ಬಂಡವಾಳಶಾಹಿ ಮಾದರಿಯ ಅಭಿವೃದ್ಧಿ ಮತ್ತು ಪರಿಸರ ಅಸಮತೋಲನ

– ಆನಂದ ಪ್ರಸಾದ್

ಕಮ್ಯುನಿಷ್ಟ್ ಸೋವಿಯತ್ ಒಕ್ಕೂಟದ ಪತನದ ನಂತರ ಪ್ರಪಂಚದಾದ್ಯಂತ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಗೆ ಹೆಚ್ಚಿನ ಬಲ ಬಂದು ಎಲ್ಲೆಡೆ ಅಭಿವೃದ್ಧಿಯ ಹುಚ್ಚು ಓಟ ಆರಂಭವಾಗಿದೆ.  ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಮನುಷ್ಯನ ಬೇಕು ಬೇಡಗಳಿಗೆ ಮಿತಿಯೇ ಇಲ್ಲವಾಗಿ ಮನುಷ್ಯನ ಸುಗಮ ಜೀವನಕ್ಕೆ ಅವಶ್ಯಕ ಅಲ್ಲದಿದ್ದರೂ ಐಶಾರಾಮಿ ಭೋಗಸಾಮಗ್ರಿಗಳನ್ನು ಹೊಂದುವ ಅವಿವೇಕಿ ಪ್ರವೃತ್ತಿ ಇಂದು ಎಲ್ಲೆಡೆ ಕಂಡುಬರುತ್ತಿದೆ.  ಉದಾಹರಣೆಗೆ ಮನುಷ್ಯನಿಗೆ ವಾಸಕ್ಕೆಮನೆ ಬೇಕು.  ಐದಾರು ಸದಸ್ಯರು ಇರುವ ಒಂದು ಸಂಸಾರದ ಸುಗಮ ಜೀವನಕ್ಕೆ ಹೆಚ್ಚೆಂದರೆ ಏಳೆಂಟು ಕೊಠಡಿಗಳಿರುವ ಮನೆ ಧಾರಾಳ ಸಾಕು.  ಆದರೆ ಹಣದ ಮದ ತಲೆಗೇರಿದ ಧನಿಕರು ಇಂದು ಹಲವಾರು ಅಂತಸ್ತುಗಳುಳ್ಳ ಹಲವು ಕೊಠಡಿಗಳನ್ನು ಹೊಂದಿರುವ ಮನೆಗಳನ್ನು ಕಟ್ಟಿಸುತ್ತಿದ್ದಾರೆ.  ಹಣ ಉಳ್ಳವರು ತಮಗೆ ಬೇಕಾದಷ್ಟು ದೊಡ್ಡ ಮನೆ ಕಟ್ಟಿಸುತ್ತಾರೆ ಇದರಿಂದ ಏನು ತೊಂದರೆ, ನಿಮಗೇಕೆ ಹೊಟ್ಟೆಕಿಚ್ಚು ಎಂದು ಬಂಡವಾಳಶಾಹಿ ವ್ಯವಸ್ಥೆಯ ಸಮರ್ಥಕರು ಕೇಳುತ್ತಾರೆ.  ವಾಸ್ತವವಾಗಿ ಇದರಿಂದ ಪರಿಸರ ಸಮತೋಲನಕ್ಕೆ ನಿಶ್ಚಿತವಾಗಿಯೂ ತೊಂದರೆ ಇದೆ ಹೇಗೆಂದರೆ ದೊಡ್ಡ ದೊಡ್ಡ ಬಂಗಲೆ ಕಟ್ಟಿಸಿದಷ್ಟೂ ಪರಿಸರದ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ, ಪರಿಸರ ಮಾಲಿನ್ಯ ಹೆಚ್ಚುತ್ತದೆ.  ದೊಡ್ಡ ದೊಡ್ಡ ಬಂಗಲೆಗಳನ್ನು ಕಟ್ಟಲು ಅಪಾರ ಪ್ರಮಾಣದಲ್ಲಿ ಕಬ್ಬಿಣ, ಸಿಮೆಂಟು, ಮರಳು, ಜಲ್ಲಿ ಇತ್ಯಾದಿಗಳು ಬೇಕಾಗುತ್ತವೆ.  ambani-houseಇದರಿಂದಾಗಿ ಹೆಚ್ಚು ಹೆಚ್ಚು ಗಣಿಗಾರಿಕೆ ಮಾಡಬೇಕಾಗುತ್ತದೆ.  ಕಬ್ಬಿಣ ಅದಿರು ಅಗೆಯಲು, ಅದನ್ನು ಸಾಗಿಸಲು, ಅದಿರನ್ನು ಕರಗಿಸಿ ಕಬ್ಬಿಣವಾಗಿ ಮಾಡಲು ಅಪಾರ ಪ್ರಮಾಣದಲ್ಲಿ ಪಳೆಯುಳಿಕೆ ಇಂಧನ ಬಳಕೆಯಾಗುತ್ತದೆ.  ಇದರಿಂದ ಇಂಗಾಲನಿಲ ಪರಿಸರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾಗಿ ಹಸಿರು ಮನೆ ಪರಿಣಾಮ ಉಂಟಾಗುತ್ತದೆ.  ವಾತಾವರದಲ್ಲಿ ಇಂಗಾಲನಿಲಗಳು ಸೂರ್ಯನ ಶಾಖವನ್ನು ಹಿಡಿದು ಇಡುವುದನ್ನು ಹಸಿರು ಮನೆ ಪರಿಣಾಮ ಎನ್ನಲಾಗುತ್ತದೆ.  ಇದರಿಂದಾಗಿ ಭೂಮಿಯ ಉಷ್ಣಾಂಶದಲ್ಲಿ ಹೆಚ್ಚಳ ಆಗುತ್ತಿದೆ.  ಭೂಮಿಯ ಉಷ್ಣಾಂಶದಲ್ಲಿ ಹೆಚ್ಚಳ ಆಗುವುದರ ಪರಿಣಾಮ ಎಲ್ಲರ ಮೇಲೆಯೂ ಆಗುತ್ತದೆ.  ಅವಶ್ಯಕತೆ ಇಲ್ಲದಿದ್ದರೂ ಭಾರೀ ಬಂಗಲೆಗಳನ್ನು ಕಟ್ಟಿ ಪರಿಸರ ಸಮತೋಲನ ಕೆಡಿಸುವ ಶ್ರೀಮಂತರ ದೊಡ್ಡಸ್ಥಿಕೆಯ ಪ್ರದರ್ಶನದಿಂದ ಎಲ್ಲರ ಮೇಲೆಯೂ ದುಷ್ಪರಿಣಾಮ ಆಗುತ್ತದೆ.  ಹೀಗಾಗಿ ಇದನ್ನು ಬಡವರ ಹೊಟ್ಟೆಕಿಚ್ಚು ಎಂದು ತಳ್ಳಿಹಾಕುವಂತಿಲ್ಲ.  ರಿಲಯನ್ಸ್ ಕಂಪನಿಯ ಒಡೆಯ ಮುಖೇಶ್ ಅಂಬಾನಿ ಮುಂಬಯಿಯಲ್ಲಿ 27 ಅಂತಸ್ತುಗಳುಳ್ಳ 4,00,000  ಚದರ ಮೀಟರ್ ವಿಸ್ತೀರ್ಣದ 6,000 ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಿಸಿದ ಭಾರೀ ಬಂಗಲೆಯನ್ನು ಈ ದೃಷ್ಟಿಯಿಂದ ನೋಡಬೇಕು.  ಕೆಲವರು ಇದನ್ನು ಇನ್ನೊಂದು ದೃಷ್ಟಿಕೋನದಿಂದ ನೋಡುತ್ತಾರೆ.  ಇದರಿಂದಾಗಿ ಉದ್ಯೋಗಾವಕಾಶ ಹೆಚ್ಚುತ್ತದೆ, ಹೆಚ್ಚು ಹೆಚ್ಚು ನಿರ್ಮಾಣ ಚಟುವಟಿಕೆ ನಡೆದಷ್ಟೂ ಆರ್ಥಿಕತೆಗೆ ಹೆಚ್ಚಿನ ಬಲ ದೊರೆಯುತ್ತದೆ ಎಂದು ಅವರು ಹೇಳುತ್ತಾರೆ.  ಇದು ನಿಜವಾಗಿಯೂ ಒಂದು ಅತ್ಯಂತ ಬೇಜವಾಬ್ದಾರಿಯ ಮೂರ್ಖ ಚಿಂತನೆಯಾಗಿದೆ.  ಈ ರೀತಿಯ ಚಿಂತನೆ ಆತ್ಮಹತ್ಯಾಕಾರಕ ಎಂದೇ ಹೇಳಬೇಕಾಗುತ್ತದೆ.  ಇದು ಭೂಮಿಯ ಮೇಲೆ ಇರುವ ಎಲ್ಲ ಜೀವಿಗಳ, ಎಲ್ಲ ಮಾನವರ ಹಿತಚಿಂತನೆಯನ್ನು ಗಮನದಲ್ಲಿ ಇಟ್ಟುಕೊಂಡು ಮಾಡುವ ಚಿಂತನೆ ಆಗಿರುವುದಿಲ್ಲ.

