Daily Archives: April 16, 2014

‘ಸಾಹಿತಿಗಳಾದವರು ರಾಜಕೀಯ ಮಾಡಬಾರದು’ ಎಂಬ ಕುತರ್ಕ


– ಡಾ.ಎಸ್.ಬಿ. ಜೋಗುರ


 

ಸಾಹಿತಿಗಳಾದವರು ರಾಜಕೀಯ ಮಾಡಬಾರದು ಎಂಬುವುದು ಪ್ರತಿ ಚುನಾವಣೆಯ ಸಂದರ್ಭದಲ್ಲಿಯೂ ಕೇಳಿ ಬರುವ ಅಸಂಬದ್ಧ ಕೂಗು. ಸಾಹಿತಿಗಳು ರಾಜಕಾರಣದಲ್ಲಿ ಕ್ರಿಯಾಶೀಲರಾಗುವುದು, ಈ ಪಕ್ಷ ಆ ಪಕ್ಷ ಎಂದು ಮಾತಾಡುವುದು ಹೊಸ ವರಸೆಯಂತೂ ಅಲ್ಲ. ಅಷ್ಟಕ್ಕೂ ಸಾಹಿತಿಗಳು ರಾಜಕಾರಣ ಮಾಡಬಾರದು ಅಂತ ಯಾವ ವಿಧಿ ಅಥವಾ ಶಾಸನವಿದೆ ಹೇಳಿದೆ? ನಮ್ಮದು ಬಹುದೊಡ್ಡ ಪ್ರಜಾಸತ್ತಾತ್ಮಕ ವ್ಯವಸ್ಥೆ. ಹಾಗೆಂದು ಸ್ವಘೋಷಿತ ನಿರ್ಬಂಧಗಳನ್ನು ಹೇರುವ ಮೂಲಕ ಪ್ರಜಾಸತ್ತಾತ್ಮಕ ಅರ್ಥವಂತಿಕೆಯನ್ನು ಯಾಕೆ ಕಸಿಯಬೇಕು? ವಾಸ್ತವದಲ್ಲಿ ‘ಸಾಹಿತಿಗಳೂ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಅರಚುವವರು ಏನೋ ಘಟಿಸಬಾರದ್ದು ಘಟಿಸುತ್ತಿದೆ ಎನ್ನುವಂತೆ ಮಾತಾಡುತ್ತಿರುವುದೇ ಪ್ರಜಾಪ್ರಭುತ್ವದ ಬಹುದೊಡ್ದ ಅಣಕ.

ಚುನಾವಣೆಯ ಸಂದರ್ಭದಲ್ಲಿ ಹೀಗೆ ಕೆಲವು ಸಾಹಿತಿಗಳು ಸೊಲ್ಲೆತ್ತುವುದು ಮುಂಚಿನಿಂದಲೂ ಇದ್ದೇ ಇದೆ. ಹಾಗೆಯೇ ಆಯಾ ಕಾಲದ ಟೀಕೆ, ಪ್ರತಿಕ್ರಿಯೆಗಳೂ ಇದ್ದೇ ಇವೆ. artists-campainingಶಿವರಾಮ ಕಾರಂತ, ದಿನಕರ ದೇಸಾಯಿಯಂಥಾ ಕೆಲವು ಸಾಹಿತಿಗಳು ಖುದ್ದಾಗಿ ಚುನಾವಣೆಯಲ್ಲಿ ಸ್ಪರ್ಧಿಸಿರುವುದೂ ಇದೆ. ಗ್ರೀಕ್ ದೇಶದ ಚಿಂತಕ ಪ್ಲೇಟೋ ನುಡಿದ ’ರಾಜ್ಯವನ್ನಾಳುವವರು ತತ್ವಜ್ಞಾನಿಗಳಾಗಿರಬೇಕು, ಇಲ್ಲವೇ ತತ್ವಜ್ಞಾನಿಗಳು ರಾಜಕೀಯವನ್ನು ಆಳಬೇಕು’ ಎನ್ನುವ ಮಾತಿನ ತಾತ್ಪರ್ಯವೂ ಕೂಡಾ ರಾಜಕೀಯದಲ್ಲಿ ಬುದ್ದಿ ಜೀವಿಗಳ ಪಾತ್ರವನ್ನು ನಗಣ್ಯವೆಂದು ಪರಿಗಣಿಸದೇ ಮುಖ್ಯ ಎಂದು ತಿಳಿಯಬೇಕು ಎಂಬುವುದಾಗಿದೆ. ‘ರಾಜಕೀಯದ ಗಂಧ -ಗಾಳಿ ಇಲ್ಲದೇ ಇರುವ ತೀರಾ ಕನಿಷ್ಟ ವಿದ್ಯಾರ್ಹತೆಯೂ ಇಲ್ಲದ ಯಾರೂ ರಾಜಕಾರಣ ಮಾಡಬಹುದು, ಆ ಬಗ್ಗೆ ಮಾತಾಡಬಹುದು. ಆದರೆ ಸಾಮಾಜಿಕ ಮತ್ತು ರಾಜಕೀಯ ವಿದ್ಯಮಾನಗಳ ಬಗ್ಗೆ ಸಾಕಷ್ಟು ಅರಿತಿರುವ ಸಾಹಿತಿಗಳು, ಕಲಾಕಾರರು ಮಾತ್ರ ರಾಜಕಾರಣ ಮಾಡಬಾರದು; ಮಾತನಾಡಬಾರದು’. ಅದೇಕೆ ಎನ್ನುವುದೇ ಒಂದು ಬಹುದೊಡ್ದ ಚರ್ಚೆಯ ವಿಷಯವಾಗಬೇಕು. ಅಷ್ಟಕ್ಕೂ ಸಾಹಿತಿಗಳು ರಾಜಕಾರಣಕ್ಕೆ ಬರಬಾರದು. ಅವರು ಪ್ರಚಾರ ಮಾಡಬಾರದು ಎನ್ನುವಷ್ಟರ ಮಟ್ಟಿಗೆ ನಮ್ಮ ದೇಶದ ರಾಜಕೀಯ ಸನ್ನಿವೇಶ ಪರಿಶುದ್ಧವಾಗಿ ಉಳಿದಿಲ್ಲ. ಇನ್ನು ಕೇವಲ ನಮ್ಮ ರಾಜ್ಯದಲ್ಲಿ ಮಾತ್ರ ಹೀಗೆ ಸಾಹಿತಿಗಳು ತಮ್ಮ ತಮ್ಮ ಒಲವಿನ ಮನೋಧೋರಣೆಯ ಪಕ್ಷಗಳನ್ನು ಬೆಂಬಲಿಸುತ್ತಿದ್ದಾರೆ ಎಂದಲ್ಲ, ಬೇರೆ ಬೇರೆ ರಾಜ್ಯಗಳಲ್ಲಿಯೂ ಈ ಬಗೆಯ ಪ್ರಕ್ರೀಯೆ ಇದ್ದೇ ಇದೆ. ಅಷ್ಟೇ ಯಾಕೆ ಚರಿತ್ರೆಯುದ್ದಕ್ಕೂ ಸಾಹಿತಿಗಳು ಮತ್ತು ರಾಜಾಶ್ರಯದ ನಡುವಿನ ನಂಟನ್ನು ಮರೆತು ಮಾತಾಡಲು ಸಾಧ್ಯವೇ?

ಅತಿ ಮುಖ್ಯವಾಗಿ ನಾವಿಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಸಾಹಿತಿಯಾದವನು ಯಕ್ಷ ಲೋಕದ ಅಪರಾವತಾರವಲ್ಲ, ಅವನೂ ನಮ್ಮ ನಡುವೆಯೇcidananda-murthy ಬದುಕಿರುವ ಒಬ್ಬ ಲೇಖಕ. ಅವನನ್ನು ಲೇಖಕನಾಗಿ ರೂಪಿಸುವಲ್ಲಿಯೂ ಅವನ ಸುತ್ತಮುತ್ತಲಿನ ಇದೇ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸರ ಅತ್ಯಂತ ನಿರ್ಣಾಯಕ ಪಾತ್ರವನ್ನು ವಹಿಸುತ್ತಿರುತ್ತದೆ. ಹಾಗಿರುವಾಗ ತಾನು ಹುಟ್ಟಿ, ಬೆಳೆದ ಪರಿಸರಕ್ಕೆ ಆತ ಆಗಾಗ ಪ್ರತಿಕ್ರಿಯಿಸದೇ ಹೋದರೆ ಆತನ ಬರವಣಿಗೆಗೂ ಒಂದು ಮೌಲ್ಯವಿದೆ ಎನಿಸುವುದಿಲ್ಲ. ಪ್ರತಿಯೊಬ್ಬನಿಗೂ ಮುಕ್ತವಾದ ಅಭಿಪ್ರಾಯಗಳಿವೆ ಎಂದು ಹೇಳುವಾಗ ಈ ಸಾಹಿತಿಗಳನ್ನು ಅದರಿಂದ ಹೊರಗಿಡುವುದು ಸರಿಯೆ? ಅವರಿಗೆ ದಕ್ಕುವ ಎಲ್ಲ ಬಗೆಯ ಪ್ರಶಸ್ತಿಗಳನ್ನು ಮೀರಿಯೂ ಅವರಲ್ಲೊಬ್ಬ ಈ ನೆಲದ ಮನುಷ್ಯನಿದ್ದಾನೆ, ಅವನಿಗೂ ಒಂದಷ್ಟು ಕನಸುಗಳಿವೆ, ಕನವರಿಕೆಗಳಿವೆ. ಅವು ಬಯಲಾಗುವುದೇ ಬೇಡ ಎನ್ನುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಯ ಬಹುದೊಡ್ಡ ಅಣಕವಾಗಿಬಿಡುತ್ತದೆ.

ಮೋದಿಯನ್ನು ಬೆಂಬಲಿಸುವ ಸಾಹಿತಿಗಳಿರುವಂತೆ, ರಾಹುಲ್ ಗಾಂಧಿಯನ್ನು ಬೆಂಬಲಿಸುವ Bhyrappaಸಾಹಿತಿಗಳೂ ಇದ್ದಾರೆ. ಹಾಗೆಯೇ ಕೇಜ್ರಿವಾಲ್ ಅವರನ್ನು ಬೆಂಬಲಿಸುವವರು ಇರುವಂತೆ ಮಾಯಾವತಿಯನ್ನು ಬೆಂಬಲಿಸುವವರೂ ಇದ್ದಾರೆ. ಆಯಾ ರಾಜಕೀಯ ಪಕ್ಷಗಳಿಗೆ ಅದು ಅವರವರ ವ್ಯಕ್ತಿಗತ ಆಯ್ಕೆ ಎನ್ನುವ ಸತ್ಯ ತಿಳಿದಿರಬೇಕು. ಒಬ್ಬ ಸಾಹಿತಿ ಉತ್ತಮವಾದ ಕತೆ, ಕಾದಂಬರಿ, ಲೇಖನ, ಕವಿತೆ ಬರೆಯಬೇಕೆಂದು ನಿರೀಕ್ಷಿಸುವ ಸಮಾಜ, ಅವನಿಂದ ಸೂಕ್ತ ಸಲಹೆ ಸೂಚನೆಗಳು ದೊರೆಯುವದಾದರೆ ಸ್ವೀಕರಿಸಬಾರದು ಎನ್ನುವುದು ಕುತರ್ಕವಾಗುತ್ತದೆ. ಪ್ರಾಜ್ಞರಾದವರು ಎಲ್ಲ ಸಂದರ್ಭಗಳಲ್ಲಿಯೂ ಮೌನ ತಾಳುವುದು ಒಳ್ಳೆಯದಲ್ಲ. ವ್ಯಕ್ತಿಗತ ನಿಂದನೆ ಆಪಾದನೆಗಳೇ ಪ್ರತಿಕ್ರಿಯೆಗಳು ಎನ್ನುವ ಮಟ್ಟಕ್ಕೆ ಇಳಿಯಬಾರದು. ಎಲ್ಲ ರೀತಿಯಿಂದಲೂ ಸ್ವತಂತ್ರವಾಗಿರುವ ಸಾಹಿತಿಗಳಿಗೂ ಕೂಡಾ ತಮ್ಮ ಅಭಿಪ್ರಾಯವನ್ನು ಹೊರ ಹಾಕುವ ಅವಕಾಶವಿದೆ. ಆ ಅವಕಾಶದ ಇತಿಮಿತಿಗಳ ಅರಿವಿನೊಳಗೆ ಮಾತ್ರ ಅದು ನಡೆಯಬೇಕು.

ಈಗಾಗಲೇ ರಾಜಕೀಯ ಪರಿಸರ ಎಷ್ಟು ಕಲುಷಿತವಾಗಿದೆ ಎನ್ನುವುದು ಎಲ್ಲರಿಗೂ ತಿಳಿದಿರುವಂತದ್ದು. ಹೀಗಿರುವಾಗ ಒಂದು ಅರ್ಥ ಪೂರ್ಣವಾದ ರೀತಿಯಲ್ಲಿ karnad-campaining-for-nilekani.jpg-mediumಸಾಹಿತಿಗಳು, ಚಿಂತಕರು ರಾಜಕೀಯ ಮಾರ್ಗದರ್ಶನ ಮಾಡುವುದನ್ನು ತಪ್ಪಾಗಿ ಕಾಣಬಾರದು. ಒಳ್ಳೆಯವರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯಕ್ಕೆ ಬರುವಂಥ ವಾತಾವರಣವನ್ನು ರೂಪಿಸುವಲ್ಲಿ ಸಾಹಿತಿಗಳು, ಚಿಂತಕರು, ಬುದ್ದಿ ಜೀವಿಗಳ ಮಾತು, ಬರವಣಿಗೆ, ವಿಚಾರಗಳು ನೆರವಾಗಲಿ. ಅಂತಿಮವಾಗಿ ನಮ್ಮ ಸಂವಿಧಾನದಲ್ಲಿ ಪ್ರತಿಪಾದಿತವಾದ ಸಮೈಕ್ಯದಿಂದ ಕೂಡಿ ಬದುಕುವ ಜಾತ್ಯಾತೀತ ರಾಷ್ಟ್ರ ನಿರ್ಮಾಣವೇ ನಮ್ಮೆಲ್ಲರ ಗುರಿಯಾಗಿರಬೇಕು. ಅದನ್ನು ಕೇವಲ ಮಾತಾಡಿಯೇ ಮಾಡಬೇಕು. ಸಾಧಿಸಬೇಕು ಎಂದೇನೂ ಇಲ್ಲ. ಹಾಗೆ ಮಾತಾಡದೆಯೂ ಮಾಡಿ ತೋರಿಸುವುದು ಸಾಧ್ಯವಿದೆ. ಇನ್ನು ಮಾತಾಡುವುದು ಎಂದೊಡನೆ ಪರಸ್ಪರ ಕೆಸರನ್ನು ಎರಚುವ ಹಾಗೆ ವ್ಯವಹರಿಸುವದಲ್ಲ. ಟೀಕೆ ಮಾಡುವಲ್ಲಿಯೂ ಒಂದು ಬಗೆಯ ಗತ್ತಿರಬೇಕು. ಸಾಧ್ಯವಾದಷ್ಟು ತೀರಾ ಖಾಸಗಿಯಾದ ವಿಷಯಗಳನ್ನು ಎತ್ತಿಕೊಂಡು ಟೀಕಿಸಬಾರದು. ಕೆಲ ಬಾರಿ ನಾಗರಿಕ ಸಮಾಜ ಬೆಚ್ಚಿ ಬೀಳುವ ರೀತಿಯಲ್ಲಿ ನಮ್ಮ ನೇತಾರರು ಭಾಷೆಯನ್ನು ಬಳಸುವುದಿದೆ. ಇದು ಆರೋಗ್ಯಯುತ ಪ್ರಜಾಪ್ರಭುತ್ವದ ಲಕ್ಷಣವಲ್ಲ. ಸಾಹಿತಿಗಳಾದವರು ಈ ವಿಷಯವಾಗಿ ತುಂಬಾ ಎಚ್ಚರದಿಂದ ವ್ಯವಹರಿಸಬೇಕು, ಭಾಷೆಯನ್ನು ಬಳಸಬೇಕು. ಯಾಕೆಂದರೆ ಇವರ ಭಾಷಾ ಬಳಕೆಯ ಕೌಶಲ್ಯ ಮತ್ತು ಸೃಜನಶೀಲತೆಯ ಗುಣವನ್ನು ಗಮನಿಸಿಯೇ ಇವರಲ್ಲಿ ಕೆಲವರಿಗೆ ಶ್ರೇಷ್ಟ ಪ್ರಶಸ್ತಿಗಳೂ ಬಂದಿವೆ. ನಾಜೂಕಾಗಿ ಭಾಷೆಯನ್ನು ಬಳಸುವ ಕಲೆಗಾರಿಕೆಯಿರುವವರೇ ಹಗುರವಾಗಿ ಮಾತನಾಡುವ, ಹೇಳಿಕೆಕೊಡುವ ಪರಿಪಾಠವನ್ನು ಬೆಳೆಸಬಾರದು. ಅಂಥಾ ಮಾತು ಆಡುವವರಿಗೂ ಒಳ್ಳೆಯದಲ್ಲ, ಕೇಳುವವರಿಗೂ. ಹಾಗೆಯೇ ಕೆಲ ಸಾಹಿತಿಗಳು ಮೋದಿಯನ್ನು ಬೆಂಬಲಿಸಿ ಮಾತನಾಡುವಾಗ ಮೌನ ವಹಿಸುವ ರಾಜಕಾರಣಿಗಳು, ರಾಹುಲ ಗಾಂಧಿಯನ್ನು ಬೆಂಬಲಿಸಿ ಮಾತನಾಡುವಾಗ ಇದ್ದಕ್ಕಿದ್ದಂತೆ ಆವೇಷಭರಿತರಂತೆ ಆಡುವದು ಕೂಡಾ ಸಮಚಿತ್ತದ ನಡುವಳಿಕೆಯಲ್ಲ ಎನ್ನುವುದನ್ನು ಅರಿಯಬೇಕು.