ಕಂದಮ್ಮ ಸಮಾಧಾನದ ಉಸಿರುಬಿಟ್ಟಿದ್ದಾಳೆ

– ರೂಪ ಹಾಸನ

ತಂದೆಯೆಂಬುವವನ ಭ್ರೂಣ ಒಡಲಲ್ಲಿ ಹೊತ್ತವಳ ಕಥೆ” ಎಂಬ ನನ್ನ ಲೇಖನ ವರ್ತಮಾನದಲ್ಲಿ ನೋಡಿ ಹಲವರು ಇಲ್ಲಿ ಮಾತ್ರವಲ್ಲದೇ ಮೈಲ್ ಮತ್ತು ದೂರವಾಣಿಯ ಮೂಲಕವೂ ಸ್ಪಂದಿಸಿದ್ದಾರೆ. ನಿಮ್ಮೆಲ್ಲರ ಕಾಳಜಿಗೂ ಧನ್ಯವಾದಗಳ ಜೊತೆಗೆ ಮುಂದಿನ ಬೆಳವಣಿಗೆಯನ್ನು ಹೇಳುವುದು ನನ್ನ ಕರ್ತವ್ಯವಾಗಿದೆ.

ವಿಷಯದ ತೀವ್ರತೆಯನ್ನು ಗಮನಿಸಿ ದಿ “ಹಿಂದು” ಪತ್ರಿಕೆಯ ಹಾಸನದ ವರದಿಗಾರರಾದ ಸತೀಶ್ ಹಾಗೂ “ಪ್ರಜಾವಾಣಿ” ವರದಿಗಾರರಾದ ಉದಯ್ ಅವರು ತಮ್ಮ ಪತ್ರಿಕೆಗಳಲ್ಲಿ child-abuseವರ್ತಮಾನದಲ್ಲಿ ನನ್ನ ಲೇಖನ ಪ್ರಕಟವಾಗುವ ಎರಡು ದಿನ ಮೊದಲೇ, ಈ ವಿಷಯವನ್ನು ರಾಜ್ಯ ವಾರ್ತೆಯಾಗಿ ಪ್ರಕಟಿಸಿದ್ದರು. ಅದನ್ನು ರಾಜ್ಯ ಸರ್ಕಾರದ ಅಡ್ವೊಕೇಟ್ ಜನರಲ್ ಆದ ಪ್ರೊ.ರವಿವರ್ಮ ಕುಮಾರ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಉಮಾಶ್ರಿಯವರ ಗಮನಕ್ಕೆ ತಂದಿದ್ದೆ. ರವಿವರ್ಮ ಕುಮಾರ್ ಅವರು ಇದಕ್ಕಿರುವ ಕಾನೂನು ಪರಿಹಾರವನ್ನು ತಿಳಿಸಿದರು. ಸಚಿವರು ತಕ್ಷಣವೇ ಸ್ಪಂದಿಸಿ ಈ ಹೆಣ್ಣು ಮಗುವಿನ ಗರ್ಭಪಾತ ಮಾಡಿಸಲು ಬೇಕಿರುವ ಅಗತ್ಯ ಕ್ರಮಗಳನ್ನು ಹಾಸನ ಜಿಲ್ಲಾಧಿಕಾರಿ, ಪೊಲೀಸ್ ಸೂಪರಿಂಟೆಂಡ್ ಮುಂತಾದವರನ್ನು ಸಂಪರ್ಕಿಸಿ ವ್ಯವಸ್ಥೆ ಮಾಡಿದರು. ಹೀಗಾಗಿ ನೆನ್ನೆ ಆ ಹುಡುಗಿಯನ್ನು ಜಿಲ್ಲಾಸ್ಪತ್ರೆಗೆ ಸೇರಿಸಿ ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನೆಲ್ಲಾ ಮಾಡಲಾಗಿದೆ. ಇಂದು ಅವಳಿಗೆ ಇಷ್ಟವಿಲ್ಲದ ಈ ಗರ್ಭವನ್ನು ತೆಗೆಯಲಾಗುತ್ತದೆ. ಕೊನೆಗೂ ಸಮಯ ಮೀರುವ ಮೊದಲೇ ಎಲ್ಲ ಇಲಾಖೆಗಳ ಅಧಿಕಾರಿಗಳ ಅಂತಃಕರಣದ ಕಣ್ಣು ತೆರೆದಿರುವುದರಿಂದ ಆ ಕಂದಮ್ಮ ಈಗಷ್ಟೇ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾಳೆ.

ಇಂಥಹ ವಿಶೇಷ ಪ್ರಕರಣಗಳಲ್ಲಿ ಸರಿಯಾದ ಕಾನೂನು ಮಾರ್ಗಸೂಚಿ ಇಲ್ಲದಿರುವುದರಿಂದ ಅದಕ್ಕೂ ತಕ್ಷಣವೇ ಸಚಿವರು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಅದರ ಕೆಲವು ಪತ್ರಿಕಾ ಹೇಳಿಕೆಗಳ ಕಟಿಂಗ್ ಜೊತೆಗಿರಿಸಿದ್ದೇನೆ. ಇಲ್ಲಿ ಮಾತ್ರವಲ್ಲದೇ ಹಾಸನದ ಜನತಾ ಮಾಧ್ಯಮ ದಿನಪತ್ರಿಕೆಯಲ್ಲೂ ನನ್ನ ಲೇಖನ ಪ್ರಕಟವಾಗಿತ್ತು. ಹಾಸನದ ಹಾಗೂ ರಾಜ್ಯಾದ್ಯಂತದ ನನ್ನ ಹಲವಾರು ಗೆಳೆಯ ಗೆಳತಿಯರು ಮಾನವೀಯ ಸ್ಪಂದನೆಯ ಜೊತೆಗೆ, ನೈತಿಕ ಬೆಂಬಲವನ್ನು ನೀಡಿದ್ದಾರೆ. ಕೆಲವು ಮಿತ್ರರು ಕಾನೂನು ಸಲಹೆಗಾಗಿ ನುರಿತ ವಕೀಲರ ದೂರವಾಣಿ ಸಂಖ್ಯೆಯನ್ನೂ ನೀಡಿದ್ದಾರೆ. ಅವರೆಲ್ಲರ ಒತ್ತಾಸೆ ಒಳಿತಿನ ಬಗೆಗಿನ ನನ್ನ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಎಲ್ಲರಿಗೂ ಮತ್ತೊಮ್ಮೆ ವಂದನೆಗಳು.

 

ವಿಜಯ ಕರ್ನಾಟಕ :

Baalaki athyaachaara- neravu-vijaykarnataka

ವಿಜಯವಾಣಿ :

athyacharakkolagada balakige neravu-vijayavani

Leave a Reply

Your email address will not be published. Required fields are marked *