Daily Archives: June 19, 2014

ಇಂತಿ ನಮಸ್ಕಾರಗಳು : ಎರಡು ಅಗಾಧ ಪ್ರತಿಭೆಗಳ ಸೃಜನಶೀಲ ನಿರೂಪಣೆ


– ಡಾ.ಎಸ್.ಬಿ. ಜೋಗುರ


 

ಇಬ್ಬರು ಪ್ರಖರ ಪಂಡಿತರ ಸಹವಾಸದಲ್ಲಿ ರೂಪಗೊಳ್ಳುವ ಆಲೋಚನೆಗಳು ಮತ್ತು ಕ್ರಿಯಾಶೀಲತೆಯ ಸೆಳಕು ಯಾವ ಬಗೆಯ ಕಥನ ಕಲೆಗೆ ನೆರವಾಗಬಲ್ಲದು ಎನ್ನಲಿಕ್ಕೆ “ಇಂತಿ ನಮಸ್ಕಾರಗಳು” ಎನ್ನುವ ಕೃತಿಯೇ ಸಾಕ್ಷಿ. ನಟರಾಜ ಹುಳಿಯಾರ ಇಲ್ಲಿಯವರೆಗೆ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವರ ಬಹುತೇಕ ಬರವಣಿಗೆಗಳು ಲಂಕೇಶ ಮತ್ತು ಡಿ.ಆರ್.ನಾಗರಾಜರ ಆಲೋಚನೆಯ ರೀತಿ ಮತ್ತು ಬರವಣಿಗೆಯ ಪ್ರಭಾವವನ್ನು ಮತ್ತೆ ಮತ್ತೆ ನೆನಪು ಮಾಡಿಕೊಡುತ್ತವೆ. ಅವರ “ಗಾಳಿ ಬೆಳಕು” ಕೃತಿ ಲಂಕೇಶರ ಗದ್ಯವನ್ನು ತಟ್ಟನೇ ಜ್ಞಾಪಿಸುತ್ತದೆ. “ಇಂತಿ ನಮಸ್ಕಾರಗಳು” ಪಿ.ಲಂಕೇಶ ಮತ್ತು ಡಿ.ಆರ್.ನಾಗರಾಜ ಅವರ ಒಡನಾಟದ ಬಗೆಗಿನ ಒಂದು ಸೃಜನಶೀಲ ಕಥಾನಕ ಎಂದು ಹೇಳಬಹುದಾದರೂ ಆ ಹೇಳಿಕೆಯನ್ನು ಮೀರಿಯೂ ಈ ಕೃತಿ ಇಬ್ಬರು ದಿಗ್ಗಜರ ನಡುವಿನ ಚಕಮಕಿಯ ಕಾವು..ಕಿಡಿ..ಬೆಳಕಿನ ದರ್ಶನವನ್ನು ಮಾಡಿಸಿಕೊಡುತ್ತದೆ. [ಹೊಗೆ ತೀರಾ ಕಡಿಮೆ] ನಟರಾಜರಿಗೆ ಲಂಕೇಶರಾಗಲೀ.. ಡಿ.ಆರ್ ಆಗಲೀ ಗುರುವಿನ ಸ್ಥಾನದಲ್ಲಿದ್ದವರು. ಅವರಿಬ್ಬರು ಮಾತಾಡಲು ಬಾಯಿ ಬಿಟ್ಟರೆ ಸಾಕು ಕಣ್ಣಗಲಿಸಿ, ಕಿವಿ ತೆರೆದು ಅತ್ಯಂತ ಜಾಗೃತವಾಗಿ ಅವರು ಕೇಳಲು ಕುಳಿತುಕೊಳ್ಳುತ್ತಿದ್ದ ಕಾರಣಕ್ಕೆ ಹೀಗೆ ಅವರೊಂದಿಗಿನ ಒಡನಾಟ ಬೆಚ್ಚಗಿನ inti-namaskaragalu-coverಭಾವ ಸ್ಫುರಿಸುವ ಆಪ್ತ ಬರವಣಿಗೆಯಾಗಿ ಮೈದಾಳಿದೆ. ನಟರಾಜ ಲಂಕೇಶರನ್ನು ತೀರಾ ಹತ್ತಿರದಿಂದ ಬರೀ ಬಲ್ಲವರು ಮಾತ್ರವಾಗಿರದೇ ಅವರ ಒಳಹೊರಗಣ ನಿಲುವನ್ನು ಅರಿತವರು ಹೀಗಾಗಿಯೇ ಅವರ ತೀರಾ ಸೂಕ್ಷ್ಮಾತಿಸೂಕ್ಷ್ಮ ಗುಣಗಳನ್ನು ಸಹ ಗ್ರಹಿಸಿದವರು. ಲಂಕೇಶ ಒಂದು ಸಂಕೀರ್ಣವಾದ ವ್ಯಕ್ತಿತ್ವ ಇಂಥವರು ಹೊರಗೆ ಮಾತ್ರ ಕಲಿಯದೇ ಒಳಗೂ ನೋಡಿ ಕಲಿಯುತ್ತಾರೆ ಎನ್ನುವುದು ಲೇಖಕರ ಮಾತು. ಲಂಕೇಶರ ’ದೇಶಭಕ್ತ ಸೂಳೆಮಗನ ಗದ್ಯಗೀತೆ’ಯನ್ನು ಉಲ್ಲೇಖಿಸಿ ’ಸೂಳೆಮಗನೇ, ನಿನ್ನನ್ನು ಕರೆದರೆ ನನ್ನನ್ನೇ ಕರೆದಂತಾಗುತ್ತದೆ’ ಎಂಬ ಸಾಲಿನಲ್ಲಿರುವ ಸ್ವವಿಮರ್ಶೆಯ ಪ್ರಜ್ಞೆಯಿಂದ ಅನ್ಯವನ್ನು ನೋಡಲು ಕಲಿತು, ನಮ್ಮಂಥವರಿಗೂ ಕಲಿಸಿದವರು ಲಂಕೇಶ.

ಲಂಕೇಶರಿಗೆ ಕವಿ ಯೇಟ್ಸ್ ಹೇಳುವ ’ಉತ್ತಮರಿಗೆ ಯಾವ ನಂಬುಗೆಯೂ ಇಲ್ಲ; ನೀಚರು ಮಾತ್ರ ತೀವ್ರ ಉತ್ಸಾಹದಲ್ಲಿದ್ದಾರೆ’ ಎನ್ನುವ ಮಾತಿನಲ್ಲಿ ನಂಬುಗೆಯಿದ್ದಂತಿತ್ತು. ಹಾಗಾಗಿಯೇ ಅವರು ಮತ್ತೆ ಮತ್ತೆ ಮನುಷ್ಯನಲ್ಲಿಯ ಕೇಡಿತನದ ಬಗ್ಗೆ ಯೋಚಿಸುತ್ತಿದ್ದರು.. ಬರೆಯುತ್ತಿದ್ದರು. ಚುನಾವಣೆಯ ಸಂದರ್ಭದಲ್ಲಿ ದೇವೇಗೌಡರು ಹಗಲು ರಾತ್ರಿ ನಿದ್ರಿಸದೇ ಕೆಲಸ ಮಾಡುವುದನ್ನು ಗಮನಿಸಿ, ಪತ್ರಿಕೆಯಲ್ಲಿ “ರಾಕ್ಷಸರು ನಿದ್ರಿಸುವದಿಲ್ಲ” ಎನ್ನುವ ಶೀರ್ಷಿಕೆಯಡಿ ಒಂದು ಲೇಖನವನ್ನೇ ರೂಪಿಸಿದ ಲಂಕೇಶರು ‘ಕೇಡು ಕೆಲ ಬಾರಿ ದಕ್ಷತೆಯಿಂದ ಕೂಡಿದಾಗ ಆಕರ್ಷಕವಾಗಿ ಕಾಣುತ್ತದೆ’ ಎನ್ನುತ್ತಿದ್ದರು. ಲಂಕೇಶರು ತಮ್ಮ ಜೀವನದ ಕೊನೆಯ ಘಟ್ಟದಲ್ಲಿ ಬರೆದ “ಹುಳಿಮಾವಿನ ಮರ” ಎಂಬ ಆತ್ಮಚರಿತ್ರೆ ಸತ್ಯದೊಂದಿಗೆ ನಿಷ್ಟುರವಾಗಿ ಮುಖಾಮುಖಿಯಾಗುವ ಯತ್ನದಂತಿದೆ. ಹಾಗಾಗಿಯೇ ಲೇಖಕ ನಟರಾಜರು ಅದರ ಹಸ್ತಪ್ರತಿಯನ್ನು ಓದುವಾಗಲೇ ಅದೊಂದು ಮಹತ್ತರವಾದ ಕೃತಿ ಎಂದು ಶರಾ ಎಳೆದಿರುವುದಿತ್ತು. ಖಾಲಿ ತಲೆಯ ಮನುಷ್ಯನೊಬ್ಬ ಹೆಚ್ಚೆಚ್ಚು ನೀಚನಾಗುತ್ತಾನೆ ಹಾಗೆಂದು ಅವನನ್ನು ಸುಧಾರಿಸುವ ನಿಟ್ಟ್ತಿನಲ್ಲಿ ಒಬ್ಬ ಹೀರೋ ಬರಬೇಕೆಂಬ ಇಲ್ಲವೇ ಅವನನ್ನು ಸೃಷ್ಟಿಸಿ ಈ ನೀಚರ ಮುಂದೆ ನಿಲ್ಲಿಸಿ ಅವರಲ್ಲಿ ಉದಾತ್ತತೆಯನ್ನು ತುಂಬಬೇಕೆಂಬ ಹಂಬಲ ಲಂಕೇಶರ ಬರವಣಿಗೆಗಿರಲಿಲ್ಲ. ಬದಲಾಗಿ ಈ ಖಾಲಿ ಇರುವಾತನೂ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಂಡು ಕ್ರಿಯಾಶೀಲತೆಯನ್ನು ಮೆರೆಯುವ ಬಗ್ಗೆ ಲಂಕೇಶರಿಗೆ ನಂಬುಗೆಯಿತ್ತು. ಹಾಗೆಂದು ಲಂಕೇಶರು ಮನುಷ್ಯ ಸಂಪೂರ್ಣವಾಗಿ ಕೇಡಿನಿಂದ ಬಿಡುಗಡೆ ಹೊಂದಬಲ್ಲ ಎಂದು ನಂಬಿದವರಲ್ಲ.

1980 ರ ಸಂದರ್ಭದಲ್ಲಿ ಲಂಕೇಶರು ಪತ್ರಿಕೆಯನ್ನು ಹುಟ್ಟು ಹಾಕುವ ಮೂಲಕ ಕನ್ನಡ ನಾಡಿನ ಜನತೆಯನ್ನು ಸದಾ ಜಾಗೃತವಾಗಿಡುವ ನಿಟ್ಟಿನಲ್ಲಿ ಯತ್ನಿಸಿದರು. lankeshಒಂದು ವಾರಪತ್ರಿಕೆಯ ಬರುವಿಕೆಗಾಗಿ ಪ್ರತಿ ಬುಧವಾರ ದೂರದ ಊರುಗಳಲ್ಲಿ ಅಪಾರ ಸಂಖ್ಯೆಯ ಓದುಗರು ಕಾಯುವಂತೆ ಮಾಡಿದ್ದು ಬಹುಷ: ಲಂಕೇಶರು ಮಾತ್ರ. ಅದನ್ನೇ ನಟರಾಜ ಅವರು ಹೀಗೆ ಹೇಳುತ್ತಾರೆ: ‘1980 ಜುಲೈ ತಿಂಗಳಿನಿಂದ 2000 ನೇ ಇಸವಿಯ 24 ನೇ ಜನೆವರಿಯವರೆಗೆ ಸುಮಾರು ಇಪ್ಪತ್ತು ವರ್ಷಗಳ ಕಾಲ ಸಂಪಾದಿಸಿದ ತಮ್ಮ ಪತ್ರಿಕೆಯ ಮೂಲಕ ಕರ್ನಾಟಕದ ಚರಿತ್ರೆಯಲ್ಲಿ ನಿರಂತರವಾಗಿ ಮತೀಯ ಮೂಲಭೂತವಾದಿಗಳ ವಿರುದ್ಧ ಧ್ವನಿಯೆತ್ತಿ ಜಾತ್ಯಾತೀತತೆಯ ಪಾಠ ಹೇಳಿಕೊಟ್ಟವರು ಲಂಕೇಶ. ಜಾತೀಯತೆ ಭ್ರಷ್ಟತೆ, ಹಿಪೊಕ್ರಸಿ ಮತ್ತು ನಮ್ಮ ಸುತ್ತಲೂ ಸೃಷ್ಟಿಯಾಗುವ ನರಕಗಳ ಬಗ್ಗೆ ಅನೇಕ ಬಗೆಯ ಎಚ್ಚರ ಮೂಡಿಸಿದ ಲಂಕೇಶರ ಬಗ್ಗೆ ಕನ್ನಡನಾಡಿನ ಮುಸ್ಲಿಂ, ದಲಿತ, ಪ್ರಗತಿಪರ ವರ್ಗಗಳಲ್ಲಿ ತಬ್ಬಲಿ ಜಾತಿಗಳ ಸೂಕ್ಷ್ಮಜ್ಞರಲ್ಲಿ ಇವತ್ತಿಗೂ ಅಪಾರ ಕೃತಜ್ಞತೆಯಿರುವದು ಅಚ್ಚರಿಯ ವಿಷಯವಲ್ಲ. ಕನ್ನಡದಲ್ಲಿ ಜನಪ್ರಿಯ ಪತ್ರಿಕೆಗಳನ್ನು ನಡೆಸಿದವರ ಪೈಕಿ ಲಂಕೇಶರಷ್ಟು ಭಿನ್ನ ಮತೀಯ ನಿಲುವು ತಳೆದವರು ಇಲ್ಲವೇ ಇಲ್ಲ’ ಎನ್ನುವ ಅವರ ಮಾತು ಸರ್ವಕಾಲಿಕ ಸತ್ಯ. ಈ ಸಂದರ್ಭದಲ್ಲಿ ಚಿಂತಕ ಪೂರ್ಣಚಂದ್ರ ತೇಜಸ್ವಿ ಲಂಕೇಶ ಪತ್ರಿಕೆ ಕುರಿತು ಆಡಿದ ಮಾತನ್ನೂ ಇಲ್ಲಿ ನೆನೆಯುವದು ಉಚಿತ. ‘ಲಂಕೇಶ ಆ ಪೇಪರನ್ನು ಹೇಗೆ ಕ್ರಿಯೇಟ್ ಮಾಡಿದರೆಂದರೆ you can throw anything. It will digest. ಹೀಗೆ ಒಟ್ಟು human situation ಆಗಿ develop ಆಗ್ತಾ ಬಂತು.. You see every writer will have his own concept of audience. ಸಡನ್ನಾಗಿ ಯಾರಾರೋ ಸೈಕಲ್ ಶಾಪಿನವರು, ಬೀಡಿ ಅಂಗಡಿಯವರು ನನ್ನ ಕತೇನ ಓದೋಕೆ ಶುರು ಮಾಡಿದರು. ಅಂಥವರೆಲ್ಲ ನನ್ನ ಕತೆ ಓದುತ್ತಾರೆ ಅನ್ನೋದೇ ಮುಖ್ಯ ಅಂತಲ್ಲ. But psychologically there was a shift of audience. ಹೀಗೆ ಒಂದರಿಂದ ಇನ್ನೊಂದಕ್ಕೆ ಶಿಫ಼್ಟಾದ್ದರಿಂದ ಹೊಸ ಛಾಲೆಂಜ್‌ಗಳು ಎದುರಾದವು. ಅಲ್ಲಿಯತನಕ ಸಭೆಗಳು ಸೆಮಿನಾರ್ ಗಳಲ್ಲೇ ಇದ್ದ ಆಡಿಯನ್ಸ್ ಕಲ್ಪನೆ ಬದಲಾಯ್ತು.’ [ಹೊಸ ವಿಚಾರಗಳು-ಪು-736]

ಲಂಕೇಶರ ಜೊತೆ ಜೊತೆಗೆ ಮತ್ತು ಆನಂತರವೂ ಅನೇಕರು ಗದ್ಯ ಬರವಣಿಗೆಯನ್ನು ಮಾಡಿರುವದಿದೆ. ಆದರೂ ಯಾರಿಗೂ ಲಂಕೇಶರನ್ನು ಮೀರುವದು ಸಾಧ್ಯವಾಗಲಿಲ್ಲ ಎನ್ನುವ ಸತ್ಯವನ್ನು ಲೇಖಕರು ಸರಿಯಾಗಿಯೇ ಗುರುತಿಸಿದ್ದಾರೆ. ಕೇವಲ ಜೇಮ್ಸ್ ಜಾಯ್ಸ್ ಮಾತ್ರವಲ್ಲ ಲಂಕೇಶ ಕೂಡಾ ಯಾವ ಗಳಿಗೆಯಲ್ಲೂ ನಿದ್ರಿಸದ ಗದ್ಯ ಭಾಷೆಯನ್ನು ಪರಿಚಯಿಸಿದರು. nataraj-huliyarಲಂಕೇಶರು ವಿಮರ್ಶೆಯನ್ನು ಒಂದು ವಿಶಿಷ್ಟ ಜ್ಞಾನ ಎಂದು ಕರೆದಿರುವುದು ಮಾತ್ರವಲ್ಲದೇ ಯಾವುದೇ ಬಗೆಯ ಆಟೊಮೊಬೈಲ್ ಅಧ್ಯಯನದ ಶಿಸ್ತಿಲ್ಲದೇ ಮುಸ್ಲಿಂ ಹುಡುಗರು ಗ್ಯಾರೇಜ್ ನಡೆಸುವಂತೆಯೇ ಸಾಹಿತ್ಯದ ವಿದ್ಯಾರ್ಥಿಯಾಗಿರದಿದ್ದರೂ ಸಾತತ್ಯವಾದ ಅಧ್ಯಯನದ ಮೂಲಕ ವಿಮರ್ಶಾ ಜ್ಞಾನವನ್ನು ಬೆಳೆಸಿಕೊಳ್ಳಬಲ್ಲ ಎನ್ನುತ್ತಿದ್ದರು. ಲಂಕೇಶರ ವಿಮರ್ಶೆಯನ್ನು ಓದಿ ಸಿಡಿಮಿಡಿ ಗೊಂಡ ಅನೇಕ ಲೇಖಕರಿದ್ದಾರೆ. ಸತ್ಯವೇ ಹಾಗೆ. ನಟರಾಜರು ಹೇಳುವಂತೆ ‘ಲಂಕೇಶರ ವಿಮರ್ಶಾ ಕ್ರಮದ ಬಗ್ಗೆ ಎಷ್ಟೇ ಪ್ರಶ್ನೆಗಳಿರಬಹುದಾದರೂ ಅಷ್ಟೊಂದು ವಿಮರ್ಶಾ ಒಳನೋಟಗಳನ್ನು ಕೊಟ್ಟ ಕನ್ನಡ ವಿಮರ್ಶಕರು ಯಾರೂ ಇಲ್ಲವೆಂದೇ ನನ್ನ ನಂಬಿಕೆ. ನುರಿತ ಅಕ್ಕಸಾಲಿಗನೊಬ್ಬ ಒಂದೇ ಏಟಿಗೆ ಇದು ಚಿನ್ನ..ಇದು ಕಬ್ಬಿಣ ಎಂದು ಬೇರ್ಪಡಿಸುವಷ್ಟು ಚುರುಕಾಗಿ ಅವರ ನೈತಿಕ ಕಣ್ಣು ಕೆಲಸ ಮಾಡುತ್ತಿತ್ತು.’ ಲಂಕೇಶರು ಅನೇಕರನ್ನು ವಿಮರ್ಶೆಯ ಮೂಲಕ ಮರುಮೌಲ್ಯಮಾಪನ ಮಾಡಿರುವರು ಅದಕ್ಕೆಂದೇ ನಟರಾಜ ಅವರನ್ನು ‘ಲಂಕೇಶರ ವಿಮರ್ಶಾ ಪದ್ಧತಿಯಲ್ಲಿ ಇಪ್ಪತ್ತನೇ ಶತಮಾನದ ಲೀವಿಸಿಯನ್ ಮಾರ್ಗ ಇರುವಂತೆ ಹದಿನೆಂಟನೆಯ ಶತಮಾನದ ಸ್ಯಾಮುಯಲ್ ಜಾನ್ಸನ್ ರೂಪಿಸಿದ ವಿಮರ್ಶೆಯ ಒಂದು ಎಳೆಯೂ ಇದೆ.’ ಎಂದಿರುವರು.

ಲಂಕೇಶರ ಜೊತೆ ಹರಟುವ ಸುಖ ಮತ್ತು ಖುಷಿ ಕಳೆದುಕೊಂಡವರಿಗೆ ಮಾತ್ರ ಗೊತ್ತು ಅವರು ಅನೇಕ ಸಂದರ್ಭಗಳಲ್ಲಿ ಅವರು ಹಾರಿಸುತ್ತಿದ್ದ ನಗೆಚಟಾಕಿಗಳು ಅಚ್ಚರಿ ಹುಟ್ಟಿಸುವಂತಿರುತ್ತಿದ್ದವು. ಎಸ್.ಎಲ್.ಭೈರಪ್ಪರನ್ನು ಕುರಿತು ಮಾತನಾಡುತ್ತಾ ‘ಆತ ಮುಟ್ಟಾಗಿ ಮೂರು ದಿನ ಹೊರಗೆ ಕೂರುವ ಹೆಂಗಸರಿಗೆ ತಕ್ಕ ಹಾಗೆ ಬರೆಯುತ್ತಾನೆ.’ ವೈಯೆನ್ಕೆ ಯವರ ಬಗ್ಗೆ ಬರೆಯುತ್ತಾ ‘ವೈಯೆನ್ಕೆ ಇದು ಚಿಗುರಲಾರದ ಒನಕೆ’. ಹಾ.ಮ.ನಾಯಕರ ಬಗ್ಗೆ ಬರೆದ ‘ನಾಯಕ ನಾಯಕ ನಾಯಕ/ ಜನ ಫ಼ಕ ಫ಼ಕ/ ನಗಲು ಸಹಾಯಕ’. ಹುಳಿಯಾರರು ಲಂಕೇಶರ ಜೊತೆಯಲ್ಲಿ ಒಂದು ಸಂಜೆ ಹರಟೆಯಲ್ಲಿ ತೊಡಗಿದಾಗಿನ ಘಟನೆಯನ್ನು ನೆನೆದು ಬರೆಯುತ್ತಾರೆ, ‘ಒಬ್ಬ ವ್ಯಕ್ತಿ ಮಾಧ್ವನೋ..ಸ್ಮಾರ್ತನೋ ಎಂಬ ಸಣ್ಣ ಕುತೂಹಲಕ್ಕೊಳಗಾದೆ. ನನಗೆ ಅದೇ ಆಗ ಬ್ರಾಹ್ಮಣರಲ್ಲಿ ಮಾದ್ವ ಸ್ಮಾರ್ತ ಎಂಬ ಉಪಪಂಗಡಗಳ ಬಗ್ಗೆ ತಿಳುವಳಿಕೆ ಬರತೊಡಗಿತ್ತು. ನನ್ನ ಗೊಂದಲ ಕಂಡು ನಕ್ಕ ಲಂಕೇಶ ಅದನ್ನು ತಿಳಿಯೋದು ಬಹಳ ಸಿಂಪಲ್ ಕಣಯ್ಯಾ. ಮಾಧ್ವರಿಗೆ ಉಬ್ಬು ಹಲ್ಲಿರುತ್ತೆ ಅಂದರು.’ ಲಂಕೇಶ ಒಂದು ದೈತ್ಯ ಪ್ರತಿಭೆ. ಜಾಗತಿಕ ಮಟ್ಟzಲ್ಲಿ ಗುರುತಿಸಬಹುದಾದ ಪ್ರತಿಭೆ. ಸಿನೇಮಾ, ನಾಟಕ, ಕತೆ, ಕಾದಂಬರಿ, ಕಾವ್ಯ, ವಿಮರ್ಶೆ, ಪತ್ರಿಕೆ ಹೀಗೆ ಹತ್ತಾರು ವಲಯಗಳಲ್ಲಿ ಸಮರ್ಥರಾಗಿ ಕೈಯಾಡಿಸಿದ ಲಂಕೇಶರಿಗೆ ಲೇಖಕರು ಸ್ವರಕದಲ್ಲಿ ಡಿ.ಆರ್.ಮೂಲಕ ಹೇಳಿಸಿದ ‘ಕಾರ್ನಾಡ್‌ಗೆ ಬಂದಿದ್ದ ಜ್ಞಾನ ಪೀಠ ನಿಮಗೇ ಬಂದಿದ್ದರೆ..’ ಎನ್ನುವ ಮಾತಿನಲ್ಲಿ ಅದೆಷ್ಟು ಸತ್ಯವಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಲಂಕೇಶರ ಬಗ್ಗೆ ಲೇಖಕರಲ್ಲಿ ಅಪಾರವಾದ ಅಭಿಮಾನವಿದೆ, ಹಾಗಾಗಿಯೇ ಕೆಲ ಕಡೆ ಹೊಗಳಿಕೆ ತೀರಾ ಸಾಂದ್ರವೆನಿಸುತ್ತದೆ. ಆದರೂ ಅತಿಯಾಗಿಲ್ಲ.

ಇನ್ನು ನಟರಾಜರ ಪಿ.ಎಚ್.ಡಿ. ಗುರು ಡಿ.ಆರ್.ನಾಗರಾಜ ಇನ್ನೊಂದು ಅಪರೂಪದ ಪ್ರತಿಭೆ. ಅವರೊಂದಿಗಿನ ಒಡನಾಟದ ಬಗ್ಗೆಯೂ ಲೇಖಕರು ಅನೇಕ ವಿಷಯಗಳನ್ನು ಬರೆದಿರುವರು. ಸ್ವತ: ಲಂಕೆಶರು ಡಿ.ಆರ್. ಕುರಿತು ಮಹಾನ್ ಬುದ್ಧಿವಂತ ಎನ್ನುವ ಮಾತುಗಳಿದ್ದವು. ಅವರಿಬ್ಬರ ನಡುವಿನ ಸೈದ್ಧಾಂತಿಕ ವಾಗ್ವಾದವನ್ನು ಕೇಳುವದೇ ಒಂದು ದೊಡ್ದ ಖುಷಿ. ಆ ಕೊರತೆಯನ್ನು ನಟರಾಜ ಈಗಲೂ ಅನುಭವಿಸುವ ಬಗ್ಗೆ ಹೇಳಿರುವದಿದೆ. ಡಿ.ಆರ್ ನಾಗರಾಜರ ಬರವಣಿಗೆಯಲ್ಲಿ ಒಂದು ಬಗೆಯ ಗಟ್ಟಿತನವಿರುತ್ತಿತ್ತು. ಅದಕ್ಕೆ ಸಾಕ್ಷಿಯಾಗಿ ನಮ್ಮೆದುರು “ಅಮೃತ ಮತ್ತು ಗರುಡ”, “ಸಾಹಿತ್ಯ ಕಥನ”, “ಸಂಸ್ಕೃತಿ ಕಥನ”, “ಅಲ್ಲಮಪ್ರಭು ಮತ್ತು ಶೈವ ಪ್ರತಿಭೆ”, ಇಂಥಾ ಭಾರವಾದ ಮೌಲಿಕ ಕೃತಿಗಳಿವೆ. ಡಿ.ಆರ್. ಅವರಲ್ಲಿ ತಾನು ಮಿಕ್ಕವರಿಗಿಂತಲೂ ಆಲೋಚನೆ ಮತ್ತು ಬರವಣಿಗೆಯಲ್ಲಿ ಭಿನ್ನವಾಗಿ ತೋರಬೇಕೆಂಬ ತುಡಿತವಿತ್ತು ಆ ಮೂಲಕವೇ ಅವರು ಸಾರಸ್ವತ ಲೋಕದ ಒಟ್ಟು ಗಮನವನ್ನು ಸೆಳೆಯಲು ಬಯಸಿದವರು. ಲಂಕೇಶ ಮತ್ತು ಡಿ.ಆರ್. ನಡುವಿನ ಮಾರ್ಗಗಳ ಬಗ್ಗೆ ಬರೆಯುತ್ತಾ ’ಡಿ.ಆರ್. ಅವರಿಗೆ ಕಷ್ಟಕರವಾದ ಸಿದ್ಧಾಂತಗಳನ್ನು ಅರಗಿಸಿಕೊಳ್ಳುವ ಹಠವಿತ್ತು. ಇದು ಬುದ್ಧಿ ಜೀವಿಗಳ ನಡುವೆ ಸಾಂಸ್ಕೃತಿಕ ನಾಯಕತ್ವ ಗಳಿಸಿಕೊಳ್ಳುವ ಏಕಮಾತ್ರ ದಾರಿ ಎಂಬ ಅರಿವೂ ಇತ್ತು. ಆದರೆ ಲಂಕೇಶ ತಮ್ಮ ಅಸಾಧಾರಣ ಪ್ರತಿಭೆ, ಗ್ರಹಿಕೆ ಹಾಗೂ ಶೂದ್ರಗನ್ನಡದ ಬನಿಯಿಂದ ನಮ್ಮನ್ನು ಗೆಲ್ಲುತ್ತಿದ್ದರು. ಇಬ್ಬರಲ್ಲೂ ವಚನಗನ್ನಡದ ಪ್ರಭಾವವಿತ್ತಾದರೂ ಲಂಕೇಶರ ಗದ್ಯಕ್ಕೆ ಹೋಲಿಸಿದರೆ ಡಿ.ಆರ್. ಬರವಣಿಗೆ ತಾಂತ್ರಿಕ ಪರಿಕಲ್ಪನೆಗಳಿಂದ ಹುಟ್ಟುವ ಗಾಂಭೀರ್ಯದಿಂದ ಹಾಗೂ ತನ್ನ ತಾತ್ವೀಕರಣದ ಶಕ್ತಿಯಿಂದ ಹಲವೆಡೆ ಲಂಕೇಶರಿಗಿಂತ ವಿಶಿಷ್ಟವಾಗಿ ಕಾಣತೊಡಗುತ್ತದೆ. ಆದರೆ ಡಿ.ಆರ್. ಶೈಲಿಯಲ್ಲಿ ಕೃತಕತೆ ಅಲ್ಲಲ್ಲಿ ಹಣಿಕಿಕ್ಕುತ್ತದೆ’ ಎನ್ನುವ ಮಾತನ್ನು ಗಮನಿಸಿದರೆ ಲಂಕೇಶರ ಗದ್ಯದ ಗಮ್ಮತ್ತೇ ಹೆಚ್ಚು ಆಕರ್ಷಕವಾಗಿರುತ್ತಿತ್ತು ಎನ್ನುವುದನ್ನು ಒಪ್ಪಿಕೊಂಡಂತಾಗುತ್ತದೆ. ಲೇಖಕರು ತನ್ನ ಗುರುವಿನ ಬಗ್ಗೆ ಬರೆದಾಗ ನಾಗರಾಜರು ಶಿಷ್ಯನ ಅಸಹನೆಯನ್ನು ಇಟ್ಟುಕೊಂಡು ಪ್ರತಿಕ್ರಿಯಿಸಿದ ರೀತಿಯಲ್ಲಿ ಅವರಿಗೆ ತಮ್ಮ ಬಗ್ಗೆ ತಮ್ಮ ಜಾಣ್ಮೆಯ ಬಗೆಗಿದ್ದ ಆತ್ಮಭಿಮಾನದ ಪರಿಚಯವಾಗದೇ ಇರದು.

