Daily Archives: June 14, 2014

ಸಾಂಸ್ಕೃತಿಕ ಪ್ರಭುತ್ವ ಮತ್ತು ಭಾಷಾ ಮಾಧ್ಯಮ


– ಡಾ.ಎಸ್.ಬಿ. ಜೋಗುರ


 

 

ಈಚೆಗೆ ಸುಪ್ರೀಂ ಕೋರ್ಟ್ ತಮ್ಮ ಮಕ್ಕಳ ಶಿಕ್ಷಣ ಮಾಧ್ಯಮದ ಭಾಷೆಯ ಆಯ್ಕೆ ಪಾಲಕರದ್ದು ಎಂದು ಕರಾರುವಕ್ಕಾಗಿ ಹೇಳಿದೆ. ಆ ಮೂಲಕ ಈ ಭಾಷಾ ಮಾಧ್ಯಮದ ಚೆಂಡನ್ನು Supreme Courtಕೊನೆಗೂ ಪಾಲಕರ ಅಂಗಳಕ್ಕೆ ತಳ್ಳಿದೆ. ಇಲ್ಲಿ ಸರ್ವೋಚ್ಚ ನ್ಯಾಯಾಲಯ ಇಂಥದೇ ಮಾಧ್ಯಮವಾಗಿರಬೇಕೆಂದು ಹೇಳಿರದಿದ್ದರೂ ಸಹಜವಾಗಿ ನಮ್ಮ ಮಧ್ಯಮವರ್ಗದವರ ಒಲವು ಇಂಗ್ಲೀಷ್ ಭಾಷೆಯ ಕಡೆಗಿದೆ. ಪರಿಣಾಮವಾಗಿ ಮೊದಲೇ ಕ್ಯಾಲ್ಸಿಯಂ ಕೊರತೆಯಿಂದ ಬಳಲುತ್ತಿರುವ ಕನ್ನಡದಂಥಹ ಪ್ರಾದೇಶಿಕ ಭಾಷೆಗಳು, ಈಗ ಮತ್ತಷ್ಟು ಸಂದಿಗ್ದಗಳಿಗೆ ಸಿಲುಕಿದಂತಾಗಿವೆ. ಎಲ್ಲಿಯವರೆಗೆ ಭಾಷೆಯೊಂದು ಪ್ರತಿಷ್ಠೆ, ಅಂತಸ್ತು, ಅನುಕರಣೆಯ ಮಾರ್ಗವಾಗದೇ ಜನಸಮುದಾಯದ ಬಳಕೆಯ, ಸಂವಹನದ ಸಾಧನವಾದರೆ ತನ್ನಷ್ಟಕ್ಕೆ ತಾನೇ ಬೆಳೆಯುತ್ತದೆ. ವಸಾಹತುಶಾಹಿ ಕಾಲದಿಂದಲೂ ನಾವು ಅನುಕರಣೆ ಮತ್ತು ಪ್ರಭಾವದ ಮೂಲಕವೇ ಪಾಶ್ಚಾತ್ಯೀಕರಣ ಕ್ರೀಯೆಗೆ ಒಳಗಾದವರು. ಈ ಬಗೆಯ ಪ್ರಕ್ರೀಯೆಗೆ ಕೇವಲ ಅವರ ಹ್ಯಾಟು ಮತ್ತು ಬೂಟುಗಳು ಮಾತ್ರ ಒಳಪಡದೇ ಅವರ ಭಾಷೆಯೂ ಒಳಗಾದದ್ದು ಒಂದು ದೊಡ್ಡ ವಿಪರ್ಯಾಸ. ತಮ್ಮ ಆಡಳಿತದ ನಿರ್ವಹಣೆಗೆ ಅನುಕೂಲಕರವಾದ ವಾತಾವರಣದ ನಿರ್ಮಾಣದ ಹಿನ್ನೆಲೆಯಲ್ಲಿ ಪರಿಚಯಿಸಲಾದ ಇಂಗ್ಲೀಷ್ ಭಾಷೆಯ ಶಿಕ್ಷಣ ಈ ಮಟ್ಟಕ್ಕೆ, ಬಿಟ್ಟೆನೆಂದರೂ ಬಿಡದೀ ಮಾಯೆ ಎನ್ನುವ ಹಂತಕ್ಕೆ ಮುಟ್ಟುತ್ತದೆ ಎನ್ನುವುದು ಯಾರಿಗೂ ತಿಳಿದಿರಲಿಲ್ಲ. ಆಗಲೂ ಸ್ಥಳೀಯ ಭಾಷೆಗಳ ಮೂಲಕವೇ ಶಿಕ್ಷಣ ನೀಡುವುದು ಉಚಿತ ಎನ್ನುವ ವಾದವಿದ್ದರೂ ಪಶ್ಚಿಮದ ತತ್ವಜ್ಞಾನ ಮತ್ತು ಜ್ಞಾನ ಸಂಪತ್ತು ನಮ್ಮವರಿಗೆ ಉಣಬಡಿಸುವುದು ಬೇಡವೇ ಎಂದು ವಸಾಹತುಶಾಹಿ ಭಾಷೆಯನ್ನು ಬೆಂಬಲಿಸಿದವರೂ ಇದ್ದರು. ಈ ಬೆಂಬಲಕ್ಕೆ ಇನ್ನಷ್ಟು ಪುಷ್ಟಿ ದೊರೆತದ್ದು ಲಾರ್ಡ್ ವಿಲಿಯಂ ಬೆಂಟಿಂಕ್ 1935 ಮಾರ್ಚ್ 7 ರಂದು ಶಿಕ್ಷಣ ಮಾಧ್ಯಮಕ್ಕೆ ಸಂಬಂಧಿಸಿದಂತೆ ಹೊರಡಿಸಿದ ಒಂದು ಸರ್ಕಾರಿ ಆದೇಶದ ಮೂಲಕ. ಇದು ಬ್ರಿಟಿಷ ಶಿಕ್ಷಣತಜ್ಞ ಲಾರ್ಡ್ ಮೆಕಾಲೆಯವರ ಧೋರಣೆಯನ್ನು ಆಧರಿಸಿತ್ತು. ‘ಶಿಕ್ಷಣಕ್ಕೆಂದು ಮೀಸಲಾಗಿರುವ ಹಣವನ್ನು ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಯೋಜನೆಗಳಿಗೆ ಮಾತ್ರ ನೀಡಲಾಗುವುದು’ ಎಂದು ಆ ಆದೇಶ ಹೇಳುತ್ತಿತ್ತು. ಉದ್ದೇಶ ಅಂತಿಮವಾಗಿ ಸಾಧ್ಯವಾದಷ್ಟು ಹೆಚ್ಚೆಚ್ಚು ಭಾರತೀಯ ಬ್ರಿಟಿಷರನ್ನು ರೂಪಿಸುವುದೇ ಆಗಿತ್ತು.

ಅದೇ ರೀತಿಯಾಗಿ 1853 ರಲ್ಲಿ ಜಾರ್ಜ್ ಕ್ಯಾಂಬೆಲ್ ಎನ್ನುವ ಬ್ರಿಟಿಷ ಚಿಂತಕ ತನ್ನ ಒಂದು ವರದಿಯಲ್ಲಿ ಹೀಗೆ ಹೇಳಿದ್ದಾನೆ ‘ವೃತ್ತ ಪತ್ರಿಕೆಗಳ ಹಾಗೆ ಇಂಗ್ಲೀಷ್ ಮಾತನಾಡುವ ವರ್ಗದ ಮೇಲೆ ವಸಾಹತುಶಾಹಿ ಅಧಿಕಾರಿಗಳು ಅವಲಂಬಿಸಿದ್ದರು. ಮಿಕ್ಕವರು ಗುಲಾಮರಂತೆ ಬದುಕಬೇಕಿತ್ತು.’ ಮೆಕಾಲೆಯ ಧೋರಣೆಯ ಮೂಲಕ ಇಂಗ್ಲಿಷ ಶಿಕ್ಷಣ ನಮ್ಮಲ್ಲಿ ಬಹು ಬೇಗನೇ ಜನಪ್ರಿಯವಾಯಿತಾದರೂ ಪರೋಕ್ಷವಾಗಿ ಪ್ರಾದೇಶಿಕ ಭಾಷೆಗಳ ಕತ್ತನ್ನು ಹಿಚುಕುವ ಯತ್ನವನ್ನೂ ಮಾಡಲಾಗಿತ್ತು. ಬ್ರಿಟಿಷರ ಆಳ್ವಿಕೆಯ ಅವಧಿಯಲ್ಲಿ ಜಾನ್ ವಿಲ್ಸನ್ ಹಾಗೂ ಪಾಜ್ಸನ್ ರಂಥಹ ಚಿಂತಕರು ಇಲ್ಲಿಯ ಪ್ರಾದೇಶಿಕ ಭಾಷೆಗಳ ಅಳಿವಿನ ಅಪಾಯದ ಬಗ್ಗೆಯೂ ಮಾತನಾಡಿದ್ದರು. ಆದರೆ ಅವರ ಧ್ವನಿಗೆ ಮೆಕಾಲೆಗೆ ಸಿಕ್ಕ ಬೆಂಬಲ ದೊರೆಯಲಿಲ್ಲ. ಇಂಗ್ಲೀಷ್ ಮಾಧ್ಯಮದ ಮೂಲಕ ಶಿಕ್ಷಣದ ಪ್ರಸಾರ ಸಾಧ್ಯವಾಯಿತಾದರೂ ಅದೊಂದು ಭಾಷೆಯಾಗಿ ಭಾರತೀಯರ ಎದೆಯಾಳದ ತಳಮೂಲಕ್ಕೆ ಇಳಿಯಲಿಲ್ಲ. ಭಯಂಕರ ಪ್ರಯತ್ನ ಪಟ್ಟು ಅದನ್ನು ಕಲಿಯುವುದು, ತಪ್ಪದೇ ಮಾತನಾಡುವುದು, ನುಡಿಗಟ್ಟುಗಳನ್ನು ಸರಿಯಾಗಿ ಬಳಸುವುದು ಇದರಲ್ಲಿಯೇ ಆ ಭಾಷೆ ಬಳಸುವವನ ಸಾಮರ್ಥ್ಯ ವ್ಯರ್ಥವಾಗುವುದನ್ನು ಕಂಡು ಅನೇಕ ವಿದೇಶಿಯರೇ ಪ್ರಾದೇಶಿಕ ಭಾಷೆಯಲ್ಲಿಯೇ ಶಿಕ್ಷಣ ನೀಡಬೇಕು ಅಂದಿರುತ್ತಾರೆ. ಅವರಲ್ಲಿ ಲಾರ್ಡ್ ಕರ್ಜನ್ ಕೂಡಾ ಒಬ್ಬ. ಹಾಗೆಯೇ 1917 ರಲ್ಲಿ ಮೈಕಲ್ ಸ್ಯಾಡ್ಲರ್ ಅವರ ನೇತೃತ್ವದಲ್ಲಿ ನೇಮಕವಾದ ನಿಯೋಗವು ಕೂಡಾ ಈ ಕೆಳಗಿನಂತೆ ಅಭಿಪ್ರಾಯ ಪಟ್ಟಿದೆ.

‘ತರುಣನೊಬ್ಬ ತನ್ನ ಶಿಕ್ಷಣವನ್ನು ಮುಗಿಸಿದ ನಂತರ, ತನ್ನ ತಾಯ್ನುಡಿಯಲ್ಲಿ ಸರಿಯಾಗಿ ಮತ್ತು ಸುಗಮವಾಗಿ ಓದಿ ಬರೆಯುವ ಶಕ್ತಿಯನ್ನು ಸಂಪಾದಿಸುವಂತೆ ಮಾಡದೇ ಇರುವ ಶಿಕ್ಷಣದಲ್ಲಿ ಏನೋ ಒಂದು ದೋಷವಿದೆ. ಆದ್ದರಿಂದ ಇನ್ನು ಮೇಲೆ ಪ್ರಾದೇಶಿಕ ಭಾಷೆಗಳ ಅಧ್ಯಯನವನ್ನು ಗಂಭೀರವಾಗಿ ನಡೆಸಲು ನೆರವಾಗುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕೆನ್ನುವುದು ನಿರ್ವಿವಾದವಾದ ಸಂಗತಿ’ ಎಂದಿತ್ತು. ಇದು ಕೇವಲ ಸ್ವಾತಂತ್ರ್ಯಪೂರ್ವದ ಕತೆಯಲ್ಲ; ಸ್ವತಂತ್ರ ಭಾರತದಲ್ಲಿಯೂ ಇಡೀ ದೇಶ ಒಪ್ಪಿಕೊಳ್ಳಬಹುದಾದ ರಾಷ್ಟ್ರಭಾಷೆಯನ್ನು ಗುರುತಿಸುವಲ್ಲಿಯೂ ಕೆಲವು ಅಡೆತಡೆಗಳಾದವು. ಕೊನೆಗೂ ಗಾಂಧೀಜಿಯವರ ತ್ರಿಭಾಷಾ ಸೂತ್ರ ಇಲ್ಲಿ ನೆರವಾಯಿತು. ಆರಂಭದಲ್ಲಿ ಭಾರತೀಯ ಸಂವಿಧಾನದಲ್ಲಿ ದೇವಭಾಷೆ ಎಂದು ಕರೆಯಲಾಗುವ ಸಂಸ್ಕೃತವನ್ನೊಳಗೊಂಡು ಅಧಿಕೃತವಾದ 15 ಭಾಷೆಗಳನ್ನು ಪ್ರಾದೇಶಿಕ ಭಾಷೆಗಳನ್ನಾಗಿ ಗುರುತಿಸಲಾಯಿತು.

ಸುಮಾರು ಒಂದು ಶತಮಾನ ದಾಟಿದರೂ ಶಿಕ್ಷಣದಲ್ಲಿ ಭಾಷಾ ಮಾಧ್ಯಮದ ಸಮಸ್ಯೆ ಒಂದು ಬಹುದೊಡ್ಡ ತೊಡಕಾಗಿ ಹಾಗೇ ಉಳಿದಿದೆ. ಯಾವುದೇ ಒಂದು ಜನಭಾಷೆ ಗಟ್ಟಿಯಾದುದೋ ಇಲ್ಲವೋ ಎಂದು ಗುರುತಿಸಿಕೊಳ್ಳಬೇಕಾದರೆ ಅತಿ ಮುಖ್ಯವಾಗಿ ಅದನ್ನು ಮಾತನಾಡುವ ಜನರೇ ಕಾರಣ. ಆ ಜನ ತಮ್ಮ ಭಾಷೆಯನ್ನು ಎದೆಗೆ ಹಚ್ಚಿಕೊಂಡು ಬಳಸುತ್ತಿರುವ ಮತ್ತು ಬೆಳೆಸುತ್ತಿರುವ ಸಂಗತಿಗಳು ಅಲ್ಲಿ ಮುಖ್ಯವಾಗುತ್ತವೆ. ಇನ್ನು ಅನೇಕರು ಈ ಬಗೆಯ ಸಮಸ್ಯೆಗಳು ಉದ್ಭವವಾದಾಗ ಸಾಹಿತ್ಯಕ ವಲಯದ ಕಡೆಗೆ ನೋಡುತ್ತಾರೆ. ಆ ನೋಟದಲ್ಲಿ ಅತಿ ಮುಖ್ಯವಾಗಿ ಈ ಸಮಸ್ಯೆಯ ನಿವಾರಣೆಯಲ್ಲಿ ಇವರು ನೆರವಾಗಬಹುದು ಎನ್ನುವುದು. ಆದರೆ ಪರಿಸ್ಥಿತಿ ಹಾಗಿಲ್ಲ. ಬಹಳಷ್ಟು