ಮುಸ್ಲಿಂ ಲೇಖಕರ ಸಂಘ – ಜಮಾತೇ ಇಸ್ಲಾಂ ಹಾಗೂ “ಮೂಲಭೂತವಾದ”

– ಇರ್ಷಾದ್

ಜಮಾತೇ ಇಸ್ಲಾಮೀ ಹಿಂದ್ ಸಂಘಟನೆಯ ಪರೋಕ್ಷ ಹಿಡಿತದಲ್ಲಿರುವ ಮುಸ್ಲಿಂ ಲೇಖಕರ ಸಂಘ ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಖ್ಯಾತ ಪತ್ರಕರ್ತ ಪ್ರಗತಿಪರ ಚಿಂತಕ ಹಾಗೂ ನಮ್ಮ ಮಾರ್ಗದರ್ಶಕರಾಗಿರುವ ದಿನೇಶ್ ಅಮೀನ್ ಮಟ್ಟು ಅವರ ಭಾಷಣದ ನಿರೀಕ್ಷೆಗಳಲ್ಲಿ ಆರಂಭವಾದ ಚರ್ಚೆಯ ಹಿನ್ನಲೆಯಲ್ಲಿ ಈ ಲೇಖನ ಬರೆಯೋದು ಸಮಯೋಚಿತ ಎಂದನಿಸಿತು. ಜಮಾತೇ ಇಸ್ಲಾಮೀ ಹಿಂದ್ ಸಂಘಟನೆ ಮತ್ತು ಅದರ ಉದ್ದೇಶ ಹಾಗೂ ಆದರ್ಶಗಳ ಕುರಿತಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ, ಈ ಹಿಂದೆಯೂ ನಡೆದಿದೆ. jamatಜಾತ್ಯತೀತ ಭಾರತದಲ್ಲಿ ನಮ್ಮದು ಪ್ರಗತಿಪರ ಹಾಗೂ ವಿಶಾಲವಾದದಿಂದ ಕೂಡಿದ ಇಸ್ಲಾಂ ತತ್ವಾದರ್ಶದಲ್ಲಿ ಕಾರ್ಯಾಚರಿಸುತ್ತಿರುವ ಸಂಘಟನೆಯೆಂಬ ಹೆಸರಿನಲ್ಲಿ ಜಮಾತ್ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡುತ್ತಿದೆ. ತಮ್ಮ ಕಾರ್ಯತಂತ್ರದಲ್ಲಿ ಅದು ಯಶಸ್ಸನ್ನೂ ಕಾಣುತ್ತಿದೆ. ಮುಸ್ಲಿಂ ಸಮಾಜದಲ್ಲಿ ಇಸ್ಲಾಂ ಸನಾತನವಾದವನ್ನು ಪ್ರತಿಪಾದಿಸುವ ಜಮಾತ್ ಹೊರವಲಯದಲ್ಲಿ ತಮ್ಮನ್ನು ಜ್ಯಾತ್ಯಾತೀತವಾದಿ ಹಾಗೂ ಪ್ರಗತಿಪರ ಎಂದು ಬಿಂಬಿಸಿಕೊಳ್ಳುತ್ತಿರುವ ರೀತಿ ನೀತಿಗಳ ಕುರಿತಾಗಿ ಯಾವುದೇ ಪೂರ್ವಾಗ್ರಹವಿಲ್ಲದೆ ಚರ್ಚೆ ನಡೆಸಬೇಕಾದ ಅಗತ್ಯ ಇದೆ.

