ಮತದಾರನಿಂದ ದೂರ ಸರಿದಷ್ಟು ಪಕ್ಷ ಸೊರಗುತ್ತದೆ


– ಡಾ.ಎಸ್.ಬಿ. ಜೋಗುರ


 

ಕಳೆದ ಲೋಕಸಭಾ ಚುನಾವಣೆಯ ಫ಼ಲಿತಾಂಶ ಅದೇಕೋ ಮರೆತೆನಂದರೂ ಮರೆಯುತ್ತಿಲ್ಲ. ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ಅಗ್ರಗಣ್ಯ ಪಾತ್ರ ನಿರ್ವಹಿಸಿದ ನೂರಾರು ವರ್ಷಗಳ ರಾಜಕೀಯ ಚರಿತ್ರೆಯಿರುವ ಕಾಂಗ್ರೆಸ್ ಪಕ್ಷ ಹೀಗೆ ಕೇವಲ ೪೪ ಸ್ಥಾನಗಳನ್ನು ಗೆಲ್ಲುವ ಮೂಲಕ ದೇಶವ್ಯಾಪಿಯಾಗಿ ಸಂಕೋಚವನ್ನು ಅನುಭವಿಸಬೇಕಾಯಿತು. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಈ ಬಗೆಯ ಸೋಲಿನ ಹೊಣೆಯನ್ನು ಖುದ್ದಾಗಿ ತಾವೇ ಹೊರುತ್ತೇವೆ ಎಂದರೂ ಅವರ ಸುತ್ತ ಮುತ್ತಲಿರುವ ಅನೇಕ ಹಿರಿ-ಕಿರಿಯ ಕಾಂಗೈ ನಾಯಕರು ಅದು ಹೇಗೆ ಆದೀತು.. ಸೋಲಿಗೆ ನಾವೂ ಹೆಗಲು ಕೊಡುತ್ತೇವೆ ಎನ್ನುವಂತೆ ರಾಗ ತೆಗೆದಿರುವದೂ ಇತ್ತು. ಹೀಗೆ ಕುಟುಂಬ ರಾಜಕಾರಣವನ್ನು ಕಾಂಗ್ರೆಸ್ಸಿನ ಹಿರಿಯರು ಮನಸಿಲ್ಲದ ಮನಸ್ಸಿನಿಂದ ಒಪ್ಪಿದ್ದರಿಂದಲೇ ಕಾಂಗ್ರೆಸ್ ನಲ್ಲಿ ಮತ್ತೆ ಮತ್ತೆ ಒಳಜಗಳ, ಗುಂಪುಗಾರಿಕೆ, ಬೆನ್ನಲ್ಲಿ ಚಾಕು ಹಾಕುವ ತಂತ್ರಗಳು ಆರಂಭವಾದವು. ನಮ್ಮವರೇ ನಮ್ಮನ್ನು ಸೋಲಿಸಿದರು ಎನ್ನುವ ಮಾತು ಕಾಂಗ್ರೆಸ್ ಪಕ್ಷದಲ್ಲಿ ಇಂದು ನಿನ್ನೆಯದಲ್ಲ. ಹೀಗಿದ್ದಾಗಲೂ ಹಗ್ಗ ಹದಿನಾರು ಮಾರು ಇದ್ದರೂ ಅದರ ಕುಣಿಕೆ ಮಾತ್ರ ನನ್ನ ಕೈಯಲ್ಲಿರಲಿ ಎನ್ನುವ ಹೈ ಕಮಾಂಡ್ ಯಾವ ತಂತ್ರಗಳನ್ನು ತನ್ನದೇ ಪಕ್ಷದ ಒಳಗಿನ ವೈರಿಗಳನ್ನು ಸದೆ ಬಡಿಯಲು ಅನುಸರಿಸಿತು..? ಎನ್ನುವ ಪ್ರಶ್ನೆ ಏಳದೇ ಇರದು. ಜೊತೆಗೆ ಚುನಾವಣೆಯ ಸಂದರ್ಭದಲ್ಲಿ ಪಕ್ಷದ ಹಿರಿಯರನ್ನು ಹೋಲ್ಸೇಲಾಗಿ ಬದಿಗಿಟ್ಟು Rahul-Gandhiರಾಹುಲ್ ನೇತೃತ್ವವನ್ನು ಮತ್ತೆ ಮತ್ತೆ ಬಿಂಬಿಸುವಂಥಾದದ್ದು ಮತದಾರನ ಮೇಲೆ ಮೋದಿ ಅಲೆಯಿರುವ ಸಂದರ್ಭದಲ್ಲಿ ಮಾಡಬೇಕಾದ ಕೆಲಸವನ್ನು ಮಾಡಲಿಲ್ಲ. ಮೋದಿಯ ರಾಜಕೀಯ ಅನುಭವ, ಸಂಘಟನಾ ಶಕ್ತಿ, ನಾಟಕೀಯವಾದ ಭಾಷಣ ಶೈಲಿ ಆ ಮೂಲಕ ಸೃಷ್ಟಿ ಮಾಡುತ್ತಿದ್ದ ಸಮೂಹಸನ್ನಿ ಇದು ರಾಹುಲ್‌ಗೆ ಸಾಧ್ಯವಾಗಲಿಲ್ಲ ಎನ್ನುವುದು ಕಟುವಾಸ್ತವ. ಕಾಂಗ್ರೆಸ್ ನ ಅನೇಕ ಹಿರಿಯರು ಹೈ ಕಮಾಂಡ್ ಹೆಸರಲ್ಲಿ ಒಂದು ಕುಟುಂಬದ ರಾಜಕಾರಣವನ್ನು ಓಲೈಸಲು ಮಾಡಿದ ಪರಿಣಾಮವೇ ಕಾಂಗ್ರೆಸ್ ಈ ಮಟ್ಟಕ್ಕೆ ತಲುಪಲು ಒಂದು ಪ್ರಮುಖ ಕಾರಣ. ಸರಿ ಇರುವುದನ್ನು ಸರಿ, ತಪ್ಪಿರುವುದನ್ನು ತಪ್ಪು ಎನ್ನುವ ದೃಢವಾದ ಮನ:ಸ್ಥಿತಿ ಕಾಂಗ್ರೆಸ್ ಪಕ್ಷದ ಕಕ್ಷೆಯಲ್ಲಿರುವ ನಾಯಕರಲ್ಲಿಲ್ಲ. ಹಾಗಾಗಿ ಪ್ರತಿಯೊಂದನ್ನು ಹೈ ಕಮಾಂಡ್ ಎಂಬ ದುರ್ಬೀನ್ ಮೂಲಕ ನೋಡುವ, ಅನುಭವಿಸುವ, ತೀರ್ಮಾನಿಸುವ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯ ಸಂದರ್ಭದಲ್ಲಿಯೂ ಪಕ್ಷದ ಚಟುವಟಿಕೆಗಳ ಚುರುಕುತನ, ವ್ಯಾಪಕತೆ ಏನಾಗಿರಬೇಕು ಎನ್ನುವದರ ಮೇಲೆಯೂ ಹಿಡಿತಗಳು ಹೇರಲ್ಪಡುತ್ತವೆ. ಮೋತಿಲಾಲ್ ನೆಹರು, ಜವಾಹರಲಾಲ್ ನೆಹರು, ಮಗಳು ಇಂದಿರಾ ಗಾಂಧಿ, ಮೊಮ್ಮಗ ರಾಜೀವ ಗಾಂಧಿ ಈಗ ಮರಿ ಮೊಮ್ಮಗ ರಾಹುಲ ಗಾಂಧಿ ಮತ್ತು ಅಜ್ಜಿ ಇಂದಿರಾಳಂತೆಯೇ ಕಾಣುತ್ತಾಳೆನ್ನುವ ಪ್ರಿಯಾಂಕಾ ಗಾಂಧಿ. ಹೀಗೆ ಕಾಂಗ್ರೆಸ್ ಪಕ್ಷ ಎನ್ನುವುದು ಒಂದು ಕುಟುಂಬದ ಉತ್ತರಾಧಿಕಾರದ ಪ್ರಾತಿನಿಧಿಕತೆಯಾಗಿ ಪರಿಣಮಿಸಿರುವುದೇ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಬಹು ದೊಡ್ಡ ಅಣಕ.