ಸಾಹಿತಿಗಳ ಬರಹ ಬದುಕಿದಂತಿಲ್ಲ, ಇಲ್ಲವೇ ಬದುಕಿದಂತೆ ಬರೆದವರಿಲ್ಲ. ಹೀಗಾಗಿ ಸಾಹಿತ್ಯಕ ರಾಜಕಾರಣದ ಸಂದಿಗ್ದದ ಬಗ್ಗೆ ಮಾತುಗಳು ಮೂಡುತ್ತವೆಯೇ ಹೊರತು ಅದಕ್ಕಿಂತ ಹೆಚ್ಚಿನದೇನೂ ಇವರಿಂದ ಸಾಧ್ಯವಿಲ್ಲ ಎನ್ನುವ ಮಾತೂ ಇದೆ. ಇನ್ನು ಪಡೆದ ಪ್ರಶಸ್ತಿಗಳನ್ನು ಹಿಂದುರುಗಿಸುವುವಂತಹ ನಡೆಗಳು ಪರಿಹಾರವಂತೂ ಅಲ್ಲ. ಇದು ಇನ್ನೊಂದು ಬಗೆಯ ತೊಡಕಿಗೆ ಕಾರಣವಾಗುತ್ತದೆ. ಈಗಿರುವ ಸಾಹಿತ್ಯಕ ಗುಂಪುಗಾರಿಕೆಗೆ ಹೊಸ ಸೇರ್ಪಡೆಯನ್ನು ಇದು ತಂದುಕೊಡಬಲ್ಲದೇ ಹೊರತು ಬೇರೇನಲ್ಲ. ಅದೂ ಅಲ್ಲದೇ ಕೆಲವರು ಪಡೆದ ಪ್ರಶಸ್ತಿಗಳ ಹಿನ್ನೆಲೆ ಮತ್ತು ಔಚಿತ್ಯವೂ ಅವರಿಗೆ ಮನವರಿಕೆಯಿದೆ. ಹೀಗಾಗಿ ಅವುಗಳನ್ನು ಪಡೆಯುವಲ್ಲಿ ಮಾಡಿದ ಕಸರತ್ತನ್ನು, ಮರಳಿ ಕೊಡಬೇಕು ಎಂದಾಗ ಮರೆಯುವದಾದರೂ ಹೇಗೆ?

ಸಾಹಿತ್ಯಕ ಪರಿಸರ ಅದೆಷ್ಟು ಕಲುಷಿತವಾಗಿದೆಯೆಂದರೆ ಶತಮಾನದ ಹೊಸ್ತಿಲಲ್ಲಿರುವ ಪರಿಷತ್ತು ಕೂಡಾ ನೂರು ವರ್ಷಗಳನ್ನು ದಾಟುವ ಸಂದರ್ಭದಲ್ಲಿಯೂ ತನ್ನ kasapaಮೂಲ ಆಶಯವನ್ನು ಕುರಿತು ಗಂಭೀರವಾಗಿ ಆಲೋಚಿಸುವ ಪರಿಸ್ಥಿತಿ ಬಂದೊದಗಿದೆ. ತಾಲೂಕು ಮತ್ತು ಜಿಲ್ಲಾ ಮಟ್ಟದ, ರಾಜ್ಯ ಮಟ್ಟದ ಸಮ್ಮೇಳನಗಳಲ್ಲಿ ಆಯಾ ಜಿಲ್ಲೆಗಳ ಸಾಹಿತಿಗಳನ್ನೇ ಸರಿಯಾಗಿ ಗುರುತಿಸಲಾಗದ ಪರಿಷತ್ತು, ಆರಂಭದ ಒಂದೆರಡು ದಶಕಗಳನ್ನು ಹೊರತು ಪಡಿಸಿದರೆ ಸಾಂಸ್ಕೃತಿಕ-ಸಾಹಿತ್ಯಕ ರಾಜಕಾರಣದ ಮೂಲಕವೇ ಕನ್ನಡದ ತೇರನ್ನು ಈವರೆಗೆ ಎಳೆಯುತ್ತಾ ಬಂದಿದೆ. ಪ್ರತಿ ಸಮ್ಮೇಳನದಲ್ಲೂ ಅಧ್ಯಕ್ಷರನ್ನು ಹೊರತು ಪಡಿಸಿ ಮತ್ತೆ ಮತ್ತೆ ಅದೇ ಮುಖಗಳು, ಹೆಸರುಗಳು. ಪರಿಷತ್ತು ರಾಜ್ಯದ ಕೆಲವೇ ಕೆಲವು ಜನಪ್ರಿಯ ಸಾಹಿತಿಗಳನ್ನು ಗುತ್ತಿಗೆ ಹಿಡಿದಂತೆ ಸಮ್ಮೇಳನಗಳನ್ನು ನಡೆಸುವಲ್ಲಿಯೇ ಬಹುದೊಡ್ಡ ತೊಡಕುಗಳಿವೆ. ರಾಜ್ಯದ ಕೆಲ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಮೂಲತ: ರಾಜಕಾರಣಿ ಹೆಚ್ಚು, ಸಾಹಿತಿ ಕಡಿಮೆ ಎನ್ನುವ ಕೆಲ ಜಿಲ್ಲಾ ಮತ್ತು ತಾಲೂಕು ಅಧ್ಯಕ್ಷರುಗಳಿದ್ದಾರೆ. ಪರಿಷತ್ತಿನ ಆಶಯವನ್ನು ಮಣ್ಣು ಮಾಡಲು ಅವರಷ್ಟೇ ಸಾಕು. ತಳಮಟ್ಟದಲ್ಲಿಯೇ ನೆಟ್ಟಗಿಲ್ಲದ ಪರಿಷತ್ತು ನೂರು ವರ್ಷಗಳ ನಂತರವೂ ಜಾಗೃತವಾಗಿ ಅಡಿ ಇಡಬೇಕಾದ ಅವಶ್ಯಕತೆಯಿದೆ. ‘ಅವರು ತುಂಬಾ ಒಳ್ಳೆಯವರು ಹೀಗಾಗಿ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು’ ಎನ್ನುವದಾಗಲೀ, ‘ಅವರಿಗೆ ವಯಸ್ಸಾಯಿತು ಈ ಬಾರಿಯಾದರೂ ಮಾಡಿ ಬಿಡೋಣ’ ಎನ್ನುವ ಹಿನ್ನೆಲೆಯಲ್ಲಿ ಅಧ್ಯಕ್ಷರನ್ನಾಗಿ ಮಾಡೋಣ ಎನ್ನುವ ಬಾಲಿಶ ಮನ:ಸ್ಥಿತಿಯ ಬದಲು ಒಳ್ಳೆಯತನ ಮತ್ತು ವಯಸ್ಸು ಮಾನದಂಡಗಳೇ ಅಲ್ಲ ಎನ್ನುವ ಕನಿಷ್ಟ ತಿಳುವಳಿಕೆಯಾದರೂ ಬೇಡವೇ? ಆಮಂತ್ರಣ ಪತ್ರಿಕೆ ರೂಪಿಸುವವನೊಬ್ಬ, ಯಾರನ್ನು ಕರೆಯಬೇಕು ಯಾರನ್ನು ಕರೆಯಬಾರದು ಎಂದು ತೀರ್ಮಾನಿಸುವವ ಇನ್ನೊಬ್ಬ. ಗೋಷ್ಟಿಗಾಗಿ ಒತ್ತಡ ತಂದವರಾರು? ಕವಿಗೋಷ್ಟಿಯಲ್ಲಿ ಯಾರನ್ನು ತುರುಕಬೇಕಿದೆ? ತಮಗೆ ಆಪ್ತರಾದವರು ಯಾರು? ಇಂಥಾ ಎಲ್ಲಾ ಕಂತ್ರಾಟ್ ಗಳನ್ನು ಒಳಗೊಂಡು ನಡೆಯುವ ಜಿಲ್ಲಾ ಮತ್ತು ತಾಲೂಕು ಮಟ್ಟದ ಸಮ್ಮೇಳನಗಳು ಅದಾವ ಬಗೆಯ ಕನ್ನಡ ಕಾಳಜಿಯನ್ನು ಬೆಳೆಸುತ್ತವೆ ಎನ್ನುವುದೇ ದೊಡ್ದ ಜಿಜ್ಞಾಸೆ. ಪರಿಷತ್ತು ಋಣಸಂದಾಯದ ವೇದಿಕೆಯಾಗದೇ ಸಮರ್ಥರಿರುವ ಯಾರೇ ಕನ್ನಡಿಗರಾಗಲಿ ಅವರಿಗೆ ಅವಕಾಶ ಒದಗಿಸುವ ಮೂಲಕ ನಾಡು-ನುಡಿಯ ಶ್ರೆಯೋಭಿವೃದ್ಧಿಗೆ ಶ್ರಮಿಸುವ ಕೆಲಸ ಮಾಡಬೇಕು. ಗುತ್ತಿಗೆ ಸಂಸ್ಕೃತಿಯನ್ನು ಕೈ ಬಿಟ್ಟು ಹೊಸ ಹೊಸ ಮುಖಗಳನ್ನು ನಾಡಿಗೆ ಪರಿಚಯಿಸುವ ಕೆಲಸ ಮಾಡಬೇಕಿದೆ.

ಒಂದು ಕಾಲವಿತ್ತು. ಇಡೀ ರಾಜ್ಯದಲ್ಲಿ ಪ್ರಜ್ಞಾವಂತ ಮನಸುಗಳನ್ನು ರೂಪಿಸುವ ಮತ್ತು ನಿರ್ದೇಶಿಸುವ ಲಂಕೇಶ ಪತ್ರಿಕೆ ಇತ್ತು. ಇಂಥಹ ಸಂದರ್ಭಗಳಲ್ಲಿ ಅದು ಅತ್ಯಂತ ವಸ್ತು ನಿಷ್ಟವಾಗಿ ತನ್ನ ಅಭಿಪ್ರಾಯಗಳನ್ನು ಹೊರಹಾಕುವುದು ಮಾತ್ರವಲ್ಲದೇ ಏನಾಗಬೇಕು ಎನ್ನುವುದನ್ನು ಖಡಾಖಂಡಿತವಾಗಿ ಹೇಳುತ್ತಿತ್ತು. ಈಗ ಅಂಥಾ ಯಾವುದೇ ಪತ್ರಿಕೆಗಳು ನಮ್ಮಲ್ಲಿ ಆ ರೀತಿಯ ಖಂಡಿತವಾದವನ್ನು ಹುಟ್ಟುಹಾಕುವಷ್ಟು ಪರಿಣಾಮಕಾರಿಯಾಗಿ ಉಳಿದಿಲ್ಲ. ಅದನ್ನೇ ಪೂರ್ಣಚಂದ್ರ ತೇಜಸ್ವಿಯವರು ‘ಲಂಕೇಶ ಆ ಪೇಪರನ್ನು ಹೇಗೆ ಕ್ರಿಯೇಟ್ ಮಾಡಿದರೆಂದರೆ You can throw anything. It will digest. . ಹೀಗೆ ಒಟ್ಟು human situation  ಆಗಿ develop ಆಗ್ತಾ ಬಂತು. You see every writer will have his own concept of audience. ಸಡನ್ನಾಗಿ ಯಾರಾರೋ ಸೈಕಲ್ ಶಾಪಿನವರು, ಬೀಡಿ ಅಂಗಡಿಯವರು ನನ್ನ ಕತೇನ ಓದೋಕೆ ಶುರು ಮಾಡಿದರು. ಅಂಥವರೆಲ್ಲ ನನ್ನ ಕತೆ ಓದುತ್ತಾರೆ ಅನ್ನೋದೇ ಮುಖ್ಯ ಅಂತಲ್ಲ. But psychologically there was a shift of audience. ಹೀಗೆ ಒಂದರಿಂದ ಇನ್ನೊಂದಕ್ಕೆ ಶಿಫ್ಟಾದ್ದರಿಂದ ಹೊಸ ಛಾಲೆಂಜಗಳು ಎದುರಾದವು. ಅಲ್ಲ್ಲಿಯತನಕ ಸಭೆಗಳು ಸೆಮಿನಾರ್ ಗಳಲ್ಲೇ ಇದ್ದ ಆಡಿಯನ್ಸ್ ಕಲ್ಪನೆ ಬದಲಾಯ್ತು’ [ಹೊಸ ವಿಚಾರಗಳು-ಪು-736]

ಈಗ ಶಿಕ್ಷಣದಲ್ಲಿ ಪ್ರಾದೇಶಿಕ ಭಾಷೆಗಳ ಅಳಿವು-ಉಳಿವು ಪಾಲಕರನ್ನೇ ಅವಲಂಬಿಸಿದೆ. ಇಲ್ಲಿಯವರೆಗೆ ನಾವು ಇದಕ್ಕೆಲ್ಲಾ ಕಾರಣ ಸರಕಾರ ಇಲ್ಲವೇ ಯಾವುದೋ ಒಂದುenglish-school-karnataka ಸಾಂಸ್ಕೃತಿಕ ಸಂಸ್ಥೆಯನ್ನು ದೂರುವುದಿತ್ತು. ಈಗ ಹಾಗೆ ಮಾಡದೇ ಪಾಲಕರ ಕಡೆಗೆ ಬೆರಳು ಮಾಡಬೇಕಾಗುತ್ತದೆ. ಕನ್ನಡದಂಥಹ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆದ ಪ್ರಾದೇಶಿಕ ಭಾಷೆಗಳ ಪರಿಸ್ಥಿತಿಯೇ ಹೀಗಿರಬೇಕಾದರೆ ಇನ್ನು ಅಳಿವಿನ ಅಂಚಿನಲ್ಲಿರುವ ಸಣ್ಣ ಪುಟ್ಟ ಪ್ರಾದೇಶಿಕ ಭಾಷೆಗಳ ಸ್ಥಿತಿಯೇನು? ಮಾತೃಭಾಷೆಯಲ್ಲಿ ದಕ್ಕಿದ ಶಿಕ್ಷಣದಲ್ಲಿ ಖರೆ ಖರೆ ಜ್ಞಾನವಿದೆ, ಖುಷಿಯಿದೆ. ಯಾವುದೇ ಒಂದು ಅಧ್ಯಯನದ ಶಿಸ್ತನ್ನು ತನ್ನ ಮಾತೃಭಾಷೆಯಲ್ಲಿ ಅಧ್ಯಯನ ಮಾಡಿದ ತಿಳುವಳಿಕೆ ಮತ್ತು ಗ್ರಹಿಕೆಗೂ ಅನ್ಯ ಭಾಷೆಗಳಲ್ಲಿ ಮಾಡಲಾದ ಅಧ್ಯಯನದ ಗ್ರಹಿಕೆಗೂ ತುಂಬಾ ಅಂತರಗಳಿವೆ. ಈಗಲೂ ಪದವಿ ಮತ್ತು ಪದವಿ ಪೂರ್ವ ಹಂತದ ಶಿಕ್ಷಣದಲ್ಲಿ ಬಹುತೇಕ ಮಕ್ಕಳು ಅನುತ್ತೀರ್ಣರಾಗುವುದು ಇಂಗ್ಲಿಷ ವಿಷಯದಲ್ಲಿಯೇ. ಇಂಗ್ಲೀಷ್ ಮಾಧ್ಯಮದಲ್ಲಿ ಓದುವುದು, ಓದಿಸುವುದು ಅಂತಸ್ತಿನ ಪ್ರತೀಕಗಳಾಗಿರುವ ದಿನಮಾನಗಳಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿರುವ ಪಾಲಕರ ಪರವಾಗಿರುವ ತೀರ್ಪು ಎಷ್ಟರ ಮಟ್ಟಿಗೆ ಪ್ರಾದೇಶಿಕ ಭಾಷೆಗಳನ್ನು ಕಾಯುತ್ತದೆ ಎನ್ನುವುದೇ ಯಕ್ಷ ಪ್ರಶ್ನೆ.

ಜಾಗತೀಕರಣದ ಸಂದರ್ಭದಲ್ಲಿ ಇಂಗ್ಲೀಷ್ ಭಾಷೆಗೆ ಇನ್ನಷ್ಟು ಬೇಡಿಕೆ ಬಂದಿದೆ. ಕೆ.ಎಫ್.ಸಿ. ಮ್ಯಾಕಡೊನಾಲ್ಡ್ ದಂಹ ವಿದೇಶಿ ಕಂಪನಿಯ ಫುಡ್ ಗಳ ಜನಪ್ರಿಯತೆ ಈ ಇಂಗ್ಲೀಷ್ ಭಾಷೆಗಿಂತಲೂ ಭಿನ್ನ ಎನಿಸುವದಿಲ್ಲ. ಅಷ್ಟಕ್ಕೂ ಇಂಗ್ಲಿಷಿನಲ್ಲಿ ಮಾತನಾಡುವುದು ಅಥವಾ ಬರೆಯುವುದೇ ಬಹುದೊಡ್ಡ ಸಾಧನೆಯಂತೂ ಅಲ್ಲ. ಅದೇ ವೇಳೆಗೆ ಎಲ್ಲವನ್ನೂ ಹೋಲ್ಸೇಲಾಗಿ ಅನುಕರಣೆ ಮಾಡುವ ನಮ್ಮಂಥಹ ದೇಶಗಳ ಜನರಿಗೆ ಈ ಇಂಗ್ಲೀಷ್ ಭಾಷೆ ಯಜಮಾನ ಸಂಸ್ಕೃತಿಯ ಪ್ರತೀಕ. ಅದರ ಹೆಗಲ ಮೇಲೆ ಕೈ ಹಾಕಲಾಗದಿದ್ದರೂ ಅದರ ನೆರಳಲ್ಲಿರುವುದರಲ್ಲಿಯೇ ಪರಮಸುಖ ಅನುಭವಿಸುವ ನಮಗೆ ಇಂಗ್ಲಿಷ ಬರುವುದಿಲ್ಲ ಎನ್ನುವುದೇ ಒಂದು ಕೀಳರಿಮೆಯ ಸಂಗತಿಯಾಗುವಲ್ಲಿ ರೂಪಿತವಾದ ಸಾಂಸ್ಕೃತಿಕ ಯಜಮಾನತ್ವದ ಹಿಡಿತ ಸಾಮಾನ್ಯವೇ? ಸಮಾಜವಾದಿ ಲೋಹಿಯಾ ಅವರು ಹೀಗೆ ಹೇಳುತ್ತಾರೆ ‘ ಇಂಗ್ಲೀಷ್ ಭಾಷೆಯು ಭಾರತೀಯ ಪ್ರಜೆಗಳನ್ನು ಕೀಳರಿಮೆಯವರನ್ನಾಗಿ ಮಾಡಿ ಬಿಟ್ಟಿದೆ. ಇಂಗ್ಲೀಷ್ ಗೊತ್ತಿಲ್ಲದಿದ್ದರೆ ಯಾವುದೇ ಬಗೆಯ ಸಾರ್ವಜನಿಕ ಕೆಲಸಕ್ಕೂ ತಾವು ಅರ್ಹರಲ್ಲವೆಂದು ಅವರು ಭಾವಿಸಿಕೊಳ್ಳುತ್ತಾರೆ. ಮತ್ತು ಅದರಿಂದ ದೂರ ಉಳಿಯುತ್ತಾರೆ. ಜನರು ಹೀಗೆ ಸಾರ್ವಜನಿಕ ಕ್ಷೇತ್ರಗಳಿಂದ ದೂರ ಉಳಿಯುವದರಿಂದಲೇ ಒಂದು ಸಣ್ಣ ಗುಂಪಿನ ಅಥವಾ ಪಾಳೇಗಾರಿಕೆಯ ಆಡಳಿತಕ್ಕೆ ಅಸ್ತಿವಾರವೊದಗುತ್ತದೆ. ಕೇವಲ ಬಂದೂಕಿನ ಮೂಲಕವೇ ಜನರನ್ನು ಹತ್ತಿಕ್ಕುವದಲ್ಲ, ತಿಳಿಯದಿರುವ ಭಾಷೆಯೊಂದನ್ನು ಬಳಸುವ ಮೂಲಕ ಅವರನ್ನು ಮತ್ತೂ ಯಶಸ್ವಿಯಾಗಿ ಕೆಳಕ್ಕೆ ತಳ್ಳಲಾಗುತ್ತದೆ’ [ಭಾಷೆ ಮತ್ತು ಇತಿಹಾಸ ಪು-97]

ನಮ್ಮ ಪಾಲಕರಿಗೆ ಈ ಹೊತ್ತು ಇಂಗ್ಲೀಷ್ ಎನ್ನುವುದು ಉದ್ಯೋಗವನ್ನು ತಂದು ಕೊಡುವ ಭಾಷೆ. ಕನ್ನಡದ ಬಗ್ಗೆ ಅಥವಾ ಇತರೇ ಪ್ರಾದೇಶಿಕ ಭಾಷೆಗಳ ಬಗ್ಗೆ ಇಂಥಾ ಯಾವ ಭರವಸೆಗಳನ್ನೂ ನಮ್ಮ ಪ್ರಭುತ್ವಗಳು ಸೃಷ್ಟಿ ಮಾಡಿಲ್ಲ. ಪರಿಣಾಮವಾಗಿಯೇ ಸರಾಗವಾಗಿ ಮಾತನಾಡಬಹುದಾದ, ಬರೆಯಬಹುದಾದ ಪ್ರಾದೇಶಿಕ ಭಾಷೆಗಳನ್ನು ಕೈ ಬಿಟ್ಟು ವಿದ್ಯಾರ್ಥಿಯೊಬ್ಬ ಎರಡು ದಶಕಗಳ ಕಾಲ ನಮ್ಮದಲ್ಲದ ಒಂದು ಭಾಷೆಯನ್ನು ಕಲಿಯುವಲ್ಲಿಯೇ ತಿಣುಕುವ ಕ್ರಮದಲ್ಲಿ ಅದಾವ ಬಗೆಯ ಸಾಮರ್ಥ್ಯಗಳ ವಿಶ್ಲೇಷಣೆ ಸಾಧ್ಯವಾಗುತ್ತದೆಯೋ ಗೊತ್ತಿಲ್ಲ. ‘ಮಕ್ಕಳನ್ನು ಇಂಗ್ಲೀಷ್ ಮಾಧ್ಯಮದಲ್ಲಿ ಓದಿಸುವವರೇ ನಿಜವಾದ ಪಾಲಕರು’ ಎನ್ನುವುದು ಮಧ್ಯಮವರ್ಗದ ಲೌಕಿಕ ವ್ಯಾಖ್ಯಾನ. ನೆರೆಹೊರೆ ಮತ್ತು ಸಮಾಜದಲ್ಲಿ ನಿಮ್ಮ ಅಂತಸ್ತು ಮತ್ತು ಸ್ಥಾನಮಾನಗಳ ನಿರ್ಣಾಯಕ ಸಂಗತಿಗಳಾಗಿ ನಿಮ್ಮ ಮನೆ, ಪ್ಲ್ಯಾಟು, ಕಾರು, ಬೈಕುಗಳಂತೆ ನೀವು ನಿಮ್ಮ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮದ ಶಾಲೆಗಳಲ್ಲಿ ಓದಿಸುತ್ತೀರೋ ಇಲ್ಲಾ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಓದಿಸುತ್ತೀರೋ ಎನ್ನುವುದು ಕೂಡಾ ಒಂದು ಪ್ರಮುಖ ಸಂಗತಿ. ಆ ಶಾಲೆಗಳಲ್ಲಿ ನೀವು ಕೊಡುವ ಫೀ ಕೂಡಾ ಅದರಲ್ಲಿ ನಿರ್ಣಾಯಕವಾಗುತ್ತದೆ ಎನ್ನುವುದನ್ನು ಅಲ್ಲಗಳೆಯಲಾದೀತೇ? ಈ ಬಗೆಯ ಒಂದು ಮಾನಸಿಕ ಸ್ಥಿತಿಯನ್ನು ನಿರ್ಮಿಸಿದವರು ಯಾರು? ಅದಕ್ಕೆ ಅವಕಾಶ ಮಾಡಿಕೊಟ್ಟವರು ಯಾರು? ಈಗ ಅತಿ ಮುಖ್ಯವಾಗಿ ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣ ನೀಡಬೇಕೋ ಬೇಡವೋ ಎನ್ನುವುದು ಮುಖ್ಯವಾಗದೇ ಅದನ್ನು ಕೊಡಿಸಬೇಕೋ ಬೇಡವೋ ಎನ್ನುವುದನ್ನು ಪಾಲಕರು ತೀರ್ಮಾನಿಸಬೇಕು. ಕನ್ನಡ ಅನ್ನ ಮತ್ತು ಉದ್ಯೋಗದ ಗ್ಯಾರಂಟಿ ನೀಡುವ ಮಾಧ್ಯಮವಾಗುವದಾದರೆ ಸುಪ್ರೀಂಕೋರ್ಟ್ ಈ ಭಾಷಾ ಮಾಧ್ಯಮದ ಚೆಂಡನ್ನು ಪಾಲಕರ ಅಂಗಳಕ್ಕೆ ತಳ್ಳಿದ್ದೂ ಸಾರ್ಥಕ! ಈ ದಿಶೆಯಲ್ಲಿ ಅತಿ ಮುಖ್ಯವಾಗಿ ಪ್ರತಿಯೊಬ್ಬ ಪಾಲಕನೂ ಯೋಚಿಸಬೇಕಿದೆ.