ವಿಚಾರಗಳು ಹಿಂದಾಗಿ ಗದ್ದಲಗಳೇ ವಿಜೃಂಭಿಸುವ ಚುನಾವಣೆಯ ಸಮಯ


– ಡಾ. ಅಶೋಕ್ ಕೆ.ಆರ್.


 

ವರುಷದ ಹಿಂದಿನಿಂದಲೇ ಪ್ರಾರಂಭವಾಗಿದ್ದ ಚುನಾವಣಾ ತಯಾರಿಗಳು ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ವೇಗೋತ್ಕರ್ಷಕ್ಕೊಳಗಾಗಿವೆ. ಚುನಾವಣಾ ತಯಾರಿಗಳು ಆರಂಭಗೊಂಡ ದಿನದಿಂದಲೂ ಈ ಬಾರಿಯ ಲೋಕಸಭಾ ಚುನಾವಣೆಯನ್ನು ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ನಡುವಿನ ‘ಸಮರ’ ಎಂದೇ ಬಿಂಬಿಸಲಾಗುತ್ತಿದೆ. ಚುನಾವಣೆ ಘೋಷಣೆಯಾದ ನಂತರದಲ್ಲೂ ವಿಷಯಾಧಾರಿತ ಚರ್ಚೆಗಳು ಮುನ್ನೆಲೆಗೆ ಬರದಿರುವುದು ನಮ್ಮ ಪ್ರಜಾಪ್ರಭುತ್ವ ಹಿಡಿಯುತ್ತಿರುವ ಜಾಡನ್ನು ತೋರುತ್ತಿದೆಯೇ? ಈಗಲೂ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯ ಭಾಷಣಗಳಲ್ಲಿ ಕಾಂಗ್ರೆಸ್ ಮತ್ತದರ ನಾಯಕರ ಬಗೆಗಿನ ಅವಹೇಳನಕಾರಿ ಮಾತುಗಳು ಮತ್ತು ಕಾಂಗ್ರೆಸ್ಸಿಗರ ಭಾಷಣಗಳಲ್ಲಿ ನರೇಂದ್ರ ಮೋದಿ ಬಗೆಗಿನ ವ್ಯಂಗ್ಯಮಿಶ್ರಿತ ಕೆಲವೊಮ್ಮೆ ಅಸಂಬದ್ಧ ಮಾತುಗಳೇ ವಿಜೃಂಭಿಸುತ್ತಿದೆಯೇ ಹೊರತು ಅಧಿಕಾರಕ್ಕೆ ಬಂದರೆ ತಾವು ನೀಡಬಹುದಾದ ಆಡಳಿತದ ಮಾದರಿಯ ಬಗೆಗಿನ ವಿಚಾರಗಳು ಚರ್ಚೆಗೊಳಪಡುತ್ತಲೇ ಇಲ್ಲ. ಇವತ್ತಿನ ಚುನಾವಣಾ ಮಾದರಿಯು ಪ್ರಜಾಪ್ರಭುತ್ವದ ಅಣಕವಾಡುತ್ತಿದೆ.

ಪ್ರಜೆಗಳಿಂದ ಆಯ್ದು ಬಂದ ನೇತಾರ ಅವರನ್ನು ಮುನ್ನಡೆಸುವವನಾದಾಗ ಪ್ರಜಾಪ್ರಭುತ್ವದ ನಿಜ ಅರ್ಥ ಸಾರ್ಥಕವಾಗುತ್ತದೆ. ಆದರೆ ಈಗಿನ ಪ್ರಜಾಪ್ರಭುತ್ವ ಪ್ರಜೆಗಳಿಂದ ಆರಿಸಿ ಬಂದಮೇಲೆ ಪ್ರಜೆಗಳ ಮೇಲೆ ಪ್ರಭುತ್ವ ಸಾಧಿಸುವುದಷ್ಟೇ ಆಗಿ ಹೋಗುತ್ತಿದೆ. ಈ ರೀತಿಯ ಸಿನಿಕತನವೂ ತಾತ್ಕಾಲಿಕವೆ? ಪ್ರತಿ ಬಾರಿಯ ಚುನಾವಣೆಯ ಸಂದರ್ಭದಲ್ಲೂ ಹಿಂದಿನ ಚುನಾವಣೆಯ ಸಂದರ್ಭ ಈಗಿನದಕ್ಕಿಂತ ಉತ್ತಮವಾಗಿತ್ತು ಎಂಬ ಭಾವ ಮೂಡಿಸುತ್ತದೆಯಾ? ಪ್ರತಿ ಬಾರಿ ಹೊಸತೊಂದು ಆಶಯದೊಂದಿಗೆ ಹೊಸ ಸರಕಾರಕ್ಕೆ1 ಅವಕಾಶ ಕೊಟ್ಟ ನಂತರ ಕೆಲವೇ ತಿಂಗಳುಗಳಲ್ಲಿ ಅಥವಾ ವರ್ಷ ಕಳೆಯುವಷ್ಟರಲ್ಲಿ ‘ಅಯ್ಯೋ ಹೋದ ಸರಕಾರವೇ ಪರವಾಗಿರಲಿಲ್ಲ’ ಎಂಬ ಭಾವನೆ ಮೂಡಲಾರಂಭಿಸುತ್ತದೆ! ಹತ್ತು ವರುಷದ ಮನಮೋಹನಸಿಂಗ್ ಆಡಳಿತದಿಂದ ಬೇಸತ್ತ ಜನ ಅಟಲ್ ಬಿಹಾರಿ ವಾಜಪೇಯಿಯ ಗುಣಗಾನ ಮಾಡುತ್ತಾರೆ. ಅಟಲ್ ಆಡಾಳಿತಾವಧಿಯಲ್ಲಿ ನಡೆದ ಹಗರಣಗಳು ನರಸಿಂಹ ರಾವ್ ಅವರೇ ವಾಸಿ ಕಣ್ರೀ ಎಂಬಂತೆ ಮಾಡಿಬಿಡುತ್ತವೆ! ಸಮ್ಮಿಶ್ರ ಸರಕಾರಗಳಿಂದ ಬೇಸತ್ತು ಕರ್ನಾಟಕದಲ್ಲಿ ಬಿಜೆಪಿಯನ್ನು ಆರಿಸಿದ ನಂತರ ಬಿಜೆಪಿಯ ಆಡಳಿತ ವೈಖರಿಯಿಂದ ಸುಸ್ತೆದ್ದು ‘ಕಾಂಗ್ರೆಸ್ಸೇ ವಾಸಿ’ ಎಂದು ಬಿಜೆಪಿಯನ್ನು ಸೋಲಿಸುತ್ತಾರೆ ಜನ. ಇನ್ನು ಕೆಲವು ದಿನಗಳಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವೂ ತನ್ನ ದೌರ್ಬಲ್ಯ, ನಿಷ್ಕ್ರಿಯತೆಗಳಿಂದ ಹಳೆಯ ಸರಕಾರವೇ ಒಳ್ಳೆಯದಿತ್ತು ಎಂಬ ಭಾವ ಮೂಡಿಸಿದರೆ ಅಚ್ಚರಿಪಡಬೇಕಿಲ್ಲ! ನಮ್ಮ ನಿರೀಕ್ಷೆಗೆ ತಕ್ಕಂತೆ ಸರಕಾರಗಳು ಕಾರ್ಯನಿರ್ವಹಿಸಲು ವಿಫಲವಾದಾಗ ಈಗಾಗಲೇ ಸೋತು ಮೂಲೆಯಲ್ಲಿರುವ ಕಳೆದ ಬಾರಿ ಆಡಳಿತ ನಡೆಸಿದ ಪಕ್ಷದ ಬಗೆಗೆ ಮೃದು ದೋರಣೆ ತಳೆದುಬಿಡಲಾಗುತ್ತದೆ. ಬಹುಶಃ ಈ ಬಾರಿಯ ಚುನಾವಣೆಯಲ್ಲಿ ಮೋದಿ ಅಲೆ ಎಂದು ಎಷ್ಟೇ ದೊಡ್ಡ ದನಿಯಲ್ಲಿ ಕೂಗುತ್ತಿದ್ದರೂ ಯು.ಪಿ.ಎ 2ರ ಆಡಳಿತ ಜನರಲ್ಲಿ ಬೇಸರ ಮೂಡಿಸಿದೆ ಮತ್ತು ಬೇಸರ ಅಟಲ್ ನೇತೃತ್ವದ ಎನ್.ಡಿ.ಎ ವಾಸಿಯಿತ್ತು ಎನ್ನುವಂತೆ ಮಾಡುತ್ತಿರುವುದು ಈ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ 2009ರ ಚುನಾವಣೆಯಲ್ಲಿ ಎನ್.ಡಿ.ಎ ಉತ್ತಮ ಎಂಬ ಚರ್ಚೆಗಳು ನಡೆದಿರಲಿಲ್ಲ, ಕಾರಣ ಯು.ಪಿ.ಎ ತನ್ನ ಮೊದಲ ಆಡಳಿತಾವಧಿಯಲ್ಲಿ ಹೆಚ್ಚಿನ ಹಗರಣಗಳನ್ನೇನೂ ಮಾಡಿಕೊಂಡಿರಲಿಲ್ಲ. ಹಗರಣಗಳು, ಜಾಗತೀಕರಣಕ್ಕೆ ಒಡ್ಡಿಕೊಂಡ ಪರಿಣಾಮವಾಗಿ ಆರ್ಥಿಕ ಶಿಸ್ತು ದೇಶದ ಆಡಳಿತದ ಕೈಹಿಡಿತದಿಂದ ತಪ್ಪಿಸಿಕೊಂಡು ಜನರನ್ನು ಬವಳಿಕೆಗೆ ಒಳಪಡಿಸಿದ ರೀತಿ ಮತ್ತು ವರ್ಷದಿಂದ ವರ್ಷಕ್ಕೆ ತನ್ನ ಹಿಡಿತವನ್ನು ಬಲಗೊಳಿಸುಕೊಳ್ಳುತ್ತಲೇ ಸಾಗುತ್ತಿರುವ ಭ್ರಷ್ಟಾಚಾರ ಯು.ಪಿ.ಎಯನ್ನು 2014ರ ಚುನಾವಣೆಯಲ್ಲಿ ಸೋಲುವಂತೆ ಮಾಡುವುದು ಹೆಚ್ಚು ಕಡಿಮೆ ನಿಶ್ಚಯವಾಗಿದೆ.

ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಸ್ವಯಂಕೃತ ತಪ್ಪುಗಳಿಂದ ಮತ್ತು ಮೋದಿ ಅಲೆಯಿಂದ ಸೋಲನುಭವಿಸುತ್ತದೆ ಎಂದು ಮಾಧ್ಯಮಗಳು ಹೇಳುತ್ತಿವೆ. ಬಹುತೇಕ ಜನರಿಗೂ ಅದೇ ಭಾವನೆಯಿದೆ. ಆದರೆ ಕಾಂಗ್ರೆಸ್ಸನ್ನು ಕಡೆಗಣಿಸಿ ಉಳಿದ ಪಕ್ಷಗಳು ಚುನಾವಣೆ ತಯ್ಯಾರಿ ಮಾಡಿದರೆ ಮತ್ತೆ ಕಾಂಗ್ರೆಸ್ ಅನಿರೀಕ್ಷಿತ ಅಘಾತ ನೀಡಿಬಿಡಬಹುದು. ಈಗಿನ ಬಿ.ಜೆ.ಪಿ ಕೇವಲ ಒಬ್ಬ ವ್ಯಕ್ತಿಯ ಖ್ಯಾತಿಯ ಮೇಲೆ ಚುನಾವಣೆ ಎದುರಿಸಲು ಸನ್ನದ್ಧವಾಗಿದ್ದರೆ 2004ರಲ್ಲಿ ಬಿ.ಜೆ.ಪಿ ನೇತೃತ್ವದ ಎನ್.ಡಿ.ಎ ‘ಇಂಡಿಯಾ ಶೈನಿಂಗ್’ ಎಂಬ ಘೋಷ ವಾಕ್ಯದೊಂದಿಗೆ ಈಗಿನದಕ್ಕಿಂತಲೂ ಹೆಚ್ಚಿನ ಅಬ್ಬರದೊಂದಿಗೆ ಪ್ರಚಾರವಾರಂಭಿಸಿತ್ತು. ಮಾಧ್ಯಮಗಳಲ್ಲೂ ‘ಇಂಡಿಯಾ ಶೈನಿಂಗ್’ನದ್ದೇ ಮಾತು. ಜನರಲ್ಲೂ ಅದೇ ಮಾತು. ಮಾತುಗಳ ಹಿಂದಿನ ಮೌನದಲ್ಲಿ ಹರಿಯುವ ವಿಚಾರಗಳ ಬಗ್ಗೆ ಪ್ರಚಾರದಬ್ಬರದಲ್ಲಿ ಯಾರೂ ಗಮನಹರಿಸದ ಕಾರಣ ಯಾವ ಹೆಚ್ಚಿನ ಪ್ರಚಾರವನ್ನೂ ಮಾಡದೆ ಮಾಧ್ಯಮಕ್ಕೆ ಪ್ರಿಯರೂ ಆಗದೆ ಕಾಂಗ್ರೆಸ್ ಎಲ್ಲರಿಗೂ ಅಚ್ಚರಿ ನೀಡುವ ರೀತಿಯಲ್ಲಿ ಗೆದ್ದು ಬಂದಿತ್ತು. 2009ರ ಚುನಾವಣೆಯಲ್ಲಿ ಸಹಿತ ಎನ್.ಡಿ.ಎ ಅಧಿಕಾರವಿಡಿಯುತ್ತದೆ ಎಂದು ಸಮೀಕ್ಷೆಗಳು ಹೇಳಿದ್ದವಾದರೂ ಕೊನೆಗೆ ಮತ್ತೆ ಗೆದ್ದು ಬಂದಿದ್ದು ಯು.ಪಿ.ಎ! ಎಲ್ಲೋ ಒಂದೆಡೆ ಜನರ ಮನಸ್ಥಿತಿಯನ್ನು ಅರಿಯಲು ರಾಜಕೀಯ ಪಕ್ಷಗಳು ಮತ್ತು ಮಾಧ್ಯಮಗಳು ವಿಫಲವಾಗುತ್ತಿವೆಯಾ?

ಜನರ ಮನಸ್ಥಿತಿ ಅರಿಯುವುದಕ್ಕಿಂತ ಹೆಚ್ಚಾಗಿ ಜನರ ಯೋಚನಾ ಲಹರಿಯನ್ನೇ ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಗಿಸುವ ಕಾರ್ಯದಲ್ಲಿ ಇಂದಿನ ರಾಜಕೀಯ ಪಕ್ಷಗಳ ನೇತಾರರು ನಿರತರಾಗಿದ್ದಾರೆ. ಈ ಉದ್ದೇಶಕ್ಕಾಗಿ ಮಾಧ್ಯಮಗಳನ್ನು ಖರೀದಿಸುತ್ತಾರೆ, ಮಾಧ್ಯಮಗಳ ಮಾಲೀಕತ್ವ ವಹಿಸುತ್ತಾರೆ ಮತ್ತು ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹೋಗುತ್ತಿರುವ ಭ್ರಷ್ಟಾಚಾರವನ್ನು ಬಳಸಿಕೊಳ್ಳುತ್ತ ತಮ್ಮ ಪರವಾಗಿರುವ ವರದಿಗಳಷ್ಟೇ ಪ್ರಸಾರವಾಗುವಂತೆ ಮಾಡಿಬಿಡುತ್ತಾರೆ. 2014ರ ಚುನಾವಣೆಯ ಬಗೆಗೆ ಅನೇಕ ವಾಹಿನಿಗಳು ನಡೆಸಿದ ಸಮೀಕ್ಷೆಗಳ ಪ್ರಕಾರ ಬಿ.ಜೆ.ಪಿ ಏಕಾಂಗಿಯಾಗಲ್ಲದಿದ್ದರೂ ತನ್ನ ನೇತೃತ್ವದ ಎನ್.ಡಿ.ಎ ಮುಖಾಂತರ ಸರಕಾರ ನಿರ್ಮಿಸಲು ಅಗತ್ಯವಾದ ಸ್ಥಾನಗಳ ಸಮೀಪಕ್ಕೆ ಬರುತ್ತದೆ. ಎನ್.ಡಿ.ಎ ನಂತರದ ಸ್ಥಾನದಲ್ಲಿ ಇತರರು (ತೃತೀಯ ರಂಗ) ಬಂದರೆ ಕಾಂಗ್ರೆಸ್ ನೇತೃತ್ವದ ಯು.ಪಿ.ಎ ನೂರರ ಹತ್ತಿರತ್ತಿರ ಬಂದರೆ ಅದೇ ಪುಣ್ಯ ಎಂಬ ಅಂಶ ಬಹುತೇಕ ವಾಹಿನಿಗಳ ಚುನಾವಣಾ ಸಮೀಕ್ಷೆಯ ಅಭಿಪ್ರಾಯ. ಈ ಸಮೀಕ್ಷೆಗಳ ಆಧಾರದ ಮೇಲೆ ಮಾಧ್ಯಮಗಳಲ್ಲಿ ಚರ್ಚೆಗಳು ಪ್ರಾರಂಭವಾಗಿತ್ತು. ಚರ್ಚೆಗಳು ಮತ್ತಷ್ಟು ಮುಂದುವರೆಯುತ್ತಿದ್ದವೋ ಏನೋ ನ್ಯೂಸ್ ಎಕ್ಸ್ ಪ್ರೆಸ್ ವಾಹಿನಿ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಸಮೀಕ್ಷೆಗಳನ್ನು ಹಣ ನೀಡುವ ಅಭ್ಯರ್ಥಿ – ಪಕ್ಷಗಳ ಅನುಕೂಲಕ್ಕೆ ತಿರುಚಲಾಗುತ್ತದೆ ಎಂಬ ಸಂಗತಿ ಹೊರಬಂದ ನಂತರ ಸಮೀಕ್ಷೆಗಳ ಬಗೆಗಿನ ಚರ್ಚೆಗಳು ಮಾಯವಾಗಿಬಿಟ್ಟಿವೆ! ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲೂ ಮಾಧ್ಯಮಗಳ ಸಮೀಕ್ಷೆಗಳು ವಿಫಲವಾದುದಕ್ಕೂ ಇದೇ ಕಾರಣವಿರಬಹುದಾ?

ಚುನಾವಣೆಯ ಸಂದರ್ಭಗಳಲ್ಲಿ ಕಳೆದೊಂದು ದಶಕದಿಂದ ಹೆಚ್ಚು ಚರ್ಚೆಗೊಳಗಾಗುತ್ತಿರುವುದು “ಪೇಯ್ಡ್ ನ್ಯೂಸ್” ಎಂಬ ಅನಿಷ್ಟ ಸಂಪ್ರದಾಯ. ಹಣದಿಂದpaid-news ಮಾಧ್ಯಮಗಳ ಮುಖಪುಟವನ್ನು, ವಾಹಿನಿಗಳ ಸಮಯವನ್ನೇ ಖರೀದಿಸುವ ಸಂಪ್ರದಾಯ. ಪೇಯ್ಡ್ ನ್ಯೂಸನ್ನು ತಡೆಯಲು ಚುನಾವಣಾ ಆಯೋಗ ಕಾಳಜಿ ವಹಿಸುತ್ತಿದ್ದರೂ ಮತ್ತೊಂದು ಮಗದೊಂದು ಹೊಸ ಹೊಸ ರೂಪದಲ್ಲಿ ಪೇಯ್ಡ್ ನ್ಯೂಸ್ ಕಾಣಿಸಿಕೊಳ್ಳುತ್ತಲೇ ಇದೆ. ಇತ್ತೀಚೆಗಷ್ಟೇ ಪ್ರಜಾವಾಣಿಯಲ್ಲಿ ಧಾರವಾಡ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ತಮ್ಮ ಹಿಂಬಾಲಕರ ಮೂಲಕ ಅಲ್ಲಿನ ಸ್ಥಳೀಯ ಪತ್ರಕರ್ತರಿಗೆ ಉಡುಗೊರೆಗಳನ್ನು ನೀಡಿದ ವಿಚಾರ ಬಹಿರಂಗವಾಗಿತ್ತು. ‘ಜೋಶಿಯವರ ಪರವಾಗಿ ಬರೆಯಿರಿ, ಅದು ಸಾಧ್ಯವಾಗದಿದ್ದಲ್ಲಿ ಕಡೇ ಪಕ್ಷ ವಿರುದ್ಧ ವಿಚಾರಗಳನ್ನು ಬರೆಯಬೇಡಿ’ ಎಂಬುದವರ ಬೇಡಿಕೆಯಾಗಿತ್ತು! ಚುನಾವಣೆ ಸಂದರ್ಭದಲ್ಲಿ ಪತ್ರಕರ್ತರು ಲಕ್ಷಗಟ್ಟಲೆ ಹಣ ಮಾಡುವುದು ಈಗ ತೀರ ರಹಸ್ಯ ಸಂಗತಿಯಾಗೇನೂ ಉಳಿದಿಲ್ಲ. ಈ ರೀತಿಯ ಭ್ರಷ್ಟಾಚಾರವನ್ನೂ ತಡೆಗಟ್ಟಬಹುದೇನೋ. ಆದರೆ ರಾಜಕಾರಣಿಗಳೇ ವಾಹಿನಿಗಳ ಮಾಲೀಕರಾದ ಸಂದರ್ಭದಲ್ಲಿ ಪೇಯ್ಡ್ ನ್ಯೂಸ್ ಪಡೆಯುವ ಆಯಾಮವೇ ಬೇರೆ. ಕರ್ನಾಟಕದಲ್ಲಿ ಇದಕ್ಕೆ ಮೊದಲ ಉದಾಹರಣೆ ವಿಜಯ ಕರ್ನಾಟಕ ಪತ್ರಿಕೆ. ವಿಜಯ ಕರ್ನಾಟಕದ ಮಾಲೀಕತ್ವವನ್ನು ಹೊಂದಿದ್ದ ಸಂದರ್ಭದಲ್ಲಿ ವಿಜಯ ಸಂಕೇಶ್ವರ್ ಅವರದೇ ಪಕ್ಷವನ್ನೂ ಕಟ್ಟಿದ್ದರು. ಚುನಾವಣೆಯ ಸಮಯದಲ್ಲಿ ಇಡೀ ವಿಜಯ ಕರ್ನಾಟಕದ ತುಂಬಾ ಅವರ ಪಕ್ಷದ ಅಭ್ಯರ್ಥಿಗಳದೇ ಸುದ್ದಿ! ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್, ಬಿಜೆಪಿ ಅಥವಾ ಜೆಡಿಎಸ್ ಪಕ್ಷಕ್ಕೆ ಇವರ ಪಕ್ಷದವರದೇ ಪ್ರಬಲ ಪೈಪೋಟಿ! ಇಷ್ಟೆಲ್ಲ ಅಬ್ಬರದ ನಂತರವೂ ಅವರ ಪಕ್ಷ ಗೆಲುವು ಕಂಡಿದ್ದು ಕೆಲವೇ ಕೆಲವು ಸ್ಥಾನಗಳಲ್ಲಿ ಮಾತ್ರ. ಇತ್ತೀಚಿನ ಉದಾಹರಣೆಯಾಗಿ ಕಸ್ತೂರಿ, ಜನಶ್ರೀ ಮತ್ತು ಸುವರ್ಣ ವಾಹಿನಿಯನ್ನು ಗಮನಿಸಬಹುದು. ಕಸ್ತೂರಿಯಲ್ಲಿ ಸತತವಾಗಿ ಜೆ.ಡಿ.ಎಸ್ ಮುಖಂಡರ ವರಿಷ್ಟರ ಭಾಷಣಗಳ ಪ್ರಸಾರವಾಗುತ್ತದೆ. ಜನಶ್ರೀ ವಾಹಿನಿ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿ.ಎಸ್.ಆರ್ ಕಾಂಗ್ರೆಸ್ಸಿನ ಪರವಾಗಿ ಹೆಚ್ಚಿನ ಸುದ್ದಿಗಳನ್ನು ಪ್ರಸಾರ ಮಾಡುತಿತ್ತು. ಕಳೆದೊಂದು ವಾರದಿಂದ ಸುವರ್ಣದಲ್ಲಿ ‘ಆಧಾರ್’ ಕಾರ್ಡ್ ವಿರುದ್ಧವಾಗಿ ಅಭಿಯಾನವೇ ನಡೆಯುತ್ತಿದೆ. ದೇಶದ ಹಣ ಪೋಲಾಗುವ ಬಗ್ಗೆ ಕ್ರೋಧಗೊಂಡು ಈ ಅಭಿಯಾನ ನಡೆಸಿದ್ದರೆ ಬೆಂಬಲಿಸಬಹುದಿತ್ತೇನೋ. ಆದರೆ ಈ ಅಭಿಯಾನ ನಡೆಯುತ್ತಿರುವುದು ಆಧಾರ್ ಸಂಸ್ಥೆಯ ಮಾಜಿ ಮುಖ್ಯಸ್ಥ ನಂದನ್ ನಿಲೇಕಿಣಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕಾರಣದಿಂದ! ಮತ್ತು ಸುವರ್ಣ ವಾಹಿನಿ ರಾಜೀವ್ ಚಂದ್ರಶೇಖರ್ ನೇತೃತ್ವದಲ್ಲಿದೆ. ಮತ್ತವರು ಬಿಜೆಪಿಯ ಬೆಂಬಲಿಗರೆಂಬುದು ‘ಆಧಾರ್’ ವಿರುದ್ಧದ ಇಡೀ ಅಭಿಯಾನವನ್ನೇ ಅನುಮಾನದಿಂದ ನೋಡುವಂತೆ ಮಾಡಿಬಿಡುತ್ತದೆ. ಈ ರೀತಿಯ ಸುದ್ದಿ ಪ್ರಸಾರಗಳೂ ಕೂಡ ಪೇಯ್ಡ್ ನ್ಯೂಸಿನ ಅಡಿಯಲ್ಲಿ ಬರಬೇಕಲ್ಲವೇ?

ತೀರ ಜಯಪ್ರಕಾಶ ನಾರಾಯಣರ ಚಳುವಳಿಗೆ ಹೋಲಿಸುವುದಕ್ಕಾಗದಿದ್ದರೂ ಅರವಿಂದ ಕೇಜ್ರಿವಾಲ್ ನೇತೃತ್ವದ ‘ಆಮ್ ಆದ್ಮಿ ಪಕ್ಷ’ ದೇಶದಲ್ಲಿ ಮೂಡಿಸಿದ ಸಂಚಲನ ದೊಡ್ಡದು. ’ಅರವಿಂದ ಕೇಜ್ರಿವಾಲ್ ಮತ್ತವರ ಪಕ್ಷಕ್ಕೆ ಸೈದ್ಧಾಂತಿಕ ತಳಹದಿಯೇ ಇಲ್ಲ, ದೆಹಲಿಯಲ್ಲಿ ಆಡಳಿತ ನಡೆಸುವ ಅವಕಾಶ ಸಿಕ್ಕರೂ kejriwal_aap_pti_rallyಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲಾಗದ ಹೇಡಿ, ಅರಾಜಕತೆ ಸೃಷ್ಟಿಸುವ ಪ್ರತಿಭಟನೆಗಳನ್ನು ನಡೆಸುವುದರಲ್ಲಷ್ಟೇ ತೃಪ್ತ, ಕೇಜ್ರಿವಾಲ ಅಲ್ಲ ಕ್ರೇಜಿವಾಲ, ಅವರ ಪಕ್ಷಕ್ಕೆ ಒಂದು ನಿರ್ದಿಷ್ಟ ಉದ್ದೇಶ ಗುರಿ ಇಲ್ಲ, ಎಎಪಿ ಕಾಂಗ್ರೆಸ್ಸಿನ ಬಿ ಟೀಮ್, ಕಂಡವರನ್ನೆಲ್ಲ ಕಚ್ಚುವ ಅಭ್ಯಾಸ ಅರವಿಂದರಿಗೆ….’ ಇನ್ನೂ ಅನೇಕಾನೇಕ ಹೇಳಿಕೆಗಳು ಆಮ್ ಆದ್ಮಿ ಪಕ್ಷದ ಬಗ್ಗೆ ಕೇಳಿಬರುತ್ತಿದೆ. ಅಂದಹಾಗೆ ಆಮ್ ಆದ್ಮಿ ಪಕ್ಷ ಇನ್ನೂ ಬಾಲ್ಯಾವಸ್ಥೆಯಲ್ಲಿದೆ! ತೀರ ಇತ್ತೀಚೆಗೆ ಬಂದ ಒಂದು ಹೊಸ ರಾಜಕೀಯ ಪಕ್ಷದ ಬಗ್ಗೆ ದಶಕಗಳಿಂದ ರಾಜಕೀಯವನ್ನೇ ಅರೆದು ಕುಡಿಯುತ್ತಿರುವ ಪಕ್ಷಗಳ್ಯಾಕೆ ಇಷ್ಟೊಂದು ಮಾತನಾಡುತ್ತಿವೆ? ‘ಈ ಕಾಂಗ್ರೆಸ್ಸಿನವರು ಎಲ್ಲಿ ಹೋದರೂ ಮೋದಿ ಮೋದಿ ಅಂತ ಮಾತನಾಡುತ್ತಾರೆ. ಅಷ್ಟೇ ಸಾಕಲ್ಲವೇ ಮೋದಿ ಎಷ್ಟು ಖ್ಯಾತಿ ಹೊಂದಿದ್ದಾರೆ ಎಂದು ತಿಳಿಸಲು’ ಎಂದು ನಗುತ್ತಿದ್ದ ಬಿಜೆಪಿ ಮತ್ತದರ ಪ್ರಧಾನಿ ಅಭ್ಯರ್ಥಿ ನರೇಂದ್ರೆ ಮೋದಿ ಈಗ ಹೋದಬಂದಲ್ಲೆಲ್ಲ ಅರವಿಂದ್ ಕೇಜ್ರಿವಾಲರ ಬಗ್ಗೆ ಮಾತನಾಡುತ್ತಿದ್ದಾರೆ! ದೆಹಲಿಯಲ್ಲಿ ಒಂದಷ್ಟು ಸ್ಥಾನಗಳನ್ನಷ್ಟೇ ಗೆದ್ದಿದ್ದ ಆಮ್ ಆದ್ಮಿ ಪಕ್ಷದ ಬಗ್ಗೆ ಮತ್ತು ಅರವಿಂದ್ ಕೇಜ್ರಿವಾಲರ ಬಗ್ಗೆ ಇಷ್ಟೊಂದು ಭಯವ್ಯಾಕೆ? ತಮ್ಮೆಲ್ಲಾ ತಿಕ್ಕಲುತನ, ಅಪ್ರಬುದ್ಧ ನಿರ್ಧಾರಗಳ ನಡುವೆಯೂ ಅರವಿಂದ್ ಕೇಜ್ರಿವಾಲ್ ತಮ್ಮ ಅಮಾಯಕತೆಯನ್ನು ಕಳೆದುಕೊಂಡಿಲ್ಲ. ಅವರ ಅಮಾಯಕತೆಯೇ ಯಾವ ಅಂಜಿಕೆಯೂ ಇಲ್ಲದೆ ಸತ್ಯವನ್ನು ಹೇಳಿಸಿಬಿಡುತ್ತಿದೆ. ಎಲ್ಲ ಸತ್ಯಗಳಿಗೂ ಸಾಕ್ಷ್ಯಗಳನ್ನೊದಗಿಸುವುದು ಅಸಾಧ್ಯ ಎಂಬ ಸಂಗತಿ ಗೊತ್ತಿದ್ದರೂ ಸತ್ಯವನ್ನು ನಿರ್ಬಿಡೆಯಿಂದ ಹೇಳುವುದಕ್ಕೆ ಹಿಂಜರಿಯುತ್ತಿಲ್ಲ. ಮತ್ತು ಆ ಸತ್ಯಕ್ಕೆ ಉಳಿದ ಪಕ್ಷಗಳು ಭಯಭೀತರಾಗುತ್ತಿದ್ದಾವೆ! ಎಲ್ಲಿಯವರೆಗೆ ಅರವಿಂದ್ ಕೇಜ್ರಿವಾಲ್ ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದರೋ ಅಲ್ಲಿಯವರೆಗೆ ಬಿ.ಜೆ.ಪಿ, ಅದರ ಅಂಗಸಂಸ್ಥೆಗಳು ಮತ್ತು ಬಿ.ಜೆ.ಪಿ ಬೆಂಬಲಿಗರು ಕೇಜ್ರಿವಾಲರನ್ನು ಬೆಂಬಲಿಸುತ್ತಿದ್ದರು. ಇದಕ್ಕೆ ಕಾರಣ ಕೇಂದ್ರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಸರಕಾರದ ವಿರುದ್ಧ ಆ ಪ್ರತಿಭಟನೆ ಕೇಂದ್ರೀಕ್ರತವಾಗಿತ್ತು. ಆಮ್ ಆದ್ಮಿ ಪಕ್ಷ ಕಟ್ಟುವಾಗಲೂ ಅವರ ಬೆಂಬಲ ಮುಂದುವರೆದಿತ್ತು. ದೆಹಲಿಯ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಮತಗಳನ್ನು ಆಮ್ ಆದ್ಮಿ ಪಕ್ಷ ಸೆಳೆದುಕೊಂಡು ತಮಗೆ ಬಹುಮತ ದೊರೆಯುವುದು ನಿಶ್ಚಿತ ಎಂಬ ನಿರ್ಣಯಕ್ಕೆ ಬಂದಿತ್ತು ಬಿ.ಜೆ.ಪಿ. ಆದರೆ ಯಾವಾಗ ಆಮ್ ಆದ್ಮಿ ಪಕ್ಷ ಕಾಂಗ್ರೆಸ್ಸಿನ ಮತಗಳ ಜೊತೆಜೊತೆಗೆ ಬಿ.ಜೆ.ಪಿಯ ಮತಗಳನ್ನೂ ಸೆಳೆಯಲಾರಂಭಿಸಿತೋ ಬಿ.ಜೆ.ಪಿ ಮತ್ತದರ ಬೆಂಬಲಿಗರ ಪ್ರೀತಿ ಕಡಿಮೆಯಾಯಿತು. ಉದ್ದಿಮೆಗಳು ಪಕ್ಷಗಳನ್ನು ಮತ್ತು ಪಕ್ಷಗಳ ಸರಕಾರಗಳನ್ನು ನಿಯಂತ್ರಿಸುವ ಬಗೆಯನ್ನು ಘಂಟಾಘೋಷವಾಗಿ ಸಾರುತ್ತ ನರೇಂದ್ರ ಮೋದಿ ಕೂಡ ಅದಾನಿ ಅಂಬಾನಿಗಳ ಕೈಗೊಂಬೆ ಎಂಬ ಕಟುಸತ್ಯವನ್ನು ತಿಳಿಸಲಾರಂಭಿಸಿದ ಮೇಲೆ ಅರವಿಂದ ಕೇಜ್ರಿವಾಲರ ಬಗೆಗಿನ ಅಪಸ್ವರಗಳು ಹೆಚ್ಚುತ್ತಾ ಸಾಗಿದವು. ಉದ್ಯಮಪತಿಗಳನ್ನು ಎದುರಿಹಾಕಿಕೊಂಡು ಎಷ್ಟರ ಮಟ್ಟಿಗೆ ಮುಂದುವರೆಯಬಲ್ಲರು ಕೇಜ್ರಿವಾಲ್?

ಪ್ರಜಾಪ್ರಭುತ್ವದ ಆರೋಗ್ಯ ಸುಧಾರಿಸಲು ಕೇಜ್ರಿವಾಲ್ ಮತ್ತು ಆಮ್ ಆದ್ಮಿ ತರಹದ ಪಕ್ಷಗಳು ಅವಶ್ಯಕವಾದರೂ ಎಷ್ಟರ ಮಟ್ಟಿಗೆ ಅವರು ಸುಧಾರಣೆ ತರಲು ಸಾಧ್ಯ ಎಂದು ಗಮನಿಸಿದರೆ ಈಗಲೇ ನಿರಾಶೆಯಾಗಿಬಿಡುತ್ತದೆ. ತಮ್ಮದಿನ್ನೂ ಹೊಸ ಪಕ್ಷ, ಪ್ರತಿಭಟನೆ, ಭಾಷಣಗಳ ಜೊತೆಜೊತೆಗೆ ಪಕ್ಷ ಸಂಘಟನೆಗೂ ಒತ್ತು ಕೊಡಬೇಕು ಎಂಬ ವಿಚಾರ ಮರೆತುಬಿಟ್ಟಿದ್ದಾರೆ. ಆತುರಾತುರದಲ್ಲಿ ಸಾಧ್ಯವಾದಷ್ಟೂ ಕಡೆ ಚುನಾವಣಾ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಈ ಆತುರದ ಕಾರಣದಿಂದ ಉಳಿದ ರಾಜಕೀಯ ಪಕ್ಷಗಳು ಮಾಡುವಂತೆ ಸಿನಿಮಾದವರಿಗೆ ಟಿಕೇಟು ಕೊಟ್ಟಿದ್ದಾರೆ. ಟಿಕೇಟು ನೀಡಲು ಅವರು ಸಿನಿಮಾದವರು ಎಂಬುದಷ್ಟೇ ಮಾನದಂಡ. ಸಿನಿಮಾ ಕ್ಷೇತ್ರದವರಿಗೆ ಟಿಕೇಟು ಹಂಚಲು ಬಹುತೇಕ ಎಲ್ಲ ಪಕ್ಷಗಳೂ ತುದಿಗಾಲಲ್ಲಿ ನಿಂತಿವೆ. ಸಿನಿಮಾದ ನಂತರ ಹೆಚ್ಚು ಪ್ರಚಾರ ಪಡೆಯುವ ಕ್ರಿಕೆಟ್ ಆಟಗಾರರನ್ನೂ ಚುನಾವಣಾ ಅಖಾಡಕ್ಕೆ ಇಳಿಸಲಾಗಿದೆ. ವಿವಿಧ ಕ್ಷೇತ್ರದವರು ರಾಜಕೀಯಕ್ಕೆ ಬರುವುದು ಉತ್ತಮ ಸಂಗತಿಯೇನೋ ಹೌದು. ಆದರೆ ಭಾರತದಲ್ಲಿ ಸಿನಿಮಾ – ಕ್ರಿಕೆಟ್ಟಿನಲ್ಲಿ ಪಡೆದ ಖ್ಯಾತಿಯಿಂದ ರಾಜಕೀಯಕ್ಕೆ ಪ್ರವೇಶ ಮಾಡಿರುವವರಲ್ಲಿ ಎಷ್ಟು ಜನ ಸಾಮಾಜಿಕ ಮನೋಭಾವದಿಂದ ಕೆಲಸ ನಿರ್ವಹಿಸಿದ್ದಾರೆ ಎಂದು ಗಮನಿಸಿದರೆ ನಿರಾಶೆಯಾಗುವುದೇ ಹೆಚ್ಚು.

ಮೋದಿ, ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲರ ಗದ್ದಲದಲ್ಲಿ ಮುಖ್ಯವಾಹಿನಿಗಳು ಬಹುಶಃ ಉದ್ದೇಶಪೂರ್ವಕವಾಗಿ ಕಡೆಗಣಿಸಿರುವುದು ತೃತೀಯ ರಂಗದ ಶಕ್ತಿಯನ್ನು. ರಾಷ್ಟ್ರೀಯ ಪಕ್ಷಗಳು ಎಂಬ ಪದವೇ ಬಹಳಷ್ಟು ರಾಜ್ಯಗಳಲ್ಲಿ ಸವಕಲಾಗಿ ಪ್ರಾದೇಶಿಕ ಪಕ್ಷಗಳ ನೆರಳಿನಲ್ಲಿ ರಾಷ್ಟ್ರೀಯ ಪಕ್ಷಗಳು ಉಸಿರಾಡುವಂತಹ ಪರಿಸ್ಥಿತಿ ಇದೆ. ಹರ್ ಹರ್ ಮೋದಿ, ಘರ್ ಘರ್ ಮೋದಿ ಎಂದರಚುತ್ತಾ ಇನ್ನೂ ಅನೇಕಾನೇಕ ರೀತಿಯಲ್ಲಿ ಪ್ರಜಾಪ್ರಭುತ್ವವನ್ನು ಲೇವಡಿ ಮಾಡುತ್ತಿರುವ “ಮೋದಿ ಬ್ರಿಗೇಡ್”ಗೆ ಕೂಡ ಸತ್ಯದ ಅರಿವಿದೆ. ಎಷ್ಟೇ ಮೋದಿ ಅಲೆ ಎಂದಬ್ಬರಿಸಿದರೂ ಕೊನೆಗೆ ರಾಜ್ಯಗಳ ‘ಸಣ್ಣ’ ಪಕ್ಷಗಳ ನೆರವಿಲ್ಲದೆ ಬಿಜೆಪಿ ಕೂಡ ಅಧಿಕಾರಕ್ಕೆ ಬರಲಾರದು, ಮೋದಿ ಪ್ರಧಾನಿಯಾಗಲಾರರು ಎಂದು. ತೃತೀಯ ರಂಗಕ್ಕೆ ಚಾಲನೆ ನೀಡುವ ಪ್ರಯತ್ನ ನಡೆಯಿತಾದರೂ ಹತ್ತಾರು ಪಕ್ಷಗಳಲ್ಲಿ ಅನೇಕರು ಪ್ರಧಾನಿ ಸ್ಥಾನದ ಆಕಾಂಕ್ಷಿಗಳಾಗಿರುವುದರಿಂದ ಚುನಾವಣಾ ಪೂರ್ವ ಹೊಂದಾಣಿಕೆ ಎಂಬುದು ಇನ್ನೂ ಸಾಧ್ಯವಾಗಿಲ್ಲ. ಬಿ.ಜೆ.ಪಿ, ಕಾಂಗ್ರೆಸ್ಸಿನಂತಹ ಪಕ್ಷದೊಳಗೇ ಟಿಕೇಟ್ ಹಂಚಿಕೆಯ ಸಂದರ್ಭದಲ್ಲಿ ಅಸಮಾಧಾನ ಭುಗಿಲೆದ್ದು ಪಕ್ಷಾಂತರ ಮಾಡುವವರು, ಪಕ್ಷೇತರರಾಗಿ ಸ್ಪರ್ಧಿಸುವವರ ಸಂಖೈ ಹೆಚ್ಚಿರುವಾಗ ಪ್ರಾದೇಶಿಕ ಪಕ್ಷಗಳ ನಡುವಿನ ಕಿತ್ತಾಟಗಳು ಅನಿರೀಕ್ಷಿತವೇನಲ್ಲ. ಇನ್ನೆರಡು ತಿಂಗಳಿನಲ್ಲಿ ಹದಿನಾರನೇ ಲೋಕಸಭೆಯ ಚುಕ್ಕಾಣಿ ಹಿಡಿಯುವವರಾರು ಎಂಬುದು ನಿಕ್ಕಿಯಾಗುತ್ತದೆ. ಮಾಧ್ಯಮಗಳ ಸಮೀಕ್ಷೆಗಳು, ನಮ್ಮ ವೈಯಕ್ತಿಕ ಅಭಿಪ್ರಾಯಗಳು, ಪೇಯ್ಡ್ ನ್ಯೂಸುಗಳೆಲ್ಲ ಏನೇ ಹೇಳಿದರೂ ಕೊನೆಗೆ ಚುನಾವಣೆಯ ದಿನ ಮತ ಹಾಕುವವನ ಮನಸ್ಥಿತಿಯ ಮೇಲೆ ರಾಜಕೀಯ ಪಕ್ಷಗಳ ರಾಜಕಾರಣಿಗಳ ಭವಿಷ್ಯ ನಿರ್ಧರಿತವಾಗುತ್ತದೆ. ಯಾರೇ ಅಧಿಕಾರಕ್ಕೆ ಬಂದರೂ ವರುಷ ಕಳೆಯುವದರೊಳಗೆ ‘ಅಯ್ಯೋ ನಮ್ಮ ಮನಮೋಹನಸಿಂಗೇ ವಾಸಿಯಿದ್ದ ಕಣ್ರೀ. ಇದೇನ್ರೀ ಇವರದು ಇಂತಹ ಕರ್ಮ’ ಎನ್ನುವ ಪರಿಸ್ಥಿತಿ ಬಾರದಿರಲಿ ಎಂದು ಆಶಿಸೋಣ.

8 thoughts on “ವಿಚಾರಗಳು ಹಿಂದಾಗಿ ಗದ್ದಲಗಳೇ ವಿಜೃಂಭಿಸುವ ಚುನಾವಣೆಯ ಸಮಯ

  1. Ananda Prasad

    ಆಮ್ ಆದ್ಮಿ ಪಕ್ಷ ನುಡಿದಂತೆ ನಡೆಯದಿದ್ದರೆ ಜನರ ವಿಶ್ವಾಸ ಗಳಿಸುವುದು ಸಾಧ್ಯವಾಗಲಾರದು. ಉಳಿದ ಪಕ್ಷಗಳಿಗಿಂತ ಭಿನ್ನ ಎಂದು ಪ್ರತಿಯೊಂದು ನಡೆಯಲ್ಲಿಯೂ ತೋರಿಸದಿದ್ದರೆ ಜನ ಪಕ್ಷದ ಬಗ್ಗೆ ಭ್ರಮನಿರಸನ ಹೊಂದಬಹುದು. ಪಕ್ಷದ ಉನ್ನತ ನಾಯಕರಿಗೆ ಅತಿಯಾದ ನಿರೀಕ್ಷೆಗಳಿದ್ದು ಪವಾಡ ನಡೆಯುತ್ತದೆ ಎಂಬ ಭಾವನೆ ಹೊಂದಿರುವಂತೆ ಕಾಣುತ್ತದೆ. ಆದರೆ ಆ ರೀತಿಯ ಪವಾಡಗಳು ಸಂಭವಿಸುವಷ್ಟು ಭಾರತದ ಮತದಾರರು ಪ್ರಬುದ್ಧರಾಗಿಲ್ಲ. ಭಾರತದ ಮತದಾರರು ಒಂದು ರೀತಿಯ ಗುಲಾಮಗಿರಿಯ ಮನೋಭಾವದಿಂದ ಬಳಲುತ್ತಿದ್ದಾರೆ. ಇದಕ್ಕೆ ರಾಜರ ಗುಂಗಿನಿಂದ ಜನರು ನಮ್ಮ ದೇಶ ಪ್ರಜಾಪ್ರಭುತ್ವ ಅಳವಡಿಸಿಕೊಂಡು ಆರು ದಶಕಗಳು ಸಂದರೂ ಹೊರಬರದಿರುವುದು ಒಂದು ಕಾರಣವಾಗಿದೆ. ವ್ಯಕ್ತಿಪೂಜೆ ಭಾರತದ ಮತದಾರರ ದೊಡ್ಡ ದೌರ್ಬಲ್ಯ. ಇನ್ನೊಂದು ಜಾತೀಯತೆ. ಇದು ರಾಜಕೀಯ ನಾಯಕ ಹಾಗೂ ಪಕ್ಷಗಳಲ್ಲಿ ಮಾತ್ರವಲ್ಲದೆ ಹೆಚ್ಚಿನ ಮತದಾರರಲ್ಲಿಯೂ ಕಂಡುಬರುತ್ತದೆ. ಭಾರತದ ಮತದಾರರ ಇನ್ನೊಂದು ದೌರ್ಬಲ್ಯ ಎಂದರೆ ದೇವರು ಹಾಗೂ ಧರ್ಮಗಳ ಬಗೆಗಿನ ಕುರುಡು ಪ್ರೀತಿ. ಹೀಗಾಗಿ ಧರ್ಮ ಹಾಗೂ ದೇವರ ಹೆಸರು ಹೇಳಿಕೊಂಡು ಬರುವ ಪಕ್ಷಗಳಿಗೆ ಕಣ್ಣು ಮುಚ್ಚಿ ಮತ ಹಾಕುವ ದೊಡ್ಡ ಸಮುದಾಯವೇ ಇದೆ. ಇವರ ಮತ ಎಷ್ಟೇ ಭ್ರಷ್ಟ, ಅದಕ್ಷ ಜನ ನಿಂತಿದ್ದರೂ ಒಂದೇ ಪಕ್ಷಕ್ಕೆ ಸೀಮಿತ. ಇಂಥ ಜನ ಇರುವವರೆಗೆ ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮುಂದಕ್ಕೆ ಸಾಗುವ ಸಂಭವ ಇಲ್ಲ.

    ಆಮ್ ಆದ್ಮಿ ಪಕ್ಷ ಇದುವರೆಗೆ ಲೋಕಸಭಾ ಚುನಾವಣೆಗೆ ೨೪ ಕೋಟಿ ರೂಪಾಯಿಗಳನ್ನಷ್ಟೇ ದೇಣಿಗೆಯಾಗಿ ಸಂಗ್ರಹಿಸಿದೆ. ಇದು ಏನೇನೂ ಸಾಲದು. ಜನರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಧನಸಹಾಯ ಮಾಡಲು ಮುಂದೆ ಬರುವುದು ಏನೇನೂ ಸಾಲದು. ನಮ್ಮ ಜನ ದೇವರು, ಗುಡಿ, ಜಾತ್ರೆ, ಜೀರ್ಣೋದ್ಧಾರ ಎಂದು ಸಾವಿರಗಟ್ಟಲೆ ದೇಣಿಗೆ ನೀಡುವುದು ಕಂಡುಬರುತ್ತದೆ ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಿ ಬೆಳೆಸಲು ಸೂಕ್ತ ದೇಣಿಗೆ ನೀಡಲು ಮುಂದೆ ಬರದೆ ಇರುವುದು ನಮ್ಮ ಜನ ಇನ್ನೂ ಪ್ರಬುದ್ಧತೆಯನ್ನು ಬೆಳೆಸಿಕೊಂಡಿಲ್ಲ ಎಂಬುದರ ದ್ಯೋತಕವಾಗಿ ಕಂಡುಬರುತ್ತದೆ. ಹತ್ತು ಕೋಟಿ ಜನ ತಲಾ ೫೦ ರೂಪಾಯಿ ದೇಣಿಗೆ ಕೊಟ್ಟರೂ ೫೦೦ ಕೋಟಿ ರೂಪಾಯಿ ಆಗುತ್ತದೆ. ಇಷ್ಟು ಸಹಾಯ ಮಾಡಲೂ ನಮ್ಮ ಜನರಿಂದ ಆಗುವುದಿಲ್ಲ ಎಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬೆಳೆಸುವುದು ಹೇಗೆ ಎಂಬ ಬಗ್ಗೆ ನಮ್ಮ ಜನರು ಚಿಂತನೆ ನಡೆಸಬೇಕಾಗಿದೆ. ಆಮ್ ಆದ್ಮಿ ಪಕ್ಷವನ್ನು ಸಂಘಟನಾತ್ಮಕವಾಗಿ ಬೆಳೆಸಲು ಪಕ್ಷದ ಉನ್ನತ ನಾಯಕರು ದೇಶದ ಪ್ರತಿಯೊಂದು ತಾಲೂಕುಗಳಿಗೂ ಭೇಟಿ ನೀಡಿ ಜನರನ್ನು ಪ್ರೇರೇಪಿಸುವ ಕೆಲಸ ಮುಂಬರುವ ದಿನಗಳಲ್ಲಿ ಮಾಡದೆ ಇದ್ದರೆ ಪಕ್ಷ ಬೆಳೆಯಲಾರದು. ಗಾಂಧೀಜಿಯವರು ದೇಶದಾದ್ಯಂತ ಸಂಚರಿಸಿ ಸಂಘಟನೆ ಮಾಡುತ್ತಿದ್ದರು. ಇದೇ ರೀತಿ ದೇಶಾದ್ಯಂತ ಸಂಚರಿಸಿ ಆಮ್ ಆದ್ಮಿ ಪಕ್ಷದವರು ಸಂಘಟನೆಗೆ ಒತ್ತು ನೀಡಬೇಕಾಗಿದೆ. ಪ್ರತಿ ತಾಲೂಕುಗಳಿಗೂ ಭೇಟಿ ನೀಡಿ ಅಲ್ಲಿನ ವಿದ್ಯಾವಂತ ಹಾಗೂ ಪ್ರತಿಷ್ಟಿತ ವೈದ್ಯರು, ತಂತ್ರಜ್ಞರು, ಉದ್ಯಮಿಗಳು ಮೊದಲಾದವರನ್ನು ಸಂಘಟಿಸಿ ಅವರ ಮೂಲಕ ಆಯಾ ತಾಲೂಕಿನ ಪಂಚಾಯತ್ ಮಟ್ಟದಲ್ಲಿ ಪಕ್ಷವನ್ನು ಬೆಳೆಸುವ ಕುರಿತು ಪ್ರೇರೇಪಿಸುವುದು ಅಗತ್ಯವಿದೆ. ಇಲ್ಲದೆ ಹೋದರೆ ಪಕ್ಷ ಹಳ್ಳಿಗಳ ಮಟ್ಟವನ್ನು ತಲುಪಲಾರದು.

    ತೃತೀಯ ರಂಗಕ್ಕೆ ಸಮರ್ಥ ಹಾಗೂ ದಕ್ಷ ಹಾಗೂ ಭ್ರಷ್ಟಾಚಾರ ಮುಕ್ತ ನಾಯಕರೇ ಇಲ್ಲ. ಹೀಗಾಗಿ ತೃತೀಯ ರಂಗವನ್ನು ಜನ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ತೃತೀಯ ರಂಗದ ನಾಯಕತ್ವ ವಹಿಸುವ ಪಕ್ಷ ಕನಿಷ್ಠ ೫೦-೮೦ ಸ್ಥಾನಗಳನ್ನಾದರೂ ಗಳಿಸುವ ಪರಿಸ್ಥಿತಿ ಇದ್ದರೆ ಮತ್ತು ಅದು ಎಡಪಕ್ಷಗಳಾಗಿದ್ದರೆ ಯಶಸ್ವಿಯಾಗಬಹುದೇನೋ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಎಡಪಕ್ಷಗಳು ೨೫-೩೦ ಸ್ಥಾನಗಳಿಗಿಂಥ ಮೇಲೆ ಹೋಗುವ ಸಂಭಾವ್ಯತೆ ಕಾಣುವುದಿಲ್ಲ.

    Reply
    1. ವಿಜಯ್

      ದೇವರು, ಗುಡಿ, ಜಾತ್ರೆ, ಜೀರ್ಣೋದ್ಧಾರ ಎಂದು ಸಾವಿರಗಟ್ಟಲೆ ದೇಣಿಗೆ ನೀಡುವ, ನಿಮ್ಮ ಪ್ರಕಾರ ಅಪ್ರಭುದ್ದರಾಗಿರುವವರ ಕಥೆ ಬಿಡೋಣ..ಪ್ರಭುದ್ಧರ ಕಥೆ ನೋಡೋಣ. ಆಪ್ ನ ಮೆಂಬರಶಿಪ್ ಹಿಂದುಸ್ಥಾನ ಟೈಮ್ಸ್ ನ ಪ್ರಕಾರ ಜನವರಿ ತಿಂಗಳಲ್ಲೇ ಒಂದು ಕೋಟಿ ದಾಟಿದೆ. ಆಪ್ ಸೈಟ್ ನೋಡಿದಾಗ online donation ಕೊಟ್ಟವರ ಸಂಖ್ಯೆ 87437. ಸದಸ್ಯರಲ್ಲಿ ಉಳಿದ 99 ಲಕ್ಷ ಪ್ರಭುದ್ಧರು ಏನಾದರು? ಅವರು 500 ರಂತೆ ಕೊಟ್ಟಿದ್ದಿದ್ದರೆ 495 ಕೋಟಿ ಆಗುತ್ತಿರಲಿಲ್ಲವೆ?

      Reply
      1. Ananda Prasad

        ಆಮ್ ಆದ್ಮಿ ಪಕ್ಷದ ಸದಸ್ಯರಾಗಿರುವವರೆಲ್ಲರೂ ೫೦೦ ರೂಪಾಯಿ ದೇಣಿಗೆ ನೀಡುವಷ್ಟು ಆರ್ಥಿಕ ಸಾಮರ್ಥ್ಯ ಇರುವವರೆಂದು ಹೇಳಲು ಸಾಧ್ಯವಿಲ್ಲ ಆದರೂ ೫೦ ರೂಪಾಯಿ ದೇಣಿಗೆ ನೀಡುವ ಸಾಮರ್ಥ್ಯ ಎಲ್ಲರಿಗೂ ಇರಬಹುದು. ಸದಸ್ಯರೆಲ್ಲರೂ ೫೦ ರೂಪಾಯಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಕೊಟ್ಟಿದ್ದರೂ ೫೦ ಕೋಟಿ ರೂಪಾಯಿ ಆಗುತ್ತಿತ್ತು. ಪಕ್ಷದ ಸದಸ್ಯರಾದವರೂ ಆರ್ಥಿಕ ಸಹಾಯ ಪಕ್ಷವನ್ನು ಬೆಳೆಸಲು ಮಾಡಿಲ್ಲ ಎಂಬುದು ಕೂಡ ಕಂಡುಬರುತ್ತದೆ. ಜನ ದೇವರು, ಗುಡಿ, ಜೀರ್ಣೋದ್ಧಾರ, ಜಾತ್ರೆ ಎಂದು ಯಥೇಚ್ಛ ದೇಣಿಗೆ ನೀಡುತ್ತಾರೆ ಆದರೆ ದೇಶಕ್ಕಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಸ್ವಲ್ಪ ದೇಣಿಗೆ ನೀಡಬೇಕು ಎಂಬ ಕಾಳಜಿ ನಮ್ಮ ಜನರಲ್ಲಿ ಕಂಡುಬರುತ್ತಿಲ್ಲ. ಜನರ ಪಾಲ್ಗೊಳ್ಳುವಿಕೆ ಇಲ್ಲದೆ ಪ್ರಜಾಪ್ರಭುತ್ವ ವ್ಯವಸ್ಥೆ ಬೆಳೆಯಲಾರದು. ಉತ್ತಮ ಹಾಗೂ ಭ್ರಷ್ಟಾಚಾರ ಮುಕ್ತ ವ್ಯವಸ್ಥೆ ಕಟ್ಟಬೇಕಾದರೆ ಪಕ್ಷಗಳು ಜನರ ಪಾರದರ್ಶಕ, ಸ್ವಚ್ಛ ಮೂಲದ ವಂತಿಗೆಯಿಂದಲೇ ನಡೆಯುವ ಪರಿಸ್ಥಿತಿ ರೂಪುಗೊಳ್ಳಬೇಕು. ಜನರು ಯಾವ ರೀತಿ ಇರುತ್ತಾರೋ ಅದೇ ರೀತಿ ವ್ಯವಸ್ಥೆ ರೂಪುಗೊಳ್ಳುತ್ತದೆ. ಜನರಿಗೆ ಉತ್ತಮ ವ್ಯವಸ್ಥೆ ಬೇಕು ಎಂದಿದ್ದರೆ ಅದಕ್ಕೆ ಅವರು ಕೂಡ ಸಹಾಯ ಮಾಡಬೇಕು. ದೇವಲೋಕದಿಂದ ಬಂದು ವ್ಯವಸ್ಥೆಯನ್ನು ಸರಿಮಾಡುವವರು (ಅವತಾರವೆತ್ತಿ) ಯಾರೂ ಇಲ್ಲ ಎಂಬ ಕಹಿಸತ್ಯ ನಮ್ಮ ಜನರಿಗೆ ಯಾವಾಗ ಅರಿವಾಗುತ್ತದೋ ಆಗಲೇ ವ್ಯವಸ್ಥೆ ಬದಲಾಗಲು ಸಾಧ್ಯ.

        Reply
        1. ವಿಜಯ್

          @ಗೊಡಬೊಲೆ
          ನನ್ನ ಪ್ರಕಾರ ದೇಣಿಗೆಯ ವಿಷಯ ಬಂದಾಗ, ಉಳಿದವರ ಅಪ್ರಭುದ್ಧತೆಯನ್ನು ಎತ್ತಿ ತೋರಿಸುವಾಗ..ಸ್ವತಹ ಸದಸ್ಯರಾದವರ ಪ್ರಭುದ್ದತೆಯನ್ನು ಪ್ರಶ್ನಿಸಬೇಕಾಗುತ್ತದೆ. ಅದನ್ನು ನಾನು ಮಾಡಿದ್ದೇನೆ.
          ಇನ್ನೊಂದೇನೆಂದರೆ, ಆಪ್ ನ್ನು ಪ್ರಶ್ನಿಸಲು ನನಗೆ ಹಕ್ಕಿದೆ. ಏಕೆಂದರೆ ಆಪ್ ನ ಫಂಡನಲ್ಲಿ ನನ್ನದೂ ರೂ 2500 ಇದೆ. ನನ್ನ ಬಯಕೆ/ನಿರೀಕ್ಷೆ ಆಪ್ ದೆಹಲಿಯನ್ನು ಸರಿಯಾಗಿ ಆಳಿ, ಉದಾಹರಣೆ ಸೃಷ್ಟಿಸಿ, ಆಮೇಲೆ ರಾಷ್ಟ್ರ ರಾಜಕಾರಣಕ್ಕಿಳಿಯಬೇಕು ಎಂದಾಗಿತ್ತು. ಅಧಿಕಾರಕ್ಕೆ ಬಂದ ತಿಂಗಳೊಳಗೆ ಎಲ್ಲ ಸಮಸ್ಯೆ ಬಗೆಹರಿಸಿಬಿಡಿ, ಪ್ರಣಾಳಿಕೆಯ ಆಶ್ವಾಸನೆಗಳನ್ನೆಲ್ಲ ಈಡೇರಿಸಿಬಿಡಿ ಅಂತ ಯಾರೂ ಇವರ ತಲೆ ಮೇಲೆ ಕುಳಿತಿರಲಿಲ್ಲ. ಇನ್ನೊಂದೇನೆಂದರೆ ಅಲ್ಪ ಸಮಯದಲ್ಲಿ ಎಲ್ಲವನ್ನು ಬಗೆ ಹರಿಸಲು ಸರಕಾರ ನಡೆಸುವುದು ಛೂಮಂತ್ರ ಜಾದುವಲ್ಲ. ಮೊದಲ ವರ್ಷ ನೀರು ಮತ್ತು ವಿದ್ಯುತ್ ಸಮಸ್ಯೆ ಬಗೆ ಹರಿಸಿದರೂ ಸಾಕಿತ್ತು. ಜನರಿಗೆ ತೃಪ್ತಿಯಾಗುತ್ತಿತ್ತು. ಜನಲೋಕಪಾಲ್ ಬಿಲ್ ಜನರ ಬದುಕು-ಸಾವಿನ ಪ್ರಶ್ನೆಯಾಗಿರಲಿಲ್ಲ..ತುರ್ತಾಗಿರಲಿಲ್ಲ. ಮೊದಲು ಆಡಳಿತವನ್ನು ಒಂದು ಹದಕ್ಕೆ ತಂದು, ಎರಡನೆಯ ಅಥವಾ ಮೂರನೆಯ ವರ್ಷದಲ್ಲಿ ಜನಲೋಕಪಾಲನ್ನು ತಂದರೂ ನಡೆಯುತ್ತಿತ್ತು. ಉತ್ತಮ ಆಡಳಿತ ಆಪ್ ನ ಬೆನ್ನಿಗಿದ್ದಿದ್ದರೆ, ಎರಡು ವರುಷಗಳ ನಂತರ ಜನಲೋಕಪಾಲ ತರುವ ಹೊತ್ತಿಗೆ ಸರಕಾರ ಬಿಳಿಸುವ ಧೈರ್ಯವನ್ನು ಕಾಂಗೈ/ಬಿಜೆಪಿ ಗಳು ಮಾಡುತ್ತಿರಲಿಲ್ಲ..ಮಾಡಿದ್ದರೂ ಅದರ ಲಾಭ ಆಪ್ ಗಾಗುತ್ತಿತ್ತು. ಅದನ್ನು ಬಿಟ್ಟು, ಆಪ್ ನವರು ಜನಲೋಕಪಾಲನ್ನು ಬಳಸಿದ್ದು ಪಲಾಯನದ ದಾರಿಯಾಗಿ. ಕೊನೆಗೂ ಆಪ್ ಬೀದಿ ಪ್ರತಿಭಟನೆಗಳಿಂದ ಬಡ್ತಿ ಪಡೆಯಲೇ ಇಲ್ಲ.. ಇದರಿಂದ ಅವರು ಪ್ರೂವ್ ಮಾಡಿದ್ದು ೧) ಸರಕಾರ ನಡೆಸುವುದು ಬೀದಿಯಲ್ಲಿ ಪ್ರತಿಭಟನೆ ಮಾಡಿದಷ್ಟು ಸುಲಭವಲ್ಲ ೨) ಈಡೇರಿಸಬಲ್ಲಂತಹ ಅಶ್ವಾಸನೆಗಳನ್ನು ಮಾತ್ರ ಕೊಡಬೇಕು.
          ದಿಲ್ಲಿಯಂತಹ ಸಣ್ಣ ರಾಜ್ಯದಲ್ಲಿಯೇ ಸಿಕ್ಕ ಅವಕಾಶವನ್ನು ತಮ್ಮ ಅವಸರಗೇಡಿತನದಿಂದ ಚೆಲ್ಲಿದವರಿಗೆ, “Give it a chance to prove itself” ಅನ್ನುವುದು ಎಷ್ಟು ಸಮಂಜಸ ಎಂದು ನೀವೇ ವಿಚಾರ ಮಾಡಿ.

          @ಆನಂದಪ್ರಸಾದ
          ಆಪ್ ನ ರಾಷ್ಟ್ರ ರಾಜಕಾರಣದ strategy ಯೇ ಸರಿಯಾಗಿಲ್ಲ. ಮೊದಲನೆಯದಾಗಿ ರಾಷ್ಟ್ರ ರಾಜಕಾರಣದ ಅವಸರ ಬೇಕಾಗಿರಲಿಲ್ಲ. ಅಷ್ಟಕ್ಕೂ ಲೋಕಸಭಾ ಚುನಾವಣೆಗೆ ಭಾಗವಹಿಸಲೇಬೇಕು ಎಂಬ ಆಸಕ್ತಿ ಇದ್ದರೆ, ದಿಲ್ಲಿಯ ಆಡಳಿತವನ್ನು ಮಾಡುತ್ತ, ಮೊದಲು ತನ್ನ ಬೇಸ್ ಇರುವ ದಿಲ್ಲಿ ಮತ್ತು ಕೆಲವು ಮೆಟ್ರೊಗಳಲ್ಲಿ ನಿಂತಿದ್ದರೆ ಸಾಕಿತ್ತು. ಈ ಸೀಟುಗಳ ಮೇಲೆಯೇ ತಮ್ಮೆಲ್ಲ ಸಮಯ ತೊಡಗಿಸಿದ್ದರೆ, ಕೆಲವೇ ಕೆಲವು ಎಂ.ಪಿ ಗಳು ಆರಿಸಿ ಬಂದಿದ್ದರೆ ಸಾಕಿತ್ತು. ಆ ಎಂ.ಪಿ ಗಳಿಂದಲೇ ಮಾದರಿ ಕೆಲಸ ಮಾಡಿಸಿ, ಮಾದರಿ ಸಂಸತ್ ಸದಸ್ಯರು ಅನಿಸಿ, ಆಮೇಲೆ ಪಕ್ಷವನ್ನು ಮುಂದಿನ ಲೋಕಸಭಾ ಚುನಾವಣೆಗೆ ಸಜ್ಜು ಮಾಡಬಹುದಿತ್ತು.. ನೆಲ ಮಟ್ಟದಲ್ಲಿ ಕಾರ್ಯಕರ್ತರ ಪಡೆಯೇ ಇಲ್ಲ..ಅಂತಲೆಲ್ಲ ಇವರೀಗ ಚುನಾವಣೆಗೆ ನಿಂತಿದ್ದಾರೆ. ಭವಿಷ್ಯ ಊಹಿಸಬಹುದಾದದ್ದೆ.
          ಆಪ್ ನವರು ಮಿಡಿಯಾ ಪ್ರಶಂಸೆಯಿಂದ ಉಬ್ಬಿ ತಮ್ಮನ್ನು ತಾವು ಅವತಾರ ಪುರುಷರೆಂದು ಭಾವಿಸಿದರು..ಅವಸರಗೇಡಿಗಳಾದರು. ಆಮೇಲೆ ಮೀಡಿಯಾದವರು ಮೇಲೇರಿಸದಷ್ಟೇ ಸುಲಭವಾಗಿ ಕೆಳಗೆ ಕೆಡವಿದರು. ಮುಂದಿನ ದಿನಗಳಲ್ಲಿ ಆಪ್ ಉಳಿಯದಿದ್ದರೆ ಅದು ದೇಶದ ಜನರ ತಪ್ಪಲ್ಲ. .ಅದು ಆಪ್ ನ ನಾಯಕರ ತಪ್ಪು. ಪ್ರಜಾಪ್ರಭುತ್ವ ವನ್ನು ಉಳಿಸಲು ಇವರೇ ಸರಿ ಎಂದು ಭಾವಿಸಬೇಕು ಎಂದಾದಲ್ಲಿ, ದೇಣಿಗೆ ನೀಡಬೇಕು ಎಂದಾದಲ್ಲಿ, ಮೊದಲು ಪಕ್ಷ ಮತ್ತು ಅದರ ನಾಯಕರು ಪ್ರಭುಧ್ಧರಾಗಬೇಕು.

          Reply
          1. Ananda Prasad

            ಆಮ್ ಆದ್ಮಿ ಪಕ್ಷದ ವರಿಷ್ಠ ನಾಯಕರು ೧೯೭೭ರ ಜೆಪಿ ಚಳುವಳಿ ಹಾಗೂ ತುರ್ತು ಪರಿಸ್ಥಿತಿಯ ವಿರುದ್ಧ ದೇಶಾದ್ಯಂತ ರೂಪುಗೊಂಡ ಜನಾಭಿಪ್ರಾಯದ ಪರಿಣಾಮವಾಗಿ ರೂಪುಗೊಂಡ ಪರ್ಯಾಯ ರಾಜಕೀಯದ ಅಲೆ ಮರುಕಳಿಸುವ ನಿರೀಕ್ಷೆಯಲ್ಲಿ ಇರುವಂತೆ ಕಾಣುತ್ತದೆ. ಆದರೆ ಆ ರೀತಿಯ ಪರಿಸ್ಥಿತಿ ಇಂದು ಇಲ್ಲ. ಕಾರಣ ಆಗ ಕಾಂಗ್ರೆಸ್ ಬಿಟ್ಟರೆ ಬೇರೆ ಪರ್ಯಾಯ ಇರಲಿಲ್ಲ, ಹೀಗಾಗಿ ಜನತಾ ಪರಿವಾರ ಹಾಗೂ ಅದರ ಮೈತ್ರಿಕೂಟಕ್ಕೆ ಅಭೂತಪೂರ್ವ ಚುನಾವಣಾ ವಿಜಯ ದೊರಕಿತ್ತು. ಆದರೆ ಇಂದು ಕಾಂಗ್ರೆಸ್ಸಿಗೆ ಎದುರಾಗಿ ರಾಷ್ಟ್ರೀಯ ಪಕ್ಷವಾಗಿ ಬಿಜೆಪಿ ಇದೆ ಮಾತ್ರವಲ್ಲ ಹಲವು ಪ್ರಾದೇಶಿಕ ಪಕ್ಷಗಳೂ ಇವೆ. ಹೀಗಾಗಿ ಕಾಂಗ್ರೆಸ್ ವಿರೋಧಿ ಅಲೆಯ ಪ್ರಯೋಜನ ಬಿಜೆಪಿ ಹಾಗೂ ಪ್ರಾದೇಶಿಕ ಪಕ್ಷಗಳಲ್ಲಿ ಹಂಚಿ ಹೋಗಲಿರುವುದು ಖಚಿತ. ಈ ಅಲೆಯ ಅಲ್ಪ ಪ್ರಯೋಜನ ಆಮ್ ಆದ್ಮಿ ಪಕ್ಷಕ್ಕೂ ದೊರಕಬಹುದು. ತಳಮಟ್ಟದಿಂದ ಕಾರ್ಯಕರ್ತರ ಪಡೆಯನ್ನು ಬೆಳೆಸದೆ ಇದ್ದರೆ ಆಮ್ ಆದ್ಮಿ ಪಕ್ಷವೂ ಮುಂಬರುವ ದಿನಗಳಲ್ಲಿ ಬೆಳೆಯುವ ಸಂಭವ ಇಲ್ಲ. ಪಕ್ಷದ ನಾಯಕರೂ ನುಡಿದಂತೆ ನಡೆಯುವ, ಸರಳ ಜೀವನ ಪಾಲಿಸುವ ದೃಢತೆ ತೋರದೆ ಇದ್ದರೆ ಜನರಲ್ಲಿ ವಿಶ್ವಾಸ ಮೂಡಿಸುವಲ್ಲಿ ಯಶಸ್ವಿಯಾಗಲಾರರು. ಜನತೆಯ ದೇಣಿಗೆಯ ಹಣದಿಂದ ಪಕ್ಷ ಕಟ್ಟಿ ಚುನಾವಣೆ ಎದುರಿಸುವ ಪಾರದರ್ಶಕ ವ್ಯವಸ್ಥೆ ರೂಪಿಸಿರುವ ಆಮ್ ಆದ್ಮಿ ಪಕ್ಷದ ಕ್ರಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬೆಳೆಸುವ ಒಂದು ಉತ್ತಮ ಹೆಜ್ಜೆಯಾಗಿದೆ. ಇದನ್ನು ಜನರು ಬೆಂಬಲಿಸುವುದು ದೇಶದ ಹಿತದೃಷ್ಟಿಯಿಂದ ಉತ್ತಮ ಎಂದು ಕಾಣುತ್ತದೆ.

  2. Salam Bava

    ಮೋದಿಯ ಮತ್ತು ಹಿಡಿದ ಮನಸ್ಸು ಬೇರೆ ಯಾವುದೇ ಸ್ವರವನ್ನು,ವಿಚಾರವನ್ನು ಕೇಳುವ ಸ್ಠಿತಿಯಲ್ಲಿಲ್ಲ.ಇದು ನಮ್ಮ ಸಮೂಹ ಒ೦ದು ಉಗ್ರ ವಿಚಾರಧಾರೆಗೆ ಮತ್ತು ಒರ್ವ ವ್ಯಕ್ತಿಗೆ ಭಾರತದ೦ಥ ಮಹಾನ್ ದೇಶವನ್ನು ಮತ್ತು ತಮ್ಮ ಸ್ವ೦ಥ ವಿವೇಚನಾ ಶಕ್ತಿಯನ್ನು ಒತ್ತೆ ಇಟ್ಟದರ ಕುರುಹು ತಾನೇ?

    Reply
    1. ವಿಜಯ್

      ಇದನ್ನು ಸ್ವಲ್ಪ ನಿಮ್ಮ ಶಾಹಿ ಇಮಾಂರಿಗೂ ಹೇಳಿದ್ದಿದ್ದರೆ ಒಳ್ಳೆಯದಿತ್ತು..ನೀವು ಮೋದಿಗೆ ವಿರುದ್ಧವಾಗಿದ್ದರೆ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಲು ಕರೆ ಕೊಡಿ.., ಕಾಂಗ್ರೆಸ್ ನಲ್ಲ ಅಂತ!.

      Reply

Leave a Reply to ವಿಜಯ್ Cancel reply

Your email address will not be published. Required fields are marked *