Daily Archives: April 26, 2014

ಎ.ಎನ್.ಎಫ್ ನಿಂದ ಕಬೀರ್ ಹತ್ಯೆ ಹಾಗೂ ದಿಕ್ಕು ತಪ್ಪುತ್ತಿರುವ ಹೋರಾಟ


-ಇರ್ಷಾದ್


 

 

 

ಎಪ್ರಿಲ್ 19ರಂದು ಚಿಕ್ಕಮಗಳೂರಿನ ಶೃಂಗೇರಿ ಕೆರೆಕಟ್ಟೆ ತನಿಕೋಡು ತಪಾಸಣಾ ಕೇಂದ್ರದಲ್ಲಿ ನಕ್ಸಲ್ ಎಂಬ ಶಂಕೆಗೆAnti-Naxal-Force ಅಮಾಯಕ ಜೀವವೊಂದು ಬಲಿಯಾಯಿತು. ಮಂಗಳೂರಿನ ಕಾಟಿಪಳ್ಳ ನಿವಾಸಿ ಕಬೀರ್ ಎದೆಯನ್ನು ನಕ್ಸಲ್ ನಿಗೃಹ ದಳದ ಸಿಬಂದಿಯ ಬಂದೂಕಿನ ಗುಂಡು ಸೀಳಿತ್ತು. ಕಬೀರ್ ಸಾವು ರಾಜ್ಯಾದ್ಯಂತ ಭಾರೀ ಸುದ್ದಿಯಾಗುತ್ತಿದೆ. ಒಂದರ ಹಿಂದೆ ಒಂದರಂತೆ ಕಬೀರ್ ಸಾವಿಗೆ ನ್ಯಾಯ ಕೋರಿ ಹೋರಾಟಗಳು, ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಪ್ರಭುತ್ವದ ದಬ್ಬಾಳಿಕೆ, ಬಡ ಆದಿವಾಸಿಗಳ ಮೇಲಿನ ದೌರ್ಜನ್ಯ ವಿರುದ್ಧ ದಂಗೆ ಎದ್ದು ಹೋರಾಟ ನಡೆಸುತ್ತಿರುವ ಶಕ್ತಿಗಳನ್ನು ಹುಟ್ಟಡಗಿಸುವ ಮನಸ್ಥಿತಿಯ ಬಂದೂಕಿನ ನಳಿಕೆಯಿಂದ ಹೊರ ಬಂದ ಗುಂಡಿನ ವಿರುದ್ಧ ನಡೆಯಬೇಕಾಗಿದ್ದ ಹೋರಾಟ ದಿಕ್ಕು ತಪ್ಪುತ್ತಿದೆ ಎಂದನಿಸುತ್ತಿದೆ. ಜಾತಿ ಧರ್ಮದ ಹೊರತಾಗಿ, ಪ್ರಭುತ್ವದ ಧೋರಣೆಯ ವಿರುದ್ಧ ಧ್ವನಿ ಎತ್ತುತ್ತಾ ಹೋರಾಟಕ್ಕಿಳಿದಿರುವ ನಕ್ಸಲರ ದಮನದ ಹೆಸರಲ್ಲಿ ನಡೆದ ಕಬೀರ್ ಹತ್ಯೆಯನ್ನು ಧರ್ಮದ ಬೇಲಿ ಕಟ್ಟಿ ಅದರ ನೆಲೆಗಟ್ಟಿನಲ್ಲಿ ನ್ಯಾಯ ಕೋರಿ ಹೋರಾಟ ನಡೆಯುತ್ತಿರುವುದು ಪ್ರಭುತ್ವದ ದಮನಕಾರಿ ನೀತಿಯ ವಿರುದ್ಧದ ಹೋರಾಟಕ್ಕೆ ಹಿನ್ನಡೆಯಾಗುವಂತಿದೆ.

ಜಾನುವಾರು ಸಾಗಾಟ ಸಂಧರ್ಭದಲ್ಲಿ ಗೋ ಮಾತೆ ಸಂರಕ್ಷಣೆ ಹೆಸರಲ್ಲಿ ಸಂಘ ಪರಿವಾರದ ಧರ್ಮಾಂಧರು ನಡೆಸುವ ದೌರ್ಜನ್ಯಕ್ಕೂ, ಪ್ರಭುತ್ವ ಬಡ ಜನರ ಮೇಲೆ, ಆದಿವಾಸಿಗಳ ಮೇಲೆ ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ಸಿಡಿದೇಳುವ ಧ್ವನಿಯನ್ನು ಹತ್ತಿಕ್ಕಲು ನಡೆಸುತ್ತಿರುವ ದಮನಕಾರಿ ನೀತಿಗೂ ವ್ಯತ್ಯಾಸಗಳಿವೆ. ಕರ್ನಾಟದ ಪಶ್ವಿಮ ಘಟ್ಟದಲ್ಲಿ ನಕ್ಸಲ್ ಸಮಸ್ಯೆಯನ್ನು ಹತ್ತಿಕ್ಕಲು ಕಾರ್ಯಾಚರಣೆಗಿಳಿದಿರುವ ನಕ್ಸಲ್ ನಿಗ್ರಹ ಪಡೆಯ ಶಂಕೆಗೆ ಬಲಿಯಾಗಿರುವುದು ಕಬೀರ್ ಮಾತ್ರ ಅಲ್ಲ. ಇಂಥಹಾ ಹತ್ತಾರು ಕಬೀರರು ಈಗಾಗಲೇ ಪಶ್ವಿಮ ಘಟ್ಟದ ಅರಣ್ಯಗಳಲ್ಲಿ ನೆತ್ತರು ಸುರಿಸಿದ್ದಾರೆ. ಪ್ರಭುತ್ವದ ದಮನಕಾರಿ ನೀತಿಗೆ ಬಲಿಯಾದ ಅಮಾಯಕರಲ್ಲಿ ಇದೀಗ ಕಬೀರ್ ಕೂಡಾ ಒಬ್ಬ.

ನಕ್ಸಲ್ ನಿಗೃಹ ಪಡೆ ಹಾಗೂ ಆದಿವಾಸಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ

ಪಶ್ವಿಮ ಘಟ್ಟದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಯೋಜನೆ ಜಾರಿಗೆ ಬಂದ ದಿನದಿಂದ ಈ ಭಾಗದಲ್ಲಿರುವ ಆದಿವಾಸಿಗಳು ತಮ್ಮ ನೆಲೆಯನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಕಾಡಿನ ಮಕ್ಕಳನ್ನು ಕಾಡಿಂದ ಹೊರದಬ್ಬುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಾ ಬಂದಿದೆ. ಒಂದೆಡೆ ಪ್ರಭುತ್ವ ಬಲಪ್ರದರ್ಶನದಿಂದ ಈ ಕಾರ್ಯವನ್ನು ನಡೆಸುತ್ತಾ ಬರುತ್ತಿದ್ದರೆ ಇನ್ನೊಂದೆಡೆ ವಿದೇಶಿ ಹಣಕಾಸುVittal Malekudiya ನೆರವಿನಿಂದ ಕಾರ್ಯಾಚರಿಸುತ್ತಿರುವ ಸ್ವಯಂ ಸೇವಾ ಸಂಘಗಳು ಆದಿವಾಸಿಗಳನ್ನು ಕಾಡಿಂದ ಹೊರ ಹಾಕಲು ಪ್ರಯತ್ನಪಡುತ್ತಿವೆ. ಆನಾದಿ ಕಾಲದಿಂದ ಅರಣ್ಯದಲ್ಲೇ ನೆಲೆಕಂಡಿರುವ ಆದಿವಾಸಿ ಕುಟುಂಬಗಳು ಯಾವಾಗ ಪ್ರಭುತ್ವದ ಧೋರಣೆಯನ್ನು ವಿರೋಧಿಸಲಿಕ್ಕೆ ಆರಂಭಿಸಿದವೋ ಅಲ್ಲಿಂದ ನಕ್ಸಲ್ ನಿಗ್ರಹದ ಹೆಸರಲ್ಲಿ ಆದಿವಾಸಿಗಳ ಮೇಲೆ ನಿರಂತರ ದೌರ್ಜನ್ಯ ಆರಂಭವಾಗಿದೆ. ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುತ್ಲೂರು ಗ್ರಾಮದಲ್ಲಿ ವಾಸವಾಗಿರುವ ಪತ್ರಿಕೋದ್ಯಮ ವಿದ್ಯಾರ್ಥಿ ವಿಠಲ ಮಲೆಕುಡಿಯ ಹಾಗೂ ಸ್ಥಳೀಯ ಕೆಲ ಯುವಕರು ಪ್ರಭುತ್ವದ ದೌರ್ಜನ್ಯಕ್ಕೆ ತುತ್ತಾಗಿದ್ದಾರೆ. ಇವರು ಹೇಳುವ ಪ್ರಕಾರ ಕೆಲ ವರ್ಷಗಳ ಹಿಂದೆ ಪ್ರತಿ ಶನಿವಾರ ಗ್ರಾಮದ ಜನರು ನಾರಾವಿ ಪೇಟೆಗೆ ಬಂದು ದಿನಬಳಕೆಯ ಸಾಮಾಗ್ರಿಗಳನ್ನು ಕೊಂಡ್ಯೊಯುವ ಸಂಧರ್ಭದಲ್ಲಿ ಎ.ಎನ್.ಎಫ್ ನಿಂದ ನಿರಂತರ ದಬ್ಬಾಳಿಕೆ ಇವರ ಮೇಲೆ ನಡೆಯುತ್ತಿತ್ತು. ಅಗತ್ಯಕ್ಕಿಂತ ಹೆಚ್ಚಾಗಿ ಧವಸ ಧಾನ್ಯಗಳನ್ನು ಖರೀದಿಸಿದಲ್ಲಿ ನಕ್ಸಲರಿಗೆ ಸಹಕಾರ ನೀಡುತ್ತಿದ್ದಾರೆ ಎಂಬ ಶಂಕೆಯಲ್ಲಿ ಎ.ಎನ್.ಎಫ್ ಸಿಬಂದಿಗಳು ಕಿರುಕುಳ ನೀಡುತ್ತಿದ್ದರು. ರಾತ್ರೋ ರಾತ್ರಿ ಮನೆಗಳಿಗೆ ನುಗ್ಗುವುದು, ನಕ್ಸಲರ ಬೆಂಬಲಿಗರು ಎಂಬ ಶಂಕೆಯಲ್ಲಿ ಸ್ಥಳೀಯ ಯುವಕರನ್ನು ಕಸ್ಟಡಿಯಲ್ಲಿ ಕೂಡಿ ಹಾಕಿ ಹಿಂಸೆ ನೀಡುವುದು ಇಲ್ಲಿ ಮಾಮೂಲಾಗಿತ್ತು. ಕುತ್ಲೂರು ನಿವಾಸಿಗಳಾದ ಪೂವಪ್ಪ ಮಲೆಕುಡಿಯ, ಲಿಂಗಣ್ಣ ಮಲೆ ಕುಡಿಯ , ವಿಠಲ್ ಮಲೆ ಕುಡಿಯ , ಶಶಿಧರ್ ಮಲೆ ಕುಡಿಯ ಎ.ಎನ್.ಎಫ್ ದೌರ್ಜನ್ಯದ ಬಲಿಪಶುಗಳು. ನಕ್ಸಲರ ಜೊತೆ ನಂಟು ಹೊಂದಿದ್ದಾರೆ ಎಂಬ ಶಂಕೆಯ ಕಾರಣಕ್ಕಾಗಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿರುವ ವಿಠಲ್ ಮಲೆಕುಡಿಯ ಮನೆಗೆ ನುಗ್ಗಿದ ಎ.ಎನ್.ಎಫ್ ವಿಠಲ ಮಲೆಕುಡಿಯ ಹಾಗೂ ಆತನ ತಂದೆ ಲಿಂಗಣ್ಣ ಮಲೆಕುಡಿಯ ಎಂಬಿಬ್ಬರನ್ನು 2012 ಮಾರ್ಚ್ 3 ರಂದು ಬಂಧಿಸಿದ್ದರು. ಇವರ ಮನೆಯಲ್ಲಿ ಶೋಧ ಮಾಡಿದಾಗ ಶಂಕಿತ ನಕ್ಸಲ್ ಎಂಬುವುದಕ್ಕೆ ಸಿಕ್ಕಿದ ಸಾಕ್ಷಿ ಚಾ ಹುಡಿ, ಸಕ್ಕರೆ, ಪೇಪರ್ ಕಟ್ಟಿಂಗ್ಸ್, ಮಕ್ಕಳು ಆಟವಾಡುವ ಬೈನಾಕ್ಯುಲರ್ !

ಶಂಕೆಗೆ ಬಲಿಯಾದ ಜೀವಗಳು

ಇವರಷ್ಟೇ ಅಲ್ಲ,  ನಕ್ಸಲ್ ನಿಗ್ರಹ ದಳದ ಶಂಕೆಗೆ ಕರ್ನಾಟಕದಲ್ಲಿ ಅಮಾಯಕ ಜೀವಗಳು ಬೆಲೆ ತೆತ್ತಿವೆ.

  •  2003 ನವಂಬರ್ 17- ಉಡುಪಿ ಜಿಲ್ಲೆಯ ಈದು ಗ್ರಾಮದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಹಾಜಿಮಾ -ಪಾರ್ವತಿ ಹತ್ಯೆ
  •  2005 ಜೂನ್ – ಉಡುಪಿ ಜಿಲ್ಲೆಯ ದೇವರ ಬಾಳು ಎನ್ ಕೌಂಟರ್ ನಲ್ಲಿ ಅಜಿತ್ ಕುಸುಬಿ – ಉಮೇಶ್ ಹತ್ಯೆ
  • 2006 ಡಿಸೆಂಬರ್ – ಶೃಂಗೇರಿ –ಕೆಸುಮುಡಿಯಲ್ಲಿ ನಾರಾವಿಯ ದಿನಕರ್ ಹತ್ಯೆ
  •  2007 ಜುಲೈ 10 – ಚಿಕ್ಕಮಗಳೂರು ಜಿಲ್ಲೆಯ ಮೆಣಸಿನ ಹಾಡ್ಯ ದಲ್ಲಿ ಒಬ್ಬ ಶಂಕಿತ ನಕ್ಸಲ್ ಹಾಗೂ ನಾಲ್ವರು ಆಮಾಯಕ ಆದಿವಾಸಿಗಳ ಹತ್ಯೆ.
  •  2008 ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಶಂಕಿತ ನಕ್ಸಲ್ ಮನೋಹರ್ ಹತ್ಯೆ .
  •  2010 ಮಾರ್ಚ್ 1 – ಕಾರ್ಕಳ ಅಂಡಾರು ಗ್ರಾಮಪಂಚಾಯತ್ ವ್ಯಾಪ್ತಿಯಯಲ್ಲಿ ಕುತ್ಲೂರು ಗ್ರಾಮದ ನಿವಾಸಿ ವಸಂತ್ ಹತ್ಯೆ
  •  2012- ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದ ಚೇರು ಅರಣ್ಯ ಪ್ರದೇಶದಲ್ಲಿ ಶಂಕಿತ ನಕ್ಸಲ್ ಯಲ್ಲಪ್ಪ ಹತ್ಯೆ.
  •  2014 ಎಪ್ರಿಲ್ 19- ನಕ್ಸಲ್ ಶಂಕೆಯಲ್ಲಿ ಕಬೀರ್ ಹತ್ಯೆ.

ನಕ್ಸಲ್ ನಿಗ್ರಹ ಪಡೆ ನಡೆಸಿದ ಈ ಎಲ್ಲಾ ಹತ್ಯೆಗಳು ಶಂಕೆಯ ಆಧಾರದಲ್ಲಿ ನಡೆದ ಹತ್ಯೆಗಳಾಗಿವೆ. ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ.  ವ್ಯಕ್ತಿಯೊಬ್ಬ ನಕ್ಸಲ್ ಎಂದು ಸಂಶಯ ಬಂದರೆ ಸಾಕು, ಆತನ ಬಂಧನಕ್ಕಿಂತ ಹತ್ಯೆ ಮಾಡಿ ಕೈತೊಳೆದುಬಿಡುವುದೇ ಲೇಸು ಎಂಬುವಂತಿದೆ ಎ.ಎನ್.ಎಫ್ ಕಾರ್ಯವೈಖರಿ. ಕಳೆದ 10 ವರ್ಷಗಳಿಂದ ನಕ್ಸಲ್ ನಿಗ್ರಹದ ಹೆಸರಲ್ಲಿ ನಡೆದ ಎಲ್ಲಾ ಹತ್ಯೆಗಳು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕುವಂತಹದ್ದು, ಹತ್ಯಗೀಡಾದ ಶಂಕಿತ ನಕ್ಸಲರನ್ನು ತೀರಾ ಹತ್ತಿರದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ ಎಂಬ ಆರೋಪವನ್ನು ಸತ್ಯಶೋಧನಾ ಸಮಿತಿಗಳು ಮಾಡುತ್ತಿವೆ. ಕಬೀರ್ ಹತ್ಯೆಯಲ್ಲೂ ಇಂಥಹ ಅನೇಕ ಅನುಮಾನಗಳು, ಪ್ರಶ್ನೆಗಳು ಕಾಡುತ್ತಿವೆ.

  • ನಕ್ಸಲ್ ಎಂಬ ಅನುಮಾನ ಬಂದ ಕೂಡಲೇ ಎದೆಗೆ ಗುರಿಯಿಟ್ಟು ಹತ್ಯೆ ಮಾಡುವ ಅವಷ್ಯಕತೆ ಏನಿತ್ತು?
  • ಯಾವುದೇ ದಾಳಿ ನಡೆಯದೇ ಇದ್ದರೂ ಪ್ರತಿದಾಳಿ ನಡೆಸುವಂತಹ ಅಧಿಕಾರ ಎ.ಎನ್.ಎಫ್ ಗೆ ಇದೆಯಾ?
  • ವ್ಯವಸ್ಥೆಯ ಅನ್ಯಾಯದ ವಿರುದ್ಧ ಧ್ವನಿ ಎತ್ತುವವರು, ಆದಿವಾಸಿಗಳು, ದಲಿತರು, ಹಿಂದುಳಿದವರು, ಬಡವರ ಕುರಿತಾದ ಪ್ರಭುತ್ವದ ಧೋರಣೆಗೆ ಎ.ಎನ್.ಎಫ್ ಗುಂಡಿನ ದಾಳಿ ಸಾಕ್ಷಿಯಾಗಿದೆಯೇ?
  •  ಪೊಲೀಸ್ ವ್ಯವಸ್ಥೆಯಲ್ಲಿರುವ ಮತಾಂಧ ಮನಸ್ಥಿತಿ ಕಬೀರ್ ಹತ್ಯೆಗೆ ಪ್ರೆರಣೆ ನೀಡಿತೇ ?
  •  ರಾಷ್ಟ್ರೀಯ ಹೆದ್ದಾರಿಯಲ್ಲೇ ಅನುಮಾನದಿಂದ ಅಮಾಯಕನನ್ನು ನಕ್ಸಲ್ ಹೆಸರಲ್ಲಿ ಹತ್ಯೆಗೈದ ಎ.ಎನ್.ಎಫ್ ದಟ್ಟ ಅರಣ್ಯದಲ್ಲಿ ನಕ್ಸಲ್ ನಿಗೃಹದ ಹೆಸರಲ್ಲಿ ನಡೆಸುತ್ತಿರುವ ಕಾರ್ಯಾಚರಣೆ ಹೇಗಿರಬಹುದು?

ಕಬೀರ್ ಹತ್ಯೆ ಇಂಥಹ ಹತ್ತು ಹಲವಾರು ಪ್ರೆಶ್ನೆಗಳು, ಅನುಮಾನಗಳು ಎ.ಎನ್.ಎಫ್ ಕಾರ್ಯವೈಖರಿಯ ಕುರಿತಾಗಿ ಹುಟ್ಟುಹಾಕಿದೆ. ಪಶ್ವಿಮ ಘಟ್ಟದಲ್ಲಿ ನಕ್ಸಲ್ ಚಟುವಟಿಕೆ ನಿಯಂತ್ರಿಸುವಲ್ಲಿ ಎ.ಎನ್.ಎಫ್ ಅಗತ್ಯ. ಆದರೆ ನಕ್ಸಲ್ ನಿಗ್ರಹದ ಹೆಸರಲ್ಲಿ ಅಮಾಯಕರ ನೆತ್ತರು ಹರಿಸುವ ಕಾಯಕದಲ್ಲಿ ತೊಡಗಿಕೊಂಡರೆ ನಕ್ಸಲ್ ನಿಯಂತ್ರಣ ಸಾಧ್ಯಾನಾ?

ಕಬೀರ್ ಹತ್ಯೆ ದಿಕ್ಕು ತಪ್ಪುತ್ತಿರುವ ಹೋರಾಟ

ಪಶ್ವಿಮ ಘಟ್ಟದಲ್ಲಿ ನಕ್ಸಲ್ ನಿಗ್ರಹದ ಹೆಸರಲ್ಲಿ ನಡೆದ ಹತ್ಯಾಕಾಂಡದ ಸರದಿಗೆ ಎಪ್ರಿಲ್ 19 ರಂದು ಶೃಂಗೇರಿಯ ಕೆರೆಕಟ್ಟೆ ತನಿಕೋಡು ಚೆಕ್ ಪೋಸ್ಟ್ ನಲ್ಲಿ ನಡೆದ ಕಬೀರ್ ಹತ್ಯೆ ಮತ್ತೊಂದು ಸೇರ್ಪಡೆಯಷ್ಟೇ. ವಿಪರ್ಯಾಸವೆಂದರೆ ಪ್ರಭುತ್ವದ ದಮನಕಾರಿ ನೀತಿಯ ವಿರುದ್ಧ ನಡೆಯಬೇಕಾದ ಹೋರಾಟ ಎಲ್ಲೋ ದಾರಿ ತಪ್ಪುತ್ತಿದೆ ಎಂದನಿಸುತ್ತಿದೆ. ಹೋರಾಟಕ್ಕೆ ಧರ್ಮದ “ ಫ್ರೇಮ್ ” ಕೊಡುವ ಕಾರ್ಯ ನಡೆಯುತ್ತಿದೆ. ಎ.ಎನ್.ಎಫ್ ನಿಂದ ಕಬೀರ್ ಹತ್ಯೆಯ ನಂತರ ನಡೆದ ತೀರಾ ಅಮಾನವೀಯ ಘಟನಾವಳಿಗಳು ಕಬೀರ್ ಹತ್ಯೆಯ ಹೋರಾಟವನ್ನು ಧರ್ಮದ ಫ್ರೇಮ್ ನೊಳಕ್ಕೆ ತಳ್ಳಿ ಪ್ರಭುತ್ವದ ದಮನಕಾರಿ ನೀತಿಯ ವಿರುದ್ಧ ನಡೆಯಬೇಕಾಗಿದ್ದ ಹೋರಾಟವನ್ನು ದಿಕ್ಕು ತಪ್ಪುವಂತೆ ಮಾಡಲಾಗುತ್ತಿದೆ.

ಪಶ್ವಿಮ ಘಟ್ಟದಲ್ಲಿ ಇದುವರೆಗೂ ಎ.ಎನ್.ಎಫ್ ದೌರ್ಜನ್ಯಕ್ಕೆ ಒಳಗಾದರು ಕೇವಲ ಮುಸ್ಲಿಮರಲ್ಲ, ಹಿಂದುಗಳಲ್ಲKabeer_ANF ಬದಲಾಗಿ ಇದನ್ನು ಮೀರಿ ನಿಂತ ಬಡವರು, ಆದಿವಾಸಿಗಳು, ಸಾಮಾಜಿಕ ಕಾರ್ಯಕರ್ತರು. ಪ್ರಭುತ್ವದ ಜನವಿರೋಧಿ ಯೋಜನೆಗಳಾದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಆನೆ ಕಾರಿಡಾರ್ , ಪುಷ್ಪಗಿರಿ ವನ್ಯಧಾಮ ಮೊದಲಾದವುಗಳು ಈ ಭಾಗದ ಹಿಂದುಗಳು, ದಲಿತರು, ಮುಸ್ಲಿಮರು, ಆದಿವಾಸಿಗಳು ಎಲ್ಲರ ಜೀವನವನ್ನು ಕಸಿದುಕೊಳ್ಳುವ ಯೋಜನೆಗಳಾಗಿದೆ. ಇಂತಹ ಯೋಜನೆಗಳಿಂದಾಗಿ ಈಗಾಗಲೇ ಅರಣ್ಯವಾಸಿಗಳು ನಾನಾ ರೀತಿಯಲ್ಲಿ ದೌಜನ್ಯಗಳನ್ನು ಅನುಭವಿಸುತ್ತಾ ಬಂದಿದ್ದಾರೆ. ಇನ್ನಷ್ಟು ಯೋಜನೆಗಳು ಜಾರಿಗೆ ಬಂದಲ್ಲಿ ಎಲ್ಲಾ ಧರ್ಮ, ಸಂಸ್ಕೃತಿಗಳ ಬಡ ಜನರು ತಮ್ಮ ಮನೆ ಮಠ ಆಸ್ತಿ, ನೆಲೆಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಸರ್ಕಾರದ ಇಂಥಹ ಯೋಜನೆಗಳನ್ನು ವಿರೋಧಿಸಿಯೇ ಈ ಭಾಗದಲ್ಲಿ ಚಳುವಳಿಗಳು ಹಟ್ಟುಕೊಂಡಿದ್ದು. ವಿರೋಧದ ಧ್ವನಿಗಳನ್ನು ಶಸ್ತ್ರದ ಮೂಲಕ ದಮನ ಮಾಡುವ ಉದ್ದೇಶದಿಂದ ಎ.ಎನ್.ಎಫ್ ಜನ್ಮ ತಾಳಿದೆ. ಪರಿಣಾಮ ಸಾಕಷ್ಟು ರಕ್ತ ಪಾತಗಳು ಪಶ್ವಿಮ ಘಟ್ಟದ ದಟ್ಟಾರಣ್ಯದಲ್ಲಿ ನಡೆಯುತ್ತಿವೆ. ಪ್ರಭುತ್ವದ ಇಂಥಹ ಮನಸ್ಥಿತಿಯೇ ಕಬೀರ್ ಹತ್ಯೆಗೆ ಕಾರಣವಾಗಿರುವುದು. ಯಾರನ್ನೂ ನಕ್ಸಲ್ ಎಂಬ ಶಂಕೆಯ ಹೆಸರಲ್ಲಿ ಗುಂಡಿಕ್ಕಿ ಕೊಲ್ಲುವುದು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ನ್ಯಾಯಸಮ್ಮತ ಹಾಗೂ ಅನಿವಾರ್ಯ ಎಂಬ ಭಾವನೆ ಪ್ರಭುತ್ವದ ಆದೇಶ ಪಾಲಕರಿಗಿದ್ದಂತಿದೆ. ಇಂಥಹ ಮನಸ್ಥಿತಿಯ ವಿರುದ್ಧ ಎಲ್ಲಾ ಜನಸಾಮಾನ್ಯರು ಹೋರಾಟ ನಡೆಸಬೇಕಾಗಿದೆ. ಕಬೀರ್ ಒಬ್ಬ ಮುಸ್ಲಿಮ್ ದನದ ವ್ಯಾಪಾರಿ ಎಂಬ ಕಾರಣಕ್ಕಾಗಿ ಆತನ ಹತ್ಯೆಯನ್ನು ಸಮರ್ಥಿಸುವುದು ತೀರಾ ಅಮಾನವೀಯ. ಅದೇ ರೀತಿ ಮುಸ್ಲಿಂ ಯುವಕನ ಹತ್ಯೆ ಮಾಡಲಾಗಿದೆ ಎಂಬ ಕಾರಣಕ್ಕಾಗಿ ಧರ್ಮದ ಲೇಪನ ಕೊಟ್ಟು ಹೋರಾಟ ಮಾಡುವುದು ಸಮ್ಮತವಲ್ಲ.

