ಇತಿಹಾಸದ ಸಮೂಹಸನ್ನಿಯನ್ನು ಅರಿತುಕೊಳ್ಳಲು ನಿರಾಕರಿಸುತ್ತಿರುವ ನೀರೋಗಳು


-ಬಿ. ಶ್ರೀಪಾದ್ ಭಟ್


 

 

 

Today every invention is received with a cry of triumph which soon turns into a cry of fear -Brecht

ಜಾಗತೀಕರಣದ ಪ್ರಕ್ರಿಯೆಗೆ ತೆರದುಕೊಂಡು 23 ವರ್ಷಗಳಾಗಿರುವ ಇಂದಿನ ಇಂಡಿಯಾದ ಈಗಿನ ನವ ಕಲೋನಿಯಲ್ ವ್ಯವಸ್ಥೆಗೂ ಮತ್ತು ಸಂಘಪರಿವಾರದ ಧಾರ್ಮಿಕತೆಯನ್ನಾಧರಿಸಿದ ಆಧುನಿಕ ಮತೀಯವಾದಕ್ಕೆ ನೇರ ಸಂಬಂಧಗಳಿವೆ. ಇಲ್ಲಿ ಕೋಮುವಾದಿಗಳು ಮತ್ತು ಜಾಗತೀಕರಣದ ನಡುವೆ ಒಂದು ರೀತಿಯ ಅನುಬಂಧ ಏರ್ಪಟ್ಟಿದೆ. 2014ರ ಚುನಾವಣೆಯ ಸಂದರ್ಭದಲ್ಲಿ ಇಂಡಿಯಾದ ಕಾರ್ಪೋರೇಟ್ ವಲಯ ಬಿಜೆಪಿ ಪಕ್ಷಕ್ಕೆ ಪ್ರಚಾರಕ್ಕಾಗಿ ಕೋಟಿಗಟ್ಟಲೆ ಹಣವನ್ನು ವ್ಯಯಿಸಿದೆ.ಇದೇನು ಗುಟ್ಟಾಗಿ ಉಳಿದಿಲ್ಲ. ಬಿಜೆಪಿ ಪಕ್ಷ ಅದರಲ್ಲೂ ನರೇಂದ್ರ ಮೋದಿ ಇಂದು ಕಾರ್ಪೋರೇಟ್ ವಲಯದ ಹಂಗಿನಲ್ಲಿರುವುದು ಸಹ ಗುಟ್ಟೇನಿಲ್ಲ.ಇಂದು ಕಾರ್ಪೋರೇಟ್ ವಲಯ ಪ್ರತಿಫಲವನ್ನು ನಿರೀಕ್ಷಿಸುವುದೂ ಸಹಜ. ಬಂಡವಾಳಶಾಹಿಗಳು ಬಯಸುವ ನವ ಉದಾರೀಕರಣದ ಆರ್ಥಿಕತೆಯ ಸಿದ್ಧಾಂತಕ್ಕೆ ಮೋದಿ ಸರ್ಕಾರ ತಲೆಬಾಗಿಸಿ ಮನ್ನಣೆ ಕೊಡುವುದೂ ಸಹಜ. ಖಾಸಗೀ ಬಂಡವಾಳಶಾಹಿಗಳ ಮೇಲ್ವಿಚಾರಣೆಯಲ್ಲಿ ಹಂತಹಂತವಾಗಿ ರೂಪುಗೊಳ್ಳುವ ನವ ಉದಾರೀಕರಣದ ಆರ್ಥಿಕ ನೀತಿಯನ್ನು ಜನರಿಗಾಗಿಯೇ ಎಂದೇ ನಂಬಿಸಲಾಗುತ್ತದೆ. ಈ ರುದ್ರಪ್ರಹಸನದ ಮುಂದುವರೆದ ಭಾಗವಾಗಿ ಬಡಜನರ ಪರವಾಗಿರುವ ಕಲ್ಯಾಣ ಕಾರ್ಯಕ್ರಮಗಳೆಂದರೆ ಭ್ರಷ್ಟಾಚಾರಕ್ಕೆ ಬಾಗಿಲನ್ನು ತೆರೆದಂತೆ ಹಾಗಾಗಿ ಭ್ರಷ್ಟಾಚಾರ ಮುಕ್ತ ಭಾರತವೆಂದರೆ ಕಲ್ಯಾಣಕಾರ್ಯಕ್ರಮ ಮುಕ್ತ ಭಾರತ ಎನ್ನುವ ಹೊಸ ಆರ್ಥಿಕ ನೀತಿ ಜಾರಿಗೊಳ್ಳಲಿದೆ. ಮುಂದಿನ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರ ಹೆಚ್ಚೂ ಕಡಿಮೆ ಈ ಖಾಸಗೀ ಬಂಡವಾಳಶಾಹಿಗಳ ನವ ಉದಾರೀಕರಣಕ್ಕೆ ಶರಣಾಗಿರುತ್ತದೆ.

ಮೂವತ್ತರ ದಶಕದಲ್ಲಿ ಯುರೋಪಿನಲ್ಲಿ ಮೇಲಿನ ಬಗೆಯ ಇಡೀ ಖಾಸಗೀಕರಣದ ಪ್ರಕ್ರಿಯೆಯನ್ನೇ ಫ್ಯಾಸಿಸ್ಟರು ಅಧಿಕೃತವಾಗಿ ಫ್ಯಾಸಿಸಂತನವೆಂದೇ ಹೆಮ್ಮೆಯಿಂದ ಕರೆದರು. ambani-modiಮೂವತ್ತರ ದಶಕದಲ್ಲಿ ಮಸಲೋನಿ ಮತ್ತು ಹಿಟ್ಲರ್ ಮಾಡಿದ್ದು ಇದನ್ನೇ. ಇಟಲಿ ಮತ್ತು ಜರ್ಮನಿಯಲ್ಲಿ ಒಂದು ಬಗೆಯ ಸಮೂಹ ಸನ್ನಿಯನ್ನೇ ಸೃಷ್ಟಿಸಿದರು. ಇಂದು ಮೋದಿ ಅದೇ ಬಗೆಯ ಸಮೂಹ ಸನ್ನಿಯನ್ನು ಇಂಡಿಯಾದಲ್ಲಿ ಸೃಷ್ಟಿಸಿದ್ದಾರೆ. ಈ ಸಮೂಹ ಸನ್ನಿಯನ್ನೊಳಗೊಂಡ ಮೋದಿಯ ಆಡಳಿತದಲ್ಲಿ ಬಂಡವಾಳಶಾಹಿಗಳ ಬೋರ್ಡರೂಂನ ಖಾಸಗಿ ಆಡಳಿತ ಮತ್ತು ರಾಜ್ಯದ ಸರ್ಕಾರಿ ಆಡಳಿತ ವಿಲೀನಗೊಂಡು ಬಂಡವಾಳಶಾಹಿಗಳ ಖಾಸಗಿ ಸಾಮ್ರಾಜ್ಯ ಮೋದಿಯೆಂಬ ಛಾನಲ್ ನ ಮೂಲಕ ಸ್ಥಾಪಿತಗೊಳ್ಳುತ್ತದೆ. ಇದಕ್ಕಾಗಿಯೇ ಕಾರ್ಪೋರೇಟ್ ವಲಯ ಮೋದಿ ಎನ್ನುವ ಛಾನಲ್ ಮೂಲಕ ಕೋಟಿಗಟ್ಟಲೆ ಹಣವನ್ನು ಹರಿಸಿದ್ದು. ಪತ್ರಕರ್ತ ವಿನೋದ ಮೆಹ್ತಾ ಬರೆದಂತೆ ಮೋದಿಯ ಶೈಲಿಯ ಆಡಳಿತವೆಂದರೆ ಗುರಿ ಮುಟ್ಟುವುದು ಮುಖ್ಯವಾಗುತ್ತದೆಯೇ ಹೊರತು ಅದನ್ನು ತಲಪಲು ಬಳಸುವ ವಾಮಮಾರ್ಗದ, ಹಿಂಸಾಚಾರದ ದಾರಿಗಳು ಅಕ್ಷೇಪಾರ್ಹವಲ್ಲವೇ ಅಲ್ಲ. ಇಂದು ಮೋದಿಯ ಸರ್ವಾಧಿಕಾರಿ ನಡಾವಳಿಗಳು ಕ್ರಮೇಣ ವ್ಯವಸ್ಥೆಯ ಸಮೂಹ ಸನ್ನಿ ನಡುವಳಿಕೆಗಳಾಗಿಯೇ ಸ್ಥಾಪಿತಗೊಳ್ಳುತ್ತವೆ. ಸಿಇಓ ಮೋದಿಯ ಈ ಸಮೂಹಸನ್ನಿಯ ಗುಂಪಿನಿಂದ ಭಾರತ ಪ್ರಕಾಶಿಸುತ್ತಿದೆ ಎನ್ನುವ ಸ್ಲೋಗನ್ ನಮ್ಮನ್ನು ಹೊಸರೂಪದಲ್ಲಿ ಎದುರುಗೊಳ್ಳುತ್ತದೆ. ಪತ್ರಕರ್ತ ಆಕಾರ್ ಪಟೇಲ್ ಈ ಶೈಲಿಯ ಸ್ಲೋಗನ್ ಗಳ ಅಪಾಯಕಾರಿ ಧೋರಣೆಗಳ ಕುರಿತಾಗಿ ಬರೆಯುತ್ತ “ನಿಜ, ಅನೇಕ ಬಾರಿ ಸ್ಲೋಗನ್ ಗಳೇ ಮೇಲುಗೈ ಸಾಧಿಸುತ್ತವೆ. ಆದರೆ ನಾವು ಸ್ಲೋಗನ್ ಗಳನ್ನು ಸತ್ವಯುತವಾದ ಮಹತ್ವದ ತಾತ್ಪರ್ಯಗಳೆಂದು, ತಪ್ಪಾಗಿ ಅರ್ಥೈಸಬಾರದು” ಎಂದು ಬರೆದಿದ್ದರು.

