ಹೆಣ್ಣಿನ ದೇಹಮಾರಾಟವೆಂಬ ವೃತ್ತಿ


– ರೂಪ ಹಾಸನ


ಹಳೆಯ ಮದ್ಯವನ್ನು ಹೊಸ ಬಾಟಲಿಯಲ್ಲಿ ಹಾಕಿದಂತೆ ಇದುವರೆಗೆ ಧಾರ್ಮಿಕ ಕಟ್ಟು ಪಾಡುಗಳ ಸಂಕೋಲೆಯೊಳಗೆ ನಿಕೃಷ್ಟವಾಗಿ ನರಳುತ್ತಿದ್ದ ಹೆಣ್ಣು ದೇಹ, ಇಂದು ಶೋಷಣೆಯ ಅನೇಕ ಹೊಸ ರೂಪಗಳಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಹೊರಟಿರುವುದಕ್ಕಿಂಥಾ ಘೋರ ದುರಂತ ಮತ್ತಿನ್ನೇನಿದೆ? ಇಂದು ದೇವದಾಸಿ ಪದ್ಧತಿ, ಬಸವಿ, ಬೆತ್ತಲೆ ಸೇವೆ, ಜೋಗತಿಯಂಥಾ ಅನಿಷ್ಟ ಪದ್ಧತಿಗಳು yellamma-neem-leaves-devadasiನಿಧಾನಕ್ಕೆ ಕಡಿಮೆಯಾಗುತ್ತಿವೆ ಎನ್ನುತ್ತಿರುವಾಗಲೇ, ಅದರ ಅವಳಿ ರೂಪವಾಗಿ ವೇಶ್ಯಾವಾಟಿಕೆಯ ಜಾಲ ವಿಸ್ತೃತವಾಗಿ ನಗರ-ಪಟ್ಟಣವೆನ್ನದೇ ವ್ಯಾಪಕವಾಗಿ ಹಬ್ಬುತ್ತಿದೆ.

ದೇಶದಲ್ಲಿರುವ ಲೈಂಗಿಕ ವೃತ್ತಿ ನಿರತರ ಸಮೀಕ್ಷೆ ನಡೆಸಲು ಇತ್ತೀಚೆಗೆ ಸುಪ್ರೀಮ್ ಕೋರ್ಟ್ ಸಮಿತಿ ರಚಿಸಿರುವುದು ಅತ್ಯಂತ ಸ್ವಾಗತಾರ್ಹವಾದ ವಿಚಾರ. ಈ ಸಮಿತಿ ಲೈಂಗಿಕ ವೃತ್ತಿನಿರತರ ಪರ್ಯಾಯ ಉದ್ಯೋಗ, ಜೀವನಮಟ್ಟ ಸುಧಾರಣೆ, ಪುನರ್ವಸತಿ, ಮಾನವ ಕಳ್ಳಸಾಗಾಣಿಕೆ ತಡೆ ಸೇರಿದಂತೆ ಹಲವು ಉದ್ದೇಶಗಳನ್ನಿಟ್ಟುಕೊಂಡು ಸ್ಥಾಪಿತವಾಗಿದೆ. ಆದರೆ ವೇಶ್ಯಾವೃತ್ತಿಯ ಕಬಂಧ ಬಾಹುಗಳು ಅತ್ಯಂತ ಸೂಕ್ಷ್ಮ ಎಳೆಗಳ ಮೇಲೆ ನಿಂತಿರುವುದರಿಂದ ಇದಕ್ಕೆ ಅಷ್ಟೇ ಸೂಕ್ಷ್ಮ ತಯಾರಿ, ಕಾರ್ಯಯೋಜನೆ ಮತ್ತು ಹಿನ್ನೆಲೆಯನ್ನು ಎಳೆಎಳೆಯಾಗಿ ಅಭ್ಯಸಿಸುವ ಅವಶ್ಯಕತೆಯಿದೆ. ಇದೊಂದು ಅತ್ಯಂತ ಸಂಕೀರ್ಣವಾದ ಸಮಸ್ಯೆಯಾಗಿದ್ದು ಇದರ ಹಿಂದೆ ಧಾರ್ಮಿಕ, ಸಾಮಾಜಿಕ, ಕೌಟುಂಬಿಕ, ಆರ್ಥಿಕ, ಭೌಗೋಳಿಕ, ಚಾರಿತ್ರಿಕ, ಸಾಂಸ್ಕೃತಿಕ ಎಲ್ಲಕ್ಕೂ ಮುಖ್ಯವಾಗಿ ಮಾನಸಿಕ ಸೂಕ್ಷ್ಮತೆಗಳು ತಳುಕು ಹಾಕಿಕೊಂಡಿವೆ.

ಹೀಗಾಗಿ ಈ ಸಮೀಕ್ಷೆ ಕೇವಲ ಲೈಂಗಿಕ ಕಾರ್ಯಕರ್ತೆಯರನ್ನು ಗುರುತಿಸುವ ಕೆಲಸವಾಗದೇ, ಅವರಿಗೆ ವೃತ್ತಿ ಗೌರವ, ಸಾಮಾಜಿಕ, ಆರ್ಥಿಕ ಭದ್ರತೆ ಒದಗಿಸಿ, ಅವರ ಮಕ್ಕಳು ಈ ವೃತ್ತಿಗಿಳಿಯದಂತೆ ನೋಡಿಕೊಂಡು ಅವರಿಗೆ ಬೇರೆ ಕೆಲಸದ ಭದ್ರತೆ ದೊರೆಯುವಂತಾಗಬೇಕು. ಈಗಾಗಲೇ ಸುಪ್ರೀಮ್ ಕೋರ್ಟ್ ತಿಳಿಸಿರುವಂತೆ ಪುನರ್ವಸತಿ ಅವಳ ಆಯ್ಕೆಯೇ ಆಗಿರಬೇಕು. ಆದರೆ ಲೈಂಗಿಕವೃತ್ತಿಯನ್ನು ಮೀರಿ ಹೊಸದಾದ ಬದುಕು ಕಟ್ಟಿಕೊಳ್ಳುವಂತಾಗಲು ಸಮಾಜ, ಸರ್ಕಾರ, ಖಾಸಗಿ ಸಂಸ್ಥೆಗಳು, ನ್ಯಾಯಾಲಯಗಳೂ ಅವಳ ಸಹಾಯಕ್ಕೆ, ಸಹಕಾರಕ್ಕೆ ಬರಬೇಕು

ಈಗಾಗಲೇ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ವಿವರಣೆಯಂತೆ ಸಧ್ಯಕ್ಕೆ ದೇಶದಲ್ಲಿ 13 ಲಕ್ಷ ‘ದಾಖಲಾದ’ ಲೈಂಗಿಕ ಕಾರ್ಯಕರ್ತೆಯರಿದ್ದಾರೆಂದು ಭಾರತ ಸರ್ಕಾರ ವಿವರಣೆ ನೀಡಿದೆ. ಇದರಲ್ಲಿ ಶೇಕಡ 40 ರಷ್ಟು ಅಪ್ರಾಪ್ತ ಹೆಣ್ಣುಮಕ್ಕಳು! ‘ದಾಖಲಾಗದೇ’ ಹೊರಗುಳಿದವರ ಸಂಖ್ಯೆ ಇದರ ಮೂರರಷ್ಟಿದೆ ಎಂಬ ಅಂದಾಜಿದೆ. ಇದರಲ್ಲಿ ಕಾಲ್‌ಗರ್ಲ್‌ಗಳು, ಹೈಟೆಕ್ ವೇಶ್ಯಾವಾಟಿಕೆ, ವ್ಯಾಪಾರಿಕರಣದ ಲೇಬಲ್ ಇಲ್ಲದ ‘rape-illustrationಸಭ್ಯ-ನಾಗರಿಕ’ ವ್ಯಭಿಚಾರವೂ ಸೇರುತ್ತದೆ. ಇವರಲ್ಲಿ ಹೆಚ್ಚಿನವರು ಬಡ ಕುಟುಂಬಗಳಿಂದ ಬಂದವರು. ‘ನಮ್ಮ ಆರ್ಥಿಕ ಅವಶ್ಯಕತೆಗಳು ಬೇರೆ ರೀತಿಯಲ್ಲಿ ಪೂರೈಕೆಯಾದರೆ ನಾವು ಖಂಡಿತಾ ಈ ವೃತ್ತಿಯನ್ನು ಬಿಡುತ್ತೇವೆ’ ಎನ್ನುತ್ತಾರವರು. ಈ ದಾಖಲೆಗೆ ಒಳಪಡದ ಇನ್ನೂ ಬೃಹತ್ ಮೊತ್ತ ಹೊರಗೇ ಇರುವುದೂ ನಿರ್ವಿವಾದ. ದಾಖಲಾದವರು ಬಡತನದ ದಳ್ಳುರಿಗೆ, ಅಸಹಾಯಕತೆಗೆ, ಅನಿವಾರ್ಯತೆಗೆ, ಆಕಸ್ಮಿಕಕ್ಕೆ, ಮೋಸಕ್ಕೆ, ವಂಚನೆಯ ಜಾಲಕ್ಕೆ ಸಿಕ್ಕಿ ಈ ವೃತ್ತಿಗಿಳಿಯುತ್ತಿದ್ದಾರೆಯೇ ಹೊರತು ವೇಶ್ಯಾವಾಟಿಕೆ ಅವರ ಆಯ್ಕೆ ಅಲ್ಲ ಎಂಬುದನ್ನು ನಮ್ಮ ಸಮಾಜ ಗಂಭೀರವಾಗಿ ಪರಿಗಣಿಸಬೇಕಿದೆ. ಮಹಿಳೆಯರು ಬೇರೆ ದಾರಿಯಿಲ್ಲದೇ ಅಸಹಾಯಕರಾಗಿ ವೇಶ್ಯಾವಾಟಿಕೆಗೆ ಇಳಿಯಬೇಕಾಗಿ ಬಂದಿರುವುದು, ನಮ್ಮ ರೋಗಿಷ್ಟ ಸಮಾಜದ ದ್ಯೋತಕವಲ್ಲದೇ ಮತ್ತಿನ್ನೇನು?

ಎಳೆಯ ಬಾಲೆಯರನ್ನು, ಹದಿಹರೆಯದವರನ್ನು, ಮಹಿಳೆಯರನ್ನು ಅಪಹರಿಸಿ ಅವರನ್ನು ಅವರ ದೇಹ ಸಂಬಂಧಿ ವ್ಯಾಪಾರಗಳಲ್ಲಿ ತೊಡಗಿಸುವ ದಂಧೆ ಇಂದು ಬೃಹತ್ತಾಗಿ ಬೆಳೆದು ನಿಂತಿದೆ. ಈ ದಂಧೆಗೆ ಇಂತಹುದೇ ಎಂದು ನಿರ್ದಿಷ್ಟ ಹೆಸರಿಲ್ಲ. ಇದಕ್ಕೆ ಸೇವೆ, ಮನೆಗೆಲಸ, ಪಬ್, ಬಾರ್, ಡಾನ್ಸ್‌ಬಾರ್, ಮಸಾಜ್‌ಪಾರ್ಲರ್, ಪ್ರವಾಸೋದ್ಯಮ ಇತ್ಯಾದಿಗಳ ಮುಖವಾಡವಿದ್ದರೂ ಕೊನೆಗಿದು ವೇಶ್ಯಾವಾಟಿಕೆಯ ದಂಧೆ! ಬೇರೆ ಬೇರೆ ಹೆಸರಿದ್ದರೂ ಸೇವೆಯ ಸ್ವರೂಪ ಮಾತ್ರ ಲೈಂಗಿಕ ಸೇವೆ! ಭಾರತದ ಆರು ಮಹಾನಗರಗಳಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಅಪ್ರಾಪ್ತ ಬಾಲೆಯರು ವೇಶ್ಯಾವಾಟಿಕೆಯಲ್ಲಿ ತೊಡಗಬೇಕಾಗಿ ಬಂದಿರುವುದು ನಮ್ಮ ಕಾನೂನು, ಪೊಲೀಸ್ ಇಲಾಖೆಯ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯೂ ಆಗಿದೆ. ಹೀಗಾಗೇ ವಿಶ್ವದಲ್ಲಿ ಮೂರನೆ ಅತಿ ಹೆಚ್ಚು ವ್ಯಾಪಾರಿ ವಹಿವಾಟನ್ನು ಹೊಂದಿರುವ ದಂಧೆ ಎಂದರೆ ಸೆಕ್ಸ್ ದಂಧೆ! [ಮೊದಲನೆಯದು ಮಾರಕಾಸ್ತ್ರ, ಎರಡನೆಯದು ಮಾದಕದ್ರವ್ಯ.] ಈ ಆದ್ಯತೆಗಳೇ ಮನುಷ್ಯ ಸಂಕುಲ ಎತ್ತ ಸಾಗುತ್ತಿದೆ ಎಂಬುದರ ದಿಕ್ಸೂಚಿಯಾಗಿದೆ. ನಾವು ‘ಮಾನವ ಹಕ್ಕುಗಳ ರಕ್ಷಣೆ’ಯ ಬಗ್ಗೆ ಹೆಣ್ಣನ್ನು ಪಕ್ಕಕ್ಕಿಟ್ಟು, ಗಂಟಲು ಹರಿಯುವಂತೆ ಭಾಷಣ ಮಾಡುತ್ತಿದ್ದೇವೆ. ಹೆಣ್ಣುಮಕ್ಕಳ ದೇಹ ಸದ್ದಿಲ್ಲದೇ ಬಿಕರಿಗೆ ಬಿದ್ದಿದೆ!

ಒಂದೆಡೆ ವೇಶ್ಯಾವಾಟಿಕೆ ಕಾನೂನುಬಾಹಿರವಾದರೂ ಪ್ರತಿ ಜಿಲ್ಲೆಯಲ್ಲೂ ಪೊಲೀಸ್ ಇಲಾಖೆಯ ಸಹಕಾರದೊಂದಿಗೇ ನಡೆಯುತ್ತಿರುವ ಅಡ್ಡಾಗಳಲ್ಲಿ ಹೆಣ್ಣುಮಕ್ಕಳ ಪ್ರಮಾಣ ಮಿತಿಮೀರಿ ಏರುತ್ತಿದೆ. Transexual, transgenders and Aravani gay men in Tamil Nadu, Indiaವೃತ್ತಿನಿರತ ಲೈಂಗಿಕ ಕಾರ್ಯಕರ್ತೆಯರಿಗೆ ನಿಯಮಿತ ಆರೋಗ್ಯ ತಪಾಸಣೆ, ಕಾಂಡೊಂಗಳ ವಿತರಣೆ, ಹೆಚ್‌ಐವಿ, ಏಡ್ಸ್, ಇತರ ಲೈಂಗಿಕ ಗುಪ್ತ ರೋಗಗಳ ಕುರಿತು ತಿಳಿವಳಿಕೆ ನೀಡಿ ಸಮಾಜಕ್ಕೆ ಈ ಸೋಂಕು ಹರಡದಂತೆ ‘ಸುರಕ್ಷಿತ ಲೈಂಗಿಕತೆ’ಯ ಪಾಠ ಕಲಿಸಲು ಕರ್ನಾಟಕದಲ್ಲಿ ಇತ್ತೀಚಿನ 4-5 ವರ್ಷಗಳಿಂದ ಜಿಲ್ಲಾ ಆರೋಗ್ಯ ಇಲಾಖೆಯಡಿ ಇವರನ್ನು ದಾಖಲಿಸಿಕೊಳ್ಳಲಾಗುತ್ತಿದೆ! ಸರ್ಕಾರದ ದಾಖಲಿಸುವ ಈ ಕ್ರಮವೇ ಪ್ರಶ್ನಾರ್ಹವಾದುದು! ಹಾಗಿದ್ದರೆ, ಹೆಣ್ಣಿನ ಲೈಂಗಿಕ ಜೀತವೇ ನಮ್ಮ ಸಭ್ಯ ಸಮಾಜ ಬಯಸುತ್ತಿರುವ ಮಹಿಳೆಯ ದೇಹ ಕೇಂದ್ರಿತ ಹಕ್ಕನ್ನಾಧರಿಸಿದ ಅಭಿವೃದ್ಧಿಯೇ? ಎಂಬ ಪ್ರಶ್ನೆ ನಮ್ಮನ್ನು ಕಾಡದಿರದು.

ಈ ಲೈಂಗಿಕವೃತ್ತಿನಿರತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಮಿತಿಮೀರಿದ ಪ್ರಮಾಣದಲ್ಲಿ ಏರುತ್ತಿದ್ದು, ಹೆಣ್ಣುಮಕ್ಕಳ ನಾಪತ್ತೆ ಪ್ರಕರಣಗಳಿಗೂ ಇವರ ಸಂಖ್ಯೆಯ ಹೆಚ್ಚಳಕ್ಕೂ ಖಂಡಿತಾ ನೇರವಾದ ಸಮೀಕರಣವಿದೆಯೆಂಬುದು ಗುಟ್ಟೇನಲ್ಲ! ಬಡ ಕುಟುಂಬಗಳ ವಲಸೆಯು ಹೆಣ್ಣುಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಅಪಾಯಕಾರಿಯಾಗಿದ್ದು ಆ ಸಂದರ್ಭದಲ್ಲೇ ಅನೇಕ ಹೆಣ್ಣುಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ, ಅತ್ಯಾಚಾರಕ್ಕೆ, ಕದ್ದೊಯ್ಯುವಿಕೆಗೆ ತುತ್ತಾಗುತ್ತಿರುವುದು ಬೆಳಕಿಗೆ ಬಂದಿದೆ. ಇದನ್ನು ಪೊಲೀಸರಲ್ಲಿ ದಾಖಲಿಸುವದಕ್ಕಾಗಲಿ, ಕಾನೂನುರೀತ್ಯ ಹೋರಾಟ ಮಾಡಲಾಗಲಿ ಇವರಿಗೆ ವ್ಯವಧಾನವೂ ಇಲ್ಲ, ತಿಳಿವಳಿಕೆಯೂ ಇಲ್ಲ, ಜೊತೆಗೆ ಆರ್ಥಿಕ ಸಬಲತೆಯೂ ಇಲ್ಲ. ಇವರು ಕಾನೂನುಬದ್ಧವಲ್ಲದ ಮೈ ಮಾರಿಕೊಳ್ಳುವ ಇಂತಹ ವೃತ್ತಿಯಲ್ಲಿ ತೊಡಗಿಕೊಳ್ಳುವ ಮೂಲಕ ಸಂಘಟಿತರಾಗಲೂ ಸಾಧ್ಯವಾಗದೇ, ಅದರಲ್ಲೂ ವಯಸ್ಸಾಗುತ್ತಾ ಸಾಗಿದಂತೆ ಈ ವೃತ್ತಿಯಲ್ಲಿ ಮುಂದುವರೆಯಲಾಗದಿದ್ದಾಗ ಅವರು ಕಸಕ್ಕಿಂತಾ ಕಡೆಯಾಗಿಬಿಡುತ್ತಾರೆ. Prostitutionಹಾಗೆಂದು ಇದನ್ನು ವೃತ್ತಿಯಾಗಿ ಪರಿಗಣಿಸಬೇಕೆಂಬುದು ಈ ಮಾತುಗಳ ಆಶಯವಲ್ಲ. ಅದರದು ಬೇರೆಯದೇ ಚರ್ಚೆ. ಎಲ್ಲಿಯವರೆಗೆ ಹೆಣ್ಣಿಗೆ ತನ್ನ ದೇಹ, ಮನಸ್ಸು, ಹಾಗೂ ಬುದ್ಧಿ ಅತ್ಯಂತ ವಿಶಿಷ್ಟವಾದುದು ಮತ್ತು ಅತ್ಯಮೂಲ್ಯವಾದುದು ಎಂಬ ನಂಬಿಕೆ ಬರುವುದಿಲ್ಲವೋ, ತನ್ನ ವ್ಯಕ್ತಿತ್ವದ ಘನತೆಗಾಗಿ ಯಾವುದೇ ಕೀಳು ಕೆಲಸಕ್ಕೆ ಇಳಿಯುವುದಿಲ್ಲ ಎಂಬ ದೃಢತೆ ಬರುವುದಿಲ್ಲವೋ ಅಲ್ಲಿಯವರೆಗೆ ಮಹಿಳೆ ಮತ್ತೆ ಮತ್ತೆ ಶೋಷಣೆಗೆ ಒಳಗಾಗುತ್ತಲೇ ಇರಬೇಕಾಗುತ್ತದೆ ಎಂಬುದು ನಿರ್ವಿವಾದ.

