ಧರ್ಮ ರಕ್ಷಕರ ಮದುವೆ ಫತ್ವಾ!


-ಇರ್ಷಾದ್


 

 

 

ಮಂಗಳೂರು ಮೂಲದ ಮಾಧ್ಯಮ ಪ್ರಕಾಶನದ ಕನ್ನಡ ವಾರ ಪತ್ರಿಕೆ ಮೊಯಿಲಾಂಜಿಯನ್ನು ಓದಿದ್ದೆ. ಸ್ನೇಹಿತರೊಬ್ಬರು ಕರೆ ಮಾಡಿ ಮೊಯಿಲಾಂಜಿ ವಾರಪತ್ರಿಕೆಯನ್ನು ಓದುವಂತೆ ಹೇಳಿದ್ದರು. ಅದರಲ್ಲಿ ಪತ್ರಿಕೆಯ ಪ್ರಧಾನ ಸಂಪಾದಕರಾದ ಹಂಝ ಸಖಾಫಿ ಒಂದು ಲೇಖನವನ್ನು ಬರೆದಿದ್ದರು. ಅದು ಮುಸ್ಲಿಂ ಸಮುದಾಯದಲ್ಲಿ ನಡೆಯುತ್ತಿರುವ ಮದುವೆ ಸಮಾರಂಭದ ಕುರಿತಾದ ಲೇಖನವಾಗಿತ್ತು. ಅದರಲ್ಲೊಂದು ಕುತೂಹಲದ ಅಂಶ ನನ್ನ ಕಣ್ಣಿಗೆ ಬಿತ್ತು. ಅದನ್ನು ಓದುತ್ತಾ ಹೋದಂತೆ ನನ್ನ ಕುತೂಹಲ ಕೂಡಾ ಹೆಚ್ಚಾಗತೊಡಗಿತು. ”ಬೇಕಲ್ ಇಮ್ದಾದುದ್ದೀನ್ ಇಸ್ಲಾಮ್ ಕಮಿಟಿ ಕಾಸರಗೋಡು 2013 ರ ತುರ್ತು ಸಭೆಯಲ್ಲಿ ಕೈಗೊಂಡ ನಿರ್ಣಯಗಳಿವು” ಎಂಬ ತಲೆಬರಹದಲ್ಲಿ ಮುಸ್ಲಿಂ ಸಮುದಾಯದಲ್ಲಿ ಮದುವೆ ಸಮಾರಂಭ ಹೇಗೆ ನಡೆಯಬೇಕು, ಅದನ್ನು ಮುರಿದರೆ ಶಿಕ್ಷೆ ಏನು ಎಂಬ ಅಂಶಗಳನ್ನು ಅದರಲ್ಲಿ ಉಲ್ಲೇಖಿಸಲಾಗಿತ್ತು.

  1. ವರ ಮತ್ತು ಕುಟುಂಬದವರು ಸೇರಿ ಹೆಣ್ಣು ನೋಡುವ ಕಾರ್ಯಕ್ರಮ ನಡೆಯುವಾಗ ವರ ಮತ್ತು ಮಹಿಳೆಯರ ಹೊರತಾಗಿ ಅನ್ಯರು moilanjali_1ಭಾಗವಹಿಸುದನ್ನು ನಿಷೇಧಿಸಲಾಗಿದೆ.
  2. ವಿಡಿಯೋ, ಕ್ಯಾಮರಾ, ಪತ್ರಿಕೆಗಳಲ್ಲಿ ವಧುವಿನ ಭಾವಚಿತ್ರ, ವಿಡಿಯೋ ಜಾಹೀರಾತುಗಳಲ್ಲಿ ವದುವಿನ ಭಾವಚಿತ್ರ ನೀಡುವುದನ್ನು ನಿಷೇಧಿಸಲಾಗಿದೆ.
  3. ಗಾನ ಮೇಳ, ಡ್ಯಾನ್ಸ್ ಗಳನ್ನು ನಿಷೇಧಿಸಲಾಗಿದೆ ಮತ್ತು ಈ ನಿಷೇದವು ಮದುವೆಯ ಹಾಲ್ ಗಳಿಗೂ ಅನ್ವಯವಾಗುವುದು.
  4. ಕಪಾಟು ಕೊಂಡೊಯ್ಯುವುದನ್ನು, ಮದರಂಗಿ ಮದುವೆಯನ್ನೂ ನಿಶೇಧಿಸಲಾಗಿದೆ.
  5. ವಿವಾಹ ಕಾರ್ಯಕ್ರಮದ ಅಂಗವಾಗಿ ವರನ ಜೊತೆ ವಧುವಿನ ಮನೆಗೆ ಹೋಗುವವರು ರಸ್ತೆ ತಡೆ ಉಂಟಾಗದಂತೆ ಸಾಗುವುದನ್ನು, ಪಾದಾಚಾರಿಗಳಿಗೆ ಜೀವಭಯ ಉಂಟಾಗದಂತೆ ನಿರ್ಲಕ್ಷ ಮತ್ತು ಭಾರೀ ಸದ್ದು ಗದ್ದಲದೊಂದಿಗೆ ಬೈಕ್ ರಾಲಿ ಹೋಗುವುದನ್ನು ನಿಷೇಧಿಸಲಾಗಿದೆ. ವೇಷ ಬದಲಿಸುವುದು, ಪಟಾಕಿ ಸಿಡಿಸುವುದು, ಕಲರ್ ಸ್ಪ್ರೇ, ವಧುವಿನ ಕೋಣೆಗಳಿಗೆ ಹಾನಿ ಉಂಟುಮಾಡುವುದು, ವರನ ಯಾ ವಧುವಿನ ಮನೆಯವರೊಂದಿಗೆ ಹಣ ಕೇಳುವುದು, ವಾಹನಗಳಲ್ಲಿ ಅಸಾಮಾನ್ಯ ರೀತಿಯಲ್ಲಿ ಸೀಟುಗಳನ್ನು ಸಜ್ಜುಗೊಳಿಸಿ ಪ್ರದರ್ಶನಗಳನ್ನು ನಡೆಸುವುದು ಮುಂತಾದವುಗಳನ್ನು ನಿಷೇಧಿಸಲಾಗಿದೆ.
  6.  ಸಭ್ಯತೆಯ ಮಿತಿ ಮೇರೆಗಳನ್ನು ಮೀರಿದ , ಆಶ್ಲೀಲವನ್ನು ನೇರ ಯಾ ಪರೋಕ್ಷವಾಗಿ ಬಿಂಬಿಸುವ ಹಾಡುಗಳನ್ನು ದಾರಿಯಲ್ಲಿ ಯಾ ವಧು ಗೃಹದಲ್ಲಿ ಹಾಡುವುದು ನಿಷೇಧಿಸಲಾಗಿದೆ.
  7.  ಮದುವೆ ಮುಗಿದ ರಾತ್ರಿ ವಧು ಗೃಹದಲ್ಲಿ ತಂಗಲು ಹೋಗುವ ವರನೊಂದಿಗೆ ಸ್ನೇಹಿತರು ಜೊತೆ ಸೇರುವುದನ್ನು ನಿಷೇಧಿಸಲಾಗಿದೆ.

