Daily Archives: March 13, 2014

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ

ವರ್ತಮಾನ.ಕಾಮ್‌ನ ಓದುಗರೇ ಮತ್ತು ಸ್ನೇಹಿತರೇ,

ಆಮ್ ಆದ್ಮಿ ಪಕ್ಷವು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ನನ್ನನ್ನು ಅಭ್ಯರ್ಥಿಯಾಗಿ ಘೋಷಿಸಿರುವುದು AAP-BLR-Rural-MP-candidateತಮಗೆಲ್ಲಾ ತಿಳಿದಿರಬಹುದು. ಈ ಹಿನ್ನೆಲೆಯಲ್ಲಿ ವರ್ತಮಾನ.ಕಾಮ್‌ನ ಕೆಲವು ಚಟುವಟಿಕೆಗಳು ಕುಂಠಿತವಾಗಬಹುದು ಎಂಬ ಸಂಶಯಗಳಿದ್ದವು. ಆದರೆ, ಹಲವು ಸ್ನೇಹಿತರು ಈ ಸಂದರ್ಭದಲ್ಲಿ ಇದರ ಕೆಲಸಗಳನ್ನು ಹಂಚಿಕೊಳ್ಳಲು ಮುಂದೆ ಬಂದಿದ್ದಾರೆ. ಹಾಗಾಗಿ, ಎಂದಿನಂತೆ ನಮಗೆ ಲೇಖನಗಳು ಬಂದ 1-3 ದಿನಗಳಲ್ಲಿಯೇ ಅವನ್ನು ಪ್ರಕಟಿಸುವ ಕೆಲಸಗಳು ನಡೆಯುತ್ತವೆ.

