Monthly Archives: July 2014

ಅಲೆಮಾರಿ ಬುಡಕಟ್ಟು ಮಹಿಳೆಯರ ವರ್ತಮಾನ

– ಡಾ. ಅರುಣ್ ಜೋಳದಕೂಡ್ಲಿಗಿ

ಬಾಲ್ಯದ ನೆನಪುಗಳಲ್ಲಿ ಅಲೆಮಾರಿ ಸಮುದಾಯಗಳ ದಿಟ್ಟ ಮಹಿಳೆಯರ ಚಿತ್ರಗಳು ಗಾಢವಾಗಿವೆ. ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹಾರಕನಾಳು ಗ್ರಾಮದಲ್ಲಿ ನಮ್ಮ ಮನೆ ಊರ ಹೊರಗಿನ ಅಂಗನವಾಡಿಯ ಸರಕಾರಿ ಕಟ್ಟಡವಾಗಿತ್ತು. ಆ ಕಾರಣ ಅಲೆಮಾರಿ ಸಮುದಾಯಗಳು ನಮ್ಮ ಮನೆಯ ಸುತ್ತಲೂ ಡೇರಿ ಹಾಕಿ ವಾಸಮಾಡುತ್ತಿದ್ದವು. ಹೀಗೆ ವಾಸ ಮಾಡುವ ಅಲೆಮಾರಿ ಸಮುದಾಯಗಳು ನಮ್ಮ ಮನೆ ಜತೆ ಒಳ್ಳೆಯ ಪರಿಚಯ ಕೂಡ ಆಗುತ್ತಿದ್ದರು. ಇದರಲ್ಲಿ ಹಗಲು ವೇಷಗಾರರು ಪ್ರಮುಖವಾಗಿದ್ದರು. ಹಗಲು ವೇಷಗಾರ ಅಂಜಿನಪ್ಪ ತಾನು ವೇಷ ಹಾಕುವಾಗ ಆ ಗುಂಪಿನಲ್ಲಿ ಆತನ ಮಗಳು ಚಿಕ್ಕ ಹುಡುಗಿ ಡಾನ್ಸ್ ಮಾಡುತ್ತಿದ್ದಳು. ಅಂತೆಯೇ ಅಂಜಿನಪ್ಪನ ಹೆಂಡತಿ ಗಂಗೆ ಗೌರಿ ಮೂರ್ತಿ ಹಿಡಿದು, ಮಗು ಚಿಕ್ಕದಿರುವ ಕಾರಣ ಒಂದು ಜೋಳಿಗೆಯಲ್ಲಿ ಮಗುವನ್ನು ಹಾಕಿಕೊಂಡು ವೇಷದ ಗುಂಪಿಗೆ ಬದಲಾಗಿ ‘ಗಂಗೆ ಗೌರಿ ಜೂಜನಾಡ್ಯಾರೆ ಎಂಬ ಪದ ಹೇಳಿಕೊಂಡು ಒಂಟಿಯಾಗಿ ಊರಾಡಿ ಬರುತ್ತಿದ್ದಳು. Work of Temporary tent for stay.ಮದ್ಹಾನ ಹನ್ನೆರಡಕ್ಕೆ ವೇಷ ಮುಗಿದು ಊಟಮಾಡಿ ಗಂಡಸರು ಬೇಟೆಗೆ ಹೋದರೆ, ಹೆಂಗಸರು ಬಟ್ಟೆ ತೊಳೆಯುವುದು, ಹತ್ತಿರದಲ್ಲೆ ಅಡುಗೆ ಮಾಡಲು ಕಟ್ಟಿಗೆ ಜೋಡಿಸುವುದು, ಗುಡಾರದ ಸುತ್ತಮುತ್ತಣ ಸ್ವಚ್ಚಗೊಳಿಸುವುದು, ಬೇಟೆಗೆ ಬೇಕಾಗುವ ಮಸಾಲೆ ತಯಾರಿಸುವುದು ಮಾಡುತ್ತಿದ್ದರು. ಅಂತೆಯೇ ಬಿಡುವಿನ ವೇಳೆಯಲ್ಲಿ ಕೌದಿ ಎಣೆಯುವುದು, ಊರಲ್ಲಿ ಯಾರಾದರೂ ಪ್ಲಾಸ್ಟಿಕ್ ಚೀಲಗಳನ್ನು ಕೊಟ್ಟರೆ ಪ್ಲಾಸ್ಟಿಕ್ ಪಾಟನ್ನು ಹೆಣೆದುಕೊಡುವುದು ಮಾಡುತ್ತಿದ್ದರು. ನಾನು ಹಗಲುವೇಷದ ಮಕ್ಕಳ ಜತೆ ಆಟವಾಡುತ್ತಿದ್ದೆನು.

