Daily Archives: June 4, 2014

ಸೋಲುತ್ತಿರುವ ಮೌಲ್ಯಾಧಾರಿತ ಶಿಕ್ಷಣ ಮತ್ತು ದಾಪುಗಾಲಿಡುತ್ತಿರುವ ಕೇಸರೀಕರಣ


-ಅನುವಾದ: ಬಿ.ಶ್ರೀಪಾದ್ ಭಟ್


 

(1999 ರಿಂದ 2004ರವರೆಗೆ ಕೇಂದ್ರದಲ್ಲಿ ಬಿಜೆಪಿ ಹಾಗೂ ಇತರ ಮಿತ್ರ ಪಕ್ಷಗಳನ್ನು ಒಳಗೊಂಡ ಎನ್.ಡಿ.ಎ ಸರ್ಕಾರ ಆಸ್ತಿತ್ವದಲ್ಲಿದ್ದಾಗ ಆರೆಸಸ್ ಹಿನ್ನಲೆಯ ಮುರಳೀಮನೋಹರ ಜೋಷಿಯವರು ಶಿಕ್ಷಣ ಮಂತ್ರಿಯಾಗಿದ್ದರು. ಆಗ ಅವರು NCERT ಯ ಪಠ್ಯವನ್ನು ಕೇಸರೀಕರಣಗೊಳಿಸುವ ಯೋಜನೆಗೆ ಕೈ ಹಾಕಿದ್ದರು. ಆ ಸಂಧರ್ಭದಲ್ಲಿ ದೇಶದ ಪ್ರಗತಿಪರ ಚಿಂತಕರಿಂದ ವ್ಯಾಪಕ ಪ್ರತಿರೋಧ ವ್ಯಕ್ತವಾಯಿತು. ಆಗ 2002 ರಲ್ಲಿ ಎಸ್.ಎಫ್.ಐ ನ ಪತ್ರಿಕೆಯಾದ Student Struggle ನ ಸಂಪಾದಕರಾಗಿದ್ದ ಪ್ರಸೇನಜಿತ್ ಬೋಸ್ ಹಾಗೂ ಜ್ಯೋತಿರ್ಮಯೀ ಭಟ್ಟಾಚಾರ್ಯರೊಂದಿಗೆ ಪ್ರಭಾತ್ ಪಟ್ನಾಯಕ್ ನಡೆಸಿದ ಸಂದರ್ಶನ ಆಯ್ದ ಭಾಗಗಳು.

ಕಳೆದ 12 ವರ್ಷಗಳಲ್ಲಿ ನಾವು ನಮ್ಮ ಚಿಂತನೆಗಳಲ್ಲಿ, ಅರ್ಥಪೂರ್ಣ ಜೀವನ ಶೈಲಿಯಲ್ಲಿ ಸಾಧಾರಣ ಕ್ರಮದಿಂದ ಕೆಳಮುಖವಾಗಿ ಪಾತಾಳದೆಡೆಗೆ ಸಾಗುತ್ತಿದ್ದೇವೆ. ಈ ಕಾರಣಕ್ಕಾಗಿಯೇ ಈ ಸಂದರ್ಶನವನ್ನು ಪೂರ್ಣವಾಗಿ ಓದಿದಾಗ ಇದು ಪ್ರಕಟವಾಗಿ 12 ವರ್ಷಗಳ ನಂತರವೂ ಇಂದಿಗೂ ಇದರ ಪ್ರಸ್ತುತತೆಯ ಮಹತ್ವ ಮನವರಿಕೆಯಾಗುತ್ತದೆ. ಏಕೆಂದರೆ ಜನಪರ ಕಾಳಜಿಯುಳ್ಳ ಪ್ರಜ್ಞಾವಂತರು ಬೆಚ್ಚಿಬೀಳುವಂತೆ ಸನಾತನವಾದಿ ಚಿಂತನೆಯ, ಮತೀಯವಾದಿ ಆರೆಸಸ್ ದೈತ್ಯಶಕ್ತಿಯನ್ನು ಪಡೆದು ಕೇಂದ್ರದಲ್ಲಿ ಅಧಿಕಾರ ಕಬಳಿಸಿದೆ. ಅದರ ಸರ್ವೋಚ್ಚ ರಾಜಕೀಯ ನಾಯಕ ನರೇಂದ್ರ ಮೋದಿಯನ್ನು ಒಬ್ಬ ರಾಜನ ಮಾದರಿಯಲ್ಲಿ ಪಟ್ಟಾಭಿಷೇಕ ಮಾಡಿ ಅವರಿಗೆ ಒಂದು ಕಾಲದಲ್ಲಿ ಮಹಾರಾಜನಿಗೆ ಇದ್ದಂತಹ ಸಂಪೂರ್ಣ ಅಧಿಕಾರವನ್ನೂ ಕೊಡಲಾಗಿದೆ. ಇಂದು ಆರೆಸಸ್ ನ ಬಯಕೆಯಾದ ಸನಾತನ ಪರಂಪರೆಗೆ ಭಾರತವನ್ನು ಮರಳಿ ಕೊಂಡೊಯ್ಯುವ ‘ಚಿಂತನ ಗಂಗಾ’ದ commandments ಕನಸಿನಂತೆಯೇ ಸಾಕಾರಗೊಳ್ಳುತ್ತಿದೆ. ಆರೆಸಸ್ ನ ಮೊದಲ ಕೆಲಸವೇ ಶಿಕ್ಷಣ ಮತ್ತು ಸಂಸ್ಕೃತಿ ಇಲಾಖೆಯನ್ನು ಕಬ್ಜಾ ಮಾಡಿಕೊಂಡು ಈ ನಾಡಿನ ಬಹುಸಂಖ್ಯಾತರಾದ ಹಿಂದುಳಿದವರು ಮತ್ತು ದಲಿತರ ಮಿದುಳು ಮತ್ತು ಮನಸ್ಸನ್ನು ಬಲಿ ಪಡೆಯುವುದು. ಆರೆಸಸ್ ಗೆ ಅವಶ್ಯಕವಿರುವುದೇ ದಲಿತರ ಮತ್ತು ಹಿಂದುಳಿದವರ ಮಿದುಳು ಮತ್ತು ಮನಸ್ಸು. ಇದರ ಮೊದಲ ಹೆಜ್ಜೆಯೇ ಶಿಕ್ಷಣದಲ್ಲಿ ಕೇಸರೀಕರಣವನ್ನು ಜಾರಿಗೊಳಿಸುವುದು. ಇದರ ಕುರಿತಾಗಿ ಸುಮಾರು 12 ವರ್ಷಗಳ ಹಿಂದೆ ಪ್ರಸನಜಿತ್ ಬೋಸ್ ಹೇಳಿದ ಮಾತುಗಳು ಇಂದಿಗೂ ಪ್ರಸ್ತುತ. ಇಂದಿನ ಬಿಜೆಪಿ ಸರ್ಕಾರದಲ್ಲಿ 38ರ ಹರೆಯದ ನಟಿ ಸ್ಮೃತಿ ಇರಾನಿ ಶಿಕ್ಷಣ ಮಂತ್ರಿಯಾಗಿದ್ದಾರೆ. ಮೊಟ್ಟ ಮೊದಲ ಬಾರಿಗೆ ಯುವ ಮನಸ್ಸು ಶಿಕ್ಷಣ ಖಾತೆಯ ಮಂತ್ರಿಯಾಗಿರುವುದು ಮೇಲ್ನೋಟಕ್ಕೆ ಮಹತ್ವವಾಗಿಯೇ ಕಾಣುತ್ತದೆ. ಇಲ್ಲಿ ಸ್ಮೃತಿ ಇರಾನಿಯವರ ಶಿಕ್ಷಣದ ಕುರಿತಾದ ವಿವಾದ ಸಹ ಅರ್ಥಹೀನ. ಇಲ್ಲಿ ನಾವು ಅವರಿಗೆ ಬೆಂಬಲ ಕೊಡಲೇ ಬೇಕು. ಏಕೆಂದರೆ ಅತ್ಯುತ್ತಮ ಮಟ್ಟದ ಶಿಕ್ಷಣವನ್ನು ಪಡೆದಿದ್ದ ಕಪಿಲ್ ಸಿಬಲ್ ಇಲ್ಲಿ ಸಾಧಿಸಿದ್ದು ಶೂನ್ಯ. ಆದರೆ ಸ್ಮೃತಿ ಇರಾನಿಯಂತಹ ಅಂಬೆಗಾಲಿಡುತ್ತಿರುವ ರಾಜಕಾರಣಿ ಆರೆಸಸ್ ನಂತಹ ಮಾತೃ ಸಂಘಟನೆಯನ್ನು ಮೀರಿ ಈ ಮಾನವ ಸಂಪನ್ಮೂಲ ಇಲಾಖೆಯನ್ನು ಹೇಗೆ ನಿಭಾಯಿಸಬಲ್ಲರು? ಅದರೆ ಭವಿಷ್ಯದ ಕುರಿತಾದ ನಿರಾಶದಾಯಕ ಉತ್ತರ ನಮ್ಮನ್ನು ದಿಟ್ಟಿಸುತ್ತಿದೆ. ಈ ಸಂದರ್ಶನ ಅನೇಕ ಪ್ರಮುಖ ಅಂಶಗಳನ್ನು ಚರ್ಚಿಸುತ್ತದೆ – ಬಿ.ಶ್ರೀಪಾದ ಭಟ್)

ಪ್ರಶ್ನೆ : ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರ ಅಧಿಕಾರಕ್ಕೆ ಬಂದಾಗ ಈ ಸರ್ಕಾರವು ಶಿಕ್ಷಣದಲ್ಲಿ ಕೋಮುವಾದೀಕರಣ ಅಥವಾ ಕೇಸರೀಕರಣಕ್ಕೆ ಹೆಚ್ಚು ಒತ್ತು ಕೊಡುತ್ತಿರುವುದು ಹಾಗು ಮಾನವ ಸಂಪನ್ಮೂಲ ಇಲಾಖೆಯಲ್ಲಿ ಸಂಘಪರಿವಾರದ ಆಶಯವನ್ನುಳವರನ್ನು ನೇಮಿಸಿಕೊಳ್ಳುತ್ತಿರುವುದು ಇಂದು ಬಹು ಚರ್ಚಿತವಾಗುತ್ತಿದೆ. ಈ ಮೂಲಕ ಬಿಜೆಪಿಯು ತನ್ನ ಸಿದ್ಧಾಂತಗಳಿಗೆ ಅನುಕೂಲಕರವಾಗುವಂತೆ ಅಧಿಕಾರಿಗಳನ್ನು ನೇಮಿಸಿಕೊಳ್ಳುವುದರಲ್ಲಿಯೂ ಸಹ ಹಿಂದಿನ ಸರ್ಕಾರಗಳ ನೀತಿಯನ್ನು ಪಾಲಿಸುತ್ತಿದೆಯೇ ?
ಉತ್ತರ : ಇಲ್ಲ, ಈ ವಿಷಯದಲ್ಲಿ ಬಿಜೆಪಿಯು ತನ್ನ ಹಿಂದಿನ ಸರ್ಕಾರಗಳ ನೀತಿಯನ್ನು ಅಕಡೆಮಿಕ್ ಹಿನ್ನಲೆಯಲ್ಲಿ ಪಾಲಿಸುತ್ತಿಲ್ಲ. ಅಂದರೆ ಆಗಿನ ಸರ್ಕಾರಗಳಲ್ಲಿ ಅವರ ಪರವಾಗಿರುವ Smriti Iraniಶಿಕ್ಷಣತಜ್ಞರು ಆಯ್ಕೆಗೊಳ್ಳುತ್ತಿದ್ದರೂ ಸಹ ಅವರು ಇತಿಹಾಸದ ವಿಷಯದಲ್ಲಿ ಅನುಭವಸ್ಥರಾಗಿದ್ದರು. ಪ್ರತಿಭಾವಂತರಾಗಿದ್ದರು.ಮುಖ್ಯವಾಗಿ ಸೆಕ್ಯುಲರ್ ನೀತಿಯ ಪ್ರತಿಪಾದಕರಾಗಿದ್ದರು. ಈ ಪ್ರತಿಭಾವಂತ ಇತಿಹಾಸತಜ್ಞರು ಇತಿಹಾಸದ ವಿಷಯಗಳನ್ನು ಚರ್ಚಿಸುವಾಗ ತಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ಚರ್ಚೆಗಳ ಮೂಲಕ, ಸಂವಾದಗಳ ಮೂಲಕ ಬಗೆಹರಿಸಿಕೊಳ್ಳುತ್ತಿದ್ದರು. ಆಗ ಇಲ್ಲಿನ ಚರ್ಚೆಗೆ ಪೂರಕವಾಗಿ ಕುರುಹುಗಳನ್ನು, ಸಾಕ್ಷಿಗಳನ್ನು ಪ್ರಮಾಣೀಕರಿಸುವುದು ಅತ್ಯಗತ್ಯವಾಗಿತ್ತು. ಆದರೆ ಈಗ ಏನಾಗಿದೆ ಎಂದರೆ ಈಗಿನ ಬಿಜೆಪಿ ಮುಂಚೂಣಿಯ ಸರ್ಕಾರದ ಒಂದು ಸಿದ್ಧಾಂತವನ್ನು, ತತ್ವಗಳನ್ನು ಬಹಳ ಕಾಲದಿಂದ ಅನುಮೋದಿಸುತ್ತಿದ್ದ ಇತಿಹಾಸಕಾರರನ್ನು ಶಿಕ್ಷಣದ ಪಠ್ಯಪುಸ್ತಕ ರಚನೆಯ ಸಮಿತಿಗೆ ಆರಿಸಲಾಗಿದೆ. ಇಲ್ಲಿ ಚರ್ಚೆಗೆ ಅಥವಾ ಸಂವಾದಕ್ಕೆ ಆವಕಾಶವೇ ಇಲ್ಲ.  ಈಗ ಇರುವುದು ಏಕಮಂತ್ರ ಅದು ಅಖಂಡ ಹಿಂದುತ್ವದ ಮಂತ್ರ. ಇದು ಈಗಿನ ಕ್ರಮಕ್ಕೂ ಹಿಂದಿನ ಕ್ರಮಕ್ಕೂ ಇರುವ ಪ್ರಮುಖ ವ್ಯತ್ಯಾಸ.

ಪ್ರಶ್ನೆ: ಆದರೆ ಇಲ್ಲಿ ಶಿಕ್ಷಣ ಮಂತ್ರಿಗಳಾದ ಮುರಳೀ ಮನೋಹರ ಜೋಷಿಯವರ ಪ್ರಕಾರ ಎನ್.ಡಿ.ಎ ಸರ್ಕಾರದ ಈಗಿನ ಶಿಕ್ಷಣ ನೀತಿಯನ್ನು 1986ರಲ್ಲಿ ಅನುಮೋದನೆಗೊಂಡ ಶಿಕ್ಷಣ ನೀತಿಯಿಂದ ಯಾವುದೇ ರೀತಿಯಲ್ಲಿ ಬದಲಾಯಿಸಿಲ್ಲ. ಇದು ಎಷ್ಟು ನಿಜ ?
ಉತ್ತರ : ಇದು ಸಂಪೂರ್ಣ ಸುಳ್ಳು. ನೀವು ಗಮನಿಸಿದರೆ ಹಿಂದಿನ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳ ವ್ಯಾಸಂಗಕ್ರಮದಲ್ಲಿ ಧರ್ಮ ಎನ್ನುವ ಪದವನ್ನು ಎಲ್ಲಿಯೂ ಬಳಸಿಲ್ಲ. ಈಗಿನ ಶಿಕ್ಷಣ ಮಂತ್ರಿಗಳು ಮೌಲ್ಯಾಧಾರಿತ ಶಿಕ್ಷಣದ ಬಗ್ಗೆ ಮಾತನಾಡಿದಾಗ ಇದರ ಮೂಲ ಧರ್ಮವೆಂದು ಮತ್ತು ಎಲ್ಲಾ ಮೌಲ್ಯಗಳು ಧರ್ಮದೊಂದಿಗೆ ತಳಕು ಹಾಕಿಕೊಂಡಿರುತ್ತವೆಂದು ಹೇಳುತ್ತಾರೆ. ಇಲ್ಲಿ ಶಿಕ್ಷಣ ಮಂತ್ರಿಗಳಾದ ಮುರಳೀ ಮನೋಹರ ಜೋಷಿಯವರು ಎಲ್ಲಾ ಧರ್ಮಗಳ ಬಗೆಗೆ ಏನನ್ನು ಹೇಳುತ್ತಾರೆಂದು ಮುಖ್ಯವಲ್ಲ. ಬದಲಾಗಿ ಇಂದಿನ ಎಲ್ಲಾ ಪಠ್ಯಪುಸ್ತಕಗಳ ರಚನೆಯಲ್ಲಿ ಹಿಂದುತ್ವದ ಪುರೋಹಿತಶಾಹಿ ಸಂಸ್ಕೃತಿಯು ಮುಖ್ಯ ಮೂಲಭೂತ ಆಶಯವಾಗಿರುತ್ತದೆ ಎನ್ನುವುದು ಈಗಿನ ಚರ್ಚೆಗೆ ಗ್ರಾಸವಾಗಿರುವ ವಿವಾದಾತ್ಮಕ ಆಂಶ. ಯಾವ ಆಧಾರದ ಮೇಲೆ ಈ ನಿರ್ಣಯವನ್ನು ತೆಗೆದುಕೊಳ್ಳಲಾಯಿತು ಎನ್ನುವುದನ್ನು ನಾವು ಪ್ರಶ್ನಿಸಲೇಬೇಕು. ಮುರಳೀ ಮನೋಹರ ಜೋಷಿಯವರು ಸಂಸತ್ತಿನಲ್ಲಿ ಮಾತನಾಡುವಾಗ ಇಲ್ಲಿ ಧರ್ಮವೆಂದರೆ ಎಲ್ಲ ಧರ್ಮಗಳನ್ನು ಕುರಿತು ನಾನು ಹೇಳುತ್ತಿದ್ದೇನೆ ಎಂದರೂ ಸಹ ಇದು ಸಂವಿಧಾನದ ಮೂಲಭೂತ ಆಶಯಗಳಿಗೆ ವ್ಯತಿರಿಕ್ತವಾಗಿದೆ ಎನ್ನುವುದು ಮಾತ್ರ ನಿಜ.

ಪ್ರಶ್ನೆ: NCERT ಯ ಛೇರ್ಮನ್ ಆಗಿರುವ ಮಿ.ರಾಜಪುತ್ ಅವರು ನಾವು ಧರ್ಮದ ಆಧಾರದ ಮೇಲೆ ಶಿಕ್ಷಣವನ್ನು ರೂಪಿಸುತ್ತಿಲ್ಲ ಬದಲಾಗಿ ಧರ್ಮವನ್ನು ಒಂದು ಪಠ್ಯವನ್ನಾಗಿ ರೂಪಿಸುತ್ತಿದ್ದೇವೆ.ಏಕೆಂದರೆ ಇಂದು ಇದು ಅತ್ಯಗತ್ಯವಾಗಿದೆ ಎಂದು ಸ್ಪಷ್ಟೀಕರಿಸಿದ್ದಾರಲ್ಲ ….
ಉತ್ತರ: ಇಲ್ಲಿ ಧರ್ಮವನ್ನು ಇತಿಹಾಸದ ಅಥವಾ ಸಮಾಜ ಶಾಸ್ತ್ರದ ಅಥವಾ ಮಾನವ ಶಾಸ್ತ್ರದ ಭಾಗವಾಗಿ ಅಭ್ಯಾಸ ಮಾಡುವುದಕ್ಕೂ ಮತ್ತು ಮೌಲ್ಯಗಳನ್ನು ಧರ್ಮದ ಆಧಾರದ ಮೇಲೆ ಬೋಧಿಸುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಮುರಳೀ ಮನೋಹರ ಜೋಷಿಯವರು ಸಂಸತ್ತಿನಲ್ಲಿ ಮಾತನಾಡುತ್ತ ಮೌಲ್ಯಗಳನ್ನು ಧರ್ಮದ ಆಧಾರದ ಮೇಲೆಯೇ ಬೋಧಿಸಬೇಕೆಂದು ಎಂದು ಹೇಳಿದ್ದಾರೆ. ಆದರೆ ಧರ್ಮವು ಸಂಪೂರ್ಣವಾಗಿ ಖಾಸಗಿಯಾದದ್ದು. ಇಲ್ಲಿ ವಿದ್ಯಾರ್ಥಿಯು ಧರ್ಮದ ಆಧಾರದ ಮೇಲೆ ಮೌಲ್ಯಗಳನ್ನು ಕಲಿಯತೊಡಗಿದಾಗ ಸಂವಿಧಾನದ ಪ್ರಕಾರ ಶಿಕ್ಷಣದ ಮೂಲಭೂತ ಆಶಯವಾದ ಧರ್ಮನಿರಪೇಕ್ಷತೆಯ ಅರ್ಥವೇ ತಿರುಚಲ್ಪಡಲಾಗುತ್ತದೆ ಎಂದರ್ಥ.

ಪ್ರಶ್ನೆ: ಬಿಜೆಪಿ ಸರ್ಕಾರದ ನೇತೃತ್ವದಲ್ಲಿ ಕೋಮುವಾದವನ್ನು ಶಿಕ್ಷಣದಲ್ಲಿ ಯಾವ ಮಟ್ಟಕ್ಕೆ ಅಳವಡಿಸಬಹುದೆಂದು ನಿಮ್ಮ ಅಂದಾಜು?
ಉತ್ತರ : ನಾನು ಒಂದಂಶವನ್ನಂತೂ ಸ್ಪಷ್ಟಪಡಿಸುತ್ತೇನೆ. ಹಿಂದೂ ರಾಷ್ತ್ರದ ಸ್ಥಾಪನೆಯ ಒಂದಂಶದ ಕಾರ್ಯಕ್ರಮವೇ ಆರೆಸಸ್ ಮತ್ತು ಸಂಘಪರಿವಾರದ ಮೂಲಭೂತ ಅಜೆಂಡಾ. murli-manohar-joshiಇದಕ್ಕಾಗಿ ಶಿಕ್ಷಣವನ್ನು ಆದ್ಯತೆಯಾಗಿ ಬಳಸಿಕೊಳ್ಳುತ್ತಿವೆ. ಉದಾಹರಣೆಯಾಗಿ ಈ ಸಂಘ ಪರಿವಾರದ ಮೂಲಕ ಕಟ್ಟಲ್ಪಟ್ಟ ಇತಿಹಾಸವನ್ನು ಗಮನಿಸಿದರೆ ಇವರ ಪ್ರಕಾರ ಆರ್ಯನ್ನರು ಭಾರತದ ಮೂಲ ನಿವಾಸಿಗಳು ಹಾಗೂ ಆರ್ಯನ್ನರು ಇಲ್ಲಿಂದ ಜಗತ್ತಿನ ವಿವಿಧ ಭಾಗಗಳಿಗೆ ಹೊರಟರು ಎಂದು ಪದೇ ಪದೇ ಹೇಳುತ್ತಾರೆ. ಈ ಚಿಂತನಾ ಕ್ರಮವನ್ನು ಇಲ್ಲಿ ಇತರ ಸಂಸ್ಕೃತಿಗಳಿಗಿಂತಲೂ ಭಾರತ ಸಂಸ್ಕೃತಿಯೇ ಶ್ರೇಷ್ಠವೆನ್ನುವುದನ್ನು ತೋರಿಸಲು ಬಳಸಲಾಗುತ್ತದೆ. ಈ ಮೂಲಕ ಆರ್ಯ ಸಂಸ್ಕೃತಿಯನ್ನು ವೇದ ಸಂಸ್ಕೃತಿಯೊಂದಿಗೆ ಸಮೀಕರಿಸುತ್ತ ಇವೆರಡರ ಮಿಶ್ರಣವೇ ಹಿಂದುತ್ವದ ಶ್ರೇಷ್ಠತೆಯೆಂದು ಪ್ರತಿಪಾದಿಸುತ್ತಾರೆ. ಈ ಮೂಲಕ ವಿವಿಧ ಬುಡಕಟ್ಟುಗಳು ಮತ್ತು ವಿವಿಧ ಪಂಗಂಡಗಳು ಹಾಗೂ ಅವರ ವಿಭಿನ್ನ ಸಂಸ್ಕೃತಿಗಳ ಕೊಡುಕೊಳ್ಳುವಿಕೆಯ ಮೂಲಕ ಮಾನವ ನಾಗರೀಕತೆಯು ರೂಪಿತಗೊಂಡಿತು ಎನ್ನುವ ಸತ್ಯವನ್ನು ಸಂಪೂರ್ಣವಾಗಿ ಅಲ್ಲಗೆಳೆಯುತ್ತಾರೆ.ಈ ಏಕರೂಪಿ ಹಿಂದು ಸಂಸ್ಕೃತಿಯನ್ನು ವೈಭವೀಕರಿಸಲು ಸಾವಿರಾರು ವರ್ಷಗಳ ಇತಿಹಾಸವಿರುವ ಬಹುರೂಪಿ ಸಂಸ್ಕ್ರತಿಯನ್ನು ಬಲಿ ಕೊಡುತ್ತಾರೆ. ಈ ಬಲಪಂಥೀಯ ಇತಿಹಾಸಕಾರರು ಇಂಡಸ್ ವ್ಯಾಲಿ ನಾಗರೀಕತೆಯನ್ನು ಸರಸ್ವತಿ ನಾಗರೀಕತೆಯೆಂದು ಭಾಷಾಂತರಿಸುತ್ತಾರೆ. ಇದು ಇವರ ಅಜೆಂಡಾವನ್ನು ಬಯಲುಗೊಳಿಸುತ್ತದೆ.

ಪ್ರಶ್ನೆ : ನೀವು ಕೋಮುವಾದದ ಐಡಿಯಾಲಜಿಯು ಪ್ರಬಲಗೊಳ್ಳುತ್ತಿರುವುದನ್ನು ಇಂದಿನ ಜಾಗತೀಕರಣದ ಮುಕ್ತ ಆರ್ಥಿಕ ನೀತಿಯ ಹಿನ್ನೆಲೆಯಲ್ಲಿ ವಿವರಿಸುತ್ತೀರ?
ಉತ್ತರ : ಇದು ಬಹಳ ಸಂಕೀರ್ಣ ಪ್ರಶ್ನೆ. ಮೊದಲು ಹೇಳಬೇಕೆಂದರೆ ಈ ಜಾಗತೀಕರಣದ ಮುಕ್ತ ಆರ್ಥಿಕ ನೀತಿಯು ವ್ಯವಸ್ಥೆಯಲ್ಲಿ ಅಸಮಾನತೆಯನ್ನು ಸೃಷ್ಟಿಸುವುದರ ಮೂಲಕ ಪ್ರಜಾಪ್ರಭುತ್ವದೊಂದಿಗೆ ನಿರಂತರ ತಿಕ್ಕಾಟ ನಡೆಸುತ್ತಿರುತ್ತದೆ. ಇದು ಕೆಳವರ್ಗಗಳು ಮತ್ತು ಮಧ್ಯಮವರ್ಗ ಹಾಗೂ ಮೇಲ್ಮಧ್ಯಮವರ್ಗಗಳ ನಡುವೆ ಬಲು ದೊಡ್ಡ ಕಂದಕವನ್ನು ಸೃಷ್ಟಿಸುತ್ತದೆ. ಈ ತಿಕ್ಕಾಟ ಹಾಗೂ ಕಂದಕದ ಫಲವಾಗಿ ಉದಾಹರಣೆಗೆ ಯುಗೋಸ್ಲೋವಿಯಾದಲ್ಲಿ ಜನಾಂಗೀಯ ಘರ್ಷಣೆಗಳು ಉಂಟಾಯಿತು, ಶ್ರೀಲಂಕಾದಲ್ಲಿ ಧರ್ಮ ಹಾಗೂ ಭಾಷೆಯ ನಡುವೆ ಘರ್ಷಣೆ ಉಂಟಾಯಿತು ಹಾಗೂ ಇಂಡಿಯಾದಲ್ಲಿ ಕೋಮುವಾದಿ ಶಕ್ತಿಗಳು ಇದೇ ಪಾತ್ರವನ್ನು ವಹಿಸುತ್ತಿವೆ. ಜಾಗತೀಕರಣದ ವರ್ಗೀಕರಣದ ನೀತಿಯನ್ನು ಮತೀಯವಾದಿಗಳು ಇದನ್ನೇ ರಾಜಕೀಯ ವರ್ಗೀಕರಣಕ್ಕೆ, ಸಾಮಾಜಿಕ ಅಸಮಾನತೆಯನ್ನು ಹುಟ್ಟುಹಾಕಲು ಬಳಸಿಕೊಳ್ಳುತ್ತಾರೆ. ಇದನ್ನು ಸಾರಾಂಶ ರೂಪದಲ್ಲಿ ಹೇಳಬೇಕೆಂದರೆ ಈ ಜಾಗತೀಕರಣದ ಮುಕ್ತ ಆರ್ಥಿಕ ನೀತಿಯ ಫಲವಾಗಿ ಮಧ್ಯಮವರ್ಗ ಹಾಗೂ ಮೇಲ್ಮಧ್ಯಮವರ್ಗಗಳು ಏಕಪಕ್ಷೀಯವಾಗಿ ಶ್ರೀಮಂತರಾಗುತ್ತಾ ಹೋಗುತ್ತಾರೆ ಹಾಗೂ ಪರ್ಯಾಯವಾಗಿ ಫ್ಯಾಸಿಸ್ಟ ಶಕ್ತಿಗಳು ಸಹ ಬಲಗೊಳ್ಳುತ್ತ ಹೋಗುತ್ತವೆ. ಇದು ಅವನತಿಯ ಕಾಲದ ಪ್ರಾರಂಭವೆಂದೇ ಹೇಳಬಹುದು. ಈ ಅವನತಿಯು ಸಾಂಸ್ಕೃತಿಕವಾಗಿ ಬಹಳ ಪ್ರಬಲವಾಗಿರುತ್ತದೆ.

