Daily Archives: June 9, 2014

ತಂದೆಯೆಂಬುವವನ ಭ್ರೂಣ ಒಡಲಲ್ಲಿ ಹೊತ್ತವಳ ಕಥೆ


– ರೂಪ ಹಾಸನ


 

ಅವಳು ಕುಗ್ರಾಮವೊಂದರ 15 ವರ್ಷಗಳ ಎಳೆಯ ಬಾಲೆ. 9ನೇ ತರಗತಿಯನ್ನು ಒಳ್ಳೆಯ ಅಂಕಗಳಿಂದ ಪಾಸು ಮಾಡಿದ್ದಾಳೆ. ಎಲ್ಲವೂ ಸರಿ ಇದ್ದಿದ್ದರೆ ಈ ವರ್ಷ 10ನೇ ತರಗತಿಗೆ ಹೋಗಬೇಕಿತ್ತು. ಆದರದು ಸಾಧ್ಯವಾಗಿಲ್ಲ. ಕಾರಣ ಅಪ್ಪನೆಂಬುವವನು ಕರುಣಿಸಿದ ಗರ್ಭವನ್ನು ಅನಿವಾರ್ಯವಾಗಿ ಹೊರಬೇಕಾಗಿ ಬಂದಿರುವ ದಾರುಣತೆ. ಕಂಠಪೂರ್ತಿ ಕುಡಿದು ಬಂದು, ಯಾರಿಗಾದರೂ ಹೇಳಿದರೆ ಕುಡುಗೋಲಿನಿಂದ ಕೊಚ್ಚುವುದಾಗಿ ಬೆದರಿಸಿ ಅತ್ಯಾಚಾರವೆಸಗುತ್ತಿದ್ದವನಿಂದ ಬಸಿರಾಗಬಹುದೆಂಬ ತಿಳಿವಳಿಕೆಯೂ ಇಲ್ಲದಷ್ಟು ಮುಗ್ಧೆ ಈ ಹುಡುಗಿ.

ಒಂದಿಷ್ಟು ದೈಹಿಕ ಬದಲಾವಣೆಗಳಾಗುವವರೆಗೂ ತಾಯಿಗೂ ಅನುಮಾನ ಬಂದಿಲ್ಲ. ಆ ನಂತರವಷ್ಟೇ ಎಚ್ಚೆತ್ತು ಹತ್ತಿರದ ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ಮಗಳು 4 ತಿಂಗಳ ಬಸಿರೆಂಬುದುchild-rape ಗೊತ್ತಾಗಿ ನೇರ ಪೊಲೀಸ್ ಠಾಣೆಗೆ ಕರೆದೊಯ್ದು ಕೇಸು ದಾಖಲಿಸಿದ್ದಾಳೆ. ಅಲ್ಲಿಯವರೆಗೂ ಅಪ್ಪನ ಕುಕೃತ್ಯವನ್ನು ಎಲ್ಲರಿಂದ ಮುಚ್ಚಿಟ್ಟಿದ್ದ ಬಾಲೆ ಪೊಲೀಸರ ಎದುರು ಅನಿವಾರ್ಯವಾಗಿ ಸತ್ಯ ಬಿಚ್ಚಿಟ್ಟಿದ್ದಾಳೆ. ಅಪ್ಪನೀಗ ಪೊಲೀಸರ ಅತಿಥಿ. ಅವನು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಾನೆ. ಆದರೆ ತನ್ನದೇನೂ ತಪ್ಪಿಲ್ಲದೆಯೂ ತಂದೆಯೆಂಬ ಕಾಮುಕ ಕರುಣಿಸಿದ ಬಸಿರು ಹೊತ್ತು ಸಮಾಜದೆದುರು ತಲೆ ತಗ್ಗಿಸಿ ನಿಂತಿರುವ ಕಂದಮ್ಮನ ಸಂಕಟ ಕೇಳುವವರಾರು?

18 ವರ್ಷದೊಳಗೆ ಇಂತಹ ಕಾನೂನಿನ ಸಂಘರ್ಷಕ್ಕೆ ಒಳಗಾದ ಮಕ್ಕಳಿಗಾಗಿಯೇ ಜಿಲ್ಲಾ ಮಕ್ಕಳ ರಕ್ಷಣಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬಾಲನ್ಯಾಯಮಂಡಳಿ, ಮಕ್ಕಳ ಕಲ್ಯಾಣ ಸಮಿತಿಗಳಿವೆ. ಆದರೆ ಅವರದೇನಿದ್ದರೂ ನ್ಯಾಯದಾನವಾಗುವವರೆಗೆ ಮಕ್ಕಳಿಗೆ ರಕ್ಷಣೆ ಒದಗಿಸುವುದು, ಪೋಷಣೆ ಮಾಡುವುದಷ್ಟೇ ಕೆಲಸ. ಇನ್ನೂ ಹೆಚ್ಚಿನ ಕಾನೂನುರೀತ್ಯ ಯಾವುದೇ ಅಧಿಕಾರವಿಲ್ಲ. ಹೀಗಾಗಿ ಅನಿವಾರ್ಯವಾಗಿ ಅವರು ಬಾಲಕಿಯನ್ನು ಹೆರಿಗೆಯಾಗುವವರೆಗೂ ಜೋಪಾನ ಮಾಡುವ ಜವಾಬ್ದಾರಿಗೆ ಬದ್ಧರಾಗುತ್ತಾರೆ. ಆನಂತರ ಮಗುವನ್ನು ಪಡೆದು, ಬೇರೆಯವರಿಗೆ ದತ್ತು ಕೊಡುವ ಸೀಮಿತ ಪರಿಧಿಯೊಳಗೆ ಮಾತ್ರ ಅವರ ಯೋಚನೆ ಮತ್ತು ಕೆಲಸಗಳಿರುತ್ತದೆ.

ಈ ಹುಡುಗಿಯೇ ಒಂದು ಮಗು. ಆಗಲೇ ಇನ್ನೊಂದು ಮಗುವನ್ನು ಹೊರುವ, ಹೆರುವ ಸಾಮರ್ಥ್ಯವಿದೆಯೇ ಎಂಬುದು ಬೇರೆಯದೇ ಪ್ರಶ್ನೆ. ಆದರೆ ಇಡೀ ವ್ಯವಸ್ಥೆ ಗಮನಿಸದಿರುವ ಒಂದು ಸೂಕ್ಷ್ಮ ಸಂಗತಿಯೆಂದರೆ, ಆ ಮಗುವನ್ನು ಹೊತ್ತು, ಹೆತ್ತ ನಂತರ ಆ ಹುಡುಗಿಯನ್ನು ಈ ಸಮಾಜ ಹೇಗೆ ನೋಡುತ್ತದೆ? ಅಥವಾ ಇವಳಿಗೆ ಹುಟ್ಟುವ ಮಗುವನ್ನು ಏನೆಂದು ಗೇಲಿ ಮಾಡುತ್ತದೆ? ತಂದೆಯ ಪಾಪವನ್ನು ಹೆತ್ತ ಈ ಬಾಲೆಯ ಮನಸ್ಸಿನ ಮೇಲಾಗುವ ಪರಿಣಾಮವೇನು? ತಂದೆಯಿಂದ ಹುಟ್ಟಿದ ಮಗು ಎಲ್ಲ ರೀತಿಯಿಂದಲೂ ಆರೋಗ್ಯವಾಗಿರುವುದು ಸಾಧ್ಯವೇ? ಮುಂದಿನ ಅವಳ ಓದು ಮತ್ತು ಭವಿಷ್ಯದ ಗತಿ ಏನು? ಒಟ್ಟಾರೆ ನಮ್ಮ ಸಂಪ್ರದಾಯಸ್ಥ ಹಳ್ಳಿಗಳಲ್ಲಿ ಇಂಥಹದೊಂದು ಸಂಕಟವನ್ನು ಎದುರಿಸಿ ಮಗುವನ್ನು ಹೆತ್ತ ಚಿಕ್ಕ ಹುಡುಗಿಯೊಬ್ಬಳು ಬದುಕುವ ಬಗೆ ಹೇಗೆ? ಇಂತಹ ಸೂಕ್ಷ್ಮತೆಗಳ ಜೊತೆಗೆ ಕಾನೂನಿನೊಂದಿಗೆ ಸಂಘರ್ಷಕ್ಕೆ ಒಳಗಾಗಬೇಕಾಗಿರುವ ಮಗುವನ್ನು ಕೇಂದ್ರದಲ್ಲಿರಿಸಿಕೊಂಡು ಯೋಚಿಸುವ ಸಂವೇದನಾಶೀಲತೆ ನಮ್ಮ ವ್ಯವಸ್ಥೆಗೆ, ಇಂತಹ ಮಗುವಿನೊಂದಿಗೆ ವ್ಯವಹರಿಸಬೇಕಾದ ಇಲಾಖೆಗಳಿಗೆ ಬಂದಿಲ್ಲದಿರುವುದು ನಮ್ಮ ಮಕ್ಕಳ ಪಾಲಿನ ಬಹು ದೊಡ್ಡ ದುರಂತವೆನ್ನದೇ ಬೇರೇನೆನ್ನೋಣ?