ಮತ್ತೊಂದು ಸಮುದಾಯ ಅಲೆಮಾರಿ ಕುರುಬರದು. ಬೆಳಗಾಂ ಕುರೇರು ಎಂದು ಕರೆಯುವ ಈ ಸಮುದಾಯ ಸಾಮೂಹಿಕವಾಗಿ ಅಲೆಮಾರಿತನ ಕೈಗೊಂಡು ಕುರಿಗಳ ಜತೆ ಬಳ್ಳಾರಿ ಜಿಲ್ಲೆಯ ಪ್ರದೇಶಗಳಿಗೆ ಬರುತ್ತಾರೆ. ಇವರುಗಳು ಊರಿಗೆ ಸ್ವಲ್ಪ ದೂರದಲ್ಲಿ ಹೊಲಗಳಲ್ಲಿ ನೆಲೆ ನಿಲ್ಲುತ್ತಾರೆ. ಕಟ್ಟುಮಸ್ತಾದ ಎತ್ತರದ ಈ ಮಹಿಳೆಯರು ಕಚ್ಚೆ ಹಾಕಿಕೊಂಡು ಗಂಡುಗಿತ್ತಿಯರಂತೆ ಕಾಣುತ್ತಿದ್ದರು. ಇವರಲ್ಲಿ ಕೆಲವು ಮಹಿಳೆಯರು ಮಗುವನ್ನು ಜೋಳಿಗೆಯಲ್ಲಿ ಇಳಿಬಿಟ್ಟುಕೊಂಡೆ ಕುರಿ ಕಾಯುತ್ತಾರೆ. ಇನ್ನು ಕೆಲವು ಮಹಿಳೆಯರು ಮಕ್ಕಳನ್ನು, ಕುರಿಮರಿಗಳನ್ನು ನೋಡಿಕೊಂಡು ಗುಡಾರಗಳಲ್ಲಿ ಉಳಿದು ಊಟೋಪಚಾರ ನೋಡಿಕೊಂಡಿರುತ್ತಿದ್ದರು. ಬೈಲು ಪತ್ತಾರ ಅಲೆಮಾರಿ ಸಮುದಾಯವು ಊರ ಮುಂದೆ ಗುಡಾರ ಹಾಕುತ್ತಿದ್ದರು. ಪತ್ತಾರರ ಗಂಡಸರು ಗುದ್ದಲಿ, ಕೊಡಲಿ ಮುಂತಾದವುಗಳನ್ನು ಕುಲುಮೆಯಲ್ಲಿ ಕಾಯಿಸುತ್ತಾರೆ. ಹೀಗೆ ಕಾದ ಕಬ್ಬಿಣವನ್ನು ಬೈಲುಕಮ್ಮಾರರ ಮಹಿಳೆwoman-stonecutter ಕಚ್ಚೆಕಟ್ಟಿ ಸುತ್ತಿಗೆ ಹಿಡಿದು ಎತ್ತಿ ಎತ್ತಿ ಹೊಡೆಯುತ್ತಿದ್ದರೆ ಊರ ಗಂಡಸರು ಅಚ್ಚರಿಯಿಂದ ಈ ಹೆಣ್ಣುಮಗಳನ್ನು ನೋಡುತ್ತಿದ್ದರು.

ಇದನ್ನು ನೋಡಿದರೆ ಅಲೆಮಾರಿ ಸಮುದಾಯಗಳಲ್ಲಿ ಅಲೆಮಾರಿತನದ ಚಾಲಕ ಶಕ್ತಿಯೇ ಮಹಿಳೆಯಂತೆ ಕಾಣುತ್ತದೆ. ಇಂತಹ ಚಾಲಕ ಶಕ್ತಿ ಮಹಿಳೆ ಕರ್ನಾಟಕದ ಅಲೆಮಾರಿ ಸಮುದಾಯಗಳಲ್ಲಿ ಹೇಗಿದ್ದಾಳೆ, ಸಾಂಸ್ಕೃತಿಕವಾಗಿ ಅವಳ ಸ್ಥಾನಮಾನಗಳೇನು? ವರ್ತಮಾನದಲ್ಲಿ ಈ ಮಹಿಳೆಯರ ಬದುಕು ಹೇಗಿದೆ? ಕರ್ನಾಟಕದ ಅಲೆಮಾರಿ ಬುಡಕಟ್ಟುಗಳನ್ನು ಅರ್ಥಮಾಡಿಕೊಳ್ಳಲು ಆಯಾ ಸಮುದಾಯಗಳ ಮಹಿಳೆಯರನ್ನು ಹೇಗೆ ಗ್ರಹಿಸಬೇಕು ಮುಂತಾದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನದ ಭಾಗವೆ ಈ ಲೇಖನ.

ಪ್ರಸ್ತುತ ಭಾರತದಲ್ಲಿ ಬುಡಕಟ್ಟು ಸಮುದಾಯಗಳ ಜನಸಂಖ್ಯೆ 10 ಕೋಟಿಯಷ್ಟಿರುವ ಅಂದಾಜಿದೆ. ಅಂದರೆ ಭಾರತದ ಜನಸಂಖ್ಯೆಯಲ್ಲಿ ಶೇಕಡ 10 ರಷ್ಟು ಬುಡಕಟ್ಟು ಜನರಿದ್ದಾರೆ. ಆದರೆ ಈ ಸಮುದಾಯದ ಜನಸಂಖ್ಯೆಗೂ ಇವರ ಅಭಿವೃದ್ಧಿಗಾಗಿ ಜಾರಿಯಾಗುತ್ತಿರುವ ಸೌಲಭ್ಯಗಳ ಪ್ರಮಾಣಕ್ಕೂ ತುಂಬಾ ಅಂತರವಿದೆ. ಅಷ್ಟಕ್ಕೂ ಈ ಸಮುದಾಯಗಳ ಅಭಿವೃದ್ಧಿಗಾಗಿ ಬಿಡುಗಡೆಯಾದ ಹಣ ಕೂಡ ಸಮರ್ಪಕ ಬಳಕೆಯಾದಂತಿಲ್ಲ. ಕರ್ನಾಟಕದಲ್ಲಿ ಒಟ್ಟು 56 ಬುಡಕಟ್ಟು ಸಮುದಾಯಗಳನ್ನು ಗುರುತಿಸಿ ಅಧ್ಯಯನಗಳನ್ನು ನಡೆಸಲಾಗುತ್ತಿದೆ. ಅದರಲ್ಲಿ 24 ವಿಮುಕ್ತ ಬುಡಕಟ್ಟುಗಳಿದ್ದರೆ, 32 ಅಲೆಮಾರಿ ಬುಡಕಟ್ಟುಗಳಿವೆ. ಈ 32 ಬುಡಕಟ್ಟುಗಳಲ್ಲಿಯೂ ಅರೆ ಅಲೆಮಾರಿತನವೂ ಇದೆ. ಒಂದೆ ಸಮುದಾಯದ ಕೆಲವರು ನೆಲೆನಿಂತರೆ ಮತ್ತೆ ಕೆಲವರು ಅಲೆಮಾರಿತನವನ್ನು ಇನ್ನೂ ಅವಲಂಭಿಸಿದ್ದಾರೆ.

ಕರ್ನಾಟಕದ ಸಂದರ್ಭದಲ್ಲಿ ಅಲೆಮಾರಿ ಬುಡಕಟ್ಟುಗಳ ಅಧ್ಯಯನಕ್ಕೆ ಒಂದು ಚರಿತ್ರೆಯೆ ಇದೆ. ಎಡ್ಗರ್ ಥರಸ್ಟನ್ ಮತ್ತು ಕೆ.ರಂಗಾಚಾರಿ ಅವರು ಸಂಪಾದಿಸಿದ ‘ಕಾಸ್ಟ್ ಅಂಡ್ ಟ್ರೈಬ್ಸ್ ಇನ್ ಸದರ್ನ ಇಂಡಿಯಾ ದ ಏಳು ಸಂಪುಟಗಳು, ಅನಂತ ಕೃಷ್ಣ ಅಯ್ಯರ್ ಅವರು ಸಂಪಾದಿಸಿದ‘ ದಿ ಮೈಸೂರು ಟ್ರೈಬ್ಸ್ ಅಂಡ್ ಕಾಸ್ಟ್ ನ (1930)ನಾಲ್ಕು ಸಂಪುಟಗಳನ್ನು ಒಳಗೊಂಡಂತೆ ಈ ತನಕವೂ ವಿಭಿನ್ನ ನೆಲೆಯ ಅಧ್ಯಯನಗಳು ನಡೆಯುತ್ತಿವೆ. 1993 ರಲ್ಲಿ ಬರಗೂರು ರಾಮಚಂದ್ರ ಅವರು ಅಧ್ಯಕ್ಷರಾಗಿದ್ದಾಗ ಪ್ರಕಟವಾದ ಉಪಸಂಸ್ಕೃತಿ ಮಾಲೆಯು ಈ ನೆಲೆಯಲ್ಲಿ ಒಂದು ಚಾರಿತ್ರಿಕ ಮಹತ್ವದ ಕೆಲಸ. ನಂತರ ಹೀಗೆ ಯೋಜನೆಯ ಭಾಗವಾಗಿ 2007-08 ರಲ್ಲಿ ಕನ್ನಡ ಪುಸ್ತಕ ಪ್ರಾಧೀಕಾರದ ಅಧ್ಯಕ್ಷರಾಗಿದ್ದ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಅವರ ಪ್ರಧಾನ ಸಂಪಾದಕತ್ವದಲ್ಲಿ ಕೆ.ಎಂ.ಮೇತ್ರಿ ಅವರ ಸಂಪಾದಕತ್ವದಲ್ಲಿ ಕರ್ನಾಟಕದ 22 ಅಲೆಮಾರಿ ಸಮುದಾಯಗಳ ಅಧ್ಯಯನ ಕೃತಿಗಳು ಪ್ರಕಟವಾಗಿವೆ. ಇದು ಕೂಡ ಕರ್ನಾಟಕದ ಬುಡಕಟ್ಟು ಅಧ್ಯಯನ ಮಾಲೆಯಲ್ಲಿ ಗಮನಾರ್ಹ ಕೆಲಸ. ಈ ಮಾಲೆಯ ಕೆಲವು ಆಯ್ದ ಬುಡಕಟ್ಟುಗಳ ಮಹಿಳೆಯರ ಬಗ್ಗೆ ವಿಶ್ಲೇಷಿಸಲು ಇಲ್ಲಿ ಪ್ರಯತ್ನಿಸಲಾಗಿದೆ. ಈ ಅಧ್ಯಯನದ ಸಮೀಕ್ಷೆಯನ್ನು ಆಧರಿಸಿದ ಅಂಕಿಸಂಖ್ಯೆಗಳನ್ನು ಈ ಲೇಖನದಲ್ಲಿ ಬಳಸಿಕೊಳ್ಳಲಾಗಿದೆ.

ಸೃಷ್ಟಿಕಥನಗಳಲ್ಲಿ ‘ಮಹಿಳೆ

ಯಾವುದೇ ಬುಡಕಟ್ಟು ಸಮುದಾಯದ ಹುಟ್ಟಿನ ಮೂಲಕವೆ ಈ ಜಗತ್ತು ಸೃಷ್ಟಿಯಾಯಿತು, ನಾವು ಆದಿ ಮನುಜರು ಎಂದುಕೊಳ್ಳುತ್ತಾರೆ. ಹಾಗಾಗಿ ಕರ್ನಾಟಕದ ಎಲ್ಲಾ ಬುಡಕಟ್ಟು ಅಲೆಮಾರಿ ಸಮುದಾಯಗಳು ತಮ್ಮದೇ ಆದ ಲೋಕದ ಹುಟ್ಟಿನ ಕಥೆಗಳನ್ನು ಕಟ್ಟಿಕೊಂಡಿವೆ. ಈ ಕಥೆಗಳು ಜಗತ್ತು ಸೃಷ್ಟಿಯಾದ ಬಗ್ಗೆ ಡಾರ್ವಿನ್ ವಿಕಾಸವಾದಕ್ಕಿಂತ ಬೇರೆಯ ತೆರನಾದವು. ಅಥವಾ ಈ ಸಮುದಾಯಗಳು ಕಟ್ಟಿಕೊಂಡ ಲೋಕದ ಕಲ್ಪನೆ ಡಾರ್ವಿನ್ ವಿಕಾಸವಾದಕ್ಕಿಂತ ಮುಂಚೆಯೆ ಕಟ್ಟಲ್ಪಟ್ಟವುಗಳು. ಇಂತಹ ಸೃಷ್ಟಿ ಕಥೆಗಳು ಬುಡಕಟ್ಟು ಸಮುದಾಯಗಳ ಮೌಖಿಕ ಸಾಹಿತ್ಯದಲ್ಲಿ ಸಿಗುತ್ತದೆ. ಇದರ ಆಶಯಗಳು ಅವರ ಆಚರಣೆ, ಹಬ್ಬ ಮುಂತಾದ ಸಂದರ್ಭಗಳಲ್ಲಿಯೂ ವ್ಯಕ್ತವಾಗುತ್ತವೆ.