ಮನುಷ್ಯನ ರಕ್ತ ಚೆಲ್ಲಿದಕ್ಕೆ ಪಾರಿತೋಷಕ ಕೊಡುವ ಅಮಾನವೀಯತೆ ಬೇಡ

‘ಸ್ವಾಮಿ ವಿವೇಕಾನಂದ ಸಮಾಜಮುಖಿ ಚಿಂತಕ’ ಪುಸ್ತಕದ 43 ನೇ ಪುಟದಲ್ಲಿ ದಾಖಲಾದಂತೆ ಗೋ ರಕ್ಷಣಾ ಸಭೆಯ ಪ್ರಚಾರಕರೊಂದಿಗೆ ಮಾತನಾಡುತ್ತಾ ಸ್ವಾಮಿ ವಿವೇಕಾನಂದ ಹೀಗನ್ನುತ್ತಾರೆ. “ಮಧ್ಯ ಹಿಂದೂಸ್ಥಾನದಲ್ಲಿ ಭಯಂಕರವಾದ ಕ್ಷಾಮ ಬಂದಿದೆ. ಹೊಟ್ಟೆಗಿಲ್ಲದೆ ಒಂದು ಲಕ್ಷ ಜನರು ಸತ್ತುಹೋದರೆಂದು ಇಂಡಿಯಾ ಸರ್ಕಾರದವರು ಪಟ್ಟಿಕೊಟ್ಟಿದ್ದಾರೆ. ನಿಮ್ಮ ಸಭೆ ದುರ್ಭೀಕ್ಷ ಕಾಲದಲ್ಲಿ ಏನಾದರೂ ಸಹಾಯ ಮಾಡುವುದಕ್ಕೆ ಏರ್ಪಾಡು ಮಾಡಿದೆಯೇನೋ?”

ಪ್ರಚಾರಕ: ನಾವು ದುರ್ಭೀಕ್ಷ ಮೊದಲಾಲಾದವುಗಳಿಗೆ ಸಹಾಯ ಮಾಡುವುದಿಲ್ಲ. ಕೇವಲ ಗೋ ಮಾತೆಯ ರಕ್ಷಣೆಗೆ ಈ ಸಭೆ ಸ್ಥಾಪಿಸಲ್ಪಟ್ಟಿರುವುದು.

ಸ್ವಾಮೀಜಿ :ಅಣ್ಣ ತಮ್ಮಂದಿರಾದ ನಿಮ್ಮ ದೇಶದ ಜನರು ಲಕ್ಷ ಗಟ್ಟಲೆ ಮೃತ್ಯುವಿನ ಬಾಯಲ್ಲಿ ಬೀಳುತ್ತಿದ್ದಾರೆ, ಕೈಯಲ್ಲಾಗುತ್ತಿದ್ದರೂ ಇಂಥಹ ಭಯಂಕರವಾದ ದುಷ್ಕಾಲದಲ್ಲಿ ಅವರಿಗೆ ಅನ್ನ ಕೊಟ್ಟು ಸಹಾಯ ಮಾಡುವುದು ಯುಕ್ತವೆಂದು ನಿಮಗೆ ಅನ್ನಿಸುವುದಿಲ್ಲವೇ ?

ಪ್ರಚಾರಕ : ಇಲ್ಲ; ಕರ್ಮ ಫಲದಿಂದ, ಪಾಪದಿಂದ ಈ ಕ್ಷಾಮ ಬಂದಿದೆ. ಕರ್ಮಕ್ಕೆ ತಕ್ಕ ಫಲವಾಗಿದೆ.

ಸ್ವಾಮೀಜಿ: ಯಾವ ಸಭಾ ಸಮಿತಿಗಳು ಮನುಷ್ಯನಲ್ಲಿ ಸಹಾನುಭೂತಿಯನ್ನು ತೋರದೆ ತಮ್ಮ ಅಣ್ಣ ತಮ್ಮಂದಿರು ಹೊಟ್ಟೆಗಿಲ್ಲದೆ ಸಾಯುತ್ತಿತ್ತಿರುವುದನ್ನು ನೋಡಿಯೂ ಅವರ ಜೀವವನ್ನು ಉಳಿಸಲಿಕ್ಕೆ ಒಂದು ತುತ್ತು ಅನ್ನವನ್ನು ಕೊಡದೆ ಪಶು ಪಕ್ಷಿಗಳ ರಕ್ಷಣೆಗಾಗಿ ರಾಶಿ ರಾಶಿ ಅನ್ನವನ್ನು ದಾನ ಮಾಡುತ್ತವೆಯೋ ಅವುಗಳೊಡನೆ ನನಗೆ ಸ್ವಲ್ಪವೂ ಸಹಾನುಭೂತಿಯಿಲ್ಲ.

ಇಂಥಹ ಮಹಾನ್ ಸಂತ ಜನ್ಮ ತಾಳಿದ ಈ ನಾಡಿನಲ್ಲಿ ಎ.ಎನ್.ಎಫ್ ನಿಂದ ಹತ್ಯೆಗೀಡಾದ ಯುವಕ ಕಬೀರ್ ಗೋ ಸಾಗಾಟ ಮಾಡಿದ ಎಂಬ ಕಾರಣಕ್ಕಾಗಿ ಆತನ ಸಾವನ್ನು ಸಮರ್ಥಿಸಿಕೊಳ್ಳುವುದು, ಕಬೀರ್ ಸಾವಿಗೆ ಕಾರಣಕರ್ತನಾದ ಎ.ಎನ್.ಎಫ್ ಸಿಬಂಧಿಗೆ ಪಾರಿತೋಷಕಗಳನ್ನು ಘೋಷಣೆ ಮಾಡುವುದು ಅಮಾನವೀಯ ಅಲ್ಲವೇ? ಸ್ವಾಮಿ ವಿವೇಕಾನಂದರ ತತ್ವಾದರ್ಶದಲ್ಲಿ ಯಾರು ನಂಬಿಕೆ ಇಡುತ್ತಾರೋ ಅಂಥವರು ‘ಹತ್ಯೆಗೆ ಬಹುಮಾನ ಕೊಡುವ’ ನೀಚ ಮನಸ್ಥಿತಿಯನ್ನು ಖಂಡಿತಾ ಒಪ್ಪಲು ಸಾಧ್ಯವಿಲ್ಲ. ಎ.ಎನ್.ಎಫ್ ದೌರ್ಜನ್ಯಕ್ಕೆ ಬಲಿಯಾಗುತ್ತಿರುವ ಆದಿವಾಸಿಗಳು ಮುಸ್ಲಿಮರಲ್ಲ. ಇವರಲ್ಲಿ ಅನೇಕರು ಹಿಂದೂ ಧಾರ್ಮಿಕ ವಿಧಿ ವಿಧಾನಗಳಲ್ಲಿ ನಂಬಿಕೆ ಇಟ್ಟುಕೊಂಡವರು. ಕಬೀರ್ ಹತ್ಯೆಯನ್ನು ಅಭಿನಂದಿಸುವ ಹಿಂದೂ ಪರ ಸಂಘಟನೆಗಳು ಆದಿವಾಸಿಗಳ ಮೇಲಿನ ದಬ್ಬಾಳಿಕೆಗೆ ಪಾರಿತೋಷಕ ಕೊಡುತ್ತಾರೆಯೇ? ( ವಾಸ್ತವದಲ್ಲಿ ನಕ್ಸಲ್ ನಿಗ್ರಹದ ಹೆಸರಲ್ಲಿ ಆದಿವಾಸಿಗಳ ಮೇಲಿನ ಪ್ರಭುತ್ವದ ದೌರ್ಜನ್ಯಕ್ಕೆ ಬೆಂಬಲವಾಗಿ ನಿಂತವರು ಈ ಧರ್ಮ ರಕ್ಷಕರು) ಕಬೀರ್ ಹತ್ಯೆಯನ್ನು ಹಿಂದೂ – ಮುಸ್ಲಿಂ ಸಂಘಟನೆಗಳು ಧರ್ಮದ ಆಧಾರದಲ್ಲಿ ವಿಭಜಿಸ ಹೊರಟಿರುವುದು ಪ್ರಭುತ್ವದ ಆದೇಶ ಪಾಲಕರಿಗೆ ಇನ್ನಷ್ಟು ಬಲ ಬಂದತಾಗಿದೆ. ಶಂಕೆಯ ಆಧಾರದಲ್ಲಿ ನಡೆದ ಅಮಾಯಕರ ಹತ್ಯೆಯನ್ನು ನಾಗರಿಕ ಸಮಾಜ ವಿರೋಧಿಸಬೇಕಾಗಿದೆ. ಇಂದು ಕಬೀರ್ ನಾಳೆ ಸುರೇಶ್ ನಾಡಿದ್ದು ಜೋಕಬ್ ಹೀಗೆ ಆಡಳಿತ ವರ್ಗದ ದಮನಕಾರಿ ನೀತಿಗೆ ಬಲಿಯಾಗುತ್ತಲೇ ಇರಬೇಕಾಗುತ್ತದೆ. ಕಬೀರ್ ಹತ್ಯೆ ವಿರುದ್ಧ ಧ್ವನಿ ಎತ್ತುವ ನೆಪದಲ್ಲಿ ಮುಸ್ಲಿಮ್ ಮತೀಯ ಸಂಘಟನೆಗಳು ಹೋರಾಟವನ್ನು ಧಾರ್ಮಿಕ ಚೌಕಟ್ಟಿಗೆ ಸೀಮಿತಗೊಳಿಸುವುದು ಹಾಗೂ ಕಬೀರ್ ಹತ್ಯೆ ಒಬ್ಬ ಮುಸ್ಲಿಮ್ ಯುವಕನ ಹತ್ಯೆ ಎಂಬ ಕಾರಣಕ್ಕಾಗಿ ಕೊಲೆಯನ್ನು ಸಮರ್ಥಿಸಿಕೊಳ್ಳುವುದು ಇವೆರಡು ತೀರಾ ಅಪಾಯಕಾರಿ.