ಗಂಗೂರಿನ ಭಾಗ್ಯಮ್ಮ ಮತ್ತು ಸಮಾನತೆ…

– ಮುನೀರ್ ಕಾಟಿಪಳ್ಳ

ಇತ್ತೀಚೆಗೆ ಡಿವೈಎಫ್ಐ ಜಿಲ್ಲಾ ಸಮ್ಮೇಳನದಲ್ಲಿ ಭಾಗವಹಿಸಲು ಹಾಸನ ಜಿಲ್ಲೆಗೆ ಹೋಗಿದ್ದೆ. ಸಮ್ಮೇಳನದ ಉದ್ಘಾಟನೆಗೆ ಭಾಗ್ಯಮ್ಮ ಎಂಬ ಯುವದಲಿತ ಮಹಿಳೆಯನ್ನು ಅಲ್ಲಿನ ಸಂಗಾತಿಗಳು ಆಹ್ವಾನಿಸಿದ್ದರು. ನನಗೆ ಸ್ವಲ್ಪ ಆಶ್ಚರ್ಯವಾಯಿತು. ಯಾರೀಕೆ ಭಾಗ್ಯಮ್ಮ, ಹೆಸರೇ ಕೇಳಿರದ ಸಾಮಾನ್ಯ ಮಹಿಳೆಯನ್ನು ಉದ್ಘಾಟಕರಾಗಿ ಯಾಕೆ ಕರೆದಿದ್ದಾರೆ. ಸಾಹಿತಿಗಳೋ, ಬುದ್ಧಿಜೀವಿಗಳೋ, ಹಿರಿಯ ನಾಯಕರೋ ಮಾಡಬೇಕಿದ್ದ ಉದ್ಘಾಟನೆಗೆ ಈಕೆಯನ್ನೇ ಯಾಕೆ ಆಹ್ವಾನಿಸಿದ್ದಾರೆ? ಎಂಬ ಕುತೂಹಲ ನನ್ನೊಳಗೆ ಮೂಡಿತು. ಅಲ್ಲಿನ ಸ್ಥಳೀಯ ಸಂಗಾತಿಗಳಲ್ಲಿ ಈ ಬಗ್ಗೆ ವಿಚಾರಿಸಿದಾಗ ಭಾಗ್ಯಮ್ಮ ಬಗ್ಗೆ ನನಗೆ ಹೆಮ್ಮೆ ಅನಿಸಿತು, ಆಕೆಯ ಭಾಷಣದ ನಾಲ್ಕೇ ನಾಲ್ಕು ಮಾತು ಆಕೆಯ ಬಗ್ಗೆ ಅಪಾರ ಗೌರವವನ್ನು ನನ್ನೊಳಗೆ ಮೂಡಿಸಿತು. ಹಾಗೆಯೇ ಹಾಸನ ಸಹಿತ ನಮ್ಮ ಕನ್ನಡ ನಾಡಿನಲ್ಲಿ ಹಸಿಹಸಿಯಾಗಿ ಜೀವಂತವಾಗಿರುವ ಫ್ಯೂಡಲ್ ವ್ಯವಸ್ಥೆ, ಜಾತಿ ತಾರತಮ್ಯ, ಅಸ್ಪೃಶ್ಯತೆಯ ಕರಾಳ ಮುಖವನ್ನು ಅನಾವರಣಗೊಳಿಸಿತು. ರಾಷ್ಟ್ರಮಟ್ಟದ ಸುದ್ಧಿಯಾಗಬೇಕಿದ್ದ ಗಂಗೂರು ಪ್ರಕರಣ ಮತ್ತು ಭಾಗ್ಯಮ್ಮ ಕುಟುಂಬದ ನೋವಿನ ಕಥೆಯನ್ನು ಇಲ್ಲಿನ ಮಾಧ್ಯಮಗಳು ಸೇರಿದಂತೆ ಒಟ್ಟು ವ್ಯವಸ್ಥೆ ಹೇಗೆ ಮುಚ್ಚಿ ಹಾಕಿತು. ದಿಕ್ಕು ತಪ್ಪಿಸಿತು, ಸಾಮಾಜಿಕ ನ್ಯಾಯಕ್ಕಾಗಿ ಧೈರ್ಯದಿಂದ ಹೋರಾಟ ಮಾಡಿದವರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಹೇಗೆ ಊರು ಬಿಡಿಸಿತು ಎಂಬ ಕಥೆಯನ್ನು ತೆರೆದಿಟ್ಟಿತು.

ಗಂಗೂರು ಹಾಸನ ಜಿಲ್ಲೆಯ ಹಳೆಬೀಡು ಸಮೀಪದ ಒಂದು ಗ್ರಾಮ. ಏಳೆಂಟು ನೂರು ಮನೆಗಳಲ್ಲಿ ನಲ್ವತ್ತರಷ್ಟು ಮನೆಗಳು ದಲಿತರಿಗೆ ಸೇರಿದ್ದು. ಇಲ್ಲಿನ ದಲಿತರು ತೀರಾ ಬಡತನದಲ್ಲಿರುವ ಭೂಹೀನರೇನಲ್ಲ. ಒಂದಿಷ್ಟು ಜಮೀನು ಹೊಂದಿರುವ ಇವರು ತಮ್ಮ ಜಮೀನಿನ ಕೆಲಸಗಳು ಮುಗಿದ ಮೇಲೆ ಊರಿನ ಮೇಲ್ಜಾತಿಗಳ ಮನೆ, ಜಮೀನಿನಲ್ಲಿ ದುಡಿಯುತ್ತಾರೆ. ಆರ್ಥಿಕವಾಗಿ ಇವರು ಮೇಲ್ಜಾತಿಗಳಿಗೆ ತೀರಾ ಅವಲಂಭಿತರಾಗಿಲ್ಲದಿದ್ದರೂ ತಮ್ಮ ಕೀಳು ಜಾತಿಯ ಕಾರಣಕ್ಕಾಗಿ ಮೇಲ್ಜಾತಿಗಳು ಹೇರಿದ ಎಲ್ಲಾ ಕಟ್ಟುಪಾಡುಗಳಿಗೆ ಒಳಗಾದವರು. ಹೊಟೇಲ್‌ಗಳಲ್ಲಿ ಎರಡು ಲೋಟ ಪದ್ಧತಿ, Gangoor-1ಊರಿನ ಕ್ಷೌರಿಕನ ಅಂಗಡಿಯಲ್ಲಿ ಕೂದಲು ಕಟ್ಟಿಂಗ್ ಮಾಡಿಸಲು ಅವಕಾಶ ಇಲ್ಲದಿರುವುದು, ಮೇಲ್ಜಾತಿಗಳ ಮನೆಗಳಲ್ಲಿ ಕೆಲಸಕ್ಕೆ ಹೋದಾಗ ತಾವೇ ತಟ್ಟೆ ಹಿಡಿದುಕೊಂಡು ಹೋಗಬೇಕು, ಮೇಲ್ಜಾತಿಗಳ ಮನೆಯಲ್ಲಿ ಮದುವೆ ಮುಂಜಿಗಳು ನಡೆದಾಗ ಕೇರಿಯ ಬಾಗಿಲಲ್ಲಿ ನಿಂತು ತಮಟೆ ಬಾರಿಸುವವ ನೀಡುವ ಆಹ್ವಾನವನ್ನೇ ಸ್ವೀಕರಿಸಿ ಶುಭಕಾರ್ಯಗಳಿಗೆ ಹೋಗಬೇಕು, ಪ್ರತ್ಯೇಕ ಕೂತು ಊಟ ಮಾಡಬೇಕು, ದಲಿತ ಹುಡುಗರು, ಯುವತಿಯರು ಒಳ್ಳೆಯ ಬಟ್ಟೆ ಧರಿಸಿ ಮೇಲ್ಜಾತಿಕೇರಿಗಳಲ್ಲಿ ಅಡ್ಡಾಡಬಾರದು. ಹೀಗೆ ಶತಮಾನಗಳ ಹಿಂದಿನ ಎಲ್ಲಾ ಪಾಳೇಗಾರಿ ಆಚರಣೆಗಳು ಗಂಗೂರಿನಲ್ಲಿ ಈಗಲೂ ಹಸಿಹಸಿಯಾಗಿ ಜೀವಂತವಾಗಿದೆ. ಇದೆಲ್ಲವನ್ನೂ ಯಾವುದೇ ತಕರಾರಿಲ್ಲದೆ ಒಪ್ಪಿ ಪಾಲಿಸಿಕೊಂಡು ಬಂದದ್ದಕ್ಕೆ ಗಂಗೂರಿನ ದಲಿತರು ಇಷ್ಟರವರೆಗೆ ಊರಿನಲ್ಲಿ ‘ನೆಮ್ಮದಿ’ಯಾಗಿ ಬದುಕಿದ್ದರು. ಅವರಿಗೆ ಯಾವುದೇ ಸಮಸ್ಯೆ ಎದುರಾಗಿರಲಿಲ್ಲ. ಆದರೆ ಕಳೆದ ಹತ್ತು ವರ್ಷಗಳ ಹಿಂದೆ ಹಾಸನದ ಆಲೂರು ತಾಲೂಕು ಕೇಂದ್ರದಲ್ಲಿ ಹುಟ್ಟಿ ಅಲ್ಲೇ ಎಸ್.ಎಸ್.ಎಲ್.ಸಿ.ವರೆಗೆ ಓದಿರುವ ಭಾಗ್ಯಮ್ಮ ಎಂಬ ದಲಿತ ಯುವತಿ ಯಾವಾಗ ಗಂಗೂರಿನ ಹುಡುಗನನ್ನು ಮದುವೆಯಾಗಿ ದಲಿತಕೇರಿಗೆ ಕಾಲಿಟ್ಟಳೋ ಆಕೆಗೆ ಇದೆಲ್ಲವನ್ನು ಸಹಿಸಲಾಗಲಿಲ್ಲ. ಅಂಬೇಡ್ಕರ್, ಸಂವಿಧಾನ, ಹೋರಾಟ, ಚಳುವಳಿ, ಸಮಾನತೆ, ದೇವಸ್ಥಾನ ಪ್ರವೇಶ ಹೀಗೆ ಒಂದಿಷ್ಟು ತಿಳಿದುಕೊಂಡಿದ್ದ ಭಾಗ್ಯಮ್ಮ ಈ ರೀತಿಯ ಶೋಷಣೆಯನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ.

ಭಾಗ್ಯಮ್ಮ ಇದನ್ನೆಲ್ಲ ಪ್ರಶ್ನಿಸಬೇಕು ಎಂದುಕೊಳ್ಳುತ್ತಿದ್ದರೂ ಊರಿನ ಇತರ ದಲಿತರು ಬೆಂಬಲ ಕೊಡಬೇಕಲ್ಲ. ನಾವು ಇರಬೇಕಾದದ್ದೇ ಹೀಗೆ ಎಂಬ ಗುಲಾಮಿ ಮನೋಭಾವಕ್ಕೆ ಅನಿವಾರ್ಯವಾಗಿ ಒಗ್ಗಿಹೋಗಿದ್ದ ಗಂಗೂರಿನ ದಲಿತರು ಭಾಗ್ಯಮ್ಮಳ ಜೊತೆ ಕೈಜೋಡಿಸಲು ತಯಾರಿರಲಿಲ್ಲ. Gangoor-2ಈ ನಡುವೆ ಊರಿನ ರಂಗನಾಥ ಸ್ವಾಮಿ ದೇವಸ್ಥಾನದ ಪುನರ್ ನಿರ್ಮಾಣ ನಡೆಯಿತು. ಒಂದೊಂದು ಕುಟುಂಬಕ್ಕೂ (ಕುಟುಂಬ ಅಂದರೆ ಗಂಡ-ಹೆಂಡತಿ) ತಲಾ ಐದೈದು ಸಾವಿರ ವಂತಿಗೆ ನಿಗದಿ ಮಾಡಲಾಯಿತು. ದೇವಸ್ಥಾನಕ್ಕೆ ಪ್ರವೇಶ ನಿಷಿದ್ಧವಾಗಿದ್ದರೂ ವಂತಿಗೆಯಿಂದೇನೋ ದಲಿತರಿಗೆ ವಿನಾಯಿತಿ ಸಿಗಲಿಲ್ಲ. ಪ್ರತಿಯೊಂದು ದಲಿತ ಕುಟುಂಬವೂ ತಮಗೆ ನಿಗದಿಪಡಿಸಿದ ವಂತಿಗೆಯನ್ನು ತಕರಾರಿಲ್ಲದೆ ಪಾವತಿಸಿತು. ಭಾಗ್ಯಮ್ಮ ಮನೆಯಲ್ಲಿ ಆಕೆಯ ಇಬ್ಬರು ಮೈದುನರದ್ದೂ ಸೇರಿಸಿದರೆ ಒಟ್ಟು ಮೂರು ಕುಟುಂಬ ಆಗುತ್ತದೆ. ಮೈದುನರದ್ದೂ ಸೇರಿಸಿ ಒಟ್ಟು ಹದಿನೈದು ಸಾವಿರ ರೂಪಾಯಿಗಳನ್ನು ಭಾಗ್ಯಮ್ಮ ಅವರ ಒಂದು ಮನೆಯಿಂದಲೇ ದೇವಸ್ಥಾನಕ್ಕೆ ಚಂದಾ ನೀಡಲಾಗಿದೆ. ಇಷ್ಟು ಮಾತ್ರವಲ್ಲದೆ ದೇವಸ್ಥಾನ, ಗರ್ಭಗುಡಿಯ ಬಾಗಿಲುಗಳ ನಿರ್ಮಾಣಕ್ಕೆ ಭಾಗ್ಯಮ್ಮಳ ದಲಿತ ಕುಟುಂಬವೇ ಉತ್ತಮ ತಳಿಯ ಮರಮಟ್ಟು ನೀಡಿದೆ. ಇಷ್ಟೆಲ್ಲಾ ಕೊಡುಗೆಗಳನ್ನು ಮೇಲ್ಜಾತಿ ಕುಟುಂಬಗಳಿಗೆ ಕಡಿಮೆ ಇಲ್ಲದಂತೆ ಊರ ದೇವಸ್ಥಾನಕ್ಕೆ ನೀಡಿದ್ದರೂ, ದಲಿತರಿಗೆ ಮಾತ್ರ ದೇವಸ್ಥಾನದ ಬಾಗಿಲು ತೆರೆಯಲೇ ಇಲ್ಲ. ಅವರು ಏನಿದ್ದರೂ ಹೊರಗಡೆ ದೂರದಲ್ಲಿ ನಿಂತು ಕೈ ಮುಗಿಯಬೇಕು. ಯಾವ ಸ್ವಾಭಿಮಾನಿ ತಾನೇ ಇದನ್ನೆಲ್ಲ ಸಹಿಸಲು ಸಾಧ್ಯ? ಸಹಜವಾಗಿ ಭಾಗ್ಯಮ್ಮ ಸಿಡಿದು ನಿಂತಿದ್ದಾಳೆ. ಊರಿನಲ್ಲಿ ಸ್ಥಾಪನೆಗೊಂಡಿದ್ದ ಅಂಬೇಡ್ಕರ್ ಸಂಘದ ಯುವಕರನ್ನು ಜೊತೆ ಸೇರಿಸಿದ್ದಾಳೆ. ಊರ ಮಹಿಳೆಯರಲ್ಲಿ ಜಾಗೃತಿ ಮೂಡಿಸಿದ್ದಾಳೆ. ಭಾಗ್ಯಮ್ಮಳ ನಿರಂತರ ಪ್ರಯತ್ನದಿಂದ ಒಂದಿಷ್ಟು ಜನ ದಲಿತರು ತಮ್ಮ ಹಕ್ಕುಗಳಿಗಾಗಿ ಎದ್ದು ನಿಲ್ಲಲು ತಯಾರಾಗಿದ್ದಾರೆ. ಹೀಗೆ ಗಂಗೂರಿನಲ್ಲಿ ನಿಧಾನಕ್ಕೆ ಬಂಡಾಯಕ್ಕೆ ವೇದಿಕೆ ಸಜ್ಜಾಗಿದೆ.

