“ರಾಷ್ಟ್ರಕ್ಕೆ ಮೋದಿ, ರಾಜ್ಯಕ್ಕೆ ಮುತಾಲಿಕ್”


– ನವೀನ್ ಸೂರಿಂಜೆ


 

’ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಬೇಕು’ ಎಂಬ ಒಂದೇ ಉದ್ದೇಶದಿಂದ ತಾನು ಬಲವಾಗಿ ವಿರೋಧಿಸುತ್ತಿದ್ದ ಬಿಜೆಪಿಯನ್ನು ಸೇರುತ್ತಿರುವುದಾಗಿ ಹೇಳಿ ಬಿಜೆಪಿಗೆ ಸೇರ್ಪಡೆಯಾದ ಶ್ರೀರಾಮ ಸೇನೆಯ ಸ್ಥಾಪಕ ಪ್ರಮೋದ್ ಮುತಾಲಿಕ್  ದಿನ ಬೆಳಗಾಗುವುದರೊಳಗೆ ಅಲ್ಲಿಂದ ಹೊರದಬ್ಬಲ್ಪಟ್ಟಿದ್ದಾರೆ. ಬಿಜೆಪಿಯು ಹಲವು ತಿಂಗಳ (2013 ಸೆಪ್ಟೆಂಬರ್  13) ಹಿಂದೆಯೇ ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದರೂ ಅಂದು ಬಿಜೆಪಿಗೆmuthalik_joins bjp ಬೆಂಬಲ ನೀಡದೆ  ಆ ಪಕ್ಷವನ್ನು ನಿರಂತರವಾಗಿ  ಟೀಕಿಸುತ್ತಲೇ ಬಂದ ಪ್ರಮೋದ್ ಮುತಾಲಿಕ್  2014  ಮಾರ್ಚ್ 10 ರಂದು ರಾಜ್ಯದ ಆರು ಲೋಕಸಭಾ ಕ್ಷೇತ್ರಗಳಿಗೆ ಶ್ರೀರಾಮ ಸೇನೆಯ ಅಭ್ಯರ್ಥಿಗಳ ಪಟ್ಟಿಯನ್ನು ಕೂಡಾ ಬಿಡುಗಡೆ ಮಾಡಿದ್ದರು. ಅದಾದ ಹದಿಮೂರನೆಯ ದಿನಕ್ಕೇ ”ನರೇಂದ್ರ ಮೋದಿ ದೇಶದ ಪ್ರಧಾನಿಯಾಗಬೇಕು” ಎಂದು ಮುತಾಲಿಕ್ ಗೆ ಜ್ಞಾನೋದಯವಾಗಿ ತಾವೇ ಖುದ್ದು ಬಿಜೆಪಿ ಸೇರ್ಪಡೆಗೊಂಡು ಕೆಲವೇ ಕ್ಷಣಗಳಲ್ಲಿ ಮುಖಭಂಗ ಅನುಭವಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಸ್ಪರ್ಧಿಸುತ್ತಿರುವ ಹುಬ್ಬಳ್ಳಿ ಧಾರವಾಡ ಕ್ಷೇತ್ರದಿಂದ ಸ್ವತಃ ತಾವೇ ಸ್ಪರ್ಧಿಸುವುದಾಗಿ ಪ್ರಮೋದ್ ಮುತಾಲಿಕ್ ಘೊಷಿಸಿದ್ದರು. ಉಳಿದಂತೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ರಮಾಕಾಂತ ಕೊಂಡೂಸ್ಕರ, ಚಿಕ್ಕೋಡಿಗೆ ಜಯದೀಪ ದೇಸಾಯಿ,  ಬಾಗಕೋಟೆಯಲ್ಲಿ ಬಸವರಾಜ ಮಹಾಲಿಂಗೇಶ್ವರಮಠ, ಹಾವೇರಿಯಿಂದ ಕುಮಾರ ಹಕಾರಿ ಹಾಗೂ  ಚಿಕ್ಕಮಗಳೂರು ಕ್ಷೇತ್ರದಲ್ಲಿ ಪಿ.ಎಸ್‌. ಶಾರದಮ್ಮರವರನ್ನು ಶ್ರೀರಾಮ ಸೇನೆಯ ವತಿಯಿಂದ ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿಸುವುದಾಗಿ ಪ್ರಮೋದ್ ಮುತಾಲಿಕ್ ಘೋಷಿಸಿದ್ದರು. ವಿಶೇಷವೆಂದರೆ ಈ ಪಟ್ಟಿ ಬಿಡುಗಡೆ ಮಾಡುವ ಸಂಧರ್ಭದಲ್ಲೂ  ಶ್ರೀರಾಮ ಸೇನೆಯು ರಾಜ್ಯದ ಆರು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವುದು ನರೇಂದ್ರ ಮೋದಿಯನ್ನು ಪ್ರಧಾನಿ ಮಾಡುವ ಉದ್ದೇಶದಿಂದಲೇ ಎಂದು ನುಡಿದಿದ್ದರು. ಇದೀಗ ಅದೇ ಮುತಾಲಿಕ್  ”ಹಿಂದೂ ಮತಗಳು ಒಡೆಯಬಾರದು” ಎಂಬ ಕಾರಣ ಮುಂದಿಟ್ಟುಕೊಂಡು ಬಿಜೆಪಿ ಸೇರಿದ್ದಾರೆ. ಇನ್ನುಳಿದ ಐದು ಕ್ಷೇತ್ರಗಳಲ್ಲಿ  ಶ್ರೀರಾಮ ಸೇನೆಯ ಅಭ್ಯರ್ಥಿಗಳ ಪಾಡೇನು ಎಂಬುದರ ಬಗ್ಗೆ ಮುತಾಲಿಕ್ ಸ್ಪಷ್ಟನೆ ನೀಡದೆಯೇ ಬಿಜೆಪಿ ಸೇರಿದ್ದರು.