ಲೈಂಗಿಕ ಕಾರ್ಯಕರ್ತೆಯರ ಹಿತಾಸಕ್ತಿಗಾಗಿ ದುಡಿಯುತ್ತಿರುವುದಾಗಿ ಹೇಳಿಕೊಳ್ಳುತ್ತಿರುವ ಕೆಲವು ಎನ್‌ಜಿಒಗಳು ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸುವಂತೆ ಒತ್ತಾಯಿಸುತ್ತಿವೆ. ‘ನನ್ನ ದೇಹ ನನ್ನ ಹಕ್ಕು’ ಎಂಬ ಕಲ್ಪನೆಯನ್ನು ಬಿತ್ತುತ್ತಿವೆ. ಈಗಾಗಲೇ ಹೆಣ್ಣುಮಕ್ಕಳ ಅಕ್ರಮ ಮಾರಾಟದ ದಂಧೆ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿರುವುದನ್ನು, ವ್ಯಾಪಕವಾಗಿರುವ ಹೆಣ್ಣುಮಕ್ಕಳ ಕಣ್ಮರೆ ಪ್ರಕರಣಗಳು ಎತ್ತಿ ತೋರುತ್ತಿವೆ. ಅದರಲ್ಲೂ ತನ್ನ ದೇಹವನ್ನು ಗೌರವಿಸಿಕೊಳ್ಳುವ ಯಾವ ಹೆಣ್ಣು, ಅದು ಮಾರಾಟದ ಸರಕಾಗಬೇಕು ಎಂದು ಬಯಸುತ್ತಾಳೆ? ಬಯಸುವುದೇ ಆದರೆ ಅದಕ್ಕೆ ಕಾರಣ ಅವಳನ್ನು ಹಾಗೆ ರೂಪಿಸಿದ ವ್ಯವಸ್ಥೆಯದೇ ಹೊರತು ಹೆಣ್ಣಿನದಲ್ಲ ಅಲ್ಲವೇ? ಲೈಂಗಿಕ ಕಾರ್ಯಕರ್ತೆಯರ ಪುನರ್ವಸತಿ ಸಾಧ್ಯತೆಗಳ ಕುರಿತು ಉನ್ನತ ಆರೋಗ್ಯ ಅಧಿಕಾರಿಯೊಡನೆ ಚರ್ಚಿಸುತ್ತಿದ್ದಾಗ, “ಎಲ್ಲಿಯವರೆಗೆ ‘ಡಿಮ್ಯಾಂಡ್’ ಇರುತ್ತದೋ ಅಲ್ಲಿಯವರೆಗೆ ಸಪ್ಲೈ ಇರಲೇಬೇಕು” ಎನ್ನುತ್ತಾ ಪುನರ್ವಸತಿ ಎಂಬ ಪರಿಕಲ್ಪನೆಯನ್ನೇ ಅಲ್ಲಗಳೆದುಬಿಟ್ಟರು! ಇದು ನಮ್ಮ ವ್ಯವಸ್ಥೆಯ ರಕ್ಷಣೆಯ ನೀತಿಗೊಂದು ಉದಾಹರಣೆ! ಹಾಗಿದ್ದರೆ ಮಹಿಳಾ ಹಕ್ಕುಗಳ ಗತಿಯೇನು?

ಹೆಣ್ಣು ಮಕ್ಕಳ ಕಣ್ಮರೆ ಕುರಿತ ನಮ್ಮದೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೆಣ್ಣುಮಕ್ಕಳಿಗೆ ನೈತಿಕ ಶಿಕ್ಷಣ ನೀಡಿ ಅವರನ್ನು “ಹದ್ದುಬಸ್ತಿನಲ್ಲಿಡುವುದು” ಮಾತ್ರ ಅವರ ಮೇಲಿನ ಎಲ್ಲ ರೀತಿಯ ದೌರ್ಜನ್ಯ ತಡೆಗೆ ಪರಿಹಾರ ಎಂದು ಹೇಳಿ ಕೈ ತೊಳೆದುಕೊಂಡು ಬಿಟ್ಟರು! ‘ಗಂಡ ಹೆಂಡತಿಗೆ ಎರಡೇಟು ಕೊಡುವುದು ವೈವಾಹಿಕ ಬದುಕಿನಲ್ಲಿ ಸಾಮಾನ್ಯ, ಅದು ದೌರ್ಜನ್ಯವಲ್ಲ’ ಎಂದು ನಮ್ಮ ಕಾರವಾರದ ತ್ವರಿತ ನ್ಯಾಯಾಲಯವೊಂದು ಮೊನ್ನೆಯಷ್ಟೇ ಆದೇಶದಲ್ಲಿ ಉಲ್ಲೇಖಿಸಿದೆ! ‘ಭೂಗತ ಜಗತ್ತಿನ ಮುಖಂಡರೂ ಮಹಿಳೆಯರನ್ನು ಗೌರವದಿಂದ ಕಾಣಲು ಬಯಸುತ್ತಾರೆ. ಗೌರವಯುತ ಮಹಿಳೆ ಮೇಲೆ ಅತ್ಯಾಚಾರ ನಡೆಯುವುದಿಲ್ಲ.’ ಇದು ದೆಹಲಿ ಸಾಮೂಹಿಕ ಅತ್ಯಾಚಾರದ ಪಾತಕಿಗಳ ಪರ ವಕಾಲತ್ತು ವಹಿಸಿರುವ ನ್ಯಾಯವಾದಿ ಮನೋಹರಲಾಲ್ ಶರ್ಮಾ ಅವರ ಹೇಳಿಕೆ. ಇಂತಹ ಅಸೂಕ್ಷ್ಮ ಹೇಳಿಕೆಗಳು, prostitution_time_coverಯಾರ್‍ಯಾರಿಂದಲೋ! ಅದಿನ್ನೆಷ್ಟೋ! ಖಾಪ್ ಪಂಚಾಯಿತಿ, ಮತೀಯವಾದಿ ಸ್ವಯಂಘೋಷಿತ ಸಂಸ್ಕೃತಿಯ ರಕ್ಷಕರ ಹೇಳಿಕೆಗಳಿಗೂ, ಇವುಗಳಿಗೂ ಹೆಚ್ಚು ವ್ಯತ್ಯಾಸವೇನಾದರೂ ಇದೆಯೇ? ಅವರಂತೂ ನಮ್ಮ ಸಂವಿಧಾನದ ಆಶಯಗಳಿಗೆ ಬದ್ಧರಾಗಿಲ್ಲದವರು, ಹೆಣ್ಣಿನ ಹಕ್ಕುಗಳ ಬಗ್ಗೆ ತಿಳಿವಳಿಕೆ ಇಲ್ಲದವರು, ವಸ್ತುಸ್ಥಿತಿಯನ್ನು ವೈಚಾರಿಕವಾಗಿ ವಿವೇಚಿಸಲರಿಯದ ಮೂರ್ಖರು ಎಂದು ನಿರ್ಲಕ್ಷಿಸಿ ಪಕ್ಕಕ್ಕಿಟ್ಟುಬಿಡಬಹುದು. ಆದರೆ……..

ಇಂದು ಕಾನೂನು, ಪೊಲೀಸ್, ಆರೋಗ್ಯ……ಹೀಗೆ ರಕ್ಷಣೆ ನೀಡಬೇಕಾದ, ಹೆಣ್ಣಿನ ಹಕ್ಕನ್ನು ಗೌರವಿಸಬೇಕಾದ ಎಲ್ಲ ವ್ಯವಸ್ಥೆಗಳೂ ಯಥಾಸ್ಥಿತಿಯನ್ನು ನಾಜೂಕಾಗಿ ಕಾಯ್ದುಕೊಳ್ಳುತ್ತಾ, ಒಂದೆಡೆ ಮಹಿಳೆಯ ಹಕ್ಕುಗಳನ್ನು ಗಾಳಿಗೆ ತೂರಿ ಹೆಣ್ಣನ್ನು ಸರಕೆಂಬಂತೆ ಬಳಸಿಕೊಳ್ಳಲು ಅನುವು ಮಾಡಿಕೊಡುತ್ತಾ, ಇನ್ನೊಂದೆಡೆ ಅವಳಿಗೆ ನೈತಿಕತೆಯ ಬೋಧೆ ನೀಡುತ್ತಾ, ಮತ್ತೊಂದೆಡೆ ಅವಳನ್ನು ಉದ್ಧರಿಸುವ, ರಕ್ಷಿಸುವ ನಾಟಕವಾಡುತ್ತಿರುವಾಗ, ಈ ವ್ಯವಸ್ಥೆಯ ಕಣ್ಣು ತೆರೆಸುವುದು ಹೇಗೆ? ‘ಮಹಿಳಾ ಸ್ನೇಹಿ’ ಹಾಗೂ ‘ಲಿಂಗ ಸೂಕ್ಷ್ಮತೆ’ಯ ಎಚ್ಚರವನ್ನು ಸಮಾಜ ಕಲಿತುಕೊಳ್ಳುವ ಮೂಲಕ ಮಾತ್ರ ಮಹಿಳೆಯ ಹಕ್ಕನ್ನಾಧರಿಸಿದ, ಮಹಿಳಾ ಸಮಾನತೆಯ ಕನಸಿನೆಡೆಗೆ ಮೊದಲ ಹೆಜ್ಜೆಯನ್ನು ಇಡಲು ಸಾಧ್ಯ ಎಂದು ನಂಬಿರುವ ಎಚ್ಚೆತ್ತ ಹೆಣ್ಣುಮಕ್ಕಳಿಂದು, ಮೊದಲಿಗೇ ಸಂವಿಧಾನಬದ್ಧವಾದ ಆಶಯಗಳಡಿಯಲ್ಲಿ ಕಾರ್ಯ ನಿರ್ವಹಿಸಬೇಕಾದ ನಮ್ಮ ನ್ಯಾಯಾಂಗಕ್ಕೆ, ಮಾಧ್ಯಮಕ್ಕೆ, ಸರ್ಕಾರಿ ಆಡಳಿತ ಯಂತ್ರಕ್ಕೆ ಈ ಪಾಠವನ್ನು ಹೇಳಿಕೊಡಬೇಕಾಗಿ ಬಂದಿರುವುದನ್ನು ಯಾವ ಕರ್ಮವೆನ್ನೋಣ? ನಾವು ಪುರುಷರಿಗೆ ಸಮಾನವಾದ ಹಕ್ಕುಗಳನ್ನು ಪಡೆದಿರುವ ಪ್ರಜಾಪ್ರಭುತ್ವವಾದಿ ದೇಶದಲ್ಲಿರುವ ಪ್ರಜೆಗಳೆಂದು ಹೇಳಿಕೊಳ್ಳಲೂ ನಾಚಿಕೆಯಾಗುತ್ತಿದೆ! ಇಂತಹುದ್ದೊಂದು ವ್ಯವಸ್ಥೆಯ ಬಗ್ಗೆ ಹೆಣ್ಣುಮಕ್ಕಳು ಸಂಪೂರ್ಣವಾಗಿ ‘ನಂಬಿಕೆ’ ಕಳೆದುಕೊಳ್ಳುವ ಮೊದಲು ಸಮಾಜ ಎಚ್ಚೆತ್ತುಕೊಳ್ಳುವುದೇ? ಎಂದು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *