ಚುನಾವಣಾ ಬಹಿಷ್ಕಾರದ ಭಾರತ


– ಅರುಣ್ ಜೋಳದಕೂಡ್ಲಿಗಿ


 

ಚುನಾವಣೆ ಘೋಷಣೆಯಾಗುತ್ತಲೇ ಅದರ ಜತೆ ಚುನಾವಣಾ ಬಹಿಷ್ಕಾರದ ಸುದ್ದಿಗಳೂ ಬೆನ್ನತ್ತುತ್ತವೆ. ಇದು ಯಾವುದೊಂದು ಪಕ್ಷದ 1ಪರವಿರೋಧವೂ ಆಗಿರದೆ ಇಡೀ ವ್ಯವಸ್ಥೆಯ ಬಗೆಗಿನ ಸಿಟ್ಟಿನ ಭಾಗವಾಗಿರುತ್ತವೆ. ಈತನಕ ಈಡೇರದ ಬೇಡಿಕೆಯೊಂದನ್ನು ಮುಂದಿಟ್ಟು, ತತಕ್ಷಣಕ್ಕೆ ಈಡೇರಿಸುವ ಒತ್ತಡ ತಂದು ಚುನಾವಣೆಯನ್ನು ಬಹಿಷ್ಕರಿಸುವುದಿದೆ. ಈ ಸಲದ ಲೋಕಸಭಾ ಚುನಾವಣೆ ಘೋಷಣೆಯಾದ ನಂತರ ದೇಶದಾದ್ಯಂತ ಅಲ್ಲಲ್ಲಿ ಮತ ಬಹಿಷ್ಕಾರದ ವರದಿಗಳಾಗಿವೆ. ಈ ಬಹಿಷ್ಕಾರಕ್ಕಿರುವ ಕಾರಣಗಳನ್ನು ನೋಡಿದರೆ ಇಡೀ ದೇಶ ಎದುರಿಸುತ್ತಿರುವ ಪ್ರಮುಖ ಬಿಕ್ಕಟ್ಟುಗಳನ್ನು ಇವು ಬೆರಳು ಮಾಡಿ ತೋರುತ್ತವೆ. ಜನಸಾಮಾನ್ಯರು ಕನಿಷ್ಠ ಸೌಲಭ್ಯಗಳಿಗಾಗಿ ಪರದಾಡುತ್ತಿರುವ ಚಿತ್ರಗಳು ಸಾಲುಗಟ್ಟಿ ನಿಲ್ಲುತ್ತವೆ. ಈ ಚಿತ್ರಗಳ ಮಾತಿಗೆ ಕಿವಿಯಾದರೆ ಚುನಾವಣೆ ಬಹಿಷ್ಕಾರದ ಭಾರತದ ಬಹುರೂಪಗಳು ತೆರೆದುಕೊಳ್ಳುತ್ತವೆ.

ಸಾಮಾನ್ಯವಾಗಿ ಪ್ರಜಾಪ್ರಭುತ್ವ ಸರಕಾರದ ಚುನಾವಣಾ ಪದ್ದತಿಯನ್ನುPoll-Boycot ತಾತ್ವಿಕವಾಗಿ ವಿರೋಧಿಸುತ್ತಾ ಬಂದಿರುವ ನಕ್ಸಲರು ಪ್ರತಿ ಚುನಾವಣೆಗೂ ಮುನ್ನ ಮತ ಬಹಿಷ್ಕಾರದ ಕರೆ ಕೊಡುವುದಿದೆ. ನಕ್ಸಲ್ ನೆಲೆಯ ಕೆಲವು ಪ್ರದೇಶಗಳಲ್ಲಿಯೂ ಇದರ ವರದಿಯಾಗಿದೆ. ಮಾರ್ಚ್ 10 ರಂದು ಛತ್ತೀಸ್ ಘಡ್ ರಾಜ್ಯದ ಸೆಕ್ಯುರಿಟಿ ಫೋರ್ಸ್ ನ 16 ಜನರು ನಕ್ಸಲೈಟರ ಗುಂಡಿಗೆ ಬಲಿಯಾದರು. ಈ ಮೂಲಕ ಸಾಂಕೇತಿಕವಾಗಿ ನಕ್ಸಲ್ ನೆಲೆಯ ಎಂಟು ರಾಜ್ಯಗಳಲ್ಲಿ ಚುನಾವಣೆ ಬಹಿಷ್ಕರಿಸುವ ಸಂದೇಶವನ್ನು ಜನತೆಗೆ ರವಾನೆ ಮಾಡಿದಂತಾಗಿದೆ.

ಮಣಿಪುರದ ಮಾವೋಯಿಸ್ಟ್ ಕಮುನಿಷ್ಟ್ ಪಾರ್ಟಿ ಚುನಾವಣೆಯನ್ನು ಬಹಿಷ್ಕರಿಸುವ ತಿರ್ಮಾನವನ್ನು ಪ್ರಕಟಿಸಿದೆ. ಸದ್ಯಕ್ಕಿರುವ ಚುನಾವಣಾ ಮಾದರಿ ಜನತೆಯಲ್ಲಿ ಸಶಕ್ತ ಬದಲಾವಣೆ ತರುವಂತಿಲ್ಲ. ಭಾರತ ಕಂಡ ನೂರಾರು ಚುನಾವಣೆಗಳು ಆರಿಸಿದ ಜನಪ್ರತಿನಿಧಿಗಳ ಆಡಳಿತ ವೈಖರಿ ಬಡವ ಶ್ರೀಮಂತರ ಅಂತರವನ್ನು ಹೆಚ್ಚಿಸಿದೆಯೇ ವಿನಃ ಕಡಿಮೆ ಮಾಡಿಲ್ಲ ಎಂದು ಅದು ಬಹಿಷ್ಕಾರವನ್ನು ಸಮರ್ಥಿಸಿಕೊಂಡಿದೆ.

ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಯು, ನಿರೀಕ್ಷೆಯಂತೆ ಸ್ವತಂತ್ರ್ಯ ರಾಜ್ಯದ ಕನಸಿನ ಪ್ರದೇಶಗಳಲ್ಲಿ ಮತ ಬಹಿಷ್ಕಾರಗಳಿಗೆ ಕಾರಣವಾಗಿದೆ. ಮಹರಾಷ್ಟ್ರದ ಗದ್ಚಿರೋಲಿ ಜಿಲ್ಲೆಯ ಎಟಪಲ್ಲಿ ತಾಲೂಕಿನ 47 ಹಳ್ಳಿಗಳು ವಿದರ್ಭ ಪ್ರತ್ಯೇಕ ರಾಜ್ಯ ರಚನೆಯ ಕಾರಣಕ್ಕೆ ಮತಬಹಿಷ್ಕಾರ ಮಾಡಿವೆ. ರಾಷ್ಟ್ರೀಯ ಜನಹಿತವಾದಿ ಯುವ ಸಮಿತಿಯು ಇದರ Poll-Boycot-Newsನಾಯಕತ್ವ ವಹಿಸಿದೆ. ’ಪ್ರತ್ಯೇಕ ರಾಜ್ಯ ರಚನೆಯ ಬೇಡಿಕೆಯೊಂದಿಗೆ, ಇಲ್ಲಿನ ಆಡಳಿತ ನಮ್ಮ ಭಾಗಕ್ಕೆ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಸೋತಿದೆ, ಎಟಪಲ್ಲಿ ಭಾಗದ ಬುಡಕಟ್ಟುಗಳಿಗೆ ಯಾವುದೇ ಸೌಲಭ್ಯ ಕಲ್ಪಿಸಲಾಗಿಲ್ಲ” ಎಂದು ಆರೋಪಿಸಿ, ಪ್ರತ್ಯೇಕ ಅಹೇರಿ ಜಿಲ್ಲೆ ರಚನೆಗೂ ಒತ್ತಾಯಿಸಿದ್ದಾರೆ.

ಮುಂಬೈನ ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪುನರ್ವಸತಿ ಯೋಜನೆಯನ್ನು ವಿರೋಧಿಸಿ ಆ ಭಾಗದ ಆರು ಹಳ್ಳಿಗಳು ಚುನಾವಣೆಯನ್ನು ಬಹಿಷ್ಕರಿಸಿವೆ. ಈ ಜನರು ರಾಜಕಾರಣಿಗಳಲ್ಲಿ ಯಾವುದೆ ಭರವಸೆಯನ್ನಿಟ್ಟಿಲ್ಲ ಎಂದಿದ್ದಾರೆ. ಪುನರ್ವಸತಿ ಯೋಜನೆ ಮತ್ತು ಪರಿಹಾರದ ಕ್ರಮ ಅವೈಜ್ಞಾನಿಕವಾಗಿದ್ದು, 2009 ರಿಂದಲೂ ಈ ಜನರು ವಸತಿರಹಿತ ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ.

ಪುಣೆ ಭಾಗದ ಘೋರಪಡಿ ಮತ್ತು ಮುಂಧ್ವಾ ಭಾಗದ ಜನರು ಅತಿಯಾದ ಟ್ರಾಫಿಕ್ ಸಮಸ್ಯೆಗೆ ಬೇಸತ್ತು ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ. ಕಾರಣ ಎರಡು ರೈಲ್ವೆ ಬ್ರಿಡ್ಜ್ ನಿರ್ಮಾಣವಾದರೆ ಈ ಭಾಗದ ಟ್ರಾಫಿಕ್ ಸಮಸ್ಯೆ ಬಗೆಹರಿಯುತ್ತದೆ. ಆದರೆ ಐದಾರು ವರ್ಷಗಳಿಂದ ಈ ಸಮಸ್ಯೆಯಿದ್ದರೂ, ಬ್ರಿಡ್ಜ್ ಗಾಗಿ ಒತ್ತಾಯ ಪ್ರತಿಭಟನೆಗಳು ನಡೆದರೂ ಸರಕಾರ ನಮ್ಮ ಬೇಡಿಕೆಯನ್ನು ಈಡೇರಿಸುತ್ತಿಲ್ಲ. ಹಾಗಾಗಿ ನಾವು ಮತಚಲಾಯಿಸದೆ ವಿರೋಧಿಸುತ್ತೇವೆ ಎಂದು ಈ ಸಮಸ್ಯೆಯ ಹೋರಾಟಗಾರರು ಹೇಳುತ್ತಾರೆ.

ಮೇಘಾಲಯ ರಾಜ್ಯದ ಮಾವೈತ್ ಭಾಗದ ನೂರು ಹಳ್ಳಿಗಳು ಚುನಾವಣ ಬಹಿಷ್ಕರವನ್ನು ಘೋಷಿಸಿವೆ. “1965 ರಲ್ಲಿ ನಿರ್ಮಿಸಿದ ರಸ್ತೆಯನ್ನು ಈತನಕವೂ ಮರು ನಿರ್ಮಾಣ ಮಾಡಿಲ್ಲ. ಹಾಗಾಗಿ 50 ವರ್ಷಗಳಿಂದಲೂ ಹೊಸ ರಸ್ತೆಗಳನ್ನು ನಾವು ಕಂಡಿಲ್ಲ. ಹಳೆ ರಸ್ತೆಗಳ ರಿಪೇರಿಯನ್ನೂ ನೋಡಿಲ್ಲ.” ಎನ್ನುವುದು ಇಲ್ಲಿಯ ಜನರ ಅಳಲು. ಹಾಗಾಗಿ ಕನಿಷ್ಠ ಸೌಲಬ್ಯಗಳಿಗಾಗಿ ಸರಕಾರವನ್ನು ಒತ್ತಾಯಿಸಿದ್ದಾರೆ.

ಉತ್ತರ ಪ್ರದೇಶದ ಒಂದು ಲಕ್ಷದ ಎಪ್ಪತ್ತು ಸಾವಿರದಷ್ಟಿರುವ ಗುತ್ತಿಗೆ ಆಧಾರದ ಶಿಕ್ಷಕರು (ಶಿಕ್ಷಾ ಮಿತ್ರಾಸ್) ಚುನಾವಣೆ ಬಹಿಷ್ಕರಿಸಿದ್ದಾರೆ. 3,500 ರಷ್ಟು ಕನಿಷ್ಠ ವೇತನ ಪಡೆಯುತ್ತಿರುವ ಈ ಶಿಕ್ಷಕರು ಉತ್ತರ್ಖಾಂಡ್ ರಾಜ್ಯದಲ್ಲಿರುವ 13,000 ರೂ ವೇತನ ಮಾದರಿಯನ್ನು ಜಾರಿಗೊಳಿಸುವಂತೆ ಕೋರಿದ್ದಾರೆ. ಕಳೆದ ನವಂಬರ್ ನಿಂದ ವೇತನವಿಲ್ಲದ ಈ ಶಿಕ್ಷಕರನ್ನು ಚುನಾವಣೆಯ ಕೆಲಸಕ್ಕೂ ನಿಯೋಜಿಸಲಾಗಿದೆ. “ಸರಕಾರಿ ಲೆಕ್ಕದಲ್ಲಿ ನೌಕರರೇ ಅಲ್ಲದ ನಮ್ಮನ್ನು ಚುನಾವಣೆ ಕೆಲಸಕ್ಕೆ ನಿಯೋಜಿಸುವುದಾದರೂ ಯಾಕೆ?” ಎನ್ನುವುದು ಈ ಶಿಕ್ಷಕರ ಅಳಲು. ಅರುಣಾಚಲ ಪ್ರದೇಶದ ಸರ್ವ ಶಿಕ್ಷ ಅಭಿಯಾನದ ಶಿಕ್ಷಕರು ಕಳೆದ ಆರು ತಿಂಗಳಿಂದ ಸರಕಾರ ಸಂಬಳ ಕೊಡದಿರುವ ಕಾರಣ ಮುಂದುಮಾಡಿ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ. ಅಂತೆಯೇ ಮತಗಟ್ಟೆಯ ಕೆಲಸಕ್ಕೆ ಹಾಜರಾಗದಿರುವ ಬಗ್ಗೆ ಚುನಾವಣಾ ಅಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಈ ಬಾರಿಯ ಮತ ಬಹಿಷ್ಕಾರದಲ್ಲಿ ಬುಡಕಟ್ಟು ಸಮುದಾಯಗಳು ಎಚ್ಚೆತ್ತಿರುವುದು ಗಮನಿಸಬೇಕಾದ ಸಂಗತಿ. ಅಸ್ಸಾಂನ ಗರೊ ಸಮುದಾಯಕ್ಕೆ ಪ್ರತ್ಯೇಕ ಅಕಾಡೆಮಿ ರಚಿಸುವುದಾಗಿ ಮಾತು ಕೊಟ್ಟ ಅಲ್ಲಿನ ಮುಖ್ಯಮಂತ್ರಿ ಭರವಸೆಯನ್ನು ಉಳಿಸಿಕೊಂಡಿಲ್ಲ. ಹೀಗಾಗಿ ಗರೊ ಸಮುದಾಯ ಚುನಾವಣೆಯನ್ನು ವಿರೋಧಿಸಿದೆ. ಕಾಮರೂಪ ಮತ್ತು ಗೋಲ್ಪಾರ ಜಿಲ್ಲೆಯ 390 ಹಳ್ಳಿಗಳಲ್ಲಿ 3 ಲಕ್ಷದಷ್ಟಿರುವ ಈ ಸಮುದಾಯ ತಮ್ಮನ್ನು ಅಸ್ಸಾಂ ಸರಕಾರ ನಿರ್ಲಕ್ಷಿಸಿರುವ ಬಗ್ಗೆ ಕಿಡಿಕಾರಿದೆ. 

ಒಡಿಶಾ ರಾಜ್ಯದ ಕೊರಪುಟ್ ಜಿಲ್ಲೆಯ ಎರಡು ಲಕ್ಷದಷ್ಟು ಮತದಾರರಿರುವ ಐದು ಪ್ರಮುಖ ಬುಡಕಟ್ಟುಗಳು ಚುನಾವಣಾ ಬಹಿಷ್ಕಾರದ ನಿರ್ಧಾರ ಪ್ರಕಟಿಸಿವೆ. “ಈವರೆಗೂ ಬುಡಕಟ್ಟುಗಳಿಗೆ ಯಾವುದೇ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಒಡಿಶಾ ಸರಕಾರವು ಬುಡಕಟ್ಟು ಸಮುದಾಯಗಳನ್ನು ಕಡೆಗಣಿಸಿದೆ. ಇದಕ್ಕೆ ಪ್ರತಿಯಾಗಿ ನಾವು ಮತ ಚಲಾವಣೆಯನ್ನು ಮಾಡುವುದಿದಿಲ್ಲ.” ಎಂದು ಕೊರಪುಟ್ ಜಿಲ್ಲಾ ವನವಾಸಿ ಮಹಾಸಂಘದ ಅಧ್ಯಕ್ಷ ಗೋಕುಲ್ ಚಂದ್ರ ಕೋಡ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಸುತ್ತಮುತ್ತಣ ನೆಲೆಸಿದ ಲಿಂಬೂ ಸಮುದಾಯ ಚುನಾವಣೆಯನ್ನು ವಿರೋಧಿಸಿದೆ. 1.6 ಲಕ್ಷದಷ್ಟಿರುವ ಲಿಂಬೂ ಸಮುದಾಯದ ಬೇಡಿಕೆಗಳಿಗೆ ಪಶ್ಚಿಮ ಬಂಗಾಳ ಸರಕಾರ ಸ್ಪಂದಿಸುತ್ತಿಲ್ಲ ಎನ್ನುವುದು ಇವರ ಸಿಟ್ಟಿಗೆ ಕಾರಣ. ಲಿಂಬೂ ಸಮುದಾಯದ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸುವಂತೆಯೂ, ತಮ್ಮ ಲಿಂಬೂಗಳ ಆಡುಭಾಷೆಯನ್ನೇ ನಮ್ಮ ಮಕ್ಕಳು ಕಲಿಯುವ ಪಠ್ಯದಲ್ಲಿ ಅಳವಡಿಸಬೇಕೆಂದು ಈ ಸಮುದಾಯ ಬೇಡಿಕೆ ಸಲ್ಲಿಸುತ್ತಲೇ ಇದೆ.

ಉತ್ತರ ಪ್ರದೇಶದ ಬರೇಲಿಯ ಗಣೇಶನಗರದ ಮೂರು ಸಾವಿರದಷ್ಟು ಮತದಾರರು ನಾಗರಿಕ ಸೌಲಭ್ಯಗಳ ದುಸ್ಥಿತಿಯ ಕಾರಣಕ್ಕೆ ಮತ ಬಹಿಷ್ಕರಿಸಿದ್ದಾರೆ. ‘ನೀವು ಮತ ಯಾಚಿಸಿದರೆ, ನಾವು ಹೆಬ್ಬೆರಳನ್ನು ಕೆಳಗೆ ಮಾಡಿ ನಿಮ್ಮ ಸೋಲನ್ನು ಸೂಚಿಸುತ್ತೇವೆ’ ‘ನೀವು ಎಂಪಿ ಆಗುವ ಮೊದಲು, ಬನ್ನಿ ನಮ್ಮ ನಿಕೃಷ್ಟ ಬದುಕನ್ನೊಮ್ಮೆ ನೋಡಿ’, ‘ಓ ಅಥಿತಿಯೇ, ನಮ್ಮ ಮನೆಗೆ ಬರದಿರು, ನಮ್ಮ ಪ್ರದೇಶದಲ್ಲಿ ನೀರು ಬತ್ತಿ ಹೋಗಿದೆ’ ಮುಂತಾದ ಪೋಸ್ಟರುಗಳನ್ನು ಅಂಟಿಸಿ ವಿಭಿನ್ನವಾಗಿ ಪ್ರತಿಭಟಿಸಿದ್ದಾರೆ. “ಹತ್ತು ವರ್ಷಗಳಿಂದ ಚರಂಡಿಯ ಕಾಮಗಾರಿಯೇ ನಡೆದಿಲ್ಲ, ಇಡೀ ಏರಿಯಾ ಹಂದಿಗಳ ವಾಸಸ್ಥಾನವಾಗಿದೆ, ಪ್ರತಿ ಮನೆಯಲ್ಲಿಯೂ ಸಾಂಕ್ರಾಮಿಕ ರೋಗಕ್ಕೆ ತುತ್ತಾದ ಒಬ್ಬೊಬ್ಬ ರೋಗಿಗಳಿದ್ದಾರೆ. ಬಾಡಿಗೆದಾರರು ಮನೆಗಳನ್ನು ಖಾಲಿಮಾಡುತ್ತಿದ್ದಾರೆ. ಸ್ವಂತ ಮನೆಯವರಿಗೆ ಮನೆ ಮಾರುವುದೊಂದೇ ದಾರಿ.” ಎಂದು ಈ ಭಾಗದ ಸುನಿತಾ ಸಿಂಗ್ ಹೇಳುತ್ತಾರೆ.

ತಮಿಳುನಾಡಿನ ಪುಡುಕೊಟ್ಟಾಯ್ ಮುನಿಸಿಪಲ್ ವ್ಯಾಪ್ತಿಯ ಕಾಮರಾಜಪುರಂ ನಿವಾಸಿಗಳು ನಗರದಾದ್ಯಾಂತ ಚುನಾವಣೆ ಬಹಿಷ್ಕಾರದ ಪೋಸ್ಟರುಗಳನ್ನು ಅಂಟಿಸಿದ್ದಾರೆ. ಇವರ ಮುಖ್ಯ ಬೇಡಿಕೆ ಕಾಮರಾಜಪುರಂ ಭಾಗದಲ್ಲಿ ಸುಮಾರು ವರ್ಷಗಳಿಂದಲೂ ವಾಸಿಸುವ ನಿವಾಸಿಗಳ ಮನೆ ಜಾಗದ ಪಟ್ಟವನ್ನು ಕೊಡದಿರುವುದು. ಅಂತೆಯೇ ಮೂಲಭೂತ ಸೌಕರ್ಯಕ್ಕಾಗಿ ನಿರಂತರ ಬೇಡಿಕೆಗೆ ಸರಕಾರ ಸ್ಪಂದಿಸದಿರುವುದೇ ಕಾರಣ ಎನ್ನಲಾಗಿದೆ. ಈ ಭಾಗದ ಕಾಮರಾಜಪುರಂ ಯುವ ಸಂಘಟನೆಯು ಇದರ ಮುಂದಾಳತ್ವವನ್ನು ವಹಿಸಿದೆ. ಶ್ರೀಪೆರಂಬದೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಪಲ್ಲವಪುರಂ ಮುನಿಸಿಪಾಲಿಟಿ ವ್ಯಾಪ್ತಿಯ ನಿವಾಸಿಗಳು ಕೂಡ ಮೂಲಭೂತ ಸೌಕರ್ಯಗಳ ಕೊರತೆಯ ಕಾರಣಕ್ಕೆ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ.

ಕಳೆದ ಸಪ್ಟಂಬರ್ ನಲ್ಲಿ ದೇಶದಾದ್ಯಂತ ಆತಂಕ ಹುಟ್ಟಿಸಿದ ಮತೀಯ ಗಲಬೆಗೆ ತುತ್ತಾದ ಉತ್ತರ ಪ್ರದೇಶದ ಮುಜಾಫರ್ ನಗರದ ಜನರು ಚುನಾವಣೆಯ ಬಗ್ಗೆ ವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ. ಗಲಬೆ ಪ್ರದೇಶದಿಂದ ಸ್ಥಳಾಂತರಿಸಿದ 66 ಕುಟುಂಬಗಳು ಮತ ಬಹಿಷ್ಕರಿಸುವುದಾಗಿ ಹೇಳಿವೆ. “ನಾವು ನೊಂದಿದ್ದೇವೆ, ನಮಗೆ ಯಾವ ಸರಕಾರದ ಬಗೆಗೂ, ರಾಜಕಾರಣಿಗಳ ಬಗೆಗೂ ಭರವಸೆ ಉಳಿದಿಲ್ಲ.” ಎಂದಿದ್ದಾರೆ. ಗಲಭೆ ಕಾರಣಕ್ಕೆ ಸ್ಥಳಾಂತರಿಸಿದ ಕುಟುಂಬಗಳು ಶೆಡ್ಡುಗಳಲ್ಲಿ ಜೀವಿಸುತ್ತಿವೆ. ಅಲ್ಲಿ ಅವರ ಮತಪಟ್ಟಿಯೂ ಇಲ್ಲ. ಬದಲಾಗಿ ತಮ್ಮ ಊರುಗಳಿಗೆ ಹೋಗಿ ಮತ ಚಲಾಯಿಸುವ ಉತ್ಸಾಹವೂ ಅವರಲ್ಲಿಲ್ಲ.

ಕರ್ನಾಟಕದ ಮತ ಬಹಿಷ್ಕಾರದ ಸುದ್ದಿಗಳು ವಿಶಿಷ್ಟವಾಗಿವೆ. ತೆಲಂಗಾಣ ಪ್ರತ್ಯೇಕ ರಾಜ್ಯದ ಬಿಸಿ ಕರ್ನಾಟಕಕ್ಕೂ ಹಬ್ಬಿದೆ. ಕರ್ನಾಟಕದ ಮಡಿಕೇರಿPoll-Boycot-Karnataka ಜಿಲ್ಲೆಯಲ್ಲಿ ಪ್ರತ್ಯೇಕ ಕೊಡಗು ರಾಜ್ಯದ ಬೇಡಿಕೆ ಬಲ ಪಡೆದುಕೊಂಡಿದೆ. ಕೊಡವ ರಾಷ್ಟ್ರೀಯ ಮಂಡಳಿ (ಸಿ.ಎನ್.ಸಿ)ಈ ನೆಲೆಯಲ್ಲಿ ಚುನಾವಣೆ ಬಹಿಷ್ಕರಿಸುವ ಬೆದರಿಕೆ ಒಡ್ಡಿದೆ. ಅಂತೆಯೇ ತುಳುನಾಡು ಹೋರಾಟ ಸಮಿತಿಯೂ ಕಾರ್ಯ ಪ್ರವೃತ್ತವಾಗಿದೆ. ನೇತ್ರಾವತಿ ನದಿ ತಿರುವು ಯೋಜನೆಯನ್ನು ವಿರೋಧಿಸುವುದಾಗಿ ತುಳುನಾಡು ಪ್ರತ್ಯೇಕತಾವಾದಿಗಳು ಹೇಳಿದ್ದಾರೆ. ಈ ನೆಲೆಯಲ್ಲಿ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ..

ಮಾಜಿ ಯೋಧರು, ಹುತ್ಮಾತ್ಮರ ಕುಟುಂಬದವರಿಗೆ ಕನಿಷ್ಟ ನಿವೇಶನ ಕೊಡದ, ಅರ್ಜಿ ನೀಡಿದ್ದಕ್ಕೆ ಸ್ಪಂದನೆ ನೀಡದ ಸರಕಾರಕ್ಕೆ ಪಾಠ ಕಲಿಸಲು ಚುನಾವಣೆ ಬಹಿಷ್ಕಾರ ಹಾಕುವ ಎಚ್ಚರಿಕೆ ಮಾಜಿ ಸೈನಿಕರಿಂದ ಬಂದಿದೆ. ಮಳೆಗೆ ಹಾನಿಯಾದ ಬೆಳೆಗೆ ತಕ್ಷಣ ಪರಿಹಾರ ನೀಡದಿದ್ದರೆ ಲೋಕಸಭಾ ಚುನಾವಣೆ ಬಹಿಷ್ಕಾರ ಹಾಕುವುದಾಗಿ ಆಳಂದ ತಾಲೂಕಿನ ಬೆಳಮಗಿ ಗ್ರಾಮಸ್ಥರು ಹೇಳಿದ್ದಾರೆ.

ಪೌಲ್ಟ್ರಿ ಫಾರಂಗಳ ಅಸಮರ್ಪಕ ನಿರ್ವಹಣೆಯ ಕಾರಣಕ್ಕೆ ಹೆಚ್ಚುತ್ತಿರುವ ನೊಣಗಳ ಕಾಟದಿಂದ ಬೇಸತ್ತ ದಾವಣಗೆರೆ ಭಾಗದ ಬೆಳವನೂರು, ಹನುಮಂತಪುರ ಗ್ರಾಮಸ್ಥರು ಮತ ಬಹಿಷ್ಕರಿಸಿದ್ದಾರೆ. ಹಬ್ಬಕ್ಕೆ ಸಿಹಿ ಮಾಡಿದರೆ ನೊಣಗಳ ಸಮೂಹವೇ ದಾಳಿ ಇಡುತ್ತವೆ. ನೊಣಗಳಿಗೆ ಹೆದರಿ ಹಬ್ಬ ಮಾಡದಂತಾಗಿದ್ದೇವೆ. ಗ್ರಾಮದ ವ್ಯಾಪ್ತಿಯಲ್ಲಿ ಮೂರು ಸರ್ಕಾರಿ ಶಾಲೆಗಳಿದ್ದು, ಸೊಳ್ಳೆ ಪರದೆಯೊಳಗೆ ಮಕ್ಕಳ ಆಟ, ಊಟ, ಪಾಠ ನಡೆಯುವಂತಾಗಿದೆ. ಹಾಗಾಗಿ ಪೌಲ್ಟ್ರಿ ಫಾರಂಗಳನ್ನು ತೆರವುಗೊಳಿಸುವುದಕ್ಕೆ ಚುನಾವಣೆಗೆ ಬಹಿಷ್ಕಾರ ಹಾಕುವುದರ ಮೂಲಕ ಒತ್ತಡ ತರುವ ಪ್ರಯತ್ನ ಮಾಡುತಿದ್ದಾರೆ..

ಹಳೇಬೀಡು ಭಾಗದಲ್ಲಿ ಯಗಚಿ ಏತ ನೀರಾವರಿ ಕಾಮಗಾರಿ ಪೂರ್ಣಗೊಳಿಸಿ ಕೆರೆಗಳಿಗೆ ನೀರು ಹರಿಸದಿದ್ದಲ್ಲಿ ಲೋಕಸಭಾ ಚುನಾವಣೆ ಬಹಿಷ್ಕರಿಸಿ, ಚುನಾವಣ ಪ್ರಚಾರ ಮತ್ತು ಸಭೆ ಸಮಾರಂಭಗಳಿಗೆ ಅವಕಾಶ ಕೊಡದಿರುವ ಬಗ್ಗೆ ರೈತ ಸಂಘ ಎಚ್ಚರಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಸುತ್ತಮುತ್ತಲ ಇನಾಂ ಭೂಮಿಯ ಒತ್ತುವರಿ ತೆರವಿಗೆ ಅರಣ್ಯ ಇಲಾಖೆ ಕೃಷಿಕರಿಗೆ ನೋಟೀಸ್ ನೀಡಿದೆ. ಹಾಗಾಗಿ ಇನಾಂ ಭೂಮಿಯ ಸಂತ್ರಸ್ಥರು ಹೋರಾಟಕ್ಕೆ ಸಜ್ಜಾಗಿ ಚುನಾವಣೆ ಬಹಿಷ್ಕರಿಸುವ ಬೆದರಿಕೆ ಒಡ್ಡಿದ್ದಾರೆ.

ಸಕಲೇಶಪುರ ತಾಲೂಕಿನ ಯಸಳೂರು ಹೋಬಳಿ ಕೇಂದ್ರದಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು ಇಲ್ಲದಿದ್ದರೆ ಮತದಾನ ಬಹಿಷ್ಕರಿಸುವುದಾಗಿ ಈ ಭಾಗದ ಗ್ರಾಮಸ್ಥರು ಎಚ್ಚರಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಕಾರಟಗಿ ಸಮೀಪದ ಅಮಜೂರು ಕ್ಯಾಂಪ್, 10ನೇ ಕಾಲುವೆ ಕ್ಯಾಂಪ್, ಜನತಾ ಕಾಲೊನಿಗಳಲ್ಲಿ ಸತ್ತರೆ ಹೂಳಲು ಸ್ಮಶಾನವೆ ಇಲ್ಲ. 60 ವರ್ಷಗಳಿಂದ ಸ್ಮಶಾನದ ಜಾಗಕ್ಕಾಗಿ ಈ ಜನರು ಪರದಾಡುತ್ತಿದ್ದಾರೆ. ಹಾಗಾಗಿ ಈ ಬಾರಿ ಸ್ಮಶಾನಕ್ಕಾಗಿ ಮತ ಬಹಿಷ್ಕರಿಸುತ್ತಿದ್ದಾರೆ.