ಹೆಚ್ಚು ಹೆಚ್ಚು ಐಶಾರಾಮಿ ವಾಹನಗಳ ತಯಾರಿಕೆ ಹಾಗೂ ಬಳಕೆ ಕೂಡ ಪರಿಸರ ಅಸಮತೋಲನಕ್ಕೆ ಕಾರಣವಾಗುತ್ತಿದೆ.  ಉದಾಹರಣೆಗೆ ಮನುಷ್ಯನ ಅನುಕೂಲಕ್ಕೆ ಒಂದು ಕುಟುಂಬಕ್ಕೆ ಒಂದು ಸಾಮಾನ್ಯ ಕಾರು ಧಾರಾಳ ಸಾಕು ಅದೂ ಹೆಚ್ಚೆಂದರೆ ಏಳೆಂಟು ಲಕ್ಷ ಬೆಲೆಯ ಕಾರು ಸಾಕು.  ಆದರೆ ಇಂದು ಶ್ರೀಮಂತರು 20 ಲಕ್ಷ, 50 ಲಕ್ಷ ಬೆಲೆಯ ಬೃಹದಾಕಾರದ ಕಾರುಗಳನ್ನು ಕೊಂಡು ಆ ಕಾರುಗಳಲ್ಲಿ ಒಬ್ಬನೇ ಓಡಾಡುತ್ತಾ ಪರಿಸರಕ್ಕೆ ಅಪಾರ ಹಾನಿ ಮಾಡುತ್ತಿದ್ದಾರೆ.  ಇಂಥ ಹಾನಿಯನ್ನು ಮನುಷ್ಯನು ವಿವೇಕವನ್ನು ಬಳಸಿದರೆ ತಡೆಯಲು ಸಾಧ್ಯ ಆದರೆ ಪ್ರಪಂಚದಲ್ಲಿ ಇರುವ ಶ್ರೀಮಂತರಿಗೆ ಇಂದು ವಿವೇಕದ ಅಭಾವ ಇದೆ.  ದೊಡ್ಡ ದೊಡ್ಡ ಐಶಾರಮಿ ಕಾರುಗಳು ಮಾನವನಿಗೆ ಅಗತ್ಯವೇ ಇಲ್ಲ.  ದೊಡ್ಡ ದೊಡ್ಡ ಕಾರುಗಳ ಉತ್ಪಾದನೆ ಹಾಗೂ ಬಳಕೆ ಹೆಚ್ಚಾದಷ್ಟೂ ಪರಿಸರಕ್ಕೆ ಹಾನಿ ತಪ್ಪಿದ್ದಲ್ಲ.  ಹೇಗೆಂದರೆ ದೊಡ್ಡ ದೊಡ್ಡ ಐಶಾರಾಮಿ ಕಾರುಗಳನ್ನು ತಯಾರಿಸಲು ಕಬ್ಬಿಣ, ಫೈಬರ್, ಪ್ಲಾಸ್ಟಿಕ್ ಇನ್ನಿತರ ಘಟಕಗಳು ಹೆಚ್ಚು ಹೆಚ್ಚು ಬೇಕಾಗುತ್ತದೆ.  ಇವುಗಳನ್ನು ಹೆಚ್ಚು ಹೆಚ್ಚು ಬಳಸಿದಷ್ಟೂ ಅದರ ದುಷ್ಪರಿಣಾಮ ಪರಿಸರದ ಮೇಲೆ ಆಗುತ್ತದೆ ಎಂಬ ಚಿಂತನೆ ಬಂಡವಾಳಶಾಹಿ ಆರ್ಥಿಕ ಚಿಂತಕರಿಗೆ ಇಲ್ಲ.  ಅವರ ದೃಷ್ಟಿ ಇರುವುದು ಹೆಚ್ಚು ಹೆಚ್ಚು ಉತ್ಪಾದನೆ, ಹೆಚ್ಚು ಹೆಚ್ಚು ಉದ್ಯೋಗಾವಕಾಶ, ಜನರು ಹೆಚ್ಚು ಹೆಚ್ಚು ಶ್ರೀಮಂತರಾಗುವುದು ಮಾತ್ರ.  ಹೀಗಾದರೆ ಮಾತ್ರ ಅದು ಅಭಿವೃದ್ಧಿ ಎಂಬುದು ಬಂಡವಾಳಶಾಹಿ ಆರ್ಥಿಕ ಚಿಂತಕರ ದೂರದೃಷ್ಟಿಯಿಲ್ಲದ ಚಿಂತನೆಯಾಗಿದೆ.  ಯೋಚನಾಶಕ್ತಿಯಿರುವ ಏಕೈಕ ಪ್ರಾಣಿಯಾದ ಮಾನವನಿಗೆ ಭಾರೀ ಐಶಾರಾಮಿ ಬಂಗಲೆ, ಐಶಾರಾಮಿ ಕಾರುಗಳು ಇಲ್ಲದೆಯೂ ಆರಾಮವಾಗಿ ಬದುಕಬಹುದು ಎಂಬ ಚಿಂತನೆ ಇಲ್ಲದೆ ಇರುವುದು ಶೋಚನೀಯ.

ಮನುಷ್ಯನ ವಿವೇಕ ಮರೆಯಾಗಿ ಪ್ರದರ್ಶನದ ಹುಚ್ಚು ಹೆಚ್ಚಾಗಲು ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆ ಕಾರಣವಾಗುತ್ತಿದ್ದು ಮೇರೆಯಿಲ್ಲದ ಭೋಗ ಜೀವನ ಜಗತ್ತಿನಾದ್ಯಂತ ಹೆಚ್ಚುತ್ತಿದೆ.  ಈ ರೀತಿಯ ಅಭಿವೃದ್ಧಿಯ ಹುಚ್ಚು ಕಡಿವಾಣವಿಲ್ಲದ ಕುದುರೆಯಂತೆ ಓಡುತ್ತಿದೆ.  ಬಹಳಷ್ಟು ಶ್ರೀಮಂತರಿಗೆ ವಿವೇಕ ಪ್ರಜ್ಞೆ ಇಲ್ಲದೆ ಇರುವುದರಿಂದಾಗಿ ಭೂಮಿಯ ಮೇಲಿನ ಎಲ್ಲ ಜೀವಿಗಳಿಗೂ ತೊಂದರೆಯಾಗುವ ಸಂಭವ ಕಂಡುಬರುತ್ತಿದೆ.  ಭೂಮಿಯ ಉಷ್ಣಾಂಶ ಏರುತ್ತಿರುವುದರಿಂದಾಗಿ ಹಲವು ಪ್ರಾಣಿ, ಸಸ್ಯ ಪ್ರಭೇದಗಳು ಕಣ್ಮರೆಯಾಗುತ್ತಿವೆ.  ಎಲ್ಲರ ಹಿತಚಿಂತನೆ ಮಾಡದ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯೇ ಇದಕ್ಕೆ ಕಾರಣ.   ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯಲ್ಲಿ ಶ್ರೀಮಂತರಿಗೆ ಮಾತ್ರ ಗೌರವ ಇರುವುದರಿಂದಾಗಿ ಎಲ್ಲರೂ ಶ್ರೀಮಂತರಾಗುವ ಹುಚ್ಚು ಓಟದಲ್ಲಿ ಸ್ಪರ್ಧಿಸುತ್ತಿದ್ದಾರೆ.  ಈ ಹುಚ್ಚು ಸ್ಪರ್ಧೆಯ ಪರಿಣಾಮವಾಗಿ ಅವಶ್ಯಕತೆ ಇಲ್ಲದಿದ್ದರೂ ಭಾರೀ ಬಂಗಲೆಗಳು, ಐಶಾರಾಮಿ ವಾಹನಗಳನ್ನು ಹೊಂದುವ ಚಟ ಮನುಷ್ಯನಲ್ಲಿ ಬೆಳೆಯುತ್ತಿದೆ.  ಇದು ಅವಶ್ಯಕತೆ ಇದ್ದು ನಡೆಯುವ ಓಟವಲ್ಲ ತಾನು ಇತರರಿಗಿಂತ ಮೇಲು ಎಂದು ತೋರಿಸುವ ಸಲುವಾಗಿ ನಡೆಯುತ್ತಿರುವ ಮಾನವನ ಅವಿವೇಕವಾಗಿದೆ.  ಬಂಡವಾಳಶಾಹಿ ವ್ಯವಸ್ಥೆಯ ಚಿಂತಕರು ಲಂಗುಲಗಾಮಿಲ್ಲದ ಅಭಿವೃದ್ಧಿಯ ಹುಚ್ಚನ್ನು ನಿಯಂತ್ರಿಸದೆ ಇದ್ದರೆ ಭವಿಷ್ಯ ಅದರಲ್ಲೂ ಮುಂದಿನ ಪೀಳಿಗೆಯ ಭವಿಷ್ಯ ಕರಾಳವಾಗಬಹುದು.

ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯಲ್ಲಿ ಹೆಚ್ಚು ಹೆಚ್ಚು ಉತ್ಪಾದನೆ, ಹೆಚ್ಚು ಹೆಚ್ಚು ಉತ್ಪನ್ನಗಳನ್ನು ಬಳಸಿ ಬಿಸಾಡುವುದು ಅಭಿವೃದ್ಧಿಯ ಮಾನದಂಡವಾಗಿದೆ.  ಇದರಿಂದ ಹೆಚ್ಚು ಹೆಚ್ಚು ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ, ಬೆಳವಣಿಗೆಯ ದರ ಹೆಚ್ಚುತ್ತದೆ ಎಂಬುದು ಈ ತರಹದ ಅಭಿವೃದ್ಧಿಯ ಸಮರ್ಥಕರ ದೂರದೃಷ್ಟಿಯಿಲ್ಲದ ವಾದವಾಗಿದೆ.   Hindustan_petroleumಹೀಗಾಗಿ ಮಾನವನ ಸುಗಮ ಜೀವನಕ್ಕೆ ಅನಿವಾರ್ಯವಲ್ಲದ ಹಲವು ವಸ್ತುಗಳು ಇಂದು ಮಾರುಕಟ್ಟೆಯಲ್ಲಿದ್ದು ಅವುಗಳ ಮಾರಾಟಕ್ಕಾಗಿ ಬಂಡವಾಳಶಾಹಿಗಳಿಂದ ನಿಯಂತ್ರಿಸಲ್ಪಡುವ ಟಿವಿ ಮಾಧ್ಯಮ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದೆ.  ಜಾಹೀರಾತುಗಳೇ ಟಿವಿ ಮಾಧ್ಯಮದ ಜೀವಾಳವಾಗಿರುವ ಕಾರಣ ನೈತಿಕತೆ ಎಂಬುದು ಟಿವಿ ಮಾಧ್ಯಮದಿಂದ ಬಹುತೇಕ ಕಣ್ಮರೆಯಾಗಿದೆ.  ಹೀಗಾಗಿ ಅವಶ್ಯಕವಲ್ಲದ ಹಲವು ಸಾಮಗ್ರಿಗಳ ಜಾಹೀರಾತುಗಳು ಟಿವಿ ಹಾಗೂ ಇತರ ಮಾಧ್ಯಮಗಳಲ್ಲಿ ಕಾಣಿಸುತ್ತಿದ್ದು ಜನರ ಕೊಳ್ಳುಬಾಕ ಸಂಸ್ಕೃತಿಯನ್ನು ಉತ್ತೇಜಿಸಿ ಪರಿಸರದ ಮೇಲೆ ಹಾನಿ ಮಾಡಲು ಪರೋಕ್ಷ ಕಾರಣವಾಗಿದೆ.  ನಗರಗಳಲ್ಲಿ ಹೆಚ್ಚು ಹೆಚ್ಚು ವಿದ್ಯುತ್ ಬಳಕೆ ಮಾಡಿದಷ್ಟೂ ಅದು ಅಭಿವೃದ್ಧಿ ಎಂದು ಬಿಂಬಿಸಲಾಗುತ್ತಿದೆ.  ಅವಶ್ಯಕತೆ ಇಲ್ಲದಿದ್ದರೂ ನಗರಗಳಲ್ಲಿ ವಿದ್ಯುತ್ ದೀಪಗಳು ಹಗಲು ರಾತ್ರಿ ಎಂಬ ಪರಿವೆ ಇಲ್ಲದೆ ಉರಿಯುತ್ತಿರುತ್ತವೆ.  ಚಳಿಗಾಲ, ಮಳೆಗಾಲದಲ್ಲಿಯೂ ಸೆಕೆ ಇಲ್ಲದಿದ್ದರೂ ಹವಾನಿಯಂತ್ರಣ ಸಾಧನ ಬಳಕೆ, ಫ್ಯಾನುಗಳ ಬಳಕೆ ನಿರಂತರವಾಗಿ ನಡೆಯುತ್ತಿರುತ್ತದೆ ಮತ್ತು ಈ ರೀತಿಯ ಜೀವನವೇ ಶ್ರೇಷ್ಠ ಎಂಬ ಚಿಂತನೆಯನ್ನು ಬಂಡವಾಳಶಾಹಿ ವ್ಯವಸ್ಥೆ ಜನರಲ್ಲಿ ಬಿತ್ತಿ ಬೆಳೆಸಿದೆ.  ಹೀಗಾಗಿ ಎಷ್ಟು ವಿದ್ಯುತ್ ಉತ್ಪಾದನೆ ಆದರೂ ಸಾಕಾಗುವುದಿಲ್ಲ.  ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಅಗ್ಗದ ವಿದ್ಯುತ್ ಉತ್ಪಾದಿಸಲು ಉಷ್ಣ ವಿದ್ಯುತ್ ಒಂದೇ ಮಾರ್ಗವಾಗಿರುವುದರಿಂದ ವಾತಾವರಣದಲ್ಲಿ ಹಸಿರು ಮನೆ ಅನಿಲ ಪರಿಣಾಮ ಉಂಟು ಮಾಡುವ ಇಂಗಾಲದ ಅನಿಲಗಳು ನಿರಂತರವಾಗಿ ಹೆಚ್ಚುತ್ತಲೇ ಇವೆ.  ಯಾವುದು ಜೀವನಕ್ಕೆ ಅವಶ್ಯಕ, ಯಾವುದಕ್ಕೆಜೀವನದಲ್ಲಿ ಮಹತ್ವ ನೀಡಬೇಕು ಎಂಬುದು ಅತ್ಯ್ನಂತ ಹೆಚ್ಚು ವಿದ್ಯಾವಂತ ಹಾಗೂ ಉನ್ನತ ಹುದ್ದೆಗಳಲ್ಲಿ ಇರುವ ಜನತೆಗೂ ತಿಳಿಯದೆ ಹೆಚ್ಚು ಹೆಚ್ಚು ಹಣ ಮಾಡುವುದು, ಹೆಚ್ಚು ಹೆಚ್ಚು ಆಸ್ತಿಪಾಸ್ತಿ ಮಾಡಿಡುವುದು, ಹೆಚ್ಚು ಹೆಚ್ಚು ಭೋಗಸಾಧನಗಳನ್ನು ಕೊಂಡು ಪೇರಿಸುವುದು ಶ್ರೇಷ್ಠ ಜೀವನ ವಿಧಾನ ಎಂಬ ಸಮೂಹ ಸನ್ನಿಯನ್ನು ಆಧುನಿಕ ಬಂಡವಾಳಶಾಹಿ ಹಾಗೂ ಮುಕ್ತ ಮಾರುಕಟ್ಟೆ ವ್ಯವಸ್ಥೆ ಹುಟ್ಟು ಹಾಕಿದೆ.  ಹೀಗಾಗಿ ಬಂಡವಾಳಶಾಹಿ ವ್ಯವಸ್ಥೆ ಹಾಗೂ ಮುಕ್ತ ಮಾರುಕಟ್ಟೆಯು ಹುಟ್ಟು ಹಾಕಿರುವ ಎಂದೆಂದೂ ತೀರದ ದಾಹದ ಬಗ್ಗೆ ಮರುಚಿಂತನೆ ಮಾಡದೆ ಇದ್ದರೆ ಪ್ರಾಕೃತಿಕ ವಿಕೋಪಗಳು ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸಿ ಜನರ ಜೀವನ ದುರ್ಬರವಾಗಲಿದೆ.  ಇದರ ಮುನ್ಸೂಚನೆ ಈಗಾಗಲೇ ಹೆಚ್ಚುತ್ತಿರುವ ಬರಗಾಲ, ಚಂಡಮಾರುತ, ಸುಂಟರಗಾಳಿ, ಅತಿವೃಷ್ಟಿ, ವಿಪರೀತ ಸೆಕೆ, ಹೆಚ್ಚುತ್ತಿರುವ ಕಾಡ್ಗಿಚ್ಚು ಮೊದಲಾದವುಗಳ ರೂಪದಲ್ಲಿ ಆರಂಭವಾಗಿದೆ.  ಆದರೂ ಅಭಿವೃದ್ಧಿಯ ಹುಚ್ಚಿಗೆ ಬಲಿಯಾಗಿರುವ ನಮಗೆ ಈ ಬಗ್ಗೆ ಯೋಚಿಸಲೂ ಪುರುಸೊತ್ತಿಲ್ಲ.  ಇದನ್ನೆಲ್ಲಾ ಜನತೆಯ ಮುಂದೆ ಚರ್ಚಿಸಿ ಜಾಗೃತಿ ಮೂಡಿಸಬೇಕಾಗಿರುವ ಮಾಧ್ಯಮಗಳೇ ಬಂಡವಾಳಶಾಹಿ ಹಾಗೂ ಜಾಹೀರಾತುಗಳ ಕೃಪೆಯಲ್ಲಿ ಬದುಕಿರುವುದರಿಂದ ಜನರನ್ನು ಎಚ್ಚರಿಸುವವರೇ ಇಂದು ಇಲ್ಲವಾಗಿದ್ದಾರೆ.  ಈ ಬಗ್ಗೆ ಪರ್ಯಾಯ ಮಾಧ್ಯಮಗಳು ಇಂದು ಚಿಂತಿಸುವುದು ಅಗತ್ಯವಿದೆ.

12 thoughts on “ಬಂಡವಾಳಶಾಹಿ ಮಾದರಿಯ ಅಭಿವೃದ್ಧಿ ಮತ್ತು ಪರಿಸರ ಅಸಮತೋಲನ

 1. ವಿಜಯ್

  ಲೇಖನದ ಒಟ್ಟಾರೆ ಆಶಯದೊಂದಿಗೆ ಸಹಮತಿಯಿದೆ. ಆಗಿನ ಕಾಲದಲ್ಲಿ ನಾಲ್ಕು ಸಾವಿರ ಕೋಟಿಯಲ್ಲಿ ಕಟ್ಟಿದಮುಖೇಶ ಅಂಬಾನಿಯ ‘ಅಂಟಿಲ್ಲಾ’ ದ ವೈಭವ ಹಣದ ಅಸಹ್ಯ ಪ್ರದರ್ಶನ. ಇದೇ ಹಣದಲ್ಲಿ ಆತ ಎಷ್ಟೊ ಒಳ್ಳೆಯ, ನೆನಪಿರುವಂತಹ ಸಾಮಾಜಿಕ ಕಾರ್ಯಗಳನ್ನು ಮಾಡಬಹುದಿತ್ತು.
  ಇನ್ನು ಸೋವಿಯತ್ ರಷಿಯಾ ಒಕ್ಕೂಟ ಇದ್ದಾಗ ಎಲ್ಲವೂ ಸರಿಯಿತ್ತು ಎಂಬ ಭಾವನೆಯನ್ನು ಲೇಖನದ ಮೊದಲ ವಾಕ್ಯ ಕೊಡುತ್ತಿದೆ. ಅದು ಸತ್ಯವೆ? ಸೋವಿಯತ್ ಒಕ್ಕೂಟ ಮತ್ತು ಅಮೇರಿಕ ಎರಡು ಬಲಾಢ್ಯ ಶಕ್ತಿಗಳಾಗಿದ್ದಾಗ ಜಗತ್ತು ಯುದ್ಧಭೀತಿಯಿಂದ ನರಳಿದೆ. ಅವುಗಳ ಪೈಪೋಟಿ ಮತ್ತೊಂದು ರೀತಿಯ ಗುಂಪುಗಾರಿಕೆಯನ್ನು, ಶಸ್ತ್ರಾಸ್ತ್ರಗಳ ಅನವಶ್ಯಕ ಮಾರುಕಟ್ಟೆಯನ್ನು ಸೃಷ್ಟಿಮಾಡಿತ್ತು. ಈಗಿರುವ ಕಮ್ಯುನಿಷ್ಟ್ ರಾಷ್ಟ್ಟಗಳಲ್ಲಿಯೂ ಕೊಳ್ಳುಬಾಕುತನ, ಹಣಬಲದ ಪ್ರದರ್ಶನ ಇದ್ದೇ ಇದೆ.
  ಮೀಡಿಯ, ಜಾಹಿರಾತುಗಳು ತಮ್ಮ ಕಾರ್ಯ ತಾವು ಮಾಡಲಿ. ನಮ್ಮ ಬೇಕು-ಬೇಡಗಳ ತಿಳಿವಳಿಕೆಯನ್ನು ನಾವು ಬೆಳೆಸಿಕೊಳ್ಳೋಣ..ಇತಿ-ಮಿತಿಯನ್ನು ಅರಿತುಕೊಂಡು ಶುದ್ದ ನೆಲ-ಜಲ-ಆಕಾಶವನ್ನು ಮುಂದಿನ ಪೀಳಿಗೆಗೆ ಬಿಟ್ಟು ಹೋಗೋಣ ಎಂಬುದು ನನ್ನ ಅನಿಸಿಕೆ.

  Reply
 2. Ananda Prasad

  ಕಮ್ಯುನಿಷ್ಟ್ ಸೋವಿಯತ್ ಒಕ್ಕೂಟ ಇದ್ದಾಗ ಎಲ್ಲವೂ ಸರಿ ಇತ್ತು ಎಂಬುದು ನನ್ನ ಅಭಿಪ್ರಾಯ ಅಲ್ಲ. ಸಮತಾವಾದ (ಕಮ್ಯುನಿಸಂ)ದಲ್ಲಿ ಇರುವ ನ್ಯೂನತೆಗಳಿಂದಲೇ ಅದು ಕುಸಿಯಲು ಕಾರಣವಾದದ್ದು. ಖಾಸಗೀಕರಣ ಬಂದ ನಂತರ ಎಲ್ಲಾ ಕ್ಷೇತ್ರಗಳಲ್ಲಿಯೂ ಲಾಭಕೋರತನ ತಲೆಹಾಕಿ ಬಡವರ ಜೀವನ ದುಸ್ತರವಾಗಿದೆ. ಉದಾಹರಣೆಗೆ ಎಲ್ಕೆಜಿ ಶಿಕ್ಷಣಕ್ಕೂ ಇಂದು ಸಾವಿರಾರು ರೂಪಾಯಿಗಳನ್ನು ತೆರಬೇಕಾದ ಅತ್ಯಂತ ನೀಚ ಪ್ರವೃತ್ತಿ ಆರಂಭವಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಖಾಸಗಿಯವರು ಇಳಿದು ಜನ ಸಾಮಾನ್ಯರನ್ನು ಲೂಟಿ ಮಾಡುತ್ತಿದ್ದರೂ ಪ್ರತಿಷ್ಠೆಗೆ ಕಟ್ಟುಬಿದ್ದು ಇದನ್ನೆಲ್ಲಾ ಸಹಿಸಿಕೊಂಡಿರಬೇಕಾದ ಕರ್ಮ ನಮ್ಮದಾಗಿದೆ. ಉಚಿತವಾಗಿ ಸಿಗಬೇಕಾಗಿದ್ದ ಪ್ರಾಥಮಿಕ ಶಿಕ್ಷಣಕ್ಕೂ ಲಕ್ಷಾಂತರ ರೂಪಾಯಿ ಡೊನೇಶನ್ ತೆರಬೇಕಾದ ದುಸ್ಥಿತಿ ಜನಸಾಮಾನ್ಯರದು. ವೈದ್ಯಕೀಯ, ಎಂಜಿನಿಯರಿಂಗ್ ಶಿಕ್ಷಣ ಖಾಸಗಿ ಹಿಡಿತಕ್ಕೆ ಹೋಗಿ ಅವರನ್ನು ಹಿಡಿಯುವವರೇ ಇಲ್ಲವಾಗಿದ್ದಾರೆ. ಖಾಸಗಿ ಆಸ್ಪತ್ರೆಗಳು ಅನವಶ್ಯಕ ಪರೀಕ್ಷೆಗಳನ್ನು ಮಾಡಿಸುವ ಮೂಲಕ ಜನಸಾಮಾನ್ಯರನ್ನು ಸುಲಿಯುತ್ತಿವೆ. ಇದನ್ನೆಲ್ಲಾ ನಿಯಂತ್ರಿಸುವವರೇ ಇಲ್ಲವಾಗಿದ್ದಾರೆ. ಮಾಧ್ಯಮಗಳು ಬಂಡವಾಳಶಾಹಿಗಳ ಹಾಗೂ ಜಾಹೀರಾತುಗಳ ಆಧಾರದ ಮೇಲೆ ಬದುಕಬೇಕಾದ ಪರಿಸ್ಥಿತಿ ರೂಪುಗೊಂಡ ನಂತರ ಮಾಧ್ಯಮ ಕ್ಷೇತ್ರದ ನೈತಿಕತೆ ತೀರಾ ಕೆಳಮಟ್ಟಕ್ಕಿಳಿದಿದೆ, ಅದರಲ್ಲೂ ಟಿವಿ ಮಾದ್ಯಮದ ನೈತಿಕತೆ ಪಾತಾಳಕ್ಕಿಳಿದಿದೆ. ಒಬ್ಬನೇ ಬಂಡವಾಳಶಾಹಿ ಹತ್ತಿಪ್ಪತ್ತು ಟಿವಿ ವಾಹಿನಿಗಳನ್ನು ನಡೆಸುವ/ನಿಯಂತ್ರಿಸುವ ಪರಿಸ್ಥಿತಿ ರೂಪುಗೊಂಡ ನಂತರ ಟಿವಿ ಮಾಧ್ಯಮ ಪತ್ರಿಕಾಧರ್ಮವನ್ನು ಸಂಪೂರ್ಣ ಗಾಳಿಗೆ ತೂರಿದೆ.

