ಏಳು ಎದ್ದೇಳು – ಜಾಗೃತನಾಗು ಭಾರತೀಯ

– ಮಹಾದೇವ ಹಡಪದ

ನಾಲ್ಕು ಸಾದಾ ಆರ್ಡಿನರಿ ಬಸ್ಸುಗಳು ಓಡಾಡುವ ಮಾರ್ಗದಲ್ಲಿ ಎರಡು ತಡೆರಹಿತ ಏಸಿ ಬಸ್ಸುಗಳನ್ನು ಬಿಟ್ಟರೆ… ನಾಲ್ಕು ಬಸ್ಸಿನಲ್ಲಿ ಕುರಿ ನುಗ್ಗಿದಂತೆ ನುಗ್ಗುವ ಗದ್ದಲ ಕಮ್ಮಿಯಾಗುತ್ತದೆ. ಹಣಬಲವುಳ್ಳವರು ಬಸ್ಸಿನಲ್ಲಿ ಓಡಾಡುವುದನ್ನು ಘನತೆಗೆ ತಕ್ಕಂತೆ ಆಯ್ಕೆ ಮಾಡಿಕೊಳ್ಳುತ್ತಾರೆ. ಆಗ ನಾಲ್ಕು ಬಸ್ಸಿನಲ್ಲಿ ಒಂದು ಬಸ್ಸನ್ನು ರದ್ದುಮಾಡಿ ಮೂರು ಆರ್ಡಿನರಿ ಮತ್ತು ಮೂರು ತಡೆರಹಿತ ಸಕಲ ಸೌಕರ್ಯಗಳುಳ್ಳ ಬಸ್ಸನ್ನು ಬಿಡುತ್ತಾರೆ. ಮಧ್ಯಮವರ್ಗದ ಆಯ್ಕೆ ಬರಬರುತ್ತ ಸಕಲ ಸೌಕರ್ಯದ ಕಡೆಗೆ ಹೋಗುತ್ತದೆ. ಮೂರಿದ್ದ ಆರ್ಡಿನರಿ ಎರಡಾಗುತ್ತವೆ. ಒಂದಾಗುತ್ತದೆ. ಕೊನೆಗೊಂದು ದಿನ ಆರ್ಡಿನರಿ ಬದುಕು ಇಲ್ಲವಾಗುತ್ತದೆ. ಆಗ ನಾವು ಅಭಿವೃದ್ಧಿ ಹೊಂದಿದ್ದೇವೆಂದು ಗುಜರಾತಿನವರಂತೆ ಜಗತ್ತನ್ನು ನಂಬಿಸಲು ಸುಲಭವಾಗುತ್ತದೆ.

