Daily Archives: April 13, 2014

‘ಬಿಜೆಪಿ ಆತ್ಮಹತ್ಯೆ’ ಇತ್ಯಾದಿ – ಒಂದು ಪ್ರತಿಕ್ರಿಯೆ

ವಸಂತ ಕಡೆಕಾರ್

ಪ್ರಜಾವಾಣಿಯ ಅತಿಥಿ ಅಂಕಣದಲ್ಲಿ ಪ್ರಕಟವಾದ  ದೇವನೂರು ಮಹಾದೇವ ಅವರ  ಬಿಜೆಪಿ ತನ್ನ ಆತ್ಮಹತ್ಯೆಗೆ ತಾನೇ ಸಜ್ಜಾಗುತ್ತಿದೆಯೇ?   ಲೇಖನದಲ್ಲಿ ‘ಭಾರತತ್ವ, ಪ್ರಜಾಪ್ರಭುತ್ವ, ಮಾನವತ್ವ’ಕ್ಕೆ ಮೋದಿ ಫ್ಯಾಸಿಸ್ಟ್ ಸರ್ವಾಧಿಕಾರದ ಅಪಾಯದ ವಿಶ್ಲೇಷಣೆ ಹಾಗೂ ಮೋದಿಯ ‘ಗುಜರಾತ ಮಾದರಿ ಅಭಿವೃದ್ಧಿ’ಯ ಮೇಲಣ ಟೀಕೆಯೂ ಶಕ್ತಿಯುತವಾಗಿ ಮೂಡಿ ಬಂದಿದೆ. ಕರ್ನಾಟಕದಲ್ಲೂ ಮಾಧ್ಯಮಗಳು ಮತ್ತು ಸಂಘ ಪರಿವಾರದ ಗೊಬೆಲ್ ಗಳು ‘ಮೋದಿ ಅಲೆ’ ಎಬ್ಬಿಸಲು ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ದೇವನೂರು ಅವರ ಲೇಖನ ಅತ್ಯಂತ ಸಕಾಲಿಕವೂ ಆಗಿದೆ. ಆದರೆ ಒಟ್ಟಾರೆ ಲೇಖನ ಅಭಿವ್ಯಕ್ತಿಸುವುದು ಅರ್ಧ ಸತ್ಯನಷ್ಟೇ ಎಂಬುವುದು ನನ್ನ ಅನ್ನಿಸಿಕೆ. ಸಮಾನತೆ-ಪ್ರಜಾಪ್ರಭುತ್ವಗಳ ಹೋರಾಟದ ಬಗ್ಗೆ ದೇವನೂರು ಅವರ ಅಪಾರ ಕಾಳಜಿಯ ಬಗ್ಗೆ ಅತ್ಯಂತ ಗೌರವದೊಂದಿಗೆ ಅವರ ಪ್ರಸ್ತುತ ಲೇಖನದ ಬಗ್ಗೆ ನನ್ನಲ್ಲಿ ಮೂಡಿದ ಕೆಲವು ಚಿಂತನೆಗಳನ್ನು ಪ್ರಸ್ತುತಪಡಿಸುತ್ತಿದ್ದೇನೆ.

ಲೇಖನದ ತಲೆಬರಹದಿಂದ ಆರಂಭಿಸಿ ಇಡೀ ಲೇಖನದಲ್ಲಿ ಕೇವಲ ಮೋದಿಯ ‘ವೈಯಕ್ತಿಕ ಸರ್ವಾಧಿಕಾರಿ ಮನೋಭಾವ’ದ ಬಗ್ಗೆ ಒತ್ತು ಇದೆ. ಹಾಗೆಯೇ ಬಿಜೆಪಿ ಒಂದು ಪಕ್ಷವಾಗಿ ಮತ್ತು Narendra_Modiಅಡ್ವಾಣಿ ಮತ್ತಿತರ ನಾಯಕರು ಅಷ್ಟೇನೂ ಅಪಾಯಕಾರಿಯಲ್ಲವೇನೋ ಎಂಬ ಭಾವನೆ ಪರೋಕ್ಷವಾಗಿಯಾದರೂ ಇದೆ. ಇವೆಲ್ಲಕ್ಕಿಂತಲೂ ಹೆಚ್ಚಾಗಿ ಮೋದಿ ಅಥವಾ ಬಿಜೆಪಿ ಫೆನೋಮಿನಾಗಳ ಹಿಂದಿನ ‘ರಿಮೋಟ್ ಕಂಟ್ರೊಲ್’ ಆದ ಆರೆಸ್ಸೆಸ್ ಬಗ್ಗೆ ಏನೂ ಹೇಳದಿರುವುದು ಬಹಳ ಆಶ್ಚರ್ಯಕರ. ಏಕೆಂದರೆ 2004 ಮತ್ತು 2009ರಲ್ಲಿ ಅಡ್ವಾಣಿಯನ್ನು ನಾಯಕನಾಗಿ ಬಿಂಬಿಸಿದ್ದೂ, ಈಗ ಮೋದಿಯ ಪಟ್ಟಾಭಿಷೇಕ ಮಾಡಿದ್ದು ಇದೇ ಆರೆಸ್ಸೆಸ್. ಇಬ್ಬರನ್ನೂ ‘ಲೋಹ ಪುರುಷ’ ಎಂದು ಮೆರೆದಾಡಿದ್ದೂ ಸಂಘ ಪರಿವಾರವೇ. ಭಾರತದ ಸಂವಿಧಾನವನ್ನು ತಿರಸ್ಕರಿಸಿ ಮನು ಸ್ಮೃತಿಯನ್ನು ಎತ್ತಿ ಹಿಡಿಯುವ, ಮತ್ತು ಹಿಟ್ಲರ್-ಮುಸೊಲಿನಿ ಫ್ಯಾಸಿಸ್ಟ್ ಚಳುವಳಿಯಿಂದ ಸ್ಪೂರ್ತಿ ಪಡೆದ ಆರೆಸ್ಸೆಸ್ ಮತ್ತು ಬಿಜೆಪಿ ಸೇರಿದಂತೆ ಅದರ ಪರಿವಾರ ಎಂದೂ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿಲ್ಲ. ಬಿಜೆಪಿ ಒಪ್ಪಿಕೊಂಡಿದ್ದರೆ ಅದು ತಂತ್ರಗಾರಿಕೆ ಮಾತ್ರ. ಅದರ ನಿಜವಾದ ಉದ್ದೇಶ ‘ಹಿಂದೂ ರಾಷ್ಟ್ರ’. ಅದು ಸರ್ವಾಧಿಕಾರ ಮತ್ತು ಒಬ್ಬ ನಾಯಕ (ಫ್ಯೂರರ್) ಮೇಲೆ ಆಧರಿಸಿದ್ದು. ಅವರ ಮೂಲ ಘೋಷಣೆ ‘ಒಂದು ದೇಶ, ಒಂದು ಧರ್ಮ, ಒಬ್ಬ ನಾಯಕ’. ಇಲ್ಲಿ ಬಿಜೆಪಿ ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ. ಬದಲಾಗಿ, ಅಧಿಕಾರ ಹಿಡಿಯಲು, ತನ್ನ ಮೂಲ ಗುರಿ ಸಾಧನೆಗೆ ಇದು ಒಂದೇ ದಾರಿ ಎಂದು ಅದು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಮೋದಿಯನ್ನು ಬಿಜೆಪಿ, ಆರೆಸ್ಸೆಸ್ ಸಂಘಪರಿವಾರಗಳಿಂದ ಪ್ರತ್ಯೇಕವಾಗಿ, ಆಶಿಶ್ ನಂದಿಯವರ ಮನೋವಿಶ್ಲೇಷಣೆ ಯ ಆಧಾರದ ಮೇಲೆ ನೋಡುವುದು ಹಲವು ಗೊಂದಲಗಳಿಗೆ ಮತ್ತು ರಾಜಕೀಯ ತಪ್ಪು ನಡೆಗಳಿಗೆ ಕಾರಣವಾಗುತ್ತದೆ.

‘ದೇಶಕ್ಕೆ ನಿರ್ಣಾಯಕ ನಾಯಕ ಮೋದಿ’ ಎಂಬ ‘ಅಲೆ’ ಅಥವಾ ‘ಘೋಷಣೆ’ಯ ವಿದ್ಯಮಾನ ‘ಮೋದಿಯ ವೈಯಕ್ತಿಕ ಸರ್ವಾಧಿಕಾರಿ ಮನೋಭಾವ’ದಿಂದ ಉಗಮವಾದದ್ದು ಎಂಬ ನಿಲುವು, ಅದರ ವಿರುದ್ಧ ಹೋರಾಟದ ವ್ಯೂಹ-ತಂತ್ರಗಳ ಬಗ್ಗೆ ತಪ್ಪುಗಳಿಗೆ ಹಾದಿ ಮಾಡಿಕೊಡುತ್ತದೆ. ಆಗ ”ಮೋದಿ ಎಂಬ ಒಬ್ಬ ವ್ಯಕ್ತಿಯ ವಿರುದ್ಧ ಹೋರಾಡಬೇಕು. ಆತ ಪ್ರಧಾನಿಯಾಗದಿದ್ದರೆ ಸಾಕು. ಅಡ್ವಾಣಿ ಅಥವಾ ಬೇರೆ ಯಾರಾದರೂ ಎನ್.ಡಿ.ಎ. ಪ್ರಧಾನಿಯಾದರೂ ಪರವಾಗಿಲ್ಲ, ಅದೇ ಸರ್ವಾಧಿಕಾರ ಕಾಂಗ್ರೆಸಿನಂತಹ ಇತರ ಪಕ್ಷ ತಂದರೂ ಪರವಾಗಿಲ್ಲ” – ಇತ್ಯಾದಿ ಆಘಾತಕಾರಿ ತಾತ್ವಿಕ ನೆಲೆಗಳನ್ನು ತಲುಪಬೇಕಾಗುತ್ತದೆ.

‘ಮೋದಿ ವಿದ್ಯಮಾನ’ದ ಉಗಮದ ನಿಜವಾದ ಕಾರಣ ಬೇರೆಯೇ. ನಮ್ಮ ಆಳುವ ಆಳುವ ವರ್ಗಗಳಿಗೆ ಅತ್ಯಂತ ಅನುಕೂಲಕರವಾಗಿರುವ (1991ರಿಂದ ಆರಂಭವಾಗಿ ಈಗ ತುತ್ತತುದಿಗೆ ಏರಿರುವ) ನವ-ಉದಾರವಾದಿ ನೀತಿಗಳನ್ನು ಜಾರಿ ಮಾಡಬೇಕಾದರೆ ಪ್ರಜಾಪ್ರಭುತ್ವವನ್ನು ಮೊಟಕುಗೊಳಿಸುತ್ತಾ ಹೋಗಲೇಬೇಕು. ಇದನ್ನು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕತ್ವದ ಸರಕಾರಗಳು ಪೈಪೋಟಿಯಿಂದ ಮಾಡುತ್ತಾ ಬಂದಿವೆ. ಏಕೆಂದರೆ ನವ-ಉದಾರವಾದಿ ನೀತಿಗಳ ಬಗ್ಗೆ ಇವರೆಡರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಹಾಗೆಯೇ ಪ್ರಜಾಪ್ರಭುತ್ವವನ್ನು ಮೊಟಕುಗೊಳಿಸುವುದರ ಬಗೆಗೂ ಭಿನ್ನಾಭಿಪ್ರಾಯವಿಲ್ಲ. ಆಳುವ ವರ್ಗಗಳ ಸೇವೆಗೆ ಇವೆರಡೂ ಕಟಿಬದ್ಧವಾಗಿರುವುದರಿಂದ ಇದರಲ್ಲೂ ಇವೆರಡರ ನಡುವೆ ವ್ಯತ್ಯಾಸ ಇಲ್ಲ. ಪ್ರಜಾಪ್ರಭುತ್ವವನ್ನು ‘ಸಸ್ಪೆಂಡ್’ ಮಾಡಿ ತುರ್ತು ಪರಿಸ್ಥಿತಿ ತಂದಿದ್ದು ಕಾಂಗ್ರೆಸ್ ಎಂಬುದನ್ನು ಮರೆಯಲಾದೀತೇ? ಆಗಲೂ ಇಂದಿರಾ ಗಾಂಧಿಯವರ ‘ವೈಯಕ್ತಿಕ ಸರ್ವಾಧಿಕಾರಿ ಮನೋಭಾವ’ಕ್ಕೆ ಅತಿಯಾದ ಮಹತ್ವವನ್ನು ಕೊಟ್ಟವರು ಇದ್ದರು.

ಆಳುವ ವರ್ಗಗಳಿಗೆ ಇಂದು ಕಾಂಗ್ರೆಸಿಗಿಂತ ಮೋದಿ ನಾಯಕತ್ವದ ಬಿಜೆಪಿ ಹೆಚ್ಚು ಆಕರ್ಷಕವಾಗಿ ಕಾಣಲು ಕಾರಣಗಳಿವೆ. ’ಕಾಂಗ್ರೆಸ್ ಬಿಜೆಪಿಗಿಂತ ಕಮ್ಮಿ ಕಾರ್ಪೋರೇಟ್-ಪರ’ modi_ambani_tata_kamathಎಂಬುದು ಖಂಡಿತ ಅಲ್ಲ. ಅಂಬಾನಿ ಮತ್ತು ಆತನ ಸಹ-ಬಿಲಿಯಾಧಿಪತಿಗಳು ಕಾಂಗ್ರೆಸ್ ಆಡಳಿತದಲ್ಲಿ ಕೊಬ್ಬುತ್ತಲೇ ಇದ್ದರು. ಬಹುಶಃ ಮನಮೋಹನ್ ಸಿಂಗರ ಕಾರ್ಪೋರೇಟ್-ಪರ ಸೇವೆಯ ದಾಖಲೆ ಮುರಿಯಲು ಮೋದಿ ಸಹ ಹರಸಾಹಸ ಪಡಬೇಕಾದೀತು! ಕಳೆದ 10 ವರ್ಷಗಳ ಕಾಂಗ್ರೆಸ್ ನಾಯಕತ್ವದ ಜನ-ವಿರೋಧಿ (ಕಾರ್ಪೋರೇಟ್-ಪರ) ನೀತಿಗಳು ಮತ್ತು ಭ್ರಷ್ಟಾಚಾರದಿಂದ ಜನ ರೋಸಿ ಹೋಗಿದ್ದಾರೆ. ಆದ್ದರಿಂದ ದೇಶದಲ್ಲಿ ಕಾಂಗ್ರೆಸ್-ವಿರೋಧಿ ಅಲೆ ಎದ್ದಿದೆ. ಬಿಜೆಪಿ ಈ ಎರಡರಲ್ಲೂ ಏನೂ ಕಡಿಮೆ ಇಲ್ಲದಿದ್ದರೂ, ‘ಬೇರೆ ಆಯ್ಕೆ ಇಲ್ಲ’ ಎಂದು ಜನರನ್ನು ನಂಬಿಸಿದರೆ ಬಿಜೆಪಿಯನ್ನು ಜನ ಆಯ್ಕೆ ಮಾಡಬಹುದು ಎಂಬುದು ಆಳುವ ಕಾರ್ಪೋರೇಟ್ ಲೆಕ್ಕಾಚಾರ. ಇದಲ್ಲದೆ ಬಿಜೆಪಿಯ ಅದರಲ್ಲೂ ಮೊದಿಯ ಕಾರ್ಪೋರೇಟ್-ಪರ ಮತ್ತು ಹಿಂದುತ್ವದ ಅಪೂರ್ವ ’ಕಾಕ್ ಟೈಲ್’ಕೊಡುವ ನಿರ್ಣಾಯಕ ನಾಯಕತ್ವ’ ಆಳುವ ಕಾರ್ಪೋರೇಟ್ ಗಳಿಗೆ ಇನ್ನಷ್ಟು ಆಕರ್ಷಕ. ಯಾಕೆಂದರೆ ಕಾರ್ಪೋರೇಟ್-ಪರ ನೀತಿಗಳಿಂದ ಹುಟ್ಟಬಹುದಾದ ಜನತೆಯ ಆಕ್ರೋಶವನ್ನು ವಿಭಜನಕಾರಿ ಹಾದಿಗಳಿಗೆ ತಿರುಗಿಸುವುದರಲ್ಲಿ ಬಿಜೆಪಿಯ ಹಿಂದಿರುವ ಸಂಘಪರಿವಾರ ಕಾಂಗ್ರೆಸಿಗಿಂತ ಗಮನಾರ್ಹವಾಗಿ ಹೆಚ್ಚು ‘ಕ್ಷಮತೆ’ ಮತ್ತು ‘ದಕ್ಷತೆ’ ಹೊಂದಿದೆ. ಆದರೂ ಇಲ್ಲೂ ಕಾಂಗ್ರೆಸ್ ಪಕ್ಷದ ‘ಕ್ಷಮತೆ’ ಮತ್ತು ದೀರ್ಘ ‘ಅನುಭವ’ವನ್ನು ತೀರಾ ಕಡೆಗಣಿಸುವಂತಿಲ್ಲ.

ಮೋದಿಯ ‘ಸರ್ವಾಧಿಕಾರದತ್ತ ಯಾತ್ರೆ’ಯ ಹಿಂದಿರುವುದು ಕಾರ್ಪೋರೇಟ್ -ಹಿಂದುತ್ವ ಕೂಟ. ಇದಕ್ಕೆ ಪ್ರತಿರೋಧ ಒಡ್ಡಲು ಕಾಂಗ್ರೆಸಿಗೆ ಸಾಧ್ಯವಿಲ್ಲ. ಯಾಕೆಂದರೆ bhagvat-gadkari-modiಅದಕ್ಕೆ ಕಾರ್ಪೋರೇಟ್ -ವಿರೋಧ ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಅದು ಕಾರ್ಪೋರೇಟ್ -ಸಂಪ್ರೀತಿಗೆ ಬಿಜೆಪಿಯ ಜತೆ ಪೈಪೋಟಿ ಮಾಡಬಲ್ಲುದು ಅಷ್ಟೇ. ಮಾತ್ರವಲ್ಲ, ಕಳೆದ 10 ವರ್ಷಗಳಲ್ಲಿ ಕಾರ್ಪೋರೇಟ್ -ಹಿಂದುತ್ವ ಕೂಟದ ರಚನೆಗೆ ಪೂರಕ ಸನ್ನಿವೇಶ ನಿರ್ಮಾಣ ಮಾಡಿರುವುದೂ ಮನಮೋಹನ್ ಸರ್ಕಾರವೇ. ಭಾರತದಲ್ಲಿ ಫ್ಯಾಸಿಸ್ಟ್ ಸರ್ವಾಧಿಕಾರ ತರುವ ವಾಹನವಾಗಬಲ್ಲ ಕೋಮುವಾದದ ವಿರುದ್ಧ ಹೋರಾಡಲು ಕಾಂಗ್ರೆಸ್ ಅಸಮರ್ಥ ಎಂದು ಪದೇ ಪದೇ ಸಾಬೀತಾಗಿದೆ. ಹಾಗೆ ನೋಡಿದರೆ ಕೋಮುವಾದ ಮತ್ತು ನವ-ಉದಾರವಾದಿ ನೀತಿಗಳ ಏರುಗತಿಗೂ ನೇರ ಸಂಬಂಧವಿದೆ. 1991ರಿಂದ ಆರಂಭವಾದ ನವ-ಉದಾರವಾದಿ ನೀತಿಗಳ ಪರಿಣಾಮಗಳ ವಿರುದ್ಧ ಜನತೆಯ ಆಕ್ರೋಶ ಬೇರೆಡೆಗೆ ತಿರುಗಿಸಲೆಂದೇ ಪಿ.ವಿ.ನರಸಿಂಹ ರಾವ್ ಕಾಂಗ್ರೆಸ್ ಸರ್ಕಾರ, ಬಾಬ್ರಿ ಮಸೀದಿ ನಾಶ ಮತ್ತು ಆ ಮೇಲಿನ ಕೋಮುದಳ್ಳುರಿಗೆ ಬಿಜೆಪಿಗೆ ‘ಅವಕಾಶ’ ಮಾಡಿಕೊಟ್ಟಿದ್ದು. ಇವೆಲ್ಲದರ ಬಗ್ಗೆ ದೇವನೂರು ಅವರ ಮೌನ ಮತ್ತು ಅವರ ವಾದಸರಣಿ ‘ಮೊದಿ ವಿದ್ಯಮಾನ’ದ ಹಿಂದೆ ನವ-ಉದಾರವಾದಿ ನೀತಿ-ಪರ ಕಾರ್ಪೋರೇಟ್ -ಹಿಂದುತ್ವ ಕೂಟವನ್ನು ಗುರುತಿಸದೆ, ‘ಮೋದಿ ಭೂತ’ ಹೋಗಲಾಡಿಸಲು ‘ಕಾಂಗ್ರೆಸ್ ಪಿಶಾಚಿ’ಯನ್ನು ಹೊರಬೇಕೆಂಬ ತಪ್ಪು ರಾಜಕೀಯ ನಿಲುವಿಗೆ ಹಾದಿ ಮಾಡಿ ಕೊಡುತ್ತದೆ. ‘ಮೋದಿ ಭೂತ’ ಹೋಗಲಾಡಿಸಲು ಸಾಧ್ಯವಿರುವುದು ನವ-ಉದಾರವಾದಿ ನೀತಿಗಳ ವಿರುದ್ಧ ದೃಢವಾಗಿ ನಿಲ್ಲಬಲ್ಲ, ಬದಲಿ ನೀತಿ ಕೊಡಬಲ್ಲ ರಾಜಕೀಯ ಶಕ್ತಿಗಳಿಗೆ ಮಾತ್ರ.

ಕೊನೆಯದಾಗಿ, ಸರ್ವಾಧಿಕಾರದ ‘ಮೊದಲ ಬಲಿ’ಯಾದ ಮಾಧ್ಯಮಗಳಿಗೆ ತಮ್ಮ ‘ಸಾವಿನ ಸುಳಿವು’ ಸಿಗದ್ದರ ಬಗ್ಗೆ ದೇವನೂರು ಅಚ್ಚರಿ ಪಡುತ್ತಾರೆ. ಇದು ಸ್ವಲ್ಪ ಆಶ್ಚರ್ಯಕರ ಹೇಳಿಕೆಯೇ. ನಮ್ಮ ಮುಖ್ಯವಾಹಿನಿ ಮಾಧ್ಯಮಗಳ ಕಾರ್ಪೋರೇಟ್ -ಒಡೆತನ ಮತ್ತು ಅದರ ರಾಜಕೀಯ ಪರಿಣಾಮಗಳ ಬಗ್ಗೆ ಅರಿವು ಇರುವವರಿಗೆ, ಈ ಮಾಧ್ಯಮಗಳ ಬಗ್ಗೆ ಇಂತಹ ಭ್ರಮೆಗಳಿರಬಾರದು. ಬದಲಾಗಿ ಅಂತಹ ವಿಷವರ್ತುಲದ ವಿರುದ್ಧ ಹೋರಾಡುವ ರಾಜಕೀಯ ಶಕ್ತಿಗಳು ಬದಲಿ ಮಾಧ್ಯಮಗಳನ್ನು ಕಟ್ಟಬೇಕು ಎಂಬ ಅರಿವು ಇರಬೇಕು. ಕಾರ್ಪೋರೇಟ್ -ಒಡೆತನದ ಅಥವಾ ಅದರ ಬೆಂಬಲ ಅವಲಂಬಿಸಿರುವ ಮಾಧ್ಯಮಗಳು ಸ್ವಾಭಾವಿಕವಾಗಿಯೇ ತಮ್ಮ ಒಡೆಯರಿಗೆ ಬೇಕಾದ ನಿರ್ಣಾಯಕ ನಾಯಕ ಮೋದಿ’ಯ ಅಲೆಯ ಬಗ್ಗೆ ಗೊಬೆಲ್  ನಾಚಿಸುವ ಅಬ್ಬರದ ಪ್ರಚಾರ ಕೈಗೊಂಡಿವೆ.