ಭಾಗ್ಯಮ್ಮ ಮತ್ತು ಆಕೆಯ ಸಂಗಾತಿಗಳಿಗೆ ಹಾಸನದ ಕೆಲ ದಲಿತ ಚಳುವಳಿಯ ಕಾರ್ಯಕರ್ತರು ಬೆಂಬಲ ನೀಡಿದ್ದಾರೆ. ಹೀಗೆ ಅಸಮಾನತೆಯ ವಿರುದ್ಧ ಸಮರ ಸಾರಲು ನಿರಂತರ ಪ್ರಯತ್ನಿಸಿ ಸಮಯ ಕಾಯುತ್ತಿದ್ದ ಭಾಗ್ಯಮ್ಮ ಒಂದು ದಿನ ಒಂದಿಷ್ಟು ಮಹಿಳೆಯರ ಸಹಿತ ಧೈರ್ಯದಿಂದ ದೇವಸ್ಥಾನ ಪ್ರವೇಶಿಸಿದ್ದಾಳೆ. ಇದು ಗಂಗೂರಿನ ಮಟ್ಟಿಗೆ ಅನಿರೀಕ್ಷಿತ, ಅಲ್ಲಿನ ಮೇಲ್ಜಾತಿ ಮನಸ್ಸುಗಳು ಕ್ರೋಧಗೊಂಡಿದೆ. ದಲಿತರ ‘ಅಹಂಕಾರ’ ಕಂಡು ಕೆರಳಿ ನಿಂತಿವೆ. ಪ್ರಕರಣ ಇಡೀ ಜಿಲ್ಲೆಯಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಹಾಸನದಂತ ಫ್ಯೂಡಲ್ ಮನಸ್ಥಿತಿಯ ನಾಡಿನಲ್ಲಿ ಇದು ಆ ವ್ಯವಸ್ಥೆಗೆ ಬಿದ್ದ ಕೊಡಲಿ ಪೆಟ್ಟಿನಂತಾಗಿದೆ. ಇಂತಹ ಪರಿಸ್ಥಿತಿಗೆ ಕಾರಣರಾದ ಭಾಗ್ಯಮ್ಮ ಮತ್ತವರ ಸಂಗಾತಿಗಳನ್ನು ಮಟ್ಟ ಹಾಕಲೇ ಬೇಕು ಎಂದು ಜಿಲ್ಲೆಯ ಒಟ್ಟು ಆಳುವ ವ್ಯವಸ್ಥೆಯೇ ಟೊಂಕ ಕಟ್ಟಿ ನಿಂತಿದೆ. ಮೀಸಲಾತಿ ನೀತಿಯಿಂದ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ಆಯ್ಕೆಯಾದ ಕಮಲಾ ಎಂಬ ದಲಿತ ಮಹಿಳೆಯನ್ನು ಒಂದು ಬಾರಿಯೂ ಕುರ್ಚಿಯಲ್ಲಿ ಕೂರಿಸದೆ ಕೇವಲ ಕಡತಗಳಿಗೆ ಸಹಿ ಹಾಕಲಷ್ಟೇ ಬಳಸಿದ್ದ ಗಂಗೂರಿನಂತಹ ಊರು ಭಾಗ್ಯಮ್ಮಳನ್ನು ಸಹಿಸಲು ಸಾಧ್ಯವೇ? ಹೀಗೆ ಉದ್ವಿಗ್ನಗೊಂಡ ಊರು ಸೇಡು ತೀರಿಸಿಕೊಳ್ಳಲು ತೀರ್ಮಾನಿಸಿದೆ. ಅಪವಿತ್ರಗೊಂಡ ರಂಗನಾಥ ಸ್ವಾಮಿ ದೇವಸ್ಥಾನ ಕೆಡವಿ ಪುನರ್ ನಿರ್ಮಿಸಬೇಕು ಎಂದು ತೀರ್ಮಾನಿಸಿದೆ. ಹೀಗೆ ಸೇಡಿಗಾಗಿ ಅವಕಾಶ ಕಾಯುತ್ತಿದ್ದ ಊರಿನ ಫ್ಯೂಡಲ್ ಮನಸ್ಸುಗಳಿಗೆ ಒಂದು ಅವಕಾಶ ಒದಗಿಬಂದಿದೆ. Gangoor-3ಬೆಂಗಳೂರಿನ ಕ್ಷೌರಿಕ ಸಮಾಜದ ಮುಖಂಡರೊಬ್ಬರು ಅಸ್ಪೃಶ್ಯತೆಗಾಗಿ ಸುದ್ಧಿ ಮಾಡಿದ ಗಂಗೂರಿಗೆ ಬಂದಿಳಿದಿದ್ದಾರೆ. ನೇರ ಊರಿನ ಶಾಲೆಗೆ ತೆರಳಿ ಎಲ್ಲಾ ಜಾತಿಯ ಮಕ್ಕಳಿಗೆ ಒಟ್ಟಾಗಿ ಕೂದಲು ಕಟ್ಟಿಂಗ್ ಮಾಡಿದ್ದಾರೆ. ಇಷ್ಟಕ್ಕೇ ನೆಪಕ್ಕಾಗಿ ಕಾಯುತ್ತಿದ್ದ ಮೇಲ್ಜಾತಿಗಳು ಉರಿದು ಬಿದ್ದಿದ್ದಾರೆ. ತಮ್ಮ ಅನುಮತಿ ಇಲ್ಲದೆ ನಮ್ಮ ಮಕ್ಕಳಿಗೆ ಹೇಗೆ ಕಟ್ಟಿಂಗ್ ಮಾಡಿಸಿದ್ರಿ ಎಂದು ಗಲಾಟೆ ಶುರು ಮಾಡಿದ್ದಾರೆ. ಇದನ್ನು ಮಾಡಿಸಿದ್ದು ಭಾಗ್ಯಮ್ಮಳೇ ಎಂದು ರೇಗಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮೇಲ್ಜಾತಿಗಳ ಆಕ್ರೋಶಕ್ಕೆ ಬೆದರಿ ಭಾಗ್ಯಮ್ಮ ಸೇರಿದಂತೆ ಅವರು ದೂರು ಕೊಟ್ಟವರ ಮೇಲೆ ಕಠಿಣ ಕಾಯ್ದೆಯ ಅಡಿಯಲ್ಲಿ ದೂರು ದಾಖಲಿಸಿದ್ದಾರೆ.

ಘಟನೆ ಬಿಸಿಬಿಸಿಯಾಗಿ ಇರುವಾಗಲೇ ಮರುದಿವಸ ಊರಿನಲ್ಲಿ ಜಿಲ್ಲಾಡಳಿತ ಶಾಂತಿಸಭೆ ಕರೆದಿದೆ. ಹಿಂದಿನಿಂದಲೂ ಮೇಲ್ಜಾತಿಗಳು ವಿಧಿಸಿದ ಕಟ್ಟುಪಾಡುಗಳನ್ನು ಚಾಚೂ ತಪ್ಪದೇ ಪಾಲಿಸುತ್ತಾ ಬಂದಿದ್ದ ಊರಿನ ದಲಿತರು ಭಯಗೊಂಡಿದ್ದಾರೆ. ಬೆರಳೆಣಿಕೆಯ ದಲಿತ ಕುಟುಂಬಗಳನ್ನು ಬಿಟ್ಟರೆ ಉಳಿದ ಕುಟುಂಬಗಳು ಹಿಂದಿನಂತೆಯೇ ಪದ್ಧತಿಗಳು ಮುಂದುವರಿಯಲಿ ಎಂದು ಮೇಲ್ಜಾತಿಗಳಿಗೆ ಶರಣಾಗಿವೆ. ಮರುದಿವಸ ಶಾಂತಿ ಸಭೆಯಲ್ಲಿ ಇದು ನಿಚ್ಚಳವಾಗಿ ವ್ಯಕ್ತವಾಗಿದೆ. ಶಾಂತಿ ಸಭೆಯಲ್ಲಿ ಐನೂರಕ್ಕೂ ಹೆಚ್ಚು ಜನ ಮೇಲ್ಜಾತಿಯವರು ಸೇರಿದ್ದರು. ಹೆಚ್ಚಿನ ದಲಿತರು ಭಯದಿಂದ ಮೇಲ್ಜಾತಿಗಳ ಜೊತೆ ನಿಂತರು. ತಮ್ಮ ಸಂಕಷ್ಟಗಳಿಗೆ ಭಾಗ್ಯಮ್ಮ ಕಾರಣ ಎಂದು ಹೇಳತೊಡಗಿದರು. ಶಾಂತಿ ಸಭೆಯಲ್ಲಿ ಸಾರ್ವಜನಿಕವಾಗಿ ಭಾಗ್ಯಮ್ಮ ಮೇಲೆ ಮೇಲ್ಜಾತಿಗಳು ಅಮಾನವೀಯವಾಗಿ ಹಲ್ಲೆ ನಡೆಸಿದವು, ಭಯಗೊಂಡಿದ್ದ ಕೆಳ ದಲಿತರನ್ನು ಬಲವಂತವಾಗಿ ಹಲ್ಲೆಯಲ್ಲಿ ಭಾಗವಹಿಸುವಂತೆ ಮಾಡಿದವು. ಬಹಿರಂಗವಾಗಿ ಪೊಲೀಸ್, ಜಿಲ್ಲಾಡಳಿತ ಅಧಿಕಾರಿಗಳು, ಮಾಧ್ಯಮದ ಜನರೆದುರು ಹಲ್ಲೊಗೊಳಗಾಗ ಭಾಗ್ಯಮ್ಮ ಮತ್ತು ಇನ್ನೂ ಒಂದಿಬ್ಬರು ಮಹಿಳೆಯರು ಗಾಯಗೊಂಡು ಆಸ್ಪತ್ರೆ ಸೇರಿದರು.

ಈಗ ಗಂಗೂರು ಶಾಂತ. ಊರಿನಲ್ಲಿ ಪೊಲೀಸರು ಠಿಕಾಣಿ ಹೂಡಿದ್ದಾರೆ. ಗಂಗೂರಿನಲ್ಲಿ ಗಲಾಟೆ ಮಾಡಿಸಿದ್ದು ಹೊರಗಿನಿಂದ ಬಂದವರು ಮೇಲ್ಜಾತಿಗಳ ತಪ್ಪಿಲ್ಲ ಎಂದು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಪತ್ರಿಕಾ ಹೇಳಿಕೆ ಕೊಟ್ಟಿದ್ದಾರೆ. ಬೆರಳೆಣಿಕೆಯ ಕೆಲ ಮನೆಗಳನ್ನು ಬಿಟ್ಟರೆ ಮಿಕ್ಕೆಲ್ಲ ದಲಿತರು ನಾವು ಹಿಂದಿನಂತೆ ಮೇಲ್ಜಾತಿಗಳ ಜೊತೆಗೆ ಅನೋನ್ಯತೆಯಿಂದ ಬಾಳುತ್ತೇವೆ. ದೇವಸ್ಥಾನ ಪ್ರವೇಶವೂ ಬೇಡ, Gangoor-5ಒಂದೇ ಲೋಟವೂ ಬೇಡ, ಊರಿನ ಸೆಲೂನಿನಲ್ಲಿ ಕೂದಲು ಕಟ್ಟಿಂಗೂ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಸಮಾನತೆ ಕೇಳಿದ್ದಕ್ಕೆ ಕೆಲ ದಲಿತರು ಜೈಲಿಗೆ ಹೋಗಿದ್ದಾರೆ. ಭಾಗ್ಯಮ್ಮ ಆಸ್ಪತ್ರೆಯಿಂದ ಚೇತರಿಸಿ, ಜಾಮೀನು ಪಡೆದು ತನ್ನ ತವರೂರು ಆಲೂರು ಸೇರಿಕೊಂಡಿದ್ದಾಳೆ. ಘಟನೆ ನಡೆದು ತಿಂಗಳು ತುಂಬುತ್ತಿದ್ದರೂ ಈಕೆಗೆ ಗಂಗೂರಿಗೆ ಪ್ರವೇಶ ಮಾಡಲು ಸಾಧ್ಯವಾಗಿಲ್ಲ. ಅಲ್ಲಿ ಹೋದರೆ ಭಾಗ್ಯಮ್ಮಳಿಗೆ ಅಪಾಯ ತಪ್ಪಿದ್ದಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಜಿಲ್ಲಾಡಳಿತ, ಪೊಲೀಸರು, ಬಂಡವಾಳ ಶಾಹಿ ಪಕ್ಷಗಳನ್ನು ನಿಯಂತ್ರಿಸುವ ಮೇಲ್ಜಾತಿ ರಾಜಕಾರಣಿಗಳು, ಮಾಧ್ಯಮದ ಮೇಲ್ಜಾತಿ ಮನಸ್ಸುಗಳು ಒಟ್ಟು ಸೇರಿ ಭಾಗ್ಯಮ್ಮ ಮತ್ತು ಸಂಗಾತಿಗಳದ್ದೇ ತಪ್ಪು ಎಂಬಂತೆ ಬಿಂಬಿಸಿಬಿಟ್ಟಿವೆ. ಒಂದು ಮಹತ್ವದ ಹೋರಾಟವನ್ನು ಮುರಿದು ಹಾಕಿದೆ. ರಾಷ್ಟ್ರಮಟ್ಟದ ಸುದ್ಧಿಯಾಗಬೇಕಿದ್ದ ಘಟನೆಯನ್ನು ಅಲ್ಲಿಗೆ ತಣ್ಣಗಾಗಿಸಲಾಗಿದೆ. ಊರಿನಿಂದ ಬಲವಂತವಾಗಿ ಹೊರಗಾಕಿಸಿಕೊಂಡ ಬಹಿಷ್ಕೃತೆ ಭಾಗ್ಯಮ್ಮ ದೊಡ್ಡ ಸುದ್ಧಿಯಾಗುವುದು ಯಾರಿಗೂ ಬೇಕಿಲ್ಲ.

ಅಂತಹ ಭಾಗ್ಯಮ್ಮಳನ್ನು ಡಿವೈಎಫ್ಐ ವೇದಿಕೆಯಲ್ಲಿ ನೋಡುವಾಗ ನನಗಂತೂ ಹೆಮ್ಮೆಯಾಯಿತು. ಇಂದು ಹಾಸನ ಸೇರಿದಂತೆ ರಾಜ್ಯದ ಎಲ್ಲ ಪ್ರಜಾಸತ್ತಾತ್ಮಕ ಚಳುವಳಿಗಳು ಭಾಗ್ಯಮ್ಮ ಜೊತೆಗೆ ನಿಲ್ಲಬೇಕಿದೆ. ಭಾಗ್ಯಮ್ಮ ನಿಜಕ್ಕೂ ಅಸಮಾನತೆಯ ವಿರುದ್ಧದ ಹೋರಾಟದ ಸಂಕೇತ, ತಳಮಟ್ಟದಲ್ಲಿ ಹುಟ್ಟಿ ಬಂದ ನಿಜ ನಾಯಕಿ. ಆಕೆ ಆಙಈ ಸಮ್ಮೇಳನದಲ್ಲಿ ಆಡಿದ ಒಂದು ಮಾತು ಇವತ್ತಿಗೂ ನನ್ನ ಕಿವಿಯಲ್ಲಿ ಮಾರ್ದನಿಸುತ್ತಿದೆ. ದೇವಸ್ಥಾನ ನಾವು ವಂತಿಗೆ ಕೊಟ್ಟಾಗ, ಗರ್ಭಗುಡಿಯ ಕಲ್ಲು ಕಟ್ಟಿದಾಗ, ದೇವಸ್ಥಾನದ ಒಳಾಂಗಣಕ್ಕೆ ಸುಣ್ಣ ಹೊಡೆದಾಗ ದೇವರು ಯಾಕೆ ಮಲಿನಗೊಳ್ಳಲಿಲ್ಲ, ಆಗ ಯಾಕೆ ದೇವಸ್ಥಾನವನ್ನು ಇವರು ಕೆಡವಿ ಹೊಸದಾಗಿ ಕಟ್ಟಲಿಲ್ಲ. ಗಂಗೂರಿನ ಮೇಲ್ಜಾತಿಗಳ ಮನೆಯಲ್ಲಿ ನಾವು ಹೋಗಿ ಕರೆದು ಕೊಟ್ಟ ಹಾಲನ್ನು ಅವರು ಸೇವಿಸುತ್ತಾರೆ. ನಾವು ಅವರ ಜಮೀನಿನಲ್ಲಿ ಬಿತ್ತಿದ ಕಾಳಿನಿಂದ ಬೆಳೆದ ಅಕ್ಕಿ, ರಾಗಿಯನ್ನು ಮೇಲ್ಜಾತಿಗಳು ಉಣ್ಣುತ್ತಾರೆ. ಆಗ ಯಾಕೆ ಅವರ ಹೊಟ್ಟೆ, ಕರುಳು ಅಶುದ್ಧ ಆಗಲಿಲ್ಲ. ಅಶುದ್ಧಗೊಂಡ ತಮ್ಮ ಕರುಳನ್ನು ಬಗೆದು ಯಾಕೆ ಅವರು ಕಿತ್ತು ಹಾಕಲಿಲ್ಲ. ಇದು ಭಾಗ್ಯಮ್ಮಳ ಪ್ರಶ್ನೆ ಮಾತ್ರವಲ್ಲ ನಾಡಿನ ಎಲ್ಲಾ ಅಸ್ಪೃಶ್ಯತೆಗೆ ಒಳಗಾದ ಕೆಳ ಜಾತಿಗಳದ್ದು. ಈ ಪ್ರಶ್ನೆಗಳಿಗೆ ಉತ್ತರ ಸಿಗಲೇ ಬೇಕಿದೆ. ಉತ್ತರಿಸಬೇಕಾದವರು ಊರು ಬಿಡಿಸಿದ್ದಾರೆ, ಅಧಿಕಾರದ ಕುರ್ಚಿಯಲ್ಲಿ ಕೂತಿದ್ದಾರೆ.

4 thoughts on “ಗಂಗೂರಿನ ಭಾಗ್ಯಮ್ಮ ಮತ್ತು ಸಮಾನತೆ…

  1. Ananda Prasad

    ರಾಜ್ಯದಲ್ಲಿ ಚುನಾವಣೆಗಳಲ್ಲಿ ದಲಿತರ ಬೆಂಬಲದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಗಂಗೂರಿನಲ್ಲಿ ನಡೆಯುತ್ತಿರುವ ಅಸ್ಪ್ರುಶ್ಯತೆ ಆಚರಣೆ ಬಗ್ಗೆ ದಿಟ್ಟ ಕಾನೂನು ಕ್ರಮ ಕೈಗೊಳ್ಳದೆ ದಪ್ಪ ಚರ್ಮ ಬೆಳೆಸಿಕೊಂಡಿರುವುದು ಶೋಚನೀಯ. ಸಮಾಜವಾದಿ ಹಿನ್ನೆಲೆಯಿಂದ ಬಂದು ಮುಖ್ಯಮಂತ್ರಿಯಾಗಿರುವ ಸಿದ್ಧರಾಮಯ್ಯ ಇಂಥ ಅಸ್ಪ್ರುಶ್ಯತೆ ಆಚರಣೆಯನ್ನು ಕಂಡೂ ಕಾಣದಂತೆ ಅಧಿಕಾರದ ಬೆನ್ನೇರಿ ಮೌಲ್ಯಗಳಿಗೆ ತಿಲಾಂಜಲಿ ನೀಡುತ್ತಿರುವುದು, ಇದನ್ನು ಕಾಂಗ್ರೆಸ್ಸಿಗೆ ಬೆಂಬಲ ನೀಡಿದ ಬುದ್ಧಿಜೀವಿಗಳು ಮೌನವಾಗಿ ಸಹಿಸಿಕೊಂಡಿರುವುದು ಸಲ್ಲದು. ದಲಿತ ಸಮುದಾಯದಿಂದ ಬಂದು ಕೇಂದ್ರದಲ್ಲಿ ಮಂತ್ರಿಯಾಗಿರುವ ಮಲ್ಲಿಕಾರ್ಜುನ ಖರ್ಗೆಗಾದರೂ ಇಂಥ ವಿಚಾರಗಳ ಬಗ್ಗೆ ದನಿಯೆತ್ತಿ ಮಾತನಾಡುವ ಧೈರ್ಯ ಇಲ್ಲ ಎಂದರೆ ಇವರೆಲ್ಲ ದಲಿತರ ಬೆಂಬಲ ಪಡೆದು ಏಕೆ ಅಧಿಕಾರದಲ್ಲಿರಬೇಕು ಎಂದು ರಾಜ್ಯದ ದಲಿತರು ಎಚ್ಚತ್ತು ಪ್ರಶ್ನಿಸಬೇಕಾಗಿದೆ. ರಾಜ್ಯದ ಕಾಂಗ್ರೆಸ್ ಅಧ್ಯಕ್ಷರಾದ ಪರಮೇಶ್ವರ್ ಅವರೂ ಕೂಡ ದಲಿತ ಸಮುದಾಯದಿಂದಲೇ ಬಂದವರಾದರೂ ಅವರ ಪಕ್ಷದ ಸರ್ಕಾರದ ಅವಧಿಯಲ್ಲಿಯೇ ಇಂಥದೆಲ್ಲ ನಡೆಯುತ್ತಿದ್ದರೂ ಕುರುಡರಂತೆ ವರ್ತಿಸುತ್ತಿರುವುದು ಏಕೆ? ಇದರ ವಿರುದ್ಧ ದನಿಯೆತ್ತಲು ಇವರಿಗೆ ಬಾಯಿ ಇಲ್ಲವೇ? ಅಧಿಕಾರ ಎಂಬುದು ಇವರನ್ನೆಲ್ಲ ಕುರುಡರನ್ನಾಗಿ ಮಾಡಿದೆಯೇ?

    Reply
  2. Gn Nagaraj

    ಇಂತಹ ಪ್ರಕರಣಗಳು ಎಷ್ಟೊಂದು ? ದಶಕಗಳ ಹಿಂದಿನ ದೇವನೂರು ಪ್ರಕರಣದಲ್ಲಿ ಶಾಲಾ ಮಾಸ್ತರರನ್ನು ಅವರ ವಿದ್ಯಾರ್ಥಿಗಳನ್ನು ಇದೇ ಕಾಣಕ್ಕಾಗಿ ಕೊಲೆ ಮಾಡಲಾಯಿತು. ದೇವಸ್ಥಾನ ಕಟ್ಟುವಾಗ ಸಮಾನವ಻ಗಿ ಪಾಲು ಕೊಡಬೇಕು. ಆದರೆ ಕಟ್ಟಿದ ನಂತರ ಪಾಲಿಲ್ಲ. ಈ ನೀತಿಯ ಹಿಂದೆ ಇರುವುದು ನೀವು ನಮ್ಮ ಸೇವೆ ಮಾಡಲೆಂದು ಇರುವುದು. ಬಾಯ್ಮುಚ್ಚಿಕೊಂಡು ಅದನ್ನು ಮಾಡಿ ಎನ್ನುವ ಅಮಾನವೀ ಯ ಮನಸ್ಸು

    Reply
  3. Ahamed

    ಭಾರತ ದೇಶದ ಭವಿಷ್ಯವೇ ಜಾತಿ. ಕೆಳಜಾತಿಗಳಿಲ್ಲದಿದ್ದರೆ ಹಿಂದೂ ಧರ್ಮ ಅಸ್ತಿತ್ವ ಕಳೆದುಕೊಳ್ಳುತ್ತದೆ, ಹಿಂದೂ ಧರ್ಮ ಎಂದರೆ ಶಿರ್ಷಿಕೆ ಬದಲಾಯಿಸಿಕೊಂಡ ಸನಾತನ ವೈದಿಕ ಧರ್ಮ, ಇದರ ವಿರುದ್ಧವೆ ಚಾರ್ವಾಕ, ಮಹಾವೀರ, ಬುದ್ಧ, ಬಸವಣ್ಣ, ನಾನಕ್, ಕಬೀರ, ವಿವೇಕಾನಂದ ಕಹಳೆಯೂದಿದ್ದು.
    ವೈದಿಕಧರ್ಮ ಈ ಎಲ್ಲ ಕಹಳೆಯನ್ನು ಕ್ಷೀಣಗೊಳಿಸಲು ಪಾಳೆಗಾರಿ ವ್ಯವಸ್ಥೆಯನ್ನು ಸುವ್ಯವಸ್ಥಿತವಾಗಿ ಪೋಷಿಸಿತು. ಹಾಗಾಗಿ ದಲಿತನಾಯಕರು ಮತ್ತು ನನ್ನ ಕೆಲ ದಲಿತ ಮಿತ್ರರು ವಾದ ಮಾಡುವವಾಗ ಹಿಂದೂ ಧರ್ಮ ಸಾಯದೆ ದಲಿತರಿಗೆ ಮುಕ್ತಿ ಇಲ್ಲ ಅದರ ಅಸ್ತಿತ್ವ ಇರುವುದೇ ದಲಿತ ದಮನದಲ್ಲಿ ಹಾಗಾಗಿ ದಲಿತರೆಲ್ಲಾ ಮತಾಂತರಗೊಂಡರೆ ತಾನಾಗೇ ಹಿಂದೂ ಧರ್ಮ ಸಾಯುತ್ತದೆ ಎನ್ನುವುದು ಅವರ ವಾದ ( ಇದನ್ನು ನಾನು ಎಳ್ಳಷ್ಟು ಒಪ್ಪಲಾರೆ) ದಲಿತರ ಆಚಾರ-ವಿಚಾರ, ಪೂಜೆ-ಪುನಸ್ಕಾರಗಳು ಮೇಲ್ಜಾತಿಯವರು ದಮನ ಮಾಡಲು ಪೂರಕವಾಗೇ ಇದೆ ಎಂಬ ಸತ್ಯವನ್ನು ಇವರು ಅರ್ಥ ಮಾಡಿಕೊಳ್ಳುವುದಿಲ್ಲ.
    ಈ ಅನುಕರಣಾ ಆಚರಣೆಯ ಫಲಶರತಿಯೆ ಈ ದಮಾದರಿ ದಾಳಿಗಳು
    ಬಸವಣ್ಣನ ಅನುಯಾಯಿಗಳೆ ಗಂಗೂರಿನಲ್ಲಿ ಬಸವಣ್ಣನ ತತ್ವಕ್ಕೆ ಮಸಿಬಳೆದಿದ್ದು, ಹಲ್ಲೆ ನಡೆಸಿದ್ದು ಭಾಗ್ಯಮ್ಮಳಿಗಲ್ಲ ಬಸವಣ್ನನಿಗೆ.
    ಹಾಸನ ಜಿಲ್ಲೆ ಪಾಳೆಗಾರಿ ಏಕ ಜಾತಿ ರಾಜಕಾರಣದಲ್ಲಿ ಬಲಿಷ್ಠ ಹಾಗೂ ಕೇಂದ್ರೀಕೃತವಾಗಿದೆ ದಲಿತರ ಮಾರಣಹೋಮ ದಕ್ಷಣ ಭಾರತದಲ್ಲೆ ಅತಿಹೆಚ್ಚು ಇಲ್ಲೇ ನಡೆಯುವುದು ಬಡಿಗಿ ಕೊಟ್ಟು ಇಕ್ಕಿಸಿಕೊಂಡರು ಅಂತಾರಲ್ಲ ಹಾಗೆ ಇಲ್ಲಿನ ದಲಿತರ ಮತ ತಿಂದು ಗೆದ್ದ ರಾಜಕಾರಣಿ ಹಿಂಬಾಗಲಲ್ಲಿ ಅವರ ದಮನಕಾರರಿಗೆ ರಾಜತಾಂತ್ರಿಕ ಬೆಂಬಲ ನೀಡುತ್ತಾನೆ. ಗುಲ್ಬರ್ಗದ 20 ದಲಿತ ಕಾರ್ಮಿಕರನ್ನು ವಾರಗಟ್ಟಲೆ ಬಾಳ್ಳುಪೇಟೆಯ ಪ್ರಭಾವಿ ಬಸವಾನುಯಾಯಿ ರಾಜಕಾರಣಿ ಪ್ಲಾಂಟರ್ ಕೂಡಿಟ್ಟಿದ್ದರು. ಧರ್ಮೇಶನ ಮಧ್ಯ ಪ್ರವೇಶಿಕೆಯಲ್ಲಿ ಬಿಡುಗಡೆ ಗೊಂಡರು. ಹಾಸನದಲ್ಲಿ ಸರಾಸರಿ ತಿಂಗಳಿಗೆ 2ದಲಿತ ದಮನಗಳು ನಡೆಯುತ್ತಿವೆ. ಸಂಘಟಿತ ಹೋರಾಟದ ಅಗತ್ಯ ಇದೆ. (ದಲಿತ ಸಂಘಟನೆಗಳೆ ನೂರಾರು ಇವೆ)

    Reply

Leave a Reply

Your email address will not be published. Required fields are marked *