ಕೊಲುವುದುಚಿತವೇ ಹೇಳು ಕೈಸದರದವರನು…?

ಡಾ. ಜಯಪ್ರಕಾಶ್ ಶೆಟ್ಟಿ ಹೆಚ್

ವರ್ತಮಾನದ ಸಾಂಸ್ಕೃತಿಕ ಸಂದರ್ಭದಲ್ಲಿ ವಿಭಿನ್ನ ಕಾರಣಗಳಿಗಾಗಿ ಅತಿಹೆಚ್ಚು ಸಂವಾದಕ್ಕೆ ತೆರೆದುಕೊಳ್ಳುತ್ತಿರುವ Kanakadasa_artವ್ಯಕ್ತಿತ್ವ ಕನಕನದು. ವ್ಯಾಸಕೂಟದ ನಂಟಿನಿಂದ ದಾಸನಾಗಿ, ವೈಚಾರಿಕತೆಯಿಂದ ಜೀವಪರ ಚಿಂತಕನಾಗಿ, ಸಾಮಾಜಿಕ ಹಿನ್ನೆಲೆಯಿಂದ ಜಾತಿ ಅಸ್ಮಿತೆಯ ಐಕಾನ್ ಆಗಿ, ಹೀಗೆ ಬೇರೆ ಬೇರೆ ನೆಲೆಗಳಿಂದ ಕನಕ ವಿವೇಚನೆಗೊಳಗಾಗುತ್ತಿದ್ದಾನೆ. ಐತಿಹಾಸಿಕವಾಗಿ ಕನಕ ಬದುಕಿದ ಮಧ್ಯಕಾಲೀನಯುಗ ಮತಪರಂಪರೆಯ ನೆಲೆಯಿಂದ ಆರೂಢ, ನಾಥ, ಸೂಫಿ ಮುಂತಾದ ಜನಧರ್ಮಗಳ ಭಾಗವಾಗಿದ್ದ ಶ್ರಮಣ ಪರಂಪರೆಗಳ ನಡುವಿನ ಕೊಡುಕೊಳುಗೆಯ ಕಾಲ. ಮತಪಂಥಗಳ ಎಲ್ಲೆಕಟ್ಟುಗಳನ್ನು ಮೀರಿ ಅರಿವಿನ ಹುಡುಕಾಟದಲ್ಲಿ ನಿರತವಾದ ಈ ಅವಧೂತ ಪರಂಪರೆಯ ಬೇರುಗಳು ಬಲವಾಗಿ ಊರಿನಿಂತ ಕಾಲ. ರಾಜಕೀಯವಾಗಿ ವಿಜಯನಗರದಂತಹ ಅರಸುಪರಂಪರೆಯೊಂದು ತನ್ನೆಲ್ಲಾ ವೈಭವವನ್ನು ಅನುಭವಿಸಿಯೂ ಶಿಥಿಲಗೊಂಡ ಸಂಕ್ರಮಣ ಕಾಲ. ಅಧಿಕಾರ ಮತ್ತು ಲೋಲುಪತೆಗಾಗಿ ಜನ ಮತ್ತು ನಾಡನ್ನು ದಿಕ್ಕೆಡಿಸುವಂತೆ ಪಾಳೆಪಟ್ಟುಗಳ ನಡುವಿನ ತಿಕ್ಕಾಟಗಳ ಕಾಲ. ಇಂತಹ ಐತಿಹಾಸಿಕ ಘಟ್ಟವನ್ನು ಹಾದುಬಂದ ಕನಕ ಅಭಿವ್ಯಕ್ತಿಯ ಬಹುಪ್ರಕಾರಗಳಲ್ಲಿ ತೊಡಗಿಕೊಂಡವನು. ಕೀರ್ತನೆ, ಮುಂಡಿಗೆ, ಷಟ್ಪದಿ, ಸಾಂಗತ್ಯಗಳಲ್ಲಿ ಪುರಾಣ ಮತ್ತು ಕಲ್ಪಕತೆಗಳಿಗೆ ಕಾವ್ಯದ ರೂಪುಕೊಟ್ಟವನು. ಇಂತಹ ಕನಕನನ್ನು ನಾವಿಂದು ಬೇರೆ ತೆರನಾಗಿ ಪ್ರವೇಶಿಸಿಸಬೇಕಿದೆ. ಯಾಕೆಂದರೆ ನಾವು ಬದುಕುತ್ತಿರುವುದು ಅಧಿಕಾರದ ಏಣಿಯೇರಲು ಜೀವಹಿಂಸೆಯ ಕಸುಬನ್ನು ಕರಗತಮಾಡಿಕೊಂಡವರು ಆರ್ಭಟಿಸುತ್ತಿರುವ ಕಾಲದಲ್ಲಿ. ಅಧಿಕಾರ ಮತ್ತು ಕ್ರೌರ್ಯದ ಒಡನಾಟಗಳು ಹೆಚ್ಚು ಹೆಚ್ಚು ನಿಕಟಗೊಳ್ಳುತ್ತಿರುವ ಕಾಲದಲ್ಲಿ. ಕಾಲದ ಈ ಒತ್ತಾಸೆ ಮತ್ತು ಸಾಂಸ್ಕೃತಿಕ ಆನ್ವಯಿಕತೆಯ ಕಾರಣಕ್ಕೆ, ದಾಸತ್ವ ಹಾಗೂ ಜಾತಿಅಸ್ಮಿತೆಯ ಅಸ್ತಿತ್ವಗಳಿಂದಾಚೆ ಕನಕನಲ್ಲಿ ದೊರೆಯುವ ಜೀವಪರ ಧ್ವನಿಯನ್ನು ನಾವು ಹುಡುಕಿಕೊಳ್ಳಬೇಕಿದೆ.

ಕನಕ ವಿರಚಿತ ನಳಚರಿತೆಯನ್ನು ಗಮನಿಸುವುದಾದರೆ ಅದರ ಕಥನಹಂದರ ಪಾರಂಪರಿಕವಾದುದು. ಕೃತಿಯೇ ಹೇಳಿಕೊಂಡಂತೆ ಇದು ಸೂತಮುನಿಯಿಂದ ಅಗಸ್ತ್ಯನ ಮೂಲಕ ರೋಮಶನವರೆಗೆ ಮುನಿಕುಲದ ನಡುವೆ ಹೇಳು-ಕೇಳು ಮಾದರಿಯಲ್ಲಿ ಹರಿದುಬಂದ ಕಥೆ. ಕವಿಗೆ ಇಂತಹ ರೂಢಿ ಕಥಾನಕದ ಮೂಲವಿನ್ಯಾಸದಲ್ಲಿ ಬದಲಾವಣೆ ಇಲ್ಲವೇ ಸೇರ್ಪಡೆಯ ಸ್ವಾತಂತ್ರ ಕಡಿಮೆ. ಆದರೂ ತನ್ನ ಭಾಷಿಕ ವಿನ್ಯಾಸದಲ್ಲಿ ಆತ ತುಂಬಬಹುದಾದ ಸಮಕಾಲೀನ ಜೀವನಾನುಭವದ ಸ್ವಾತಂತ್ರ್ಯವನ್ನು ಆತನಿಂದ ಕಸಿಯಲಾಗದು. ಕೃತಿಯೊಂದನ್ನು ಓದಲಾಗುವ ಕಾಲ ಉತ್ಪಾದಿಸುವ ಅರ್ಥವನ್ನೂ ನಿರ್ಬಂಧಿಸಲಾಗದು. ಹಾಗಾಗಿ ಕೃತಿಯ ಎಲ್ಲ ವಿವರಗಳಿಗೆ ಕೃತಿಕಾರನನ್ನೇ ಹೊಣೆಗಾರನಾಗಿಸದೆ, ಚರಿತ್ರೆ ಮತ್ತು ವರ್ತಮಾನದ ಉಭಯ ನೆಲೆಗಳಲ್ಲಿ ಕೃತಿಯೊಳಗಿನ ಸಂಗತಿಗಳೊಂದಿಗೆ ಸಂವಾದದ ಮುಕ್ತ ಅವಕಾಶವು ಪ್ರತೀ ಸಾಹಿತ್ಯ ಕೃತಿಯಲ್ಲೂ ಇರುತ್ತದೆ. ಈ ಕಾರಣದಿಂದ ನಳಚರಿತೆಯು ನಳನೊಬ್ಬನ ಕಥೆಯಲ್ಲ. ಅದು ಲೋಕಸಂದರ್ಭದ ಪ್ರಭು ಚರಿತ್ರೆಯನ್ನು ವಿವರಿಸಿಕೊಳ್ಳುವ ಅವಕಾಶವೂ ಹೌದು. ಈ ಹಿನ್ನೆಲೆಯಲ್ಲಿ ‘ನಳಚರಿತೆ’ಯೊಳಗಿನ ಪ್ರಭುತ್ವದ ಸಾಂಪ್ರದಾಯಿಕ ಮುಖ ಹಾಗೂ ಜನಧ್ವನಿಗೆ ಕಿವಿಯಾಗುವ ಅದರ ಜೀವಪರಮುಖಗಳನ್ನು ಒಟ್ಟೊಟ್ಟಿಗೆ ಇರಿಸಿಕೊಂಡು ಪ್ರಭು ಚರಿತೆಯ ಕುರಿತಾದ ಕೆಲವು ಟಿಪ್ಪಣಿರೂಪದ ಮಾತುಗಳನ್ನು ಇಲ್ಲಿ ಮುಂದಿಡಲಾಗಿದೆ.

ಕೃತಿ ಕಟ್ಟಿಕೊಡುವ ರೂಢಮೂಲ ಪ್ರಭುಚರಿತೆಯ ಸ್ವರೂಪ

”ಭೂತಳೇಂದ್ರರೊಳಧಿಕಬಲ ವಿಖ್ಯಾತನಹ ನಳಚಕ್ರವರ್ತಿಯುಯು ಭೂತಳವ ಪಾಲಿಸಿದನಾತನ ವಿಮಲಚರಿತೆ”ಯೇ ತನ್ನ ಕಥಾವಸ್ತು ಎಂದು ಕೃತಿ ಘೋಷಿಸಿಕೊಳ್ಳುತ್ತದೆ. ಪಾರದರ್ಶಕತೆ, ಪರಿಶುದ್ಧತೆಯ ಅರ್ಥ ಸೂಚಿಸುವಂತೆ ಅದನ್ನು ‘ವಿಮಲಚರಿತೆ’ ಎನ್ನುತ್ತದೆ. ರಾಜಚರಿತೆಯೊಂದನ್ನು ವಿಮಲಚರಿತೆ ಎನ್ನುವಲ್ಲಿ ಯಾವ ಅಂಶಗಳಿಗೆ ಮಾನ್ಯತೆ ದಕ್ಕಿದೆ? ರಾಜಕಥನವನ್ನು ಹೀಗೆ ಕೈವಾರಿಸುವವರು ಯಾರು? ಈ ವಿಮಲಚರಿತೆಯ ಹೂರಣದಲ್ಲಿರುವ ಸಾಂಸ್ಥಿಕ ಸಂಗತಿಗಳು ಯಾವುವು? ಪಾರಂಪರಿಕ ರಾಜ ಚರಿತ್ರೆಯನ್ನು ಕಟ್ಟುತ್ತಲೇ ಕನಕನ ರಾಜ ಚರಿತೆಯು ಈ ಚೌಕಟ್ಟನ್ನು ಎಲ್ಲಿ ಮೀರುತ್ತದೆ? ಅದರ ಆಶಯಗಳಾವುವು?- ಈ ಪ್ರಶ್ನೆಗಳಿಗೆ ಕಂಡುಕೊಳ್ಳುವ ಉತ್ತರಗಳ ಮೂಲಕ ಕೃತಿಯೊಳಗಿನ ಪ್ರಭುಚರಿತ್ರೆಯ ವಿನ್ಯಾಸವನ್ನು ನಾವು ಹುಡುಕಿಕೊಳ್ಳಬೇಕಿದೆ. ಹೀಗೆ ಹುಡುಕುವಲ್ಲಿ ಅರಸುತನದ ಸಾಂಸ್ಥಿಕ ಗುಣಗಳಾದ ಪ್ರದರ್ಶಕತೆ, ಯಥಾಸ್ಥಿತಿ ಕಾಯುವಿಕೆ, ಯುದ್ಧ, ಹಿಂಸೆ ಮತ್ತು ವ್ಯಸನಾದಿಗಳ ರೂಢಿಯ ನಿರೂಪಣೆಯೇ ನಳಚರಿತದಲ್ಲಿಯೂ ಕಾಣಿಸುತ್ತದೆ. ಇವುಗಳ ಜೊತೆಗೆ ಮಾನವೀಯ ಆಶಯದ ಭಾಗವಾಗಿ ಅದು ಅರಸನ ಕ್ರಿಯಾಚರಣೆೆಯಲ್ಲಿ ಕೇಳಿಸಿಕೊಳ್ಳುವಿಕೆ ಮತ್ತು ನಾಚುವಿಕೆಯನ್ನು ತರುತ್ತದೆ! ಹೀಗೆ ಲೋಕದ ಅರಸುತನಕ್ಕೊಂದು ಮಾನವೀಯ ಮುಖದಂತೆಯೂ ಹೊಳೆದುಬಿಡುವ ಕಾರಣಕ್ಕಾಗಿ ನಳಚರಿತೆ ವಿಮಲಚರಿತೆ ಎನಿಸಿಕೊಳ್ಳಲು ಅರ್ಹವಾಗುತ್ತದೆ.

ನಳಚರಿತೆಯಲ್ಲಿ ಅರಸೊತ್ತಿಗೆಯ ಸಮೃದ್ಧಿಯ ಕರುಹುಗಳ ಸುದೀರ್ಘ ವಿವರಗಳಿವೆ. ಖ್ಯಾತಿ, ಕೀರ್ತಿಗಳೆಂಬ ಅಭೌತಿಕ ಸಂಗತಿಗಳೊಂದಿಗೆ ಅಸಂಖ್ಯRichest-Indians ಗೋಪುರ, ದೇಗುಲ, ಬಹುಗಾತ್ರದ ಪ್ರಾಕಾರಗಳ, ಮಹತ್ತು ಬೃಹತ್ತುಗಳೆಂಬ ಭೌತಿಕರಚನೆಗಳ ಕೊಂಡಾಟವಿದೆ. ”ದಿಗಂತದವನೀಶ್ವರರು ಕಪ್ಪವ ತೆರುವರಗಣಿತ ದುರವಿಜಯ ದೋರ್ಬಲರು ಮಣಿಮಯಮಕುಟವರ್ಧನರು ಚರಣಕಾನತರಾಗಿ ನಳಭೂವರನ ಭಜಿಸುತಲಿರ್ದರು…….” ಎಂದು ಬಲ ಮತ್ತು ಸಂಪತ್ತಿನ ಕೀರ್ತನೆ ಇದೆ. ಇದು ಅರಸೊತ್ತಿಗೆಯೆಂದರೆ, ಬಲಹೀನರ ಸ್ವಾತಂತ್ರ್ಯಹರಣ ಮತ್ತು ಬಲಾಢ್ಯರ ಸಂಪತ್ತಿನ ಪ್ರದರ್ಶನ ಎಂಬ ಸಾಂಪ್ರದಾಯಿಕ ನಿರೂಪಣೆಯೇ. ಸಾಮ್ರಾಜ್ಯಶಾಹಿ ಹಾಗೂ ಧಾರ್ಮಿಕ ಗುರುತುಗಳ ವೈಭವ ಅಥವಾ ಮೆರವಣಿಗೆಯನ್ನೇ ಯಶಸ್ವೀ ಪ್ರಭುತ್ವವೊಂದರ ಹೆಗ್ಗುರುತೆಂದು ಕರೆಯುವ ಬಗೆ. ನಮ್ಮೆದುರಿಗೆ ಇಡಲಾಗುತ್ತಿರುವ ಕಾರ್ಪೋರೇಟ್ ಅಭಿವೃದ್ಧಿ ಮಾದರಿಗಿಂತ ಇದು ಭಿನ್ನವಲ್ಲ. ಜಗತ್ತಿನ ಕೋಟ್ಯಾಧಿಪತಿಗಳ ಸಾಲಿಗೆ ಸೇರಲು ಮುನ್ನುಗ್ಗುತ್ತಿರುವ ಉದ್ಯಮಪತಿಗಳು ಮತ್ತು ಅವರ ರಕ್ಷಣೆಗೆ ನಿಂತ ರಾಜಕೀಯ ಶಕ್ತಿಗಳನ್ನು ಹೊಸ ಮನ್ವಂತರದ ಹರಿಕಾರರೆಂದು ಕೀರ್ತಿಸುತ್ತಿರುವ ಇಂದಿನ ಮಾಧ್ಯಮಗಳ ಸಮೃದ್ಧಿ ನಿರೂಪಣೆಯೂ ಇದೇ ಮಾದರಿಯದು.

ಇನ್ನು ಆಡಳಿತದ ವಿವರಗಳನ್ನು ನೀಡುತ್ತಾ ಕೃತಿ ನಳಮಹಾರಾಜನ ಪ್ರಭುತ್ವವನ್ನು, ”ಕ್ರೋದಗಳಿಲ್ಲದಿಹ ಸದ್ಧರ್ಮಜೀವಿಗಳ ಮೆರೆದಾಟದ ತಾಣ” ಎನ್ನುತ್ತದೆ. ಸದ್ಧರ್ಮ ಜೀವಿಗಳ ಸದ್ಧರ್ಮದ ಸ್ವರೂಪವಾಗಿ, ”ಪತಿಯರಿಗೆ ವಂಚಿಸರು ಸತಿಯರು, ಸುತರು ಪಿತೃಗಳನುಡಿಗಳನು ತಾವತಿಗಳೆಯರಾಚಾರ ವರ್ಣಾಶ್ರಮಧರ್ಮದಲಿ ಮತಿಯುತರು. …….. ಜನಸಮ್ಮತದೊಳೊಪ್ಪುವುದು ನೈಷದನೃಪನರಾಜ್ಯದಲಿ”ಎಂಬ ವಿವರಗಳಿವೆ. ಇದು ರೂಢಮೂಲ ಆಚರಣೆಗಳ ಉಲ್ಲಂಘನೆಯಿಲ್ಲದ ಯಥಾಸ್ಥಿತಿಯ ಕಾಯ್ದುಕೊಳ್ಳುವಿಕೆ. ಪ್ರಮಾಣಬದ್ದ ರೂಪಗಳ ರಕ್ಷಣೆಯ ಮೂಲಕ ಸಾಧಿಸಿದ ಪಾರಂಪರಿಕ ಅಧಿಕಾರಕೇಂದ್ರಗಳ ಬಲವರ್ಧನೆ. ಆಳುವ ಕೇಂದ್ರಗಳು ಉಲ್ಲೇಖಿಸುವ ಸುವರ್ಣಯುಗಗಳೆಲ್ಲವೂ ಬಹುಮಟ್ಟಿಗೆ ಈ ಮಾದರಿಗಳೇ. ಇದೆಲ್ಲವನ್ನೂ ಕಾವ್ಯದೊಳಗೆ ನಿರೂಪಿಸುವವನು ರೋಮಶಮುನಿ! ಚರಿತ್ರೆಗೂ ಚರಿತೆಯ ನಿರ್ಮಾತೃಗಳಿಗೂ ಇರುವ ರಾಜಕೀಯ ಸಂಬಂಧದ ನೆಲೆಯಲ್ಲಿಯೇ ಈ ವಿವರಗಳನ್ನು ಗಮನಿಸಬೇಕು. ಆಗ ಸಾಂಸ್ಥಿಕಮೌಲ್ಯಗಳ ಪ್ರಶ್ನೆಯಿಲ್ಲದ ಅನುಸರಣೆಯನ್ನೇ ‘ಸದ್ಧರ್ಮದ ಮೆರೆದಾಟದ ತಾಣ’ವಾಗಿ ನಿರೂಪಿಸುವ ಕಾರಣಗಳು ಗೋಚರವಾಗುತ್ತವೆ. ಪ್ರಜಾಸತ್ತಾತ್ಮಕಯುಗ ಒದಗಿಸಿದ ಪ್ರಶ್ನಿಸುವ ಅವಕಾಶಗಳು ಮೂಲಭೂತವಾದಿಗಳಿಗೆ ಯಾಕೆ ಸದ್ಧರ್ಮದ ಕೇಡಿನಂತೆಯೇ ಕಾಣಿಸುತ್ತವೆ ಎಂಬುದು ಅರಿವಾಗುತ್ತದೆ. ಸಾಮಾಜಿಕನ್ಯಾಯವನ್ನು ಅನುಷ್ಠಾನಕ್ಕೆ ತರುವ ಸಾಂವಿಧಾನಿಕ ಸಂಸ್ಥೆಗಳು, ಹಕ್ಕು ಕೇಳುವ ಜನಸಾಮಾನ್ಯರ ಚಳವಳಿಗಳು ಯಾಕೆ ಧರ್ಮನಾಶಕ ಎನಿಸುತ್ತವೆ ಎನ್ನುವುದೂ ಸ್ಪಷ್ಟವಾಗುತ್ತವೆ. ಯಾಕೆಂದರೆ ಈ ಮಾದರಿಯ ಸಮ್ಮತಿ ಉತ್ಪಾದಿಸುವ ಶಕ್ತಿ ಕೇಂದ್ರದಲ್ಲಿ ಸಹಜವಾಗಿಯೇ, ‘ಮಂತ್ರಿ ಪುರೋಹಿತರೂ, ಅರಸನನ್ನು ರಂಜಿಸುವ ಮಲ್ಲಗಾಯಕರೂ,(ಗಣಿಕೆಯರಾಗಿ) ವನಿತೆಯರೂ’ ಅವಕಾಶ ಗಿಟ್ಟಿಸುತ್ತಾರೆ. ಅಧಿಕಾರ ಸ್ಥಾಪಿಸಲು ಕೊರಳುನೀಡುವ ಯೋಧರಾಗಲೀ, ಬೆವರಿನ ಬೆಲೆಯನ್ನು ತೆರಿಗೆಯಾಗಿ ನೀಡುವ ಜನರಾಗಲೀ ಅಂಚಿನಲ್ಲಿಯೇ ಉಳಿದುಬಿಡುತ್ತಾರೆ. ನಳಚರಿತೆ ಚಿತ್ರಿಸುವ ರಾಜಸಭೆಗಳು ಇದಕ್ಕಿಂತ ಭಿನ್ನವಲ್ಲ. ಎಲ್ಲ ಕಾಲಗಳ ರೋಮಶರುಗಳೂ ಸದ್ಧರ್ಮಪಾಲನೆ ಎಂದು ಕರೆದಿರುವುದು ಸಮಾನತೆ ಇಲ್ಲದ ಈ ಸಂವಿಧಾನವನ್ನೇ. ನಳಚರಿತೆಯಲ್ಲಿನ ಪ್ರಭುಚರಿತೆಗೆ ಆಳುವವರ ಕಣ್ಣಿನ ನಿರೂಪಣೆಯ ಚರಿತ್ರೆಯ ಮುಖವೂ ಒಂದಿದೆ.

ನಳಚರಿತೆ ಕಟ್ಟಿಕೊಡುವ ಪ್ರಭುತ್ವದ ಅಂತಃಕರಣದ ಮುಖವಾಗಿ ನಾಚುವಿಕೆ.

ತನ್ನ ಘೋಷಣೆಯ ನಿರ್ಮಲ ಚಾರಿತ್ರ್ಯಕ್ಕನುಸಾರವಾಗಿ ಕೃತಿಯಲ್ಲಿ ನಳಪ್ರಭುವಿನ ಮಾನವೀಯ ಮುಖವೊಂದಿದೆ. ಈ ಭಾಗ ಸಾಂಸ್ಥಿಕ ವ್ಯವಸ್ಥೆಯೊಂದು ತನ್ನ ರಾಚನಿಕ ಸ್ವರೂಪಕ್ಕನುಸಾರವಾಗಿ ಪಡೆಯಬಹುದಾದ ಅಪಮೌಲ್ಯಗಳ ನಡುವೆಯೂ ಹೊಂದಿರುವ ಮಾನವೀಯವಾಗಿಸಿಕೊಳ್ಳುವ ದಾರಿಯಂತಿದೆ. ಸಾಮಾನ್ಯ ಹಂಸವೊಂದು ಅರಸನಿಗೆ ಇಲ್ಲಿ ಮಾನವೀಯತೆಯ ಪಾಠ ಹೇಳುತ್ತದೆ! ಪಾಠವಷ್ಟೇ ಮುಖ್ಯವಲ್ಲ, ಪಾಠಕನಿಗೂ ಆ ಯೋಗ್ಯತೆ ಇರಬೇಕು. ನಳಚರಿತೆ ಪಾಠದೊಂದಿಗೆ ಪಾಠಕನನ್ನೂ ಅದಕ್ಕೆ ತಕ್ಕಂತೆಯೇ ಚಿತ್ರಿಸುತ್ತದೆ. ಅದೊಂದು ದೊಡ್ಡ ಘಟನೆ ಏನಲ್ಲ. ನಳಮಹಾರಾಜನ ಬೇಟೆಯ ನಡುವಣ ಪುಟ್ಟ ಘಟನೆ. ಕೆಲವೇ ಷಟ್ಪದಿಗಳಿಗೆ ಸೀಮಿತವಾದುದು. ಆದರೆ ಇಡಿಯ ಕೃತಿಸಂದರ್ಭದಲ್ಲಿ ಪ್ರಭುತ್ವದ ಮಾನವೀಯ ಮುಖವೊಂದನ್ನು ಅನಾವರಣ ಮಾಡುವ ಮುಖ್ಯ ಸಂದರ್ಭವದು.

ರಾಜರುಗಳ ಸಪ್ತವ್ಯಸನಗಳಲ್ಲೊಂದು ಬೇಟೆ. ಅದು ಅರಸರ ಪಾಲಿನ ಮೋಜು. ಆದರೆ ಫಲಿತಾಂಶದಲ್ಲಿ ಜೀವಹಿಂಸೆ. ನಳ ಹಂಸವನ್ನು ಬೇಟಿಯಾಗುವುದು ಈ ಕೊಲುದಾಣದಲ್ಲಿ. ಕೊಲ್ಲಲೆಂದೇ ಕಾಡಿಗೆ ದಾಳಿಯಿಟ್ಟ ತಂಡದ ನಾಯಕನಾದ ನಳನಿಗೆ ಬಲಿಪಶುವಿನ ಸ್ಥಾನದಲ್ಲಿ ನಿಂತು ಹಂಸ ಜೀವದಬೆಲೆ ಕುರಿತು ಪಾಠಹೇಳುತ್ತದೆ. ಈ ಪಾಠ ವಿನಯಪೂರ್ವಕವಾಗಿದೆ, ತೀಕ್ಷ್ಣವಾದ ಪ್ರಶ್ನೆಗಳನ್ನೂ ಒಳಗೊಂಡಿದೆ. ತನ್ನ ರೂಪಕ್ಕೆ ಮಾರುವೋಗಿ ಕೈಚಾಚಿದ ನಳನ ಕೈಯ್ಯಲ್ಲಿ ಬಂಧಿಯಾಗುವ ಹಂಸದ ಪ್ರತೀ ಮಾತೂ ರಾಜನಾದವನು ಪಾಲಿಸಬೇಕಾದ ರಾಜಧರ್ಮವನ್ನು ಎಚ್ಚರಿಸುವ ಜೊತೆಗೆ ಎಲ್ಲಾ ಮಾದರಿಯ ಅಧಿಕಾರದ ಹಿಂಸೆಯೆನ್ನು ಮೊನೆಯಲಗುಗಳಂತೆ ಇರಿಯುತ್ತವೆ.- “ಕೈಸದರದವರನು ಕೊಲುವುದುಚಿತವೆ ಹೇಳು?, ತರವೆ ಬಿಡು ಪರಹಿಂಸೆ ದೋಷವಿದು, (ನನ್ನ ಮನೆಯಲಿ) ಮಡದಿ ಸುತರುಮ್ಮಳವ ನೋಡು” ಎಂದು ಪ್ರಶ್ನೆಯ ಮೇಲೆ ಪ್ರಶ್ನೆಯ ಬಾಣ ಎಸೆಯುವ ಹಂಸವನ್ನು ಕೊಲ್ಲುವ ಉದ್ದೇಶ ನಳನಿಗಿಲ್ಲ. ಅದಕ್ಕೆಂದು ಆತ ಹಿಡಿದವನಲ್ಲ. ಆತ ಮಾಡಹೊರಡದ ಕೊಲೆಯ ಕುರಿತು ಹಂಸ ಆತನನ್ನು ಪ್ರಶ್ನಿಸುತ್ತಿದೆ. ಹಂಸದ ಪ್ರಶ್ನೆಗೆ ನಳ ಸಮರ್ಥನೆಯ ಪ್ರತ್ಯುತ್ತರ ನೀಡುವುದಿಲ್ಲ, ನಾಚುತ್ತಾನೆ. ಇದಷ್ಟೇ ಅಲ್ಲಿನ ಸಂವಾದ. ಇಲ್ಲಿನ ಹಂಸದ ಮಾತು ಮತ್ತು ನಳನ ಪ್ರತಿಕ್ರಿಯೆಗಳೆರಡೂ ಮೌಲಿಖವಾದುವು. ಹಂಸ ತನ್ನನ್ನು ಪ್ರಕಟಿಸಿಕೊಂಡು ಮಹತ್ವಪಡೆಯುತ್ತದೆ, ಆತ ಉತ್ತರಿಸದೆ, ಸಮರ್ಥಿಸಿಕೊಳ್ಳದೆ, ಮಾತನಾಡದೆ, ನಾಚುವ ಮೂಲಕ ದೊಡ್ಡವನಾಗುತ್ತಾನೆ.

ಮೊದಲನೆಯದಾಗಿ ಹಂಸದ ಪ್ರಶ್ನೆ ತನ್ನನ್ನಷ್ಟೇ ಗಮನಿಸಕೊಂಡ ವ್ಯಕ್ತಿಗತ ಅಹವಾಲಿನಂತಿದ್ದರೂ, ಅದು ಹಂಸ ಮತ್ತು ನಳನgujarat_violence_1 ನಡುವಿನ ವ್ಯಕ್ತಿಗತ ವ್ಯವಹಾರವಷ್ಟೇ ಅಲ್ಲ. ಇಲ್ಲಿ ಹಂಸಕ್ಕೊಂದು ಪ್ರತಿನಿಧೀಕರಣದ ಛಾಯೆ ಇದೆ. ಅಧಿಕಾರರಹಿತ ‘ಕೈಸದರದ’ ಜೀವಜಗತ್ತೊಂದರ ಪ್ರತಿನಿಧಿಯಾಗುವ ಮೂಲಕ ಅದರ ಪ್ರಶ್ನೆಗಳು ಜೀವಜಗತ್ತಿನ ಸಾಮಾನ್ಯರ ಪ್ರಶ್ನೆಗಳಾಗುತ್ತವೆ. ಎರಡನೆಯದಾಗಿ ನಳ ಇರುವುದು ಕೊಲುದಾಣವಾದ ಬೇಟೆಯಲ್ಲಿ. ಅದು ಆಹಾರದ ಅಗತ್ಯಕ್ಕಾಗಿ ನಡೆವ ಕಾಡುಬೇಡರ ಬೇಟೆಯಲ್ಲ. ನಾಡ ಅರಸನ ಮೋಜು. ಇನ್ನು ಬೇಟೆ ಎಂದರೆ ಜೀವಗಳ ಶಿಕಾರಿ, ಹುಡುಕಿ ಕೊಲ್ಲುವ ಕ್ರಿಯೆ. ಪ್ರತಿರೋಧಿಸಿದವರನ್ನು ಇದಿರಿಸುವ ಯುದ್ಧವಲ್ಲ. ತಮ್ಮಷ್ಟಕ್ಕೆ ಬದುಕುವವರನ್ನು ಬದುಕಲು ಬಿಡದೆ ಹುಡುಕಿಕೊಲ್ಲುವ ಪರಿ. ಬಸುರಿಯ ಒಡಲಿಗೂ ಶೂಲವಿಕ್ಕಿ ಕೇಕೆ ಹಾಕಬಲ್ಲ ಕೈಸದರದವರ ನಿಷ್ಕಾರಣವಾದ ಕೊಲೆ. ಒಂದರ್ಥದಲ್ಲಿ ಕೊಲೆಯ ವ್ಯಾಪಾರ. ಹೀಗೊಂದು ವ್ಯಾಪಾರವನ್ನೇ ಶುರುವಿಟ್ಟುಕೊಂಡಲ್ಲಿ ಪಶ್ಚಾತ್ತಾಪವೆಂಬುದು ಸಾಧ್ಯವೇ ಇಲ್ಲ. ಯಾಕೆಂದರೆ ವ್ಯಾಪಾರವೆಂಬುದು ಯಾವಾಗಲೂ ಲಾಭದ ಖುಷಿಯಲ್ಲಿ ಉಳಿದವರ ನಷ್ಠವನ್ನು ಗಣಿಸುವ ಗೋಜಿಗೆ ಹೋಗದು. ವ್ಯಾಪಾರಿಯೊಬ್ಬನಲ್ಲಿ ಕಚ್ಚಾವಸ್ತುವಿನ ಕುರಿತ ಕರುಣೆ ಇರಲು ಸಾಧ್ಯವೇ? ವ್ಯಾಪಾರಿ ವ್ಯಾಪಾರಿಯೇ ಅಲ್ಲವೇ? ಖುಷಿ ಎನ್ನುವುದು ಮಾರುಕಟ್ಟೆಯ ಮಾತು. ಇದು ಖುಷಿಯ ಬೇಟೆ. ಮೂರನೆಯದಾಗಿ ಬೇಟೆಯೊಂದು ವ್ಯಸನ. ವ್ಯಸನವೆಂದರೆ ಹುಚ್ಚು ಎಂಬ ಅರ್ಥವೂ ಇದೆ. ಹಾಗೆಂದು ಅರ್ಥೈಸಿದಲ್ಲಿ ಇದು ಕೊಂದು ಖುಷಿ ಅನುಭವಿಸುವ ಹುಚ್ಚು. ನಾಲ್ಕನೆಯದಾಗಿ ಅದು ಪ್ರಾಣಿ-ಪಕ್ಷಿಗಳ ಶಿಕಾರಿಯಾದ ಕಾಡಬೇಟೆಯಷ್ಟೇ ಅಲ್ಲ. ಮಾನವಜೀವದ ನಾಡಶಿಕಾರಿಯೂ ಹೌದು. ಯಾಕೆಂದರೆ ಆ ಹಿಂಸೆಗೆ ಕುಟುಂಬ ಬದುಕಿನ ಸಾಮಾಜಿಕಸತ್ಯಗಳು ಬೆಸೆದುಕೊಳ್ಳುತ್ತಿವೆ. ಸತ್ತವರಿಗಾಗಿ ಅಳುವವರ ಪಾಡು ನೋಡುವಂತೆ ಹೇಳುವ ಹಂಸನ ಮಾತಿನಲ್ಲಿ ಈ ಧ್ವನಿಯಿದೆ. ಆದರೆ ಲೋಕದ ಕೊಲುದಾಣಗಳೆಲ್ಲವೂ ಹಾಗೆಯೇ ಮುಂದುವೆರೆದಿವೆ. ಅಧಿಕಾರವು ತಾನು ಪ್ರಾಯೋಜಿಸುತ್ತಿರುವ ಹಿಂಸೆಯಲ್ಲಿ ನೊಂದವರ ದನಿ ಆಲಿಸುವುದನ್ನೇ ನಿರಾಕರಿಸಿಕೊಂಡಿದೆ. ಹೀಗಾಗಿ ಜೀವ ಉಳಿಸಿಕೊಳ್ಳಲು ಗುಳೆಹೊರಟ ಬಸುರಿಬಾಣಂತಿಯರ ಹೊಟ್ಟೆಗೂ ಈಟಿಯಿರಿದು ಸೀಳಿಹಾಕಿ ಚೀರಲು ಅದಕ್ಕೆ ಸಾಧ್ಯವಾಗುತ್ತಿದೆ. ಅಳುವವರ ಮುಖನೋಡಿ ಕರಗುವ ಪಶ್ಚಾತ್ತಾಪದ ಮಾನವೀಯ ಸೂಕ್ಷ್ಮತೆ ನಾಪತ್ತೆಯಾಗಿದೆ.

ನಮ್ಮೆದುರಿಗಿನ ಅಧಿಕಾರ ಮತ್ತು ಹಿಂಸೆಯ ಮಾದರಿಗಳೊಂದಿಗೆ ಶಿಕಾರಿಯ ಕಾರಣ ಮತ್ತು ನೆಲೆಗಳೂ ವೈವಿಧ್ಯವಾಗಿವೆ. ಮತೀಯವಾದಿ ರಾಷ್ಟ್ರೀಯತೆ ಪ್ರೇರೇಪಣೆಯ ಫಲಿತದ ಹಿಂಸೆ ಅಂಥ ಶಿಕಾರಿಗಳಲ್ಲೊಂದು. ಇದು ಪರಿಕಲ್ಪಿಸಿಕೊಡುತ್ತಿರುವ ‘ಸ್ವ’ ಮತ್ತು ‘ಅನ್ಯ’ದ ಮಾದರಿಗಳು ನೆಲದ್ರೋಹದ ಆರೋಪದಲ್ಲಿ ಸಮುದಾಯಗಳ ಮೂಲೋತ್ಪಾಟನೆಯನ್ನು ನೆಲಗೌರವದ ಬಿರುದಿಗೊಳಪಡಿಸುತ್ತಿದೆ. ಇನ್ನು ಅಭಿವೃದ್ಧಿಯ ಹೊಸಪರಿಭಾಷೆಗಳಡಿಗೆland accquisition ನಿರ್ಮಾಣಗೊಳ್ಳುತ್ತಿರುವ ಹೊಸ ಆರ್ಥಿಕವಲಯಗಳ ಹಿಂಸೆ ಸಮೃದ್ಧಿಯ ಸಮರ್ಥನೆ ಪಡೆಯುತ್ತಿವೆ. ಶತಮಾನಗಳ ಕಾಲದಿಂದ ಬದುಕಿದ ನೆಲೆಗಳನ್ನು ಕಳೆದುಕೊಳ್ಳುವುದು ನ್ಯಾಯಸಮ್ಮತವಾಗುತ್ತಿದೆ. ತಮ್ಮ ಹಕ್ಕು ಕೇಳುವುದು ಅಭಿವೃದ್ಧಿಯ ವಿರೋಧವೆನಿಸಿ, ಹತ್ತಿಕ್ಕಲ್ಪಡುವುದು ಕಾನೂನು ಮತ್ತು ಸುವ್ಯವಸ್ಥೆಯ ಅಗತ್ಯವಾಗುತ್ತಿದೆ. ಜಾತಿನೆಲೆಯ ಅಧಿಕಾರಶಕ್ತಿಗಳು ತಮ್ಮ ಪಾರಂಪರಿಕ ಯಜಮಾನ್ಯಕ್ಕಾಗಿ ನಡೆಸುವ ದೌರ್ಜನ್ಯಗಳಿಗೆ ಸಹಾನುಭೂತಿಯ ಕಣ್ಣುಗಳು ಸಿಗುತ್ತಿವೆ. ಇದರ ಜೊತೆಗೆ ಸಮುದಾಯ ಸಂಪತ್ತಿನ ಯಜಮಾನಿಕೆಗಾಗಿ ನಡೆಸುವ ಎಲ್ಲ ಬಗೆಯ ಭ್ರಷ್ಟಾಚಾರಗಳು ಸಾಮಾಜಿಕ ಒಪ್ಪಿಗೆಯನ್ನು ಪಡೆದುಕೊಳ್ಳುತ್ತಿವೆ. ಪ್ರಭುತ್ವವು ತನ್ನ ದುಡಿಮೆ ಅಥವಾ ಕ್ರಿಯೆಯನ್ನು ಎಲ್ಲ ಬಗೆಯ ನೈತಿಕತೆಯಿಂದ ವಿಮುಖವಾಗಿಸಿಕೊಂಡು ಉತ್ತರದಾಯಿತ್ವವನ್ನಾಗಲೀ, ನೈತಿಕಭಯವನ್ನಾಗಲೀ ಎದುರಾಗುತ್ತಲೇ ಇಲ್ಲ. ಸಂವಾದವನ್ನೇ ನಿರಾಕರಿಸುವ ಮೂಲಕ ಸಂವೇದನೆಯನ್ನೂ ಕಳೆದುಕೊಂಡಿರುವ ಈ ಅಧಿಕಾರಕೇಂದ್ರಗಳು ನಾಚುವ ಪ್ರಶ್ನೆಯನ್ನೇ ಎದುರಾಗುತ್ತಿಲ್ಲ. ಪ್ರಭುತ್ವವು ಹೀಗೆ ತನ್ನ ಎದೆಗಡಲನ್ನು ಇಂಗಿಸಿಕೊಂಡು ನಿರ್ಮಿಸಿಕೊಳ್ಳುತ್ತಿರುವ ನಾಚುವಿಕೆಯ ಮರಳುಗಾಡಿನಿಂದಾಗಿಯೇ ನೆಲೆಕಳೆದುಕೊಳ್ಳುತ್ತಿರುವ ಸಂತ್ರಸ್ತರು ಹಾಗೂ ತಲೆಕಳೆದುಕೊಳ್ಳುತ್ತಿರುವ ಗಲಬೆಗದ್ದಲದ ಬಲಿಪಶುಗಳು ಆಕಾಶನೋಡಿಕೊಂಡು ಅಳುತ್ತಾ ಕೂರುವ ಗೋಳು ಮುಂದುವರಿಯುತ್ತಲೇ ಇದೆ.

ಹೀಗೆ ಪ್ರಭುತ್ವವನ್ನು ರಾಜತ್ವದ ಸಂಸ್ಥೆಯಿಂದಾಚೆಗೆ ವಿಸ್ತರಿಸಿಕೊಂಡು ನೋಡಿದಾಗ ಕಾವ್ಯದಲ್ಲಿನ ಪ್ರಭುಚರಿತದ ಮಾನವೀಯ ಮುಖ ಮತ್ತಷ್ಟು ಜೀವಪರ ಎನಿಸುತ್ತದೆ. state-violenceರಾಷ್ಟ್ರವೆಂಬ ಕಲ್ಪಿತಾವೃತ್ತಿಯಲ್ಲಿ ಮತೀಯ ಸಂಖ್ಯಾಶಕ್ತಿಗಳೂ, ಜಾತಿ ಮತ್ತು ಆರ್ಥಿಕತೆಯ ಸಂದರ್ಭದಲ್ಲಿನ ಜಾತಿ ಹಾಗೂ ವರ್ಗಶಕ್ತಿಗಳು ಈ ನೆಲೆಯ ಜೀವಪರ ಸಂವಾದ ಸಾಧ್ಯತೆಗೆ ಹೊರಳಿಕೊಂಡಲ್ಲಿ, ಆರೋಗ್ಯಕರ ಅಧಿಕಾರದ ಚರಿತ್ರೆಯೊಂದು ಖಂಡಿತಾ ಸಾಧ್ಯವಿದೆ. ‘ಬದುಕಿ ಬದುಕಲು ಬಿಡಿ’ಯೆಂಬುದು ಎಲ್ಲ ಕಾಲದ ಅಧಿಕಾರವಂಚಿತರ ಕೂಗು ಮತ್ತು ಆಶಯ. ಅಧಿಕಾರರಹಿತರು ಮಾತಿಲ್ಲದವರೂ ಹೌದು. ಇಲ್ಲಿ ಹಂಸ ಭಾಷೆಗೆ ದನಿಯಿಲ್ಲದವರ ದನಿಯ ಸಾಂಕೇತಿಕ ಅರ್ಥವಿದೆ. ನಳನ ಪ್ರತಿಕ್ರೀಯೆ ಅಂತಹ ದಮನಿತರ ನಿರೀಕ್ಷೆಯ ಮೂರ್ತರೂಪ. ಹಿಂಸೆಯನ್ನು ಧರಿಸಿಕೊಂಡೇ ಇರುವ ಪ್ರಭುತ್ವವು ಅದನ್ನು ತ್ಯಜಿಸಿಬಿಡಬೇಕು ಎನ್ನುವುದಕ್ಕಿಂತ, ಅಶಕ್ತರ ಮೇಲೆ ಪ್ರಯೋಗಿಸಕೂಡದೆಂಬುದೇ ನಳಚರಿತೆಯ ಆಶಯ. ಆದರೆ ಬಲಪ್ರಯೋಗಿಸಿಯೂ ಅಶಕ್ತರ ಸಹನೆಯನ್ನೇ ಆಗ್ರಹಿಸುವ ಪ್ರಭುತ್ವ ಪ್ರಾಯೋಜಿತ ಹಿಂಸೆಯನ್ನೇ ಜಗತ್ತು ಮತ್ತೆ ಮತ್ತೆ ಎದುರಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಚರಿತ್ರೆಯುದ್ದಕ್ಕೂ ವಿರೋಧದ ಕೂಗುಗಳೆದ್ದಿವೆ. ಕೇಳುವ ಮತ್ತು ನಾಚುವ ಎರಡನ್ನೂ ಮರೆತ ಪ್ರಭುತ್ವದ ಕಾರ್ಖಾನೆಗಳಿಂದ ಗ್ರೆಗರಿಪತ್ರಾವೊ, ಎಸ್ಇಜೆಡ್, ರಾಷ್ಟ್ರೀಯಉದ್ಯಾನವನ, ಬೆಂಡಿಗೇರಿ, ಕಂಬಾಲಪಲ್ಲಿ, ಗ್ಯಾಸ್ಚೇಂಬರ್, ನರೋಡಾ ಪಾಟಿಯಾ, ಬೆಸ್ಟ್ ಬೇಕರಿಗಳೆಂಬ ಕೊಲುದಾಣಗಳ ಸರಣಿ ಬೆಳೆಯುತ್ತಲೇ ಇದೆ. ಸಾಕ್ಷಿನಾಶದ ಮೂಲಕ ಪಡೆಯುವ ಬಿಡುಗಡೆಯೂ ನಿರ್ದೋಷಿತನದ ಪ್ರಮಾಣ ಪತ್ರವಾಗುತ್ತಿದೆ. ಕೆಳಹಂತದ ನ್ಯಾಯಾಲಯಗಳು ವಿಧಿಸಿದ ಶಿಕ್ಷೆಯನ್ನು ಮೇಲುಹಂತದಲ್ಲಿ ಪ್ರಶ್ನಿಸಿ ಉರುಳಿಂದ ಬಚಾವಾಗುವ ಚೌಕಾಶಿ ಹೆಚ್ಚುತ್ತಿದೆ. ತಪ್ಪಾದುದುಂಟೆ? ಎಂದು ಕೇಳಿಕೊಳ್ಳುವ ಅಂತಃಕರಣವೇ ಸತ್ತು ಬಿದ್ದಿದೆ. ಹೆಣದ ಬಣವೆಯ ಮೇಲೆ ಅಧಿಕಾರದ ನೆಲೆಕಂಡುಕೊಳ್ಳುವುದನ್ನು ಕರಗತಮಾಡಿಕೊಂಡ ಅಧಿಕಾರಶಕ್ತಿಗಳ ಎದೆಯಕಡಲಲ್ಲಿ ಉಸುಕುತುಂಬಿದೆ. ಅಂತಃಸಾಕ್ಷಿಯ ನೀರಹನಿ ಬತ್ತಿಹೋಗಿದೆ. ತಮ್ಮನ್ನು ಮನುಷ್ಯರು ಎಂದುಕೊಳ್ಳುವುದಕ್ಕಿಂತ ಹುಲಿ-ಸಿಂಹಗಳೆಂದೇ ಸಾರಿಕೊಳ್ಳುವ ಈ ಟೊಳ್ಳು ಅಂತರಂಗಗಳು ಕೊಲುವುದುಚಿತವೇ? ಎಂದು ಕೇಳುತ್ತಲೇ ಇರುವ ನಿಲುಗಡೆಯಿಲ್ಲದ ಪ್ರಶ್ನೆಗೆ ನಾಚುವ ಬದಲು ನಾಲಿಗೆ ಕಸರತ್ತು ನಡೆಸುತ್ತಿವೆ. ಇವುಗಳ ಬಾಯಿ ತೆರೆದುಕೊಂಡೇ ಇದೆ. ಕೇಳುವ ಕಿವಿ ಮತ್ತು ಕರಗುವ ಎದೆಗಳಷ್ಟೇ ಸತ್ತಿವೆ. ಹೀಗೆ ಸಂವೇದನೆಯನ್ನೇ ಕಳೆದುಕೊಂಡ ಅಧಿಕಾರಚರಿತ್ರೆಯ ನಡುವೆ, ‘ಕೇಳುವ ಕಿವಿ ಮತ್ತು ನಾಚುವ ಮನಸ್ಸು’ಗಳೆರಡನ್ನೂ ಕಾಪಿಟ್ಟುಕೊಂಡ ನಳಚರಿತೆ ಅರಸೊತ್ತಿಗೆಗೂ ವಿಮಲಚರಿತೆಯನ್ನು ಸಾಧ್ಯವಾಗಿಸಿದೆ.

One thought on “ಕೊಲುವುದುಚಿತವೇ ಹೇಳು ಕೈಸದರದವರನು…?

  1. bhatmahesht

    2191 ಅಮಾಯಕ ಮುಸ್ಲಿಮರು ಹತ್ಯೆಯಾದ 1983ರ ನೆಲ್ಲಿ ಹತ್ಯಾಕಾಂಡ ಮಾಡಿದ ಒಬ್ಬನೇ ಒಬ್ಬ ಆರೋಪಿಗೆ ಶಿಕ್ಷೆಯಾಗಲಿಲ್ಲ. 3000 ಕ್ಕಿಂತಲೂ ಹೆಚ್ಚು ಸಿಖ್ಖರನ್ನು1984 ರಲ್ಲಿ ಹತ್ಯೆ ಮಾಡಿದವರಲ್ಲಿ ಯಾರಿಗೂ ಶಿಕ್ಷೆಯಾಗಲಿಲ್ಲ. ಹತ್ಯಾಕಾಂಡ ಮಾಡಿದವರನ್ನೇ ಬಹುಮತ ಕೊಟ್ಟು ಆಯ್ಕೆ ಮಾಡಿ ಅಧಿಕಾರಕ್ಕೇರಿಸಿಲಾಯಿತು. ಇಂತಹ ಮನಸ್ಥಿತಿಯನ್ನು ಪ್ರಶ್ನಿಸುವಲ್ಲಿ , ಮನವರಿಕೆ ಮಾಡಿಕೊಡುವಲ್ಲಿ ನಮ್ಮ ಚಿಂತಕ ವರ್ಗ ವಿಫಲವಾಯಿತೇ ? ಆ ಮೂಲಕ ಹತ್ಯಾಕಾಂಡ ಮಾಡಿದವರು ಸುಲಭವಾಗಿ ಬಚಾವ್ ಆಗಬಹುದು ಎಂಬ ವಿಷ ಬೀಜ ನೆಲೆಯೂರಲು ಸಹಾಯ ಮಾಡಿತೇ ? ಇಂದು ಕನಿಷ್ಠ ಪಕ್ಷ ಗುಜರಾತ್ ಹತ್ಯಾಕಾಂಡದ ಅಪರಾಧಿಗಳಿಗೆ ನಮ್ಮ ಚಿಂತಕ ವರ್ಗ ಶಿಕ್ಷೆ ಕೊಡಿಸಲು ಪ್ರಯತ್ನಿಸುತ್ತಿದೆ ಎನ್ನುವುದು ಮೆಚ್ಚುವಂತಹ ವಿಷಯ

    Reply

Leave a Reply

Your email address will not be published. Required fields are marked *