Monthly Archives: March 2014

ಸಾಹಿತ್ಯವನ್ನು ಸಾಂಪ್ರದಾಯೀಕರಣಗೊಳಿಸುತ್ತಿರುವ ಕವಿಕುಲತಿಲಕರು

– ಬಿ.ಶ್ರೀಪಾದ ಭಟ್

ಯೇಟ್ಸ್ ಕವಿಯ ಒಂದು ಜನಪ್ರಿಯ ಕವಿತೆ

Crazy Jane Talks with the Bishop

I met the Bishop on the road
And much said he and I.
‘Those breasts are flat and fallen now,wbyeats
Those veins must soon be dry;
Live in a heavenly mansion,
Not in some foul sty.’

‘Fair and foul are near of kin,
And fair needs foul,’ I cried.
‘My friends are gone, but that’s a truth
Nor grave nor bed denied,
Learned in bodily lowliness
And in the heart’s pride.

‘A woman can be proud and stiff
When on love intent;
But Love has pitched his mansion in
The place of excrement;
For nothing can be sole or whole
That has not been rent.’

ಕನ್ನಡದ ಖ್ಯಾತ ಮಕ್ಕಳ ಸಾಹಿತಿ ಎಂದು ಬೆಂಗಳೂರು ಸುತ್ತಮುತ್ತ ಜಗತ್ಪ್ರಸಿದ್ಧಿ ಪಡೆದ ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಅವರು ಯೇಟ್ಸ್‌ನ ಮೇಲಿನ ಕವಿತೆಯನ್ನು ಈ ಕೆಳಗಿನಂತೆ ಅನುವಾದ ಮಾಡಿದ್ದಾರೆ. (ಕೃಪೆ : ಸಂಚಯ 103, ಜನವರಿ – ಫೆಬ್ರವರಿ 2014)

ಪಾದ್ರಿಗೆ ತಿಕ್ಕಲು ಜೀನ್ ಮಾಡಿದ ಬೋಧನೆ

ಬೀದಿಯಲ್ಲೊಬ್ಬ ಪಾದ್ರಿ ಸಿಕ್ಕು
ಅದೂಇದೂ ಮಾತನಾಡಿದೆವು

ಜೋತುಬೀಳುವವು ಮೊಲೆಗಳೊಂದು ದಿನ
ಒಳನಾಳಗಳು ಒಣಗುವವು
ಅದ್ದರಿಂದ ಬಾ ಭಗವಂತನ ದಿವ್ಯಸನ್ನಿಧಿಗೆ
ಬಿಟ್ಟು ಪಡುವ ಪಟ್ಟೆ ಪಲ್ಲಂಗ

ಸ್ವಾಮಿ ಭಗವಂತನ ಹೆಸರಲ್ಲೇ ಇದೆ ಭಗವು
ಭಗವಿಲ್ಲದೆ ಇಲ್ಲ ಭಗವಂತ
ಪಿತ್ತ ಕೆರಳಿ ಕೂಗಿದೆ ಆ ಪಾದ್ರಿಗೆ; ಮಲಗಲಿಕ್ಕೇನೆ
ಮಂಚವೂ ಚಿತೆಯೂ !

ಪುಟಿಯುವೆದೆಯ ತರುಣಿಗೆ ತುಪ್ಪಳದ ಮಂಚದೆಲ್ಲಂಥ ಪೊಗರು!
ಮೂತ್ರಾಮೇಧ್ಯವ ಬಿಡುವ ಕಡೆಯಲ್ಲೇ ಮತ್ತೆ ಪ್ರೀತಿಯ ಮಹಾ ಮಹಲ್ಲು!

ಒಂದನ್ನು ಬಿಟ್ಟೊಂದಿಲ್ಲ, ಈ ಅರಿವು
ತಮಗೂ ಆಗಲಿಕ್ಕುಂಟು!
ಭಗವೂ ಭಗವಂತನ ನಿವಾಸ
ನೆನಪಿಗಿರಲಿ ಉಡಿಯಲ್ಲೊಂದು ಗಂಟು

ಯೇಟ್ಸ್‌ನಂತಹ ಸೂಕ್ಷ್ಮ ಸಂವೇದನೆಯ, ಮಹಾನ್ ಕವಿಗೆ ಸಂಪೂರ್ಣ ಅಪಚಾರದಂತಿದೆ ಈ ಅನುವಾದ. ಹಿಂದೊಮ್ಮೆ “ಯೇಟ್ಸ್ ಮುಟ್ಟಿದರೆ ಮುನಿಯಂಥ ಕವಿ” ಎಂದು ಪಿ.ಲಂಕೇಶ್ ಹೇಳಿದ್ದರು. ಇಂತಹ ಕವಿಯ ಸಂವೇದನೆಗಳನ್ನು, ಒಳನೋಟಗಳನ್ನು, ಕವಿತೆಗಳ ಸಾಲುಗಳ ಧ್ವನಿಯನ್ನು ಅರ್ಥ ಮಾಡಿಕೊಳ್ಳದ ಈ ವೆಂಕಟೇಶಮೂರ್ತಿಗಳಂತಹ ಕವಿಗಳು ಅತ್ಯಂತ ಶುಷ್ಕವಾಗಿ, ಜಡವಾದ ಅನುವಾದ ಮಾಡಿದ್ದಾರೆ. ಇಲ್ಲಿ ಯೇಟ್ಸ್‌ನ ತಲ್ಲಣಗಳು ನಮ್ಮದಾಗದಿದ್ದರೆ ಇಂತಹ ಕೆಟ್ಟದಾದ ಅನುವಾದ ಸಾಧ್ಯವಷ್ಟೆ.

ಆಕೆ ಜೇನ್ ಎಂಬ ಹೆಸರಿನಿಂದ ಯೇಟ್ಸ್‌ನನ್ನು ನಿದ್ದೆಗೆಡಿಸಿದವಳು. ಯೇಟ್ಸ್ ತನ್ನ ಖಿನ್ನತೆಯ ದಿನಗಳಲ್ಲಿ ಈ ಜೇನ್‌ಳ ಮೇಲೆ ಪದ್ಯಗಳನ್ನು ಬರೆದ. ತನ್ನ ಸ್ನೇಹಿತನಿಗೆ ಬರೆವ ಪತ್ರದಲ್ಲಿ ಯೇಟ್ಸ್ “I have begun a longish poem called “wisdom” in the attempt to shake off “Crazy Jane” and I begun to think that I shall take to religion unless you save me from it.” ಎನ್ನುತ್ತಾನೆ.

ಯೇಟ್ಸ್‌ನ ಈ ಯಾವುದೇ ಸಂವೇದನೆಗಳು ಕನ್ನಡದ ಈ ಸೋ ಕಾಲ್ಡ್ ಮಕ್ಕಳ ಕವಿಗೆ ಅರ್ಥವಾದಂತಿಲ್ಲ. ನೋಡಿ ’ಜೇನ್’ ಎನ್ನುವ ಹೆಸರನ್ನೇ ತಿರುಚಿ ’ಜೀನ್’ ಎಂದು ಅನುವಾದ ಮಾಡಿದ್ದಾರೆ. ಅಲ್ಲಿಗೇ ಹೂರಣವು ಬಿದ್ದು ಹೋಯಿತು.

ಮೊದಲನೇ stanza ದಲ್ಲಿ ಜೇನ್‌ಳಿಗೆ ನೀನು ನಿನ್ನ ಹಳೆಯ ಉನ್ಮಾದದ, Lust ನ ದಿನಗಳನ್ನು ಬಿಟ್ಟು ಚರ್ಚಿನ ಕಡೆಗೆ ಬಾ ಎನ್ನುವ ಪಾದ್ರಿ ಮುಂದುವರೆದು ಹೇಳುವ those breasts are flat and fallen now ಎನ್ನುವ ಸಾಲುಗಳು ಅನುವಾದದಲ್ಲಿ “ಜೋತುಬೀಳುವವು ಮೊಲೆಗಳೊಂದು ದಿನ” ಎಂದಿದೆ. ಇದಕ್ಕೆ ವಿವರಣೆ ಬೇಕಿಲ್ಲ. ನಿನ್ನ ಮೊಲೆಗಳು ಜೋತು ಬಿದ್ದು ನೀನೀಗ ಮುದಿಯಾಗಿದ್ದೀಯ ಎಂದು ಪಾದ್ರಿ ಹೇಳುತ್ತಿದ್ದರೆ ಅದನ್ನು ಕನ್ನಡದ ಕವಿ “ಮುಂದೊಂದು ದಿನ ಮುದಿಯಳಾಗುತ್ತೀಯ” ಎಂದು ಅನುವಾದಿಸುತ್ತಾನೆ. ಸೂಕ್ಷ್ಮ ಓದುಗರಿಗೆ ಇಲ್ಲಿ ಸದರಿ ಕವಿಯ ಬಾಲಿಶ ಅನುವಾದ ಮಾಡಿದ ಅನಾಹುತದ ವಿವರಣೆ ಕೊಡಬೇಕೆ?

ಎರಡನೇ stanza ದಲ್ಲಿ opposite go together ಎನ್ನುವ ಅರ್ಥದಲ್ಲಿ ಜೇನ್ ಪಾದ್ರಿಗೆ ಉತ್ತರಿಸುತ್ತಾಳೆ: fair goes with foul. ಈ ವೆಂಕಟೇಶಮೂರ್ತಿಯವರು ಇದನ್ನು
’ಸ್ವಾಮಿ ಭಗವಂತನ ಹೆಸರಲ್ಲೇ ಇದೆ ಭಗವು
ಭಗವಿಲ್ಲದೆ ಇಲ್ಲ ಭಗವಂತ’ ಎಂದೆಲ್ಲ ಜಾಳು ಜಾಳಾಗಿ, ಸನಾತನವಾದಿಯಂತೆ ಅನುವಾದಿಸುತ್ತಾರೆ. ಅಪಾರವಾದ ಮುಕ್ತತೆಯನ್ನು, ಸೃಜನಶೀಲತೆಯನ್ನು, ಬದುಕಿನ ಸಂಕೀರ್ಣತೆಯ ಕುರಿತಾದ ಆಳವಾದ ಕಾಮನ್‌ಸೆನ್ಸ್ ಅನ್ನು ಬೇಡುವ ಜೇನ್‌ಳ ಇಂತಹ ಸಾಲುಗಳನ್ನು ಕಾವ್ಯರೂಪವಾಗಿ ಅನುವಾದಿಸುವಾಗ ಅನುವಾದಕ ಯೇಟ್ಸ್‌ನ ಸಂವೇದನೆಗಳಿಗೆ ಹತ್ತಿರವಿದ್ದು ಕವಿಯ ಭಾವಕೋಶದೊಳಗೆ ಪ್ರಯಾಣಿಸಿ ಅನುವಾದಿಸಬೇಕಾದಂತಹ ಸಂದರ್ಭದಲ್ಲಿ ಸದರಿ ಕವಿಗಳು ಮಾಡಿದ್ದಾರೂ ಏನು?? ಇಲ್ಲಿನ ಅಪಚಾರಗಳನ್ನು ಸೂಕ್ಷ್ಮ ಓದುಗರಿಗೆ ಇಲ್ಲಿ ಬಿಡಿಸಿ ಹೇಳಬೇಕಿಲ್ಲ.

ಮುಂದುವರೆದು ಜೇನ್ ತನ್ನ ಸ್ನೇಹಿತರು ತನ್ನಂತೆಯೇ ದೇಹವನ್ನು ತೀವ್ರವಾಗಿ ಆರಾಧಿಸಿದರೂ ಆ ಕಾರಣಕ್ಕಾಗಿ ಅವರಿಗೆ ಗೋರಿಗಳನ್ನು ನಿರಾಕರಿಸಿಲ್ಲ ಎಂದು ಮಾರ್ಮಿಕವಾಗಿ ನುಡಿಯುತ್ತಾಳೆ. Nor grave nor bed denied. ಇದರ ಅನುವಾದ ನೋಡಿ “ಪಿತ್ತ ಕೆರಳಿ ಕೂಗಿದೆ ಆ ಪಾದ್ರಿಗೆ; ಮಲಗಲಿಕ್ಕೇನೆ ಮಂಚವೂ ಚಿತೆಯೂ!” ಯಾರಾದರೂ ಯೇಟ್ಸ್‌ನನ್ನು ಈ ರೀತಿ ಅಸೂಕ್ಷ್ಮತೆಯಿಂದ, ಅಸಂಬದ್ಧವಾಗಿ ಕಿರುಚಾಡುತ್ತಾ, ಸಾಂಪ್ರದಾಯಿಕ ಮನಸ್ಥಿತಿಯಿಂದ ಮುಟ್ಟಲು ಸಾಧ್ಯವೆ?? ಮುಟ್ಟಿದರೆ ಅದು ಬೂದಿಯಾಗುವುದು ಖಂಡಿತ. ಇಲ್ಲಿ ಕನ್ನಡದ ಇಡೀ ಸಾಲುಗಳು ಬೂದಿಯಾಗಿವೆ.

ಮೂರನೇ stanza ದಲ್ಲಿ ಜೇನ್ ಪ್ರೀತಿಯ passion ನ ಕುರಿತಾಗಿ ಅದ್ಭುತವಾಗಿ ಮಾತನಾಡುತ್ತಾ ಹೋಗುತ್ತಾಳೆ. ‘A women can be proud and stiff When on love intent’. ಕೆಲವೊಂದನ್ನು ಕಳೆದುಕೊಂಡಾಗಲೇ ಮನುಷ್ಯ ತನ್ನ ಬದುಕಿನ ಪರಿಪೂರ್ಣತೆಯನ್ನು ಸಾಧಿಸಲು ಸಾಧ್ಯ ಎಂದು ಜೇನ್ ಅನುಭವದಿಂದ ಉದ್ಗರಿಸುತ್ತಾಳೆ. ಶೀಲದ ಪಾವಿತ್ರ್ಯದ ಪರಿಕಲ್ಪನೆಯನ್ನು ಅಪಮೌಲ್ಯಗೊಳಿಸಿದಾಗಲೇ ಪ್ರೀತಿಯನ್ನು ಮೊಗೆದು ಕುಡಿಯಲು ಸಾಧ್ಯವೆನ್ನುತಾಳೆ ಜೇನ್. ವ್ಯವಸ್ಥೆಯು ಒಳ್ಳೆಯತನದೊಂದಿಗೆ ಅನೈತಿಕತೆಯನ್ನು ಸಮಭಾವದಿಂದ ಸ್ವೀಕರಿಸಿದಾಗಲೇ ಅದು ಒಂದು ಯಶಸ್ವೀ ನಾಗರಿಕ ಸಮಾಜವೆನಿಸಿಕೊಳ್ಳುತ್ತದೆ ಎಂದು ಜೇನ್ ಹೇಳುತ್ತಾಳೆ.

ಇದನ್ನು ಈ ಕನ್ನಡದ ಕವಿಗಳು ಅರ್ಥ ಮಾಡಿಕೊಂಡಿರುವ ರೀತಿ ನೋಡಿ:
“ಒಂದನ್ನು ಬಿಟ್ಟೊಂದಿಲ್ಲ, ಈ ಅರಿವು
ತಮಗೂ ಆಗಲಿಕ್ಕುಂಟು!
ಭಗವೂ ಭಗವಂತನ ನಿವಾಸ
ನೆನಪಿಗಿರಲಿ ಉಡಿಯಲ್ಲೊಂದು ಗಂಟು”

ಯಾರಾದರೂ ನಮ್ಮನ್ನು ಈ ಕವಿಪುಂಗವರಿಂದ ಪಾರು ಮಾಡಿ !!!

ಜೇನ್‌ಳ ಫಿಲಾಸಫಿಯನ್ನು, ಸ್ವಗತವನ್ನು, ಕ್ರಿಯಾಶೀಲತೆಯನ್ನು, ಭಾವಕೋಶಗಳನ್ನು ಒಂದು ಹರಿಕತೆಯ ಅಸಂಬದ್ಧ hsvenkateshmurthyಪ್ರಲಾಪವನ್ನಾಗಿಸಿದ್ದಾರೆ ಈ ವೆಂಕಟೇಶಮೂರ್ತಿಗಳು. ಇಂತಹ ಸಾಂಪ್ರದಾಯಿಕ ಮನಸ್ಥಿತಿಯ ಕವಿ ಜೇನ್‌ಳನ್ನು ಮುಟ್ಟಲು ಸಾಧ್ಯವೇ?? ಸಾಧ್ಯವೇ ಇಲ್ಲ.

ಈ ಎಚ್.ಎಸ್.ವೆಂಕಟೇಶ್ ಮೂರ್ತಿಯವರು ಇನ್ನೂ ಹಲವಾರು ಕವಿತೆಗಳನ್ನು ಅನುವಾದಿಸಿದ್ದಾರೆ. ಆದರೆ ಇದನ್ನು ಓದಿ ಬೇರೆ ಅನುವಾದಗಳನ್ನು ಓದಲು ಧೈರ್ಯ ಬರಲಿಲ್ಲ. ಏಕೆಂದರೆ ಯೇಟ್ಸ್ ಮುಟ್ಟಿದರೆ ಮನಿ.

ಇದನ್ನು ಇಲ್ಲಿ ಬರೆಯಲು ಕಾರಣ ನನ್ನ ಆರಾಧ್ಯ ಕವಿ ಯೇಟ್ಸ್ ಸಂಪೂರ್ಣವಾಗಿ ಕುಲಗೆಟ್ಟಿದ್ದಕ್ಕೆ. ಮುಖ್ಯವಾಗಿ ವೆಂಕಟೇಶ್‌ಮೂರ್ತಿಗಳಂತಹ ಕವಿಗಳು ಇಂದು ಕನ್ನಡ ಸಾಹಿತ್ಯಲೋಕದಲ್ಲಿ ಪಡೆದುಕೊಳ್ಳುತ್ತಿರವ ಪ್ರಾಧಾನ್ಯತೆಯ ಹಿನ್ನೆಲೆಯಲ್ಲಿ ಇದನ್ನು ಬರೆಯಬೇಕಾಯಿತು. ಏಕೆಂದರೆ ಅಪ್ರಾಮಾಣಿಕತೆಗೆ, ಭಟ್ಟಂಗಿತನಕ್ಕೆ ಕುಖ್ಯಾತಿಯಾದ ನಮ್ಮ ಕನ್ನಡ ಸಾಹಿತ್ಯ ಲೋಕ ಇಂದು ವಟುಗಳ ನಿರಂತರ ಪ್ರಯತ್ನದಿಂದ ಬಹಳ ಜನಪ್ರಿಯರಾಗಿರುವ ವೆಂಕಟೇಶಮೂರ್ತಿಯವರನ್ನು (ಇವರ ಆತ್ಮೀಯ ಸ್ನೇಹಿತರು ಇಂದು ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿದ್ದಾರೆ ಬೇರೆ ) ನಿಷ್ಟುರ ಕಟ್ಟಿಕೊಳ್ಳುವುದು ಸಾಧ್ಯವೇ ಇಲ್ಲ. ಹೀಗಾಗಿ ಇವರು ಬರೆದದ್ದೇ ಭಗವದ್ಗೀತೆಯಾಗುವ ಅಪಾಯದ ದಿನಗಳಿವು.

ನಮ್ಮ ವಿಮರ್ಶಕರು ವೇದಿಕೆಗಳ, ಬಿರುದು ಬಾವಲಿಗಳ ಕುರಿತಾದ ಮೋಹಕತೆಯನ್ನು ತೊರೆದು ನಿಷ್ಠುರವಾದಿಗಳಾಗಬೇಕಾದಂತಹ ಅವಶ್ಯಕತೆ ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ.

ಮುಸ್ಲಿಮ್ ಲೇಖಕರ ಸಂಘದ ಕಾರ್ಯಕ್ರಮ ಹಾಗೂ ದಿನೇಶ್ ಅಮೀನ್ ಮಟ್ಟು ಭಾಷಣ

– ಇರ್ಷಾದ್

“ಮುಸ್ಲಿಮ್ ಲೇಖಕರ ಸಂಘ” ಶುಕ್ರವಾರ ಸಂಜೆ ಮಂಗಳೂರಿನಲ್ಲಿ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಹಾಗೂ ಹಿರಿಯ ಮುಸ್ಲಿಂ ಸಾಹಿತಿಗಳಿಗೆ ಸನ್ಮಾನ, ಜೊತೆಗೆ ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಕಾರ್ಯಕ್ರಮದ ಪ್ರಧಾನ ಭಾಷಣಕಾರರಾಗಿ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಆಗಮಿಸಿದ್ದರು. ಪ್ರಗತಿಪರ ಚಿಂತಕ, ಕೋಮುವಾದ ಮೂಲಭೂತವಾದ ವಿರೋಧಿ ಮನಸ್ಥಿತಿ ಹೊಂದಿರುವ ಹಾಗೂ ತಮ್ಮ ಮೊನಚಾದ ಬರಹಗಳಿಂದ ಜನರ ಹೃದಯ ಗೆದ್ದಿರುವ ದಿನೇಶ್ ಅಮೀನ್ ಮಟ್ಟು ಅವರ ಭಾಷಣದಲ್ಲಿ ಏನಿರಬಹುದು ಎಂಬ ಕುತೂಹಲದಿಂದ ನಾನೂ ಕಾರ್ಯಕ್ರಮಕ್ಕೆ ಹೋಗಿದ್ದೆ. ಅಮೀನ್ ಮಟ್ಟು ಅವರ ಮಾತುಗಳ ಕುರಿತಾಗಿ ಹೇಳೋದಕ್ಕಿಂತ ಮೊದಲು ಕೆಲವೊಂದು ವಿಚಾರಗಳ dinesh-amin-mattu-2ಕುರಿತಾಗಿ ಹೇಳಲೇ ಬೇಕಾಗುತ್ತದೆ.

ಕೆಲವು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ಸಾಹಿತ್ಯ ವಲಯದಲ್ಲಿ ಪ್ರಗತಿಪರ ಚಿಂತನೆ ಮಾಡುವ ಸಾಹಿತಿಗಳ ಬರಹಗಾರರ ದಂಡೇ ಇತ್ತು. ಬೊಳುವಾರು ಮುಹಮ್ಮದ್, ಫಕೀರ್ ಮುಹಮ್ಮದ್ ಕಟಪಾಡಿ, ಬಿ.ಎಮ್. ರಶೀದ್, ಸಾರಾ ಅಬೂಬಕ್ಕರ್, ಮುಂತಾದ ಪ್ರಗತಿಪರ ಬರಹಗಾರರು ಮುಸ್ಲಿಮ್ ಸಮಾಜದಲ್ಲಿರುವ ಮೂಲಭೂತವಾದತ್ವವನ್ನು ಖಂಡಿಸುವುದರ ಜೊತೆಗೆ ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯದ ಮೇಲೆ ಬಹುಸಂಖ್ಯಾತ ಕೋಮುವಾದಿಗಳಿಂದ ನಡೆಯುತ್ತಿರುವ ದೌರ್ಜನ್ಯದ ವಿರುದ್ಧವೂ ಧ್ವನಿ ಎತ್ತಿದವರು. ಆದರೆ ಈ ಎಲ್ಲಾ ಪ್ರಗತಿಪರ ಲೇಖಕರು ಮುಸ್ಲಿಂ ಸಮುದಾಯಕ್ಕೆ ಲೇಖಕರಾಗಿ ಕಂಡುಬಂದಿಲ್ಲ. ಬದಲಾಗಿ ಇವರ ಪ್ರಗತಿಪರ ಚಿಂತನೆ ಮುಸ್ಲಿಂ ಸಮುದಾಯದ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗತೊಡಗಿತು. ಪ್ರಸ್ತುತ ದಿನಗಳಲ್ಲಿ ಮುಸ್ಲಿಂ ಮಹಿಳೆಯರ ಪರಿಸ್ಥಿತಿ ಕುರಿತಾಗಿ ಧ್ವನಿ ಎತ್ತುವುದರ ಜೊತೆಗೆ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯದ ಕುರಿತಾಗಿಯೂ ಧ್ವನಿ ಎತ್ತುತ್ತಿರುವ ಲೇಖಕಿಯರಾದ Sara-Abubakarಸಾರಾ ಅಬೂಬಕ್ಕರ್, ಕೆ.ಶರೀಫಾ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಮುನೀರ್ ಕಾಟಿಪಳ್ಳ ಹಾಗೂ ಜೊಹರಾ ನಿಸಾರ್ ಅಹಮ್ಮದ್ ಅಂತವರನ್ನು ಜಮಾತೇ ಇಸ್ಲಾಂಮೀ ಹಿಂದ್ ಸಿದ್ದಾಂತ ಯಾವತ್ತೂ ಒಪ್ಪಿಕೊಳ್ಳುವುದಿಲ್ಲ. ಅವರ ಪಾಲಿಗೆ ಇವರೆಲ್ಲಾ ಧರ್ಮವಿರೋಧಿಗಳು. ಯಾಕೆಂದರೆ ಇವರುಗಳು ಧರ್ಮ ವಿಧಿಸಿರುವ ಕಟ್ಟುಪಾಡುಗಳೊಳಗಿಲ್ಲ. ಮುಸ್ಲಿಮ್ ಸಮಾಜದಲ್ಲಿರುವ ಬಹುಪತ್ನಿತ್ವದ ದುರುಪಯೋಗ ಹಾಗೂ ಅದರಿಂದಾಗುತ್ತಿರುವ ಅನಾಹುತಗಳು, ಮುಸ್ಲಿಮ್ ಮಹಿಳೆಯರ ಪರಿಸ್ಥಿತಿ, ಧಾರ್ಮಿಕ ಕಟ್ಟುಪಾಡುಗಳು, ಕುರುಡು ನಂಬಿಕೆಗಳಿಂದಾಗುತ್ತಿರವ ಅನಾಹುತಗಳ ಕುರಿತಾಗಿ ಸಾಕಷ್ಟು ಲೇಖನಗಳನ್ನು ಬರೆದವರು ಹಾಗೂ ಈ ಕುರಿತು ಬೆಳಕು ಚೆಲ್ಲಿದವರು. ಆದರೆ ಈ ಎಲ್ಲಾ ವಿಚಾರವಾದಿಗಳ ಕುರಿತಾಗಿ ಮುಸ್ಲಿಂ ಲೇಖಕರ ಸಂಘದ ನಿಲುವೇನು ಎಂಬುವುದಂತೂ ಸ್ಪಷ್ಟ.

ಯಾಕೆಂದರೆ “ಮುಸ್ಲಿಮ್ ಲೇಖಕರ ಸಂಘ” ಮುಸ್ಲಿಮ್ ಧಾರ್ಮಿಕ ಸಂಘಟನೆ ಜಮಾತೆ ಇಸ್ಲಾಂಮೀ ಹಿಂದ್ ಸಂಘಟನೆಯ ಹಿನ್ನೆಲೆಯಲ್ಲಿ ಕಾರ್ಯಾಚರಿಸುವಂತಹಾ ಸಂಘವಾಗಿದೆ. ಜಮಾತೆ ಇಸ್ಲಾಂ ಸಂಘಟನೆ ಧಾರ್ಮಿಕ ಮೂಲಭೂತವಾದವನ್ನು ಮೈಗೂಡಿಸಿಕೊಂಡಿರುವ ಸಂಘಟನೆ. ಜೊತೆಗೆ ಇಸ್ಲಾಂ ರಾಷ್ಟ್ರವನ್ನು ಪ್ರತಿಪಾದಿಸುವ ಸಂಘಟನೆಯಾಗಿದೆ. ಇನ್ನು ಸಂಘದ ಕಾರ್ಯಕ್ರಮದಲ್ಲಿ ಸನ್ಮಾನಿತಗೊಂಡ ಲೇಖಕರು ಕೂಡಾ ಜಮಾತ್ ಇಸ್ಲಾಮೀ ಹಿಂದ್ ಕಾರ್ಯಕರ್ತರು. (ಮರಿಯಮ್ಮ ಇಸ್ಮಾಯಿಲ್ ಹಾಗೂ ಎಸ್. ಅಬ್ದುಲ್ ಕರೀಮ್ ದಾವಣಗೆರೆ) ಈ ಎಲ್ಲಾ ವಿಚಾರಗಳನ್ನು ನೋಡಿಕೊಂಡು ಮುಸ್ಲಿಂ ಲೇಖಕರ ಸಂಘದ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಮಾತನಾಡಿದ ದಿನೇಶ್ ಅಮೀನ್ ಮಟ್ಟು ಅವರ ಮಾತುಗಳಲ್ಲಿ ನನಗೆ ಸಹಜ ಕುತೂಹಲವಿತ್ತು. ಯಾಕೆಂದರೆ ಮಹಿಳಾ ಪರ, ಕೋಮುವಾದತ್ವ, ಮೂಲಭೂತವಾದತ್ವ ವಿರೋಧಿ, ಪ್ರಗತಿಪರ ಚಿಂತನೆಗಳನ್ನು ಮೈಗೂಡಿಸಿಕೊಂಡಿರುವ ಅಮೀನ್ ಮಟ್ಟು ಇಲ್ಲಿ ಸಾಕಷ್ಟು ವಿಚಾರಗಳ ಕುರಿತಾಗಿ ಮಾತನಾಡೋದಿತ್ತು. ಆದರೆ ಅವರು ಇಲ್ಲಿ ತಮ್ಮ ನೈಜ್ಯ ಜವಾಬ್ದಾರಿಯನ್ನು ಪೂರ್ಣಗೊಳಿಸಿಲ್ಲ ಎಂದನಿಸಿದೆ.

ಮುಸ್ಲಿಂ ಲೇಖಕರ ಸಂಘದ ಕಾರ್ಯಕ್ರಮಕ್ಕೆ ಬಂದಂತಹಾ ಬಹುತೇಕ ಜನರಿಗೆ ಅಮೀನ್ ಮಟ್ಟು ಅವರ ಬರವಣಿಗೆ ಪ್ರಿಯವಾದುದು. ಯಾಕೆಂದರೆ ಅವರು ಆರ್.ಎಸ್.ಎಸ್ ನ್ನು ಹಾಗೂ ಪಿ.ಎಫ್.ಐ ಯನ್ನೂ ಖಂಡಿಸುತ್ತಾರೆ. ಈ ಕಾರಣಕ್ಕಾಗಿ ಮುಸ್ಲಿಂ ಲೇಖಕರ ಸಂಘದ ಕಾರ್ಯಕ್ರಮದ ಆಯೋಜಕರಾದ ಜಮಾತೇ ಇಸ್ಲಾಂಮೀ ಹಿಂದ್ ಹಾಗೂ ಕಾರ್ಯಕ್ರಮದಲ್ಲಿದ್ದಂತಹಾ ಜಮಾತ್ ಕಾರ್ಯಕರ್ತರೂ ಆರ್.ಎಸ್.ಎಸ್ ಹಾಗೂ ಪಿ.ಎಫ್.ಐ ಖಂಡಿಸುತ್ತಾರೆ. ಆದರೆ ಇಸ್ಲಾಂ ಧಾರ್ಮಿಕ ಮೂಲಭೂತವಾದವನ್ನಲ್ಲ. ಅದಕ್ಕಾಗಿ ಈ ಸಂಘಕ್ಕೆ ಮುಸ್ಲಿಂ ತೀವ್ರವಾದ ಸಂಘಟನೆ PFI-eventಪಿ.ಎಫ್.ಐ ಜೊತೆ ಜೊತೆಗೆ ಮುಸ್ಲಿಂ ಪ್ರಗತಿಪರ ಲೇಖಕರಾದ ಸಾರಾ ಅಬೂಬಕ್ಕರ್, ಬೊಳುವಾರು ಮೋಹಮ್ಮದ್ ಕುಌ, ಮುಹಮ್ಮದ್ ಕಟಪಾಡಿ ಅಂತಹಾ ಸಾಹಿತಿಗಳು ಮುಸ್ಲಿಂ ಸಾಹಿತಿಗಳಾಗಿ ಕಂಡಿಲ್ಲ. (ಹಿಂದೂ) ಎಡಪಂಥೀಯವಾದ ಹಾಗೂ ಪ್ರಗತಿಪರ ಚಿಂತನೆಗಳನ್ನು ಒಪ್ಪುವ ಈ ಮನಸ್ಥಿತಿ (ಮುಸ್ಲಿಮ್) ಎಡಪಂಥೀಯವಾದವನ್ನು, ಪ್ರಗತಿಪರ ಚಿಂತನೆಗಳನ್ನು ಒಪ್ಪಿಕೊಳ್ಳುವುದಿಲ್ಲ. ಬಹುಸಂಖ್ಯಾತ ಕೋಮುವಾದಿಗಳಿಂದ ದಬ್ಬಾಳಿಕೆ ಸಂದರ್ಭದಲ್ಲಿ ಜ್ಯಾತ್ಯಾತೀತರಾಗುವ ಈ ಮನಸ್ಥಿತಿ ಮುಸ್ಲಿಮ್ ಧಾರ್ಮಿಕ ವಿಚಾರಗಳು ಬಂದಾಗ ಪಕ್ಕಾ ಮೂಲಭೂತವಾದವನ್ನು ಪ್ರತಿನಿಧಿಸುತ್ತದೆ.

ಈ ಎಲ್ಲಾ ವಿಚಾರಗಳ ಕುರಿತಾಗಿ ಮಾಹಿತಿಯನ್ನು ಹೊಂದಿರುವ ದಿನೇಶ್ ಅಮೀನ್ ಮಟ್ಟು ಅವರು ಇಲ್ಲಿ ಮಾತನಾಡಬೇಕಾಗಿದ್ದು ಇಂಥಹಾ ವಿಚಾರಗಳನ್ನೇ. ಮುಸ್ಲಿಮ್ ಸಮುದಾಯದಲ್ಲಿರುವ ನ್ಯೂನತೆಗಳು, ಧರ್ಮದ ಹೆಸರಲ್ಲಿ ಹೇರಲ್ಪಡುತ್ತಿರುವ ಕಟ್ಟುಪಾಡುಗಳ ವಿರುದ್ಧ ಪ್ರಗತಿಪರ ನೆಲೆಯಲ್ಲಿ ಹೋರಾಟಗಳನ್ನು ನಡೆಸುವ ಹಾಗೂ ಧಾರ್ಮಿಕ ಮೂಲಭೂತವಾದತ್ವವನ್ನು ವಿರೋಧಿಸಿ ಬರವಣಿಗೆಗಳ ಮೂಲಕ ಧ್ವನಿ ಎತ್ತುವ ಮುಸ್ಲಿಂ ಲೇಖಕರ ಹೋರಾಟಗಾರರ ಪರಿಸ್ಥಿತಿ ಹೇಗಿದೆ? ಅವರನ್ನು ಮುಸ್ಲಿಂ ಸಮುದಾಯದ ಮೂಲಭೂತ ಮನಸ್ಥಿತಿಗಳು ನೋಡುತ್ತಿರುವ ದೃಷ್ಟಿಕೋನದಲ್ಲಿ ಆಗಬೇಕಾದ ಬದಲಾವಣೆಗಳು ಯಾವುವು ಎಂಬುವುದರ ಕುರಿತಾಗಿದೆ. ಮುಸ್ಲಿಂ ಲೇಖಕರ ಸಂಘದ ಬೆನ್ನೆಲುಬಾಗಿರುವ ಜಮಾತೇ ಇಸ್ಲಾಂಮೀ ಹಿಂದ್ ಧಾರ್ಮಿಕ ಸಂಘಟನೆ ಪ್ರಗತಿಪರ ಚಿಂತಕರು ಹಾಗೂ ಮಹಿಳಾ ಪ್ರಗತಿಪರತೆ ಕುರಿತಾಗಿ ತಳೆದಿರುವ ನಿಲುವುಗಳೇನು ಎಂಬುವುದರ ಕುರಿತಾಗಿರಬೇಕಿತ್ತು. ಮುಸ್ಲಿಂ ಪ್ರಗತಿಪರ ಲೇಖಕಿ ಸಾರಾ ಅಬೂಬಕ್ಕರ್ ಕುರಿತಾಗಿ ಜಮಾತ್ ಹೊಂದಿರುವ ನಿಲುವಿನ ಕುರಿತಾಗಿ ಸ್ಪಷ್ಟತೆ ಇರುವ ಅಮೀನ್ ಮಟ್ಟು ಅವರು ಕಾರ್ಯಕ್ರಮದ ಸಭಾಂಗಣದಲ್ಲಿ ತುಂಬಿದ ಸಾಹಿತ್ಯಾಭಿಮಾನಿಗಳ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿದರೇ ವಿನಹ ಜಮಾತ್ ನಂತಹಾ ಪ್ರಗತಿಪರ ಚಿಂತನೆಗಳ ವಿರೋಧಿ ಸಂಘಟನೆಯ ಕುರಿತಾಗಿ ಚಕಾರವೆತ್ತಿಲ್ಲ. ಈ ಹಿಂದೆ ಖ್ಯಾತ ಸಾಹಿತಿ ಹಾಗೂ ಬಂಡಾಯ ಬರಹಗಾರರಾದ devanurದೇವನೂರು ಜಮಾತೇ ಇಸ್ಲಾಂಮೀ ಹಿಂದ್ ಮುಸ್ಲಿಮ್ ರ ಆರ್.ಎಸ್.ಎಸ್ ಎಂಬ ಹೇಳಿಕೆಯನ್ನು ನಿಡಿದ್ದರು ಎಂಬುವುದನ್ನು ನಾವಿಲ್ಲಿ ಗಮನಿಸಬೇಕು. ಮಟ್ಟು ಅವರು ತಮ್ಮ ಭಾಷಣದಲ್ಲಿ ಹಿಂದೂ ಸಂಘಟನೆಗಳು ಹಿಂದೂ ಸಮಾಜದಲ್ಲಿದ್ದ ಕೆಲವೊಂದು ಆಚರಣೆಗಳ ವಿರುದ್ಧ ಹೇಗೆ ಧ್ವನಿಎತ್ತಬೇಕು ಎಂದು ವಿವರಣೆ ನೀಡಿದರೆ ಹೊರತು ಮುಸ್ಲಿಂ ಧಾರ್ಮಿಕ ಸಂಘಟನೆಗಳ ಸಮಾಜ ತಿದ್ದುವ ಕಾರ್ಯಗಳ ಕುರಿತಾಗಿ ಎಳ್ಳಷ್ಟೂ ಮಾತನಾಡಿಲ್ಲ. ಅವರ ಮಾತುಗಳ ಪ್ರಕಾರ ಸಾಹಿತ್ಯ ಧ್ವನಿ ಇಲ್ಲದವರ ಧ್ವನಿಯಾಗಬೇಕು. ಜನರ ನೋವುಗಳನ್ನು ಹೊರಹಾಕುವಲ್ಲಿ ಸಾಹಿತ್ಯ ಪಾತ್ರದ ಕುರಿತಾಗಿ ಉಲ್ಲೇಖಿಸಿದರೂ, ಸಾಹಿತ್ಯವನ್ನು ಧಾರ್ಮಿಕ ಕಟ್ಟುಪಾಡಿನಲ್ಲಿಟ್ಟು ಧಾರ್ಮಿಕ ಸಾಹಿತ್ಯ ಮಾತ್ರ ನೈಜ್ಯ ಸಾಹಿತ್ಯ ಉಳಿದೆಲ್ಲಾ ಅಶ್ಲೀಲ ಸಾಹಿತ್ಯ ಎಂಬ ಮನಸ್ಥಿತಿ ಹೊಂದಿರುವವರ ಕುರಿತಾಗಿ ಮಾತನಾಡದೇ ಇರುವುದು ನಿಜಕ್ಕೂ ಬೇಸರ ತಂದಿದೆ. ಇನ್ನು ಹಿಂದೂ ಧರ್ಮದಲ್ಲಿ ಪ್ರಗತಿಪರ ಚಿಂತನೆಗಳಿಗೆ ಅವಕಾಶವಿದೆ ಹಾಗೂ ಇಸ್ಲಾಂ ಧರ್ಮದಲ್ಲಿ ಪ್ರಗತಿಪರ ಚಿಂತನೆಗೆ ಅವಕಾಶವಿಲ್ಲ ಎಂಬ ಮಾತನ್ನಾಡುವ ಸಂದರ್ಭದಲ್ಲಿ ಪ್ರಗತಿಪರ ಚಿಂತನೆಗೆ ಎಳ್ಳಷ್ಟೂ ಅವಕಾಶವನ್ನು ನೀಡದ ಧಾರ್ಮಿಕ ಸಂಘಟನೆ ಜಮಾತೇ ಇಸ್ಲಾಂಮೀ ಹಿಂದ್ ಹಾಗೂ ಅವರ ಅಧೀನದಲ್ಲಿರುವ ಮುಸ್ಲಿಂ ಲೇಖಕರ ಸಂಘದ ನಿಲುವಿನ ಕುರಿತಾಗಿ ಚಕಾರವೆತ್ತದೇ ಇರುವುದು ಆಶ್ವರ್ಯ ಉಂಟುಮಾಡಿದೆ. ದಿನೇಶ್ ಅಮೀನ್ ಮಟ್ಟು ಅವರ ಈ ನಡೆ ಅವರ ನಿಲುವುಗಳಿಂದ ಪ್ರೇರಿತರಾಗಿ ಅವರನ್ನು ಹಿಂಬಾಲಿಸುವ ಅದೆಷ್ಟೋ ಜನರನ್ನು ತಪ್ಪುದಾರಿಗೆ ಎಳೆದಂತಾಗುತ್ತದೆ.