ಮತ್ತೆ ಮತ್ತೆ ಮರ್ಯಾದೆ ಹತ್ಯೆ..!


– ಡಾ.ಎಸ್.ಬಿ. ಜೋಗುರ


 

 

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕು, ಅಬಲವಾಡಿ ಗ್ರಾಮದ ದವಲನ ರಾಮಕೃಷ್ಣಪ್ಪ ಎನ್ನುವಾತ ತನ್ನ ಮಗಳು ಸುವರ್ಣ ಕೀಳು ಜಾತಿಯವನನ್ನು ಪ್ರೀತಿಸಿದಳು ಎಂಬ ಕಾರಣಕ್ಕೆ ನೇಣು ಬಿಗಿದು ಕೊಂದು ಹಾಕಿ, ತನ್ನ ಇಡೀ ಕುಟುಂಬ ಸಮೇತ ಜೈಲು ಸೇರಿದ್ದಾನೆ.’

ಭಾರತದಲ್ಲಿ ಪ್ರತಿವರ್ಷ ಕನಿಷ್ಟ ಒಂದು ಸಾವಿರಕ್ಕೂ ಅಧಿಕ ಎಳೆ0ಟು ಜೀವಗಳು, ಹದಿವಯಸ್ಸಿನ ಪ್ರೇಮಿಗಳು ಕೇವಲ ಮರ್ಯಾದೆ ಕಾರಣಕ್ಕಾಗಿಯೇ ಸಾವನ್ನಪ್ಪುತ್ತಿದ್ದಾರೆ.ಇಡೀ ದೇಶದಲ್ಲಿಯೇ ಪಂಜಾಬ್ ಇಂಥಹ ಹತ್ಯೆಗಳಿಗೆ ಮೊದಲ ಸ್ಥಾನ ಪಡೆದಿದೆ.

– 30-ಜನೆವರಿ 2012 – ರಿಪೋರ್ಟರ್

‘ಅದು ಮಧ್ಯಪ್ರದೇಶದ ಒಂದು ಹಳ್ಳಿ ಆಕೆ ಮದುವೆಯಾದವಳು. ಗಂಡನನ್ನು ತೊರೆದು ಒಬ್ಬ ದಲಿತ ಯುವಕನೊಂದಿಗೆ ಹಳ್ಳಿಯನ್ನು ತೊರೆದು ಓಡಲು ಯತ್ನಿಸಿದಾಗ ಆಕೆಯನ್ನು ಹಿಡಿದು ಇಡೀ ಹಳ್ಳಿಯ ಜನರ ಕಣ್ಣ್ನೆದುರಲ್ಲಿಯೇ ಆಕೆಯನ್ನು ಜೀವಂತ ದಹನ ಮಾಡಲಾಯಿತು’

  -ಅಕ್ಟೋಬರ್ 24-2011 ಎನ್.ಡಿ.ಟಿ.ವಿ.

ಇದು ಚೆನೈನಲ್ಲಿ ನಡೆದ ಘಟನೆ. ‘ಆಕೆ ಒಬ್ಬ ದಲಿತ ಹುಡುಗನನ್ನು ಪ್ರೀತಿಸಿದ್ದಳು. ಹುಡಿಗಿಯ ಮನೆಯವರಿಗೆ ಇದು ಇಷ್ಟವಾಗಿರಲಿಲ್ಲ. ತಮ್ಮ ಮದುವೆಗೆ ಅವರು ಬಿಡುವದಿಲ್ಲ ಎಂದು ಖಾತ್ರಿ ಮಾಡಿಕೊಂಡ ಹುಡುಗಿ ಮನೆಯಿಂದ ಓಡಿ ಹೋಗಿ ಜನವರಿ 21 ರಂದು ರಜಿಸ್ಟ್ರಾರ್ ಮದುವೆಯಾಗುತ್ತಾರೆ. ಆಕೆಯ ಮನೆಯವರನ್ನು ಪೋಲಿಸ್ ಸ್ಟೇಷನ್ ಗೆ ಕರೆದು ಮಾತಾಡಿ ರಾಜಿ ಮಾಡಿಸಲು ಯತ್ನಿಸಿದ ಪೋಲಿಸ್ ಅಧಿಕಾರಿಯ ಕಣ್ಣೆದುರಲ್ಲಿಯೇ ತನ್ನ ಮಗಳ ಕತ್ತನ್ನೇ ಕೊಂದುಬಿಟ್ಟ’

-ಟೈಮ್ಸ್ ಅಫ್ ಇಂಡಿಯಾ

ಭಾರತದಲ್ಲಿ ಅಂತರಜಾತಿಯ ವಿವಾಹಗಳಿಗೆ ಕಾನೂನಿನ ಮನ್ನಣೆಯಿದ್ದರೂ ಮರ್ಯಾದೆ ಹತ್ಯೆಗಳು ನಿರಂತರವಾಗಿ ನಡೆಯುತ್ತಿವೆ. ದೆಹಲಿಯ ಧರ್ಮವೀರ ನಗರದ ನಿವಾಸಿಯೊಬ್ಬ ಆ ಬಗೆಯ ಮರ್ಯಾದೆ ಹತ್ಯೆಯನ್ನು ಸಮರ್ಥಿಸಿಕೊಂಡು ಮಾತನಾಡಿರುವದು ವಿಚಿತ್ರ.

-ಜುಲೈ 9-2010- ನ್ಯೂಯಾರ್ಕ್ ಟೈಮ್ಸ್

ಮರ್ಯಾದೆ ಹತ್ಯೆಗಳು ಪಂಜಾಬ್, ಹರಿಯ್ಣಾ ಮತ್ತು ಉತ್ತರಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ. ದಕ್ಷಿಣದಲ್ಲಿ ತಮಿಳುನಾಡು, ಆಂದ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಅಲ್ಲಲ್ಲಿ ಕೇಳಿ ಬರುತ್ತಿವೆ. ಈ ಬಗೆಯ ಮರ್ಯಾದೆ ಹತ್ಯೆಯ ಪ್ರಮುಖ ಕಾರಣ ಅಂತರಜಾತಿಯ ವಿವಾಹ ಅದರಲ್ಲೂ ದಲಿತ ಯುವಕರನ್ನು ಪ್ರೀತಿಸಿ ಮದುವೆಯಾದ ಪ್ರಸಂಗಗಳು.

-ಜುಲೈ 7 -2010- ಟೈಮ್ಸ್ ಆಫ್ ಇಂಡಿಯಾ

ಆತ ದಲಿತ ಯುವಕ. ಅವನಿಗೆ 20 ವರ್ಷ. ಆತ 15 ವರ್ಷದ ಮೇಲ್ಜಾತಿಯ ಯುವತಿಯನ್ನು ಪ್ರೀತಿಸಿದ್ದೇ ಅವನಿಗೆ ಕಂಠಕವಾಯಿತು. ಆ ಅಪ್ರಾಪ್ತ ಬಾಲಕಿಯ ಸಹೋದರ ಇನ್ನಿಬ್ಬರೊಂದಿಗೆ ಸೇರಿ ಆ ದಲಿತ ಯುವಕನನ್ನು ಮುಗಿಸಿಯೇ ಬಿಟ್ಟ.

ಎಪ್ರಿಲ್ 4-2010- ಟೈಮ್ಸ್ ಆಫ್ ಇಂಡಿಯಾ

ಕೆಲ ಸಮಾಜಶಾಸ್ತ್ರೀಯ ಅಧ್ಯಯನಗಳು ಹರಿಯಾಣಾ ಮತ್ತು ಪಶ್ಚಿಮ ಉತ್ತರಪ್ರದೇಶದಲ್ಲಿ ಈ ಬಗೆಯ ಮರ್ಯಾದೆ ಹತ್ಯೆಗಳು ರಾಜಾರೋಷವಾಗಿ ನಡೆಯುತ್ತವೆ. ಅದಕ್ಕೆ ಅತಿ ಮುಖ್ಯವಾದ ಕಾರಣ ಕೆಳ ಜಾತಿಯ ಹುಡುಗನನ್ನು ಪ್ರೀತಿಸುವುದು, ಮದುವೆಯಾಗುವುದು.  ಅಲ್ಲಿಯ ಕೆಲ ಜಮೀನ್ದಾರರು ತಮ್ಮ ಭೂಮಿಯನ್ನು ಯಾವದೋ ಒಬ್ಬ ದಲಿತನಿಗೆ ಬಿಟ್ಟುಕೊಡಬೇಕಲ್ಲ ಎನ್ನುವ ಕಾರಣಕ್ಕಾಗಿ ತಮ್ಮ ಮಗಳನ್ನೇ ಕೊಲ್ಲುವ ಕೃತ್ಯಕ್ಕೆ ಮುಂದಾಗುತ್ತಾರೆ

-ಜನೆವರಿ 1-2010- ಪಯೊನಿಯರ್

’18 ವರ್ಷದ ಆಕೆಯನ್ನು ಅವಲ ಅಪ್ಪ ಹಾಗೂ ಚಿಕ್ಕಪ್ಪ ಕೂಡಿ ಮುಗಿಸಿ ಬಿಟ್ಟರು. ಕಾರಣ ಆಕೆ ಬಡ ಕುಟುಂಬದ ಹುಡುಗನನ್ನು ಪ್ರೀತಿಸುತ್ತಿದ್ದಳು ಎನ್ನುವದೇ ಪ್ರಮುಖ ಕಾರಣವಾಗಿತ್ತು.’

-ಮೇ 1-2008- ಟೈಮ್ಸ್ ಆಫ್ ಇಂಡಿಯಾ

‘ಆಕೆ ಶ್ರೀಮಂತ ಉದ್ಯಮಿಯೊಬ್ಬನ ಮಗಳು. ಅವಳು ಒಬ್ಬ ಮುಸ್ಲಿಂ ಕಂಪ್ಯುಟರ್ ಶಿಕ್ಷಕನನ್ನು ಮದುವೆಯಾಗಿದ್ದಳು. ಆಕೆಗೆ 23 ವರ್ಷ ಅವನಿಗೆ 30 ವರ್ಷ. ಆತ ರೈಲು ಹಳಿಯ ಮೇಲೆ ಹೆಣವಾಗಿ ಬಿದ್ದಿದ್ದ.’

-ಫೆಬ್ರುವರಿ 26 2008- ದ ಟೆಲಿಗ್ರಾಫ್

‘ಕಳೆದ ವಾರ ಇಡೀ ಮೈಸೂರು ನಗರವೇ ಬೆಚ್ಚಿ ಬಿದ್ದಂತಹ ಘಟನೆ ನಡೆದಿತ್ತು. ದಲಿತ ಸಮುದಾಯದ ಸುದೀಪಕುಮಾರನನ್ನು ಮೇಲ್ಜಾತಿಯ ಸ್ಮೃತಿ ಪ್ರೀತಿಸಿ ವಿವಾಹವಾಗಿದ್ದಳು. ತನ್ನ ಕುಟುಂಬದ ಮರ್ಯಾದೆಯನ್ನು ಮೂರಾಬಟ್ಟೆಯನ್ನಾಗಿಸಿದ ತಂಗಿಯನ್ನು ಅಣ್ಣ ಮಹಾದೇವ ಕೊಲೆಗೈದನು. ಇದರಿಂದ ಸಾಂಸ್ಕೃತಿಕ ನಗರಿ ಮರ್ಯಾದೆ ಹತ್ಯೆಯಂತಹ ಹೇಯ ಆಚರಣೆಗೆ ಸಾಕ್ಷಿಯಾಯಿತು.’

-ಅಗ್ನಿ 29 ಮಾರ್ಚ್ 2012

‘ಬೇರೆ ಜಾತಿಯ ಹುಡುಗನನ್ನು ಮದುವೆಯಾದಳು ಎನ್ನುವ ಕಾರಣಕ್ಕೆ ತಮಿಳುನಾಡಿನ ರಾಮನಾಥಪುರದ ಓಂ ಶಕ್ತಿ ನಗರದಲ್ಲಿ 21 ವರ್ಷದ ಯುವತಿ, ಆಕೆ ಐದು ತಿಂಗಳು ಗರ್ಭಿಣಿ ಎನ್ನುವುದನ್ನೂ ಲೆಕ್ಕಿಸದೇ ಅವಳ ತಾಯಿ, ಸಹೋದರ ಮತ್ತು ಇತರೆ ಸಂಬಂಧಿಗಳು ಸೇರಿ ವ್ಯವಸ್ಥಿತವಾಗಿ ಸಂಚು ಮಾಡಿ ಮಾರ್ಚ್ 17 ರಾತ್ರಿ ಆ ಯುವತಿಯನ್ನು ಹತ್ಯೆ ಮಾಡಲಾಗಿದೆ. ಇದು ಖಂಡಿತವಾಗಿಯೂ ಮರ್ಯಾದೆ ಹತ್ಯೆ ಎಂದು ಪೋಲಿಸ್ ಎಸ್.ಪಿ. ಹೇಳಿದ್ದಾರೆ.’

                              -ದ ಹಿಂದೂ ಮಾರ್ಚ್ 31-2014

ಕೇವಲ 19 ವರ್ಷದ ಹೆಣ್ಣು ಜೀವವೊಂದನ್ನು ಅಂತರಜಾತಿಯ ಮದುವೆಯಾದ ಹಿನ್ನೆಲೆಯಲ್ಲಿ ಪೆಟ್ರೊಲ್ ಹಾಕಿ ಸುಟ್ಟು ಕರಕಲಾಗಿಸಿದ ಘಟನೆ ಮಂಡ್ಯ ಜಿಲ್ಲೆಯ ಮಳ್ಳವಳ್ಳಿ ತಾಲೂಕಿನ ಕನ್ನಹಳ್ಳಿಯ ಬಳಿ ನಡೆದಿದೆ. ನೂರಾರು ಕನಸುಗಳನ್ನು ಕಣ್ತುಂಬಿಕೊಂಡು ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ್ದ ಶಿಲ್ಪಾ ತನ್ನ ಬಾಳು ಇಷ್ಟು ಚಿಕ್ಕ ವಯಸ್ಸಿನಲ್ಲಿ ಸುಟ್ಟು ಬೂದಿಯಾಗುತ್ತದೆ ಎಂದು ಕನಸು ಮನಸಿನಲ್ಲಿ ಎಣಿಸಿರಲಿಲ್ಲ. ಆದರೆ ನಡೆದದ್ದೇ ಬೇರೆ. ಅಂತರಜಾತಿಯ ಮದುವೆಯಾಗುವವರಿಗೆ ಪ್ರೋತ್ಸಾಹ ಧನ ನೀಡುವ ಪ್ರಭುತ್ವಕ್ಕೆ ಈ ಬಗೆಯ ಘಟನೆಗಳು ಮತ್ತೆ ನಡೆಯದಂತೆ ಕಠಿಣವಾದ ಸೂತ್ರಗಳನ್ನು ರೂಪಿಸಲು ಸಾಧ್ಯವಾಗುತ್ತಿಲ್ಲವೇ? ಶಿಲ್ಪಾ ಮದುವೆಯಾದ ಹುಡುಗ ಅಭಿಜಿತ್ ನ ಚಿಕ್ಕಪ್ಪ ಮತ್ತು ಚಿಕ್ಕಮ್ಮ ಇಂಥಾ ಒಂದು ಘನಂಧಾರಿ ಕೆಲಸ ಮಾಡಿರುವ ಬಗ್ಗೆ ವರದಿಯಾಗಿದೆ. ಅತ್ಯಂತ ಬೇಸರದ  ಸಂಗತಿಯೆಂದರೆ ಕೇವಲ murder-stabbingjpg18 ವರ್ಷದ ಜೀವವನ್ನು ಹೀಗೆ ಬಲಿ ತೆಗೆದುಕೊಳ್ಳ್ಲುವಲ್ಲಿ ಇನ್ನೊಂದು ಹೆಣ್ಣು ಅತ್ಯಂತ ಕಠೋರವಾಗಿ ಕೈ ಜೋಡಿಸುವ ರೀತಿಯೇ ಅತ್ಯಂತ ಕ್ಷುದ್ರವಾದುದು. ಹಗ್ಗದಿಂದ ಕುತ್ತಿಗೆಯನ್ನು ಬಿಗಿಯಲೆತ್ನಿಸಿದ ಈ ದಂಪತಿಗಳು, ಆ ಯುವತಿ ಅದರಿಂದ ಕೊಸರಿಕೊಂಡು ಪಾರಾದಾಗ ಇವರ ಕಿರಾತಕ ಮನಸು ಪೆಟ್ರೊಲ್ ಸುರುದು ಬೆಂಕಿ ಇಡುವ ಮಟ್ಟಕ್ಕೆ ಇಳಿದಿದಿದೆ. ಅಭಿಜಿತ್ ಮತ್ತು ಶಿಲ್ಪಾ ಪರಸ್ಪರ ಪ್ರೀತಿಸಿ ಮದುವೆಯಾದವರು. ಜಾತಿಯ ಏಣಿ ಶ್ರೇಣಿಯಲ್ಲಿ ಹುಡುಗ ಮತ್ತು ಹುಡುಗಿ ಇಬ್ಬರೂ ಮೇಲಿನ ಜಾತಿಯ ಸ್ತರಗಳಿಗೆ ಸಂಬಂಧಿಸಿದವರಲ್ಲ. ಆದರೂ ಇದು ಹುಡುಗ-ಹುಡುಗಿಯ ಕುಟುಂಬದವರ ಮನಸಿನ ವಿರೋಧದ ಮದುವೆ, ಅಂತರಜಾತಿಯ ಮದುವೆ. ಇದರ ಜೊತೆಗೆ ಇತರೆ ಸಣ್ಣ ಪುಟ್ಟ ಕಾರಣಗಳು ಇರಬಹುದಾದರೂ  ಹೀಗೆ ಸಜೀವ ದಹನ ಮಾಡುವ ಮಟ್ಟಕ್ಕೆ ಇಳಿಯುವ ಕ್ರಮ ಮಾತ್ರ ಅತ್ಯಂತ ಅನಾಗರಿಕವಾದುದು.

ಮನುಷ್ಯ ಅನೇಕ ಬಗೆಯ ಬೆಳವಣಿಗೆಗೆ ಕಾರಣಕರ್ತನಾದರೂ ಈ ಬಗೆಯ ಅಮಾನವೀಯ ಕ್ರಮಗಳ ಮೂಲಕ ಆತ ದಿಢೀರನೇ ಕುಬ್ಜನಾಗಿಬಿಡುತ್ತಾನೆ. ನಾನು ಪದವಿ ಹಂತದಲ್ಲಿ ಓದುತ್ತಿದ್ದಾಗ  ಸಂದರ್ಭ (1986) ರೂಪಾ ಕನ್ವರ್ ಎಂಬ ತರುಣಿ ಚಿತೆ ಏರಿದ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಆಗ ಇಡೀ ದೇಶವೇ ನಮ್ಮಲ್ಲಿ ಇನ್ನೂ ಸತಿ ಸಹಗಮನದಂತ ಆಚರಣೆಗಳು ಇವೆಯಲ್ಲ ಎಂದು ಬೆಚ್ಚಿ ಬಿದ್ದಿತ್ತು. ಆದರೆ ಈಗ ಈ ಶಿಲ್ಪಾ ಎಂಬ 19 ವರ್ಷದ ನವ ವಿವಾಹಿತೆಯನ್ನು ಜೀವಂತ ದಹನ ಮಾಡಿದ ಘಟನೆಯನ್ನು ಕೇಳಿದಾಗ ಸತಿ ಪದ್ಧತಿ ನಮ್ಮಲ್ಲಿ ಇನ್ನೂ ಜೀವಂತವಾಗಿದೆಯೇನೋ ಎಂದೆನಿಸುತ್ತದೆ. ಆದರೆ ಬೇರೆ ರೂಪದಲ್ಲಿದೆ. ಹಿಂದೆ ಗಂಡ ಮರಣ ಹೊಂದಿದ ನಂತರ ಅವಳನ್ನು ಚಿತೆಗೆ ಏರಿಸಲಾಗುತ್ತಿತ್ತು. ಈಗ ಗಂಡ ಬದುಕಿರುವಾಗಲೇ ಆತನ ಸಂಬಂಧಿಗಳು, ಕೆಲವೊಮ್ಮೆ ಗಂಡನೆನಿಸಿಕೊಂಡವನೂ ಸಹಭಾಗಿಯಾಗಿ ಅವಳನ್ನು ಚಿತೆಗೆ ಹಾಕುವ ಕ್ರಮ ರೂಢಿಯಲ್ಲಿದೆ. ಎರಡೂ ಕಡೆ ಒಂದು ಸಾಮ್ಯತೆಯಿದೆ. ಅಲ್ಲೂ ಚಿತೆಗೆ ಏರಿಸಲು ಒತ್ತಡವಿರುತ್ತಿತ್ತು. ಇಲ್ಲೂ ಕೂಡಾ ಆಕೆಯನ್ನು ದಹನ ಮಾಡುವಲ್ಲಿ ಒಂದು ಬಗೆಯ ಒತ್ತಡವಿದೆ.

