’ಹೈವೇ’,’ ಕ್ವೀನ್’, ’ಗುಲಾಬಿ ಗ್ಯಾಂಗ್’ – ಆತ್ಮ ವಾತ್ಮ ಮಥನಿಸಿ ಅನುಭಾವ ಹುಟ್ಟಿತಯ್ಯ

– ಬಿ.ಶ್ರೀಪಾದ ಭಟ್

1) Of my land – uniform blue opens skies
Mad-artist pallets of green lands and lily filled lakes that
Mirror all – not peace or tranquil alone he shudders some
Young women near my father’s home,with a drunken husband
Who never changed;she bore his beatings everyday day until one
Stormy night,in fury,she killed him by stomping his seedbags…..
We: their daughters.
We daughters of their soil
We mostly write
2) the pot sees just another noisy child
the glass sees an eager and clumsy hand
but the teacher sees a girl breaking the rule
the school sees a potential embarrassment
– Meena kandaswamy

ಕಳೆದ ಹದಿನೈದು ದಿನಗಳಲ್ಲಿ ’ಹೈವೇ’,’ ಕ್ವೀನ್’, ’ಗುಲಾಬಿ ಗ್ಯಾಂಗ್’ ಎನ್ನುವ ಮೂರು ಪ್ರಮುಖ ಹಿಂದಿ ಚಿತ್ರಗಳು ಬಿಡುಗಡೆಗೊಂಡು ಪ್ರೇಕ್ಷಕರ ಗಮನ ಸೆಳೆದವು. ಸ್ತ್ರೀ ಪ್ರಾಧಾನ್ಯತೆಯೇ ಈ ಮೂರು ಸಿನಿಮಾಗಳ ಮುಖ್ಯ ಕತೆಯಾಗಿತ್ತು. ಚಿತ್ರಕತೆ, ನಿರೂಪಣೆಗಳಲ್ಲಿ ವಿಭಿನ್ನವಾಗಿದ್ದರೂ ಹೈವೇ ಮತ್ತು ಕ್ವೀನ್ ಸಿನಿಮಾಗಳು ನಾಯಕಿಯು ಸ್ವಚ್ಚಂದವಾಗಿ, ಏಕಾಂಗಿಯಾಗಿ, ಬಿಡುಗಡೆಯ ಮನಸ್ಥಿತಿಯಲ್ಲಿ ದೇಶಾದ್ಯಾಂತ ಅಡ್ಡಾಡುವುದನ್ನು ಮೂಲಕತೆಯನ್ನಾಗಿಟ್ಟುಕೊಂಡು ಫೆಮಿನಿಸಂನ ವಿಭಿನ್ನ ಆಯಾಮಗಳನ್ನು ಪ್ರತಿಪಾದಿಸಿದರೆ ಗುಲಾಬ್ ಗ್ಯಾಂಗ್ ಸಿನಿಮಾ ನೈಜ ಕತೆಯ ಎಳೆಯನ್ನು ಆಧಾರವಾಗಿಟ್ಟುಕೊಂಡು ಅಕ್ಟಿವಿಸಂನ ಮೂಲಕ ಸ್ತ್ರೀ ಶಕ್ತಿಯನ್ನು ಎತ್ತಿಹಿಡಿಯುತ್ತದೆ.