ಇನ್ನು ಈ ಚುನಾವಣೆಗಳ ಬಗ್ಗೆ ಹೇಳುವುದಾದರೆ, ನನ್ನ ವೈಯಕ್ತಿಕ ಜವಾಬ್ದಾರಿ ಈಗ ಹಲವು ಪಟ್ಟು ಹೆಚ್ಚಿದೆ. ಸಾದ್ಯವಾದಲ್ಲಿ ನಿಮ್ಮೆಲ್ಲರ ಸಲಹೆ-ಸಹಕಾರ-ಬೆಂಬಲವೂ ಬೇಕಿದೆ. ಏನೇ ಆಗಲಿ, ಈ ಲೋಕಸಭಾ ಚುನಾವಣೆ ಕರ್ನಾಟಕದಲ್ಲಿ ಗಂಭೀರವಾದ ಗುಣಾತ್ಮಕ ಬದಲಾವಣೆಗಳನ್ನು ತರಲಿದೆ. ಯಾವುದನ್ನು ಈವತ್ತಿನ ಸಂದರ್ಭದಲ್ಲಿ ಅವಾಸ್ತವ ಎನ್ನುತ್ತಿದ್ದರೊ ಅದನ್ನು ಈ ಬಾರಿ ಆಮ್ ಜನತೆ ನಿಜ ಮಾಡಲಿದ್ದಾರೆ ಎನ್ನುವ ವಿಶ್ವಾಸ ನನ್ನದು. ಕಳೆದ ಹಲವಾರು ದಶಕಗಳಿಂದ ಭ್ರಷ್ಟಾಚಾರ, ಅಕ್ರಮ, ಅಧಿಕಾರ ದುರುಪಯೋಗ, ಸ್ವಜನಪಕ್ಷಪಾತ, ವಂಶಪಾರಂಪರ್ಯ ರಾಜಕಾರಣದಿಂದ ನಲುಗಿದ್ದ ನಮ್ಮ ಈ ನಾಡು ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಬದಲಾಗಲಿದೆ. ಆ ನಿಟ್ಟಿನಲ್ಲಿ ಆಶಾವಾದಿಗಳಾಗಿರುವ ಬಹುತೇಕ ಜನ ಕ್ರಿಯಾಶೀಲರಾಗಿ ದುಡಿಯುತ್ತಿರುವುದನ್ನು ನಾನು ಪ್ರತಿದಿನ ನೋಡುತ್ತಿದ್ದೇನೆ ಮತ್ತು ಅನುಭವಿಸುತ್ತಿದ್ದೇನೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಬಹುಶಃ ರಾಜ್ಯದಲ್ಲಿಯೇ ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರ, ದೊಡ್ಡ ಕ್ಷೇತ್ರ. Bangalore-Rural-MP-Constituencyರಾಜರಾಜೇಶ್ವರಿ ನಗರ, ಬೆಂಗಳೂರು ದಕ್ಷಿಣ, ಆನೇಕಲ್, ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ, ಮತ್ತು ಕುಣಿಗಲ್ ಸೇರಿದಂತೆ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳು ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ಇದರಲ್ಲಿ ರಾಜರಾಜೇಶ್ವರಿ ನಗರ, ಬೆಂಗಳೂರು ದಕ್ಷಿಣ, ಮತು ಆನೇಕಲ್ ವಿಧಾನಸಭಾ ಕ್ಷೇತ್ರಗಳು ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಗೆ ಬಂದರೆ, ಕನಕಪುರ, ರಾಮನಗರ, ಚನ್ನಪಟ್ಟಣ, ಮತ್ತು ಮಾಗಡಿ ಕ್ಷೇತ್ರಗಳು ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಬರುತ್ತವೆ; ಕುಣಿಗಲ್ ಕ್ಷೇತ್ರ ತುಮಕೂರು ಜಿಲ್ಲೆಯ ವ್ಯಾಪ್ತಿಗೆ ಬರುತ್ತದೆ. ನಿಮ್ಮಲ್ಲಿ ಯಾರಾದರೂ ಈ ಕ್ಷೇತ್ರಗಳ ಮತದಾರರಾಗಿದ್ದಲ್ಲಿ ಅಥವ ತಿಳಿದವರು ಗೊತ್ತಿದ್ದಲ್ಲಿ ದಯವಿಟ್ಟು ಅಂತಹವರು ನಮ್ಮ ಚುನಾವಣಾ ಪ್ರಚಾರಕ್ಕೆ ನೆರವಾದರೆ ಬಹಳ ಅನುಕೂಲವಾಗುತ್ತದೆ. ಈಗಾಗಲೆ ವೈಯಕ್ತಿಕ ಕೆಲಸ ಕಾರ್ಯಗಳನ್ನು ಬಿಟ್ಟು, ಕೆಲವರು ತಮ್ಮ ನೌಕರಿಗಳಿಗೆ ರಾಜೀನಾಮೆ ನೀಡಿ, ಮತ್ತೆ ಕೆಲವರು ರಜೆ ತೆಗೆದುಕೊಂಡು, ಪ್ರಚಾರ ಕಾರ್ಯದಲ್ಲಿ, ಈ ಚಳವಳಿಯಲ್ಲಿ ಭಾಗಿಯಾಗಿದ್ದಾರೆ. ಈ ಚಳವಳಿ ಮತ್ತು ರಕ್ತರಹಿತ ಕ್ರಾಂತಿಯಲ್ಲಿ ಭಾಗೀದಾರನಾಗಿರುವುದಕ್ಕೆ ನನಗೆ ನಿಜಕ್ಕೂ ಖುಷಿಯಾಗುತ್ತಿದೆ, ಹೆಮ್ಮೆಯಾಗುತ್ತಿದೆ. ನಮ್ಮ ಮುಂದಿನ ದಿನಗಳ ಬಗ್ಗೆ ಆಶಾವಾದ ಹೆಚ್ಚುತ್ತಿರುವ ಸಮಯ ಇದು.

ಅಂದ ಹಾಗೆ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಇತಿಹಾಸ ಮತ್ತು ವರ್ತಮಾನ ತಮಗೆ ತಿಳಿದಿದೆ ಎಂದು ಭಾವಿಸುತ್ತೇನೆ.

ಈ ಸಂದರ್ಭದಲ್ಲಿ ನಿಮ್ಮ ಕ್ರಿಯಾಶೀಲತೆ, ಬೆಂಬಲ, ನೆರವನ್ನು ಆಶಿಸುತ್ತಾ,.. ಈ ಹೋರಾಟದಲ್ಲಿ ನಿಮ್ಮ ಸಾಹಚರ್ಯವನ್ನು ಬಯಸುತ್ತೇನೆ.

ನಮಸ್ಕಾರ,
ರವಿ…