ಭಾರತೀಯ ಮುಸ್ಲಿಮರು ಶಾಂತಿ ಪ್ರಿಯರು. ಬಹುಸಂಸ್ಕೃತಿಗೆ ಒಗ್ಗಿಕೊಂಡು ಜೀವನ ನಡೆಸುವವರು ಎಂಬುವುದನ್ನು ನಾಡಿಗೆ ಸಾಬೀತು ಪಡಿಸಿದವರೇ ಸೂಫಿ ಸಂತರು. ಅರಬ್ ನಾಡಿನಲ್ಲಿ ಹುಟ್ಟಿದ ಇಸ್ಲಾಂ ಧರ್ಮವನ್ನು ಭಾರತಕ್ಕೆ ತಂದವರೇ ಈ ಸೂಫಿ ಸಂತರು. ಜನರ ನೋವು ನಲಿವುಗಳಿಗೆ ಸ್ಪಂದಿಸಿ ಅವರಲ್ಲಿ ತಾವೂ ಒಬ್ಬರಾಗಿ ಧರ್ಮದ ಸಾರವನ್ನು ಭಿತ್ತಿ ಎಲ್ಲಾ ಧರ್ಮ ತತ್ವಾದರ್ಶಕರುಗಳ ಜೊತೆಗೂಡಿ ಸಹಭಾಳ್ವೆ ನಡೆಸಿದವರು. ಬಾಬಾ ಬುಡನ್ ಗಿರಿ, ಬಂದೇ ನವಾಜ್, ಅಜ್ಮೀರ್ ಚಿಸ್ತಿ ಸೇರಿದಂತೆ ಭಾರತದಾದ್ಯಂತ ಇರುವ ಸಾಕಷ್ಟು ಸಂತರ ದರ್ಗಾಗಳು ಇಂದಿಗೂ ಬಹುಸಂಸ್ಕೃತಿಯ ಬೀಡಾಗಿವೆ. ಈ ದರ್ಗಾಗಳಿಗೆ ಮುಸ್ಲಿಮರು ಬರುತ್ತಾರೆ ಹಿಂದೂಗಳೂ ಬರುತ್ತಾರೆ. ಇದನ್ನು ಹಿಂದೂ ಮುಸ್ಲಿಂ ಎಂಬ ಪರಿಭಾಷೆಯಲ್ಲಿ ಕರೆಯೋದು ಸಮಂಜಸ ಅಲ್ಲ, ಯಾಕೆಂದರೆ ಇವರೆಲ್ಲಾ ಧರ್ಮ, ಜಾತಿಯ ಗಡಿಯನ್ನು ದಾಟಿ ನಿತ್ಯ ಜೀವನದ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡವರು, ತಮ್ಮ ಕಷ್ಟಗಳನ್ನು ಪರಿಹರಿಸಿದ ಎಂಬ ನಂಬಿಕೆ ಇಟ್ಟುಕೊಂಡು ಸಂತನ ಬಳಿಗೆ ಹೋಗಿ ಆತನನ್ನು ಗೌರವದಿಂದ ಕಾಣುತ್ತಾರೆ. ಬಹುಸಂಸ್ಕೃತಿಯ ದರ್ಗಾ ಪರಂಪರೆಯನ್ನು ಭಾರತೀಯ 90 ಶೇಕಡಕ್ಕಿಂತಲೂ ಅಧಿಕ ಮುಸ್ಲಿಮರು ಒಪ್ಪುತ್ತಾರೆ ಮತ್ತು ಅದನ್ನು ಆಚರಿಸಿಕೊಂಡು ಬರುತ್ತಿದ್ದಾರೆ.

ರಾಜ್ಯದ ವಿವಿಧ ಕಡೆಯಲ್ಲಿರುವ ದರ್ಗಾಗಳಿಗೆ ಭೇಟಿ ನೀಡುವಾಗ ನಮಗೆ ನೈಜ್ಯ ಜಾತ್ಯತೀತ ನಿಲುವಿನ ಅರಿವಾಗುತ್ತದೆ. ಎಲ್ಲಾ ಧರ್ಮ ಸಂಸ್ಕೃತಿಗಳ ಜನಸಾಮಾನ್ಯರು ಜೊತೆ ಜೊತೆಗೆ ಸೇರುವ ಹಾಗೂ ಸಂತನ ಸಮಾಧಿಯನ್ನು ಗೌರವಿಸುವ ಪದ್ದತಿ ನಮಗಲ್ಲಿ ಕಂಡುಬರುತ್ತದೆ. ಚಿಕ್ಕಮಗಳೂರು ಹಾಗೂ ಶಿವಮೊಗ್ಗದಲ್ಲಿರುವ ಅನ್ನಿಗೇರಿ, ಮಾಲೂರು, ಚೌಡೇಶ್ವರಿ ದರ್ಗಾಗಳಿಗೆ ಇತ್ತೀಚೆಗೆ ನಾನು ಹಾಗೂ ಗೆಳೆಯರು ಭೇಟಿ ಕೊಟ್ಟಾಗ ನನಗೆ ನಿಜಕ್ಕೂ ಅಲ್ಲಿಯ ವಾತಾವರಣ ನೋಡಿ ಆಶ್ವರ್ಯವಾಯಿತು. ಎರಡೂ ಧರ್ಮ ಭಾಂಧವರು ನಡೆದುಕೊಳ್ಳುವ ಬಹುಸಂಸ್ಕೃತಿಯ Ajmer-Dargah-Sharifಬೀಡಿನಂತೆ ಅದು ಕಂಡುಬಂತು. ಈ ಎಲ್ಲಾ ದರ್ಗಾಗಳಲ್ಲಿ ಸಂತನ ಸಮಾಧಿಯನ್ನು ಗೌರವಿಸುವುರದ ಜೊತೆಗೆ ದರ್ಗಾದಲ್ಲಿರುವ ಚೌಡೇಶ್ವರಿ , ಭೂತನಾಥ ದೈವಗಳನ್ನು ಅಲ್ಲಿಗೆ ಆಗಮಿಸುವ ಹಿಂದೂ ಮುಸ್ಲಿಂ ಭಕ್ತರು ಗೌರವಿಸುತ್ತಾರೆ. ಇಲ್ಲಿ ನಮಗೆ ಗೋಚರವಾಗುತ್ತಿರುವ ಸತ್ಯ ಏನೆಂದರೆ, ಹಿಂದಿನ ಕಾಲದಲ್ಲಿ ಆ ಕ್ಷೇತ್ರದಲ್ಲಿದ್ದ ಭಾವೈಕ್ಯ . ಸೂಫಿ ಸಂತನ ಜೊತೆಯಲ್ಲಿ ಅನ್ಯ ಧರ್ಮೀಯ ಸಂತ, ಮಹಾತ್ಮರೂ ಜೊತೆ ಜೊತೆಯಾಗಿ ಸಹಬಾಳ್ವೆಯನ್ನು ನಡೆಸುತ್ತಿದ್ದರು ಎಂಬುವುದು. ಆದರೆ ಜಮಾತ್‌ ನಂತಹಾ ಸಂಘಟನೆಗಳು ಇಂಥಹಾ ಜಾತ್ಯತೀತತೆಯನ್ನು ಎಂದೂ ಒಪ್ಪಿಕೊಳ್ಳುವುದಿಲ್ಲ. ಅವರ ಪ್ರಕಾರ ಇದು ಗೊಡ್ಡು ಜಾತ್ಯಾತೀತತೆ. ಜಾತ್ಯತೀತತೆಯ ಪ್ರತೀಕವಾದ ದರ್ಗಾ ಸಂಸ್ಕೃತಿಯನ್ನು ನಾಶ ಮಾಡಲು ಪರಿಶುದ್ಧ ಇಸ್ಲಾಂಮಿನ ಹೆಸರಲ್ಲಿ ಮೌದೂದಿ ಇಸ್ಲಾಂ ಪ್ರತಿಪಾದಕರು ಪ್ರಯತ್ನ ಪಡುತ್ತಿರುವುದು ಇದೀಗ ಅಲ್ಲಲ್ಲಿ ಕಂಡುಬರುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ದರ್ಗಾ ಸಂಸ್ಕೃತಿಯ ವಿರುದ್ಧ ಜಮಾತ್ ಸೇರಿದಂತೆ ಕೆಲವೊಂದು ಸಂಘಟನೆಗಳ ಹಿಂದಿನಿಂದಲೂ ಧ್ವನಿ ಎತ್ತುತ್ತಾ ಬಂದಿವೆ.

ಹಿಂದೂ ಪುರೋಹಿತವಾದ ವಿರುದ್ಧ ಹುಟ್ಟಿಕೊಂಡ ನಾಥ ಹಾಗೂ ದತ್ತ ಪಂಥಗಳನ್ನು ಹಿಂದೂ ಸನಾತನವಾದಿಗಳು ವಿರೋಧಿಸುವ ರೀತಿಯಲ್ಲೇ ಬಹುಸಂಸ್ಕೃತಿಯನ್ನು ಹಾಗೂ ಪ್ರಗತಿಪರ ಚಿಂತನೆಗಳ ಸಾರವನ್ನು ಬಿತ್ತುವ ಸೂಫಿ ಪಂಥವನ್ನು ಜಮಾತೇ ಇಸ್ಲಾಮ್ ಕಟುವಾಗಿ ಧಿಕ್ಕರಿಸುತ್ತಾ ಬಂದಿದೆ. ಸೂಫಿ ಸಾಹಿತ್ಯವನ್ನೂ ಮೌದೂದಿ ಸಿದ್ದಾಂತ ಖಂಡಿತಾ ಒಪ್ಪುವುದಿಲ್ಲ. ಭಾರತೀಯ ಮುಸ್ಲಿಂಮರಲ್ಲಿ ಅರಬ್ ಸಂಸ್ಕೃತಿಯ ಇಸ್ಲಾಮನ್ನು ಹೇರುವ ಪ್ರಯತ್ನ ಜಮಾತ್ ಹಾಗೂ ಅದರ ಸಹಭಾಗಿ ಸಂಘಟನೆಗಳು ನಿರಂತರ ಮಾಡಿಕೊಂಡು ಬರುತ್ತಿರುವುದು ತಿಳಿದಿರುವ ವಿಚಾರ. ಸ್ವತಂತ್ರ ಪೂರ್ವ ಭಾರತದಲ್ಲಿ ಇಂಥಹಾ ಬಹುಸಂಸ್ಕೃತಿಯನ್ನು ತಿರಸ್ಕರಿಸಿ ಪರಿಶುದ್ದ ಇಸ್ಲಾಂ ಕಲ್ಪನೆಯ ಹೆಸರಲ್ಲಿ ಮೌಲಾನಾ ಮೌದೂದಿಯವರು sio_mangaloreಜಮಾತ್ ಇಸ್ಲಾಮೀ ಸಿದ್ದಾಂತವನ್ನು ಹುಟ್ಟು ಹಾಕಿದರು. ದೇಶ ವಿಭಜನೆಯ ಸಂದರ್ಭದಲ್ಲಿ ಧರ್ಮದ ಆಧಾರದಲ್ಲಿ ಮುಸ್ಲಿಂ ರಾಷ್ಟ್ರದ ಸ್ಥಾಪನೆಯ ನಿಲುವನ್ನು ಮೌದೂದಿ ಪ್ರತಿಪಾದಿಸಿರುವುದು ಉಲ್ಲೇಖನಾರ್ಹ. ನಂತರದಲ್ಲಿ ಹಿಂದೂ ಮಹಾಸಭಾ ಹಿಂದೂ ರಾಷ್ಟ್ರದ ಪರಿಕಲ್ಪನೆಯೊಂದಿಗೆ ಸಾಗಿದರೆ ಇತ್ತ ಜಮಾತ್ ಇಸ್ಲಾಂ ರಾಷ್ಟ್ರದ ಪರಿಕಲ್ಪನೆಯನ್ನು ಹೊತ್ತು ಅದನ್ನು ಧಾರ್ಮಿಕ, ರಾಜಕೀಯ ಆಂದೋಲವನ್ನಾಗಿಸಿ ಭಾರತದಾದ್ಯಂತ ಪಸರಿಸುವ ಪ್ರಯತ್ನದಲ್ಲಿದೆ. ಮೌದೂದಿ ವಿಶ್ಲೇಷಿಸುವ ಜಮಾತೇ ಇಸ್ಲಾಮೀ ಚಿಂತನೆಯಲ್ಲಿ ಸೂಫಿಗಳಿಗೆ ಯಾವುದೇ ಸ್ಥಾನಮಾನ ಇಲ್ಲ. ಇವರ ಆಗಮನ ನಂತರ ದರ್ಗಾ ಸಂಸ್ಕೃತಿಗೆ ಸಾಕಷ್ಟು ವಿರೋಧಗಳು ವ್ಯಕ್ತವಾದವು. ಜಮಾತ್ ಹೇಳುವ ಕಂದಾಚಾರ ದರ್ಗಾ ಸಂಸ್ಕೃತಿಯದಾಗಿದೆ. ದರ್ಗಾಗಗಳಲ್ಲಿ ಆಚರಿಸುವ ವಿಧಿ ವಿಧಾನಗಳನ್ನು ಜಮಾತ್ ಖಂಡಿಸುತ್ತಾ ಬಂದಿದೆ. ಅದು ನೈಜ್ಯ ಇಸ್ಲಾಮ್ ತತ್ವಾದರ್ಶಗಳಿಗೆ ವಿರೋಧವಾಗಿದೆ ಎಂಬುವುದು ಜಮಾತ್ ನಿಲುವು. ಈ ನಿಟ್ಟಿಲ್ಲಿ ಸೂಫಿ ಸಾಹಿತ್ಯವನ್ನು ಒಡೆಯಲು ಶಾಂತಿ ಪ್ರಕಾಶನ ಸಾಕಷ್ಟು ಸಾಹಿತ್ಯಗಳು ಪ್ರಮುಖ ಪಾತ್ರ ವಹಿಸಿದೆ. ತಮ್ಮದೇ ಆದ ಸಾಹಿತ್ಯದ ಮೂಲಕ ಜಮಾತೇ ಮೌದೂದಿ ಸಿದ್ದಾಂತವನ್ನು ಅದು ವ್ಯವಸ್ಥಿತವಾಗಿ ಪಸರಿಸುವ ಪ್ರಯತ್ನದಲ್ಲಿದೆ. ಅದಕ್ಕಾಗಿ ಅದು ಮುಸ್ಲಿಂ ಲೇಖಕರ ಸಂಘದಂತಹಾ ಸಾಕಷ್ಟು ಸಾಹಿತ್ಯ ಸಂಘಟನೆಗಳನ್ನು ಭಾರತದಾದ್ಯಂತ ಹುಟ್ಟುಹಾಕಿದೆ. (ಜಮಾತ್ ಸಂಘಟನೆ ಮುಸ್ಲಿಂ ಲೇಖಕರ ಸಂಘ ತನ್ನದಲ್ಲಾ ಎಂದು ಹೇಳುತ್ತಿದ್ದರೂ ಮುಸ್ಲಿಂ ಲೇಖಕರ ಸಂಘವು ಜಮಾತ್ ಅಧೀನದಲ್ಲಿರುವುದು ಬಹಿರಂಗ ಗುಟ್ಟು ಎಂಬುವುದರಲ್ಲಿ ಸಂಶಯವಿಲ್ಲ.

ಒಂದೆಡೆಯಲ್ಲಿ ನೈಜ್ಯ ಜಾತ್ಯತೀತವಾದವನ್ನು ಬಿಂಬಿಸುವ ದರ್ಗಾ ಬಹುಸಂಸ್ಕೃತಿಯನ್ನು ಕಂದಾಚಾರ ಹಾಗೂ ಮೂಲ ಇಸ್ಲಾಂಗೆ ಸಲ್ಲದ ಸಂಸ್ಕೃತಿ ಎಂದು ವಿರೋಧಿಸುವ ಜಮಾತ್ ಸಂಘಟನೆ ಮುಸ್ಲಿಂ ವಿರುದ್ಧ ದ್ವೇಷವನ್ನು ಹರಡುವ ಹಿಂದುತ್ವವಾದಿ ಸಂಘಟನೆಗಳ jamat-mangaloreಕೆಲ ಮುಖಂಡರನ್ನು ತಮ್ಮ ಸಂಘಟನೆಯ ಕಾರ್ಯಕ್ರಮಗಳಿಗೆ ಆಹ್ವಾನಿಸುವ ಮೂಲಕ ತನ್ನನ್ನು ಜಾತ್ಯತೀತವಾದಿ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ಹಾಸ್ವಾಸ್ಪದ. ಹಿಂದೂ ಮೂಲಭೂತವಾದಕ್ಕೆ ಪ್ರತಿರೋಧವನ್ನು ವಿರೋಧಿಸುವುದು ಮಾತ್ರ ಪ್ರಗತಿಪರತೆ ಎಂದು ವ್ಯಾಖ್ಯಾನಿಸುವ ಜಮಾತ್ ಧರ್ಮ ಪಾಲನೆಯ ಆಚಾರ ವಿಚಾರಗಳ ಕುರಿತಾಗಿ ಅದರ ನಿಲುವು ಗಮನಿಸಿದಾಗ ಹಿಂದೂ ಸನಾತನವಾದಿ ಸಂಘಟನೆಗಳು ಹಾಗೂ ಜಮಾತ್ ನಡುವೆ ಯಾವುದೇ ವ್ಯತ್ಯಾಸವಿಲ್ಲದೇ ಇರುವುದು ಕಂಡುಬರುತ್ತದೆ. ಜಮಾತ್ ಅಧೀನದ ಮುಸ್ಲಿಮ್ ಲೇಖಕರ ಸಂಘದ ಕಾರ್ಯಕ್ರಮದಲ್ಲಿ ನಾಲ್ಕು ಗೋಡೆಯೊಳಗಿದ್ದ ಮುಸ್ಲಿಂ ಮಹಿಳೆಯರನ್ನು ಪರ ಪುರುಷರೊಂದಿಗೆ ವೇದಿಕೆ ಹಂಚಿಕೊಳ್ಳುವಂತೆ ಮಾಡಿದ್ದೇವೆ ಇದು ನಮ್ಮ ಪ್ರಗತಿಪರತೆಗೆ ಸಾಕ್ಷಿ ಎಂದು ಹೇಳಿಕೊಳ್ಳುತ್ತಿರುವಾಗ ಇನ್ನೊಂದೆಡೆಯಲ್ಲಿ ಶಾಂತಿ ಪ್ರಕಾಶನದದಿಂದ ಪ್ರಕಟವಾದ ಪುಸ್ತಕಗಳಲ್ಲಿ ಮಹಿಳೆಯರನ್ನು ಮಾರುಕಟ್ಟೆಯಿಂದ ಪಾರ್ಲಿಮೆಂಟ್ ವರೆಗೂ ಜೊತೆ ಸೇರಲು ಅನುಮತಿ ನೀಡುವುದಿಲ್ಲ ಎಂದು ಬರೆಯುತ್ತಿದೆ. ಮುಸ್ಲಿಂ ಲೇಖಕರ ಸಂಘದ ಕಾರ್ಯಕ್ರಮದಲ್ಲಿ ಮುಸ್ಲಿಂ ಮಹಿಳೆಯರ ಜೊತೆ ಜಮಾತ್ ಮುಖಂಡರು ವೇದಿಕೆ ಹಂಚಿಕೊಂಡರೆ ಅದು ಮೆಚ್ಚತಕ್ಕಂತಹಾ ವಿಚಾರ ಮತ್ತು ಅದಕ್ಕೆ ನಮ್ಮ ಬೆಂಬಲವೂ ಇದೆ. ಆದರೆ ಇನ್ನೊಂದೆಡೆ ದೆಹಲಿಯಲ್ಲಿ ಯುವತಿಯ ಮೇಲೆ ನಡೆದ ಅತ್ಯಾಚಾರ ಸಂದರ್ಭದಲ್ಲಿ ಜಮಾತ್ ಮುಖಂಡರೊಬ್ಬರು ಮಾಧ್ಯಮಗಳಿಗೆ ಶಾಲೆಯಲ್ಲಿ ಬಾಲಕ ಬಾಲಕಿಯರ “ಕೋ-ಎಜುಕೇಷನ್” ಗೆ ವಿರೋಧ ವ್ಯಕ್ತಪಡಿಸುವ ಹೇಳಿಕೆಯನ್ನು ನೀಡುತ್ತಾರೆ.

