Daily Archives: March 28, 2014

ಜಾಗತೀಕರಣ ಮತ್ತು ಭಾರತದ ಸಿನಿಮಾ ಜಗತ್ತು


– ಡಾ.ಎಸ್.ಬಿ. ಜೋಗುರ


 

ಜಾಗತೀಕರಣವನ್ನು ಪ್ರೊ ಎಮ್. ನಂಜುಂಡಸ್ವಾಮಿಯವರು ವಿಶ್ವ ಮಾರುಕಟ್ಟೆಯ ಕೀಲಿ ಕೈ ಎಂದು ಕರೆದಿದ್ದರು. ಈ ಪ್ರಕ್ರಿಯೆಯ ವೇಗ ವಿಶ್ವದ ಆರ್ಥಿಕ ಚಟುವಟಿಕೆಗಳಿಗೆ ಚುರುಕು ನೀಡುವ ಜೊತೆ ಜೊತೆಯಲ್ಲಿಯೇ, ಸಣ್ಣ ತ್ರಾಣದ ಆರ್ಥಿಕ ಮೂಲಗಳು ಬತ್ತಿಹೋಗುವಂತೆ ಮಾಡಿರುವುದೂ ಇದೆ. ಇದು ಕೇವಲ ಆರ್ಥಿಕ ವಲಯಕ್ಕೆ ಮಾತ್ರ ಸೀಮಿತವಾಗಿದ್ದರೆ ಜಾಗತೀಕರಣವನ್ನು ಹೀಗೆ ವಿವಿಧ ನೆಲೆಗಳಲ್ಲಿ ಚರ್ಚಿಸುವ ಅಗತ್ಯವಿರುತ್ತಿರಲಿಲ್ಲ. ಜಾಗತೀಕರಣ ನಮ್ಮ ದೈನಂದಿನ ಬದುಕಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ವಿದ್ಯಮಾನಗಳನ್ನು ಕೂಡಾ ತುಂಬಾ ಗಾಢವಾಗಿ ತಟ್ಟಿರುವುದರಿಂದಲೇ ಅದರ ಗುಣಾತ್ಮಕವಾದ ಪರಿಣಾಮಗಳನ್ನು ಕುರಿತು ಗಹನವಾಗಿ ಯೋಚಿಸಬೇಕಿದೆ.

ಸಮಾಜದ ಬಹುದೊಡ್ಡ ಸಮುದಾಯವನ್ನು ವ್ಯಾಪಕ ನೆಲೆಯಲ್ಲಿ ಪ್ರಭಾವಿಸುವ ಜನಪ್ರಿಯ ಮಾಧ್ಯಮ ಸಿನಿಮಾ. ಚಲನಚಿತ್ರ Desktopಮಾಧ್ಯಮ ಜನಸಮೂಹದ ಮೈ-ಮನಗಳ ಸುಳಿಯಲ್ಲಿ ಕುಳಿತು ಬದುಕಿನ ವಿಭಿನ್ನ ಸ್ತರಗಳಲ್ಲಿ ಬೇರೆ ಬೇರೆ ರೀತಿಯ ಪ್ರಭಾವವನ್ನು ಬೀರುತ್ತಿರುತ್ತದೆ. 1990 ರ ದಶಕದ ನಂತರ ಜಾಗತೀಕರಣದ ಪ್ರವೇಶದ ಬೆನ್ನಲ್ಲಿಯೇ ವಿಶ್ವದ ಬೇರೆ ಬೇರೆ ಭಾಷೆಯ ಚಲನಚಿತ್ರಗಳು ದೇಶದಲ್ಲಿ ವ್ಯಾಪಕವಾಗಿ ಬಿಡುಗಡೆಯಾದವು. ಅದಕ್ಕೂ ಮೊದಲು ಈ ಮಟ್ಟದ ವಿಸ್ತೃತತೆ ಪ್ರಾದೇಶಿಕ ಭಾಷೆಯ ಚಿತ್ರಗಳಿಗೆ ದೊರೆತದ್ದು ಅಪರೂಪ. 1997 ರ ಸಂದರ್ಭದಲ್ಲಿ ‘ಟೈಟಾನಿಕ್’ ಎನ್ನುವ ಸಿನಿಮಾ 1.8 ಬಿಲಿಯನ್ ಡಾಲರ್ ವ್ಯವಹಾರ ಮಾಡಲು ಸಾಧ್ಯವಾದದ್ದು ಈ ಜಾಗತೀಕರಣ ತೆರೆದಿಟ್ಟ ಮುಕ್ತ ಮಾರುಕಟ್ಟೆಯ ಅವಕಾಶಗಳಿಂದಲೇ. 