ನವ ಕಲೋನಿಯಲ್ ಮತ್ತು ಮತೀಯವಾದಿಗಳ ಸಾಮ್ಯತೆ ಮತ್ತು ಹೊಂದಾಣಿಕೆಯ ಮಾದರಿಯನ್ನು ಚಿಂತಕ ಫ್ರೊ.ಜಿ.ಹರಗೋಪಾಲ್ ಅವರು ವಿವರಿಸುತ್ತ “ಇಂಡಿಯಾದಲ್ಲಿ ಈಗ ಚಾಲ್ತಿಯಲ್ಲಿರುವ ನವ ಕಲೋನಿಯಲ್ ವ್ಯವಸ್ಥೆಯ ಸಂರಚನೆಗಳು ಹೇಗಿರುತ್ತವೆಯೆಂದರೆ ಸಂವಿಧಾನದ ಮೂಲಕ ರೂಪಿತವಾದ ಎಲ್ಲಾ ಕಾನೂನನ್ನು ಪಾಲಿಸುತ್ತಿದ್ದೇವೆ ಎಂದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಗೋಚರಿಸುವಂತೆ ಇಲ್ಲಿನ ಕಾರ್ಯಾಂಗ, ಶಾಸಕಾಂಗ ಮತ್ತು ಮಾಧ್ಯಮಗಳು ಆಡಳಿತ ನಡೆಸುತ್ತಿರುತ್ತವೆ. ಆದರೆ ಮಾನಸಿಕವಾಗಿ ಇವೆಲ್ಲವೂ ಮೈಗೂಡಿಸಿಕೊಂಡಿರುವುದು ಎಲ್ಲಾ ಕಾನೂನನ್ನು ಧಿಕ್ಕರಿಸುವ ಫ್ಯೂಡಲ್ ಸಂಸ್ಕೃತಿಯನ್ನು. ಜನಸಾಮಾನ್ಯರೊಂದಿಗೆ ಇವರ ವರ್ತನೆ ಫ್ಯೂಡಲ್ ಮನೋಭಾವದ್ದು. ಸದಾ ದಬ್ಬಾಳಿಕೆಯದ್ದು. ಉದಾಹರಣೆಗೆ ಪೋಲೀಸ್ ವ್ಯವಸ್ಥೆಯನ್ನು ತೆಗೆದುಕೊಂಡರೆ ಅಲ್ಲಿ ಯಾವುದೇ ದೂರನ್ನು ಕಾನೂನಿನ ಪ್ರಕಾರವೇ ದಾಖಲಿಸಬೇಕು. ಆದರೆ ನಂತರ ಇಡೀ ಪೋಲೀಸ್ ವ್ಯವಸ್ಥೆ ಬಹಿರಂಗವಾಗಿ ನಡೆದುಕೊಳ್ಳುವುದು ಕಾನೂನುಬಾಹಿರವಾದ ಫ್ಯೂಡಲ್ ವ್ಯವಸ್ಥೆಯನ್ನು ಬಳಸುವುದರ ಮೂಲಕ. ಇದು ರಾಜ್ಯದ ಬೇರೆ ಬೇರೆ ಇಲಾಖೆಗಳಿಗೂ ಅನ್ವಯಿಸುತ್ತದೆ” ಎಂದು ಹೇಳುತ್ತಾರೆ.

“ಸಣ್ಣದಾದ ಸರ್ಕಾರ, ವಿಶಾಲವಾದ,ಪರಮಾವಧಿಯ ಆಡಳಿತ (minimum government, maximum governance)” ಎನ್ನುವುದು ಮೋದಿಯ ಜನಪ್ರಿಯ ಸ್ಲೋಗನ್ ಗಳಲ್ಲೊಂದು. ಇದನ್ನು ಗುಜರಾತ್ ಮಾಡೆಲ್ ಎನ್ನುವ ಸರ್ಕಾರಿ ಬೈಬಲ್ ನಿಂದ ಹೆಕ್ಕಿಕೊಳ್ಳಲಾಗಿದೆ. ಈ ಜನಪ್ರಿಯವಾದ ಪರಮಾವಧಿಯ ಆಡಳಿತದ ಇಂದಿನ ಒಂದು ಉದಾಹರಣೆಯನ್ನು ನೋಡಿ. greenpeaceಮೋದಿ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ಇಂಟೆಲಿಜೆನ್ಸ್ ಬ್ಯೂರೋದ ಒಂದು ವರದಿ ಮಾಧ್ಯಮಗಳಲ್ಲಿ ಸೋರಿಕೆಯಾಯಿತು. ಗ್ರೀನ್ ಪೀಸ್ ಎನ್ನುವ ಎನ್.ಜಿ.ಓ ವಿದೇಶಿ ಮೂಲಗಳಿಂದ ಹಣವನ್ನು ದೇಣಿಗೆಯಾಗಿ ಪಡೆದು ಇಂಡಿಯಾದಲ್ಲಿ ಪರಮಾಣು ಸ್ಥಾವರಗಳ ವಿರುದ್ಧ ಹೋರಾಡುತ್ತ ದೇಶದಲ್ಲಿ ಆರ್ಥಿಕ ಅಭದ್ರತೆ ಉಂಟು ಮಾಡುತ್ತಿದೆ ಎಂಬುದು ಇವರ ಆರೋಪ. ಇದರ ಅಡಿಯಲ್ಲಿ ಪರಿಸರದ ಸಂರಕ್ಷಣೆಗಾಗಿ ಹೋರಾಡುತ್ತಿರುವ ದಕ್ಷಿಣ ಆಫ್ರಿಕ ಮೂಲದ ಗ್ರೀನ್ ಪೀಸ್ ಎನ್ನುವ ಎನ್.ಜಿ.ಓ ವಿರುದ್ಧ ಮೋದಿ ಸರ್ಕಾರ ಚಾಟಿ ಬೀಸುತ್ತಿದೆ. ಅದನ್ನು ಕಾನೂನುಬಾಹಿರ ಎಂದು ಆರೋಪಿಸುತ್ತಿದೆ. ಆದರೆ ಪರಮಾಣು ಶಕ್ತಿ ಇಲಾಖೆಯನ್ನು ತನ್ನ ಬಳಿಯೇ ಇರಿಸಿಕೊಂಡಿರುವ ಮೋದಿಯು ಕೂಡಂಕುಲಂ ಅಣುಸ್ಥಾವರದ ವಿರುದ್ಧ, ಜಾರ್ಖಂಡ್ ರಾಜ್ಯದ ಯುರೇನಿಯಂ ಗಣಿಗಳ ವಿರುದ್ಧ, ಒರಿಸ್ಸಾದಲ್ಲಿ ಪೋಸ್ಕೋ ಸ್ಟೀಲ್ ಕಾರ್ಖಾನೆಯ ವಿರುದ್ಧ, ಒರಿಸ್ಸಾದ ವೇದಾಂತದ ಗಣಿಗಾರಿಕೆಯ ವಿರುದ್ಧ,ದೇಶಾದ್ಯಾಂತ ಅಕ್ರಮವಾಗಿ ಪ್ರಾರಂಬಿಸಲು ಉದ್ದೇಶಿಸಿರುವ ಕಲ್ಲಿದ್ದಲು ಗಣಿಗಾರಿಕೆಯ ವಿರುದ್ಧ ಹೀಗೆ ಅನೇಕ ಪರಿಸರ ಮತ್ತು ಜನವಿರೋಧಿ ಯೋಜನೆಗಳನ್ನು ವಿರೋಧಿಸುತ್ತಿರುವ ಆದಿವಾಸಿಗಳು ಮತ್ತು ಬಡಜನರ ಪರವಾಗಿ ಹೋರಾಡುತ್ತಿರುವ ಪರಿಸರವಾದಿಗಳು, ಜನಪರ ಸಂಘಟನೆಗಳ ವಿರುದ್ಧ ಸಹ ಮೇಲಿನಂತೆಯೇ ಕತ್ತಿ ಬೀಸಲು ಕಾಯುತ್ತಿದ್ದಾರೆ. ಏಕೆಂದರೆ ಮೋದಿಯ ಅಪ್ತರಾದ ಕಾರ್ಪೋರೇಟ್ ಲೋಕದ ಹಿತಾಸಕ್ತಿ ಕಾಯಲು ಸಂಘ ಪರಿವಾರ ಯಾವುದೇ ಹಂತದ ಬೇಟೆಗೂ ತಯಾರಾಗಿದೆ. ಇದು ಬಿಜೆಪಿಯ ಅಭಿವೃದ್ಧಿ ಮಾದರಿಯ ಫ್ಯಾಸಿಸಂನ ಶೈಲಿ. ಇದಕ್ಕೆ ಇವರು ಬಳಸಿಕೊಳ್ಳುತ್ತಿರುವುದು ಸ್ವದೇಶಿ ಮಂತ್ರವನ್ನು. ಜೂನ್ ೩೦, 2014ರ ಔಟ್ಲುಕ್ ಪತ್ರಿಕೆಯ ವರದಿಯ ಪ್ರಕಾರ ಕಳೆದ ಎಂಬತ್ತೈದು ವರ್ಷಗಳಿಂದ ಚಾಲ್ತಿಯಲ್ಲಿರುವ ಆರೆಸ್ಸೆಸ್ ಇಂದೂ ತನ್ನ ಸಂಘಟನೆಯನ್ನು ನೊಂದಾಯಿಸಿಕೊಂಡಿಲ್ಲ. ಹಾಗಾಗಿ ಆರೆಸ್ಸೆಸ್ ನೇರವಾಗಿ ಅಧಿಕೃತವಾಗಿ ಯಾವುದೇ ದೇಣಿಗೆಯನ್ನು ಪಡೆಯುವಂತಿಲ್ಲ. ಹೀಗಾಗಿ ಇದು ಆದಾಯ ತೆರಿಗೆಯನ್ನು ಸಹ ಪಾವತಿಸುತ್ತಿಲ್ಲ. ಆದರೆ ಆರೆಸ್ಸೆಸ್ ನ ಇತರೇ ಅಂಗ ಸಂಸ್ಥೆಗಳು ( ಬಹುಪಾಲು ಧಾರ್ಮಿಕ ಮತ್ತು ಶಿಕ್ಷಣ ಸಂಸ್ಥೆಗಳು) ಸ್ವತಃ ಎನ್.ಜಿ.ಓ ಹೆಸರಿನಡಿಯಲ್ಲಿ ದೇಶ,ವಿದೇಶದಿಂದ ಕೋಟಿಗಟ್ಟಲೆ ಹಣವನ್ನು ಅನುದಾನದ ರೂಪದಲ್ಲಿ ಪಡೆದಿದೆ. ಈಗಲೂ ಪಡೆಯುತ್ತಿದೆ. ಆರೆಸ್ಸೆಸ್ ಅಂಗ ಸಂಸ್ಥೆಗಳಿಗೆ ಹಣದ ರೂಪದ ಕೋಟಿಗಟ್ಟಲೆ ಅನುದಾನ ಹರಿದಿರುವುದು ಬಹುಪಾಲು ಅಮೇರಿಕಾದಲ್ಲಿರುವ IDRF ( india development and relief fund)   ಎನ್ನುವ ಸಂಸ್ಥೆಯಿಂದ. ಅಲ್ಲಿನ ಅನಿವಾಸಿ ಭಾರತೀಯರಿಂದ. ಸುಮಾರು ವರ್ಷಗಳಿಂದ ಈ ವ್ಯವಹಾರ ಜಾರಿಯಲ್ಲಿದೆ. ಆರೆಸ್ಸೆಸ್ ನ ಪ್ರಕಾರ ಈ ಅನುದಾನವು ವಿದೇಶಿ ಮೂಲದಿಂದ ಬಂದಿದ್ದರೂ ಅವರು ಭಾರತದ ಸನಾತನ ಪರಂಪರೆಗಾಗಿ ಹೋರಾಡುತ್ತಿರುವವರಿಗೆ ಅನುದಾನ ನೀಡುತ್ತಿರುವುದರಿಂದ ಅವರು ವಿದೇಶಿ ಎನ್ನಿಸಿಕೊಳ್ಳುವುದಿಲ್ಲ. ಆದರೆ ಜನಪರ ಕಾಳಜಿಗಳಿಗಾಗಿ, ಬಡಜನರ ಪರವಾಗಿ ಹೋರಾಡುತ್ತಿರುವವರದ್ದು ಮಾತ್ರ ಕಾನೂನುಬಾಹಿರ ಸಂಘಟನೆ. ಇದೇ ಫ್ಯಾಸಿಸಂತನದ ಪ್ರತ್ಯಕ್ಷ ಲಕ್ಷಣಗಳು

ಆರೆಸ್ಸೆಸ್ ನ ಈ ಅನೈತಿಕತೆಯನ್ನು ಪ್ರಶ್ನಿಸಬೇಕಾದ ಬಹುಪಾಲು ಮಾಧ್ಯಮಗಳು ಸಂಘ ಪರಿವಾರದೊಂದಿಗೇ ಒಡಂಬಡಿಕೆಯಲ್ಲಿವೆ. ಇದನ್ನೇ ಚೊಮೆಸ್ಕಿ friendly Fascism  modi_ambani_tata_kamathಎಂದು ಕರೆದದ್ದು. ಈ friendly Fascism ನ ಸಿದ್ಧಾಂತದ ಅನುಗುಣವಾಗಿಯೇ ಪ್ರಧಾನ ಮಂತ್ರಿಯ ಕಾರ್ಯಾಲಯದಿಂದ ಕೇಂದ್ರದ ಎಲ್ಲಾ ಇಲಾಖೆ ಮತ್ತು ಸಂಸ್ಥೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂಪರ್ಕ ಭಾಷೆಯಾಗಿ ಹಿಂದಿಯನ್ನು ಮಾತ್ರ ಬಳಸಬೇಕೆಂಬ ಸುತ್ತೋಲೆ ಬಂದಿದೆ. ಇದಕ್ಕಾಗಿ ಬಹುಮಾನಗಳನ್ನು ಸಹ ಘೋಷಿಸಲಾಗಿದೆ. ಹಿಂದೂ ರಾಷ್ಟ್ರೀಯತೆಯನ್ನು ಹಿಂದಿ ಭಾಷೆಯ ಹೆಸರಿನಲ್ಲಿ ಜಾರಿಗೊಳಿಸುವುದು ಆರೆಸ್ಸೆಸ್ ನ ಮೂಲ ಆಶಯಗಳಲ್ಲೊಂದು.ಇದು ಗೋಳ್ವಲ್ಕರ್ ಅವರ ಚಿಂತನಗಂಗಾದ ಪ್ರಮುಖ ನೀತಿಗಳಲ್ಲೊಂದು.

ಇಂದಿನ ಸಂಘ ಪರಿವಾರದ ಸರ್ಕಾರದೊಂದಿಗೆ ಆಡಳಿತಾತ್ಮಕವಾಗಿ, ಸಾರ್ವಜನಿಕವಾಗಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಲು, ಪಾಲಸಿ ನಿರ್ಧಾರಗಳಲ್ಲಿ ನಿರಂತರವಾಗಿ ಭಾಗಿಯಾಗಲು ಆ ಮೂಲಕ ಹಿಂದುತ್ವದ ಭಾರತಕ್ಕೆ ಭಧ್ರ ಬುನಾದಿ ಹಾಕಲು ತುದಿಗಾಲಲ್ಲಿ ನಿಂತಿರುವ ಪ್ರಮುಖ ಆರೆಸಸ್ ಅಂಗ ಸಂಸ್ಥೆಗಳೆಂದರೆ ವಿವೇಕಾನಂದ ಅಂತರಾಷ್ಟ್ರೀಯ ಫೌಂಡೇಶನ್ (ದೆಹಲಿ), ಅರ್ಥಕ್ರಾಂತಿ ಪ್ರತಿಷ್ಠಾನ ( ಪುಣೆ),ನಿಥಿ ಸೆಂಟ್ರಲ್ ( ದೆಹಲಿ), ಶ್ಯಾಮ್ ಪ್ರಸಾದ್ ಸಂಶೋಧನಾ ಕೇಂದ್ರ ( ದೆಹಲಿ), ದೀನ ದಯಾಳ್ ಸಂಶೋಧನಾ ಕೇಂದ್ರ ( ದೆಹಲಿ ಮತ್ತು ಚಿತ್ರಕೂಟ), ರಾಷ್ಟ್ರೀಯ ಸೇವಾ ಭಾರತಿ ( ದೆಹಲಿ), ಫ್ರೆಂಡ್ಸ್ ಆಫ್ ಬಿಜೆಪಿ, ಇಂಡಿಯನ್ ಪಾಲಿಸಿ ಫೌಂಡೇಶನ್ (ದೆಹಲಿ), ಸೆಂಟರ್ ಫಾರ್ ಪಾಲಿಸಿ ಸ್ಟಡಿ ( ದೆಹಲಿ), ಪಬ್ಲಿಕ್ ಪಾಲಿಸಿ ಸಂಶೋಧನಾ ಕೇಂದ್ರ ( ದೆಹಲಿ), ರಾಮಭಾವೂ ಪ್ರಭೋದಿನಿ ( ಮುಂಬೈ) – ( ಕೃಪೆ ,ಔಟ್ ಲುಕ್,9-6-2014)

ಇವಲ್ಲದೆ ವಿ.ಎಚ್.ಪಿ, ಬಜರಂಗ ದಳ ಮತ್ತು ಇನ್ನಿತರ ಹಿಂದೂ ಸಾಂಸ್ಕೃತಿಕ ಮುಖವಾಡದ ಮತೀಯವಾದಿ ಸಂಘಟನೆಗಳು ಸಕ್ರಿಯಗೊಳ್ಳತೊಡಗಿವೆ. ಈ ಸಕ್ರಿಯಗೊಳ್ಳುವುದರ ಫಲವಾಗಿ ಪುಣೆಯಲ್ಲಿ ಕೋಮು ಗಲಭೆಯಿಂದಾಗಿ ಮುಸ್ಲಿಂ ಯುವಕ ಕೊಲ್ಲಲ್ಪಟ್ಟಿದ್ದಾನೆ. ಮೇ 2, 2014ರಂದು ಪುಣೆಯಲ್ಲಿ ಮೊಹಸೀನ್ ಶೇಖ್ ಎನ್ನುವ 24ರ ಹರೆಯದ ಇಂಜಿನಿಯರ್ ಒಬ್ಬನನ್ನು ‘ಹಿಂದೂ ರಾಷ್ಟ್ರೀಯ ಸೇನ’ ಎನ್ನುವ ಬಲಪಂಥೀಯ ಮತೀಯವಾದಿ ಸಂಘಟನೆಯು ಹಿಗ್ಗಾಮುಗ್ಗ ಥಳಿಸಿ ಕೊಲೆ ಮಾಡಿತು.ಈ ಕೊಲೆಯ ಆರೋಪವನ್ನು ಎದುರಿಸುತ್ತಿರುವ ಮತೀಯವಾದಿ ಸಂಘಟನೆಯೊಳಗಿರುವ ಯುವಕರೆಲ್ಲ 30 ವರ್ಷಗಳಿಗಿಂತ ಕಡಿಮೆ ವಯಸ್ಸಿನವರು. ಇದರ ಮುಖ್ಯಸ್ಥ ಧನಂಜಯ ದೇಸಾಯಿ ಕೆಲವು ತಿಂಗಳ ಹಿಂದೆ ವಿಚಾರವಾದಿ ‘ನಾರಾಯಣ ದಾಬೋಲ್ಕರ್’ ಹತ್ಯೆಯ ಆರೋಪವನ್ನು ಎದುರಿಸುತ್ತಿದ್ದಾನೆ. ಶಿವಾಜಿ ವಿಗ್ರಹಕ್ಕೆ ಯಾರೋ ಕಲ್ಲೆಸಿದಿದ್ದಾರೆ ಎನ್ನುವ ವದಂತಿಯಿಂದ ಉದ್ರಿಕ್ತಗೊಂಡ ಗುಂಪೊಂದು ಈ ಅಮಾಯಕ ಮುಸ್ಲಿಂ ಯುವಕನನ್ನು ಹತ್ಯೆ ಮಾಡಿದೆ.ಇದಕ್ಕೂ ಮುಂಚೆ ಶಿವಾಜಿ ಮತ್ತು ಬಾಳಾ ಠಾಕ್ರೆಯವರ ವಿರೂಪಗೊಂಡ ಫೋಟೋಗಳು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪ್ರಕಟಗೊಂಡು ಪುಣೆ ನಗರದಾದ್ಯಾಂತ ಕೋಮು ಗಲಭೆ ಸ್ವರೂಪದ ಉದ್ರಿಕ್ತ ವಾತಾವರಣ ಉಂಟಾಗಿತ್ತು. ನಂತರ ಈ ಮುಸ್ಲಿಂ ಯುವಕನ ಹತ್ಯೆ. ಇದಕ್ಕೆ ಪ್ರತಿಕ್ರಯಿಸುತ್ತಾ ಪುಣೆ ನಗರದ ಬಿಜೆಪಿ ಸಂಸದ ಅನಿಲ್ ಶಿರೋಲೆ “ಫೇಸ್ ಬುಕ್ ನಲ್ಲಿ ಪ್ರಕಟಗೊಂಡ ಚಿತ್ರಗಳು ಮನ ನೋಯಿಸುವಂತದ್ದು. ಇದಕ್ಕೆ ಪ್ರತೀಕಾರ ಸ್ವರೂಪವಾಗಿ ಏನಾದರೂ ಒಂದು ಸಂಭವಿಸುವುದು ಸಾಮಾನ್ಯ ಮತ್ತು ಸಹಜ” ಎಂದು ಹೇಳಿಕೆ ಕೊಟ್ಟಿದ್ದಾರೆ. 2002ರ ಗುಜರಾತ್ ಹತ್ಯಾಕಾಂಡಕ್ಕೂ ಮೋದಿ ಹೇಳಿದ್ದು ಇದನ್ನೇ, ಆರೆಸ್ಸೆಸ್ ಇಂದಿಗೂ ಬಾಯಿ ಬಿಟ್ಟಿಲ್ಲ. ಸಿಇಓ ಮೋದಿಯೂ ಸಹ.

ಮೋದಿಯ ಲೆಫ್ಟಿನೆಂಟ್ ಅಮಿತ್ ಷಾ ನೇತೃತ್ವದಲ್ಲಿ ಉತ್ತರ ಪ್ರದೇಶದಲ್ಲಿ ಇಡೀ ಜಾತಿ ವ್ಯವಸ್ಥೆಯೇ ಧೃವೀಕರಣಗೊಂಡು ಅಪಾರ ಪ್ರಮಾಣದಲ್ಲಿ ಓಬಿಸಿ ಮತಗಳು ಬಿಜೆಪಿಯ ಪಾಲಾದವು. amit-shahಇದರ ಫಲವಾಗಿ ಬಲಿಷ್ಠ ಜಾತಿಗಳು ಸಂಪೂರ್ಣ ಸಂಘ ಪರಿವಾರದ ತೆಕ್ಕೆಯೊಳಗಿವೆ. ಇವರಿಗೆಲ್ಲಾ ಏಕಮೇದ್ವೀಯ ನಾಯಕ ಅಮಿತ ಷಾ. ಮುಜಫರ್ ನಗರ ಕೋಮುಗಲಭೆ ಇಡೀ ಧೃವೀಕರಣದ ಪ್ರಕ್ರಿಯೆಯನ್ನು ಒಂದು ತಾರ್ಕಿಕ ಅಂತ್ಯಕ್ಕೆ ಮುಟ್ಟಿಸಿತು. ಮತೀಯವಾದದ ಈ ಧೃವೀಕರಣದ ಫಲವಾಗಿ ಉತ್ತರಪ್ರದೇಶದಲ್ಲಿ ಬಿಜೆಪಿ 72 ಸ್ಥಾನಗಳನ್ನು ಗೆದ್ದುಕೊಂಡಿತು. ಈ ಮುಜಫರ್ ನಗರದ ಕೋಮು ಗಲಭೆಯ ಆರೋಪಿಯಾಗಿದ್ದ ಬಿಜೆಪಿ ಸಂಸದ ಸಂಜೀವ ಬಲಿಯಾನ್ ಅವರನ್ನು ಮೋದಿ ಸರ್ಕಾರದಲ್ಲಿ ಮಂತ್ರಿಯಾಗಿ ನೇಮಕ ಮಾಡಲಾಗಿದೆ. ಇಂದು ಅಮಿತ ಷಾ ಬಿಜೆಪಿಯ ಅತ್ಯಂತ ಪ್ರಭಾವಿ ನಾಯಕರಲ್ಲೊಬ್ಬರು. ಸದ್ಯಕ್ಕೆ ಉತ್ತರ ಪ್ರದೇಶದ ಸಾಮಂತ ರಾಜ. ಧೃವೀಕರಣದ ಈ ಮಾದರಿ 2002ರಲ್ಲಿ ಗುಜರಾತ್ ನಲ್ಲಿ ಯಶಸ್ವಿಯಾಯಿತು. 2014ರಲ್ಲಿ ಉತ್ತರ ಪ್ರದೇಶದಲ್ಲಿ ಯಶಸ್ವಿಯಾಯಿತು.ಇನ್ನು ಮುಂಬರುವ ಸಾರ್ವತ್ರಿಕ ಚುನಾವಣೆಗಳಲ್ಲಿ ಇದು ಪ್ರಯೋಗಿಸಲ್ಪಡುತ್ತದೆ. ಪುಣೆಯಲ್ಲಿನ ಕೊಲೆ ಇದರ ಆರಂಭವಷ್ಟೆ.

ಕಣ್ಣು, ಮೂಗು, ಗಂಟಲು ತಜ್ಞ ದೆಹಲಿಯ ಹರ್ಷವರ್ಧನ್ ಕೇಂದ್ರ ಸರ್ಕಾರದಲ್ಲಿ ಆರೋಗ್ಯ ಮಂತ್ರಿಗಳು. ಸಂಘಪರಿವಾರದ ಈ ಮಂತ್ರಿ “ಏಡ್ಸ್ ರೋಗವನ್ನು ತಡೆಗಟ್ಟಲು ಕಾಂಡೋಮ್ ಗಳನ್ನು ಅಳವಡಿಸಿಕೊಳ್ಳಬೇಡಿ, ಬದಲಾಗಿ ಮೌಲ್ಯಗಳನ್ನು ಅಳವಡಿಸಿಕೊಳ್ಳಿ ಎಂದು ಹೇಳಿಕೆ ನೀಡಿದ್ದಾರೆ. ಆರೆಸ್ಸೆಸ್ ಪರಿಭಾಷೆಯಲ್ಲಿ ಸಂಸ್ಕೃತಿ, ಮೌಲ್ಯಗಳೆಂದರೆ ಸನಾತನ ಮೌಲ್ಯಗಳು. ಬ್ರಾಹ್ಮಣ್ಯದ ನೀತಿಗಳು.”ಅದನ್ನೇ ಬಳಸಿ ಆದರೆ ಕಾಂಡಮ್ ಬಳಸಬೇಡಿ” ಎನ್ನುತ್ತಿದ್ದಾರೆ ಈ ಆರೋಗ್ಯ ಮಂತ್ರಿ. ಅನೇಕ ವರ್ಷಗಳ ಹೋರಾಟದ ನಂತರ ಕೊಂಚ ತಹಬದಿಗೆ ಬರುತ್ತಿರುವ ಈ ಏಡ್ಸ್ ಕಾಯಿಲೆಯ ಕುರಿತಾಗಿ ಈ ಸಂಘ ಪರಿವಾರದ ಮಂತ್ರಿಯ ಬೇಜವ್ದಾರಿ ಮತ್ತು ಮತೀಯವಾದದ ಚಿಂತನೆಗಳಿಗೆ ಏನನನ್ನುವುದು?