ಹೀಗೆಂದೇ ಪಾಪದ ಬಸಿರನ್ನು ತೆಗೆಯಿರೆಂದು ಹುಡುಗಿ ಮತ್ತು ಹುಡುಗಿಯ ತಾಯಿ ಸಂಕಟದಿಂದ ಎಲ್ಲರೆದುರು ಕೈ ಜೋಡಿಸಿ ಬೇಡಿಕೊಳ್ಳುತ್ತಿದ್ದರೂ ‘ಗರ್ಭಪಾತ ಮಾಡಿಸಿಕೊಂಡರೆ ಸಾಕ್ಷ್ಯನಾಶವಾಗುತ್ತದೆ’, ‘ಯಾವುದೇ ರೀತಿಯ ಗರ್ಭಪಾತ ಕಾನೂನುಬಾಹಿರ’, ‘3 ತಿಂಗಳ ನಂತರ ಯಾವುದೇ ರೀತಿಯಲ್ಲೂ ಗರ್ಭಪಾತ ಮಾಡುವಂತಿಲ್ಲ’ ಎಂಬ ಮಾತುಗಳನ್ನು ಕಾನೂನುಬದ್ಧವಾಗಿ, ಇಂತಹ ವಿಶೇಷ ಪ್ರಕರಣಗಳಲ್ಲಿ ಯಾವ ರೀತಿಯ ಪರ್ಯಾಯಗಳಿವೆ ಎಂದರಿಯದ, ಪೊಲೀಸ್ ಇಲಾಖೆಯ ಕೆಲ ಸಿಬ್ಬಂದಿಗಳು ಮತ್ತು ಆರೋಗ್ಯ ಇಲಾಖೆಯ ಕೆಲ ಸಿಬ್ಬಂದಿಗಳು ಈ ತಾಯಿ ಮಗಳಿಗೆ ಹೇಳಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.