2010 ರಲ್ಲಿ ತೆರೆಗೆ ಬಂದ ‘ಅವತಾರ್’ ಎನ್ನುವ ಇಂಗ್ಲಿಷ್ ಸಿನಿಮಾ 500 ಮಿಲಿಯನ್ ಡಾಲರ್ ವ್ಯವಹಾರ ಮಾಡುವಲ್ಲಿಯೂ ಈ ಜಾಗತೀಕರಣದ ಪಾತ್ರವಿದೆ. ಜಾಗತೀಕರಣ ಕೇವಲ ವ್ಯವಹಾರದಲ್ಲಿ ಗೆಲ್ಲುವ ಸೂತ್ರ ಮಾತ್ರವಾಗಿರದೇ ಸಹನಿರ್ಮಾಣಕ್ಕೂ ಅವಕಾಶ ಮಾಡಿಕೊಟ್ಟಿದೆ ಎಂದು ಟೈಲರ್ ಎನ್ನುವ ಚಿಂತಕರು ಹೇಳುತ್ತಾರೆ. ಮತ್ತೆ ಕೆಲವು ವಿಶ್ಲೇಷಕರು ಈ ಬಗೆಯ ಸಹ ನಿರ್ಮಾಣದ ನೆಲೆಯಲ್ಲಿ ಮೂಡಿ ಬರುವ ಚಲನಚಿತ್ರಗಳು ವಿಭಿನ್ನ ಸಂಸ್ಕೃತಿಯ ಪ್ರಸರಣಕ್ಕೆ ಕಾರಣವಾಗುವ ಜೊತೆಯಲ್ಲಿ ಹೈಬ್ರಿಡ್ ಸಂಸ್ಕೃತಿಯ ಹರಡುವಿಕೆಗೂ ಕಾರಣವಾಗಿವೆ ಎಂದಿದ್ದಾರೆ. ತೃತೀಯ ಜಗತ್ತಿನ ರಾಷ್ಟ್ರಗಳು ಸಿನಿಮಾ ಜಗತ್ತಿನಲ್ಲಿ ಸಲ್ಲುವಂತಾಗುವಲ್ಲಿಯೂ ಪರೋಕ್ಷವಾಗಿ ಜಾಗತೀಕರಣ ನೆರವಾಗಿದೆ. ಲ್ಯಾಟಿನ್ ಅಮೇರಿಕಾ ಮತ್ತು ಇರಾಕ್ ದಂತಹ ರಾಷ್ಟ್ರಗಳ ಸಿನಿಮಾಗಳ ಗುಣಮಟ್ಟ ಜಾಗತಿಕ ಮಟ್ಟದಲ್ಲಿ ಪರಿಚಯವಾಗುವಲ್ಲಿ ನೆರವಾದದ್ದು ಮುಕ್ತ ಮಾರುಕಟ್ಟೆಯ ಸೂತ್ರಗಳೇ. ಹೀಗೆ ಹೇಳುವಾಗ ಈ ಸಹನಿರ್ಮಾಣದ ಪರಿಕಲ್ಪನೆಯ ಭರಾಟೆಯಲ್ಲಿ ನಿರ್ದೇಶಕರ ಮೇಲಿನ ಸವಾರಿಯನ್ನೂ ಮರೆಯುವಂತಿಲ್ಲ. ಪರಿಣಾಮವಾಗಿ ಕೆಲ ಬಾರಿ ನಿರ್ದೇಶಕನ ನಿರೀಕ್ಷೆಯಂತೆ ಚಿತ್ರಗಳು ಮೂಡಿಬರದೇ ಸಹನಿರ್ಮಾಪಕರ ಅಣತಿಯಂತೆ ತಯಾರಾಗುತ್ತವೆ. ಹೀಗಾಗಿ ಅನೇಕ ಸಂಧರ್ಭಗಳಲ್ಲಿ ನಿರ್ದೇಶಕ  ಕೇವಲ ನೆಪ ಮಾತ್ರ ಎನ್ನುವಂಥಾ ಸ್ಥಿತಿ ನಿರ್ಮಾಣವಾಗಿದೆ.

ಹಾಗೆ ನೋಡಿದರೆ ಜಗತ್ತಿನಲ್ಲಿ ಅತಿ ಹೆಚ್ಚು ಚಲನಚಿತ್ರಗಳನ್ನು ನಿರ್ಮಿಸುವವರ ಸಾಲಲ್ಲಿ ಭಾರತ untitledಮೊದಲ ಸ್ಥಾನದಲ್ಲಿದೆ. ಸುಮಾರು 24 ಪ್ರಾದೇಶಿಕ ಭಾಷೆಗಳಲ್ಲಿ ಸಿನಿಮಾ ನಿರ್ಮಿಸುವ ಭಾರತೀಯರು ಆಯಾ ಪ್ರಾದೇಶಿಕ ಸಂಸ್ಕೃತಿ ಮತ್ತು ಪರಿಸರವನ್ನು ಆಧರಿಸಿ ಸಿನಿಮಾ ನಿರ್ಮಿಸುತ್ತಿದ್ದಾರೆ. ಒಟ್ಟು ನಿರ್ಮಾಣದಲ್ಲಿ ಮೊದಲ ಸ್ಥಾನದಲ್ಲಿ ಹಿಂದಿ, ಎರಡನೆಯ ಸ್ಥಾನದಲ್ಲಿ ತೆಲುಗು, ಮೂರನೆಯ ಸ್ಥಾನದಲ್ಲಿ ತಮಿಳು ಸಿನಿಮಾಗಳಿವೆ. ನಮ್ಮಲ್ಲಿ ಮೊಟ್ಟ ಮೊದಲ ಸಿನಿಮಾ ನಿರ್ಮಾಣವಾಗಿರುವುದು 1913 ರಲ್ಲಿಯೇ. ಯಾವ ಯಾವ ರಾಷ್ಟ್ರಗಳು ಸಿನಿಮಾ ನಿರ್ಮಾಣದಲ್ಲಿ ಯಾವ ರೀತಿಯ ಶ್ರೇಣಿಯನ್ನು ಹೊಂದಿವೆ ಎನ್ನುವುದನ್ನು ಇಲ್ಲಿ ಕೊಟ್ಟಿರುವ ಪಟ್ಟಿಯಿಂದ ನಾವು ಗಮನಿಸಬಹುದಾಗಿದೆ. 2009 ರಲ್ಲಿ ಭಾರತದಲ್ಲಿ ಸುಮಾರು 1288 ಸಿನಿಮಾಗಳು ನಿರ್ಮಾಣವಾಗಿ ತೆರೆಗೆ ಬಂದಿವೆ. ಭಾರತವನ್ನು ಹೊರತು ಪಡಿಸಿದರೆ ಸಿನಿಮಾ ನಿರ್ಮಾಣದಲ್ಲಿ ಅಮೆರಿಕೆ ಎರಡನೆಯ ಸ್ಥಾನದಲ್ಲಿದೆ.

ಭಾರತ ಇಷ್ಟೊಂದು ಬೃಹತ್ ಸ್ವರೂಪದಲ್ಲಿ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿದೆಯಾದರೂ ಇಲ್ಲಿ ಹೂಡಲಾಗುವ  ಬಂಡವಾಳದ  ಪ್ರಮಾಣ ಮಾತ್ರ ತೀರಾ ಕಡಿಮೆ. 2010 ರ ಸಂದರ್ಭದಲ್ಲಿ ದೇಶದ ಚಿತ್ರೋದ್ಯಮದಲ್ಲಿ ವಿನಿಯೋಗಿಸಲಾದ ಒಟ್ಟು ಮೊತ್ತ 195 ಮಿಲಿಯನ್ ಡಾಲರ್. ಅಮೆರಿಕಾ ಅದೇ ವರ್ಷ ತೊಡಗಿಸಿದ ಹಣ 13289 ಮಿಲಿಯನ್ ಡಾಲರ್. ಅಂದರೆ ಭಾರತದ ಸಿನಿಮಾ ನಿರ್ಮಾಣದಲ್ಲಿ ಹೂಡಲಾದ ಒಟ್ಟು ಹಣದ ಸುಮಾರು ಐದು ಪಟ್ಟು. ಇದು ಇಂಗ್ಲಿಷ ಸಿನೇಮಾಗಳು ಖರ್ಚು ಮಾಡುವ ರೀತಿ.

1990 ರ ನಂತರ ಮುಕ್ತ ಮಾರುಕಟ್ಟೆಯ ನೆಲೆಯಲ್ಲಿ ಆರಂಭವಾದ ಆರ್ಥಿಕ ವಿದ್ಯಮಾನಗಳು ಸಹ ನಿರ್ಮಾಣ ತತ್ವದ ಅಡಿಯಲ್ಲಿimages ಸಿನಿಮಾಗಳು ನಿರ್ಮಾಣಗೊಳ್ಳಲು ಕಾರಣವಾದವು. ಉದಾಹರಣೆಗೆ ಸ್ಟುಡಿಯೋ 18 ಬ್ಯಾನರ್ ಅಡಿಯಲ್ಲಿ ಹೊರಬತ್ತಿರುವ ಸಿನಿಮಾಗಳು. ಅಮೇರಿಕಾದ ‘ವೈಕಾಮ್’ ಮತ್ತು ಭಾರತದ ‘ನೆಟ್ ವರ್ಕ್  18′ ಇವೆರಡರ ಸಹಯೋಗದಲ್ಲಿ ಅನೇಕ ಸಿನಿಮಾಗಳು ನಿರ್ಮಾಣಗೊಂಡಿವೆ. ಆದರೆ ಜಾಗತೀಕರಣದ ಪ್ರವ್ರತ್ತಿಗಳು ಸಿನಿಮಾ ಕ್ಷೇತ್ರದಲ್ಲಿ ಹಲವು ಗಂಭೀರ ಸ್ವರೂಪದ ನೇತ್ಯಾತ್ಮಕ ಪರಿಣಾಮಗಳನ್ನೂ ಕೂಡಾ ಕಾರಣಿಸಿವೆ. ಭಾರತದಲ್ಲಿರುವ ಸಣ್ಣ ಪುಟ್ಟ ಸ್ಟುಡಿಯೋಗಳನ್ನು ಜಾಗತೀಕರಣ ಅಳಿವಿನಂಚಿಗೆ ತಂದು ನಿಲ್ಲಿಸಿದೆ. ಡಿಜಿಟಲ್ ಸಿನಿಮಾ ಬಂದ ಮೇಲೆ ಕಿಂಡಿಯಲ್ಲಿ ಮುಖವಿಟ್ಟು ಸಿನೇಮಾ ಮೂಡಿಸುವ ಲಕ್ಷಗಟ್ಟಲೆ ಆಪರೇಟರಗಳು ನಿರುದ್ಯೋಗಿಗಳಾಗಿದ್ದಾರೆ. ಜಾಗತೀಕರಣದ ಫಲವಾಗಿ ಅನೇಕ ಕಲಾವಿದರು, ತಂತ್ರಜ್ಞರು ಜಾಗತಿಕ ಮಟ್ಟದಲ್ಲಿ ಕಾರ್ಯ ಮಾಡುವುದು ಸಾಧ್ಯವಾಗಿದೆಯಾದರೂ ಅದು ಉದ್ಯೋಗದ ನಿರಂತರತೆಯಂತೂ ಅಲ್ಲ. ಜೊತೆಗೆ ಸಣ್ಣ ಸಣ್ಣ ಕಂಪೆನಿಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಮೂಲಕ ಉದ್ಯಮದಲ್ಲಿ ಏಕಸ್ವಾಮ್ಯವನ್ನು ಸ್ಥಾಪಿಸುವ ಪ್ರಯತ್ನಗಳೂ ಕೂಡಾ ನಡೆಯುತ್ತಿವೆ.’ಸೋನಿ’ ಯಂಥಾ ಬಹು ಜನಪ್ರಿಯ ವಿದೇಶಿ ಕಂಪೆನಿಯು ಚೆನೈ ಮೂಲದ  ‘ಇಮೇಜ್ ವರ್ಕ್ಸ್’ ಸಂಸ್ಥೆಯನ್ನು ನುಂಗಿ ಹಾಕಿತು. ಸಣ್ಣ ಮೀನುಗಳನ್ನು ತಿಂದು ದೊಡ್ದ ಮೀನುಗಳು ಬೆಳೆಯುವ, ಬದುಕುವ ಕ್ರಮ ವಿಕಾಸವಾದದ ಸೂತ್ರವಲ್ಲವೇ?

ಈಗೀಗ ಅನೇಕ ಅಂತರರಾಷ್ಟ್ರಿಯ ಕಂಪನಿಗಳು ಭಾರತೀಯ ಚಿತ್ರೋದ್ಯಮದಲ್ಲಿ ಹಣ ಹೂಡಲು ಉತ್ಸುಕವಾಗಿವೆ. ಕಾರಣ ಈಗಾಗಲೇ ಹಣ ಹೂಡಿ ಗೆದ್ದ ಹಲವು ಕಂಪನಿಗಳು ಅವರ ಕಣ್ಣೆದುರಲ್ಲಿ ಉದಾಹರಣೆಯಾಗಿ ಉಳಿದಿವೆ. 2007 ರ ಸಂದರ್ಭದಲ್ಲಿ ಸೋನಿ ಕಂಪನಿ ಸಂಜಯ ಲೀಲಾ ಬನ್ಸಾಲಿ ಜೊತೆಗೂಡಿ ‘ಸಾವರಿಯಾ’ ಎನ್ನುವ ಸಿನಿಮಾ ಒಂದನ್ನು ತಯಾರಿಸಿತು. ಚಿತ್ರ ತೋಪಾದರೂ ಹೂಡಿದ ಹಣಕ್ಕೆ ಮಾತ್ರ ತೊಂದರೆಯಾಗಲಿಲ್ಲ. ಆಗಲೇ ವಿದೇಶಿ ಕಂಪನಿಗಳಿಗೆ ಭಾರತದ ಚಿತ್ರೋದ್ಯಮದಲ್ಲಿ ಹಣ ಹೂಡುವ ಹವಣಿಕೆ ಆರಂಭವಾಯಿತು. ಮುಂದೆ ವಾರ್ನರ್ ಬ್ರದರ್ಸ್ ಹಾಗೂ ರಮೇಶ ಸಿಪ್ಪಿ ಜೊತೆಗೂಡಿ ‘ಚಾಂದನಿ ಚೌಕ್ ಟು ಚೈನಾ’ ಎನ್ನುವ ಸಿನಿಮಾ ತಯಾರಿಸಿದರು. ಬರೀ ಅಮೇರಿಕಾ ಒಂದರಲ್ಲಿಯೇ ಆ ಸಿನಿಮಾ 1 ಮಿಲಿಯನ್ ಡಾಲರ್ ಹಣ ಕಮಾಯಿಸಿತು. ಹೀಗೆ ಈ ಜಾಗತೀಕರಣ ವಿಶ್ವದ ಹೆಬ್ಬಾಗಿಲಾಗಿರುವುದರಿಂದ ಚಿತ್ರೋದ್ಯಮ ಈಗ ಎಲ್ಲ ಬಗೆಯಲ್ಲಿ ಕಲಸುಮೇಲೋಗರವಾಗಿಬಿಟ್ಟಿದೆ. ನಿರ್ದೇಶಕ ಭಾರತೀಯನಾಗಿದ್ದರೆ, ಸ್ಟಂಟ್ ಮನ್ ಇಂಗ್ಲೆಂಡ್ ಪ್ರಜೆ, ಮೇಕಪ್ ಮನ್ ಕೆನಡಾದವನು, ಮ್ಯುಜಿಕ್ ರಶ್ಯಾ ದೇಶದವ.  ಹೀಗೆ ಇವತ್ತು ಎಲ್ಲವೂ ಹೈಬ್ರಿಡ್ ಮಯ.