ಗಾಣದೆತ್ತಿನಂತೆ ಸತತ ದುಡಿಯುವವನ ಬದುಕಿನ ಬಗ್ಗೆ ಯೋಚಿಸುವುದಿರಲಿ ಈ ಅಭಿವೃದ್ಧಿ ಮಂತ್ರದಲ್ಲಿ ಅಂಥವನೊಬ್ಬ ನಮ್ಮದೆ ಭಾರತದಲ್ಲಿ ಬದುಕುತ್ತಿದ್ದಾನೆಂದು ಹೇಳಲು ನಾಚಿಕೊಳ್ಳುವಂತ ನವಸಮಾಜ ನಿರ್ಮಾಣಗೊಳ್ಳುತ್ತಲಿರುವುದನ್ನು ಕಣ್ಣುಳ್ಳವರು ಕಾಣುತಾ, ಕಿವಿಯುಳ್ಳವರು ಕೇಳುತಾ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮೋದಿ ಅವರ ಭಜನೆಯಲ್ಲಿಯೂ ಏಕತಾನತೆಯ ಕೆಟ್ಟ ಪದವೊಂದು ನಾಲಿಗೆಯ ತುದಿಯಲ್ಲಿ ಮಾತ್ರ ಪುಟಿದೇಳುತ್ತಿದೆ. ಅಂಥ ಪದವನ್ನು ಮಾತುಮಾತಿಗೂ ಅಭಿವೃದ್ಧಿ ಎಂಬ ಹೆಸರಿಂದ ಗುರುತಿಸಲಾಗುತ್ತಿದೆ. ಹೀಗೆ ಮಾತಾಡುವವರನ್ನು ಆತುರಗೇಡಿಗಳು, ಯಡಬಿಡಂಗಿಗಳು ಎಂದು ಹೀಗಳೆಯುವದು ಸುಲಭದ ಮಾತಾಯಿತು. ಅವರಿಗೆ ಅರ್ಥವಾಗದ ಭಾಷೆ ಒಂದಿದೆ.. ಅದು ಸಂಬಂಜಾ ಅಂತಾರಲ್ಲ ಅದು. ಅಂಥವರಿಗೆ ಮಾನವೀಯ ಕೌಶಲಗಳು ಸಾಯಲಿ ಮೌಲ್ಯಗಳು ಕೂಡ ಅರ್ಥವಾಗುವುದಿಲ್ಲ. ಹಿರಿಯರನ್ನು ಗೌರವಿಸುವುದರಲ್ಲಿ ಅವರ ಸಂಬಂಧದ ಎಳೆಗಳು ತಪ್ಪಿವೆ. ಅನಂತಮೂರ್ತಿಯವರ ವಿಷಯದಲ್ಲಿ ನೇರವಾಗಿ ಹೇಳಬೇಕೆಂದರೆ ಅವರ ಮನೆಗೆ ಫೋನು ಮಾಡಿದವರಲ್ಲಿ ಹೆಚ್ಚಾಗಿ ಬ್ರಾಹ್ಮಣ ಹುಡುಗರು.. ಅವರು ಹೆಚ್ಚು ವ್ಯಾಕುಲಗೊಂಡು ಈ ವಿಷಯವನ್ನು ಹೇಳಿದ್ದಾರೆಂಬುದರಲ್ಲಿ ಎರಡು ಮಾತಿಲ್ಲ. ಕಳ್ಳುಬಳ್ಳಿಯ ಮಾತಿರಲಿ ಹಿರಿತನಕ್ಕೆ ಗೌರವವಿಲ್ಲದ ಇಂಡಿಯಾ ಎಂಬ ಈ ಮನೆತನದ ನಡೆ ಮುಂದೆ ಯಾವ ಮಾದರಿಯ ಅಭಿವೃದ್ಧಿಯನ್ನು ಹೊಂದೀತು ಎಂಬುದು ನಿಜಕ್ಕು ಆತಂಕ ಮೂಡಿಸುತ್ತದೆ. ಇದು ಹಿರಿತನವನ್ನು ಸಂಪೂರ್ಣ ನಿರ್ಲಕ್ಷಿಸಿರುವ ಮತ್ತು ಜೀವನಾನುಭವವನ್ನು ಹಸಿಹಸಿಯಾಗಿ ಗ್ರಹಿಸಿ ‘ಆನೆ ನಡೆದದ್ದೇ ಮಾರ್ಗ’ ಎಂಬ ಮಾದರಿಯಲ್ಲಿ ರೂಪುಗೊಂಡ ಸರಕಾರ. ಬಿಳಿ ಆನೆಯ ಬಗ್ಗೆ ಚಕಾರವೆತ್ತದಂತೆ ನೋಡಿಕೊಳ್ಳಲು ಈ ಸಣ್ಣಪುಟ್ಟ ಲುಂಪೇನಗಳು ಹೆಚ್ಚು ಆಕ್ಟಿವ್ ಆಗಿರುವುದನ್ನು ನೋಡಿದರೆ ಸರ್ವಾಧಿಕಾರ ಧೋರಣೆಗಳು ಸ್ಪಷ್ಟಗೊಳ್ಳುತ್ತವೆ. ಇಡೀ ಅಜಂಡಾದಲ್ಲಿ ಇತಿಹಾಸ ಮರುಕಳಿಸುವ ಹುಚ್ಚುತನವೇ ತುಂಬಿಕೊಂಡಿರುವುದರಿಂದ ಮಾನವತ್ವ ಬಯಸುವವರು ಸಾಕಷ್ಟು ನೋವುಗಳನ್ನು ಸಹಿಸಿ ಹೋರಾಡುವ ಕೆಚ್ಚು ಬೆಳೆಸಿಕೊಳ್ಳಬೇಕಾಗಿದೆ.

ನಮಗರಿವಿಲ್ಲದಂತೆ ಗೆದ್ದೆತ್ತಿನ ಬಾಲದ ಕಡೆಗೆ ನಮ್ಮ ನೋಟ ಹೊರಳುತ್ತದೆ. ಈ ಗೆಲುವನ್ನು ಪ್ರಜಾಪ್ರಭುತ್ವದ ನೆರಳಲ್ಲಿ ಎಷ್ಟು ಸುಲಭವಾಗಿ ನಾವು ಒಪ್ಪಿಕೊಂಡಿದ್ದೇವೆ ಅನ್ನಿಸುತ್ತದೆ. ಆದರೆ ಭಾರತದ ನೆರಳುಗಳಾದ ಅಹಿಂಸೆ ಮತ್ತು ಸ್ವಾಭಿಮಾನದ ಹೋರಾಟಗಳು ಈ ಗೆಲುವಿನ ಹಿಂದೆ ಯಾಕೆ ಕೆಲಸ ಮಾಡಲಿಲ್ಲ ಎಂಬುದು ನಿಜವಾಗಿಯೂ ದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ. ಭಂಡತನ ಹೀಗೆ ಗೆಲ್ಲುತ್ತದೆ ಎಂದಾದರೆ ಪ್ರಜಾಪ್ರಭುತ್ವವನ್ನು ಬಯಸಿದ ಈ ದೇಶದ ಅಸಂಖ್ಯ ಗಣಗಳ ವಿಚಾರಶಕ್ತಿಗಳು ಇಷ್ಟು ಬೇಗ ಕಳೆಗುಂದಿದವೇ..? ಅಥವಾ ಅವು ಭಾರತದ ಮುಗ್ಧ ಜಗತ್ತನ್ನು ಸರಿಯಾಗಿ ತಲುಪಲಿಲ್ಲವೇ..! ಬಾಬಾಸಾಹೇಬರು ಮತ್ತು ಗಾಂಧೀಜಿಯವರಿಗೆ ಈ ದೇಶದ ಆಧ್ಯಾತ್ಮಿಕ ಶಕ್ತಿಯ ಮೇಲೆ ಅದಮ್ಯ ನಂಬಿಕೆಯಿತ್ತು. ಒಬ್ಬರು ತನಗಲ್ಲದ ಧರ್ಮವನ್ನು ಧಿಕ್ಕರಿಸಿ ಸ್ವಾಭಿಮಾನಕ್ಕಾಗಿ ಈ ನೆಲದ ಮತ್ತೊಂದು ಪಥವನ್ನು ಆಯ್ದುಕೊಂಡರೆ ಮತ್ತೊಬ್ಬರು ಈ ನೆಲದ ಕರುಣೆಯ ಕ್ಷೀಣ ಸ್ವರದಲ್ಲಿ ಸ್ವಾತಂತ್ರ್ಯದ ಶಕ್ತಿ ತುಂಬಿದರು. ಈ ಎರಡೂ ಪಂಥಗಳನ್ನು ಕಸಿ ಮಾಡಿದ ಅನೇಕರು ಸಮಾಜವಾದದ ಕನಸು ಕಂಡರು… ವಿಚಾರಧಾರೆಗಳು ಎಷ್ಟೇ ಕವಲೊಡೆದರೂ ಭಾರತದ ಆತ್ಮವನ್ನು ಹುಡುಕುವ ಗುರಿವೊಂದೇ ಆಗಿತ್ತು. ಆದರೆ ಈಗ ಆಧ್ಯಾತ್ಮ ಮತ್ತು ಆತ್ಮಗಳು ಸ್ವರ್ಣಾಭಿವೃದ್ಧಿ ಕನಸಲ್ಲಿ ಪ್ರವಾಹಕ್ಕೆ ಸಿಕ್ಕಿ ದಡ ಸೇರದಂತೆ ಆ ದಡ ಈ ದಡಕ್ಕೆ ತಾಗಿಕೊಂಡು ಓಡುತ್ತಿವೆ. ಈಗ ನಿಜಕ್ಕೂ ಭಾರತ ಜಾಗೃತವಾಗಿರಬೇಕಾಗಿದೆ.

