‘ಸಾಹಿತಿಗಳಾದವರು ರಾಜಕೀಯ ಮಾಡಬಾರದು’ ಎಂಬ ಕುತರ್ಕ


– ಡಾ.ಎಸ್.ಬಿ. ಜೋಗುರ


 

ಸಾಹಿತಿಗಳಾದವರು ರಾಜಕೀಯ ಮಾಡಬಾರದು ಎಂಬುವುದು ಪ್ರತಿ ಚುನಾವಣೆಯ ಸಂದರ್ಭದಲ್ಲಿಯೂ ಕೇಳಿ ಬರುವ ಅಸಂಬದ್ಧ ಕೂಗು. ಸಾಹಿತಿಗಳು ರಾಜಕಾರಣದಲ್ಲಿ ಕ್ರಿಯಾಶೀಲರಾಗುವುದು, ಈ ಪಕ್ಷ ಆ ಪಕ್ಷ ಎಂದು ಮಾತಾಡುವುದು ಹೊಸ ವರಸೆಯಂತೂ ಅಲ್ಲ. ಅಷ್ಟಕ್ಕೂ ಸಾಹಿತಿಗಳು ರಾಜಕಾರಣ ಮಾಡಬಾರದು ಅಂತ ಯಾವ ವಿಧಿ ಅಥವಾ ಶಾಸನವಿದೆ ಹೇಳಿದೆ? ನಮ್ಮದು ಬಹುದೊಡ್ಡ ಪ್ರಜಾಸತ್ತಾತ್ಮಕ ವ್ಯವಸ್ಥೆ. ಹಾಗೆಂದು ಸ್ವಘೋಷಿತ ನಿರ್ಬಂಧಗಳನ್ನು ಹೇರುವ ಮೂಲಕ ಪ್ರಜಾಸತ್ತಾತ್ಮಕ ಅರ್ಥವಂತಿಕೆಯನ್ನು ಯಾಕೆ ಕಸಿಯಬೇಕು? ವಾಸ್ತವದಲ್ಲಿ ‘ಸಾಹಿತಿಗಳೂ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಅರಚುವವರು ಏನೋ ಘಟಿಸಬಾರದ್ದು ಘಟಿಸುತ್ತಿದೆ ಎನ್ನುವಂತೆ ಮಾತಾಡುತ್ತಿರುವುದೇ ಪ್ರಜಾಪ್ರಭುತ್ವದ ಬಹುದೊಡ್ದ ಅಣಕ.

ಚುನಾವಣೆಯ ಸಂದರ್ಭದಲ್ಲಿ ಹೀಗೆ ಕೆಲವು ಸಾಹಿತಿಗಳು ಸೊಲ್ಲೆತ್ತುವುದು ಮುಂಚಿನಿಂದಲೂ ಇದ್ದೇ ಇದೆ. ಹಾಗೆಯೇ ಆಯಾ ಕಾಲದ ಟೀಕೆ, ಪ್ರತಿಕ್ರಿಯೆಗಳೂ ಇದ್ದೇ ಇವೆ. artists-campainingಶಿವರಾಮ ಕಾರಂತ, ದಿನಕರ ದೇಸಾಯಿಯಂಥಾ ಕೆಲವು ಸಾಹಿತಿಗಳು ಖುದ್ದಾಗಿ ಚುನಾವಣೆಯಲ್ಲಿ ಸ್ಪರ್ಧಿಸಿರುವುದೂ ಇದೆ. ಗ್ರೀಕ್ ದೇಶದ ಚಿಂತಕ ಪ್ಲೇಟೋ ನುಡಿದ ’ರಾಜ್ಯವನ್ನಾಳುವವರು ತತ್ವಜ್ಞಾನಿಗಳಾಗಿರಬೇಕು, ಇಲ್ಲವೇ ತತ್ವಜ್ಞಾನಿಗಳು ರಾಜಕೀಯವನ್ನು ಆಳಬೇಕು’ ಎನ್ನುವ ಮಾತಿನ ತಾತ್ಪರ್ಯವೂ ಕೂಡಾ ರಾಜಕೀಯದಲ್ಲಿ ಬುದ್ದಿ ಜೀವಿಗಳ ಪಾತ್ರವನ್ನು ನಗಣ್ಯವೆಂದು ಪರಿಗಣಿಸದೇ ಮುಖ್ಯ ಎಂದು ತಿಳಿಯಬೇಕು ಎಂಬುವುದಾಗಿದೆ. ‘ರಾಜಕೀಯದ ಗಂಧ -ಗಾಳಿ ಇಲ್ಲದೇ ಇರುವ ತೀರಾ ಕನಿಷ್ಟ ವಿದ್ಯಾರ್ಹತೆಯೂ ಇಲ್ಲದ ಯಾರೂ ರಾಜಕಾರಣ ಮಾಡಬಹುದು, ಆ ಬಗ್ಗೆ ಮಾತಾಡಬಹುದು. ಆದರೆ ಸಾಮಾಜಿಕ ಮತ್ತು ರಾಜಕೀಯ ವಿದ್ಯಮಾನಗಳ ಬಗ್ಗೆ ಸಾಕಷ್ಟು ಅರಿತಿರುವ ಸಾಹಿತಿಗಳು, ಕಲಾಕಾರರು ಮಾತ್ರ ರಾಜಕಾರಣ ಮಾಡಬಾರದು; ಮಾತನಾಡಬಾರದು’. ಅದೇಕೆ ಎನ್ನುವುದೇ ಒಂದು ಬಹುದೊಡ್ದ ಚರ್ಚೆಯ ವಿಷಯವಾಗಬೇಕು. ಅಷ್ಟಕ್ಕೂ ಸಾಹಿತಿಗಳು ರಾಜಕಾರಣಕ್ಕೆ ಬರಬಾರದು. ಅವರು ಪ್ರಚಾರ ಮಾಡಬಾರದು ಎನ್ನುವಷ್ಟರ ಮಟ್ಟಿಗೆ ನಮ್ಮ ದೇಶದ ರಾಜಕೀಯ ಸನ್ನಿವೇಶ ಪರಿಶುದ್ಧವಾಗಿ ಉಳಿದಿಲ್ಲ. ಇನ್ನು ಕೇವಲ ನಮ್ಮ ರಾಜ್ಯದಲ್ಲಿ ಮಾತ್ರ ಹೀಗೆ ಸಾಹಿತಿಗಳು ತಮ್ಮ ತಮ್ಮ ಒಲವಿನ ಮನೋಧೋರಣೆಯ ಪಕ್ಷಗಳನ್ನು ಬೆಂಬಲಿಸುತ್ತಿದ್ದಾರೆ ಎಂದಲ್ಲ, ಬೇರೆ ಬೇರೆ ರಾಜ್ಯಗಳಲ್ಲಿಯೂ ಈ ಬಗೆಯ ಪ್ರಕ್ರೀಯೆ ಇದ್ದೇ ಇದೆ. ಅಷ್ಟೇ ಯಾಕೆ ಚರಿತ್ರೆಯುದ್ದಕ್ಕೂ ಸಾಹಿತಿಗಳು ಮತ್ತು ರಾಜಾಶ್ರಯದ ನಡುವಿನ ನಂಟನ್ನು ಮರೆತು ಮಾತಾಡಲು ಸಾಧ್ಯವೇ?

ಅತಿ ಮುಖ್ಯವಾಗಿ ನಾವಿಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಸಾಹಿತಿಯಾದವನು ಯಕ್ಷ ಲೋಕದ ಅಪರಾವತಾರವಲ್ಲ, ಅವನೂ ನಮ್ಮ ನಡುವೆಯೇcidananda-murthy ಬದುಕಿರುವ ಒಬ್ಬ ಲೇಖಕ. ಅವನನ್ನು ಲೇಖಕನಾಗಿ ರೂಪಿಸುವಲ್ಲಿಯೂ ಅವನ ಸುತ್ತಮುತ್ತಲಿನ ಇದೇ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸರ ಅತ್ಯಂತ ನಿರ್ಣಾಯಕ ಪಾತ್ರವನ್ನು ವಹಿಸುತ್ತಿರುತ್ತದೆ. ಹಾಗಿರುವಾಗ ತಾನು ಹುಟ್ಟಿ, ಬೆಳೆದ ಪರಿಸರಕ್ಕೆ ಆತ ಆಗಾಗ ಪ್ರತಿಕ್ರಿಯಿಸದೇ ಹೋದರೆ ಆತನ ಬರವಣಿಗೆಗೂ ಒಂದು ಮೌಲ್ಯವಿದೆ ಎನಿಸುವುದಿಲ್ಲ. ಪ್ರತಿಯೊಬ್ಬನಿಗೂ ಮುಕ್ತವಾದ ಅಭಿಪ್ರಾಯಗಳಿವೆ ಎಂದು ಹೇಳುವಾಗ ಈ ಸಾಹಿತಿಗಳನ್ನು ಅದರಿಂದ ಹೊರಗಿಡುವುದು ಸರಿಯೆ? ಅವರಿಗೆ ದಕ್ಕುವ ಎಲ್ಲ ಬಗೆಯ ಪ್ರಶಸ್ತಿಗಳನ್ನು ಮೀರಿಯೂ ಅವರಲ್ಲೊಬ್ಬ ಈ ನೆಲದ ಮನುಷ್ಯನಿದ್ದಾನೆ, ಅವನಿಗೂ ಒಂದಷ್ಟು ಕನಸುಗಳಿವೆ, ಕನವರಿಕೆಗಳಿವೆ. ಅವು ಬಯಲಾಗುವುದೇ ಬೇಡ ಎನ್ನುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಯ ಬಹುದೊಡ್ಡ ಅಣಕವಾಗಿಬಿಡುತ್ತದೆ.

ಮೋದಿಯನ್ನು ಬೆಂಬಲಿಸುವ ಸಾಹಿತಿಗಳಿರುವಂತೆ, ರಾಹುಲ್ ಗಾಂಧಿಯನ್ನು ಬೆಂಬಲಿಸುವ Bhyrappaಸಾಹಿತಿಗಳೂ ಇದ್ದಾರೆ. ಹಾಗೆಯೇ ಕೇಜ್ರಿವಾಲ್ ಅವರನ್ನು ಬೆಂಬಲಿಸುವವರು ಇರುವಂತೆ ಮಾಯಾವತಿಯನ್ನು ಬೆಂಬಲಿಸುವವರೂ ಇದ್ದಾರೆ. ಆಯಾ ರಾಜಕೀಯ ಪಕ್ಷಗಳಿಗೆ ಅದು ಅವರವರ ವ್ಯಕ್ತಿಗತ ಆಯ್ಕೆ ಎನ್ನುವ ಸತ್ಯ ತಿಳಿದಿರಬೇಕು. ಒಬ್ಬ ಸಾಹಿತಿ ಉತ್ತಮವಾದ ಕತೆ, ಕಾದಂಬರಿ, ಲೇಖನ, ಕವಿತೆ ಬರೆಯಬೇಕೆಂದು ನಿರೀಕ್ಷಿಸುವ ಸಮಾಜ, ಅವನಿಂದ ಸೂಕ್ತ ಸಲಹೆ ಸೂಚನೆಗಳು ದೊರೆಯುವದಾದರೆ ಸ್ವೀಕರಿಸಬಾರದು ಎನ್ನುವುದು ಕುತರ್ಕವಾಗುತ್ತದೆ. ಪ್ರಾಜ್ಞರಾದವರು ಎಲ್ಲ ಸಂದರ್ಭಗಳಲ್ಲಿಯೂ ಮೌನ ತಾಳುವುದು ಒಳ್ಳೆಯದಲ್ಲ. ವ್ಯಕ್ತಿಗತ ನಿಂದನೆ ಆಪಾದನೆಗಳೇ ಪ್ರತಿಕ್ರಿಯೆಗಳು ಎನ್ನುವ ಮಟ್ಟಕ್ಕೆ ಇಳಿಯಬಾರದು. ಎಲ್ಲ ರೀತಿಯಿಂದಲೂ ಸ್ವತಂತ್ರವಾಗಿರುವ ಸಾಹಿತಿಗಳಿಗೂ ಕೂಡಾ ತಮ್ಮ ಅಭಿಪ್ರಾಯವನ್ನು ಹೊರ ಹಾಕುವ ಅವಕಾಶವಿದೆ. ಆ ಅವಕಾಶದ ಇತಿಮಿತಿಗಳ ಅರಿವಿನೊಳಗೆ ಮಾತ್ರ ಅದು ನಡೆಯಬೇಕು.

ಈಗಾಗಲೇ ರಾಜಕೀಯ ಪರಿಸರ ಎಷ್ಟು ಕಲುಷಿತವಾಗಿದೆ ಎನ್ನುವುದು ಎಲ್ಲರಿಗೂ ತಿಳಿದಿರುವಂತದ್ದು. ಹೀಗಿರುವಾಗ ಒಂದು ಅರ್ಥ ಪೂರ್ಣವಾದ ರೀತಿಯಲ್ಲಿ karnad-campaining-for-nilekani.jpg-mediumಸಾಹಿತಿಗಳು, ಚಿಂತಕರು ರಾಜಕೀಯ ಮಾರ್ಗದರ್ಶನ ಮಾಡುವುದನ್ನು ತಪ್ಪಾಗಿ ಕಾಣಬಾರದು. ಒಳ್ಳೆಯವರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯಕ್ಕೆ ಬರುವಂಥ ವಾತಾವರಣವನ್ನು ರೂಪಿಸುವಲ್ಲಿ ಸಾಹಿತಿಗಳು, ಚಿಂತಕರು, ಬುದ್ದಿ ಜೀವಿಗಳ ಮಾತು, ಬರವಣಿಗೆ, ವಿಚಾರಗಳು ನೆರವಾಗಲಿ. ಅಂತಿಮವಾಗಿ ನಮ್ಮ ಸಂವಿಧಾನದಲ್ಲಿ ಪ್ರತಿಪಾದಿತವಾದ ಸಮೈಕ್ಯದಿಂದ ಕೂಡಿ ಬದುಕುವ ಜಾತ್ಯಾತೀತ ರಾಷ್ಟ್ರ ನಿರ್ಮಾಣವೇ ನಮ್ಮೆಲ್ಲರ ಗುರಿಯಾಗಿರಬೇಕು. ಅದನ್ನು ಕೇವಲ ಮಾತಾಡಿಯೇ ಮಾಡಬೇಕು. ಸಾಧಿಸಬೇಕು ಎಂದೇನೂ ಇಲ್ಲ. ಹಾಗೆ ಮಾತಾಡದೆಯೂ ಮಾಡಿ ತೋರಿಸುವುದು ಸಾಧ್ಯವಿದೆ. ಇನ್ನು ಮಾತಾಡುವುದು ಎಂದೊಡನೆ ಪರಸ್ಪರ ಕೆಸರನ್ನು ಎರಚುವ ಹಾಗೆ ವ್ಯವಹರಿಸುವದಲ್ಲ. ಟೀಕೆ ಮಾಡುವಲ್ಲಿಯೂ ಒಂದು ಬಗೆಯ ಗತ್ತಿರಬೇಕು. ಸಾಧ್ಯವಾದಷ್ಟು ತೀರಾ ಖಾಸಗಿಯಾದ ವಿಷಯಗಳನ್ನು ಎತ್ತಿಕೊಂಡು ಟೀಕಿಸಬಾರದು. ಕೆಲ ಬಾರಿ ನಾಗರಿಕ ಸಮಾಜ ಬೆಚ್ಚಿ ಬೀಳುವ ರೀತಿಯಲ್ಲಿ ನಮ್ಮ ನೇತಾರರು ಭಾಷೆಯನ್ನು ಬಳಸುವುದಿದೆ. ಇದು ಆರೋಗ್ಯಯುತ ಪ್ರಜಾಪ್ರಭುತ್ವದ ಲಕ್ಷಣವಲ್ಲ. ಸಾಹಿತಿಗಳಾದವರು ಈ ವಿಷಯವಾಗಿ ತುಂಬಾ ಎಚ್ಚರದಿಂದ ವ್ಯವಹರಿಸಬೇಕು, ಭಾಷೆಯನ್ನು ಬಳಸಬೇಕು. ಯಾಕೆಂದರೆ ಇವರ ಭಾಷಾ ಬಳಕೆಯ ಕೌಶಲ್ಯ ಮತ್ತು ಸೃಜನಶೀಲತೆಯ ಗುಣವನ್ನು ಗಮನಿಸಿಯೇ ಇವರಲ್ಲಿ ಕೆಲವರಿಗೆ ಶ್ರೇಷ್ಟ ಪ್ರಶಸ್ತಿಗಳೂ ಬಂದಿವೆ. ನಾಜೂಕಾಗಿ ಭಾಷೆಯನ್ನು ಬಳಸುವ ಕಲೆಗಾರಿಕೆಯಿರುವವರೇ ಹಗುರವಾಗಿ ಮಾತನಾಡುವ, ಹೇಳಿಕೆಕೊಡುವ ಪರಿಪಾಠವನ್ನು ಬೆಳೆಸಬಾರದು. ಅಂಥಾ ಮಾತು ಆಡುವವರಿಗೂ ಒಳ್ಳೆಯದಲ್ಲ, ಕೇಳುವವರಿಗೂ. ಹಾಗೆಯೇ ಕೆಲ ಸಾಹಿತಿಗಳು ಮೋದಿಯನ್ನು ಬೆಂಬಲಿಸಿ ಮಾತನಾಡುವಾಗ ಮೌನ ವಹಿಸುವ ರಾಜಕಾರಣಿಗಳು, ರಾಹುಲ ಗಾಂಧಿಯನ್ನು ಬೆಂಬಲಿಸಿ ಮಾತನಾಡುವಾಗ ಇದ್ದಕ್ಕಿದ್ದಂತೆ ಆವೇಷಭರಿತರಂತೆ ಆಡುವದು ಕೂಡಾ ಸಮಚಿತ್ತದ ನಡುವಳಿಕೆಯಲ್ಲ ಎನ್ನುವುದನ್ನು ಅರಿಯಬೇಕು.