ಸಣ್ಣದಾದ ಸರ್ಕಾರ, ವಿಶಾಲವಾದ,ಪರಮಾವಧಿಯ ಆಡಳಿತ (minimum government, maximum governance) ಎನ್ನುವ ಮೋದಿಯ ಜನಪ್ರಿಯ ಸ್ಲೋಗನ್ ಗಳ ಅರ್ಥವ್ಯಾಪ್ತಿಯು ಮೇಲ್ಕಾಣಿಸಿದ ರೀತಿಯಲ್ಲಿ ಮುಂದಿನ ವರ್ಷಗಳಲ್ಲಿ ತನ್ನ ಹೆಡೆ ಬಿಚ್ಚಲಾರಂಬಿಸುತ್ತದೆ. ಇಂದು ಹಿಂದುತ್ವವಾದಿಗಳಿಗೆ ಒಬ್ಬ messiah ನಂತೆ ಕಂಗೊಳಿಸುತ್ತಿರುವ ನರೇಂದ್ರ ಮೋದಿ ಇಂಡಿಯಾದ ಸಂವಿಧಾನದ ವಿಧಿ ನಿಯಮಗಳಲ್ಲಿ ದಿನನಿತ್ಯ ಲೋಪಗಳನ್ನು ಹುಡುಕುತ್ತಾ ಅದಕ್ಕೆ ಪರ್ಯಾಯವಾಗಿ ಮತೀಯವಾದಿ ಬಲಪಂಥೀಯ ರಾಜಕಾರಣಕ್ಕೆ ಮುನ್ನುಡಿ ಬರೆಯಲಾರಂಬಿಸಿದ್ದಾರೆ. ನಾವು ಇದಕ್ಕೆ ಪರ್ಯಾಯವಾಗಿ ಬಹು ಸಂಸ್ಕೃತಿಯ ಜನಪರ ರಾಜಕಾರಣದ ಸಾಮಾಜಿಕ-ಆರ್ಥಿಕ ಮಾದರಿಗಳನ್ನು ಮುಂದೆ ಕಟ್ಟದೇ ಹೋದರೆ ಮೋದಿಯ ಈ ಮತೀಯವಾದಿ ಮುನ್ನುಡಿ ಹಿಗ್ಗುತ್ತ ಹೋಗುತ್ತದೆ.ಆಗ ಸಂವಿಧಾನ ಕಳಚಿಕೊಳ್ಳುವುದನ್ನು ಯಾರೂ ತಪ್ಪಿಸಲಾರರು.

13 thoughts on “ಇತಿಹಾಸದ ಸಮೂಹಸನ್ನಿಯನ್ನು ಅರಿತುಕೊಳ್ಳಲು ನಿರಾಕರಿಸುತ್ತಿರುವ ನೀರೋಗಳು

  1. Srinivasamurthy

    Dear sir, ಕಣ್ಣು, ಮೂಗು, ಗಂಟಲು ತಜ್ಞ ದೆಹಲಿಯ ಹರ್ಷವರ್ಧನ್ ಕೇಂದ್ರ ಸರ್ಕಾರದಲ್ಲಿ ಆರೋಗ್ಯ ಮಂತ್ರಿಗಳು “ಏಡ್ಸ್ ರೋಗವನ್ನು ತಡೆಗಟ್ಟಲು ಕಾಂಡೋಮ್ ಗಳನ್ನು ಅಳವಡಿಸಿಕೊಳ್ಳಬೇಡಿ, ಬದಲಾಗಿ ಮೌಲ್ಯಗಳನ್ನು ಅಳವಡಿಸಿಕೊಳ್ಳಿ.” ಅಂತ ಹೇಳಿಲ್ಲ. ಅವರು
    “ಏಡ್ಸ್ ರೋಗವನ್ನು ತಡೆಗಟ್ಟಲು ಕಾಂಡೋಮ್ಗಿಂತ ನಯ್ತಿಕತೆಯೇ ಸುರಕ್ಶಿತ ಮಾರ್ಗ” ಅಂತ ಹೇಳಿರೋದು.

    Reply
  2. M A Sriranga

    ಶ್ರೀಪಾದ ಭಟ್ ಅವರಿಗೆ — ಸತತವಾಗಿ ಎರಡು ಅವಧಿಯ ಯು ಪಿ ಎ ಸರ್ಕಾರಕ್ಕೆ ಹತ್ತು ವರ್ಷಗಳಷ್ಟು ದೀರ್ಘ ಅವಕಾಶ ನೀಡಿದ್ದಿರಿ. ಎನ್ ಡಿ ಎ ಸರ್ಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳಾಗಿದೆ. ಈಗಲೇ ಏಕೆ ಆತುರಕ್ಕೆ ಬಿದ್ದು ಆತಂಕಕ್ಕೆ ಒಳಗಾಗುತ್ತೀರಿ. ಸ್ವಲ್ಪ ಕಾದು ನೋಡಿ ನಂತರ ಮಾತಾಡಿ, ವಿಮರ್ಶೆ ಮಾಡಿ ಬರೆಯಿರಿ. ನಿಮ್ಮ ಅಸಹನೆಯೇ ನೀವು ಬದಲಾವಣೆಗೆ ಸಿದ್ಧರಿಲ್ಲ ಎಂದು ತೋರಿಸುತ್ತಿದೆ. ಬರೀ ಇಂಗ್ಲಿಶ್ ಸುದ್ದಿವಾಹಿನಿಗಳು,ಪತ್ರಿಕೆಗಳನ್ನು ಮಾತ್ರ ನೋಡಿ ಬರೆಯುವುದ್ಯಾಕೆ? ಇವತ್ತಿನ(೩೦-೬-೨೦೧೪) ಕನ್ನಡಪ್ರಭದ ಸಂಪಾದಕೀಯ ಮತ್ತು ‘ಡಾ. ಹರ್ಷವರ್ಧನ್ ಅವರ ಎಡ್ಸ್ ಹೇಳಿಕೆ ಮತ್ತು ನೈತಿಕತೆ’ ಎಂಬ ಲೇಖನವನ್ನು ಬಿಡುವುಮಾಡಿಕೊಂಡು ಓದಿ. ತಾವು ನೈತಿಕತೆಯನ್ನೂ ಬ್ರಾಹ್ಮಣ್ಯದ ಸಂಕೇತವೆಂದು ಮಾಮೂಲಿ ಅರೆಬೆಂದ ಪ್ರಗತಿಪರರ ರೀತಿ ಹೇಳಿದ್ದೀರಿ. ಹಾಗಾದರೆ ಅಬ್ರಾಹ್ಮಣರು ಅನೈತಿಕರು ಮತ್ತು ಅನೈತಿಕರಾಗಿರುವುದೇ ಪ್ರಗತಿಯ ಸಂಕೇತ ಎಂಬುದು ತಮ್ಮ ತೀರ್ಮಾನವೇ?

    Reply
  3. M A Sriranga

    ಮರೆತ ಮಾತು — ಬಿ ಶ್ರೀಪಾದ ಭಟ್ ಅವರೇ ಇದು off the record ಪ್ರಶ್ನೆ—‘ನಿಲುಮೆ’ ಕನ್ನಡ ಬ್ಲಾಗಿ ನಲ್ಲಿ ಸಾಹಿತ್ಯ ಸಂಬಂಧಿ ಲೇಖನಗಳನ್ನು ಆಗಾಗ ಬರೆಯುತ್ತಿರುವ ಬಿ ಶ್ರೀಪಾದ್ ಭಟ್ ಎಂಬ ಲೇಖಕರೊಬ್ಬರು ಇದ್ದಾರೆ. ಅವರು ನೀವೇನಾ ಅಥವಾ ಅಲ್ಲವಾ ಎಂಬ ಕುತೂಹಲವಿದೆ. ಸಾಧ್ಯವಾದರೆ ಹೇಳಿ.