***

ರಾಮಾಯಣದ ರಾಮನಿಗೂ, ಲಂಕೆಯ ರಾವಣನಿಗೂ ಅಭಿವೃದ್ಧಿಯ ಹುಚ್ಚಿತ್ತು. ಸಂಬಂಧಗಳನ್ನು ಪೋಷಿಸಿಕೊಂಡು, ಹಿರಿ-ಕಿರಿಯ ಮುನಿಗಳ ಸಲಹೆಯನ್ನು ಪಡೆದುಕೊಂಡು, ನೆರೆಕೆರೆಯವರ ಮಾತುಗಳನ್ನು ಲೆಖ್ಖಕ್ಕೆ ತೆಗೆದುಕೊಂಡು, ರಾಜ್ಯದ ಸಮಸ್ತ ಜನತೆಯ ಆಶಯಗಳಿಗೆ ಪೂರಕವಾಗಿ ಆಡಳಿತ ನಡೆಸಲು ಹವಣಿಸಿದನೊಬ್ಬ ರಾಜ. ಇನ್ನೊಬ್ಬ ಇಡೀ ಲಂಕೆಯನ್ನು ಸ್ವರ್ಣಮಯ ಮಾಡುವ ಹಂಬಲ ಹೊತ್ತು, ಹಠದಿಂದ ಶಿವನನ್ನು ಗೆದ್ದು, ತನ್ನ ಮನಸ್ಸಿನ ಇಚ್ಛೆಗನುಸಾರವಾಗಿ ತನ್ನ ಕುಟುಂಬದವರು, ಪ್ರಜೆಗಳು ಆಜ್ಞಾವರ್ತಿಗಳಾಗಿ ಜೀವಿಸಬೇಕೆಂದು ಹಂಬಲಿಸಿದ. ನಿಜವಾಗಿಯೂ ಸರ್ವಾಧಿಕಾರಿ ಧೋರಣೆ ಹೆಚ್ಚು ಕಾಣುವುದು ರಾವಣನಲ್ಲಿಯೇ ಅನ್ನಬೇಕು. ಯಾಕೆಂದರೆ ಅವನು ಅದಾಗಲೇ ಲಂಕೆಯನ್ನು ಸ್ವರ್ಣನಗರಿಯನ್ನಾಗಿ ರೂಪಿಸಿದ್ದ. ಈ ಪುರಾಣದ ಅವಲೋಕನದಲ್ಲಿ ನಿಜವಾಗಿಯೂ ಮೋದಿ ಯಾರು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಗೆದ್ದ ಖುಷಿಯಲ್ಲಿದ್ದ ರಾವಣನಿಗೆ ಪೃಥ್ವಿಯ ಮೇಲಿನ ಸಮಸ್ತ ಜೀವಜಂತುಗಳು ಹೆದರಿಕೊಂಡೆ ಸಹಾಯ ಮಾಡುತ್ತಿದ್ದವು. ಸೀತೆಯ ಸುಳಿವನ್ನು ಹುಡುಕುತ್ತ ವಿರಹದಿಂದ ಅಲೆಯುತ್ತಿದ್ದ ರಾಮನಿಗೆ, ರಾಮನ ಪ್ರೀತಿಯ ಕಂಗಳಿಗೆ ಆಸರಾದ ಜೀವಗಳು ಸಂಬಂಧದ ಎಳೆಯನ್ನು ಹೆಣೆದುಕೊಳ್ಳಲು ಹವಣಿಸುತ್ತಿದ್ದವು. ಅದಕ್ಕೆ ಏನೋ ಇಂದಿಗೂ ಪ್ರತಿಯೊಂದು ಊರಿನಲ್ಲಿಯೂ ರಾಮನ ಕುರುಹುಗಳನ್ನೂ, ರಾಮಾಯಣದ ಸ್ಥಳನಾಮೆಗಳನ್ನು ಜನಪದರು ಗುರುತಿಸುತ್ತಾರೆ.