ಇಮ್ತಿಯಾಜ್ ಅಲಿ ನಿರ್ದೇಶನದ ’ಹೈವೇ’ ಚಿತ್ರದಲ್ಲಿ ನಾಯಕಿ ಅಲಿಯಾ ಭಟ್ (ವೀರಾ ತ್ರಿಪಾಠಿ) Highway-movieಖ್ಯಾತ ಉದ್ಯಮಪತಿಯೊಬ್ಬನ ಮಗಳು. ರಣದೀಪ್ ಹೂಡಾ (ಮಹಬೀರ್ ಭಾಟಿ) ಎನ್ನುವ ಅಪಹರಣಕಾರರ ಗ್ಯಾಂಗ್‌ನ ಮುಖ್ಯಸ್ಥ ಅಲಿಯಾ ಭಟ್ ತನ್ನ ಫಿಯಾನ್ಸಿಯೊಂದಿಗೆ ವಿಹಾರದಲ್ಲಿದ್ದ ಸಮಯದಲ್ಲಿ ಆಕೆಯನ್ನು ಅಪಹರಿಸುತ್ತಾನೆ. ನಂತರ ಇಡೀ ಸಿನಿಮಾ ರೋಡಿಗಿಳಿಯುತ್ತದೆ. ಉತ್ತರ ಭಾರತದ ವಿವಿಧ ರಾಜ್ಯಗಳ ಮೂಲಕ ಸಂಚರಿಸುವ ಈ ಸಿನಿಮಾ ನಿಧಾನವಾಗಿ ರೋಡಿನಲ್ಲಿ ತೆರೆದುಕೊಳ್ಳುತ್ತದೆ. ಆರಂಭದಲ್ಲಿ ತಲ್ಲಣದಲ್ಲಿದ್ದ ನಾಯಕಿ ಅಲಿಯಾ ನಿಧಾನವಾಗಿ ಪ್ರಕೃತಿಯ ಬಾಹುಗಳಲ್ಲಿ ಬಿಡುಗಡೆಯ ನಿಜವಾದ ಅರ್ಥಗಳನ್ನು ಕಂಡುಕೊಳ್ಳತೊಡಗುತ್ತಾಳೆ. ಭಯ, ಆತಂಕಗಳು ಕ್ರಮೇಣ ಉಲ್ಲಾಸ ಮತ್ತು ಉತ್ಸಾಹದ ಗುಣಗಳಾಗಿ ಪರಿವರ್ತನೆಗೊಂಡು ನಾಯಕಿ ಕ್ರಮೇಣ ಅಪಹರಣಕಾರ ಹೂಡನ ವ್ಯಕ್ತಿತ್ವದಲ್ಲಿ ಬೆಸೆದುಕೊಳ್ಳತೊಡಗುತ್ತಾಳೆ (ಸ್ಟಾಕ್ ಹೋಂ ಸಿಂಡ್ರೋಮ್) ಹೀಗೆ ಅಪಹರಣದ ನಾಟಕವು ಸ್ನೇಹಕ್ಕೆ ತಿರುಗುತ್ತಿರುವಂತಹ ಸಂಧರ್ಭದಲ್ಲಿ ನಾಯಕಿ ಅಲಿಯಾ ತನ್ನ ಕ್ರೌರ್ಯದ ಬಾಲ್ಯವನ್ನು ಹೂಡಾನೊಂದಿಗೆ ಹಂಚಿಕೊಳ್ಳುತ್ತಾಳೆ. ಬಾಲ್ಯದಲ್ಲಿ ಆಕೆಯ ಚಿಕ್ಕಪ್ಪ ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸುತ್ತಿರುತ್ತಾನೆ. ಸಂಪೂರ್ಣ ತೊಂದರೆಗೊಳಗಾದ, ಲೈಂಗಿಕವಾಗಿ ಹಲ್ಲೆಗೊಳಗಾದ ಅಂದಿನ ಆ ಗಾಯಕ್ಕೆ ಇಂದು ತನಗೆ ಅಪಹರಣಕಾರನ ಸಂಗದಲ್ಲಿ, ಪ್ರಕೃತಿಯ ಮಡಿಲಲ್ಲಿ ಮಲಾಮು ಸಿಗುತ್ತಿದೆ ಎಂದು ನಾಯಕಿ ಬಿಡುಗಡೆಯ ಸಂಭ್ರಮವನ್ನು ಅನುಭವಿಸುತ್ತಿರುತ್ತಾಳೆ. ನಂತರ ಇದು ನಿಧಾನವಾಗಿ ಪ್ರೇಮಕ್ಕೆ ಹೊರಳಿಕೊಳ್ಳುವಷ್ಟರಲ್ಲಿ ಶೂಟೌಟ್ ನಡೆದು ಅಪಹರಣಕಾರ ಹೂಡ ಹತ್ಯೆಯಾಗುತ್ತಾನೆ. ನಾಯಕಿ ಮರಳಿ ತನ್ನ ಕುಟುಂಬದೊಂದಿಗೆ ಬದುಕಲು ತಿರಸ್ಕರಿಸಿ ಸ್ವತಂತ್ರವಾಗಿ ತನ್ನದೇ ಆದ ಬದುಕನ್ನು ಕಟ್ಟಿಕೊಳ್ಳಲು ಪ್ರಾರಂಬಿಸುತ್ತಾಳೆ.

ಇಡೀ ಸಿನಿಮಾದ ಶಕ್ತಿ ಮತ್ತು ಮಿತಿಗಳೇನೆ ಇರಲಿ ಇದು ನಿರಂತರವಾಗಿ ಧ್ವನಿಸುವುದು ಹೆಣ್ಣಿನ ಬಿಡುಗಡೆಯ ಹೊಸದಾರಿಗಳನ್ನು. Highway-AliaBhattಅದೂ ಸಹ ದಾರಿಗಳೂ ಜಾಳುಜಾಳಾಗಿ ತೆರೆದುಕೊಳ್ಳದೆ ಅಲಿಯಾಳ ಅಂತರಂಗದ ಪಿಸುಮಾತುಗಳು, ಅವ್ಯಕ್ತ ಆಸೆಗಳು ಪ್ರಕೃತಿಯೊಂದಿಗೆ ಬಹಿರಂಗವಾಗಿ ಸಂಭಾಷಿಸುವುದರ ಮೂಲಕ ಬೆಳಕಾಗತೊಡಗುತ್ತವೆ. ಇಲ್ಲಿಯೇ ಈ ಸಿನಿಮಾದ ಗೆಲುವಿರುವುದು. ತನ್ನ ಎರಡನೇ ಸಿನಿಮಾದಲ್ಲಿಯೇ ತನ್ನ ಅದ್ಭುತವಾದ ಅಭಿನಯದ ಮೂಲಕ ಅಲಿಯಾ ಚಿತ್ರವನ್ನು ನೈತಿಕವಾಗಿ ಗೆಲ್ಲಿಸಿದ್ದಾಳೆ. ಇಲ್ಲಿ ಅಲಿಯಾ ಹುತಾತ್ಮಳಾಗಲು ನಿರಾಕರಿಸುವುದರ ಮೂಲಕ ಗೃಹಿಣಿಯರಿಗೇನಿದೆ ಮೂರು ಬಾಗಿಲು, ನಾಲ್ಕು ಕೋಣೆ ಮಾತ್ರ ಎನ್ನುವ ವ್ಯವಸ್ಥೆಯ ಅಲಿಖಿತ ಕಟ್ಟುಪಾಡನ್ನು ಯಶಸ್ವಿಯಾಗಿ ಮುರಿದು ಹಾಕುತ್ತಾಳೆ. ಅಹಲ್ಯೆಯ ತೊಡೆಯ ಮೇಲಿನ ಗೆರೆಗಳು ಇನ್ನೂ ಅಳಿದಿಲ್ಲ ಎಂದು ಕೊರಗುತ್ತಾ, ವಿಷಾದಿಸುತ್ತಾ ಕೂಡಲು ನಿರಾಕರಿಸುವ ಅಲಿಯಾ ಹುತಾತ್ಮತೆಯನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ. ಇವಳ ಬಂಡಾಯ ಆಧುನಿಕ ಜೀವನದ ಹೊಸ ಹಾಡುಗಳು. ಅನೇಕ ಮಿತಿಗಳ ನಡುವೆಯೂ. (ಈ ಸಿನಿಮಾ ನೋಡುತ್ತಿರುವಾಗ ನನ್ನ ಮನದೊಳಗೆ ’ನನ್ನ ತಂಗಿಗೊಂದು ಗಂಡು ಕೊಡಿ’ ನಾಟಕದ ತಾಯಿಯ ಪಾತ್ರ ಪದೇ ಪದೇ ಕಾಡುತ್ತಿತ್ತು.)

ವಿಕಾಸ್ ಬೆಹಲ್ ನಿರ್ದೇಶನದ ’ಕ್ವೀನ್’ ಈ ವಾರ ತೆರೆಕಂಡ ಮತ್ತೊಂದು ಸಿನಿಮಾ. ಇದರಲ್ಲಿ ರಾಣಿ ಮೆಹ್ರ Queen-Hindi-Movieಪಾತ್ರದಲ್ಲಿ ನಾಯಕಿಯಾಗಿ ಕಂಗನಾ ರಾವತ್ ಅಭಿನಯಿಸಿದ್ದಾಳೆ. ಈ ಚಿತ್ರದ ಕತೆಯೂ ಅಷ್ಟೇ ಸರಳ. ಆಕೆಯ ದಿನನಿತ್ಯದ ಬದುಕೆಂದರೆ ತನ್ನ ಸಹೋದರನ ಕಣ್ಗಾವಲಿನಲ್ಲಿ over protected ಮಧ್ಯಮವರ್ಗದ ಜೀವನ. ನೆರೆಹೊರೆಯವರ ಕಣ್ಣಿಗೂ ಬೀಳದಷ್ಟು ಕಟ್ಟುಪಾಡಿನ. ಸ್ವಂತ ವ್ಯಕ್ತಿತ್ವವೇ ಇಲ್ಲದ ಬದುಕು. ನಾಯಕಿ ಪರಪುಷನ ಮುಂದೆ ಮೊದಲ ಬಾರಿಗೆ ನಿಲ್ಲುವುದು ತನ್ನ ಫಿಯಾನ್ಸಿ ಎದುರು ಮಾತ್ರ. ಅದೂ ಮದುವೆಗೆ ಎರಡು ದಿನಗಳ ಮೊದಲು. ಆದರೆ ಕಾರಣಾಂತರಗಳಿಂದ ಈ ಮದುವೆ ಮುರಿದುಬೀಳುತ್ತದೆ. ಮದುಮಗ ಮದುವೆಯಾಗಲು ನಿರಾಕರಿಸುತ್ತಾನೆ. ಆ ನಂತರವೇ ರಾಣಿ ಕಂಗನಾಳ ವ್ಯಕ್ತಿತ್ವ ಬಿಚ್ಚಿಕೊಳ್ಳತೊಡಗುತ್ತದೆ. ಮನೆಯವರ ವಿರೋಧದ ನಡುವೆಯೂ ತನ್ನ ಅಜ್ಜಿಯ ಬೆಂಬಲದೊಂದಿಗೆ ಈ ಮೊದಲೇ ಕಾಯ್ದಿರಿಸಿದ್ದ ತನ್ನ ಹನಿಮೂನ್ ತಾಣಗಳಾದ ಪ್ಯಾರಿಸ್ ಮತ್ತು ಅರ್ಮಸ್ಟ್ರಾಡಮ್‌ಗೆ ಒಂಟಿಯಾಗಿ ಪ್ರಯಾಣ ಬೆಳೆಸುತ್ತಾಳೆ. ತನ್ನ ಸ್ವಂತ ಊರಲ್ಲಿ ಆಸ್ತಿತ್ವವೇ ಇಲ್ಲದಂತೆ ಬದುಕಿದ್ದ ಕಂಗನಾ ವಿದೇಶದಲ್ಲಿ ಗೆರೆಬಿಚ್ಚಿದ ಹಕ್ಕಿಯಂತಾಗುತ್ತಾಳೆ. ಯಾವುದೇ ಹುಡುಕಾಟವಿಲ್ಲದೆಯೇ ಹೊಸ ಆಸ್ತಿತ್ವ ಕಣ್ಬಿಡತೊಡಗುತ್ತದೆ. ಅಲ್ಲಿ ಅವಳಿಗೆ ಹೊಸ ಜಗತ್ತೇ ತೆರೆದುಕೊಳ್ಳುತ್ತದೆ. ಅದು bad world. ನಂತರ ಅಲ್ಲಿ ಅವಳು ಪಡೆದುಕೊಳ್ಳುವ ಹೊಸ ಗೆಳೆಯರು (ಡ್ಯಾನ್ಸರ್, ಕಲಾವಿದ, ಸಂಗೀತಗಾರ, ತ್ಸುನಾಮಿ ಸಂತ್ರಸ್ಥ), ಪಡಿಪಾಟಲುಗಳು, ಪ್ರತೀ ಹೆಜ್ಜೆಗೂ ಎಡವುತ್ತಿರುವುದು, ಮೊದಲ ಚುಂಬನ ನಮ್ಮನ್ನು ಇಡೀ ಕತೆಯೊಳಗೆ ಮುಳುಗಿಸಿಬಿಡುತ್ತವೆ. ಇದನ್ನು ಸಾಧ್ಯವಾಗಿಸಿದ್ದು queen-movie-kanganaಫರೂಕ್ ಶೇಕ್ ಮತ್ತು ಚೈತಾಲಿಯವರ ಅತ್ಯುತ್ತಮ ಚಿತ್ರಕತೆ ಮತ್ತು ರಾಣಿಯಾಗಿ ತನ್ನನ್ನು ತಾನು ಸಮರ್ಪಿಸಿಕೊಂಡಿರುವ ಕಂಗನಾಳ ಅದ್ಭುತ ಅಭಿನಯ. ಕಂಗನಾ ಈ ಮೊದಲು ಇಷ್ಟೊಂದು under rated ನಟಿಯಾಗಿದ್ದಳೇ ಅಥವಾ ನಾವೇ ಅವಳನ್ನು under rated ನಟಿಯಾಗಿಸಿದ್ದೆವಾ ಎಂದು ನಮ್ಮಲ್ಲಿ ಕೀಳರಿಮೆ ಮೂಡಿಸುವಷ್ಟು ಅಕೆಯ ನಟನೆ ಇಡೀ ಚಿತ್ರವನ್ನೇ ತನ್ನ ಹೆಗಲಿಗೇರಿಸಿಕೊಳ್ಳುತ್ತದೆ.ಅದನ್ನು ಕಂಗನಾ ಮಾತ್ರ ಯಶಸ್ವಿಯಾಗಿ ನಿಭಾಯಿಸಿದ್ದಾಳೆ.

ಹೌದು ’ಕ್ವೀನ್’ ಕೂಡ ಅಪ್ಪಟ ಸ್ತ್ರೀವಾದಿ ಸಿನಿಮಾ. ಆದರೆ ಇಲ್ಲಿ ಯಾವುದೇ ಇಸಂಗಳಿಲ್ಲ. ಘೋಷಣೆಗಳಿಲ್ಲ. ಹೈವೇನ ಅಲಿಯಾ ಮತ್ತು ರಾಣಿ ಕಂಗನಾ ನನ್ನ ಬದುಕನ್ನು ನಾನೇ ಕಟ್ಟಿಕೊಳ್ಳುತ್ತಿದ್ದೇನೆ ನೋಡಿ ಬೇಕಾದರೆ ಎನ್ನುವುದರ ಮೂಲಕ ಫೆಮಿನಿಸಂಗೆ ಹೊಸ ಆಯಾಮವನ್ನೇ ತಂದುಕೊಡುತ್ತಾರೆ. ಇವರಿಬ್ಬರೂ ಮಹಿಳೆಯ ಅತಂತ್ರತೆಯನ್ನು ಕೆಡವಿ ಹಾಕುವುದೇ ಫೆಮಿನಿಸಂನ ಗೆಲುವಾಗುತ್ತದೆ. ಮಹಿಳೆಯದು ಎಂದಿಗೂ ಮುಗಿಯದ ಬವಣೆ ಎನ್ನುವ ವಾಸ್ತವಕ್ಕೆ ಹೊಸ ರೂಪ ದಕ್ಕುವುದು ಇಲ್ಲಿನ ಫೆಮಿನಿಸಂನ ವಿಶೇಷ. ಅದು ಧನಾತ್ಮಕ ಸ್ವರೂಪ. ಹೌದು ಅನೇಕ ಮಿತಿಗಳ ನಡುವೆಯೂ ಸಹ.

ಸೌಮಿಕ್ ಸೇನ್ ನಿರ್ದೇಶನದ ಮೂರನೇಯ ಚಿತ್ರ ’ಗುಲಾಬಿ ಗ್ಯಾಂಗ್’ ಉತ್ತರ ಪ್ರದೇಶದ ಸಂಪತ್ ಪಾಲ್ ದೇವಿ ಅವರ ನೈಜ ಬದುಕಿನ ಘಟನೆಗಳ ಎಳೆಯನ್ನಾಧರಿಸಿದ ಸಿನಿಮಾ. ಚಿತ್ರದ ಕತೆ ಮಹತ್ವಾಕಾಂಕ್ಷೆಯಿಂದ ಕೂಡಿದೆ. ಇಡೀ ಸಿನಿಮಾದ ಉಸಿರೇ gulabigang-movieಸ್ತ್ರೀವಾದ ಮತ್ತು ಸ್ತ್ರೀಶಕ್ತಿಯ ಅಭಿವ್ಯಕ್ತಿ.ಆದರೆ ಅದನ್ನು ನಿರ್ವಹಿಸುವಾಗ ನಿರ್ದೇಶಕರು ಸಂಪೂರ್ಣವಾಗಿ ಎಡವಿದ್ದಾರೆ. ಅತ್ಯಂತ ತೆಳುವಾದ, ಸೂಪರ್‌ಫೀಶಿಯಲ್ ಕತೆಗಳನ್ನೊಳಗೊಂಡ ’ಹೈವೇ’ ಮತ್ತು ’ಕ್ವೀನ್’ ಸಿನಿಮಾಗಳು ಯಾವುದೇ ಫೆಮಿನಿಸಂನ ಘೋಷಣೆಗಳಿಲ್ಲದೆ ಇಡೀ ಸ್ತ್ರೀ ವ್ಯಕ್ತಿತ್ವವನ್ನೇ ಧನಾತ್ಮಕವಾಗಿ ಕಟ್ಟಿಕೊಟ್ಟರೆ ’ಗುಲಾಬಿ ಗ್ಯಾಂಗ್’ ಶಕ್ತಿಶಾಲಿಯಾದ, ನೈಜ ಕತೆಯನ್ನೇ ತನ್ನ ಬೆನ್ನಿಗಿಟ್ಟುಕೊಂಡು ಇಡೀ ಚಿತ್ರದುದ್ದಕ್ಕೂ ಸ್ತ್ರೀವಿಮೋಚನೆಯ ಆಶಯಗಳನ್ನೇ ಹೊತ್ತುಕೊಂಡು ಅದನ್ನು ಹಿಡಿದಿಡಲಾಗದೆ ಸೋತಿದೆ. ಇದಕ್ಕೆ ಮುಖ್ಯ ಕಾರಣ ಇಲ್ಲಿನ ನಾಯಕಿ ಮಾಧುರಿ ದೀಕ್ಷಿತ್ (ರಜ್ಜೋ) ವಿಮೋಚನೆಗೆ ಮಾರ್ಗವಾಗಿ ಹಿಂಸೆಯನ್ನು ಕೈಗೆತ್ತಿಕೊಳ್ಳುತ್ತಾಳೆ. ಅದೂ ಅಸಹಜವಾಗಿ. ಕಡೆಗೆ ಈ ಹಿಂಸಾತ್ಮಕವಾದ ಆದರೆ ನ್ಯಾಯಪರವಾದ, ಜನಪರವಾದ, ಶಕ್ತಿಶಾಲಿಯಾದ ಹೋರಾಟ ಒಂದು ನಿಜವಾದ, ನಂಬುವಂತಹ ಮೆಟಫರ್ ಕೂಡ ಅಗವುದಿಲ್ಲ. ಮೆಟಫರ್ ಕೂಡ ಆಗದಿದ್ದರೆ ಅದು ಪ್ರೇಕ್ಷಕನನ್ನು ಮುಟ್ಟುತ್ತದೆಯೇ? ಕಷ್ಟ. ಇದರ ನೈತಿಕ ಸೋಲಿಗೆ ಮತ್ತೊಂದು ಕಾರಣ ಅದರ ಮುಖ್ಯ ಪಾತ್ರಧಾರಿಗಳಾದ ಮಾಧುರಿ ದೀಕ್ಷಿತ್ ಮತ್ತು ಜೂಹಿ ಚಾವ್ಲಾ ಅವರ ತಮ್ಮ ಪಾತ್ರದೊಂದಿಗೆ ತಾದಾತ್ಮತೆಯನ್ನೇ ಸಾಧಿಸದ, ಸಂಪೂರ್ಣ disconnect ಆದ ಕೃತಕ ಅಭಿನಯ. ಪ್ರಸ್ತುತ ವಿದ್ಯಾಮಾನಗಳಿಗೆ ಅನುಗುಣವಾಗಿ ರೂಪುಗೊಳ್ಳಬೇಕಾದ ಚಿತ್ರಕತೆ ಅದಾಗದೆ ಈ ಸೋಲಿಗೆ ತನ್ನ ಪಾಲನ್ನು ದೇಣಿಗೆಯಾಗಿ ನೀಡಿದೆ. ಕೊನೆಗೆ ಆಶಯಗಳು ಮಾತ್ರ ಮುಖ್ಯವಲ್ಲ, ಅದನ್ನು ನಿಭಾಯಿಸುವುದೂ ಅಷ್ಟೇ ಮುಖ್ಯ ಎನ್ನುವ ಅಂದಕಾಲತ್ತಿಲ್ ನುಡಿಕಟ್ಟಿನ ಪ್ರಸ್ತುತತೆ ಇಲ್ಲಿ ಮತ್ತೊಮ್ಮೆ ಸಾಬೀತಾಗಿದೆ.

ಈ ಅಬ್ಬರದ, pompous, ವಾಕರಿಕೆ ಹುಟ್ಟಿಸುವಷ್ಟು ಅಸೂಕ್ಷ್ಮತೆಯ ಹಿಂದಿ ಚಿತ್ರರಂಗ ಅಚ್ಚರಿ ಮೂಡಿಸುವಷ್ಟು ಕೇವಲ ಹದಿನೈದು ದಿನಗಳ ಅವಧಿಯಲ್ಲಿ ಮೂರು ಸ್ತ್ರೀ ಪ್ರಧಾನ ಸಿನಿಮಾಗಳನ್ನು ಅದರಲ್ಲೂ ಸೂಕ್ಷ್ಮ, ಸಂವೇದನಾಶೀಲ ಸಿನಿಮಾಗಳನ್ನು ಕೊಟ್ಟಿದ್ದಕ್ಕಾಗಿ ಸದ್ಯಕ್ಕೆ ಅಭಿನಂದಿಸಲೇಬೇಕು.

3 thoughts on “’ಹೈವೇ’,’ ಕ್ವೀನ್’, ’ಗುಲಾಬಿ ಗ್ಯಾಂಗ್’ – ಆತ್ಮ ವಾತ್ಮ ಮಥನಿಸಿ ಅನುಭಾವ ಹುಟ್ಟಿತಯ್ಯ

Leave a Reply

Your email address will not be published. Required fields are marked *