Daily Archives: April 9, 2014

ವಿಚಾರಗಳು ಹಿಂದಾಗಿ ಗದ್ದಲಗಳೇ ವಿಜೃಂಭಿಸುವ ಚುನಾವಣೆಯ ಸಮಯ


– ಡಾ. ಅಶೋಕ್ ಕೆ.ಆರ್.


 

ವರುಷದ ಹಿಂದಿನಿಂದಲೇ ಪ್ರಾರಂಭವಾಗಿದ್ದ ಚುನಾವಣಾ ತಯಾರಿಗಳು ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ವೇಗೋತ್ಕರ್ಷಕ್ಕೊಳಗಾಗಿವೆ. ಚುನಾವಣಾ ತಯಾರಿಗಳು ಆರಂಭಗೊಂಡ ದಿನದಿಂದಲೂ ಈ ಬಾರಿಯ ಲೋಕಸಭಾ ಚುನಾವಣೆಯನ್ನು ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ನಡುವಿನ ‘ಸಮರ’ ಎಂದೇ ಬಿಂಬಿಸಲಾಗುತ್ತಿದೆ. ಚುನಾವಣೆ ಘೋಷಣೆಯಾದ ನಂತರದಲ್ಲೂ ವಿಷಯಾಧಾರಿತ ಚರ್ಚೆಗಳು ಮುನ್ನೆಲೆಗೆ ಬರದಿರುವುದು ನಮ್ಮ ಪ್ರಜಾಪ್ರಭುತ್ವ ಹಿಡಿಯುತ್ತಿರುವ ಜಾಡನ್ನು ತೋರುತ್ತಿದೆಯೇ? ಈಗಲೂ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯ ಭಾಷಣಗಳಲ್ಲಿ ಕಾಂಗ್ರೆಸ್ ಮತ್ತದರ ನಾಯಕರ ಬಗೆಗಿನ ಅವಹೇಳನಕಾರಿ ಮಾತುಗಳು ಮತ್ತು ಕಾಂಗ್ರೆಸ್ಸಿಗರ ಭಾಷಣಗಳಲ್ಲಿ ನರೇಂದ್ರ ಮೋದಿ ಬಗೆಗಿನ ವ್ಯಂಗ್ಯಮಿಶ್ರಿತ ಕೆಲವೊಮ್ಮೆ ಅಸಂಬದ್ಧ ಮಾತುಗಳೇ ವಿಜೃಂಭಿಸುತ್ತಿದೆಯೇ ಹೊರತು ಅಧಿಕಾರಕ್ಕೆ ಬಂದರೆ ತಾವು ನೀಡಬಹುದಾದ ಆಡಳಿತದ ಮಾದರಿಯ ಬಗೆಗಿನ ವಿಚಾರಗಳು ಚರ್ಚೆಗೊಳಪಡುತ್ತಲೇ ಇಲ್ಲ. ಇವತ್ತಿನ ಚುನಾವಣಾ ಮಾದರಿಯು ಪ್ರಜಾಪ್ರಭುತ್ವದ ಅಣಕವಾಡುತ್ತಿದೆ.

ಪ್ರಜೆಗಳಿಂದ ಆಯ್ದು ಬಂದ ನೇತಾರ ಅವರನ್ನು ಮುನ್ನಡೆಸುವವನಾದಾಗ ಪ್ರಜಾಪ್ರಭುತ್ವದ ನಿಜ ಅರ್ಥ ಸಾರ್ಥಕವಾಗುತ್ತದೆ. ಆದರೆ ಈಗಿನ ಪ್ರಜಾಪ್ರಭುತ್ವ ಪ್ರಜೆಗಳಿಂದ ಆರಿಸಿ ಬಂದಮೇಲೆ ಪ್ರಜೆಗಳ ಮೇಲೆ ಪ್ರಭುತ್ವ ಸಾಧಿಸುವುದಷ್ಟೇ ಆಗಿ ಹೋಗುತ್ತಿದೆ. ಈ ರೀತಿಯ ಸಿನಿಕತನವೂ ತಾತ್ಕಾಲಿಕವೆ? ಪ್ರತಿ ಬಾರಿಯ ಚುನಾವಣೆಯ ಸಂದರ್ಭದಲ್ಲೂ ಹಿಂದಿನ ಚುನಾವಣೆಯ ಸಂದರ್ಭ ಈಗಿನದಕ್ಕಿಂತ ಉತ್ತಮವಾಗಿತ್ತು ಎಂಬ ಭಾವ ಮೂಡಿಸುತ್ತದೆಯಾ? ಪ್ರತಿ ಬಾರಿ ಹೊಸತೊಂದು ಆಶಯದೊಂದಿಗೆ ಹೊಸ ಸರಕಾರಕ್ಕೆ1 ಅವಕಾಶ ಕೊಟ್ಟ ನಂತರ ಕೆಲವೇ ತಿಂಗಳುಗಳಲ್ಲಿ ಅಥವಾ ವರ್ಷ ಕಳೆಯುವಷ್ಟರಲ್ಲಿ ‘ಅಯ್ಯೋ ಹೋದ ಸರಕಾರವೇ ಪರವಾಗಿರಲಿಲ್ಲ’ ಎಂಬ ಭಾವನೆ ಮೂಡಲಾರಂಭಿಸುತ್ತದೆ! ಹತ್ತು ವರುಷದ ಮನಮೋಹನಸಿಂಗ್ ಆಡಳಿತದಿಂದ ಬೇಸತ್ತ ಜನ ಅಟಲ್ ಬಿಹಾರಿ ವಾಜಪೇಯಿಯ ಗುಣಗಾನ ಮಾಡುತ್ತಾರೆ. ಅಟಲ್ ಆಡಾಳಿತಾವಧಿಯಲ್ಲಿ ನಡೆದ ಹಗರಣಗಳು ನರಸಿಂಹ ರಾವ್ ಅವರೇ ವಾಸಿ ಕಣ್ರೀ ಎಂಬಂತೆ ಮಾಡಿಬಿಡುತ್ತವೆ! ಸಮ್ಮಿಶ್ರ ಸರಕಾರಗಳಿಂದ ಬೇಸತ್ತು ಕರ್ನಾಟಕದಲ್ಲಿ ಬಿಜೆಪಿಯನ್ನು ಆರಿಸಿದ ನಂತರ ಬಿಜೆಪಿಯ ಆಡಳಿತ ವೈಖರಿಯಿಂದ ಸುಸ್ತೆದ್ದು ‘ಕಾಂಗ್ರೆಸ್ಸೇ ವಾಸಿ’ ಎಂದು ಬಿಜೆಪಿಯನ್ನು ಸೋಲಿಸುತ್ತಾರೆ ಜನ. ಇನ್ನು ಕೆಲವು ದಿನಗಳಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವೂ ತನ್ನ ದೌರ್ಬಲ್ಯ, ನಿಷ್ಕ್ರಿಯತೆಗಳಿಂದ ಹಳೆಯ ಸರಕಾರವೇ ಒಳ್ಳೆಯದಿತ್ತು ಎಂಬ ಭಾವ ಮೂಡಿಸಿದರೆ ಅಚ್ಚರಿಪಡಬೇಕಿಲ್ಲ! ನಮ್ಮ ನಿರೀಕ್ಷೆಗೆ ತಕ್ಕಂತೆ ಸರಕಾರಗಳು ಕಾರ್ಯನಿರ್ವಹಿಸಲು ವಿಫಲವಾದಾಗ ಈಗಾಗಲೇ ಸೋತು ಮೂಲೆಯಲ್ಲಿರುವ ಕಳೆದ ಬಾರಿ ಆಡಳಿತ ನಡೆಸಿದ ಪಕ್ಷದ ಬಗೆಗೆ ಮೃದು ದೋರಣೆ ತಳೆದುಬಿಡಲಾಗುತ್ತದೆ. ಬಹುಶಃ ಈ ಬಾರಿಯ ಚುನಾವಣೆಯಲ್ಲಿ ಮೋದಿ ಅಲೆ ಎಂದು ಎಷ್ಟೇ ದೊಡ್ಡ ದನಿಯಲ್ಲಿ ಕೂಗುತ್ತಿದ್ದರೂ ಯು.ಪಿ.ಎ 2ರ ಆಡಳಿತ ಜನರಲ್ಲಿ ಬೇಸರ ಮೂಡಿಸಿದೆ ಮತ್ತು ಬೇಸರ ಅಟಲ್ ನೇತೃತ್ವದ ಎನ್.ಡಿ.ಎ ವಾಸಿಯಿತ್ತು ಎನ್ನುವಂತೆ ಮಾಡುತ್ತಿರುವುದು ಈ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ 2009ರ ಚುನಾವಣೆಯಲ್ಲಿ ಎನ್.ಡಿ.ಎ ಉತ್ತಮ ಎಂಬ ಚರ್ಚೆಗಳು ನಡೆದಿರಲಿಲ್ಲ, ಕಾರಣ ಯು.ಪಿ.ಎ ತನ್ನ ಮೊದಲ ಆಡಳಿತಾವಧಿಯಲ್ಲಿ ಹೆಚ್ಚಿನ ಹಗರಣಗಳನ್ನೇನೂ ಮಾಡಿಕೊಂಡಿರಲಿಲ್ಲ. ಹಗರಣಗಳು, ಜಾಗತೀಕರಣಕ್ಕೆ ಒಡ್ಡಿಕೊಂಡ ಪರಿಣಾಮವಾಗಿ ಆರ್ಥಿಕ ಶಿಸ್ತು ದೇಶದ ಆಡಳಿತದ ಕೈಹಿಡಿತದಿಂದ ತಪ್ಪಿಸಿಕೊಂಡು ಜನರನ್ನು ಬವಳಿಕೆಗೆ ಒಳಪಡಿಸಿದ ರೀತಿ ಮತ್ತು ವರ್ಷದಿಂದ ವರ್ಷಕ್ಕೆ ತನ್ನ ಹಿಡಿತವನ್ನು ಬಲಗೊಳಿಸುಕೊಳ್ಳುತ್ತಲೇ ಸಾಗುತ್ತಿರುವ ಭ್ರಷ್ಟಾಚಾರ ಯು.ಪಿ.ಎಯನ್ನು 2014ರ ಚುನಾವಣೆಯಲ್ಲಿ ಸೋಲುವಂತೆ ಮಾಡುವುದು ಹೆಚ್ಚು ಕಡಿಮೆ ನಿಶ್ಚಯವಾಗಿದೆ.

ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಸ್ವಯಂಕೃತ ತಪ್ಪುಗಳಿಂದ ಮತ್ತು ಮೋದಿ ಅಲೆಯಿಂದ ಸೋಲನುಭವಿಸುತ್ತದೆ ಎಂದು ಮಾಧ್ಯಮಗಳು ಹೇಳುತ್ತಿವೆ. ಬಹುತೇಕ ಜನರಿಗೂ ಅದೇ ಭಾವನೆಯಿದೆ. ಆದರೆ ಕಾಂಗ್ರೆಸ್ಸನ್ನು ಕಡೆಗಣಿಸಿ ಉಳಿದ ಪಕ್ಷಗಳು ಚುನಾವಣೆ ತಯ್ಯಾರಿ ಮಾಡಿದರೆ ಮತ್ತೆ ಕಾಂಗ್ರೆಸ್ ಅನಿರೀಕ್ಷಿತ ಅಘಾತ ನೀಡಿಬಿಡಬಹುದು. ಈಗಿನ ಬಿ.ಜೆ.ಪಿ ಕೇವಲ ಒಬ್ಬ ವ್ಯಕ್ತಿಯ ಖ್ಯಾತಿಯ ಮೇಲೆ ಚುನಾವಣೆ ಎದುರಿಸಲು ಸನ್ನದ್ಧವಾಗಿದ್ದರೆ 2004ರಲ್ಲಿ ಬಿ.ಜೆ.ಪಿ ನೇತೃತ್ವದ ಎನ್.ಡಿ.ಎ ‘ಇಂಡಿಯಾ ಶೈನಿಂಗ್’ ಎಂಬ ಘೋಷ ವಾಕ್ಯದೊಂದಿಗೆ ಈಗಿನದಕ್ಕಿಂತಲೂ ಹೆಚ್ಚಿನ ಅಬ್ಬರದೊಂದಿಗೆ ಪ್ರಚಾರವಾರಂಭಿಸಿತ್ತು. ಮಾಧ್ಯಮಗಳಲ್ಲೂ ‘ಇಂಡಿಯಾ ಶೈನಿಂಗ್’ನದ್ದೇ ಮಾತು. ಜನರಲ್ಲೂ ಅದೇ ಮಾತು. ಮಾತುಗಳ ಹಿಂದಿನ ಮೌನದಲ್ಲಿ ಹರಿಯುವ ವಿಚಾರಗಳ ಬಗ್ಗೆ ಪ್ರಚಾರದಬ್ಬರದಲ್ಲಿ ಯಾರೂ ಗಮನಹರಿಸದ ಕಾರಣ ಯಾವ ಹೆಚ್ಚಿನ ಪ್ರಚಾರವನ್ನೂ ಮಾಡದೆ ಮಾಧ್ಯಮಕ್ಕೆ ಪ್ರಿಯರೂ ಆಗದೆ ಕಾಂಗ್ರೆಸ್ ಎಲ್ಲರಿಗೂ ಅಚ್ಚರಿ ನೀಡುವ ರೀತಿಯಲ್ಲಿ ಗೆದ್ದು ಬಂದಿತ್ತು. 2009ರ ಚುನಾವಣೆಯಲ್ಲಿ ಸಹಿತ ಎನ್.ಡಿ.ಎ ಅಧಿಕಾರವಿಡಿಯುತ್ತದೆ ಎಂದು ಸಮೀಕ್ಷೆಗಳು ಹೇಳಿದ್ದವಾದರೂ ಕೊನೆಗೆ ಮತ್ತೆ ಗೆದ್ದು ಬಂದಿದ್ದು ಯು.ಪಿ.ಎ! ಎಲ್ಲೋ ಒಂದೆಡೆ ಜನರ ಮನಸ್ಥಿತಿಯನ್ನು ಅರಿಯಲು ರಾಜಕೀಯ ಪಕ್ಷಗಳು ಮತ್ತು ಮಾಧ್ಯಮಗಳು ವಿಫಲವಾಗುತ್ತಿವೆಯಾ?

ಜನರ ಮನಸ್ಥಿತಿ ಅರಿಯುವುದಕ್ಕಿಂತ ಹೆಚ್ಚಾಗಿ ಜನರ ಯೋಚನಾ ಲಹರಿಯನ್ನೇ ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಗಿಸುವ ಕಾರ್ಯದಲ್ಲಿ ಇಂದಿನ ರಾಜಕೀಯ ಪಕ್ಷಗಳ ನೇತಾರರು ನಿರತರಾಗಿದ್ದಾರೆ. ಈ ಉದ್ದೇಶಕ್ಕಾಗಿ ಮಾಧ್ಯಮಗಳನ್ನು ಖರೀದಿಸುತ್ತಾರೆ, ಮಾಧ್ಯಮಗಳ ಮಾಲೀಕತ್ವ ವಹಿಸುತ್ತಾರೆ ಮತ್ತು ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹೋಗುತ್ತಿರುವ ಭ್ರಷ್ಟಾಚಾರವನ್ನು ಬಳಸಿಕೊಳ್ಳುತ್ತ ತಮ್ಮ ಪರವಾಗಿರುವ ವರದಿಗಳಷ್ಟೇ ಪ್ರಸಾರವಾಗುವಂತೆ ಮಾಡಿಬಿಡುತ್ತಾರೆ. 2014ರ ಚುನಾವಣೆಯ ಬಗೆಗೆ ಅನೇಕ ವಾಹಿನಿಗಳು ನಡೆಸಿದ ಸಮೀಕ್ಷೆಗಳ ಪ್ರಕಾರ ಬಿ.ಜೆ.ಪಿ ಏಕಾಂಗಿಯಾಗಲ್ಲದಿದ್ದರೂ ತನ್ನ ನೇತೃತ್ವದ ಎನ್.ಡಿ.ಎ ಮುಖಾಂತರ ಸರಕಾರ ನಿರ್ಮಿಸಲು ಅಗತ್ಯವಾದ ಸ್ಥಾನಗಳ ಸಮೀಪಕ್ಕೆ ಬರುತ್ತದೆ. ಎನ್.ಡಿ.ಎ ನಂತರದ ಸ್ಥಾನದಲ್ಲಿ ಇತರರು (ತೃತೀಯ ರಂಗ) ಬಂದರೆ ಕಾಂಗ್ರೆಸ್ ನೇತೃತ್ವದ ಯು.ಪಿ.ಎ ನೂರರ ಹತ್ತಿರತ್ತಿರ ಬಂದರೆ ಅದೇ ಪುಣ್ಯ ಎಂಬ ಅಂಶ ಬಹುತೇಕ ವಾಹಿನಿಗಳ ಚುನಾವಣಾ ಸಮೀಕ್ಷೆಯ ಅಭಿಪ್ರಾಯ. ಈ ಸಮೀಕ್ಷೆಗಳ ಆಧಾರದ ಮೇಲೆ ಮಾಧ್ಯಮಗಳಲ್ಲಿ ಚರ್ಚೆಗಳು ಪ್ರಾರಂಭವಾಗಿತ್ತು. ಚರ್ಚೆಗಳು ಮತ್ತಷ್ಟು ಮುಂದುವರೆಯುತ್ತಿದ್ದವೋ ಏನೋ ನ್ಯೂಸ್ ಎಕ್ಸ್ ಪ್ರೆಸ್ ವಾಹಿನಿ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಸಮೀಕ್ಷೆಗಳನ್ನು ಹಣ ನೀಡುವ ಅಭ್ಯರ್ಥಿ – ಪಕ್ಷಗಳ ಅನುಕೂಲಕ್ಕೆ ತಿರುಚಲಾಗುತ್ತದೆ ಎಂಬ ಸಂಗತಿ ಹೊರಬಂದ ನಂತರ ಸಮೀಕ್ಷೆಗಳ ಬಗೆಗಿನ ಚರ್ಚೆಗಳು ಮಾಯವಾಗಿಬಿಟ್ಟಿವೆ! ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲೂ ಮಾಧ್ಯಮಗಳ ಸಮೀಕ್ಷೆಗಳು ವಿಫಲವಾದುದಕ್ಕೂ ಇದೇ ಕಾರಣವಿರಬಹುದಾ?

ಚುನಾವಣೆಯ ಸಂದರ್ಭಗಳಲ್ಲಿ ಕಳೆದೊಂದು ದಶಕದಿಂದ ಹೆಚ್ಚು ಚರ್ಚೆಗೊಳಗಾಗುತ್ತಿರುವುದು “ಪೇಯ್ಡ್ ನ್ಯೂಸ್” ಎಂಬ ಅನಿಷ್ಟ ಸಂಪ್ರದಾಯ. ಹಣದಿಂದpaid-news ಮಾಧ್ಯಮಗಳ ಮುಖಪುಟವನ್ನು, ವಾಹಿನಿಗಳ ಸಮಯವನ್ನೇ ಖರೀದಿಸುವ ಸಂಪ್ರದಾಯ. ಪೇಯ್ಡ್ ನ್ಯೂಸನ್ನು ತಡೆಯಲು ಚುನಾವಣಾ ಆಯೋಗ ಕಾಳಜಿ ವಹಿಸುತ್ತಿದ್ದರೂ ಮತ್ತೊಂದು ಮಗದೊಂದು ಹೊಸ ಹೊಸ ರೂಪದಲ್ಲಿ ಪೇಯ್ಡ್ ನ್ಯೂಸ್ ಕಾಣಿಸಿಕೊಳ್ಳುತ್ತಲೇ ಇದೆ. ಇತ್ತೀಚೆಗಷ್ಟೇ ಪ್ರಜಾವಾಣಿಯಲ್ಲಿ ಧಾರವಾಡ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ತಮ್ಮ ಹಿಂಬಾಲಕರ ಮೂಲಕ ಅಲ್ಲಿನ ಸ್ಥಳೀಯ ಪತ್ರಕರ್ತರಿಗೆ ಉಡುಗೊರೆಗಳನ್ನು ನೀಡಿದ ವಿಚಾರ ಬಹಿರಂಗವಾಗಿತ್ತು. ‘ಜೋಶಿಯವರ ಪರವಾಗಿ ಬರೆಯಿರಿ, ಅದು ಸಾಧ್ಯವಾಗದಿದ್ದಲ್ಲಿ ಕಡೇ ಪಕ್ಷ ವಿರುದ್ಧ ವಿಚಾರಗಳನ್ನು ಬರೆಯಬೇಡಿ’ ಎಂಬುದವರ ಬೇಡಿಕೆಯಾಗಿತ್ತು! ಚುನಾವಣೆ ಸಂದರ್ಭದಲ್ಲಿ ಪತ್ರಕರ್ತರು ಲಕ್ಷಗಟ್ಟಲೆ ಹಣ ಮಾಡುವುದು ಈಗ ತೀರ ರಹಸ್ಯ ಸಂಗತಿಯಾಗೇನೂ ಉಳಿದಿಲ್ಲ. ಈ ರೀತಿಯ ಭ್ರಷ್ಟಾಚಾರವನ್ನೂ ತಡೆಗಟ್ಟಬಹುದೇನೋ. ಆದರೆ ರಾಜಕಾರಣಿಗಳೇ ವಾಹಿನಿಗಳ ಮಾಲೀಕರಾದ ಸಂದರ್ಭದಲ್ಲಿ ಪೇಯ್ಡ್ ನ್ಯೂಸ್ ಪಡೆಯುವ ಆಯಾಮವೇ ಬೇರೆ. ಕರ್ನಾಟಕದಲ್ಲಿ ಇದಕ್ಕೆ ಮೊದಲ ಉದಾಹರಣೆ ವಿಜಯ ಕರ್ನಾಟಕ ಪತ್ರಿಕೆ. ವಿಜಯ ಕರ್ನಾಟಕದ ಮಾಲೀಕತ್ವವನ್ನು ಹೊಂದಿದ್ದ ಸಂದರ್ಭದಲ್ಲಿ ವಿಜಯ ಸಂಕೇಶ್ವರ್ ಅವರದೇ ಪಕ್ಷವನ್ನೂ ಕಟ್ಟಿದ್ದರು. ಚುನಾವಣೆಯ ಸಮಯದಲ್ಲಿ ಇಡೀ ವಿಜಯ ಕರ್ನಾಟಕದ ತುಂಬಾ ಅವರ ಪಕ್ಷದ ಅಭ್ಯರ್ಥಿಗಳದೇ ಸುದ್ದಿ! ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್, ಬಿಜೆಪಿ ಅಥವಾ ಜೆಡಿಎಸ್ ಪಕ್ಷಕ್ಕೆ ಇವರ ಪಕ್ಷದವರದೇ ಪ್ರಬಲ ಪೈಪೋಟಿ! ಇಷ್ಟೆಲ್ಲ ಅಬ್ಬರದ ನಂತರವೂ ಅವರ ಪಕ್ಷ ಗೆಲುವು ಕಂಡಿದ್ದು ಕೆಲವೇ ಕೆಲವು ಸ್ಥಾನಗಳಲ್ಲಿ ಮಾತ್ರ. ಇತ್ತೀಚಿನ ಉದಾಹರಣೆಯಾಗಿ ಕಸ್ತೂರಿ, ಜನಶ್ರೀ ಮತ್ತು ಸುವರ್ಣ ವಾಹಿನಿಯನ್ನು ಗಮನಿಸಬಹುದು. ಕಸ್ತೂರಿಯಲ್ಲಿ ಸತತವಾಗಿ ಜೆ.ಡಿ.ಎಸ್ ಮುಖಂಡರ ವರಿಷ್ಟರ ಭಾಷಣಗಳ ಪ್ರಸಾರವಾಗುತ್ತದೆ. ಜನಶ್ರೀ ವಾಹಿನಿ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿ.ಎಸ್.ಆರ್ ಕಾಂಗ್ರೆಸ್ಸಿನ ಪರವಾಗಿ ಹೆಚ್ಚಿನ ಸುದ್ದಿಗಳನ್ನು ಪ್ರಸಾರ ಮಾಡುತಿತ್ತು. ಕಳೆದೊಂದು ವಾರದಿಂದ ಸುವರ್ಣದಲ್ಲಿ ‘ಆಧಾರ್’ ಕಾರ್ಡ್ ವಿರುದ್ಧವಾಗಿ ಅಭಿಯಾನವೇ ನಡೆಯುತ್ತಿದೆ. ದೇಶದ ಹಣ ಪೋಲಾಗುವ ಬಗ್ಗೆ ಕ್ರೋಧಗೊಂಡು ಈ ಅಭಿಯಾನ ನಡೆಸಿದ್ದರೆ ಬೆಂಬಲಿಸಬಹುದಿತ್ತೇನೋ. ಆದರೆ ಈ ಅಭಿಯಾನ ನಡೆಯುತ್ತಿರುವುದು ಆಧಾರ್ ಸಂಸ್ಥೆಯ ಮಾಜಿ ಮುಖ್ಯಸ್ಥ ನಂದನ್ ನಿಲೇಕಿಣಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕಾರಣದಿಂದ! ಮತ್ತು ಸುವರ್ಣ ವಾಹಿನಿ ರಾಜೀವ್ ಚಂದ್ರಶೇಖರ್ ನೇತೃತ್ವದಲ್ಲಿದೆ. ಮತ್ತವರು ಬಿಜೆಪಿಯ ಬೆಂಬಲಿಗರೆಂಬುದು ‘ಆಧಾರ್’ ವಿರುದ್ಧದ ಇಡೀ ಅಭಿಯಾನವನ್ನೇ ಅನುಮಾನದಿಂದ ನೋಡುವಂತೆ ಮಾಡಿಬಿಡುತ್ತದೆ. ಈ ರೀತಿಯ ಸುದ್ದಿ ಪ್ರಸಾರಗಳೂ ಕೂಡ ಪೇಯ್ಡ್ ನ್ಯೂಸಿನ ಅಡಿಯಲ್ಲಿ ಬರಬೇಕಲ್ಲವೇ?

ತೀರ ಜಯಪ್ರಕಾಶ ನಾರಾಯಣರ ಚಳುವಳಿಗೆ ಹೋಲಿಸುವುದಕ್ಕಾಗದಿದ್ದರೂ ಅರವಿಂದ ಕೇಜ್ರಿವಾಲ್ ನೇತೃತ್ವದ ‘ಆಮ್ ಆದ್ಮಿ ಪಕ್ಷ’ ದೇಶದಲ್ಲಿ ಮೂಡಿಸಿದ ಸಂಚಲನ ದೊಡ್ಡದು. ’ಅರವಿಂದ ಕೇಜ್ರಿವಾಲ್ ಮತ್ತವರ ಪಕ್ಷಕ್ಕೆ ಸೈದ್ಧಾಂತಿಕ ತಳಹದಿಯೇ ಇಲ್ಲ, ದೆಹಲಿಯಲ್ಲಿ ಆಡಳಿತ ನಡೆಸುವ ಅವಕಾಶ ಸಿಕ್ಕರೂ kejriwal_aap_pti_rallyಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲಾಗದ ಹೇಡಿ, ಅರಾಜಕತೆ ಸೃಷ್ಟಿಸುವ ಪ್ರತಿಭಟನೆಗಳನ್ನು ನಡೆಸುವುದರಲ್ಲಷ್ಟೇ ತೃಪ್ತ, ಕೇಜ್ರಿವಾಲ ಅಲ್ಲ ಕ್ರೇಜಿವಾಲ, ಅವರ ಪಕ್ಷಕ್ಕೆ ಒಂದು ನಿರ್ದಿಷ್ಟ ಉದ್ದೇಶ ಗುರಿ ಇಲ್ಲ, ಎಎಪಿ ಕಾಂಗ್ರೆಸ್ಸಿನ ಬಿ ಟೀಮ್, ಕಂಡವರನ್ನೆಲ್ಲ ಕಚ್ಚುವ ಅಭ್ಯಾಸ ಅರವಿಂದರಿಗೆ….’ ಇನ್ನೂ ಅನೇಕಾನೇಕ ಹೇಳಿಕೆಗಳು ಆಮ್ ಆದ್ಮಿ ಪಕ್ಷದ ಬಗ್ಗೆ ಕೇಳಿಬರುತ್ತಿದೆ. ಅಂದಹಾಗೆ ಆಮ್ ಆದ್ಮಿ ಪಕ್ಷ ಇನ್ನೂ ಬಾಲ್ಯಾವಸ್ಥೆಯಲ್ಲಿದೆ! ತೀರ ಇತ್ತೀಚೆಗೆ ಬಂದ ಒಂದು ಹೊಸ ರಾಜಕೀಯ ಪಕ್ಷದ ಬಗ್ಗೆ ದಶಕಗಳಿಂದ ರಾಜಕೀಯವನ್ನೇ ಅರೆದು ಕುಡಿಯುತ್ತಿರುವ ಪಕ್ಷಗಳ್ಯಾಕೆ ಇಷ್ಟೊಂದು ಮಾತನಾಡುತ್ತಿವೆ? ‘ಈ ಕಾಂಗ್ರೆಸ್ಸಿನವರು ಎಲ್ಲಿ ಹೋದರೂ ಮೋದಿ ಮೋದಿ ಅಂತ ಮಾತನಾಡುತ್ತಾರೆ. ಅಷ್ಟೇ ಸಾಕಲ್ಲವೇ ಮೋದಿ ಎಷ್ಟು ಖ್ಯಾತಿ ಹೊಂದಿದ್ದಾರೆ ಎಂದು ತಿಳಿಸಲು’ ಎಂದು ನಗುತ್ತಿದ್ದ ಬಿಜೆಪಿ ಮತ್ತದರ ಪ್ರಧಾನಿ ಅಭ್ಯರ್ಥಿ ನರೇಂದ್ರೆ ಮೋದಿ ಈಗ ಹೋದಬಂದಲ್ಲೆಲ್ಲ ಅರವಿಂದ್ ಕೇಜ್ರಿವಾಲರ ಬಗ್ಗೆ ಮಾತನಾಡುತ್ತಿದ್ದಾರೆ! ದೆಹಲಿಯಲ್ಲಿ ಒಂದಷ್ಟು ಸ್ಥಾನಗಳನ್ನಷ್ಟೇ ಗೆದ್ದಿದ್ದ ಆಮ್ ಆದ್ಮಿ ಪಕ್ಷದ ಬಗ್ಗೆ ಮತ್ತು ಅರವಿಂದ್ ಕೇಜ್ರಿವಾಲರ ಬಗ್ಗೆ ಇಷ್ಟೊಂದು ಭಯವ್ಯಾಕೆ? ತಮ್ಮೆಲ್ಲಾ ತಿಕ್ಕಲುತನ, ಅಪ್ರಬುದ್ಧ ನಿರ್ಧಾರಗಳ ನಡುವೆಯೂ ಅರವಿಂದ್ ಕೇಜ್ರಿವಾಲ್ ತಮ್ಮ ಅಮಾಯಕತೆಯನ್ನು ಕಳೆದುಕೊಂಡಿಲ್ಲ. ಅವರ ಅಮಾಯಕತೆಯೇ ಯಾವ ಅಂಜಿಕೆಯೂ ಇಲ್ಲದೆ ಸತ್ಯವನ್ನು ಹೇಳಿಸಿಬಿಡುತ್ತಿದೆ. ಎಲ್ಲ ಸತ್ಯಗಳಿಗೂ ಸಾಕ್ಷ್ಯಗಳನ್ನೊದಗಿಸುವುದು ಅಸಾಧ್ಯ ಎಂಬ ಸಂಗತಿ ಗೊತ್ತಿದ್ದರೂ ಸತ್ಯವನ್ನು ನಿರ್ಬಿಡೆಯಿಂದ ಹೇಳುವುದಕ್ಕೆ ಹಿಂಜರಿಯುತ್ತಿಲ್ಲ. ಮತ್ತು ಆ ಸತ್ಯಕ್ಕೆ ಉಳಿದ ಪಕ್ಷಗಳು ಭಯಭೀತರಾಗುತ್ತಿದ್ದಾವೆ! ಎಲ್ಲಿಯವರೆಗೆ ಅರವಿಂದ್ ಕೇಜ್ರಿವಾಲ್ ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದರೋ ಅಲ್ಲಿಯವರೆಗೆ ಬಿ.ಜೆ.ಪಿ, ಅದರ ಅಂಗಸಂಸ್ಥೆಗಳು ಮತ್ತು ಬಿ.ಜೆ.ಪಿ ಬೆಂಬಲಿಗರು ಕೇಜ್ರಿವಾಲರನ್ನು ಬೆಂಬಲಿಸುತ್ತಿದ್ದರು. ಇದಕ್ಕೆ ಕಾರಣ ಕೇಂದ್ರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಸರಕಾರದ ವಿರುದ್ಧ ಆ ಪ್ರತಿಭಟನೆ ಕೇಂದ್ರೀಕ್ರತವಾಗಿತ್ತು. ಆಮ್ ಆದ್ಮಿ ಪಕ್ಷ ಕಟ್ಟುವಾಗಲೂ ಅವರ ಬೆಂಬಲ ಮುಂದುವರೆದಿತ್ತು. ದೆಹಲಿಯ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಮತಗಳನ್ನು ಆಮ್ ಆದ್ಮಿ ಪಕ್ಷ ಸೆಳೆದುಕೊಂಡು ತಮಗೆ ಬಹುಮತ ದೊರೆಯುವುದು ನಿಶ್ಚಿತ ಎಂಬ ನಿರ್ಣಯಕ್ಕೆ ಬಂದಿತ್ತು ಬಿ.ಜೆ.ಪಿ. ಆದರೆ ಯಾವಾಗ ಆಮ್ ಆದ್ಮಿ ಪಕ್ಷ ಕಾಂಗ್ರೆಸ್ಸಿನ ಮತಗಳ ಜೊತೆಜೊತೆಗೆ ಬಿ.ಜೆ.ಪಿಯ ಮತಗಳನ್ನೂ ಸೆಳೆಯಲಾರಂಭಿಸಿತೋ ಬಿ.ಜೆ.ಪಿ ಮತ್ತದರ ಬೆಂಬಲಿಗರ ಪ್ರೀತಿ ಕಡಿಮೆಯಾಯಿತು. ಉದ್ದಿಮೆಗಳು ಪಕ್ಷಗಳನ್ನು ಮತ್ತು ಪಕ್ಷಗಳ ಸರಕಾರಗಳನ್ನು ನಿಯಂತ್ರಿಸುವ ಬಗೆಯನ್ನು ಘಂಟಾಘೋಷವಾಗಿ ಸಾರುತ್ತ ನರೇಂದ್ರ ಮೋದಿ ಕೂಡ ಅದಾನಿ ಅಂಬಾನಿಗಳ ಕೈಗೊಂಬೆ ಎಂಬ ಕಟುಸತ್ಯವನ್ನು ತಿಳಿಸಲಾರಂಭಿಸಿದ ಮೇಲೆ ಅರವಿಂದ ಕೇಜ್ರಿವಾಲರ ಬಗೆಗಿನ ಅಪಸ್ವರಗಳು ಹೆಚ್ಚುತ್ತಾ ಸಾಗಿದವು. ಉದ್ಯಮಪತಿಗಳನ್ನು ಎದುರಿಹಾಕಿಕೊಂಡು ಎಷ್ಟರ ಮಟ್ಟಿಗೆ ಮುಂದುವರೆಯಬಲ್ಲರು ಕೇಜ್ರಿವಾಲ್?

ಪ್ರಜಾಪ್ರಭುತ್ವದ ಆರೋಗ್ಯ ಸುಧಾರಿಸಲು ಕೇಜ್ರಿವಾಲ್ ಮತ್ತು ಆಮ್ ಆದ್ಮಿ ತರಹದ ಪಕ್ಷಗಳು ಅವಶ್ಯಕವಾದರೂ ಎಷ್ಟರ ಮಟ್ಟಿಗೆ ಅವರು ಸುಧಾರಣೆ ತರಲು ಸಾಧ್ಯ ಎಂದು ಗಮನಿಸಿದರೆ ಈಗಲೇ ನಿರಾಶೆಯಾಗಿಬಿಡುತ್ತದೆ. ತಮ್ಮದಿನ್ನೂ ಹೊಸ ಪಕ್ಷ, ಪ್ರತಿಭಟನೆ, ಭಾಷಣಗಳ ಜೊತೆಜೊತೆಗೆ ಪಕ್ಷ ಸಂಘಟನೆಗೂ ಒತ್ತು ಕೊಡಬೇಕು ಎಂಬ ವಿಚಾರ ಮರೆತುಬಿಟ್ಟಿದ್ದಾರೆ. ಆತುರಾತುರದಲ್ಲಿ ಸಾಧ್ಯವಾದಷ್ಟೂ ಕಡೆ ಚುನಾವಣಾ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಈ ಆತುರದ ಕಾರಣದಿಂದ ಉಳಿದ ರಾಜಕೀಯ ಪಕ್ಷಗಳು ಮಾಡುವಂತೆ ಸಿನಿಮಾದವರಿಗೆ ಟಿಕೇಟು ಕೊಟ್ಟಿದ್ದಾರೆ. ಟಿಕೇಟು ನೀಡಲು ಅವರು ಸಿನಿಮಾದವರು ಎಂಬುದಷ್ಟೇ ಮಾನದಂಡ. ಸಿನಿಮಾ ಕ್ಷೇತ್ರದವರಿಗೆ ಟಿಕೇಟು ಹಂಚಲು ಬಹುತೇಕ ಎಲ್ಲ ಪಕ್ಷಗಳೂ ತುದಿಗಾಲಲ್ಲಿ ನಿಂತಿವೆ. ಸಿನಿಮಾದ ನಂತರ ಹೆಚ್ಚು ಪ್ರಚಾರ ಪಡೆಯುವ ಕ್ರಿಕೆಟ್ ಆಟಗಾರರನ್ನೂ ಚುನಾವಣಾ ಅಖಾಡಕ್ಕೆ ಇಳಿಸಲಾಗಿದೆ. ವಿವಿಧ ಕ್ಷೇತ್ರದವರು ರಾಜಕೀಯಕ್ಕೆ ಬರುವುದು ಉತ್ತಮ ಸಂಗತಿಯೇನೋ ಹೌದು. ಆದರೆ ಭಾರತದಲ್ಲಿ ಸಿನಿಮಾ – ಕ್ರಿಕೆಟ್ಟಿನಲ್ಲಿ ಪಡೆದ ಖ್ಯಾತಿಯಿಂದ ರಾಜಕೀಯಕ್ಕೆ ಪ್ರವೇಶ ಮಾಡಿರುವವರಲ್ಲಿ ಎಷ್ಟು ಜನ ಸಾಮಾಜಿಕ ಮನೋಭಾವದಿಂದ ಕೆಲಸ ನಿರ್ವಹಿಸಿದ್ದಾರೆ ಎಂದು ಗಮನಿಸಿದರೆ ನಿರಾಶೆಯಾಗುವುದೇ ಹೆಚ್ಚು.

ಮೋದಿ, ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲರ ಗದ್ದಲದಲ್ಲಿ ಮುಖ್ಯವಾಹಿನಿಗಳು ಬಹುಶಃ ಉದ್ದೇಶಪೂರ್ವಕವಾಗಿ ಕಡೆಗಣಿಸಿರುವುದು ತೃತೀಯ ರಂಗದ ಶಕ್ತಿಯನ್ನು. ರಾಷ್ಟ್ರೀಯ ಪಕ್ಷಗಳು ಎಂಬ ಪದವೇ ಬಹಳಷ್ಟು ರಾಜ್ಯಗಳಲ್ಲಿ ಸವಕಲಾಗಿ ಪ್ರಾದೇಶಿಕ ಪಕ್ಷಗಳ ನೆರಳಿನಲ್ಲಿ ರಾಷ್ಟ್ರೀಯ ಪಕ್ಷಗಳು ಉಸಿರಾಡುವಂತಹ ಪರಿಸ್ಥಿತಿ ಇದೆ. ಹರ್ ಹರ್ ಮೋದಿ, ಘರ್ ಘರ್ ಮೋದಿ ಎಂದರಚುತ್ತಾ ಇನ್ನೂ ಅನೇಕಾನೇಕ ರೀತಿಯಲ್ಲಿ ಪ್ರಜಾಪ್ರಭುತ್ವವನ್ನು ಲೇವಡಿ ಮಾಡುತ್ತಿರುವ “ಮೋದಿ ಬ್ರಿಗೇಡ್”ಗೆ ಕೂಡ ಸತ್ಯದ ಅರಿವಿದೆ. ಎಷ್ಟೇ ಮೋದಿ ಅಲೆ ಎಂದಬ್ಬರಿಸಿದರೂ ಕೊನೆಗೆ ರಾಜ್ಯಗಳ ‘ಸಣ್ಣ’ ಪಕ್ಷಗಳ ನೆರವಿಲ್ಲದೆ ಬಿಜೆಪಿ ಕೂಡ ಅಧಿಕಾರಕ್ಕೆ ಬರಲಾರದು, ಮೋದಿ ಪ್ರಧಾನಿಯಾಗಲಾರರು ಎಂದು. ತೃತೀಯ ರಂಗಕ್ಕೆ ಚಾಲನೆ ನೀಡುವ ಪ್ರಯತ್ನ ನಡೆಯಿತಾದರೂ ಹತ್ತಾರು ಪಕ್ಷಗಳಲ್ಲಿ ಅನೇಕರು ಪ್ರಧಾನಿ ಸ್ಥಾನದ ಆಕಾಂಕ್ಷಿಗಳಾಗಿರುವುದರಿಂದ ಚುನಾವಣಾ ಪೂರ್ವ ಹೊಂದಾಣಿಕೆ ಎಂಬುದು ಇನ್ನೂ ಸಾಧ್ಯವಾಗಿಲ್ಲ. ಬಿ.ಜೆ.ಪಿ, ಕಾಂಗ್ರೆಸ್ಸಿನಂತಹ ಪಕ್ಷದೊಳಗೇ ಟಿಕೇಟ್ ಹಂಚಿಕೆಯ ಸಂದರ್ಭದಲ್ಲಿ ಅಸಮಾಧಾನ ಭುಗಿಲೆದ್ದು ಪಕ್ಷಾಂತರ ಮಾಡುವವರು, ಪಕ್ಷೇತರರಾಗಿ ಸ್ಪರ್ಧಿಸುವವರ ಸಂಖೈ ಹೆಚ್ಚಿರುವಾಗ ಪ್ರಾದೇಶಿಕ ಪಕ್ಷಗಳ ನಡುವಿನ ಕಿತ್ತಾಟಗಳು ಅನಿರೀಕ್ಷಿತವೇನಲ್ಲ. ಇನ್ನೆರಡು ತಿಂಗಳಿನಲ್ಲಿ ಹದಿನಾರನೇ ಲೋಕಸಭೆಯ ಚುಕ್ಕಾಣಿ ಹಿಡಿಯುವವರಾರು ಎಂಬುದು ನಿಕ್ಕಿಯಾಗುತ್ತದೆ. ಮಾಧ್ಯಮಗಳ ಸಮೀಕ್ಷೆಗಳು, ನಮ್ಮ ವೈಯಕ್ತಿಕ ಅಭಿಪ್ರಾಯಗಳು, ಪೇಯ್ಡ್ ನ್ಯೂಸುಗಳೆಲ್ಲ ಏನೇ ಹೇಳಿದರೂ ಕೊನೆಗೆ ಚುನಾವಣೆಯ ದಿನ ಮತ ಹಾಕುವವನ ಮನಸ್ಥಿತಿಯ ಮೇಲೆ ರಾಜಕೀಯ ಪಕ್ಷಗಳ ರಾಜಕಾರಣಿಗಳ ಭವಿಷ್ಯ ನಿರ್ಧರಿತವಾಗುತ್ತದೆ. ಯಾರೇ ಅಧಿಕಾರಕ್ಕೆ ಬಂದರೂ ವರುಷ ಕಳೆಯುವದರೊಳಗೆ ‘ಅಯ್ಯೋ ನಮ್ಮ ಮನಮೋಹನಸಿಂಗೇ ವಾಸಿಯಿದ್ದ ಕಣ್ರೀ. ಇದೇನ್ರೀ ಇವರದು ಇಂತಹ ಕರ್ಮ’ ಎನ್ನುವ ಪರಿಸ್ಥಿತಿ ಬಾರದಿರಲಿ ಎಂದು ಆಶಿಸೋಣ.