ಇದೊಂದು ಉದಾಹರಣೆಯಷ್ಟೇ. ಜಮಾತೇ ಇಸ್ಲಾಮೀ ಹಿಂದ್ ಸಂಘಟನೆಯ ಇಂಥಹಾ ಸಾಕಷ್ಟು ನಿಲುವುಗಳು ಅದರ ಕಾರ್ಯತಂತ್ರವನ್ನು ಸಂಶಯದಿಂದ ನೋಡಲು ಕಾರಣವಾಗಿದೆ. ಬಹುಸಂಸ್ಕೃತಿಯ ಸೂಫಿಸಂ ಅನ್ನು ಕಂದಾಚಾರದ ಹೆಸರಲ್ಲಿ ತಿರಸ್ಕರಿಸಿ. ಮುಸ್ಲಿಂ ಪ್ರಗತಿಪರರನ್ನು ಶರೀಯತ್ ವಿರುದ್ಧ ಎಂಬ ನೆಪದಲ್ಲಿ ತಿರಸ್ಕರಿಸಿ, ಇತರ ಧರ್ಮಿಯರೊಂದಿಗೆ ವೇದಿಕೆ ಹಂಚಿ ಜಮಾತ್ ಸಿದ್ದಾಂತವನ್ನು ಪ್ರತಿಪಾದಿಸುವ ಮೂಲಕ ತನ್ನನ್ನು ಪ್ರಗತಿಪರ ಹಾಗೂ ನೈಜ್ಯ ಇಸ್ಲಾಂ ತತ್ವಾದರ್ಶಗಳನ್ನು ಪಾಲಿಸುವ ಸಂಘಟನೆಯೆಂದು ಬಿಂಬಿಸ ಹೊರಟಿರುವುದು ಸರಿಯಲ್ಲ. ಈ ಕಾರಣಕ್ಕಾಗಿಯೇ ಮುಸ್ಲಿಂ ಸಮುದಾಯದ ಬಹುತೇಕ ಜನರು ಜಮಾತ್‌ಗೆ ಸಾಥ್ ಕೊಟ್ಟಿಲ್ಲ ಎಂಬುವುದು ಉಲ್ಲೇಖನಾರ್ಹ ‍ಅಂಶ. ಜಮಾತ್ ಆರ್.ಎಸ್.ಎಸ್ ಸಂಘಟನೆಯ ರೀತಿಯಲ್ಲೇ ಸಾಮಾಜಿಕ, ಸಾಹಿತ್ಯಿಕ, ಧಾರ್ಮಿಕತೆ ನಿಲುವುಗಳಲ್ಲಿ ನಂಬಿಕೆ ಇಟ್ಟಂತಹಾ ಸಂಘಟನೆ ಎಂಬುವುದರಲ್ಲಿ ಸಂಶಯವಿಲ್ಲ. jamathmlore-blogspotಆರ್.ಎಸ್.ಎಸ್ ತನ್ನ ಸಿದ್ದಾಂತವನ್ನು ಎಲ್ಲರ ಮುಂದೆ ಒಪ್ಪಿಕೊಂಡು ಕಾರ್ಯಾಚರಿಸುತ್ತಿದ್ದರೆ ಜಮಾತ್ ಅದಕ್ಕೆ ತೆರೆಮರೆಯಲ್ಲಿ ತನ್ನ ಸಿದ್ದಾಂತವನ್ನು ವಿವಿಧ ಆಯಾಮಗಳಲ್ಲಿ ಪಸರಿಸುತ್ತಿದೆ. ಈ ಕಾರಣಕ್ಕಾಗಿಯೇ ಮುಸ್ಲಿಂ ಲೇಖಕರ ಸಂಘದ ಕಾರ್ಯವೈಖರಿಯ ಕುರಿತು ಚರ್ಚೆ ಆರಂಭವಾಗಿದ್ದು. ಲೇಖಕರ ಸಂಘದ ಕೆಲವೊಂದು ಪದಾಧಿಕಾರಿಗಳು ಮುಸ್ಲಿಂ ಲೇಖಕರ ಸಂಘವು ಜಮಾತ್‌ಗೆ ಸೇರಿದ ಸಂಘಟನೆ ಅಲ್ಲ ಎಂದು ವಾದಿಸುತ್ತಿದ್ದರೂ ರಾಜ್ಯದ (ಮುಸ್ಲಿಂ) ಬರಹಗಾರರಿಗೆ, ಸಾಹಿತಿಗಳಿಗೆ, ಚಿಂತಕರಿಗೆ ಇದು ಗೊತ್ತಿರುವ ಬಹಿರಂಗ ಗುಟ್ಟು. ಸಂಘದ ಹುಟ್ಟಿಗೆ ಮೂಲ ಕಾರಣ ಜಮಾತ್ ಎಂಬುವುದನ್ನು ಜಮಾತೇ ಇಸ್ಲಾಂ ಸಂಘಟನೆಯು ಒಪ್ಪಿಕೊಳ್ಳದೇ ಇರುವುದು ವಿಪರ್ಯಾಸ. ಜಮಾತೇ ಇಸ್ಲಾಮೀ ಹಿಂದ್ ಮಂಗಳೂರು ಅದರ ಅಂತರ್ಜಾಲ ಪೇಜ್ ಒಂದಲ್ಲೂ ತನ್ನ ಸಹಭಾಗಿ ಸಂಘಟನೆಗಳ ಜೊತೆ ಮುಸ್ಲಿಮ್ ಲೇಖಕರ ಸಂಘದ ಹೆಸರನ್ನೂ ಸೇರಿಸಿಕೊಂಡಿದೆ. ಜಮಾತೇ ಇಸ್ಲಾಂ ಸಂಘಟನೆಯ ಕುರಿತು ನಮಗೆ ಯಾವುದೇ ಪೂರ್ವಾಗ್ರಹವಿಲ್ಲ. ಆದರೆ ಜಮಾತ್ ಮೂಲಭೂತವಾದಿ ಎಂಬುವುದರಲ್ಲಿ ಯಾವುದೇ ಅನುಮಾನವಿಲ್ಲ.

3 thoughts on “ಮುಸ್ಲಿಂ ಲೇಖಕರ ಸಂಘ – ಜಮಾತೇ ಇಸ್ಲಾಂ ಹಾಗೂ “ಮೂಲಭೂತವಾದ”

 1. Ananda Prasad

  ಕಟ್ಟರ್ ಇಸ್ಲಾಮಿಕ್ ತತ್ವಗಳನ್ನು ಇಂದು ಅಥವಾ ಕಟ್ಟರ್ ಹಿಂದೂವಾದಿ ತತ್ವಗಳನ್ನು ಪ್ರಚುರಪಡಿಸುವ ಅಥವಾ ಪುನರುತ್ಥಾನಗೊಳಿಸುವ ಅಗತ್ಯ ಇಂದು ಇಲ್ಲ. ವಿಜ್ಞಾನವು ಅಷ್ಟಾಗಿ ಬೆಳೆದಿರದ ಹಾಗೂ ಪ್ರಕೃತಿಯ ರಹಸ್ಯಗಳು ತಿಳಿದಿರದ ಕಾಲದಲ್ಲಿ ರೂಪುಗೊಂಡ ಆಚಾರ ವಿಚಾರಗಳನ್ನು ವಿಜ್ಞಾನವು ಬೆಳೆದಿರುವ ಹಾಗೂ ಪ್ರಕೃತಿಯ ಸಾಕಷ್ಟು ರಹಸ್ಯಗಳು ತಿಳಿದಿರುವ ಇಂದಿನ ಕಾಲದಲ್ಲಿ ಆಚರಿಸಬೇಕೆಂದು, ಅದುವೇ ಶ್ರೇಷ್ಠವೆಂದು ಜನತೆಯನ್ನು ನಂಬಿಸಬೇಕಾದ ಅಗತ್ಯ ಇಲ್ಲ. ಇಂದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಂವಿಧಾನವನ್ನು ಗೌರವಿಸುವ ಮನೋಸ್ಥಿತಿ ಬಲಗೊಂಡರೆ ಎಲ್ಲಾ ಧರ್ಮಗಳ ಜನರೂ ಅಲ್ಪಸಂಖ್ಯಾತ, ಬಹುಸಂಖ್ಯಾತ ಎಂಬ ಭೇದಭಾವವಿಲ್ಲದೆ, ಯಾವುದೇ ಭೀತಿ ಇಲ್ಲದೆ ಬದುಕಲು ಸಾಧ್ಯ. ಇದು ಭಾರತದಲ್ಲಿ ಪಾಕಿಸ್ತಾನ ಹಾಗೂ ಬಾಂಗ್ಲಾ ದೇಶಗಳಿಗಿಂತ ಉತ್ತಮವಾಗಿ ಸಾಧ್ಯವಾಗಿದೆ. ಇಲ್ಲಿ ಸಂವಿಧಾನ ನೀಡಿದ ಹಕ್ಕುಗಳಿಂದ ಹಾಗೂ ಅದನ್ನು ಗೌರವಿಸುವ ಜನರು ಬಹುಸಂಖ್ಯೆಯಲ್ಲಿ ಇರುವುದರಿಂದ ಇದು ಸಾಧ್ಯವಾಗಿದೆ. ಇಲ್ಲಿ ಬಹಳ ಸಣ್ಣ ಸಂಖ್ಯೆಯಲ್ಲಿರುವ ಪಾರ್ಸಿ ಜನಾಂಗದವರೂ ಯಾವುದೇ ಭೀತಿ ಇಲ್ಲದೆ ಬದುಕಲು ಸಾಧ್ಯವಾಗಿರುವುದು ಉತ್ತಮ ಸಂವಿಧಾನ ಹಾಗೂ ಜಾತ್ಯಾತೀತ ಹಾಗೂ ಉದಾರವಾದಿ ಮೌಲ್ಯಗಳನ್ನು ಗೌರವಿಸುವ ಜನ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದಲೇ. ಹಿಂದೂ ಮುಸ್ಲಿಂ ಸಹಬಾಳ್ವೆಯ ಪರಂಪರೆ ನಮ್ಮ ದೇಶದಲ್ಲಿ ಬಹಳ ಹಿಂದಿನಿಂದಲೂ ಇದೆ. ಇದನ್ನು ಕಟ್ಟರ್ ಹಿಂದೂವಾದ ಅಥವಾ ಕಟ್ಟರ್ ಇಸ್ಲಾಮಿಕ್ ವಾದದ ಪ್ರಸಾರದಿಂದ ಹಾಳು ಮಾಡುವುದು ಸಮಂಜಸವಲ್ಲ. ಮಿಲಿಟೆಂಟ್ ಸ್ವರೂಪದ, ಅತಿ ಶಿಸ್ತುಬದ್ಧ, ಕರ್ಮಠ ಜನರ ಪಡೆ ಸೃಷ್ಟಿಸುವುದರಿಂದ ಹಾಗೂ ಅದನ್ನು ಬಲಪಡಿಸುವುದರಿಂದ ದೇಶಕ್ಕೆ, ಮಾನವ ಜನಾಂಗಕ್ಕೆ ಹಾಗೂ ಮಾನವತೆಗೆ ಎಂದಿದ್ದರೂ ಅಪಾಯ ತಪ್ಪಿದ್ದಲ್ಲ. ಹೀಗಾಗಿ ಇಂಥ ಅತಿ ಶಿಸ್ತುಬದ್ಧ ಇಂಥ ಧಾರ್ಮಿಕ ಸಂಘಟನೆಗಳಿಂದ ಎಲ್ಲ ಧರ್ಮದ ಜನರೂ ದೂರವಿರುವುದು ಒಳಿತು.

