Daily Archives: March 15, 2014

ಹೊಡಿ ಚಕ್ಕಡಿ : ಬೇವಿನಗಿಡದ ಅವರ ಜೀವಪರ ಕತೆಗಳು


– ಡಾ.ಎಸ್.ಬಿ. ಜೋಗುರ


 

ಬಸು ಬೇವಿನಗಿಡದ ಸಾಹಿತ್ಯದ ಬೇರೆ ಬೇರೆ ಪ್ರಕಾರಗಳಲ್ಲಿ ದುಡಿದಿರುವರಾದರೂ ಕತೆ ಅವರಿಗೆ ಹೃದ್ಯವಾದ ಭಾಗವಾಗಿದೆ. ಇಲ್ಲಿಯವರೆಗೆ ನಾಲ್ಕು ಕಥಾ ಸಂಕಲನಗಳನ್ನು ಪ್ರಕಟಿಸಿರುವ ಅವರು ಸಂಕಲನದಿಂದ ಸಂಕಲನಕ್ಕೆ ಮಾಗುತ್ತ ಬಂದ ರೀತಿಯನ್ನು ಅವರ ಕತೆಗಳೇ ಮನದಟ್ಟು ಮಾಡಿಕೊಡುತ್ತವೆ. ಎಷ್ಟೇ  ಖ್ಯಾತನಾಮರಾದವರ ಎಲ್ಲ ಕತೆಗಳು ಕೂಡಾ ಒಂದೇ ಎತ್ತರವನ್ನು ತಲುಪಿರುವುದಿಲ್ಲ. ಈ ಮಾತಿಗೆ ಟಾಲಸ್ಟಾಯ್ ಕೂಡಾ ಹೊರತಾಗಿಲ್ಲ ಎನ್ನುವ ಕಟುವಾಸ್ತವದೊಂದಿಗೆ ’ಹೊಡಿ ಚಕ್ಕಡಿ’ ಎನ್ನುವ ಈಚೆಗಿನ ಅವರ ಕಥಾ ಸಂಕಲನವನ್ನು ಪ್ರವೇಶಿಸುವದು ಒಳಿತು. ಓದುವ ಮುನ್ನವೇ ಶರಾ ಎಳೆದು ಬಿಡುವ ಭಯಂಕರ ವಿಮರ್ಶಾ ಪಂಡಿತರ ದೊಡ್ದ ಸಮೂಹದಲ್ಲಂತೂ ನಾನು ಬರುವದಿಲ್ಲ ಎನ್ನುವ ಸಣ್ಣ ಸಮಾಧಾನವಿದೆ.