ಪ್ರಶ್ನೆ: ನೀವು ಶಿಕ್ಷಣವನ್ನು ಕೇಸರೀಕರಣ ಅಥವಾ ಕೋಮುವಾದೀಕರಣಗೊಳಿಸುವ ಪ್ರಕ್ರಿಯೆಯನ್ನು ಶಿಕ್ಷಣದ ವ್ಯಾಪಾರೀಕರಣ ಮತ್ತು ಖಾಸಗೀಕರಣದೊಂದಿಗೆ ಹೇಗೆ ಸಮೀಕರಿಸುತ್ತೀರಿ ?
ಉತ್ತರ: ಸರ್ವರಿಗೂ ಶಿಕ್ಷಣವೆನ್ನುವ ಮಂತ್ರವು ಸರ್ಕಾರದ ಮೂಲಭೂತ ಕರ್ತವ್ಯ ಹಾಗೂ ಪ್ರಥಮ ಆದ್ಯತೆಯಾಗಿರಬೇಕೆನ್ನುವ ಪ್ರಜಾಪ್ರಭುತ್ವದ ಆಶಯಗಳನ್ನೇ ಮೇಲಿನ Safranisationಎರಡೂ ಅಂಶಗಳು ಭಗ್ನಗೊಳಿಸುತ್ತವೆ. ಮೂಲಭೂತ ಶಿಕ್ಷಣ ಹಾಗೂ ಉಚಿತ ಮತ್ತು ಸಮಾನ ಶಿಕ್ಷಣ ನೀತಿಯು ಸಮಾಜದ ಎಲ್ಲಾ ಜಾತಿಯ ಬಡವರ್ಗಗಳಿಗೆ ಅಪಾರ ಅವಕಾಶಗಳನ್ನು ಕೊಡುತ್ತದೆ. ಈ ಅವಕಾಶಗಳನ್ನು ಬಳಸಿಕೊಂಡು ಬಡವರ್ಗಗಳು ವ್ಯವಸ್ಥೆಯಲ್ಲಿ ಮೇಲ್ಮುಖವಾಗಿ ಚಲಿಸಬಹುದು ಎನ್ನುವ ಸಮಾಜವಾದದ ತಿರುಳನ್ನೇ ಈ ಖಾಸಗೀಕರಣ ಮತ್ತು ವ್ಯಾಪಾರೀಕರಣವು ನಾಶಮಾಡುತ್ತದೆ. ಖಾಸಗೀಕರಣ ಮತ್ತು ವ್ಯಾಪಾರೀಕರಣವು ಹಳ್ಳಿಗಾಡಿನ ಬಡ ಮಕ್ಕಳು ಮುಂದಿನ ಹತ್ತು ವರ್ಷಗಳಲ್ಲಿ ಕಾಲೇಜು ವಿಧ್ಯಾಭ್ಯಾಸಕ್ಕಾಗಿ ಪಟ್ಟಣಗಳಿಗೆ ಹಾಗೂ ನಗರಗಳಿಗೆ ಬರುವ ಎಲ್ಲಾ ಸಾಧ್ಯತೆಗಳನ್ನೇ ಇಲ್ಲವಾಗಿಸುತ್ತದೆ.ಹಳ್ಳಿಯ ಮಕ್ಕಳು ಶಾಶ್ವತವಾಗಿ ಅನಕ್ಷರಸ್ತರಾಗಿಯೇ ಉಳಿದುಕೊಳ್ಳುತ್ತಾರೆ.  ಈ ಮೂಲಕ ಶಿಕ್ಷಣವು ಮೇಲ್ವರ್ಗಗಳ ಹಾಗೂ ಮೇಲ್ಜಾತಿಗಳ ಸ್ವತ್ತಾಗುತ್ತದೆ. ಇದನ್ನು ಸರ್ಕಾರವೇ ಮುಂದೆ ನಿಂತು ಮಾಡಿಸುತ್ತಿದೆ ಎಂದರೆ ದುರಂತದ ಆಳ ನಿಮಗೆ ಅರಿವಾಗಿರಬಹುದು. ಇಂತಹ ವಿಷಮ ಪರಿಸ್ಥಿತಿಯಲ್ಲಿ ಕೋಮುವಾದಿ ಶಕ್ತಿಗಳು ಶಿಕ್ಷಣರಂಗದಲ್ಲಿ ಪ್ರವೇಶಿಸಿದರೆ ದುರಂತದ ಮತ್ತೊಂದು ಮಗ್ಗುಲೇ ತೆರೆದುಕೊಳ್ಳುತ್ತದೆ. ಏಕೆಂದರೆ ಖಾಸಗೀಕರಣಗೊಂಡ ಶಿಕ್ಷಣ ವ್ಯವಸ್ಥೆಯಲ್ಲಿ ವ್ಯಾಸಂಗ ಕ್ರಮವನ್ನು,ಪಠ್ಯಪುಸ್ತಕಗಳನ್ನು ಬಲು ಸುಲಭವಾಗಿ ಕೇಸರೀಕರಣಗೊಳಿಸಬಹುದು. ಇಲ್ಲಿ ಯಾವುದೇ ಕಾನೂನು ಅಡ್ಡಿಪಡಿಸುವುದಿಲ್ಲ. ಆಗ ಈ ಸಂಘಪರಿವಾದ ಕೇಸರೀಕರಣದ ಪ್ರಕ್ರಿಯೆಯನ್ನು ಯಾರೂ ತಡೆಯಲಿಕ್ಕೆ ಸಾದ್ಯವಿಲ್ಲ. ಇದಕ್ಕೆ ಅತ್ಯುತ್ತಮ ಉದಾರಹರಣೆಯೆಂದರೆ ಆರೆಸಸ್ ನಡೆಸುತ್ತಿರುವ ಬಾಲ ಭಾರತಿ ವಿದ್ಯಾಲಯಗಳು, ಸರಸ್ವತಿ ಮಂದಿರಗಳು. ಇದೇ ಸಂದರ್ಭದಲ್ಲಿ ಶಿಕ್ಷಣದ ಉನ್ನತಿಗಾಗಿ ಬಿರ್ಲಾ-ಅಂಬಾನಿ ವರದಿ ನೀಡಿದ ಪ್ರಮುಖ ಅಂಶಗಳನ್ನು ನಾವು ಗಮನಿಸಬೇಕು. ಮೊದಲಿಗೆ ಸಹಜವಾಗಿಯೇ ಈ ವರದಿಯು ಶಿಕ್ಷಣದ ಖಾಸಗೀಕರಣವನ್ನು ಪ್ರಬಲವಾಗಿ ಸಮರ್ಥಿಸುತ್ತದೆ. ಎರಡನೇಯದಾಗಿ ಶಿಕ್ಷಣವನ್ನು ಒಂದು ಪ್ಯಾಕೇಜ್ ಆಗಿ ಹಾಗೂ ಒಂದು ಸರಕಾಗಿ ಪರಿಗಣಿಸುತ್ತದೆ. ಒಮ್ಮೆ ಶಿಕ್ಷಣವು ಸರಕಾಗಿ ಪರಿಗಣಿಸಿದ ಕೂಡಲೆ ಅಲ್ಲಿ ನೆಲ ಸಂಸ್ಕೃತಿಯ ಕ್ರಿಯಾಶೀಲತೆಯೇ ಕೊಲ್ಲಲ್ಪಡುತ್ತದೆ. ಆಗ ಶಿಕ್ಷಣಕ್ಕೆ ಕ್ರಿಯಾಶೀಲ, ಜೀವಂತ ಧ್ವನಿಗಳಾದ ಸಮಾಜ ಶಾಸ್ತ್ರಜ್ಞರಾಗಲೀ, ಇತಿಹಾಸಕಾರರಾಗಲೀ, ಪ್ರಾದೇಶೀಕ ಭಾಷೆಯ ಶಿಕ್ಷಕರಾಗಲಿ ಅವಶ್ಯಕತೆ ಇರುವುದಿಲ್ಲ. ಅಷ್ಟೇಕೆ ಮಾನವ ಶಾಸ್ತ್ರಜ್ಞರೂ ಸಹ ಇರುವುದಿಲ್ಲ. ಅಲ್ಲಿ ಕೇವಲ ತಂತ್ರಜ್ಞಾನ ಪರಿಣಿತರಿಗೆ ಸ್ಥಳವಿರುತ್ತದೆ. ಈ ಮೂಲಕ ತಂತಜ್ಞಾನರಿಂದ ತಂತ್ರಜ್ಞಾರಿಗಾಗಿ ಶಿಕ್ಷಣವು ಮಾರ್ಪಡುತ್ತದೆ. ತದನಂತರ ನಾವು ಉತ್ಪಾದಿಸುವುದು ಕೇವಲ ತಂತ್ರಜ್ಞಾನ ಜನಾಂಗವನ್ನ. ಕೋಮುವಾದಿ ಶಿಕ್ಷಣವೂ ಸಹ ಇದನ್ನೇ ಅತ್ಯುಗ್ರವಾಗಿ ಪ್ರತಿಪಾದಿಸುತ್ತದೆ. ಏಕೆಂದರೆ ಈ ಸಂಘ ಪರಿವಾರಕ್ಕೆ ಬೇಕಿರುವುದು ಹಿಂದೂ ಸಂಸ್ಕೃತಿಯನ್ನು ಸದಾ ಸಂರಕ್ಷಿಸುವ ತಂತ್ರಜ್ಞರು! ಕೋಮುವಾದಿ ಶಿಕ್ಷಣರಂಗದಲ್ಲಿ ಕಲಿತ ಈ ತಂತ್ರಜ್ಞರು ವಿನಯವಂತ ನಾಗರೀಕರಾಗಿಯೂ, ಸದಾ ಶಿಸ್ತನ್ನೇ ಉಸಿರಾಡುವ ಕೆಲಸಗಾರರಾಗಿಯೂ ತಯಾರಾಗುತ್ತಾರೆ. ಇಲ್ಲಿ ನಮಗರಿವಿಲ್ಲದಂತೆಯೇ ಫ್ಯಾಸಿಸಂ ಮೊಳಕೆಯೊಡೆಯುತ್ತದೆ. ಇದರಲ್ಲಿ ಅಂತರಾಷ್ಟ್ರೀಯ ಹಣಕಾಸಿನ ಕ್ಯಾಪಿಟಲಿಸ್ಟ್ ಗಳ ಹಿತಾಸಕ್ತಿಯೂ ಒಳಗೊಂಡಿರುತ್ತದೆ. ಇದಕ್ಕೆ ಇಂಡಿಯಾದಲ್ಲಿ ಜನ ಬೆಂಬಲವಿರುವ ರಾಜಕೀಯ ಪಕ್ಷವಾಗಿ ಬಿಜೆಪಿಯು ಒತ್ತಾಸೆಯಾಗಿ ನಿಲ್ಲುತ್ತದೆ.

ಪ್ರಶ್ನೆ: ಬಿಜೆಪಿಯೊಳಗೆ ಇರುವ ಸೌಮ್ಯವಾದಿಗಳು ಮತ್ತು ತೀವ್ರವಾದಿಗಳು ಗುಂಪುಗಳನ್ನು ನೀವು ಹೇಗೆ ಅರ್ಥೈಸುತ್ತೀರಿ ?
ಉತ್ತರ: ಬಿಜೆಪಿಯಲ್ಲಿ ಸೌಮ್ಯವಾದಿಗಳು ಮತ್ತು ತೀವ್ರವಾದಿಗಳು ನಡುವಿನ ಭಿನ್ನಮತವಿರುವುದು ಆರ್ಥಿಕ ಸುಧಾರಣೆಗಳ ಕುರಿತಾಗಿ ಮಾತ್ರವೇ ಹೊರತು ಮತೀಯವಾದಿ ವಿಷಯಗಳಲ್ಲಿ ಅಲ್ಲ. ಇದು ಮತೀಯವಾದವನ್ನು ಬಳಸಿಕೊಂಡೇ ತನ್ನ ಜನಬೆಂಬಲದ ಗಾತ್ರವನ್ನು ಹಿಗ್ಗಿಸಿಕೊಳ್ಳಲು ಯಶಸ್ವಿಯಾಗಿದೆ. ಒಂದುವೇಳೆ ಬಿಜೆಪಿಯೊಳಗೆ ಮತೀಯವಾದದ ವಿಷಯದ ಮೇಲೆ ಭಿನ್ನಾಭಿಪ್ರಾಯವಿರುವುದೇ ಆದರೆ ಅದು ಈ ಕೋಮುವಾದದ ಅಜೆಂಡಾವನ್ನು ಈಗಲೇ ತುರ್ತಾಗಿ ಹಾಗೂ ತೀವ್ರವಾಗಿ ಬಳಸಿಕೊಳ್ಳಬೇಕೆ ಅಥವಾ ನಿಧಾನವಾಗಿ ಹಾಗೂ ಸೌಮ್ಯವಾಗಿ ಬಳಸಿಕೊಳ್ಳಬೇಕೆ ಎನ್ನುವುದರ ಕುರಿತಾಗಿ ಮಾತ್ರ.  ಈ ಭಿನ್ನಾಭಿಪ್ರಾಯಗಳಿರುವುದು ಕೋಮುವಾದದ ಅಜೆಂಡಾವನ್ನು ಜಾರಿಗೊಳಿಸಲು ರೂಪಿಸಬೇಕಾದ ತಂತ್ರ ಹಾಗೂ ಪ್ರತಿತಂತ್ರಗಳ ಕುರಿತಾಗಿ ಮಾತ್ರ.

ಪ್ರಶ್ನೆ: ಬಿಜೆಪಿ ರಾಜ್ಯಭಾರ ನಡೆಸುತ್ತಿರುವ ರಾಜ್ಯಗಳಲ್ಲಿನ ಶಿಕ್ಷಣ ಕ್ಷೇತ್ರದಲ್ಲಿ, ಶೈಕ್ಷಣಿಕ ಸಂಸ್ಥೆಗಳಲ್ಲಿ ಹೆಚ್ಚುತ್ತಿರುವ ಅಧಿಕಾರಯುತವಾಗಿ ಮೂಗುತೂರಿಸುವಿಕೆಯ ಬಗೆಗೆ ನೀವೇನು ಹೇಳುತ್ತೀರಿ ?
ಉತ್ತರ: ಇಲ್ಲಿ ಮಾರ್ಕ್ಸ್ ಹೇಳಿದ “ಬುದ್ಧಿಜೀವಿಗಳ ಗುಂಪೊಂದು ತಮ್ಮದೇ ವರ್ಗಗಳ ಪರಿಧಿಯಿಂದ ಹೊರಬಂದು ಸಾಮಾನ್ಯ ಜನರೊಂದಿಗೆ ಬೆರೆತು ಚಿಂತಿಸಲು ಆರಂಬಿಸುತ್ತಾರೆ” narender_modi_rssಎನ್ನುವ ಮಾತೊಂದು ನೆನಪಾಗುತ್ತದೆ. ಇಲ್ಲಿ ಉನ್ನತ ಶಿಕ್ಷಣದಿಂದ ವಂಚಿತರಾದ ಜನಸಾಮಾನ್ಯರಿಗೆ ಉನ್ನತ ಶಿಕ್ಷಣವನ್ನು ಪಡೆಯುವಲ್ಲಿ ಯಶಸ್ವಿಯಾದ ಬುದ್ಧಿಜೀವಿಗಳ ಚಿಂತನೆಗಳ ಅವಶ್ಯಕತೆ ಇರುತ್ತದೆ. ಆಗ ಮಾರ್ಕ್ಸ್ ಹೇಳಿದಂತೆ ಈ ಬುದ್ಧಿಜೀವಿಗಳು ತಮ್ಮ ದಂತ ಗೋಪುರಗಳಿಂದ ಹೊರಬಂದು ತಾವು ಕಲಿತ ಮಾನವೀಯ ಮಾದರಿಗಳನ್ನು ಜನಸಾಮಾನ್ಯರ ಭಾಷೆಯಲ್ಲಿ ಅವರಿಗೆ ವಿವರಿಸಬೇಕಾಗುತ್ತದೆ. ಆ ಮೂಲಕ ಜನಸಾಮಾನ್ಯರ ಜ್ನಾನದ ಹರಹನ್ನು ವಿಸ್ತರಿಸಬೇಕಾಗುತ್ತದೆ. ಆದರೆ ಇಂದು ವಿಶ್ವವಿದ್ಯಾಲಯಗಳು ತಂತ್ರಜ್ಞರನ್ನು ತಯಾರಿಸುವ ಯಂತ್ರಗಳಾದಾಗ ಅಲ್ಲಿ ಮೇಲೆ ಹೇಳಿದ ಬುದ್ಧಿಜೀವಿಗಳ ಕ್ರಿಯಾಶೀಲತೆಗೆ ವಿಶ್ವವಿದ್ಯಾಲಯಗಳ ಬಾಗಿಲು ಸಂಪೂರ್ಣವಾಗಿ ಮುಚ್ಚಿಕೊಳ್ಳುತ್ತದೆ. ಕಡೆಗೆ ಕ್ರಿಯಾಶೀಲ, ಸೆಕ್ಯುಲರ್ ಅಧ್ಯಾಪಕರ ಸಂಪರ್ಕದ ಕೊರತೆಯಿಂದಾಗಿ ವಿದ್ಯಾಲಯಗಳ ವಿದ್ಯಾರ್ಥಿಗಳು ಕೂಪಮಂಡೂಕಗಳಾಗಿ ಕೊಳೆಯುತ್ತಾರೆ. ಇಲ್ಲಿ ಚಿಂತನೆಗಳನ್ನು ಹಿಂದುತ್ವದ ನೆಪದಲ್ಲಿ ನಾಶಮಾಡಲಾಗುತ್ತದೆ. ಇಲ್ಲಿ ಎಕನಾಮಿಕ್ಸ್ ವ್ಯಾಸಂಗವನ್ನು ಅನ್ನು ಉದಾಹರಣೆಯಾಗಿ ತೆಗೆದುಕೊಳ್ಳಿ. ಈ ಅರ್ಥಶಾಸ್ತ್ರದ ಪಠ್ಯವನ್ನು ಬಹುಪಾಲು ವಸಾಹತುಶಾಹಿಗಳ ಪ್ರಭಾವಳಿಯಲ್ಲಿ ರೂಪಿಸಲಾಗುತ್ತದೆ. ಆದರೆ ಈ ನವ ಕಲೋನಿಯಲ್ ನೀತಿಗಳ ಬಗೆಗೆ, ಇಂಡಿಯಾದ ಆರ್ಥಿಕತೆಯ ಮೇಲೆ ಅವುಗಳ ದುಷ್ಪರಿಣಾಮಗಳ ಕುರಿತಾಗಿ ದೇಶದ ಕೆಲವೇ ಸಂಸ್ಥೆಗಳಲ್ಲಿ ಮಾತ್ರ ವಿಮರ್ಶಾತ್ಮಕವಾದ ಆಧ್ಯಯನ ಹಾಗು ಬೋಧನೆ ನಡೆಯುತ್ತಿದೆ. ಆದರೆ ಈ ಬಿಜೆಪಿಯ ಕೇಸರೀಕರಣದ ಹಿನ್ನೆಲೆಯಲ್ಲಿ ಈ ಕೆಲವೇ ಕೆಲವು ಕ್ರಿಯಾಶೀಲ ಸಂಸ್ಥೆಗಳ ಮೇಲೂ ಅಪಾರವಾದ ಒತ್ತಡವನ್ನು ತರಲಾಗುತ್ತದೆ. ಈ ಮೂಲಕ ಅಳಿದುಳಿದ ಕೆಲವೇ ಕೆಲವು ಕ್ರಿಯಾಶೀಲತೆಯನ್ನು ಈ ನವ ಕಲೋನಿಯಲ್ ಮಾದರಿಗಳು ದಬ್ಬಾಳಿಕೆಯ ಮೂಲಕ ಅಕ್ರಮಿಸಿ ಬಿಡುತ್ತವೆ. ಇಲ್ಲಿ ಕ್ರಿಯಾಶೀಲತೆಯನ್ನು ಕೈಬಿಡಲು ಪ್ರಮೋಶನ್ ಆಮಿಷೆಗಳು, ವಿಶ್ವವಿದ್ಯಾಲಯಗಳಲ್ಲಿ ಉನ್ನತ ಪದವಿಗಳ ಭರವಸೆಗಳೇ ದಬ್ಬಾಳಿಕೆಯ ಸ್ವರೂಪಗಳು.

ಪ್ರಶ್ನೆ: ಅಂದರೆ ನಿಮ್ಮ ಪ್ರಕಾರ ವಿಮರ್ಸಾತ್ಮಕ, ಪಾರದರ್ಶಕ, ಸೆಕ್ಯುಲರ್ ಚಿಂತನೆಗಳ ಸ್ವಾತಂತ್ಯದ ಮೇಲೆ ನಿರಂತರ ಆಕ್ರಮಣ ನಡೆಯುತ್ತಿದೆಯೇ ?
ಉತ್ತರ: ಖಂಡಿತವಾಗಿಯೂ! ಜನರಿಗೆ ಇದು ಗೊತ್ತಾಗುತ್ತಿಲ್ಲ. ಕೆಲವೊಮ್ಮೆ ಈ ಆಕ್ರಮಣವು ನಾವೆಲ್ಲ ನಂಬಿದಂತಹ ಸುಧಾರಣಾವಾದಿ ಗುಂಪುಗಳಿಂದಲೂ ನಡೆಯುತ್ತದೆ! ನನಗೆ ಗೊತ್ತಿರುವಂತೆ ಅನೇಕ ಶಿಕ್ಷಣತಜ್ನರು ಇತ್ತೀಚೆಗೆ ನಮ್ಮ ಶಿಕ್ಷಣ ನೀತಿಯು ಅತಿಯಾಗಿ ಉನ್ನತ ಶಿಕ್ಷಣವನ್ನು ಓಲೈಸುತ್ತಿದೆ. ಈ ಓಲೈಕೆಯು ಪ್ರಾಥಮಿಕ ಶಿಕ್ಷಣಕ್ಕೆ ಮಾರಕವಾಗುತ್ತಿದೆ. ನಮ್ಮ ವಿಶ್ವವಿದ್ಯಾಲಯಗಳು ಬಿಳಿ ಆನೆಗಳಾಗುತ್ತಿವೆ. ಇದನ್ನು ನಾವು ತಪ್ಪಿಸಬೇಕು ಎಂದು ಪದೇ ಪದೇ ಒತ್ತಾಯಿಸುತ್ತಿರುತ್ತಾರೆ. ಇವರ ಈ ಒತ್ತಾಸೆಯಲ್ಲಿ ವಿಶ್ವವಿದ್ಯಾಲಯಗಳು ಉತ್ತರದಾಯಿತ್ವವನ್ನು ಹೊಂದಬೇಕಾಗುತ್ತದೆ, ಆ ಮೂಲಕ ವಿಶ್ವವಿದ್ಯಾಲಯಗಳ ಬೋಧನೆಯ ಗುಣಮಟ್ಟವನ್ನು, ಪಠ್ಯಗಳ ಗುಣಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ ಎನ್ನುವ ಅಂಶಗಳಿದ್ದರೆ ಈ ಕಳಕಳಿಗಳು ಸ್ವಾಗತಾರ್ಹ. ಆದರೆ ಈ ಕಳಕಳಿಗಳ ಹಿಂದೆ ನವಕಲೋನಿಯಲ್ ಅಧ್ಯಯನವನ್ನೇ ತಿರಸ್ಕರಿಸುವ ಆಶಯಗಳಿದ್ದರೆ? ಈ ಕಳಕಳಿಯಲ್ಲಿ ಪ್ರಾಥಮಿಕ ಶಿಕ್ಷಣದ ಉನ್ನತೀಕರಣಕ್ಕಾಗಿ ಉನ್ನತ ಶಿಕ್ಷಣದ ಬಲಿ ಕೊಡಬೇಕೆನ್ನುವ ವಿತಂಡವಾದವಿದ್ದರೆ? ಇದನ್ನು ಖಂಡಿತ ಒಪ್ಪಲಿಕ್ಕೆ ಸಾಧ್ಯವಿಲ್ಲ. ವಿದ್ಯಾರ್ಥಿಗಳು ಜಾಗತಿಕ ಆರ್ಥಿಕತೆಯ ಪರಿಣಾಮಗಳನ್ನು, ಅದರ ವಸಾಹತುಶಾಹಿ ಗುಣಗಳನ್ನು ಈ ಉನ್ನತ ಶಿಕ್ಷಣದ ಮೂಲಕವೇ ಅರಿಯಲು ಸಾಧ್ಯ. ನಾವು ಈ ಉನ್ನತ ಶಿಕ್ಷಣವನ್ನು ಉಳಿಸಿಕೊಳ್ಳುತ್ತಲೇ ಪ್ರಾಥಮಿಕ ಶಿಕ್ಷಣವನ್ನು ಕ್ರಮಬದ್ಧವಾಗಿ, ವೈಜ್ಞಾನಿಕವಾಗಿ, ಬಹುರೂಪಿಯಾಗಿ ಕಟ್ಟಬೇಕಾಗುತ್ತದೆ. ಪ್ರಾಥಮಿಕ ಶಿಕ್ಷಣವು ಉನ್ನತ ಶಿಕ್ಷಣಕ್ಕೆ ಭದ್ರ ಬುನಾದಿಯಾಗಿ ರೂಪಿತಗೊಳ್ಳಬೇಕು. ಆದರೆ ಸಂಘಪರಿವಾರದ ಹುನ್ನಾರವೆಂದರೆ ಪ್ರಾಥಮಿಕ ಶಿಕ್ಷಣದಲ್ಲಿ ಪುರೋಹಿಶಾಹಿ ಚಿಂತನೆಗಳನ್ನು, ಧರ್ಮವೊಂದೇ ಸತ್ಯವೆನ್ನುವ ಮಿಥ್ಯೆಯನ್ನು ಹೇಳಿಕೊಡುತ್ತ ಉನ್ನತ ಶಿಕ್ಷಣದಲ್ಲಿ ಕೇವಲ ತಂತ್ರಜ್ನಾನವನ್ನು ಪಠ್ಯವನ್ನಾಗಿ ಸೇರಿಸುವುದು!! ಈ ಶಿಕ್ಷಣವನ್ನು ಪಡೆದು ಹೊರಬರುವ ವಿದ್ಯಾರ್ಥಿಯು ಜಾಗತಿಕ ಆರ್ಥಿಕನೀತಿ, ಸಾಮಾಜಿಕ ಸಂರಚನೆಗಳು ಮತು ಬದ್ಧತೆ, ಕ್ರಿಯಾಶೀಲತೆ, ವಿಮರ್ಶಾತ್ಮಕ ದೃಷ್ಟಿಕೋನ, ವೈಜ್ನಾನಿಕ ಶಿಕ್ಷಣ ಇವೆಲ್ಲದರಿಂದಲೂ ವಂಚಿತನಾಗಿ ಕೇವಲ ಯಂತ್ರವಾಗಿ ಮಾರ್ಪಡುತ್ತಾನೆ.

ಪ್ರಶ್ನೆ: ಈಗ ಯುಜಿಸಿಯು ಪದವಿ ತರಗತಿಗಳ ವ್ಯಾಸಂಗದಲ್ಲಿ ಜ್ಯೋತಿಷ್ಯ ಶಾಸ್ತ್ರವನ್ನು ಹಾಗೂ ಕರ್ಮಕಾಂಡವನ್ನು ಹೇಳಿಕೊಡಬೇಕೆನ್ನುವ ಪ್ರಸ್ತಾಪವನ್ನು ಇಟ್ಟಿದೆಯಲ್ಲ. ಮುರಳೀ ಮನೋಹರ ಜೋಷಿಯವರು ಪಶ್ಚಿಮ ರಾಷ್ತ್ರಗಳಲ್ಲೂ ಇಂದು ಜ್ಯೋತಿಷ್ಯ ಶಾಸ್ತ್ರವನ್ನು ಬೋಧಿಸಲಾಗುತ್ತಿದೆ ಎಂದು ಹೇಳುತ್ತಿದ್ದಾರೆ?
ಉತ್ತರ: ಇದು ಅವಿವೇಕಿತನವೇ ಸರಿ! ಜ್ಯೋತಿಷ್ಯ ಶಾಸ್ತ್ರಕ್ಕೆ ಯಾವುದೇ ರೀತಿಯ ವೈಜ್ಞಾನಿಕ ತಳಹದಿಗಳಿಲ್ಲ. ಇದಕ್ಕೆ ಖಗೋಳ ಶಾಸ್ತ್ರಕ್ಕೆ, ಅರ್ಥಶಾಸ್ತ್ರಕ್ಕೆ, ಔಷಧ ಶಾಸ್ತ್ರಕ್ಕೆ ಇರುವಂತಹ ಸ್ವಂತಿಕೆಯಾದ ಪಠ್ಯಗಳಿಲ್ಲ. ಜ್ಯೋತಿಷ್ಯ ಶಾಸ್ತ್ರ ನಿಂತಿರುವುದೇ ಪುರಾಣಗಳ ಕಂತೆಯ ಮೇಲೆ. ಜ್ಯೋತಿಷ್ಯ ಶಾಸ್ತ್ರಕ್ಕೆ ಇತರೇ ವಿಭಾಗಗಳಿಗೆ ಇರುವಂತೆ ಕಾರಣ ಹಾಗೂ ಪರಿಣಾಮ (cause-effect) ಗಳ ಚರ್ಚೆಗಳಿಲ್ಲ. ಇಲ್ಲಿ ಎಲ್ಲವೂ ನೆಲೆಗೊಂಡ, ಚಲನಹೀನ ಪಠ್ಯಗಳೇ!! ಆದರೆ ಜೋಷಿಯವರು ಪಶ್ಚಿಮದ ಕೆಲವು ವಿಶ್ವವಿದ್ಯಾಲಯಗಳನ್ನು ಹಾಗೂ ವೆಬ್ಸೈಟ್ ಗಳನ್ನು ಉದಾಹರಿಸುತ್ತಿದ್ದಾರೆ. ಇದೆಲ್ಲವೂ ಶುದ್ಧ ಸುಳ್ಳು! ಶಿಕ್ಷಣ ಮಂತ್ರಿಗಳು ಹೇಳಿದ ಒಂದು ವಿಶ್ವವಿದ್ಯಾಲಯಕ್ಕೆ ಯಾವನೋ ಒಬ್ಬ ನಿಗೂಢ ದಾನಿಯೊಬ್ಬ ಜ್ಯೋತಿಷ್ಯಾಸ್ತ್ರವನ್ನು ಶುರುಮಾಡಲು ಹಣವನ್ನು ದಾನ ಮಾಡಿದ್ದಾನೆ. ಬಹುಶ ಆ ವ್ಯಕ್ತಿ ಹಿಂದುತ್ವವಾದಿ ಇರಬೇಕೆನಿಸುತ್ತದೆ. ಆದರೆ ಆ ವಿಶ್ವವಿದ್ಯಾಲಯವು ಇನ್ನೂ ಈ ಬೇಡಿಕೆಯನ್ನು ಒಪ್ಪಿಕೊಂಡಿಲ್ಲ. ಆದರೂ ಜೋಷಿಯವರು ಈ ವಿಶ್ವ ವಿದ್ಯಾಲಯದ ಹೆಸರನ್ನು ಹೇಳುತ್ತಾರೆ! ಇದು ಸುಳ್ಳಿನ ಕಂತೆಯಷ್ಟೇ!! ಇನ್ನು ಕರ್ಮಕಾಂಡದ ವಿಷಯವಂತೂ ಮತ್ತಷ್ಟು ಕೆಟ್ಟದಾಗಿದೆ. ಇಲ್ಲಿ ಜೋಷಿಯವರು ಪುರೋಹಿತರನ್ನು ತಯಾರಿಸುತ್ತಾರಂತೆ! ಆದರೆ ಇದಕ್ಕೆ ಸರ್ಕಾರವೇಕೆ ಕೈ ಜೋಡಿಸಬೇಕು? ಇಂದು ಇಂಡಿಯಾದಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್, ಫ್ಯಾಷನ್ ಮ್ಯಾನೇಜ್ಮೆಂಟ್ ಇತ್ಯಾದಿಯಾಗಿ ಅನೇಕ ರೀತಿಯ ಕೋರ್ಸುಗಳಿವೆ. ಅದೇ ರೀತಿ ಬೇಡಿಕೆಯಿದ್ದರೆ ಖಾಸಗಿ ಶಿಕ್ಷಣ ಸಂಸ್ಥೆಗಳು ಪುರೋಹಿತರ ಕೋರ್ಸನ್ನು ಬೇಕಿದ್ದರೆ ಪ್ರಾರಂಬಿಸಲಿ. ಆದರೆ ಇದಕ್ಕೆ ಸರ್ಕಾರವೇಕೆ ಕೈ ಜೋಡಿಸಬೇಕು? ಇದು ಮೌಢ್ಯವನ್ನು ಸರ್ಕಾರವೇ ಪೋಷಿಸಿದಂತಾಗಲಿಲ್ಲವೇ?

ಪ್ರಶ್ನೆ: ಹಾಗಿದ್ದರೆ ವಿಜ್ಞಾನವು ಹೇಳುವ ಪಠ್ಯವು ಸತ್ಯವೆಂದು ಹೇಗೆ ಪ್ರಮಾಣಿಸುತ್ತೀರಿ ?
ಉತ್ತರ: ಇಲ್ಲಿ ವಿಜ್ಞಾನವನ್ನು ಬಿಡುಗಡೆಯ ಮಾರ್ಗವಾಗಿಯೇ ನೋಡುತ್ತೇನೆ. ಈ ವಿಜ್ಞಾನವು ದಲಿತನಿಗೆ ಶೋಷಣೆಯ ವಿರುದ್ಧ ಪ್ರಶ್ನಿಸುವ ಒಳನೋಟಗಳನ್ನು ನೀಡುತ್ತದೆ. ಹಿಟ್ಲರ್ ಸುಪೀರಿಯರ್ ಸಿದ್ಧಾಂತವನ್ನು ಪ್ರತಿಪಾದಿಸಿದಾಗ ಅದನ್ನು ತಿರಸ್ಕರಿಸಲು ವಿಜ್ಞಾನದ ಆಧಾರ ಬೇಕಾಗುತ್ತದೆ. ಇಲ್ಲಿ ಗ್ರಾಮ್ಷಿ ಹೇಳಿದ ಹಾಗೆ ನಾವೆಲ್ಲ ಫಿಲಾಸಫರ್ಸ್ ಆಗಿರುತ್ತೇವೆ. ಆದರೆ ಅದು ನಮಗೆ ಗೊತ್ತಿರುವುದಿಲ್ಲ. ಹಾಗೇ ನಾವೆಲ್ಲ ನಮಗೆ ಗೊತ್ತಿಲ್ಲದೆಯೇ ವಿಜ್ಞಾನಿಗಳಾಗಿರುತ್ತೇವೆ. ಸತ್ಯವೆಷ್ಟು ಹಾಗು ಸುಳ್ಳೆಷ್ಟು ಎಂದು ಪ್ರಮಾಣಿಸಲು ತರ್ಕಗಳನ್ನು ಕಟ್ಟಿಕೊಳ್ಳುತ್ತೇವೆ. ಇಲ್ಲಿ ವಿಜ್ಞಾನವು ಮುಖ್ಯ ಪಾತ್ರ ವಹಿಸುತ್ತದೆ.