ಸಿದ್ದಾಪುರ ಸಮೀಪದ ಮಾಲ್ದಾರೆ ಗ್ರಾಮ ಪಂಚಾಯಿತಿಗೆ ಒಳಪಡುವ ಅಂಚೆತಿಟ್ಟು ಗಿರಿಜನ ಹಾಡಿಯಲ್ಲಿ ಜೇನುಕುರುಬ, ಸೋಲಿಗ, ಪಂಜಿಎರವ ಜನಾಂಗದವರು ವಾಸಿಸುತ್ತಿದ್ದು, ಮೂಲಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಪಡಿತರ ಧಾನ್ಯಕ್ಕೆ ಕಾಡಿನಿಂದ ಮಾಲ್ದಾರೆಗೆ 3 ಕಿ.ಮೀ. ನಡೆಯಬೇಕು. ಸೀಮೆಎಣ್ಣೆ ಸಿಗದೆ ಬದುಕು ಕತ್ತಲಾಗಿದೆ. ಚುನಾವಣೆ ವೇಳೆ ಭರವಸೆ ನೀಡುವ ಜನಪ್ರತಿನಿಧಿಗಳು ಮತ್ತೆ ಕಾಣಿಸಿಕೊಳ್ಳುವುದಿಲ್ಲ ಎಂಬುದು ವನವಾಸಿಗಳ ಆರೋಪ. ಹಾಗಾಗಿ 30ಕ್ಕೂ ಹೆಚ್ಚು ಕುಟುಂಬಗಳು ಮೂಲಸೌಲಭ್ಯಕ್ಕೆ ಆಗ್ರಹಿಸಿ ಮತದಾನ ಬಹಿಷ್ಕರಿಸಿದ್ದಾರೆ.

ಈ ವಿರೋಧದ ಬಹುರೂಪಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ನಿಜ ಮುಖಗಳನ್ನು ಕಾಣಿಸುತ್ತಿವೆ. ಇಲ್ಲಿನ ಬಹುಪಾಲು ಪ್ರತಿರೋಧ ದಾಖಲಾಗಿರುವುದು ರಸ್ತೆ, ನೀರು ಒಳಗೊಂಡಂತೆ ಕನಿಷ್ಠ ಸೌಲಭ್ಯಗಳಿಗಾಗಿ ಎನ್ನುವುದನ್ನು ನೆನಪಿಡಬೇಕು. ಅಂತೆಯೇ ಈ ಬೇಡಿಕೆಗಳು ದಿಢೀರನೆ ಹುಟ್ಟಿದವುಗಳಲ್ಲ, ಬದಲಾಗಿ ಶಾಶ್ವತವಾಗಿ ಕುರುಡು/ಕಿವುಡಾದ ಸರಕಾರವನ್ನು ಎಚ್ಚರಿಸುವ ಭಾಗವಾಗಿ ಹುಟ್ಟಿದವು. ಈ ಬಹಿಷ್ಕಾರಗಳ ಹಿಂದೆ, ಚುನಾಯಿತ ಅಭ್ಯರ್ಥಿಯು ಮತ್ತೆ ಸಿಗುವುದಿಲ್ಲ, ನಮ್ಮ ಸಮಸ್ಯೆಗಳನ್ನು ಆಲಿಸುವುದಿಲ್ಲ ಎನ್ನುವ ಆತಂಕವಿದೆ. ಇದು ಚುನಾವಣಾ ವ್ಯವಸ್ಥೆಯ ಬಗೆಗೆ, ಪ್ರಜಾಪ್ರಭುತ್ವ ಸರಕಾರಗಳ ಬಗೆಗೆ ಜನರಲ್ಲಿ ವಿಶ್ವಾಸ ಕಡಿಮೆಯಾಗುತ್ತಿರುವುದನ್ನು ತೋರಿಸುತ್ತಿದೆ.

ಘೋಷಿತ ಮತ ಬಹಿಷ್ಕಾರದಂತೆ, ಅಘೋಷಿತವಾಗಿ ಮತ ಚಲಾಯಿಸದೆ ನುಣುಚಿಕೊಳ್ಳುವ ಜನರ ಸಂಖ್ಯೆಯೂ ದೊಡ್ಡದಿದೆ. ಹಾಗಾಗಿಯೇ ಶೇ 30 ಯಾ 20 ರಷ್ಟು ಮತ ಚಲಾಯಿಸದ ಪ್ರಜೆಗಳು ತಮ್ಮೊಳಗೆ ಮತ ಬಹಿಷ್ಕಾರದ ಸಾತ್ವಿಕ ಸಿಟ್ಟನ್ನು ಪ್ರಕಟಿಸುತ್ತಿರಬಹುದು. ಈ ಬಗೆಯ ಪ್ರತಿರೋಧಗಳು ಚುನಾಯಿತ ಸದಸ್ಯರಿಗೆ ಪ್ರಾಥಮಿಕ ಪಾಠಗಳಾಗಬೇಕಿದೆ. ಈ ಪಾಠಗಳಿಂದ ಅವರು ಕಲಿಯುವುದು ಸಾಕಷ್ಟಿದೆ. ಈಗಿರುವ ಸ್ಥಿತಿಯನ್ನು ನೋಡಿದರೆ ‘ಕಲಿಯುತ್ತಾರೆ’ ಎಂದು ಭಾವಿಸುವುದು ಕೂಡ ಹಾಸ್ಯಾಸ್ಪದ ಸಂಗತಿಯಂತೆ ಕಾಣುತ್ತಿದೆ.

Leave a Reply

Your email address will not be published. Required fields are marked *