ಸೋಗಲಾಡಿಗಳು ಯಾವತ್ತಿಗೂ ಜನಮಾನಸದ ಭಾವನೆಗಳ ಮೇಲೆ ಸವಾರಿ ಮಾಡುವ ಹಪಹಪಿ ಹೊಂದಿರುತ್ತಾರೆ. ಸ್ವರ್ಣಾಭಿವೃದ್ಧಿಯ ಗುರಿ ತೋರಿಸಿ ದೊಡ್ಡದೊಂದು ಕಂದಕ ಕೊರೆದು ಜನರ ಭಾವನೆಗಳನ್ನು ಅಲ್ಲಿ ಹೂತುಬಿಡುತ್ತಾರೆ. ಇಂಡಿಯಾದ ಹೊಸ ಪ್ರಧಾನಿ ನರೇಂದ್ರ ಮೋ(ಡಿ)ದಿಯವರನ್ನು ಹೆಚ್ಚೆಚ್ಚು ಜನರಿಗೆ ಪರಿಚಯಿಸಿದವರು ಅವರನ್ನು ಬೆತ್ತಲು ಮಾಡಲು ಹವಣಿಸಿದ ಅವನ ವಿರೋಧಿಗಳೇ ಎಂದು ಹಲಕೆಲವರು ಅಲ್ಲಿ-ಇಲ್ಲಿ ಬರೆದುಕೊಂಡಿದ್ದಾರೆ. ಒಬ್ಬ ವ್ಯಕ್ತಿಯ ಗುಣಾವಗುಣಗಳ ಅವಲೋಕನ ನಡೆಯುವುದು ಸತ್ತಮೇಲೆಯೇ ಎಂಬುದು ಇಂದಿಗೂ ಮುಗ್ಧಭಾರತ ನಂಬಿಕೊಂಡಿದೆ. ಅಂದರೆ ಅವನ ಅಂತಿಮ ಶವಯಾತ್ರೆಯಲ್ಲಿ ಜನ ಮಾತಾಡಿಕೊಳ್ಳುವುದರ ಆಧಾರದಲ್ಲಿ ಅವನು ಸ್ವರ್ಗ ಸೇರಿದನೋ ನರಕ ಸೇರಿದನೋ ಎಂಬುದನ್ನು ನಿರ್ಧರಿಸುತ್ತಾರೆ. ಈ ನೆಲದ ಅನೇಕ ಕನಸುಗಳು ಕಟ್ಟಿದ ಭಾರತ-ಹಿಂದುಸ್ಥಾನ,-ಇಂಡಿಯಾ ಎಂಬ ಅನೇಕ ಸಂಕೇತಾಕ್ಷರಗಳ ಹಿಂದಿನ ರೂಪುಗಳು ಒಡೆದು ಶವಯಾತ್ರೆ ಹೊರಟಂತೆ.. ಆ ಹೊರಟಿದ್ದ ಜನಸಮೂಹದಲ್ಲಿ ಮೋದಿಯವರ ಕೈಯಲ್ಲಿ ಬೆಂಕಿಯ ಮಡಕೆಯನ್ನು ಕೊಟ್ಟಂತೆ ಈ ಫಲಿತಾಂಶದ ಪರಿಣಾಮವಿತ್ತು. ಟಿವಿ ಪರದೆಯಲ್ಲಿ ವಾರಗಟ್ಟಲೆ ಚರ್ಚೆಗಳು ನಡೆದವು. ಆ ಚರ್ಚೆಗಳಲ್ಲಿ ಒಂದಂತೂ ಸಾಬೀತಾಗುತ್ತಿತ್ತು ಹೊಸ ಭಾರತದ ಹೆಸರು ಅಭಿವೃದ್ಧಿ ಎಂಬುದಾಗಿತ್ತು.

ಶಿಖರ ಸೂರ್ಯ ಕಾದಂಬರಿಯಲ್ಲಿ ಬರುವ ಕನಕಪುರಿ ರಾಜ್ಯದ ಲಕ್ಷಣಗಳನ್ನೇ ಈ ಮಾಧ್ಯಮದವರು ಚರ್ಚಿಸುತ್ತಿದ್ದಾರಲ್ಲ ಎನಿಸುತ್ತಿತ್ತು. ಚಿನ್ನದ ಬೇಟೆಯೊಂದೇ ಗುರಿಯಾದರೆ ಹರಿವ ನದಿ, ಉರಿವ ಸೂರ್ಯ, ಹಳ್ಳಕೊಳ್ಳ ಜಲಚರ, ಪ್ರಾಣಿ, ಪಕ್ಷಿಗಳು, ಗಿಡ, ಮರ, ತರು ಲತೆಗಳು ಸೇರಿದಂತೆ ಉಸುರುವ ಗಾಳಿ, ತಿನ್ನುವ ಅನ್ನ ಹೀಗೆ ಮನುಷ್ಯನ ಮೂಲಭೂತ ಬದುಕಿನ ಆಧಾರಗಳಿಗೆ ಕಿಂಚಿತ್ತೂ ಕಿಮ್ಮತ್ತಿಲ್ಲವಾದೀತು.

ಗೀತೆಯ ಶ್ಲೋಕವೊಂದಕ್ಕೆ ಮೋದಿಯ ಭಾವಚಿತ್ರವನ್ನು ಡಿಜ್ ಡಿಜೈನಾಗಿ ಪ್ರಭಾವಳಿಗಳ ಮೂಲಕ ಆಡಿಯೋ-ವೀಡಿಯೋ ಎಡಿಟ್ ಮಾಡಿ ಅಂತರ್ಜಾಲದಲ್ಲಿ ಹರಿದಾಡಿಸಿ, ಈ ಭಾರತದ ಸಮ್ಮೋಹನ ಶಕ್ತಿಯಾದ ಧರ್ಮಾಧಾರಿತ ರಾಜಕಾರಣ, ಕಪ್ಪುಹಣ, ರಾಷ್ಟ್ರೀಯತೆಯ ಹುಚ್ಚುಮೋಹ, ಅಭಿವೃದ್ಧಿಯೆಂಬ ಗುಮ್ಮನನ್ನು ಅಸ್ತ್ರವನ್ನಾಗಿಸಿ ತೀರ ಮುಗ್ಧರನ್ನು ಮರಳು ಮಾಡಿ ಗೆದ್ದಾಯ್ತು. ಆದರೆ ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ಎದುರು ಸಾಲಿನಲ್ಲಿ ಕೂಡಲು ಬೆರಳಣಿಕೆಯಷ್ಟು ಜನಗಳನ್ನು ಆರಿಸಿ ಕಳಿಸಿರುವುದರ ಮುನ್ಸೂಚನೆ ಯಾವ ರೂಪದಲ್ಲಿ ವಕ್ಕರಿಸುತ್ತದೆಯೋ ಹೇಳಲಾಗುತ್ತಿಲ್ಲ. ಫಲಿತಾಂಶದ ದಿನ ಮತ್ತು ಫಲಿತಾಂಶದ ನಂತರ ನನ್ನಂತವರು ಅನೇಕರು ಥಳಮಳಿಸಿದರು. ಆ ಆತಂಕವನ್ನು ವಿವರಿಸುವ ಗೋಜಿಗೆ ಹೋಗಲಾರದಷ್ಟು ಹೋಳಿ, ದೀಪಾವಳಿ ಹಬ್ಬಗಳು ದೇಶದ ಎಲ್ಲ ಹಿರಿ-ಕಿರಿ ಊರು ನಗರ ಪಟ್ಟಣಗಳಲ್ಲಿ ನಡೆಯುತ್ತಿತ್ತು. ಸುಳ್ಳು ಮತ್ತು ಸತ್ಯಗಳ ನಡುವಿನ ತೆಳುಗೆರೆ ಮಾಯವಾಗಿರುವುದನ್ನು ನೋಡಿದರೆ ಭಾರತ ಭಾರಿ ಬೆಲೆ ತೆರುತ್ತದೆಂಬುದನ್ನು ಊಹಿಸಬಹುದಾಗಿದೆ.