ಯಾರು ಈ ಮುತಾಲಿಕ್?

ಪ್ರಮೋದ್ ಮುತಾಲಿಕ್ ಅವರ ಪೂರ್ತಿ ಹೆಸರು ಪ್ರಮೋದ ಮುತಾಲಿಕ ದೇಸಾಯಿ. ಅವರ ತಂದೆ ಬೆಳಗಾವಿ ಜಿಲ್ಲೆ ಹುಕ್ಕೇರಿಯ ಜಮೀನ್ದಾರರು. ಕೃಷ್ಣಾ ನದಿ ತೀರದಲ್ಲಿ ಕಬ್ಬು ಬೆಳೆದು ತಕ್ಕಮಟ್ಟಿಗೆ ಸ್ಥಿತಿವಂತ ಎನ್ನಿಸಿಕೊಂಡವರು. ಪ್ರಮೋದ್ ಅವರ ಸಂಬಂಧಿಕರಲ್ಲಿ ಅನೇಕರು ಆರ್ ಎಸ್ ಎಸ್ ಬೆಂಬಲಿಗರಾಗಿದ್ದರಿಂದ ಅವರ ಮನೆಯಲ್ಲಿ ಸಹಜವಾಗಿಯೇ ಸಂಘದ ಪ್ರಭಾವವಿತ್ತು.