ಮೇಲಿನ ಕಾರ್ಯಕ್ರಮಗಳನ್ನು ಉಲ್ಲಂಘಿಸಿದಲ್ಲಿ ವಿಧಿಸಲಾಗುವ ಶಿಕ್ಷೆ :

ವಿವಾಹ ನಿಶ್ವಯ ವೇಳೆ ಮೇಲಿನ ನಿಯಮಗಳನ್ನು ಉಲ್ಲಂಘಿಸಿದರೆ ಖಾಝಿ, ಖತೀಬ್ , ಇಮಾಮ್ ( ಧರ್ಮಗುರುಗಳು) ರನ್ನು ಆ ಮನೆಗೆ ಕಲುಹಿಸಲಾಗುವುದಿಲ್ಲ. ವಿವಾಹ ದಿನದಂದು ನಿಯಮಗಳನ್ನು ಉಲ್ಲಂಘಿಸಿದರೆ ಅವರನ್ನು ಎರಡು ವರ್ಷಗಳ ಕಾಲ ಬಹಿಷ್ಕಾರ ಮಾಡಲಾಗುವುದು ಮತ್ತು ಧಾರ್ಮಿಕ ಶಿಕ್ಷಣ, ಮಯ್ಯತ್ ಪರಿಪಾಲನೆ ( ಶವ ಸಂಸ್ಕಾರ) ಹೊರತಾಗಿ ಆಡಳಿತ ಸಮಿತಿ ಮೂಲಕ ಲಭ್ಯವಾಗುವ ಎಲ್ಲಾ ಕೊಡುಗೆಗಳನ್ನು ತಡೆಹಿಡಿಯಲಾಗುವುದು.

ನಿರುತ್ಸಾಹಗೊಳಿಸಬೇಕಾದ ಕಾರ್ಯಗಳು

  1. ವರದಕ್ಷಿಣೆ ಪಡೆಯುವುದು ಮತ್ತು ಕೊಡುವುದನ್ನು ನಿರುತ್ಸಾಹಗೊಳಿಸುವುದು.
  2. ವರನು ವಧುವಿಗೆ ಹೂ ಮಾಲೆ ಹಾಕುವ ಕಾರ್ಯಕ್ರಮ ಹಾಗೂ ವಿವಾಹ ನಿಶ್ಚಿತ ಕಾರ್ಯಕ್ರಮದಲ್ಲಿ ಅನಗತ್ಯವಾಗಿ ಸ್ತ್ರೀ ಪುರುಷರು ಒಟ್ಟು ಸೇರುವುದನ್ನು ಉಪೇಕ್ಷಿಸುವುದು.
  3. ಮದುವೆಯ ಮುನ್ನಾ ದಿನ ಅನಗತ್ಯವಾಗಿ ಸತ್ಕಾರವೇರ್ಪಡಿಸುದನ್ನು ಕೈ ಬಿಡುವುದು
  4. ವಿವಾಹದ ಮರುದಿನ ಅಥವಾ ನಂತರದಲ್ಲಿ ಮದುಮಗಳನ್ನು ಮರಳಿ ಮನೆಗೆ ಕರೆದುಕೊಂಡು ಹೋಗುವ ಕಾರ್ಯಕ್ರಮವನ್ನು ತಂದೆ ತಾಯಂದಿರು ಯಾ ನಿಕಟ ಸಂಬಂಧಿಕರಿಗೆ ಮಾತ್ರ ಸೀಮಿತಗೊಳಿಸಿ ಸರಳವಾಗಿ ನಡೆಸುವುದು.
  5. ನಿಕಾಹ್ ಗೆ ಮುನ್ನ ನಿಶ್ವಿತ ವಧುವಿಗೆ ಮೊಬೈಲ್ ಕೊಡುವುದನ್ನು ಉಪೇಕ್ಷಿಸುವುದು.

ಇದು ಕಾಸರಗೋಡಿನ ಬೇಕಲ್ ಮಸೀದಿ ವ್ಯಾಪ್ತಿಗೆ ಒಳಪಡುವ ಮುಸ್ಲಿಮ್ ಸಮುದಾಯ ಜನರು ಕಡ್ಡಾಯವಾಗಿ ತಮ್ಮ ವಿವಾಹ ಸಂಧರ್ಭದಲ್ಲಿ ಪಾಲಿಸಬೇಕಾದ ನಿಯಮಗಳು. moilanjali_2ಕಳೆದ ಒಂದು ವರ್ಷಗಳಿಂದ ಈ ಫತ್ವಾ ( ಅಭಿಪ್ರಾಯ) ಜಾರಿಯಲ್ಲಿದೆ. ಇದರ ಕೆಲವೊಂದು ವಿಚಾರಗಳಲ್ಲಿ ನನಗೆ ಸಮ್ಮತಿಯಿದೆ. ಮದುವೆ ಸಮಾರಂಭಗಳನ್ನು ವೈಭವದಿಂದ ಮಾಡುವುದು, ಬೇಕಾ ಬಿಟ್ಟೆ ಖರ್ಚು ಮಾಡಿ ಐಶಾರಾಮಿತನವನ್ನು ತೋರಿಸುವುದು, ಮದುವೆಯ ಸಂಧರ್ಭದಲ್ಲಿ ವಾಹನಗಳಲ್ಲಿ ಹೋಗುವಾಗ ಜನಸಾಮಾನ್ಯರಿಗೆ ಕಿರಿ ಕಿರಿ ಉಂಟುಮಾಡುವಂತದ್ದು ನಿಜಕ್ಕೂ ತಪ್ಪು. ಸಾಮಾನ್ಯವಾಗಿ ಯುವಕರಲ್ಲಿ ಇಂಥಹ ನಡತೆ ಕಂಡುಬರುತ್ತದೆ. ಇದನ್ನು ಫತ್ವಾ ಹೊರಡಿಸುವ ಮೂಲಕ ತಡೆಯಲು ಸಾಧ್ಯವಿಲ್ಲ. ಬದಲಾಗಿ ಯುವಕರಿಗೆ ತಿಳುವಳಿಕೆ ನೀಡುವುದರ ಮೂಲಕ ಅಥವಾ ಕಾನೂನಿನ ಎಚ್ಚರಿಕೆ ನೀಡುವ ಮೂಲಕ ಇವುಗಳನ್ನು ನಿಯಂತ್ರಿಸಲು ಸಾಧ್ಯ. ಆದರೆ ಬಿ.ಐ.ಐ.ಸಿ ಮಹಾಸಭೆಯಲ್ಲಿ ತೆಗೆದುಕೊಂಡ ಇತರ ನಿರ್ಣಯಗಳು ಅಪಾಯಕಾರಿ. ಜೊತೆಗೆ ಅವುಗಳನ್ನು ಮುರಿದರೆ ಬಹಿಷ್ಕಾರ ಹಾಕುವಂತಹ ರೀತಿ ನಿರ್ಣಯಗಳನ್ನು ಕೈಗೊಂಡ ಜನರಿಗೆ ಭಾರತದ ಸಂವಿಧಾನದ ಕುರಿತಾದ ಅರಿವು ಇದೆಯಾ ಎಂಬ ಪ್ರೆಶ್ನೆ ಉದ್ಭವವಾಗುತ್ತದೆ.

ಇಸ್ಲಾಂನಲ್ಲಿ ಮದುವೆ ಸಮಾರಂಭಕ್ಕೆ ಅದರದ್ದೇ ಆದ ನಿಯಮಗಳಿಗೆ. ಸಹಜವಾಗಿ ಭಾರತೀಯ moilanjali_3ಮುಸ್ಲಿಮರು ಅವುಗಳನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಅವುಗಳ ಜೊತೆಗೆ ಸ್ಥಳೀಯ ಸಂಸ್ಕೃತಿಗಳು, ಆಚಾರ ವಿಚಾರಗಳು ಭಾರತೀಯ ಮುಸ್ಲಿಮರ ಮುದುವೆಗಳಲ್ಲಿ ಸಹಜವಾಗಿಯೇ ಕಂಡುಬರುತ್ತವೆ. ಮದುವೆಯ ಮುನ್ನ ದಿನದ ಮದರಂಗಿ ಕಾರ್ಯಕ್ರಮ, ಮದುವೆಯ ರಾತ್ರಿ ವಧುವಿನ ಮನೆಗೆ ಹೋಗುವಾಗ ವರನ ಜೊತೆ ಸ್ನೇಹಿತರು ತೆರಳಿ ವಧುನಿನ ಮನೆಯಲ್ಲಿ ನಡೆಯುವ ಸತ್ಕಾರ ಕೂಟದಲ್ಲಿ ಭಾಗವಹಿಸುವಂತಹದ್ದು ಹಿಂದಿನಿಂದಲೂ ನಡೆದುಕೊಂಡು ಬರುತ್ತಿರುವ ಸಂಸ್ಕೃತಿ. ಇನ್ನು ಇತ್ತೀಚಿನ ದಿನಗಳಲ್ಲಿ ಎಲ್ಲಾ ಮದುವೆಗಳಲ್ಲಿ ವಿಡಿಯೋ ಚಿತ್ರೀಕರಣ ಕಾಮನ್ ಆಗಿ ಬಿಟ್ಟಿದೆ. ವಿದೇಶದಲ್ಲಿ ಮನೆಯ ಯುವಕರು ಉದ್ಯೋಗದಲ್ಲಿರುವುದರಿಂದ ಅವರಿಗೆ ಮನೆಯ ಮದುವೆ ನೋಡುವ ಆಸೆ ಕೂಡಾ ಇರುತ್ತದೆ. ಇದರಿಂದ ವಿಡಿಯೋ ಚಿತ್ರೀಕರಣ ಮಾಡುವುದು ಮದುವೆ ನಡೆಸುವ ಕುಟುಂಬಕ್ಕೆ ಬಿಟ್ಟಿದ್ದು. ಮದುವೆಯ ವಿಡಿಯೋ ಚಿತ್ರೀಕರಣ ಮಾಡಬಾದರು ಎಂದು ಇಸ್ಲಾಂ ಧರ್ಮದ ಧರ್ಮ ಗ್ರಂಥಗಳು ಎಲ್ಲಿ ಹೇಳಿವೆ ಎಂಬುವುದಂತೂ ನಾ ಕಾಣೆ. ಇನ್ನು ಎಲ್ಲಾ ಧರ್ಮದ ಸಂಸ್ಕೃತಿಯನ್ನು ಪಾಲಿಸುವ ಜನರ ಮದುವೆ ಸಮಾರಂಭದಲ್ಲಿ ಕನ್ನಡ ಹಾಗೂ ಹಿಂದಿ ಚಿತ್ರಗೀತೆಗಳನ್ನು ಹಾಕುವುದು ಸಾಮಾನ್ಯ. ಮುಸ್ಲಿಮ್ ಸಮುದಾಯಕ್ಕೆ ಸೇರಿದ ಮುದುವೆ ಸಮಾರಂಭಗಳು ಇದಕ್ಕೆ ಹೊರತಾಗಿಲ್ಲ. ಆದರೆ ಧರ್ಮದ ಹೆಸರಲ್ಲಿ ಸಂಸ್ಕೃತಿಯ ಹೆಸರಲ್ಲಿ ಜನರ ಸ್ಥಳೀಯ ಆಚಾರ ವಿಚಾರಗಳು ಹಾಗೂ ಅವರ ಸಂಭ್ರಮದ ಕ್ಷಣಗಳನ್ನು ಕಿತ್ತುಕೊಳ್ಳ ಹೊರಟಿರುವುದು ಆಕ್ಷೇಪಾರ್ಹ.

ಸೌದಿ ಆರೇಬಿಯಾದ ಸಂಸ್ಕೃತಿಯನ್ನು ಪರಿಶುದ್ಧ ಇಸ್ಲಾಮ್ ಎಂಬ ಹೆಸರಿನಲ್ಲಿ ಭಾರತೀಯ ಮುಸ್ಲಿಮರ ಮೇಲೆ ಹೇರಲು ಪ್ರಯತ್ನವನ್ನು ಮೊದಲು molanjali_5ಆರಂಭಿಸಿದ್ದು ಮೌದೂದಿ ಸಿದ್ದಾಂತವಾದಿಗಳು. ಅರಬ್ ರಾಷ್ಟ್ರಗಳಲ್ಲಿ ಪಾಲಿಸುವ ಆಚಾರ ವಿಚಾರಗಳು, ರೀತಿ ರಿವಾಜುಗಳನ್ನು ಇಲ್ಲಿಯ ಮುಸ್ಲಿಮರೂ ಪಾಲಿಸಬೇಕು ಎಂಬ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ದೇವರಿಗೆ ಮಾಡುವ ಪೂಜೆ ಪುರಸ್ಕಾರ (ನಮಾಜ್ ಹಾಗೂ ಇತರ ಧಾರ್ಮಿಕ ಕಾರ್ಯ) ದರ್ಗಾಗಳಿಗೆ ಜನಸಾಮಾನ್ಯರು ನಡೆದುಕೊಳ್ಳುವ ಪದ್ದತಿ, ಮುಸ್ಲಿಮ್ ಸಮುದಾಯದ ಪುರಷ ಮಹಿಳೆಯರ ವೇಷ ಭೂಷಣ, ಮದುವೆ, ಮುಂಜಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪರಿಶುದ್ದತೆಯ ಹೆಸರಿಸಲ್ಲಿ ತಮ್ಮದೇ ಆದ ಸಿದ್ದಾಂತಗಳನ್ನು ಪ್ರಚುರ ಪಡಿಸಿ ಅದನ್ನೇ ಪರಿಶುದ್ದ ಇಸ್ಲಾಮ್ ಎಂದು ವಾದಿಸಲು ಆರಂಭಿಸಿದರು. ನಂತರದ ದಿನಗಳಲ್ಲಿ ನೂತನವಾದಿಗಳೆಂದು ಕರೆಸಿಕೊಳ್ಳುವ ಇತರ ಇಸ್ಲಾಂ ಸಿದ್ದಾಂತವಾದಿಗಳು ಈ ವಾದಗಳಿಗೆ ಇನ್ನಷ್ಟು ಬಲ ನೀಡಲು ಆರಂಭಿಸಿದರು. ಇದೀಗ ಇಂಥಹ ಮೂಲಭೂತವಾದವನ್ನು ವಿರೋಧಿಸುತ್ತಾ ಸೂಫಿ ವಿಚಾರಧಾರೆಯಲ್ಲಿ ನಂಬಿಕೆಯಿಟ್ಟು ಅದನ್ನು ಪಾಲಿಸುತ್ತಾ ಬಂದಿರುವ ಸುನ್ನಿ ಪಂಡಿತರು ಮೌದೂದಿ ವಿಚಾರಧಾರೆಗಳನ್ನು ತಾವೂ ಒಪ್ಪಿಕೊಳ್ಳ ಹೊರಟಿರುವುದು ವಿಷಾದನೀಯ. ಅರಬ್ ಸಂಸ್ಕೃತಿಯನ್ನು ಪಾಲಿಸುವುದರೆ ಮಾತ್ರ ಅದು ಪರಿಶುದ್ದ ಇಸ್ಲಾಮ್ ಎಂಬುವುದು ಸರಿಯಲ್ಲ. ಆಯಾ ಪ್ರದೇಶಕ್ಕೆ ತಕ್ಕಂತೆ ಧರ್ಮದೊಂದಿಗೆ ಸ್ಥಳೀಯ ಸಂಸ್ಕೃತಿ ಸೇರಿಕೊಳ್ಳತ್ತದೆ. ಅದೇ ರೀತಿ ಕರಾವಳಿ ಭಾಗದ ಮುಸ್ಲಿಮ್ ಸಮುದಾಯದ ಜನರ ಮದುವೆ ಕಾರ್ಯಕ್ರಮದಲ್ಲಿ ಧರ್ಮದ ಕಾರ ಕಡ್ಡಾಯವಾಗಿರುವ ನಿಕಾಹ್ ಒಳಗೊಂಡತೆ ಸ್ಥಳೀಯ ಸಂಸ್ಕೃತಿಯಿಂದ ಪ್ರಭಾವಿತವಾದ ಮದರಂಗಿ , ತಾಳ (ಮದುಮಗಳ ಮನೆಯಲ್ಲಿ ಮದುವೆ ದಿನ ರಾತ್ರಿ ನಡೆಯುವ ಔತಣ ಕೂಟ), ಬೀಟ್ ಕಾರ್ಯಕ್ರಮ (ವರ ವಧುವಿಗೆ ಹೂ ಹಾರ ಹಾಕುವ ಕಾರ್ಯಕ್ರಮ ) ಒಳಗೊಂಡಿದೆ. ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕಗಳ ಮುಸ್ಲಿಮ್ ಸಮುದಾಯದ ಜನರ ಮದುವೆ ಕಾರ್ಯಕ್ರಮಗಳಲ್ಲಿ ಅಲ್ಲಿನ ಸಂಸ್ಕೃತಿಗಳು ಒಳಗೊಂಡಿರುತ್ತದೆ. ಈ ಆಚರಣೆಗಳು ಅತಿರೇಕ ಹಾಗೂ ಅಸಭ್ಯ ಎಂಬ ಕಾರಣ ನೀಡಿ ನಿಷೇಧ ಮಾಡಲು ಮುಂದಾಗಿರುವುದು ಅತಿರೇಕದ ಪರಮಾರಧಿ. ಇಸ್ಲಾಂ ಧರ್ಮ ವಿಶಾಲವಾದ ಧರ್ಮ. ಧರ್ಮದಲ್ಲಿ ಯಾವುದೂ ಬಲವಂತವಿಲ್ಲ ಎಂದು ಪವಿತ್ರ ಗ್ರಂಥ ಕುರುಆನ್ ಹೇಳುತ್ತದೆ. ಆದರೆ ಅದಕ್ಕೆ ತದ್ವಿರುದ್ದವಾಗಿ ಇಂದು ಮೂಲಭೂತವಾದಿಗಳು ಧರ್ಮ ಜಾಗೃತಿಯ ಹೆಸರಲ್ಲಿ ಜನಸಾಮಾನ್ಯರ ಸ್ವಾತಂತ್ರ ಕಿತ್ತುಕೊಳ್ಳಲು ಇವರಿಗೆ ಧರ್ಮದ ರಕ್ಷಣೆಯ ಗುತ್ತಿಗೆ ಕೊಟ್ಟವರು ಯಾರು?

ಸಂಸ್ಥೆ ಹೊರಡಿಸಿದ ಫತ್ವಾ ಕುರಿತಾಗಿ ಅಧ್ಯಯನ ಮಾಡಲು ನಾವು ಫತ್ವಾ ಜಾರಿಯಲ್ಲಿರುವ ಕಾಸರಗೋಡು ಬೇಕಲ್ ಮಸೀದಿಗೆ ಹೋಗಿದ್ದೆವು. ಸ್ಥಳೀಯರ ಪ್ರಕಾರ ಫತ್ವಾ ಪಾಲಿಸದ ಒಂದು ಕುಟುಂಬವನ್ನು ಬಹಿಷ್ಕಾರ ಹಾಕಲಾಗಿತ್ತು. ಕೊನೆಗೆ ಫತ್ವಾ ಪಾಲಿಸದ ತಪ್ಪಿಗಾಗಿ ಕ್ಷಮೆ ಕೇಳಿದಕ್ಕಾಗಿ ಬಹಿಷ್ಕಾರ ತೆರವು ಮಾಡಲಾಗಿದೆ. ವಿಪರ್ಯಾಸವೆಂದರೆ ಬಿ.ಐ.ಐ.ಸಿ ಮಹಾಸಭೆಯಲ್ಲಿ ಕೈಗೊಂಡ ನಿರ್ಣಯಗಳಲ್ಲಿ 7 ವಿಚಾರಗಳು ಕಡ್ಡಾಯವಾಗಿ ಪಾಲಿಸಬೇಕಾಗಿವೆ. ಅದನ್ನು ಮುರಿದರೆ ಬಹಿಷ್ಕಾರದ ಶಿಕ್ಷೆ ಇದೆ. ಆದರೆ ಈ 7 ವಿಚಾರಗಳಲ್ಲಿ ವರದಕ್ಷಿಣೆ ಪಡೆಯುದನ್ನು ಕಡ್ಡಾಯ ನಿಷೇಧಮಾಡದೇ ಇರುವುದು ಆಶ್ವರ್ಯಕರ. ಫತ್ವಾದಲ್ಲಿ ವರದಕ್ಷಿಣೆ ನಿರುತ್ಸಾಹಗೊಳಿಸಬೇಕಾದ ವಿಷಯವಾಗಷ್ಟೇ ಸೇರ್ಪಡೆಯಾಗಿದೆ ಹೊರತು ವರದಕ್ಷಿಣೆಗೆ ಕಡ್ಡಾಯ ನಿಷೇಧವಿಲ್ಲ. ವರದಕ್ಷಿಣೆಯಂತಹ ಸಾಮಾಜಿಕ ಪಿಡುಗು ಮುಸ್ಲಿಮ್ ಸಮುದಾಯವನ್ನು ತೀಕ್ಷವಾಗಿ ಕಾಡುತ್ತಿರುವಂತಹ ಪಿಡುಗಾಗಿದೆ. ಅದೆಷ್ಟೋ ಹೆಣ್ಣು ಮಕ್ಕಳ ಹೆತ್ತವರು ವರದಕ್ಷಿಣೆಯ ಉಪಟಳದಿಂದಾಗಿ ಭಿಕ್ಷೆ ಬೇಡುವ ಸ್ಥಿತಿ ತಲುಪಿದ್ದಾರೆ. ಇದೇ ರೀತಿ ಇಸ್ಲಾಂ ಧರ್ಮ ನೀಡಿರುವ ಬಹುಪತ್ನಿತ್ವ ಅವಕಾಶವನ್ನು ದುರ್ಬಳಕೆ ಮಾಡಿಕೊಂಡು ಇಚ್ಚೆ ಬಂದಂತೆ ಮದುವೆಯಾಗಿ ಆಕೆಯೊಡನೆ ಕೆಲವು ದಿನ ಸಂಸಾರ ನಡೆಸಿ ಕುಲಕ್ಷ ಕಾರಣಕ್ಕಾಗಿ ತಲಾಕ್ ಕೊಟ್ಟು ಸುಮ್ಮನಾಗುವ ಮಹಾಪುರುಷರು ನಮ್ಮ ಸಮಾಜದಲ್ಲಿದ್ದಾರೆ. ಇದರಿಂದ ಅದೆಷ್ಟೋ ಬಡ ಹೆಣ್ಣುಮಕ್ಕಳು ಕಣ್ಣೀರು ಸುರಿಸುತ್ತಿದ್ದಾರೆ. ಇವುಗಳನ್ನು ಹತೋಟಿಗೆ ತರುವ ಕಾರ್ಯವನ್ನು ಮುಸ್ಲಿಮ್ ಸಮುದಾಯದ ಜಾಗ್ರತ ಜನರು ಮಾಡಬೇಕಾಗಿದೆ. ಬದಲಾಗಿ ಮುಸ್ಲಿಮ್ ಸಮುದಾಯದ ಜನರಲ್ಲಿ ಪರಿಶುದ್ದತೆಯ ಹೆಸರಲ್ಲಿ ಅವರ ಮೇಲೆ ಅರಬ್ ಸಂಸ್ಕೃತಿಯನ್ನು ಹೇರುವ ಮೂಲಕ ಸ್ಥಳೀಯ ಸಂಸ್ಕೃತಿಯನ್ನು ನಾಶ ಮಾಡಲು ಹೊರಟಿರುವುದು ಜೊತೆಗೆ ಅದನ್ನು ಪಾಲಿಸದೇ ಹೋದಲ್ಲಿ ಬಹಿಷ್ಕಾರವನ್ನು ಹಾಕುವ ಮೂಲಕ ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುವುದು ತೀರಾ ಅಪಾಯಕಾರಿ. ಇಂಥಹ ಮನಸ್ಥಿತಿಗಳ ವಿರುದ್ಧ ಮುಸ್ಲಿಮ್ ಸಮುದಾಯದ ಜನರು ಜಾಗೃತಗೊಳ್ಳಬೇಕಾಗಿದೆ.

13 thoughts on “ಧರ್ಮ ರಕ್ಷಕರ ಮದುವೆ ಫತ್ವಾ!

  1. Godbole

    ಮದುವೆಯು ಒಂದು ಶುಭ ಕಾರ್ಯಕ್ರಮವಾಗಿದ್ದು ಅದರ ಜೊತೆಗೆ ಮೋಜು, ದುಂದು ವೆಚ್ಚ, ಅಸಭ್ಯ ವರ್ತನೆ, ದುಂದಾವರ್ತಿ, ಅಶ್ಲೀಲತೆ, ಶೋಷಣೆ, ಪ್ರದರ್ಶನಪ್ರಿಯತೆ ಬೆರೆಸುವುದು ಸರಿಯಲ್ಲ. ಮುಸ್ಲಿಮ ಸಮುದಾಯದಲ್ಲಿ ಆಗುತ್ತಿರುವ ಪ್ರತಿಗಾಮಿ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಅತ್ಯಂತ ಸಮಂಜಸವಾದ ನಿರ್ಣಯಗಳನ್ನು ಬೇಕಲ್ ಇಮ್ದಾದುದ್ದೀನ್ ಇಸ್ಲಾಮ್ ಕಮಿಟಿ ಕಾಸರಗೋಡು ತೆಗೆದುಕೊಂಡಿದೆ. 2013 ರ ತುರ್ತು ಸಭೆಯಲ್ಲಿ ಕೈಗೊಂಡ ನಿರ್ಣಯಗಳು ಅರ್ಥಪೂರ್ಣವಾಗಿರುವುದರಿಂದ ಅವುಗಳನ್ನು ವಿರೋಧಿಸುವುದು ತಪ್ಪು.

    Reply
  2. Ananda Prasad

    ಮದುವೆಯ ವೀಡಿಯೊ ಚಿತ್ರೀಕರಣ ಮಾಡಬಾರದು ಎಂಬ ನಿಷೇಧ ಮೂರ್ಖತನದ ಪರಮಾವಧಿ ಹಾಗೂ ಜನರ ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ. ವೀಡಿಯೊ ಚಿತ್ರೀಕರಣ ಮಾಡಿದರೆ ಏನು ತೊಂದರೆ? ಧರ್ಮದ ಹೆಸರಿನಲ್ಲಿ ಇಂಥ ನಿಷೇಧ ಹೇರುವುದರ ವಿರುದ್ಧ ಮುಸ್ಲಿಮರು ಸಿಡಿದೆದ್ದು ಸಾಮೂಹಿಕವಾಗಿ ಪ್ರತಿಭಟಿಸಬೇಕಾಗಿದೆ. ಪುರೋಹಿತಶಾಹಿ ಜನತೆಯ ಮೇಲೆ ಹಿಡಿತ ಸಾಧಿಸಲು ಹೇರುವ ಅರ್ಥಹೀನ ಕಂದಾಚಾರಗಳನ್ನು ಎಲ್ಲರೂ ಧಿಕ್ಕರಿಸುವುದು ಅಗತ್ಯ.

    Reply
    1. Nagshetty Shetkar

      ನೀವು ವೀಡಿಯೋ ಫೋಟೋಗ್ರಾಫರ್ರಾ? ಮದುವೆಯ ವೀಡಿಯೊ ಚಿತ್ರೀಕರಣದ ಸಕತ್ ವಕಾಲತ್ ಮಾಡುತ್ತಿದ್ದೀರಿ. 😉

      Reply
      1. Ananda Prasad

        ನಾನು ವಿಡಿಯೋಗ್ರಾಫರ್ ಅಲ್ಲ ಹಾಗೂ ಫೋಟೋ ಸ್ಟುಡಿಯೋ ಕೂಡ ಹೊಂದಿಲ್ಲ. ಮದುವೆಯ ವೀಡಿಯೊ ಚಿತ್ರೀಕರಣ ಮಾಡುವುದರ ವಕಾಲತ್ತು ಮಾಡುವುದು ನನ್ನ ಉದ್ಧೇಶವಲ್ಲ. ಜನತೆಯ ವೈಯಕ್ತಿಯ ಸ್ವಾತಂತ್ರ್ಯದ ಮೇಲೆ ಧರ್ಮವು ಅನಗತ್ಯವಾಗಿ ಮೂಗು ತೂರಿಸುವುದರ ವಿರೋಧಿ ನಾನು. ಆಸಕ್ತಿ ಹಾಗೂ ಹಣ ಇದ್ದವರು ಸಮಾರಂಭಗಳ ಸವಿನೆನಪಿಗಾಗಿ ವೀಡಿಯೊ ಚಿತ್ರೀಕರಣ ಮಾಡಿದರೆ ಅದು ಅವರ ಇಷ್ಟ. ಮುಂದೆ ಬೇಕಾದಾಗಲೆಲ್ಲ ತಮ್ಮ ಸಮಾರಂಭದ ದೃಶ್ಯಗಳನ್ನು ನೋಡುವ ಹಾಗೂ ತಮಗೆ ಬೇಕಾದವರಿಗೆ ಅದನ್ನು ತೋರಿಸುವ ಅನುಕೂಲ ಇದರಿಂದ ದೊರಕುತ್ತದೆ. ಇದಕ್ಕೆ ಧರ್ಮ ಏಕೆ ಕಲ್ಲು ಹಾಕಬೇಕು?

        Reply
        1. Godbole

          ದಯವಿಟ್ಟು ಇಸ್ಲಾಂ ಅನ್ನು ಒಂದು ಧರ್ಮ ಎಂಬ ರೀತಿಯಲ್ಲಿ ಬಣ್ಣಿಸಬೇಡಿ. ಇಸ್ಲಾಂ ಧರ್ಮವಲ್ಲ, ಅದೊಂದು ಮತ (ರಿಲಿಜನ್). ನಿಮ್ಮ ಮೇಲಿನ ಕಮೆಂಟನ್ನು ಈ ಕೆಳಗಿನಂತೆ ತಿದ್ದುವುದು ಸೂಕ್ತ:

          “ಮುಸಲ್ಮಾನರ ಸ್ವಾತಂತ್ರ್ಯದ ಮೇಲೆ ಇಸ್ಲಾಂ ಅನಗತ್ಯವಾಗಿ ಮೂಗು ತೂರಿಸುವುದರ ವಿರೋಧಿ ನಾನು. ಆಸಕ್ತಿ ಹಾಗೂ ಹಣ ಇದ್ದವರು ಸಮಾರಂಭಗಳ ಸವಿನೆನಪಿಗಾಗಿ ವೀಡಿಯೊ ಚಿತ್ರೀಕರಣ ಮಾಡಿದರೆ ಅದು ಅವರ ಇಷ್ಟ. ಮುಂದೆ ಬೇಕಾದಾಗಲೆಲ್ಲ ತಮ್ಮ ಸಮಾರಂಭದ ದೃಶ್ಯಗಳನ್ನು ನೋಡುವ ಹಾಗೂ ತಮಗೆ ಬೇಕಾದವರಿಗೆ ಅದನ್ನು ತೋರಿಸುವ ಅನುಕೂಲ ಇದರಿಂದ ದೊರಕುತ್ತದೆ. ಇದಕ್ಕೆ ಇಸ್ಲಾಂ ಏಕೆ ಕಲ್ಲು ಹಾಕಬೇಕು?”

          Reply
    2. Godbole

      ಆನಂದ ಪ್ರಸಾದ್ ಅವರೇ, ತಮ್ಮ ಈ ಮೇಲಿನ ಕಮೆಂಟನ್ನು ಹೀಗೆ ತಿದ್ದಿ ಬರೆಯುವುದು ಸೂಕ್ತ:

      “ಮುಸಲ್ಮಾನರ ಮದುವೆಯ ವೀಡಿಯೊ ಚಿತ್ರೀಕರಣ ಮಾಡಬಾರದು ಎಂಬ ನಿಷೇಧ ಮೂರ್ಖತನದ ಪರಮಾವಧಿ ಹಾಗೂ ಮುಸಲ್ಮಾನರ ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ. ಮುಸಲ್ಮಾನರ ಮದುವೆಯ ವೀಡಿಯೊ ಚಿತ್ರೀಕರಣ ಮಾಡಿದರೆ ಏನು ತೊಂದರೆ? ಇಸ್ಲಾಂ ಹೆಸರಿನಲ್ಲಿ ಇಂಥ ನಿಷೇಧ ಹೇರುವುದರ ವಿರುದ್ಧ ಮುಸ್ಲಿಮರು ಸಿಡಿದೆದ್ದು ಸಾಮೂಹಿಕವಾಗಿ ಪ್ರತಿಭಟಿಸಬೇಕಾಗಿದೆ. ಬೇಕಲ್ ಇಮ್ದಾದುದ್ದೀನ್ ಇಸ್ಲಾಮ್ ಕಮಿಟಿ ಕಾಸರಗೋಡು ಮುಸ್ಲಿಂ ಸಮುದಾಯದ ಮೇಲೆ ಹಿಡಿತ ಸಾಧಿಸಲು ಹೇರುವ ಅರ್ಥಹೀನ ಕಂದಾಚಾರಗಳನ್ನು ಎಲ್ಲರೂ ಧಿಕ್ಕರಿಸುವುದು ಅಗತ್ಯ.”

      Reply
  3. BNS

    ಶ್ರೀ ಇರ್ಷಾದ್ ಅವರಿಗೆ ವಂದನೆಗಳು,

    ದುಂದುವೆಚ್ಚ ಮತ್ತು ಆಡಂಬರದ ಪ್ರದರ್ಶವನ್ನು ಖಂಡಿಸುವ ಪ್ರಾಮಾಣಿಕ ಪ್ರಯತ್ನಕ್ಕೆ ಸಹಕರಿಸಬೇಕು. ಆದರೆ ಮನುಷ್ಯನ ಸಣ್ಣ ಸಣ್ಣ ಸಂತೋಷಗಳಾದ ಸಂಗೀತ, ಮೋಜು, ವಿನೋದಗಳನ್ನು ಕೂಡ ಹತ್ತಿಕ್ಕುವ ಹುಸಿ ಧಾರ್ಮಿಕತೆಗೆ ವಿರೋಧವಿರಲಿ.

    ನಿಮ್ಮ ಲೇಖನದಲ್ಲಿ ‘ನಿರುತ್ಸಾಹಗೊಳಿಸುವ’ ಎನ್ನುವ ಪದಪ್ರಯೋಗ ಮತ್ತೆ ಮತ್ತೆ ಆಗಿದೆ. ಬಹುಶಃ ನೀವು ಇಂಗ್ಲಿಷಿನಲ್ಲಿ ಬರೆದ ಕೈಪತ್ರಿಕೆಯ ಕನ್ನಡ ಅನುವಾದ ಮಾಡಿದ್ದೀರೆಂದು ಕಾಣುತ್ತದೆ. ‘ನಿರುತ್ತೇಜಿಸುವ’ ಎನ್ನುವ ಪದ ಇಂಗ್ಲಿಷಿನ ‘discourage’ ಗೆ ಹತ್ತಿರದ ಅನುವಾದವಾಗುತ್ತದೆ. ತಿದ್ದುಪಡಿಗೆ ನೀವು ಅನ್ಯಥಾ ಭಾವಿಸುವುದಿಲ್ಲ ಎಂದುಕೊಳ್ಳುತ್ತೇನೆ.

    BNS

    Reply
  4. ಇರ್ಷಾದ್

    ಧನ್ಯವಾದಗಳು ಸರ್ . ಖಂಡಿತವಾಗಿಯೂ ತಪ್ಪಿದ್ದಲ್ಲಿ ಅದನ್ನು ತಿದ್ದಿಕೊಳ್ಳಬೇಕು ಅದಕ್ಕಾಗಿ ಅನ್ಯಥಾ ಭಾವಿಸುವ ಪ್ರೆಶ್ನೆಯೇ ಉದ್ಭವವಾಗೋದಿಲ್ಲ. ಕನ್ನಡ ವಾರ ಪತ್ರಿಕೆಯಲ್ಲಿ ಫತ್ವಾ ಪರವಾಗಿ ಲೇಖನ ಬರೆದ ಲೇಖಕರು ತಮ್ಮ ಲೇಖನದಲ್ಲಿ “ನಿರುತ್ಸಾಹಗೊಳಿಸಬೇಕಾದ” ಕಾರ್ಯಗಳು ಹಾಗೂ “ಕಡ್ಡಾಯ ಪಾಲಿಸಬೇಕಾದ ಕಾರ್ಯಗಳು”ಎಂಬ ಪದಗಳನ್ನು ಬಳಸಿದ್ದರು. ಅದನ್ನು ನನ್ನ ಲೇಖನದಲ್ಲಿ ಬದಲಾವಣೆಗೊಳಿಸುವುದು ಬೇಡ ಎಂಬ ಕಾರಣಕ್ಕಾಗಿ ಅದೇ ಪದಗಳನ್ನು ಬಳಸಿದೆ. ಖಂಡಿತವಾಗಿಯೂ “ನಿರುತ್ತೇಜಿಸುವ” ಪದ ಹತ್ತಿರದ ಅನುವಾದವಾಗುತ್ತದೆ.

    Reply
  5. ಇರ್ಷಾದ್

    ಧನ್ಯವಾದಗಳು ಸರ್ , ತಪ್ಪನ್ನು ತಿದ್ದುಪಡಿ ಮಾಡುವುದಕ್ಕೆ ಅನ್ಯಥಾ ಭಾವಿಸುವ ಪ್ರೆಶ್ನೆಯೇ ಇಲ್ಲ.ಫತ್ವಾ ಪರವಾಗಿ ಲೇಖಕರು ಬರೆದ ಲೇಖನದಲ್ಲಿ “ನಿರುತ್ಸಾಹಗೊಳಿಸಬೇಕಾದ ಕಾರ್ಯಗಳು” ಹಾಗೂ “ಕಡ್ಡಾಯಗೊಳಿಸಬೇಕಾದ ಕಾರ್ಯಗಳು” ಎಂಬ ಪದಗಳನ್ನು ಬಳಕೆ ಮಾಡಿದ್ದರು. ಆ ಪದಗಳನ್ನು ಬದಲಾಯಿಸೋದು ಬೇಡ ಎಂಬ ಕಾರಣದಿಂದ ನನ್ನ ವಿಮರ್ಶಾ ಲೇಖನದಲ್ಲಿ ಅದೇ ಪದಗಳ ಬಳಕೆ ಮಾಡಿದೆ.

    Reply
  6. Godbole

    ಇರ್ಶಾದ್ ಅವರೇ, ಇಸ್ಲಾಂ ಒಂದು ಧರ್ಮವಲ್ಲ, ಅದು ಒಂದು ಮತ (ರಿಲಿಜನ್). ಆದುದರಿಂದ ಧರ್ಮರಕ್ಷಕ ಎಂದು ಶೀರ್ಷಿಕೆಯಲ್ಲಿರುವುದನ್ನು ಇಸ್ಲಾಂ ರಕ್ಷಕ ಅಂತ ಅಥವಾ ಮತರಕ್ಷಕ ಅಂತ ಬದಲಿಸಿ.

    Reply
  7. ಬೈರಿಕಟ್ಟೆ ಇರ್ಶಾದ್

    ಇರ್ಷಾದ್ ರವರ ಲೇಖನಕ್ಕೆ ನನ್ನ ಸಂಕ್ಷಿಪ್ತ ಪ್ರತಿಕ್ರಿಯೆ:
    ಇತ್ತೀಚೆಗೆ ಬೇಕಲ್ ಇಮ್ದಾದುದ್ದೀನ್ ಇಸ್ಲಾಮ್ ಕಮಿಟಿ ಕಾಸರಗೋಡು ಜಮಾತ್ ತೆಗೆದುಕೊಂಡ ನಿರ್ಣಯಗಳ ಬಗ್ಗೆ ,ಅದನ್ನು ಉಲ್ಲಂಘಿಸಿದ್ದಲ್ಲಿ ಇರುವ ನಿರ್ಬಂಧಗಳು ಮತ್ತು ಇತರೆ ವಿಚಾರಗಳ ಬಗ್ಗೆ ಬರೆಯುವ ನಿಮ್ಮ ಲೇಖನವು ಎಲ್ಲೋ ಮೌದೂದಿ ವಿಚಾರಧಾರೆಗಳನ್ನು ಕುಟುಕುತ್ತಿರುವಂತೆ ತೋರಿತು.(ಇರಲಿ ಬಿಡಿ ಅದು ನಿಮಗೆ ಬಿಟ್ಟಿದ್ದು)
    ಮೊದಲನೆಯದಾಗಿ ಇದು ಫತ್ವ ಅಲ್ಲ,ಬದಲಾಗಿ ಒಂದು ಜಮಾತ್ ಕಮಿಟಿಯು ತೆಗೆದುಕೊಂಡ ನಿರ್ಣಯ.ಇಸ್ಲಾಮಿನಲ್ಲಿ ಮದುವೆ ಎಂಬುದು ಸರಳ ಕಾರ್ಯಕ್ರಮ.ಆದರೆ ಅದನ್ನು ಸಂಭ್ರಮದಲ್ಲಿ ಹೆಸರಲ್ಲಿ ನಡೆಸುತ್ತಾ ಬಂದಿರುವುದು ಅನೇಕರ ಬದುಕಿನಲ್ಲಿ ಸಂಕಷ್ಟಮಯ ಘಟ್ಟವಾಗಿ ಹೋಗಿದೆ,ಇದರಿಂದ ನರಳುವ ಬಡ-ಮಧ್ಯಮ ವರ್ಗದವರ ಪಾಡು ಹೇಳ ತೀರದು.ಅದರಲ್ಲೂ ಮಂಗಳೂರು-ಕಾಸರಗೋಡಿನಲ್ಲಿ ಇತ್ತೀಚೆಗೆ ಮದುವೆ ಹೆಸರಿನಲ್ಲಿ ನಡೆಯುತ್ತಿರುವ ಅನಾಚಾರಗಳು ಅಸಹನೀಯ,ಈ ಅಸಹನೀಯತೆಯೇ ಇಂದು ಜಮಾತ್ ಗೆ ಇಂದು ಇಂತಹ ತೀರ್ಮಾನವನ್ನು ತೆಗೆದುಕೊಳ್ಳುವಲ್ಲಿ ಪ್ರೋತ್ಸಾಹಿಸಿದೆಯೇನೋ..?ಮದುವೆಯ ಮೊದಲು ಹೆಣ್ಣು ನೋಡುವ ನೆಪದಲ್ಲಿ ನೂರಾರು ಮಂದಿ ತೆರಳುವುದು,ಈ ಮೂಲಕ ಹೆಣ್ಣಿನ ಕಡೆಯವರಿಗೂ ಅತ್ತ ಬೇಡ ಎಂದು ಹೇಳಿಕೊಳ್ಳಲಾರದೆ,ಇತ್ತ ಬಂದವರಿಗೆ ಸಾಲ ಸೋಲ ಮಾಡಿಯಾದರೂ ಗಮ್ಮತ್ತು ಮಾಡಬೇಕಾದ ಹರಕತ್ತು.ಇನ್ನು ಕೆಲವೊಮ್ಮೆ (ಹಲವು ಸಂದರ್ಭಗಳಲ್ಲಿ) ಹೆಣ್ಣು ನೋಡಿ ಬಂದು ಕೆಲವೇ ದಿನಗಳಲ್ಲಿ ಮದುವೆ ಕ್ಯಾನ್ಸಲ್ ಮಾಡಬೇಕಾದ ಪ್ರಸಂಗಗಳು(ನಾನು ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದೇನೆ), ಆ ಬಳಿಕ ನಡೆಯುವ ವಿದ್ಯಮಾನಗಳಲ್ಲಿ ಹೆಣ್ಣಿನ ಕಡೆಯವರು(ಸ್ವತಹ ಹೆಣ್ಣು ) ಅನುಭವಿಸುವ ಮಾನಸಿಕ ಯಾತನೆ ಅಷ್ಟಿಷ್ಟಲ್ಲ.ಇನ್ನು ಮದರಂಗಿ ಕಾರ್ಯಕ್ರಮದ ಕುರಿತು ಹಲವರಿಗೆ ತಪ್ಪು ಅಭಿಪ್ರಾಯಗಳಿದೆ,ಹಲವರು ನನ್ನೊಂದಿಗೆ ಚರ್ಚೆ ನಡೆಸುವಾಗ ಮುಗ್ದವಾಗಿ ಕೇಳಿದ್ದಿದೆ,ಕೈಗೆ ಮದರಂಗಿ ಇಡುವ ಸಂಭ್ರಮಕ್ಕೂ ಕೊಳ್ಳಿ ಇಡುವುದೇ ಎಂದು..?!ಆದರೆ ವಾಸ್ತವದಲ್ಲಿ ಮದರಂಗಿ ಇಡುವುದು ಸುನ್ನತ್(ಅನುಸರಿಸಲು ಯೋಗ್ಯವಾದ ಕಾರ್ಯ) ಆಗಿದೆ,ಆದರೆ ಮದರಂಗಿ ಹೆಸರಲ್ಲಿ ಇಂದು ನಡೆಯುತ್ತಿರುವುದು ಡಿ.ಜೆ,ಆರ್ಕೆಸ್ಟ್ರಾಗಳು,ಪಾನ ಗೋಷ್ಠಿಗಳು ಕೂಡ..!ಧ್ವನಿ ವರ್ಧಕದ ಕರ್ಕಷತೆ,ಇನ್ನು ಆರ್ಕೆಷ್ಟ್ರಾಗಳಿಗಾಗಿ ಮಾಡಬೇಕಾದ ಸಾವಿರಾರು ರೂಪಾಯಿ ಖರ್ಚು,ಅದೇ ರೀತಿ ಮದರಂಗಿಯ ಹೆಸರಲ್ಲಿ ನಡೆಯುವ ಬೃಹತ್ ಕಾರ್ಯಕ್ರಮ ಬಡವನ ಮಧ್ಯಮ ವರ್ಗದವರ ಪಾಲಿಗೆ ಅಸಮಾನ್ಯ ಹೊರೆಯಾಗಿ ಕಾಡುತ್ತದೆ.ಶ್ರೀಮಂತರ ಹಾಕಿ ಕೊಡುವ ಈ ಪಾಟಿ ಸಂಪ್ರದಾಯಗಳು ಬಡವನ -ಮಧ್ಯಮ ವರ್ಗದವನನ್ನು ಇಲ್ಲಿ ಅನುಸರಿಸುವಂತೆ ಬಲವಂತಿಕೆ ಪಡಿಸುತ್ತಿದೆ ಮಾತ್ರವಲ್ಲ ಕರಾವಳಿಯಲ್ಲಿ ಇದು ಒಂದು ಫ್ಯಾಶನ್ ಆಗಿ ಮಾರ್ಪಟ್ಟಿದೆ.ಮದುವೆ ದಿನ ನಡೆಯುವ ವಿಡಿಯೋಗ್ರಫಿ ಅದು ಮದುವೆಯ ದಿನದ ಸಂಭ್ರಮವನ್ನು ಸದಾ ನೆನಪಿನಲ್ಲಿಡಬಹುದು ಎಂಬ ಪರಿಧಿಗೂ ಆಚೆಗೆ ದುರ್ಬಳೆಕೆಗೆ ಈಡಾದ ಸಂದರ್ಭಗಳು ಹಲವು ಉದಾಹರಣೆ ನಮ್ಮ ಬಳಿಯಿದೆ.ಮದುವೆಯ ಬಳಿಕ ಬೀಟ್ ಕೂಡಿಸುವ ಸಂಪ್ರದಾಯ ನಿಜಕ್ಕೂ ಅತ್ಯುತ್ತಮ ಮತ್ತು ಮನೋಹರವಾಗಿತ್ತು,ಅದರಲ್ಲಿ ಆಪ್ತತೆಯಿತ್ತು,ಆದರೆ ಇಂದಿನ ದಿನಗಳಲ್ಲಿ ಚೇಷ್ಟೆಗಳು ಮಿತಿ ಮೀರಿದೆ,ಮದುಮಗನೊಂದಿಗೆ ಸ್ನೇಹಿತರ ದಂಡು ಹೋಗಿ ಮಾಡುವ ಅನಾಚಾರಗಳು ನಿಜಕ್ಕೂ ಅಸಹ್ಯ ಮೂಡಿಸುತ್ತದೆ.ಅದರಲ್ಲೂ ನನಗೆ ಗೊತ್ತಿರುವ ಅದೆಷ್ಟೋ ಮಂದಿಯ ಬೀಟ್ ಕೂಡುವಿಕೆ ಅನಾಹುತದಲ್ಲಿ ಕೊನೆಗೊಂಡಿದೆ,ಕೋಣೆಯ ಬಾಗಿಲನ್ನೇ ಕಿತ್ತುಹಾಕುವುದು,ಮಧುಯರಾತ್ರಿ ಕಳೆದರೂ ಹುಡುಗನನ್ನು ಬಿಟ್ಟು ಬರಬೇಕಾದಲ್ಲಿ ಹಣ ನೀಡುವಂತೆ ಪೀಡಿಸುವುದು,ಮಧ್ಯರಾರಿ ಪಟಾಕಿ ಹೊಡೆಸಿ ನೆರೆಕರೆಯವರ ನಿದ್ದೆಗೂ ಭಂಗ ತರುವುದು..ಹೆಣ್ಣಿನ ಮನೆಯವರು ಆ ಘಟನೆಗಳನ್ನು ಅಸಹಾಯಕತೆಯಿಂದ ನೋಡುವ ಪರಿ ನಿಜಕ್ಕೂ ವಿಷಾದ ಮೂಡಿಸುತ್ತದೆ(ಅತ್ತ ಗಂಡಿನ ಕಡೆಯ ಸ್ನೇಹಿತರನ್ನು ಗದರಿಸಿದರೆ ಎಲ್ಲಿ ಮದುಮಗನಿಗ್ಫೆ ಬೇಸರವಾಗಬಹುದೆಂಬ ಆತಂಕ ಬೇರೆ).ಇತ್ತೀಚೆಗೆ ನನ್ನ ಸಂಬಂಧಿಕರ ಮದುವೆಯೊಂದು ನಡೆದಿತ್ತು,ವರನನ್ನು ಇನೋವಾದಲ್ಲಿ ಕೂಡಿಸಿಕೊಂಡು ವಧುವಿನ ಮನೆಗೆ ಹೊರಟಿದ್ದರು,ಚಾಲನೆಗೆ ಬೇರೆ ಅವನನ್ನು ಒತ್ತಾಯಿಸಿ ಕುಌರಿಸಿದ್ದರು,ಒಂದರ ಹಿಂದೆ ಒಂದು ಗಾಡಿ,ಒಬ್ಬರನ್ನು ಹಿಂದಿಕ್ಕುತ್ತಾ ಒಬ್ಬರು ಮಜ ತೆಗೆಯುತ್ತಿದ್ದರು,ಕೊನೆಗೆ ಇನೋವಾ ಅಪಘಾತಕ್ಕೊಳಗಾಗಿ,ಆತನೂ ಗಾಯಗೊಂಡು,ಆತನ ಮೊದಲ ರಾತ್ರಿಯೂ ಆಸ್ಪತ್ರೆಯಲ್ಲೇ ಕಳೆದುಕೊಳ್ಳಬೇಕಾಯಿತು..!ಇಂತಹ ಘಟನೆಗಳು ನೂರಾರು.ಇನ್ನು ಲೇಖಕರು ಇದು ಸೌದಿ ಸಂಸ್ಕೃತಿ ಎಂದು,ಬಾರು ಬಾರಿಗೆ ಮೌದೂದಿ ಸಿದ್ದಾಂತವೆಂದು ಪುಂಗಿ ಊದಿದ್ದಾರೆ,ಇದು ಯಾರು ಗುತ್ತಿಗೆ ತೆಗೆದುಕೊಂಡ ಸಿದ್ದಾಂತವೂ ಅಲ್ಲ,ಇಸ್ಲಾಮಿನ ಮೇರೆಗಳನ್ನು ನೋಡಿ ಇಲ್ಲಿ ತೆಗೆದುಕೊಂಡಿರುವ ನಿರ್ಣಯಗಳು ಪ್ರಬುದ್ಧವಾಗಿದೆ,ಮದುವೆ ಕೇವಲ ವೈಯಕ್ತಿಕ ಯಾ ರಹಸ್ಯ ವಿಚಾರವಲ್ಲ,ಅದು ನಾಲ್ಕು ಜನರ ಮುಂದೆ ನಡೆಯುವ ಸಾಮಾಜಿಕ ಕಾರ್ಯಕ್ರಮ..ಇನ್ನು ಆಯಾ ಪ್ರದೇಶಗಳಲ್ಲಿ ಅವರದೇ ಸಂಪ್ರದಾಯಗಳಿರುವುದು ಸಹಜ…ಆ ಸಂಪ್ರದಾಯಗಳು ಧಾರ್ಮಿಕ ಚೌಕಟ್ತನ್ನು ಮೀರಿ ಸನ್ನಿಯಾಗಿ ಮಾರ್ಪಟ್ಟಾಗ, ಇಂತಹ ನಿರ್ಣಯಗಳು ಕೈಗೊಂಡಾಗ ಅದನ್ನು ಫತ್ವಾ ಎಂದು ಕರೆದು ವ್ಯಂಗ್ಯ ಮಾಡುವುದು ಎಳ್ಳಷ್ಟು ತರವಲ್ಲ.

    Reply
    1. Nagshetty Shetkar

      ಮದುವೆಯ ಹೆಸರಿನಲ್ಲಿ ಲೋಲುಪತೆ, ಡಂಭಾಚಾರ, ಪ್ರದರ್ಶನ ಸರಿಯಲ್ಲ. ವಿಶ್ವಮಾನವ ತತ್ವದ ಹರಿಕಾರ ಮಹಾಮಾನವತಾವಾದಿ ಕುವೆಂಪು ಅವರು ಜಾರಿಗೆ ತಂದ ಮಂತ್ರಮಾಂಗಲ್ಯ ಆಚರಣೆಯನ್ನು ಸಮಾಜವು ಜಾತಿ ಮತ ಕುಲಗಳ ಹಂಗಿಲ್ಲದೆ ಅಳವಡಿಸಿಕೊಳ್ಳುವುದು ಉತ್ತಮ.

      Reply

Leave a Reply

Your email address will not be published. Required fields are marked *