ಹಿಂಸೆಯನ್ನು ಅಪ್ಪಿಕೊಂಡ ಇಂಡಿಯಾ


-ಬಿ. ಶ್ರೀಪಾದ್ ಭಟ್


 

ಹಿಂಸೆಯ ಮೂಲಕ ಸಾಧಿಸಿದ ಪ್ರತಿಯೊಂದು ಸುಧಾರಣೆಯು ಖಂಡನೆಗೆ, ತಿರಸ್ಕಾರಕ್ಕೆ ಅರ್ಹವಾಗಿರುತ್ತದೆ. ಏಕೆಂದರೆ ಈ ಸುಧಾರಣೆಯು ದುಷ್ಟಶಕ್ತಿಗಳನ್ನು ನಿಗ್ರಹಿಸುವಂತಹ ಯಾವುದೇ ಕಾರ್ಯಕ್ರಮಗಳನ್ನು ಒಳಗೊಂಡಿರುವುದಿಲ್ಲ ಮತ್ತು ಮನುಷ್ಯರು ಯಥಾಸ್ಥಿತಿಯ ಜೀವನಕ್ರಮಕ್ಕೆ ಶರಣಾಗಿರುತ್ತಾರೆ’- ಟಾಲ್ಸ್ ಸ್ಟಾಯ್

ಆಧುನಿಕ ಭಾರತದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಇಂಡಿಯಾ ಅತ್ಯಂತ ಕಳವಳಕಾರಿಯಾಗಿ ವರ್ತಿಸಿದೆ. 85 ವರ್ಷಗಳಿಂದ ಕಾತುರದಿಂದ, ಅಧಿಕಾರದ ದಾಹದಿಂದ ಕಾಯುತ್ತಿದ್ದ ಫ್ಯಾಸಿಸ್ಟ್ ಆರೆಸ್ಸೆಸ್ ಗುಂಪಿಗೆ ಸಂಪೂರ್ಣ ದೈತ್ಯಶಕ್ತಿಯ ಅಧಿಕಾರ ನೀಡಿದೆ. ಇದು ನಿಸ್ಸಂದೇಹವಾಗಿ ಆರೆಸ್ಸೆಸ್ ನ ಗೆಲುವು. ಮೋದಿ ಇಲ್ಲಿ ಒಂದು ಅಸ್ತ್ರವಷ್ಟೇ. ಕಳೆದ 85 ವರ್ಷಗಳಿಂದ ಧರ್ಮಗಳ, ಜಾತಿಗಳ ಧ್ರುವೀಕರಣದ ಮೂಲಕ ಹಿಂಸೆ ಮತ್ತು ಕೋಮು ಗಲಭೆಗಳನ್ನು ಸಂಘಟಿಸುತ್ತಿದ್ದ ಸಂಘ ಪರಿವಾರಕ್ಕೆ ಇಂಡಿಯಾ ಮೊನ್ನೆಯವರೆಗೂ ಸಂಪೂರ್ಣ ಅಧಿಕಾರವನ್ನು ನಿರಾಕರಿಸಿತ್ತು. ಆದರೆ ಆಳವಾದ, ಶಕ್ತಿಶಾಲಿ ಪ್ರಜಾಪ್ರಭುತ್ವ ರಾಷ್ಟ್ರವೆಂದು ಹೆಮ್ಮೆಪಡುತ್ತಿದ್ದ ಇಂಡಿಯಾಗೆ ಇನ್ನು ಆ ಹೆಗ್ಗಳಿಕೆ ಮುಗಿದ ಕತೆ. ಇಂಡಿಯಾ ಆಳವಾದ, ಶಕ್ತಿಶಾಲಿಯಾದ ಪ್ರಜಾಪ್ರಭುತ್ವ ದೇಶವೇನೋ ನಿಜ. ಆದರೆ ಪ್ರಬುದ್ಧವಾದ ಪ್ರಜಾಪ್ರಭುತ್ವವೇ ಎನ್ನುವ ಪ್ರಶ್ನೆಗೆ ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶ ನಕಾರಾತ್ಮಕ ಉತ್ತರ ನೀಡಿದೆ. ಇಂದು ಪ್ರಜಾಪ್ರಭುತ್ವವೆನ್ನುವುದು ಕೇವಲ ಕೊಡುಕೊಳ್ಳುವಿಕೆಯ ವ್ಯವಹಾರಕ್ಕೆ ಇಳಿದುಬಿಟ್ಟಿದೆ. ಮೇಲ್ನೋಟಕ್ಕೆ ರಾಜಕೀಯ ಪಕ್ಷವೊಂದು ಅತ್ಯಂತ ಪರಿಶ್ರಮದಿಂದ, ಕೋಟಿಗಟ್ಟಲೆ ಹಣ ಸುರಿದು ಅಧಿಕಾರ ಪಡೆದುಕೊಂಡಿರುವುದು ಕಂಡು ಬರುತ್ತದೆ.

ಬಿಜೆಪಿಗೆ ಈ ಬಗೆಯ ದೈತ್ಯಶಕ್ತಿಯ ಅಧಿಕಾರ ನೀಡಿದವರು 20 ರಿಂದ 30 ರ ಹರೆಯದ ಇಂಡಿಯಾದ ಯುವ ಜನತೆ ಎನ್ನುವುದೇ ನಮ್ಮಲ್ಲಿ ಆತಂಕ ಹುಟ್ಟಿಸುತ್ತಿದೆ. ಯಾವುದೇ ಸೈದ್ಧಾಂತಿಕ, ಜನಪರ ಬದ್ಧತೆಗಳಿಲ್ಲದ ಈ ಯುವ ಜನತೆ ಮೋದಿಯನ್ನು ಸಂಪೂರ್ಣವಾಗಿ ಬೆಂಬಲಿಸಿದೆ. Youth_Votingಕೊಳ್ಳುಬಾಕತನದ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದ, ಮೋದಿಗೆ ಅಧಿಕಾರ ನೀಡಿದರೆ ತಮ್ಮ ಎಲ್ಲಾ ವಯುಕ್ತಿಕ ಆಶೋತ್ತರಗಳು ನಿರಂತರವಾಗಿ ಪ್ರಜ್ವಲಿಸುತ್ತಿರುತ್ತವೆ ಎನ್ನುವ ಮೆಟೀರಿಯಲಿಸ್ಟಿಕ್ ವ್ಯಕ್ತಿತ್ವವನ್ನು ಬೆಳಸಿಕೊಂಡಿದ್ದ ಈ ಯುವ ಜನತೆ ಬೇಷರತ್ ಆಗಿಯೇ ಮೋದಿಗೆ ಈ ದೈತ್ಯ ಅಧಿಕಾರವನ್ನು ನೀಡಿದೆ. ಸಾಮಾಜಿಕ ನ್ಯಾಯ, ಸಾಮಾಜಿಕ ಇಂಜಿನಿಯರಿಂಗ್, ಮತೀಯವಾದದ ವ್ಯಾಪ್ತಿ, ಹಿಂಸೆ ಮತ್ತು ಕೊಳ್ಳುಬಾಕು ಸ್ವಾರ್ಥದ ಕುರಿತಾಗಿ ಹೊಸ ಚಿಂತನೆಗಳನ್ನು ಇಂಡಿಯಾದ ಪ್ರಜ್ಞಾವಂತರಾದವರು ಈ ಯುವಜನತೆಗೆ ತಿಳಿಸಿಕೊಡಲಿಲ್ಲ. ಪರ್ಯಾಯ ರಾಜಕೀಯ, ಸಾಮಾಜಿಕ ಹುಡುಕಾಟಗಳನ್ನು ಮಾಡದೆ ಬಿಜೆಪಿಗೆ ಪರ್ಯಾಯ ಸದ್ಯಕ್ಕೆ ಕಾಂಗ್ರೆಸ್ ಮಾತ್ರ ಎಂದು ಇಲ್ಲಿನ ಪ್ರಜ್ಞಾವಂತರು ಹತಾಶೆಯಿಂದ ಕೈಚೆಲ್ಲಿದ್ದನ್ನು ತಿರಸ್ಕರಿಸಿದ ಯುವಜನತೆ ಈ ವೈಫಲ್ಯವನ್ನು ಒಪ್ಪಿಕೊಳ್ಳದೆ ನೇರವಾಗಿ ಮೋದಿಯ ಕಡೆಗೆ ವಾಲಿದರು.ಇದು ಪರೋಕ್ಷವಾಗಿ ಆರೆಸ್ಸೆಸ್ ಗೆ ಬಲು ದೊಡ್ಡ ಶಕ್ತಿಯನ್ನೇ ತಂದುಕೊಟ್ಟಿದೆ.ಕಳೆದ ಎಂಬತ್ತೈದು ವರ್ಷಗಳಿಂದ ಸದಾ ಅಸ್ಥಿರತೆಯಲ್ಲಿ, ಕೀಳರಿಮೆಯಲ್ಲಿ ಬಳಲುತ್ತಿದ್ದ ಆರೆಸ್ಸೆಸ್ ಮೊಟ್ಟ ಮೊದಲ ಬಾರಿಗೆ ಗೆಲುವಿನ, ಹೆಮ್ಮೆಯ ನಗು ಬೀರುತ್ತಿದೆ. ಮತೀಯವಾದಿ ಆರೆಸ್ಸೆಸ್ ಈ ಆತ್ಮವಿಶ್ವಾಸದ ಮುಗುಳ್ನಗೆಗೆ ಕಾರಣರಾದವರು ಹೊಸ ತಲೆಮಾರಿನ ಯುವ ಜನತೆ ಎಂಬುದೇ ನಮ್ಮ ಹೃದಯ ತಲ್ಲಣಿಸುವಂತೆ ಮಾಡುತ್ತದೆ. ತನ್ನ ಸದಸ್ಯರ ಸಂಖ್ಯೆ ಕ್ರಮೇಣ ಕುಂಠಿತಗೊಳ್ಳುತ್ತಿರುವುದು ಆರೆಸ್ಸೆಸ್ ಗೆ ಆತಂಕದ ವಿಷಯವಾಗಿತ್ತು. ಮುಂಚಿನಂತೆ ಶಾಲಾ ಬಾಲಕರನ್ನು, ಕಾಲೇಜು ವಿಧ್ಯಾರ್ಥಿಗಳನ್ನು ಆಕರ್ಷಿಸುವಲ್ಲಿ ಆರೆಸ್ಸೆಸ್ ಸೋಲತೊಡಗಿತ್ತು. ಹಿಂದುತ್ವದ ಫ್ಯಾಸಿಸ್ಟ್ ಸಂಸ್ಕೃತಿ ತನ್ನ ಉಳಿವಿಗಾಗಿ ಹೋರಾಟ ನಡೆಸುತ್ತಿದ್ದಂತಹ ಸಂದರ್ಭದಲ್ಲಿಯೇ ಈ ಮತೀಯವಾದಿಗಳಿಗೆ ಬೆಳ್ಳಿ ತಟ್ಟೆಯಲ್ಲಿ ಅಧಿಕಾರ ನೀಡಿದ ಈ ಯುವ ಜನತೆಯ ನಿಜದ ಸಂಸ್ಕೃತಿ ಮತ್ತು ರಾಷ್ತ್ರದ ಒಟ್ಟಾರೆ ಸಂರಚನೆಯ ಕುರಿತಾದ ಅಜ್ಞಾನವನ್ನು ಕಂಡು ತಳಮಳವಾಗುತ್ತದೆ.

ಜನವರಿ 31,1948ರಲ್ಲಿ ನಡೆದ ಗಾಂಧಿ ಹತ್ಯೆಯ ನಂತರ ಆ ಹತ್ಯೆಯ ಸಂಚಿನಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ 4, ಫೆಬ್ರವರಿ 1948 ರಂದು ಮತೀಯವಾದಿ ಸಂಘಟನೆಯೆಂದು ಆರೆಸಸ್ ಅನ್ನು ನಿಷೇಧಿಸಲಾಯಿತು. ಅದರ ಮುಖ್ಯಸ್ಥರಾದ ಸಾವರ್ಕರ್ ಅವರನ್ನು ಒಳಗೊಂಡಂತೆ ಇತರೇ ನಾಯಕರನ್ನು ಜೈಲಿನಲ್ಲಿ ಇರಿಸಲಾಯಿತು. ನಂತರ ಪ್ರಮುಖ ಸಾಕ್ಷಾಧಾರಗಳ ಕೊರತೆಯಿಂದಾಗಿ 1949 ರಲ್ಲಿ ಆ ನಿಷೇಧವನ್ನು ಹಿಂತೆಗೆಯಲಾಯಿತು. ಗಾಂಧಿಯವರನ್ನು ಕೊಲೆ ಮಾಡುವ ಕೆಲವು ತಿಂಗಳುಗಳ ಮುಂಚೆಯಷ್ಟೇ ನಾಥುರಾಮ್ ಗೋಡ್ಸೆ ಆರೆಸ್ಸೆಸ್ ತೊರೆದು ಅದರ ಅಂಗ ಪಕ್ಷವಾದ ಹಿಂದೂ ಮಹಾಸಭಾಗೆ ಸೇರಿಕೊಂಡಿದ್ದ. ಇಲ್ಲಿ ಕುತೂಹಲಕರವಾದ ವಿಷಯವೇನೆಂದರೆ ಆರೆಸ್ಸೆಸ್ ಗೆ ಸೇರುವ, ತೊರೆಯುವ ಯಾವುದೇ ಸದಸ್ಯರ ಹೆಸರನ್ನು ಆ ಪಕ್ಷ ನೊಂದಾವಣಿ ಮಾಡಿಕೊಳ್ಳುವುದಿಲ್ಲ. ಅದೆಲ್ಲಿಯೂ ದಾಖಲಾಗುವುದಿಲ್ಲ. ಹೀಗಾಗಿ ನಾಥುರಾಮ್ ಗೋಡ್ಸೆ ಆರೆಸ್ಸೆಸ್ ಬಿಟ್ಟಿದ್ದೂ ಸಹ ಕೇವಲ ಬಾಯಿ ಮಾತಿನ ಹೇಳಿಕೆಯಷ್ಟೇ. ವಿಚಾರಣೆಯ ಸಂದರ್ಭದಲ್ಲಿ ಕೋರ್ಟಿನಲ್ಲಿ ಸಾಕ್ಷ ನುಡಿಯುತ್ತಾ ನಾಥುರಾಮ್ ಗೋಡ್ಸೆ ‘ತಾನು ಹಲವಾರು ವರ್ಷಗಳ ಕಾಲ ಆರೆಸ್ಸೆಸ್ ಸದಸ್ಯನಾಗಿ ಕಾರ್ಯ ನಿರ್ವಹಿಸಿದ್ದು ಇತ್ತೀಚೆಗಷ್ಟೇ ಹಿಂದೂ ಮಹಾಸಭಾಗೆ ಸೇರಿಕೊಂಡೆ’ ಎಂದು ಹೇಳಿಕೆ ಕೊಡುತ್ತಾನೆ. ತಾನು ಗಲ್ಲುಗೇರುವ ಸಂದರ್ಭದಲ್ಲಿ ಕಡೆಯ ಕ್ಷಣಗಳಲ್ಲಿ ಈ ಗೋಡ್ಸೆ ‘ನಮಸ್ತೇ ಸದಾ ವತ್ಸಲೇ ಮಾತೃಭೂಮೇ’ ಎನ್ನುವ ಶ್ಲೋಕ ಪಠಿಸುತ್ತಾನೆ. ಇದು ಇಂದಿಗೂ ಆರೆಸ್ಸೆಸ್ ಪ್ರಾರ್ಥನಾ ಗೀತೆ. (ಆರ್.ಡಿ.ಗೋಯಲ್ – ರಾಷ್ಟ್ರೀಯ ಸ್ವಯಂ ಸೇವಕ ಸಂಘ).

ನಂತರ ಆರೆಸಸ್ ನಾಯಕರು ಆಗಿನ ಗೃಹ ಮಂತ್ರಿ ವಲ್ಲಭಾಯಿ ಪಟೇಲರಿಗೆ ಆರೆಸ್ಸೆಸ್ ಸಂಪೂರ್ಣವಾಗಿ ಸಾಂಸ್ಕೃತಿಕ ಸಂಘಟನೆಯಾಗಿಯೇ ಉಳಿಯುವುದೇ ಹೊರತಾಗಿ ರಾಜಕೀಯವಾಗಿ ಯಾವುದೇ ಕಾರಣಕ್ಕೆ ಸಕ್ರಿಯವಾಗುವುದಿಲ್ಲ 09a671d9-189f-4b8a-893f-4833f370ce93HiResಎಂದು ವಾಗ್ದಾನ ನೀಡಿತು ( ದ ಹಿಂದೂ,13, ಅಕ್ಟೋಬರ್ 2013). ಆದರೆ ಇಂದು ಸರ್ದಾರ್ ವಲ್ಲಭಾಯಿ ಪಟೇಲರನ್ನು ತಮ್ಮ ಏಕಮೇವಾದ್ವಿತೀಯ ನಾಯಕರೆಂದು ಕೊಂಡಾಡುತ್ತಿರುವ ಆರೆಸ್ಸೆಸ್ 2014 ಚುನಾವಣೆಯ ಸಂದರ್ಭದಲ್ಲಿ ತನ್ನನ್ನು ಸಕ್ರೀಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದೆ. ಅದೂ ಪ್ರತ್ಯಕ್ಷವಾಗಿ. ಈ ಬಾರಿ ಯಾವುದೇ ಗುಪ್ತಸೂಚಿಗಳಿಲ್ಲ. ಎಲ್ಲವೂ ಪಾರದರ್ಶಕವಾಗಿದೆ. ಡಿ.ಆರ್.ಗೋಯಲ್ ಅವರು ‘ಜನಸಂಘ ಮತ್ತು ಬಿಜೆಪಿ ಎಂದಿಗೂ ರಾಜಕೀಯದಲ್ಲಿ ಬೆಳೆಯಲಿಲ್ಲ. ಆರೆಸ್ಸೆಸ್ ನಲ್ಲಿ ಬೆಳೆದವು. ಆರೆಸಸ್ ಅವರನ್ನು ರಾಜಕೀಯದಲ್ಲಿ ಬೆಳೆಸಿತು’ ಎಂದು ಹೇಳುತ್ತಾರೆ. ಜನತಾ ಪಕ್ಷ ಅಧಿಕಾರದಲ್ಲಿದ್ದ 1979ರ ಸಂದರ್ಭದಲ್ಲಿ ಆ ಸರ್ಕಾರದಲ್ಲಿ ಮಂತ್ರಿಗಳಾಗಿದ್ದ ವಾಜಪೇಯಿ ಮತ್ತು ಅಡ್ವಾನಿಯವರ ಮೇಲೆ ಆರೆಸ್ಸೆಸ್ ಮತ್ತು ಸರ್ಕಾರದ ಮಂತ್ರಿಯ ದ್ವಿಸದಸ್ಯತ್ವವನ್ನು ತೊರೆದು ಒಂದನ್ನು ಆರಿಸಿಕೊಳ್ಳಬೇಕೆಂದು ಒತ್ತಾಯ ಬಂದಾಗ ಇವರಿಬ್ಬರೂ ಸರ್ಕಾರವನ್ನೇ ಇಬ್ಭಾಗ ಮಾಡಿದರೇ ಹೊರತು ಆರೆಸಸ್ ಸದಸ್ಯತ್ವ ಬಿಡಲಿಲ್ಲ.

ಈ ಆರೆಸ್ಸೆಸ್ ನ ಹುಟ್ಟೇ ಅತ್ಯಂತ ಕುತೂಹಲಕರ. ಡಾ.ಹೆಡಗೇವಾರ್, ಬಿ.ಎಸ್.ಮೂಂಜೆ, ಎಲ್.ವಿ.ಪರಾಂಜಪೆ, ಬಿ.ಪಿ.ಥಾಲ್ಕರ್, ಸಾವರ್ಕರ್ ಇವರೆಲ್ಲಾ ಬ್ರಾಹ್ಮಣತ್ವದ ಪುನರುಜ್ಜೀವನಕ್ಕಾಗಿ ಪಣ ತೊಟ್ಟವರು. 1925ರಲ್ಲಿ ಒಟ್ಟಾಗಿ ಸೇರಿ ಆರೆಸ್ಸೆಸ್ ಪಕ್ಷವನ್ನು ಸ್ಥಾಪಿಸಿದರು. ಮುಸ್ಲಿಂರ ಬೆಳವಣಿಗೆ ಮತ್ತು ದಲಿತರ ಹೋರಾಟಗಳಿಂದ ಆತಂಕಕ್ಕೆ ಒಳಗಾಗಿ ಆರೆಸ್ಸೆಸ್ ಅನ್ನು ಸಂಘಟಿಸಲಾಯಿತು ಎಂದು ಹೆಡಗೇವಾರ್ ಹೇಳುತ್ತಾರೆ (ಸಂಘವೃಕ್ಷಕೀ ಬೀಜ್ – ಸಿ.ಪಿ.ಭಿಷಿಕರ್). ಅಂಬೇಡ್ಕರ್ ಅವರು ಸಂಸತ್ತಿನಲ್ಲಿ ಮಂಡಿಸಿದ ಕ್ರಾಂತಿಕಾರಿ ಹಿಂದೂ ಮಹಿಳಾ ಮಸೂದೆಯನ್ನು ಗೋಳ್ವಲ್ಕರ್ ಮತ್ತಿತರ ಆರೆಸಸ್ ನಾಯಕರು ವಿರೋಧಿಸುತ್ತಾರೆ. ಏಕೆಂದರೆ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಸ್ತ್ರೀಗೆ ಸಮಾನ ಹಕ್ಕನ್ನು ಕೊಡುವ ಈ ಮಸೂದೆ ಹಿಂದೂ ಧರ್ಮದ ಸನಾತನ ಪದ್ಧತಿಗೆ ವಿರುದ್ಧವಾದದ್ದು ಎಂದು ಇವರು ವಾದಿಸುತ್ತಾರೆ. ಇಂದು ಇದೇ ಆರೆಸ್ಸೆಸ್ ಬಹುಮತ ಸಾಧಿಸಿದೆ.

ಹಿಂದೂ ರಾಷ್ಟ್ರವೇ ತನ್ನ ಪ್ರಮುಖ ಗುರಿಯೆಂದು ಹೇಳಿಕೊಳ್ಳುವ ಆರೆಸಸ್ ಅಂದಿನಿಂದಲೂ ಬಹುಸಂಸ್ಕೃತಿಯನ್ನು, ಸರ್ವಧರ್ಮ ಸಮಾನತೆಯನ್ನು, ಸಮತಾವಾದವನ್ನು ವಿರೋಧಿಸುತ್ತಲೇ ಬಂದಿದೆ. ಆರೆಸ್ಸೆಸ್ ನ ಹಿಂದುತ್ವದ ಪರಿಕಲ್ಪನೆಯೆಂದರೆ ಏಕರೂಪಿ ಸಂಸ್ಕೃತಿ, ಮರಳಿ ವರ್ಣಾಶ್ರಮದ ಜಾತಿ ಪದ್ಧತಿಯ ಪರಂಪರೆಗೆ ಮರಳುವುದು. ಇದು ಅದರ ಮೂಲಭೂತ ಐಡಿಯಾಲಜಿ. ಈ ಹಿಂದೂ ರಾಷ್ಟ್ರದಲ್ಲಿ ದಲಿತರು ಮತ್ತೊಮ್ಮೆ ಊರ ಹೊರಗೆ ಬದುಕಬೇಕಾಗುತ್ತದೆ. ಅಲ್ಪಸಂಖ್ಯಾತರನ್ನು ಅಧಿಕೃತವಾಗಿಯೇ ಎರಡನೇ ದರ್ಜೆಯ ನಾಗರಿಕರೆಂದೇ ಪರಿಗಣಿಸುತ್ತದೆ. ಆರೆಸ್ಸೆಸ್ ಸಂಸ್ಥಾಪಕರಾದ ಹೆಡ್ಗೇವಾರ್, ಸಾವರ್ಕರ್, ಗೋಳ್ವಲ್ಕರ್ ಅವರ ಹಿಂದುತ್ವದ ಪರವಾಗಿ, ಅಲ್ಪಸಂಖ್ಯಾತರನ್ನು ವಿರೋಧಿಸಿ ಬರೆದ ಬೆಂಕಿಯುಗುಳುವ ಪಠ್ಯಗಳ ಕುರಿತು ಮತ್ತೆ ಮತ್ತೆ ಇಲ್ಲಿ ಪ್ರಸ್ತಾಪಿಸುವ ಅಗತ್ಯವಿಲ್ಲ. ಆ ಗ್ರಂಥಗಳು ಇಂದಿಗೂ ಆರೆಸ್ಸೆಸ್ ನ ಬೈಬಲ್, ಭಗವದ್ಗೀತೆ. ಹಿಂದೊಮ್ಮೆ ಸಂಘ ಪರಿವಾರದ ವಿಜಯರಾಜೇ ಸಿಂಧ್ಯಾ ಅವರು ಸತಿ ಪದ್ಧತಿಯನ್ನು ಸಮರ್ಥಿಸಿ ಮಾತನಾಡಿದ್ದರು. ಆರೆಸ್ಸೆಸ್ ನ ಪ್ರಮುಖರಾದ ಬಾಳಾಸಾಹೇಬ್ ದೇವರಸ್, ಸುದರ್ಶನ್, ಮೋಹನ್ ಭಾಗವತ್ ಹಿಂದೂ ಧರ್ಮದಲ್ಲಿನ ಜಾತಿ ಪದ್ಧತಿಯ ಕುರಿತಾಗಿ ಕಳವಳ ವ್ಯಕ್ತಪಡಿಸುತ್ತಾರೆ. ಆದರೆ ಅದರ ಜಾತಿ ವಿನಾಶದ ಕುರಿತಾಗಿ ಎಲ್ಲಿಯೂ ಮಾತನಾಡದೆ ಕೇವಲ ಸುಧಾರಣೆಯ ಕುರಿತಾಗಿ ಹೇಳಿಕೆ ಕೊಡುತ್ತಾರೆ. ಇದು ಇವರ ಸನಾತನ ಮನಸ್ಥಿತಿಯನ್ನು ಬಯಲುಗೊಳಿಸುತ್ತದೆ. ಆರೆಸ್ಸೆಸ್ ವಲಯಗಳಲ್ಲಿ ಪರಮ ಪೂಜ್ಯ ಎಂದೇ ಕರೆಯಲ್ಪಡುವ ಮೋಹನ್ ಭಾಗವತ್ ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರಗಳಿಗೆ ಪ್ರತಿಕ್ರಿಯಿಸುತ್ತಾ ಈ ರೇಪ್ ಕೇಸುಗಳು ಇಂಡಿಯಾದಲ್ಲಿ ಮಾತ್ರ ನಡೆಯುತ್ತವೆ; ಭಾರತದಲ್ಲಿ ಅಲ್ಲ ಎಂದು ಹೇಳಿಕೆ ಕೊಡುತ್ತಾರೆ. ಅಂದರೆ ದೇಶ ಆಧುನಿಕಗೊಂಡಷ್ಟೂ ಈ ಅತ್ಯಾಚಾರಗಳು ಜರಗುತ್ತಿರುತ್ತವೆ. ಆದರೆ ಭಾರತ ದೇಶವು ಕರ್ಮಠತನವನ್ನು ಮೈಗೂಡಿಸಿಕೊಂಡು ಸನಾತನ ಪರಂಪರೆಗೆ ಮರಳಿದರೆ ರೇಪ್ ನಡೆಯುವುದಿಲ್ಲ ಎಂದು ಈ ಸರ ಸಂಚಾಲಕರ ಮುತ್ತಿನ ನುಡಿಗಳು. ಉರ್ದು ಭಾಷೆ ಆರೆಸಸ್ ಪ್ರಕಾರ ವಿದೇಶಿ ಭಾಷೆ. ಅದಕ್ಕೆ ಇಲ್ಲಿ ಸ್ಥಳವಿಲ್ಲ. ಇಂದು ಇವರಿಗೆ ಬಹುಮತ ದೊರಕಿದೆ.

ಆರೆಸ್ಸೆಸ್ ನ ಅಖಂಡ ಭಾರತದ ನಕ್ಷೆಯ ಪ್ರಕಾರ ಹಿಮಾಲಯದಿಂದ ಕನ್ಯಾಕುಮಾರಿಯAkhand bharatವರೆಗೆ ಮತ್ತು ಗಾಂಧಾರ್ ನಿಂದ ಭ್ರಹ್ಮದೇಶದವರೆಗೆ ಅಂದರೆ ಇದು ಉತ್ತರದ ಟಿಬೆಟ್, ಪಶ್ಚಿಮದ ಅಫಘಾನಿಸ್ತಾನ, ಪಾಕಿಸ್ತಾನ, ಮಯನಾರ್,ಕಾಂಬೋಡಿಯ ಎಲ್ಲವೂ ಅಖಂಡ ಭಾರತದ ಅಡಿಯಲ್ಲಿ ಬರುತ್ತವೆ. ಇನ್ನು ಕಾಂಗ್ರೆಸ್ನ ಹೈಕಮಾಂಡ್ ಸಂಸ್ಕೃತಿಯನ್ನು ಟೀಕಿಸುವ ಆರೆಸ್ಸೆಸ್ ನ ಅದರ ಮುಖ್ಯಸ್ಥನನ್ನು ಚುನಾಯಿಸುವುದಿಲ್ಲ. ಬದಲಾಗಿ ಹೇರಲ್ಪಡುತ್ತಾನೆ. ಆರೆಸಸ್ ಸ್ಥಾಪಕರಾದ ಹೆಡ್ಗೇವಾರ್ ಮತ್ತು ಗೋಳ್ವಲ್ಕರ್ ಅವರ ಫೋಟೋಗಳು ಇಂದಿಗೂ ಎಲ್ಲಾ ಶಾಖಾಗಳಲ್ಲಿಯೂ ಗುರೂಜಿಯ ಹೆಸರಿನಲ್ಲಿ ಶ್ರದ್ಧಾ ಭಕ್ತಿಯಿಂದ ಪೂಜಿಸಲ್ಪಡುತ್ತದೆ. ಇಂದು ಇಂತಹ ಫ್ಯಾಸಿಸ್ಟ್ ಆರೆಸ್ಸೆಸ್ ಗೆ ಬಹುಮತ ದೊರಕಿದೆ.

ಈ ಆರೆಸ್ಸೆಸ್ ನ ಪ್ರಮುಖ ಅಂಗ ಪಕ್ಷಗಳೆಂದರೆ ಬಿ.ಜೆ.ಪಿ (ರಾಜಕೀಯ ಪಕ್ಷ), ವಿ.ಎಚ್.ಪಿ (ಧಾರ್ಮಿಕ ಘಟಕ), ಭಜರಂಗ ದಳ (ಮಿಲಿಟೆಂಟ್ ಘಟಕ), ಅಖಿಲಭಾರತ ವಿಧ್ಯಾರ್ಥಿ ಪರಿಷತ್ (ಎಬಿವಿಪಿ), ಹಿಂದೂ ಜಾಗರಣ ಮಂಚ್,  ಸೇವಾ ದಳ – ಸಾಮಾಜಿಕ ಸೇವಾ ದಳ.  ಇದರ ಅಡಿಯಲ್ಲಿ ಬರುವ ಇತರ ಘಟಕಗಳೆಂದರೆ ಸೇವಾ ಇಂಟರನ್ಯಾಷನಲ್, ಸೇವಾ ಭಾರತಿ, ವಿದ್ಯಾ ಭಾರತಿ, ವನವಾಸಿ ಕಲ್ಯಾಣ ಆಶ್ರಮ, ಏಕಲ ವಿದ್ಯಾಲಯ, ವಿಕಾಸ ಭಾರತಿ, ಸಂಸ್ಕೃತ ಭಾರತಿ. ಇವಲ್ಲದೇ ವಿದೇಶಗಳಲ್ಲಿಯೂ ಫ್ರೆಂಡ್ಸ್ ಆಫ್ ಹಿಂದೂ ಸೊಸೈಟಿ, ಹಿಂದೂ ಯೂನಿಟಿ, ಐಡಿಆರ್ಎಫ್, ವಿ.ಎಚ್.ಪಿ (ಅಮೇರಿಕ), ಹಿಂದೂ ಸ್ವಯಂಸೇವಕ ಸಂಘ ಹೀಗೆ ಅನೇಕ ಹಿಂದೂ ಸಂಘಟನೆಗಳಿವೆ.ಇವೆಲ್ಲಾ ಆರೆಸ್ಸೆಸ್ ಗೆ ಬದ್ಧವಾಗಿವೆ. ತನ್ನ ಶಿಷ್ಯರಿಂದ, ದಾನಿಗಳಿಂದ, ಅನಿವಾಸಿ ಭಾರತೀಯರಿಂದ ಆರ್ಥಿಕ ಅನುದಾನವನ್ನು ಸ್ವೀಕರಿಸುವ ಆರೆಸ್ಸೆಸ್ ಇದಕ್ಕೆ ಗುರುದಕ್ಷಿಣ ಎಂದು ಕರೆದುಕೊಳ್ಳುತ್ತದೆ.

ಈ ಎಲ್ಲಾ ಅಂಗ ಸಂಸ್ಥೆಗಳನ್ನು ಆರೆಸ್ಸೆಸ್ ನಿಯಂತ್ರಿಸುತ್ತದೆ. ಬಿಜೆಪಿ ರಾಜಕೀಯವಾಗಿ ಅತ್ಯಂತ ಬಲಿಷ್ಠ ಅಂಗ ಪಕ್ಷವಾಗಿದ್ದರೆ ಇತರೇ ಗುಂಪುಗಳು ಸಂಪೂರ್ಣವಾಗಿ ಆರೆಸ್ಸೆಸ್ ನ ಹಿಡಿತದಲ್ಲಿವೆ. ಈ ಎಲ್ಲಾ ಅಂಗ ಸಂಸ್ಥೆಗಳ ಮುಖ್ಯ ಉದ್ದೇಶ ಬಲಿಷ್ಠ ಹಿಂದೂ ರಾಷ್ಟ್ರದ ಸ್ಥಾಪನೆ. ಅದಕ್ಕಾಗಿ ಸಮಾಜದ ವಿವಿಧ ವಲಯಗಳಾದ ಶಿಕ್ಷಣ, ಹಣಕಾಸು, ಅನೇಕ ಎನ್.ಜಿ.ಓ ಗಳ ಅಡಿಯಲ್ಲಿ ಈ ಸಂಘ ಪರಿವಾರದ ಅಂಗ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತವೆ. ಇವುಗಳ ನೆಟ್ ವರ್ಕಿಂಗ್ ಅತ್ಯಂತ ಶಕ್ತಿಶಾಲಿಯಾಗಿದೆ. 2014ರ ಚುನಾವಣಾ ಫಲಿತಾಂಶದ ನಂತರ ಈಗ ಕೇಂದ್ರದಲ್ಲಿ ಆರೆಸ್ಸೆಸ್ ಸಂಪೂರ್ಣ ಬಹುಮತ ಹೊಂದಿದೆ. ಮುಂದಿನ ದಿನಗಳಲ್ಲಿ ಮೇಲಿನ ಎಲ್ಲಾ ಘಟಕಗಳು ಮತ್ತಷ್ಟು ಬಲಗೊಳ್ಳುತ್ತವೆ. ಪ್ರಭಾವಶಾಲಿಯಾಗಿ ದೈತ್ಯ ಸ್ವರೂಪದಲ್ಲಿ ಬೆಳೆಯುತ್ತವೆ. ಸಂದೇಹವೇ ಬೇಡ. ಇವೆಲ್ಲವೂ ಹಿಂದುತ್ವದ ಹೆಸರಿನಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ತಮ್ಮ ಪ್ರಭಾವವನ್ನು ಬಳಸಿಕೊಳ್ಳುವುದಂತೂ ಸತ್ಯ. ಇವರು ಮೊಟ್ಟ ಮೊದಲು ಕೈ ಹಾಕುವುದೇ ಪಠ್ಯಪುಸ್ತಕಗಳ ಕೇಸರೀಕರಣಕ್ಕೆ. ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಕೇಸರೀಕರಣಗೊಳಿಸುವವರೆಗೂ ಆರೆಸ್ಸೆಸ್ ವಿಶ್ರಮಿಸುವುದಿಲ್ಲ. ಇಂಡಿಯಾದ ಜನತೆಯನ್ನು ಮಾನಸಿಕವಾಗಿ ಸಂಪೂರ್ಣವಾಗಿ ಕಬ್ಜಾ ಮಾಡಿಕೊಳ್ಳುವುದೇ ಆರೆಸ್ಸೆಸ್ ನ ಪ್ರಮುಖ ಅಜೆಂಡಾ. ಏಕೆಂದರೆ ಆರೆಸ್ಸೆಸ್ ಗೆ ಆಡಳಿತ ನಡೆಸುವುದಕ್ಕಿಂತಲೂ ಮುಖ್ಯ ಮಾನಸಿಕ ಹಿಡಿತವನ್ನು ಸಾಧಿಸುವುದು.

ಇನ್ನು ಕಳೆದ ಐವತ್ತು ವರ್ಷಗಳಲ್ಲಿ ಆರೆಸ್ಸೆಸ್ ನ ಬಲಿಷ್ಠ ಅಂಗ ಪಕ್ಷಗಳಾದ ಬಿಜೆಪಿ, ಬಜರಂಗದಳ, ವಿ.ಎಚ್.ಪಿ ಗಳು ನಡೆಸಿದ ಹಿಂಸಾಚಾರ, ಮತೀಯ ಗಲಭೆಗಳು, ಹತ್ಯಾಕಾಂಡಗಳ ಕುರಿತಾಗಿ ತನಿಖೆ ನಡೆಸಿದ, ನಡೆಸುತ್ತಿರುವ ಕೆಲವು ಆಯೋಗಗಳ ವಿವರ ಈ ರೀತಿ ಇದೆ. 1969ರಲ್ಲಿ ಅಹಮದಾಬಾದಿನಲ್ಲಿ ನಡೆದ ಗಲಬೆಗಳ ತನಿಖೆಗಾಗಿ ಜಗಮೋಹನ್ ರೆಡ್ಡಿ ಕಮಿಷನ್, 1970ರಲ್ಲಿ ಭಿವಂಡಿಯಲ್ಲಿ ನಡೆದ ಕೋಮು ಗಲಭೆಗಳ ತನಿಖೆಗಾಗಿ ಮದನ್ ಕಮಿಷನ್, 1971ರಲ್ಲಿ ತೆಲ್ಲಿಚೆರಿ ಕೋಮು ಗಲಭೆಗಳ ತನಿಖೆಗಾಗಿ ವಿಠ್ಯಾತಿಲ್ ಕಮಿಷನ್, 1979ರಲ್ಲಿ ಜೆಮ್ ಶೆಡ್ಪುರದಲ್ಲಿ ನಡೆದ ಗಲಭೆಗಳ ತನಿಖೆಗಾಗಿ ಜಿತೇಂದ್ರ ನಾರಾಯಣ ಕಮಿಷನ್, 1982ರಲ್ಲಿ ಕನ್ಯಾಕುಮಾರಿಯಲ್ಲಿ ನಡೆದ ಕೋಮು ಗಲಬೆಗಳ ತನಿಖೆಗಾಗಿ ಪ.ವೇಣುಗೋಪಾಲ್ ಕಮಿಷನ್-ಇವು ಕೆಲವು ಉದಾಹರಣೆಗಳು ಮಾತ್ರ. ಇನ್ನು ಬಾಬರಿ ಮಸೀದಿ ಧ್ವಂಸ ಮತ್ತು ನಂತರದ ಹತ್ಯಾಕಾಂಡದ ಸಂಬಂಧ ಮತ್ತು 2002ರ ಗುಜರಾತ್ ಹತ್ಯಾಕಾಂಡದ ಸಂಬಂಧದ ತನಿಖೆಗಳು ಇಂದಿಗೂ ಪ್ರಗತಿಯಲ್ಲಿವೆ.

ಅಮೇರಿಕದ ಅಧ್ಯಕ್ಷನಾಗಿದ್ದ ಬುಷ್ ಹಿಂದೊಮ್ಮೆ ‘ನೀವು ನಮ್ಮೊಡನೆ ಇದ್ದೀರಿ, ಇಲ್ಲ ನಮ್ಮ ವಿರುದ್ಧ ಇದ್ದೀರಿ’ ಎಂದು ಅಹಂಕಾರದಿಂದ ನುಡಿಯುತ್ತಾನೆ. ಇಂದು ಆರೆಸ್ಸೆಸ್ ಕೂಡ ಅದೇ ಭಾಷೆಯನ್ನು ಬಳಸುತ್ತಿದೆ. ಹಿಂದೂ ರಾಷ್ಟ್ರೀಯತೆಯನ್ನು ಒಪ್ಪಿಕೊಂಡರೆ ನೀವು ನಮ್ಮೊಡನೆ ಇದ್ದೀರಿ, ಇಲ್ಲದಿದ್ದರೆ ನಮ್ಮ ವಿರುದ್ಧ ಇದ್ದೀರಿ ಎಂದೇ ಅದು ಧಮಕಿ ಹಾಕುವುದು ನಿಶ್ಚಿತ. ಫ್ಯಾಸಿಸ್ಟ್ ಸಮಾಜದಲ್ಲಿ ವಿರೋಧಿಗಳ ಗತಿ ಏನೆಂದು ಎಲ್ಲರಿಗೂ ಗೊತ್ತು.

16 thoughts on “ಹಿಂಸೆಯನ್ನು ಅಪ್ಪಿಕೊಂಡ ಇಂಡಿಯಾ

 1. M A Sriranga

  ಶ್ರೀಪಾದ್ ಭಟ್ ಅವರಿಗೆ–(೧)ಕಾಂಗ್ರೆಸ್ಸ್ ಹೈಕಮಾಂಡ್ ಸಂಸ್ಕೃತಿಯನ್ನು ………….. >>>>>>ಆರೆಸ್ಸಸ್ ಕಾಂಗ್ರೆಸ್ಸ್ ನಂತೆ ಒಂದು “ರಾಜಕೀಯ ಪಕ್ಷವೆ? ‘ಆರೆಸ್ಸೆಸ್’ ಕಡೆಯಪಕ್ಷ ಯಾವುದಾದರೂ ಗ್ರಾಮಪಂಚಾಯಿತಿ/ಜಿಲ್ಲಾ ಪಂಚಾಯಿತಿಯಲ್ಲಾದರೂ ಅಧಿಕಾರ ನಡೆಸುತ್ತಿದೆಯೇ?
  (೨) ಒಂದು ಸಂಸ್ಥೆ ತನ್ನ ಸ್ಥಾಪಕರ ಫೋಟೋಗಳಿಗೆ ಭಕ್ತಿಯಿಂದ/ಗೌರವದಿಂದ ನಡೆದುಕೊಳ್ಳುವುದು/ಪೂಜಿಸಲ್ಪಡುವುದು ಹೇಗೆ ಫ್ಯಾಸಿಸ್ಟ್ ಮನೋವೃತ್ತಿಯಾಗುತ್ತದೆ? ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಪ್ರತಿ ಬ್ರಾಂಚಿನಲ್ಲಿ ಆ ಬ್ಯಾಂಕಿನ ಸ್ಥಾಪಕರಾದ ಸರ್ ಎಂ ವಿ ಅವರ ಫೋಟೋ ಇದೆ. ಕರ್ನಾಟಕದ ಇನ್ಸ್ಟಿಟ್ಯೂಟ್ ಆಫ್ ಇಂಜಿನೀಯರ್ಸ್ ಸರ್ ಎಂ ವಿ ಅವರ ಜನ್ಮ ದಿನವನ್ನು ಎಂಜಿನಿಯರ್ಸ್ ಡೇ ಎಂದು ಆಚರಿಸುತ್ತಾರೆ. ಹಾಗಾದರೆ ಈ ಎರಡೂ ಸಂಸ್ಥೆಗಳು ಫ್ಯಾಸಿಸ್ಟೇ?ನಾವು ನಮ್ಮ ನಮ್ಮ ಮನೆಗಳಲ್ಲಿ ಗತಿಸಿದ ನಮ್ಮ ಹಿರಿಯರ ಫೋಟೋಗಳಿಗೆ ಹಬ್ಬ ಹರಿದಿನಗಳಲ್ಲಿ ಹೂವಿನ ಹಾರ ಹಾಕುತ್ತೇವೆ. ವರ್ಷಕ್ಕೊಂದು ಬಾರಿ ಅವರ ತಿತಿ ಮಾಡುತ್ತೇವೆ. (ಕೆಲವರು ನವರಾತ್ರಿಯ ದಿನಗಳಲ್ಲಿ ಅವರ ಹಿರಿಯರ ಹೆಸರಿನಲ್ಲಿ ಪೂಜೆ ಮಾಡುತ್ತಾರೆ). ನಾವು ನಮ್ಮ /ನಮ್ಮ ಮಕ್ಕಳ ಹುಟ್ಟಿದ ಹಬ್ಬ/ಮದುವೆಯ ದಿನಗಳನ್ನು ಪ್ರತಿ ವರ್ಷ ಹಬ್ಬದ ರೀತಿಯಲ್ಲಿ ಆಚರಿಸುತ್ತೇವೆ . ನಿಮ್ಮ ವಾದದ ಪ್ರಕಾರ ಇಡೀ “ಇಂಡಿಯಾದ” ಜನಗಳೆಲ್ಲಾ ಫ್ಯಾಸಿಸ್ಟರೇ ಅಂದ ಹಾಗಾಯಿತಲ್ಲ!!!!
  (೩)…….. ಕುತೂಹಲಕರವಾದ ವಿಷಯವೆಂದರೆ ಆರೆಸ್ಸೆಸ್ ಗೆ ಸೇರುವ,ತೊರೆಯುವ ಯಾವುದೇ ಸದಸ್ಯರ ಹೆಸರನ್ನು ಆ ಪಕ್ಷ ನೋಂದಾವಣೆ ಮಾಡಿಕೊಳ್ಳುವುದಿಲ್ಲ>>>>>> ಆರೆಸ್ಸೆಸ್ ಒಂದು “ಪಕ್ಷವಲ್ಲ”;ಕೋಆಪರೇಟಿವ್ ಸೊಸೈಟಿ/ಬ್ಯಾಂಕ್ ಅಲ್ಲ. ಅಲ್ಲಿಗೆ ಸೇರಲು ಯಾವುದೇ ಶುಲ್ಕವಿಲ್ಲ;
  ಷೇರುಗಳ ಮಾರಾಟ ಅಲ್ಲಿಲ್ಲ. ಹೀಗಾಗಿ ನೋಂದಣಿ ,ದಾಖಲಾತಿಯ ರಿಜಿಸ್ಟರ್ ಏಕೆ ಬೇಕು?
  (೪) ಲೋಕಸಭೆಯ ಒಟ್ಟು ೫೪೩ ಸ್ಥಾನಗಳಲ್ಲಿ ಎನ್ ಡಿ ಎ ಮೈತ್ರಿಕೂಟ ಪಡೆದಿರುವುದು ೩೩೬ ಬಿಜೆಪಿ ಒಂದೇ ಪಡೆದಿರುವುದು ೨೮೨ ; ಎನ್ ಡಿಯೇತರ ಪಕ್ಷಗಳ ೨೦೭ ರಷ್ಟು ಎಂಪಿ ಗಳ ವಿರೋಧ ಇದ್ದೆ ಇದೆಯಲ್ಲ? ಒಂದು ವೇಳೆ ಬಿ ಜೆ ಪಿ ,ಎನ್ ಡಿ ಎ ದಲ್ಲಿರುವ ತನ್ನ ಮಿತ್ರ ಪಕ್ಷಗಳನ್ನು ಬಿಟ್ಟು ತಾನೇ ಏಕೈಕ ಪಕ್ಷವಾಗಿ ಆಡಳಿತ ನಡೆಸಿದರೂ ಎಲ್ಲಾ ವಿರೋಧಪಕ್ಷಗಳು ಒಂದಾಗಿ ತಾವು “ಊಹಿಸಿರುವ ” ಫ್ಯಾಸಿಸ್ಟ್ ಶಕ್ತಿಯನ್ನು ಸಮರ್ಥವಾಗಿ ಎದುರಿಸಬಹುದಲ್ಲವೇ? ಈ ಎಲ್ಲಾ ಸಾಧ್ಯತೆಗಳಿರುವಾಗ ‘ಹಿಂಸೆಯನ್ನು ಅಪ್ಪಿಕೊಂಡ ಇಂಡಿಯಾ’ ಎಂಬ ಕಳವಳದಲ್ಲಿ ಏನೂ ಅರ್ಥವಿಲ್ಲ.
  (೫) ಕೊನೆಯದಾಗಿ ತಾವು ಲೇಖನದಲ್ಲಿ ಬಹಿರಂಗವಾಗಿ ಸೂಚಿಸದಿದ್ದರೂ ತಮ್ಮ ಮತ್ತು ತಮ್ಮಂತಹ ಚಿಂತಕರ ಪ್ರಕಾರ ಕಾಂಗ್ರೇಸ್ ಒಂದಕ್ಕೆ ಈ ಇಂಡಿಯಾವನ್ನು ಆಳುವ
  ಜಾತ್ಯಾತೀತ ಶಕ್ತಿಯಿರುವುದು ಎಂದು ಭಾವಿಸಿದ್ದೀರಿ. ಬುದ್ಧಿಜೀವಿಗಳಿಗೆ,,ಮಾಧ್ಯಮಗಳಿಗೆ ಪ್ರಿಯವಾಗಿದ್ದ ಕಾಂಗ್ರೆಸ್ಸ್ ನ B -team ನಂತ್ತಿದ್ದ AAP ನ ಕೇಜ್ರಿವಾಲರ crazy ಆಟವನ್ನು ಡೆಲ್ಲಿಯ ಜನರೇ ೭–೦ ಗೋಲುಗಳಿಂದ ಸೋಲಿಸಿದ್ದಾರೆ!. ಅಧಿಕಾರಕ್ಕಾಗಿ ಮತ್ತೆ ಡೆಲ್ಲಿಯಲ್ಲಿ ಈಗ ತನ್ನ ಆಟ ಪ್ರಾರಂಭಿಸುತ್ತಿದ್ದಾರೆ.

  Reply
 2. Anand Prasad

  ಪುರೋಹಿತಶಾಹಿ ಸಮಾಜದ ಮೇಲೆ ಮಾನಸಿಕ ಹಿಡಿತ ಸಾಧಿಸಲು ಭಕ್ತಿಯ, ಉನ್ಮಾದದ ಮಾರ್ಗವನ್ನು ಅನುಸರಿಸುತ್ತದೆ. ಇದಕ್ಕಾಗಿ ವಿವಿಧ ರೀತಿಯ ಆಚರಣೆಗಳನ್ನು ರೂಪಿಸಿದೆ. ಒಮ್ಮೆ ಹೀಗೆ ಮಾನಸಿಕ ಹಿಡಿತ ಸಾಧಿಸಿದರೆ ನಂತರ ಸಮಾಜವನ್ನು ಆಳುವುದು ಸುಲಭ. ಭಾರತದಲ್ಲಿ ಹಲವು ಶತಮಾನಗಳಿಂದ ಪುರೋಹಿತಶಾಹಿ ಇದೇ ರೀತಿ ಸಮಾಜದ ಮೇಲೆ ಹಿಡಿತ ಸಾಧಿಸಿಕೊಂಡೇ ಬಂದಿದೆ. ಸ್ವಾತಂತ್ರ್ಯ ಹೋರಾಟದ ನಂತರ ದೇಶವು ಸಂವಿಧಾನ ಅಳವಡಿಸಿಕೊಂಡಾಗ ಸಮಾಜದ ಮೇಲೆ ಪುರೋಹಿತಶಾಹಿಯ ಹಿಡಿತ ಸ್ವಲ್ಪ ಮಟ್ಟಿಗೆ ಕುಂದಿತು ಏಕೆಂದರೆ ಅಂಬೇಡ್ಕರ್, ನೆಹರೂ ಅವರಂಥ ಧೀಮಂತರು ಎಲ್ಲರಿಗೂ ಸಂವಿಧಾನದ ಪ್ರಕಾರ ಹಕ್ಕುಗಳನ್ನು ಅಳವಡಿಸಿದರು. ತದನಂತರ ಅಧಿಕಾರ ಕೇಂದ್ರವನ್ನು ಹಿಡಿಯಲು ಪುರೋಹಿತಶಾಹಿ ಸಂಘ ಪರಿವಾರದ ರೂಪದಲ್ಲಿ ಪ್ರಯತ್ನಿಸುತ್ತಲೇ ಬಂದಿದೆ. ಅದು ಈ ಸಲ ಮೋದಿ ಎಂಬ ದಣಿವರಿಯದ ಮಹಾಸೇನಾನಿಯ ಹಾಗೂ ಬಂಡವಾಳಶಾಹಿಗಳ ಸಂಪೂರ್ಣ ಧನಬಲದ ಸಹಾಯದ ಮೂಲಕ ಈಡೇರಿದೆ. ಇನ್ನು ಮುಂದೆ ಪುರೋಹಿತಶಾಹಿ ಆಚರಣೆಗಳು ವಿಜ್ರಂಭಿಸಲಿದ್ದು ಸಮಾಜದ ಮೇಲೆ ಹಿಡಿತ ಬಲವಾಗಿ ರೂಪುಗೊಳ್ಳಲಿದೆ.

  Reply
 3. Ananda Prasad

  ಬೆಲೆ ಏರಿಕೆ, ಹಣದುಬ್ಬರ, ದುಬಾರಿಯಾಗಿರುವ ಎಲ್ಲ ದಿನಬಳಕೆ ವಸ್ತುಗಳು ಮೂಲತಃ ಡೀಸೆಲ್ ಬೆಲೆ ಹೆಚ್ಚಳದ ಕಾರಣದಿಂದಾಗಿ ಉಂಟಾಗುತ್ತಿವೆ. ಹಿಂದಿನ ಸರ್ಕಾರ ಡೀಸೆಲ್ ಬೆಲೆಯನ್ನು ನಿರಂತರವಾಗಿ ಹೆಚ್ಚಿಸುತ್ತಾ ಡೀಸೆಲ್ ಬೆಲೆಯನ್ನು ಮಾರುಕಟ್ಟೆ ಬೆಲೆಗೆ ಸರಿದೂಗಿಸಲು ಕ್ರಮ ಕೈಗೊಂಡಿತ್ತು. ಇದನ್ನು ಮೋದಿ ನೇತೃತ್ವದ ಸರಕಾರ ಹಿಂಪಡೆದು ಡೀಸೆಲ್ ಸಬ್ಸಿಡಿಯನ್ನು ಮೊದಲಿದ್ದಂತೆ ಮುಂದುವರಿಸುವ ಸಂಭವ ಇಲ್ಲ. ಹೀಗಿರುವಾಗ ಬೆಲೆ ಏರಿಕೆ, ಹಣದುಬ್ಬರ, ದಿನಬಳಕೆ ವಸ್ತುಗಳ ಬೆಲೆ ಇಳಿಯುವ ಸಂಭಾವ್ಯತೆ ಮೋದಿ ಸರಕಾರದಲ್ಲಿಯೂ ಕಾಣಿಸುವುದಿಲ್ಲ. ದೇಶದಲ್ಲಿ ಇಂದು ಕಂಡು ಬಂದಿರುವ ಉದ್ಯೋಗವಕಾಶ ಕುಸಿತ, ಆರ್ಥಿಕ ಪರಿಸ್ಥಿತಿ ಹಿನ್ನಡೆ, ಕೈಗಾರಿಕೆ ಹಾಗೂ ಉದ್ಯಮಗಳ ಹಿನ್ನಡೆ ಜಾಗತಿಕ ಆರ್ಥಿಕ ಕುಸಿತದ ಕಾರಣದಿಂದ ಉಂಟಾಗಿದೆ. ಮೋದಿ ಅಧಿಕಾರಕ್ಕೆ ಬಂದರೂ ಇದು ಜಾಗತಿಕ ಆರ್ಥಿಕ ಪರಿಸ್ಥಿತಿ ಸುಧಾರಿಸದ ಹೊರತು ಸುಧಾರಣೆಯಾಗುವ ಸಂಭವ ಇಲ್ಲ. ಹೀಗಾಗಿ ಮೋದಿಯ ಸರಕಾರದ ಮೇಲೆಯೂ ಮುಂಬರುವ ವರ್ಷಗಳಲ್ಲಿ ಜನ ಭ್ರಮನಿರಸನ ಹೊಂದಿದರೆ ಅಚ್ಚರಿ ಇಲ್ಲ. ಮೋದಿ ಸಿಬಿಐ ಸಂಸ್ಥೆಯನ್ನು ಸ್ವತಂತ್ರ ಸಂಸ್ಥೆಯಾಗಿ ಮಾಡುವ ಸಂಭಾವ್ಯತೆ ಇದೆಯೇ ಎಂದರೆ ಅದೂ ಕೂಡ ಕಾಣಿಸುವುದಿಲ್ಲ. ಹಿಂದಿನ ಸರ್ಕಾರ ಸಿಬಿಐ ಅನ್ನು ಕೈಗೊಂಬೆ ಮಾಡಿಕೊಂಡಿತ್ತು ಎಂದು ಹೇಳುತ್ತಿದ್ದ ಬಿಜೆಪಿ ಈಗ ಸಿಬಿಐ ಅನ್ನು ಸ್ವತಂತ್ರ ಸಂಸ್ಥೆಯಾಗಿ ಮಾಡಬೇಕು. ಈ ತಾಕತ್ತು ಹಾಗೂ ಧೈರ್ಯ ಮೋದಿಗೆ ಇದೆಯೇ ಎಂದರೆ ಇಲ್ಲ ಎನಿಸುತ್ತದೆ ಏಕೆಂದರೆ ಬಿಜೆಪಿಯ ಹಲವರ ವಿರುದ್ಧ ಭ್ರಷ್ಟಾಚಾರ, ಕ್ರಿಮಿನಲ್ ಆಪಾದನೆಗಳು ಇವೆ.

  Reply
  1. Godbole

   ನಿಮ್ಮ ವ್ಯಾಖ್ಯಾನವನ್ನು ಸ್ವಲ್ಪ ಸಮಯ ತಡೆದಿಟ್ಟುಕೊಳ್ಳಿ. ಹೊಸ ಸರಕಾರಕ್ಕೆ ಕಾರ್ಯ ನಿರ್ವಹಿಸಲು ಅವಕಾಶ ಕೊಡಿ.

   Reply
 4. Ananda Prasad

  ಬಿಜೆಪಿಯ ಹಾಗೂ ಮೋದಿಯ ಈವರೆಗಿನ ಆರ್ಥಿಕ ನೀತಿಯನ್ನು ನೋಡಿ ನನ್ನ ಅನಿಸಿಕೆ ಹೇಳಿದ್ದೇನೆ. ಮೋದಿ ಸರ್ಕಾರ ಕಾರ್ಯನಿರ್ವಹಿಸಲು ನಮ್ಮದೇನೂ ಅಡ್ಡಿ ಇಲ್ಲ. ಮೋದಿಗೆ ದೊರೆತ ಬಹುಮತ ಹಿಂದಿನ ಸರ್ಕಾರದ ನೀತಿಗಳ ಮೇಲಿನ ಆಕ್ರೋಶದ ಕಾರಣದಿಂದಾಗಿ ದೊರಕಿದೆ. ಆದರೆ ಮೋದಿ ಹಾಗೂ ಬಿಜೆಪಿಯ ಆರ್ಥಿಕ ನೀತಿಗೂ ಈ ಹಿಂದೆ ಇದ್ದ ಸರ್ಕಾರದ ಆರ್ಥಿಕ ನೀತಿಗೂ ದೊಡ್ಡ ವ್ಯತ್ಯಾಸ ಇಲ್ಲ. ವ್ಯತ್ಯಾಸ ಇದ್ದರೆ ಅದು ಬಂಡವಾಳಗಾರರಿಗೆ ಅನುಕೂಲ ಮಾಡಿಕೊಡುವ ವೇಗದ ವಿಷಯದಲ್ಲಿ ಮಾತ್ರ. ಇದರಿಂದ ಬೆಲೆ ಏರಿಕೆ, ಹಣದುಬ್ಬರ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ ಜನರಿಗೆ ಅನುಕೂಲ ಆಗುವುದಿಲ್ಲ.

  Reply
 5. M A Sriranga

  ಆನಂದಪ್ರಸಾದ್ ಅವರಿಗೆ–ಬಿಜೆಪಿ ಚುನಾವಣೆಯಲ್ಲಿ ಗೆದ್ದರೆ ಅದು ಹಿಂದಿನ ಕಾಂಗ್ರೆಸ್ಸ್ ಸರ್ಕಾರದ ಮೇಲಿನ ಭ್ರಮ ನಿರಸನ. ಕಾಂಗ್ರೆಸ್ಸ್ ಗೆದ್ದರೆ ಅದು ಕೋಮುವಾದಿಗಳ ಸೋಲು; “ಜಾತ್ಯಾತೀತ”(?) ಶಕ್ತಿಗಳ ವಿಜಯೋತ್ಸವ!!. ಜಾತಿ ರಾಜಕಾರಣವನ್ನೇ ಉಸಿರಾಗಿಸಿಕೊಂಡಿರುವ ಉತ್ತರಪ್ರದೇಶದಲ್ಲಿ ಮುಲಾಯಂ ಮತ್ತು ಅಖಿಲೇಶ್ ಅವರ ಎಸ್ ಪಿ ಮತ್ತು ಜಾತಿರಾಜಕಾರಣದ ಹೊಸ ಫಾರ್ಮುಲಾ ಕಂಡುಹಿಡಿದ ಮಾಯಾವತಿಯವರ ಬಿಎಸ್ ಪಿ ತಮಗೆ ಜಾತ್ಯಾತೀತ ಪಕ್ಷಗಳು. ಆದರೂ ಅಲ್ಲಿ ಆ ಎರಡೂ ಪಕ್ಷಗಳು ಹೀನಾಯ ಸೋಲು ಅನುಭವಿಸಿದ್ದೇಕೆ? ಇನ್ನು ಬಿಹಾರದಲ್ಲಿ ನಿತೀಶ್ ಕುಮಾರ್ ಅವರೂ ಜಾತ್ಯಾತೀತರೆ ಅಲ್ಲವೇ? ಆದರೂ ಸೋಲಿನ ಹೊಣೆ ಒಪ್ಪಿಕೊಂಡು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇಕೆ?. ಆಯಿತು ಇನ್ನು ಕರ್ನಾಟಕದ ಅಹಿಂದ ಸರ್ಕಾರ ನಾನಾ ಭಾಗ್ಯಗಳ ಮೂಲಕ ಕಳೆದ ಒಂದು ವರ್ಷದಲ್ಲಿ ಚೆನ್ನಾಗಿ,ಜಾತ್ಯಾತೀತವಾಗಿ ಆಡಳಿತ ನಡೆಸಿರಲಿಲ್ಲವೇ? ರಾಜ್ಯದ ಕಾಂಗೈಗೆ ಇನ್ನೂ ನಾಲ್ಕು ವರ್ಷಗಳ ಅಧಿಕಾರವಿದೆ. ಇಷ್ಟು ಬೇಗ ನಮ್ಮವರು ಭ್ರಮನಿರಸಗೊಂಡಿದ್ದೇಕೆ? ಸಂಸತ್ತಿನ ಚುನಾವಣೆ ಕೇಂದ್ರದ ಹತ್ತು ವರ್ಷಗಳ ಅಧಿಕಾರಕ್ಕೆ ಜನ ಕೊಟ್ಟ ತೀರ್ಪು ಅನ್ನುವುದಾದರೆ ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ಫಲಿತಾಂಶದ ಬಗ್ಗೆ ಏನು ಹೇಳುತ್ತೀರಿ?. ಸೋಲಿಗೆ ಕಾರಣ ಹುಡುಕಬೇಕೆ ಹೊರತು “ಸಬೂಬು”ಗಳನ್ನು “ಸಂಶೋಧಿಸಬಾರದು “. ನಿನ್ನೆ ಡೆಲ್ಲಿಯಲ್ಲಿ ನಡೆದ ಕಾಂಗೈನ ಹೈಡ್ರಾಮ ವನ್ನು ತಾವು ಟಿ ವಿ ಯಲ್ಲಿ ನೋಡಿದ್ದಿರಿ ಅಂದು ಕೊಂಡಿದ್ದೇನೆ. ನಾನು ಪುನಃ ಹೇಳಬೇಕಾಗಿಲ್ಲ. ಮೋದಿ ನೇತೃತ್ವದ ಎನ್ ಡಿ ಎ ಪಾರ್ಲಿಮೆಂಟ್ ನ ಸೆಂಟ್ರಲ್ ಹಾಲ್ ನಲ್ಲಿ ಸಭೆ ನಡೆಸಿ ಮತ್ತು ಆ ನಂತರ ಮೋದಿಯವರು ರಾಷ್ಟ್ರಪತಿಯವರಿಗೆ ಸರ್ಕಾರ ರಚಿಸುವ ಬಗ್ಗೆ ಪ್ರಸ್ತಾವನೆ ಕೊಟ್ಟು ಇನ್ನೂ ಒಂದುದಿನ ಕಳೆದಿಲ್ಲ. ಇಷ್ಟು ಬೇಗ “ಗಿಣಿಶಾಸ್ತ್ರ” ಏಕೆ ಹೇಳುತ್ತೀರಿ?. ನಿನ್ನೆ TIMES NOW ನಲ್ಲಿ ಅರ್ನಾಬ್ ಅವರು ನಡೆಸಿಕೊಟ್ಟ ಕಾರ್ಯಕ್ರಮವನ್ನು ತಾವು ನೋಡಿರಬಹುದು. ರಾಹುಲ್ ಬಿಟ್ಟು at least ಐದು ಜನ ಕಾಂಗೈ ನಾಯಕರ ಹೆಸರನ್ನು ಹೇಳಿ ಎಂದು ಅರ್ನಾಬ್ ಅವರು ಕಾಂಗೈ ಪರವಾಗಿ panel discussionಗೆ ಬಂದವರನ್ನು ಕೇಳಿದಾಗ ಅವರು ಯಾರ ಹೆಸರನ್ನೂ ಹೇಳದೆ ಅರ್ನಾಬ್ ಮೇಲೆ ‘ನೀವು ಒಂದು ಅಜೆಂಡಾ ಇಟ್ಟುಕೊಂಡು ಮಾತಾಡುತ್ತಿದ್ದೀರಿ’ಎಂದು ಆರೋಪಿಸಿ ಮುನಿಸಿಕೊಂಡರು!!! ಚುನಾವಣೆಯ ಯಶಸ್ಸನ್ನು ಬೆಳ್ಳಿ ತಟ್ಟೆಯಲ್ಲಿಟ್ಟು, ಭಾರತದ ಸ್ವಾತಂತ್ರ್ಯಕ್ಕೆ ಹೋರಾಡಿದ,ಸ್ವಾತಂತ್ರ್ಯ ಗಳಿಸಿಕೊಟ್ಟ ಪುರಾತನ ರಾಜಕೀಯ ಪಕ್ಷದ ಕುಟುಂಬದ ವಾರಸುದಾರರ ಪಾದಕ್ಕೆ ಅರ್ಪಿಸುವುದು; ಸೋತರೆ ಸಾಮೂಹಿಕವಾಗಿ ಒಪ್ಪಿಕೊಳ್ಳುವುದು!!!. ಇಂದು ಬಿಜೆಪಿ ಸಭೆಯಲ್ಲೂ ವ್ಯಕ್ತಿ ಪೂಜೆಯ ಸುಳುಹು ಕಂಡ ಕೂಡಲೇ ಮೋದಿಯವರು ಅದನ್ನು ಒಪ್ಪದೇ ಸ್ಪಷ್ಠ ಮಾತುಗಳ ಮೂಲಕ ಇದು ಎಲ್ಲರ ಪಾಲಿನ ವಿಜಯ ಎಂದರು.

  Reply
 6. Ananda Prasad

  ನಾನು ಗಿಣಿಶಾಸ್ತ್ರ ಹೇಳುತ್ತಿಲ್ಲ, ನನ್ನ ಅನಿಸಿಕೆಯನ್ನು ಹೇಳುತ್ತಿದ್ದೇನೆ ಅಷ್ಟೇ. ಅದರಿಂದ ಮೋದಿ ಸರ್ಕಾರಕ್ಕೆ ಏನೂ ತೊಂದರೆ ಆಗಲಿಕ್ಕಿಲ್ಲ. ಕೆಲವೊಂದು ಕಟು ವಾಸ್ತವಗಳಿರುತ್ತವೆ. ಅದನ್ನು ನಾನು ಹೇಳುತ್ತಿದ್ದೇನೆ. ಮೋದಿಯ ಮೇಲಿನ ವ್ಯಕ್ತಿಪೂಜೆಯ ಹಾಗೂ ಅಭಿಮಾನದ ಭರದಲ್ಲಿ ಇದು ಕೆಲವರಿಗೆ ಅಪಥ್ಯವಾಗಬಹುದು. ಹಾಗೆಂದು ನನ್ನ ಅನಿಸಿಕೆಯನ್ನು ಹೇಳದೆ ಇರಲು ಆಗದು. ಪಶ್ಚಿಮದ ಬಂಡವಾಳಶಾಹಿ ಸಿದ್ಧಾಂತದ, ಅತ್ಯಂತ ಉದ್ಯಮಸ್ನೇಹಿ ಸರ್ಕಾರಗಳು ಕೆಲವು ವರ್ಷಗಳಿಂದ ಶಕ್ತಿಮೀರಿ ಶ್ರಮಿಸುತ್ತಿದ್ದರೂ ಅಲ್ಲಿನ ಆರ್ಥಿಕ ಪರಿಸ್ಥಿತಿ ಮೇಲಕ್ಕೆ ಏಳುತ್ತಿಲ್ಲ. ಮುಕ್ತ ಮಾರುಕಟ್ಟೆಯ ಇಂದಿನ ದಿನಗಳಲ್ಲಿ ಆರ್ಥಿಕ ಕುಸಿತದ ಪರಿಣಾಮ ಎಲ್ಲ ದೇಶಗಳನ್ನೂ ಬಿಡದೆ ಪ್ರಭಾವಿಸುತ್ತದೆ. ಹೀಗಾಗಿ ಮೋದಿ ಶಕ್ತಿಮೀರಿ ಶ್ರಮಿಸಿದರೂ ಜಾಗತಿಕ ಆರ್ಥಿಕ ಸ್ಥಿತಿ ಉತ್ತಮವಾಗದ ಹೊರತು ನಮ್ಮ ದೇಶದ ಆರ್ಥಿಕ ಸ್ಥಿತಿ ಉತ್ತಮವಾಗುವ ಸಂಭವ ಕಂಡುಬರುವುದಿಲ್ಲ. ಹೀಗಾಗಿ ಮೋದಿ ಯುವಕರ ಮೇಲೆ ಯಾವ ಭರವಸೆಗಳ ಆಶ್ವಾಸನೆ ಕೊಟ್ಟಿದ್ದಾರೋ ಅದರ ಈಡೇರಿಕೆ ಸಾಧ್ಯವಿಲ್ಲ. ಇದು ಕಟು ವಾಸ್ತವ. ಯುಪಿಎ ಸರ್ಕಾರವನ್ನು ಆರ್ಥಿಕ ಪರಿಸ್ಥಿತಿಯ ಹಿನ್ನಡೆಗಾಗಿ ಅತ್ಯಂತ ತೀವ್ರವಾಗಿ ಟೀಕಿಸುತ್ತಿದ್ದ ಮೋದಿಗೆ ಮುಕ್ತ ಮಾರುಕಟ್ಟೆಯ ಇಂದಿನ ದಿನಗಳಲ್ಲಿ ಜಾಗತಿಕ ಆರ್ಥಿಕ ಕುಸಿತದ ಪರಿಣಾಮವನ್ನು ಒಂದು ದೇಶದ ಸರ್ಕಾರವು ಮೀರಿ ನಿಲ್ಲುವುದು ಸಾಧ್ಯವಿಲ್ಲ ಎಂಬುದು ಮುಂದಿನ ದಿನಗಳಲ್ಲಿ ಅರಿವಾಗಬಹುದು, ಆಗ ತಾನು ತೀವ್ರವಾಗಿ ಯುಪಿಎ ಸರ್ಕಾರವನ್ನು ಟೀಕಿಸುತ್ತಿದ್ದ ಮಾತುಗಳೇ ಅವರಿಗೆ ತಿರುಗುಬಾಣ ಆದರೂ ಅಚ್ಚರಿ ಇಲ್ಲ.

  Reply
  1. Nagshetty Shetkar

   “ನಾನು ಗಿಣಿಶಾಸ್ತ್ರ ಹೇಳುತ್ತಿಲ್ಲ”

   ನೀವು ಏನನ್ನೂ ಹೇಳುವ ಅಗತ್ಯವಿಲ್ಲ. ನೀವು ಹೇಳಬಹುದಾದ್ದನ್ನೆಲ್ಲ ಮಾರ್ಕ್ಸ್ ಈ ಹಿಂದೆಯೇ ಹೇಳಿಬಿಟ್ಟಿದ್ದಾನೆ. ಸಮತಾ ಸಮಾಜದ ನಿರ್ಮಾಣವಾಗದೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ.

   Reply
  2. Nagshetty Shetkar

   __http://www.dawn.com/news/1108001/now-we-have-a-democratically-elected-totalitarian-government-arundhati-roy

   Reply
 7. avani

  ವಿನಾಕಾರಣ ಜನರಲ್ಲಿ ಭಯ ಬಿತ್ತಿ ಈ ಹಿಂದೆ ಮೋದಿ ಆರಿಸಿ ಬರದಂತೆ ಪ್ರಚಾರ ಮಾಡಿದಿರಿ. ಈಗಲೂ ನಿಮ್ಮ ದ್ವೇಷ ಬುದ್ದಿ ಹೋಗಿಲ್ಲವಲ್ಲ?????

  Reply
 8. sudheer sanu

  ಯಾವುದೇ ವಿಚಾರದ ಬಗ್ಗೆ ಲೇಖನ ಬರೆಯುವ ಅಥವಾ ಹೇಳಿಕೆ ನೀಡುವ ಮೊದಲು ತಮ್ಮ ತಿಳುವಳಿಕೆಯ ಮಟ್ಟಕಷ್ಟೇ ಸೀಮಿತವಾಗಿರುವುದು ಬುದ್ದಿವಂತಿಕೆ… ಇಲ್ಲವಾದ್ಲಲ್ಲಿ ತಮ್ಮ ಅಜ್ಣಾನದ ಪ್ರದರ್ಶನ ಮಾಡಿರುವ ಶ್ರೀಪಾದ ಭಟ್ಟರಂತೆ ನಗೆಪಾಟಲಿಗೀಡಾಗುತ್ತಾರೆ….

  Reply
 9. ಮೋಹನ್

  ಕೇಸರಿಕರಣ ಎಂದರೇನು? ನಮ್ಮ ಇತಿಹಾಸ ಸತ್ಯ ತಿಳ್ಯುವ ಹಕ್ಕು ನಮಗಿಲ್ಲವೆ?

  Reply
 10. Dilip

  ಹಿಂದೂ ರಾಷ್ಟ್ರವೇ ತನ್ನ ಗುರಿಯೆನ್ನುವ ಆರೆಸಸ್ ವಾಸ್ತವವಾಗಿ, ಕೇವಲ ಬ್ರಾಹ್ಮಣತೆಯ ಪುನುರುಜ್ಜೀವನಕ್ಕಾಗಿದೆಯಷ್ಟೇ. ಆರೆಸಸ್ ನ ಕುತಂತ್ರಿ,ಸಮಾಜ ವಿದ್ರೋಹಕ ಯೋಜನೆಗಳ ಬಗಿಗಿನ ಈ ವಿಶ್ಲೇಷಣೆ ಲೇಖನ ಮನ ಮುಟ್ಟುವಂತಿದೆ. ತಮ್ಮ ಸುಳ್ಳುಗಳಿಂದ ಮುಗ್ಧ ಯುವ ಜನತೆಯ ಹಾದಿ ತಪ್ಪಿಸಿ ಅಧಿಕಾರ ಹಿಡಿದಿರುವವರು ಪ್ರಾಯಶ್ಚಿತ್ತ ಪಡುವ ಕಾಲ ಹತ್ತಿರದಲ್ಲೇ ಇದೆ.

  Reply

Leave a Reply

Your email address will not be published.