1998, 1999, 2004 ರ ಕೆಪಿಎಸ್‌ಸಿ ಕರ್ಮಕಾಂಡ : ಸಂಪೂರ್ಣ ವಿವರಗಳು


– ರವಿ ಕೃಷ್ಣಾರೆಡ್ಡಿ


[ನೆನ್ನೆ (22-05-2014) ಆಮ್ ಆದ್ಮಿ ಪಕ್ಷ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಲಾದ ಪತ್ರಿಕಾಟಿಪ್ಪಣಿಯ ಪರಿಷ್ಕೃತ ರೂಪ ಈ ಲೇಖನ.]

ರಾಜ್ಯದ ಆಡಳಿತದಲ್ಲಿಯ ಸ್ವಚ್ಛಂದ ಭ್ರಷ್ಟಾಚಾರಕ್ಕೆ ಕಾರಣ ಸರ್ಕಾರಿ ಅಧಿಕಾರಿಗಳು. ಸಚಿವರ ಮತ್ತು ಶಾಸಕರ ಭ್ರಷ್ಟಾಚಾರವನ್ನು ಬದಿಗಿಟ್ಟು ನೋಡಿದರೆ, ದಿನನಿತ್ಯದ ಭ್ರಷ್ಟಾಚಾರ ಮತ್ತು ದುರಾಡಳಿತದಲ್ಲಿ ನೇರ ಪಾತ್ರಧಾರಿಗಳು ಅಧಿಕಾರಿಗಳೇ. ಈ ಅಧಿಕಾರಿಗಳು “ಭ್ರಷ್ಟಾಚಾರ ಮಾಡಲೇಬೇಕು, ಲಂಚ ತೆಗೆದುಕೊಳ್ಳಲೇಬೇಕು, ಕೆಳಗಿನ ಅಧಿಕಾರಿ-ಸಿಬ್ಬಂದಿಯಿಂದ ಮಾಮೂಲು ಪಡೆಯಲೇಬೇಕು”ಎನ್ನುವ ಸ್ಥಿತಿಗೆ ತಾವು ಕೆಲಸಕ್ಕೆ ಸೇರಿದ ಮೊದಲ ದಿನದಿಂದಲೇ ಬಂದಿದ್ದರೆ ಅದಕ್ಕೆ ಮುಖ್ಯ ಕಾರಣ ಕರ್ನಾಟಕ ಲೋಕಸೇವಾ ಆಯೋಗ ಮತ್ತು ರಾಜ್ಯ ಸರ್ಕಾರವೇ.

1998, 1999, 2004ರ ಕೆಎಎಸ್​ ಮತ್ತಿತರ ಪತ್ರಾಂಕಿತ ಅಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ ಭಾರೀ ಭ್ರಷ್ಟಾಚಾರ, ಅವ್ಯವಹಾರ ಮತ್ತು kpsc-scandalಅಕ್ರಮಗಳು ಜರುಗಿರುವುದು ಸಿಐಡಿ ತನಿಖೆ ಮತ್ತು ಹೈಕೋರ್ಟ್ ನೇಮಿಸಿದ್ದ ಸತ್ಯಶೋಧನೆ ಸಮಿತಿಯ ವರದಿಗಳಿಂದ ಬಹಿರಂಗವಾಗಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜ್ಯದ ಉಚ್ಚ ನ್ಯಾಯಾಲಯದಲ್ಲೂ ವಿಚಾರಣೆ ನಡೆಯುತ್ತಿದೆ. ಆದರೆ ಸರ್ಕಾರ, ಅಂದರೆ ನಮ್ಮ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಮತ್ತು ಮಂತ್ರಿಗಳು, ಹಾಗೂ ಅಧಿಕಾರಿ ವರ್ಗ, ಸಂವಿಧಾನಬದ್ಧವಾಗಿ ತಾವು ನಿರ್ವಹಿಸಬೇಕಾಗಿದ್ದ ಕರ್ತವ್ಯವನ್ನು ಮಾಡದೇ, ಈಗಲೂ ಸಹ ಭ್ರಷ್ಟ ಮಾರ್ಗದಿಂದ ನೇಮಕಗೊಂಡ ಅಧಿಕಾರಿಗಳನ್ನು ಮತ್ತು ಆಯ್ಕೆ ಮಾಡಿದ ಭ್ರಷ್ಟರನ್ನು ರಕ್ಷಿಸುತ್ತಿದೆ, ಮತ್ತು ಇವರೆಲ್ಲರ ಪಿತೂರಿಯಿಂದಾಗಿ ಅನ್ಯಾಯಕ್ಕೊಳಗಾದ ಅರ್ಹ, ಪ್ರಾಮಾಣಿಕ, ಮತ್ತು ಪ್ರತಿಭಾವಂತ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಮುಂದುವರೆಸುತ್ತಿದೆ. ಆ ಮೂಲಕ ರಾಜ್ಯದ ಜನತೆಯ ಮೇಲೆ ಭ್ರಷ್ಟರನ್ನು ಹೇರಿ, ಭ್ರಷ್ಟಾಚಾರದ, ಅನೈತಿಕತೆಯ ಆಡಳಿತ ನೀಡುತ್ತಿದೆ.

ಈಗಾಗಲೆ ಸತ್ಯಶೋಧನಾ ಸಮಿತಿಯು ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯ ಪ್ರಕಾರ ಇಡೀ ನೇಮಕಾತಿ ಪ್ರಕ್ರಿಯೆಯಲ್ಲಿ ಎಲ್ಲಾ ಹಂತಗಳಲ್ಲಿ ಅಕ್ರಮಗಳಾಗಿರುವುದು ಸಾಬೀತಾಗಿದೆ. ಅರ್ಜಿಯ ಸ್ವೀಕಾರದ ಹಂತದಿಂದ ಹಿಡಿದು, ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆ, ಹಾಗೂ ವ್ಯಕ್ತಿತ್ವ ಪರೀಕ್ಷೆ / ಸಂದರ್ಶನ ಒಳಗೊಂಡಂತೆ ಅಂತಿಮ ಪಟ್ಟಿಯ ಬಿಡುಗಡೆಯವರೆಗೂ ಕಾನೂನು ಮತ್ತು ನಿಯಮ ಬಾಹಿರ ಕೃತ್ಯಗಳು ನಡೆದಿರುವುದನ್ನು ಸತ್ಯಶೋಧನಾ ಸಮಿತಿ ವರದಿ ಮಾಡಿದೆ. ಹಣ, ಸ್ವಜನಪಕ್ಷಪಾತ ಮತ್ತು ಪ್ರಭಾವದ ಕಾರಣಕ್ಕಾಗಿಯೇ ಈ ಅವ್ಯವಹಾರಗಳು ನಡೆದಿವೆಯೇ ಹೊರತು ಬೇರೆ ಯಾವುದೇ ತಾಂತ್ರಿಕ ದೋಷದಿಂದಾಗಲಿ ಅಲ್ಲ. ಮತ್ತು ಈ ಎಲ್ಲಾ ಅಪಕೃತ್ಯಗಳನ್ನೂ ಭಾಗಿಯಾದವರೆಲ್ಲಾ ಪ್ರಜ್ಞಾಪೂರ್ವಕವಾಗಿ, ವ್ಯವಸ್ಥಿತವಾಗಿ ಎಸಗಿದ್ದಾರೆ.