ದೊಂಬಿ ದಾಸರ ಕಥನವೊಂದು ಹೀಗಿದೆ: ಭೂಮಿ, ಆಕಾಶ, ಗಾಳಿ, ಬೆಳಕುಗಳಿಲ್ಲದ ಓಂಕಾರದೊಂದಿಗೆ ಒಂದು ಶಂಖ ಹುಟ್ಟಿತು. 336_BigBang2ಈ ಶಂಖುವಿನಿಂದ ತಾತ ಆದಿ ಜಾಂಬು ಲಿಂಗಯ್ಯ ಹುಟ್ಟಿದನು. ಇವರು ತಾವರೆ ಎಲೆಯ ಮೇಲೆ ಕೂತು ತಪಸ್ಸನ್ನು ಆಚರಿಸಿದ ಆರು ಗಳಿಗೆಯಲ್ಲಿಯೇ ಅದೇ ಶಂಕದಿಂದ ಆದಿಶಕ್ತಿ ಹುಟ್ಟಿದಳು. ಆಕೆ ತಾತನ ಬಳಿ ಬಂದು ತನ್ನ ಕಾಮವನ್ನು ತೀರಿಸೆಂದು ಕೇಳಿದಳು. ಆಗ ತಾತ ಈ ರೂಪದಲ್ಲಿ ಸಾಧ್ಯವಿಲ್ಲವೆಂದು ನವಿಲುಗಳಾಗಿ ರೂಪಾಂತರ ಹೊಂದಿ ಕೂಡಿದರು.

ಆಗ ಹೆಣ್ಣು ನವಿಲು ನಾಲ್ಕು ಮೊಟ್ಟೆಗಳನ್ನು ಇಟ್ಟಿತು. ಎಷ್ಟು ಕಾವು ಕೊಟ್ಟರೂ ಮೊಟ್ಟೆಯಲ್ಲಿ ಮರಿಯೊಡೆಯಲಿಲ್ಲ. ಆಗ ತಾತ ಒಂದು ಮೊಟ್ಟೆಯನ್ನು ಹೊಡೆದು ಅದರ ಮೇಲಿನ ಭಾಗವನ್ನು ಆಕಾಶ ಮಾಡಿದ, ಕೆಳಗಿನ ಭಾಗವನ್ನು ಭೂಮಿ ಮಾಡಿದ. ಇನ್ನೊಂದು ಮೊಟ್ಟೆಯನ್ನು ಹೊಡೆದು ಒಂದು ಭಾಗ ಸೂರ್ಯ, ಮತ್ತೊಂದನ್ನು ಚಂದ್ರನನ್ನಾಗಿಯೂ, ಮೂರನೆ ಮೊಟ್ಟೆಯಿಂದ ನಕ್ಷತ್ರ ಲೋಕವನ್ನು ಸೃಷ್ಟಿಸುತ್ತಾನೆ. ನಾಲ್ಕನೆ ಮೊಟ್ಟೆಯಿಂದ ಬ್ರಹ್ಮ, ವಿಷ್ಣು, ಈಶ್ವರರನ್ನು ಹುಟ್ಟಿಸುತ್ತಾನೆ. ಇವರು ಬೆಳೆದು ದೊಡ್ಡವರಾದ ಮೇಲೆ ಆದಿಶಕ್ತಿಗೆ ಇವರ ಮೇಲೆ ಕಾಮಾಸಕ್ತಿಯಾಗುತ್ತದೆ. ಮದುವೆಯಾಗಲು ಒತ್ತಾಯಿಸುತ್ತಾಳೆ. ಬ್ರಹ್ಮ,ವಿಷ್ಣು, ಈಶ್ವರರು ಮದುವೆ ನಿರಾಕರಿಸುತ್ತಾರೆ. ಶಿವ ಉಪಾಯದಿಂದ ಆದಿಶಕ್ತಿಯ ಹಣೆಯ ಉರಿಗಣ್ಣು, ಕೈಯಲ್ಲಿನ ಉರಿ ಅಸ್ತ್ರವನ್ನು ಪಡೆದು ಅವಳನ್ನು ದಿಟ್ಟಿಸಿ ನೋಡಿ ಬೂದಿ ಮಾಡುತ್ತಾನೆ. ಈ ಬೂದಿಯಿಂದ ಲಕ್ಷ್ಮಿ, ಸರಸ್ವತಿ, ಮತ್ತು ಪಾರ್ವತಿಯರನ್ನು ಮಾಡಿ ಬ್ರಹ್ಮ, ವಿಷ್ಣು, ಈಶ್ವರರು ಮದುವೆಯಾಗಿ ಜಗತ್ತಿನ ಸೃಷ್ಟಿಗೆ ಕಾರಣರಾಗುತ್ತಾರೆ.

ಇಂತಹ ಭಿನ್ನ ಪಾಠಾಂತರದ ಕಥನಗಳು ಅಲೆಮಾರಿ ಸಮುದಾಯಗಳಲ್ಲಿ ಸಿಗುತ್ತವೆ. ಸಮುದಾಯವು ಆರಂಭದಲ್ಲಿ ಜಲಾವೃತವಾದ ಭೂಮಿಯ ಕಲ್ಪನೆ ಕೊಡುತ್ತಾರೆ. ಇಲ್ಲಿ ಮೊದಲಿಗೆ ಹುಟ್ಟುವ ಹೆಣ್ಣು ಗಂಡು ಅಣ್ಣ ತಂಗಿಯಾಗಿರುವುದು, ತಾತ ಮೊಮ್ಮಗಳಾಗಿರುವುದು, ತಾಯಿ ಮಗ ಆಗಿರುವುದು ಮತ್ತವರು ಕೂಡುವ ಸೃಷ್ಟಿ ಕಥೆಗಳಿವೆ. ನಾವು ಬದುಕುತ್ತಿರುವ ಕಾಲದಲ್ಲಿ ಕಟ್ಟಿಕೊಂಡ ಸಂಬಂಧಗಳ ಕಣ್ಣಿಂದ ಈ ಕಥೆಗಳನ್ನು ನೋಡಿದರೆ ಇವು ಅಶ್ಲೀಲವಾಗಿ ಕಾಣುತ್ತವೆ. ಆದರೆ ಇಂತಹ ಸಂಬಂಧಗಳ ಗೋಜಿಲ್ಲದ ಕೇವಲ ಗಂಡು ಹೆಣ್ಣು ಎನ್ನುವ ದೃಷ್ಟಿಕೋನದಲ್ಲಿ ಈ ಕಥೆಗಳು ಹುಟ್ಟಿದಂತಿದೆ. ಇದನ್ನು ನೋಡಿದರೆ ಸಿಗ್ಮಂಡ್ ಪ್ರಾಯ್ಡ್‌ನ ಸಂಬಂಧಗಳ ಆಚೆಯೂ ವಿರುದ್ಧ ಲಿಂಗಗಳ ಮಧ್ಯೆ ಇರುವ ಆಕರ್ಷಣೆಯ ಥಿಯರಿಯನ್ನು ಈ ಬುಡಕಟ್ಟುಗಳು ತುಂಬಾ ಹಿಂದೆಯೇ ತಮ್ಮ ಕಥೆ ಹಾಡುಗಳಲ್ಲಿ ಕಟ್ಟಿಕೊಂಡಿದ್ದನ್ನು ಗಮನಿಸಬಹುದು.

ಇಂತಹ ಕಥನಗಳಲ್ಲಿ ಹೆಣ್ಣು ಫಲವಂತಿಕೆಯ ಸಂಕೇತವಾಗಿ ಬರುತ್ತಾಳೆ. ಅಥವಾ ಈ ಜಗತ್ತಿನ ಸೃಷ್ಟಿಗೆ ಹೆಣ್ಣೆ ಕಾರಣ ಎನ್ನುವ ನಿರೂಪಣೆಗಳೂ ಇವೆ. ವರ್ತಮಾನದ ಬುಡಕಟ್ಟುಗಳಲ್ಲಿ ಇರುವ ಶಾಕ್ತಪಂಥದ ಆರಾಧನೆಗೂ, ಮಾತೃಪ್ರಧಾನತೆಯ ಲಕ್ಷಣಗಳಿಗೂ ಇಂತಹ ಕಥನಗಳಿಗೂ ಒಂದಕ್ಕೊಂದು ಸಂಬಂಧವಿದ್ದಂತೆ ಕಾಣುತ್ತದೆ. ಇದರ ನೆಲೆಯಲ್ಲಿಯೇ ಅಲೆಮಾರಿ ಬುಡಕಟ್ಟುಗಳ ಮಹಿಳೆಯ ವರ್ತಮಾನದ ಕಥನವೂ ತಳಕು ಹಾಕಿಕೊಂಡಿದೆ.

ಶಾಕ್ತಪಂಥ ಮತ್ತು ಮಹಿಳೆ

ಕರ್ನಾಟಕದ ಅಲೆಮಾರಿ ಬುಡಕಟ್ಟುಗಳನ್ನು ಅವಲೋಕಿಸಿದರೆ ಹೆಣ್ಣು ದೇವರ ಆರಾಧನೆ ದೊಡ್ಡಮಟ್ಟದಲ್ಲಿ ಕಂಡು ಬರುತ್ತದೆ. ಈ ಆರಾಧನೆಯಲ್ಲಿ ಶಾಕ್ತಪಂಥದ ಲಕ್ಷಣಗಳಿರುವುದೂ ಇದೆ. ಬೈಲು ಪತ್ತಾರರು ಅಂಬಾಭವಾನಿ, ಕಾಳಮ್ಮ, ಎಲ್ಲಮ್ಮ, ದುರ್‍ಗಮ್ಮ, ಕರಿಲಕ್ಷ್ಮಿ, ಮಸೆಮ್ಮನನ್ನೂ, ಬುಡಗ ಜಂಗಮರಲ್ಲಿ ಸುಂಕಲಮ್ಮ, ಜಂಬಲಮ್ಮ, ಜಮ್ಮಕ್ಕ, ಗಾಳೆಮ್ಮ, ಉಲಗಮ್ಮನನ್ನೂ, ದೊಂಬಿದಾಸರು ಭದ್ರಕಾಳಮ್ಮ, ಉಲ್ಲೂರಮ್ಮ, ಗದ್ದೆ ಕೆಂಪಮ್ಮ,ಮಳೆಯಮ್ಮ, ಕಬ್ಬಾಳಮ್ಮನನ್ನೂ, ಸಿಂಧೊಳ್ಳು ಸಮುದಾಯ ಈರನಾಗಮ್ಮ, ದುರುಗಮ್ಮ, ಮರಗಮ್ಮ, hallaki_woman_uttarakannadaಸವಾರಮ್ಮ, ಅಂಕ್ಲಮ್ಮನನ್ನೂ, ಗೊಂಧಳಿ ಸಮುದಾಯ ಸವದತ್ತಿ ಯಲ್ಲಮ್ಮ, ಅಂಬಾಭವಾನಿ, ತುಳುಜಾ ಭವಾನಿ, ಕೊಲ್ಲಾಪುರದ ಮಹಾಲಕ್ಷ್ಮಿ. ಗುಗ್ಗುಳ ಮಾರಮ್ಮ, ಕಕ್ಕೇರಿ ಭಿಷ್ಟಮ್ಮನನ್ನೂ ಹೀಗೆ ಅಲೆಮಾರಿ ಸಮುದಾಯಗಳು ಪ್ರಧಾನವಾಗಿ ಹೆಣ್ಣು ದೈವಗಳನ್ನು ಆರಾಧನೆ ಮಾಡುತ್ತವೆ.

ಹೀಗೆ ಹೆಣ್ಣು ದೈವಗಳ ಆರಾಧನೆಗೂ ಆಯಾ ಸಮುದಾಯದ ಹೆಣ್ಣುಮಕ್ಕಳಿಗೆ ನಾಗರಿಕ ಜಗತ್ತಿಗಿಂತ ಒಂದಷ್ಟು ಮುಕ್ತವಾದ ವಾತಾವರಣ ಇರುವುದಕ್ಕೂ ಸಂಬಂಧವಿದೆ. ಈ ನೆಲೆಯಲ್ಲಿ ಕರ್ನಾಟಕದ ಅಲೆಮಾರಿ ಬುಡಕಟ್ಟುಗಳ ಆರಾಧನಾ ಪರಂಪರೆಯನ್ನು ಭಿನ್ನವಾಗಿ ಅಧ್ಯಯನ ಮಾಡುವ ಅಗತ್ಯವಿದೆ. ಅಥವಾ ಈ ಆರಾಧನೆಗಳಲ್ಲಿ ಕರ್ನಾಟಕದ ಮೂಲ ದೈವೀ ಪಂಥವಾದ ಶಾಕ್ತ ಪಂಥದ ಅಧ್ಯಯನಕ್ಕೆ ಹೊಸ ನೆಲೆಯೊಂದನ್ನು ಒದಗಿಸುವ ಸಾಧ್ಯತೆಗಳೂ ಇದೆ. ಈ ಬಗೆಯ ಅಧ್ಯಯನದಿಂದಾಗಿ ಒಟ್ಟಾರೆ ಮಹಿಳೆಯ ಸಾಂಸ್ಕೃತಿಕ ಚರಿತ್ರೆ ಕಟ್ಟುವ ಭಿನ್ನ ನೆಲೆಯೊಂದು ಒದಗಬಹುದು.

ಮಹಿಳೆಯರ ಸಂಖ್ಯೆ ಮತ್ತು ಲಿಂಗಾನುಪಾತ

ನಾಗರಿಕ ಸಮುದಾಯಗಳಲ್ಲಿ ಹೆಣ್ಣುಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಲಿಂಗಾನುಪಾತದಲ್ಲೂ ಮಹಿಳೆಯರ ಪ್ರಮಾಣ ಇಳಿಯುತ್ತಿದೆ. ಇದು ಆಧುನಿಕ ಕಾಲವೂ ಕೂಡ ಮಹಿಳೆಯನ್ನು ಕಡೆಗಣಿಸುತ್ತಿರುವುದಕ್ಕೆ ಪೂರಕವಾಗಿದೆ. ಆದರೆ ಅಲೆಮಾರಿ ಬುಡಕಟ್ಟುಗಳ ಸಂಖ್ಯೆಯನ್ನು ನೋಡಿದರೆ ಇದಕ್ಕೆ ವಿರುದ್ಧ ಆಯಾಮವಿದೆ. ಅಂದರೆ ಇಲ್ಲಿ ಹೆಣ್ಣಿನ ಸಂಖ್ಯೆ ತೀರಾ ಕಡಿಮೆಯೇನಿಲ್ಲ. ಬದಲಾಗಿ ಗಂಡಿಗೆ ಸಮನಾಗಿಯೋ, ಅಥವಾ ಗಂಡಿನ ಸಂಖ್ಯೆಯ ಹತ್ತಿರವೋ ಇದೆ. ಉದಾಹರಣೆಗೆ ಕೆಲವು ಸಮುದಾಯಗಳ ಅಂಕಿಅಂಶಗಳನ್ನು ನೋಡಬಹುದು.

ಬೈಲು ಪತ್ತಾರ ಸಮುದಾಯ 18 ಜಿಲ್ಲೆಗಳಲ್ಲಿ ನೆಲೆಸಿದೆ. 4609 ರಷ್ಟು ಜನಸಂಖ್ಯೆಯಲ್ಲಿ 2216 ರಷ್ಟು ಮಹಿಳೆಯರಿದ್ದಾರೆ. orissa-tribeಲಿಂಗಾನುಪಾತ 926 ರಷ್ಟಿದೆ. ಬುಡಗ ಜಂಗಮ ಸಮುದಾಯದಲ್ಲಿ ಒಟ್ಟು ಜನಸಂಖ್ಯೆ 24132 ರಷ್ಟಿದೆ. ಅದರಲ್ಲಿ ಹೆಂಗಸರ ಸಂಖ್ಯೆ 11925 ರಷ್ಟಿದೆ. ದೊಂಬಿದಾಸರ ಸಮುದಾಯದಲ್ಲಿ ಒಟ್ಟು 7923 ರಷ್ಟಿದ್ದಾರೆ. ಅದರಲ್ಲಿ ಹೆಣ್ಣುಮಕ್ಕಳ ಸಂಖ್ಯೆ 3780 ರಷ್ಟಿದೆ. ಲಿಂಗಾನುಪಾತ 912. ಸಿಂದೊಳ್ಳು ಸಮುದಾಯದ ಒಟ್ಟು 1424 ಕುಟುಂಬಗಳ 5726 ಜನರಿದ್ದಾರೆ. ಅದರಲ್ಲಿ ಹೆಂಗಸರು 2587 ರಷ್ಟಿದ್ದಾರೆ. ಗೋಂಧಳಿ ಸಮುದಾಯ 15 ಜಿಲ್ಲೆಗಳ ಸಮೀಕ್ಷೆಯಲ್ಲಿ ಒಟ್ಟು 5407 ರಷ್ಟು ಜನಸಂಖ್ಯೆ ಇದೆ. ಅದರಲ್ಲಿ ಸ್ತ್ರೀಯರು 2620 ರಷ್ಟಿದ್ದಾರೆ. ಲಿಂಗಾನುಪಾತ 940 ರಷ್ಟಿದೆ. ಗೋಸಂಗಿ ಸಮುದಾಯದಲ್ಲಿ 1770 ಜನರಿದ್ದಾರೆ. ಹೆಂಗಸರು 879 ರಷ್ಟಿದ್ದಾರೆ. ಲಿಂಗಾನುಪಾತ 986 ರಷ್ಟಿದೆ. ಹಕ್ಕಿಪಿಕ್ಕಿ ಸಮುದಾಯದಲ್ಲಿ ಒಟ್ಟು ಜನಸಂಖ್ಯೆ 2074 ರಲ್ಲಿ ಮಹಿಳೆಯರ ಪ್ರಮಾಣ 49.51 ರಷ್ಟಿದೆ. ಕಂಜರ ಭಾಟ ಸಮುದಾಯದಲ್ಲಿ 2001 ರಷ್ಟು ಜನಸಂಖ್ಯೆ ಇದೆ. ಹೆಂಗಸರು 1000 ದಷ್ಟಿದ್ದಾರೆ. ಲಿಂಗಾನುಪಾತ 999 ರಷ್ಟಿದೆ. ಅಲೆಮಾರಿ ಕುರುಬರಲ್ಲಿ ಒಟ್ಟು ಜನಸಂಖ್ಯೆ 2310 ರಷ್ಟಿದ್ದರೆ, ಹೆಂಗಸರು 1098 ರಷ್ಟಿದ್ದಾರೆ. ಲಿಂಗಾನುಪಾತ 905 ರಷ್ಟಿದೆ.