ಮುತಾಲಿಕ್ ಸಣ್ಣ ವಯಸ್ಸಿನಲ್ಲಿಯೇ ಆರ್ ಎಸ್ ಎಸ್ ಸ್ವಯಂ ಸೇವಕರಾದರು. ಸಂಘದ ತತ್ವ ಸಿದ್ಧಾಂತಗಳಿಗೆ ತುಸು ಅತಿಯಾಗಿಯೇ ಒಡ್ಡಿಕೊಂಡಿದ್ದರಿಂದ ಅವರನ್ನು ಅವರ ಗೆಳೆಯರು `ಇವ ಆರು ಎಸ್ ಎಸ್ ಅಲ್ಲ, ಏಳು ಎಸ್ ಎಸ್’ ಎಂದು ಕರೆಯುತ್ತಿದ್ದರಂತೆ.  ಪದವಿ ಮುಗಿಸಿದ ನಂತರದಲ್ಲಿ ಉದ್ಯೋಗಕ್ಕೆ ಸೇರದೆ ಮದುವೆಯೂ ಆಗದೆ ನೇರವಾಗಿ ಸಂಘದ ಪೂರ್ಣಾವಧಿ ಕಾರ್ಯಕರ್ತರಾದರು. ಪ್ರಚಾರಕರಾಗಿ ರಾಜ್ಯವೆಲ್ಲಾ ಸುತ್ತಿದರು. ಮುಂದೆ ಮೈಸೂರು ವಿಭಾಗದ ಪ್ರಚಾರಕರಾಗಿ ಅಲ್ಲಿ ನೆಲೆಸಿದರು. ಆ ಸಂದರ್ಭದಲ್ಲಿ ಮುತಾಲಿಕ್  ತುಂಬ ಶಾಂತ ಸ್ವಭಾವದವರು, ಸಹನೆ ಉಳ್ಳವರು ಅಂತ ಹೆಸರು ಗಳಿಸಿದ್ದರಿಂದ ಮಕ್ಕಳಿಗೆ ಕತೆ ಹೇಳುವ ಆರ್ ಎಸ್ ಎಸ್ ನ ”ಕಿಶೋರ ವಿಭಾಗ” ದ ಜವಾಬ್ದಾರಿ ನೀಡಲಾಗಿತ್ತು.

ತರುವಾಯ ಆರ್ ಎಸ್ ಎಸ್ ನಿಂದ ವಿಶ್ವ ಹಿಂದೂ ಪರಿಷತ್ ಗೆ, ಅಲ್ಲಿಂದ ಬಜರಂಗ ದಳಕ್ಕೆ ಎರವಲು ಸೇವೆಯ ಮೇಲೆ ಮುತಾಲಿಕರನ್ನು ಕಳುಹಿಸಲಾಯಿತು. ಕ್ರಮೇಣ ಮುತಾಲಿಕ್ ಮುತಾಲಿಕ್ ಜೀ ಆದರು. ನಿಧಾನವಾಗಿ ಸಾರ್ವಜನಿಕ ವೇದಿಕೆಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದರು. ಅವರ ಖಾರವಾದ, ಖತರನಾಕ್ ಭಾಷಣಗಳು ಆರಂಭವಾದದ್ದು ಇಲ್ಲಿಂದಲೇ. ಭಜರಂಗದಳದ ರಾಜ್ಯಾಧ್ಯಕ್ಷರಾದ ಮುತಾಲಿಕ್ ನಂತರದಲ್ಲಿ ಅದೇ ಸಂಘಟನೆಯಲ್ಲಿ ದಕ್ಷಿಣ ಭಾರತ ಪ್ರಾಂತ್ಯ ಸಂಚಾಲಕ ಸ್ಥಾನ ಪಡೆದರು. ಮುಂದೆ ತನ್ನ ಭಾಷಣಗಳಿಂದಲೇ ಬಿಜೆಪಿ ಶಾಸಕರು ಆಯ್ಕೆಯಾಗುತ್ತಿದ್ದಾರೆ ಎಂದು ಹೇಳುವ ಮೂಲಕ ಎಡವಟ್ಟು ಮಾಡಿಕೊಂಡ ಮುತಾಲಿಕ್  ಆರ್ ಎಸ್ ಎಸ್ ಮತ್ತು ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾದರು.  ನಿಧಾನವಾಗಿ ಮುತಾಲಿಕ್ ಆರ್ ಎಸ್ ಎಸ್ ಅನ್ನು ತಾನೇ ತೊರೆಯುವಂತೆ ಮಾಡುವಲ್ಲಿ ಸಂಘದ ಹಿರಿಯ ಮುಖಂಡರು ಯಶಸ್ವಿಯಾಗಿದ್ದರು.