’ಹೊಡಿ ಚಕ್ಕಡಿ’ ಎನ್ನುವ ಈ ಸಂಕಲನದಲ್ಲಿ ಒಟ್ಟು 12 ಕತೆಗಳಿವೆ. ಇವುಗಳಲ್ಲಿ ಮುಕ್ಕಾಲು ಭಾಗ ಕತೆಗಳು ಗ್ರಾಮೀಣ ಪರಿಸರದ ಸಾಂಸ್ಕೃತಿಕ ಆಯಾಮಗಳನ್ನು ಅನಾವರಣಗೊಳಿಸುವ ಯತ್ನ ಮಾಡುತ್ತವೆ. ಯಾವ ಕತೆಯೂ ಸೆಟೆ ಹಿಡಿದು ಕುಳಿತು ಬರೆದಂತಿಲ್ಲ. ಹಾಗೆಯೇ ಎಲ್ಲೂ ಕತೆಗಾರ ಮುಂದೆ ಹೋಗಿ ಮತ್ತೆ ಹಿಂದೆ ಬರುವ, ಗೊಂದಲಕ್ಕೆ ಬೀಳುವ ಪ್ರಮೆಯವನ್ನು ಸೃಷ್ಟಿಸಿಕೊಂಡಿಲ್ಲ. ಅಷ್ಟಕ್ಕೂ ಬೇವಿನಗಿಡದ ನೆನ್ನೆ ಮೊನ್ನೆ ಕತೆ ಬರೆಯಲು ಆರಂಭಿಸಿದವರಲ್ಲ. ಆ ಮಾರ್ಗದಲ್ಲಿಯ ಅವರ ಅನುಭವವೇ ಅವರ ಬರವಣಿಗೆಯಲ್ಲಿ ಅಂಥಾ ಶಕ್ತಿಯನ್ನು ತಂದು ಕೊಟ್ಟಿದೆ. ಗ್ರಾಮೀಣ ಪರಿಸರವೇ ಹಾಗೆ. ಇಲ್ಲಿಂದ ನೀವು ಎಷ್ಟೇ ಆಕೃತಿಗಳನ್ನು ಕತೆಗೆ ಎತ್ತಿಕೊಂಡರೂ ಅದು ಹಳತೆನಿಸುವದಿಲ್ಲ. ಆದರೆ ಕತೆಗಾರನ ಕತೆ ಕಟ್ಟುವ ಏಕಾಗ್ರತೆ, ತಾಳ್ಮೆ, ಶೈಲಿಯ ಮೆಲೆ ಅದರ ಅಪ್ಯಾಯಮಾನತೆ ಅಡಕವಾಗಿರುತ್ತದೆ. ಈ ’ಹೊಡಿ ಚಕ್ಕಡಿ’ ಎನ್ನುವ ಕತೆಯನ್ನೇ ತೆಗೆದುಕೊಳ್ಳಿ. ಚಕ್ಕಡಿ ಎನ್ನುವುದೇ ಒಂದು ನಿರಂತರತೆಯ ಸಂಕೇತ ಆಗಿರುವಂತೆಯೇ ಪರಿವರ್ತನೆಯ ಪ್ರತೀಕವೂ ಹೌದು. ಚಕ್ಕಡಿಯಿಂದ ಟ್ರ್ಯಾಕ್ಟರಿಗೆ ಶಿಪ್ಟ್ ಆಗುವ ಕ್ರಮದಲ್ಲಿಯೇ ಒಂದು ಬಗೆಯ ಸ್ಥಿತ್ಯಂತರವಿದೆ. ಇಲ್ಲಿ ಜಗದೀಶ ರುಮಾಲು ಸುತ್ತುವಲ್ಲಿ ತೋರುವ ಹಂಬಲವೂ ಅಷ್ಟೇ. ಹೇಗೆ ಈ ಚಕ್ಕಡಿಯ ಗಾಲಿ ಕಾಲನ ಪ್ರತಿಮೆಯಾಗಿ ಉರುಳುತ್ತಲೇ ಎಲ್ಲವನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ ಎನ್ನುವುದು ಒಂದು ಕಡೆಯಾದರೆ ಕೊನೆಗೂ ಉಳಿವುದು ಕಳೆದುಕೊಂಡ ಹಳಹಳಿಕೆ ಮಾತ್ರ ಎನ್ನುವ ಧ್ವನಿಯೂ ಅಷ್ಟೇ  ಮುಖ್ಯ. ಶೀರ್ಷಿಕೆಯ  ಕತೆ ’ಹೊಡಿ ಚಕ್ಕಡಿ’ ಈ ಕಾಲದ ಎಲ್ಲ ಗ್ರಾಮಾಂತರಗಳಿಗೆ ಪ್ರಾತಿನಿಧಿಕ ಎನ್ನುವಂತಿದೆ.

’ಅಮೃತವ ಕಡೆವಲ್ಲಿ’ ಎನ್ನುವ ಕತೆಯಲ್ಲಿ ಮಧ್ಯಮ ಕುಟುಂಬವೊಂದರಲ್ಲಿ ಬಹುತೇಕವಾಗಿ ಇರಬಹುದಾದ ರೋಗಗ್ರಸ್ಥ ಅಪ್ಪ, ಮತ್ತವನ ಹಠಮಾರಿತನ, ಶಠಮಾರಿತನದ ಗುಣಗಳು ಪಕ್ಕಾ ಗಂಗಾಧರನ ಅಪ್ಪನಂತೆಯೇ ಇರುತ್ತವೆ. ಮತ್ತೆ ಮತ್ತೆ ಕಾಳಜಿ ತೋರಿಸುವವರ ಮೇಲೆಯೇ ಸಿಟ್ಟು ತೋರಿಸುವ ಆ ಮುದುಕನ ಮನಸು ಮಗುವಿನದೂ ಹೌದು. ಆದರೆ ಮಾತು ಮಾತ್ರ ಹಾಗಲ್ಲ. ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿರುವ ಅವನ ಬಾಯಿಂದ ಬರೋ ಈ ಮಾತುಗಳು ನಮ್ಮ hodi-chakkadiಮನೆಯ ಮುದುಕನ ಮಾತುಗಳೂ ಹೌದು ಎನಿಸುವುದೇ ಒಳ್ಳೆಯ ಕತೆಯ ಲಕ್ಷಣ. ’ದೊಡ್ಡ ದವಾಖಾನ್ಯಾಗ ನನ್ನ ಸರಿ ತೋರಿಸೋದು ಬಿಟ್ಟು ಇಲ್ಲಿ ಸಾಯ್ಲಿ ಅಂತ ಹಾಕ್ಯಾರು’ ಅನ್ನೋ ಮಾತು ನಮಗೆ ಹೊಸತೆ..? ’ಹಸಿವೆಯೇ ನಿಲ್ಲು ನಿಲ್ಲು’ ಕತೆ ಯಲ್ಲಿಯೂ ಕತೆಗಾರ ಜೀವಪರವಾಗಬೇಕಾದ ಬದುಕಿನ ವಾಸ್ತವ ಆಕಸ್ಮಿಕವಾಗಿ ಬೆನ್ನು ತೊರುವ ಬಗೆಯನ್ನು  ಧಾರವಾಡದ ಶ್ರೀನಗರದಲ್ಲಿರುವ ಹಾಸ್ಟೇಲ್ ಒಂದು ರಾತ್ರೋರಾತ್ರಿ ಅಧ್ಯಾತ್ಮಿಕ ಕೇಂದ್ರವಾಗಿ ಪರಿವರ್ತಿತವಾಗಿ ಆಲೂರನ ಮನ:ಸ್ಥಿತಿಯನ್ನು ಅನಾವರಣ ಮಾಡುತ್ತದೆ. ’ಬಾಡಿಗೆ ಲೇಖಕ’ ಸಮಕಾಲೀನ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯಗಳಲ್ಲಿರುವ ಅಕಾಡೆಮಿಕ್ ಮಟ್ಟವನ್ನು ಒಳಗಿಳಿದು ಅಣುಕಿಸುವಂತಿದೆ. ಹಾಗೆಯೇ ’ಸುಣ್ಣದ ನೀರು’ ಎನ್ನುವ ಕತೆ ಕೂಡಾ ತೀರಾ ಚಿಲ್ರೆ ಕಾರಣಗಳಿಗಾಗಿ  ಕೌಟುಂಬಿಕ ವಿಘಟನೆಗಳು ತಲೆ ಎತ್ತುವ ರೀತಿಯನ್ನು ಚಿತ್ರಿಸುತ್ತದೆ. ಈ ಕತೆಯಲ್ಲಿ ಬರುವ ಗಂಡ-ಹೆಂಡತಿ ಪ್ರಚಲಿತ ಸಾಮಾಜಿಕ ಬದುಕಿನ ನಿದರ್ಶನವೇ ಆಗಿದ್ದಾರೆ. ಈ ಸಂಕಲನದ ಇನ್ನೊಂದು ಉತ್ತಮ ಕತೆ ’ಹಳೆಯ ಟ್ರಂಕು’. ಈ ಟ್ರಂಕು ಬರೀ ಬಸವಣ್ಣೆವ್ವನ ಹೊಲದ ಕಾಗದ ಪತ್ರಗಳಿಗೆ ಸಂಬಂಧಿಸಿದ್ದಲ್ಲ. ನಮ್ಮ ಗ್ರಾಮೀಣ ಪರಂಪರೆಯ ಪಳಯುಳಿಕೆಯೂ ಹೌದು. ’ಹಳೆಯ ಟ್ರಂಕು’ ಎನ್ನುವ ಪದವೇ ನಮ್ಮನ್ನು ಒಂದು ಕಾಲದಲ್ಲಿ ಮನೆಯ ಮೂಲೆಯಲ್ಲಿದ್ದು ಎಲ್ಲವನ್ನೂ ಅಡಗಿಸಿಟ್ಟ ಗೊಡೌನ್ ಥರಾ ಕೆಲಸ ಮಾಡಿದ್ದನ್ನು ನೆನಪಿಸುತ್ತದೆ. ಈ ಟ್ರಂಕನ್ನು ಹೇಗೆ ಅವಳು ಜೀವನಕ್ಕಿಂತಾ ಜತನ ಮಾಡಿದ್ದಳು ಎನ್ನುವುದನ್ನು  ಕತೆಗಾರ ಚೆನ್ನಾಗಿ ನಿರೂಪಿಸಿದ್ದಾರೆ. ಮನಸಿಲ್ಲದ ಮನಸಿನಿಂದ ಮಗನ ಸಾಲ ಹರಿಯುವಲ್ಲಿ ಇದು ನೆರವಾಗುತ್ತದೆ ಎನ್ನುವುದೇ ಬಸವಣ್ಣೆವ್ವಗೆ ಬಾಗ್ಯವಿಧಾತ ಆಗಿ ಪರಿಣಮಿಸುವ ಆ ಟ್ರಂಕು ಒಂದು ಸುಂದರವಾದ ಪ್ರತಿಮೆ.

ಈ ಸಂಕಲನದ ಇನ್ನೊಂದು ವಿಶೇಷ ಇಲ್ಲಿರುವ ಬಹುತೇಕ ಕತೆಗಳು ಡ್ರೈ ಆಗಿಲ್ಲದಿರುವುದೇ ಸಮಾಧಾನ. ಬಹುತೇಕರ ಬದುಕಿನ ಭಾಗವೇ ಆಗಿರುವ ಹತ್ತಾರು ಆಕೃತಿಗಳು ಇಲ್ಲಿ ಕತೆಯಾಗಿ ಮೈತಳೆದಿವೆ. ಹೀಗಾಗಿ ಕತೆಗಾರ ಯಾವುದೋ ಒಂದು ಆದರ್ಶ ಲೋಕದಲ್ಲಿ ವಿಹರಿಸುವವನಂತೆ ಪ್ರತಿಮೆಗಳನ್ನು ಬಳಸುವದಾಗಲೀ ಓದುಗನಿಗೆ ಅಪರಿಚಿತವಾದ ಅಸಂಗತವಾದ ಲೋಕವೊಂದನ್ನು ಬಿಚ್ಚಿಡುವದಾಗಲೀ ಮಾಡದೇ ಯತಾರ್ಥವಾಗಿ ಕತೆ ಹೇಳುತ್ತಾ ಹೋಗುತ್ತಾನೆ. ನಾವು ಬಾಲ್ಯದಲ್ಲಿ ಅಜ್ಜ ಅಜ್ಜಿಯರಿಂದ ಕೇಳುತ್ತಿದ್ದ ’ಹೀಂಗ ಒಂದೂರಲ್ಲಿ.. ’ ಎನ್ನುವ ಕ್ರಮದಲ್ಲಿಯೇ ಕತೆ ಕೇಳಿದ ಅನುಭವ ಆಗುವ ರೀತಿಯೇ ಈ ಸಂಕಲನದ  ಹೆಚ್ಚುಗಾರಿಕೆ. ಕಥನ ಕ್ರಮವನ್ನು ಉದ್ದೇಶಪೂರ್ವಕವಾಗಿ ಜಟಿಲಗೊಳಿಸುವದನ್ನೇ ತಂತ್ರಗಾರಿಕೆ ಎಂದು ಬಗೆದು, ಕತೆ ಬರೆಯುವವನಿಗೆ ಮಾತ್ರ ಅರ್ಥವಾಗುವ ಹಾಗೆ ಬರೆಯುವ ಕೆಲ  ವಿಖ್ಯಾತ ಕತೆಗಾರರು ನಮ್ಮ ನಡುವೆ ಇದ್ದಾರೆ. ಅವರಿಗಿಂತಲೂ ಬೇವಿನಗಿಡದ ಅವರ ಕತೆಗಳು ಎಷ್ಟೋ ಪಾಲು ಉತ್ತಮವಾದವುಗಳು. ’ಹೊಡಿ ಚಕ್ಕಡಿ’ ಎನ್ನುವ ಈ ಸಂಕಲನ ಬಸು ಬೇವಿನಗಿಡದ ಗ್ರಾಮೀಣ ಸಾಂಸ್ಕೃತಿಕ ಲೋಕದ ಹಾಡು-ಪಾಡುಗಳನ್ನು ಬಳಸಿಕೊಂಡು ಸಶಕ್ತವಾಗಿ ಮತ್ತು ಸಾತ್ವಿಕವಾಗಿ ಕತೆ ಕಟ್ಟಬಲ್ಲರು ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ.