Daily Archives: March 25, 2014

ಗಲಬೆಯಲ್ಲಿ ಹೆಣ ನೋಡೋ ಸಂಭ್ರಮದಲ್ಲಿ ತಂದೆಯ ಹೆಣ ಮರೆತ ಮುತಾಲಿಕ್


– ನವೀನ್ ಸೂರಿಂಜೆ


 

ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಬಿಜೆಪಿ ಸೇರಿದ ಒಂದೇ ಗಂಟೆಯಲ್ಲಿ ಬಿಜೆಪಿ ಹೈಕಮಾಂಡ್ ಮುತಾಲಿಕ್ ಗೆ ಪ್ರಾಥಮಿಕ ಸದಸ್ಯತ್ವ ScreenClipನಿರಾಕರಣೆ ಮಾಡಿದ್ದರಿಂದ ತೀವ್ರ ಮುಖಭಂಗಕ್ಕೊಳಗಾಗಿ ಪತ್ರಿಕಾಗೋಷ್ಠಿ ನಡೆಸಿದ್ದ ಪ್ರಮೋದ್ ಮುತಾಲಿಕ್ ಅಕ್ಷರಶಃ ಬಿಕ್ಕಿ ಬಿಕ್ಕಿ ಅತ್ತರು. ಅಳುತ್ತಲೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್ “ನಾನು ಸನ್ಯಾಸಿಯಾಗಿದ್ದು ಉತ್ತಮ ಚಾರಿತ್ರ್ಯವನ್ನು ಹೊಂದಿದ್ದೇನೆ. ನನ್ನ ಇಡೀ ಜೀವನವನ್ನು ಹಿಂದುತ್ವಕ್ಕಾಗಿ ಮೀಸಲಿರಿಸಿದ್ದೇನೆ. ನಾನು ವೈಯುಕ್ತಿಕ ಬದುಕನ್ನೇ ಕಂಡಿಲ್ಲ. ನನ್ನ ತಂದೆ ತೀರಿಕೊಂಡಾಗಲೂ ನಾನು ತಂದೆಯ ಹೆಣ ಕೂಡಾ ನೋಡಲು ಹೋಗಿರಲಿಲ್ಲ. ಆಗಲೂ ನಾನು ಆರ್ ಎಸ್ ಎಸ್ ಕೆಲಸ ಮಾಡುತ್ತಿದ್ದೆ. ನನ್ನ ಸಹೋದರನ ಮದುವೆಗೂ ನಾನು ಹೋಗಿಲ್ಲ. ತಂದೆಯ ಹೆಣ, ಸಹೋದರನ ಮದುವೆಯಂತಹ ವೈಯುಕ್ತಿಕ ಜೀವನವನ್ನು ಬದಿಗೊತ್ತಿ ಆರ್ ಎಸ್ ಎಸ್ ನ ಕೆಲಸ ಮಾಡಿದ್ದ ನನಗೆ ಬಿಜೆಪಿ ಈ ರೀತಿ ಅವಮಾನ ಮಾಡಬಾರದಿತ್ತು. ನಾನು ಯಾವ ತಪ್ಪೂ ಮಾಡದಿದ್ದರೂ ನನ್ನನ್ನು ಯಾಕೆ ನೋಯಿಸುತ್ತಿದ್ದೀರಿ ? ” ಎಂದು ಕಣ್ಣಲ್ಲಿ ನೀರು ತುಂಬಿಕೊಂಡು ಬಿಕ್ಕಿ ಬಿಕ್ಕಿ ಅತ್ತರು.

ಆರ್ ಎಸ್ ಎಸ್ ಕಾರ್ಯಕರ್ತನಾಗಿ, ಆರ್ ಎಸ್ ಎಸ್ ನ ಕಿಶೋರ ವಿಭಾಗದ ಮುಖ್ಯಸ್ಥನಾಗಿ, ಆರ್ ಎಸ್ ಎಸ್ ಪ್ರಚಾರಕನಾಗಿ, ಭಜರಂಗದಳದ ರಾಜ್ಯಾಧ್ಯಕ್ಷನಾಗಿ, ಭಜರಂಗದಳದ ದಕ್ಷಿಣ ಭಾರತ ಪ್ರಾಂತ್ಯ ಸಂಚಾಲಕನಾಗಿ, ಶಿವಸೇನೆಯ ರಾಜ್ಯಾಧ್ಯಕ್ಷನಾಗಿ, ಶ್ರೀರಾಮ ಸೇನೆಯ ಸ್ಥಾಪಕನಾಗಿ ಇಡೀ ದೇಶದ ಹಿಂದೂ ಕೋಮುವಾದಿ ಯುವಕರಲ್ಲಿ ಮುಸ್ಲಿಂ ವಿರೋಧದ ಕಿಡಿ ಹಚ್ಚಿಸಿದ ದೇಶದ ಅತ್ಯಂತ ವಿವಾದಾಸ್ಪದ “ಮುಖಂಡ”ನ ಅಳುವನ್ನೂ ವಿಮರ್ಶಿಸಬೇಕಾಗುತ್ತದೆ. ನೂರಾರು ಸಿಂಹ ಘರ್ಜನೆಯ ಹಿಂದೂ ಯುವಕರನ್ನು ಸೃಷ್ಠಿಸಿದ್ದ ಮುತಾಲಿಕ್ ರ ಅಳು-ಕಣ್ಣೀರು-ಬಿಕ್ಕಳಿಸಿದ ಮಾತುಗಳನ್ನು ನಿರ್ಲಕ್ಷಿಸುವಂತಿಲ್ಲ. ಮುತಾಲಿಕ್ ಕಣ್ಣೀರಿಗೂ, ಅವರ ಬಾಯಲ್ಲಿ ಬಂದ ಮಾತುಗಳಿಗೂ ವಿಶೇಷವಾದ ಮಹತ್ವ ಇದೆ.

ಕಣ್ಣೀರು

ಆಗ ಪ್ರಮೋದ್ ಮುತಾಲಿಕ್ ಭಜರಂಗದಳದ ದಕ್ಷಿಣ ಭಾರತ ಪ್ರಾಂತ್ಯ ಸಂಚಾಲಕ. ಹಳ್ಳಿ ಹಳ್ಳಿಗೆ ತೆರಳಿ ಭಜರಂಗದಳಕ್ಕೆ ಯುವಕರನ್ನು ಸಿದ್ದಗೊಳಿಸುತ್ತಿದ್ದರು. “ಗೋವು ನಮ್ಮ ತಾಯಿ. ಗೋವು ಸಾಗಾಟ ನಡೆಸುವ ಮತ್ತು ತಿನ್ನುವ ಮುಸ್ಲೀಮರು ಸಮಾಜದಲ್ಲಿ ಇರಲು ಅನರ್ಹರು” ಎಂಬ ರೀತಿಯಲ್ಲಿ ಕೋಮು ಪ್ರಚೋದಕ ಭಾಷಣಗಳನ್ನು ಮುತಾಲಿಕ್ ಮಾಡುತ್ತಿದ್ದರು. ಇವರ ಭಾಷಣದ ಫಲವಾಗಿ ಆದಿ ಉಡುಪಿಯಲ್ಲಿ ದನ ಸಾಗಾಟ ನಡೆಸುತ್ತಿದ್ದ ಜಾಜಬ್ಬ ಮತ್ತು ಹಸನಬ್ಬ ಎಂಬ ತಂದೆ ಮಗನನ್ನು ನಡು ರಸ್ತೆಯಲ್ಲಿ ಪೂರ್ತಿ ಬೆತ್ತಲು ಮಾಡಲಾಯಿತು. ತಂದೆಯ ಮುಂದೆ ಮಗನನ್ನು, ಮಗನ ಮುಂದೆ ತಂದೆಯನ್ನು ಸಾರ್ವಜನಿಕವಾಗಿ ಬೆತ್ತಲು ಮಾಡಿದಾಗ ಅವರಿಬ್ಬರ ವೇದನೆ ಯಾವ ರೀತಿಯದ್ದಾಗಿರಬಹುದು ಎಂದು ಆಗ ದಕ್ಷಿಣ ಪ್ರಾಂತ್ಯ ಸಂಚಾಲಕನಾಗಿದ್ದ ಪ್ರಮೋದ್ ಮುತಾಲಿಕ್ ಗೆ ಅರಿವಾಗಿಲ್ಲ. ತಂದೆ ಮತ್ತು ಮಗನ ಬೆತ್ತಲೆ ಫೋಟೋಗಳನ್ನು ಮರುದಿನ ಪತ್ರಿಕೆಯಲ್ಲಿ ನೋಡಿದ ಅವರ ಅಮ್ಮ, ಅಕ್ಕ ತಂಗಿಯರು ಅದೆಷ್ಟು ನೋವಿನಿಂದ ಅತ್ತಿರಬಹುದು, ಗೊಗೆರೆದಿದ್ದಿರಬಹುದು; ಅದೆಷ್ಟು ಕಣ್ಣಿರು ಸುರಿಸಿದ್ದಿರಬಹುದು. ಅವರ ಅಸಾಹಯಕತೆ ಅಥವಾ ವೇದನೆಯ ಬಗ್ಗೆ ಯಾವತ್ತಾದರೂ ಪ್ರಮೋದ್ ಮುತಾಲಿಕ್ ಯೋಚಿಸಿರಬಹುದೇ?

ಹೆಣ ನೋಡೋ ಸಂಭ್ರಮದಲ್ಲಿ

“ಆರ್ ಎಸ್ ಎಸ್ ಗಾಗಿ ಬದುಕನ್ನೇ ಮುಡಿಪಾಗಿಟ್ಟ ಪ್ರಮೋದ್ ಮುತಾಲಿಕ್ ಗೆ ತಂದೆಯ ಹೆಣವನ್ನೂ ನೋಡೋಕೆ ಆಗಿಲ್ಲ” ಎಂದು ಅವಲತ್ತುಕೊಂಡಿದ್ದಾರೆ. ತನ್ನ ತಂದೆ Newನಿಧನ ಹೊಂದಿದ ಸಂದರ್ಭದಲ್ಲಿ ಮುತಾಲಿಕ್ ದೇಶ ಕಾಯುವ ಸೈನ್ಯದಲ್ಲೂ ಇರಲಿಲ್ಲ. ಯುದ್ಧದಲ್ಲೂ ಭಾಗವಹಿಸಿರಲಿಲ್ಲ. ತನ್ನ ತಂದೆಯ ಹೆಣ ನೋಡಿ ಅಗ್ನಿ ಸ್ಪರ್ಶ ಮಾಡಬೇಕಾದ ಹೊತ್ತಲ್ಲಿ ಮುಸ್ಲಿಮರ ಮನೆಗಳಿಗೆ, ಅಂಗಡಿಗೆ ಕೊಳ್ಳಿ ಇಡುತ್ತಿದ್ದರು. ತಂದೆಯ ಶವವನ್ನು ನೋಡದೆ ಮುಸ್ಲೀಮರ ಶವಗಳನ್ನು ನೋಡಿ ಖುಷಿಪಡುತ್ತಿದ್ದರು. ಪ್ರಮೋದ್ ಮುತಾಲಿಕ್ ಭಜರಂಗದಳದ ರಾಜ್ಯಾಧ್ಯಕ್ಷನಾಗಿದ್ದ ವೇಳೆ ಮಂಗಳೂರಿನಲ್ಲಿ ಹಲವಾರು ಬಾರಿ ಕೋಮುಗಲಭೆಗಳು ನಡೆದಿದ್ದವು. ಉಳ್ಳಾಲ, ಸುರತ್ಕಲ್ ಪ್ರದೇಶಗಳಲ್ಲಿ ಹಲವು ಮನೆ ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಾಕಲಾಯಿತು. ಹಲವು ಮುಸ್ಲೀಮರು ಶವವಾಗಿದ್ದರು. ಪ್ರಮೋದ್ ಮುತಾಲಿಕ್ ಭಜರಂಗದಳ ದಕ್ಷಿಣ ಭಾರತ ಪ್ರಾಂತ್ಯ ಸಂಚಾಲಕನಾಗಿದ್ದ ವೇಳೆಯಲ್ಲಿ ಹಲವಾರು ಹಿಂದೂ ಸಮಾಜೋತ್ಸವಗಳನ್ನು ಸಂಘಟಿಸಿ ಮುಸ್ಲಿಂ ವಿರೋಧಿ ಪ್ರಚೋಧನಾಕಾರಿ ಭಾಷಣಗಳನ್ನು ಮಾಡಿದ್ದರು. ಹಾವೇರಿಯ ಮಾಲೆಬೆನ್ನೂರು ಎಂಬಲ್ಲಿ ಹಿಂದೂ ಸಮಾಜೋತ್ಸವದಲ್ಲಿ ಮುತಾಲಿಕ್ ದಿಕ್ಸೂಚಿ ಭಾಷಣ ಮಾಡುತ್ತಾ “ಮಾಲೆಬೆನ್ನೂರಿನ ರಸ್ತೆ ಬದಿಯಲ್ಲಿ ಎಲ್ಲಿ ನೋಡಿದರೂ ಮುಸ್ಲೀಮರ ಅಂಗಡಿಗಳು, ಮನೆಗಳೇ ಕಾಣಸಿಗುತ್ತದೆ. ನಿಮಗೆ ರಕ್ತ ಕುದಿಯುವುದಿಲ್ಲವೇ ?” ಎಂದು ಸೂಚ್ಯವಾಗಿ ಹೇಳಿದ್ದರು. ಸಮಾವೇಶ ನಡೆದ ರಾತ್ರಿಯೇ ಮಾಲೆಬೆನ್ನೂರಿನ ಮುಸ್ಲೀಮರ ಸಣ್ಣ ಪುಟ್ಟ ಗೂಡಂಗಡಿಗಳಿಗೆ ಬೆಂಕಿ ಬಿದ್ದಿತ್ತು.