ಆಡಳಿತದ ಚುಕ್ಕಾಣಿ ಹಿಡಿದವ ಮೊದಲು ಸಿಬ್ಬಂದಿಗಳನ್ನು ತಮ್ಮ ಕೈ ಹಿಡಿತಕ್ಕೆ ತೆಗೆದುಕೊಳ್ಳುತ್ತಾನೆ. ಇಸ್ಪಿಟ್ ಆಟದಲ್ಲಿ ಮೊದಲು ಎಲೆಗಳನ್ನು ಜೋಡಿಸಿಕೊಳ್ಳುವ ರೀತಿಯ ಕೆಲಸವದು. ಆಟದ ಗಮ್ಮತ್ತಿರುವುದು ಎಲೆಗಳನ್ನು ಬಿಡುವ ಕ್ರಮದಲ್ಲಿಯೇ ಎಂದಾದರೆ ಆಟದಲ್ಲಿ ತೊಡಗಿರುವ ಪ್ರತಿಯೊಬ್ಬನೂ ಗೆಲ್ಲಲು ಹವಣಿಸುತ್ತಾನೆ. ಆದರೆ ಈಗ ಭಾರತದಲ್ಲಿ ಆಟದ ಎಲೆಗಳೆಲ್ಲವನ್ನು ಒಬ್ಬನ ಕೈಯಲ್ಲೇ ಕೊಟ್ಟು ಆಟವಾಡು ಎಂದರೆ..! ಆಡಲು ಅಲ್ಲೇನಿದೆ…?

ಮುಂದೊಂದು ದಿನ ಯಾವನೋ ಒಬ್ಬ ಸಾಹಿತಿ ಭಾರತದಲ್ಲಿ ಮೌಲ್ಯಗಳು ಸಾಯುತ್ತಿವೆ ಎಂದು ಭಾಷಣ ಮಾಡಿದನೆಂದು ಇಟ್ಟುಕೊಳ್ಳಿ… ಆಗ ಮಾಧ್ಯಮಗಳು ಅದನ್ನು “ಮೌಲ್ವಿಗಳು ಸಾಯುತ್ತಿದ್ದಾರೆ” ಎಂದು ವಿಷಯವನ್ನು ತಿರುಚಿ ಎರಡು ಕೋಮುಗಳ ನಡುವೆ ಅಂತರಾಷ್ಟ್ರೀಯ ಮಟ್ಟದಲ್ಲಿ ವಿನಾಕಾರಣ ವೈಷಮ್ಯ ಹುಟ್ಟುಹಾಕುತ್ತವೆ. ಅಂಥ ಮಾಧ್ಯಮಗಳೊಟ್ಟಿಗೆ ನಾವು ಬದುಕಬೇಕಾಗಿದೆ. ಬಾಯಿಗೆ ಬಂದದ್ದನ್ನು ವಿವೇಚಿಸುವ ಶಕ್ತಿಯಿಲ್ಲದ ನಿರೂಪಕರು ಜನಮಂದೆಯನ್ನು ಹುರುಪುಗೊಳಿಸಿ ಹುಚ್ಚೆಬ್ಬಿಸುತ್ತಿದ್ದಾರೆ. ಜನರ ಅಭಿಮತ ಇಂಗಿತಗಳನ್ನು ತಾವೇ ರೂಪಿಸುವ ಗುತ್ತಿಗೆ ಪಡೆದಂತೆ ಆಡುತ್ತಿರುವ ಟಿವಿ ಮಾಧ್ಯಮಗಳಿಗೆ ಯಾವ ಹಿಡನ್ ಅಜಂಡಾಗಳಿದ್ದಾವೋ.. ಗೊತ್ತಿಲ್ಲ ಆದರೆ ಖಾಊಜಾ ಎಂಬ ಮೂರಕ್ಷರದ ಮಂತ್ರ ಬಯಸುವ ಭಾರತವನ್ನು ಈ ಮಾಧ್ಯಮ ಸಲೀಸಾಗಿ ತಯಾರು ಮಾಡುತ್ತಿದೆ. ಹಾಗಾಗಿ ಈ ಸಲ ಅಭಿವೃದ್ಧಿಯ ಹುಚ್ಚುತನ ಗೆದ್ದಿದೆ ಎಂದು ಮಾತ್ರ ಹೇಳುವುದು ತಪ್ಪಾದೀತು. ಈ ಸಲ ಭಾರತದಲ್ಲಿ ನಿಜವಾಗಿ ಜಯ ಸಾಧಿಸಿದವರು ಬಂಡವಾಲಶಾಹಿಗಳು. ಅವರೊಂದಿಗೆ ನಮ್ಮ ನೆಲದ ಸ್ವಾಭಿಮಾನ, ಅಹಿಂಸೆ ಮತ್ತು ಸಮಾಜವಾದದಂತ ಸಾವಿರಾರು ತೊರೆಗಳು ಕೊಚ್ಚಿಹೋಗದಂತೆ ಎಚ್ಚರವಹಿಸಬೇಕಾಗಿದೆ.