ಯಾವುದೇ ಒಂದು ರಾಜಕೀಯ ಪಕ್ಷ ಅದು ಪ್ರಾದೇಶಿಕವಾಗಿರಲಿ ಇಲ್ಲವೇ ರಾಷ್ಟ್ರೀಯವಾಗಿರಲಿ ಅದಕ್ಕೆ ಅದರದೇಯಾದ ಒಂದಷ್ಟು ಸಾಮಾಜಿಕ ಮತ್ತು ಸಾಂಸ್ಕೃತಿಕ ಆಯಾಮಗಳಿರುತ್ತವೆ. ಅದು ಆ ಪಕ್ಷದ ಸಾಂಸ್ಥಿಕ ರೂಪವೂ ಆಗಿರಬಹುದು. ಈ ರೂಪರೇಷೆಗಳು, ಧರ್ಮ, ಜಾತಿ, ಭಾಷೆ, ಜನಾಂಗಗಳೊಂದಿಗೂ ಥಳುಕು ಹಾಕಿಕೊಂಡಿರುತ್ತವೆ. ಈ ಬಗೆಯ ಸಾಂಸ್ಥಿಕ ಮೂಲಗಳಿಗೆ ಕೆಲ ಬಾರಿ ತತ್ವ ಸಿದ್ಧಾಂತಗಳ ಲೇಪನವೂ ಸಾಧ್ಯವಾಗಿರುತ್ತದೆ. ಕಾಂಗ್ರೆಸ್ ಪಕ್ಷ ಪ್ರತಿ ಬಾರಿ ಚುನಾವಣೆಯನ್ನು ಎದುರಿಸುವಾಗಿನ ಸಹಜತೆಯಲ್ಲಿಯೇ ಈ ಬಾರಿಯೂ ಚುನಾವಣೆಯನ್ನು ಎದುರಿಸುವ ಮೂಲಕ ತನ್ನ ಎಂದಿನ ಓವರ್ ಕಾನ್ಫಿಡನ್ಸ್ ಪ್ರದರ್ಶನ ಮಾಡಿದ್ದು ವರ್ಕೌಟ್ ಆಗಲಿಲ್ಲ. ಅಗಾಧವಾದ ಚಾರಿತ್ರಿಕ ಹಿನ್ನೆಲೆಯಿರುವ ರಾಷ್ಟ್ರೀಯ ಪಕ್ಷವೊಂದು ಹೀಗೆ ಕೇವಲ 44 ಸ್ಥಾನಗಳನ್ನು ಮಾತ್ರ ಪಡೆಯುತ್ತದೆ ಎನ್ನುವುದೇ ದೊಡ್ಡ ಅಚ್ಚರಿ..! ಈ ಬಗೆಯ ಬಿ.ಜೆ.ಪಿ. ಪರ ಬೃಹತ್ ಫ಼ಲಿತಾಂಶವನ್ನು ಯಾವುದೇ ಮಾಧ್ಯಮವಾಗಲೀ ಇಲ್ಲವೇ ಖ್ಯಾತ ಜ್ಯೋತಿಷಿಯಾಗಲಿ ಭವಿಷ್ಯ ನುಡಿದದ್ದು ಇರಲಿಲ್ಲ. ಹೆಚ್ಚೆಂದರೆ 225-275 ವರೆಗೆ ಮಾತ್ರ ಕೇಳಿಬಂದಿರುವುದಿತ್ತು. ಈ ಎಲ್ಲ ಬಗೆಯ ಲೆಕ್ಕಾಚಾರಗಳನ್ನು ಮೀರಿಯೂ 340 ಸೀಟುಗಳನ್ನು ಗೆಲ್ಲುವಲ್ಲಿ ಮೋದಿ ಅಲೆ ಕೆಲಸ ಮಾಡಿದೆ ಎನ್ನುವುದನ್ನು ನಮಗೆ ಇಷ್ಟವೋ ಕಷ್ಟವೋ ಒಪ್ಪಿಕೊಳ್ಳಬೇಕಾಗಿದೆ. modi_bjp_conclaveಇನ್ನು ನಾನು ಮೇಲೆ ಹೇಳಲಾದ ಪಕ್ಷವೊಂದರ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಗತಿಗಳು ಬಿ.ಜೆ.ಪಿ.ಯಲ್ಲಿ ಕೆಲಸ ಮಾಡುವ ಹಾಗೆ ಇತರೆ ಪಕ್ಷಗಳಲ್ಲಿ ಕೆಲಸ ಮಾಡುವುದು ಕಡಿಮೆ. ಬಿ.ಜೆ.ಪಿ.ಯ ಒಬ್ಬ ಮತದಾರ ಯಾವುದೇ ಕಾರಣಕ್ಕೂ ಆ ಪಕ್ಷವನ್ನು ಹೊರತು ಪಡಿಸಿ ಇತರೆ ಪಕ್ಷಗಳಿಗೆ ಮತ ಹಾಕಲಾರ. ಹಾಗೆಯೇ ಯಾವುದೇ ಕಾರಣಕ್ಕೂ ತಾನು ನಂಬಿರುವ ಪಕ್ಷವನ್ನು ಬೇರೆ ಬೇರೆ ಕಾರಣಗಳಿಗಾಗಿ ಸಮರ್ಥನೆ ಮಾಡಿಕೊಳ್ಳುವುದನ್ನು ಬಿಡಲಾರ. ಈ ಬಗೆಯ ಮತದಾರರನ್ನು ಮಿಕ್ಕ ಪಕ್ಷಗಳು ರೂಪಿಸುವಲ್ಲಿ ವಿಫ಼ಲವಾಗಿವೆ. ಅದಕ್ಕೆ ಕಾರಣ ಆಯಾ ಪಕ್ಷಗಳ ಕಾರ್ಯವೈಖರಿ ಮತ್ತು ಸಿದ್ಧಾಂತಗಳಲ್ಲಿಯೇ ಹುಡುಕುವ ಯತ್ನವಾಗಬೇಕು. ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವ ಕಾರ್ಯಕರ್ತ ಮತ್ತು ಬೆಂಬಲಿಗರು ಒಂದು ಬಗೆಯ ಸೇಫ಼್ಟಿಯನ್ನು ಫ಼ೀಲ್ ಮಾಡುತ್ತಾರೆ. ಇದು ಕಾಂಗ್ರೆಸ್ ಮತ್ತು ಇತರೆ ಪಕ್ಷಗಳಲ್ಲಿ ಅಷ್ಟಾಗಿ ಕಾಣುವುದಿಲ್ಲ. ದುರಂತವೆಂದರೆ ಮೂರ್ನಾಲ್ಕು ದಶಕಗಳಿಂದಲೂ ಕಾಂಗ್ರೆಸ್ ನ್ನು ಬೆಂಬಲಿಸುವ ಮತದಾರನೊಬ್ಬನ ಬಗ್ಗೆ ಆ ಪಕ್ಷಕ್ಕೆ ಯಾವ ದರ್ದೂ ಇರುವದಿಲ್ಲ. ಇದು ಕ್ರಮೇಣವಾಗಿ ಆ ಮತದಾರನ ಅಂತರ್ಯದಲ್ಲಿ ಪಕ್ಷದ ಸಾಂಸ್ಕೃತಿಕ ಸ್ವರೂಪವನ್ನು ಅನಾದರದಿಂದ ಕಾಣುವಂತೆ ಮಾಡುತ್ತದೆ. ಇದೂ ಕೂಡಾ ಈ ಬಾರಿಯ ಚುನಾವಣೆಯ ಫ಼ಲಿತಾಂಶ ಹೀಗಾಗಲು ಒಂದು ಕಾರಣ. ನರೇಂದ್ರ ಮೋದಿಯನ್ನು ಮುಂಚೆಯೇ ಬಿ.ಜೆ.ಪಿ. ಯವರು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ ಪರಿಣಾಮ ಮತ್ತು ಮೋದಿಯ ಮಾತುಗಾರಿಕೆ ಮತ್ತು ಪಕ್ಷದ ತಂತ್ರಗಾರಿಕೆ ಇವೆರಡನ್ನು ಮೀರಿ ಮಾಧ್ಯಮಗಳನ್ನು ಬಳಸಿಕೊಂಡ ರೀತಿ ಹೀಗೆ ಮೋದಿಯ ಪ್ರಚಂಡ ಅಲೆ ಸುನಾಮಿಯಾಗಿ ಮಾರ್ಪಡಲು ಕಾರಣವಾಯಿತು. ತುಸು ಅತಿಯಾಯಿತೆನಿಸುವಷ್ಟು ಮಾಧ್ಯಮಗಳು ಮೋದಿಗೆ ಪ್ರಚಾರ ನೀಡಿದವು. ಆರಂಭದಿಂದಲೂ ಕಾಂಗ್ರೆಸ್ ಮೋದಿಯನ್ನು ತೀರಾ ಹಗುರವಾಗಿ ಪರಿಗಣಿಸಿದ್ದು ಈ ಬಗೆಯ ಫ಼ಲಿತಾಂಶಕ್ಕೆ ಇನ್ನೊಂದು ಕಾರಣ. ಎದುರಾಳಿಗಳನ್ನು ಯಾರೂ ಹಗುರವಾಗಿ ಪರಿಗಣಿಸಬಾರದು. ಯಾಕೆಂದರೆ ತಾಮ್ರದ ತಂತಿಯೊಂದು ಖುಲ್ಲಾ ಬಿದ್ದಿರುವಾಗ ಅದೇನೂ ಅಲ್ಲ ಆದರೆ ಅದು ಯಾವಾಗ ವಿದ್ಯುತ್ ತಂತಿಯಾಗಿ ಮಾರ್ಪಾಡು ಹೊಡುತ್ತದೆಯೋ ಆಗ ಅದರ ಶಕ್ತಿಯೇ ಬೇರೆ. ಆಗಲೂ ಅದು ತಂತಿಯೇ ಆದರೆ ಅದರಲ್ಲಿ ವಿದ್ಯುತ್ ಪ್ರವಹಿಸುವ ಶಕ್ತಿ ಇದೆ ಎನ್ನುವ ಸತ್ಯವನ್ನು ಮರೆತು ವ್ಯವಹರಿಸಿದರೆ ಅಪಾಯ ಖಾತ್ರಿ. ಮೋದಿಯ ಮೋಡಿ ಈ ಮಟ್ಟಕ್ಕೆ ಕೆಲಸ ಮಾಡುತ್ತದೆ ಎನ್ನುವುದನ್ನು ಯಾರೂ ಊಹಿಸಿರಲಿಲ್ಲ. ಮೋದಿ ಪರವಾಗಿ ಯಾವ ಬಗೆಯ ಅಲೆ ಸೃಷ್ಟಿಯಾಗಿತ್ತೆಂದರೆ ಆತನ ಬಗ್ಗೆ ಮಾಡಲಾಗುವ ಆರೋಪಗಳು ಕೂಡಾ ಪಕ್ಷವನ್ನು ಇನ್ನಷ್ಟು ಬಲಗೊಳಿಸಿದಂತಾಯೊತು.

ಕಾಂಗ್ರೆಸ್ ನ ಪ್ರಚಾರ ತಂತ್ರವೇ ನೆಟ್ಟಗಿರಲಿಲ್ಲ. ಅದು ಎಂಥಾ ಹಳೆಯ ರಾಜಕೀಯ ಪಕ್ಷ.. ಏನು ಕಥೆ.. ಆದರೆ ಪ್ರಚಾರದಲ್ಲಿ ಮಾತ್ರ ಕೇವಲ ರಾಹುಲನನ್ನೇ ಅವಲಂಬಿಸಬೇಕಾಗಿ ಬಂದುದು ದೊಡ್ಡ ವಿಪರ್ಯಾಸ. ಅಷ್ಟಕ್ಕೂ ಈ ದೇಶದ ಮತದಾರನಿಗೆ ಕುಟುಂಬ ರಾಜಕಾರಣ ಅಲರ್ಜಿಯಾಗಿದೆ. Manmohan-Sonia-Rahulನೆಹರು, ಇಂದಿರಾ ಸಂದರ್ಭದಲ್ಲಿಯ ಮತದಾರನಿಗೂ ರಾಜೀವ ಮತ್ತು ರಾಹುಲ ಸಂದರ್ಭದ ಮತದಾರನಿಗೂ ಸಾಕಷ್ಟು ಅಂತರಗಳಿವೆ. ಅವರ ಮನ:ಸ್ಥಿತಿಯಲ್ಲೂ ವ್ಯಪರೀತ್ಯಗಳಿವೆ. ಅವರನ್ನು ಅರಿಯುವ ಅವರ ಪಲ್ಸ್ ರೀಡ್ ಮಾಡುವ ತಂತ್ರಗಾರಿಕೆ ಕಾಂಗ್ರೆಸ್ ಪಕ್ಷದಿಂದ ಸಾಧ್ಯವಾಗಲಿಲ್ಲ. ಪಕ್ಷದ ಆಂತರಿಕ ಕಚ್ಚಾಟ ಮತ್ತು ಎಲ್ಲದಕ್ಕೂ ಹೈ ಕಮಾಂಡ್ ಎನ್ನುವ ಧೋರಣೆಯೂ ಅದೇಕೋ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಒಂದು ಪ್ಲಸ್ ಪಾಯಿಂಟ್ ಆಗಿ ಕಾಣುವುದಿಲ್ಲ. ಮತದಾರನೊಂದಿಗೆ ಒಂದು ಬಗೆಯ ಮಾನಸಿಕ ಸಂಬಂಧವನ್ನು ಸ್ಥಾಪಿಸುವಲ್ಲಿ, ಹಾಗೆ ಸಾಧ್ಯವಾಗಿಸುವಲ್ಲಿ ಕಾಂಗ್ರೆಸ್ ಸೋತಿರುವದರಿಂದಾಗಿಯೇ ಬಿ.ಜೆ.ಪಿ. ಯಂಥಾ ರಾಜಕೀಯ ಪಕ್ಷಗಳು ಅದನ್ನು ಸರಿಯಾಗಿ ಬಳಸಿಕೊಂಡವು. ಯಾವುದಕ್ಕೂ ಒಂದು ತಾಲೀಮು ಅಂತ ಬೇಕಾಗುತ್ತದೆ. ಇದು ತಂತ್ರಗಾರಿಕೆಯನ್ನೂ ಒಳಗೊಂಡಿರುತ್ತದೆ. ಇದೊಂಥರಾ ಕುಸ್ತಿಯೊಳಗಿನ ಡಾವ್ ಪೇಚ್ ಇದ್ದಂಗೆ ಇದನ್ನು ಮಾಡದೇ ಅತಿಯಾದ ಆತ್ಮ ವಿಶ್ವಾಸದಿಂದ ಮಾತ್ರ ಗೆಲ್ಲಬಲ್ಲೆವು ಎನ್ನುವುದು ಅಸಮಂಜಸವಾಗುತ್ತದೆ.

ಇನ್ನು ಕರ್ನಾಟಕದ ವಿಷಯವಾಗಿ ಹೇಳುವುದಾದರೆ ಇಲ್ಲಿಯೂ ಅದೇ ತಂತ್ರಗಾರಿಕೆಯ ಕೊರತೆಯ ಹಿನ್ನೆಲೆಯಲ್ಲಿಯೇ ಕಾಂಗ್ರೆಸ್ ಕಡಿಮೆ ಸೀಟುಗಳನ್ನು ಗೆಲ್ಲುವಂತಾಯಿತು. ಚುನಾವಣೆಯ ಸಂದರ್ಭದಲ್ಲಿ ಅನೇಕ ಒಳಹೊಡೆತಗಳು ಮೇಳೈಸಿಕೊಳ್ಳುತ್ತವೆ. ಅಲ್ಲಿ ಜಾತಿ, ಧರ್ಮ, ಹಣ, ಅಧಿಕಾರ ಮುಂತಾದವುಗಳು ಕೆಲಸ ಮಾಡುತ್ತವೆ. ಕೆಲ ಬಾರಿ ನಾ ನಿನಗಾದರೆ ನೀ ನನಗೆ ಎನ್ನುವ ತತ್ವದ ಅಡಿಯಲ್ಲೂ ಪ್ರಚಾರ, ಮತದಾನ ನಡೆಯುತ್ತವೆ. ಈ ಬಗೆಯ ಅನೇಕ ತುಂಡು ತುಂಡಾದ ಒಳ ಸಂಗತಿಗಳು ಪಕ್ಷದ ಆಂತರಿಕ ಬಲವನ್ನು ಕುಗ್ಗಿಸುವ ಜೊತೆಗೆ ಅದರ ಗೆಲುವಿನ ಸಾಧ್ಯತೆಯನ್ನು ಕಡಿಮೆ ಮಾಡುತ್ತವೆ. ಹೇಗೆ ಕೇಂದ್ರದಲ್ಲಿ ಅಲ್ಲಿಯ ವರಿಷ್ಟರು ಅದನ್ನು ತಿಳಿದೂ ತಿಳಿಯದಂತೆ ಮೌನವಹಿಸಿದರೋ ರಾಜ್ಯದಲ್ಲೂ ಅದೇ ಸ್ಥಿತಿ ನಿರ್ಮಾಣವಾಗಿ ಆಮೇಲೆ ನಮ್ಮವರೇ ನಮಗೆ ಮುಳುವಾಗಿ ಸೋತೆವು ಎನ್ನುವ ಮಾತುಗಳು ಮಾತ್ರ ಉಳಿದವು. ರಾಜ್ಯದ ಕಾಂಗ್ರೆಸ್ ಕೈಯಲ್ಲಿ ಇನ್ನೂ ನಾಲ್ಕು ವರ್ಷಗಳಿವೆ. ಅಗಾಧವಾದುದನ್ನು ಮಾಡಿ ತೋರಿಸಲು ಅವಕಾಶಗಳಿವೆ. ಅತ್ಯಂತ ಚುರುಕುತನದಿಂದ ಆಡಳಿತ ಯಂತ್ರ ಕಾರ್ಯನಿರ್ವಹಿಸಬೇಕಾಗಿದೆ. ಎಲ್ಲ ಬಗೆಯ ವಿರೋಧಗಳ ನಡುವೆಯೂ ಕರ್ನಾಟಕದ ಕಾಂಗ್ರೆಸ್ ಸರಕಾರವನ್ನು ಮೆಚ್ಚುವಂಥಾ ಪರಿಸರವನ್ನು ನಿರ್ಮಾಣ ಮಾಡಬೇಕಿದೆ.

ಮೋದಿ ತನ್ನದೇಯಾದ ವಿಶಿಷ್ಟ ವ್ಯಕ್ತಿತ್ವದ ಮೂಲಕ ಒಂದು ಶಕ್ತಿಯಾಗಿ ಈ ಲೋಕಸಭಾ ಚುನಾವಣೆಯಲ್ಲಿ ಹೊರ ಹೊಮ್ಮಿದ್ದು ನಿಜ. narender_modi_rssಆದರೆ ಈಗಲೂ ಮೋದಿಯ ಬಗ್ಗೆ ಅಲ್ಪಸಂಖ್ಯಾತರಲ್ಲಿ ಒಂದು ಭಯ ಇದ್ದೇ ಇದೆ. ಆದರೆ ಮೋದಿ ಪ್ರಧಾನಿ ಅಬ್ಯರ್ಥಿ. ಹಾಗಾಗಿ ಅಂಥಾ ಯಾವ ಭಯಗಳನ್ನೂ.. ದಿಗಿಲುಗಳನ್ನು ಆರಂಭದ ಎರಡು ಮೂರು ವರ್ಷಗಳ ಮಟ್ಟಿಗೆ ಮಾತ್ರ ಹುಟ್ಟು ಹಾಕುವುದಿಲ್ಲ ಎನ್ನುವುದು ಅನೇಕ ರಾಜಕೀಯ ವಿಶ್ಲೇಷಕರ ಅಂಬೋಣ. ಮೋದಿಯ ಎಲ್ಲ ಬಗೆಯ ಎಡವಟ್ಟುಗಳು ಆ ಐದನೆಯ ವರ್ಷದ ಅವಧಿಯಲ್ಲಿ ಅನಾವರಣಗೊಳ್ಳಬಹುದೇನೋ..? ಆದರೆ ಅಲ್ಲಿಯವರೆಗೂ ಮೋದಿಯೇ ಪ್ರಧಾನಿಯಾಗಿ ಉಳಿಯುತ್ತಾರೆ ಎನ್ನುವ ವಿಶ್ವಾಸ ಇಡುವ ರಾಜಕೀಯ ಪರಿಸರವಾದರೂ ನಮ್ಮಲ್ಲಿದೆಯೇ..? ಎನ್ನುವ ಪ್ರಶ್ನೆಯೂ ಕಾಡುತ್ತದೆ. ಅಭಿವೃದ್ಧಿಯನ್ನೇ ಮೂಲ ಮಂತ್ರವನ್ನಾಗಿ ಹೇಳುತ್ತಾ ಅಧಿಕಾರಕ್ಕೆ ಬಂದ ಮೋದಿ ಕಾರ್ಪೋರೇಟ್ ವಲಯದವರ ಪ್ರೀತಿ ಪಾತ್ರರಾಗುವದಂತೂ ಇದ್ದೇ ಇದೆ. ಇದರ ಜೊತೆಗೆ ಈ ದೇಶದ ಆರ್ಥಿಕ ಸ್ಥಿತಿಗಳ ಸುಧಾರಣೆಯಲ್ಲಿ, ಅಂತರರಾಷ್ಟ್ರೀಯ ಬಾಂಧವ್ಯಗಳ ಸುಧಾರಣೆಯಲ್ಲಿಯೂ ನಿರ್ಣಾಯಕ ಪಾತ್ರವನ್ನು ಮೋದಿ ಆಡಬೇಕಿದೆ. ಇಷ್ಟು ಬೃಹತ್ ಪ್ರಮಾಣದ ಬೆಂಬಲದೊಂದಿಗೆ ಆಯ್ಕೆಯಾದ ಬಿ.ಜೆ.ಪಿ. ಮುಂದೆ ಏನಾದರೂ ಮಹತ್ತರವಾದುದನ್ನು ಈ ದೇಶ ನೆನಪಿಡುವ ಹಾಗೆ ಮಾಡಲೇಬೇಕು ಎನ್ನುವ ಇರಾದೆಯನ್ನು ಹೊಂದಿರುವದಂತೂ ಹೌದು. ಮೋದಿ ಮೊದಲ ದಿನವೇ ತಾನು ಆಯ್ಕೆಯಾದ ವಾರಣಾಸಿಗೆ ತೆರಳಿ ಗಂಗಾ ನದಿಯ ಶುದ್ದೀಕರಣ ಮಾಡುವ ಬಗ್ಗೆ ಮಾತನಾಡಿರುವುದಿದೆ. ಅಂಥಾ ಕಾರ್ಯಗಳು ಪಕ್ಷಾತೀತವಾಗಿ ಮನ್ನಣೆ ಗಳಿಸುವಂಥವುಗಳು. ಈ ಬಗೆಯ ಮತ್ತು ಇದಕ್ಕಿಂತಲೂ ಜನಪರವಾದ ಇಂಥಾ ಹತ್ತಾರು ಕೆಲಸಕಾರ್ಯಗಳನ್ನು ಮಾಡಿ ತೋರಿಸಬೇಕಿದೆ. ಅದೇ ವೇಳೆಗೆ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ನಂಬುಗೆಯಿರುವ ಈ ದೇಶದ ಜನರ ಮನಸಿಗೆ ನೋವಾಗುವ ಯಾವುದೇ ಕೆಲಸಗಳನ್ನು ಮೋದಿ ಮಾಡದಿರಲಿ. ಭಾರತ ಸರ್ವ ಜನಾಂಗಗಳ ಶಾಂತಿಯ ತೋಟ. ಎಲ್ಲ ಜಾತಿ, ಧರ್ಮ, ಜನಾಂಗ ಗಳು ನೆಮ್ಮದಿಯಿಂದ ಬದುಕುವ ಪರಿಸರವನ್ನು ನಿರ್ಮಿಸಿಕೊಡುವ ಮೂಲಕ ಮೋದಿ ಒಂದು ಹೊಸ ಇಮೇಜಿನೊಂದಿಗೆ ಬಿಂಬಿತವಾಗಲಿ. ಕಾಂಗ್ರೆಸ್ ಇನ್ನು ಮುಂದಾದರೂ ಪಕ್ಷವನ್ನು ಅರ್ಥವತ್ತಾಗಿ ರೂಪಿಸಲಿ. ಯಾವುದೇ ಪಕ್ಷವಿರಲಿ ಮತದಾರನಿಂದ ದೂರ ಸರಿದಷ್ಟು ಸೊರಗುವುದು ಗ್ಯಾರಂಟಿ.

3 thoughts on “ಮತದಾರನಿಂದ ದೂರ ಸರಿದಷ್ಟು ಪಕ್ಷ ಸೊರಗುತ್ತದೆ

  1. Ananda Prasad

    ಮೋದಿಯ ಗೆಲುವಿನ ಹಿಂದೆ ಗುಜರಾತ್ ಮಾದರಿಯ ಅಭಿವೃದ್ಧಿ ಕೆಲಸ ಮಾಡಿ ತೋರಿಸಿದ ಉದಾಹರಣೆ ಕೆಲಸ ಮಾಡುವುದರ ಜೊತೆ ಭಾವನಾತ್ಮಕವಾಗಿ ಹಿಂದೂ ಮತಗಳ ಧ್ರುವೀಕರಣ ಮಾಡಿದ್ದು ಕೆಲಸ ಮಾಡಿದೆ. ಹಿಂದೂಗಳ ಮತಗಳ ಧ್ರುವೀಕರಣ ಎರಡು ರೀತಿಯಲ್ಲಿ ಮಾಡಲಾಗುತ್ತದೆ ಒಂದು ಬೇರೊಂದು ಧರ್ಮದವರು ಹಿಂದೂ ಧರ್ಮಕ್ಕೆ ಗಂಡಾಂತರ ಎಂದು ಪ್ರಚಾರ ಮಾಡಿ ಹಿಂದೂಗಳಲ್ಲಿ ಒಗ್ಗಟ್ಟು ಮೂಡಿಸುವುದು. ಎರಡನೆಯದು ಹಿಂದೂಗಳ ಸಾಂಸ್ಕೃತಿಕ ಹಾಗೂ ಧಾರ್ಮಿಕ ಭಾವನೆಗಳನ್ನು ಬಡಿದೆಬ್ಬಿಸಿ ಒಗ್ಗಟ್ಟು ಮೂಡಿಸುವುದು. ಮೊದಲನೆಯ ವಿಧಾನದಲ್ಲಿ ಹಿಂಸೆಯನ್ನು ಕೂಡ ಪ್ರಧಾನ ಅಸ್ತ್ರವಾಗಿ ಬಳಸಲಾಗುತ್ತದೆ. ಎರಡನೆಯ ವಿಧಾನದಲ್ಲಿ ಹಿಂಸೆಯನ್ನು ಬಳಸದೆಯೂ ಕಾರ್ಯ ಸಾಧಿಸಬಹುದು. ಎರಡನೆಯ ವಿಧಾನದಲ್ಲಿ ಬಳಸಬಹುದಾದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಭಾವನೆಗಳನ್ನು ಬಡಿದೆಬ್ಬಿಸುವ ಅಂಶಗಳಲ್ಲಿ ಗೋಪೂಜೆ, ಗೋಹತ್ಯಾ ನಿಷೇಧ, ಗೋಸಂರಕ್ಷಣೆ, ವರಮಹಾಲಕ್ಷ್ಮಿ ಪೂಜೆ, ಗಂಗಾ ಆರತಿ, ಗಂಗಾ ನದಿ ಶುದ್ಧೀಕರಣ, ದೇಶವನ್ನು ತಾಯಿಯೆಂದು ಬಿಂಬಿಸುವುದು, ಸಂಸತ್ತನ್ನು ದೇವಾಲಯವೆಂದು ಬಿಂಬಿಸುವುದು ಇತ್ಯಾದಿಗಳು ಬರುತ್ತವೆ. ಇವೆಲ್ಲ ಜನರನ್ನು ಸುಲಭದಲ್ಲಿ ತಮ್ಮೆಡೆಗೆ ಆಕರ್ಷಿಸಿ ಹೆಚ್ಚಿನ ಶ್ರಮವಿಲ್ಲದೆ ಜನರನ್ನು ಸಂಘಟಿಸಲು ನೆರವಾಗುತ್ತವೆ. ಮೋದಿಯ ನೇತೃತ್ವದಲ್ಲಿ ಸಂಘ ಪರಿವಾರ ಮಾಡಿದ್ದು ಇದನ್ನೇ. ಕಾಂಗ್ರೆಸ್ ಪಕ್ಷದಲ್ಲಿ ಮೋದಿಯಂತೆ ಪ್ರತಿಫಲಾಪೇಕ್ಷೆ ಇಲ್ಲದೆ ಸಿದ್ಧಾಂತಕ್ಕಾಗಿ ಹಾಗೂ ದೇಶಕ್ಕಾಗಿ ದುಡಿಯುವ ನಾಯಕರು ಇಲ್ಲ. ಕಾಂಗ್ರೆಸ್ ಮೊದಲಿನಿಂದಲೂ ಜಾತಿ ಆಧಾರಿತ ಹಾಗೂ ಅಲ್ಪಸಂಖ್ಯಾತರ ವೋಟಿನ ಮೇಲೆ ಅವಲಂಬಿಸಿ ರಾಜಕೀಯ ಮಾಡುತ್ತಾ ಬಂದಿದ್ದು ಅಭಿವೃದ್ಧಿಯ ರಾಜಕೀಯ ಮಾಡಿ ತೋರಿಸುವಲ್ಲಿ ವಿಫಲವಾಗಿದೆ. ಇನ್ನು ಮುಂದೆ ಇಂಥ ರಾಜಕೀಯ ನಡೆಯುವುದಿಲ್ಲ. ಬರುವ ಲೋಕಸಭಾ ಚುನಾವಣೆಗಳಲ್ಲಿ ಮೋದಿ ಮೂರನೇ ಎರಡು ಬಹುಮತ ಪಡೆಯುವ ಕಡೆಗೆ ಮುನ್ನಡೆದರೂ ಅಚ್ಚರಿ ಇಲ್ಲ.

    Reply
    1. avani

      ಕಾಂಗ್ರೆಸ್ ಸೋಲಿಗೆ ಕಾರಣಗಳು.
      ಶತಮಾನ ಕಂಡ ರಾಷ್ಟ್ರೀಯ ಪಕ್ಷದ ದಯನೀಯ ಸೋಲಿಗೆ ಕಾರಣಗಳನ್ನು ಹುಡುಕುತ್ತಾ ಹೋದಾಗ ಎಲ್ಲರೂ ಮೋದಿಯತ್ತ ಬೆರಳು ತೋರಿಸಿ ಅವರ ಅಲೆಯಲ್ಲಿ ಕಾಂಗ್ರೆಸ್ ಕೊಚ್ಚಿ ಹೋಯಿತೆನ್ನುತ್ತಿದ್ದಾರೆ. ಆದರೆ ಇದು ಒಂದಂಶ ನಿಜವಾದರೂ ಇದೇ ಅಷ್ಟೇ ನಿಜವೆ?? ಅಥವಾ ಇನ್ನೂ ಏನಾದರೂ ಕಾರಣಗಳಿವೆಯೇ ಎಂದು ಕಾಂಗ್ರೆಸ್ ಪ್ರೀತಿಸುವವರೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯಕತೆ ಇಂದಿದೆ.
      ಮೋದಿಯವರನ್ನು ಮಾಧ್ಯಮ ಅತಿಯಾಗಿ ಹೊಗಳಿದ್ದರಿಂದ ಅವರು ಆರಿಸಿಬಂದರೆಂದು ಕೆಲವರ ವಾದ. ಯಾವ ಮಾಧ್ಯಮದಲ್ಲಿ ಮೋದಿಯನ್ನು ಹೊಗಳಲಾಯಿತು??? ಮೋದಿಯನ್ನು ತೆಗಳುವದನ್ನೇ ಕಾಯಕ ಮಾಡಿಕೊಂಡ ಹತ್ತಾರು ಕನ್ನಡ ಬ್ಲಾಗುಗಳಿವೆ. ಇಲ್ಲಿ ಮೊದಿಯನ್ನು ಹೊಗಳುವ ಲೇಖನಗಳಿರಲಿ ಕಮೆಂಟುಗಳನ್ನು ಕೂಡ ಹಾಕುವದಿಲ್ಲ. ಕನ್ನಡ ಪತ್ರಿಕೆಗಳಲ್ಲಿ ಎರಡನ್ನು ಬಿಟ್ಟರೆ ಎಲ್ಲವೂ ಮೋದಿ ತೆಗಳಲು ಮೀಸಲು. ಇಂಗ್ಲೀಷ ಪತ್ರಿಕೆಗಳಂತೂ ಮೊದಲೇ ಕಾಂಗ್ರೆಸ್‌ದ ಮುಖವಾಣಿಗಳು. ಇನ್ನು ಟೀವಿಗಳಲ್ಲಿ ಸರ್ಕಾರಿ ಚಾನಲ್‌ಗಳ ಕೈ ಕಾಲುಗಳನ್ನು ಆಳುವ ಪಕ್ಷ ಕಟ್ಟಿಬಿಟ್ಟಿರುತ್ತದೆ. ಇನ್ನುಳಿದ ಟೀವಿ ಚಾನಲ್‌ಗಳಲ್ಲಿ ಮೋದಿಯವರನ್ನು ತೆಗಳುವದೇ ನಿತ್ಯ ಕಾಯಕವಾಗಿತ್ತು. ಮೋದಿ ವಿರುದ್ಧ ನಾಡಿನ ಹೆಸರಾಂತ ಜನರೇ ಪ್ರಚಾರ ಮಾಡಿದರು ಹೀಗಿರುವಾಗ ಮೋದಿಗೆ ಮಾಧ್ಯಮ ಬೆಂಬಲಿಸಿದವು ಎನ್ನುವದು ಎಷ್ಟು ಸರಿ.??? ಎಲ್ಲರೂ ಈ ರೀತಿ ಮೋದಿ ವಿರುದ್ಧ ಮುಗಿಬಿದ್ದದ್ದರಿಂದಲೇ ಮೋದಿಗೆ ಜನರ ಅನುಕಂಪದ ಅಲೆ ಸಿಕ್ಕಿತೇ ???? ಇದು ಕೇವಲ ನನ್ನ ಅನಿಸಿಕೆ.
      ಆಡಳಿತದುದ್ದಕ್ಕೂ ಕಾಂಗ್ರೆಸ್‌ನ ತಪ್ಪುಗಳು ವಿಪರೀತವಾಗಿವೆ. ಉದಾಹರಣೆಗೆ ಸೈನಿಕರ ತಲೆ ಕಡಿದಾಗ ಯಾರೂ ಕ್ಷಾತ್ರ ತೇಜಸ್ಸುಳ್ಳ ಹೇಳಿಕೆಗಳನ್ನಾದರೂ ಕೊಡಲಿಲ್ಲ. ಸೈನಿಕರು ಹತರಾದಾಗ ಯಾವ ಮಂತ್ರಿ ಮಹೋದಯರೂ ಶವ ಸಂಸ್ಕಾರಗಳಿಗೆ ಹೋಗಲಿಲ್ಲ. [ಉನ್ನತ ಖಾತೆಯ ಮಂತ್ರಿವರ್ಯರು] ಇನ್ನು ಪ್ರಧಾನಿಗಳಾದರೋ ರಿಮೋಟ ಕಂಟ್ರೋಲಿನಲ್ಲಿ ಇರುವವರು. ರಿಮೋಟ ಹಿಡಿದವರು ಸೈನಿಕರ ಸಾವಿಗಿಂತ ಹೆಚ್ಚಾಗಿ ಭಯೋತ್ಪಾದಕರು ಸತ್ತಾಗ ಕಣ್ಣೀರು ಸುರಿಸುವವರು. ಇನ್ನು ದಲಿತ ಹಿಂದುಳಿದ ವರ್ಗ ಕಡೆಗಣಿಸಿ ಅತಿಯಾಗಿ ಮುಸಲ್ಮಾನರ ತುಷ್ಟೀಕರಣವು ಸಹಜವಾಗಿ ಕಾಂಗ್ರೆಸ್‌ನ ಕಟ್ಟಾ ಭಕ್ತರಿಗೆ ನೋವುಂಟುಮಾಡಿತು. ಮುಸ್ಲೀಂ ಮಕ್ಕಳಿಗೆ ಮ್ಯಾಟ್ರಿಕ್ ಪೂರ್ವದ ವಿದ್ಯಾರ್ಥಿ ವೇತನ ೧೦೦೦ ರೂಗಳಾದರೆ ದಲಿತ ಮಕ್ಕಳಿಗೆ ಕೇವಲ೩೫೦ ರೂಗಳು ಹೀಗೆ ಎಲ್ಲ ರಾಜ್ಯಗಳಲ್ಲೂ ಮುಸ್ಲೀಂ ತುಷ್ಟೀಕರಣ ವಾಕರಿಸುವಷ್ಟು ಅತಿಯಾದಾಗ ಮತದಾರನಿಗೆ ವಿಷೇಶವಾಗಿ ಕಾಂಗ್ರೆಸ್‌ ಭಕ್ತ ಮತದಾರರಿಗೆ ಭ್ರಮ ನಿರಸನವಾಯಿತು. ಇಂದಿನ ಮೀಡಿಯಾ ಸಾಮಾಜಿಕ ತಾಣಗಳಲ್ಲಿ ಗಾಂಧಿ ನೆಹರು ಮಾಡಿದ ತುಷ್ಟೀಕರಣಗಳು ತಪ್ಪುಗಳು, ನಮ್ಮ ಪಠ್ಯಪುಸ್ತಕಗಳಲ್ಲಿ ಇತಿಹಾಸವನ್ನು ತಿರುಚಿದ್ದು ಇವೆಲ್ಲ ಬಹಳ ಹರಿದಾಡಿ [ಮೊದಲು ಇವೆಲ್ಲ ಸಾಧ್ಯವಿರಲಿಲ್ಲ] ಯುವ ಜನತೆಯನ್ನು ಹಿಂದುತ್ವದತ್ತ ಸೆಳೆಯಲು ಸಹಾಯಕವಾಗಿದೆ. ಇದೂ ಸಹ ಮೋದಿ ಗೆಲುವಿಗೆ ಕಾರಣವೆನ್ನಬಹುದು. ಇನ್ನು ಕಾಂಗ್ರೆಸ್‌ನ ವಂಶಾಡಳಿತ ೦.೫ ದಷ್ಟು ಹಾಗೂ ಕಾಂಗ್ರೆಸ್‌ನ ಬ್ರಷ್ಟಾಚಾರ ದುರ್ಬಲ ಪ್ರಧಾನಿ ಹಣದುಬ್ಬರ ಇವು ಕೇವಲ ಕೆಲವು ಪ್ರತಿಶತ ಕಾಂಗ್ರೆಸ್ ಸೋಲಿಗೆ ಕಾರಣಗಳಾದರೆ ಹೆಚ್ಚಿನ ಕಾರಣ ಅದು ಬಹು ಸಂಖ್ಯಾತರೂ ಸತ್ತರೂ ಕೇಳದೇ ಅಲ್ಪಸಂಖ್ಯಾತರಿಗೆ ಉಗುರಿಗೆ ಗಾಯವಾದರೂ ಲಕ್ಷಗಟ್ಟಲೇ ಪರಿಹಾರ ಘೋಷಿಸಿದ್ದು ವಾಕರಿಸುವಷ್ಟು ಸೌಲಭ್ಯಗಳನ್ನು ನೀಡಿದ್ದು ಇವೆಲ್ಲ ಕಾರಣಗಳೆನ್ನಬಹುದು.

      Reply
  2. Godbole

    “ಈಗಲೂ ಮೋದಿಯ ಬಗ್ಗೆ ಅಲ್ಪಸಂಖ್ಯಾತರಲ್ಲಿ ಒಂದು ಭಯ ಇದ್ದೇ ಇದೆ. ”

    ಹಾಗಂತ ಕಾಂಗ್ರೆಸ್ ಕೃಪಾಪೋಷಿತ ಮೀಡಿಯಾ ಹೇಳುತ್ತಾ ಬಂದಿದೆ. ಆದರೆ ವಾಸ್ತವದಲ್ಲಿ ಅಲ್ಪಸಂಖ್ಯಾತರು ಮೋದಿಯ ಬಗ್ಗೆ ಭಯವಿಟ್ಟು ಕೊಂಡಿದ್ದಾರೋ ಇಲ್ಲವೋ ಅಂತ ನೀವೇನು ಸರ್ವೇ ಮಾಡಿದ್ದೀರಾ? ಮೋದಿ ಬಗ್ಗೆ ಹೆದರಲು ಆತನೇನು ಒಸಮಾ ಬಿನ್ ಲಾಡೆನ್ ಅಥವಾ ಅಜ್ಮಲ್ ಕಸಬ್ಬಾ? ನನ್ನ ಪರಿಚಯದ ಅಲ್ಪಸಂಖ್ಯಾತರಿಗೆ ಮೋದಿಯ ಭಯ ಇಲ್ಲ. ಅವರಿಗಿರುವ ಭಯ ಅವರದೇ ಮತದ ಧಾರ್ಮಿಕ ನಾಯಕರದ್ದು. ಮುಲ್ಲಾಗಳ ಹಿಡಿತದಲ್ಲಿ ಸಿಕ್ಕಿ ಸಾಮಾನ್ಯ ಮುಸಲ್ಮಾನರು ನರಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೇ ವೋಟು ಹಾಕಬೇಕು ಅಂತ ಮುಲ್ಲಾಗಳು ಫತ್ವಾ ನೀಡುತ್ತಾರೆ. ಫತ್ವಾ ವಿರುದ್ಧ ಹೋಗಲು ಸಾಮಾನ್ಯ ಮುಸಲ್ಮಾನರಿಗೆ ಭಯ. ಕಾಂಗ್ರೆಸೇತರ ಪಕ್ಷಗಳಿಗೆ ವೋಟು ಹಾಕಿದರೆ ಮುಲ್ಲಾಗಳ ದ್ವೇಷ ಕಟ್ಟಿಕೊಳ್ಳಬೇಕಾಗಿ ಬರುತ್ತದೆ. ಮುಲ್ಲಾಗಳ ಹಿಡಿತದಿಂದ ಬಿಡುಗಡೆ ಮಾಡಿದರೆ ಮುಸಲ್ಮಾನರು ರಾಜಕೀಯವಾಗಿ ಇನ್ನಷ್ಟು ಸಕ್ರಿಯವಾಗುವುದರಲ್ಲಿ ಸಂಶಯವಿಲ್ಲ. ಆದರೆ ಮುಲ್ಲಾಗಳಿಗೆ ಇದು ಬೇಡವಾಗಿದೆ. ಮೋದಿ ಗುಮ್ಮ ತೋರಿಸಿ ಸಾಮಾನ್ಯರನ್ನು ಬೆದರಿಸುತ್ತಾರೆ. ನೀವು ಕಾಂಗ್ರೆಸ್ ಕೃಪಾಪೋಷಿತ ಮೀಡಿಯಾ ಹೇಳಿದ್ದನ್ನೇ ಪರಮ ಸತ್ಯ ಎಂದು ನಂಬಿದ್ದಷ್ಟೇ ಅಲ್ಲ ಮಿಕ್ಕವರೂ ನಂಬಬೇಕು ಅಂತ ಹಠ ಮಾಡುತ್ತೀರಿ!

    Reply

Leave a Reply

Your email address will not be published. Required fields are marked *