  ಮುಂದುವರಿದ ರಾಷ್ಟ್ರಗಳಲ್ಲಿ ಕೃಷಿಯಲ್ಲಿ ತೊಡಗಿರುವವರ ಸಂಖ್ಯೆ ಶೇಕಡಾ ಮೂರರ ಆಸುಪಾಸಿನಲ್ಲಿದೆ. ಒಂದು ದೇಶದಲ್ಲಿ ಕೃಷಿಯಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ೨೦-೩೦% ಇದ್ದರೂ ತೊಂದರೆ ಇಲ್ಲ. ಇದರಿಂದ ದೊಡ್ಡ ಜನಸಂಖ್ಯೆಗೆ ಖಾತರಿ ಹಾಗೂ ಖಾಯಂ ಉದ್ಯೋಗ ಸಿಗುತ್ತದೆ. ಕೃಷಿ ಕ್ಷೇತ್ರದಿಂದ ಜನರು ಬೇರೆ ಕ್ಷೇತ್ರಕ್ಕೆ ಹೋಗುವಂಥ ಜೀವನವಿಧಾನ ರೂಪಿಸಿದ್ದು ಕೊಳ್ಳುಬಾಕ ಸಂಸ್ಕೃತಿಯನ್ನು ಬಂಡವಾಳಶಾಹಿ ವ್ಯವಸ್ಥೆ ಉತ್ತೇಜನ ಮಾಡಲೇಬೇಕಾದ ಪರಿಸ್ಥಿತಿಗೆ ದೂಡಿದೆ. ಏಕೆಂದರೆ ಹೆಚ್ಚು ಹೆಚ್ಚು ಉದ್ಯೋಗಾವಕಾಶ ರೂಪಿಸಬೇಕಾದರೆ ಜನ ಹೆಚ್ಚು ಹೆಚ್ಚು ವಸ್ತುಗಳನ್ನು ಅವಶ್ಯಕತೆ ಇಲ್ಲದಿದ್ದರೂ ಬಳಸುವಂತೆ ಮಾಡಬೇಕು. ಇಲ್ಲಿಯೇ ಅನೈತಿಕತೆ ಬೇರುಬಿಡಲು ಕಾರಣವಾದದ್ದು. ಅಮೆರಿಕಾದಂಥ ದೇಶದಲ್ಲಿ ಹೆಚ್ಚು ಹೆಚ್ಚು ಜನ ಕೃಷಿಯಿಂದ ದೂರ ಹೋಗುವಂಥ ನೀತಿ ರೂಪಿಸಿದ್ದು ಉಳಿದ ದೇಶಗಳವರೂ ಅದನ್ನೇ ಅನುಸರಿಸಿ ಬೇರೆ ಉದ್ಯೋಗಾವಕಾಶಗಳನ್ನು ಕೃತಕವಾಗಿ ರೂಪಿಸಬೇಕಾದ ಅನಿವಾರ್ಯತೆಗೆ ಸಿಲುಕಿವೆ. ಅಮೇರಿಕಾದಲ್ಲಿ ಒಬ್ಬೊಬ್ಬ ಕೃಷಿಕನೂ ಸಾವಿರಾರು ಎಕರೆ ಭೂಮಿಯನ್ನು ಯಾಂತ್ರೀಕೃತ ವಾಗಿ ನಿರ್ವಹಿಸಬೇಕಾದ ಪರಿಸ್ಥಿತಿ ಇದೆ. ಇದರ ಬದಲು ಜನರು ಕೃಷಿಯನ್ನು ಉದ್ಯೋಗವಾಗಿ ತೆಗೆದುಕೊಂಡರೆ ಅದೇ ಸಾವಿರಾರು ಎಕರೆಗಳು ನೂರಾರು ಜನರಿಗೆ ಖಾಯಂ ಹಾಗೂ ಸಹಜವಾದ ಉದ್ಯೋಗ ಕೊಡಬಲ್ಲದು. ಕೃಷಿಯಂಥ ಸಹಜ ಉದ್ಯೋಗವನ್ನು ಬಿಟ್ಟು ಕೃತಕವಾಗಿ ಉದ್ಯೋಗ ಸೃಷ್ಟಿಸುವ ಬಂಡವಾಳಶಾಹಿ ವಿಧಾನದ ಆರ್ಥಿಕತೆ ದೂರಗಾಮಿಯಾಗಿ ಪರಿಸರಕ್ಕೆ ಮಾರಕ. ಇದು ಯಾವ ಆರ್ಥಿಕ ಚಿಂತಕರ ಗಮನಕ್ಕೂ ಬರದೆ ಇರುವುದು ಒಳ್ಳೆಯದಲ್ಲ.

  Reply
  1. Nagshetty Shetkar

   ಅನಾಥ ಪ್ರಸಾದ ಅವರೇ, ಮಧ್ಯಮವರ್ಗದ standard of living ಈಗಿನದ್ದಕ್ಕಿಂತ ಕಡಿಮೆ ಆಗದೆ ಪ್ರಪಂಚಕ್ಕೆ ಉಳಿಗಾಲವಿಲ್ಲ. ಆದರೆ ಏನು ಮಾಡುವುದು ಮಧ್ಯಮವರ್ಗದ ಜನರು standard of living ಹೆಚ್ಚಬೇಕು ಎಂಬ ಬಯಕೆ ಉಳ್ಳವರಾಗಿದ್ದಾರೆ, ಮಧ್ಯಮವರ್ಗದ standard of living ಹೆಚ್ಚಿಸುತ್ತೇನೆ ಎಂದು ಭರವಸೆ ಕೊಟ್ಟ ವ್ಯಕ್ತಿಯನ್ನು ಪ್ರಧಾನಿಯಾಗಿ ಆಯ್ಕೆ ಮಾಡಿದ್ದಾರೆ. ನಮೋ ಮಾದರಿಯ ಅಭಿವೃಧ್ಧಿಯ ಪಥದಲ್ಲಿ ಭಾರತ ನೆಲಕಚ್ಚುವುದು ಇನ್ನು ಖಚಿತ.

   Reply
   1. Ananda Prasad

    ‘ಅತಿಯಾಸೆ ಗತಿಕೇಡು, ಎಂಬುದು ನಮ್ಮ ಹಿರಿಯರು ಅನುಭವದಿಂದ ಕಂಡುಕೊಂಡ ಸತ್ಯ. ‘ಆಸೆಯೇ ದುಃಖಕ್ಕೆ ಮೂಲ’ ಎಂದವನು ಗೌತಮ ಬುದ್ಧ. ಇದನ್ನು ಕಡೆಗಣಿಸಿ ಬಂಡವಾಳಶಾಹಿ ಆರ್ಥಿಕ ಸಿದ್ಧಾಂತದ ಹುಚ್ಚು ಓಟ ನಿರಂತರವಾಗಿ ಸಾಗಿದೆ. ಇದು ಯಾವ ರೀತಿ ಇದೆ ಎಂದರೆ ಮುರಿದು ಬೀಳುವ ಕೊಂಬೆಯ ಜಾಗದಲ್ಲಿ ಕುಳಿತು ಮರದಿಂದ ಕೊಂಬೆಯನ್ನು ಕಡಿಯುವ ಮೂರ್ಖನ ಚಿತ್ರದಂತೆ ಭಾಸವಾಗುತ್ತದೆ. ನಮ್ಮ ಮುಂದಿನ ಪೀಳಿಗೆಯ ಬಗ್ಗೆ ಯೋಚಿಸದೆ ಈ ಪೀಳಿಗೆಯವರೇ ಭೂಮಿಯ ಎಲ್ಲ ಸಂಪನ್ಮೂಲವನ್ನೂ ಅನುಭೋಗಿಸಿ ಅಭಿವೃದ್ಧಿ ಹೊಂದಬೇಕು ಎಂಬುದು ಇಂದಿನ ಮಧ್ಯಮ ವರ್ಗದ, ಜೀವನದಲ್ಲಿ ಕಷ್ಟ, ಹೋರಾಟಗಳನ್ನು ಅರಿಯದ ಸುಖವಾಗಿ ಬೆಳೆದ ಪೀಳಿಗೆಯ ಜೀವನದರ್ಶನ.

    Reply
   2. ವಿಜಯ್

    @Nagashetty Shetkar

    Standard of living ನಲ್ಲಿ ಯಾವ ಯಾವ aspect ಗಳು ಬರುತ್ತವೆ ಮತ್ತು ಅದು ಏಕೆ ಮುಖ್ಯ ಎಂಬುದನ್ನು ತಿಳಿದುಕೊಂಡಿದ್ದರೆ, ಶೆಟ್ಕರವರಿಗೆ ಯಾವುದನ್ನೊ ಯಾವುದಕ್ಕೊ ತಗುಲಿ ಹಾಕುವ ತಮ್ಮ ಈ ಪುಂಗಿ ಊದುವಿಕೆ ದಂಧೆ ವ್ಯರ್ಥ್ಯ ಎಂದು ಗೊತ್ತಾಗುತ್ತಿತ್ತು!.

    [ನಮೋ ಮಾದರಿಯ ಅಭಿವೃಧ್ಧಿಯ ಪಥದಲ್ಲಿ ಭಾರತ ನೆಲಕಚ್ಚುವುದು ಇನ್ನು ಖಚಿತ.]
    ಇಷ್ಟು ದಿನ ಆಕಾಶದಲ್ಲಿ ಹಾರಾಡುತ್ತಿತ್ತೆ?. ಕಾಂಗ್ರೆಸ್ ಹೋಗಲಿ, ಎಡಪಂಥೀಯರು ಆಳಿದ ರಾಜ್ಯಗಳಲ್ಲಿ ಸಾಧಿಸಿದ ಅಭಿವೃದ್ಧಿಯ ಬಗ್ಗೆ ಸ್ವಲ್ಪ ನಮಗೂ ತಿಳಿಸಿ, ಕೇಳೋಣವಂತೆ.

    Reply
  2. ವಿಜಯ್

   ಈ ಅಭಿಪ್ರಾಯದೊಂದಿಗೆ ಸಹಮತಿಯಿದೆ. ಕೃಷಿಗೆ ಮತ್ತು ಪರಿಸರಕ್ಕೆ ಹಾನಿಕರವಲ್ಲದ/ ಕಡಿಮೆ ಹಾನಿಕರವಾಗಿರುವ ಉದ್ಯೋಗಗಳಿಗೆ ಮಹತ್ವ, ಉತ್ತೇಜನ ಕೊಡಬೇಕಾದದ್ದು ಈಗಿನ ತುರ್ತು..ಆದರೆ ನಮ್ಮ ಈ ಜನಸಂಖ್ಯೆಯ ಅವಶ್ಯಕತೆಗಳನ್ನು ನಿಭಾಯಿಸಲು ಕೆಲವೊಂದು ರಾಜಿ ಕೂಡ ಅನಿವಾರ್ಯ ಎನಿಸುತ್ತದೆ.

   Reply
 3. MAHAMMED BARY

  ಪ್ರಸಾದ್ ರವರೆ ,
  ತಾವು ಅಭಿವೃದ್ದಿಯ ಬಲಪಂಥೀಯ ವಿಚಾರಧಾರೆಯನ್ನು ವಿರೋದಿಸುವ ಮುನ್ನ
  ಯುರೋಪ ,ಅಮೇರಿಕ ಹಾಗೂ ಇನ್ನಿತರೇ ಅಭಿವೃದ್ಧಿ ಹೊಂದಿದ ದೇಶದ ಜನರ
  ಸುಖಕರ ಜೀವನದ ಬಗ್ಗೆಯೂ ಅರಿಯಬೇಕು
  ಸಮತಾವಾದ ಅನ್ನೋದು ಬರೇ ಸಿದ್ಧಾಂತವಾಗಿದೆ ಆದರೆ ಹೆಚ್ಚು ಕಡಿಮೆ ಯಾವುದೇ ದೇಶ
  ನಿಜ ಅರ್ಥದ ಸಮತಾವಾದ ಅಪ್ಪಿಕೊಂಡಿಲ್ಲ . ಇದರರ್ಥ ಸಮತಾವಾದ ನಿರರ್ಥಕ ಅಂದಾಯಿತಲ್ಲವೇ ??

  Reply
  1. Ananda Prasad

   ನಾನು ಬಲಪಂಥೀಯ ಆರ್ಥಿಕ ನೀತಿಯ ನ್ಯೂನತೆಗಳನ್ನು ಹೇಳುತ್ತಿದ್ದೇನೆಯೇ ಹೊರತು ಅವುಗಳನ್ನು ವಿರೋಧಿಸುವುದು ನನ್ನ ಉದ್ಧೇಶ ಅಲ್ಲ. ಅಮೇರಿಕಾ, ಯುರೋಪ್ ಹಾಗೂ ಇನ್ನಿತರ ಅಭಿವೃದ್ಧಿ ಹೊಂದಿದ ದೇಶಗಳ ಅತಿರೇಕಗಳಿಂದಲೇ ಇಂದು ಪರಿಸರ ಮಾಲಿನ್ಯ ಹೆಚ್ಚಿದೆ. ಭೂಗೋಳ ಬಿಸಿಯೇರುವಿಕೆ (ಗ್ಲೋಬಲ್ ವಾರ್ಮಿಂಗ್) ವಿದ್ಯಮಾನಕ್ಕೆ ಮುಂದುವರಿದ ದೇಶಗಳ ಕೊಡುಗೆ ಹೆಚ್ಚು ಇದೆ. ಹಾಗೆಂದು ಇದರ ದುಷ್ಪರಿಣಾಮ ಕೇವಲ ಮುಂದುವರಿದ ದೇಶಗಳ ಮೇಲೆ ಮಾತ್ರವಲ್ಲ ವಿಶ್ವದ ಎಲ್ಲಾ ದೇಶಗಳ ಮೇಲೆಯೂ ಆಗುತ್ತದೆ. ಜಾಗತೀಕರಣ, ಉದಾರೀಕರಣ, ಖಾಸಗೀಕರಣಗಳ ನಂತರ ಭೂಗೋಳ ಬಿಸಿಯೇರುವಿಕೆ ಹೆಚ್ಚಿನ ವೇಗ ಪಡೆದುಕೊಂಡಿದೆ. ಮಾನವನ ಐಶಾರಾಮಿ ಜೀವನ ವಿಧಾನದಿಂದಾಗಿ ಭೂಗೋಳದ ಉಷ್ಣತೆ ಹೆಚ್ಚುತ್ತಿದೆ. ಶ್ರೀಮಂತರು ಹೆಚ್ಚಿದ ಉಷ್ಣತೆಯಿಂದ ಪಾರಾಗಲು ಹವಾನಿಯಂತ್ರಕಗಳ ಮೊರೆ ಹೋಗುತ್ತಾರೆ, ಬಡವರು ಏನು ಮಾಡುವುದು? ಮುಂದುವರಿದ ದೇಶಗಳ ಅನೈಸರ್ಗಿಕ ಹಾಗೂ ಐಶಾರಾಮಿ ಜೀವನ ವಿಧಾನದಿಂದಾಗಿ ಬೊಜ್ಜು ಅಲ್ಲಿ ಪ್ರಧಾನ ಸಮಸ್ಯೆಯಾಗಿದೆ. ಬೊಜ್ಜಿನಿಂದಾಗಿ ಹಲವಾರು ಆರೋಗ್ಯ ಸಮಸ್ಯೆಗಳು, ಅದಕ್ಕಾಗಿ ಇನ್ನಷ್ಟು ಹಣ ವೆಚ್ಚ ಮಾಡಬೇಕಾದ ವಿಷವ್ಯೂಹದಲ್ಲಿ ಸಿಕ್ಕಿ ಮುಂದುವರಿದ ದೇಶಗಳ ಜನ ನರಳುತ್ತಿದ್ದಾರೆ. ಸುಖ, ಸಂತೋಷ ಹಾಗೂ ನೆಮ್ಮದಿ ಎಂಬುದು ಅಂತರಂಗಕ್ಕೆ ಸಂಬಂಧಿಸಿದ್ದು ಎಂಬುದನ್ನು ಅರಿಯಲಾರದೆ ಹೋದುದೇ ಈ ವಿಷವ್ಯೂಹದಲ್ಲಿ ಸಿಕ್ಕಿ ಮಾನವನು ನರಳಲು ಕಾರಣವಾಗಿದೆ. ಈಗ ಬಲಪಂಥೀಯ ಅಭಿವೃದ್ಧಿಯ ಸಮೂಹ ಸನ್ನಿ ಇರುವ ಕಾರಣ ಈ ಬಗ್ಗೆ ಹೆಚ್ಚು ಮಾತಾಡಿ ಪ್ರಯೋಜನವಿಲ್ಲ. ಈ ಸಮೂಹ ಸನ್ನಿಯ ದುಷ್ಪರಿಣಾಮ ಇನ್ನು ಕೆಲವೇ ವರ್ಷಗಳಲ್ಲಿ ಎಲ್ಲರ ಅನುಭವಕ್ಕೆ ಬರಬಹುದು.

   Reply
   1. Mahesha Prasad Neerkaje

    ಆನಂದ್ ಪ್ರಸಾದ್ ಅವರೇ, ತಾವು ಬಲಪಂಥೀಯ ಅಭಿವೃಧ್ಧಿ ಸಮೂಹ ಸನ್ನಿ ಅಂತ ಹೇಳಿದ್ದೀರಿ ಆದರೆ ಈ ಅಭಿವೃಧ್ಧಿಯ ಸಮೂಹ ಸನ್ನಿ ಯಾವ ಪಂಥವನ್ನೂ ಬಿಟ್ಟಿಲ್ಲ ಎಂಬುದು ವಾಸ್ತವ. ಇಂದು ಚೈನಾದ ಕಮುನಿಸ್ಮ್ ಕೂಡ ಅಭಿವೃಧ್ಧಿ ಯಾ ಸಮೂಹ ಸನ್ನಿಯನ್ನೇ ಅಪ್ಪಿಕೊಂಡಿದೆ. ಸೌದಿಯ ಕಟ್ಟರ್ ಧಾರ್ಮಿಕ ಸಮುದಾಯ ಕೂಡ ಅದೇ ದಾರಿ ಹಿಡಿದಿವೆ. ಇನ್ನು ಕ್ರೈಸ್ತ ಧಾರ್ಮಿಕತೆ ಕೂಡ ಸೋ ಕಾಲ್ಡ್ ಅಭಿವೃಧ್ಧಿಯ ಪಾದ ಹಿಡಿದು ದಶಕಗಳೇ ಸಂದವು. ಹಾಗಾಗಿ ಈ ಅಭಿವೃಧ್ಧಿಗೆ ಪಂಥಗಳಿಲ್ಲ. ಹಾಗೂ ಇರಲು ಸಾಧ್ಯವೂ ಇಲ್ಲ. ಭೂಗರ್ಭದಲ್ಲಿ ಹುದುಗಿದ ಅಪಾರ ತೈಲ ಸಂಪತ್ತು ಅದಾವುದೋ ಕಾರಣಕ್ಕೆ ಮಾನವನಿಗೆ ಸಿಕ್ಕ ಮೇಲೆ ಹೆಂಡ ಕುಡಿದ ಮಂಗನಂತಾಗಿ ಇವೆಲ್ಲ ಆಟಗಳು ನಡೆಯುತ್ತಿವೆ. ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಇದಕ್ಕಾಗಿ ಯಾವ ಪಂಥ ಸೇರಿಕೊಂಡರೂ ಉಪಯೋಗ ಇಲ್ಲ. ಆಗುವುದು ಏನಿದ್ದರೂ ಆಗಿ ಹೋಗಲಿ ಅನ್ನುವುದಷ್ಟೇ ನಾವು ಹೇಳಬಹುದು ಅಷ್ಟೇ.

    Reply
    1. Ananda Prasad

     ಚೀನಾದಲ್ಲಿ ಸರ್ಕಾರ ಮಾತ್ರ ಎಡಪಂಥೀಯರ ಹಿಡಿತದಲ್ಲಿ ಇದೆಯೇ ಹೊರತು ಅಲ್ಲಿ ನಡೆಯುತ್ತಿರುವುದು ಬಲಪಂಥೀಯ ವಿದೇಶಿ ಬಂಡವಾಳದ್ದೇ ಕಾರುಬಾರು. ಹಾಗಾಗಿ ಅದೂ ಕೂಡ ಬಲಪಂಥೀಯ ಅಭಿವೃದ್ಧಿಯೇ ಹೊರತು ಎಡಪಂಥದ್ದಲ್ಲ. ಇಂದು ಪ್ರಪಂಚವನ್ನು ನಿಯಂತ್ರಿಸುತ್ತಿರುವುದು ಬಲಪಂಥೀಯ ಬಂಡವಾಳಶಾಹಿಗಳೇ. ಆಧುನಿಕ ಭಸ್ಮಾಸುರನಂತೆ ವರ್ತಿಸುತ್ತಿರುವುದು ಇವರೇ. ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ಇತ್ಯಾದಿಗಳು ಇವರ ನಿಯಂತ್ರಣದಲ್ಲಿಯೇ ಇರುವುದು. ಪ್ರಪಂಚದಲ್ಲಿ ಇರುವ ಎಲ್ಲ ಮಾನವರ ಸಮತೋಲಿತ ಅಭಿವೃದ್ಧಿಯಾಗಬೇಕು ಎಂಬ ಕನಸು ಇವರಿಗೆ ಇಲ್ಲ. ಯಾವುದು ನಿಜವಾದ ಅಭಿವೃದ್ಧಿ ಎಂಬ ಮುನ್ನೋಟ ಕೂಡಾ ಇವರಿಗೆ ಇಲ್ಲ. ಇನ್ನಷ್ಟು, ಮತ್ತಷ್ಟು ಲಾಭ ಬಾಚಿಕೊಳ್ಳಬೇಕು ಎಂಬುದು ಇವರ ಮೂಲ ಧ್ಯೇಯ. ಇದನ್ನು ತಡೆಯಲು ಸಾಧ್ಯವಿಲ್ಲ. ಇದನ್ನು ತಡೆಯಬೇಕಾದರೆ ವಿಚಾರಶೀಲ ಜನಸಮುದಾಯ ಬೇಕಾಗುತ್ತದೆ ಮಾತ್ರವಲ್ಲ ಅವರ ಸಂಖ್ಯೆ ಬಹುಸಂಖ್ಯಾತವಾಗಿರಬೇಕು. ಪ್ರಪಂಚದಲ್ಲಿ ವಿಚಾರಶೀಲ ಜನಸಮುದಾಯ ಯಾವಾಗಲೂ ಅಲ್ಪಸಂಖ್ಯಾತವೇ. ಹೀಗಾಗಿ ಪ್ರವಾಹದ ವಿರುದ್ಧ ಈಜಲು ವಿಚಾರಶೀಲ ಜನಸಮುದಾಯಕ್ಕೂ ಸಾಧ್ಯವಿಲ್ಲ.

     Reply
 4. MAHAMMED BARY

  ಅರವಿಂದ್ ಕೆಜ್ರೀವಾಲ್ ರ ಬಳಿ , ಪ್ರಕಾಶ್ ಜಾವೆದೆಕರ್ .. “ನೀವು ನಿಮ್ಮ ಪಕ್ಷ ಎಡಪಂಥೀಯವೋ ಬಲಪಂತೀಯವೋ “ಎಂದು ಕೇಳಿದಾಗ ..ಕೆಜ್ರೀವಾಲ್ .. ನಾವು ಯಡವೂ ಅಲ್ಲ ಬಲವೂ ಅಲ್ಲ … ನಮಗೆ ಬೇಕಿರೋದು ನೀರು,ರಸ್ತೆ,ಶಿಕ್ಷಣ ,corruption ಮುಕ್ತ ಆಡಳಿತ ಎಂದಷ್ಟೇ ಹೇಳಿದರು . ಕಾರಣ ಮೇಲಿನ ಸಿದ್ಧಾಂತಗಳೆಲ್ಲ ಬರೇ ರಗಳೆ ಗಳೇ ತುಂಬಿದೆ .
  ವಾಸ್ತವದಲ್ಲಿ ಮೇಲಿನ ಯಾವುದೇ ಕರಾರುವಾಕ್ಕು ಸಿದ್ಧಾಂತದಲ್ಲಿ ಬಹುಜನರಿಗೆ ಉಪಯೋಗವೇ ಇಲ್ಲ.
  canada ,netharland ,finland ,sweeden ನಂತಹ ದೇಶಗಳು .. ಯಾವೊಂದು ಸಿದ್ಧಾಂತಕ್ಕೂ ಜೋತು ಬೀಳದೇ ತಮ್ಮದೇ ಆದ ಸ್ವಚ್ಛ ಆರ್ಥಿಕತೆಯನ್ನು ಮುನ್ನೆಡೆಸಿಕೊಂಡು ಹೊಗುತ್ತಿದೆ. ಇನ್ನು ಬಂಡವಾಳಿಕೃತ ಆರ್ಥಿಕ ಪ್ರಗತಿಯಿಂದ ಪರಿಸರಕ್ಕೆ ಹಾನಿ ಎನ್ನುವುದು ಸತ್ಯವಾದರೂ
  ಪರಿಸರ ಹಾನಿಯನ್ನು ಇನ್ನಿತರೇ ವಿಧಾನಗಳಿಂದ ತಡೆಗಟ್ಟಬಹುದೇ ಹೊರತು ಆರ್ಥಿಕತೆಯ ಗತಿಶೀಲವನ್ನು ಕುಂದಿಸುವುದರಲ್ಲಿ ಲಾಭಕ್ಕಿಂತ ಹಾನಿಯೇ ಹೆಚ್ಚು. ಮುಂದುವರಿದ ಬಂಡವಾಳೀಕೃತ ದೇಶಗಳಾದ ಅಮೇರಿಕಾ ,ಇಂಗ್ಲೆಂಡ್,ಜರ್ಮನಿ ಗಳಲ್ಲಿ ಪರಿಸರಕ್ಕೂ ,ಸಮಾನತೆಗೂ ,ಮಾನವ ಹಕ್ಕುಗಳಿಗೂ ತನ್ನದೇ ಆದ ಮಹತ್ವ ವನ್ನು ಕೊಟ್ಟಿದೆ . ಇಲ್ಲಿ ಮುಖ್ಯ ಎಡಬಲ ಸಿದ್ಧಾಂತವಲ್ಲ ಕೆಟ್ಟ,ನಿರ್ಲಜ್ಜ,ಹೋಂಕರಿಸುವ,ಆದಳಿತವಷ್ಟೇ .

  ೫೦ ವರ್ಷಗಳ ಹಿಂದೆ ಪರಿಸರ ತುಂಬಾ ಚೆನ್ನಾಗೇ ಇದ್ದವು ಆದರೆ ತಿನ್ನಲು ಎರಡು ಹೊತ್ತು ಊಟವಿರಲಿಲ್ಲ ,ಹೊದ್ದುಕೊಳ್ಳಲು ಬಟ್ಟೆ ಇರಲಿಲ್ಲ .ದೂರದ ಆಸ್ಪತ್ರೆಗೆ ನಡೆದುಕೊಂಡು ಹೋಗಲಾರದೆ ಮನೆಯಲ್ಲೇ ನೋವು ಅನುಭವಿಸಬೇಕಿತ್ತು ಕಾರಣ ಹಣವಿರಲಿಲ್ಲ ,ಹಣವಿದ್ದರೂ ಬಸ್ಸಿರಲಿಲ್ಲ , ಹಾಗಾದರೆ ಹಣವೆಲ್ಲ ಮುಕೇಶ್ ಅಂಬಾನಿಯ ಬಳಿಯಿತ್ತೆ ???

  Reply
  1. Ananda Prasad

   ಎಡ ಅಥವಾ ಬಲಪಂಥದ ಸಿದ್ಧಾಂತಗಳಿಗೆ ಅಂಟಿಕೊಳ್ಳಬೇಕಿಲ್ಲ ಆದರೆ ಪರಿಸರದ ಸಮತೋಲನವನ್ನು ಕಾಯ್ದುಕೊಳ್ಳುವ ರೀತಿಯ ಅಭಿವೃದ್ಧಿಯೇ ನಿಜವಾದ ಅಭಿವೃದ್ಧಿ. ಮುಂದುವರಿದ ಪಶ್ಚಿಮದ ದೇಶಗಳು ತಮ್ಮ ದೇಶಗಳಲ್ಲಿ ಸಮಾನತೆಯನ್ನು ತಕ್ಕ ಮಟ್ಟಿಗೆ ಸಾಧಿಸಿವೆ ಅದರ ಜೊತೆಗೆ ಆರ್ಥಿಕವಾಗಿಯೂ ಅಭಿವೃದ್ಧಿ ಹೊಂದಿ ತಮ್ಮ ದೇಶದ ಪರಿಸರವನ್ನು ತಕ್ಕ ಮಟ್ಟಿಗೆ ಕಾಪಾಡುವಲ್ಲಿ ಯಶಸ್ವಿಯಾಗಿಯೂ ಇದ್ದಾರೆ. ಆದರೆ ಇವರು ಬಹುರಾಷ್ಟ್ರೀಯ ಬಂಡವಾಳಶಾಹಿ ಕಂಪನಿಗಳ ಮೂಲಕ ಬೇರೆ ಅಭಿವೃದ್ಧಿ ಹೊಂದುತ್ತಿರುವ ಹಾಗೂ ಹಿಂದುಳಿದ ದೇಶಗಳ ಪರಿಸರವನ್ನು ಹಾಳು ಮಾಡಿದ್ದಾರೆ, ಮಾಡುತ್ತಿದ್ದಾರೆ. ಬೇರೆಯವರು ಹಾಳಾದರೂ ತೊಂದರೆ ಇಲ್ಲ ತಾವು ಮಾತ್ರ ಲಾಭ ಗಳಿಸಬೇಕು ಎಂಬ ಅವರ ದೃಷ್ಟಿಕೋನದಲ್ಲಿಯೇ ದೋಷ ಇದೆ. ಉದಾಹರಣೆಗೆ ಯೂನಿಯನ್ ಕಾರ್ಬೈಡ್ ಎಂಬ ಅಮೆರಿಕಾದ ಬಹುರಾಷ್ಟ್ರೀಯ ಕಂಪನಿ ಭೋಪಾಲ್ ನಲ್ಲಿ ಮಾಡಿದ ಅನಾಹುತ ನೋಡಬಹುದು. ಈ ದೇಶಗಳು ತಮ್ಮ ದೇಶಗಳಲ್ಲಿ ಅಪಾಯಕಾರಿ ಕೀಟನಾಶಕಗಳ ಬಳಕೆ ಹಾಗೂ ಉತ್ಪಾದನೆಯನ್ನು ನಿಷೇಧಿಸುತ್ತವೆ ಆದರೆ ತಮ್ಮ ಲಾಭಕ್ಕಾಗಿ ಬೇರೆ ದೇಶಗಳಲ್ಲಿ ಅವುಗಳ ಉತ್ಪಾದನೆ ಹಾಗೂ ಬಳಕೆಯನ್ನು ಉತ್ತೇಜಿಸುತ್ತವೆ. ಈ ರೀತಿಯ ಅನೈತಿಕ ಲಾಭ ಮಾಡಿಕೊಂಡು ಅಭಿವೃದ್ಧಿ ಹೊಂದಿದ್ದೇವೆ ಎಂದು ಹೇಳುವುದು ನೀಚತನವಲ್ಲವೇ? ಇನ್ನೊಬ್ಬರ ಗೋರಿಯ ಮೇಲೆ ಅಭಿವೃದ್ಧಿಯ ಮಹಲು ಕಟ್ಟುವ ನಾಗರಿಕತೆ ನೀಚ ನಾಗರಿಕತೆ. ಅಮೇರಿಕಾದ ತರಹದ ಅಭಿವೃದ್ಧಿ ನಮ್ಮ ದೇಶದಲ್ಲಿ ಸಾಧ್ಯವಿಲ್ಲ ಏಕೆಂದರೆ ಅದು ವಿಸ್ತಾರವಾದ ಆದರೆ ಕಡಿಮೆ ಜನಸಂಖ್ಯೆ ಹೊಂದಿರುವ ದೇಶ. ನಮ್ಮ ದೇಶ ಅಮೆರಿಕಾಕ್ಕಿಂಥ ವಿಸ್ತೀರ್ಣದಲ್ಲಿ ಕಡಿಮೆ ಇದ್ದರೂ ಜನಸಂಖ್ಯೆಯಲ್ಲಿ ಅದಕ್ಕಿಂಥ ನಾಲ್ಕು ಪಟ್ಟು ಹೆಚ್ಚು ಇರುವ ದೇಶ.

   ಲಂಗುಲಗಾಮಿಲ್ಲದ ಅಭಿವೃದ್ಧಿಯಿಂದ ಪ್ರಯೋಜನಕ್ಕಿಂತ ನಷ್ಟವೇ ಹೆಚ್ಚು. ಒಮ್ಮೆ ಪರಿಸರ ಹಾಳಾದರೆ ಅದನ್ನು ಮತ್ತೆ ಸರಿ ಮಾಡುವುದು ಬಹಳ ಕಷ್ಟ. ಬರಗಾಲ, ಮೇಘಸ್ಫೋಟ, ಚಂಡಮಾರುತ, ಸುಂಟರಗಾಳಿ, ಪ್ರವಾಹಗಳಿಂದ ಉಂಟಾಗುವ ಹಾನಿಯನ್ನು ಲೆಕ್ಕ ಹಾಕಿದರೆ ಅಭಿವೃದ್ಧಿಯ ಲಾಭಕ್ಕಿಂಥ ಅದರಿಂದಾಗುವ ಹಾನಿಯೇ ಹೆಚ್ಚಾಗಬಹುದು. ಬೇಸಿಗೆಯಲ್ಲಿಯೂ ತುಂಬಿ ಹರಿಯುವ ಗಂಗಾ ಯಮುನಾದಂಥ ಹಿಮನದಿಗಳು ಗ್ಲೋಬಲ್ ವಾರ್ಮಿಂಗ್ ಪರಿಣಾಮವಾಗಿ ಬತ್ತಿದರೆ ಅದರಿಂದಾಗುವ ನಷ್ಟ ಲೆಕ್ಕ ಹಾಕಲು ಸಾಧ್ಯವೇ? ಗ್ಲೋಬಲ್ ವಾರ್ಮಿಂಗ್ ಕಾರಣವಾಗಿ ಧ್ರುವ ಪ್ರದೇಶದ ಹಿಮ ಕರಗಿ ಸಮುದ್ರ ಮಟ್ಟ ಹೆಚ್ಚಾಗಿ ಕರಾವಳಿಯಲ್ಲಿ ಬೆಳೆದಿರುವ ನಗರಗಳು ಮುಳುಗಡೆಯಾದರೆ ಅದರಿಂದಾಗುವ ನಷ್ಟ ಲೆಕ್ಕ ಹಾಕಿದರೆ ಲಂಗುಲಗಾಮಿಲ್ಲದ ಅಭಿವೃದ್ಧಿಯ ಅವಾಂತರಗಳು ಗೋಚರಿಸಬಹುದು.

   Reply

Leave a Reply

Your email address will not be published.