ಪ್ರಶ್ನೆ: ಅಂದರೆ ಜನತೆ ತಮ್ಮೊಳಗಿನ ಸ್ವಂತ ನಂಬುಗೆಯ, ಧಾರ್ಮಿಕ ನಂಬಿಕೆಯ ಹೊರತಾಗಿಯೂ ದಿನನಿತ್ಯದ ವ್ಯವಹಾರದಲ್ಲಿ ಮೆಟೀರಿಯಲಿಸ್ಟ್ ಆಗಿರುತ್ತಾರೆಯೇ ಅಥವಾ ವಿಚಾರವಾದಿಗಳಾಗಿಯೇ?
ಉತ್ತರ: ಇಲ್ಲಿ ಎರಡೂ ನಿಜ. ಇಲ್ಲಿ ಮೆಟೀರಿಯಲಿಸಂ ಎಂದರೆ ಮತ್ತೇನಲ್ಲದೆ ವಿಚಾರವಾದ(Rationalism)ದ ಭಾಗ. ಪ್ರತಿಯೊಬ್ಬ ವಿಜ್ಞಾನಿಯೂ ವಿಜ್ಞಾನವನ್ನು ಅಭ್ಯಾಸ ಮಾಡುತ್ತಿದ್ದರೂ ಅವನು ಆಳದಲ್ಲಿ ಮೆಟೀರಿಯಲಿಸ್ಟ್ ಆಗಿರುತ್ತಾನೆ. ಪ್ರತಿಯೊಬ್ಬನ ಮನಸ್ಸಿನ ಆಳದಲ್ಲಿ ದ್ವಂದಗಳಿರುತ್ತವೆ. ಆದರೆ ಬಹಿರಂಗವಾಗಿ ಮೆಟೀರಿಯಲಿಸ್ಟ್ ಆಗಿ ಪ್ರತಿಕ್ರಯಿಸುತ್ತಿರುತ್ತೇವೆ. ನನಗೆ ವಿಜ್ಞಾನವು ಒಪ್ಪಿತ ಪಠ್ಯ ಅಥವಾ ಪದ್ಧತಿ. ಈ ಪಠ್ಯ ಅಥವಾ ಪದ್ಧತಿಯು ಮಾನವೀಯತೆಯೊಂದಿಗೆ ತಳಕು ಹಾಕಿಕೊಂಡಿರುತ್ತದೆ ಹಾಗೂ ಸದಾ ಕಾಲ ಸ್ವಾತಂತ್ರ್ಯದೆಡೆಗೆ ಚಲಿಸುತ್ತಿರುತ್ತದೆ. ಇಲ್ಲಿ ಸುಮ್ಮನೆ ಹೇಳಬೇಕೆಂದರೆ ಜೋಷಿಯವರ ಮನೆಯಲ್ಲಿ ಯಾರಿಗಾದರೂ ಆರೋಗ್ಯದಲ್ಲಿ ಏರುಪೇರಾದರೆ ಅವರು ಡಾಕ್ಟರ ಬಳಿಗೆ ಹೋಗುತ್ತಾರೆ ಹೊರತಾಗಿ ಜ್ಯೋತಿಷಿಗಳ ಬಳಿಯಲ್ಲ. ಏಕೆಂದರೆ ಇಲ್ಲಿ ಡಾಕ್ಟರ್ ಪ್ರಾಕ್ರತಿಕ ಶಕ್ತಿಯೊಂದಿಗೆ ಸಮಾನತೆ ಸಾಧಿಸಿರುತ್ತಾನೆ ಹಾಗೂ ಇದು ಸ್ವಾತಂತ್ರ್ಯವನ್ನು ಸಹ. ಆದರೆ ಇಲ್ಲಿ ಮುರಳೀಮನೋಹರ ಜೋಷಿಯವರು ಎಡಪಂಥೀಯ ವಿಮರ್ಶಕರನ್ನು ಪಶ್ಚಿಮ ವ್ಯಾಮೋಹಿಗಳೆಂದು ಇವರಿಗೆ ಭಾರತದ ಸಂಸ್ಕೃತಿಯ ಪರಿಚಯವೇ ಇಲ್ಲದಷ್ಟು ಅನಕ್ಷರಸ್ತರು ಎಂದು ಹೇಳುತ್ತಾರೆ. ತೊಂದರೆ ಏನೆಂದರೆ ಸ್ವತಹ ಇವರಿಗೆ ಭಾರತೀಯ ಸಂಸ್ಕೃತಿಯ ಬಗ್ಗೆ ಆಳವಾದ ಪರಿಚಯವಾಗಲೀ, ತಿಳುವಳಿಕೆಯಾಗಲೀ ಇಲ್ಲ. ಜೋಷಿಯವರಿಗೆ ಭಾರತೀಯ ಸಂಸ್ಕೃತಿಯೆಂದರೆ ಅದು ಬ್ರಾಹ್ಮಣೀಕೃತ ಸಂಸ್ಕೃತಿ ಅಷ್ಟೇ. ಇದನ್ನು ಮೀರಿ ಅವರು ಹೆಚ್ಚಿಗೆ ಏನನ್ನೂ ಚಿಂತಿಸಲಾರರು. ಈ ಸಂಘಪರಿವಾದವರು ದೇಶಾಭಿಮಾನವನ್ನು ರಾಷ್ಟ್ರೀಯತೆಯೊಂದಿಗೆ ಸಮೀಕರಿಸುವ ಪದ್ಧತಿಯೇ ಆತಂಕಕಾರಿಯಾದದ್ದು. ಇಲ್ಲಿ ಪ್ರಗತಿಪರರು ಜಾಗತೀಕರಣದ ಇಂದಿನ ಸ್ವರೂಪದ ವಿರುದ್ಧ ಹೋರಾಡುವುದನ್ನು ದೇಶಾಭಿಮಾನವೆಂದು ಹೇಳಿದಾಗ ಹಾಗೂ ಈ ಕಲೋನಿಯಲ್ ನ ಎಲ್ಲ ಅನಿಷ್ಟಗಳ ವಿರುದ್ದ ಕಳೆದ 100 ವರ್ಷಗಳಿಂದ ಹೋರಾಡುತ್ತಿದ್ದಾಗ ಈ ಜೋಷಿ ಹಾಗೂ ಅವರ ಸಂಘಪರಿವಾರ ಎಲ್ಲಿದ್ದರು? ಸ್ವಾತಂತ್ರ್ಯ ಚಳುವಳಿಯಲ್ಲಿ ಸಂಘಪರಿವಾರದ ಭಾಗವಿಹಿಸುವಿಕೆಯೇ ಶೂನ್ಯ ಮಟ್ಟದ್ದು.

ಪ್ರಶ್ನೆ: ಅನೇಕ ಪ್ರಗತಿಪರ ಚಿಂತಕರು ಈ ಕೋಮುವಾದಿ ಹಾಗೂ ಮತೀಯವಾದಿ ಸಂಘಟನೆಗಳ ವಿರುದ್ಧ ಏಕೀಕೃಕ ಸಿದ್ಧಾಂತವನ್ನಾಧರಿಸಿದ ಸಂಯುಕ್ತ ರಂಗವನ್ನು ಸ್ಥಾಪಿಸಬೇಕೆಂದು ಹೇಳುತ್ತಿದ್ದಾರೆ ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು ?
ಉತ್ತರ: ಇಲ್ಲಿ ಪ್ರಗತಿಪರ ಸಂಯುಕ್ತರಂಗವನ್ನು ಸ್ಥಾಪಿಸಬೇಕೆನ್ನುವ ಚಿಂತನೆ ವಿಭಿನ್ನ ಕಾಲಕ್ಕೆ ವಿಭಿನ್ನ ಸ್ವರೂಪಗಳನ್ನು ಪಡೆದುಕೊಳ್ಳುವುದರಿಂದ ಇದು ಸ್ವಲ್ಪ ಜಟಿಲವಾದದ್ದು. ಉದಾಹರಣೆಗೆ ಈಗ ಪ್ರತಿ ವಿಶ್ವವಿದ್ಯಾಲಯಕ್ಕೂ ಕ್ರಮವಾಗಿ 4 ಸಂಸ್ಕೃತ ಅಧ್ಯಾಪಕರನ್ನು ನೇಮಿಸಕೊಳ್ಳಬೇಕೆಂದು ಆದೇಶವನ್ನು ಹೊರಡಿಸಲಾಗಿದೆ. ಇದನ್ನು ಯಾವ ಆಧಾರದ ಮೇಲೆ ನಿರ್ಧರಿಸಲಾಯಿತು? ಇದಕ್ಕಾಗಿ ಕಮಿಟಿಗಳನ್ನು ನೇಮಿಸಿದ್ದರೇ? ಇದ್ಯಾವುದನ್ನು ಮಾಡದೆ ಕೇವಲ ಹಿಂಬಾಗಿಲಿನ ಮೂಲಕ ಆರೆಸಸ್ ಮೂಲದ ಅಧ್ಯಾಪಕರನ್ನು ವಿಶ್ವವಿದ್ಯಾಲಯದೊಳಗೆ ತೂರಿಸಬೇಕೆನ್ನುವ ಹುನ್ನಾರವಷ್ಟೇ ಮೂಲ ಆಶಯ. ಇದರ ಮೂಲಕ ಭವಿಷ್ಯದಲ್ಲಿ ಆರೆಸಸ್ ಹಿನ್ನೆಲೆಯ ವಿಧ್ಯಾರ್ಥಿಗಳನ್ನು ತಯಾರಿಸುವುದು ಇವರ ಕುಟಿಲ ನೀತಿ. ಇದನ್ನು ಪ್ರಗತಿಪರರು ವಿರೋಧಿಸಬೇಕಾದರೆ ಇವರೆಲ್ಲ ತಮ್ಮೊಳಗಿನ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಿ ಸಂಘಟಿತರಾಗಿ ಪ್ರತಿಭಟಿಸಬೇಕಾಗುತ್ತದೆ. ಇದೇ ರೀತಿ ಕಲೋನಿಯಲ್ ಸಂಸ್ಕೃತಿಯನ್ನು, ಜಾಗತೀಕರಣದ ಅಮಾನವೀಯತೆಯ ವಿರುದ್ಧ ಪ್ರತಿಭಟಿಸಲು ಸಹ ಇವರೆಲ್ಲ ಒಂದಾಗಿ ಹೋರಾಡಬೇಕಾಗುತ್ತದೆ. ಅದೇ ಈ ಸಂಯುಕ್ತರಂಗದ ಮೂಲ ಆಶಯವಾಗಬೇಕು. ಈ ಸಂಯಕ್ತರಂಗದ ಮೂಲ ಉದ್ದೇಶವು ಇಂದು ವಿಶ್ವವಿದ್ಯಾಲಯಗಳ ಪಾವಿತ್ರತೆಯನ್ನು ಕಾಪಾಡುವುದರಲ್ಲಿ ಹಾಗೂ ಈ ಜ್ಞಾನಮಂದಿರಗಳಲ್ಲಿ ಸಮಾಜಶಾಸ್ತ್ರದ ಬಗೆಗೆ, ರಾಜಕೀಯಶಾಸ್ತ್ರದ ಬಗೆಗೆ, ಮಾನವಶಾಸ್ತ್ರದ ಬಗೆಗೆ, ವಿಜ್ಞಾನದ ಬಗ್ಗೆ ಆಳವಾದ ವ್ಯಾಸಂಗ ಮತ್ತು ಸಂಶೋದನೆಗಳ ಪರವಾಗಿ ಹೋರಾಡಬೇಕು.ಇಲ್ಲಿ ರಾಜಕೀಯ ರಂಗದ ಕುರಿತಾದ ನಿರ್ಧಾರಗಳು ಚರ್ಚೆಗೆ ಸಹ ಬರಬಾರದು. ರಾಜಕೀಯ ಆಶಯಗಳು ಮತ್ತು ಒಲವುಗಳು ಮತ್ತು ಸಾಂಸ್ಕೃತಿಕ ಚಿಂತನೆಗಳ ನಡುವೆ ಸಾಕಷ್ಟು ಅಂತರವನ್ನು ಕಾಪಾಡಿಕೊಳ್ಳಲೇಬೇಕು. ಆಗಲೇ ನಮಗೆ ಬೆಳಕಿನ ದಾರಿ ಕಾಣಲು ಸಾಧ್ಯ. ಆದರೆ ಇಲ್ಲಿಯವರೆಗೆ ಈ ರೀತಿಯ ಅನೇಕ ಪ್ರಯತ್ನಗಳು ಅತ್ಯಂತ ಆಶಾದಾಯಕವಾಗಿ ಪ್ರಾರಂಭಗೊಂಡರೂ ಕಾಲಕ್ರಮೇಣ ವಿಫಲಗೊಂಡಿರುವುದನ್ನು ನಾವು ಇತಿಹಾಸದಿಂದ ಕಾಣಬಹುದು. ಇದಕ್ಕೆ ಮೂಲ ಕಾರಣಗಳನ್ನು ಈಗ ವಿವರಿಸಲು ಅಸಾಧ್ಯ.ಇದಕ್ಕೆ ಬೇರೆಯದೇ ಆದ ವೇದಿಕೆ ಬೇಕಾಗುತ್ತದೆ.