ಶ್ರೀರಾಮ ಸೇನೆ ಸ್ಥಾಪನೆ

ಪ್ರಮೋದ್ ಮುತಾಲಿಕ್ ಆರ್ ಎಸ್ ಎಸ್ ತೊರೆದ ನಂತರ ಶ್ರೀರಾಮ ಸೇನೆ ಎಂಬ ಸಂಘಟನೆಯನ್ನು ಸ್ಥಾಪಿಸಿದರು. ಆ ಸಂಧರ್ಭದಲ್ಲಿ ’ಆರ್ ಎಸ್ ಎಸ್ ಸಂಘಟನೆಯದ್ದು 20090124pub4ರಾಜಕೀಯ ಹಿಂದುತ್ವ. ನಮ್ಮದು ನೈಜ ಹಿಂದುತ್ವ” ಎಂದು ಘೋಷಿಸಿದ್ದರು. ಪ್ರಗತಿಪರ ವಿಚಾರಧಾರೆಗಳು ಮತ್ತು ಮಹಿಳಾ ಸ್ವಾತಂತ್ರ್ಯವನ್ನು ಬಲವಾಗಿ ವಿರೋಧಿಸುವ ಮೂಲಕ ಮನುವಾದವನ್ನು ಜಾರಿಗೆ ತರುವುದೇ ನಿಜವಾದ ಹಿಂದುತ್ವ ಎಂದು ಬಲವಾಗಿ ನಂಬಿದ್ದ ಮುತಾಲಿಕ್ ಅದರ ಅನುಷ್ಠಾನಕ್ಕೆ ಶ್ರೀರಾಮ ಸೇನೆ ಸಂಘಟನೆಯ ಮೂಲಕ ಶ್ರಮಿಸಿದ್ದರು. ಇದರ ಭಾಗವಾಗಿಯೇ ನಡೆದದ್ದು ಪಬ್ ನಲ್ಲಿ ಊಟ ಮಾಡುತ್ತಿದ್ದ ಯುವತಿಯರ ಮೇಲೆ ದಾಳಿ. ಮಂಗಳೂರಿನ ಅಮ್ನೇಶಿಯಾ ಪಬ್ ನಲ್ಲಿ ಯುವಕ ಯುವತಿಯರು ಒಟ್ಟಿಗೆ ಕುಳಿತು ಪಾರ್ಟಿ ಆಚರಿಸುತ್ತಿದ್ದಾರೆ ಎಂದು ತಿಳಿದ ಶ್ರೀರಾಮ ಸೇನೆಯ ಕಾರ್ಯಕರ್ತರು ಅಲ್ಲಿ ದಾಳಿ ನಡೆಸಿದ್ದರು. ಯುವತಿಯರ ಮೇಲೆ ನಡೆದ ಅಮಾನುಷ ದಾಳಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ಮುತಾಲಿಕ್ ಸಹಿತ ಶ್ರೀರಾಮ ಸೇನೆಯ ಹಲವು ಕಾರ್ಯಕರ್ತರು ಬಂಧಿಸಲ್ಪಟ್ಟಿದ್ದರು. ನಂತರ ಕೆಲ ದಿನ ಮುತಾಲಿಕ್ ಸುವರ್ಣಯುಗ ಆರಂಭವಾಗಿತ್ತು. ರಾಷ್ಟ್ರಮಟ್ಟದ ನಾಯಕನ ರೀತಿ ಮಿಂಚಿದ್ದ ಮುತಾಲಿಕ್ ಹೇಳಿಕೆಗಳು ಮಾಧ್ಯಮಗಳಿಗೆ ಮುಖ್ಯವಾಗಿ ಬಿಟ್ಟಿತ್ತು. ಪ್ರೇಮಿಗಳ ದಿನ, ಹೋಟೆಲ್ ನಲ್ಲಿ ಬರ್ತ್ ಡೇ ಆಚರಣೆಯನ್ನೂ ಮುತಾಲಿಕ್ ವಿರೋಧಿಸಲು ಶುರು ಮಾಡುವ ಮೂಲಕ ಭಜರಂಗದಳಕ್ಕೆ ಪರ್ಯಾಯ ಹಿಂದೂ ಸಂಘಟನೆಯಾಗಿ ಶ್ರೀರಾಮ ಸೇನೆಯನ್ನು ಬೆಳೆಸುವಲ್ಲಿ ಸಫಲರಾದರು.  ಶ್ರೀರಾಮ ಸೇನೆಯ ಕಾರ್ಯಕರ್ತರು ನಿರಂತರವಾಗಿ ಮಂಗಳೂರಿನಲ್ಲಿ ಪ್ರೇಮಿಗಳ ಮೇಲೆ  ದಾಳಿ ನಡೆಸುತ್ತಿದ್ದರು . ಇದೇ ಸಂದರ್ಭದಲ್ಲಿ ಮಂಗಳೂರಿಗೆ ಎಸ್ಪಿಯಾಗಿ ನೇಮಕಗೊಂಡು ಆಗಮಿಸಿದ ಡಾ ಎ ಸುಬ್ರಹ್ಮಣ್ಯೇಶ್ವರ ರಾವ್  ಶ್ರೀರಾಮ ಸೇನೆಯ ಆಟಾಟೋಪಗಳನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು. ಪ್ರೇಮಿಗಳನ್ನು ಅಡ್ಡಗಟ್ಟಿ ದಾಳಿ ನಡೆಸುವ ಶ್ರೀರಾಮ ಸೇನೆಯ ಕಾರ್ಯಕರ್ತರ ಮೇಲೆ ಅತ್ಯಾಚಾರ, ಡಕಾಯಿತಿ ಕೇಸು ಹಾಕುವಂತೆ ಪೊಲೀಸ್ ಠಾಣೆಗಳಿಗೆ ಆದೇಶ ನೀಡಿ ಅದು ಜಾರಿಯಾಗುವಂತೆ ನೋಡಿಕೊಳ್ಳುವ ಮೂಲಕ ಶ್ರೀರಾಮ ಸೇನೆಯ ಆರ್ಭಟವನ್ನು ಅಕ್ಷರಶ ನಿಲ್ಲಿಸಿದ್ದರು. ಇದರ ಮಧ್ಯದಲ್ಲಿಯೇ ಪ್ರೇಮಿಗಳ ದಿನಾಚರಣೆಯ ದಿನ ಕೆಲವು ಮಹಿಳಾ ಕಾರ್ಯಕರ್ತರು ”ಪಿಂಕ್ ಚೆಡ್ಡಿ ಅಭಿಯಾನ” ಮಾಡಿದರು. ಪಿಂಕ್ ಚೆಡ್ಡಿಗಳನ್ನು ಮುತಾಲಿಕ್ ಮನೆ ವಿಳಾಸ ಮತ್ತು ಕಚೇರಿಗಳಿಗೆ ಕೊರಿಯರ್ ಮಾಡಿ ಅವರಿಗೆ ಮುಜುಗರ ಹುಟ್ಟಿಸಿದ್ದರು. ಈ ಸಂದರ್ಭದಲ್ಲಿ ಶ್ರೀರಾಮ ಸೇನೆ ಬಲ ಕಳೆದುಕೊಂಡು ಮುತಾಲಿಕ್ ಮುಸ್ಲಿಂ ವಿರೋಧಿ ಭಾಷಣಕ್ಕಷ್ಟೇ ಪ್ರಾಮುಖ್ಯತೆ ಪಡೆದುಕೊಂಡಿದ್ದರು.