ಇತ್ತೀಚಿನ ದಿನಗಳಲ್ಲಿ ಭಾರತೀಯ ಚಿತ್ರೋದ್ಯಮದಲ್ಲಿ ಗಣನೀಯ ಬದಲಾವಣೆಗಳಾಗಿವೆ. ಪ್ರತಿಭೆ ಇರುವವರಿಗೆ ಸೀಮೆಗಳೇ ಇಲ್ಲ. ಅವರನ್ನು ಇಡೀ ಜಗತ್ತೇ ಕರೆಯುವಂತಾಗಿದೆ. ಭಾರತದ ಅನೇಕರು ವಿದೇಶಗಳ ಚಿತ್ರಗಳಲ್ಲಿ ಕೆಲಸ ಮಾಡಿದರೆ ಅಲ್ಲಿಯ ಕೆಲ ತಂತ್ರಜ್ಞರು ಕೂಡಾ ನಮ್ಮಲ್ಲಿ ಕೆಲಸ ಮಾಡುತ್ತಿದ್ದಾರೆ. ಡ್ಯಾನಿ ಫೈಸ್ ಎನ್ನುವ ಕಲಾವಿದ ಋತಿಕ್ ರೋಷನ್ ನಟಿಸಿರುವ ‘ಕೈಟ್’ ಸಿನೇಮಾಕ್ಕೆ ಸಾಹಸ ನಿರ್ದೇಶನ ಮಾಡಿದ. ಆ ಚಿತ್ರದ ನಟಿ ಬಾರ್ಬರಾ ಮೋರಿ ಕೂಡಾ ಈ ನೆಲದವಳಾಗಿರಲಿಲ್ಲ. ಅಕ್ಷಯಕುಮಾರ್ ನಟಿಸಿರುವ ‘ಸಿಂಗ್ ಇಜ್ ಕಿಂಗ್’ ಸಿನಿಮಾದ ಹಿನ್ನೆಲೆ ಸಂಗೀತಕ್ಕೆ ಸ್ನೂಪ್ ಡಾಗ್ ಎಂಬಾತ ಕೆಲಸ ಮಾಡಿದ್ದ. ರಜನಿಕಾಂತ್ ಅವರ ‘ರೋಬೋಟ್’ ಸಿನಿಮಾದ ಕೆಲ ಅದ್ಭುತವಾದ ಆನಿಮೇಶನ್ ದೃಶ್ಯಗಳನ್ನು ಇಂಗ್ಲಂಡನ ಸ್ಟನ್ ವಿನಸ್ಟನ್ ಸ್ಟುಡಿಯೋದಲ್ಲಿ ಶೂಟ್ ಮಾಡಲಾಯಿತು. ಆ ಸಿನಿಮಾಕ್ಕಾಗಿ ಸುಮಾರು 38 ಮಿಲಿಯನ್ ಡಾಲರ್ ಹಣವನ್ನು ಖರ್ಚು ಮಾಡಲಾಗಿತ್ತು. ನಮ್ಮವರೇ ಆದ ಎ.ಆರ್. ರೆಹಮಾನ್ ‘ಸ್ಲಮ್ ಡಾಗ್..’ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುವ ಮೂಲಕ ಪ್ರಶಸ್ತಿ ಗೆದ್ದು ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ಹೈದರಾಬಾದಲ್ಲಿರುವ ರಾಮೋಜಿರಾವ್ ಫಿಲ್ಮ್ ಸಿಟಿಯಂತೂ ಅನೇಕ ಇಂಗ್ಲೀಷ್ ಸಿನಿಮಾಗಳ ತಯಾರಿಕೆಯಲ್ಲೂ ಹೆಸರು ಮಾಡಿದೆ. ಹೀಗೆ ಅಲ್ಲಿಯ ಪ್ರತಿಭೆಗಳು ಇಲ್ಲಿ, ಇಲ್ಲಿಯ ಪ್ರತಿಭೆಗಳು ಅಲ್ಲಿ ಮಿಂಚುವಲ್ಲಿ ಈ ಜಾಗತೀಕರಣ ಪ್ರಕ್ರಿಯೆ ನೆರವಾಗಿದೆ.

ಮುಂಬರುವ ದಿನಗಳಲ್ಲಿ ಬಹುತೇಕವಾಗಿ ದೊಡ್ದ ಬಜೆಟ್ ನ ಸಿನಿಮಾಗಳು ವಿದೇಶಿ ಕಂಪನಿಗಳ ಸಹಯೋಗದಲ್ಲಿಯೇ ತಯಾರಾಗಿ ಬಿಡುಗಡೆಯಾಗಲಿವೆ. ambani+spielbergಆ ಮೂಲಕ ಹಾಲಿವುಡ್ ಮತ್ತು ಬಾಲಿವುಡ್ ನಡುವಿನ ಅಂತರ ಬಹುತೇಕ ಕಡಿಮೆಯಾಗಲಿವೆ. ಈಗಾಗಲೇ ಬಾಲಿವುಡ್ ಸಿನಿಮಾಗಳಲ್ಲಿ ಇದರ ಸೂಚನೆಗಳು ಕಾಣಸಿಗುತ್ತಿವೆ. ನವಂಬರ್ 2010 ರ ಸಂದರ್ಭದಲ್ಲಿ ಪ್ಯಾರಾಮೌಂಟ್ ಸ್ಟುಡಿಯೋದಲ್ಲಿ ಹಾಲಿವುಡ್-ಬಾಲಿವುಡ್ ನಡುವಿನ ಸಂಬಂಧಗಳ ವಿಸ್ತರಣೆಯ ನೆಲೆಯಲ್ಲಿ ಒಂದು ಹೊಸ ಮನ್ವಂತರ ಸಾಧ್ಯವಾಗಬೇಕು ಎನ್ನುವ ನಿಟ್ಟಿನಲ್ಲಿ ಒಪ್ಪಂದ ಒಂದಕ್ಕೆ ಸಹಿ ಹಾಕಲಾಗಿದೆ. ಅನೇಕ ವಿದೇಶಿ ಕಂಪನಿಗಳ ಸಹಯೋಗದೊಂದಿಗೆ ಕೈ ಜೋಡಿಸಲು ಅನಿಲ ಅಂಬಾನಿಯವರು ಮುಂದೆ ಬಂದಿರುವುದು ಹಳೆಯ ಸುದ್ದಿ. ಅದಾಗಲೇ ಡ್ರೀಮ್ ವರ್ಕ್ಸ್ ಜೊತೆ ಸೇರಿ ವರ್ಷಕ್ಕೆ 5-6 ಸಿನಿಮಾಗಳನ್ನು ನಿರ್ಮಿಸುವ ಯೋಜನೆಯನ್ನು ರೂಪಿಸಲಾಗಿದೆ. ಆ ಕಾರಣಕ್ಕಾಗಿಯೇ ಅವರು 550 ಮಿಲಿಯನ್ ಡಾಲರ್ ಹಣವನ್ನು ತೊಡಗಿಸಿದ್ದಾರೆ. ಭವಿಷ್ಯದಲ್ಲಿ ಭಾರತೀಯ ಸಿನಿಮಾ ಕತೆಗಳು ವಿದೇಶಿಯರ ನಿರೀಕ್ಷೆಯನ್ನು ಗಮನದಲ್ಲಿರಿಸಿ ಹೊಸೆಯುವಂತಾದರೆ ಅಚ್ಚರಿ ಪಡಬೇಕಿಲ್ಲ. ಹಾಗೆಯೇ ಅನೇಕ ವಿದೇಶಿ ಕಂಪನಿಗಳು ಭಾರತದಲ್ಲಿ ಹೆಚ್ಚೆಚ್ಚು ಸಿನಿಮಾಗಳನ್ನು ಬಿಡುಗಡೆಗೊಳಿಸುವ, ಆ ಮೂಲಕ ಹಣ ಕಮಾಯಿಸುವ ಸನ್ನಾಹದಲ್ಲಿವೆ. ಚೈನಾದಂತಹ ರಾಷ್ಟ್ರ  ಒಂದು ವರ್ಷಕ್ಕೆ ಕೇವಲ 20 ರಷ್ಟು ವಿದೇಶಿ ಸಿನಿಮಾಗಳನ್ನು ಮಾತ್ರ ತನ್ನ ನೆಲದಲ್ಲಿ ಬಿಡುಗಡೆ ಮಾಡುತ್ತದೆ. ಆದರೆ ಭಾರತದಲ್ಲಿ ಮಾತ್ರ ಆ ಮಿತಿಯೇ ಇಲ್ಲ. ಹಾಗಾಗಿ ನಮ್ಮ ಸಿನಿಮಾಗಳ ಮೂಲಕ ತಮ್ಮ ಸಂಸ್ಕೃತಿಯನ್ನು ಪ್ರಸರಣ ಮಾಡುವ ಜೊತೆ ಜೊತೆಯಲ್ಲಿ ‘ಊಂಡೂ ಹೋದ ಕೊಂಡೂ ಹೋದ’ ಎನ್ನುವ ಸ್ಥಿತಿ ನಿರ್ಮಾಣವಾಗುವ ಸಂದರ್ಭದಲ್ಲಿ ನಾವಿದ್ದೇವೆ. ಇಲ್ಲಿ ನಮ್ಮ ಮುಂದೆ ಆಯ್ಕೆಗಳಿಲ್ಲ. ದಕ್ಕಿದ್ದನ್ನು ಸ್ವೀಕರಿಸುವುದಷ್ಟೇ ನಮಗಿರುವ ದಾರಿ.