Daily Archives: May 2, 2014

“ಕಬೀರ್ ನ್ಯಾಯ್ ಮಂಚ್” – ಬೆಂಗಳೂರಿನಲ್ಲೊಂದು ಸಮಾನಮನಸ್ಕರ ಸಭೆ

ಓದುಗರೇ,

ಇತ್ತೀಚಿನ ಲೋಕಸಭೆಯ ಚುನಾವಣೆಯ ಸಂದರ್ಭದಲ್ಲಿ ಅನೇಕ ಜನಪರ ಚಿಂತಕರು ಮತ್ತು ಪ್ರಜ್ನಾವಂತರು ಬಿಜೆಪಿಯನ್ನು ಅದರಲ್ಲೂ ಮುಖ್ಯವಾಗಿ ಮೋದಿಯನ್ನು ಅಧಿಕಾರಕ್ಕೆ ಬರುವುದನ್ನು ತಡೆಯಲು ಕಾಂಗ್ರೆಸ್ ಪಕ್ಷಕ್ಕೆ ಬಹಿರಂಗವಾಗಿ ತಮ್ಮ ಬೆಂಬಲವನ್ನು ಘೋಷಿಸಿದ್ದರು. ಕೋಮುವಾದಿ ಮತ್ತು ಭ್ರಷ್ಟ ಬಿಜೆಪಿ ನೇತೃತ್ವದ ಆಡಳಿತಕ್ಕೆ ಪರ್ಯಾಯವಾಗಿ ಆಯ್ಕೆಗೊಂಡ ಕಾಂಗ್ರೆಸ್ ಪಕ್ಷ ಜನಪರವಾಗಿ ಇರುತ್ತದೆಂದು,ಉತ್ತಮ ಆಡಳಿತ ನೀಡುತ್ತದೆಂದೂ, ಕೋಮುವಾದವನ್ನು,ನೈತಿಕ ಪೋಲೀಸ್ ಗಿರಿಯನ್ನು ಹತ್ತಿಕ್ಕುತ್ತದೆಂದೂ ನಂಬಿದ್ದರು. ಆದರೆ ಒಂದು ವರ್ಷದ ನಂತರ ಕಾಂಗ್ರೆಸ್ ಪಕ್ಷ ಎಷ್ಟರ ಮಟ್ಟಿಗೆ ಬದ್ಧತೆಯಿಂದ, ರಾಜಕೀಯ ಇಚ್ಛಾಶಕ್ತಿಯಿಂದ ಕೆಲಸ ಮಾಡಿದೆ ಎನ್ನುವುದನ್ನು ಆ ಪಕ್ಷವನ್ನು ಬೆಂಬಲಿಸಿದ ಜನಪರ ಚಿಂತಕರೂ ಸೇರಿದಂತೆ ಈ ನಾಡಿನ ಎಲ್ಲಾ ಪ್ರಜ್ನಾವಂತರು ಇಂದು ಪ್ರಶ್ನಿಸುವುದು ಅನಿವಾರ್ಯವಾಗಿದೆ. ಏಕೆಂದರೆ ಕಾಂಗ್ರೆಸ್ ನ ಕಳೆದ ಒಂದು ವರ್ಷದ ಆಡಳಿತ ಜನರ ಈ ಎಲ್ಲಾ ನಿರೀಕ್ಷೆಗಳನ್ನು ಸುಳ್ಳಾಗಿಸಿದೆ. ಇಂತಹ ಸಂದರ್ಭದಲ್ಲಿ ಪ್ರಜ್ಞಾವಂತ ನಾಗರೀಕರ ರಾಜಕೀಯ ಮಧ್ಯಪ್ರವೇಶ ಇಂದು ಅನಿವಾರ್ಯವಾಗಿದೆ ಮತ್ತು ಈ ವೈಫಲ್ಯವನ್ನು ಜನತೆಯ ಹಾಗೂ ಸರ್ಕಾರದ ಗಮನಕ್ಕೆ ತರಬೇಕಾದಂತಹ ತುರ್ತು ಅಗತ್ಯ ನಮ್ಮ ಮುಂದಿದೆ. ಆಡಳಿತವನ್ನು ಸುಧಾರಿಸುವಂತೆ ಹಾಗೂ ನಿರಂತರ ಕಾರ್ಯಪ್ರವೃತ್ತವಾಗಿರುವ ಕೋಮುವಾದಿ ಶಕ್ತಿಗಳನ್ನು ಮಟ್ಟ ಹಾಕುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದೆ.

ಈ ದೃಷ್ಟಿಯಿಂದ ಮೇಲಿನ ಎಲ್ಲಾ ಅಂಶಗಳನ್ನು ವಿಶ್ಲೇಷಣೆಗೆ ಒಳಪಡಿಸಿ ಜನಾಭಿಪ್ರಾಯವನ್ನು ರೂಪಿಸಲು ಒಂದು ಸಮಾನಮನಸ್ಕರ ಸಭೆಯನ್ನು ಕರೆಯಲಾಗಿದೆ.

ತಾರೀಖು 3.5.2014 ರ ಶನಿವಾರ ಮಧ್ಯಾಹ್ನ 3.00 ಕ್ಕೆ ಲಾಲ್ ಭಾಗ್ ರಸ್ತೆಯಲ್ಲಿ, ಪೂರ್ಣಿಮಾ ಚಿತ್ರಮಂದಿರದ ಬಳಿ ಇರುವ ಜೈ ಭೀಮ್ ಭವನದಲ್ಲಿ ಈ ಸಭೆಯನ್ನು ಆಯೋಜಿಸಲಾಗಿದೆ.

ಸಮಾಜದ ಒಳಿತನ್ನು ಬಯಸುವ ಎಲ್ಲಾ ಪ್ರಜ್ನಾವಂತರು, ಜನಪರ ಚಿಂತಕರು ಈ ಸಭೆಯಲ್ಲಿ ಭಾಗವಹಿಸಿ ಮುಂದಿನ ಕಾರ್ಯಕ್ರಮದ ರೂಪುರೇಷಗಳನ್ನು ನಿರ್ಧರಿಸಬೇಕೆಂದು ವಿನಂತಿಸುತ್ತೇವೆ.


ಕೋಟಗಾನಹಳ್ಳಿ ರಾಮಯ್ಯ
ನಗರಗೆರೆ ರಮೇಶ್
ಬಿ. ಶ್ರೀಪಾದ ಭಟ್
ವಾಸು
ಚಂದ್ರಶೇಖರ ಐಜೂರು
ವರ್ತಮಾನ ಬಳಗ