ಹಣಕ್ಕಾಗಿ ಹಿಂದುತ್ವ?

ಪ್ರಮೋದ್ ಮುತಾಲಿಕ್ ಹಣ ಸಂಪಾದನೆಯ ದೃಷ್ಠಿಯಿಂದ ಹಿಂದುತ್ವದ ಬಗ್ಗೆ ಬೊಗಳೆ ಬಿಡುತ್ತಿದ್ದಾರೆ ಎಂಬ ಆರೋಪ ಇಂದು ನಿನ್ನೆಯದ್ದಲ್ಲ. ಮಂಗಳೂರಿನ ಪಬ್ ದಾಳಿಯ ಹಿಂದೆಯೂ ಹಪ್ತಾ ಮಾಫಿಯಾ ಇದೆ ಎಂಬ ಗುಮಾನಿ ಇತ್ತು. ಮಂಗಳೂರಿನಲ್ಲಿ ಹಲವಾರು ಪಬ್ ಗಳಿದ್ದರೂ ಕೇವಲ ಅಮ್ನೇಶಿಯಾ  ಮಾತ್ರವೇ ದಾಳಿಗೆ ಗುರಿಯಾಗಿದ್ದು ಯಾಕೆ ಎಂಬ ಪ್ರಶ್ನೆಗೆ ಅಮ್ನೇಶಿಯಾ ಪಬ್ ಮಾಲಕರು, ”ವಾರದ ಹಿಂದೆ ಶ್ರೀರಾಮ ಸೇನೆಯ ಕೆಲ ಯುವಕರು ಬಂದು ಪಬ್ ನ ಸೆಕ್ಯೂರಿಟಿ ಕಾಂಟ್ರಾಕ್ಟ್ ಮತ್ತು ಬೌನ್ಸರ್ ಗಳ ಕಾಂಟ್ರಾಕ್ಟನ್ನು ನಮಗೇ ನೀಡಬೇಕು ಎಂದು ಕೇಳಿಕೊಂಡಿದ್ದರು. ನಾನು ಒಪ್ಪಿರಲಿಲ್ಲ. ಇಂದು ದಾಳಿಯಾಗಿದೆ” ಎಂದು ಉತ್ತರಿಸಿದ್ದರು. ನಂತರ ನಾನು ಮತ್ತು ನನ್ನ ಗೆಳೆಯರು ಇತರ ಪಬ್ ಮತ್ತು ಬಾರ್ ಗಳನ್ನು ಪರಿಶೀಲಿಸಿದಾಗ ಹಲವಾರು ಕಡೆಗಳಲ್ಲಿ ಶ್ರೀರಾಮ ಸೇನೆ ಸೆಕ್ಯೂರಿಟಿ ಕಾಂಟ್ರಾಕ್ಟ್ ಮತ್ತು ಬೌನ್ಸರ್ ಕಾಂಟ್ರಾಕ್ಟ್ ಹೊಂದಿರುವ ಸಂಗತಿ ಅರಿವಿಗೆ ಬಂತು. ಎಲ್ಲೆಲ್ಲಿ ಶ್ರೀರಾಮ ಸೇನೆ ಈ ರೀತಿ ಕಾಂಟ್ರಾಕ್ಟ್ ಗಳನ್ನು ಹೊಂದಿದೆಯೋ ಅಂತಹ ಪಬ್ ಗಳಲ್ಲಿ ಹುಡುಗ ಹುಡುಗಿಯರು ಹಿಂದುತ್ವ ಮರೆತು ಕುಡಿಯಬಹುದು ಮತ್ತು ನರ್ತಿಸಬಹುದು ಎಂಬ ಅಂಶ ಅಲ್ಲಿಗೆ ಸ್ಪಷ್ಟವಾಯಿತು.

ಇಷ್ಟೇ ಅಲ್ಲದೆ ಹಣ ನೀಡಿದರೆ ದೇಶದಲ್ಲಿ ಹಿಂಸಾಚಾರ ಮತ್ತು ಗಲಭೆ ಸೃಷ್ಟಿಸಲು ಸಿದ್ಧ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಒಪ್ಪಿಕೊಂಡಿರುವ ವಿಷಯ ತೆಹಲ್ಕಾ-ಹೆಡ್‌ಲೈನ್ಸ್ ಟುಡೆ ನಡೆಸಿದ ಜಂಟಿ ಗುಪ್ತ ಕಾರ್ಯಾಚರಣೆಯಲ್ಲಿ ಬಹಿರಂಗಗೊಂಡಿತ್ತು. ಸೂಕ್ತ ಮೊತ್ತದ ಹಣ ನೀಡಿದರೆ ಯಾವುದೇ ಹಿಂಸಾಚಾರ ಅಥವಾ ಹಿಂಸಾತ್ಮಕ ಪ್ರತಿಭಟನೆಯನ್ನು ನಡೆಸಲು ತಾನು ಸಿದ್ಧನಿರುವುದಾಗಿ ಗುಪ್ತ ಕಾರ್ಯಾಚರಣೆಯ ತಂಡಕ್ಕೆ ಮುತಾಲಿಕ್ ಭರವಸೆ ನೀಡಿರುವ ವಿಷಯ ಕ್ಯಾಮರಾದಲ್ಲಿ ದಾಖಲಾಗಿತ್ತು. ಕುಟುಕು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪತ್ರಕರ್ತರು ಮುತಾಲಿಕ್ ಅನ್ನು ಬೇಟಿಯಾಗಿ ”ತಮ್ಮ  ವ್ಯವಹಾರ ಪ್ರಸಿದ್ದಿ ಪಡೆಯಲು ವಿನಾಕಾರಣ ವಿವಾದ ಸೃಷ್ಠಿಸಿ ಗಲಬೆ ಎಬ್ಬಿಸಬೇಕು” ಎಂದು ದೀರ್ಘ ಕಾಲ ಮಾತುಕತೆ ನಡೆಸಿದ್ದರು. ಅದಕ್ಕೆ ಮುತಾಲಿಕ್ ಒಪ್ಪಿಕೊಂಡಿದ್ದರು. ಈ ಮೂಲಕ  ಈವರೆಗೆ ಮುತಾಲಿಕ್ ನಡೆಸಿರುವ ಸಂಸ್ಕೃತಿ ರಕ್ಷಣೆಯ ದಾಳಿಗಳೆಲ್ಲಾ ಹಫ್ತಾ ಪ್ರಾಯೋಜಿತ ಎಂದು ಸಾಬೀತಾಗಿತ್ತು.

ಬಿಜೆಪಿ ಸೇರ್ಪಡೆ ಹಿಂದೆ ವ್ಯವಹಾರ?

ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಸ್ಪರ್ಧಿಸುವ ಹುಬ್ಬಳ್ಳಿ ದಾರವಾಡ ಲೋಕಸಭಾ ಕ್ಷೇತ್ರವೂ ಸೇರಿದಂತೆ ಆರು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಶ್ರೀರಾಮ ಸೇನೆಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದ ಪ್ರಮೋದ್ ಮುತಾಲಿಕ್ ಕೇವಲ 13 ದಿನಗಳಲ್ಲಿ ಬಿಜೆಪಿ ಜೊತೆ ವಿಲೀನವಾಗುವುದರ ಹಿಂದೆ ಭಾರೀ ಮೊತ್ತದ ಹಣಕಾಸು ವ್ಯವಹಾರ ನಡೆದಿದೆ ಎನ್ನಲಾಗುತ್ತಿದೆ. ಆದರೆ ಇದಕ್ಕೆ ”ಮೋದಿ ದೇಶದ ಪ್ರಧಾನಿಯಾಗಬೇಕು” ಎಂಬ ತಲೆಬರಹ ನೀಡಲಾಗುತ್ತಿದೆಯಷ್ಟೇ ಎಂಬ ಸಂಶಯ ಇದೆ. ’ಮೋದಿ ದೇಶದ ಪ್ರಧಾನಿಯಾಗಬೇಕು’ ಎಂದು ಪ್ರಮೋದ್ ಮುತಾಲಿಕ್ ಹಣಕಾಸು ವ್ಯವಹಾರ ಮಾಡುತ್ತಿರುವುದು ಇದೇ ಮೊದಲಲ್ಲ. ಮೋದಿ ಹೆಸರಲ್ಲಿ ಮುತಾಲಿಕ್ ಹಣ ಸಂಪಾದನೆ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದು ಬೇರಾರೂ ಅಲ್ಲ. ಬಿಜೆಪಿಯ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಮತ್ತು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಬಿಜೆಪಿ ಅಧ್ಯಕ್ಷ ಲಿಂಗರಾಜ್ ಪಾಟೀಲ್.