3 thoughts on “ಏಳು ಎದ್ದೇಳು – ಜಾಗೃತನಾಗು ಭಾರತೀಯ

  1. MAHAMMED BARY

    ಲೇಖಕರು ಬರೆದ ಕೊನೆಯ ಈ ಸಾಲುಗಳು ಅತ್ಯಂತ ಪರಿಣಾಮಕಾರಿ .

    “ಮುಂದೊಂದು ದಿನ ಯಾವನೋ ಒಬ್ಬ ಸಾಹಿತಿ ಭಾರತದಲ್ಲಿ ಮೌಲ್ಯಗಳು ಸಾಯುತ್ತಿವೆ ಎಂದು ಭಾಷಣ ಮಾಡಿದನೆಂದು ಇಟ್ಟುಕೊಳ್ಳಿ… ಆಗ ಮಾಧ್ಯಮಗಳು ಅದನ್ನು “ಮೌಲ್ವಿಗಳು ಸಾಯುತ್ತಿದ್ದಾರೆ” ಎಂದು ವಿಷಯವನ್ನು ತಿರುಚಿ ಎರಡು ಕೋಮುಗಳ ನಡುವೆ ಅಂತರಾಷ್ಟ್ರೀಯ ಮಟ್ಟದಲ್ಲಿ ವಿನಾಕಾರಣ ವೈಷಮ್ಯ ಹುಟ್ಟುಹಾಕುತ್ತವೆ. ಅಂಥ ಮಾಧ್ಯಮಗಳೊಟ್ಟಿಗೆ ನಾವು ಬದುಕಬೇಕಾಗಿದೆ.”

    Reply
  2. Dilip

    ಯಾರು ಗೆದ್ದರೂ ಯಾರು ಸೋತರೂ ಲಾಭ ಬಂಡವಾಳಶಾಹಿಗಳಿಗೇ ಎನ್ನುವುದು ನೂರಕ್ಕೆ ನೂರು ಸತ್ಯ. ಅಭಿವೃದ್ಧಿಯ ಹೆಸರಲ್ಲಿ ಮೆರೆದ ರಾವಣನ ಕಥೆ ಕೇವಲ ಪುರಾಣ ಎನ್ನುವುದಾದರೆ, ಇತಿಹಾಸದ ಔರಂಗಾಜೇಬ್ ಜೀವನವನ್ನೊಮ್ಮೆ ಅವಲೋಕಿಸಬೇಕು. ತನ್ನವರನ್ನೆಲ್ಲ ಮೆಟ್ಟು ನಿಂತು, ಮತೀಯವಾದದ ಅಹಂನಲ್ಲಿ ಮೆರೆದು ಮಣ್ಣಾದ ದೃಷ್ಟಾಂತವನ್ನೊಮ್ಮೆ ನೆನೆಯಲೇಬೇಕು. ಇತಿಹಾಸದ ಪುಟಗಳಲ್ಲಿ ಆತ ಖಳನಾಯಕನಾಗಿ ಪಡೆಯುತ್ತಿರುವ ತಿರಸ್ಕರವನ್ನೂ ಗಮನಿಸಬೇಕು.

    Reply

Leave a Reply

Your email address will not be published. Required fields are marked *