ಪ್ರಶ್ನೆ: ಈ ಹೋರಾಟಗಳಲ್ಲಿ ಪ್ರಗತಿಪರ ವಿದ್ಯಾರ್ಥಿ ಸಂಘಟನೆಗಳ ಪಾತ್ರವೇನು ?
ಉತ್ತರ: ಇಲ್ಲಿ ಪ್ರಗತಿಪರ ವಿದ್ಯಾರ್ಥಿ ಚಳುವಳಿಯ ಜವಾಬ್ದಾರಿ ಬಲು ದೊಡ್ಡದು. ಈ ಚಳುವಳಿಯು ವಿಶ್ವವಿದ್ಯಾಲಯಗಳ ಕಾವಲುಗಾರರಾಗಿ ರೂಪಗೊಳ್ಳಬೇಕು. students movementಆದರೆ ಇಂದು ಇದು ಸಾಧ್ಯವಾಗುತ್ತಿಲ್ಲ. ಏಕೆಂದರೆ ಇಂದು ವಿದ್ಯಾರ್ಥಿಗಳು ಉದ್ಯೋಗ ಮಾರುಕಟ್ಟೆಗೆ ವಲಸೆ ಹೋಗುತ್ತಿದ್ದಾರೆ. ಈ ಮೂಲಕ ವಿಶ್ವವಿದ್ಯಾಲಯಗಳ ಮೂಲ ಆಶಯವನ್ನೇ ಮರೆತಿದ್ದಾರೆ. ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವಾಗ ವಿದ್ಯಾರ್ಥಿಗಳು ಜಾಗತಿಕ ರಾಜಕಾರಣ, ಜಾಗತಿಕ ಸಾಹಿತ್ಯ, ಜಾಗತಿಕ ಸಾಂಸ್ಕೃತಿಕ ವಿದ್ಯಾಮಾನಗಳ ಕುರಿತಾಗಿ ಆಳವಾದ ಆಧ್ಯಯನ ಹಾಗು ಸಂವಾದಗಳನ್ನು ನಡೆಸಬೇಕು. ಆಗಲೇ ಇವರು ಭವಿಷ್ಯದಲ್ಲಿ ಮತ್ತೊಂದು ಪ್ರಜ್ಞಾವಂತ ತಲೆಮಾರನ್ನು ರೂಪಿಸಲು ಶಕ್ಯವಾಗುತ್ತದೆ. ಆದರೆ ಈಗ ಇದೆಲ್ಲವೂ ಗೌಣವಾಗಿ ಕೇವಲ ತಂತ್ರಜ್ಞಾನ ಮೇಲುಗೈ ಸಾಧಿಸುತ್ತಿದೆ. ಈ ತಂತ್ರಜ್ಞಾನವನ್ನು ಮೂಲವಾಗಿ ಆಧ್ಯಯನ ಮಾಡಿ ವಿದ್ಯಾಲಯಗಳಿಂದ ಹೊರ ಬರುವ ಯುವ ಜನಾಂಗ ಸಮಾಜಕ್ಕೆ ಯಾವುದೇ ರೀತಿಯ ಪ್ರಯೋಜನಕಾರಿಯಾಗಿ ಕಾಣ್ಕೆಗಳನ್ನು ನೀಡುವುದು ಸಾಧ್ಯವೇ ಇಲ್ಲ. ಆದರೆ ಇದು ಇಂದಿನ ಕ್ರೂರ ವಾಸ್ತವ. ಇಂತಹ ಗೊಂದಲದ ವಾತಾವರಣದಲ್ಲಿ ಸಂಘಪರಿವಾರವು ಅತ್ಯಂತ ಶಿಸ್ತುಬದ್ಧವಾಗಿ ಹಾಗು ಸಂಘಟನಾತ್ಮಕವಾಗಿ ಕಾರ್ಯಪ್ರವೃತ್ತವಾಗುತ್ತದೆ. ತಮ್ಮ ಐಡಿಯಾಲಜಿಗೆ ತಕ್ಕಂತೆ ವಿದ್ಯಾರ್ಥಿಗಳನ್ನು ಬಗ್ಗಿಸಿಕೊಳ್ಳುವುದರಲ್ಲಿ ಇವರು ಬಹಳ ನಿಸ್ಸೀಮರು. ಇಲ್ಲಿ ಸಂಘಪರಿವಾದವರು ಎಷ್ಟು ಚಾಣಾಕ್ಷರೆಂದರೆ ಇಂದಿನ ಕಾಲಮಾನಕ್ಕೆ ಅನುಗುಣವಾಗಿಯೇ ಮಾತನಾಡುತ್ತ, ಈ ಉದ್ಯೋಗ ಮಾರುಕಟ್ಟೆಯೆಡೆಗಿನ ವಲಸೆಯ ಸಮರ್ಥಕರಾಗಿಯೇ ವಿದ್ಯಾರ್ಥಿಗಳನ್ನು ಹುರಿದುಂಬಿಸುತ್ತಾರೆ. ಇಲ್ಲಿ ಸಮಾಜಕ್ಕಾಗಿ ನಾವು ಎನ್ನುವ ಪರಿಕಲ್ಪನೆಯೇ ನೇಪಥ್ಯಕ್ಕೆ ಸರಿದು ವೈಯುಕ್ತಿಕ ಹಿತಾಸಕ್ತಿಯ ಭವಿಷ್ಯದ ಕನಸುಗಳು ಮೇಲುಗೈ ಪಡೆದುಕೊಳ್ಳುತ್ತದೆ. ಇದನ್ನು ಹುರಿದುಂಬಿಸಲು ಸಂಘಪರಿವಾರ ತುದಿಗಾಲಲ್ಲಿ ನಿಂತಿರುತ್ತದೆ. ಈ ದುರಂತಕ್ಕೆ ಮತ್ತೊಂದು ಮೂಲಭೂತ ಕಾರಣ 50 ಹಾಗೂ 60ರ ದಶಕದಲ್ಲಿ ಉತ್ತರಭಾರತದಲ್ಲಿ ರಾಮಮನೋಹರ ಲೋಹಿಯಾ, ಜೆ.ಪಿ. ಮತ್ತವರ ಗೆಳೆಯರು ನಡೆಸಿದ ಸಮಾಜವಾದಿ ಹೋರಾಟಗಳು ವಿದ್ಯಾರ್ಥಿಗಳ ಗುಂಪಿನಲ್ಲಿ ಬಹಳ ಪ್ರಭಾವಶಾಲಿಯಾಗಿದ್ದವು. ಆ ಕಾಲದ ಸಮಾಜವಾದಿ ಹೋರಾಟಗಳಲ್ಲಿ ಸಮಾಜವಾದಿಗಳು ಮತ್ತು ಹಿಂದುತ್ವವಾದಿಗಳ ನಡುವೆ ಬಲು ದೊಡ್ಡ ಅಂತರವನ್ನು ಕಾಯ್ದುಕೊಳ್ಳಲಾಗಿತ್ತು. ಈ ಅಂತರವೇ ತುರ್ತುಪರಿಸ್ಥಿತಿಯ ವಿರುದ್ಧದ ಹೋರಾಟಕ್ಕೆ ಸಹ ಗಣನೀಯವಾದ ಸೈದ್ಧಾಂತಿಕ ಬಲವನ್ನು ಕೊಟ್ಟಿತ್ತು. ಆದರೆ ಇಂದು ಜಾರ್ಜ ಫೆರ್ನಾಂಡಿಸ್, ಶರದ್ ಯಾದವ್ ಅವರಂತಹ ಸಮಾಜವಾದಿಗಳು ಎನ್.ಡಿ.ಎ ಯೊಂದಿಗೆ ಕೈ ಜೋಡಿಸಿ ಲೋಹಿಯಾ ಮತ್ತು ಜೆ.ಪಿ.ಯವರ ಚಿಂತನೆಗಳಿಗೆ ಬಲು ದೊಡ್ಡ ಪೆಟ್ಟು ಕೊಟ್ಟಿದ್ದಾರೆ. ಇವರ ಹೊಂದಾಣಿಕೆಯ ಈ ಮಾದರಿಗಳೇ 21ನೇ ಶತಮಾನಕ್ಕೆ ಅನಿವಾರ್ಯವಾಗತೊಡಗಿದ್ದು ಮತ್ತು ಈ ಹೊಂದಾಣಿಕೆಯ ಮಾದರಿ ಸಮಾಜದ ಇನ್ನಿತರ ವಲಯಗಳಿಗೂ ವ್ಯಾಪಿಸುತ್ತಿರುವುದೂ ಕೂಡ ಇಂದಿನ ದುರಂತಕ್ಕೆ ಕಾರಣ.

ಪ್ರಶ್ನೆ: ಮುಂದಿನ ದಾರಿ ?
ಉತ್ತರ: ಇದರ ಉತ್ತರ ಕಷ್ಟ. ಇಲ್ಲಿ ವಿಧ್ಯಾರ್ಥಿ ಸಂಘಟನೆಗಳು ಮತ್ತು ಪ್ರಗತಿಪರ ಸಂಘಟನೆಗಳು ತಮ್ಮ ಆತ್ಮಸಾಕ್ಷಿಯ ಕರೆಗೆ ಓಗೊಡಬೇಕು.ವೈವಿಧ್ಯವಾದ ಚಿಂತನೆಗಳನ್ನು ಹೋರಾಟಕ್ಕೆ ತುಂಬಬೇಕು.ಮುಖ್ಯವಾಗಿ ವಿವಿಧ ಸಂಘಟನೆಗಳು ಸಮಾನ ಅಂಶಗಳ ಮೇಲೆ ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಬೇಕು.