಊರಿನ ಇತರ ದಲಿತರು ಬೆಂಬಲ ಕೊಡಬೇಕಲ್ಲ. ನಾವು ಇರಬೇಕಾದದ್ದೇ ಹೀಗೆ ಎಂಬ ಗುಲಾಮಿ ಮನೋಭಾವಕ್ಕೆ ಅನಿವಾರ್ಯವಾಗಿ ಒಗ್ಗಿಹೋಗಿದ್ದ ಗಂಗೂರಿನ ದಲಿತರು ಭಾಗ್ಯಮ್ಮಳ ಜೊತೆ ಕೈಜೋಡಿಸಲು ತಯಾರಿರಲಿಲ್ಲ. Gangoor-2ಈ ನಡುವೆ ಊರಿನ ರಂಗನಾಥ ಸ್ವಾಮಿ ದೇವಸ್ಥಾನದ ಪುನರ್ ನಿರ್ಮಾಣ ನಡೆಯಿತು. ಒಂದೊಂದು ಕುಟುಂಬಕ್ಕೂ (ಕುಟುಂಬ ಅಂದರೆ ಗಂಡ-ಹೆಂಡತಿ) ತಲಾ ಐದೈದು ಸಾವಿರ ವಂತಿಗೆ ನಿಗದಿ ಮಾಡಲಾಯಿತು. ದೇವಸ್ಥಾನಕ್ಕೆ ಪ್ರವೇಶ ನಿಷಿದ್ಧವಾಗಿದ್ದರೂ ವಂತಿಗೆಯಿಂದೇನೋ ದಲಿತರಿಗೆ ವಿನಾಯಿತಿ ಸಿಗಲಿಲ್ಲ. ಪ್ರತಿಯೊಂದು ದಲಿತ ಕುಟುಂಬವೂ ತಮಗೆ ನಿಗದಿಪಡಿಸಿದ ವಂತಿಗೆಯನ್ನು ತಕರಾರಿಲ್ಲದೆ ಪಾವತಿಸಿತು. ಭಾಗ್ಯಮ್ಮ ಮನೆಯಲ್ಲಿ ಆಕೆಯ ಇಬ್ಬರು ಮೈದುನರದ್ದೂ ಸೇರಿಸಿದರೆ ಒಟ್ಟು ಮೂರು ಕುಟುಂಬ ಆಗುತ್ತದೆ. ಮೈದುನರದ್ದೂ ಸೇರಿಸಿ ಒಟ್ಟು ಹದಿನೈದು ಸಾವಿರ ರೂಪಾಯಿಗಳನ್ನು ಭಾಗ್ಯಮ್ಮ ಅವರ ಒಂದು ಮನೆಯಿಂದಲೇ ದೇವಸ್ಥಾನಕ್ಕೆ ಚಂದಾ ನೀಡಲಾಗಿದೆ. ಇಷ್ಟು ಮಾತ್ರವಲ್ಲದೆ ದೇವಸ್ಥಾನ, ಗರ್ಭಗುಡಿಯ ಬಾಗಿಲುಗಳ ನಿರ್ಮಾಣಕ್ಕೆ ಭಾಗ್ಯಮ್ಮಳ ದಲಿತ ಕುಟುಂಬವೇ ಉತ್ತಮ ತಳಿಯ ಮರಮಟ್ಟು ನೀಡಿದೆ. ಇಷ್ಟೆಲ್ಲಾ ಕೊಡುಗೆಗಳನ್ನು ಮೇಲ್ಜಾತಿ ಕುಟುಂಬಗಳಿಗೆ ಕಡಿಮೆ ಇಲ್ಲದಂತೆ ಊರ ದೇವಸ್ಥಾನಕ್ಕೆ ನೀಡಿದ್ದರೂ, ದಲಿತರಿಗೆ ಮಾತ್ರ ದೇವಸ್ಥಾನದ ಬಾಗಿಲು ತೆರೆಯಲೇ ಇಲ್ಲ. ಅವರು ಏನಿದ್ದರೂ ಹೊರಗಡೆ ದೂರದಲ್ಲಿ ನಿಂತು ಕೈ ಮುಗಿಯಬೇಕು. ಯಾವ ಸ್ವಾಭಿಮಾನಿ ತಾನೇ ಇದನ್ನೆಲ್ಲ ಸಹಿಸಲು ಸಾಧ್ಯ? ಸಹಜವಾಗಿ ಭಾಗ್ಯಮ್ಮ ಸಿಡಿದು ನಿಂತಿದ್ದಾಳೆ. ಊರಿನಲ್ಲಿ ಸ್ಥಾಪನೆಗೊಂಡಿದ್ದ ಅಂಬೇಡ್ಕರ್ ಸಂಘದ ಯುವಕರನ್ನು ಜೊತೆ ಸೇರಿಸಿದ್ದಾಳೆ. ಊರ ಮಹಿಳೆಯರಲ್ಲಿ ಜಾಗೃತಿ ಮೂಡಿಸಿದ್ದಾಳೆ. ಭಾಗ್ಯಮ್ಮಳ ನಿರಂತರ ಪ್ರಯತ್ನದಿಂದ ಒಂದಿಷ್ಟು ಜನ ದಲಿತರು ತಮ್ಮ ಹಕ್ಕುಗಳಿಗಾಗಿ ಎದ್ದು ನಿಲ್ಲಲು ತಯಾರಾಗಿದ್ದಾರೆ. ಹೀಗೆ ಗಂಗೂರಿನಲ್ಲಿ ನಿಧಾನಕ್ಕೆ ಬಂಡಾಯಕ್ಕೆ ವೇದಿಕೆ ಸಜ್ಜಾಗಿದೆ.

ಭಾಗ್ಯಮ್ಮ ಮತ್ತು ಆಕೆಯ ಸಂಗಾತಿಗಳಿಗೆ ಹಾಸನದ ಕೆಲ ದಲಿತ ಚಳುವಳಿಯ ಕಾರ್ಯಕರ್ತರು ಬೆಂಬಲ ನೀಡಿದ್ದಾರೆ. ಹೀಗೆ ಅಸಮಾನತೆಯ ವಿರುದ್ಧ ಸಮರ ಸಾರಲು ನಿರಂತರ ಪ್ರಯತ್ನಿಸಿ ಸಮಯ ಕಾಯುತ್ತಿದ್ದ ಭಾಗ್ಯಮ್ಮ ಒಂದು ದಿನ ಒಂದಿಷ್ಟು ಮಹಿಳೆಯರ ಸಹಿತ ಧೈರ್ಯದಿಂದ ದೇವಸ್ಥಾನ ಪ್ರವೇಶಿಸಿದ್ದಾಳೆ. ಇದು ಗಂಗೂರಿನ ಮಟ್ಟಿಗೆ ಅನಿರೀಕ್ಷಿತ, ಅಲ್ಲಿನ ಮೇಲ್ಜಾತಿ ಮನಸ್ಸುಗಳು ಕ್ರೋಧಗೊಂಡಿದೆ. ದಲಿತರ ‘ಅಹಂಕಾರ’ ಕಂಡು ಕೆರಳಿ ನಿಂತಿವೆ. ಪ್ರಕರಣ ಇಡೀ ಜಿಲ್ಲೆಯಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಹಾಸನದಂತ ಫ್ಯೂಡಲ್ ಮನಸ್ಥಿತಿಯ ನಾಡಿನಲ್ಲಿ ಇದು ಆ ವ್ಯವಸ್ಥೆಗೆ ಬಿದ್ದ ಕೊಡಲಿ ಪೆಟ್ಟಿನಂತಾಗಿದೆ. ಇಂತಹ ಪರಿಸ್ಥಿತಿಗೆ ಕಾರಣರಾದ ಭಾಗ್ಯಮ್ಮ ಮತ್ತವರ ಸಂಗಾತಿಗಳನ್ನು ಮಟ್ಟ ಹಾಕಲೇ ಬೇಕು ಎಂದು ಜಿಲ್ಲೆಯ ಒಟ್ಟು ಆಳುವ ವ್ಯವಸ್ಥೆಯೇ ಟೊಂಕ ಕಟ್ಟಿ ನಿಂತಿದೆ. ಮೀಸಲಾತಿ ನೀತಿಯಿಂದ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ಆಯ್ಕೆಯಾದ ಕಮಲಾ ಎಂಬ ದಲಿತ ಮಹಿಳೆಯನ್ನು ಒಂದು ಬಾರಿಯೂ ಕುರ್ಚಿಯಲ್ಲಿ ಕೂರಿಸದೆ ಕೇವಲ ಕಡತಗಳಿಗೆ ಸಹಿ ಹಾಕಲಷ್ಟೇ ಬಳಸಿದ್ದ ಗಂಗೂರಿನಂತಹ ಊರು ಭಾಗ್ಯಮ್ಮಳನ್ನು ಸಹಿಸಲು ಸಾಧ್ಯವೇ? ಹೀಗೆ ಉದ್ವಿಗ್ನಗೊಂಡ ಊರು ಸೇಡು ತೀರಿಸಿಕೊಳ್ಳಲು ತೀರ್ಮಾನಿಸಿದೆ. ಅಪವಿತ್ರಗೊಂಡ ರಂಗನಾಥ ಸ್ವಾಮಿ ದೇವಸ್ಥಾನ ಕೆಡವಿ ಪುನರ್ ನಿರ್ಮಿಸಬೇಕು ಎಂದು ತೀರ್ಮಾನಿಸಿದೆ. ಹೀಗೆ ಸೇಡಿಗಾಗಿ ಅವಕಾಶ ಕಾಯುತ್ತಿದ್ದ ಊರಿನ ಫ್ಯೂಡಲ್ ಮನಸ್ಸುಗಳಿಗೆ ಒಂದು ಅವಕಾಶ ಒದಗಿಬಂದಿದೆ. Gangoor-3ಬೆಂಗಳೂರಿನ ಕ್ಷೌರಿಕ ಸಮಾಜದ ಮುಖಂಡರೊಬ್ಬರು ಅಸ್ಪೃಶ್ಯತೆಗಾಗಿ ಸುದ್ಧಿ ಮಾಡಿದ ಗಂಗೂರಿಗೆ ಬಂದಿಳಿದಿದ್ದಾರೆ. ನೇರ ಊರಿನ ಶಾಲೆಗೆ ತೆರಳಿ ಎಲ್ಲಾ ಜಾತಿಯ ಮಕ್ಕಳಿಗೆ ಒಟ್ಟಾಗಿ ಕೂದಲು ಕಟ್ಟಿಂಗ್ ಮಾಡಿದ್ದಾರೆ. ಇಷ್ಟಕ್ಕೇ ನೆಪಕ್ಕಾಗಿ ಕಾಯುತ್ತಿದ್ದ ಮೇಲ್ಜಾತಿಗಳು ಉರಿದು ಬಿದ್ದಿದ್ದಾರೆ. ತಮ್ಮ ಅನುಮತಿ ಇಲ್ಲದೆ ನಮ್ಮ ಮಕ್ಕಳಿಗೆ ಹೇಗೆ ಕಟ್ಟಿಂಗ್ ಮಾಡಿಸಿದ್ರಿ ಎಂದು ಗಲಾಟೆ ಶುರು ಮಾಡಿದ್ದಾರೆ. ಇದನ್ನು ಮಾಡಿಸಿದ್ದು ಭಾಗ್ಯಮ್ಮಳೇ ಎಂದು ರೇಗಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮೇಲ್ಜಾತಿಗಳ ಆಕ್ರೋಶಕ್ಕೆ ಬೆದರಿ ಭಾಗ್ಯಮ್ಮ ಸೇರಿದಂತೆ ಅವರು ದೂರು ಕೊಟ್ಟವರ ಮೇಲೆ ಕಠಿಣ ಕಾಯ್ದೆಯ ಅಡಿಯಲ್ಲಿ ದೂರು ದಾಖಲಿಸಿದ್ದಾರೆ.

ಘಟನೆ ಬಿಸಿಬಿಸಿಯಾಗಿ ಇರುವಾಗಲೇ ಮರುದಿವಸ ಊರಿನಲ್ಲಿ ಜಿಲ್ಲಾಡಳಿತ ಶಾಂತಿಸಭೆ ಕರೆದಿದೆ. ಹಿಂದಿನಿಂದಲೂ ಮೇಲ್ಜಾತಿಗಳು ವಿಧಿಸಿದ ಕಟ್ಟುಪಾಡುಗಳನ್ನು ಚಾಚೂ ತಪ್ಪದೇ ಪಾಲಿಸುತ್ತಾ ಬಂದಿದ್ದ ಊರಿನ ದಲಿತರು ಭಯಗೊಂಡಿದ್ದಾರೆ. ಬೆರಳೆಣಿಕೆಯ ದಲಿತ ಕುಟುಂಬಗಳನ್ನು ಬಿಟ್ಟರೆ ಉಳಿದ ಕುಟುಂಬಗಳು ಹಿಂದಿನಂತೆಯೇ ಪದ್ಧತಿಗಳು ಮುಂದುವರಿಯಲಿ ಎಂದು ಮೇಲ್ಜಾತಿಗಳಿಗೆ ಶರಣಾಗಿವೆ. ಮರುದಿವಸ ಶಾಂತಿ ಸಭೆಯಲ್ಲಿ ಇದು ನಿಚ್ಚಳವಾಗಿ ವ್ಯಕ್ತವಾಗಿದೆ. ಶಾಂತಿ ಸಭೆಯಲ್ಲಿ ಐನೂರಕ್ಕೂ ಹೆಚ್ಚು ಜನ ಮೇಲ್ಜಾತಿಯವರು ಸೇರಿದ್ದರು. ಹೆಚ್ಚಿನ ದಲಿತರು ಭಯದಿಂದ ಮೇಲ್ಜಾತಿಗಳ ಜೊತೆ ನಿಂತರು. ತಮ್ಮ ಸಂಕಷ್ಟಗಳಿಗೆ ಭಾಗ್ಯಮ್ಮ ಕಾರಣ ಎಂದು ಹೇಳತೊಡಗಿದರು. ಶಾಂತಿ ಸಭೆಯಲ್ಲಿ ಸಾರ್ವಜನಿಕವಾಗಿ ಭಾಗ್ಯಮ್ಮ ಮೇಲೆ ಮೇಲ್ಜಾತಿಗಳು ಅಮಾನವೀಯವಾಗಿ ಹಲ್ಲೆ ನಡೆಸಿದವು, ಭಯಗೊಂಡಿದ್ದ ಕೆಳ ದಲಿತರನ್ನು ಬಲವಂತವಾಗಿ ಹಲ್ಲೆಯಲ್ಲಿ ಭಾಗವಹಿಸುವಂತೆ ಮಾಡಿದವು. ಬಹಿರಂಗವಾಗಿ ಪೊಲೀಸ್, ಜಿಲ್ಲಾಡಳಿತ ಅಧಿಕಾರಿಗಳು, ಮಾಧ್ಯಮದ ಜನರೆದುರು ಹಲ್ಲೊಗೊಳಗಾಗ ಭಾಗ್ಯಮ್ಮ ಮತ್ತು ಇನ್ನೂ ಒಂದಿಬ್ಬರು ಮಹಿಳೆಯರು ಗಾಯಗೊಂಡು ಆಸ್ಪತ್ರೆ ಸೇರಿದರು.

ಈಗ ಗಂಗೂರು ಶಾಂತ. ಊರಿನಲ್ಲಿ ಪೊಲೀಸರು ಠಿಕಾಣಿ ಹೂಡಿದ್ದಾರೆ. ಗಂಗೂರಿನಲ್ಲಿ ಗಲಾಟೆ ಮಾಡಿಸಿದ್ದು ಹೊರಗಿನಿಂದ ಬಂದವರು ಮೇಲ್ಜಾತಿಗಳ ತಪ್ಪಿಲ್ಲ ಎಂದು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಪತ್ರಿಕಾ ಹೇಳಿಕೆ ಕೊಟ್ಟಿದ್ದಾರೆ. ಬೆರಳೆಣಿಕೆಯ ಕೆಲ ಮನೆಗಳನ್ನು ಬಿಟ್ಟರೆ ಮಿಕ್ಕೆಲ್ಲ ದಲಿತರು ನಾವು ಹಿಂದಿನಂತೆ ಮೇಲ್ಜಾತಿಗಳ ಜೊತೆಗೆ ಅನೋನ್ಯತೆಯಿಂದ ಬಾಳುತ್ತೇವೆ. ದೇವಸ್ಥಾನ ಪ್ರವೇಶವೂ ಬೇಡ, Gangoor-5ಒಂದೇ ಲೋಟವೂ ಬೇಡ, ಊರಿನ ಸೆಲೂನಿನಲ್ಲಿ ಕೂದಲು ಕಟ್ಟಿಂಗೂ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಸಮಾನತೆ ಕೇಳಿದ್ದಕ್ಕೆ ಕೆಲ ದಲಿತರು ಜೈಲಿಗೆ ಹೋಗಿದ್ದಾರೆ. ಭಾಗ್ಯಮ್ಮ ಆಸ್ಪತ್ರೆಯಿಂದ ಚೇತರಿಸಿ, ಜಾಮೀನು ಪಡೆದು ತನ್ನ ತವರೂರು ಆಲೂರು ಸೇರಿಕೊಂಡಿದ್ದಾಳೆ. ಘಟನೆ ನಡೆದು ತಿಂಗಳು ತುಂಬುತ್ತಿದ್ದರೂ ಈಕೆಗೆ ಗಂಗೂರಿಗೆ ಪ್ರವೇಶ ಮಾಡಲು ಸಾಧ್ಯವಾಗಿಲ್ಲ. ಅಲ್ಲಿ ಹೋದರೆ ಭಾಗ್ಯಮ್ಮಳಿಗೆ ಅಪಾಯ ತಪ್ಪಿದ್ದಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಜಿಲ್ಲಾಡಳಿತ, ಪೊಲೀಸರು, ಬಂಡವಾಳ ಶಾಹಿ ಪಕ್ಷಗಳನ್ನು ನಿಯಂತ್ರಿಸುವ ಮೇಲ್ಜಾತಿ ರಾಜಕಾರಣಿಗಳು, ಮಾಧ್ಯಮದ ಮೇಲ್ಜಾತಿ ಮನಸ್ಸುಗಳು ಒಟ್ಟು ಸೇರಿ ಭಾಗ್ಯಮ್ಮ ಮತ್ತು ಸಂಗಾತಿಗಳದ್ದೇ ತಪ್ಪು ಎಂಬಂತೆ ಬಿಂಬಿಸಿಬಿಟ್ಟಿವೆ. ಒಂದು ಮಹತ್ವದ ಹೋರಾಟವನ್ನು ಮುರಿದು ಹಾಕಿದೆ. ರಾಷ್ಟ್ರಮಟ್ಟದ ಸುದ್ಧಿಯಾಗಬೇಕಿದ್ದ ಘಟನೆಯನ್ನು ಅಲ್ಲಿಗೆ ತಣ್ಣಗಾಗಿಸಲಾಗಿದೆ. ಊರಿನಿಂದ ಬಲವಂತವಾಗಿ ಹೊರಗಾಕಿಸಿಕೊಂಡ ಬಹಿಷ್ಕೃತೆ ಭಾಗ್ಯಮ್ಮ ದೊಡ್ಡ ಸುದ್ಧಿಯಾಗುವುದು ಯಾರಿಗೂ ಬೇಕಿಲ್ಲ.

ಅಂತಹ ಭಾಗ್ಯಮ್ಮಳನ್ನು ಡಿವೈಎಫ್ಐ ವೇದಿಕೆಯಲ್ಲಿ ನೋಡುವಾಗ ನನಗಂತೂ ಹೆಮ್ಮೆಯಾಯಿತು. ಇಂದು ಹಾಸನ ಸೇರಿದಂತೆ ರಾಜ್ಯದ ಎಲ್ಲ ಪ್ರಜಾಸತ್ತಾತ್ಮಕ ಚಳುವಳಿಗಳು ಭಾಗ್ಯಮ್ಮ ಜೊತೆಗೆ ನಿಲ್ಲಬೇಕಿದೆ. ಭಾಗ್ಯಮ್ಮ ನಿಜಕ್ಕೂ ಅಸಮಾನತೆಯ ವಿರುದ್ಧದ ಹೋರಾಟದ ಸಂಕೇತ, ತಳಮಟ್ಟದಲ್ಲಿ ಹುಟ್ಟಿ ಬಂದ ನಿಜ ನಾಯಕಿ. ಆಕೆ ಆಙಈ ಸಮ್ಮೇಳನದಲ್ಲಿ ಆಡಿದ ಒಂದು ಮಾತು ಇವತ್ತಿಗೂ ನನ್ನ ಕಿವಿಯಲ್ಲಿ ಮಾರ್ದನಿಸುತ್ತಿದೆ. ದೇವಸ್ಥಾನ ನಾವು ವಂತಿಗೆ ಕೊಟ್ಟಾಗ, ಗರ್ಭಗುಡಿಯ ಕಲ್ಲು ಕಟ್ಟಿದಾಗ, ದೇವಸ್ಥಾನದ ಒಳಾಂಗಣಕ್ಕೆ ಸುಣ್ಣ ಹೊಡೆದಾಗ ದೇವರು ಯಾಕೆ ಮಲಿನಗೊಳ್ಳಲಿಲ್ಲ, ಆಗ ಯಾಕೆ ದೇವಸ್ಥಾನವನ್ನು ಇವರು ಕೆಡವಿ ಹೊಸದಾಗಿ ಕಟ್ಟಲಿಲ್ಲ. ಗಂಗೂರಿನ ಮೇಲ್ಜಾತಿಗಳ ಮನೆಯಲ್ಲಿ ನಾವು ಹೋಗಿ ಕರೆದು ಕೊಟ್ಟ ಹಾಲನ್ನು ಅವರು ಸೇವಿಸುತ್ತಾರೆ. ನಾವು ಅವರ ಜಮೀನಿನಲ್ಲಿ ಬಿತ್ತಿದ ಕಾಳಿನಿಂದ ಬೆಳೆದ ಅಕ್ಕಿ, ರಾಗಿಯನ್ನು ಮೇಲ್ಜಾತಿಗಳು ಉಣ್ಣುತ್ತಾರೆ. ಆಗ ಯಾಕೆ ಅವರ ಹೊಟ್ಟೆ, ಕರುಳು ಅಶುದ್ಧ ಆಗಲಿಲ್ಲ. ಅಶುದ್ಧಗೊಂಡ ತಮ್ಮ ಕರುಳನ್ನು ಬಗೆದು ಯಾಕೆ ಅವರು ಕಿತ್ತು ಹಾಕಲಿಲ್ಲ. ಇದು ಭಾಗ್ಯಮ್ಮಳ ಪ್ರಶ್ನೆ ಮಾತ್ರವಲ್ಲ ನಾಡಿನ ಎಲ್ಲಾ ಅಸ್ಪೃಶ್ಯತೆಗೆ ಒಳಗಾದ ಕೆಳ ಜಾತಿಗಳದ್ದು. ಈ ಪ್ರಶ್ನೆಗಳಿಗೆ ಉತ್ತರ ಸಿಗಲೇ ಬೇಕಿದೆ. ಉತ್ತರಿಸಬೇಕಾದವರು ಊರು ಬಿಡಿಸಿದ್ದಾರೆ, ಅಧಿಕಾರದ ಕುರ್ಚಿಯಲ್ಲಿ ಕೂತಿದ್ದಾರೆ.