  Reply
 2. bhatmahesht

  ನಿಜ, ವಿಜ್ಞಾನ, ತಂತ್ರಜ್ಞಾನಗಳು ಶರವೇಗದಲ್ಲಿ ಮುಂದುವರಿಯುತ್ತಿವೆ. ಮುಂದಿನ ಒಂದೆರಡು ದಶಕಗಳಲ್ಲಿ ಟ್ರಾನ್ಸ್ ಹ್ಯೂಮನ್ ಗಳು ಮತ್ತು ಮನುಷ್ಯರಿಗಿಂತ ಬುದ್ಧಿವಂತ ರೋಬೋಟ್ ಗಳು ಮತ್ತು ಮಷೀನ್ ಇಂಟೆಲಿಜೆನ್ಸ್ ಆಧಾರಿತ ವ್ಯವಸ್ಥೆಗಳು ಭೂಮಿಯ ಮೇಲೆ ಓಡಾಡಲಿವೆ. ಅವುಗಳಿಗೂ ಧರ್ಮಗಳನ್ನು ಅಂಟಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕು

  Reply
 3. Moulana Abdul Hafeez Al Qasmi

  ಇರ್ಷಾದ್ ರವರೇ,
  ತಮ್ಮ ಲೇಖನವನ್ನು ಓದಿದೆ. ತಮ್ಮ ಮನದಾಳವನ್ನು ಬರಹದ ಮೂಲಕ ಪ್ರಸ್ತುತಪಡಿಸುವಂತಹ ರೀತಿ ನನಗೆ ತುಂಬಾ ಇಷ್ಟವಾಯಿತು.
  ತಾವು ತಮ್ಮ ಲೇಖನದಲ್ಲಿ ಕೆಲವು ಬಾರಿ ಮೂಲಭೂತವಾದ, ಮೂಲಭೂತವಾದ ಎಂದು ಬರೆದಿದ್ದೀರಿ. ಕೊನೆಗೆ ಮೂಲಭೂತವಾದ ಎಂದರೆ ತಮ್ಮ ಪ್ರಕಾರ ಏನು?
  ಸೃಷ್ಟಿಕರ್ತನ ಇಷ್ಟೆಯಂತೆ ಜೀವನ ನಡೆಸುವುದಾ ಆಥವಾ ಸ್ವೇಚ್ಛಾಚಾರಿಗಳಾಗಿ ಬದುಕುವುದಾ?

  Reply

Leave a Reply

Your email address will not be published.