Daily Archives: April 28, 2014

ಇಂಧನ ಸಚಿವರಿಂದ ವಿಶ್ವಮಾನವ ಸಂದೇಶಕ್ಕೆ ಬೆಂಕಿ

– ಮಹೇಶ್ ಎಂ.

“ಅಧಿಕಾರಿಗಳನ್ನು ನಾವು ಒಳ್ಳೆಯ ಹುದ್ದೆಗೆ ನಿಯೋಜನೆ ಮಾಡುತ್ತೇವೆ. ಆದರೆ, ಅಧಿಕಾರಿ­ಗಳು ಕುರ್ಚಿಯ ಮೇಲೆ ಕುಳಿತರೆ ವಿಶ್ವಮಾನವರಾಗಿ ಬಿಡುತ್ತಾರೆ. ಕೈಯಲ್ಲಿ ಕಾಗದ, ಪೆನ್ನು ಸಿಕ್ಕ ಮೇಲೆ ಇಲ್ಲಸಲ್ಲದ ಕಾನೂನು ಮಾತಾಡುತ್ತಾರೆ. ಅಂಥ ಅಧಿಕಾರಿ­ಗಳ ಹೆಸರು ಹೇಳಲು ಇಷ್ಟಪಡು­ವುದಿಲ್ಲ. ಅವರವರ ಜನಾಂಗಕ್ಕೆ ಅಧಿಕಾರಿಗಳು ಸಹಾಯ ಮಾಡಬೇಕಾದ್ದು ಅಗತ್ಯ”.

ಇಂಧನ ಸಚಿವ ಡಿ.ಕೆ. ಶಿವಕುಮಾರ್ ಭಾನುವಾರ ಒಕ್ಕಲಿಗರ ಸಂಘದ ಕಾರ್ಯಕ್ರಮದಲ್ಲಿ ಹೇಳಿದ ಮಾತುಗಳಿವುDKS. ಅಧಿಕಾರಿಗಳು ವಿಶ್ವಮಾನವರಾಗುತ್ತಾರೆ ಎನ್ನುವ ಮೂಲಕ ಈ ಮಂತ್ರಿ ಮಹೋದಯ ಏಕಕಾಲಕ್ಕೆ ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಅವರನ್ನೂ ಮತ್ತು ಒಕ್ಕಲಿಗ ಸಮುದಾಯದ ಪ್ರಾಮಾಣಿಕ, ನಿಷ್ಪಕ್ಷಪಾತಿ ಅಧಿಕಾರಿಗಳನ್ನು ಅವಮಾನಿಸಿದ್ದಾರೆ. ವಿಪರ್ಯಾಸ ಎಂದರೆ ಇವರು ಮಾತನಾಡಿದ ಹಾಲ್ ನಲ್ಲಿಯೇ ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರವೂ ಇತ್ತು!

ಇತ್ತೀಚೆಗೆ ಈ ಮಂತ್ರಿಯವರ ಶಿಫಾರಸ್ಸಿನಿಂದ ಆಯಕಟ್ಟಿನ ಹುದ್ದೆಗಳಿಗೆ ನೇಮಕ ಆದ ಅಧಿಕಾರಿಗಳ ಕಾರ್ಯವೈಖರಿಯನ್ನು ಸೂಕ್ಷ್ಮವಾಗಿ ಅವಲೋಕಿಸುವ ಅಗತ್ಯವಿದೆ. ಶಿವಕುಮಾರ್ ಗೆ ಮುಂದೆ ಪಕ್ಷದ ನೇತೃತ್ವ ವಹಿಸಿ ಚುನಾವಣೆ ಎದುರಿಸುವ ಅವಕಾಶ ದೊರೆತಾಗ ಒಕ್ಕಲಿಗ ಸಮುದಾಯ ಒಗ್ಗಟ್ಟಾಗಿ ಇವರ ಬೆನ್ನಿಗೆ ನಿಲ್ಲಬೇಕಂತೆ. ಆದರೆ ಸದ್ಯಕ್ಕೆ ಮುಖ್ಯಮಂತ್ರಿಯಾಗುವ ಪ್ರಯತ್ನ ಮಾಡುವುದಿಲ್ಲ ಎಂದು ಸಿದ್ದರಾಮಯ್ಯನವರಿಗೆ ಮಾತು ಕೊಟ್ಟಿದ್ದಾರಂತೆ. ಈ ಮಾತುಗಳು ಸೂಕ್ಷ್ಮವಾಗಿ ರಾಜ್ಯ ರಾಜಕೀಯದಲ್ಲಿ ಬರುವ ದಿನಗಳಲ್ಲಿ ನಡೆಯಬಹುದಾದ ಘಟನಾವಳಿಗಳನ್ನು ಸೂಚಿಸುತ್ತವೆ.

ತಾನು ಒಕ್ಕಲಿಗರ ಪ್ರತಿನಿಧಿಯಾಗಿ ಮಂತ್ರಿಯಾಗಿದ್ದಾರಂತೆ. ಹಾಗಾದರೆ, ಕನಕಪುರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದವರ ಗತಿಯೇನು? ಅಷ್ಟೇ ಅಲ್ಲ, ಇಂತಹವರು ಮಂತ್ರಿ ಸ್ಥಾನದಲ್ಲಿ ಕುಳಿತಾಗ ಸಾಮಾಜಿಕ ನ್ಯಾಯ ಎತ್ತಿ ಹಿಡಿಯುತ್ತಾರಾ? ಅದೆಲ್ಲಾ ಬೇಡ, ಶಾಸಕನಾಗಿ, ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಯಾವುದೇ ರಾಗ-ದ್ವೇಷಗಳಿಲ್ಲದೆ ಕೆಲಸ ನಿರ್ವಹಿಸುತ್ತೇನೆ ಎಂದಿದ್ದರಲ್ಲ..ಅದೂ ಮರೆತುಹೋಯಿತೆ? ಇವರ ಮಾತುಗಳು ಸ್ಪಷ್ಟವಾಗಿ ಸಂವಿಧಾನದ ಆಶಯಗಳಿಗೆ ವಿರೋಧ.

ಅದೇ ಕಾರ್ಯಕ್ರಮದಲ್ಲಿ ಡಿಕೆಶಿಯಂತಹವರಿಗೆ ಬುದ್ಧಿಹೇಳುವಂತೆ ಮಾತನಾಡಿದವರು. ಆದಿಚುಂಚನಗಿರಿ ಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ. “ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ‘ಕೆಂಪೇಗೌಡರು ಒಕ್ಕಲಿಗರಿ­ಗಾಗಿ ಮಾತ್ರ ಬೆಂಗಳೂರನ್ನು ಕಟ್ಟಲಿಲ್ಲ. ಒಂದು ಜಾತಿಯ ನಾಶ ಅಥವಾ ಇನ್ನೊಂದು ಜಾತಿಯ ಉಳಿವಿನಿಂದ ಸಮಾಜ ಉದ್ಧಾರವಾಗುವುದಿಲ್ಲ. ಎಲ್ಲ ಜಾತಿಗಳಿಗೂ, ಎಲ್ಲ ಕಸುಬುಗಳಿಗೂ ಮಾನ್ಯತೆ ದೊರೆತಾಗ ಮಾತ್ರ ಸಮಾಜ ಅಭಿವೃದ್ಧಿ ಹೊಂದುತ್ತದೆ’ ಎಂದರು.

ಸ್ವಾಮೀಜಿ, ಒಳ್ಳೆ ಮಾತುಗಳನ್ನೇ ಹೇಳಿದ್ದೀರಿ. ನಿಮ್ಮ ಮಾತುಗಳನ್ನು ನಿಮ್ಮ ಜೊತೆ ಸಭೆಯಲ್ಲಿ ಕೂರುವವರೆಲ್ಲ ಕೇಳಿ, ಅರ್ಥಮಾಡಿಕೊಳ್ಳುವಂತಾಗಲಿ.

ಮಂಕುತಿಮ್ಮನ ಕಗ್ಗ ಮತ್ತು ಗೋಮಾಂಸ


ಸಂವರ್ತ ‘ಸಾಹಿಲ್’


ನಾನು ಹೊರನೆಡೆದೆ.

ಸಿಟ್ಟು ಮತ್ತು ಅಸಹಾಯಕತೆ ಒಟ್ಟೊಟ್ಟಿಗೆ ಆಗಿ, ಸಿಟ್ಟೂ ಅಸಹಾಯಕತೆಯೂ ಮತ್ತಷ್ಟೂ ಹೆಚ್ಚುತ್ತಿತ್ತು.

ಮಂಕುತಿಮ್ಮನ ಕಗ್ಗದ ಓದು ಮತ್ತು ವ್ಯಾಖ್ಯಾನ ನಡೆದಿತ್ತು. ಅಮ್ಮ ಅಪ್ಪನ ಸಂಗಡ ಹೋಗಿದ್ದೆ. ಕಗ್ಗದ ಸಾಲುಗಳನ್ನ cowಹಾಡುತ್ತ ಅದನ್ನ ವ್ಯಾಖ್ಯಾನಿಸುತ್ತಿದ್ದಾತ ಸಜ್ಜನಿಕೆಗೆ ಹಸುವಿನ ಉದಾಹರಣೆ ಕೊಡುತ್ತ, “ದನವನ್ನು ಕಡಿಯುತ್ತಾರಲ್ಲ ಇಂದು ಅವರಿಗೆ ಏನನ್ನಬೇಕು?” ಎಂದ. ಆ ಸಾಲು ಹೇಳಬೇಕಾದರೆ ಅವನ ಮುಖದಲ್ಲಿ ಕಂಡ ರೋಷ ಸುಳ್ಳಲ್ಲ. ಕೇಳಲು ಬಂದಿದ್ದ ಜನರಲ್ಲಿ ಕೆಲವರು ಚಪ್ಪಾಳೆ ತಟ್ಟಿದರು. ಚಪ್ಪಾಳೆ ಸಮ್ಮತಿಯ ಸೂಚಕವಾಗಿತ್ತು.

ನಾನು ಹೊರನೆಡೆದೆ.

ಹೊರಗೆ ನಿಂತು ಕಾರ್ಯಕ್ರಮ ಮುಗಿಯಲಿ ಎಂದು ಕಾಯುತ್ತಿದ್ದೆ. ಅಮ್ಮ ಅಪ್ಪ ಇಬ್ಬರೂ ಒಳಗೆ ಕೂತು ಕಗ್ಗದ ಗಾಯನ ವ್ಯಾಖ್ಯಾನ ಆಲಿಸುತ್ತಾ ಇದ್ದರು. ಅವರಿಗಾಗಿ ಕಾಯುತ್ತಾ ನಿಂತೆ.

ಸ್ವಲ್ಪ ಹೊತ್ತಿನಲ್ಲೇ ಕಾರ್ಯಕ್ರಮ ಮುಗಿಯಿತು. ನೆರೆದಿದ್ದ ಜನರೆಲ್ಲಾ ಸಭಾಂಗಣದಿಂದ ಹೊರಬರಲಾರಂಬಿಸಿದರು. ನನ್ನ ಪೂರ್ವಾಶ್ರಮದ ಸಹೋದ್ಯೋಗಿ ಒಬ್ಬರು ಸಿಕ್ಕು ಅವರೊಂದಿಗೆ ಮಾತು ಶುರು ಮಾಡುತ್ತಿದ್ದಂತೆ ಅಮ್ಮ ಹತ್ತಿರ ಬಂದರು. ಅಮ್ಮನಿಗೆ ಇವರ ಪರಿಚಯ ಮಾಡಿಸಿ ಅವರಿಗೆ ಅಮ್ಮನ ಪರಿಚಯ ಮಾಡಿಸಿದೆ. ಆಗ ಅವರು ಅಮ್ಮನನ್ನು ನೋಡುತ್ತಾ, “ತುಂಬಾ ಚೆನ್ನಾಗಿತ್ತಲ್ಲ?” ಎಂದು ಪ್ರಶ್ನಿಸಿದರು. “ತುಂಬಾ ಚೆನ್ನಾಗಿತ್ತು,” ಎಂದು ಅಮ್ಮ ಉತ್ತರಿಸಿದರು. ಅವರ ದೃಷ್ಟಿ ನನ್ನತ್ತ ತಿರುಗಲು ನಾನು, “ವ್ಯಾಖ್ಯಾನದಲ್ಲಿ ಹೊಸದೇನು ಇರಲಿಲ್ಲ. ಆದರೆ ಚೆನ್ನಾಗಿ ಹಾಡ್ತಾ ಇದ್ದರು. ಆದರೆ ದನದ ವಿಷಯ ಹೇಳಿದ್ದು ನನಗೆ ರೇಗಿ ಹೋಯ್ತು,” ಎಂದೇ.

ಮಾತು ಆಡುತ್ತಿರಲು ಸ್ವರ ನನಗರಿವಿಲ್ಲದಂತೆ ಏರಿತ್ತು. “ಅದ್ಕೆ ಸಿಟ್ಟು ಯಾಕ್ ಮಾಡ್ಕೋತಿಯೋ?” ಅಂತ ಕೇಳಿದ ನನ್ನ ಪೂರ್ವಾಶ್ರಮದ ಸಹೋದ್ಯೋಗಿ, “ಅದು ಅವರ ದೃಷ್ಟಿಕೋನ ಅಂತ ಗೌರವಿಸಬೇಕಪ್ಪ,” ಎಂದು ಮುಂದುವರಿಸಲು ಈ ಕಡೆಯಿಂದ ಅಮ್ಮ, “ಹೌದಲ್ವಾ? ನೋಡಿ ಯಾವಾಗಲು ಹೀಗೆ,” ಎಂದರು.

ನಾನು ಗಾಡಿ ಪಾರ್ಕ್ ಮಾಡಿದ್ದ ಕಡೆಗೆ ಹೊರಟೆ. ಗಾಡಿ ಶುರು ಮಾಡಿ ಹೊರಟೆ.

ರಾತ್ರಿ ಊಟ ಮಾಡುವಾಗ ಅಮ್ಮ, “ನಮ್ಮ ಅಭಿಪ್ರಾಯ ತಿಳಿಸುವಾಗ ರೊಚ್ಚಿಗೇಳಬಾರದು. ಅದು ಒಳ್ಳೆಯ ಲಕ್ಷಣ ಅಲ್ಲ,” ಎಂದರು.

ಇನ್ನೊಬ್ಬರ ದೃಷ್ಟಿಕೋನ ಗೌರವಿಸಬೇಕು ಎಂದವರು ಇನ್ನೊಬರ ಆಹಾರ ಪದ್ಧತಿ ಇನ್ನೊಬರ ಜೀವನ ಪದ್ಧತಿ ಗೌರವಿಸಬೇಕು ಎಂದು ಯಾಕೆ ಯಾವತ್ತೂ ಹೇಳಲಿಲ್ಲ? ನಾನು ಸಿಟ್ಟು ಮಾಡಿಕೊಂಡರೆ ಅದು ಸರಿಯಲ್ಲ ಎಂದು ಹೇಳುವ ಅಮ್ಮನಿಗೆ ವ್ಯಾಖ್ಯಾನಕಾರನ ಮುಖದಲ್ಲಿ ಕಂಡ ರೋಷ ತಪ್ಪು ಎಂದು ಯಾಕೆ ಅನ್ನಿಸಲಿಲ್ಲ? — ಪ್ರಶ್ನೆ ಎದೆಯೊಳಗೆ ಇಟ್ಟುಕೊಂಡು ನನ್ನ ಕೋಣೆಯೊಳಕ್ಕೆ ನಡೆದೆ.

ಕಬೀರ್, ಹಾಜಬ್ಬ, ಹಸನಬ್ಬ, ನಜೀರ್ ಹೀಗೆ ಒಬ್ಬೊಬ್ಬರಾಗಿ ಮನದ ಓಣಿಯಲ್ಲಿ ಹಾದು ಹೋದರು… ನಿದ್ದೆ ಬರಲಿಲ್ಲ. anti cow slaughterಯಾಕೋ ಅತ್ತು ಬಿಡಬೇಕು ಅಂತ ಅನ್ನಿಸಿತು. ಅನ್ಯಾಯ ಅಸತ್ಯ ಎಲ್ಲದರ ನಡುವೆ ನಿಂತಾಗ ಸಿಟ್ಟಾಗುವುದು ತಪ್ಪು ಎಂದಾದಮೇಲೆ ಅಳದೆ ಮತ್ತಿನ್ನೇನು ಮಾಡಲು ಸಾಧ್ಯ?

ನಾನೇ ಇಷ್ಟು ಅಸಹಾಯಕನಾಗಿದ್ದರೆ ಇನ್ನು ನೇರವಾಗಿ ಅನ್ಯಾಯ ಎದುರಿಸಿದವರ ಅಸಹಾಯಕತೆ ಹೇಗಿರಬೇಕು? ಅವರ ಸಿಟ್ಟು ಹೇಗಿರಬೇಕು? — ಯೋಚಿಸಿದೆ. ಕಲ್ಪಿಸಿಕೊಳ್ಳಲಾಗಲಿಲ್ಲ.

ವಾಸ್ತವ ಕಲ್ಪನೆಗಳಿಗಿಂತ ಹೆಚ್ಚು ಭಯಾನಕವಾಗಿರುತ್ತದೆ ಎಂದು ಎಲ್ಲೋ ಕೇಳಿದ್ದೆ… ಅರಿವಾಗತೊಡಗಿತು.