ಈ ಅಂಕೆಸಂಖ್ಯೆಗಳನ್ನು ಗಮನಿಸಿದರೆ ಬೆರಳೆಣಿಕೆಯ ಸಮುದಾಯಗಳಲ್ಲಿ ಲಿಂಗಾನುಪಾತ ಭಯ ಹುಟ್ಟಿಸುವಂತಿದ್ದರೆ, ಬಹುಪಾಲು ಸಮುದಾಯಗಳಲ್ಲಿ ಹೆಚ್ಚು ಅಂತರವಿಲ್ಲ. ಇದನ್ನು ನೋಡಿದರೆ ಅಲೆಮಾರಿ ಬುಡಕಟ್ಟು ಸಮುದಾಯಗಳಲ್ಲಿ ಹೆಣ್ಣು ಸಂತಾನವನ್ನು ಕೇಡೆಂದು ಬಯಸುವುದು, ಅಥವಾ ಗಂಡು ಸಂತಾನವನ್ನು ಶ್ರೇಷ್ಠವೆಂದು ಭಾವಿಸುವ ಸನಾತನ ನಂಬಿಕೆ ಅಷ್ಟಾಗಿ ಕಾಡಿಲ್ಲವೆಂದು ಹೇಳಬಹುದು. ಅಂತೆಯೇ ಅಲೆಮಾರಿತನಕ್ಕೆ ಹೆಣ್ಣಿನ ಅಗತ್ಯವಿರುವುದರಿಂದ ಹೀಗೆ ಹೆಣ್ಣು ಅಲೆಮಾರಿತನದ ಬದುಕಿನ ಅನಿವಾರ್ಯ ಸಂಗಾತಿಯಾಗಿ ಪ್ರಾಮುಖ್ಯತೆಯನ್ನು ಪಡೆದಿದ್ದಾಳೆ. ಹಾಗಾಗಿ ಅಲೆಮಾರಿ ಬುಡಕಟ್ಟುಗಳಲ್ಲಿ ಮಹಿಳೆ ಒಂದು ಚೈತನ್ಯದ ಸಂಗತಿಯಾಗಿಯೂ ಕಾಣುತ್ತಾಳೆ.

ನಗರದಂಚಿನ ವಾಸದ ನೆಲೆ ಮತ್ತು ಮಹಿಳೆ

ಇಂದು ಬಹುಪಾಲು ಅಲೆಮಾರಿ ಬುಡಕಟ್ಟುಗಳ ವಾಸದ ನೆಲೆ ನಗರದ ಅಂಚಿಗೆ ಸುತ್ತುವರಿದಿದೆ. ಅಥವಾ ಅಲೆಮಾರಿ ಸಮುದಾಯಗಳು ಗ್ರಾಮೀಣ ಭಾಗದ ವಲಸೆಯನ್ನು ಕೈಬಿಡುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಒಂದಷ್ಟು ಉದಾಹರಣೆಗಳನ್ನು ನೋಡೋಣ. ಗೋಸಂಗಿ ಸಮುದಾಯದಲ್ಲಿ ನಗರ ಪ್ರದೇಶದ ವಾಸದ ನೆಲೆ ಶೇ 70 ರಷ್ಟಿದ್ದರೆ, ಗ್ರಾಮೀಣ ಪ್ರದೇಶದ ವಾಸದ ನೆಲೆ ಶೇ 30 ರಷ್ಟಿದೆ. ಘಿಸಾಡಿ ಸಮುದಾಯದ ವಾಸದ ನೆಲೆ ಗ್ರಾಮೀಣ ಭಾಗದಲ್ಲಿ ಶೇ 22 ರಷ್ಟಿದ್ದರೆ, ನಗರ ಪ್ರದೇಶದಲ್ಲಿ ಶೇ78 ರಷ್ಟಿದೆ. ಗೋಂಧಳಿ ಸಮುದಾಯದ ವಾಸದ ನೆಲೆ ಗ್ರಾಮೀಣ ಭಾಗದಲ್ಲಿ ಶೇ 19.47 ರಷ್ಟಿದ್ದರೆ, ನಗರ ಪ್ರದೇಶದಲ್ಲಿ ಸರಾಸರಿ ಶೇ.80.53 ರಷ್ಟಿದೆ. ಬೈಲ ಪತ್ತಾರ ಸಮುದಾಯ ನಗರ ಭಾಗದಲ್ಲಿ ಶೇ 51.36 ಇದ್ದರೆ ಗ್ರಾಮೀಣ ಭಾಗದಲ್ಲಿ 49.31 ರಷ್ಟಿದೆ. tribe-minesದೊಂಬಿದಾಸ ಸಮುದಾಯ ನಗರ ಭಾಗದಲ್ಲಿ ಶೇ 51.36 ಇದ್ದರೆ ಗ್ರಾಮೀಣ ಭಾಗದಲ್ಲಿ 49.31 ರಷ್ಟಿದೆ. ಕಂಜರ ಭಾಟ ಸಮುದಾಯ ಗ್ರಾಮೀಣ ಭಾಗದಲ್ಲಿ 163 ಜನರು ನೆಲೆಸಿದ್ದರೆ, ನಗರ ಭಾಗದಲ್ಲಿ ಒಟ್ಟು 1834 ರಷ್ಟಿದ್ದಾರೆ.

ಈ ಅಂಕೆಸಂಖ್ಯೆಗಳು ಅಲೆಮಾರಿ ಸಮುದಾಯಗಳ ನಗರ ಕೇಂದ್ರಿತ ವಲಸೆಯನ್ನು ತೋರಿಸುತ್ತಿದೆ. ಹೀಗೆ ಅಲೆಮಾರಿ ಸಮುದಾಯಗಳು ಗ್ರಾಮೀಣ ಭಾಗದ ವಲಸೆಯನ್ನು ಯಾಕೆ ಕೈಬಿಡುತ್ತಿದ್ದಾರೆ, ನಗರಕ್ಕೆ ಅಂಟಿಕೊಂಡಂತೆ ಯಾಕೆ ಬದುಕುತ್ತಾರೆ ಮುಂತಾಗಿ ನೋಡಬಹುದು. ಮುಖ್ಯವಾಗಿ ಗ್ರಾಮಗಳು ಕೃಷಿಯಾಧಾರಿತ ಬದುಕನ್ನು ಆಧರಿಸಿ ಸ್ವತಃ ಹಳ್ಳಿಗಳೆ ಸಂಕಷ್ಟದಲ್ಲಿವೆ. ಇಂತಹ ಸಂಕಷ್ಟದ ಬಹುಪಾಲು ಹಳ್ಳಿಗಳು ಅಲೆಮಾರಿ ಸಮುದಾಯಗಳಿಗೆ ಅನ್ನ ನೀಡುವಲ್ಲಿ ಬದುಕನ್ನು ಕಲ್ಪಿಸುವಲ್ಲಿ ಸೋಲುತ್ತಿರುವಂತೆ ಕಾಣುತ್ತಿವೆ. ಮೊದಲು ಕೃಷಿಯೇತರ ಭೂಮಿಯು ಹೆಚ್ಚಾಗಿತ್ತು. ಈ ಕೃಷಿಯೇತರ ಭೂಮಿಯ ಕಾರಣಕ್ಕೆ ಪಶು ಕುರಿಗಳನ್ನು ಸಾಕುತ್ತಿದ್ದ ಅಲೆಮಾರಿ ಸಮುದಾಯಕ್ಕೂ ಅನುಕೂಲಕರ ವಾತಾವರಣವಿತ್ತು. ಈ ಚಿತ್ರ ಈಚಿನ ಹತ್ತು ವರ್ಷಗಳಲ್ಲಿ ಬದಲಾಗಿದೆ. ಈ ಕಾರಣಕ್ಕೆ ಸಹಜವಾಗಿ ಅಲೆಮಾರಿ ಸಮುದಾಯಗಳು ನಗರಕ್ಕೆ ಹೊಂದಿಕೊಂಡಂತೆ ನೆಲೆಸುತ್ತಿವೆ. ಹೀಗೆ ನಗರದಂಚಿನ ವಲಸೆಯಿಂದಾಗಿ ಅಲೆಮಾರಿ ಸಮುದಾಯಗಳು ನಗರ ಕೇಂದ್ರಿತ ಹೊಸ ಕಸುಬುಗಳಿಗೆ ಒಗ್ಗಿಕೊಳ್ಳುತ್ತಿವೆ. ಇದರಲ್ಲಿ ಮಹಿಳೆಯರ ಕಸುಬುಗಳೂ ಬದಲಾಗುತ್ತಿವೆ. ಅಂತೆಯೇ ನಗರ ಸಂಪರ್ಕದಿಂದಾಗಿ ಅಲೆಮಾರಿ ಮಹಿಳೆಯರಲ್ಲಿ ಕೆಲವು ಮುಖ್ಯ ಬದಲಾವಣೆಗಳು ಘಟಿಸಿವೆ.

ಅಲೆಮಾರಿ ಸಮುದಾಯದ ಮಹಿಳೆಯ ಶಿಕ್ಷಣ

ಅಲೆಮಾರಿತನಕ್ಕೂ, ಶಿಕ್ಷಣಕ್ಕೂ ವಿರುದ್ಧ ಸಂಬಂಧವಿದೆ. ಅಂದರೆ ನಿರಂತರವಾಗಿ ಅಲೆದಾಡಿಕೊಂಡಿರುವ ಕಾರಣ ಒಂದೆಡೆ ನಿಂತು ಶಿಕ್ಷಣ ಪಡೆಯುವುದು ಈ ಸಮುದಾಯಗಳಿಗೆ ಸಾಧ್ಯವಾಗದು. ಸಹಜವಾಗಿ ಅಲೆಮಾರಿ ಸಮುದಾಯಗಳಿಗೆ ಶಿಕ್ಷಣ ಈಗಲೂ ನಿಲುಕದ ನಕ್ಷತ್ರವೆ. ಅಲೆಮಾರಿ ಸಮುದಾಯಗಳು ಈಗ ಕೆಲವೆಡೆ ನೆಲೆ ನಿಲ್ಲುತ್ತಿರುವುದು ