Daily Archives: May 6, 2014

ನಿರಂತರವಾಗಿ ಉತ್ಪಾದಿಸಲ್ಪಡುತ್ತಿರುವ ವೈಭವದ ಮಿಥ್‌ಗಳು

– ಬಿ.ಶ್ರೀಪಾದ ಭಟ್

ಅವನು ಹೇಳುತ್ತಿದ್ದ, ನಾವು ಭವಿಷ್ಯವನ್ನು ರೂಪಿಸುತ್ತಿದ್ದೇವೆ ಎಂದು, ಆದರೆ ಯಾವ ಬಗೆಯ ಭವಿಷ್ಯವನ್ನು ರೂಪಿಸುತ್ತಿದ್ದೇವೆ ಎಂದು ಒಂದು ಚಣ ಸಹ ಚಿಂತಿಸಲು ಸಹ ನಾವು ವಿಫಲರಾಗಿದ್ದರಿಂದ, ಇಗೋ ಇಲ್ಲಿದೆ ಆ ಭವಿಷ್ಯ.
– ಎಚ್.ಜಿ.ವೆಲ್ಸ್

ಯಾವುದಾದರೂ ಒಂದು ಸಂದರ್ಭವನ್ನು, ಒಂದು ಮೂಲವನ್ನು ಆಧರಿಸಿ ಸತ್ಯವೆಂದು ವರದಿ ಮಾಡುವುದು ಮುಕ್ತ ಪತ್ರಿಕೋದ್ಯಮದ ತಿರುಳು ಅಲ್ಲ. ಬದಲಾಗಿ ವಿವಿಧ ಸಾಂದರ್ಭಿಕ ದೃಷ್ಟಾಂತಗಳನ್ನು, ವಿವಿಧ ಮೂಲಗಳನ್ನು ಆಧರಿಸಿ ಸತ್ಯವು ಹೊರಹೊಮ್ಮಬೇಕಾಗುತ್ತದೆ ಮತ್ತು ಅದೇ ಮುಕ್ತ ಪತ್ರಿಕೋದ್ಯಮದ ಮಾದರಿ ಎಂದು ಅಮೇರಿಕಾದ ಖ್ಯಾತ ಪತ್ರಕರ್ತ ವಾಲ್ಟರ್ ಲಿಪ್‌ಮೆನ್ ಅವರು ಬರೆಯುತ್ತಾರೆ.

ಖ್ಯಾತ ಸೋಷಿಯಾಲಿಜಿಸ್ಟ್ ಅಂಡ್ರಿ ಬೆಟೀಲೆ ಅವರು “ನೆಹರೂ ಮತ್ತು ಅಂಬೇಡ್ಕರ್ ಅವರಿಗೆ ಸೆಕ್ಯುಲರಿಸಂ ಸ್ಟೇಟ್ ಎನ್ನುವುದು ಕೇವಲ ಒಂದು ಅನುಕೂಲಸಿಂಧು ಚಿಂತನೆಯಾಗಿರಲಿಲ್ಲ, nehru_ambedkarಬದಲಾಗಿ ಅದು ಒಂದು ದೇಶದ ಗೌರವದ ಸಂಕೇತವೆಂದೇ ನಂಬಿದ್ದರು. ಈ ಸೆಕ್ಯುಲರಿಸಂ ಸ್ಟೇಟ್ ಅನ್ನು ಅಂಬೇಡ್ಕರ್ ಅವರು ಬಹಳ ಸಮರ್ಪಕವಾಗಿ ಅರ್ಥ ಮಾಡಿಕೊಂಡಿದ್ದರು. ಕೇವಲ ದೇಶದಲ್ಲಿನ ರಾಜಕೀಯ ಮತ್ತು ಸಾಮಾಜಿಕ ಪ್ರಕ್ಷುಬ್ಧ ವಾತಾವರಣವು ಸೆಕ್ಯುಲರಿಸಂ ಎಳೆಯನ್ನು ದುರ್ಬಲಗೊಳಿಸುವುದಿಲ್ಲ. ಬದಲಾಗಿ ಅದು ಸೆಕ್ಯುಲರಿಸಂ ಅನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಆದರೆ ಇಂಡಿಯಾದ ಜನಪರ ಚಿಂತಕರು ಮತ್ತು ಪ್ರಜ್ಞಾವಂತರು ಅತ್ಯಂತ ಶಾಂತಿಯುತ ವಾತಾವರಣದ ಸಂದರ್ಭದಲ್ಲಿ ಸೆಕ್ಯುಲರಿಸಂ ಅನ್ನು ಓಲೈಸಿ ಅಥವಾ ಸ್ವೀಕರಿಸಿ ಪ್ರಕ್ಷುಬ್ಧ, ನೀತಿಗೆಟ್ಟ ವಾತಾವರಣದಲ್ಲಿ ಸೆಕ್ಯುಲರಿಸಂ ಅನ್ನು ತ್ಯಜಿಸಿದರೆ ಅದು ಅವರ ಆತ್ಮದ್ರೋಹವಾಗುತ್ತದೆ ಮತ್ತು ದೇಶವನ್ನು ಸೋಲಿಸಿದಂತೆಯೇ ಸರಿ” ಎಂದು ಹೇಳುತ್ತಾರೆ.

ಇಂದು ಇಂಡಿಯಾದಲ್ಲಿ ಅಂತಹ ಪರಿಸ್ಥಿತಿ ತಲೆದೋರಿದೆ. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಪತ್ರಿಕಾ ರಂಗವು ತನ್ನ ಎಲ್ಲ ಮೌಲ್ಯಗಳನ್ನು, ನಿಯಮಗಳನ್ನು ಗಾಳಿಗೆ ತೂರಿ ಇಂದಿನ ಪ್ರಕ್ಷುಬ್ಧ ವಾತಾವರಣದಲ್ಲಿ ಸಂವಿಧಾನದ ಮೂಲ ಆಶಯಗಳಾದ ಸೆಕ್ಯುಲರಿಸಂ ಮತ್ತು ಜಾತ್ಯಾತೀತ ತತ್ವಗಳನ್ನು ತ್ಯಜಿಸಿ ಹುಸಿಯಾದ ಮೋದಿತ್ವವನ್ನು ಗೋಬೆಲ್ಸ್ ಶೈಲಿಯಲ್ಲಿ ವಾಸ್ತವವೆಂದು ಜನತೆಯ ಮೇಲೆ ಹೇರುತ್ತಿದ್ದಾರೆ. ಪತ್ರಕರ್ತ ವಿನೋದ್ ಮೆಹ್ತ ಅವರು “ಈ ಪ್ರಜಾಪ್ರಭುತ್ವದ 2014 ರ ಚುನಾವಣೆಯನ್ನು ಮಾಧ್ಯಮಗಳು ಹೇಗೆ ನಿಭಾಯಿಸಿವೆ? ನನ್ನ ಪ್ರಕಾರ ಮಾಧ್ಯಮಗಳ ವರ್ತನೆ ಮುಸುಕಾದ, ಮೋಸದ, ಕಿವಿಗಡುಚಿಕ್ಕುವ, ಅಸ್ಥಿರವಾದ, ಕಪಟವಾದ, ಅರ್ಧಸತ್ಯದ, ಅಪರೂಪಕ್ಕೆ ಮಾದರಿಯಾದ ನಡೆಗಳಾಗಿಯೇ ಗೋಚರಿಸುತ್ತಿದೆ. ಅಂದರೆ ಮಾಧ್ಯಮಗಳ ವರ್ತನೆ 2014 ರ ಚುನಾವಣೆಯ ಸಂದರ್ಭದ ರಾಜಕೀಯ ಪಕ್ಷಗಳ ನಡತೆಯನ್ನು ಪ್ರತಿಬಿಂಬಿಸುತ್ತಿವೆ ಅಷ್ಟೇ.” ಎಂದು ಹೇಳುತ್ತಾರೆ. ಕಳೆದ ವಾರ ಬಿಜೆಪಿ ಪಕ್ಷದ ಮೀನಾಕ್ಷಿ ಲೇಖಿ ಅವರು ನರೇಂದ್ರ ಮೋದಿಯನ್ನು ಟೀಕಿಸುವ, ವಿಮರ್ಶಿಸುವ ಪತ್ರಕರ್ತರಿಗೆ ನೆಟ್ಟಗೆ ವರ್ತಿಸುವಂತೆಯೂ, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಭಾರೀ ಬೆಲೆ ತೆರಬೇಕಾಗಬಹುದೆಂದು ಚರ್ಚೆಯ ಸಂದರ್ಭದಲ್ಲಿ ಹೇಳಿದರು. modi_bsyeddyurappaಇದನ್ನು ಉದಾಹರಿಸುತ್ತ ವಿನೋದ್ ಮೆಹ್ತ ಅವರು ಅಂದರೆ ಇನ್ನು ವಸ್ತುನಿಷ್ಟ, ನ್ಯಾಯಪರ ಪತ್ರಕರ್ತರ ನೆತ್ತಿಯ ಮೇಲೆ ಸದಾ ತೂಗುಕತ್ತಿ ನೇತಾಡುತ್ತಿರುತ್ತದೆ ಎಂದರ್ಥ. ಒಂದು ವೇಳೆ ಮೋದಿ ಪ್ರಧಾನಮಂತ್ರಿಯಾದರೆ ಈ ಪತ್ರಕರ್ತರಿಗೆ ತಕ್ಕ ಶಾಸ್ತಿ ಕಲಿಸುವುದು ಖಂಡಿತ ಎನ್ನುವ ಮಾತುಗಳು ಇಂದು ಮಾಧ್ಯಮ ವಲಯಗಳಲ್ಲಿ ಚರ್ಚಿತಗೊಳ್ಳುತ್ತಿವೆ. ಇದಕ್ಕೆ ಉದಾಹರಣೆಯಾಗಿ ಗುಜರಾತ್‌ನಲ್ಲಿ ಪ್ರತೀಕಾರದ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಇಡೀ ವಾತಾವರಣವೇ ಭಯಗ್ರಸ್ಥ ಮತ್ತು ಆತಂಕದಿಂದ ತುಂಬಿದೆ ಎಂದು ಬರೆಯುತ್ತಾರೆ.

ಎಡ್ವರ್ಡ ಸೈದ್ ಓರಿಯಂಟಲಿಸಂ ಕುರಿತು ಬರೆಯುತ್ತಾ “orientals ರನ್ನು ಅಮಾನವೀಯರೆಂದೇ ಗೇಲಿಪಡಿಸಲಾಗುತ್ತಿತ್ತು. ಇಲ್ಲಿ ನಾವು ಮತ್ತು ಅವರೆನ್ನುವ ಸ್ಪಷ್ಟ ಗೆರೆಯನ್ನೆಳೆಲಾಗಿತ್ತು. orientals ಅನಾಗರಿಕರೆಂದೇ ಭಾವಿಸಲಾಗುತ್ತಿತ್ತು. ಯುರೋಪಿಯನ್ನರು ನಾವು orientals ರನ್ನು ನಿರ್ಧರಿಸುತ್ತಿದ್ದೇವೆ ಎಂದು ಭಾವಿಸಿದರು. ಉದಾಹರಣೆಗೆ orientals ರೆಂದರೆ ಅನಾಗರಿಕರು, ಸೋಮಾರಿಗಳು, ಕ್ರೂರಿಗಳು ಎಂದು ಪರಿಗಣಿಸಿಲಾಯಿತು. ಆಗ ಸಹಜವಾಗಿಯೇ ಈ ಯುರೋಪಿಯನ್ನರು ತಮ್ಮನ್ನು ನಾಗರೀಕರು, ಸೌಮ್ಯವಾದಿಗಳು, ಶಾಂತಿಪ್ರಿಯರೆಂದೇ ಬಿಂಬಿಸಿಕೊಳ್ಳತೊಡಗಿದರು. ಈ ಮೂಲಕ orientals ರ ಬಹುರೂಪಿ ಸಾಂಸ್ಕೃತಿಕ ಅವೈದಿಕ ಪರಂಪರೆಯನ್ನು ಸಾಮಾನ್ಯೀಕರಿಸತೊಡಗಿದರು” ಎಂದು ಹೇಳಿದ್ದಾರೆ. ಇದನ್ನು ನಾವು ಇಂಡಿಯಾದ ಸಂದರ್ಭದಲ್ಲಿ ವಿಶ್ಲೇಷಿಸಿದಾಗ ಈ ಸಂಘ ಪರಿವಾರವು ತನ್ನನ್ನು ಮತ್ತುedward-said-orientalism ಹಿಂದೂ ಸಂಸ್ಕೃತಿಯನ್ನು ಮೇಲ್‍ಸ್ತರದಲ್ಲಿ ಗುರುತಿಸಿಕೊಂಡು ಉಳಿದವರನ್ನೆಲ್ಲಾ orientals ರಂತೆಯೇ ಚಿತ್ರಿಸುತ್ತಿರುವುದು ನಮ್ಮ ಕಣ್ಣ ಮುಂದಿದೆ.

ಇಂದು ಕೋಮು ಸೌಹಾರ್ದತೆ ಮತ್ತು ಒಳಗೊಳ್ಳುವಿಕೆಯ ಚಿಂತನೆಗಳನ್ನು ಸಿಕ್ಯುಲರ್‌ಗಳು ಎಂದು ತೀವ್ರವಾಗಿ ಗೇಲಿ ಮಾಡಲಾಗುತ್ತಿದೆ. ಇದು ಅಡ್ವಾನಿ ಕಾಲದ ಗೇಲಿಯ ಪದವಾಗಿದ್ದ ಸೂಡೋ ಸೆಕ್ಯುಲರ್‌ನ ಮುಂದುವರಿದ ಭಾಗದಂತೆ ಕಂಡುಬಂದರೂ ಈ ಸಿಕ್ಯುಲರ್ ಎನ್ನುವ ಅಣಕದ ಹಿಂದೆ ನೆತ್ತರ ದಾಹದ ಕ್ರೌರ್ಯವಿದೆ. ಚಿಂತಕ ಹಸನ್ ತರೂರ್ ಅವರು “ಇಂದು ಈ ಸಿಕ್ಯುಲರ್ ತರಹದ ಆಪಾದನೆಗಳಿಗೆ ಕಾಂಗ್ರೆಸ್ ಮಾದರಿಯ ಸೆಕ್ಯುಲರ್ ರಾಜಕಾರಣವೂ ಸಹ ಒಂದು ಮುಖ್ಯ ಕಾರಣ. ಸ್ವಾತಂತ್ರದ ನಂತರ ಮುಸ್ಲಿಂ ಮೂಲಭೂತವಾದಿಗಳು ಸಮುದಾಯದ ನಾಯಕತ್ವನ್ನು ವಹಿಸಿಕೊಂಡು ಇಡೀ ಸೆಕ್ಯುಲರ್ ತತ್ವದ ಮೂಲ ಆಶಯಕ್ಕೆ ತಿಲಾಂಜಲಿ ನೀಡಿದರು. ದಿನನಿತ್ಯದ ಜಂಜಡಗಳಲ್ಲಿ ಮುಳುಗಿ ಹೋಗಿರುವ ಲಕ್ಷಾಂತರ ಜನಸಾಮಾನ್ಯ ಮುಸ್ಲಿಂರಿಗೆ ಈ ಧಾರ್ಮಿಕತೆಯ ನೀತಿಗಳು ಎಂದಿಗೂ ಪ್ರಮುಖವೆನಿಸಿರಲೇ ಇಲ್ಲ. ಆದರೆ ಇವನ್ನು ಸೆಕ್ಯುಲರಿಸಂನ ಹೆಸರಿನಲ್ಲಿ ಸಾರ್ವಜನಿಕವಾಗಿ ಬಳಕೆಗೆ ತರಲಾಯಿತು. ಒಂದು ವೇಳೆ ಈ ಧಾರ್ಮಿಕ ನೀತಿಗಳನ್ನು ಪಾಲಿಸಲು ವಿಫಲರಾದರೆ ಸೆಕ್ಯುಲರಿಸಂ ಸೋತಿದೆ ಎಂದೇ ವಿಶ್ಲೇಷಿಸಲಾರಂಬಿಸಿದರು.” ಎಂದು ಹೇಳುತ್ತಾರೆ. ಅಲ್ಪ ಸಂಖ್ಯಾತರ ಮೇಲೆ ಸಂಘ ಪರಿವಾರದ ನಿರಂತರ ಆಕ್ರಮಣ, ಹಲ್ಲೆಗಳು ಮತ್ತು ಇತರೇ ರಾಜಕೀಯ ಪಕ್ಷಗಳ ಬೋಗಸ್ ಮಾದರಿಯ ಸೆಕ್ಯುಲರ್ ರಾಜಕಾರಣದಿಂದ ಸಂಪೂರ್ಣವಾಗಿ ಕಂಗೆಟ್ಟ ಹೊಸ ತಲೆಮಾರಿನ ಮುಸ್ಲಿಂ ಯುವಕರು ಹಳೆ ತಲೆಮಾರಿನ ರಾಜಕಾರಣವನ್ನು ತಿರಸ್ಕರಿಸುತ್ತಿದ್ದಾರೆ. ನಮಗೆ ಇನ್ನು ಹೊಸ ನೋಟಗಳು ಬೇಕಾಗಿವೆ ಎಂದು ತುಡಿಯುತ್ತಿರುವ ಈ ಮುಸ್ಲಿಂ ಯುವಕರು ಇಂದು ಚಾಲ್ತಿಯಲ್ಲಿರುವ ಅಭಿವೃದ್ಧಿಯ ಮಂತ್ರದತ್ತ ಕಣ್ಣಾಯಿಸುತ್ತಿದ್ದಾರೆ. ಅಭಿವೃದ್ಧಿಯನ್ನು ಬಳಸಿಕೊಂಡು ಹಿಂದೂ ಮಧ್ಯಮವರ್ಗ ಆರ್ಥಿಕವಾಗಿ ಸಧೃಡವಾಗಿತ್ತಿರುವುದನ್ನು ಉದಾಹರಿಸುವ ಈ ಮುಸ್ಲಿಂ ಯುವಕರು ಅದನ್ನೇ ತಮ್ಮ ಸಮುದಾಯಕ್ಕೂ ಬಳಸಿಕೊಳ್ಳಬೇಕು ಎಂದು ತುಡಿಯುತ್ತಿದ್ದಾರೆ.

ಇಂತಹ ಪ್ರಕ್ಷುಬ್ಧ ಸಂದರ್ಭದಲ್ಲಿ ಅಖಂಡ ಭಾರತದಲ್ಲಿ ಎಲ್ಲರೂ ಸಮಾನರು ಎಂದು ಎಚ್ಚರಿಸುತ್ತಾ, ಅಭಿವೃದ್ಧಿ ಮಂತ್ರವನ್ನು ಜಪಿಸುತ್ತಾ ಸಂಘ ಪರಿವಾರ ಲಗ್ಗೆ ಇಡುತ್ತಿದೆ. ಮುಸ್ಲಿಂರು ಮತ್ತು ದಲಿತರು ಹೆಚ್ಚಿನ ಜನಸಂಖ್ಯೆಯಲ್ಲಿರುವ, ಧಾರ್ಮಿಕ ಸಾಮರಸ್ಯಕ್ಕೆ ಹೆಸರುವಾಸಿಯಾಗಿದ್ದ ವಾರಣಾಸಿಯನ್ನು ಹಿಂದುತ್ವದ ಆಡೊಂಬಲವಾಗಿ ಪರಿವರ್ತಿಸುತ್ತಿದ್ದಾರೆ. ಇದು ಮತ್ತೊಂದು ಅಯೋಧ್ಯೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಮೊನ್ನೆ ಮೋದಿ ವಾರಣಾಸಿಯಲ್ಲಿ ನಾಮಪತ್ರವನ್ನು ಸಲ್ಲಿಸುವ ಸಂದರ್ಭದ ವಿವರಗಳನ್ನು ಗಮನಿಸಿ. ಮೋದಿ ಮತ್ತವರ ತಂಡ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಬಳಿ ಇರುವ ಮದನ್ ಮೋಹನ ಮಾಳವೀಯ ಅವರ ಪ್ರತಿಮೆಗೆ ಹಾರ ಹಾಕುವುದರ ಮೂಲಕ ಪ್ರಾರಂಭಗೊಂಡ ಈ ಮೆರವಣಿಗೆ ನಂತರ ಸರ್ದಾರ್ ವಲ್ಲಭಾಯಿ ಪಟೇಲರ ಪ್ರತಿಮೆಗೆ ಹಾರ ಹಾಕಿ ಮುಂದುವರೆಯಿತು. ಈ ಮೂಲಕ ಮೂಲತಃ ರಾಷ್ಟ್ರೀಯವಾದಿ ಕಾಂಗ್ರೆಸಿಗರಾಗಿದ್ದ ಮಾಳವೀಯ ಮತ್ತು ವಲ್ಲಭಾಯಿ ಪಟೇಲರನ್ನು ಸಂಘಪರಿವಾರದವರಾಗಿ ಪಕ್ಷಾಂತರಗೊಳಿಸಲಾಯಿತು. ನಂತರ ಮೋದಿಯ ಈ ರೋಡ್ ಷೋ ವಿವೇಕಾನಂದರ ಪ್ರತಿಮೆಯ ಬಳಿಗೆ ಬಂದು ಹಾರವನ್ನು ಹಾಕಿ ಮುಂದುವರೆಯಿತು. ಈ ಮೂಲಕ ವಿವೇಕಾನಂದರನ್ನು ಹಿಂದುತ್ವದ ಪ್ರತಿನಿಧಿಯೆಂದೇ ಘೋಷಿಸಲಾಯಿತು. ಕಡೆಗೆ ಅಂಬೇಡ್ಕರ್ ಪ್ರತಿಮೆಯ ಬಳಿ ಬಂದು ಅವರ ಪ್ರತಿಮೆಗೆ ಹಾರ ಹಾಕಿದರು ನರೇಂದ್ರ ಮೋದಿ. ಅಲ್ಲಿಗೆ ಇಡೀ ಪ್ರಹಸನ ಒಂದು ತಾರ್ಕಿಕ ಅಂತ್ಯಕ್ಕೆ ತಲುಪಿ ದಲಿತರಿಗೆ ನೀವು ಬಾಣಗಳಾಗಲು ತಯಾರಾಗಿ ಎನ್ನುವ ಸಂದೇಶವನ್ನು ಸಾರಲಾಯಿತು. ಇದಷ್ಟನ್ನು ಸಂಪೂರ್ಣವಾಗಿ ಯೋಜನಬದ್ಧವಾಗಿ ರೂಪಿಸಲಾಯಿತು. ಸಂಘ ಪರಿವಾರದ ದುಷ್ಟತನಕ್ಕೆ, Modi-roadshow-varanasiಕ್ರೌರ್ಯಕ್ಕೆ ಎಲ್ಲೆಯೇ ಇಲ್ಲದಂತೆ ಸರಣಿಯೋಪಾದಿಯಲ್ಲಿ ಕ್ರಿಯೆಗಳು ಪ್ರತಿಕ್ರಿಯೆಗಳು ನಿರಂತರವಾಗಿ ಚಾಲ್ತಿಯಲ್ಲಿವೆ.

ಇನ್ನು ಗುಜರಾತ್‌ನ ಅಭಿವೃಧ್ಧಿಯ ಹುಸಿತನವನ್ನು ಕುರಿತಾಗಿ ಪುಟಗಟ್ಟಲೆ ದಾಖಲೆ ಸಮೇತ ಮಂಡಿಸಲಾಗಿದೆ. ಕೆಲವು ಉದಾಹರಣೆಗಳೆಂದರೆ ಮೋದಿಯ ಆಡಳಿತದ ಗುಜರಾತ್‌ನ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಮುಕ್ಕಾಲು ಭಾಗದಷ್ಟು ಪ್ರಾಧ್ಯಾಪಕರ ಹುದ್ದೆಗಳಿಗೆ ಹಲವಾರು ವರ್ಷಗಳಿಂದ ನೇಮಕಾತಿ ಮಾಡಿಲ್ಲ. ಇಂದಿಗೂ ಖಾಲಿ ಇವೆ. ಅತಿಥಿ ಪ್ರಾಧ್ಯಾಪಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಇದು ಸಂಪೂರ್ಣ ಕಾರ್ಪೋರೇಟ್ ಶೈಲಿ. ಆದರೆ ಇದು ಸಂವಿಧಾನ ಆಶಯಗಳಿಗೆ ವಿರೋಧವಾದದ್ದು. ಗುಜರಾತ್‌ನ ಮಾನವ ಸಂಪನ್ಮೂಲದ ಕ್ರಮಾಂಕ ದೇಶದಲ್ಲಿಯೇ ಹನ್ನೊಂದನೇ ಸ್ಥಾನದಲ್ಲಿದೆ. ಮಕ್ಕಳ ಪೌಷ್ಠಿಕತೆಯಲ್ಲಿ ಹದಿನೈದನೇ ಸ್ಥಾನದಲ್ಲಿದೆ. ಬಡತನದ ಕ್ರಮಾಂಕವನ್ನು ಅಭಿವೃದ್ಧಿಯ ಕ್ರಮದಲ್ಲಿ ಹದಿನೈದನೇ ಸ್ಥಾನದಲ್ಲಿದೆ. ಸಾಕ್ಷರತೆಯಲ್ಲಿ ಹನ್ನೊಂದನೇ ಸ್ಥಾನದಲ್ಲಿದೆ. ಮುಕ್ಕಾಲು ಭಾಗದ ಗ್ರಾಮಸ್ಥರು ಇಂದಿಗೂ ಬಯಲು ಶೌಚಾಲಯವನ್ನು ಬಳುಸುತ್ತಾರೆ. ಕಳೆದ ಹತ್ತು ವರ್ಷಗಳಲ್ಲಿ ಗುಜರಾತ್ ರಾಜ್ಯದ ಸಾಲದ ಮೊತ್ತ 1,85,310 ಕೋಟಿಯಷ್ಟಿದೆ. ಆದರೆ ಈ ಸತ್ಯಗಳನ್ನು ಬಹುಪಾಲು ಮಾಧ್ಯಮಗಳು ಮರೆಮಾಚಿದ್ದು ಪ್ರಜಾಪ್ರಭುತ್ವದ ಆಶಯಗಳಿಗೆ ಒಂದು ದೊಡ್ಡ ಪೆಟ್ಟು.

ಕಳೆದ 13 ವರ್ಷಗಳ ಮೋದಿಯ ಗುಜರಾತ್ ಸರ್ಕಾರದಲ್ಲಿ ಒಬ್ಬನೇ ಒಬ್ಬ ಅಲ್ಪಸಂಖ್ಯಾತ ಪ್ರತಿನಿಧಿ ಇಲ್ಲ. ಇದನ್ನು ಭಾರತ ಭಾಗ್ಯವಿಧಾತರೆಲ್ಲ ನೆನಪಿನಲ್ಲಿಟ್ಟುಕೊಳ್ಳಬೇಕು. ಅಸ್ಸಾಂನಲ್ಲಿ ಚುನಾವಣಾ ಭಾಷಣ ಮಾಡುತ್ತ ತಾನು ಅಧಿಕಾರಕ್ಕೆ ಬಂದರೆ ಬಾಂಗ್ಲಾದಿಂದ ಬಂದ ಹಿಂದೂ ವಲಸಿಗರಿಗೆ ಆಶ್ರಯವನ್ನು ಕಲ್ಪಿಸಲಾಗುವುದು ಮತ್ತು ಬಾಂಗ್ಲಾ ವಲಸಿಗರಾದ ಮುಸ್ಲಿಂರನ್ನು ಆಕ್ರಮವೆಂದು ಪರಿಗಣಿಸಿ ದೇಶದಿಂದ ಒದ್ದೋಡಿಸಲಾಗುವುದು ಎಂದು ತಮ್ಮ ಇತ್ತೀಚಿನ ಚುನಾವಣ ಭಾಷಣದಲ್ಲಿ ಮೋದಿ ಗುಡುಗಿದ್ದರು. ( ಎಕನಾಮಿಕ್ಸ್ ಟೈಮ್ಸ್ 5.5.2014). ಮೋದಿಯ ಈ ಪ್ರಚೋದನಕಾರಿ ಮತೀಯವಾದಿ ಭಾಷಣದ ಕೆಲವು ದಿನಗಳ ನಂತರ ಮೇ ಮೊದಲನೇ ವಾರದಲ್ಲಿ ಅಸ್ಸಾಂ ರಾಜ್ಯದಲ್ಲಿ ಕೋಮು ಗಲಭೆಗಳು ಮತ್ತೆ ಭುಗಿಲೆದ್ದು ಬೋಡೋ ಮತೀಯವಾದಿಗಳ ಹಲ್ಲೆಗಳಿಂದ ಸುಮಾರು 32 ಅಮಾಯಕರು ಸಾವನ್ನಪ್ಪಿದ್ದಾರೆ. ಏಪ್ರಿಲ್ 2013 ರಂದು ಉತ್ತರ ಪ್ರದೇಶದ ಹೊಣೆ ಹೊತ್ತುಕೊಂಡು ಅಲ್ಲಿಗೆ ಬಂದ ಮೋದಿಯ ಬಲಗೈ ಬಂಟVillagers with their belongings move to relief camps as they leave their locality after violence at Chirang district ಅಮಿತ್ ಷಾ ಕಾಲಿಟ್ಟ ಕೆಲವೇ ತಿಂಗಳುಗಳ ನಂತರ ಮುಝಫರ್ ನಗರ್ ಜಿಲ್ಲೆಯಲ್ಲಿ ಕೋಮು ಗಲಭೆಗಳು ಭುಗಿಲೆದ್ದವು. ಅಪಾರ ಸಾವುನೋವುಗಳು ಸಂಭವಿಸಿದವು. ಆ ಕೋಮು ಗಲಭೆ 2014 ರ ಚುನಾವಣೆಯಲ್ಲಿ ಸಂಘಪರಿವಾರದ ಪರವಾದ ಫಲಿತಾಂಶಕ್ಕೆ ದಿಕ್ಸೂಚಿಯಾಗಿ ಹೋಯ್ತು. ಇಡೀ ಓಬಿಸಿ ಹಿಂದೂಗಳ ಧೃವೀಕರಣವನ್ನು ಸಾಧಿಸಲು ಬಿಜೆಪಿ ಯಶಸ್ವಿಯಾಯಿತು. ಅದಕ್ಕಾಗಿ ನೂರಾರು ಮುಸ್ಲಿಂ ಮತ್ತು ದಲಿತ ಅಮಾಯಕರು ಪ್ರಾಣ ಕಳೆದುಕೊಳ್ಳಬೇಕಾಯಿತು. ಇದು ಅಧಿಕಾರಕ್ಕಾಗಿ ಹಪಾಹಪಿಸುವ ಸಂಘಪರಿವಾರದ ಮತೀಯವಾದದ ಶೈಲಿ. ಇದು ಕಳೆದ ಎಂಬತ್ತು ವರ್ಷಗಳಿಂದ ಜಾರಿಯಲ್ಲಿದೆ.

ಮತ್ತೊಂದು ಕಡೆ ಇದೇ ಮೋದಿಯು ಎಪ್ರಿಲ್ 2 ರಂದು ಮಾತನಾಡುತ್ತ, ತಾನು ಪ್ರಧಾನಮಂತ್ರಿಯಾದ ನಂತರ ಪಿಂಕ್ ರೆವಲ್ಯೂಷನ್ (ದನದ ಮಾಂಸದ ರಫ್ತು) ಅನ್ನು ಕೊನೆಗೊಳಿಸುತ್ತೇನೆ ಎಂದು ಭರವಸೆ ಕೊಡುತ್ತಿದ್ದಾರೆ. ಮತ್ತೊಂದು ಕಡೆ ತಮ್ಮ ಭಾಷಣದಲ್ಲಿ ಸಬ್ಕಾ ( ಸಮಾಜವಾದಿ, ಬಹುಜನ ಪಕ್ಷ, ಕಾಂಗ್ರೆಸ್) ದ ವಿನಾಶ ಶತಸಿದ್ಧ ಎಂದು ಹೇಳಿರುವ ಮೋದಿ ಮುಂದುವರೆದು “ಕಾಂಗ್ರೆಸ್ ಮುಕ್ತ ಭಾರತ್”ಗಾಗಿ ತನ್ನನ್ನು ಚುನಾಯಿಸಬೇಕೆಂದು ಕೋರಿಕೊಂಡಿದ್ದಾರೆ. ಅಂದರೆ ಏನರ್ಥ? ಈ ಎಲ್ಲಾ ಮಾತುಗಳು ಯಾವುದೇ ಸಣ್ಣ ಪುಟ್ಟ ಪುಢಾರಿ ಹೇಳಿದ್ದಲ್ಲ. ಭವಿಷ್ಯದ ಪ್ರಧಾನಿಯ ಎಂದೇ ಕರೆಸಿಕೊಂಡವರ ಬಾಯಿಂದ ಬಂದಂತಹವು. ಇದು ಇವರ ಎಕೆ47, ಎಕೆ ಅಂಟೋನಿ, ಎಕೆ 49ನ ಮತಾಂಧ ಹೇಳಿಕೆಯ ಮುಂದುವರೆದ ಭಾಗ. ಮೋದಿಯವರ ಬಲಗೈ ಬಂಟ ಅಮಿತ್ ಷಾ ತೋಳೇರಿಸುತ್ತ ದಿನಕ್ಕೊಮ್ಮೆ ವಿವಿಧ ಬಗೆಯ ಪ್ರತೀಕಾರದ ಮಾತನಾಡುತ್ತಿದ್ದಾರೆ. ಇವರ ಗುಜರಾತ್‌ನ ಪ್ರತೀಕಾರದ ಮಾದರಿಯನ್ನು ಕಂಡ ಪ್ರಜ್ಞಾವಂತರೆಲ್ಲಾ ಬೆಚ್ಚಿಬೀಳುತ್ತಿದ್ದಾರೆ. ಮೇ 4ರಂದು ಉತ್ತರ ಪ್ರದೇಶದ ಅಜಮಗರ್ ಕ್ಷೇತ್ರದಲ್ಲಿ ಮಾತನಾಡುತ್ತಾ ಈ ಕ್ಷೇತ್ರವು ಭಯೋತ್ಪಾದಕರನ್ನು ಉತ್ಪಾದಿಸುವ ಊರೆಂದು ಹೇಳಿಕೆ ನೀಡಿದ್ದಾರೆ. ಇನ್ನು ಬಿಹಾರನ ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಮೋದಿಯನ್ನು ವಿರೋಧಿಸುವವರೆಲ್ಲಾ ಪಾಕಿಸ್ತಾನಕ್ಕೆ ಹೋಗಬೇಕಾಗುತ್ತದೆ ಎಂದು ಗುಡುಗಿದ್ದಾರೆ. ಇನ್ನು ಪ್ರವೀಣ್ ತೊಗಾಡಿಯಾ ‘ಮುಸ್ಲಿಂ ಮೊಹಲ್ಲಗಳನ್ನು ವರ್ಗೀಕರಿಸಿ ನಂತರ ಅವನ್ನು ಶುದ್ಧೀಕರಿಸಿ ಅದರಿಂದ ಮುಸ್ಲಿಂರನ್ನು ಪ್ರತ್ಯೇಕಿಸಿ’ ಹೀಗೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಬಿಜೆಪಿಯನ್ನು ಬೆಂಬಲಿಸಿದ ರಾಮದೇವ್ ಎನ್ನುವ ಸನ್ಯಾಸಿ ದಲಿತರ ಕುರಿತಾಗಿ ಅವಹೇಳನಕರವಾಗಿ ಮಾತನಾಡಿದ್ದಾರೆ. ಇವರ ಈ ಮಾತುಗಳನ್ನು ಸಂಘರಿವಾರ ಸಮರ್ಥಿಸಿಕೊಂಡಿದೆ. ಮೊನ್ನೆಯ ಚುನಾವಣಾ ಭಾಷಣದಲ್ಲಿ ಮೋದಿಯು ಕಷ್ಟದ ಕೆಲಸಗಳನ್ನು ನಿಭಾಯಿಸಲು ದೇವರು ಕೆಲವರನ್ನು ಆರಿಸುತ್ತಾನೆ. ಬಹುಶ ದೇವರು ನನ್ನನ್ನು ಆರಿಸಿರಬಹುದು ಎಂದು ಹೇಳಿ ಕಟ್ಟಕಡೆಗೆ ದೇವರನ್ನು ಎಳೆದು ತಂದಿದ್ದಾರೆ. ಮೋದಿ ಪ್ರಧಾನಮಂತ್ರಿಯಾಗುತ್ತಾರೆಂದು ಗೊತ್ತಾಗಿ ಪಾಕಿಸ್ತಾನ ಮತ್ತು ಚೀನಾ ದೇಶಗಳಲ್ಲಿ ನಡುಕ ಉಂಟಾಗಿದೆ ಅಂತೆ ಎನ್ನುವಂತಹ ಸುದ್ದಿಗಳು ಗಾಳಿಯಲ್ಲಿ ಸಿಕ್ಕಾಪಟ್ಟೆ ತೇಲುತ್ತಿವೆ. ಇನ್ನು ರಾಮ ಜನ್ಮಭೂಮಿ, ಆರ್‍ಟಿಕಲ್ 370, ಅಖಂಡ ಹಿಂದುತ್ವ ಹೀಗೆ ಮತೀಯವಾದಿ ಅಜೆಂಡಾಗಳನ್ನು ಬಗಲಲ್ಲಿ ಇರಿಸಿಕೊಂಡ ಆರೆಸಸ್ 2014 ರ ಚುನಾವಣೆಯ ಇಡೀ ವಿದ್ಯಾಮಾನಗಳನ್ನು ಕಂಡು ಪುಳಕಿತಗೊಂಡಂತಿದೆ. ಎಲ್ಲವೂ ತಾನು ಎಣಿಸಿದ ಹಾದಿಯಲ್ಲಿ ಸಾಗುತ್ತಿರುವುದು ಆರೆಸಸ್‌ನ ಮಹತ್ವಾಕಾಂಕ್ಷೆ ಗರಿಗೆದರುತ್ತಿದೆ. ಮೋದಿ ಅಧಿಕಾರಕ್ಕೆ ಬರುತ್ತಾರೆನ್ನುವ ಗಾಳಿ ಸುದ್ದಿಗಳೇ ಇಡೀ ಕೋಮುವಾದಿ ಶಕ್ತಿಗಳನ್ನು ಧೃವೀಕರಿಸಿ ಅಧಿಕಾರಕ್ಕೆ ಚಿಮ್ಮು ಹಲಗೆಯಾಗಿ ರೂಪುಗೊಂಡಿರುವುದು ಆರೆಸಸ್‌ಗೆ ಮೊಟ್ಟ ಮೊದಲ ಗೆಲುವಿನ ಸಂಭ್ರಮವನ್ನು ತಂದುಕೊಡುತ್ತಿದೆ.

ಹೋರಾಟಗಾರ್ತಿ ಮೇರಿ ಮಾರ್ಸೆಲ್ ಅವರು “ಚೋಮಸ್ಕಿಯ Manufacturing Consent ಚಿಂತನೆಗೆ ಇಂದಿನ 2014 ರ ಚುನಾವಣೆಯ ಇಡೀ ಪ್ರಹಸನ ಮತ್ತು ಕಾಲಘಟ್ಟ ಅತ್ಯಂತ ಸಮರ್ಪಕ ಉದಾಹರಣೆ. ಒಂದು ಸುಳ್ಳನ್ನು ನೂರು ಬಾರಿ ಹೇಳಿ ಸತ್ಯವೆಂದು ಸಾಧಿಸುವ ನಾಜಿಗಳ ಗೋಬೆಲ್ಸ್ ತಂತ್ರವನ್ನು ಕಾರ್ಪೋರೇಟ್ ಮತ್ತು ಮಾಧ್ಯಮಗಳು ಒಟ್ಟಾಗಿ ಕೈಜೋಡಿಸಿ ಸಂಘಪರಿವಾರದ ಪರವಾಗಿ ಯಶಸ್ವಿಯಾಗಿ ಜಾರಿಗೊಳಿಸಿವೆ. ಇದು ಲೇಖಕಿಯಾಗಿ ನನ್ನಂತವಳು ನನ್ನ ಹೆಸರಿನೊಂದಿಗೆ ಅನೇಕ ಬಗೆಯ ವಿರೋಧಗಳನ್ನು ಎದುರಿಸಿ ಬದುಕಬೇಕಾದಂತಹ ಸಂದರ್ಭ. ಇತ್ತೀಚೆಗೆ ನನ್ನ ಬ್ಲಾಗ್‌ನಲ್ಲಿ ರೋಮ್‌ಗೆ ಮರಳಿ ಹೋಗು ಎನ್ನುವಂತಹ ಸಂದೇಶಗಳು ಬರುತ್ತಿವೆ. ಭಾರತೀಯಳಾದ ನಾನು ಮತ್ತು ನನ್ನಂತಹ ಇನ್ನಿತರ ಅಲ್ಪಸಂಖ್ಯಾತರೆಲ್ಲ ಇಂತಹ ಲುಂಪೆನ್ ಶಕ್ತಿಗಳನ್ನು ಎದುರಿಸುವ ಮಾರ್ಗಗಳನ್ನು ಪ್ರತಿದಿನ ಹುಡುಕಬೇಕಾಗಿದೆ. ಅಂದರೆ ಒಂದುವೇಳೆ ಇಂಡಿಯಾದ ಅಲ್ಪಸಂಖ್ಯಾತರನ್ನೆಲ್ಲಾ, ಅಥವಾ ಸಂಘಪರಿವಾರದ ವಿರೋಧಿಗಳನ್ನೆಲ್ಲ ಸಂವಿಧಾನಕ್ಕೆ, ಪ್ರಜಾಪ್ರಭುತ್ವದ ವ್ಯವಸ್ಥೆಗೆ ಬದ್ಧರಾಗದಿದ್ದಾರೋ ಇಲ್ಲವೋ ಇದು ಮುಖ್ಯವಲ್ಲ, ಆದರೆ ಮೋದಿಗೆ ಬದ್ಧರಾಗಿರದಿದ್ದರೆ ಈ ದೇಶದಿಂದ ಓಡಿಸಲಾಗುತ್ತದೆ. ಇಂತಹ ಫ್ಯಾಸಿಸ್ಟ್ ಸಿದ್ಧಾಂತವನ್ನು ಕಾರ್ಪೋರೇಟ್ ವಲಯ ಹೇಗೆ ಬೆಂಬಲಿಸುತ್ತಿವೆ ಎಂಬುದು ಇಂದಿಗೂ ಅಚ್ಚರಿಯ ವಿಷಯ. ಅನಿವಾಸಿ ಭಾರತೀಯರು ಈ ಅಧ್ಯಕ್ಷೀಯ ಶೈಲಿಯ ಅಧ್ಯಕ್ಷ ಮೋದಿಗೆ ತಮ್ಮ ಹಣವನ್ನು ಅನುದಾನವಾಗಿ ಸುರಿಯುತ್ತಿವೆ ಎಂದರೆ ಏನರ್ಥ? ಈ ಅನಿವಾಸಿ ಭಾರತೀಯರು ತಾವು ವಾಸಿಸುತ್ತಿರುವ ಅಮೇರಿಕಾ ಮತ್ತು ಯುರೋಪಿನ ರಾಷ್ಟ್ರಗಳಿಗೆ ತಾವು ಅಲ್ಪಸಂಖ್ಯಾತರನ್ನು ದೇಶದಿಂದ ಒದ್ದೋಡಿಸುವ ಚಿಂತನೆಯುಳ್ಳ ಪಕ್ಷಕ್ಕೆ ಮತ್ತು ವ್ಯಕ್ತಿಗೆ ಬೆಂಬಲಿಸುತ್ತಿದ್ದೇವೆ ಎಂದು ಹೇಳಬಯಸುತ್ತಿವೆಯೇ? ಹಾಗಿದ್ದಲ್ಲಿ ಅಲ್ಲಿನ ಬಹುಸಂಖ್ಯಾತರು ಇದೇ ಮಾನದಂಡವನ್ನು ಅನುಸರಿಸಿ ಈ ಅಲ್ಪಸಂಖ್ಯಾತರಾದ ಹಿಂದು ಅನಿವಾಸಿ ಭಾರತೀಯರನ್ನು ಅಲ್ಲಿಂದ ಒದ್ದೋಡಿಸಿದರೆ ಇವರ ಪ್ರತಿಕ್ರಿಯೆ ಏನು?” ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.

ರಾಜಕೀಯ ಶಾಸ್ತ್ರದ ಫ್ರೊಫೆಸರ್ ಅಮಿತ್ ಅಹುಜ ಅವರು “ಇಂಡಿಯಾ ದೇಶವು ಗಣರಾಜ್ಯ ಮಾದರಿಯ ಪ್ರಜಾಪ್ರಭುತ್ವ ಒಕ್ಕೂಟ. ಇಲ್ಲಿ ಸಂವಿಧಾನವೇ ಅಂತಿಮ. tv-mediaಸಂವಿಧಾನದ ಆಶಯಗಳನ್ನು ಈ ದೇಶದ ಪ್ರತಿಯೊಬ್ಬ ನಾಗರಿಕನು ಗೌರವಿಸಬೇಕು. ಈ ಇಡೀ ಒಕ್ಕೂಟವು ಸಂಸದೀಯ ಮಾದರಿಯ ವ್ಯವಸ್ಥೆ, ರಾಷ್ಟ್ರಪತಿ, ನ್ಯಾಯಾಂಗ, ಕಾರ್ಯಾಂಗ, ಪತ್ರಿಕಾರಂಗ ಹೀಗೆ ವಿವಿಧ ಸರ್ಕಾರಿ ಸಂಸ್ಥೆಗಳಿಂದ ಕಟ್ಟಲ್ಪಟ್ಟಿರುತ್ತದೆ. ಹಾಗೆಯೇ ನಾಗರಿಕ ಸೇವಾ ಸಂಸ್ಥೆಗಳು, ಮಿಲಿಟರಿ ವ್ಯವಸ್ಥೆಗಳು ತಮ್ಮದೇ ಆದ ನೀತಿ ನಿಯಾಮಾವಳಿಗಳನ್ನು ಸಂವಿಧಾನದ ಆಶಯಗಳಿಗೆ ಅನುಗುಣವಾಗಿಯೇ ರೂಪಿಸಿಕೊಂಡಿದ್ದು ಮೂಲಭೂತವಾಗಿ ಮೇಲಿನ ಪ್ರಜಾಪ್ರಭುತ್ವದ ಒಕ್ಕೂಟವನ್ನು ರಾಜಕೀಯದ ಒತ್ತಡಗಳಿಂದ ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಮಾಧ್ಯಮಗಳು ಪ್ರಚಾರ ಪಡಿಸುತ್ತಿರುವ ಇಂದಿನ ಮೋದಿತ್ವದ ಮಾದರಿಯನ್ನೇ ನಂಬುವುದಾದರೆ ಈ ಮೋದಿಯು ಮೇಲಿನ ಪ್ರಜಾಪ್ರಭುತ್ವದ ಎಲ್ಲಾ ಸಂಸ್ಥೆಗಳನ್ನು, ಸ್ತಂಭಗಳನ್ನು ಓವರ್‌ಟೇಕ್ ಮಾಡಿ ಅವುಗಳ ಮೇಲೆ ತನ್ನ ಅಧಿಪತ್ಯವನ್ನು ಸಾಧಿಸುತ್ತಾನೆಂದರೆ ಇದು ಅತ್ಯಂತ ದುರಂತದ ಸಂಗತಿ. ಏಕೆಂದರೆ 2002 ರ ಗುಜರಾತ್ ಹತ್ಯಾಕಾಂಡ ಇದಕ್ಕೆ ಉದಾಹರಣೆ” ಎಂದು ಬರೆಯುತ್ತಾರೆ. ಇದು ನಿಜ. ಅತಿಶಯೋಕ್ತಿಯಲ್ಲ. ಮೇಲಿನ ಮಾತು ಅಕ್ಷರಶಃ ಸತ್ಯ. ಕಳೆದ ಒಂಬತ್ತು ವರ್ಷಗಳಲ್ಲಿ ಗುಜರಾತ್ ರಾಜ್ಯದಲ್ಲಿ ಲೋಕಾಯುಕ್ತರ ನೇಮಕಾತಿ ಮಾಡಿಲ್ಲ. ಸಂವಿಧಾನಾತ್ಮಕ ಅಧಿಕಾರ ಬಳಸಿಕೊಂಡು ರಾಜ್ಯಪಾಲರು ಇದನ್ನು ಪ್ರಶ್ನಿಸಿದರೆ ಅವರನ್ನೇ ಅವಹೇಳನ ಮಾಡಲಾಯಿತು. ಮೊನ್ನೆಯಷ್ಟೇ ಮೋದಿಯು ಚುನಾವಣಾ ಕಮಿಷನ್‌ಗೆ ಎಚ್ಚರಿಸಿದ್ದಾರೆ. ಅವರು ತಮ್ಮ ಇತಿಮಿತಿಗಳಲ್ಲಿ ಕಾರ್ಯ ನಿರ್ವಹಿಸಬೇಕೆಂದು ಗುಡುಗಿದ್ದಾರೆ. ಇನ್ನು ಬಹುಪಾಲು ಮಾಧ್ಯಮಗಳು ಆಗಲೇ ಮೋದಿಯ ಮುಂದೆ ತೆವಳುತ್ತಿವೆ. ಇನ್ನೂ ಅನೇಕ ಉದಾಹರಣೆಗಳನ್ನು ಕೊಡಬಹುದು.

ಇತ್ತೀಚೆಗೆ ಅಹಮದಾಬಾದ್‌ನಲ್ಲಿ ಮತದಾನ ಮಾಡಿದ ನಂತರ ಮೋದಿಯು ಸಂವಿಧಾನದ, ಚುನಾವಣಾ ಸಂಸ್ಥೆಯ ಎಲ್ಲಾ ನಿಯಮಗಳನ್ನು ಧಿಕ್ಕರಿಸಿ Modi-selfieತನ್ನ ಪಕ್ಷ ಬಿಜೆಪಿಯ ಕಮಲದ ಗುರುತನ್ನು ಪ್ರದರ್ಶಿಸುತ್ತಾ ಮತದಾನದ ಅಂಗಳದಲ್ಲೇ ಪತ್ರಿಕಾ ಗೋಷ್ಠಿ ನಡೆಸಿದರು. ಅವರ ಇಡೀ ನಡಾವಳಿ ನಾನು ಡೋಂಟ್ ಕೇರ್ ಎನ್ನುವಂತಿತ್ತು. ಇದು ಅಪ್ಪಟ ಫ್ಯಾಸಿಸ್ಟ್ ಶೈಲಿ. ಸಂವಿಧಾನ ವಿರೋಧಿ ಈ ದುಷ್ಕೃತ್ಯವನ್ನು ಸಂಘಪರಿವಾರ ಒಗ್ಗಟ್ಟಾಗಿ ಬೆಂಬಲಿಸಿತು. ಮೋದಿಯ ಈ ಫ್ಯಾಸಿಸ್ಟ್ ನಡುವಳಿಕೆಗಳನ್ನು ಅರ್ಥ ಮಾಡಿಕೊಳ್ಳಲು ಇಂದಿಗೂ ಆತನ ಬೆಂಬಲಿಗರು ನಿರಾಕರಿಸುತ್ತಿದ್ದರೆ ಇವರೆಲ್ಲಾ ಮುಂದಿನ ದುರಂತದ ದಿನಗಳಿಗೆ ಕಾರಣಕರ್ತರಾಗುತ್ತಾರೆ ಎಂದಷ್ಟೇ ಹೇಳಬೇಕಾಗುತ್ತದೆ. ಆದರೆ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ನಮ್ಮ ಬಹುಪಾಲು ಮಾಧ್ಯಮಗಳ ಈ ಅತ್ಮದ್ರೋಹವನ್ನು ಮುಂದಿನ ತಲೆಮಾರು ಎಂದಿಗೂ ಕ್ಷಮಿಸಲಾರದೇನೋ. ಏಕೆಂದರೆ ಒಂದು ಕಡೆ ಹೆಚ್.ಜಿ.ವೆಲ್ಸ್ ಹೇಳುತ್ತಾನೆ: “ಕೆಲವು ಜನ ಮೂರು ವಿದಧ ತೊಂದರೆಗಳಿಗೆ ಒಳಗಾಗುತ್ತಾರೆ. ಕೆಲವನ್ನು ಆಗಲೇ ಅನುಭವಿಸಿದ ಇತಿಹಾಸದ ನೆನಪುಗಳಿವೆ, ಕೆಲವನ್ನು ವರ್ತಮಾನದಲ್ಲಿ ಅನುಭವಿಸುತ್ತಿರುತ್ತಾರೆ, ಮತ್ತು ಮುಂದೆ ಒದಗಬಹುದಾದ ತೊಂದರೆಗಳನ್ನು ಗ್ರಹಿಸಿ ಅವುಗಳಿಗಾಗಿ ಎದುರು ನೋಡುತ್ತಿರುತ್ತಾರೆ.”