    Reply
  4. Ananda Prasad

    ಲೈಂಗಿಕತೆ ಎಂಬುದು ಜೈವಿಕ ಅವಶ್ಯಕತೆಯಾಗಿದ್ದು ಒಂದು ಸಹಜ ಕ್ರಿಯೆಯಾಗಿದೆ. ಮಾನವನಲ್ಲಿ ಲೈಂಗಿಕತೆಯ ಬೆಳವಣಿಗೆ ಹದಿಹರೆಯದಲ್ಲಿ ನಡೆಯುತ್ತದೆ. ಭಾರತದಲ್ಲಿ ಮಾನವನಲ್ಲಿ ಲೈಂಗಿಕತೆಯು ಬೆಳವಣಿಗೆಯಾಗುವ ವಯಸ್ಸಿಗೂ ಮನುಷ್ಯರು ಮದುವೆ ಆಗುವ ವಯಸ್ಸಿಗೂ ಬಹಳ ವ್ಯತ್ಯಾಸವಿರುವುದು ಯುವಕರಲ್ಲಿ ಲೈಂಗಿಕ ಒತ್ತಡ ರೂಪುಗೊಳ್ಳಲು ಕಾರಣವಾಗಿದೆ. ಪಾಶ್ಚಾತ್ಯ ದೇಶಗಳಂತೆ ಮದುವೆ ಆಗದೆ ಲೈಂಗಿಕತೆಯನ್ನು ಅನುಭವಿಸುವ ಮುಕ್ತ ವಾತಾವರಣ ಭಾರತದಲ್ಲಿ ಇಲ್ಲದೆ ಇರುವುದರಿಂದ ಇಂಥ ಲೈಂಗಿಕ ಒತ್ತಡ ರೂಪುಗೊಂಡಾಗ ಅದನ್ನು ತೀರಿಸಿಕೊಳ್ಳಲು ಯುವಕರು ಪರ್ಯಾಯ ಮಾರ್ಗಗಳನ್ನು ಹುಡುಕುತ್ತಾರೆ. ಹೀಗಾಗಿ ನೈತಿಕತೆಯು ಯುವಕರನ್ನು ನಿಯಂತ್ರಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ಏಡ್ಸ್ ತರಹದ ರೋಗಗಳಿಂದ ರಕ್ಷಿಸಿಕೊಳ್ಳಲು ಕಾಂಡೋಮ್ ಬಳಕೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಅಗತ್ಯ ಮತ್ತು ಏಡ್ಸ್ ನಿಯಂತ್ರಣ ಕಾರ್ಯಕ್ರಮಗಳಲ್ಲಿ ಈ ಕುರಿತು ಒತ್ತು ನೀಡುವುದು ವೈಜ್ಞಾನಿಕ ವಿಧಾನವೇ ಆಗಿದೆ. ಬಹಳ ಬಿಗಿಯಾದ ನೈತಿಕ ಮೌಲ್ಯಗಳು (ಲೈಂಗಿಕತೆಯ ವಿಷಯದಲ್ಲಿ) ಭಾರತದಲ್ಲಿ ಇದ್ದರೂ ಏಡ್ಸ್ ಹರಡುತ್ತಿದೆ ಎಂದರೆ ನೈತಿಕ ಮೌಲ್ಯಗಳು ಜೈವಿಕ ಲೈಂಗಿಕತೆಯ ಒತ್ತಡದ ಮುಂದೆ ಸೋಲುತ್ತಿವೆ ಎಂದು ಅರ್ಥ. ಈ ವೈಜ್ಞಾನಿಕ ಹಾಗೂ ಪ್ರಾಕೃತಿಕ ಸತ್ಯವನ್ನು ಮಡಿವಂತರು ಅರ್ಥ ಮಾಡಿಕೊಳ್ಳದೆ ಹೋದರೆ ಏಡ್ಸ್ ಇನ್ನಷ್ಟು ವೇಗವಾಗಿ ಹಬ್ಬುವ ಸಾಧ್ಯತೆ ಇದೆ.

    Reply
  5. M A Sriranga

    ಆನಂದ ಪ್ರಸಾದ್ ಅವರಿಗೆ–ಲೈಂಗಿಕತೆ ಮತ್ತು ನೈತಿಕತೆ ಇವುಗಳನ್ನು ಪ್ರತ್ಯೇಕವಾಗಿ ನೋಡಬೇಕು ಹಾಗೂ ವಿವಾಹಪೂರ್ವ ಲೈಂಗಿಕತೆ ಏನಿದ್ದರೂ ಅದು “ಕೇವಲ ಒತ್ತಡದ ನಿವಾರಣೆ” ಮತ್ತು ಅಂತಹ ಚಟುವಟಿಕೆಗಳಿಗೆ ಪ್ರೋತ್ಸಾಹ ಇರಬೇಕೆಂದು ಯುವಕ, ಯುವತಿಯರು ಆಶಿಸಿದರೆ ಅದು “ಕಾಂಡೋಮ್”ದಾಟಿ ಮುನ್ನಡೆಯಲಾರದು ಎಂಬುದಕ್ಕೆ ಯಾರೂ ಗ್ಯಾರಂಟಿ ಕೊಡಲಾರರು. ಅದಕ್ಕೆ ಸಾಕ್ಷಿಯಾಗಿ ದಿನ ನಿತ್ಯ ದೇಶದ ಒಂದಲ್ಲಾ ಒಂದುಕಡೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳೇ ಸಾಕ್ಷಿ. ಜತೆಗೆ ನಂಬಿಸಿ ಕೈ ಕೊಡುವವರು ಎಷ್ಟೊಂದು ಜನ ನಮ್ಮ ಸುತ್ತ-ಮುತ್ತ ಇದ್ದಾರೆ. ನಂಬಿಸಿ, ಕೈ ಕೊಡುವವರ ಬಗ್ಗೆ ಪತ್ರಿಕೆ,ಟಿ ವಿ ಗಳಲ್ಲಿ ಸತತವಾಗಿ ವರದಿಯಾಗುತ್ತಿದ್ದರೂ ಬಲೆ ಬೀಸುವವರ ಮತ್ತು ಆ ಬಲೆಗೆ ಬೀಳುತ್ತಿರುವವರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಇಡೀ ದೇಶಕ್ಕೆ ತನ್ನ ‘ತೆಹಲ್ಕಾ’ ಪತ್ರಿಕೆಯಿಂದ ಬುದ್ದಿವಾದ ಹೇಳುತ್ತಿದ್ದ ‘ತರುಣ್ ತೇಜಪಾಲ್’ ಅವರ ನಡೆಯನ್ನು ‘ಕೇವಲ ಒತ್ತಡದ ನಿವಾರಣೆ ‘ ಎಂಬ ನಿಲುವಿನಿಂದ ಪಕ್ಕಕ್ಕೆ ಸರಿಸಲು ಸಾಧ್ಯವೇ? ಇಂತಹ ಸಮಯದಲ್ಲಿ ನೈತಿಕತೆಯ definition ಮೂಲಕ ಮಾತ್ರ ಅದನ್ನು ನೋಡಬೇಕು. ಆತ ಮಾಡಿದ್ದು ಸರಿಯೇ? ಕೆಲವು ಪ್ರಗತಿಪರರಿಗೆ ನೈತಿಕತೆ ಎಂಬುದು ಪುರೋಹಿತಶಾಹಿ,ಬ್ರಾಹ್ಮಣ್ಯದ ಪಳಿಯುಳಿಕೆ ಎಂದೆಲ್ಲಾ ಅನಿಸುತ್ತದೆ. ಏನಾದರೂ ಮಾಡಿ ವಿರೋಧಿಸಬೇಕು. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎಂಬ ಗಾದೆಯೇ ಇದೆ. At least ಈಗಿನ ಮಕ್ಕಳಿಗೆ ,ತಾರುಣ್ಯದ ಹೊಸ್ತಿಲಿನಲ್ಲಿರುವ ಯುವಕಕರಿಗೆ ಮಾರ್ಗದರ್ಶನ ಮಾಡದಿದ್ದರೆ ಇನ್ನು ಇಪ್ಪತ್ತು ಮೂವತ್ತು ವರ್ಷಗಳಲ್ಲಿ ಭಾರತದ ಪ್ರತಿಯೊಂದು ನಗರದಲ್ಲಿ ಮುಂಬಯಿಯ ಕಾಮಾಟಿಪುರದಂತಹ ಒಂದೊಂದು ಬಡಾವಣೆಗೆ ಸರ್ಕಾರವೇ ಸಮ್ಮತಿ ಕೊಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಯೋಚಿಸಿದಾಗ ನೈತಿಕತೆ=ಮಡಿವಂತಿಕೆ ಎಂಬ ಸರಳ ಸಮೀಕರಣೆ ಸಾಧುವಲ್ಲ ಎಂದು ನಿಮಗೆ ಅನಿಸುವುದಿಲ್ಲವೇ?

    Reply
  6. Ananda Prasad

    ಲೈಂಗಿಕತೆಯ ಬಗೆಗೆ ಪ್ರಾಚೀನ ಕಾಲದಲ್ಲಿ ರೂಪುಗೊಂಡ ನೈತಿಕ ಮಾನದಂಡಗಳು ಇಂದಿನ ದಿನಗಳಿಗೆ ಹೊಂದಿಕೆಯಾಗುತ್ತಿಲ್ಲ. ಉದಾಹರಣೆಗೆ ಪ್ರಾಚೀನ ಕಾಲದಲ್ಲಿ ಹೆಚ್ಚಿನ ಜನಸಂಖ್ಯೆ ಗ್ರಾಮೀಣ ಭಾಗಗಳಲ್ಲಿ ವಾಸಿಸುತ್ತಿತ್ತು. ಇಂದಿನ ಜನಸಂಖ್ಯೆಯ ಗಣನೀಯ ಭಾಗ ನಗರಗಳಲ್ಲಿ ವಾಸಿಸುತ್ತಿದೆ. ನಗರಗಳಲ್ಲಿ ಗ್ರಾಮೀಣ ಭಾಗಗಳಲ್ಲಿ ಇದ್ದಂತೆ ಯಾರು ಏನು ಮಾಡುತ್ತಾರೆ ಎಂಬ ಬಗ್ಗೆ ಕಣ್ಗಾವಲು ಇಡಲು ಸಾಧ್ಯವಿಲ್ಲ. ಅಲ್ಲದೆ ಪ್ರಾಚೀನ ಕಾಲದಲ್ಲಿ ಮೊಬೈಲ್, ಇಂಟರ್ನೆಟ್ ಮುಂತಾದ ಸಂಪರ್ಕ ಸಾಧನಗಳು ಇರಲಿಲ್ಲ. ಇಂದು ಯುವಕ ಯುವತಿಯರು ಸುಲಭವಾಗಿ ಮೊಬೈಲ್, ಫೇಸ್ಬುಕ್, ವಾಟ್ಸಪ್, ಇಂಟರ್ನೆಟ್ ಮೊದಲಾದವುಗಳ ಮೂಲಕ ಪರಸ್ಪರ ಸಂಪರ್ಕ ಸಾಧಿಸಬಲ್ಲರು. ಮೊದಲು ಪ್ರಾಯಕ್ಕೆ ಬಂದಾಗ ಗಂಡು ಹೆಣ್ಣು ಇಬ್ಬರಿಗೂ ೧೬, ೧೮, ೨೦ ವರ್ಷಗಳ ಒಳಗೆ ಮದುವೆ ಮಾಡುತ್ತಿದ್ದರು. ಹೀಗಾಗಿ ಲೈಂಗಿಕತೆಯ ಜೈವಿಕ ಒತ್ತಡ ರೂಪುಗೊಳ್ಳುತ್ತಿರಲಿಲ್ಲ. ಇಂದು ಮದುವೆಯ ವಯಸ್ಸು ೩೦, ೪೦ರವರೆಗೂ ಹೆಣ್ಣು ಗಂಡುಗಳಿಬ್ಬರಿಗೂ ಆಗುವುದೂ ಇದೆ. ಇದು ಲೈಂಗಿಕತೆಯ ಜೈವಿಕ ಒತ್ತಡ ರೂಪುಗೊಳ್ಳಲು ಕಾರಣವಾಗುತ್ತಿದೆ. ಈ ಜೈವಿಕ ಒತ್ತಡದಿಂದ ವಿವಾಹಪೂರ್ವ ಲೈಂಗಿಕತೆಗೆ ತೆರೆದುಕೊಳ್ಳುವ ಪರಿಸ್ಥಿತಿ ರೂಪುಗೊಳ್ಳುತ್ತದೆ ಮತ್ತು ನಗರಗಳ ಪರಿಸ್ಥಿತಿಗಳಲ್ಲಿ ಇದಕ್ಕೆ ಪೂರಕ ವಾತಾವರಣ ಇರುತ್ತದೆ. ಹೀಗಾಗಿ ನೈತಿಕತೆ ಜೈವಿಕ ಒತ್ತಡದ ಮುಂದೆ ಸೋಲುತ್ತದೆ. ಪ್ರಕೃತಿ ನಿಯಮದ ಮುಂದೆ ನೈತಿಕತೆ ನಿಲ್ಲುವುದಿಲ್ಲ, ಅದು ಪರ್ಯಾಯ ಮಾರ್ಗಗಳನ್ನು ಹುಡುಕಿಕೊಳ್ಳುತ್ತದೆ. ನೈತಿಕತೆ ಎಂಬುದು ಪ್ರಕೃತಿ ನಿಯಮಗಳನ್ನು ಗಣನೆಗೆ ತೆಗೆದುಕೊಳ್ಳದೆ ಕುರುಡಾಗಿ ನಿಯಮಗಳನ್ನು ರೂಪಿಸುವುದರಿಂದ ಹೀಗೆ ಆಗುತ್ತದೆ.

    Reply
    1. ಜೆ.ವಿ.ಕಾರ್ಲೊ, ಹಾಸನ

      ನಾನು ಹೈಸ್ಕೂಲು ಓದುತ್ತಿರುವಾಗ ‘ಬ್ರಹ್ಮಚರ್ಯವೇ ಜೀವನ, ವೀರ್ಯನಾಶವೇ ಮ್ರತ್ಯು’ ಎಂಬ ಪುಸ್ತಕವೊಂದನ್ನು ಬಹಳಷ್ಟು ಜನ ಓದುತ್ತಿದ್ದರು. ಇದನ್ನೇ ಪಠ್ಯ ಪುಸ್ತಕವನ್ನಾಗಿ ಮಾಡಿ ಎಲ್ಲರೂ ಒದ್ದೆ ಲಂಗೋಟಿಯನ್ನೇ ಉಡಬೇಕೆಂದು ಕಾನೂನು ಮಾಡಿದರೆ ಹೇಗೆ?

      Reply
      1. Nagshetty Shetkar

        “ಎಲ್ಲರೂ ಒದ್ದೆ ಲಂಗೋಟಿಯನ್ನೇ ಉಡಬೇಕೆಂದು ಕಾನೂನು ಮಾಡಿದರೆ ಹೇಗೆ?”

        ಒಂದು ಪಕ್ಷ ಅಂತಹ ಕಾನೂನು ಚಾಲ್ತಿಗೆ ಬಂದರೆ ನಾವು ಎಡಪಂಥೀಯರು ಲಂಗೋಟಿಯನ್ನು ಧರಿಸದೆ ಕಾನೂನನ್ನು ಸಾರ್ವಜನಿಕವಾಗಿ ಉಲ್ಲಂಘಿಸಿ ಪ್ರತಿಭಟನೆ ಮಾಡುವ.

        Reply
    2. Nagshetty Shetkar

      “ಪ್ರಕೃತಿ ನಿಯಮದ ಮುಂದೆ ನೈತಿಕತೆ ನಿಲ್ಲುವುದಿಲ್ಲ”

      ವೈದಿಕ ಧರ್ಮವು ಪ್ರಕೃತಿ ಸಹಜವಾದ ಕಾಮದ ಬಗ್ಗೆ ಅಸಹಜವಾದ ನಿಲುವುಗಳನ್ನು ಹೊಂದಿದೆ. ಆದುದರಿಂದಲೇ ಸನ್ಯಾಸಕ್ಕೆ ಅತೀವ ಮಹತ್ವ ಕೊಟ್ಟಿದೆ. ಕಾಮದ ಬಗ್ಗೆ ಅತಿಯಾದ ಮಡಿವಂತಿಕೆ ಇರುವುದರಿಂದಲೇ ಜಾತಿ ಪದ್ಧತಿಯು ವೈದಿಕ ಧರ್ಮದ ಆಶ್ರಯದಲ್ಲಿ ವಿಷ ವೃಕ್ಷವಾಗಿ ಬೆಳೆಯಿತು. ವಿಶ್ವದ ಮುಂದುವರೆದ ದೇಶಗಳಲ್ಲಿ ಕಾಮವನ್ನು ಮುಕ್ತವಾಗಿ ಸ್ವೀಕರಿಸಲಾಗಿದೆ. ಆದುದರಿಂದಲೇ ಆ ದೇಶಗಳಲ್ಲಿ ಜಾತಿ ಪದ್ಧತಿ ಅಸ್ಪೃಶ್ಯತೆ ಮೊದಲಾದ ವಿಕೃತಿಗಳಿಲ್ಲ. ಮೋದಿ ಸರಕಾರ ವೈದಿಕ ಧರ್ಮದ ವಿಕೃತಿಗಳನ್ನು ಪ್ರಜೆಗಳ ಮೇಲೆ ನೈತಿಕತೆಯ ಹೆಸರಿನಲ್ಲಿ ಹೇರುವುದನ್ನು ಪ್ರಜ್ಞಾವಂತರೆಲ್ಲ ವಿರೋಧಿಸಬೇಕಾಗಿದೆ.

      Reply
  7. ಪ್ರತಿಭಾ ಮೈಸೂರು

    ಶ್ರೀಪಾದ ಭಟ್ ಅವರ ಮೇಲಿನ ಲೇಖನವನ್ನು ಓದದೇ ಪ್ರತಿಕ್ರಿಯಿಸುತ್ತಿರುವೆ. ಓದಲಿಲ್ಲ ಏಕೆಂದರೆ- ಅವರು ಏನು ಬರೆಯುತ್ತಾರೆ, ಏನು ಹೇಳುತ್ತಾರೆ ಎಂಬುದನ್ನು ನಾನು ಊಹಿಸಬಲ್ಲ. ಅವರು ವರ್ತಮಾನ ಓದುವ ನನ್ನಂಥವರ ಪಾಲಿಗೆ ಪ್ರಿಡೆಕ್ಟೆಬಲ್ ಬುದ್ಧಿಜೀವಿ. ಇರಲಿ, ಪ್ರತಿಕ್ರಿಯೆಯ ಕೆಲವರ ಸಾಲುಗಳನ್ನು ನೋಡಿದೆ. ಮೋದಿ ಸರಕಾರಕ್ಕೆ ಸಮಯ ನೀಡಬೇಕಿದೆ ಎಂಬ ಮಾತಿನಲ್ಲಿ ವಿವೇಕ ಅಡಗಿದೆ. ತಿಂಗಳೊಪ್ಪತ್ತಿಗೆ ಅವರ ನಡೆ-ನುಡಿಯ ವಿರುದ್ಧ ಅತಿ ಎನಿಸುವಷ್ಟು ಬರೆಯುವುದು, ಮಾತನಾಡುವುದು ಅಷ್ಟು ಸೂಕ್ತವಲ್ಲ, ವಿವೇಕವೂ ಅಲ್ಲ. ಇಂಗ್ಲಿಷ್ ನಾಣ್ಣುಡಿ ಪ್ರಕಾರ ಗಿರಿಯ ಆಚೆ ಹಸುರಿದೆ ಎಂದು ಕೆಲವರು ಭಾವಿಸಿರುತ್ತಾರೆ. ಅಲ್ಲಿ ಇದ್ದದ್ದು ಹಸಿರೋ, ಹಸಿರಿನ ಭ್ರಮೆಯೋ ಎಂಬುದು ಕೆಲ ದಿನಗಳಲ್ಲಿ ಗೊತ್ತಾಗುತ್ತೆ. ಹಾಗಾಗಿ ಬಲಪಂಥೀಯ ಸರಕಾರವನ್ನು ಸಹಿಸಿಕೊಳ್ಳುವ ಸಹಿಷ್ಣುತೆಯನ್ನು ಎಡಪಂಥೀಯ ಬುದ್ಧಿಜೀವಿಗಳು ತೋರಿಸಬೇಕಿದೆ. ಗಿರಿಯಾಚೆ ಇದ್ದದ್ದು ಹಸಿರಲ್ಲ ಎಂಬುದು ಪಶ್ಚಿಮ ಬಂಗಾಳದಲ್ಲಿ ಗೊತ್ತಾದಂತೆ, ಮೋದಿಯ ಸಂದರ್ಭದಲ್ಲೂ ಗೊತ್ತಾಗಲಿ. ಬೈಯಲು ಆತುರುವೇಕೆ ? ಬೈದು ನೀವು ಬಂಧುಗಳಾಗಬೇಡಿ

    Reply
  8. Ananda Prasad

    ಹೊಸ ಸರಕಾರ ಬಂದಾಗ ಅದು ಕಾರ್ಯಾಂಗವಾದ ಅಧಿಕಾರಶಾಹಿಯನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಸಮಯ ಬೇಕಾಗುತ್ತದೆ. ಹೀಗಾಗಿ ಹೊಸ ಸರಕಾರದ ಕಾರ್ಯವೈಖರಿಯನ್ನು ಮೊದಲ ಆರು ತಿಂಗಳವರೆಗೆ ಕಾದು ನೋಡುವ ಪದ್ಧತಿ ಇದೆ. ಆದರೆ ವಿರೋಧ ಪಕ್ಷದವರು ಅಥವಾ ವಿರೋಧಿ ಸಿದ್ಧಾಂತದವರು ಸಾಧಾರಣವಾಗಿ ಹೊಸ ಸರಕಾರ ಬಂದ ಕೂಡಲೇ ಅದನ್ನು ವಿಮರ್ಶಿಸಲು ತೊಡಗುವುದು ಮಾಮೂಲಿ. ಇದಕ್ಕೆ ಬಿಜೆಪಿ ಅಥವಾ ಸಂಘ ಪರಿವಾರದವರು ಕೂಡ ಹೊರತಲ್ಲ. ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಸರಕಾರ ರಚಿಸಿದಾದ ಬಿಜೆಪಿ ಹಾಗೂ ಸಂಘ ಪರಿವಾರದವರು ಎರಡನೇ ದಿನದಿಂದಲೇ ಆಮ್ ಆದ್ಮಿ ಪಕ್ಷಕ್ಕೆ ಸವಾಲು ಹಾಕಿ ದಿನ ನಿತ್ಯ ಟಿವಿ ವಾಹಿನಿಗಳಲ್ಲಿ ಅಬ್ಬರಿಸುತ್ತಿದ್ದರು. ಇದಕ್ಕೆ ಹೋಲಿಸಿದರೆ ಎಡಪಂಥೀಯರು ಮೋದಿಯವರನ್ನು ಹಾಗೆ ಒರಟಾಗಿ ತರಾಟೆಗೆ ತೆಗೆದುಕೊಳ್ಳುವುದು ಕಂಡುಬರುತ್ತಿಲ್ಲ.

    Reply
  9. sanju

    Nagshetty Shetkar ಅವರೇ ಮೊದಲನೆಯದಾಗಿ ಮುಂದುವರಿದ ದೇಶಗಳು ಎಂದರೆ ಯಾವುವು, ನಿಮ್ಮ ದೃಷ್ಟಿಯಲ್ಲಿ ಅಮೆರಿಕವೇ ಎಂದಾದಲ್ಲಿ ಅಲ್ಲಿನ ವರ್ಣಬೇಧ ನೀತಿ ನಿಮಗೆ ಗೊತ್ತಿದೆ ಎಂದು ತಿಳಿದುಕೊಳ್ಳುವೆ. ಯಾವುದೇ ಒಂದು ಸಂಗತಿಯ ಬಗ್ಗೆ ಮಾತನಾಡುವಾಗ ಜಾಗ್ರತೆ ಇರಲಿ. ನಾವು ಚೆನ್ನಾಗಿಯೇ ಬದುಕುತ್ತಿದ್ದೇವೆ. ನೀವು ಎಡಪಂಥೀಯ ಧೋರಣೆಗಳುಳ್ಳವರು ಯಾವ ಸಂಬಂಧಗಳಿಗೂ ಬೆಲೆ ಕೊಡುವುದಿಲ್ಲ. ಹೀಗಾಗಿಯೇ ನಿಮಗೆ ಮಾನವೀಯ ಸಂಬಂಧ ಎಂದರೇನು ಎಂಬುದೇ ಗೊತ್ತಿರುವುದಿಲ್ಲ. ಹೀಗಾಗಿಯೇ ಯಾವುದೇ ವಿಷಯವಾಗಲಿ, ನೀವು ಈ ಪರಿಯ ನಿರ್ಲಕ್ಷ್ಯದಿಂದ ಮಾತನಾಡುತ್ತೀರಿ. ಎಡಪಂಥೀಯ ಧೋರಣೆಯುಳ್ಳವರು ಎಂದು ಹೇಳುತ್ತೀರಲ್ಲ, ನೀವು ದೇಶಕ್ಕಾಗಿ ಏನು ಮಾಡಿದ್ದೀರಿ, ಅರೆಬೆಂದ ಸಿದ್ಧಾಂತವನ್ನು ಮುಂದಿಟ್ಟುಕೊಂಡು ಸ್ವಚ್ಚಂದ ಕಾಮದ ಬಗ್ಗೆ ಮಾತನಾಡುತ್ತೀರಿ. ಮುಂದುವರಿದ ದೇಶಗಳು ಎಂದು ಹೇಳುತ್ತೀರಲ್ಲ, ಅಲ್ಲಿ ಅತ್ಯಾಚಾರ ಪ್ರಕರಣಗಳು ಎಷ್ಟಾಗುತ್ತವೆ ಎಂಬುದು ಗೊತ್ತಿಲ್ಲವೇ. ವಿಷಯ ಗೊತ್ತಿರಲಿ, ಅಮೆರಿಕದ ಧೋರಣೆ ವಿರೋಧಿಸುವ ನಿಮ್ಮಂಥ ಕಮ್ಯೂನಿಷ್ಟರೇ ಅಮೆರಿಕದಂಥ ರಾಷ್ಟ್ರದಲ್ಲಿನ ಬಡತನ ಮತ್ತು ಮೇಲು ಕೀಳಿನ ಬಗ್ಗೆ ಮಾತನಾಡುತ್ತಾರೆ. ಅವರ ಬಳಿ ಒಂದಷ್ಟು ಬುದ್ಧಿ ಹೇಳಿಸಿಕೊಳ್ಳಿ. ಅದನ್ನು ಬಿಟ್ಟು ಸ್ವಚ್ಛಂದ ಕಾಮದ ಬಗ್ಗೆ ಮಾತನಾಡುತ್ತೀರಿ. ಯಾವುದೇ ಒಂದು ಸಿದ್ಧಾಂತವಾಗಲಿ ಅದು ನಮ್ಮ ಮನೆಗಲ್ಲ, ಪಕ್ಕದ ಮನೆಗಿರಲಿ ಎಂಬ ಧೋರಣೆ ಬೇಡ. ಸ್ವಚ್ಛಂದ ಕಾಮದ ವಿಚಾರ ನಿಮ್ಮ ಸುತ್ತವೇ ಸುಳಿದಲ್ಲಿ ಪರಿಸ್ಥಿತಿ ಹೇಗಿರುತ್ತೆ ಎಂಬ ಬಗ್ಗೆ ಒಂದು ಕ್ಷಣ ಯೋಚಿಸಿ. ನೈತಿಕತೆ ಬಿಟ್ಟಾಗಲೇ ಇಂಥ ಯೋಚನೆ ಬರೋದು. ನಿಮ್ಮ ಈ ಯೋಚನೆ ಮುಂದಿಟ್ಟುಕೊಂಡು ಕೆಲ ಉತ್ತಮ ಎಡಪಂಥೀಯ ಧೋರಣೆ ಇಟ್ಟುಕೊಂಡಿರುವ ಜನರ ಮರ್ಯಾದೆ ತೆಗೆಯಬೇಡಿ.

    Reply
    1. Nagshetty Shetkar

      “ಸ್ವಚ್ಚಂದ ಕಾಮದ ಬಗ್ಗೆ ಮಾತನಾಡುತ್ತೀರಿ”

      ಸ್ವಚ್ಚ ಕಾಮ. You need condoms for this.

      Reply

Leave a Reply to Ananda Prasad Cancel reply

Your email address will not be published. Required fields are marked *