ಲಂಕೇಶ ಮತ್ತು ಡಿ.ಆರ್. ನಡುವಿನ ಸಣ್ಣ ಪುಟ್ಟ ಕಲಹಗಳ ನಡುವೆ ಲೇಖಕ ಸಿಲುಕಿ ಕಕ್ಕಾಬಿಕ್ಕಿಯಾದ ಪ್ರಸಂಗಗಳನ್ನೂ ನಟರಾಜ ಅತ್ಯಂತ ಚೆನ್ನಾಗಿ ನಿರೂಪಿಸಿದ್ದಾರೆ. ಡಿ.ಆರ್. nataraj-huliyar” ಅವರ ಕಾವ್ಯದ ಒಳನೋಟಗಳ ಬಗೆಗೆ ನಟರಾಜ ಹುಳಿಯಾರರಲ್ಲಿ ಅಪಾರವಾದ ಹೆಮ್ಮೆಯಿದೆ. ಅವರದೇ ಮಾತಿನಲ್ಲಿ ಹೇಳುವದಾದರೆ ’”ಅಲ್ಲಮಪ್ರಭು ಮತ್ತು ಶೈವ ಪ್ರತಿಭೆ” ಪುಸ್ತಕವನ್ನು ಓದತೊಡಗಿದರೆ ಇಪ್ಪತ್ತನೆಯ ಶತಮಾನದ ಕೊನೆಯ ಹೊತ್ತಿಗೆ ಡಿ.ಆರ್. ಮೂಲಕ ಕನ್ನಡ ಸಾಹಿತ್ಯ ತತ್ವ ತಲುಪಿದ ಎತ್ತರ ಹಾಗೂ ಸೂಕ್ಷ್ಮತೆಗಳನ್ನು ಕಂಡು, ಅಲ್ಲಮನ ನಿಗೂಢ ಗುಹೆ ಹೊಕ್ಕ ಡಿ.ಆರ್. ಎಂಬ ಗುಹೇಶ್ವರನ ಎದುರು “ಇದಕಂಡು ಬೆರಗಾದೆ ಗುಹೇಶ್ವರಾ!” ಎಂದು ವಿಸ್ಮಯದಿಂದ ನಿವೇದಿಸಿಕೊಳ್ಳಬೇಕೆನಿಸುತ್ತದೆ.’ ಮುಂದುವರೆದು ’ಕಾವ್ಯವನ್ನಾಗಲೀ ಅಲ್ಲಮ ಲೋಕವನ್ನಾಗಲೀ, ಭಾರತದ ದಾರ್ಶನಿಕ ಸಂಘರ್ಷಗಳನ್ನಾಗಲೀ ಇಷ್ಟು ಸೂಕ್ಷ್ಮವಾಗಿ ಚರ್ಚಿಸಿರುವ ಮತ್ತೊಂದು ಕನ್ನಡ ಪುಸ್ತಕ ನನ್ನ ಕಣ್ಣಿಗೆ ಬಿದ್ದಿಲ್ಲ.’ ಎಂದಿರುವದನ್ನು ಗಮನಿಸುವ ಮೂಲಕ ಡಿ.ಆರ್. ನಾಗರಾಜರ ಪಾಂಡಿತ್ಯದ ಒಂದು ಮಗ್ಗುಲಿನ ಪರಿಚಯವಾದಂತಾಗುತ್ತದೆ. ಡಿ.ಆರ್. ಎಲ್ಲ ಬರವಣಿಗೆಗಳಲ್ಲೂ ಎಂದೂ ಬತ್ತದ ಕಾವ್ಯದ ಅಮೃತವನ್ನು ಹೀರಲು ಹಾತೊರೆಯುವ ಗರುಡನಂತೆಯೇ ತೋರುತ್ತಾರೆ. ಹಾಗೆಯೇ ತಮ್ಮ ಮನಸು ಒಪ್ಪದ ವಿಚಾರವಾಗಿ ಚಕ್ಕನೇ ಸಿಡಿದು ನಿಲ್ಲುವ ಗುನವೂ ಅವರಲ್ಲಿತ್ತು. ಒಂದು ಸಭೆಯಲ್ಲಿ ಬೀಚಿಯವರ ಬಾಯಿಂದ ಹೊರಬಂದ ಜಾತ್ಯಾತೀತತೆ ಪದದ ಸಂದರ್ಭದಲ್ಲಿ ಡಿ.ಆರ್.ಎದ್ದು ನಿಂತು ನೀವು ಹಾಗಿದ್ದರೆ ಜನಿವಾರ ಧರಿಸಿಲ್ಲವೇ..? ಎಂದಾಗ ಬೀಚಿಯವರು ಬನ್ನಿ ನೋಡಿ ಎಂದಾಗ ಎದ್ದು ಹೋಗಿ ಪರೀಕ್ಷಿಸಿ ಲಂಕೇಶರ ಎದುರು ಇಲ್ಲ ಎಂದಾಗ ಲಂಕೇಶ ತೆಗೆದು ಕಿಸೆಯಲ್ಲಿ ಇಟ್ಟುಕೊಂಡಿದ್ರೆ..? ಅದನ್ನೂ ಚೆಕ್ ಮಾಡಿ ನೋಡ್ತೀನಿ ಅಂದರಂತೆ ಆಗ ಲಂಕೇಶ, ’ಅಲ್ಲಯ್ಯಾ ಅವನು ಮೈಗೆ ಹಾಕಿಕೊಳ್ಳೊ ಜನಿವಾರನ್ನ ಮನಸಿಗೆ ಹಾಕಿಕೊಂಡಿದ್ರೆ ಏನಯ್ಯಾ ಮಾಡ್ತಿಯಾ..?’ ಅಂದರಂತೆ. ಅನೇಕ ಸಂದರ್ಭಗಳಲ್ಲಿ ಲಂಕೇಶ ಮತ್ತು ಡಿ.ಆರ್. ಸಣ್ಣ ಪುಟ್ಟ ಇರುಸು ಮುರುಸುಗಳನ್ನು ಅನುಭವಿಸಿಯೂ ಮತ್ತೆ ಒಂದಾಗುತ್ತಿದ್ದರು. ಡಿ.ಅರ್. ತಮ್ಮ ಜೀವಿತದ ಕೊನೆಯ ಅವಧಿಯಲ್ಲಿ ಲಂಕೇಶರಿಗೆ ಬರೆದ ಪತ್ರವೊಂದರಲ್ಲಿ ’ಲಂಕೇಶ ಪತ್ರಿಕೆ ನಮ್ಮ ಜೀವನದ ಒಂದು ಅನಿವಾರ್ಯವಾದ ಅಂಗ ಎಂಬಂತಾಗಿ ಬಿಟ್ಟಿದೆ’ ಎಂದು ಬರೆದಿದ್ದರು. ಆ ಪತ್ರ ಸುಮಾರು ಹದಿನೆಂಟು ವರ್ಷಗಳ ಕಾಲ ಡಿ.ಆರ್. ಲಂಕೇಶ ಮತ್ತು ಅವರ ಪತ್ರಿಕೆಯ ಜೊತೆಗಿನ ಸಂಬಂಧವನ್ನು ಕುರಿತು ಹೇಳುವಂತಿದೆ.

ಹೀಗೆ “ಇಂತಿ ನಮಸ್ಕಾರಗಳು” ಲೇಖಕ ನಟರಾಜ ಹುಳಿಯಾರರು ಈ ಇಬ್ಬರೂ ಸಾಹಿತ್ಯ ದಿಗ್ಗಜರ ಒಡನಾಟವನ್ನು ಲಂಕೇಶರ ಮತ್ತು ನಾಗರಾಜರ ಅಪಾರ ಪ್ರಮಾಣದ ಅಭಿಮಾನಿಗಳಿಗೆ inti-namaskaragaluಆಪ್ತವಾಗುವ ಹಾಗೆ ನಿರೂಪಿಸಿದ್ದು ಸ್ತುತ್ಯಾರ್ಹ ಕೆಲಸ. ಈ ಕೃತಿಯನ್ನು ಓದುವಾಗ ಎಲ್ಲೂ ಯಾವ ಪುಟವೂ ಬೇಜಾರಾಗುವ ಅನುಭವ ಬರುವದಿಲ್ಲ. ಒಂದು ಉತ್ತಮವಾದ ಕಾದಂಬರಿಯೊಂದು ಓದುಗನನ್ನು ಬಿಗಿದಪ್ಪಿಕೊಳ್ಳುವಂಥಾ ಗುಣ ಈ ಕೃತಿಗಿದೆ. ಜೊತೆಗೆ ಈ ತರದ ಪ್ರತಿಭೆಗಳು ಇನ್ನಷ್ಟು ವರ್ಷ ಬದುಕಿರಬೇಕಿತ್ತಲ್ಲ..! ಎನ್ನುವ ಹಳಹಳಿಕೆಯನ್ನೂ ಈ ಕೃತಿ ಹುಟ್ಟುಹಾಕುತ್ತದೆ. ನಮ್ಮ ಸುತ್ತಲಿನ ಸಾಹಿತ್ಯಕ ವಾತಾವರಣ ಅತ್ಯಂತ ಕಲುಷಿತವಾಗಿರುವ ಸಂದರ್ಭದಲ್ಲಿ ಈ ಇಬ್ಬರ ಜರೂರತ್ತು ಮತ್ತೆ ಮತ್ತೆ ಕಾಡದೇ ಇರದು. ಇಂಥಾ ಕೃತಿಯನ್ನು ಪ್ರಕಟಿಸಿದ ಪ್ರಕಾಶಕರಿಗೆ ಮತ್ತು ಲೇಖಕರಿಗೆ ಇಂತಿ ನಮಸ್ಕಾರಗಳು.

ಲೇಖಕ: ನಟರಾಜ ಹುಳಿಯಾರ
ಪ್ರಕಾಶಕರು : ಪಲ್ಲವ ಪ್ರಕಾಶನ
ಪುಟ: 226
ದರ: ರೂ.180