Daily Archives: April 6, 2014

“ಕಿವಿ ಮತ್ತು ಕಣ್ಣಿನ ತಜ್ಞರು ತುರ್ತಾಗಿ ಬೇಕಾಗಿದ್ದಾರೆ”


-ಬಿ. ಶ್ರೀಪಾದ್ ಭಟ್


ಪ್ರಸೂನ್ ಜೋಶಿ ಎನ್ನುವ ಸೂಕ್ಷ್ಮ ಸಂವೇದನೆಯ ಕವಿ  (ನಿಜಕ್ಕೂ ಈತನೇ ಬರೆದನಾ ಎಂದು ಅಘಾತವಾಗುತ್ತದೆ) ಬಿಜೆಪಿ ಪಕ್ಷದ ಪ್ರಚಾರಕ್ಕಾಗಿ ಸೌಗಂಧ್ ( ಪ್ರತಿಜ್ಞೆ) ಎನ್ನುವ ಕವನವನ್ನು ಬರೆದುಕೊಟ್ಟಿದ್ದಾನೆ.ಇದರ ಕೆಲವು ಸಾಲುಗಳು ಹೀಗಿವೆ

ಈ ಮಣ್ಣಿನೊಂದಿಗೆ ನನ್ನದೊಂದು ಪ್ರತಿಜ್ಞೆ ಇದೆ
ನಾನು ದೇಶವನ್ನು ನಾಶವಾಗಲು ಬಿಡುವುದಿಲ್ಲ
ನಾನು ದೇಶವನ್ನು ನಾಶವಾಗಲು ಬಿಡುವುದಿಲ್ಲ
ನಾನು ದೇಶವನ್ನು ಮಂಡಿಯೂರಲು ಬಿಡುವುದಿಲ್ಲ
ನಾನು ಭಾರತಮಾತೆಗೆ ವಚನ ನೀಡುತ್ತೇನೆ
’ನಿನ್ನ ಶಿರವನ್ನು ತಗ್ಗಿಸಲು ಬಿಡುವುದಿಲ್”
ಈ ಬಾರಿ ಏನೇ ಆಗಲಿ ದೇಶವನ್ನು ನಾಶವಾಗಲು ಬಿಡುವುದಿಲ್ಲ.

ಇದರಲ್ಲಿನ ಅನೇಕ ಸಾಲುಗಳನ್ನು ನರೇಂದ್ರ ಮೋದಿಯ ಧ್ವನಿಯಲ್ಲಿ ಹೇಳಿಸಲಾಗಿದೆ. ಇದು ದೇಶದ ಎಲ್ಲ ಎಫ್ಎಮ್ ಚಾನಲ್ ಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ modi_hindu_nationalistಬಿತ್ತರಗೊಳ್ಳುತ್ತಿದೆ. ಸೂಕ್ಷ್ಮವಾಗಿ ಗಮನಿಸಿದರೆ ಚುನಾವಣಾ ಪ್ರಚಾರಕ್ಕಾಗಿ ದೇಶವನ್ನು ಈ ರೀತಿ ರಾಷ್ಟ್ರೀಯತೆಯೊಂದಿಗೆ ಸಮೀಕರಿಸಿ ಬಳಸಿಕೊಂಡಿರುವುದು ಮೇಲ್ನೋಟಕ್ಕೆ ಗೋಚರಿಸುತ್ತದೆ. ಇಲ್ಲಿ ಅವಶ್ಯಕತೆ ಇಲ್ಲದಿದ್ದರೂ ’ದೇಶವನ್ನು ನಾಶವಾಗಲು ಬಿಡುವುದಿಲ್ಲ’, ’ತಲೆ ತಗ್ಗಿಸಲು ಬಿಡುವುದಿಲ್ಲ’, ’ನನ್ನ ಪ್ರತಿಜ್ಞೆ ’ ಎನ್ನುವಂತಹ ಪ್ರಚೋದನಾಕಾರಿ ಸ್ಲೋಗನ್ ಗಳನ್ನು ಪ್ರಚಾರದ ಹೆಸರಿನಲ್ಲಿ ಬಳಕೆಗೆ ತಂದಿರುವ ಅಂಶ ತಿಳಿಯುತ್ತದೆ. ಬೇರೆ ಸಂದರ್ಭದಲ್ಲಿ ಯಾವುದೋ ಒಂದು ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಡಲು ತಮ್ಮ ಪ್ರಜೆಗಳನ್ನು ಹುರಿದಂಬಿಸಲು ಈ ರೀತಿಯಾಗಿ ಕವನಗಳು ಬಳಕೆಯಾಗಲ್ಪಡುತ್ತವೆ. ಆದರೆ ಇಂಡಿಯಾಗೆ ಸ್ವಾತಂತ್ರ ಬಂದು 67 ವರ್ಷಗಳಾದವು. ಇಂಡಿಯಾದಲ್ಲಿ ಪ್ರಜಾಪ್ರಭುತ್ವ ನೆಲೆಗೊಂಡು 67 ವರ್ಷಗಳಾದವು. ಸದ್ಯಕ್ಕಂತೂ ಯಾವುದೇ ಯುದ್ಧದ ಭೀತಿಯಿಲ್ಲ. ಆದರೂ ಯಾಕಿಂತಹ ಮತೀಯವಾದದ ಪ್ರಚೋದನಾತ್ಮಕ ಹಾಡು?

ಇದು ಶುದ್ಧ ಆರೆಸ್ಸೆಸ್ ನ ಕೋಮುವಾದಿ ಶೈಲಿ. ಒಂದೆಡೆ ರಾಷ್ಟ್ರೀಯವಾದವೇ ಒಂದು ಬಗೆಯಲ್ಲಿ ಮತೀಯವಾದವನ್ನು ಪ್ರತಿನಿಧಿಸುತ್ತಿದ್ದರೆ ಇನ್ನೊಂದೆಡೆ ಆರೆಸಸ್ ನಾವೆಲ್ಲಾ ಹಿಂದೂ ರಾಷ್ಟ್ರೀಯವಾದಿಗಳು ಎಂದು ಪ್ರಚಾರ ಮಾಡುತ್ತಿರುವುದು ಮುಂದಿನ ಕ್ಷೊಭೆಯ ದಿನಗಳ ಮುನ್ಸೂಚನೆಯಂತಿದೆ. ಈ ಹಿಂದೂ ರಾಷ್ಟ್ರೀಯವಾದದ ಮುಂದುವರೆದ ಭಾಗವಾಗಿಯೇ ಕಾಶ್ಮೀರದ ರಕ್ತಸಿಕ್ತ ನೆಲದಲ್ಲಿ ನಿಂತು ಮೋದಿ, ಏಕೆ 47, ಏಕೆ ಅಂಟೋನಿ, ಏಕೆ 49 ಎಂದು ನೆತ್ತರ ದಾಹದಿಂದ ಮಾತನಾಡಿದ್ದು. ಹಾಗಿದ್ದರೆ ದಲಿತರ, ಆದಿವಾಸಿಗಳ ಪಾಡನ್ನು ಕೇಳುವವರು ಯಾರು? ಅಲ್ಪಸಂಖ್ಯಾತರ ಮುಂದಿನ ಬದುಕು ಹೇಗೆ? ರೈತರು ಭವಿಷ್ಯವೇನು? ಮಹಿಳೆಯ ಬವಣೆಗಳ ಕತೆ ಏನು? ಇವೆಲ್ಲವಕ್ಕೆ ಉತ್ತರವೆಂದರೆ ಮೇಲಿನ ಮತಿಯವಾದದ ರಾಷ್ಟ್ರೀಯವಾದಿ ಹಾಡು. ಅಂದರೆ  ದೇಶ ಇಂದು ಸಂಕಷ್ಟದಲ್ಲಿದೆ. ಹಿಂದುತ್ವ ಅಪಾಯಕ್ಕೊಳಗಾಗಿದೆ. ಹೀಗಾಗಿ, ಮೇಲಿನ ಪ್ರಶ್ನೆಗಳನ್ನು ಕೇಳಬೇಡಿ ಎನ್ನುವಂತಿದೆ ಮತೀಯವಾದಿ ರಾಷ್ಟ್ರೀಯವಾದದ ಹಾಡು.

ಅಷ್ಟಕ್ಕೂ 2014ರ ಪ್ರಜಾಪ್ರಭುತ್ವದ ಚುನಾವಣೆಯನ್ನೇ ಒಂದು ಯುದ್ಧವೆಂದು ಪರಿಗಣಿಸಿದೆಯೇ ಸಂಘಪರಿವಾರ? ಸೋಷಿಯಾಲಜಿಸ್ಟ್ ಶಿವ ವಿಶ್ವನಾಥನ್ ಅವರು ಹೇಳುತ್ತಾರೆ “ಈ ಹಾಡು ಟೈಮ್ಸ್ ನೌ ಛಾನಲ್ ನ ಅರ್ನಾಬ್ ಗೋಸ್ವಾಮಿಗೆ ಹುಟ್ಟುಹಬ್ಬದ ಹಾಡಿನಂತಿದೆ. ಇದು ಪ್ರಧಾನ ಮಂತ್ರಿ ಆಗಲುಬಯಸುವ ಅಭ್ಯರ್ಥಿಗಂತೂ ಅಲ್ಲ. ಯುವ ಜನತೆ ಜಾಗತಿಕವಾಗಿ ಚಿಂತಿಸುತ್ತಿರುವ ಇಂದಿನ ಸಂದರ್ಭದಲ್ಲಿ ಈ ಹಾಡು ಬಿಜೆಪಿಯಿಂದ ಬಂದಿದೆ” ( ಔಟ್ಲುಕ್ 2,ಎಪ್ರಿಲ್ 2014).

ಅಲ್ಲವೇ? ಸದರಿ ಮೋದಿಯೇ ವಿದೇಶಿ ಕಂಪನಿಗಳ ಬಂಡವಾಳ ಹೂಡಿಕೆಯ ಪರವಾಗಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಈ ವಿದೇಶಿ ಕಂಪನಿಗಳನ್ನು ಬಂಡವಾಳ ಹೂಡಿಕೆಗಾಗಿ ಓಲೈಸಲಾಗುತ್ತಿದೆ. ಇನ್ನು ಸೋ ಕಾಲ್ಡ್ ಮಧ್ಯಮ ಮತ್ತು ಮೇಲ್ವರ್ಗ ಮೋದಿಯನ್ನು ಬೆಂಬಲಿಸುತ್ತಿರುವುದು ಸಹ ಈ ಬಂಡವಾಳಶಾಹಿಯ ಜಾಗತೀಕರಣದ ಕಾರಣಕ್ಕಾಗಿ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಿದ್ದರೆ ಸಂಘ ಪರಿವಾರದ ಪ್ರಣಾಳಿಕೆಗಳಲ್ಲಿ ಅದಕ್ಕೆ ವಿರುದ್ಧವಾಗಿ ಜನರನ್ನು ಕೆರಳಿಸುವ ಈ ಮತೀಯವಾದಿ ರಾಷ್ಟ್ರೀಯವಾದದ ಹಾಡೇಕೆ ??

ರಾಷ್ಟ್ರೀಯವಾದದ ಪರಿಕಲ್ಪನೆಯೇ ಹಾಗೆ. ರಾಷ್ಟ್ರೀಯವಾದದ ಕುರಿತಾಗಿ ಆರ್ವೆಲ್ ಹೀಗೆ ಹೇಳುತ್ತಾನೆ

“ರಾಷ್ಟ್ರೀಯತೆ ಮತ್ತು ದೇಶಪ್ರೇಮವನ್ನು ಒಂದೇ ಎನ್ನುವಂತೆ ಅತ್ಯಂತ ಸಡಿಲವಾಗಿ ಬಳಸುತ್ತಾರೆ. ರಾಷ್ಟ್ರೀಯವಾದಿಗಳು ತಮ್ಮ ಕಡೆಯ ಜನರು ನಡೆಸಿದ ದೌರ್ಜನ್ಯವನ್ನು ನಿರಾಕರಿಸುವುದಿಲ್ಲ, ಅಷ್ಟೇಕೆ  ಆ ದೌರ್ಜನ್ಯಗಳ ಕುರಿತು ಕೇಳಲೂ ನಿರಾಕರಿಸುತ್ತಾರೆ. ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ನಾನು ಅರ್ಥ ಮಾಡಿಕೊಂಡ ಪ್ರಕಾರ ’ಮೊದಲು ಮನುಷ್ಯನನ್ನು ಕ್ರಿಮಿಗಳ ರೀತಿಯಲ್ಲಿ ವಿಂಗಡಿಸಿ ನಂತರ ಆ ಲಕ್ಷಾಂತರ ಮಾನವ ಜೀವಿಗಳಿಗೆ ಒಳ್ಳೆಯವರು ಹಾಗೂ ಕೆಟ್ಟವರೆಂದು ನಿಖರವಾಗಿ ಹಣೆಪಟ್ಟಿಯನ್ನು ನೀಡುವುದು. ಅದರೆ ಇದಕ್ಕಿಂತಲೂ ಮುಖ್ಯವಾಗಿ ವ್ಯಕ್ತಿಯೊಬ್ಬ ಒಳ್ಳೆಯದು ಮತ್ತು ಕೆಟ್ಟದನ್ನು ಮೀರಿ ತನ್ನನ್ನು ಒಂದು ದೇಶದೊಂದಿಗೆ ಅಥವಾ ಗುಂಪಿನೊಂದಿಗೆ ಗುರುತಿಸಿಕೊಂಡು ತನ್ನ ಐಡೆಂಟಿಟಿಯ ಹಿತಾಸಕ್ತಿಯನ್ನೇ ಪ್ರಧಾನ ಆಶಯವನ್ನಾಗಿರಿಸಿಕೊಳ್ಳುವುದು.’ ಆದರೆ ರಾಷ್ಟ್ರೀಯತೆಯನ್ನು ದೇಶಪ್ರೇಮದೊಂದಿಗೆ ಬೆರಸಲಾಗುವುದಿಲ್ಲ. ಏಕೆಂದರೆ ಇವೆರೆಡೂ ಪರಸ್ಪರ ವಿರುದ್ಧ ಆಶಯಗಳನ್ನು ಒಳಗೊಂಡಿವೆ.

ನನ್ನ ಪ್ರಕಾರ ದೇಶಪ್ರೇಮವೆಂದರೆ ’ಒಂದು ಜೀವನ ಕ್ರಮಕ್ಕೆ, ಒಂದು ನಿರ್ದಿಷ್ಟ ಸ್ಥಳಕ್ಕೆ ತನ್ನನ್ನು ಸಮರ್ಪಿಸಿಕೊಂಡು ತಾನು ನಂಬಿದ ಆ ಜೀವನ ಕ್ರಮ ಹಾಗೂ ನಿರ್ದಿಷ್ಟ ಸ್ಥಳವು ಶ್ರೇಷ್ಠವಾದುದೆಂದು ನಂಬುವುದು.’ ಆದರೆ ಈ ನಂಬುಗೆಯನ್ನು ಮತ್ತೊಬ್ಬರ ಮೇಲೆ ಹೇರಲಾಗುವುದಿಲ್ಲ. ದೇಶಪ್ರೇಮವು ಸಾಂಸ್ಕೃತಿಕವಾಗಿ ತನ್ನದೇ ಶೈಲಿಯನ್ನು ರೂಢಿಸಿಕೊಂಡು ಪ್ರವೃತ್ತಿಯಲ್ಲ್ಲಿ ರಕ್ಷಣಾತ್ಮಕವಾಗಿರುತ್ತದೆ. ಆದರೆ ರಾಷ್ಟ್ರೀಯತೆಯು ಅಧಿಕಾರದ ದಾಹದ ಹಂಬಲದೊಂದಿಗೆ ಬೆರೆತುಕೊಂಡಿರುತ್ತದೆ. ಹಾಗೂ ಅಧಿಕಾರ ದಾಹವು ಆತ್ಮವಂಚನೆಯಿದ ಪ್ರೇರಿತವಾಗಿರುತ್ತದೆ. ಇವೆರೆಡನ್ನೂ ಎಂದೂ ಬೇರ್ಪಡಿಸಲಾಗುವುದಿಲ್ಲ.

ಪ್ರತಿಯೊಬ್ಬ ರಾಷ್ಟ್ರೀಯತವಾದಿಯ ಮೂಲಭೂತ ಗುರಿಯು ಮತ್ತಷ್ಟು ಅಧಿಕಾರವನ್ನು, ಮತ್ತಷ್ಟು ಅಂತಸ್ತನ್ನು ಗಳಿಸುವುದಾಗಿರುತ್ತದೆ. ಇದನ್ನೆಲ್ಲ ತಾನು ನಿಖರವಾಗಿ ಗುರುತಿಸಿಕೊಂಡ ಒಂದು ನಿರ್ದಿಷ್ಟ ಗುಂಪಿಗಾಗಿ, ತಾನು ಗುರುತಿಸಿಕೊಂಡ ದೇಶದ ಹಿತಾಸಕ್ತಿಗಾಗಿ ಮಾಡುತ್ತಿದ್ದೇನೆ ಎಂದು ರಾಷ್ಟ್ರೀಯತವಾದಿಯು ಪ್ರತಿಪಾದಿಸಿಕೊಳ್ಳುತ್ತಾನೆ. ಸದಾ ಪೈಪೋಟಿಯ ಅಂತಸ್ತಿನ ಕಲ್ಪನೆಯಲ್ಲೇ ವಿಹರಿಸುವ ಈ ರಾಷ್ಟ್ರೀಯತವಾದಿಯ ಸಂವೇದನೆಗಳು ಖುಣಾತ್ಮಕವಾಗಿರುತ್ತವೆ ಎಂದು ಪರಿಭಾವಿಸಬಹುದು. ಆತನ ಚಿಂತನೆಗಳು, ಮಾನಸಿಕ ಧೃಡತೆಯು ಪ್ರೋತ್ಸಾಹಕವಾಗಿರಬಹುದು ಅಥವಾ ನಿಂದನಾತ್ಮಕವಾಗಿರಬಹುದು. ಆದರೆ ಅದು ಸದಾಕಾಲ ಸೋಲುಗೆ ಲವುಗಳನ್ನು ಕುರಿತಾಗಿ, ಅವಮಾನಗಳ ಕುರಿತಾಗಿಯೇ ಧ್ಯಾನಿಸುತ್ತಿರುತ್ತದೆ.

ರಾಷ್ಟ್ರೀಯತವಾದಿಯು ಸಮಾಕಾಲೀನ ಇತಿಹಾಸವನ್ನು ಶಕ್ತಿಕೇಂದ್ರಗಳ ಕಟ್ಟುವಿಕೆ ಮತ್ತು ಕೆಡವುವಿಕೆಯ ನಿರಂತರ ಕ್ರಿಯೆಯನ್ನಾಗಿಯೇ ಭಾವಿಸುತ್ತಾನೆ. ಈ ಸಂದರ್ಭದಲ್ಲಿ ತನ್ನನ್ನು ಕಟ್ಟುವಿಕೆಯ ಭಾಗವಾಗಿಯೂ ತನ್ನ ಶತೃವನ್ನು ಕೆಡವುವಿಕೆಯ ಭಾಗವಾಗಿಯೂ ಗುರುತಿಸುತ್ತಾನೆ. ಆತನ ಅಪ್ರಾಮಾಣಿಕತೆ ಕುಖ್ಯಾತವಾಗಿದ್ದರೂ ತನ್ನನ್ನು ತಾನು ಸರಿಯಾದ ದಾರಿಯಲ್ಲಿ ಇರುವವನೆಂದು ಪ್ರಚುರಪಡಿಸಿಕೊಳ್ಳುತ್ತಾನೆ. ರಾಷ್ಟ್ರೀಯತಾವಾದಿಯು ತನ್ನ ಶಕ್ತಿಕೇಂದ್ರದ ಶ್ರೇಷ್ಠತೆಯ ಕುರಿತಾಗಿ ಅಪಾರವಾದ ಕುರುಡು ಭ್ರಾಂತಿಯನ್ನು ಹೊಂದಿರುತ್ತಾನೆ. ತನ್ನ ಗುಂಪಿನ ನಂಬಿಕೆಯ ಹೊರತಾಗಿ ಬೇರೇನನ್ನು ಚಿಂತಿಸುವುದಿಲ್ಲ, ಮಾತನಾಡುವುದಿಲ್ಲ. ರಾಷ್ಟ್ರೀಯತಾವಾದಿಗೆ ತನ್ನ ಸ್ವಾಮಿಭಕ್ತಿ, ರಾಜನಿಷ್ಠೆಯನ್ನು ತೊರೆಯುವುದು ಅಸಾಧ್ಯದ ಮಾತೇ ಸರಿ. ತನ್ನ ಶಕ್ತಿ ಕೇಂದ್ರದ ಮೇಲೆ, ತನ್ನ ಗುಂಪಿನ ಮೇಲೆ ಸಣ್ಣ ರೀತಿಯ ಆರೋಪಗಳು, ಕೀಟಲೆಗಳು ಹಾಗೂ ತನ್ನ ವಿರೋಧಿ ಪಾಳಯದ ಕುರಿತಾಗಿ ಪ್ರಶಂಸೆಯ ಮಾತುಗಳು ರಾಷ್ಟ್ರೀಯತಾವಾದಿಯ ಮನಸ್ಸಿನಲ್ಲಿ ಅಗಾಧವಾದ ತಳಮಳವನ್ನು ಹುಟ್ಟುಹಾಕುತ್ತವೆ.  ಈ ತಳಮಳದಿಂದ ಹೊರಬರಲು ಆತ ಪ್ರತಿರೋಧದ ಮಾರ್ಗಗಳನ್ನು, ಬಲತ್ಕಾರದ ಮಾರ್ಗಗಳನ್ನು ಬಳಸುತ್ತಾನೆ.

ಒಂದು ವೇಳೆ ದೇಶವೊಂದು ಆತನ ಶಕ್ತಿಕೇಂದ್ರವಾಗಿದ್ದರೆ ಆ ದೇಶದ ನೀರು, ಸಾಹಿತ್ಯ, ಕ್ರೀಡೆ, ಧಾರ್ಮಿಕತೆ, ಕಲೆ, ಭಾಷೆ, ಸ್ವದೇಶಿ ಜನರ ಸೌಂದರ್ಯ ಮುಂತಾದವುಗಳ ಕುರಿತಾಗಿ ಶ್ರೇಷ್ಟತೆಯ ವ್ಯಸನವನ್ನು ಬೆಳೆಸಿಕೊಂಡಿರುತ್ತಾನೆ. ಕಡೆಗೆ ಈ ಶ್ರೇಷ್ಟತೆಯ ವ್ಯಸನ ತನ್ನ ಶಕ್ತಿ ಕೇಂದ್ರವಾದ ತನ್ನ ದೇಶದ ಹವಾಮಾನದವೆರೆಗೂ ವ್ಯಾಪಿಸಿಕೊಂಡಿರುತ್ತದೆ. ಪ್ರತಿಯೊಬ್ಬ ರಾಷ್ಟ್ರೀಯತಾವಾದಿಗೆ ತನ್ನ ಭಾಷೆಯ ಔನ್ಯತೆಯ ಕುರಿತಾಗಿ ಪ್ರಚಾರವನ್ನು ನಡೆಸುವ ಹಪಾಹಪಿತನವಿರುತ್ತದೆ. ಪ್ರತಿಯೊಬ್ಬ ರಾಷ್ಟ್ರೀಯತಾವಾದಿಯು ತನ್ನ ಶಕ್ತಿಕೇಂದ್ರವು ನಡೆಸುವ ದೌರ್ಜನ್ಯಗಳನ್ನು ಅತ್ಯಂತ ಸಮಂಜಸವೆಂದು ಸಮರ್ಥಿಸಿಕೊಳ್ಳುತ್ತಾನೆ ಅಥವಾ ಆ ದೌರ್ಜನ್ಯಗಳು ಹತ್ಯಾಕಾಂಡದ ಸ್ವರೂಪದ್ದಾಗಿದ್ದರೆ ಅತ್ಯಂತ ಜಾಣತನದಿಂದ, ಮರೆ ಮೋಸದ ಗುಣದಿಂದ ಆ ಹತ್ಯಾಕಾಂಡಗಳನ್ನು ನಿರ್ಲಕ್ಷಿಸುತ್ತಾನೆ.”

ಅರ್ವೆಲ್ ನ ಮೇಲಿನ ಚಿಂತನೆಗಳು ನಮ್ಮ ಸಂಘ ಪರಿವಾರದ ಇಂದಿನ ಫ್ಯಾಸಿಸ್ಟ್ ಸ್ವರೂಪದ ರಾಜಕೀಯ ಸಂಘಟನೆಗೆ ಸಂಪೂರ್ಣವಾಗಿ ತಾಳೆಯಾಆಗುತ್ತವೆ. ಎಕನಾಮಿಕ್ಸ್ ಟೈಮ್ಸ್ ನಲ್ಲಿ ಬಂದ ಒಂದು ವರದಿ ಹೀಗಿದೆ. “ಒಂದು ವೇಳೆ ಬಿಜೆಪಿ ನೇತೃತ್ವದ ಎನ್ ಡಿ ಎ ಗುಂಪು ಅಧಿಕಾರಕ್ಕೆ ಬಂದರೆ ಸಂಘಪರಿವಾರದ ಹಿಂದುತ್ವದ ಅಜೆಂಡಾಗಳು ತೆಳುಗೊಂಡು ಮೂಲೆಗುಂಪಾಗಬಾರದೆಂದು ನಿರ್ಧರಿಸಿರುವ ಆರೆಸ್ಸೆಸ್ 2000 ಸ್ವಯಂಸೇವಕರನ್ನು ಕೆಲತಿಂಗಳುಗಳ ಕಾಲ ಬಿಜೆಪಿಗೆ ಪರಭಾರೆಯಾಗಿ ಕಳುಹಿಸಲು ನಿರ್ಧರಿಸಿದೆ.

ಮಾಮೂಲಿ ಸಂದರ್ಭದಲ್ಲಿ ಪಕ್ಷವು ಅಧಿಕಾರಕ್ಕೆ ಬಂದರೆ ಹಿರಿಯ ನಾಯಕರು ಅದರ ನೇತೃತ್ವ ವಹಿಸುತ್ತಿದ್ದರು. ಆ ಸಂದರ್ಭದಲ್ಲಿ 09a671d9-189f-4b8a-893f-4833f370ce93HiResಆರೆಸಸ್ ನ ಪಾತ್ರ ನಿರ್ವಾತದಲ್ಲಿರುತಿತ್ತು.  ಆದರೆ ಈಗಿನ ಬದಲಾದ ಸಂದರ್ಭದಲ್ಲಿ ಹಾಗಾಗಲಿಕ್ಕೆ ಬಿಡದ ಆರೆಸಸ್ ತನ್ನ hardcore ಸ್ವಯಂಸೇವಕರನ್ನು ಬಿಜೆಪಿ ಪಕ್ಷದಲ್ಲಿ ಆಯಕಟ್ಟಿನ ಜಾಗಗಳಲ್ಲಿ ತುಂಬಿ ಅತ್ಯಂತ ಕರಾರುವಕ್ಕಾಗಿ ತನ್ನ ಹಿಂದುತ್ವದ ಅಜೆಂಡಾಗಳನ್ನು ಜಾರಿಗೊಳಿಸಲು ತಿರ್ಮಾನ ಕೈಗೊಂಡಿದೆ. ತನ್ನ ಸಂಘಟನೆಯ ಅಜೆಂಡಾಗಳು ಪಕ್ಷದ ಹಿರಿಯ ನಾಯಕರ ದರ್ಬಾರಿನಲ್ಲಿ ನಿರ್ಲಕ್ಷ್ಯಕ್ಕೊಳಗಾಗಬಾರದೆಂಬುದೇ ಈ ತಿರ್ಮಾನಕ್ಕೆ ಕಾರಣ. ಇದು ಮುಂದಿನ ಮೂರು ವರ್ಷಗಳ ಕಾಲದ ದೂರಗಾಮಿ ಯೋಜನೆಯೆಂದು ಆರೆಸಸ್ ಮೂಲಗಳು ತಿಳಿಸಿವೆ. ಉದಾಹರಣೆಗೆ ಉತ್ತರ ಪ್ರದೇಶದಲ್ಲಿ ಆರೆಸಸ್ ನ ಮೂವರು ಹಿರಿಯ ಸ್ವಯಂಸೇವಕರನ್ನು ಆಯಕಟ್ಟಿನ, ಸೂಕ್ಷ್ಮ ಸ್ಥಳಗಳಲ್ಲಿ ಸಂಘ ಪರಿವಾರದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಅವರೆಂದರೆ ಲಕ್ನೋದಲ್ಲಿ ರತ್ನಾಕರ ಪಾಂಡೆ, ವಾರಣಾಸಿಯಲ್ಲಿ ಚಂದ್ರಶೇಖರ ಪಾಂಡೆ, ರಾಯ ಬರೇಲಿಯಲ್ಲಿ ಭವಾನಿ ಸಿಂಗ್. ಇದೇ ಬಗೆಯ ಯೋಜನೆಗಳು ಇತರ ರಾಜ್ಯಗಳಲ್ಲಿಯೂ ಜಾರಿಗೊಳ್ಳುತ್ತಿವೆ. ಆರೆಸಸ್ ಈ ಕಾರ್ಯತಂತ್ರವನ್ನು ಮಾಡುತ್ತಿರುವುದು ಇದು ಮೊದಲ ಬಾರಿಯಲ್ಲ. 1988-89ರಲ್ಲಿ ‘ಮುಧುಕರ ದತ್ತಾತ್ರೇಯ ಬಾಳಾಸಾಹೇಬ ದೇವರಸ’ ಅವರು ಆರೆಸಸ್ ನ ಮುಖ್ಯಸ್ಥರಾಗಿದ್ದಾಗ ಆಗ ಆರೆಸಸ್ ನ ಪ್ರಚಾರಕರಾಗಿದ್ದ ನರೇಂದ್ರ ಮೋದಿ, ಗೋವಿಂದಾಚಾರ್ಯ, ಶೇಷಾದ್ರಿ ಚಾರಿಯವರನ್ನು ಬಿಜೆಪಿಯಲ್ಲಿ ಆರೆಸಸ್ ಸಿದ್ಧಾಂತವನ್ನು ಗಟ್ಟಿಗೊಳಿಸಲು ಆ ಪಕ್ಷಕ್ಕೆ ವಲಸೆ ಕಳುಹಿಸಿದ್ದರು. ಶೇಷಾದ್ರಿ ಚಾರಿಯವರು, “ಆಗ ಬಿಜೆಪಿ ಪಕ್ಷವು ಅತ್ಯಂತ ದುರ್ಬಲವಾಗಿತ್ತು. ಅದಕ್ಕಾಗಿ ನಮ್ಮ ಸ್ವಯಂಸೇವರನ್ನು ಅಲ್ಲಿಗೆ ಕಳುಹಿಸುತ್ತಿದ್ದೆವು. ಆದರೆ ಪ್ರತಿಯೊಬ್ಬ ಸ್ವಯಂಸೇವಕನೂ ಬಿಜೆಪಿಯಲ್ಲಿರಬೇಕೆಂದು ಆರೆಸಸ್ ಬಯಸುವುದೇ ಇಲ್ಲ.  ಆದರೆ ಪಕ್ಷವೂ ನಿರ್ಲಕ್ಷಕ್ಕೊಳಗಾಗಬಾರದು” ಎಂದು ಹೇಳಿದ್ದರು.

2009ರಲ್ಲಿ ಬಿಜೆಪಿ ಪಕ್ಷವು ಚುನಾವಣೆಯಲ್ಲಿ ಸೋತನಂತರ ಪಕ್ಷದ ಮೇಲೆ ಆರೆಸಸ್ ಹಿಡಿತ ಬಲಗೊಳ್ಳುತ್ತಿದೆ. ಆ ಸಂದರ್ಭದಲ್ಲಿ ನಿತೀಶ್ ಗಡ್ಕರಿಯವರನ್ನು ಪಕ್ಷದ ಅಧ್ಯಕ್ಷನನ್ನಾಗಿ ಮಾಡಿದ್ದು ಈ ನಿಟ್ಟಿನಲ್ಲಿ ಆರೆಸಸ್ ತೆಗೆದುಕೊಂಡಂತಹ ಮೊದಲ ಹೆಜ್ಜೆ. ನಂತರ ಗಡ್ಕರಿ  ಧರ್ಮೇಂದ್ರ್  ಪ್ರಧಾನ, ಜೆ.ಪಿ.ನಂದ, ಮುರಳೀಧರ ರಾವ್, ವಿ.ಸತೀಶ್, ಸೌದಾನ್ ಸಿಂಗ್ ರಂತಹ ಪ್ರಭಾವಿ ಆರೆಸಸ್ ತಂಡವನ್ನೇ ಪಕ್ಷದೊಳಗೆ ಕರೆತಂದರು. ” ( ಎಕನಾಮಿಕ್ಸ್ ಟೈಮ್ಸ್, ಎಪ್ರಿಲ್ 2, 2014)

ಮೇಲಿನ ವರದಿ ಮತೀಯವಾದಿ ಆರೆಸಸ್ ಸಂಘಟನೆ ಅತ್ಯಂತ aggressive ಆಗಿ ತನ್ನ ಮುಂದಿನ ಹೆಜ್ಜೆಗಳನ್ನು ಇಡುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಇದೊಂದು ಸಣ್ಣ ಉದಾಹರಣೆ. ಆರೆಸಸ್ ನ  ಅಂಗ ಸಂಸ್ಥೆಗಳು ಎಲ್ಲಾ ದಿಕ್ಕುಗಳಿಂದಲೂ ಬಿಜೆಪಿ ಪಕ್ಷದೊಳಗೆ ಧಾವಿಸುತ್ತಿವೆ. ಮತೀಯವಾದಿ ರಾಷ್ಟ್ರೀಯವಾದ ಮತ್ತು ರಾಜಕೀಯದ ಅಧಿಕಾರದೆಡೆಗೆ ದಾಪುಗಾಲಿಡುತ್ತಿರುವ ಆರೆಸಸ್ ನ  ಕೋಮುವಾದಿ ಶಕ್ತಿಗಳೊಂದಿಗೆ ಎನ್ ಡಿ ಎ ಮೈತ್ರಿಕೂಟದ ಇತರ ಪಕ್ಷಗಳು ಹೇಗೆ ಧ್ರುವೀಕರಣಗೊಳ್ಳುತ್ತವೆ ಎಂದು ಕಾದು ನೋಡಬೇಕಾಗಿದೆ.

ಕಡೆಗೆ ಎಪ್ರಿಲ್  7,  2014ರ ಔಟ್ ಲುಕ್ ಪತ್ರಿಕೆಯಲ್ಲಿ ಪತ್ರಕರ್ತ ಕುಮಾರ್ ಕೇತ್ಕರ್ ತಮ್ಮ ಲೇಖನದಲ್ಲಿ ಒಂದು ಕಡೆ ಹೀಗೆ ಬರೆಯುತ್ತಾರೆ “ನಾನು ಅಹಮದಾಬಾದಿನಲ್ಲಿದ್ದಾಗ ಒಬ್ಬ ವಿದೇಶಿ ಪತ್ರಕರ್ತನನ್ನು ಭೇಟಿಯಾದೆ. ಈ ವಿದೇಶಿ ಪತ್ರಕರ್ತ ಮೋದಿಯ ಗುಜರಾತ್ ನ ಅಭಿವೃದ್ಧಿಯ ಕುರಿತಾಗಿ ವರದಿ ಮಾಡಲು ಬಂದಿದ್ದ. ಆತ ಕಛ್ ಪ್ರಾಂತ ಮತ್ತು ಗ್ರಾಮಗಳಿಗೆ ಭೇಟಿ ಕೊಟ್ಟಿದ್ದ. ಆತನೊಂದಿಗೆ ವಿಚಾರ ವಿನಿಮಯ ಮಾಡಿಕೊಂಡ ನಂತರ ಆ ವಿದೇಶಿ ಪತ್ರಕರ್ತ ನನಗೆ ಒಬ್ಬ ಕಿವಿ ಮತ್ತು ಕಣ್ಣು ತಜ್ಞರು ಗೊತ್ತಿದ್ದರೆ ಹೇಳಿ ಎಂದು ಕೇಳಿದ. ಈ ರೀತಿಯ ಕಿವಿ ಮತ್ತು ಕಣ್ಣಿನ ತಜ್ಞರು ಇರುವುದಿಲ್ಲ, ನಿಮಗೇತಕ್ಕೆ ಎಂದು ಪ್ರಶ್ನಿಸಿದೆ. ಸ್ವಲ್ಪ ಹೊತ್ತು ಧೀರ್ಘ ಮೌನದ ನಂತರ ನಿಟ್ಟುಸಿರು ಬಿಟ್ಟು ಆ ವಿದೇಶಿ ಪತ್ರಕರ್ತ ಹೇಳಿದ ‘ ನಾನು ಬಹಳ ದಿನಗಳಿಂದ ಈ ಗುಜರಾತ್ ಮಾಡೆಲ್ ಕುರಿತಾಗಿ ಕೇಳುತ್ತಿದ್ದೇನೆ. ಇಲ್ಲಿನ ಅಭಿವೃದ್ಧಿಯ ಕುರಿತಾಗಿ ಕೇಳುತ್ತಿದ್ದೇನೆ. ಆದರೆ ಗುಜರಾತ್ ರಾಜ್ಯದ ಯಾವ ಹಳ್ಳಿಯಲ್ಲಿಯೂ ಈ ಅಭಿವೃದ್ಧಿ ನನಗೆ ಕಾಣಲಿಲ್ಲ. ಅಂದರೆ ಈ ಗುಜರಾತ್ ಅಭಿವೃದ್ಧಿಯ ಕುರಿತಾಗಿ ಅತ್ಯಂತ ಬೊಬ್ಬಿಡುವ ಶಬ್ದಗಳನ್ನು ನನ್ನ ಕಿವಿಯು ಕೇಳಿದ್ದನ್ನು ನನ್ನ ಕಣ್ಣು ನೋಡಲಿಕ್ಕೆ ಆಗಲೇ ಇಲ್ಲ. ಅಂದರೆ ನನ್ನ ಕಣ್ಣು ಮತ್ತು ಕಿವಿಯ ನಡುವೆ ಹೊಂದಾಣಿಕೆ ತಪ್ಪಿರಬೇಕು. ಒಂದು ವೇಳೆ ಸರಿಯಿದ್ದಿದ್ದರೆ ನಾನು ಈ ಮಹಾನ್ ನೇತಾರ ಮೋದಿ ರಾಜ್ಯದಲ್ಲಿ ಮಾಡಿದ ಅಭಿವೃದ್ಧಿಯನ್ನು ಕಾಣುತ್ತಿದ್ದೆ.  ಆದರೆ ನನಗೆ ಕಾಣುತ್ತಿಲ್ಲ’.