ತನಗೆ ತನ್ನ ತಂದೆಯ ಹೆಣ ನೋಡಲು ಸಾಧ್ಯವಾಗಿಲ್ಲ ಎಂದು ಮುತಾಲಿಕ್ ಈಗ ಅಳುತ್ತಿದ್ದಾರೆ. ಮಂಗಳೂರಿನ ಪಬ್ ನ ಮೇಲೆ ಮುತಾಲಿಕ್ ನೇತೃತ್ವದ ಶ್ರೀರಾಮmangalore_moral1 ಸೇನೆಯ ಕಾರ್ಯಕರ್ತರು ದಾಳಿ ನಡೆಸಿ 27 ಜನ ಬಂಧಿತರಾದರು. ಬಂಧಿತ ಒರ್ವ ಯುವಕನ ಮನೆಯಲ್ಲಿ ಸಾವು ಸಂಭವಿಸಿದ್ದರೂ ಹೆಣ ನೋಡಲೂ, ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲೂ ಆತನಿಗೆ ನ್ಯಾಯಾಲಯ ಅನುಮತಿ ನೀಡಿರಲಿಲ್ಲ. ಇದೇ ಶ್ರೀರಾಮ ಸೇನೆಯ ಗುಂಪು ಹಿಂದೂ ಜಾಗರಣಾ ವೇದಿಕೆ ಸೇರಿಕೊಂಡು “ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ” ಮೇಲೆ ದಾಳಿ ನಡೆಸಿ 30ಕ್ಕೂ ಅಧಿಕ ಕಾರ್ಯಕರ್ತರು ಬಂಧನಕ್ಕೊಳಗಾದರು. ಸುಮಾರು ಒಂದು ವರ್ಷಕ್ಕೂ ಅಧಿಕ ಕಾಲ ಅವರು ಜೈಲಿನಲ್ಲಿದ್ದರು. ಈ ಸಂಧರ್ಭದಲ್ಲಿ ಒಬ್ಬ ಆರೋಪಿಯ ಮನೆಯಲ್ಲಿ ಮೂವರು ಸಾವನ್ನಪ್ಪಿದ್ದರು. ಆ ಮೂವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಆತನಿಗೆ ಸಾಧ್ಯವಾಗಲಿಲ್ಲ. ಹಿಂದೂ ಸಮುದಾಯದ ಅಮಾಯಕ ಹಿಂದುಳಿದ ವರ್ಗಗಳ ಯುವಕರ ತಲೆಯಲ್ಲಿ ಕೋಮುವಾದದ ವಿಷ ಬೀಜ ಬಿತ್ತಿ ಅವರು ಜೈಲಲ್ಲಿ ಕೊಳೆಯುವಂತೆ ಮಾಡಿ ಅವರಿಗೆ ತನ್ನ ಕುಟುಂಬದವರ ಅಂತ್ಯಸಂಸ್ಕಾರದಲ್ಲೂ ಭಾಗವಹಿಸದಂತಹ ಹಲವಾರು ಪರಿಸ್ಥಿತಿಗಳನ್ನು ಸೃಷ್ಠಿ ಮಾಡಿದವರೇ ಪ್ರಮೋದ್ ಮುತಾಲಿಕ್ ಮತ್ತು ಅವರಂತಹ ನಾಯಕರು.

ಅಭಿನವ ಭಾರತ್ ಸಂಘಟನೆಯು ಮಾಲೆಗಾಂವ್ ಸ್ಪೋಟ ನಡೆಸಿದಾಗ ಇದೇ ಪ್ರಮೋದ್ ಮುತಾಲಿಕ್ ಮಾಲೇಗಾಂವ್ ಸ್ಪೋಟವನ್ನು ಸಮರ್ಥಿಸಿಕೊಂಡಿದ್ದರು. 2009 ಜನವರಿ 17 ರ ಸಂಜೆ ಉಡುಪಿ ಎಂಜಿಎಂ ಕಾಲೇಜು ಆವರಣದಲ್ಲಿ ನಡೆದ ಹಿಂದೂ ಧರ್ಮ ಜಾಗೃತಿ ಸಭೆಯಲ್ಲಿ ಭಾಷಣ ಮಾಡಿದ್ದ ಪ್ರಮೋದ್ ಮುತಾಲಿಕ್ “ಮಾಲೆಗಾಂವ್ ಸ್ಪೋಟ malegaon_blast_site_2_060909ಒಂದು ಝಲಕ್ ಮಾತ್ರ. ಇಂತಹ ಹಲವಾರು ಘಟನೆಗಳು ನಡೆಯಲಿಕ್ಕಿದೆ” ಎಂದಿದ್ದರು. ಈ ಸಂಧರ್ಭದಲ್ಲಿ ಅಲ್ಲಿ ಸೇರಿದ್ದ ಸಂಘಟನೆಗಳ ಕಾರ್ಯಕರ್ತರು “ಹರ ಹರ ಮಹಾದೇವ್” ಎಂದು ಬೊಬ್ಬೆ ಹಾಕಿ ಮುತಾಲಿಕ್ ಭಾಷಣಕ್ಕೆ ಅನುಮೋದನೆ ನೀಡಿದ್ದರು. ಮಾಲೆಗಾಂವ್ ಸ್ಪೋಟವು ಸ್ಮಶಾನದ ಸನಿಹದಲ್ಲಿ ನಡೆದಿದ್ದು, ಈ ಘಟನೆಯಲ್ಲಿ 37 ಜನ ಸಾವನ್ನಪ್ಪಿದ್ದರು. ಈ ಮೂವತ್ತೇಳು ಜನರ ಹೆಣಗಳನ್ನು ನೋಡಿಯೂ ಪ್ರಮೋದ್ ಮುತಾಲಿಕ್ “ಇಂತಹ ಇನ್ನಷ್ಟೂ ದಾಳಿಗಳು ನಡೆಯಲಿಕ್ಕಿದೆ” ಎಂದಿದ್ದರು.  ಹೀಗೆ ಹೆಣಗಳು ಉದುರುವ ಬಾಂಬ್ ಸ್ಪೋಟಗಳನ್ನು ಸಮರ್ಥಿಸುತ್ತಾ, ಕೋಮುಗಲಭೆಗಳನ್ನು ಮಾಡಿ, ಬೆಂಕಿ ಹಚ್ಚಿ ಮುಸ್ಲೀಮರ ಶವಗಳನ್ನು ನೋಡುವ ಸಂಭ್ರಮದಲ್ಲೇ ತಲ್ಲೀನನಾಗಿದ್ದ ಪ್ರಮೋದ್ ಮುತಾಲಿಕ್  ತಂದೆ ಶವ ನೋಡಲು ಮರೆತಿದ್ದರೆ ಅದಕ್ಕೆ ಯಾರು ತಾನೆ ಜವಾಬ್ದಾರರು?

ಸಹೋದರನ ಮದುವೆಗೂ ಹೋಗದಿದ್ದ ಮುತಾಲಿಕ್

ಪ್ರಮೋದ್ ಮುತಾಲಿಕ್ ಸಹೋದರನ ಮದುವೆಗೂ ಹೋಗದೆ ಹಿಂದುತ್ವ ಪ್ರತಿಪಾದನೆಯ ಕೆಲಸದಲ್ಲಿದ್ದರು. ವೆಲೆಂಟೈನ್ ಡೇ ಸಂದರ್ಭ ದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಪ್ರಮೋದ್ ಮುತಾಲಿಕ್ “ಪಾರ್ಕಿನಲ್ಲಿ ಯುವಕ ಯುವತಿಯರು ಇರುವುದನ್ನು ಕಂಡರೆ ಅಲ್ಲೇ ಅವರ ಮನೆಯವರನ್ನು ಕರೆಸಿ ನಮ್ಮ ಕಾರ್ಯಕರ್ತರು ಮದುವೆ ಮಾಡಿಸುತ್ತಾರೆ” ಎಂದು ಹೇಳಿಕೆ ನೀಡಿದ್ದರು. ಇದು ರಾಷ್ಟ್ರಮಟ್ಟದಲ್ಲಿ ಚರ್ಚೆಯೂ ಆಗಿತ್ತು. ಹೀಗೆ ಕಂಡ ಕಂಡ ಪ್ರೇಮಿಗಳನ್ನು ಹಿಡಿದು ಬಲವಂತವಾಗಿ ಮದುವೆ ಮಾಡಿಸೋ ಮುತಾಲಿಕ್ ಗೆ ತನ್ನ ಸ್ವಂತ ಸಹೋದರ ಮದುವೆಗೆ ಹೋಗೋಕೆ ಆಗಿಲ್ಲ ಅನ್ನುವುದದು ಆತನೇ ತಂದುಕೊಂಡ ದುರಂತವಲ್ಲದೆ ಮತ್ತೇನೂ ಅಲ್ಲ.

ಹೀಗೆ ತನ್ನ ತಂದೆಯ ಹೆಣ ನೋಡೋಕೂ, ಸಹೋದರನ ಮದುವೆಗೂ ಬರದೆ ಹಿಂದುತ್ವದ ಕೆಲಸದಲ್ಲಿ ತೊಡಗಿಸಿಕೊಂಡಿದ್ದೆ ಎಂಬ ಪ್ರಮೋದ್ ಮುತಾಲಿಕರ ಅಳುವಿಗೆ ಬೇರಾವ ರೀತಿಯಲ್ಲೂ ವಿಮರ್ಶೆ ಸಾಧ್ಯವಿಲ್ಲ ಎನಿಸುತ್ತದೆ. ಮಂಗಳೂರೊಂದರಲ್ಲೇ ಅದೆಷ್ಟೋ ಹಿಂದೂ-ಮುಸ್ಲಿಂ ಯುವಕ ಯುವತಿಯರ ಮೇಲೆ ಸಾರ್ವಜನಿಕವಾಗಿ ದಾಳಿಗಳು ನಡೆದಿತ್ತು. ಆಗೆಲ್ಲಾ ದಾಳಿಗೊಳಗಾದ ಯುವತಿಯರು ರಸ್ತೆ ಬದಿಯಲ್ಲೇ ಸಾರ್ವಜನಿಕವಾಗಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಕಾಲಿಗೆ ಬಿದ್ದು ಅಳುತ್ತಾ “ಬಿಟ್ಟು ಬಿಡುವಂತೆ” ಗೋಗರೆಯುತ್ತಿದ್ದರು. ಅದೆಷ್ಟೋ ಹೆಣ, ಅದೆಷ್ಟೋ ಮನೆಗಳ ಬೆಂಕಿ, ಅದೆಷ್ಟೋ ಪ್ರೇಮಿಗಳ ಆರ್ತನಾದ ಕೇಳುತ್ತಾ ಸದಾ ಖುಷಿಪಟ್ಟಿದ್ದ ಪ್ರಮೋದ್ ಮುತಾಲಿಕ್ ಕಣ್ಣಲ್ಲಿ ಪ್ರಥಮ ಬಾರಿ ಅಳು ಕಂಡಿದ್ದು ಸಂತ್ರಸ್ತರಿಗೆ ನ್ಯಾಯ ಒದಗಿದಂತೆ ಅಲ್ಲದೇ ಇದ್ದರೂ ಮುತಾಲಿಕರಿಗಾದ ಇಂತಹ ಅವಮಾನ ಮತ್ತು ನೋವುಗಳು ಅವರಿಗೊಂದು “ಅವಮಾನದ ನೋವಿನ ಪಾಠ” ಕಲಿಸುವಂತಾಗಲಿ.