Daily Archives: April 20, 2014

ಕಬೀರ್ ಹತ್ಯೆ: ಪ್ರಶ್ನೆಗಳಿರುವುದು ಪೊಲೀಸರಿಗೆ!

ಕಬೀರ್

– ಸತ್ಯ, ಶೃಂಗೇರಿ

ದನ ಸಾಗಿಸುತ್ತಿದ್ದ ವಾಹನದಲ್ಲಿದ್ದ ಕಬೀರ್ ನಕ್ಸಲ್ ನಿಗ್ರಹ ಪಡೆಯ ಗುಂಡು ತಗುಲಿ ಅಸುನೀಗಿದ್ದಾನೆ. ಅದು ಕೊಲೆ. ನಕ್ಸಲ್ ನಿಗ್ರಹ ಪಡೆ ಅಂತ ರೂಪಿಸಿ ಅಧಿಕಾರಿಗಳ ಕೈಗೆ ಗನ್ ಕೊಟ್ಟು ಅಮಾಯಕರನ್ನು ಹಿಡಿದು ಅವರ ಎದೆಗೆ ಗುಂಡಿಕ್ಕಿ ಎಂದು ಅಲ್ಲಿಗೆ ಕಳುಹಿಸಿದೆಯೇ ಸರಕಾರ? ಸರಕಾರಕ್ಕೆ, ಮುಖ್ಯಮಂತ್ರಿಗೆ, ಗೃಹಮಂತ್ರಿಗೆ ಕಲ್ಯಾಣ ರಾಜ್ಯದ ಕನಿಷ್ಟ ಪ್ರಜ್ಞೆ ಇದ್ರೆ ಮುಲಾಜಿಲ್ಲದೆ ಈ ಹೊತ್ತಿಗೆ ಗುಂಡು ಹೊಡೆದ ಸಿಬ್ಬಂದಿ ವಿರುದ್ಧ ಕೊಲೆ ಕೇಸು ದಾಖಲಿಸಿ ಮುಂದಿನ ಕ್ರಮ ತೆಗೆದುಕೊಳ್ಳಬೇಕಿತ್ತು. ಅವರಲ್ಲಿ ಅಂತಹದೊಂದು ಪ್ರಜ್ಞೆ ಕಾಣುತ್ತಿಲ್ಲ.

ಕಬೀರ್ ತನ್ನ ಇತರ ಗೆಳೆಯರೊಂದಿಗೆ ತನಿಕೋಡು ಚೆಕ್ ಪೋಸ್ಟ್ ಗೆ ಬಂದಾಗ ಪೊಲೀಸರು ಮತ್ತು ಅರಣ್ಯ ಸಿಬ್ಬಂದಿ (ಅದು ಅರಣ್ಯ ಇಲಾಖೆಯ ಚೆಕ್ ಪೋಸ್ಟ್) ವಾಹನ ತಡೆದಿದ್ದಾರೆ. ಅವರು ತಡೆಯುವ ಅಗತ್ಯವೇನಿಲ್ಲ, ಗೇಟು ಇರುವ ಕಾರಣ ಯಾರೇ ಹೋಗುವವರಿದ್ದರೂ ನಿಲ್ಲಿಸಲೇಬೇಕು. ಅಂತಹವರ ಮೇಲೆ ಸಿಬ್ಬಂದಿ ಗುಂಡು ಹಾರಿಸಿ ಒಬ್ಬ ಹುಡುಗನನ್ನು ಸಾಯಿಸಿದ್ದಾರೆ. ಈಗ ಪೊಲೀಸ್ ಅಧಿಕಾರಿಗಳು ಹೇಳುವ ಕತೆಯೇನೆಂದರೆ…

 

– ಆ ಪ್ರದೇಶದಲ್ಲಿ ನಕ್ಸಲರು ದಾಳಿ ನಡೆಸುವ ಸೂಚನೆ ಇತ್ತು. ಆ ಕಾರಣಕ್ಕೆ ಪೊಲೀಸರು ಹೆಚ್ಚಿನ ನಿಗಾ ವಹಿಸಿದ್ದರು. ಮೊದಲು ಬಂದ ಸೂಚನೆ ಪ್ರಕಾರ ನಕ್ಸಲರು ಅದೇ ಚೆಕ್ ಪೋಸ್ಟ್ ಮೇಲೆ ಚುನಾವಣೆ ಸಂದರ್ಭದಲ್ಲಿ ದಾಳಿ ನಡೆಸುವವರಿದ್ದರು. ಆ ನಂತರದ ಬಂದ ಮಾಹಿತಿ ಎಂದರೆ ಚುನಾವಣೆ ನಂತರ ಪೊಲೀಸರ ಪಡೆ ಕಡಿಮೆಯಾಗಿರುತ್ತದೆ ಎಂಬ ಲೆಕ್ಕಾಚಾರದಲ್ಲಿ ಚುನಾವಣೆ ನಂತರ ದಾಳಿ ಮಾಡಲು ಸಂಚು ರೂಪಿಸಿದ್ದರು.

– ಈ ಹಿನ್ನೆಲೆಯಲ್ಲಿ ಪೊಲೀಸರು ತೀವ್ರ ನಿಗಾ ವಹಿಸಿದ್ದರು. ದನ ಸಾಗಿಸುವ ವಾಹನ ಬಂದು ನಿಂತಾಕ್ಷಣ ಸಹಜವಾಗಿ ಅವರು ವಿಚಾರಿಸಿದರು. ಆದರೆ ಕೆಲವೇ ಕ್ಷಣಗಳಲ್ಲಿ, ವಾಹನದಿಂದ ಇಳಿದವರು ಅಲ್ಲಿದ್ದ ಸಿಬ್ಬಂದಿ ಮೇಲೆ ದಾಳಿ ಮಾಡಿ ಓಡಿಹೋಗಲು ಪ್ರಯತ್ನಿಸಿದರು. ಅವರ ವರ್ತನೆಯಿಂದ ಗಾಬರಿಗೊಂಡ ಸಿಬ್ಬಂದಿ, ಇವರು ನಕ್ಸಲರೇ ಇರಬೇಕು. ಹೀಗೆ ಓಡಿ ಹೋಗಿ ಚೆಕ್ ಪೋಸ್ಟ್ ಸುತ್ತ ಕವರ್ ಮಾಡಿ ದಾಳಿ ಮಾಡಬಹುದು ಎಂದು ಭಾವಿಸಿ ಗುಂಡು ಹಾರಿಸಿದರು. ದಾಳಿಯಲ್ಲಿ ಒಬ್ಬ ಹುಡುಗ ಸತ್ತ. ಇನ್ನೊಬ್ಬ ವಾಹನದ ಹಿಂಬದಿ ಕುಳಿತಿದ್ದ. ಅವನನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡರು. ಉಳಿದ ಮೂವರು ಅಲ್ಲಿಂದ ಓಡಿ ಹೋದರು.

ನಕ್ಸಲರ ದಾಳಿ ಬಗ್ಗೆ ಮಾಹಿತಿ ಇತ್ತು ಎನ್ನುವುದು ಪೊಲೀಸರ ಹೇಳಿಕೆ. ಈ ಹೇಳಿಕೆಗೆ ಯಾವ ಪುರಾವೆಗಳೂ ಸಿಗುವುದಿಲ್ಲ. ಇಂತಹ ಮಾಹಿತಿಗಳನ್ನು ಪೊಲೀಸರು ತಮ್ಮ ಸಂಬರ್ಭಕ್ಕನುಗುಣವಾಗಿ ಸೃಷ್ಟಿಸುವ ಮಟ್ಟಿಗೆ ಚಾಣಾಕ್ಷರು ಎಂಬುದರ ಬಗ್ಗೆ ಯಾರಿಗೂ ಸಂಶಯ ಬೇಡ. ಓಡಿಹೋಗುವವರಿಗೆ ಗುಂಡು ಹೊಡೆದೆವು ಎನ್ನುತ್ತಾರಲ್ಲ ಪೊಲೀಸರು, ಅವರು ಯಾರ ಕಿವಿ ಮೇಲೆ ಹೂ ಇಡಲು ಹೊರಟಿದ್ದಾರೆ? ಬೇಕಿದ್ದರೆ, ಅವರ ಮಂತ್ರಿ ಕೆ.ಜೆ. ಜಾರ್ಜ್ ಕಿವಿ ಮೇಲೆ ಇಡಲಿ, ಆ ಮನುಷ್ಯ ನಂಬ ಬಹುದೇನೋ? ಓಡಿ ಹೋಗುವವರಿಗೆ ಗುಂಡು ಹೊಡೆಯುವುದಾದರೆ ಅದು ನೇರವಾಗಿ ಎದೆಗೆ ಬೀಳಲು ಹೇಗೆ ಸಾಧ್ಯ?

ಒಂದು ಖ್ಯಾತ ಸುದ್ದಿ ವಾಹಿನಿಯವರು ಈ ಪ್ರಕರಣವನ್ನು ಸುದ್ದಿ ಮಾಡುವಾಗ “ನಕ್ಸಲರು ಅಲ್ಲದಿದ್ದರೆ, ಅವರೇಕೆ ಓಡಿಹೋದರು..?” ಎಂಬ ಪ್ರಶ್ನೆಯನ್ನು ಕೇಳಿದರು. ಇದು, “ನೀವು ಕಳ್ಳರಲ್ಲದಿದ್ರೆ, ನಿಮ್ಮನ್ನು ಅಟ್ಟಿಸಿಕೊಂಡು ಬಂದ ನಾಯಿಯನ್ನು ಕಂಡು ಏಕೆ ಓಡಿದಿರಿ” ಎಂಬ ಧಾಟಿಯಲ್ಲಿ ಕೇಳಿದಂತೆ. ತನ್ನ ಸಹಚರರಿಗೆ ಏಕಾಏಕಿ ಗುಂಡು ಹೊಡೆದು ಸಾಯಿಸುತ್ತಿದ್ದರೆ, ಅಲ್ಲಿ ಇರಬೇಕಿತ್ತು ಎಂದು ಬಯಸುತ್ತಾರಲ್ಲ, ಇವರೆಲ್ಲಾ ಸಾಮಾನ್ಯ ಪ್ರಜ್ಞೆಯನ್ನು ಎಲ್ಲಿ ಮಾರಿಕೊಂಡರು?

ಪೊಲೀಸ್ ಅಧಿಕಾರಿಗಳು ಒಪ್ಪಿಕೊಳ್ಳುವಂತೆ, ಎಎನ್ಎಫ್ ಸಿಬ್ಬಂದಿಯ ತಪ್ಪು ಗ್ರಹಿಕೆಯಿಂದ ಈ ಪ್ರಕರಣ ನಡೆದಿದೆ. ತಪ್ಪು ಗ್ರಹಿಕೆ ಎಂದು ಒಪ್ಪಿಕೊಳ್ಳುವುದಾರೆ ಮತ್ತು ಆ ತಪ್ಪಿಗೆ 5 ಲಕ್ಷ ರೂಗಳ ಪರಿಹಾರವನ್ನು ಮೃತರ ಕುಟುಂಬಕ್ಕೆ ನೀಡಿ ಸಾಂತ್ವನ ಹೇಳುವುದಾರೆ, ಎಎನ್ಎಫ್ ಸಿಬ್ಬಂದಿ ವಿರುದ್ಧ ಇರುವರೆಗೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ಏಕೆ ದಾಖಲಾಗಿಲ್ಲ? ಸರಕಾರದ ಬಂದೂಕು ಎಂದರೆ, ಯಾರನ್ನಾದರೂ ಅನುಮಾನದ ಮೇಲೆ ಕೊಂದು ಶಿಕ್ಷೆ ತಪ್ಪಿಸಿಕೊಳ್ಳಬಹುದೇ? ಪೊಲೀಸರನ್ನು ಹಾಗಾದರೆ ಸರಕಾರ ಪ್ರಾಯೋಜಿತ ಗುಂಡಾಗಳೆಂದು ಕರೆಯಬೇಕೆ?

ಇನ್ನೂ ಘೋರ ಘಟನೆ ಎಂದರೆ, ಸಾವನ್ನಪ್ಪಿದ ಕಬೀರ್ ಕುಟುಂಬದವರು ಶೃಂಗೇರಿಗೆ ಹೋದಾಗ, ಅಲ್ಲಿಯ ಬಜರಂಗದಳ ಹುಡುಗರು ಅವರ ಮೇಲೆ ಹಲ್ಲೆ ನಡೆಸಿದ್ದು! ಅದೂ ಪೊಲೀಸರ ಎದುರೇ. ಮಗನನ್ನು ಕಳೆದುಕೊಂಡ ದು:ಖದಲ್ಲಿರುವವರಿಗೆ ಸಾಂತ್ವನ ಹೇಳುವುದು ಮನುಷತ್ವ. ಆದರೆ, ಅಂತಹವರಿಗೆ ಕಲ್ಲು ಹೊಡೆಯುವುದು, ಹೀಯಾಳಿಸುವುದು, ಹೊಡೆಯುವುದು, ಅವರ ವಾಹನ ಪುಡಿ-ಪುಡಿ ಮಾಡುವುದನ್ನು ಏನೆಂದು ಅಥೈಸಬೇಕು? ಇವರು ದನದ ವ್ಯಾಪಾರದಲ್ಲಿರುವವರು ಎಂಬ ಕಾರಣಕ್ಕೆ ಅವರ ಮೇಲೆ ಇಂತಹ ಹಲ್ಲೆ ನಡೆದಿದೆ. ಆ ಮೂಲಕ ಪೊಲೀಸರ ಹತ್ಯೆಯನ್ನು ಈ ಬಜರಂಗದಳ ಸಮರ್ಥಿಸುತ್ತದೆ!

ಪೊಲೀಸರ ಹತ್ಯೆ ಮತ್ತು ಬಜರಂಗದಳದವರ ಕೃತ್ಯಗಳಲ್ಲಿ ಢಾಳಾಗಿ ಕಾಣಿಸುವುದು ಮುಸ್ಲಿಮರನ್ನು ಈ ವ್ಯವಸ್ಥೆ ಹಾಗೂ ಕೋಮುವಾದಿ ಮನಸುಗಳು ಕಾಣುವ ಬಗೆ. ಇಂತಹ ಘಟನೆಗಳು ಅಲ್ಪಸಂಖ್ಯಾತ ಸಮುದಾಯದವರಲ್ಲಿ ಅನಾಥ ಪ್ರಜ್ಞೆ ಮೂಡಿಸಿದರೆ ಅಚ್ಚರಿಯೇನಿಲ್ಲ. ಈ ಭಾವನೆಗಳನ್ನು ಮೆಟ್ಟಿ ನಿಲ್ಲಲು ಸಾಧ್ಯವಾಗದೇ ಹೋಗುವವರು ಹೆಚ್ಚೆಚ್ಚು ಸಂಘಟಿತರಾಗಲು ಆ ಮೂಲಕ ರಕ್ಷಣೆ ಪಡೆಯಲು ಮೂಲಭೂತವಾದದ ಕಡೆಗೆ ಮುಖ ಮಾಡಬಹುದು. ಆ ಕಾರಣಕ್ಕಾಗಿಯೇ ಅಲ್ಪಸಂಖ್ಯಾತರ ಮೂಲಭೂತವಾದಿ ಚಟುವಟಿಕೆಗಳನ್ನು ಗ್ರಹಿಸಲು, ಬಹುಸಂಖ್ಯಾತ ವರ್ಗದ ಮೂಲಭೂತವಾದಿ ಚಟುವಟಿಕೆಗಳನ್ನು ಗ್ರಹಿಸುವಾಗ ಅನುಸರಿಸುವ ಮಾನದಂಡವನ್ನೇ ಅನುಸರಿಸುವುದು ಅಷ್ಟು ಸರಿ ಅಲ್ಲವೇನೋ ಎನಿಸುತ್ತದೆ.