ಆದರೆ ಸುಪ್ರೀಮ್ ಕೋರ್ಟಿನ ಮಾರ್ಗದರ್ಶಿ ಸೂತ್ರದಂತೆ, ಅತ್ಯಾಚಾರದಂತಹ ವಿಶೇಷ ಪ್ರಕರಣಗಳಲ್ಲಿ ಕಾನೂನುಬದ್ಧ ಗರ್ಭಪಾತವನ್ನು ಮಾಡಲು 20 ವಾರಗಳವರೆಗೆ ಸಮಯಾವಕಾಶವಿರುತ್ತದೆ. ಆರೋಗ್ಯ ಸಂಶೋಧನಾ ಇಲಾಖೆಯ ಮಾರ್ಗದರ್ಶಿ ಸೂತ್ರವೂ ಇದನ್ನೇ ಒತ್ತಿ ಹೇಳುತ್ತದೆ. ಇದಕ್ಕೆ ಇಬ್ಬರು ತಜ್ಞ ಪ್ರಸೂತಿ ಮತ್ತು ಸ್ತ್ರೀರೋಗ ವೈದ್ಯರು, ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯನ್ನು ಕೂಲಂಕಷವಾಗಿ ಪರೀಕ್ಷಿಸಿ ಒಪ್ಪಿಗೆ ನೀಡಬೇಕು. ಮತ್ತು ಕೇಸಿನ ಸಾಕ್ಷ್ಯಕ್ಕೆ ಬೇಕಾಗುವ ವೈದ್ಯಕೀಯ ಮಾದರಿಗಳನ್ನು ಸಂಗ್ರಹಿಸಿಟ್ಟುಕೊಂಡು ವೈದ್ಯರು ಗರ್ಭಪಾತವನ್ನು ಮಾಡಬಹುದೆಂದು ಮಾರ್ಗದರ್ಶಿ ಸೂತ್ರ ಹೇಳುತ್ತದೆ.

ಯಾವುದೇ ರೀತಿಯ ಈ ಬಗೆಯ ವಿಶೇಷ ಕಾನೂನುಬದ್ಧ ಗರ್ಭಪಾತಕ್ಕೆ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಒಪ್ಪಿಗೆ, ಅವಳು ಅಪ್ರಾಪ್ತೆಯಾಗಿದ್ದರೆ ಪೋಷಕರ ಒಪ್ಪಿಗೆ ಬೇಕಾಗುತ್ತದೆ. ಈ ಪ್ರಕರಣದಲ್ಲಿ ಸಂತ್ರಸ್ತೆ ಗರ್ಭಪಾತಕ್ಕಾಗಿ ಕಾಯುತ್ತಿದ್ದಾಳೆ. ತಾಯಿಗೂ ಬಸಿರು ಕಳೆದರೆ ಸಾಕು. ಮುಂದೆ ಹೇಗೋ ಬದುಕುತ್ತೇವೆ ಎಂಬ ಮನೋಭಾವವಿದೆ. ಆದರೆ ವೈದ್ಯರು ಪೊಲೀಸ್ ಇಲಾಖೆಯ ಅನುಮತಿ ಪಡೆದು ಬಂದರೆ ಮಾತ್ರ ಗರ್ಭಪಾತ ಮಾಡುವುದಾಗಿ ಹೇಳುತ್ತಿದ್ದಾರೆ. ಏಕೆಂದರೆ ಈ ಹಿಂದೆ ಇಂತಹ ಘಟನೆ ನಡೆದ ಸಂದರ್ಭದಲ್ಲಿ ವೈದ್ಯರು ಗರ್ಭಪಾತ ಮಾಡಿದಾಗ ಸಾಕ್ಷ್ಯ ನಾಶ ಮಾಡಿದ್ದೀರಿ ಎಂದು ವೈದ್ಯರಿಗೇ ನೊಟೀಸ್ ನೀಡಿದ್ದರಂತೆ. ಅದಕ್ಕೆ ಈ ಬಾರಿ ಅವರ ಅನುಮತಿ ಇದ್ದರೆ ಮಾತ್ರ ನಾವು ಗರ್ಭಪಾತ ಮಾಡುತ್ತೇವೆನ್ನುತ್ತಾರೆ ವೈದ್ಯರು.

ಆದರೆ ಪೊಲೀಸರು ಮಾತ್ರ ‘ಗರ್ಭಪಾತ ಕಾನೂನು ಪ್ರಕಾರ ಅಪರಾಧ. ಹೀಗಾಗಿ ನಾವು ಅನುಮತಿ ನೀಡಲಾಗುವುದಿಲ್ಲ. ಹುಡುಗಿಯ ಗರ್ಭಪಾತಕ್ಕೂ ನಮಗೂ ಸಂಬಂಧವೂ ಇಲ್ಲ. ಹುಡುಗಿrape-illustration ಮತ್ತು ಅವಳ ಪೋಷಕರ ಅನುಮತಿ ಇದ್ದರೆ ಗರ್ಭಪಾತ ಮಾಡಿಸಬಹುದು. ನಮ್ಮ ಅಭ್ಯಂತರವೇನಿಲ್ಲ’ ಎನ್ನುತ್ತಾರೆ. ಹಾಗಿದ್ದರೆ ಬೇಕಾದಂತಹ ಸಾಕ್ಷ್ಯಗಳ ವೈದ್ಯಕೀಯ ಮಾದರಿಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಮನವಿಯನ್ನು ಯಾರು ನೀಡಬೇಕು? ಇದಕ್ಕೆ ಆರೋಗ್ಯ ಇಲಾಖೆಗಾಗಲೀ, ಪೊಲೀಸ್ ಇಲಾಖೆಗಾಗಲಿ ಯಾವುದೇ ಮಾರ್ಗದರ್ಶಿ ಸೂತ್ರವಿಲ್ಲವೇ? ಈ ಹಿಂದೆ ಎಲ್ಲಿಯೂ ಇಂತಹ ಘಟನೆಗಳು ನಡೆದೇ ಇಲ್ಲವೇ? ಆಗಲೂ ಹೆಣ್ಣುಮಗುವಿನ ಬಸಿರನ್ನು ಸಾಕ್ಷ್ಯಕ್ಕಾಗಿ ಹಾಗೆಯೇ ಉಳಿಸಿಕೊಂಡಿದ್ದರೆ? ಎಂಬ ಪ್ರಶ್ನೆಗಳು ಹಾಗೇ ಉಳಿದಿದೆ. ಕನಿಷ್ಠಪಕ್ಷ ಅಮಾಯಕ ಹುಡುಗಿಯ ಭವಿಷ್ಯದ ಹಿತದೃಷ್ಟಿಯಿಂದ ಸಾಕ್ಷ್ಯದ ಮಾದರಿಗಳನ್ನು ಸಂಗ್ರಹಿಸಿಟ್ಟುಕೊಂಡು ಬೇಕಾದಂತಹಾ ವೈದ್ಯಕೀಯ ಕ್ರಮವನ್ನು ಜರುಗಿಸಬಹುದು ಎಂದಷ್ಟಾದರೂ ಪೊಲೀಸ್ ಇಲಾಖೆ ಅನುಮತಿ ಪತ್ರ ನೀಡಬಹುದಲ್ಲವೇ? ಅಥವಾ ಆರೋಗ್ಯ ಇಲಾಖೆಯೇ ಸಾಕ್ಷ್ಯವನ್ನು ಸಂಗ್ರಹಿಸಿಟ್ಟುಕೊಂಡು ಗರ್ಭಪಾತ ಮಾಡಬಹುದಲ್ಲವೇ?

ಯಾರಿಗೂ, ಯಾವ ಇಲಾಖೆಗೂ ಈ ಅಸಹಾಯಕ ಹೆಣ್ಣುಮಗುವಿನ, ಅವಳ ಪಾಪದ ಗರ್ಭ ತೆಗೆಸುವ ಜವಾಬ್ದಾರಿಯನ್ನು ಹೊರಲು ಮನಸ್ಸಿಲ್ಲವೆಂದಾದರೆ ಆ ಹುಡುಗಿಯ ಗತಿಯೇನು? ನಾವೀಗ 21ನೆಯ ಶತಮಾನದಲ್ಲಿದ್ದೇವೆ. ವೈದ್ಯಕೀಯ ಮತ್ತು ತಂತ್ರಜ್ಞಾನದಲ್ಲಿ ಮಹತ್ತರ ಸಾಧನೆ ಮಾಡಿದ್ದೇವೆ. ಸಾಕ್ಷ್ಯಗಳ ವೈದ್ಯಕೀಯ ಮಾದರಿ ಸಂಗ್ರಹಿಸಿಡಲು ಬೇಕಾದಂತಹ ವ್ಯವಸ್ಥೆ ಹಾಸನದಲ್ಲಿ ಇದೆ. ವೈದ್ಯಕೀಯ ಕಾಲೇಜು ಕೂಡ ಇದೆ. ಇಷ್ಟೆಲ್ಲಾ ಇದ್ದೂ ಕೇವಲ ಅಪ್ಪ ಮಾಡಿದ ಹೀನ ಕೆಲಸಕ್ಕೆ ಸಾಕ್ಷಿಯೊದಗಿಸಲು ಈ ಹೆಣ್ಣುಮಗುವಿನ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತೇವೆಂದರೆ ನಮ್ಮನ್ನು ಮನುಷ್ಯರೆಂದು ಹೇಗೆ ಕರೆದುಕೊಳ್ಳುವುದು?

ಆದರೆ ಇಷ್ಟೆಲ್ಲಾ ಗೋಜಲು, ಗೊಂದಲಗಳ ಮಧ್ಯೆ ಮತ್ತೆ ಒಂದು ವಾರ ಕಳೆದು ಹೋಗಿದೆ. ಆ ಹುಡುಗಿಯ ಗರ್ಭಕ್ಕೆ 5ತಿಂಗಳು ಕಳೆದು ಹೋದರೆ, ಗರ್ಭಪಾತ ಮಾಡಿಸುವುದು ಕಾನೂನು ರೀತಿಯೂ ಸಾಧ್ಯವಿಲ್ಲ ಮತ್ತು ಹುಡುಗಿಯ ಆರೋಗ್ಯದ ಹಿತದೃಷ್ಟಿಯಿಂದಲೂ ಸಾಧ್ಯವಿಲ್ಲ. ಹೀಗಾಗಿ ಈಗಿನ್ನೂ ಪ್ರೌಢಾವಸ್ಥೆಗೆ ಕಾಲಿಡುತ್ತಿರುವ, ವಿದ್ಯಾಭ್ಯಾಸದಲ್ಲಿ ಎಸ್ಸೆಸೆಲ್ಸಿಯಂತಹ ಮಹತ್ವದ ಘಟ್ಟವನ್ನು ತಲುಪುತ್ತಿರುವ, ಕಾನೂನಿನ ದೃಷ್ಟಿಯಿಂದ ಇನ್ನೂ ಮಗುವೆಂದೇ ಪರಿಗಣಿಸಲ್ಪಟ್ಟಿರುವ ಈ ಮಗುವಿಗೇ ತಂದೆಯೆನ್ನುವ ಕಾಮುಕ ಕರುಣಿಸಿರುವ ಇನ್ನೊಂದು ಮಗುವನ್ನು ಹೆರುವಂತಹ ಅಮಾನವೀಯ ಶಾಪ ಖಂಡಿತಾ ಬೇಡ. ನಮ್ಮ ಮಕ್ಕಳಿಗೇ ಹೀಗಾಗಿದ್ದರೆ ಏನು ಮಾಡುತ್ತಿದ್ದೆವು ಎಂದು ಸಂಬಂಧಪಟ್ಟವರೆಲ್ಲಾ ಆತ್ಮಾವಲೋಕನ ಮಾಡಿಕೊಂಡರೆ ಸಮಸ್ಯೆಗೆ ಪರಿಹಾರ ನಮ್ಮ ಅಂತಃಕರಣಕ್ಕೆ ತಾನಾಗಿಯೇ ಹೊಳೆಯುತ್ತದೆ.