ಭೈರಪ್ಪನವರ ’ಕವಲು’ ನಾನೇಕೆ ನಿರಾಕರಿಸುತ್ತೇನೆ?


– ರೂಪ ಹಾಸನ


 

[ಇಂದು ಮತ್ತೆ ಮಹಿಳಾ ದಿನಾಚರಣೆ ಬಂದಿದೆ. ಇದು ಮಹಿಳಾ ಬದುಕಿನ ಅವಲೋಕನದ ಜೊತೆಗೆ ಮಹಿಳೆಯೆಡೆಗಿನ ಪುರುಷ ಪ್ರಪಂಚದ ಧೋರಣೆಯ ಅವಲೋಕನವೂ ಆಗಿರುತ್ತದೆಂದು ನಾನು ಭಾವಿಸುತ್ತೇನೆ. ಆ ಹಿನ್ನೆಲೆಯಲ್ಲಿ ಈ ಬರಹ.]

ಕನ್ನಡದ ಹಿರಿಯ ಕಾದಂಬರಿಕಾರರಾದ ಎಸ್.ಎಲ್. ಭೈರಪ್ಪನವರ ಹೊಸ ಕಾದಂಬರಿ ’ಕವಲು’ ವಾರದೊಳಗೆ ನಾಲ್ಕನೆಯ ಮುದ್ರಣ ಕಂಡ ಹಿನ್ನೆಲೆಯಲ್ಲಿ 2010 ಜುಲೈ ಒಂದರಂದು ಪ್ರಜಾವಾಣಿಯಲ್ಲಿ ಅವರ ಕಿರು ಸಂದರ್ಶನ ಪ್ರಕಟವಾಗಿತ್ತು. ಅದರಲ್ಲಿ ಕಾದಂಬರಿಯ ಪಾತ್ರವೊಂದು ’ಓದಿದ ಗಂಡಸರೆಲ್ಲಾ ಹೆಂಗಸರಾಗ್ತಾರೆ. ಓದಿದ ಹೆಂಗಸರೆಲ್ಲಾ ಗಂಡಸರಾಗ್ತಾರೆ. ಗಂಡಸರು ಗಂಡಸರಾಗಿ ಹೆಂಗಸರು ಹೆಂಗಸರಾಗಿ ಇರಬೇಕಾದರೆ ಯಾರೂ ಓದಕೂಡದು’ ಎನ್ನುತ್ತದೆ, ಅದು ಸತ್ಯವೂ ಆಗುತ್ತಿದೆ ಎಂದು ಭೈರಪ್ಪನವರು ಕಳವಳಿಸಿದ್ದರು! ಅದನ್ನು ಓದಿ ಬೆಚ್ಚಿಬಿದ್ದಿದ್ದೆ. bhyrappa-Kavaluಜೊತೆಗೆ ’ಮಹಿಳಾಪರ ಕಾನೂನುಗಳು ಶೇಕಡ 98 ರಷ್ಟು ದುರ್ಬಳಕೆ ಆಗುತ್ತಿವೆ, ಇದರಿಂದ ಇಡೀ ಭಾರತೀಯ ಕುಟುಂಬದಲ್ಲಿ ಆಗುತ್ತಿರುವ ಬದಲಾವಣೆಗಳು, ತಲ್ಲಣಗಳೇ ತಮ್ಮ ಕಾದಂಬರಿಯ ವಸ್ತು’ ಎಂದು ಅವರು ಹೇಳಿದ್ದು ಕೇಳಿ ಉಗ್ರ ಕುತೂಹಲದಿಂದ ಅಂದೇ ಕಷ್ಟಪಟ್ಟು ಪುಸ್ತಕ ಸಂಪಾದಿಸಿ ಎರಡೇ ದಿನಕ್ಕೆ ಕವಲು ಓದಿ ಮುಗಿಸಿದ್ದೆ.

ಪುಸ್ತಕ ಓದಿ ಮುಚ್ಚಿಟ್ಟ ನಂತರ, ಈ ಕಾದಂಬರಿಯಲ್ಲಿ ವಿಶೇಷವೇನಿದೆ? ಎಂದು ಪ್ರಶ್ನಿಸಿಕೊಂಡರೆ ನಿಜಕ್ಕೂ ಅಂಥದ್ದೇನೂ ವಿಶೇಷ ಕಾಣಲಿಲ್ಲ. ಭೈರಪ್ಪನವರ ಮಾಮೂಲಿ ಪುರುಷ ಮೂಲಭೂತವಾದಿ ಮನಸ್ಸಿನ ಪಾರದರ್ಶಕ ದರ್ಶನವಷ್ಟೇ! ಪುಸ್ತಕದಿಂದ ಭೈರಪ್ಪನವರ ಹೆಸರು ತೆಗೆದು ಹಾಕಿದರೆ ಅದೊಂದು ಪೂರ್ವಗ್ರಹ ಪೀಡಿತವಾದ ಮನಸ್ಸಿನ ಯಾರೂ ಬರೆಯಬಹುದಾದ ಸಾಮಾನ್ಯವಾದ ಕಾದಂಬರಿ. ಇಂತಹದ್ದೇ ವಿಷಯದ ಹಲವು ಕಾದಂಬರಿಗಳನ್ನು ಹಲವಾರು ಬರಹಗಾರರು ಈಗಾಗಲೇ ಬರೆದಿದ್ದಾರೆ. ಇಲ್ಲಿ ಭೈರಪ್ಪನವರ ಹೆಗ್ಗಳಿಕೆಯೆಂದರೆ ಮಹಿಳಾಪರ ಕಾನೂನುಗಳನ್ನು ಯಾವ ರೀತಿಯೆಲ್ಲಾ ದುರ್ಬಳಕೆ ಮಾಡಿಕೊಳ್ಳಬಹುದೆಂಬುದರ ಅತ್ಯಂತ ಸೂಕ್ಷ್ಮ ವಿವರಗಳನ್ನೂ ಚೆನ್ನಾಗಿ ಅಧ್ಯಯನ ಮಾಡಿ ತಮ್ಮ ಕಾದಂಬರಿಯಲ್ಲಿ ಚಿತ್ರಿಸಿ, ಅದರ ಅವಶ್ಯಕತೆಯಿರುವ ಹೆಣ್ಣು ಮಕ್ಕಳಿಗೆ ಅನುಕೂಲ ಮಾಡಿದ್ದಾರೆ! ಅದಕ್ಕೆ ಅವರಿಗೆ ಧನ್ಯವಾದ ಹೇಳಬೇಕು.

ಕಾದಂಬರಿಯಲ್ಲಿ ಅವರು ಚಿತ್ರಿಸಿರುವ ಮಹಿಳಾ ಖಳಪಾತ್ರಗಳಂಥಾ ವ್ಯಕ್ತಿಗಳು ನಮ್ಮ ಮಧ್ಯೆ ಇಲ್ಲದಿಲ್ಲ. ಆದರೆ ಅಂಥವರ ಸಂಖ್ಯೆ ಅತ್ಯಲ್ಪ. ನಮ್ಮ ಕಿರುತೆರೆ ಧಾರಾವಾಹಿಗಳಲ್ಲಿ ಭೈರಪ್ಪನವರಿಗಿಂಥಾ ಕೆಟ್ಟದಾಗಿ ಖಳನಾಯಕಿಯರ ಪಾತ್ರಗಳಲ್ಲಿ ಹೆಣ್ಣನ್ನು ಚಿತ್ರಿಸಲಾಗುತ್ತಿದೆ. ನಾವು ಸುಮ್ಮನಿದ್ದೇವೆ. ಏಕೆಂದರೆ ಅದು ಮನರಂಜನೆಗಾಗಿ ಮಾತ್ರ ಎಂಬ ರಿಯಾಯಿತಿಯಿಂದ. ಆದರೆ ’ಕಾಲ್ಪನಿಕ’ವಾದ ಈ ಕವಲು ಕಾದಂಬರಿಯ ಕಥೆ ಹಾಗೂ ಅಲ್ಲಿ ಚಿತ್ರಿತವಾಗಿರುವ ನೆಗೆಟೀವ್ ಸ್ತ್ರೀ ಪಾತ್ರಗಳು ಸುಮ್ಮನೇ ಹುಟ್ಟಿಕೊಂಡವಲ್ಲ. ಅದು ಕೇವಲ ಮನರಂಜನೆಗೆ ಬರೆದ ಕಾದಂಬರಿಯೂ ಅಲ್ಲ. ಅದರ ಹಿಂದೆ ಮಹಿಳಾ ಅರಿವಿನ ವಿಸ್ತರಣೆಯ ವಿರೋಧಿಯಾದ ಒಂದು ಮನಸ್ಸಿದೆ. alva-nudisiri-baraguru-bhairappaಅದು ಮನು ಹೇಳುವಂಥಾ ’ಹೆಣ್ಣು ಕ್ಷೇತ್ರ. ಗಂಡು ಕ್ಷೇತ್ರಾಧಿಪತಿ’ಎಂಬ ನಿಲುವನ್ನು ಅಕ್ಷರಶಃ ಒಪ್ಪಿಕೊಂಡ ಮನಸ್ಸು. ಒಟ್ಟಾರೆ ಭೈರಪ್ಪನವರ ನಿಲುವು, ಕಾದಂಬರಿಯ ಧೋರಣೆ, ಸಂದೇಶಗಳು, ಪೂರ್ವ-ಪರ ಚಿಂತನೆಯಿಲ್ಲದೇ ಆಕ್ರಮಣ ಮಾಡುವ ಸೈನಿಕ ನಿಲುವಿನಿಂದ ಕೂಡಿರುವುದೇ, ಕಾದಂಬರಿ ಕುರಿತು ಚರ್ಚೆಯನ್ನು ಹುಟ್ಟುಹಾಕುವುದಕ್ಕೆ ಮುಖ್ಯ ಕಾರಣವಾಗಿವೆ.

ಇದಕ್ಕೆಲ್ಲಾ ಮುಖ್ಯ ಹೊಣೆಗಾರರು ಭೈರಪ್ಪನವರೇ. ಏಕೆಂದರೆ, ಕಾದಂಬರಿ ಬರೆದು ಅವರು ಸುಮ್ಮನಾಗಿಬಿಡುವುದಿಲ್ಲ. [ಅಥವಾ ಭೈರಪ್ಪ ಫ್ಯಾನ್ ಮತ್ತು ಮಾಧ್ಯಮಗಳು ಅವರು ಸುಮ್ಮನಿರಲು ಬಿಡುವುದಿಲ್ಲ!] ತಮ್ಮ ಕಾದಂಬರಿಯಾಚೆಗೂ ಅವರು ಅಲ್ಲಿನ ಪಾತ್ರಗಳಿಂದ ಹೇಳಿಸಿದ ಮಾತುಗಳನ್ನು ಸಮರ್ಥಿಸಿಕೊಳ್ಳುತ್ತಾರೆ, ಅದನ್ನು ತಮ್ಮ ಚರ್ಚೆಗಳಲ್ಲಿ ಪುಷ್ಟಿಗೊಳಿಸುತ್ತಾರೆ, ತಮ್ಮ ಮೂಗಿನ ನೇರಕ್ಕೇ ಅಂಕಿ ಅಂಶಗಳನ್ನು ಕಲೆ ಹಾಕಿ ತಮ್ಮ ಸೈನಿಕ ಆಕ್ರಮಣದ ವಾದವನ್ನೇ ಅಂತಿಮ ಸತ್ಯವೆಂದು ಪ್ರತಿಪಾದಿಸುತ್ತಾರೆ. [ಹೀಗಾಗಿಯೇ ನಾವೂ ಅವರ ಕಾದಂಬರಿಯಾಚೆಗೆ ಹೋಗಿಯೇ ಅವರ ಇಂತಹ ಏಕಪಕ್ಷೀಯ ವಾದವನ್ನು ವಿಶ್ಲೇಷಿಸಬೇಕಾಗುತ್ತದೆ, ಚರ್ಚಿಸಬೇಕಾಗುತ್ತದೆ.] ಅವರ ಬುದ್ಧಿಪೂರ್ವಕ ಯೋಚನೆ ಹಾಗೂ ಯೋಜನೆಯಂತೆಯೇ ಕಥೆ ಅಚ್ಚುಕಟ್ಟಾಗಿ, ಶಿಸ್ತುಬದ್ಧವಾಗಿ, ತರ್ಕಬದ್ಧವಾಗಿ ರೂಪಿತವಾಗುತ್ತದೆ. ಮತ್ತು ಅವರು ನಂಬಿರುವ ತತ್ವಕ್ಕನುಗುಣವಾಗಿಯೇ ಅಂತ್ಯ ಕಾಣುತ್ತದೆ. ಅವರ ಕಾದಂಬರಿ ಬಿಡುಗಡೆಗೆ ಮೊದಲೇ ಮಾಧ್ಯಮಗಳು ಕಥೆಯ ವಸ್ತುವನ್ನು ಅತಿ ರಂಜಿಸಿ ಪ್ರಚಾರ ಮಾಡಿಬಿಡುತ್ತವೆ. ತಮ್ಮದೇ ಆದ ಇಂತಹ ಪ್ರಚಾರ ತಂತ್ರ, ಅದರ ಸಮರ್ಥ ನೆಟ್‌ವರ್ಕಿಂಗ್‌ನಿಂದಾಗಿ ಅವರ ಅಭಿಮಾನಿಗಳು ಕಾದಂಬರಿ ಓದಿದರೆ, ಎಲ್ಲಕ್ಕಿಂಥಾ ಮುಖ್ಯವಾಗಿ ಅವರ ಸಮಷ್ಠಿ ಬದಲಾವಣೆಯ ವಿರೋಧಿ ನಿಲುವಿನಿಂದಾಗಿ ಇಷ್ಟವಿರಲೀ ಬಿಡಲಿ, ಅವರ ಅಭಿಮಾನಿಯಿರಲೀ, ವಿರೋಧಿಸುವವರಿರಲಿ ಅವರ ಕಾದಂಬರಿಯನ್ನು ಓದಲೇಬೇಕೆಂಬ ಅನಿವಾರ್ಯ ತುರ್ತು ನನ್ನಂಥವರಿಗೆ ಹುಟ್ಟಿಬಿಡುತ್ತದೆ! [ಹುಟ್ಟಿಸಲಾಗುತ್ತದೆ.] ನಾವು ಮುಖ್ಯವಾಗಿ ವಿರೋಧಿಸಬೇಕಿರುವುದು ಸತ್ಯಕ್ಕೆ ಹಲವು ಮುಖಗಳಿರುವುದನ್ನು ಒಪ್ಪದೇ ಕಾದಂಬರಿಯಲ್ಲಿ ಪ್ರತಿಪಾದಿತವಾಗುವ ತಮ್ಮ ವೈಯಕ್ತಿಕ ನಿಲುವನ್ನೇ ಅಂತಿಮ ಸತ್ಯವೆನ್ನುವಂತೆ ವೈಭವೀಕರಿಸುವ, ಎತ್ತಿಹಿಡಿಯುವ ಭೈರಪ್ಪನವರ ಈ ಮನೋಧರ್ಮವನ್ನು.

ನಾವೂ ವಿನಾಕಾರಣ ಇಂಥಹ ಋಣಾತ್ಮಕ ನೆಲೆಯ ಕಾದಂಬರಿಯ ಕುರಿತು ಚರ್ಚಿಸಿ ಅದರ ಪ್ರಾಮುಖ್ಯತೆಯನ್ನು ಹೆಚ್ಚಿಸುತ್ತಿದ್ದೇವೇನೋ ಎಂಬ ಆತಂಕ ನನ್ನಂತೆಯೇ ಅನೇಕರನ್ನು ಕಾಡಿರಬಹುದು. ಮಹಿಳೆಯರು ಸಾಹಿತ್ಯ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾಲಿಡಲಾರಂಭಿಸಿದ 70ರ ದಶಕದಿಂದಾ ಇಂದಿನವರೆಗೆ ನಾಲ್ಕು ದಶಕಗಳೇ ಕಳೆದಿವೆ. ಅನೇಕ ಲೇಖಕಿಯರು [ಮಾತ್ರವಲ್ಲ ಲೇಖಕರೂ] ಸ್ತ್ರೀ ಸಂವೇದನೆಯ ನೆಲೆಯಲ್ಲಿ, ಮಹಿಳೆಯ ಅನನ್ಯತೆ, ವಿಭಿನ್ನತೆಯನ್ನು ವಿವಿಧ ಪ್ರಕಾರದ ತಮ್ಮ ಅಭಿವ್ಯಕ್ತಿಯಲ್ಲಿ ಸೂಕ್ಷ್ಮವಾಗಿ, ಅಷ್ಟೇ ವಿವೇಕಯುತವಾಗಿ ಕಟ್ಟಿಕೊಡುತ್ತಾ ಬಂದಿದ್ದಾರೆ. women-gp-membersಅಂತಹ ಬರಹಗಳನ್ನು ಈ ಕವಲು ಕಾದಂಬರಿಗೆ ಮಾಡುತ್ತಿರುವಂತೆ ಸಮಗ್ರವಾಗಿ ವಿಶ್ಲೇಷಿಸಿ, ಚರ್ಚಿಸಿ ಪ್ರೋತ್ಸಾಹಿಸುವಂತಹ ಧನಾತ್ಮಕ ಕೆಲಸವನ್ನು ನಾವೆಲ್ಲಿ ಮಾಡಿದ್ದೇವೆ? ಒಟ್ಟಾರೆಯಾಗಿ ಈ ನಾಲ್ಕು ದಶಕಗಳಲ್ಲಿ ಹೆಣ್ಣಿನ ಅಸ್ಮಿತೆಯನ್ನು ಕಟ್ಟಿಕೊಡುವ ಪ್ರಯತ್ನದ ಮಹಿಳಾ ಅಭಿವ್ಯಕ್ತಿಗೆ ನಾವೇ ಎಲ್ಲಿ ಮಾನ್ಯತೆ ನೀಡಿದ್ದೇವೆ? ಸಮಗ್ರವಾಗಿ ಅಂತಹುದ್ದನ್ನು ದಾಖಲಿಸುವ, ನಮ್ಮಲ್ಲಿಯೂ ಇಂಥಹ ಸಮರ್ಥ ಅಭಿವ್ಯಕ್ತಿಗಳು ಬಂದಿವೆ ಎಂದು ಸಮಾಜಕ್ಕೆ ಕಾಣುವಂತೆ ಅದರ ಎದುರು ಎಲ್ಲಿ ಎತ್ತಿಹಿಡಿದಿದ್ದೇವೆ? ಪ್ರದರ್ಶಿಸಿದ್ದೇವೆ? ಈ ಎಲ್ಲ ಕಾರಣಗಳಿಂದಾಗಿಯೇ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ನಮ್ಮ ಇಂತಹಾ ವಿಭಿನ್ನ, ಅನನ್ಯ ಅಭಿವ್ಯಕ್ತಿಗಳು ಸರಿಯಾದ ಕ್ರಮದಲ್ಲಿ ದಾಖಲಾಗದೇ ಉಳಿದುಬಿಟ್ಟವೇ? ಸಕಾರಾತ್ಮಕ ಅಭಿವ್ಯಕ್ತಿಯನ್ನು ಗುರುತಿಸುವ ಕೆಲಸಕ್ಕಿಂಥಾ ನಕಾರಾತ್ಮಕ ಅಭಿವ್ಯಕ್ತಿಯೇ ಸಮಾಜದಿಂದ ಹೆಚ್ಚು ಗುರುತಿಸಲ್ಪಡುತ್ತದೆ ಹಾಗೂ ವಿಜೃಂಭಿಸುತ್ತದೆ ಎಂಬುದು ನಿಜವೇ? ಇದು ಈ ಸಂದರ್ಭದಲ್ಲಿ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಪ್ರಶ್ನೆಗಳು.

’ಓದಿದ ಗಂಡಸರೆಲ್ಲಾ ಹೆಂಗಸರಾಗ್ತಿದ್ದಾರೆ, ಓದಿದ ಹೆಂಗಸರೆಲ್ಲಾ ಗಂಡಸರಾಗ್ತಿದ್ದಾರೆ. ಗಂಡಸರು ಗಂಡಸರಾಗಿ, ಹೆಂಗಸರು ಹೆಂಗಸರಾಗಿ ಇರಬೇಕಾದರೆ ಯಾರೂ ಓದಬಾರದು’ ಎಂಬ ಮಾತೇ ಅತ್ಯಂತ ರೂಕ್ಷವಾದ್ದು. ಅವರ ಇಡೀ ಕಾದಂಬರಿಗೆ ಈ ಮಾತುಗಳೇ ಮೂಲಮಂತ್ರ. ಮೂಲತಃ ಈ ಮಾತೇ ಗಂಡು-ಹೆಣ್ಣಿನ ನಡುವಿನ ಅಸಮಾನತೆಯನ್ನು ಎತ್ತಿಹಿಡಿಯುವಂತದ್ದು. ಪ್ರಕೃತಿಯಲ್ಲಿ ಗಂಡು-ಹೆಣ್ಣು ಸಮಾನಜೀವಿಗಳು. ಜೊತೆಗೆ ಸಹಜೀವಿಗಳು. ಈ ಪ್ರಾಕೃತಿಕ ಸತ್ಯವನ್ನು ಅರ್ಥಮಾಡಿಕೊಂಡು ಸಮಾಜ ನಿರ್ಮಾಣಗೊಂಡರೆ ಅಸಮಾನತೆಯ ನೆಲೆಯ ಯಾವ ಸಮಸ್ಯೆಯೂ ಬರುವುದಿಲ್ಲ. ಗಂಡು-ಹೆಣ್ಣು ಪದಗಳು ಲಿಂಗ ಸೂಚಕವೇ ಹೊರತೂ ನಮ್ಮ ಪುರುಷ ಪ್ರಧಾನ ಸಮಾಜ ನಿರ್ದೇಶಿಸುವಂತೆ ಶ್ರೇಷ್ಟತೆ-ಕನಿಷ್ಟತೆಯ ಸೂಚಕವಲ್ಲ. ಆದರೆ ಭೈರಪ್ಪನವರ ಈ ಕಾದಂಬರಿಯುದ್ದಕ್ಕೂ ಈ ಅಸಮಾನತೆಯ ನೆಲೆಯನ್ನು ವೈಭವೀಕರಿಸುವ ಹಲವಾರು ಉದಾಹರಣೆಗಳು ಹೆಜ್ಜೆ ಹೆಜ್ಜೆಗೂ ಸಿಗುತ್ತಲೇ ಹೋಗುತ್ತದೆ. ಕುಟುಂಬ ವಿಘಟನೆಗೆ ಹೆಣ್ಣಿನ ಬೌದ್ಧಿಕತೆ, ಪ್ರಗತಿಪರತೆ, ಲೈಂಗಿಕ ಸ್ವಾತಂತ್ರ್ಯ, Indian-policewomanವೃತ್ತಿ ಔನತ್ಯದ ಕುರಿತ ದೃಢತೆ ಕಾರಣವೆಂದು ಪ್ರತಿಯೊಂದು ಪಾತ್ರದಿಂದಲೂ ಅತ್ಯಂತ ಜಾಣ್ಮೆಯಿಂದ ನಿರ್ದೇಶಿಸುತ್ತಾ ಬಂದಿದ್ದಾರೆ. ಇಂಥಹಾ ಯಾವ ವೈಚಾರಿಕತೆಯೂ ಇಲ್ಲದ ಹೆಣ್ಣುಮಕ್ಕಳು ಗಂಡಿನ ಅನುಯಾಯಿಗಳಾಗಿ, ಆದರ್ಶ ಸ್ತ್ರೀಯರಾಗಿ ಚಿತ್ರಿತವಾಗಿದ್ದಾರೆ. ಈ ಹೊತ್ತಿನಲ್ಲಿ ಸಮಾನ ಗೌರವದ ಸಮಾಜ ನಿರ್ಮಾಣದ ಕನಸು ಕಾಣುತ್ತಿರುವ ಮಹಿಳೆಯಿಂದ ಓಬೀರಾಯನ ಕಾಲದ ಯಥಾಸ್ಥಿತಿವಾದವನ್ನು ಬಯಸುವ ಪುರುಷ ಶ್ರೇಷ್ಟತೆಯ ಭ್ರಮೆಯಲ್ಲಿರುವ ಗಂಡಿನ ಮನಸ್ಥಿತಿಯೂ ಕಾದಂಬರಿಯಲ್ಲಿ ಢಾಳಾಗಿಯೇ ಅನಾವರಣಗೊಳ್ಳುತ್ತದೆ. ಇದರ ಹಿಂದಿನ ಮನೋಭಾವವು ಒಂದು ಶತಮಾನ ಮಿಕ್ಕಿ ನಡೆದ ಭಾರತ ಸಾತಂತ್ರ್ಯ ಹೋರಾಟ, ಪ್ರಜಾಪ್ರಭುತ್ವದ ಕಲ್ಪನೆ ನಮ್ಮ ಸಂವಿಧಾನ ಮತ್ತು ಮಹಿಳಾ ಹೋರಾಟ ನಡೆದು ಬಂದ ಹಾದಿಯಿಂದ ಒಂದು ಶತಮಾನದಷ್ಟು ಹಿಂದೆ ಸರಿದಿದೆ. ಇಷ್ಟು ಹೇಳಿದರೆ ಸಾಕು ಭೈರಪ್ಪನವರು ಇನ್ನೂ ಎಲ್ಲಿದ್ದಾರೆ ಎಂಬುದು ಅರ್ಥವಾಗಿಬಿಡುತ್ತದೆ.

ಹೆಣ್ಣನ್ನು ಸಂಗಾತಿಯೆಂದು, ಸಹಜೀವಿಯೆಂದು ಮೇಲುನೋಟಕ್ಕೆ ತೋರಿಕೆಯ ನಟನೆಯಾಡುತ್ತಾ ಒಳಗೇ ಪುರುಷ ಪ್ರಭುತ್ವದ ಸ್ಥಾಪಿತ ಮೌಲ್ಯಗಳನ್ನು ಒಪ್ಪಿಕೊಂಡಿರುವ, ಹೊಂದಾಣಿಕೆ ತನ್ನ ನೆಲೆಯಿಂದ ಸಾಧ್ಯವೇ ಇಲ್ಲವೆಂದು ಉದ್ದೇಶಿಸಿರುವ ಗಂಡು ಮನಸ್ಸಿನ ಅಹಂ ಹಾಗು ಮೇಲರಿಮೆಯನ್ನು ಪ್ರಾಮಾಣಿಕವಾಗಿ ಚಿತ್ರಿಸುತ್ತಾ ಕವಲು ಮೂಲಕ ಭೈರಪ್ಪನವರು ತಮ್ಮ ಪುರುಷ ಮೂಲಭೂತವಾದಿ ಮನಸ್ಸಿನ ದರ್ಶನ ಮಾಡಿಸುತ್ತಾರೆ. ಜೊತೆಗೇ, ಅವರು ತಾವು ನಂಬಿದಂತಾ ನಿಲುವನ್ನು ಯಾವುದೇ ಮುಖವಾಡವಿಲ್ಲದೆಯೂ ಪ್ರತಿಪಾದಿಸುತ್ತಾರಲ್ಲ! ಅದಕ್ಕಾಗಿಯಾದರೂ ಅವರನ್ನು ಅಭಿನಂದಿಸಲೇಬೇಕು.

ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ ಆಗುತ್ತಿರುವ ಪಲ್ಲಟಗಳಿಗೆಲ್ಲಾ ಹೆಣ್ಣನ್ನೇ ಕಾರಣವಾಗಿಸಿರುವ ಮೂಲಸಂಸ್ಕೃತಿರಕ್ಷಕರಾದ ಭೈರಪ್ಪನವರಿಗೆ ನಮ್ಮ ಕುಟುಂಬ ವ್ಯವಸ್ಥೆ ನಿಂತಿರುವುದೇ ಅಸಮಾನತೆಯ ಆಧಾರದ ಮೇಲೆ ಎನ್ನುವ ಅರಿವಿಲ್ಲವೇ? ಇಲ್ಲಿ ಹೆಂಡತಿ ಗಂಡನ ಆಜ್ಞಾನುವರ್ತಿ, Indian Women Paintingsಗೃಹಕೃತ್ಯ ನೋಡಿಕೊಳ್ಳುವ ಪರಿಚಾರಕಿ, ಅವನಿಗೆ ವಿಧೇಯಳಾಗಿರಬೇಕೆಂಬುದೇ ನಿಯಮ. ಮದುವೆಯಾಗಿ ಹೆಣ್ಣು ಗಂಡನ ಮನೆಗೆ ಹೋಗಿ ಅಲ್ಲಿನ ಪರಿಸರವನ್ನೇ ತನ್ನ ಪರಿಸರವೆಂದು ನಂಬಿ ಆ ಕುಟುಂಬದ ಎಲ್ಲ ಜವಾಬ್ದಾರಿಯನ್ನೂ [ಗೃಹಕೃತ್ಯ, ಮನೆವಾರ್ತೆ, ಮಕ್ಕಳ-ವೃದ್ಧರ ಪಾಲನೆ…… ಇತ್ಯಾದಿ] ನಿರ್ವಹಿಸಬೇಕೆಂಬ ಕಟ್ಟುಪಾಡಿನಿಂದ ಮೊದಲುಗೊಳ್ಳುವ ಅಸಮಾನತೆಯ ಹಿಂದೆ ನಮ್ಮ ಪುರುಷ ನಿರ್ಮಿತ ಸಮಾಜ ಹಾಗೂ ಸಂಸ್ಕೃತಿಯ ಏಕಪಕ್ಷೀಯ ಸ್ವಾರ್ಥವಿದೆಯೆಂಬುದನ್ನು ಉದ್ದೇಶಪೂರ್ವಕವಾಗಿ ಮರೆತಿದ್ದಾರೆಯೇ? ಕುಟುಂಬ, ಸಮಾಜ, ನೈತಿಕತೆಯ ಚೌಕಟ್ಟುಗಳನ್ನು ಕಾಲದಿಂದ ಕಾಲಕ್ಕೆ ನಮ್ಮ ಪುರುಷಪ್ರಧಾನ ಸಮಾಜ ತನಗೆ ಬೇಕೆಂದಂತೆ ಬದಲಾಯಿಸಿಕೊಳ್ಳುತ್ತಾ ಹೋಗಿರುವುದು ಚರಿತ್ರೆಯ ಅಧ್ಯಯನಕಾರರೂ ಆಗಿರುವ ಭೈರಪ್ಪನವರಿಗೆ ಹೊಳೆದಿಲ್ಲವೇ? ನಮ್ಮ ಈ ಲೋಕ ರಾಜಕಾರಣವನ್ನು ಮೀರಿ ಪ್ರಕೃತಿ ಸತ್ಯಗಳು ಅತ್ಯಂತ ನಿಗೂಢವೂ, ಸಂಕೀರ್ಣವೂ ಆಗಿರುತ್ತದೆ ಅದನ್ನು ಲೈಂಗಿಕ ಸಂಬಂಧವೊಂದರಿಂದಲೇ ಅಳೆಯಲು ಬರುವುದಿಲ್ಲ. ಜೊತೆಗೆ ಬದಲಾವಣೆ ಬಾಳಿನ ನಿಯಮ. ಅದು ಸರಿಯೋ-ತಪ್ಪೋ ನದಿಯಂತೆ ತನಗೆ ಬೇಕೆಂದಂತೆ ಹರಿಯುತ್ತಾ ಹೋಗುತ್ತದೆ. ನಾವು ಹೀಗೇ ಎಷ್ಟೇ ಬಾಯಿ ಬಡಿದುಕೊಂಡರೂ ಅದರ ದಿಕ್ಕು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಸತ್ಯದ ಬಗೆಗೆ ಭೈರಪ್ಪನವರಿಗೆ ಜಾಣಕುರುಡೇ?

ಸಾಲಂಕೃತಳಾಗದೇ ಸಹಜವಾಗಿರುವ ಹೆಣ್ಣು ಭೈರಪ್ಪನವರಿಗೆ ಸಂವೇದನೆಗಳಿಲ್ಲದ ಸೂತಕದವಳಂತೆ ಕಾಣುತ್ತಾಳೆ. ಸೂತಕ ಎಂದರೆ ಏನು? ಹೊರಗಿನ ಸೂತಕದ ಮಾತನಾಡುವ ಇವರ ಒಳ ಮನಸ್ಸೇ ನಿಜವಾಗಿ ಸೂತಕದ ಮಡು. ಅದನ್ನು ಸಮಾಜಕ್ಕೂ ಆರೋಪಿಸುತ್ತಿರುವುದು ಅವರ ನಿಂತಲ್ಲೇ ನಿಂತು ಕೊಳೆತು ಹೋಗಿರುವ ಮನಸ್ಸಿನ ಸಂಕೇತ. ಹಾಗಿದ್ದರೆ, ಸೀರೆ, ಕುಂಕುಮ, ಹೂವು, ಬಳೆ, ಸರಗಳಿಂದ ಅಲಂಕಾರ ಮಾಡಿಕೊಳ್ಳದ ವಿಶ್ವದ ಬಹು ಸಂಖ್ಯಾತ ಹೆಣ್ಣುಮಕ್ಕಳಿಗೆ, ಹೆಣ್ಣು ಪ್ರಾಣಿಗಳಿಗೆ ಲೈಂಗಿಕ ಸಂವೇದನೆಗಳು ಇರಲು ಸಾಧ್ಯವೇ ಇಲ್ಲ ಎಂದು ಇದರ ಅರ್ಥವೇ? ಭೈರಪ್ಪನವರದು ಅದೆಂಥಾ ಹಾಸ್ಯಾಸ್ಪದ ನಿಲುವು! ಹೆಣ್ಣು ಸದಾ ಪುರುಷ ನಿರ್ಮಿಸಿದ ಸಂಸ್ಕೃತಿಯ ರಕ್ಷಕಳಾಗಿರಬೇಕೇ ಹೊರತು ಅದನ್ನು ತನ್ನ ನೆಲೆಯಿಂದ ನಿರ್ಮಿಸಿದರೆ ಅಪರಾಧವೆಂಬಂಥಾ ಅಲಿಖಿತ ಕಾನೂನನ್ನು, ಇತ್ತೀಚಿನ ಎಚ್ಚೆತ್ತ ಮಹಿಳೆ ಪ್ರತಿಭಟಿಸುತ್ತಿದ್ದಾಳೆ. ಪ್ರಶ್ನಿಸುತ್ತಿದ್ದಾಳೆ. ತಾನೇ ತನ್ನ ವರ್ತಮಾನ ಕಟ್ಟಿಕೊಳ್ಳುವ ಹಾದಿಯಲ್ಲಿ ಸಾಗುತ್ತಿದ್ದಾಳೆ ಎಂಬುದು ಭೈರಪ್ಪನವರಂಥಾ ಮನುವಾದಿಗಳಿಗೆ ನುಂಗಲಾರದ ತುತ್ತಾಗುತ್ತಿದೆಯೇ?

ಮಹಿಳಾಪರ ಕಾನೂನುಗಳು ಶೇಕಡ 98 ರಷ್ಟು ಪ್ರಕರಣಗಳಲ್ಲಿ ದುರ್ಬಳಕೆಯಾಗುತ್ತಿವೆ ಎಂದು ಇತ್ತೀಚೆಗಿನ ಸಂಶೋಧನಾ ವರದಿಯೊಂದನ್ನು ಉಲ್ಲೇಖಿಸಿ ಹೇಳಿರುವ ಅವರ ಮಾತು ಎಷ್ಟು ಸತ್ಯ? ಏಕೆಂದರೆ ನಮ್ಮ ದೇಶದ ಶೇಕಡ 90 ರಷ್ಟು ಮಹಿಳೆಯರಿಗೆ ಕಾನೂನಿನ ಅರಿವಿಲ್ಲದಿರುವುದೇ ಅವರು ಆರ್ಥಿಕವಾಗಿ, ಸಾಮಾಜಿಕವಾಗಿ, ಕೌಟುಂಬಿಕವಾಗಿ ಶೋಷಿತರಾಗುತ್ತಿರುವುದಕ್ಕೆ ಮುಖ್ಯಕಾರಣ ಎನ್ನುತ್ತದೆ ಮತ್ತೊಂದು ಸಂಶೋಧನಾ ವರದಿ. ಹಾಗೆ ಕಾನೂನಿನ ಅರಿವಿರುವ ಬಹಳಷ್ಟು ಮಹಿಳೆಯರೂ ಭಾರತೀಯ ಸಂದರ್ಭದಲ್ಲಿ ತಮ್ಮ ವೈಯಕ್ತಿಕ ಬದುಕು, ಘನತೆ, ಸಂಬಂಧಗಳ ಆಪ್ತತೆಯನ್ನು ಹರಾಜಿಗಿಟ್ಟು ಕಾನೂನಿನ ಮೊರೆ ಹೋಗುವುದು ಕಡಿಮೆಯೇ. ಬಹಳಷ್ಟು ವಿಚ್ಛೇದನ ಪ್ರಕರಣಗಳಲ್ಲಿ ಕಾನೂನಿನ ರೀತ್ಯ ಜೀವನಾಂಶ ಕೊಡಬೇಕೆಂದು ತೀರ್ಮಾನವಾಗಿದ್ದರೂ, ಕಾನೂನಿನ ಕಣ್ ತಪ್ಪಿಸಿ ಅದನ್ನು ಕೊಡದೇ ತಪ್ಪಿಸಿಕೊಳ್ಳುವ ಪ್ರಸಂಗಗಳೇ ಹೆಚ್ಚಿವೆ. ಕಾನೂನು ತಜ್ಞರು, ಮಹಿಳಾ ಕಾನೂನಿನ ದುರ್ಬಳಕೆಯ ಪ್ರಮಾಣವನ್ನು ಅಧ್ಯಯನ ಹಾಗೂ ಸಂಶೋಧನೆಗಳ ಮೂಲಕ ಸಾಬೀತು ಪಡಿಸಬೇಕಿದೆ. ತನ್ಮೂಲಕ ಭೈರಪ್ಪನವರು ಎತ್ತಿರುವ ಮೂಲಭೂತ ಆಕ್ಷೇಪಣೆಗೆ ಉತ್ತರ ಹುಡುಕುವ ಪ್ರಯತ್ನಗಳಾಗಬೇಕಿವೆ. ಆದರೆ ಇದರ ಜೊತೆಗೇ ಕಾನೂನಿನ ತೆಕ್ಕೆಗೇ ಬರದೇ ತಾರತಮ್ಯ, ಅಸಮಾನತೆ, ದೌರ್ಜನ್ಯಗಳಿಂದ ನಿತ್ಯ ನರಳುತ್ತಿರುವ ಅಸಂಖ್ಯಾತ ಹೆಣ್ಣುಜೀವಗಳ ಸಂಕಟವನ್ನೂ ಅಧ್ಯಯನ ಮಾಡಿ ಸತ್ಯಾಂಶವನ್ನು ಅರಿಯುವ ಪ್ರಯತ್ನಗಳು ನಡೆಯಬೇಕಿದೆ. ಏಕೆಂದರೆ ನಮ್ಮ ಸಂವಿಧಾನಕ್ಕೆ ಬದ್ಧವಾಗಿ ನಡೆಯುವ ಸಂಕಲ್ಪವನ್ನೇನಾದರೂ ಮಾಡಿಕೊಂಡು, ಹೆಣ್ಣಿನ ದೃಷ್ಟಿಯಿಂದ ವಿವೇಚಿಸಿದರೆ, ಆಗ ಪ್ರತಿ ಮನೆಯೂ ಸಂವಿಧಾನವನ್ನು ಉಲ್ಲಂಘಿಸುತ್ತಿರುವುದು ವೇದ್ಯವಾಗುತ್ತದೆ.

ಸಮಾನತೆಯ ಆಧಾರದಲ್ಲಿ ಇಡೀ ಸಮಾಜದ ಒಟ್ಟು ಬೆಳವಣಿಗೆಗೆ ಪೂರಕವಾದ ಆಶಯವನ್ನು ಉಳ್ಳ ವಿಚಾರಗಳು ಮಾತ್ರ ಘನತೆಯುಳ್ಳವೂ ಗೌರವಿಸಲ್ಪಡುವುವು ಆಗಿರುತ್ತವೆ. ಅದಿಲ್ಲದೇ ಅಪವಾದವೆನ್ನುವಂತಾ ಬೆರಳೆಣಿಕೆಯಷ್ಟಿರುವ, bhyrappaಕವಲು ಕಾದಂಬರಿಯಲ್ಲಿ ಪ್ರಸ್ತಾಪಿತವಾದ ಪೂರ್ವಗ್ರಹ ಪೀಡಿತ ಏಕಮುಖ ವೈಯಕ್ತಿಕ ನಿಲುವುಗಳನ್ನೇ ವೈಭವೀಕರಿಸಿದರೆ ಅದು ಸತ್ಯವಾಗಿಬಿಡುವುದಿಲ್ಲ. ಭೈರಪ್ಪನವರು ಮಹಿಳೆಯರ ಅರಿವು ಹಾಗೂ ಜ್ಞಾನಕ್ಕೆ ಹಿಡಿದಿರುವ ಬಂದೂಕಿನ ನಳಿಕೆ, ಪಕ್ಕದ ದೇಶದವರ ಶತ್ರುತ್ವಕ್ಕಿಂಥಲೂ ಅಪಾಯಕಾರಿಯಾದುದು! ಯಾವುದೇ ಪ್ರಬುದ್ಧ ಸಾಹಿತಿ-ಕಲಾವಿದನ ಮಾಗಿದ ವಯಸ್ಸು, ಪ್ರತಿಭೆ, ಕಲೆಗಾರಿಕೆ, ಕಥನ ಕೌಶಲದಿಂದ ಸಮಚಿತ್ತವಾದ, ವಿಶ್ವಾತ್ಮಕ ನಿಲುವಿನ, ಸಾಂಸ್ಕೃತಿಕ ಸೂಕ್ಷ್ಮತೆ ಹಾಗೂ ಮಾನವೀಯ ಸಂವೇದನೆಯ ಅಭಿವ್ಯಕ್ತಿಯನ್ನು ಸಮುದಾಯ ಸದಾ ನಿರೀಕ್ಷಿಸುತ್ತದೆ. ಯಾವುದೇ ಅಭಿವ್ಯಕ್ತಿ ವೈಯಕ್ತಿಕ ನೆಲೆಯದಾದರೂ ಅದಕ್ಕೊಂದು ಸಮಷ್ಟಿ ಪ್ರಜ್ಞೆ, ಸಾಮಾಜಿಕ ಜವಾಬ್ದಾರಿ ಇಲ್ಲದಿದ್ದರೆ ಅದನ್ನು ನಿರಾಕರಿಸುವ ಹಾಗೂ ತಿರಸ್ಕರಿಸುವುದಕ್ಕಿಂಥಾ ದೊಡ್ಡ ಶಿಕ್ಷೆ ಲೇಖಕನಿಗೆ ಇನ್ನೊಂದಿಲ್ಲ ಎಂಬುದು ನನ್ನ ಭಾವನೆ.

11 thoughts on “ಭೈರಪ್ಪನವರ ’ಕವಲು’ ನಾನೇಕೆ ನಿರಾಕರಿಸುತ್ತೇನೆ?

  1. Ananda Prasad

    ಭೈರಪ್ಪನವರ ಎಲ್ಲ ಬರವಣಿಗೆಗಳಲ್ಲಿಯೂ ಪ್ರತಿಗಾಮಿತನ ಎದ್ದು ಕಾಣುತ್ತದೆ. ಪ್ರಗತಿಪರ ಪಾತ್ರಗಳು ಅವರ ಕಾದಂಬರಿಗಳಲ್ಲಿ ಯಶಸ್ವಿಯಾಗುವುದಿಲ್ಲ. ಸಂಪ್ರದಾಯಗಳಿಗೆ ವಿರುದ್ಧವಾಗಿ ನಡೆದುಕೊಂಡವರು ಅವರ ಕಾದಂಬರಿಗಳಲ್ಲಿ ಮಾನಸಿಕವಾಗಿಯೂ, ದೈಹಿಕವಾಗಿಯೋ ನರಳಿ ನರಳಿ ಸಾಯುತ್ತಾರೆ. ಉದಾಹರಣೆಗೆ ವಂಶವೃಕ್ಷ ಕಾದಂಬರಿಯಲ್ಲಿ ವಿಧವೆಯಾಗಿ ಮರುವಿವಾಹವಾದ ಪಾತ್ರವೊಂದು ದೈಹಿಕವಾಗಿಯೂ, ಮಾನಸಿಕವಾಗಿಯೂ ನರಳಿ ನರಳಿ ಸಾಯುವಂತೆ ಚಿತ್ರಿಸಿದ್ದಾರೆ. ಇದನ್ನು ಓದಿದವರು ವಿಧವೆಯರ ಮರುವಿವಾಹಗಳು ಯಶಸ್ವಿಯಾಗುವುದಿಲ್ಲ ಎಂಬ ಕಲ್ಪನೆಯನ್ನು ಹೊಂದಬಹುದು. ಮರುವಿವಾಹವಾದ ವಿಧವೆಯರ ಯಶಸ್ವೀ ಘಟನೆಗಳು ಸಮಾಜದಲ್ಲಿ ಎಷ್ಟೋ ಇವೆ. ಇವನ್ನು ಅವರು ಚಿತ್ರಿಸುವುದಿಲ್ಲ. ಅಂಥ ಪಾತ್ರಗಳನ್ನು ಚಿತ್ರಿಸಿ ಸಮಾಜಕ್ಕೆ ಧನಾತ್ಮಕ ಸಂದೇಶವನ್ನು ಲೇಖಕರು, ಕಾದಂಬರಿಕಾರು ನೀಡಬೇಕು.

    ಮಾಧ್ಯಮಗಳು ಹೆಚ್ಚಾಗಿ ಬ್ರಾಹ್ಮಣರ ಸಂಪಾದಕತ್ವದಲ್ಲಿ ಇರುತ್ತವೆ. ಕನ್ನಡದ ಪ್ರಮುಖ ಪತ್ರಿಕೆಗಳ ಸಂಪಾದಕರು ಎಷ್ಟು ಜನ ಬ್ರಾಹ್ಮಣರಿದ್ದಾರೆ ಎಂದು ಒಮ್ಮೆ ನೋಡಿ. ಪತ್ರಿಕೆಗಳಿಗೆ ಬ್ರಾಹ್ಮಣರು ಮಾತ್ರ ಏಕೆ ಸಂಪಾದಕರಾಗಬೇಕು? ಉಳಿದ ಜಾತಿಗಳಲ್ಲಿ ಪತ್ರಿಕೆಗಳ ಸಂಪಾದಕರಾಗುವ ಯೋಗ್ಯತೆ ಉಳ್ಳವರು ಇಲ್ಲವೇ? ಬ್ರಾಹ್ಮಣರು ಸಂಪಾದಕರಾದರೆ ಇರುವ ತೊಂದರೆ ಎಂದರೆ ಪತ್ರಿಕೆಗಳಲ್ಲಿ ಪ್ರಗತಿಪರ ಬರಹಗಳು ಪ್ರಕಟವಾಗುವುದಿಲ್ಲ. ಸದಾ ಯಥಾಸ್ಥಿತಿವಾದವನ್ನು, ಸನಾತನ ವಾದವನ್ನು ಎತ್ತಿ ಹಿಡಿಯುವ ನಿಲುವಿನ ಲೇಖನಗಳಿಗೆ ಆದ್ಯತೆ ಸಿಗುತ್ತದೆ. ಇದರಿಂದ ಸಮಾಜ ಹಿಂದೆ ಉಳಿಯುತ್ತದೆ. ಸನಾತನ ವಾದಿ ರಾಜಕೀಯ ನಿಲುವಿನ ಪಕ್ಷಗಳಿಗೆ ಅತಿ ಹೆಚ್ಚು ಪ್ರಾಧಾನ್ಯತೆ ಅಂಥ ಪತ್ರಿಕೆಗಳು/ಮಾಧ್ಯಮಗಳು ಕೊಡುತ್ತವೆ. ಇದರಿಂದಾಗಿ ಒಟ್ಟಾಗಿ ಕನ್ನಡ ಸಮಾಜ ಪ್ರತಿಗಾಮಿಯಾಗಿ ಉಳಿಯುತ್ತದೆ.

    Reply
  2. Ahamed

    ಸಾಹಿತಿಯಾದವನಿಗೆ ಸಾಮಾಜಿಕ ಬದ್ಧತೆ ಇರಲೇ ಬೇಕೆಂದೇನು ಇಲ್ಲ ಎಂದು 15ವರ್ಷಗಳ ಹಿಂದೆಯೇ ಹೇಳಿದ್ದ ಅದೇ ರೀತಿ ಬರೆಯುತ್ತಾ ಬದುಕುತ್ತಿರುವ ಭೈರಪ್ಪನವರ ಸಾಹಿತ್ಯಗಳನ್ನು ಓದಿ ಸಮಯ ವ್ಯರ್ಥ ಮಾಡಿಕೊಳ್ಳುವುದರಲ್ಲಿ ಯಾವ ಸಾರ್ಥಕತೆಯೂ ಇಲ್ಲ.

    Reply
  3. ಮೋಹನ

    ವಸ್ತುನಿಷ್ಠ ವಿಮರ್ಶಕರ ಕೊರತೆ ಕನ್ನಡ ಸಾಹಿತ್ಯಲೋಕದ ಬಹುದೊಡ್ಡ ದೌರ್ಬಲ್ಯವಿರುವ ಕ್ಷೇತ್ರ. ಇಲ್ಲಿ ಸಾಹಿತಿಯ ಕೃತಿ ಮೌಲ್ಯಕ್ಕಿಂತ ಹೆಚ್ಚಾಗಿ ಕರ್ತೃವಿನ ಕುರಿತೇ ವಿಮರ್ಶೆ ಹೆಚ್ಚು ನಡೆಯುತ್ತದೆ. ಇಲ್ಲವೆ ಕರ್ತೃವಿನ ಕುರಿತ ಪೂರ್ಗ್ರಹದಿಂದ ಕೂಡಿರುತ್ತದೆ. ಹಾಗಾಗಿ ವಸ್ತನಿಷ್ಠ ವಿಮರ್ಶೆ ಬರುವುದೇ ಇಲ್ಲ ಇಲ್ಲೂ ಕೂಡ ಅದೇ ಢಾಳಾಗಿ ಕಾಣಿಸುತ್ತಿದೆ. ಇದನ್ನು ಭೈರಪ್ಪ ಕೂಡ ಹೀಗೆ ಹೇಳುತ್ತಾತೆ ಇದುವರೆಗೂ ನನ್ನ ಕೃತಿಗಳ ಸರಿಯಾದ ಮೌಲ್ಯಮಾಪನ ಮತ್ತು ವಿಮರ್ಶೆ ನಡೆದಿಲ್ಲ. ಕೇವಲ ವಿರೋಧದಿಂದ ಅಥವ ಅಭಿಮಾನದಿಂದ ವಿಮರ್ಶೆಗಳಷ್ಟೇ ಬಂದಿವೆ. ಅವುಗಳಲ್ಲಿ ವಸ್ತುನಿಷ್ಟತೆಯಿರಲು ಸಾಧ್ಯವಿಲ್ಲ ಎಂದು. ರೂಪಾ ಹಾಸನ ಅವರೂ ಕೂಡ ವಿರೋಧ ಕುದಿಯಲ್ಲಿ ವಿಮರ್ಶಿಸಿರುವುದ ಸ್ಪಷ್ಟ. ಉಪೇಕ್ಷ ಯೋಗ್ಯ ಬರಹ.

    Reply
  4. Johnsheen, Kodagu

    Byrappa is a great story teller. Some times some venom comes out through his stories.He will bring supporting stories to support his beliefs. Most of such stories are fake ones, created exclusively to uphold his arguments. The society should not get misled by such writers. Because their contribution to the society are only stories.

    Reply
  5. ಮೋಹನ್

    ahamed ಮದರಸಾಗಲ್ಲಿ ಓದಿ ಬದುಕು ಸಂಪನ್ನಗೊಳಿಸಿಕೊಳ್ಳಿ :p

    Reply
  6. ಮೋಹನ್

    ಬೆಂಗಳೂರು: ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಶೋಷಣೆ ನಡೆಯುತ್ತಿದೆ ಎಂಬ ಮಾತನ್ನು ಈಗ ಬದಲಿಸುವ ಪರಿಸ್ಥಿತಿ ಎದುರಾಗಿದ್ದು, ಸಾಕಷ್ಟು ಮಹಿಳೆಯರೇ ಪುರುಷರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಹೇಳಿದರು.

    ಜೆಸಿಐ ಬೆಂಗಳೂರು ಸಿಲಿಕಾನ್ ಸಿಟಿ ಹಾಗೂ ಎಂ.ಎನ್. ಕೃಷ್ಣರಾವ್ ಉದ್ಯಾನ ನಡಿಗೆದಾರರ ಸಂಘದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಎಂ.ಎನ್.ಕೃಷ್ಣಾರಾವ್ ಉದ್ಯಾನದಲ್ಲಿ ಭಾನುವಾರ ಏರ್ಪಡಿಸಿದ್ದ ಧರಿತ್ರಿ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದರು.

    ನಮ್ಮ ದೇಶದಲ್ಲಿ ಮಹಿಳೆಗೆ ಉನ್ನತ ಸ್ಥಾನಮಾನ ಹಾಗೂ ಗೌರವ ನೀಡಲಾಗುತ್ತಿದೆ. ಈ ನಡುವೆ ಹೆಣ್ಣಿನ ಶೋಷಣೆ ನಡೆಯುತ್ತಿದೆ ಎಂಬ ಆರೋಪ ನಿರಂತರವಾಗಿ ಕೇಳಿಬರುತ್ತಿವೆ. ಸಾಕಷ್ಟು ಪ್ರಕರಣಗಳಲ್ಲಿ ಹೆಣ್ಣು ಗಂಡಿಗೆ ಶೋಷಣೆ ಮಾಡಿದರೆ, ಮತ್ತೊಂದೆಡೆ ಹೆಣ್ಣಿಗೆ ಹೆಣ್ಣೇ ಶತ್ರು. ಹೆಣ್ಣು ಹೆಣ್ಣಿನಿಂದಲೇ ಶೋಷಣೆಗೊಳಗಾಗುತ್ತಿದ್ದಾಳೆ ಎಂದು ವಿಷಾದಿಸಿದರು.

    ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು: 21ನೇ ಶತಮಾನದಲ್ಲೂ ಹೆಣ್ಣಿನ ಬಗ್ಗೆ ಇರುವ ಕೆಟ್ಟ ಭಾವನೆ ಜನರ ಮನಸ್ಸಿನಿಂದ ದೂರವಾಗಿಲ್ಲ. ಹೆಣ್ಣು ಹುಟ್ಟಿದರೆ ಕಷ್ಟ ಎಂಬ ಭಾವನೆ ಇಂದಿಗೂ ಸಾಕಷ್ಟು ಜನರಲ್ಲಿದೆ. ಅಂತಹ ಭಾವನೆಯನ್ನು ಪ್ರತಿಯೊಬ್ಬರೂ ತಮ್ಮ ಮನಸ್ಸಿನಿಂದ ತೆಗೆದುಹಾಕಬೇಕು ಎಂದರು.

    ಹೆಣ್ಣಿನ ಮೇಲೆ ಅತ್ಯಾಚಾರದಂತಹ ಘಟನೆಗಳು ನಡೆಯಲು ಆಕೆಯೇ ಕಾರಣ. ತಮ್ಮ ರಕ್ಷಣೆಗಾಗಿ ಕೆಲವು ನಿಯಮಗಳಿದ್ದು, ಅವುಗಳನ್ನು ಪಾಲಿಸಬೇಕು. ಉಡುಪುಗಳ ಬಗ್ಗೆಯೂ ಗಮನಹರಿಸಬೇಕು. ಯಾರಿಂದಲೂ ನಮ್ಮ ಮೇಲೆ ಶೋಷಣೆ ನಡೆಯದಂತೆ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಮಹಿಳೆಯರು ಅರಿವು ಬೆಳೆಸಿಕೊಳ್ಳಬೇಕು ಎಂದರು.

    ಸಮಾನತೆಗೆ ಕೊರತೆಯಿಲ್ಲ: ನಟಿ ಭಾರ್ಗವಿ ನಾರಾಯಣ್ ಮಾತನಾಡಿ, ಸಮಾನತೆ ಎಂಬುದು ಪಾಶ್ಚಾತ್ಯದಿಂದ ಬಂದದ್ದು. ನಮ್ಮಲ್ಲಿ ಮಹಿಳೆಯರಿಗೆ ಸಿಗುತ್ತಿರುವ ಸಮಾನತೆಗೆ ಕೊರತೆಯಿಲ್ಲ. ಆದರೆ ಆಕೆ ಅಬಲೆಯಲ್ಲ. ಈಗ ನಮಗೆ ಸಿಗುತ್ತಿರುವ ಗೌರವ ಉಳಿಸಿಕೊಂಡು, ಜತೆಗೆ ಕುಟುಂಬವನ್ನೂ ಉತ್ತಮವಾಗಿ ನಿರ್ವಹಿಸುವ ಜವಾಬ್ದಾರಿ ಮಹಿಳೆ ಮೇಲಿದೆ. ಅದನ್ನು ಸಮರ್ಥವಾಗಿ ನಿರ್ವಹಿಸಿಕೊಂಡು ಹೋಗುವಂತೆ ಕಿವಿಮಾತು ಹೇಳಿದರು.

    ಮಹಿಳೆಯರಿಗಾಗಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದ ಮಹಿಳೆಯರಿಗೆ ಇದೇ ವೇಳೆ ಬಹುಮಾನ ವಿತರಿಸಲಾಯಿತು. ಪಾಲಿಕೆ ಸದಸ್ಯೆ ಗಂಗಾಂಬಿಕೆ, ನಡಿಗೆದಾರರ ಸಂಘದ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

    ಇದು ಸಮಾಜವಾದಿ ಲಲಿತಾ ನಾಯಕ್ ಅವರ ಅಭಿಪ್ರಾಯ, ಇವರನ್ನೂ ಪ್ರತಿಗಾಮಿ ಪ್ರಗತಿ ವಿರೋಧಿ ಎನ್ನುತ್ತೀರೇನು?

    Reply
  7. Srinivasamurthy

    ಲೇಕಕರು, ಕವಿಗಳು, ಕಾದಂಬರಿಕಾರರು ಮತ್ತೂ ಇತರೆ ಸಾಹಿತ್ಯದ ನೆಲೆಗಳವರು
    ಬರೆಯುವ ಸಾಹಿತ್ಯದ ಬೇರೆಬೇರೆ ತೆರನ ಬರಹಗಳು ಸಮಾಜದಲ್ಲಿಯೇ ಇರುವ ಸಂಗತಿಯನ್ನೇ ಒಳಗೊಂಡಿರುತ್ತದೆ.
    ಇವರುಗಳು ಬರೆದ ಬರಹಗಳನ್ನು ವಿಮರ್ಶಿಸುವ ವಿಮರ್ಶಕರು ಮಾತ್ರ
    ಅವರು ಬರೆದದ್ದು ಸರಿಯಾಗಿಲ್ಲ, ಈ ಪಾತ್ರವನ್ನು ಕೀಳಾಗಿ ಚಿತ್ರಿಸಲಾಗಿದೆ, ಹೀಗಿಲ್ಲ, ಹಾಗೆ ಇರಬೇಕಾಗಿತ್ತು …… ಅಂತೆಲ್ಲಾ ಹೇಳಿಕೊಂಡು ಟೀಕಿಸುವ ಬರವಣಿಗೆಗಳನ್ನು ಬರೆಯುತ್ತಾ ಬವ್ದಿಕ ನೆಲೆಯನ್ನೇ ಒಂದು ಯುದ್ದದ ವಾತಾವರ್ಣವನ್ನಾಗಿಸಿಬಿಡುತ್ತಾರೆ.

    ಹೀಗೆ ಟೀಕಿಸುವವರು
    ಸಮಾಜವು ಹಲತನಗಳಿಂದ ಕೂಡಿದ್ದೂ ಎಲ್ಲರೂ ಒಂದೇ ಬಾವನೆಗಳೊಂದಿಗೆ ಬೆಸೆದುಕೊಂಡಿಲ್ಲ, ಹೆಣ್ಣು-ಗಂಡು ಗಳಲ್ಲಿಯೂ ಕೆಟ್ಟ ಹಾಗೂ ಒಳ್ಳೆಯ ಅಂಶಗಳು ಕೂಡಿರುತ್ತವೆ, ಇವು ಅವರು ಬೆಳೆದ ವಾತಾವರ್ಣಕ್ಕನುಗುಣವಾಗಿಯೇ ಇರುತ್ತವೆ
    ಅಂತ ತಿಳಿಯದವರಾಗಿರುತ್ತಾರೆ.

    -ಅಂತವರಲ್ಲಿ ನೀವೂ ಒಬ್ಬರು.

    Reply
  8. Ahamed

    ಮಿ. ಮೋಹನ್ ಮದರಸಾದ ನೆಮಟಸ್ತಿಕಯನ್ನು ನಾನು ಇಟ್ಟಿಕೊಂಡಿಲ್ಲಪ್ಪ, ಕುವೆಂಪುರವರರ ವಿಶ್ವ ಮಾನವಧರ್ಮದಲ್ಲಿ ನಂಬಿಕೆ ಇಟ್ಟುಕೊಂಡು ಬದುಕುತ್ತಾ, ವೈಜ್ಞಾನಿಕ ಮನೋದರ್ಮವನ್ನು ಉದ್ದೀಪನಗೊಳಿಸುವಲ್ಲಿ ವಿಶ್ವಾಸವಿಟ್ಟುಕೊಂಡಿದ್ದೇನೆ. ನಾನು ಭೈರಪ್ಪನವರ ಆ ಮಾತು ಯಾರ ಬದುಕನ್ನೂ ಸಂಪನ್ನಗೊಳಿಸುವುದಿಲ್ಲ.

    Reply
  9. ಕನ್ನಡಿಗ

    ನೆನ್ನೆ ಮೊನ್ನೆ ಬಿದ್ದ ಮಳೆಗೆ ಹುಟ್ಟಿದ ಹುಲ್ಲ೦ತಿರುವ ಹುಲು ಮಾನವರೆಲ್ಲ , ಆಲದ ಮರದಂತಿರುವ ಎಸ್.ಎಲ್. ಭೈರಪ್ಪನವರ / ಭೈರಪ್ಪನವರ ಕಾದಂಬರಿ ಬಗ್ಗೆ ಟೀಕೆ ಮಾಡುತ್ತಿರುವುದನ್ನು ನೋಡಿದರೆ ಮನಸ್ಸಿಗೆ ಖೇದವೆನಿಸುತ್ತಿದೆ.

    Reply
  10. M A Sriranga

    ರೂಪ ಹಾಸನ ಮತ್ತು ಈ ಲೇಖನ ಕುರಿತ ಚರ್ಚೆಯಲ್ಲಿ ಭಾಗವಹಿಸಿದ ಎಲ್ಲರಿಗೂ— ತಾವುಗಳು “ಕವಲು:ಕಲೆ ಮತ್ತು ಕಾಳಜಿ’ ಎಂಬ ಹೆಸರಿನ ವಿಮರ್ಶಾ ಕೃತಿಯಲ್ಲಿರುವ(ಸಂ . ಅಜಕ್ಕಳ ಗಿರೀಶ್ ಭಟ್, ಪ್ರ:ಸಾಹಿತ್ಯ ಭಂಡಾರ ಬೆಂಗಳೂರು ೫೩) ವೃತ್ತಿಯಿಂದ ವಕೀಲರಾಗಿರುವ ಶ್ರೀಮತಿ ಮೀರಾ ಫಡಕೆ ಅವರು ಬರೆದಿರುವ “ಕವಲು:ಕಾನೂನಿನ ಕೋನದಿಂದ” ಎಂಬ ವಿಮರ್ಶಾ ಲೇಖನವನ್ನು ಓದಿದ್ದೀರಾ? ಇದುವರೆಗೆ ಓದದೆ ಇದ್ದರೆ ಒಮ್ಮೆ ಓದಿ ನೋಡಿ. “ಕವಲು” ವಿನ ಸಮಸ್ಯೆ ತಾವುಗಳು ಭಾವಿಸಿದಷ್ಟು ಸರಳವಲ್ಲ.

    Reply

Leave a Reply

Your email address will not be published. Required fields are marked *