ಹಳ್ಳಿಗಳ ಒಡನಾಟ ಮತ್ತು ಗ್ರಹಿಕೆಯೇ ಬರವಣಿಗೆಯ ಜೀವದ್ರವ್ಯ


– ಡಾ.ಎಸ್.ಬಿ. ಜೋಗುರ


ಕೆ.ಎನ್.ಪಣಿಕ್ಕರ್ ಎನ್ನುವ ಸಂಸ್ಕೃತಿ ಚಿಂತಕರು ಭಾರತೀಯ ಸಮಾಜ ಮೂರು ಪ್ರಮುಖ ಸಂಗತಿಗಳನ್ನು ಆಧರಿಸಿ ನಿಂತಿದೆ ಎಂದಿರುವರು ಒಂದನೆಯದು ಜಾತಿ ಪದ್ಧತಿ, ಎರಡನೆಯದು ಗ್ರಾಮಗಳು, ಮೂರನೇಯದು ಅವಿಭಕ್ತ ಕುಟುಂಬ. ಸದ್ಯದ ಸಂದರ್ಭದಲ್ಲಿಯೂ ಅವಿಭಕ್ತ ಕುಟುಂಬವನ್ನು ಹೊರತು ಪಡಿಸಿದರೆ ಮಿಕ್ಕೆರಡು ಸಂಗತಿಗಳಾದ ಜಾತಿ ಮತ್ತು ಗ್ರಾಮಗಳು ಈಗಲೂ ನಿರ್ಣಾಯಕವೇ.. ನೆಮ್ಮಲ್ಲರ ಬೇರುಗಳು ಬಹುತೇಕವಾಗಿ ಗ್ರಾಮ ಮೂಲವೇ ಆಗಿರುವದರಿಂದ ನಮ್ಮ ಸಾಂಸ್ಕೃತಿಕ ಬದುಕಿನ ವಿವಿಧ ಸಂದರ್ಭಗಳಲ್ಲಿ ಆ ಅಸ್ಮಿತೆ ಅನಾವರಣಗೊಳ್ಳುವ ಪ್ರಕ್ರಮವೊಂದು ಇದ್ದೇ ಇದೆ. ರಾಜಕಪೂರನ ಶ್ರೀ ೪೨೦ ಸಿನೇಮಾ ಹಾಡಲ್ಲಿ ಬರುವ ಮೇರಾ ಜೂಥಾ ಹೈ ಜಪಾನಿ, naxalite24fo4ಪಥಲೂನ್ ಇಂಗ್ಲಿಷಥಾನಿ…ಫ಼ಿರ್ ಭೀ ದಿಲ್ ಹೈ ಹಿಂದುಸ್ಥಾನಿ ಎನ್ನುವ ಹಾಡಿನ ತಾತ್ಪರ್ಯದ ಹಾಗೆಯೇ ನಮ್ಮ ಬದುಕು ಗ್ರಾಮೀಣ ಸಂಸ್ಕೃತಿಯಿಂದ ಬಿಡಿಸಲಾಗದಂತಿರುತ್ತದೆ. ಇಂದು ನಮ್ಮನ್ನು ಆವರಿಸಿಕೊಂಡಿಕೊಂಡಿರುವ ನಗರಗಳು ಮತ್ತು ಅಲ್ಲಿನ ಥಳುಕು ಬಳುಕಿನ ಜೀವನ ಗ್ರಾಮ ಸಮೂಹ ಎನ್ನುವ ತೊಟ್ಟಿಲಲ್ಲಿ ಜೋಗುಳ ಕೇಳುತ್ತಲೇ ರೂಪ ಗೊಂಡಿರುವಂಥವುಗಳು.

ನಾನು ಹುಟ್ಟಿ ಬೆಳೆದ ಬಿಜಾಪುರ ಜಿಲ್ಲೆಯ ಸಿಂದಗಿ ನನ್ನ ಬಾಲ್ಯದಲ್ಲಿ ಒಂದು ದೊಡ್ಡ ಹಳ್ಳಿಯಂತಿತ್ತು. ಇದು ಕೇವಲ ನನ್ನ ಪಾಲಿನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ತಾಣ ಮಾತ್ರವಾಗಿರದೇ ಆಗಾಗ ಶಾಲೆ ತಪ್ಪಿಸಿ ಅಂಡಲೆಯುವ ನೆಲವೂ ಆಗಿತ್ತು. ಮನೆಯಲ್ಲಿ ಅಪ್ಪ- ಅವ್ವ ಹೇಳಿಕೊಟ್ಟ ಮೌಲ್ಯಗಳಿಗಿಂತಲೂ, ಶಾಲೆಯಲ್ಲಿ ಮೇಷ್ಟರು ಹೇಳಿಕೊಟ್ಟದ್ದಕ್ಕಿಂತಲೂ ಅಗಾಧವಾದುದನ್ನು ನನಗೆ ಈ ಊರು ಕಲಿಸಿಕೊಟ್ಟಿದೆ. ಹಾಗೆಯೇ ಇದರ ಸಹವಾಸದಲ್ಲಿರುವ ನೂರಾರು ಹಳ್ಳಿಗಳಲ್ಲಿ ಹತ್ತಾರು ಊರುಗಳೊಂದಿಗೆ ಮತ್ತೆ ಮತ್ತೆ ನಾನು ಒಡನಾಡಿ ಬೆಳೆದ ಕಾರಣ, ನನ್ನ ಬಾಲ್ಯದ ಬುನಾದಿಯಲ್ಲಿ ಚೀಪುಗಲ್ಲುಗಳಂತೆ ಅವು ಕೆಲಸ ಮಾಡಿರುವುದಿದೆ. ಕಟ್ಟಡ ಎಷ್ಟೇ ದೊಡ್ಡದಾಗಿದ್ದರೂ ಈ ಚೀಪುಗಲ್ಲುಗಳ ಪಾತ್ರ ನಗಣ್ಯವಂತೂ ಅಲ್ಲ. ನನಗೆ ತಿಳುವಳಿಕೆ ಬಂದ ನಂತರ ನಾನು ದಿಟ್ಟಿಸಿದ್ದು ನನ್ನ ಆ ವಿಶಾಲ ಮನೆಯನ್ನು. ಅದು ನಮ್ಮ ಅಜ್ಜ ಕಟ್ಟಿದ್ದು. ಭವ್ಯವಾದ ಅರಮನೆಯಂಥಿರುವ ಆ ಮನೆಯಲ್ಲಿ ಆಗ ನಾಲ್ಕು ಸಂಸಾರಗಳು. ನಮ್ಮ ಅಪ್ಪ ಮೂರನೇಯವರು. ಅವರಿಗೆ ನಾನು ಐದನೇಯ ಸಂತಾನ. ಬರೊಬ್ಬರಿ ಲೆಕ್ಕ ಒಪ್ಪಿಸುವಂತೆ ಮೂರು ಗಂಡು ಮೂರು ಹೆಣ್ಣು ಮಕ್ಕಳಿಗೆ ಜನುಮ ನೀಡಿದ ಜನುಮದಾತ. ಮಿಕ್ಕಂತೆ ನಮ್ಮ ಚಿಕ್ಕಪ್ಪ.. ದೊಡ್ಡಪ್ಪ ಅವರಿಗೂ ಹೀಗೆ ಐದೈದು..ಆರಾರು ಮಕ್ಕಳು. ಹೆಚ್ಚೂ ಕಡಿಮೆ ಮನೆ ತುಂಬ ಮಕ್ಕಳು. ಇಂಥಾ ಭವ್ಯ ಮನೆಯನ್ನು ಕಟ್ಟಿದ್ದು ಕರಿ ಕಲ್ಲಿನಲ್ಲಿ. ಮನೆಗೆ ಬರುವವರೆಲ್ಲಾ ಅದರ ಗೋಡೆಯ ಗಾತ್ರ, ಕಂಬಗಳ ಕೆತ್ತನೆ, ತೊಲೆ ಬಾಗಿಲು ಅದರ ಮೇಲೆ ಎರಡೂ ಬದಿ ಇರುವ ಕುದುರೆಯ ಮುಖ, ತೊಲೆಗೆ ಸಾಲಾಗಿ ಬಡಿದ ಹಿತ್ತಾಳೆಯ ಹೂವುಗಳು, ಮಧ್ಯದಲ್ಲಿ ಗಣಪತಿಯ ಕೆತ್ತನೆ ಕೆಳಗಿನ ಹೊಸ್ತಲಿನ ಮಧ್ಯಭಾಗದಲ್ಲಿ ಆಮೆಯ ಚಿತ್ರ ಹೀಗೆ ಇಡೀ ಮನೆಯೇ ಒಂದು ರೀತಿಯಲ್ಲಿ ಕಲಾತ್ಮಕವಾಗಿತ್ತು. ಒಕ್ಕಲುತನದ ಕುಟುಂಬವಾಗಿದ್ದರಿಂದ ಒಳಗೆ ಪ್ರವೇಶಿಸುತ್ತಿರುವಂತೆ ಹುಲ್ಲು, ಜೋಳದ ಕಣಿಕೆ, ಉರುವಲು ಕಟ್ಟಿಗೆ, ಅಲ್ಲಲ್ಲಿ ಗೂಟಗಳಿಗೆ ನೇತು ಹಾಕಿದ ಹಳಗಿನ ಹಗ್ಗಗಳು, ಕೊಟ್ಟಿಗೆಯಲ್ಲಿ ನಿಲ್ಲಿಸಿದ ಬಲರಾಮು, ಎಡೆ ಹೊಡೆಯುವ ದಿಂಡು, ಕುಂಟಿ ದಿಂಡು, ನೊಗ, ಲೊಗ್ಗಾಣಿ, ಬಾರುಕೋಲು, ವತಗೀಲ, ಜತ್ತಗಿ, ಮಗಡ, ದಾಂಡು, ದನಗಳ ಬಾಯಿಗೆ ಹಾಕುವ ಚಿಕ್ಕಾ, ದಾವಣಿಯಲ್ಲಿ ಕಲ್ಲಿನಲ್ಲೇ ಮಾಡಿದ ಗೂಟಗಳು, rural-cricket-indiaಕಟ್ಟಿದ ಸರಪಳಿಗಳು ಹೀಗೆ ಮನೆಯೊಳಗಡೆ ಕೃಷಿ ಪರಿಕರಗಳೇ ತುಂಬಿರುತ್ತಿದ್ದವು. ಪಡಸಾಲೆಯಲ್ಲಿ ಬೀಜಕ್ಕೆ ಹಿಡಿದ ಬದನೆಕಾಯಿ, ಹೀರೆಕಾಯಿ, ಕುಂಬುಳಕಾಯಿಯನ್ನು ಅಲ್ಲಲ್ಲಿ ಜಂತಿಗೆ ಜೋತು ಬಿಟ್ಟದ್ದು ಸಾಮಾನ್ಯವಾಗಿರುತಿತ್ತು. ಹೊಸ ಬೆಳೆ ಬಂದಾಗ ಅದರ ಸ್ಯಾಂಪಲ್ ನ್ನು ಅಲ್ಲಲ್ಲಿ ಕಟ್ಟಲಾಗಿರುತ್ತಿತ್ತು. ಒಂದೈದು ಜೋಳದ ತೆನೆ, ಸಜ್ಜಿಯ ತೆನೆ, ನವಣಿ ತೆನೆ, ಸಾವಿಯ ತೆನೆ, ಬಳ್ಳೊಳ್ಳಿ, ಉಳ್ಳಾಗಡ್ಡಿ, ಗೋವಿನ ಜೋಳದ ತೆನೆ ಹೀಗೆ ತರಾವರಿ ಬೆಳೆಯೇ ಅಲ್ಲಿರುತ್ತಿತ್ತು. ಪಡಸಾಲೆಯಲ್ಲಿ ಜೋಳದ ಚೀಲಗಳ ತೆಪ್ಪೆ ಹಚ್ಚುತ್ತಿದ್ದರು. ಇನ್ನು ಆ ಬಾರಿ ಬಂಪರ್ ಬೆಳೆ ಬಂದಿದೆ ಎಂತಾದರೆ ಉಳಿದ ಜೋಳವನ್ನು ಅಂಗಳದಲ್ಲಿರುವ ಎರಡು ದೊಡ್ದದಾದ ಹಗೆಯೊಳಗೆ ಸುರುವಲಾಗುತ್ತಿತ್ತು. ನೂರಾರು ಚೀಲ ಅನಾಮತ್ತಾಗಿ ನುಂಗುವ ಈ ಹಗೆಗಳದ್ದೇ ಒಂದು ದೊಡ್ಡ ಕತೆ. ಗಾಡಿ ಅನ್ನ ಉಣ್ಣುವ ಭಕಾಸುರನಿಗಿಂತಲೂ ಇವು ಮಿಗಿಲು. ಇವುಗಳ ಒಳಗಿಳಿದು ಜೋಳ ತೆಗೆಯುವವನು ಸಾಮಾನ್ಯ ಆಸಾಮಿ ಆಗಿರುವಂತಿಲ್ಲ. ಅಲ್ಲಿಯ ಝಳವನ್ನು ಧಕ್ಕಿಸಿಕೊಳ್ಳುವ ಗಟ್ ಉಳ್ಳವನಾಗಿರಬೇಕು.

ನಮ್ಮ ಮನೆ ದೇವ್ರು ವೀರಭದ್ರ. ಮಾತೆತ್ತಿದರೆ ನಮ್ಮ ಅವ್ವ ನಮ್ಮದು ಬೆಂಕಿಯಂಥಾ ದೇವರು. ಅಂತ ಹೇಳುವವಳು. ಅದಕ್ಕೆ ಕಾರಣ ವೀರಭದ್ರ ದೇವರ ಪುರವಂತದ ವೇಳೆ ಪುರವಂತ ಆಡುವವನು ಅಸ್ತ್ರ ಹಾಕಿಕೊಳ್ಳುವಾಗ ಅದು ಸಲೀಸಾಗಿ ಜರುಗದಿದ್ದರೆ ಯಾರೋ ಮೈಲಿಗೆಯಾಗಿರಬೇಕು ಇಲ್ಲವೇ ಏನೋ ತಿನ್ನಬಾರದ್ದು ತಿಂದು ಅಲ್ಲಿ ಬಂದಿರಬೇಕು ಅನ್ನೋ ನಂಬುಗೆ. ಹಾಗಾಗಿಯೇ ನಮ್ಮವ್ವ ಆವಾಗಾವಾಗ ಅದು ಬೆಂಕಿಯಂಥಾ ದೇವರು ಅದನ್ನ್ ಇದನ್ನ ತಿಂದು ಬರಬ್ಯಾಡ್ರಿ ಅನ್ನೂವಕ್ಕಿ. ವೀರಶೈವರಾದ ನಾವು ಮನೆಯೊಳಗೆ ಪಕ್ಕಾ ಸಸ್ಯಾಹಾರ ಪರಂಪರೆಯವರು. ತಪ್ಪಿಯೂ ಮೊಟ್ಟೆ ಸಹಿತ ತಿನ್ನುವ ಹಾಗಿರಲಿಲ್ಲ. ನಮ್ಮ ಅಪ್ಪ ಮಾತ್ರ ಐತವಾರ ಸಂತೆ ದಿನ ನಾಲ್ಕು ಜವಾರಿ ಮೊಟ್ಟೆ ಕಿಸೆಗೆ ಇಳಿಸಿಕೊಂಡು ಬಂದು ಬಿಡವನು. ಆಗ ನನ್ನವ್ವಳೇ ಖುದ್ದಾಗಿ ಅವುಗಳನ್ನು ಬೇಯಿಸಿ ಕೊಡುತ್ತಿದ್ದಳು. ಆ ಗಳಿಗೆಯಲ್ಲಿ ಬೆಂಕಿಯಂಥಾ ನನ್ನ ದೇವರು ಹೇಗೆ ನೀರಾದ..? ಎನ್ನುವುದೇ ಒಂದು ದೊಡ್ಡ ಕುತೂಹಲವಾಗುತ್ತಿತ್ತು. ಕೇಳುವ ಧೈರ್ಯವಿರಲಿಲ್ಲವೇ..? ದೇವರ ಕೋಣೆಯೊಳಗೆ ಪ್ರವೇಶ ಮಾಡಿದರೆ ಅಲ್ಲಿ ಯಾವುದೇ ಜಗುಲಿ ಇರಲಿಲ್ಲ. ಗೋಡೆಗೆ ಮನೆ ದೇವರ ಫೋಟೊ ಒಂದು ನೇತು ಹಾಕಲಾಗಿತ್ತು. ಅದರ ಪಕ್ಕದಲ್ಲಿ ಒಂದು ಲಕ್ಷ್ಮಿ ಫೋಟೋ, ಇನ್ನೊಂದು ಘತ್ತರಗಿ ಬಾಗಮ್ಮನ ಫೋಟೋ, ಅಲ್ಲೇ ಬದಿಯಲ್ಲಿ ನಮ್ಮ ಅತ್ತೆ ಮಾವನ ಫೋಟೊ ಅದರ ಬದಿಯಲ್ಲಿ ಒಂದಿಬ್ಬರು ನಟ ನಟಿಯರ ದೊಡ್ಡ ಫೋಟೊಗಳಿದ್ದವು. ನಮ್ಮಪ್ಪ ಓದಿರಲಿಲ್ಲ ಆದರೂ ಆಗಿನ ಕಾಲದಲ್ಲಿಯೇ ಆತ ಹೀರೋ ಹೀರೋಯಿನ್ ಫೋಟೊಗಳನ್ನು ಕಟ್ ಹಾಕಿಸಿ ಪಕ್ಕಾ ಸಮತಾವಾದಿಯಂತೆ ದೇವರ ಕೋಣೆಯೊಳಗೆ ನಾಲ್ಕು ಬೆಟ್ಟು ಅಂತರದಲ್ಲಿಯೇ ಆ ಇಬ್ಬರ ಫೋಟೊ ನೇತು ಹಾಕಿರುವುದಿತ್ತು. ಕುತೂಹಲಕ್ಕೆ ನಾನು ಚಿಕ್ಕವನಿದ್ದಾಗ ಅವ್ವಳನ್ನು ಅದು ಯಾರ ಫೋಟೊ ಅಂತ ಕೇಳಿದ್ದೆ ಅವಳು ಮತ್ತೂ ಮುಗದೆ. ನನಗೇನು ಗೊತ್ತು ನಿಮ್ಮಪ್ಪಗ ಕೇಳು ಅಂದಿದ್ದಳು. ಅಪ್ಪಗೆ ಕೇಳುವಂಥಾ ಧೈರ್ಯ ಮನೆಯಲ್ಲಿ ಯಾರಿಗೂ ಇರಲಿಲ್ಲ. ನಾನು ಪಿ.ಯು.ಸಿ.ಗೆ ಬರೋವರೆಗೂ ಆ ಫೋಟೊಗಳು ಹಿಂದಿ ಸಿನೇಮಾದ ದಿಲೀಪಕುಮಾರ ಮತ್ತು ವೈಜಯಂತಿಮಾಲಾ ರದು ಅಂತ ಗೊತ್ತಾಗಿರಲಿಲ್ಲ. ಅದೇ ದೇವರ ಕೋಣೆಯಲ್ಲಿ ಮೇಲಿನ ಬದಿ ಅವ್ವ ಸಾವಿಗೆ ಹೊಸೆಯುವ ಮಣೆಗಳನ್ನು ಹೊಂದಿಸಿಟ್ಟಿದ್ದಳು. ಮೂಲೆಯಲ್ಲಿ ದೊಡ್ದದಾದ ಒಂದು ಕಟ್ಟಿಗೆಯ ಕಂಬವಿತ್ತು. ಆ ಕಟ್ಟಿಗೆಯ ಸೊಂಟಕ್ಕೆ ಒಂದು ಹಗ್ಗವಿತ್ತು. ಅದರ ಮಧ್ಯ ಭಾಗದಲ್ಲಿ ಮೂರು ವಿಭೂತಿ ಗೆರೆಗಳು ಮತ್ತು ಐದು ಕುಂಕುಮದ ಬೊಟ್ಟುಗಳಿದ್ದವು. ಅದನ್ನು ಕರೆಯುವುದೇ ಮಜ್ಜಿಗೆ ಕಂಬ ಅಂತ. ಅದರ ಬದಿಯಲ್ಲೇ ಮಜ್ಜಿಗೆ ಕಡಿಯುವ ರೇವಿಗೆ ಒಂದಿರುತ್ತಿತ್ತು. ಮನೆಯೊಳಗೆ ಹೈನಿರುವುದು ಸಾಮಾನ್ಯ. ಅವ್ವ ನಸುಕಿನಲ್ಲೆದ್ದು ಸರಕ್ ಬುರಕ್..ಸರಕ್ ಬುರಕ್.. ಅಂತ ಮಜ್ಜಿಗೆ ಕಡಿಯೋ ನಾದಕ್ಕೆ ಜೋಗುಳದ ತ್ರಾಣವಿರುತ್ತಿತ್ತು.

ಅವ್ವನ ಅಡುಗೆ ಮನೆಯಲ್ಲಿ ಇಣಿಕಿದರೆ ಒಂದೆರಡು ಒಲೆ. ಮೂಲೆಯಲ್ಲಿ ಮೊಸರಿಡಲು ಒಂದೆರಡು ನಿಲುವುಗಳು, ರೊಟ್ಟಿ ಬಡಿದಾದ ನಂತರ ಬುಟ್ಟಿಗೆ ಹಾಕಿ ಮೇಲೆ ಎತ್ತಿಡುವ ಒಂದೆರಡು ಮಾಡುಗಳು, cowನುಚ್ಚು ಮಾಡುವ ಮಡಿಕೆಗಳು, ಹಿಂಡಿಪಲ್ಲೆ, ಪುಂಡಿ ಪಲ್ಲೆ ಮಾಡುವ ಮಡಿಕೆ, ಮುಗುಚುವ ಹುಟ್ಟು, ರೊಟ್ಟಿ ಬಡಿಯುವ ಕಲ್ಲು, ಹಂಚು, ಒಲೆಗೆ ಹಾಕಲು ವಡಗಟಿಕೆ ಇಲ್ಲವೇ ಚಿಪಾಟಿ. ಕುಂಡಾಳಿಯಲ್ಲಿ ಈರುಳ್ಳಿ ಮೆಣಸಿನಕಾಯಿ, ಬಳ್ಳೊಳ್ಳಿ ಹಾಕಿ ಕುಟ್ಟಿದ ಕೆಂಪು ಚಟ್ನಿ, ಗೂಟಕ್ಕೆ ಸಿಗಿಸಿದ ಕುಸುಬಿ ಎಣ್ಣೆಯ ಬಾಟಲಿ, ಕಾರಬ್ಯಾಳಿ ತೆಗೆದುಕೊಂಡು ಹೊಲಕ್ಕೆ ಹೋಗಲು ಸಜ್ಜಾಗಿರುವ ಕಿಟ್ಲಿ ಇವಿಷ್ಟು ಅಡುಗೆ ಮನೆಗೆ ಇಣುಕಿದರೆ ಕಾಣುವ ಚಿತ್ರಣ. ಅತಿ ಮುಖ್ಯವಾಗಿ ಅಡುಗೆ ಮನೆಯ ಬಗ್ಗೆ ಮಾತಾಡುತ್ತಿರುವುದರಿಂದ ಒಂದರ ಬಗ್ಗೆ ಹೇಳಲೇ ಬೇಕು. ಅದು ಮುಟಗಿ. ನಮ್ಮ ಭಾಗದಲ್ಲಿ ರೊಟ್ಟಿ ಬಡಿಯುವ ವೇಳೆಯಲ್ಲಿ ಮಾಡೋ ಒಂದು ಬಗೆಯ ಆಹಾರ. ಇದು ತುಂಬಾ ಮಜಭೂತಾದ ಆಹಾರ ಅನ್ನೋ ನಂಬುಗೆ. ಹಾಗಾಗಿಯೇ ಇದನ್ನು ಮಾಡಿ ಹಾಲು ಸಾಲುವದಿಲ್ಲ, ಕಡಿಮೆ ಬೀಳುತ್ತವೆ ಎನಿಸಿದ ಎಮ್ಮೆಯ ಕರುಗಳಿಗೆ ತಿನ್ನಿಸಲಾಗುತ್ತಿತ್ತು. ಇದನ್ನು ಮಾಡುವ ವಿಧಾನವೂ ಸರಳವೇ.. ತುಸು ದಪ್ಪನೆಯ ಜೋಳದ ರೊಟ್ಟಿಯನ್ನು ಮಾಡಿ ಹಂಚಿಗೆ ಹಾಕುವುದು. ಅದು ಬೇಯುತ್ತಿರುವಾಗಲೇ ಕಲಿಗಲ್ಲಿನಲ್ಲಿ ಬೆಳ್ಳೊಳ್ಳಿ, ಉಪ್ಪು, ಮೆಣಸಿನ ಕಾಯಿ, ಜೀರಗಿ ಹಾಕಿ ಹದವಾಗಿ ಕುಟ್ಟಬೇಕು. ರೊಟ್ಟಿ ಬೇಯಿದ ಮೇಲೆ ಅದನ್ನೆತ್ತಿ ಆ ಕಲಗಲ್ಲಿಗೆ ಹಾಕಬೇಕು. ಅದನ್ನು ಹದವಾಗಿ ಕುಟ್ಟಿ ಗುಂಡಗೆ ಮುದ್ದೆ ಮಾಡಿ ಅದರ ಹೊಟ್ಟೆಗೊಂದು ತೂತು ಹಾಕಿ ಅದರಲ್ಲಿ ಒಂದಷ್ಟು ಕುಸುಬಿ ಎಣ್ಣೆ ಸುರಿದು ತಿಂದರೆ ಅದರ ರುಚಿ ಹೆಳಲಿಕ್ಕಾಗಲ್ಲ..ಅಷ್ಟು ಸ್ವಾದ..! ಕೇವಲ ಇದು ಮಾತ್ರವಲ್ಲ ಜೊಳದ ನುಚ್ಚು, ಕಿಚಡಿ, ನವಣಿ ಅನ್ನ, ಸಾವಿ ಬಾನ, ಮಜ್ಜಗಿ ಆಂಬರ, ಹುಳ್ಳಾನುಚ್ಚು, ಸಂಗಟಿ, ಹುರುಳಿ ಖಾಡೆ ಹೀಗೆ ಅವ್ವ ತಯಾರಿಸೋ ಆ ಆಹಾರದ ರುಚಿ ವೈವಿಧ್ಯ ಈಗ ಬರೀ ನೆನಪು ಮಾತ್ರ.

ಇಲ್ಲಿ ನಾನು ಮೇಲೆ ಹೇಳಲಾದ ಅನೇಕ ಸಂಗತಿಗಳು ನನ್ನ ಕತೆ ಮತ್ತು ಕಾದಂಬರಿಯ ಬರವಣಿಗೆಯಲ್ಲಿ ಸಾಥ್ ನೀಡಿರುವುದಿದೆ. ನನ್ನ ಬಾಲ್ಯದ ಊರಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸರದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ.. ಅವೆಲ್ಲ ನೆನಪುಗಳು ನನ್ನ ಅನುಭವದ ಮೂಸೆಯಲ್ಲಿ ಅಪರೂಪದ ಕಚ್ಚಾ ಸರಕಿನಂತೆ ಉಳಿದಿರುವುದಿದೆ. ಒಂದು ಮಾತಿದೆ ಅನುಭವವಿಲ್ಲದವನ ಜ್ಞಾನವೆಂದರೆ ಪಾತ್ರೆ ಇಲ್ಲದವನ ಕೈಯಲ್ಲಿ ನೀರು ಸಿಕ್ಕಂತೆ ಎಂದು. ನಮ್ಮ ಗ್ರಾಮೀಣ ಪರಿಸರದಲ್ಲಿ ದಕ್ಕಿದ ಅನುಭವಗಳೇ ಅನೇಕ ಉತ್ಕೃಷ್ಟ ಕೃತಿಯ ಸೃಷ್ಟಿಗೆ ಕಾರಣಗಳಾಗಿವೆ. ನಮ್ಮ ಮನೆಯ ಎದುರು ದೊಡ್ದದಾದ ಒಂದು ಬಸರೀ ಗಿಡವಿತ್ತು. ಬಿರುಬಿಸಿಲಿನ ನೆಲವಾದ ನನ್ನೂರಲ್ಲಿ ಬೇಸಿಗೆಯಲ್ಲಂತೂ ಅದಕ್ಕೆ ವಿಪರೀತ ಬೇಡಿಕೆ. ಓಣಿಯಲ್ಲಿರುವ ದಮ್ಮಿನ ರೋಗಿಗಳು ಉಶ್.. ಉಶ್.. ಅನ್ನುತ್ತಾ ಅದರ ನೆರಳಿಗೆ ಬರುವವರು. ಅದಾಗಲೇ ಕೆಲವು ಮಹಿಳೆಯರು ಅಲ್ಲಿ ಕುಳಿತು ಕೌದಿ ಹೊಲೆಯುವವರು, ಮತ್ತೆ ಕೆಲವರು ಲ್ಯಾವಿ ಗಂಟು ಬಿಚ್ಚಿ ತಮ್ಮ ಕೌದಿಯ ನೀಲನಕ್ಷೆ ತಯಾರಿಸುವವರು, ಗರ್ದಿ ಗಮ್ಮತ್ತಿನವನು, ಹೇರಪಿನ್, ಸೂಜಿ, ದಬ್ಬಣ ಮಾರುವವರು, ಬೊಂಬಾಯಿ ಮಿಟಾಯಿ, ಲಾಲವಾಲಾ ಮಾರುವವ ಹೀಗೆ ಆ ಗಿಡದ ನೆರಳು ಅದೆಷ್ಟು ಬದುಕುಗಳಿಗೆ ಆಸರೆಯಾಗಿತ್ತೋ ಗೊತ್ತಿಲ್ಲ. ಊರು ಉರುಳಿದಂತೆ ಎಲ್ಲವೂ ಬದಲಾಗಿ ಈ ಆ ಗಿಡವೂ ಉರುಳಿತು. ಆ ಗಿಡದ ನೆರಳಿಗೆ ಬರುವ ಜೀವಗಳೂ ಉರುಳಿದವು. ನಮ್ಮ ಓಣಿಯಲ್ಲಿ ಒಬ್ಬಳು ಮುದುಕಿ ಇದ್ದಳು. ಆಗ ಅವಳಿಗೆ ಹೆಚ್ಚೂ ಕಡಿಮೆ ಎಂಬತ್ತು ವರ್ಷ ಹಾಗೆ ನೋಡಿದರೆ ಸಂಬಂಧದಲ್ಲಿ ಆಕೆ ನಮ್ಮ ಅಪ್ಪನ ಅತ್ತೆಯೇ ಆಗಬೇಕು. ಅವಳಿರೋದೇ ಒಬ್ಬಳು. ಆಕೆಯ ಗಂಡ ಅಂಚೆ ಇಲಾಖೆಯಲ್ಲಿದ್ದು ತೀರಿದವನು. ಅವನ ಹೆಸರಲ್ಲಿ ಆಗಿನ ಕಾಲದಲ್ಲಿ ೨೦೦ ರೂಪಾಯಿ ಪೆನ್ಶನ್ ಬರುತ್ತಿತ್ತು. ಆ ಮುದುಕಿ ಯಾವತ್ತೂ ಬ್ಯುಸಿ ಆಗಿರುವದನ್ನು ಕಂಡು ನಾವೆಲ್ಲಾ ಆಕೆಗೆ ತಮಾಷೆ ಮಾಡುತ್ತಿದ್ದೆವು. ಇರೋದೇ ಒಂದು ಜೀವ ಇಷ್ಟೆಲ್ಲಾ ಕಟಿಬಿಟಿ ಮಾಡಬೇಕಾ..? ಅನ್ನೋದು ಓಣಿಯಲ್ಲಿದ್ದವರ ಪ್ರಶ್ನೆ. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಹಾಗೆ ಈ ಮುದುಕಿ ಮಾಡದ ಸೊಪ್ಪಿನ ಪಲ್ಯೆ ಇರಲಿಲ್ಲ. ಬಹುಷ: ಬೇವಿನ ಗಿಡದ ಸೊಪ್ಪೊಂದು ಬಿಟ್ಟು. ಸುಮ್ಮನೇ ಅಲ್ಲಿ ಇಲ್ಲಿ ಬೆಳೆಯುವ ಸೊಪ್ಪು ಕೂಡಾ ಈಕೆಯ ಅಡುಗೆಯ ಸಾಮಗ್ರಿಯಾಗುತ್ತಿತ್ತು. ಬೇಸಿಗೆ ಬಂದ್ರೆ ಸಾಕು ಈ ಮುದುಕಿ ತುಂಬಾ ಬ್ಯುಜಿ. ತಿಂಗಳಾನು ಗಟ್ಟಲೆ ಹಪ್ಪಳ, ಸಂಡಗಿ, ಕುರುಡಗಿ, ಗವಲಿ, ಉಗರತ್, ಪರಡಿ, ಸೌತೆ ಬೀಜ ಅನ್ನೋ ದೀನಸುಗಳನ್ನು ಮಾಡಿಡುವವಳು. ಮಳೆಗಾಲದಲ್ಲಿ ಅವುಗಳನ್ನು ಬೇಯಿಸಿ ಬಸಿದು ಬಳಸುವವಳು. ಆ ಮುದುಕಿ ಒಂದೇ ದಿನ ಕುಳಿತು ಕೆಟ್ಟವಳಲ್ಲ. ಕೈ ಸೊಟ್ಟಾದ ಮೇಲೂ ಅವಳು ಕೌದಿ ಹೊಲಿಯುವದನ್ನು ಬಿಟ್ಟವಳಲ್ಲ.

ನಮ್ಮೂರಲ್ಲಿ ನೀಲಗಂಗವ್ವ ಎನ್ನುವ ಗ್ರಾಮದೇವತೆಯ ಜಾತ್ರೆ ವರ್ಷಕ್ಕೊಮ್ಮೆ ಗೌರಿ ಹುಣ್ಣಿಮೆ ಸಂದರ್ಭದಲ್ಲಿ ಜರುಗುತ್ತದೆ. ಈ ಜಾತ್ರೆ ಈಗಿನಂತೆ ಕೇವಲ ವ್ಯಾಪಾರ- ವಹಿವಾಟಿನ ಇಲ್ಲವೇ ಪೋರ-ಪೋರಿಯರ ಸುತ್ತಾಟದ ನೆಲೆಯಾಗಿ ರಲಿಲ್ಲ. ಅದನ್ನು ಮೀರಿ ಒಂದು ಜನಸಮುದಾಯದ ಸಾಂಸ್ಕೃತಿಕ ಸಡಗರ, ಆಚರಣೆಯ ಭಾಗವಾಗಿತ್ತು. ಅದು ಸಂಪ್ರದಾಯಕ್ಕಿಂತಲೂ ಮಿಗಿಲಾಗಿ ಒಂದು ಪರಂಪರೆಯೇ ಆಗಿತ್ತು. rural-indiaಅಲ್ಲಿ ಸೇರುವ ಮಿಠಾಯಿ ಅಂಗಡಿಗಳು, ತೊಟ್ಟಿಲು, ಚಿರಕೀಗಾಣ, ಆಟಿಕೆ ಸಾಮಾನುಗಳ ಅಂಗಡಿ, ಗುಡ ಗುಡಿ ಆಟಗಳು, ಟೆಂಟ್ ಸಿನೇಮಾ, ನಾಟಕ, ಎರಡು ತಲೆಯ ಮನುಷ್ಯ, ಬಳೆ ಅಂಗಡಿ, ಬೆಂಡು ಬತ್ತಾಸು, ಚುರುಮುರಿ ಚೀಲಗಳು, ಬಟ್ಟೆ ಅಂಗಡಿಗಳು, ಬಲೂನು.. ಪೀಪಿಗಳು, ಗೊಂಬೆಗಳು ಹೀಗೆ ಒಂದೇ ಎರಡೇ ಇಡೀ ಒಂದು ವಾರ ನನ್ನಂಥಾ ಹುಡುಗರಿಗೆ ಕನಸಾಗಿ ಕಾಡುವ ಈ ಜಾತ್ರೆ ಮುಗಿಯುತ್ತಿದ್ದಂತೆ ಬೇಸರ ಆವರಿಸಿಕೊಳ್ಳುತ್ತಿತ್ತು. ಜಾತ್ರೆಯಲ್ಲಿ ಮುದ್ದಾಂ ಜಾತ್ರೆಯ ಸಲುವಾಗಿ ಎಂದು ಪೋಸ್ಟರ್ ಮೇಲೆ ಬರೆಯಿಸಿಕೊಂಡು ಊರಲ್ಲಿ ಅಲ್ಲಲ್ಲಿ ಅಂಟಿಸಲಾಗುವ ರಾಜಕುಮಾರ, ವಿಷ್ಣು ವರ್ಧನನ ಸಿನೇಮಾ ಜಾತ್ರೆಗೆ ಬಂದ ಸಂಬಂಧಿಗಳೊಡನೆ ನೋಡುವುದೇ ಒಂದು ಉಮೇದು. ಊರ ಹೊರಗಿನ ದರ್ಗಾ ಬೈಲಿನಲ್ಲಿ ನಡೆಯುವ ಖಡೆದ ಕುಸ್ತಿಗೆ ಸುತ್ತ ಮುತ್ತಲ್ಲಿನ ಹಳ್ಳಿಗಳ ಪೈಲ್ವಾನರು ಬಂದು ಸೇರುತ್ತಿದ್ದರು. ಒಬ್ಬರಿಗಿಂತಲೂ ಒಬ್ಬರು ಕಸರತ್ತು ಮಾಡಿದವರು. ಅವರ ಗಂಟಾದ ಕಿವಿಗಳು, ಕುತ್ತಿಗೆಯ ಶಿರ, ಮೈಕಟ್ಟು ನೋಡುವುದು ಇನ್ನೊಂದು ಖುಷಿ. ಆ ಖಡೆದ ಕುಸ್ತಿ ಮುಗಿದ ನಂತರ ಒಂದು ವಾರದ ವರೆಗೆ ಮನೆಯಲ್ಲಿ ಊಟಾಬಸ್ಕಿ ಹೊಡೆದು ನೋವಾಗಿ ತೊಡೆ ಹಿಡಿದು ಶಾಲೆಗೆ ಚಕ್ಕರ್ ಹಾಕಿದ ನೆನಪು ಈಗಲೂ ನೆನಪಿದೆ. ಜಾತ್ರೆಯ ಕಡೆಯ ದಿನ ನಡೆಯುವ ಬಯಲಾಟ ಇಡೀ ಊರಿಗೂರೇ ಸುದ್ದಿಯಾಗಿರುತ್ತಿತ್ತು. ಸಂಜೆಯಾಗುತ್ತಿರುವಂತೆ ವೇದಿಕೆ ಸಜ್ಜಾಗುತ್ತಿತ್ತು. ಅತ್ತ ವೇದಿಕೆ ಸಜ್ಜಾಗುತ್ತಿರುವಂತೆ ಇತ್ತ ಜನರು ತಮ್ಮ ಮನೆಯಲ್ಲಿಯ ಸಣ್ಣ ಹುಡುಗರ ಕೈಯಲ್ಲಿ ಚಾಪೆ, ಗುಡಾರ, ತಾಡಪಾಲ ಮುಂತಾದವುಗಳನ್ನು ಕೊಟ್ಟು ಜಾಗವನ್ನು ರಿಜರ್ವ್ ಮಾಡಿಸುತ್ತಿದ್ದರು. ಮುಖ್ಯ ಬೀದಿಯಲ್ಲಿ ನಡೆಯುವ ಈ ದೊಡ್ಡಾಟಕ್ಕಾಗಿ ಏನೆಲ್ಲಾ ತಯಾರಿಗಳಾಗಿರುತ್ತಿದ್ದವು. ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋಗುವ ಸನ್ನಿವೇಶಕ್ಕಾಗಿ ಅಲ್ಲೇ ಹತ್ತಿರದಲ್ಲಿದ್ದ ಮರವೊಂದಕ್ಕೆ ಸೇತುವೆಯನ್ನೇ ಕಟ್ಟಲಾಗುತ್ತಿತ್ತು. ಆ ಬಯಲಾಟ ಬೆಳ್ ಬೆಳತನಕ ನಡೆಯುವದರಿಂದ ಸಾಲಾಗಿ ಚಹಾದ ಅಂಗಡಿಗಳು ತಯಾರಾಗಿ ನಿಂತಿದ್ದವು. ಆ ಬಯಲಾಟದಲ್ಲಿದ್ದ ರಾವಣನ ಪಾತ್ರಧಾರಿ, ರಾಮನ ಪಾತ್ರಧಾರಿಗಳು ಓದಲು ಬರೆಯಲು ಬಾರದವರು. ಅವರಿಗೆ ಬಯಲಾಟದ ಮಾತುಗಳನ್ನು ಹೇಳಿ ಕೊಟ್ಟಿದ್ದೇ ನಮ್ಮಂಥಾ ಹುಡುಗರು. ಹೀಗಾಗಿ ಅವರು ವೇದಿಕೆಯಲ್ಲಿ ಕುಣಿದು ಕುಪ್ಪಳಿಸಿ ಡೈಲಾಗ್ ಹೇಳಾಕ್ ಶುರು ಮಾಡಿದ್ದೇ ನಮ್ಮ ಬಾಯಲ್ಲೂ ಡೈಲಾಗ್ ಉದುರುತ್ತಿದ್ದವು. jatreನಮ್ಮ ಹೊಲದಲ್ಲಿ ಕೆಲಸ ಮಾಡುವ ಲಚ್ಚಪ್ಪನೂ ಒಂದು ಪಾತ್ರ ಮಾಡಿರುತ್ತಿದ್ದ. ಅಪ್ಪ ಅವನಿಗೆ ಬಟ್ಟೆ ಬರೆ ಆಯೇರಿ ಮಾಡುತ್ತಿದ್ದ. ತೋಮತ ತಜನತೋ ತಯಾ ಧೀಮತತಜನತೋ.. ಅಂತ ಸಾರಥಿ ರಾಗ ಸುರು ಮಾಡಿದ್ದೇ ಮುಂದ ಕುಳಿತ ಮಂದಿ ಕೂಗು..ಸಿಳ್ಳು ಇಡೀ ಊರಿಗೂರೇ ರಂಗೇರುವಂತೆ ಮಾಡುತ್ತಿತ್ತು. ಇಂಥಾ ಒಂದೆರಡಲ್ಲ, ಹತ್ತಾರು ಸಂಗತಿಗಳು ನಮ್ಮೂರಲ್ಲಿ, ಸುತ್ತ ಮುತ್ತಲಿನ ಹಳ್ಳ್ಲಿಗಳಲ್ಲಿ ನಡೆಯುವದಿತ್ತು. ಆಗ ಹಳ್ಳಿಗಳು ಬಹುತೇಕವಾಗಿ ಉತ್ಪಾದನೆ ಮತ್ತು ಉಪಭೋಗದ ಘಟಕಗಳಾಗಿ ಕೆಲಸ ಮಾಡುತ್ತಿದ್ದವು. ಎಲ್ಲೂ ಯಾರ ವರ್ತನೆಯಲ್ಲೂ.. ಮಾತಿನಲ್ಲೂ ಕೃತ್ರಿಮವಾದ ಸಂಬಂಧಗಳು ಇರಲಿಲ್ಲ. ಜಾತಿ..ಧರ್ಮಗಳ ಗೊಡವೆಯಿಲ್ಲದೇ ಊರವರ ಸಂಬಂಧಗಳು ಸ್ಥಾಪನೆಯಾಗಿರುತ್ತಿದ್ದವು. ಯಾವುದೇ ಲಾಭ, ಸ್ವಾರ್ಥವನ್ನು ಆಧಾರವಾಗಿಟ್ಟುಕೊಳ್ಳದೇ ಅತ್ಯಂತ ಯತಾರ್ಥವಾಗಿ ಅವು ಹುಟ್ಟುತ್ತಿದ್ದವು. ಅವರು ಸಂಬಂಧಿಗಳಲ್ಲದಿದ್ದರೂ ಕಾಕಾ.. ಮಾಮಾ..ಯಕ್ಕಾ.. ಅಣ್ಣ ಅನ್ನೋ ಮೂಲಕ ವ್ಯವಹರಿಸುವ ರೀತಿಯೇ ನಮಗೆ ಅನೂಹ್ಯವಾದ ಮನುಷ್ಯ ಸಂಬಂಧಗಳ ಬಗ್ಗೆ ಪಾಠ ಕಲಿಸಿಕೊಟ್ಟಿತು.

ಮೊಹರಂ ದಂಥಾ ಹಬ್ಬಗಳ ಆಚರಣೆಯಲ್ಲಿ ಇಡೀ ಊರು ಒಂದಾಗುತ್ತಿತ್ತು. ಎಲ್ಲ ಕೇರಿಗಳಲ್ಲೂ ಅದನ್ನು ಆಚರಿಸುತ್ತಿದ್ದರು. ಬೆಳಿಗ್ಗೆಯಿಂದಲೇ ಆರಂಭವಾಗುವ ಅಲಾಬ್ ಆಡುವಲ್ಲಿ ಎಲ್ಲರೂ ಪಾಲ್ಗೊಳ್ಳುತ್ತಿದ್ದರು. ಆ ಅಲಾಬ್ ಕುಣಿತ, ಅದರ ಜೊತೆಗಿರುವ ಹಲಿಗೆ, ಸನಾದಿ ನಾದ, ತಾಳ ಈಗಲೂ ಏಕಾಂತದಲ್ಲಿರುವಾಗ ನೆನಪು ಮಾಡಿಕೊಂಡರೆ ನನ್ನನ್ನು ಗಾಢವಾಗಿ ಆವರಿಸಿಬಿಡುತ್ತದೆ. ಹೋಳಿ ಹುಣ್ಣಿವೆಯ ಸಂದರ್ಭದಲ್ಲಂತೂ ಎದುರು ಬದುರು ಕುಳಿತು ಹೇಳುವ ಸವಾಲು ಜವಾಬಿನ ಹಾಡುಗಳು ಅದ್ಭುತವಾಗಿರುತ್ತಿದ್ದವು. ಆದರೆ ಇವೆಲ್ಲವೂ ಬಹುತೇಕವಾಗಿ ಸೊಂಟದ ಕೆಳಗಿನ ಸಾಹಿತ್ಯವಾದ ಕಾರಣ ಮಹಿಳೆಯರಾರೂ ಅಲ್ಲಿ ಸೇರುತ್ತಿರಲಿಲ್ಲ. ನಮ್ಮ ಮನೆಯ ಪಕ್ಕದಲ್ಲೇ ಒಂದು ಮುಸ್ಲಿಂ ಮನೆಯಿತ್ತು. ಅವರು ಎಲೆ, ಅಡಿಕೆ, ಲಿಂಬು, ಮೋಸಂಬಿ ಹೀಗೆ ಹಣ್ಣಿನ ವ್ಯಾಪಾರವನ್ನು ಮಾಡುವವರು .ನಮ್ಮ ಕೇರಿಯಲ್ಲಿ ಅವರೇ ಮೊಟ್ಟ ಮೊದಲ ಬಾರಿಗೆ ೧೪ ಇಂಚಿನ ಕಪ್ಪು ಬಿಳುಪು ಟಿ.ವಿ. ಮನೆಗೆ ತಂದವರು. ಚಿತ್ರಹಾರ ಮತ್ತು ಸಿನೇಮಾ ನೋಡಲು ನನ್ನಂಥಾ ಹುಡುಗರು ಮುಗಿ ಬೀಳುವದಿತ್ತು. ನಾವೆಲ್ಲರೂ ಅವರನ್ನು ಕರೆಯುವುದು ಕಾಕಾ.. ಅವ್ವ.. ಅಕ್ಕ.. ಎಂದೇ ಆಗಿತ್ತು. ಅವರು ತುಸು ಡಾಗು ಬಿದ್ದ ಮೋಸಂಬಿ ಹಣ್ಣನ್ನು ನನ್ನಂಥಾ ಹುಡುಗರಿಗೆ ತಿನ್ನಲು ನೀಡುತ್ತಿದ್ದರು. ನಮಗೆ ತುಂಬಾ ಖುಷಿಯಾಗುತ್ತಿತ್ತು. ಹೀಗಾಗಿ ನಾವು ವಾರದಲ್ಲಿ ಎರಡು ದಿನ ಸಿನೇಮಾ ಕಮ್ ಮೋಸಂಬಿ ಹಣ್ಣು ಅನ್ನೋ ಇರಾದೆಯಿಂದ ಅವರ ಮನೆ ಮುಂದೆ ಸುತ್ತುವದಿತ್ತು. ತೀರಾ ಸಣ್ಣ ಪುಟ್ಟ ಸಂಗತಿಗಳು ಕೂಡಾ ಹೇಗೆ ನಮ್ಮ ಬರವಣಿಗೆಗೆ ಸ್ಫೂರ್ತಿಯಾಗುತ್ತವೆ ಎನ್ನಲಿಕ್ಕೆ ನಾನು ಮೇಲೆ ಹೇಳಲಾದ ಅನೇಕ ಸಂಗತಿಗಳನ್ನು ನನ್ನ ಬರವಣಿಗೆಗೆ ಬಳಸಿಕೊಂಡಿರುವುದಿದೆ. ನನಗಿನ್ನೂ ನೆನಪಿದೆ ಆಗ ನಾನು ಬಹುತೇಕವಾಗಿ ಎಂಟನೆಯ ತರಗತಿಯಲ್ಲಿರಬೇಕು. ಆಗ ನಮ್ಮೂರಿನಲ್ಲಿ ದಾರಿ ತಪ್ಪಿದ ಮಗ ಸಿನೇಮಾ ಬಂದಿತ್ತು. ನನ್ನ ಗೆಳೆಯರೆಲ್ಲರೂ ಅದನ್ನು ನೋಡಿ ಬಂದು ಭಯಂಕರ ರೋಚಕವಾಗಿ ತರಗತಿಯಲ್ಲಿ ಕತೆ ಹೇಳುವುದನ್ನು ಕೇಳಿ ಹೇಗಾದರೂ ಮಾಡಿ ನಾನೂ ನೋಡಬೇಕು ಎಂದು ಅನಿಸಿರುವುದು ಸಹಜವೇ.. ಆದರೆ ಆ ಸಿನೇಮಾ ನೋಡಲು rural-karnataka-2ನಾನು ದಾರಿ ತಪ್ಪಿದ ಮಗನೇ ಆದದ್ದು ಮಾತ್ರ ನನ್ನನ್ನು ಈಗಲೂ ಚುಚ್ಚುತ್ತದೆ. ನಮ್ಮಲ್ಲಿ ಮಾಳಿಗೆಯ ಮೇಲೆ ಬೆಳಕಿಂಡಿ ಮುಚ್ಚಲು ತಗಡುಗಳನ್ನು ಇಟ್ಟಿರುತ್ತಾರೆ. ನಮ್ಮ ಅಪ್ಪನಂತೂ ಸಿನೇಮಾ ನೋಡಲು ದುಡ್ದು ಕೊಡುವದಿಲ್ಲ ಎನ್ನುವ ಖಾತ್ರಿಯಿತ್ತು. ಪಕ್ಕದ ಓಣಿಯ ಹುಡುಗನೊಬ್ಬನ ಜೊತೆಗೆ ಒಂದು ಅಗ್ರೀಮೆಂಟ್ ಮಾಡಿಕೊಂಡೆ. ಇಬ್ಬರೂ ಸಿನೇಮಾ ನೋಡುವುದು, ಆದರೆ ಆ ಬೆಳಕಿಂಡಿಯ ತಗಡನ್ನು ಹೊತ್ತೊಯ್ದು ಮಾರುವ ಜವಾಬ್ದಾರಿ ಅವನದು. ಅಷ್ಟಕ್ಕೂ ಆ ತಗಡು ಬೇರೆ ಯಾರದೋ ಮನೆಯ ಬೆಳಕಿಂಡಿಯದಲ್ಲ ಎನ್ನುವುದೇ ಒಂದು ದೊಡ್ಡ ಸಮಾಧಾನ. ಅದು ನಮ್ಮದೇ ಮನೆಯ ಬೆಳಕಿಂಡಿಯ ತಗಡು. ಪ್ಲ್ಯಾನ್ ಮಾಡಿಕೊಂಡಂತೆ ನಾನು ತಗಡು ತೆಗೆದು ಎತ್ತಿ ಕೆಳಗೆ ಒಗೆಯುವದು ಮಾತ್ರ. ಆಮೇಲೆ ಅದನ್ನವನು ತೆಗೆದುಕೊಂಡು ಹೋಗಿ ಮಾರಾಟ ಮಾಡುವುದು. ನಂತರ ಇಬ್ಬರೂ ಕೂಡಿ ಸಿನೇಮಾ ನೋಡುವುದು. ಅಂದುಕೊಂಡಂತೆ ನಡೆದು ಸಿನೇಮಾ ನೋಡಿಯೂ ಆಯ್ತು. ಆದರೆ ನಂತರ ಆ ತಗಡು ಕದ್ದಿದ್ದು ನಾನೇ ಎಂದು ಅದನ್ನು ಮಾರಿ ಬಂದವನೇ ನಮ್ಮ ಅಪ್ಪನ ಎದುರಲ್ಲಿ ಮಾಹಿತಿ ಬಿಚ್ಚಿಟ್ಟಿದ್ದೇ ವಡಗಟಿಗೆಯಿಂದ ನನಗೆ ಹೊಡೆತ ಬಿದ್ದಿದ್ದೂ ಇದೆ. ನಾನು ಆಗಾಗ ಅಂದುಕೊಳುತ್ತೇನೆ. ನಾವು ತಪ್ಪು ಮಾಡಿದಾಗ ನಮ್ಮ ಅಪ್ಪ ಕೈಗೆ ಏನು ಸಿಗುತ್ತೋ ಅದರಿಂದಲೇ ಹೊಡೆಯುವದಿತ್ತು. ಆದರೂ ನಮಗೆ ಏನೂ ಅನಿಸುತ್ತಿರಲಿಲ್ಲ. ಆ ಗಳಿಗೆಯಲ್ಲಿ ಸ್ವಲ್ಪ ಹೊತ್ತು ಅಳುತ್ತಿದ್ದೆವು.. ಮಿಕ್ಕಂತೆ ಮತ್ತೆ ಗೆಳೆಯರೊಂದಿಗೆ ಆಟಕ್ಕೆ ರೆಡಿ. ಈಗ ಪರಿಸ್ಥಿತಿ ಪೂರ್ಣ ಪ್ರಮಾಣದಲ್ಲಿ ಬದಲಾಗಿದೆ ಈಚೆಗೆ ಹತ್ತು ವರ್ಷದ ಎರಡು ಮಕ್ಕಳು ಆತ್ಮ ಹತ್ಯೆ ಮಾಡಿಕೊಂಡದ್ದನ್ನು ಪತ್ರಿಕೆಯಲ್ಲಿ ಓದಿದೆ. ಅವರ ಕಾರಣಗಳೇ ಅತ್ಯಂತ ಮಳ್ಳತನದಿಂದ ಕೂಡಿದ್ದವು. ಒಬ್ಬಾತ ಹುಡುಗ ಶಾಲೆಗೆ ಹೋಗು ಎಂದ ಕಾರಣಕ್ಕೆ ಹಾಗೆ ಮಾಡಿಕೊಂಡರೆ, ಇನ್ನೊಂದು ಟಿ.ವಿ.ನೋಡಬೇಡ ಎಂದು ಹೇಳಿದ ಕಾರಣಕ್ಕೆ ಇವೆರಡೂ ಕಾರಣಗಳನ್ನು ನೆನೆದರೆ ನಗಬೇಕೋ.. ಅಳಬೇಕೋ ತಿಳಿಯುತ್ತಿಲ್ಲ.

ಇಂದು ಗ್ರಾಮೀಣ ಪ್ರದೇಶಗಳಲ್ಲಿಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನ ಮುಂಚಿನಂತಿಲ್ಲ. ಅಲ್ಲೀಗ ನಾವು ಬಾಲ್ಯದಲ್ಲಿ ಆಡಿದ ಆಟಗಳಿಲ್ಲ, ನೋಡಿದ ನೋಟಗಳಿಲ್ಲ. ಊರ ಮುಂದಿನ ಅನೇಕ ಮಾವಿನ ತೋಟಗಳು ಹಣದ ಹಪಾಪಿತನಕ್ಕೆ ಸೈಟ್ ಆಗಿ ಮಾರ್ಪಟ್ಟಿವೆ. ಎಲ್ಲರ ಮನೆಯಲ್ಲೂ ಆಕಳುಗಳಿವೆ.. ಎಮ್ಮೆಗಳಿವೆ.. ಆದರೆ ಯಾರಾದರೂ ಮನೆಗೆ ಅತಿಥಿಗಳು ಬಂದರೆ ಚಾ ಮಾಡಲು ಹಾಲಿಲ, ಎಲ್ಲರೂ ಡೈರಿ ಗೆ ಹಾಕುವವರೇ.. ಮನೆಯ ಪಡಸಾಲೆಯಲ್ಲಿರುವ ಟಿ.ವಿ. ಯಲ್ಲಿಯ ಜಾಹೀರಾತುಗಳು ಇವತ್ತು ಗ್ರಾಮೀಣರನ್ನೂ ಕೂಡಾ ಒಂದು ಕಮಾಡಿಟಿ ಯ ಮಟ್ಟದಲ್ಲಿ ತಂದು ನಿಲ್ಲಿಸಿಬಿಟ್ಟಿವೆ. ಪರಿಣಾಮವಾಗಿ ಅಲ್ಲೂ ಕೂಡಾ ಮನುಷ್ಯ ಸಂಬಂಧಗಳು ಅರ್ಥವಂತಿಕೆಯನ್ನು ಕಳೆದುಕೊಳ್ಳುತ್ತಿವೆ. ಆಲ್ಬರ್ಟ್ ಕಾಮು ೧೯೪೬ ರ ಸಂದರ್ಭದಲ್ಲಿ ಹೇಳಿರುವಂಥಾ ಮಾತು ನೆನಪಾಗುತ್ತಿದೆ. rural-karnatakaಮನುಷ್ಯ ಮುಂಬರುವ ದಿನಗಳಲ್ಲಿ ನಡುಗಡ್ಡೆಯಂತೆ ಬದುಕುತ್ತಾನೆ. ಎನ್ನುವ ಮಾತು ಈಗ ಸತ್ಯವಾಗಿದೆ. ಇಂದಿನ ಸೃಜನಶೀಲ ಬರಹಗಾರರಿಗೆ ಗ್ರಾಮೀಣ ಮತ್ತು ನಗರ ಬದುಕಿನ ಮಧ್ಯೆ ಇರುವ ಸಾಂಸ್ಕೃತಿಕ ವ್ಯತ್ಯಾಸಗಳು ಸ್ಪಷ್ಟವಾಗಿ ಗೋಚರವಾಗುತ್ತಿಲ್ಲ. ಹೀಗಾಗಿ ಖರೆ ಖರೆ ಹಳ್ಳಿಗಳ ಸಾಂಸ್ಕೃತಿಕ ಚಹರೆಯನ್ನು ಕಟ್ಟಿಕೊಡುವುದು ಅವರಿಂದ ಸಾಧ್ಯವಾಗುತ್ತಿಲ್ಲ. ಒಂದು ಗ್ರಾಮದ ಬಗೆಗಿನ ಕೃತಿಯನ್ನು ಓದಿ ಅದನ್ನು ಗ್ರಹಿಸುವದಕ್ಕೂ, ಖುದ್ದಾಗಿ ಗ್ರಾಮದ ಜೀವನಾನುಭವವನ್ನು ಅಂತರಂಗೀಕರಣಗೊಳಿಸಿಕೊಂಡು ಸೃಜನಶೀಲ ಬರವಣಿಗೆಯನ್ನು ಮಾಡುವುದಕ್ಕೂ ತುಂಬಾ ವ್ಯಸ್ತಾಸಗಳಿವೆ. ಮೊದಲನೆಯದು ಕುರುಡರು ಆನೆಯನ್ನು ಗ್ರಹಿಸುವ ಪರಿಯಾದರೆ, ಇನ್ನೊಂದು ಮಾವುತ ಆನೆಯನ್ನು ಗ್ರಹಿಸುವ ಪರಿ. ಸಮಾಜಶಾಸ್ತ್ರದ ವಿದ್ಯಾರ್ಥಿಯಾದ ನನಗೆ ಜಾಗತೀಕರಣದ ಹಾವಳಿಯ ಸಂದರ್ಭದಲ್ಲಿ ಗ್ರಾಮಗಳನ್ನು ಸಂಸ್ಕೃತಿ ಸಂಂಪೋಷಣಾ ತಾಣಗಳೆಂದು ಕರೆಯಲು ಸಾಧ್ಯವಾಗುತ್ತಿಲ್ಲ. ಇಂದು ಗ್ರಾಮಗಳು ನಾನು ಬಾಲ್ಯದಲ್ಲಿ ಕಂಡ ಸ್ಥಿತಿಯಲ್ಲಿಲ್ಲ. ಗ್ರಾಮಗಳನ್ನು ಮರು ವ್ಯಾಖ್ಯಾಯಿನಿಸುವ ತುರ್ತು ಈಗಿದೆ ಎನಿಸುತ್ತದೆ. ನನ್ನ ಊರು.. ಅದರೊಂದಿಗಿನ ಬಾಲ್ಯದ ಒಡನಾಟ ನನ್ನ ಬಹುತೇಕ ಬರವಣಿಗೆಗಳ ಹಿಂದಿನ ಜೀವಸೆಲೆಯಾಗಿ ಕೆಲಸ ಮಾಡಿದೆ ಎನ್ನುವುದಂತೂ ಹೌದು. ಅದು ಒಬ್ಬ ಬರಹಗಾರನ ಸೃಜನಶೀಲ ಬರವಣಿಗೆ ಎನ್ನಬೇಕೋ ಅಥವಾ ಅವನಿಗೆ ದಕ್ಕಿದ ಹಸಿ ಹಸಿ ಜೀವನಾನುಭವದ ತಿರುಳು ಎನ್ನಬೇಕೋ ತಿಳಿಯದು. ಕೊನೆಯದಾಗಿ ಹೇಳುವದಾದರೆ ಗ್ರಾಮೀಣ ಪರಿಸರದ ಒಡನಾಟ ಮತ್ತು ಸಂಸ್ಕೃತಿಯ ಸಹವಾಸವಿಲ್ಲದ ಬರಹ ಒಂದು ಸುಂದರವಾದ ಪ್ಲಾಸ್ಟಿಕ್ ಹೂವನ್ನು ಮಾತ್ರ ರೂಪಿಸಲು ಸಾಧ್ಯ.

5 thoughts on “ಹಳ್ಳಿಗಳ ಒಡನಾಟ ಮತ್ತು ಗ್ರಹಿಕೆಯೇ ಬರವಣಿಗೆಯ ಜೀವದ್ರವ್ಯ

  1. Godbole

    ಪ್ರಿಯ ಜೋಗುರ ಸರ್, “ಕೆ.ಎನ್.ಪಣಿಕ್ಕರ್ ಎನ್ನುವ ಸಂಸ್ಕೃತಿ ಚಿಂತಕರು” ಅಂತ ಬರೆದಿದ್ದೀರಿ. ಕ್ಷಮಿಸಿ ಸಂಸ್ಕೃತಿ ಚಿಂತಕರು ಅಂದರೆ ಯಾರು ಅಥವಾ ಸಂಸ್ಕೃತಿ ಚಿಂತನೆ ಅಂದರೆ ಏನು ಅಂತ ಅರ್ಥವಾಗಲಿಲ್ಲ. ದಯವಿಟ್ಟು ಈ ಪಾರಿಭಾಷಿಕ ಪದದ ಅರ್ಥ ತಿಳಿಸಬೇಕು ಅಂತ ವಿನಂತಿ.

    Reply
  2. s.b.jogur

    priya godaboleyavare, sasmkruti ennuvudu akhandavaadudu. ondu talemaarininda innondu tale maarige saagibaruva saamaajika parampare.innondarthadalli adu namma jeevana vidhaana.inthaa jeevanavidhaanavannu, kuritu adhyayana maadidavaru enadrtha.

    Reply
    1. Godbole

      ಧನ್ಯವಾದಗಳು ಜೋಗುರ ಸರ್ ತಮ್ಮ ಪ್ರತಿಕ್ರಿಯೆಗೆ.

      Reply
  3. RaviChandra Hanamath Malled

    ತಮ್ಮ ಬಾಲ್ಯದ ಬದುಕನ್ನು ಕಟ್ಟಿಕೊಟ್ಟ ಘಟನೆಗಳನ್ನು ಲೇಖನದ ಮೂಲಕ ಹಂಚಿಕೊಂಡದ್ದು ತುಂಬ ಇಷ್ಟವಾಯಿತು..ಸರ್

    Reply
  4. Anonymous

    ಜೋಗೂರ್ ಸರ್ ನಾನೂ ಬಿಜಾಪೂರದ ಹತ್ತಿರದ ಊರಿನವಳು. ನಿಮ್ಮ ಹಳ್ಳಿಯ ಜೀವನ ನನ್ನನ್ನೂ ನನ್ನ ಬಾಲ್ಯವನ್ನು ನೆನಪಿಸುವಂತೆ ಮಾಡಿತು. ಅವ್ವ ಮಾಡಿಕೊಡುವ ಬಿಳಿಜೋಳದ ಭಕ್ಕರಿ ಪುಂಡಿಪಲ್ಯ ನೆನಪಿಗೆ ಬಂತು. ಧನ್ಯವಾದಗಳು ಸರ್ ಬಾಲ್ಯ ನೆನಪಿಸಿದ್ದಕ್ಕೆ.
    ನಿಮ್ಮ ಲೇಖನ ತವರು ಮನೆಗೆ ಹೋದಷ್ಟೇ ಖುಷಿ ನೀಡಿತು.

    Reply

Leave a Reply to Godbole Cancel reply

Your email address will not be published. Required fields are marked *