ಈಗಾಗಲೇ ಈ ಘಟನೆಯನ್ನು ಮರ್ಯಾದೆ ಹತ್ಯೆ ಎಂದು ಗುರುತಿಸಲಾಗಿದೆ. ಈ ಬಗೆಯ ಹತ್ಯೆಗಳಲ್ಲಿ ಬಹುತೇಕವಾಗಿ ಬಲಿಯಾಗುವುದು ಹೆಣ್ಣು. ಗಂಡು ಮೇಲಿನ ಜಾತಿಗೆ ಸಂಬಂಧಿಸಿರಲಿ ಇಲ್ಲವೇ ಕೆಳಗಿನ ಜಾತಿಗೆ ಸಂಬಂಧಿಸಿರಲಿ ಕೊನೆಗೂ ಸೇಫ್ ಆಗಿ ಉಳಿಯುತ್ತಾನೆ. ಹುಡುಗ-ಹುಡುಗಿ ಪ್ರೀತಿಸಿ ಮದುವೆಯಾದ ಮೇಲೆ ಹೊಂದಾಣಿಕೆಯ ಸಮಸ್ಯೆ ಎದುರಾದರೆ ಆಕೆ ಅವನನ್ನು ಬಿಟ್ಟು ತೆರಳುವುದು ಇಲ್ಲವೇ ಈತ ಅವಳನ್ನು ಬಿಡುವುದು  ಬೇರೆ ಸಂಗತಿ. ಆದರೆ ಹೀಗೆ ಅವಳ ಜೀವವನ್ನೇ ನುಂಗಿ ಹಾಕುವ ಕ್ರಮ ಮಾತ್ರ ಅತ್ಯಂತ ಹೇಯವಾದುದು. Hindu_Bride,_Ahmedabad,_Gujaratಅಷ್ಟಕ್ಕೂ ಆಕೆ ಸಂಸಾರ ಮಾಡಬೇಕಿರುವುದು ಗಂಡನ ಜೊತೆಗೆ ಹೊರತು ಅವನ ಚಿಕ್ಕಮ್ಮ, ಚಿಕ್ಕಪ್ಪರ ಜೊತೆಗಲ್ಲ. ’ಮೀಯಾ ಬೀವಿ ರಾಜಿ ರಹೆತೋ ಕ್ಯಾ ಕರೇಗಾ ಖಾಜಿ..?’ ಎನ್ನುವಂತೆ ಇವರೇಕೆ ವಿನಾಕಾರಣ ಹೀಗೆ ಆ ಹುಡುಗಿಯನ್ನು ಸಾಯಿಸುವಷ್ಟರ ಮಟ್ಟಿಗಿನ ಸೈತಾನರಾಗಬೇಕು’?

ಪ್ರೀತಿಸಿ ಮದುವೆಯಾದವನ ಜೊತೆಗೆ ವಿರಸ ಆರಂಭವಾದರೂ ಈಗ ಒಂದು ಕಾನೂನಿನ ಮಾರ್ಗವಿದೆ ಅದೇ ವಿಚ್ಚೇದನ. ಈ ವಿಚ್ಚೇದನದಲ್ಲೂ ನಮ್ಮಲ್ಲಿ ಈಗೀಗ ತೀರಾ ಚಿಲ್ಲರೆ ಕಾರಣಗಳು ಮುಂದಾಗುತ್ತಿರುವುದು ನಮ್ಮ ವೈವಾಹಿಕ ಸಂಬಂಧಗಳು ಎತ್ತ ಮುಖ ಹೊರಳಿಸುತ್ತಿವೆ ಎನ್ನುವ ಬಗ್ಗೆ ಖೇದವೆನಿಸುತ್ತದೆ. ಎರಡು ತಿಂಗಳು ಹಿಂದೆ ಪಂಜಾಬನ ಗುರಗಾಂವ್ ದಲ್ಲಿ ಒಂದು ವಿಚ್ಚೇದನ ಜರುಗಿತು. ಆ ವಿಚ್ಚೇದನದ ಕಾರಣ ನೀವು ಎಲ್ಲೂ ಕೇಳಿರಲಿಕ್ಕಿಲ್ಲ. ನಮ್ಮಲ್ಲಿ ಒಂದು ಜನಪದ ಮಾತಿದೆ ‘ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು’ ಅಂತ. ಅಲ್ಲಿ ನಡೆದದ್ದು ಇಷ್ಟೇ. ಗಂಡ ಹೆಂಡತಿಗೆ ಪೇಸ್ಟ್ ನ್ನು ಬ್ರಶ್ ಗೆ ಹಾಕಿಕೊಳ್ಳುವಾಗ ಮಧ್ಯದಿಂದ ಅದನ್ನು ಒತ್ತುವದು ಬೇಡ, ಕೆಳಗಿನಿಂದ ಒತ್ತು ಅಂದನಂತೆ ಆ ಮಾತು ಹೆಂಡತಿಯ ಪ್ರತಿಷ್ಟೆಗೆ ಸಿಕ್ಕಾಪಟ್ಟೆ ಪೆಟ್ಟು ಕೊಟ್ಟು ಆಕೆ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದಳು. ಗೊರಕೆ ಹೊಡೆಯುವ ಗಂಡ ಬೇಡ ಎಂದು ವಿಚ್ಚೇದನ ಬಯಸಿದ ನಾರಿಮಣಿಯರ ಬಗ್ಗೆಯೂ ನಾವು ಕೇಳಿದ್ದೇವೆ. ಅಂದರೆ ಈಗೀಗ ವೈವಾಹಿಕ ಸಂಬಂಧ ಎನ್ನುವುದು ಆಟ-ಹುಡುಗಾಟವಾಗುತ್ತಿದೆ. ಆದರೆ ಈ ಶಿಲ್ಪಾ ಕತೆ ಹಾಗಲ್ಲ. ಇದು ವಿಭಿನ್ನ  ಜಾತಿಗಳ ನಡುವಿನ ಮದುವೆ ಎಂಬ ಕಾರಣಕ್ಕೆ, ಅವರ ಮನೆಯವರು ಆ ಸಂಬಂಧಕ್ಕೆ ಒಪ್ಪದ ಕಾರಣ ಹೀಗೆ ಆಕೆ ಯಾವ ಪ್ರಮಾದವೂ ಮಾಡದೇ ಜೀವ ಕಳೆದುಕೊಳ್ಳಬೇಕಾಯಿತು. ಇಂಥಾ ಮರ್ಯಾದೆ ಹತ್ಯೆಗಳು ಮತ್ತೆ ಮತ್ತೆ ನಮ್ಮ ನಡುವೆ ನಡೆಯುತ್ತಲೇ ಇವೆ. ನಾವು ಓದಿ, ಕೇಳಿ ಅನುಕಂಪ ಸೂಚಿಸಿ ನಿಟ್ಟುಸಿರು ಬಿಡುತ್ತೇವೆ ಅಷ್ಟೇ.

ಈ ಲೇಖನವನ್ನು ಬರೆದು ಮುಗಿಸುವ ಹೊತ್ತಿಗಾಗಲೇ ಮತ್ತೊಂದು ಮರ್ಯಾದೆ ಹತ್ಯೆಯ ಪ್ರಕರಣ ಮಹಾರಾಷ್ಟ್ರದ ಜಮಖೇದ ತಾಲೂಕಿನ ಖರ್ದಾ ಗ್ರಾಮದಲ್ಲಿ ಜರುಗಿದೆ. ಈ ಬಾರಿ ಮರ್ಯಾದೆಯ ಹಿನ್ನೆಲಯಲ್ಲಿ ಬಲಿಯಾದ ಜೀವ ಕೇವಲ 17 ವರ್ಷದ್ದು. ಗದ್ದೆಯೊಂದರಲ್ಲಿ ಮೇಲಿನ ಜಾತಿಯ ಹುಡುಗಿಯೊಂದಿಗೆ ಮಾತನಾಡುತ್ತ ನಿಂತಿದ್ದ ಕೆಳಜಾತಿಯ ತರುಣ ನಿತಿನ್ ಅಘೆ ಎಂಬಾತನನ್ನು ಹುಡುಗಿಯ ಮನೆಯವರು ಗಮನಿಸಿದ್ದೇ ತಡ ಅವನನ್ನು ಥಳಿಸಿ ಮರವೊಂದಕ್ಕೆ ನೇಣು ಬಿಗಿದಿದ್ದಾರೆ. ಮೊದಮೊದಲು ಅದನ್ನು ಆಕಸ್ಮಿಕ ಸಾವು ಎಂದು ಪರಿಗಣಿಸಿದ್ದ ಪೋಲಿಸ್ ಇಲಾಖೆ ನಂತರ ತನಿಖೆಯ ಒತ್ತಡದ ಹಿನ್ನೆಲೆಯಲ್ಲಿ ಅದನ್ನು ಕೊಲೆ ಎಂದು ಪರಿಗಣಿಸಿ ಆ ಹುಡುಗಿಯ ಸಹೋದರರನ್ನು ಬಂಧಿಸಿಯಾಗಿದೆ. ತಾವು ಜೈಲಿಗೆ ಹೋದರೂ ತೊಂದರೆಯಿಲ್ಲ, ತಮ್ಮ ಮನೆತನದ ಅರ್ಥಾತ್ ಜಾತಿಯ ಮರ್ಯಾದೆ ಉಳಿಯಿತು ಎಂದು ಅವರು ಜೈಲಿನಲ್ಲಿಯೇ ಬೀಗುತ್ತಿರಬಹುದೇನೋ?

5 thoughts on “ಮತ್ತೆ ಮತ್ತೆ ಮರ್ಯಾದೆ ಹತ್ಯೆ..!

  1. Godbole

    ಮರ್ಯಾದ ಹತ್ಯೆ ಎಂಬ ಲೇಬಲ್ಲಿನಲ್ಲಿ ಸಂಭವಿಸಿರುವ ಘಟನೆಗಳು ಅಮಾನವೀಯ ಹಾಗೂ ಕ್ರೂರ. ಆದರೆ ಅವುಗಳಿಗೂ ಸತಿ ದಹನಕ್ಕೂ ಇಲ್ಲದ ಸಂಬಂಧ ಕಲ್ಪಿಸಿರುವುದನ್ನು ಗಮನಿಸಿದರೆ ಈ ಲೇಖಕರಿಗೆ ಸತಿ ಪದ್ಧತಿ ಬಗ್ಗೆ ಮುಗ್ಧ ಆದರೆ ಅವಾಸ್ತವಿಕ ಕಲ್ಪನೆಗಳಿವೆ ಎಂದು ಕಾಣುತ್ತದೆ. ಉದಾಹರಣೆಗೆ ನೋಡಿ ಈ ಸಾಲನ್ನು: “ಹಿಂದೆ ಗಂಡ ಮರಣ ಹೊಂದಿದ ನಂತರ ಅವಳನ್ನು ಚಿತೆಗೆ ಏರಿಸಲಾಗುತ್ತಿತ್ತು.” ಈ ಲೇಖಕರ ಕುಟುಂಬದಲ್ಲೇ ಇಂತಹ ಘಟನೆಗಳು ನಡೆದಿವೆಯೇನೋ ಅದೂ ಇವರ ಮನೆಯ ಹಿತ್ತಲಿನಲ್ಲೇ ನಡೆದಿವೆಯೇನೋ ಎನ್ನುವಷ್ಟು ತೀವ್ರತೆಯಿಂದ ಬರೆದಿದ್ದಾರೆ. ಮಳ್ಳವಳ್ಳಿ ತಾಲೂಕಿನ ಕನ್ನಹಳ್ಳಿಯ ಬಳಿ ನಡೆದ ಹತ್ಯೆಯನ್ನೂ ಸತಿ ದಹನ ಎಂದು ವಾದಿಸಿರುವುದನ್ನು ನೋಡಿದರೆ ಇನ್ನು ಮುಂದೆ ಯಾವೊಬ್ಬ ವಿವಾಹಿತ ಮಹಿಳೆ ಬೆಂಕಿ ದುರಂತದಲ್ಲಿ ಅಥವಾ ಪಾಕಿಸ್ತಾನದ ಉಗ್ರಗಾಮಿಗಳ ಹಾಗೂ ನಕ್ಸಲ್ ಪಡೆಗಳ ಬಾಂಬ್ ಧಾಳಿಯಲ್ಲಿ ಗತಿಸಿದರೆ, ಆ ಸಾವನ್ನೂ ಸತಿ ದಹನ ಎಂದೇ ಈ ಲೇಖಕರು ವಾದಿಸುವುದರಲ್ಲಿ ಅನುಮಾನವಿಲ್ಲ.

    Reply
    1. Nagshetty Shetkar

      ಅಹಿಂದ ಸಮುದಾಯಗಳ ಪ್ರಶ್ನಾತೀತ ನಾಯಕ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರದ ಅವಧಿಯಲ್ಲೇ ಮರ್ಯಾದ ಹತ್ಯೆ ಘಟನೆಗಳು ಹೆಚ್ಚಾಗಿರುವುದು ಖೇದನೀಯ. ಸಿದ್ದರಾಮಯ್ಯನವರ ಅಹಿಂದ ಸರಕರಕ್ಕೆ ಆಡಳಿತ ವೈಫಲ್ಯದ ಅಪವಾದ ಅಂಟಿದರೆ ರಾಜಕೀಯ ಲಾಭವಾಗುವುದು ಮೇಲ್ಜಾತಿಗಳಿಗೆ ಅಲ್ಲವೇ? ಆದುದರಿಂದ ಮರ್ಯಾದ ಹತ್ಯೆಗಳಿಗೆ ಕುಮ್ಮಕ್ಕನ್ನು ಸಿದ್ದರಾಮಯ್ಯನವರ ವಿರೋಧಿಗಳಾದ ಮೇಲ್ಜಾತಿಯ ಪ್ರತಿಗಾಮಿ ರಾಜಕಾರಣಿಗಳೇ ಕೊಟ್ಟಿದ್ದಾರೆ. ಯಾರನ್ನೂ ಒಲೈಸದ ಖಡಕ್ ಪ್ರವೃತ್ತಿಯ ಸಿದ್ದರಾಮಯ್ಯನವರಿಗೆ ಕೆಟ್ಟ ಹೆಸರು ಬರಲಿ ಎಂದು ಕೆಲವು ಮಾಧ್ಯಮಗಳು ಮರ್ಯಾದ ಹತ್ಯೆ ಘಟನೆಗಳಿಗೆ ಹೆಚ್ಚು ಪ್ರಚಾರ ಕೊಟ್ಟಿವೆ. ಮೇಲ್ಜಾತಿಯ ರಾಜಕೀಯ ಶಕ್ತಿಗಳು ಚಿಕ್ಕಮಗಳೂರಿನಲ್ಲಿ ನಕ್ಸಲ್ -ಪೋಲೀಸ್ ಚಕಮಕಿಯಲ್ಲಿ ಘಟಿಸಿದ ಮುಸಲ್ಮಾನ ಯುವಕನ ಸಾವನ್ನೂ ಸಿದ್ದರಾಮಯ್ಯನವರ ವಿರುದ್ಧ ಬಳಸಿಕೊಂಡಿರುವುದನ್ನು ಗಮನಿಸಿದರೆ, ಕರ್ನಾಟಕದಲ್ಲಿ ಅಹಿಂದ ರಾಜಕಾರಣವನ್ನು ಮುಗಿಸುವ ಸಂಚು ಕಂಡುಬರುತ್ತದೆ.

      Reply
  2. s.b.jogur

    godboleyavaru sati paddhatiyalli hennu atyanta khushiyinda dhumukuvanate grahisiruvudide.yaara maneya pakkadalliya ghatanegalannu noduvudu beda,chariritreyannu odi grahisidare saaku. jotege naanu hennannu benkige dhooduva reetiya bagge maatanaadiruve..sambandavannalla.

    Reply
  3. M A Sriranga

    ಶೆಟ್ಕರ್ ಅವರಿಗೆ — ಮಾಧ್ಯಮಗಳು ಮರ್ಯಾದಾಹತ್ಯೆ ಅಂತಹ ಒಂದು ಅಮಾನವೀಯ ಘಟನೆಗೆ ಪ್ರಚಾರ ಕೊಟ್ಟರೆ ಅಹಿಂದ ವಿರೋಧಿ ಅನ್ನುತ್ತೀರಿ . ಪ್ರಚಾರ ಕೊಡದಿದ್ದರೆ ಮೂಲಭೂತವಾದಿಗಳಿಗೆ, ಪಟ್ಟಭದ್ರಹಿತಾಸಕ್ತಿಗಳಿಗೆ ಮಾಧ್ಯಮಗಳು ತಮ್ಮನ್ನು ತಾವೇ ಮಾರಿಕೊಂಡಿವೆ ಎನ್ನುತ್ತೀರಿ. ಇದು ಸರಿಯೇ?

    Reply
    1. Nagshetty Shetkar

      ಪ್ರಿಯ ಶ್ರೀರಂಗ ಅವರೇ, ಮರ್ಯಾದಾ ಹತ್ಯೆಗಳು ಅಮಾನವೀಯ ನಿಜ. ಅವುಗಳ ಬಗ್ಗೆ ಮಾಧ್ಯಮಗಳು ಕಾಳಜಿ ವ್ಯಕ್ತಪಡಿಸ ತಕ್ಕದ್ದು. ಆದರೆ ಮರ್ಯಾದಾ ಹತ್ಯೆಗಳಿಗೆ ಸರಕಾರದ ಆಡಳಿತ ವೈಫಲ್ಯವನ್ನು ಹೊಣೆಯಾಗಿಸುವುದು ತಪ್ಪು. ಮರ್ಯಾದಾ ಹತ್ಯೆಗಳನ್ನು ಸಿದ್ದರಾಮಯ್ಯನವರ ರಾಜಕೀಯ ತತ್ವಗಳು ರೂಪಿಸಿಲ್ಲ. ಮರ್ಯಾದಾ ಹತ್ಯೆಗಳನ್ನು ರೂಪಿಸಿರುವುದು ಭಾರತದಲ್ಲಿ ಭದ್ರವಾಗಿ ನೆಲೆವೂರಿರುವ ಬ್ರಾಹ್ಮಣ್ಯ. ಬ್ರಾಹ್ಮಣ್ಯದ ಸಂವಿಧಾನಿಕ ಅಂಗವಾದ ಮನುವಾದವು ಸ್ತ್ರೀಯರಿಗೆ ಕೊಟ್ಟಿರುವ ಸ್ಥಾನಮಾನ ಎಲ್ಲರಿಗೂ ಗೊತ್ತೇ ಇದೆ. ಇದರ ಜೊತೆಗೆ ಸಾಮಾಜಿಕ ಅಂಗವಾದ ಶ್ರೇಣೀಕೃತ ಜಾತಿ ವ್ಯವಸ್ಥೆ ಸೇರಿದೆ. ಮರ್ಯಾದಾ ಹತ್ಯೆಗಳು ಅವ್ಯಾಹತವಾಗಿ ನಡೆಯುತ್ತಿರುವುದಕ್ಕೆ ಇದೇ ಮೂಲ ಕಾರಣ. ಆದುದರಿಂದ ಮಾಧ್ಯಮಗಳು ಬ್ರಾಹ್ಮಣ್ಯವನ್ನು ಖಂಡಿಸ ತಕ್ಕದ್ದೇ ಹೊರತು ಅಹಿಂದ ನೇತಾರ ಸಿದ್ದರಾಮಯ್ಯನವರಿಗೆ ಕೆಸರು ಎರಚಕೂಡದು.

      Reply

Leave a Reply

Your email address will not be published. Required fields are marked *