ಎಸ್,ಎಮ್.ಕೃಷ್ಣ, ಧರಮ್ ಸಿಂಗ್, ಮತ್ತು ಎಚ್.ಡಿ. ಕುಮಾರಸ್ವಾಮಿಯವರ ಆಡಳಿತಾವಧಿಯಲ್ಲಿ ಈ ಎಲ್ಲಾ ಕೃತ್ಯಗಳು ನಡೆದಿರುವುದು ಕಂಡುಬಂದಿದ್ದು, ಈಗಲೂ ಸರ್ಕಾರದ ಆಯಕಟ್ಟಿನ ಸ್ಥಳದಲ್ಲಿರುವ ಪ್ರಭಾವಿ ವ್ಯಕ್ತಿಗಳು ಆಗ ಕೆಪಿಎಸ್‌ಸಿ ಆಯೋಗದಲ್ಲಿ ಪ್ರಮುಖ ಹುದ್ದೆಗಳಲ್ಲಿದ್ದದ್ದನ್ನು ನಾವು ನೋಡಬಹುದಾಗಿದೆ. ಅನೇಕ ವರ್ಷಗಳಿಂದ ಆಯೋಗದ ಸದಸ್ಯರಾಗಿದ್ದ ಮತ್ತು 2001 ರಿಂದ 2007 ರವರೆಗೆ ಅಧ್ಯಕ್ಷರಾಗಿದ್ದ ಡಾ.ಎಚ್.ಎನ್.ಕೃಷ್ಣ ಈ ಎಲ್ಲಾ ಹಗರಣಗಳ ರೂವಾರಿಯಾಗಿದ್ದರು ಮತ್ತು ಅವರು ಎಸ್.ಎಂ.ಕೃಷ್ಣ ಮತ್ತು ಕುಮಾರಸ್ವಾಮಿಯವರಿಗೆ ಪರಮಾಪ್ತರೂ ಆಗಿದ್ದರು. ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಾರ್ಯದರ್ಶಿಗಳಾಗಿರುವ ಹಿರಿಯ ಐಎಎಸ್​ ಅಧಿಕಾರಿ ಕೆ.ಆರ್.ಶ್ರೀನಿವಾಸ್​ ಫೆಬ್ರವರಿ 2001ರಿಂದ ಸೆಪ್ಟಂಬರ್​ 12, 2002ರವರೆಗೆ ಕೆಪಿಎಸ್‍ಸಿ ಆಯೋಗದಲ್ಲಿ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿದ್ದರು. ಇವರ ನಂತರದ ಅವಧಿಯಲ್ಲಿ ಕಾಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದವರು ಈಗ ನಿವೃತ್ತರಾಗಿರುವ ಮಾಜಿ ಐಎಎಸ್ ಅಧಿಕಾರಿ ಹರೀಶ್ ಗೌಡ. ಇವರ ನಂತರ, ಅಂದರೆ, ಆಗಸ್ಟ್​​ 5, 2004ರಿಂದ ಫೆಬ್ರುವರಿ 2, 2007ರವರೆಗೆ ಕೆಪಿಎಸ್‌ಸಿ ಕಾರ್ಯದರ್ಶಿಗಳಾಗಿದ್ದ ರಾಮಪ್ರಸಾದ್​ ಈಗ ರಾಜ್ಯಪಾಲರಿಗೆ ಕಾರ್ಯದರ್ಶಿ. ಹೈಕೋರ್ಟ್​ ರಚಿಸಿದ್ದ ಸತ್ಯಶೋಧನೆ ಸಮಿತಿಯ ವರದಿಯಲ್ಲಿ ಈ ನಾಲ್ವರ ಅಧಿಕಾರವಧಿಯಲ್ಲಿ ಜರುಗಿದ ಲೋಪ ಮತ್ತು ಅಕ್ರಮಗಳ ಬಗ್ಗೆ ವಿಸ್ತೃತವಾಗಿ ದಾಖಲಾಗಿದೆ.

ಹಾಗೆಯೇ, ಈ ಮೂರೂ ಪಟ್ಟಿಯಲ್ಲಿ ಅಕ್ರಮವಾಗಿ ಆಯ್ಕೆಯಾಗಿರುವ ಅನೇಕ ಅಧಿಕಾರಿಗಳು ಇಂದು ರಾಜ್ಯ ಸರ್ಕಾರದ ಪ್ರಮುಖ ಹುದ್ದೆಗಳಲ್ಲಿದ್ದಾರೆ ಮತ್ತು ಕಳೆದ ಎಂಟು ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್, ಜೆಡಿಎಸ್, ಮತ್ತು ಬಿಜೆಪಿ ಪಕ್ಷಗಳ ನಾಯಕರೊಂದಿಗೆ ಮತ್ತು ಮಾಜಿ ಮಂತ್ರಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಇದು ಕೇವಲ ಕಾರ್ಯನಿರ್ವಹಣೆಯ ಕಾರಣಕ್ಕಾಗಿಯಷ್ಟೇ ಅಲ್ಲದೆ ತಾವು ಆಯ್ಕೆಯಾದ ಅಕ್ರಮ ಮಾರ್ಗಗಳನ್ನು ಮುಚ್ಚಿಹಾಕುವುದಕ್ಕಾಗಿಯೂ ಬಳಸಿಕೊಳ್ಳುತ್ತಿದ್ದಾರೆ. ಇಂದಿನ ಸಿದ್ಧರಾಮಯ್ಯನವರ ಸರ್ಕಾರ ಸಹ ಹೈಕೋರ್ಟಿಗೆ ತಾವು ಇಡೀ ಪ್ರಕ್ರಿಯೆಯಲ್ಲಾಗಿರುವ ಭ್ರಷ್ಟಾಚಾರ ಮತ್ತು ಅಕ್ರಮಗಳ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಲಾಗದಿರುವುದಕ್ಕೆ ಈ ಹಿನ್ನೆಲೆಯೆಲ್ಲ ಕಾರಣವಾಗಿದೆ. ಹಾಗೆಯೇ, ಇಂದು ನ್ಯಾಯ ಜರುಗಿಸಬೇಕಾದ ಸ್ಥಳದಲ್ಲಿ ಕುಳಿತು ಅನ್ಯಾಯವನ್ನು ಎತ್ತಿಹಿಡಿಯುವ ಕೆಲಸವನ್ನು ಹೀಗೆ ಅಕ್ರಮವಾಗಿ ಆಯ್ಕೆಯಾದವರೇ ಮಾಡಬೇಕಾದ ವಿಚಿತ್ರ ಮತ್ತು ದೌರ್ಭಾಗ್ಯದ ಪರಿಸ್ಥಿತಿ ಸೃಷ್ಟಿಯಾಗಿದೆ. ಉದಾಹರಣೆಗೆ, ಸತ್ಯಶೋಧನಾ ಸಮಿತಿಯ ವರದಿಯಲ್ಲಿ ಉಲ್ಲೇಖಿಸಿರುವ ಪ್ರಕಾರ ಉತ್ತರಪತ್ರಿಕೆಯ ಅಂಕಗಳನ್ನು ಹಾಗೂ ಕಂಪ್ಯೂಟರ್‌ನಲ್ಲಿ ಅದರ ಸರಾಸರಿಯನ್ನು ತಿದ್ದಿ, 40.5 ರಷ್ಟು ಹೆಚ್ಚುವರಿಯಾಗಿ ಸುಳ್ಳು ಅಂಕಗಳನ್ನು ಪಡೆದು, ಆ ಮೂಲಕ ನೌಕರಿ ಪಡೆದುಕೊಂಡ ಅಕ್ರಮ ಫಲಾನುಭವಿ ಡಾ. ಜಿ.ಎಸ್. ಮಂಗಳ (ಸತ್ಯಶೋಧನಾಸಮಿತಿ ವರದಿ -ಪುಟ 255) ಈಗ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲಿ ಅಧೀನ ಕಾರ್ಯದರ್ಶಿ ಹುದ್ದೆಯಲ್ಲಿದ್ಡಾರೆ. ಅನ್ಯಾಯಕ್ಕೊಳಗಾದ ಅರ್ಜಿದಾರರು ಸಿಐಡಿ ವರದಿಯ ಆಧಾರದ ಮೇಲೆ ಅಕ್ರಮ ಎಸಗಿರುವವರ ವಿರುದ್ಧ ಕ್ರಮ ಜರುಗಿಸಲು ಸರ್ಕಾರಕ್ಕೆ ಕೊಟ್ಟ ಮನವಿಗೆ “ತಮ್ಮ ಮನವಿಯನ್ನು ಪುರಸ್ಕರಿಸಲು ಆಸ್ಪದವಿರುವುದಿಲ್ಲ” ಎಂದು ಉತ್ತರ ಕೊಟ್ಟವರು ಇದೇ ಅಧಿಕಾರಿಯಾಗಿರುತ್ತಾರೆ.

ಪಿ.ಎಸ್.ಮಂಜುನಾಥ್​ ಎನ್ನುವವರು (ಸತ್ಯಶೋಧನಾಸಮಿತಿ ವರದಿ -ಪುಟ 255) ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಯಲ್ಲಿ ಕೋರಿದ್ದ ಮೀಸಲಾತಿ ಪ್ರವರ್ಗ 3-ಬಿ. ಆದರೆ ಪ್ರವರ್ಗ 3-ಬಿ ಪ್ರಮಾಣ ಪತ್ರ ಸಲ್ಲಿಸುವಲ್ಲಿ ವಿಫಲರಾಗಿ ಸಾಮಾನ್ಯ ವರ್ಗ ಕೋಟಾದಲ್ಲಿ ಸಂದರ್ಶನಕ್ಕೆ ಹಾಜರಾಗಿ ಮೀಸಲಾತಿಯನ್ನು ಬಹಳ ಕೆಟ್ಟ ರೀತಿಯಲ್ಲಿ ದುರುಪಯೋಗಪಡಿಸಿಕೊಂಡಿರುತ್ತಾರೆ. ಸಾಮಾನ್ಯ ವರ್ಗದಲ್ಲಿರಬೇಕಾಗಿದ್ದ ಇವರು, ಲಿಖಿತ ಪರೀಕ್ಷೆಯ ಸಂದರ್ಭದಲ್ಲೆಲ್ಲಾ ತಮಗೆ ಅರ್ಹತೆ ಇಲ್ಲದಿದ್ದರೂ ಮಿಸಲಾತಿ ಪಡೆದುಕೊಂಡು ಸಂದರ್ಶನದ ಸಮಯದಲ್ಲಿ ಪ್ರಭಾವ ಬಳಸಿ ಸಾಮಾನ್ಯ ವರ್ಗದಲ್ಲಿ ಆಯ್ಕೆಯಾಗಿ, ಇತರೆ ಸಾಮಾನ್ಯ ವರ್ಗದ ಪ್ರತಿಭಾವಂತರ ಅವಕಾಶಕ್ಕೆ ಮೋಸ ಮಾಡಿರುತ್ತಾರೆ. ಇಡೀ ಪ್ರಕರಣದಲ್ಲಿ ಕೆಪಿಎಸ್‌ಸಿಯ ಅಧಿಕಾರಿ ಮತ್ತು ಆಯೋಗದ ಸದಸ್ಯರ ಕೃಪಾಕಟಾಕ್ಷಗಳಿಲ್ಲದೆ ಈ ಮಟ್ಟದ ನಿಯಮಾವಳಿಗಳ ದುರುಪಯೋಗ ಸಾಧ್ಯವಿಲ್ಲ. ಹೀಗೆ ಅಕ್ರಮವಾಗಿ ಆಯ್ಕೆಯಾದ ಮಂಜುನಾಥ್‌ರ ಹೆಸರು, ಅಕ್ರಮ ಗಣಿಗಾರಿಕೆಯ ಬಗ್ಗೆ ಲೋಕಾಯುಕ್ತ ಕೊಟ್ಟಿರುವ ವರದಿಯಲ್ಲಿ ಸದ್ಯ ಜೈಲಿನಲ್ಲಿರುವ ಖಾರದಪುಡಿ ಮಹೇಶ ಅಧಿಕಾರಿಗಳಿಗೆ ವಿವಿಧ ರೀತಿಯಲ್ಲಿ ಲಂಚ ಕೊಟ್ಟಿರುವ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಈಗ ಅವರು ಸಹಾಯಕ ಆಯುಕ್ತರಾಗಿ ಕೊಪ್ಪಳದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ರೀತಿಯ ಇನ್ನೊಂದು ಪ್ರಕರಣ ಮಂಜುನಾಥ ಬಳ್ಳಾರಿ (ಸತ್ಯಶೋಧನಾಸಮಿತಿ ವರದಿ -ಪುಟ 135) ಎನ್ನುವವರದು. ಅಂಕಗಳ ವ್ಯತ್ಯಾಸದಿಂದಾಗಿ ಅಧಿಕಾರಿಯಾಗಿ ಆಯ್ಕೆಯಾದ ಇವರೂ ಸಹ ಲೋಕಾಯುಕ್ತ ವರದಿಯಲ್ಲಿ ಲಂಚ ಪಡೆದ ಅಧಿಕಾರಿಗಳ ಪಟ್ಟಿಯಲ್ಲಿದ್ದಾರೆ.

ಅಕ್ರಮವಾಗಿ ಆಯ್ಕೆಯಾದ ಅಧಿಕಾರಿಗಳು ನೌಕರಿಗೆ ಸೇರಿದ್ದು 2006 ರಲ್ಲಿ. ಈ ಹಗರಣದಲ್ಲಿ ಆಗಿರುವ ಅಕ್ರಮಗಳ ಬಗ್ಗೆ 2000 ಇಸವಿಯಿಂದಲೇ ಕಾನೂನು ಹೋರಾಟ ಆರಂಭವಾಗಿತ್ತು. ಇಷ್ಟಿದ್ದರೂ ಸಹ, ಇವೆಲ್ಲಾ ವಿಚಾರಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದ್ದರೂ ಅಕ್ರಮವಾಗಿ ಆಯ್ಕೆಯಾದವರಿಗೆ ಪ್ರಮುಖ ಹುದ್ದೆ ಕೊಡುವುದಷ್ಟೇ ಅಲ್ಲದೆ ಬಡ್ತಿಯನ್ನೂ ನೀಡುತ್ತ ಬಂದಿದೆ. ಇಡೀ ಹಗರಣದಲ್ಲಿ ಆಗಿರುವ ಪ್ರತಿಯೊಂದು ಅಕ್ರಮದ ಬಗ್ಗೆ ವಿಸ್ತೃತ ತನಿಖೆ ನಡೆಸಿದ ಸಿಐಡಿ, 2012 ಏಪ್ರಿಲ್‌ನಲ್ಲಿ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಮತ್ತು ಸರ್ಕಾರಕ್ಕೆ ಸಲ್ಲಿಸುತ್ತದೆ. ಆದರೆ ಆಗ ಮುಖ್ಯಮಂತ್ರಿಯಾಗಿದ್ದ ಸದಾನಂದ ಗೌಡರು ಇದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಮತ್ತು ಅಕ್ರಮವಾಗಿ ಆಯ್ಕೆಯಾದ ಅಧಿಕಾರಿಗಳು ಯಾರು ಎಂಬ ಬಗ್ಗೆ ಮಾಹಿತಿ ಸಿಐಡಿ ವರದಿಯಲ್ಲಿದರೂ ಸಹ ಆ ಆಧಿಕಾರಿಗಳಿಗೆ ಬಡ್ತಿ ಮತ್ತಿತರ ಅನುಕೂಲಗಳು ಮುಂದುವರೆಯುತ್ತಲೇ ಹೋದವು ಮತ್ತು ಸರ್ಕಾರ ಭ್ರಷ್ಟರನ್ನು ರಕ್ಷಿಸುವತ್ತಲೇ ತನ್ನ ಆಸಕ್ತಿ ತೋರಿಸುತ್ತಿತ್ತು.

ಇದಾದ ನಂತರ, ಹೈಕೋರ್ಟಿನಲ್ಲಿದ್ದ ಪ್ರಕರಣಕ್ಕೆ ನ್ಯಾಯಾಲಯ ಸತ್ಯಶೋಧನಾ ಸಮಿತಿಯನ್ನು ನೇಮಿಸಿತು. ಆ ಸಮಿತಿ ಮತ್ತಷ್ಟು ವಿಸ್ತೃತ ವರದಿಯನ್ನು 31, ಜನವರಿ 2014 ರಂದು ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿತು. ಸ್ವತಃ ಸರ್ಕಾರದ ಪರ ವಾದಿಸುತ್ತಿರುವ ವಕೀಲರಾದ ದೇವದಾಸ್‌ರವರು ಆ ವರದಿಯಲ್ಲಿ ಇರುವ ಎಲ್ಲಾ ಮಾಹಿತಿಯನ್ನೂ ಮತ್ತು ಅನೇಕರು ಅಕ್ರಮವಾಗಿ ಆಯ್ಕೆಯಾಗಿದ್ದಾರೆ ಎನ್ನುವುದನ್ನು ನಾವು ಒಪ್ಪಿಕೊಂಡಿದ್ದೇವೆ ಎಂದು ಕೋರ್ಟಿಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಹೇಳಿರುತ್ತಾರೆ. ಆದರೆ ಈವರೆಗೂ ಸರ್ಕಾರ ಭ್ರಷ್ಟರ ವಿರುದ್ಧ ಕ್ರಮವನ್ನಾಗಲಿ, ಅಥವ ಅಕ್ರಮವಾಗಿ ಆಯ್ಕೆಯಾಗಿದ್ದಾರೆ ಎಂದು ಕಂಡುಬಂದ ಅಧಿಕಾರಿಗಳಿಗೆ ಕನಿಷ್ಟ ನೋಟಿಸ್ ಸಹ ಕಳುಹಿಸುವ ಧೈರ್ಯ ಮಾಡಿರುವುದಿಲ್ಲ.

ಈಗ ಅರ್ಜಿದಾರರು 26-04-2014ರಂದು ಹೈಕೋರ್ಟಿಗೆ ಕೂಲಂಕುಷವಾಗಿ ಎಲ್ಲಾ ಅಕ್ರಮ ಫಲಾನುಭವಿ ಅಧಿಕಾರಿಗಳ ಪಟ್ಟಿಯನ್ನು ತಯಾರಿಸಿ ಸಲ್ಲಿಸಿದ್ದಾರೆ. ಆದರ ಪ್ರತಿಯನ್ನು ಸರ್ಕಾರಕ್ಕೆ ಮತ್ತು ಕೆಪಿಎಸ್‍ಸಿಗೂ ಸಲ್ಲಿಸಲಾಗಿದೆ. 1998ರ ರಲ್ಲಿ ಆಯ್ಕೆಯಾದ 386 ಅಭ್ಯರ್ಥಿಗಳ ಪೈಕಿ 292 ಅಭ್ಯರ್ಥಿಗಳು ಅಕ್ರಮ ಫಲಾನುಭವಿಗಳೆಂದು ಗುರುತಿಸಲಾಗಿದೆ. ಇದು ಶೇ. 76 ರಷ್ಟಿದೆ. 1999 ರಲ್ಲಿ ಆಯ್ಕೆಯಾದ 191 ಅಭ್ಯರ್ಥಿಗಳ ಪೈಕಿ 95 ಜನ ಅಕ್ರಮ ಫಲಾನುಭವಿಗಳೆಂದು (50%), ಮತ್ತು 2004 ರ ಪಟ್ಟಿಯಲ್ಲಿ ಆಯ್ಕೆಯಾದ 152 ಅಭ್ಯರ್ಥಿಗಳ ಪೈಕಿ 97 ಅಭ್ಯರ್ಥಿಗಳು (64%) ಅಕ್ರಮ ಫಲಾನುಭಾವಿಗಳೆಂದು ಸ್ಪಷ್ಟವಾಗಿ ಗುರುತಿಸಲಾಗಿದೆ. ಒಟ್ಟಾರೆ 729 ಅಧಿಕಾರಿಗಳಲ್ಲಿ 484 ಜನ, ಅಂದರೆ ಶೇ.66 (484/729 = 66%) ಅಕ್ರಮವಾಗಿ ಆಯ್ಕೆಯಾಗಿದ್ದಾರೆ. ಹೀಗೆ ಅಕ್ರಮವಾಗಿ ಸರ್ಕಾರಿ ಹುದ್ದೆಗೆ ಸೇರಿದ ಅನೇಕ ಅಧಿಕಾರಿಗಳು ಅನೇಕ ಭ್ರಷ್ಟಾಚಾರದ ಹಗರಣಗಳಲ್ಲಿ ಭಾಗಿಯಾಗಿದ್ದಾರೆ. ಹಲವರ ಮೇಲೆ ಲೋಕಾಯುಕ್ತ ದಾಳಿ ಆಗಿದೆ. ಮತ್ತು ಕೆಲವರು ವಿಚಾರಾಣಾಧೀನ ಕೈದಿಗಳಾಗಿ ಜೈಲಿನಲ್ಲಿಯೂ ಇದ್ದಾರೆ (ರಾಜಮ್ಮ ಚೌಡರೆಡ್ಡಿ – ಬಿಡಿಎ, ಶಿವರಾಮ್ – ಮಂಡ್ಯ ಹಗರಣದ ರೂವಾರಿ, ಮಂಜುನಾಥ್ ಮತ್ತು ಮಂಜುನಾಥ್ ಬಳ್ಳಾರಿ -ಗಣಿ ಹಗರಣದಲ್ಲಿ ಮಾಮೂಲು ಪಡೆದಿರುವುದು, ಎಮ್.ಆರ್.ರವಿ – ಉಪನ್ಯಾಸಕರಿಂದ ಲಂಚ ಪಡೆದ ಹಗರಣ, ದೇವರಾಜ್ ಡಿ. -ರಿಪ್ಪನ್ ಮಲ್ಹೋತ್ರ ಅತ್ಮಹತ್ಯೆ ಪ್ರಕರಣ, ರಾಜು ಸಿ – ಅತ್ಯಾಚಾರ ಯತ್ನ ಪ್ರಕರಣದಲ್ಲಿ ಆರೋಪಿ).

ಯಾವುದೇ ನೇಮಕದಲ್ಲಿ ಶೇ.20ಕ್ಕಿಂತ ಹೆಚ್ಚು ಅಕ್ರಮ ನಡೆದಿದ್ದಲ್ಲಿ ಅಂತಹ ಅಧಿಸೂಚನೆಯನ್ನು ರದ್ದುಪಡಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪೊಂದರಲ್ಲಿ ಆದೇಶ ನೀಡಿದೆ. ಹಾಗಾಗಿ ಈ ಮೂರೂ ವರ್ಷಗಳ ನೇಮಕಾತಿ ರದ್ದಾಗುವುದು ನಿಶ್ಚಿತವಾಗಿದ್ದು, ಸರ್ಕಾರ ಭ್ರಷ್ಟರನ್ನು ರಕ್ಷಿಸುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಮುಂದೂಡುತ್ತಿದೆ ಮತ್ತು ತನ್ನ ಸಂವಿಧಾನಬದ್ದ ಕರ್ತವ್ಯ ನಿರ್ವಹಿಸುವಲ್ಲಿ ಪದೇಪದೇ ವಿಫಲವಾಗುತ್ತಿದೆ. ಕ್ರಮ ಕೈಗೊಳ್ಳಬೇಕಿದ್ದ ಸದಾನಂದ ಗೌಡ, ಜಗದೀಶ್ ಶೆಟ್ಟರ್ ಮತ್ತು ಸಿದ್ಧರಾಮಯ್ಯನವರ ನೇತೃತ್ವದ ಸರ್ಕಾರಗಳು ಈ ರೀತಿಯಲ್ಲಿ ಭ್ರಷ್ಟರನ್ನು ರಕ್ಷಿಸುತ್ತಾ ಬಂದಿವೆ.

ಅಕ್ರಮವಾಗಿ ಆಯ್ಕೆಯಾದ ಭ್ರಷ್ಟ ಅಧಿಕಾರಿಗಳನ್ನು ಹೊರಹಾಕಿ ಭ್ರಷ್ಟಾಚಾರ ರಹಿತ ಆಡಳಿತ ನೀಡಲು ಕಟಿಬದ್ದವಾಗಬೇಕಾದ ಸರ್ಕಾರ, ಅದರ ಬದಲಿಗೆ ಅಂತಹವರನ್ನು ಉನ್ನತ ಹುದ್ದೆಗಳಿಗೆ ನೇಮಿಸುತ್ತ, ಭಡ್ತಿ ನೀಡುತ್ತ ಬರುತ್ತಿದೆ. ಕೆಳಗೆ ಇಂತಹ ಕೆಲವು ವ್ಯಕ್ತಿಗಳ ಉದಾಹರಣೆಗಳನ್ನು ಕೊಡಲಾಗಿದೆ:

1998 ರ ಸಾಲಿನಲ್ಲಿ :

  • ಮೀಸಲಾತಿ ದುರುಪಯೋಗ ಮತ್ತು ಅಂಕಗಳ ಏರುಪೇರಿನ ಮೂಲಕ ಅಕ್ರಮವಾಗಿ ಆಯ್ಕೆಯಾಗಿರುವ ಶಿವಶಂಕರ್ ಎನ್ (ಸತ್ಯಶೋಧನಾ ಸಮಿತಿ ವರದಿ -ಪುಟ 115, ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 2) ಈಗ ರಾಜ್ಯ ಗೃಹ ಸಚಿವ ಕೆ.ಜೆ. ಜಾರ್ಜ್‌ರವರಿಗೆ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ.
  • ಸಂದರ್ಶನದ ಅಂಕಗಳನ್ನು ಅಕ್ರಮವಾಗಿ ತಿದ್ದುವುದರ ಮೂಲಕ ಹೆಚ್ಚುವರಿ ಅಂಕ ಪಡೆದು ಆಯ್ಕೆಯಾಗಿರುವ ಸಂಗಾಪುರ್ ಎಮ್.ಎಸ್ (ಅಕ್ರಮ ಫಲಾನುಭವಿಗಳ ಪಟ್ಟಿ -ಸಂಖ್ಯೆ 242) ಈಗ ಜವಳಿ, ಬಂದರು ಮತ್ತು ಒಳನಾಡು ಸಾರಿಗೆ ಸಚಿವರಾಗಿರುವ ಬಾಬುರಾವ್ ಚಿಂಚನಸೂರುರಿಗೆ ಆಪ್ತ ಕಾರ್ಯದರ್ಶಿಯಾಗಿದ್ದಾರೆ,
  • ಅಕ್ರಮ ಮಾಡರೇಷನ್ ಸ್ಕೇಲಿಂಗ್ ಮೂಲಕ ಅಧಿಕ ಅಂಕಗಳ ಲಾಭ ಪಡೆದಿರುವ ಶ್ರೀಧರ್ ನಾಯಕ್ ಕೆ.ಜೆ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 23) ಈಗ ಮುಖ್ಯಮಂತ್ರಿ ಕಚೇರಿಯಲ್ಲಿ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದಾರೆ.
  • ಅಕ್ರಮ ಅಂಕ ತಿದ್ದುವಿಕೆಯ ಫಲಾನುಭವಿ ಎಲಿಷಾ ಆಂಡ್ರ್ಯೂಸ್ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 71) ಈಗ ಮುಖ್ಯಮಂತ್ರಿ ಕಚೇರಿಯಲ್ಲಿ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದಾರೆ.
  • ಮೀಸಲಾತಿಯನ್ನು ದುರುಪಯೋಗ ಮಾಡಿಕೊಂಡು ಆಯ್ಕೆಯಾಗಿರುವ ವಿರೂಪಾಕ್ಷ ಕೆ.ಸಿ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 10) ಈಗ ಸಹಕಾರ ಖಾತೆ ಸಚಿವ ಮಹದೇವ ಪ್ರಸಾದ್‌ರ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದಾರೆ.
  • ನ್ಯಾಯಾಲಯದ ನಿರ್ದೇಶನಗಳನ್ನು ಉಲ್ಲಂಘಿಸಿ ಆಗಿರುವ ಅಕ್ರಮ ಮಾಡರೇಷನ್ ಸ್ಕೇಲಿಂಗ್ ಮೂಲಕ ಲಾಭ ಪಡೆದಿರುವ ಜ್ಯೋತಿ ಕೆ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 3) ಈಗ ರಾಜ್ಯದ ಖಜಾನೆ ಇಲಾಖೆಯ ನಿರ್ದೇಶಕರಾಗಿ ಪ್ರಭಾವಿ ಹುದ್ದೆಯಲ್ಲಿದ್ದಾರೆ.
  • ಮೀಸಲಾತಿಯನ್ನು ದುರುಪಯೋಗ ಮಾಡಿಕೊಂಡು ಆಯ್ಕೆಯಾಗಿರುವ ಅಕ್ರಮ್ ಪಾಷಾ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 3) ಈಗ ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕರಾಗಿದ್ದಾರೆ.
  • ಅಕ್ರಮ ಮಾಡರೇಷನ್ ಸ್ಕೇಲಿಂಗ್ ಮೂಲಕ ಅಧಿಕ ಅಂಕಗಳ ಲಾಭ ಪಡೆದಿರುವ ಕರೀಗೌಡ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 4) ಹಿಂದೆ ವಿರೋಧಪಕ್ಷದ ನಾಯಕರಾಗಿದ್ದ ಕುಮಾರಸ್ವಾಮಿಯವರ ಅಪ್ತ ಕಾರ್ಯದರ್ಶಿಯಾಗಿದ್ದು ಈಗ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಉಪನಿರ್ದೇಶಕರಾಗಿದ್ದಾರೆ.
  • ಇದೇ ರೀತಿ ಮೀಸಲಾತಿಯನ್ನು ದುರುಪಯೋಗ ಮಾಡಿಕೊಂಡು ಆಯ್ಕೆಯಾಗಿರುವ ಸಿಲ್ಲಿ-ಲಿಲ್ಲಿ ಟಿವಿ ಧಾರಾವಾಹಿ ಖ್ಯಾತಿಯ ಸಂಗಪ್ಪ ಉಪಾಸೆ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 6) ಇತ್ತೀಚೆಗೆ ಭಡ್ತಿ ಪಡೆದು ಈಗ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಉಪನಿಯಂತ್ರಕರಾಗಿದ್ದಾರೆ.
  • ಲಿಂಗಣ್ಣ ಕುಚಬಾಳ್ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 11) ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಸಹಾಯಕ ಆಯುಕ್ತರಾಗಿದ್ದಾರೆ.
  • ಅಕ್ರಮ ಅಂಕಗಳ ಫಲಾನುಭಾವಿಯಾಗಿರುವ ಎಚ್.ಎನ್.ಗೋಪಾಲಕೃಷ್ಣ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 2) ಈಗ ಹಾಸನದಲ್ಲಿ ಅಪರ ಜಿಲ್ಲಾಧಿಕಾರಿಯಾಗಿದ್ದಾರೆ.

1999 ರ ಸಾಲಿನಲ್ಲಿ :

  • ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಎಚ್.ಎನ್.ಕೃಷ್ಣರಿಂದ ಸಂದರ್ಶನದಲ್ಲಿ ಅತ್ಯಧಿಕ ಅಂಕಗಳನ್ನು ಪಡೆದು (194/200) ಅಕ್ರಮವಾಗಿ ಆಯ್ಕೆಯಾಗಿರುವ ರಾಜೇಂದ್ರ ಕೆ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 48) ಈಗ ಕೊಳಗೇರಿ ಅಭಿವೃದ್ಧಿ ಮಂಡಳಿಯಲ್ಲಿ ಅಧಿಕಾರಿಯಾಗಿದ್ದಾರೆ.
  • ಒಟ್ಟು ಆರು ಸಂದರ್ಶಕರ ಗುಂಪಿನಲ್ಲಿ ಕೇವಲ ಇಬ್ಬರು ಸಂದರ್ಶಕರ ಅಂಕಗಳನ್ನು ಪರಿಗಣಿಸಿ ಮತ್ತು ಅರ್ಜಿ ಸಲ್ಲಿಸುವ ವೇಳೆ ಪದವಿ ಪ್ರಮಾಣಪತ್ರಗಳು ಇಲ್ಲದಿದ್ದರೂ ಅಕ್ರಮವಾಗಿ ಆಯ್ಕೆ ಮಾಡಲಾಗಿರುವ ರಾಜೇಶ ಗೌಡ ಎಮ್.ಬಿ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 48) (ಮಾಜಿ ಶಾಸಕರೊಬ್ಬರ ಅಳಿಯ) ಇತ್ತೀಚೆಗೆ ಭಡ್ತಿ ಪಡೆದು ಅಪರ ಜಿಲ್ಲಾಧಿಕಾರಿಯಾಗಿದ್ಡಾರೆ.
  • ಅಕ್ರಮ ಅಂಕ ತಿದ್ದುವಿಕೆಯ ಫಲಾನುಭವಿಯಾಗಿರುವ ದೇವರಾಜ್ ಡಿ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 49) ಗುಲ್ಬರ್ಗದ ಸೂಪರಿಡೆಂಟ್ ಆಫ್ ಪೋಲಿಸ್ ಆಗಿದ್ದಾರೆ.
  • ಅಕ್ರಮ ಅಂಕ ತಿದ್ದುವಿಕೆಯ ಫಲಾನುಭವಿಯಾಗಿರುವ ಮಾಜಿ ಐಪಿಎಸ್ ಅಧಿಕಾರಿಯೊಬ್ಬರ ಮಗಳು ಸಿರಿಗೌರಿ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 49) ವರ್ಷದ ಹಿಂದೆಯೇ ಭಡ್ತಿ ಪಡೆದು ಎಸ್.ಪಿ.ಯಾಗಿದ್ದಾರೆ.

2004 ರ ಸಾಲಿನಲ್ಲಿ :

  • ಉತ್ತರಪತ್ರಿಕೆಯಲ್ಲಿ ಮತ್ತು ಕಂಪ್ಯೂಟರ್‌ನಲ್ಲಿ ಅಕ್ರಮವಾಗಿ ಅಂಕಗಳ ತಿದ್ದುಪಡಿಯಾಗಿ ಆಯ್ಕೆಯಾಗಿರುವ ವಿಜಯಮಹಾಂತೇಶ್ ದಾನಮ್ಮನವರ್ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 60) ಈಗ ಕಾರವಾರದಲ್ಲಿ ಅಪರ ಜಿಲ್ಲಾಧಿಕಾರಿಯಾಗಿದ್ಡಾರೆ.
  • ಅಕ್ರಮ ಅಂಕಗಳ ಫಲಾನುಭಾವಿಯಾಗಿರುವ ಗಂಗಾಧರ ಸ್ವಾಮಿ ಜಿ.ಎಮ್ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 60) (ಮಾಜಿ ನ್ಯಾಯಾಧೀಶರೊಬ್ಬರ ಅಳಿಯ) ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದಲ್ಲಿ (BMRDA) ಜಂಟಿ ಅಯುಕ್ತರಾಗಿದ್ದಾರೆ.
  • ಮಿಸಲಾತಿ ದುರುಪಯೋಗ ಮತ್ತು ಸಂದರ್ಶನದಲ್ಲಿ ಅಸಮರ್ಥನೀಯ ಅಂಕಗಳನ್ನು ಪಡೆದು ಆಯ್ಕೆಯಾಗಿರುವ ಯೋಗೀಶ್ ಎ.ಎಮ್ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 60) (ಹಾಲಿ ಶಾಸಕ ಮತ್ತು ಮಾಜಿ ಸಚಿವರ ಷಡ್ಡಕ) ಕಾಡಾ ಪ್ರಾಧಿಕಾರ (CADA), ಮೈಸೂರಿನಲ್ಲಿ  ಉನ್ನತ ಅಧಿಕಾರಿಯಾಗಿದ್ದಾರೆ.
  • ಅನುಪಾತ ನಿಯಮದ ದುರುಪಯೋಗವಾಗಿ ಆಯ್ಕೆಯಾಗಿರುವ ಪೂರ್ಣಿಮ.ಬಿ.ಆರ್ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 61) ಈಗ ಮಂಡ್ಯ ಜಿಲ್ಲಾಪರಿಷತ್‌ನಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ.

ಹೀಗೆ ಇಷ್ಟೆಲ್ಲಾ ಮಾಹಿತಿಯನ್ನು ಸತ್ಯಶೋಧನಾ ಸಮಿತಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರೂ ಮತ್ತು ಸರ್ಕಾರದ ವಕಿಲರೇ ಆ ಸಮಿತಿಯಲ್ಲೂ ಇದ್ದು ಅದಕ್ಕೆ ಸಹಮತ ಸೂಚಿಸಿ ಸಹಿ ಮಾಡಿದ್ದರೂ, ಈಗಲೂ ಸಿದ್ಧರಾಮಯ್ಯನವರ ಸರ್ಕಾರ ಅಕ್ರಮ ಫಲಾನುಭವಿ ಅಧಿಕಾರಿಗಳ ಪಟ್ಟಿ ನಮ್ಮಲ್ಲಿಲ್ಲ, ಅಥವ ನಮಗೆ ಗೊತ್ತಾಗುತ್ತಿಲ್ಲ ಎಂದು ಕೋರ್ಟಿಗೆ ಉತ್ತರ ಹೇಳುವ ಮೂಲಕ ಪ್ರತಿಯೊಬ್ಬ ಅಕ್ರಮ ಫಲಾನುಭವಿ ಅಧಿಕಾರಿಯನ್ನು ರಕ್ಷಿಸಲು ಹೊರಟಿದೆ. ಇದು ಸಿದ್ಧರಾಮಯ್ಯನವರಿಗಾಗಲಿ ಅಥವ ಅವರ ಸರ್ಕಾರಕ್ಕಾಗಲಿ ಶೋಭೆ ತರುವಂತಹುದ್ದಲ್ಲ ಮತ್ತು ಜನರು ಅವರ ಬಗ್ಗೆ ಇಟ್ಟುಕೊಂಡಿರುವ ವಿಶ್ವಾಸಕ್ಕೆ ಧಕ್ಕೆ ತರುವಂತಹುದ್ದಾಗಿದೆ. ನ್ಯಾಯಾಲಯ ಅನೇಕ ಬಾರಿ ಈ ವಿಚಾರದ ಬಗ್ಗೆ ನೀವು ಏನು ಕ್ರಮ ಕೈಗೊಂಡಿದ್ದೀರಾ ಎಂದು ಪದೇಪದೇ ಕೇಳಿದರೂ ಸರ್ಕಾರ ನಿರ್ಲಕ್ಷ್ಯದಿಂದ ವರ್ತಿಸುತ್ತಿದೆ. ಮಾರ್ಗದರ್ಶನಕ್ಕಾಗಿ ನ್ಯಾಯಾಲಯವನ್ನೇ ಕೇಳುತ್ತಿದೆ. “ಅಕ್ರಮ ಫಲಾನುಭವಿಗಳು ಇಂತಹವರು ಎಂದು ಗೊತ್ತಿದ್ದರೂ, ನೀವೇ ಉದ್ಯೋಗದಾತರಗಿದ್ದೀರಿ, ಹಾಗೂ ನಿಮ್ಮ ನೌಕರರಾಗಿರುವವರ ಮೇಲೆ ಕ್ರಮ ಜರುಗಿಸುವ ಅಧಿಕಾರವನ್ನು ನೀವೇ ಹೊಂದಿರುತ್ತೀರಿ, ಹೀಗಿರುವಾಗ ನೀವು ಯಾವ ಕಾರಣದಿಂದ ನ್ಯಾಯಾಲಯ ನಿಮಗೆ ಆದೇಶ ನೀಡಬೇಕೆಂದು ಬಯಸುತ್ತೀರಿ, ನಿಮಗೆ ಹಾಗೆ ಮಾಡಲು ತಾಕತ್ತು (Guts) ಇಲ್ಲವೆ?” ಎಂದು ನ್ಯಾಯಾಲಯ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಇಷ್ಟು ಹೇಳಿಸಿಕೊಂಡರೂ ಸರ್ಕಾರ ಈಗಲೂ ಅದೇ ಧೋರಣೆ ಮುಂದುವರೆಸಿ, ಅಕ್ರಮವಾಗಿ ಆಯ್ಕೆಯಾದ ಅಧಿಕಾರಿಗಳಿಗೆ ಭಡ್ತಿ ನೀಡಿ, ಜವಾಬ್ದಾರಿಯುತವಾದ ಹುದ್ದೆಗಳಿಗೆ ನೇಮಿಸಿ, ಅವರ ಅಕ್ರಮ ಮತ್ತು ಭ್ರಷ್ಟಾಚಾರಗಳನ್ನು ಪೋಷಿಸುತ್ತಾ, ಶಿಕ್ಷಿಸಬೇಕಾದ ಸಂದರ್ಭದಲ್ಲಿ ರಕ್ಷಿಸುತ್ತ, ಅನ್ಯಾಯ-ಅಕ್ರಮ-ಭ್ರಷ್ಟಾಚಾರ-ಸ್ವಜನಪಕ್ಷಪಾತಗಳನ್ನು ಗೌರವಿಸುತ್ತಿದೆ.

ಈ ಹಿನ್ನೆಲೆಯಲ್ಲಿ, ಈ ಕೂಡಲೇ ಸರ್ಕಾರ ನ್ಯಾಯಾಲಯವೇ ಮಾರ್ಗದರ್ಶನ ನೀಡಬೇಕು ಎನ್ನುವ ಕರ್ತವ್ಯದಿಂದ ನುಣುಚಿಕೊಳ್ಳುವ ಜಾಣ ಕುರುಡುತನದ ಕಳ್ಳಮಾರ್ಗ ಅನುಸರಿಸದೇ, ಈ ಮೂರೂ ವರ್ಷಗಳಲ್ಲಿ ಆಯ್ಕೆಯಾಗಿರುವ ಎಲ್ಲಾ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಬೇಕು. ಯಾವುದೇ ನೇಮಕಾತಿ ಪ್ರಕ್ರಿಯೆಯಲ್ಲಿ ಶೇ.20ಕ್ಕಿಂತ ಹೆಚ್ಚು ಅಕ್ರಮ ನಡೆದಿದ್ದಲ್ಲಿ ಅಂತಹ ಅಧಿಸೂಚನೆಯನ್ನು ರದ್ದುಪಡಿಸಬಹುದು ಎಂಬುದನ್ನು ಸುಪ್ರೀಂ ಕೋರ್ಟ್ ತೀರ್ಪೊಂದರಲ್ಲಿ ಆದೇಶ ನೀಡಿದೆ. ಈ ಆದೇಶದ ಹಿನ್ನೆಲೆಯಲ್ಲಿ ಎಲ್ಲಾ ಮೂರೂ ನೇಮಕಾತಿ ಅಧಿಸೂಚನೆಗಳನ್ನು (1998, 1999, 2004) ರದ್ದುಪಡಿಸಿ, ತಪ್ಪು ಎಸಗಿರುವವರ ವಿರುದ್ಧ ಕೂಡಲೇ ಕಾನೂನು ಕ್ರಮಕ್ಕೆ ಮುಂದಾಗಬೇಕು. ಕೆಪಿಎಸ್‍‍ಸಿಯನ್ನು ಕೇಂದ್ರದ ಯುಪಿಎಸ್‌ಸಿ ಮಾದರಿಯಲ್ಲಿ ಅಮೂಲಾಗ್ರ ಸುಧಾರಣೆ ಮಾಡುವ ತನಕ ಆಯೋಗಕ್ಕೆ ಯಾವುದೇ ನೇಮಕಾತಿ ಜವಾಬ್ದಾರಿಗಳನ್ನು ವಹಿಸಬಾರದು. ಇಂತಹ ಕ್ರಮಗಳನ್ನು ಕೈಗೊಂಡರೆ ಮಾತ್ರ ಅನ್ಯಾಯಕ್ಕೊಳಗಾದ ಅಭ್ಯರ್ಥಿಗಳಿಗೆ ಯಾವುದೇ ನ್ಯಾಯ ದೊರಕದೇ ಇದ್ದರೂ, ಭ್ರಷ್ಟಾಚಾರ-ಮುಕ್ತ ಆಡಳಿತದತ್ತ ರಾಜ್ಯ ನಡೆಯುತ್ತದೆ ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯೂ ಆಗುತ್ತದೆ.

ದಾಖಲೆಗಳು:
ಅಕ್ರಮ ಫಲಾನುಭವಿಗಳ ಪಟ್ಟಿ : http://www.kpscfraudselections.cu.cc/beneficiary-list-2/
ಸತ್ಯಶೋಧನಾ ಸಮಿತಿಯ ವರದಿ: http://www.kpscfraudselections.cu.cc/fact-finding-committee-report/

15 thoughts on “1998, 1999, 2004 ರ ಕೆಪಿಎಸ್‌ಸಿ ಕರ್ಮಕಾಂಡ : ಸಂಪೂರ್ಣ ವಿವರಗಳು

  1. Ananda Prasad

    ಬಿಜೆಪಿ ಅಥವಾ ಕಾಂಗ್ರೆಸ್ ಇವೆರಡೂ ಒಂದೇ ನಾಣ್ಯದ ಎರಡು ಮುಖಗಲು. ಇವುಗಳನ್ನೇ ಜನರು ಒಂದಾದ ನಂತರ ಇನ್ನೊಂದನ್ನು ಚುನಾವಣೆಗಳಲ್ಲಿ ಆಯ್ಕೆ ಮಾಡಿ ಅಧಿಕಾರಕ್ಕೆ ಏರಿಸುವ ಹೆಡ್ಡತನ ತೋರಿಸುವಾಗ ಅವರಾದರೂ ಏಕೆ ಅಂಜಬೇಕು? ಹಾಡಹಗಲೇ ಇಂಥ ಅಕ್ರಮಗಳಲ್ಲಿ ತೊಡಗಿದವರನ್ನು ಉನ್ನತ ಸ್ಥಾನಗಳಿಗೆ ಕುಳ್ಳಿರಿಸಿ ಅವರ ಮೂಲಕ ದೋಚಿದ್ದರಲ್ಲಿ ಒಂದು ಪಾಲನ್ನು ಪಡೆದುಕೊಂಡು ಮುಂದಿನ ಚುನಾವಣೆ ಎದುರಿಸಿದರೆ ಆಯಿತಲ್ಲ. ನಮ್ಮ ಜನಗಳು ಯಾವುದಕ್ಕೂ ಪ್ರತಿಭಟಿಸದ ಬುದ್ಧೂಗಳು ಎಂಬುದು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ರಾಜಕಾರಣಿಗಳಿಗೆ ಚೆನ್ನಾಗಿ ಮನವರಿಕೆಯಾಗಿದೆ. ನ್ಯಾಯಾಂಗವು ಕೂಡ ಭ್ರಷ್ಟರ ವಿರುದ್ಧ ಹೋರಾಡುವವರನ್ನು ಜೈಲಿಗೆ ತಳ್ಳಲು ಪ್ರಯತ್ನಿಸುತ್ತದೆಯೇ ಹೊರತು ಭ್ರಷ್ಟರ ವಿರುದ್ಧ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣವನ್ನಾಗಿ ಪರಿಗಣಿಸಿ ಅವರನ್ನು ವಜಾ ಮಾಡುವ ಆದೇಶ ನೀಡುವ ಧೈರ್ಯ ತೋರಿಸುತ್ತಿಲ್ಲ. ಇಂಥ ದೇಶದಲ್ಲಿ ಹುಟ್ಟಿದ ನಾವೇ ಧನ್ಯರು!!!!

    Reply
    1. Nagshetty Shetkar

      ಅಕ್ರಮ ಫಲಾನುಭವಿಗಳ ಪಟ್ಟಿಯಲ್ಲಿ ಯಾವ ಯಾವ ಜಾತಿಯವರು ಎಷ್ಟು ಜನ ಇದ್ದಾರೆ ಅಂತ ಜಾತಿವಾರು ಅಂಕಿ ಅಂಶ ಕೊಡತಕ್ಕದ್ದು. ಅಕ್ರಮ ಫಲ ಮೇಲ್ಜಾತಿಯವರಿಗೆ ಮಾತ್ರ ಸೀಮಿತವಾಗಕೂಡದು.

      Reply
      1. ವಿಜಯ್

        ಆಕ್ರಮ ಫಲಾನುಭವಿ ಯಾವ ಜಾತಿಯವನೇ ಆಗಿದ್ದರೂ ಆತ ತಪ್ಪು ಮಾಡಿದವನೆ..ಆತನಿಗೆ ಶಿಕ್ಷೆಯಾಗಬೇಕು ಎಂಬ ಸರಳ ಸತ್ಯ ‘ಶರಣ’ ಎಂದು ಅಪಾದಿಸಿಕೊಳ್ಳುವ ಈ ಮಹಾನುಭಾವರಿಗೆ ಹೊಳೆಯದಿದ್ದದ್ದು ಆಶ್ಚರ್ಯವೆ!

        Reply
        1. Nagshetty Shetkar

          ಸಿದ್ದರಾಮಯ್ಯನವರ ಸರಕಾರವು ಸಬಲ ಜಾತಿಗಳ ಫಲಾನುಭವಿಗಳ ನೇಮಕಾತಿ ಹಿಂದೆ ಪಡೆದುಕೊಂಡು ಶೋಷಿತ ಜಾತಿಗಳ ಫಲಾನುಭವಿಗಳ ನೇಮಕಾತಿಯನ್ನು ಸಕ್ರಮಗೊಳಿಸಿ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದು ಈ ವಿವಾದಕ್ಕೆ ಅಂತ್ಯ ಹಾಡತಕ್ಕದ್ದು.

          Reply
          1. ವಿಜಯ್

            [ಶೋಷಿತ ಜಾತಿಗಳ ಫಲಾನುಭವಿಗಳ ನೇಮಕಾತಿಯನ್ನು ಸಕ್ರಮಗೊಳಿಸಿ ಸಾಮಾಜಿಕ [ಶೋಷಿತ ಜಾತಿಗಳ ಫಲಾನುಭವಿಗಳ ನೇಮಕಾತಿಯನ್ನು ಸಕ್ರಮಗೊಳಿಸಿ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದು ಈ ವಿವಾದಕ್ಕೆ ಅಂತ್ಯ ಹಾಡತಕ್ಕದ್ದು.]
            ಜವಾಬ್ದಾರಿಯುತ ಹುದ್ದೆಗಳ ನೇಮಕಾತಿಯಲ್ಲೂ ಆಕ್ರಮ-ಸಕ್ರಮ ತಂದು, ಜಾತಿಯನ್ನು ಹೊಕ್ಕಿಸಿ, ಸೆಗಣಿ ತಿನ್ನುವುದಕ್ಕೆ ಹೊಸ ಮಾರ್ಗಸೂಚಿ ಹಾಕಿಕೊಡತಕ್ಕದ್ದು!..ಮತ್ತು ಇಂತಹ ಅತ್ಯುನ್ನತ ವಿಚಾರವನ್ನು ದಯಪಾಲಿಸಿದ ‘ಶರೆಣ’ ರ ಸಂತತಿಯನ್ನು ವೃದ್ಧಿ ಮಾಡಿ, ರಾಜ್ಯ ಎಕ್ಕುಟ್ಟಿ ಹೋಗುವಲ್ಲಿ ಸಹಾಯಮಾಡತಕ್ಕದ್ದು!!

            ಈ ಸ್ವಾಮಿಗಳಿಗೆ ತಾವು ಏನು ಮಾತನಾಡುತ್ತಿದ್ದೆವೆಂದು ಕಲ್ಪನೆ ಇದ್ದರೆ ಒಳ್ಳೆಯದಿತ್ತು. ಸ್ವಲ್ಪ ತನಿಖೆ ಮಾಡಿ ನೋಡಿ ಮಹಾಪ್ರಭು..ಈ ಆಕ್ರಮ ನೇಮಕಾತಿಯ ಫಲಾನುಭವಿಗಳಾದ ‘ಶೋ‍ಷಿತ’ರು ಬಡ ಪ್ರತಿಭಾವಂತರೆ ಎಂದು ಮತ್ತು ಇವರಿಂದ ಶೋಷಿತ ಜನಾಂಗಗಳ ಅರ್ಹ ಪ್ರತಿಭಾವಂತರಿಗೆ ಯಾವ ಮಟ್ಟದ ಹಾನಿ ಮುಟ್ಟಿದೆಯೆಂದು.

          2. Nagshetty Shetkar

            ಮಿ. ವಿಜಯ್, ಹತ್ತು ವರ್ಷಗಳ ಹಿಂದೆ ನಡೆದಿದೆ ಎನ್ನಲಾದ ಅಕ್ರಮಕ್ಕೆ ಶೋಷಿತ ವರ್ಗದ ಫಲಾನುಭವಿಗಳನ್ನು ಕೆಲಸದಿಂದ ಡಿಸ್ಮಿಸ್ ಮಾಡಿ ಅವರ ಕುಟುಂಬವನ್ನು ಬೀದಿಗೆ ತಳ್ಳುವ ಪಾಷಾಣ ಹೃದಯ ತಮ್ಮದು. ಶೋಷಿತರು ಮುಂದೆ ಬರುವುದನ್ನು ನೀವು ವೈದಿಕರು ಎಂದೂ ಸಹಿಸಲಾರಿರಿ.

  2. NRK

    ಸರ್ಕಾರದ ಕೆಲಸ ದೇವರ ಕೆಲಸ…!
    ದೇವರ ಕೆಲಸ ಮಾಡಲು ಭೂತಗಳೇಕೆ ಬೇಕು?
    ಮೊದಲು ಅಕ್ರಮ ಅಧಿಕಾರಿಗಳನ್ನು ಹೊರಗಟ್ಟಿ..
    ಈ ದೇಶದ ಸಂವಿಧಾನಕ್ಕೆ ಗೌರವ ತೋರಿಸಿ..

    Reply
  3. Anonymous

    ದಯವಿಟ್ಟು ಒಮ್ಮೆ ಪರಿಶೀಲಿಸಿ…
    1998 ರ ಸಾಲಿನಲ್ಲಿ :
    ಮೀಸಲಾತಿಯನ್ನು ದುರುಪಯೋಗ ಮಾಡಿಕೊಂಡು ಆಯ್ಕೆಯಾಗಿರುವ ವಿರೂಪಾಕ್ಷ ಕೆ.ಎಮ್ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 10) ಈಗ ಸಹಕಾರ ಖಾತೆ ಸಚಿವ ಮಹದೇವ ಪ್ರಸಾದ್‌ರ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದಾರೆ.
    ಇವರ ಹೆಸರು ಸರಿ ಇದೆ. ಆದರೆ ಇನಿಷಿಯಲ್ ಕೆ.ಸಿ ಇರಬಹುದು ಎಂಬ ಶಂಕೆ ನನ್ನದು. ದಯವಿಟ್ಟು ಪರಿಶೀಲಿಸಿ. ನೀನು ನಮೂದಿಸಿರುವ ಹೆಸರೇ ಸರಿ ಇದ್ದರೆ ದಯವಿಟ್ಟು ಕ್ಷಮಿಸಿ..

    Reply
    1. Anonymous

      ಧನ್ಯವಾದಗಳು… 1998ರ ಕೆಪಿಎಸ್​ಸಿ ಮೂಲಕ ವಿರೂಪಾಕ್ಷ ಎಂಬ ಹೆಸರು ಮೂವರು ನೇಮಕವಾಗಿದ್ದಾರೆ. ದುರಂತ ಅಂದರೆ ಮೂವರೂ ಅಕ್ರಮ ಎಸಗಿದ್ದಾರೆ. ಆದ್ದರಿಂದ ನಿಮಗೆ ಇನಿಷಿಯಲ್​ನಲ್ಲಿ ಸ್ವಲ್ಪ ಗೊಂದಲ ಆಗಿರಬಹುದು ಅಂದುಕೊಂಡೆ. ಸರಿಪಡಿಸಿದ್ದಕ್ಕೆ ಧನ್ಯಾವಾದಗಳು. ಹಾಗೆಯೇ ನನ್ನ ಮನವಿಯಲ್ಲಿ ನೀನು ಎಂದು ಬಳಸಿದ್ದಕ್ಕೆ ಕ್ಷಮಿಸಿ.. ಟೈಪಿಂಗ್ ಸ್ಪೀಡ್​​ನಿಂದಾಗಿ ತಪ್ಪಾಗಿದೆ. ಕ್ಷಮಿಸಿ..

      Reply
  4. ವಿಜಯ್

    @ Nagshetty Shetkar
    ಸ್ವಾಮಿ..ಸ್ವಯಂ ಅಪಾದಿತ ‘ಶರಣ’ ಮಹೋದಯರೆ..
    ಶೋಷಿತ ವರ್ಗದ ಫಲಾನುಭವಿಗಳು ಮತ್ತು ಶೋಷಿತ ವರ್ಗದ ‘ಆಕ್ರಮ’ ಫಲಾನುಭವಿಗಳು ಇಬ್ಬರೂ ಬೇರೆ..ಈ ದುಡ್ಡು ಚೆಲ್ಲಿ, ಪ್ರಭಾವ ಉಪಯೋಗಿಸಿ ಒಳಹೊಕ್ಕ ಈ ಆಕ್ರಮ ಫಲಾನುಭವಿಗಳಿ ಗೆ ಬೆಂಬಲಿಸುವ ನಿಮ್ಮ ನೈತಿಕತೆ ಎಂತದ್ದಿರಬಹುದು ಎಂದು ಆಶ್ಚರ್ಯವಾಗುತ್ತಿದೆ.. ಜೊತೆಗೆ ಈ ಆಕ್ರಮ ಕಾರ್ಯಕ್ರಮದ ದಲ್ಲಾಳಿ ನೀವಾಗಿರಬಹುದೊ ಎಂಬ ಅನುಮಾನವೂ ಹುಟ್ಟುತ್ತಿದೆ. ಮೊದಲು ಸರಿಯಾಗಿ ಲೇಖನ ಓದಿ, ಜೊತೆಗೆ ಲೇಖನದ ಕೊನೆಗೆ ಕೊಟ್ಟಿರುವ ದಾಖಲೆಗಳ ಕೊಂಡಿಯಿದೆ..ಪರೀಶಿಲಿಸಿ ನೋಡಿ. ಸುಮ್ಮನೆ ತಲೆಗೆ ಬಂದಿದ್ದನ್ನು ಮಾತನಾಡಬೇಡಿ. ಇಲ್ಲಿ ತಪ್ಪು ಮಾಡಿದವನು/ ಆಕ್ರಮ ಮಾಡಿದವನು ಯಾವ ಜಾತಿ-ಮತದವನೇ ಆಗಿದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಅಷ್ಟೆ. ಈ ಹೋರಾಟಕ್ಕೆ ರವಿ ರೆಡ್ಡಿಯವರು ಅಭಿನಂದನಾರ್ಹರು.

    Reply
  5. Anonymous

    ಹಾಲಿನ ಬಣ್ಣ ಬಿಳಿ. ರಕ್ತದ ಬಣ್ಣ ಕೆಂಪು. ಮಳೆ ಬಿದ್ದ ಪ್ರದೇಶವೆಲ್ಲಾ ತಂಪಾಗುತ್ತದೆ… ಎಲ್ಲಿಯಾದರೂ ಶೋಷಿತರು ಕುಡಿಯುವ ಹಾಲು ಕಪ್ಪಾಗಿದ್ದಿದೆಯೇ, ರಕ್ತದ ಬಣ್ಣ ಕೆಂಪು ಬಿಟ್ಟು ಬೇರೆ ಆಗಿದ್ದಿದೆಯೇ? ಹಾಗೆಯೇ ಯಾರೇ ತಪ್ಪು ಮಾಡಿದ್ದರೂ ಅದು ತಪ್ಪೇ. ಸಂವಿಧಾನದ ಪ್ರಕಾರ ಎಲ್ಲರೂ ಸಮಾನರು. ಆದ್ದರಿಂದ 1998, 1999, 2004ರ ಕೆಪಿಎಸ್​​ಪಿ ಪ್ರೊಬೆಷನರಿ ಅಧಿಕಾರಿಗಳ ನೇಮಕಾತಿಯನ್ನು ನ್ಯಾಯಾಲಯ ಹೇಳಿದಂತೆ ರದ್ದು ಮಾಡಬೇಕು. ಆಯಕಟ್ಟಿನ ಜಾಗದಲ್ಲಿರುವ ಅಕ್ರಮ ಅಧಿಕಾರಿಗಳು ಯಾವುದೇ ಜಾತಿಗೆ ಸೇರಿದ್ದರೂ ಅವರು ಅಕ್ರಮ ಅಧಿಕಾರಿಗಳಾಗುತ್ತಾರೆ ಹೊರತು, ಜನಪರರಾಗುವುದಿಲ್ಲ. ದಯವಿಟ್ಟು ಇಲ್ಲಿ ಜಾತಿಯನ್ನು ಸೇರಿಸಬೇಡಿ. ಇದರಿಂದ ಎಲ್ಲರಿಗೂ ಮಾಫಿ ಮಾಡಿ, ಸಕ್ರಮ ಮಾಡಬೇಕಾದ ಸ್ಥಿತಿ ಬಂದರೂ ಆಶ್ಚರ್ಯವಿಲ್ಲ. ಎಲ್ಲರನ್ನೂ ಕೈಬಿಡಬೇಕು.. ಅರ್ಹರಿಗೆ ಅಧಿಕಾರ ಸಿಗಬೇಕು.. ಇದಷ್ಟೇ ಗುರಿ ಆಗಬೇಕು..

    Reply
  6. angadiindu

    ನಿನ್ನೆಯ “ವಿಜಯಕರ್ನಾಟಕ” ಪತ್ರಿಕೆಯಲ್ಲಿ, ಶ್ರಮ ಹಾಗೂ ಪ್ರತಿಭೆಯಿಂದ ಅರ್ಹತೆ ಪಡೆದವರ ಡೋಲಾಯಮಾನ ಸ್ಥಿತಿಯ ಬಗ್ಗೆ ವರದಿ ಬಂದಿದೆ. ಅರ್ಹತಾ ಪಟ್ಟಿಯಲ್ಲಿ ಬರಲು ಅವರು ಪಟ್ಟ ಕಷ್ಟ-ಕೋಟಲೆಗಳ ಬಗ್ಗೆ ವಿವರವಾಗಿ ಬರೆದಿದ್ದಾರೆ.ಇವರ ಬಗ್ಗೆ ಅನುಕಂಪ- ಸಹಾನುಭೂತಿ ಇದೆ. ಆದರೆ ಇದನ್ನೇ ನೆಪ ಮಾಡಿಕೊಂಡು ನೇಮಕಾತಿ ಅಕ್ರಮ-ಸಕ್ರಮ ವ್ಯವಹಾರಕ್ಕೆ ಕೈ ಹಾಕಬಾರದು.

    Reply
  7. Anonymous

    Anonymous says:
    The KPSC scandal is nothing but a Genocide. The Karnataka Government must take immediate action to end this issue to save the dignity of Karnataka. This has become a street talk,

    Reply
  8. Anonymous

    NAMMA RAJJYADA MUKHAYYA MANTRI MANYA SIDDA RAMAIAH RAVARU

    AADASHTU BEAGANE , MANYA HIGH COURT CHATI BEESUVA MODALU

    TEERMANA TEGEDU KOLLABEKU,UNFORTUNATELY COURT 3 BATCHES

    KITTUHAKI YANDU TEERPU (judgment) KOTTARE, ,SARAKARA 740 MANDI

    AADIKARIGALLANNU KITTIHAKI ,AAVARA KUTUBBAGALLANNU BEEDIGE

    HAKUVA PARESTITE BANDU ,SARAKARA PECHATAKKE SELUKABAHUDU.

    NAMMA KANNADA NADINA MAREYADI BEEDIYALLI HARAJAGABAHUDU .

    ( Adikege Hooda Maana AAne Kottaruu Barudilla yannuvante)

    DAYAMAADI SWAMMY, BEGANE KAAPAADI…….KAAPAADI……..KAAPAADI.

    Reply

Leave a Reply to Nagshetty Shetkar Cancel reply

Your email address will not be published. Required fields are marked *