7 thoughts on “‘ಸಾಹಿತಿಗಳಾದವರು ರಾಜಕೀಯ ಮಾಡಬಾರದು’ ಎಂಬ ಕುತರ್ಕ

  1. Ananda Prasad

    ವ್ಯವಸ್ಥೆಯ ಸುಧಾರಣೆ, ಬದಲಾವಣೆಯ ಪರವಾಗಿ ಸಮಾಜದಲ್ಲಿ ಹೆಸರು ಗಳಿಸಿದ, ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದ ವ್ಯಕ್ತಿಗಳು ಸಮಾಜದಲ್ಲಿ ಜಾಗೃತಿ ಮೂಡಿಸಬೇಕಾಗಿರುವುದು ಅವರ ನೈತಿಕ ಜವಾಬ್ದಾರಿಯಾಗಿದೆ ಆದರೆ ಭಾರತದಲ್ಲಿ ಈ ರೀತಿಯ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿಲ್ಲ. ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದ ವ್ಯಕ್ತಿಗಳು ರಾಜಕೀಯಕ್ಕೂ ತಮಗೂ ಸಂಬಂಧವಿಲ್ಲ ಎಂಬ ರೀತಿಯಲ್ಲಿ ನಿರ್ಲಕ್ಷ್ಯದಿಂದ ವರ್ತಿಸುತ್ತಿದ್ದಾರೆ. ದೇಶ ಬದಲಾಗಬೇಕಾದರೆ ಜನ ಬದಲಾಗಬೇಕು, ಜನರ ಚಿಂತನೆಯಲ್ಲಿ ಸುಧಾರಣೆಯಾಗಬೇಕು ಎಂಬುದು ಮೂಲಭೂತ ಅಂಶ. ಇದನ್ನು ಸಾಧ್ಯವಾಗಿಸುವಲ್ಲಿ ಬುದ್ಧಿಜೀವಿಗಳು ಮಹತ್ತರ ಪಾತ್ರ ವಹಿಸಬೇಕಾಗುತ್ತದೆ. ಬುದ್ಧಿಜೀವಿಗಳ ಚಿಂತನೆಗಳೇ ವ್ಯವಸ್ಥೆ ಹಾಗೂ ಸಮಾಜದ ಬದಲಾವಣೆಗೆ ಮೂಲಭೂತ ಕಾರಣ ಎಂಬುದು ಇತಿಹಾಸದ ಉದ್ದಕ್ಕೂ ಕಂಡುಬರುವ ಸತ್ಯ. ಹೀಗಾಗಿ ಬುದ್ಧಿಜೀವಿಗಳು ತಮ್ಮ ಸುತ್ತಲಿನ ಸಮಾಜದ ಆಗುಹೋಗುಗಳ ಬಗ್ಗೆ ನಿರಂತರ ಗಮನವಿಟ್ಟು ಅದನ್ನು ಸುಧಾರಿಸುವಲ್ಲಿ ಕಾಲಕಾಲಕ್ಕೆ ತಮ್ಮ ಚಿಂತನೆಗಳನ್ನು ಹರಿಸುತ್ತಿರಬೇಕು, ಇಲ್ಲದಿದ್ದರೆ ಸಮಾಜವು ನಿಂತ ನೀರಾಗುತ್ತದೆ. ಖ್ಯಾತ ಚಿಂತಕ ಹಾಗೂ ಗಣಿತಜ್ಞ ಬರ್ಟ್ರಂಡ್ ರಸ್ಸೆಲ್ ನಿರಂತರವಾಗಿ ಸಮಾಜದ ಬಗ್ಗೆ ಹಾಗೂ ರಾಜಕೀಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ನಿರ್ಭೀತವಾಗಿ ವ್ಯಕ್ತಪಡಿಸಿ ಸೆರೆವಾಸ ಅನುಭವಿಸಿದ್ದಾರೆ. ಇಂಥ ಧೀಮಂತ ಚಿಂತಕರು ಭಾರತಕ್ಕೆ ಬೇಕಾಗಿದೆ. ಖ್ಯಾತ ವಿಜ್ಞಾನಿ ಮೇಘನಾಥ ಸಹಾ ಅವರು ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದು ಮಾತ್ರವಲ್ಲದೆ ೧೯೫೨ರಲ್ಲಿ ರಾಜಕೀಯಕ್ಕೆ ಇಳಿದು ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ನಿಂತು ದೊಡ್ಡ ಅಂತರದಿಂದ ಚುನಾಯಿತರಾದ ಇತಿಹಾಸ ಇದೆ. ವಿಜ್ಞಾನಿಗಳು ಈ ರೀತಿ ಸಮಾಜ ಹಾಗೂ ದೇಶದ ಸುಧಾರಣೆಗೆ ಟೊಂಕ ಕಟ್ಟಿ ನಿಂತರೆ ಮಾತ್ರ ದೇಶದಲ್ಲಿ ಒಂದಿಷ್ಟು ಬದಲಾವಣೆ ಹಾಗೂ ಸುಧಾರಣೆ ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ನೋಡಿದರೆ ಇಂದಿನ ಭಾರತದ ಖ್ಯಾತ ವಿಜ್ಞಾನಿಗಳು ಸಮಾಜದ ಬಗ್ಗೆ ಹಾಗೂ ದೇಶದ ಸುಧಾರಣೆಯ ಬಗ್ಗೆ ದಿವ್ಯ ನಿರ್ಲಕ್ಷ ಹೊಂದಿರುವುದು ನಾಚಿಕೆಗೇಡಿನ ವಿಷಯವಾಗಿದೆ. ನಮ್ಮ ಪ್ರಖ್ಯಾತ ವಿಜ್ಞಾನಿಗಳಿಗೆ ದೇಶದ ಹಾಗೂ ಸಮಾಜದ ಸ್ಥಿತಿಗತಿಯ ಯಾವುದೇ ಕಾಳಜಿಯೂ ಇಲ್ಲ ಎಂಬುದು ಇಂದು ಎದ್ದು ಕಾಣುತ್ತಾ ಇದೆ. ಬುದ್ಧಿಜೀವಿಗಳು ಸಮಾಜದ ಆಗುಹೋಗುಗಳ ಬಗ್ಗೆ ಇಂದು ಮೌನವಾಗಿರುವುದು ನಮ್ಮ ಇಂದಿನ ದುರವಸ್ಥೆಗೆ ಕಾರಣ.

    Reply
  2. kiran gajanur

    ಸ್ವಾಮಿ ಇಲ್ಲಿ ಯಾರೂ ಸಾಹಿತಿಗಳು ರಾಜಕಾರಣ ಮಾಡಬಾರದು ಹಿಂದೆ ಯಾರೂ ಮಾಡಿಲ್ಲ ಎಂಬ ಮಕ್ಕಳಾಟದ ಪ್ರಶ್ನೆ ಎತ್ತಿಲ್ಲಾ ಪ್ರಶ್ನೆ ಇರುವುದು ಸಾಹಿತಿಗಳು ಸಮಾಜದಲ್ಲಿ ಬದಲಾವಣೆ ತರುವ ಸಕಾರಾತ್ಮಕ ರಾಜಕೀಯ ಮಾಡುತ್ತಿಲ್ಲ ಬದಲಾಗಿ ಭ್ರಷ್ಟ ರಾಜಕೀಯ ಪಕ್ಷಗಳನ್ನು ಬೆಂಬಲಿಸುತ್ತಿದ್ದಾರೆ ಇವರ ಮಾದರಿ ಹೇಗಿದೆ ಎಂದರೆ ಪ್ರಗತಿಪರತೆಯ ಹೆಸರಿನಲ್ಲಿ ಇದುವರೆಗೂ ಎನನ್ನು ವಿರೋಧಿಸಿದ್ದರೂ ಇಂದು ಅದನ್ನೆ ಸಮರ್ಥಿಸಿದಂತಿದೆ ಇದು ಅನೈತಿಕತೆ ಕಾಂಗ್ರೇಸ್ ಆಗಲಿ ಬಿ.ಜೆ.ಪಿ ಯಾಗಲಿ ಸಾಹಿತಿಗಳ ಬೆಂಬಲ ಪಡೆಯಲು ಯೋಗ್ಯವಲ್ಲ ಎಂಬುದು ಇದುವರೆಗಿನ ಅ ಪಕ್ಷಗಳ ಇತಿಹಾಸ ನೋಡಿದ ಆಡುವ ಮಕ್ಕಳಿಗೂ ತಿಳಿಯುತ್ತದೆ ಬೆಂಬಲಿಸುವುದೇ ಆಗಿದ್ದರೆ ಕಡಿದಾಳ್ ಶಾಮಣ್ಣನವರ ಹಾಗೆ ಆಮ್ ಅದ್ಮಿ ಬೆಂಬಲಿಸಬೇಕಿತ್ತು ಅಥವಾ ಲೋಕ ಸತ್ತಾ ಪಕ್ಷವನ್ನು ಬೆಂಬಲಿಸಬೇಕಿತ್ತು ಇಲ್ಲವಾದರೆ ನೈತಿಕ ಹೋರಾಟದ ಭಾಗವಾಗಿ ತಾವೆ ಚುನಾವಣೆಗೆ ನಿಲ್ಲಬೇಕಿತ್ತು ಅದನ್ನು ಬಿಟ್ಟು ೧೦ ವರ್ಷ ದೇಶದಲ್ಲಿ ಭ್ರಷ್ಟತೆಯನ್ನೆ ಆಡಳಿತವಾಗಿಸಿದ ರಾಷ್ಟ್ರೀಯ ಪಕ್ಷಗಳಿಗೆ ಎಕೆ ಬೆಂಬಲ ಘೋಷಿಸಬೇಕಿತ್ತು ಎಂಬುದು ಪ್ರಶ್ನೆ ಇದಕ್ಕೆ ಉತ್ತರವನ್ನು ಜನ ಕೇಳುತ್ತಿದ್ದಾರೆ

    Reply
  3. ವಿಜಯ್

    ಯಾರೂ ಸಾಹಿತಿಗಳು ರಾಜಕೀಯಕ್ಕೆ ಬರುವುದನ್ನು, ಒಂದು ರಾಜಕೀಯ ಪಕ್ಷವನ್ನು ಬೆಂಬಲಿಸುವುದನ್ನು ಆಕ್ಷೇಪಿಸುವುದಿಲ್ಲ…ಆದರೆ ಹೇಳುವುದು ಒಂದು, ಮಾಡುವುದು ಇನ್ನೊಂದು ತರಹದ ಇವರ ಬಾಲಿಶ ನಡೆಯನ್ನು ಪ್ರಶ್ನಿಸುತ್ತಾರೆ. ಈ ‘ಸಮಾಜಮುಖಿ’ ಸಾಹಿತಿಗಳಿಗೆ ಬಿಜೆಪಿ/ಮೋದಿ ವಿರೋಧವಿದ್ದರೆ ಆಪ್ ನ್ನು ಬೆಂಬಲಿಸಬೇಕಿತ್ತು..ಅದರ ಪರವಾಗಿ ಪ್ರಚಾರ ಮಾಡಬೇಕಿತ್ತು. ತಮ್ಮ ಶಕ್ತಿಯ ಮೇಲೇ ನಂಬಿಕೆಯಿದ್ದಲ್ಲಿ ಆಪ್ ನ್ನು ಬೆಳಸುವಲ್ಲಿ ಸಹಾಯ ಮಾಡಬೇಕಿತ್ತು.’ಅಕ್ಕಿ ಮೇಲೆ ಆಸೆ.ನೆಂಟರ ಮೇಲೆ ಪ್ರೀತಿ’ ಅನ್ನುವ ಹಾಗೆ ಇಲ್ಲಿ ಕಾಂಗೈ ಛಾವಡಿಯಲ್ಲಿ ಸಿಗುವ ಫಲ-ತಾಂಬೂಲಗಳು ಇವಕ್ಕೆ ಬೇಕು..ಅತ್ತ ಬಾಯಲ್ಲಿ ಮಾತ್ರ ಆಪ್ ನ್ನು ಹೊಗಳುವುದು!. ಇಂತಹವರನ್ನು ಪ್ರಶ್ನಿಸಿದರೆ ಕುತರ್ಕವಾಗುತ್ತದೆಯೆ? ಇನ್ನು ದೇವನೂರರು ಅಂಬೇಡ್ಕರರನ್ನೇ ತುಳಿದ, ಸುಸ್ತು ಹೊಡೆಯಿಸಿದ, ಅವರಿಂದ ಉರಿಯುವ ಮನೆ ಎಂದು ಕರೆಯಿಸಿಕೊಂಡ ಕಾಂಗೈ ಗೆ ಬೆಂಬಲಿಸಿರುವುದನ್ನು ನೋಡಿ..ಹೇಳುವುದೇನೂ ಉಳಿದಿಲ್ಲ.

    Reply
    1. Nagshetty Shetkar

      ಪ್ರಜ್ಞಾವಂತರೆಲ್ಲರೂ ಆಪ್ ಅನ್ನು ಪ್ರಾಮಾಣಿಕವಾಗಿ ಬೆಂಬಲಿಸಿದ್ದಾರೆ. ಭಾರತದ ರಾಜಕಾರಣದಲ್ಲಿ ಆಪ್ ಭರವಸೆಯ ಹೊಸ ತಾರೆ. ಆದರೆ ಎಲ್ಲೆಲ್ಲಿ ಆಪ್ ಅಭ್ಯರ್ಥಿ ತುಂಬಾ ವೀಕ್ ಅಂತ ಅನ್ನಿಸಿದೆಯೋ ಅಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೆಕ್ಯೂಲರ್ ಸಿದ್ಧಾಂತಗಳ ಗೆಲುವಿಗಾಗಿ ಬೆಂಬಲ ನೀಡಿದ್ದಾರೆ. ಆಪ್ ಇನ್ನೂ ಬೆಳೆದು ಸಾಗಬೇಕಾದ ಹಾದಿ ದೊಡ್ಡದಿದೆ. ದೇವನೂರ ಅವರು ನಮ್ಮ ನಡುವಿನ ಬಹುದೊಡ್ಡ ದಾರ್ಶನಿಕ. ಅವರನ್ನು ಅಂಬೇಡ್ಕರ್ ನೆಪದಲ್ಲಿ ಹಣಿಯುವ ಧೂರ್ತ ಬುದ್ಧಿ ಇಲ್ಲಿ ಕೆಲವರದ್ದು.

      Reply
      1. ವಿಜಯ್

        ಒಹ್ ಹೌದೆ? ನಿಮಗೆ ಒಂದೆರಡು ಪ್ರಶ್ನೆಗಳು..
        ೧) ನಿಮ್ಮ ಪ್ರಕಾರ ಅಂದರೆ ಕರ್ನಾಟಕದ ‘ಪ್ರಜ್ಞಾವಂತರ’ ಪ್ರಕಾರ ಸ್ಟ್ರಾಂಗ್ ಕ್ಯಾಂಡಿಡೇಟ್ ಅಂದರೆ ಯಾರು? ಅವರ ಲಕ್ಷಣಗಳೇನು?
        ೨) ನಿಮ್ಮ ಪ್ರಕಾರ ಈ ಚುನಾವಣೆಯಲ್ಲಿ, ಕರ್ನಾಟಕದಲ್ಲಿ ಆಪ್ ನಿಂದ ನಿಂತಿದ್ದ ಸ್ಟ್ರಾಂಗ್ ಕ್ಯಾಂಡಿಡೇಟ್ ಗಳು ಯಾರು?
        ೩) ಆ ಸ್ಟ್ರಾಂಗ್ ಕ್ಯಾಂಡಿಡೇಟ್ ಗಳ ಪರವಾಗಿ ಯಾವ ಯಾವ ‘ಪ್ರಜ್ಞಾವಂತ’ರು ಪ್ರಚಾರ ಮಾಡಿದರು?

        Reply
  4. ಜೀವನ್ ಮೈಸೂರು

    ಡಾ. ಎಸ್. ಬಿ. ಜೋಗುರ ಅವರೇ, ಸಾಹಿತಿಗಳಾದವರು ರಾಜಕೀಯ ಮಾಡಬಾರದು ಎನ್ನುವುದೇ ಕುತರ್ಕ ಎಂಬ ನಿಮ್ಮ ಮಾತು ಸತ್ಯ. ಆದರೆ, ನಿಮ್ಮಂಥವರ ವಾದ ಸರಣಿಯಲ್ಲಿ ಕಾಣದಂತೆ ಅಡಗಿ ಕುಳಿತಿರುವ-ಸಾಹಿತಿಗಳನ್ನು ಯಾರೂ ಟೀಕಿಸಲೇಬಾರದು ಎಂಬ ಧೋರಣೆ ಮಾತ್ರ ಆಶ್ಚರ್ಯಕರ.

    ಸಾಹಿತಿಗಳು ಕಾಂಗ್ರೆಸ್ ಬೆಂಬಲಿಸುವುದು ಬೇರೆ, ಅದಕ್ಕಾಗಿ ಬೀದಿಗಿಳಿದು ಕಾರ್ಯಕರ್ತರಂತೆ
    ಪ್ರಚಾರ ಮಾಡುವುದು ಬೇರೆ. ಈ ಎರಡನ್ನೂ ಸೂಕ್ಷ್ಮವಾಗಿ ಗಮನಿಸಬೇಕು. ಯು ಆರ್ ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಕೆ. ಮರುಳಸಿದ್ದಪ್ಪ, ಜಿ. ಕೆ. ಗೋವಿಂದ ರಾವ್ ಮತ್ತಿತರರು ಕಾಂಗ್ರೆಸ್ ಬೆಂಬಲಿಸುವುದರ ಜತಗೆ, ಅದರ ಅಭ್ಯರ್ಥಿಗಳಿ ಪರವಾಗಿ, ಪಕ್ಷದ ಪರವಾಗಿ ಊರೂರು ತಿರುಗಿ ಪ್ರಚಾರ ಮಾಡಿದ್ದಾರೆ. ಪ್ರತಿಪಕ್ಷ ಬಿಜೆಪಿ ಹಾಗೂ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನು ಕೇಳಿಕೊಂಡು, ಪ್ರತಿಪಕ್ಷ ಬಿಜೆಪಿ ಸುಮ್ಮನೇ ಕೂರಬೇಕೆಂದು ಬಯಸುವುದು ಆದರ್ಶದ ತುತ್ತತುದಿ.

    ಸಾಹಿತಿಯೊಬ್ಬ ಕಾಂಗ್ರೆಸ್ ಬೆಂಬಲಿಸುವುದಾಗಿ ಪತ್ರಿಕಾ ಹೇಳಿಕೆ ನೀಡಿಯೋ, ಸಂದರ್ಶನದ ಮೂಲಕ ಪ್ರಚಾರ ಪಡಿಸಿಯೋ(ಚಂದ್ರಶೇಖರ ಪಾಟೀಲ್, ಚಂದ್ರಶೇಖರ ಕಂಬಾರರಂತೆ), ಸೆಮಿನಾರ್ ನಲ್ಲಿ ಭಾಷಣ ಮಾಡಿಯೋ(ಮೊಗಳ್ಳಿ ಗಣೇಶ್ ಅವರಂತೆ) ಸುಮ್ಮನಿದ್ದರೆ, ಬಿಜೆಪಿ ಮುಖಂಡರು ಆಕ್ಷೇಪ ವ್ಯಕ್ತಪಡಿಸುತ್ತಿರಲಿಲ್ಲವೇನೋ. ಈ ಕಾರಣದಿಂದಲೇ ಏನೋ- ಚಂಪಾ, ಕಂಬಾರ ಹಾಗೂ ಮೊಗಳ್ಳಿ ಬಗ್ಗೆ ಯಾರೂ ಸೊಲ್ಲು ಎತ್ತಿಲ್ಲ, ಆಕ್ಷೇಪ ದಾಖಲಿಸಿಲ್ಲ.

    ಆದರೆ ಮೂರ್ತಿ ಹಾಗೂ ಅವರ ಸಾಹಿತ್ಯದ ಪಟಾಲಂ ಊರೂರು ತಿರುಗಿ ಬಿಜೆಪಿಯನ್ನು ಬೈದು, ಕಾಂಗ್ರೆಸ್ ಬೆಂಬಲಿಸಿದರು. ಕಾಂಗ್ರೆಸ್ ಮುಖಂಡರ ಜತೆ ವೇದಿಕೆ ಹಂಚಿಕೊಂಡರು. ಇಂಥದ್ದೇ ಕೆಲಸವನ್ನು ಎಸ್ ಎಲ್ ಭೈರಪ್ಪ, ಚಿದಾನಂದ ಮೂರ್ತಿ ಅವರು ಬಿಜೆಪಿ ಪರವಾಗಿ ಮಾಡಿದ್ದರೆ, ಕಾಂಗ್ರೆಸ್ಸಿಗರು ಸುಮ್ಮನೇ ಕೂರುತ್ತಿರಲಿಲ್ಲ. ಸುಮ್ಮನೇ ಕೂರಬಾರದು ಕೂಡ. ಅವರು ಬಿಜೆಪಿಯವರಂತೆ ಸಾಹಿತಿಗಳ ಮೇಲೆ ಮುರಿದುಕೊಂಡು ಬೀಳುತ್ತಿದ್ದರು.
    ನೀವು ಈ ವ್ಯತ್ಯಾಸ ಅರಿಯದೇ, ಅರಿತರೂ ಅದನ್ನು ಮುಚ್ಚಿಟ್ಟು ಬರೆದರೆ, ಅದು ಅದು ಓದುಗರಿಗೆ ಅರ್ಥವಾಗುವುದಿಲ್ಲವೇ ? ಇದು ಕೂಡ ಒಂದರ್ಥದಲ್ಲಿ ರಾಜಕೀಯ !
    ಇಷ್ಟಕ್ಕೂ ಸಾಹಿತಿಗಳೇನು ಟೀಕಾತೀತರೇ ?
    – ಜೀವನ್, ಮೈಸೂರು

    Reply
  5. ಜೀವನ್ ಮೈಸೂರು

    ಒಂದು ಸ್ಪಷ್ಟೀಕರಣ: ಅಂದಹಾಗೆ ಮೊಗಳ್ಳಿ ಗಣೇಶ್ ಅವರು ಬಿಜೆಪಿಯನ್ನು ಬೆಂಬಲಿಸಿಲ್ಲ. ಬದಲಿಗೆ ನರೇಂದ್ರ ಮೋದಿ ನರಹಂತಕ ಎಂದು ಮೈಸೂರಿನಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಟೀಕಿಸಿದ್ದಾರೆ.
    -ಜೀವನ್ ಮೈಸೂರು

    Reply

Leave a Reply

Your email address will not be published. Required fields are marked *