2013 ನವೆಂಬರ್ 8 ರಿಂದ ಮೂರು ದಿನಗಳ ಕಾಲ ಶ್ರೀರಾಮಸೇನೆ ಹಾಗೂ ಹಿಂದೂ ಜನಜಾಗೃತಿ ಸಮಿತಿ ಹಿಂದೂ ಅಧಿವೇಶನ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮಕ್ಕಾಗಿ ”ಮೋದಿ-ಮುತಾಲಿಕ್ ಬ್ರಿಗೇಡ್ ”ಸ್ಥಾಪನೆಗೊಂಡಿದ್ದು, ”ದೇಶಕ್ಕೆ ಮೋದಿ-ರಾಜ್ಯಕ್ಕೆ ಮುತಾಲಿಕ್” ಎಂದು ಬ್ಯಾನರ್ ಬರೆದುಕೊಂಡು ಸ್ಥಳೀಯರಿಂದ 100 ರೂ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ನವೆಂಬರ್ 09 ರಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಮತ್ತು ಸ್ಥಳೀಯ ಬಿಜೆಪಿ ಮುಖಂಡ ಲಿಂಗರಾಜ್ ಪಾಟೀಲ್ ಪತ್ರಿಕಾಗೋಷ್ಠಿ ನಡೆಸಿ ಆರೋಪಿಸಿದ್ದರು. ಹುಬ್ಬಳ್ಳಿ ದಾರವಾಡ ಮಹಾನಗರ ಬಿಜೆಪಿಯ ಅಧ್ಯಕ್ಷ ಲಿಂಗರಾಜ್ ಅವರ ಆರೋಪ ಇಷ್ಟಕ್ಕೇ ಮುಗಿದಿರಲಿಲ್ಲ. ಅವರು ಮುತಾಲಿಕ್ ರನ್ನು ಉದ್ದೇಶಿಸಿ ಪತ್ರಿಕಾಗೋಷ್ಠಿಯಲ್ಲಿ ಹೀಗೆ ಹೇಳಿದ್ದರು, ” ಮೈಬಗ್ಗಿಸಿ ದುಡಿದು ಬದುಕಲು ಯೋಗ್ಯತೆಯಿಲ್ಲದ ಕಿಡಿಗೇಡಿಗಳು ದೇವರ ಹೆಸರಿನಲ್ಲಿ ಹಣ ಪೀಕುವಂತೆ ಅಥವಾ ಗೂಂಡಾಗಿರಿ ದಬ್ಬಾಳಿಕೆ ಮಾಡಿ ಹಣ ವಸೂಲಿ ಮಾಡುವಂತೆ, ಹಣ ಹೊಂದಿಸುವ ನಿಟ್ಟಿನಲ್ಲಿ ಐದಾರು ರೂಪಾಯಿ ಮೌಲ್ಯದ ಸ್ಟಿಕರೊಂದನ್ನು ಮುದ್ರಿಸಿ ಅದನ್ನು ನೂರು ರೂಪಾಯಿಗೆ ಒತ್ತಾಯಪೂರ್ವಕವಾಗಿ ಮಾರಾಟ ಮಾಡುವ ಅಡ್ಡ ಕಸುಬು ನಡೆಸುತ್ತಿದ್ದಾರೆ. ರಸ್ತೆಯಲ್ಲಿ ಓಡಾಡುವ ಜನಸಾಮಾನ್ಯರಿಂದ ಹಿಡಿದು ಸಣ್ಣಪುಟ್ಟ ಚಿಲ್ಲರೆ ವ್ಯಾಪಾರಸ್ಥರ ಮೇಲೂ ದಬ್ಬಾಳಿಕೆ ಪ್ರದರ್ಶಿಸುತ್ತಿರುವ ಶ್ರೀರಾಮ ಸೇನೆಯ ಕಾರ್ಯಕರ್ತರು, ತಾವು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ಅಭಿಮಾನಿಗಳು ಎಂದು ಪರಿಚಯಿಸಿಕೊಂಡು ಪ್ರತೀ ಟಿಕೇಟಿಗೆ ನೂರು ರೂಪಾಯಿಯಂತೆ ಹಣ ವಸೂಲಿ ಮಾಡುತ್ತಿದ್ದಾರೆ” ಎಂದು  ಲಿಂಗರಾಜ್ ಪಾಟೀಲ್ ನೇರವಾಗಿ ಆರೋಪಿಸಿದ್ದರು.

ಇದೀಗ ಅದೇ ಪ್ರಮೋದ್ ಮುತಾಲಿಕ್ ಬಿಜೆಪಿ ಸೇರಿ ಒದೆ ತಿಂದಿದ್ದಾರೆ. ಮತ್ತದೇ ನರೇಂದ್ರ ಮೋದಿಯ ಕಾರಣಕ್ಕಾಗಿ.

One thought on ““ರಾಷ್ಟ್ರಕ್ಕೆ ಮೋದಿ, ರಾಜ್ಯಕ್ಕೆ ಮುತಾಲಿಕ್”

Leave a Reply

Your email address will not be published. Required fields are marked *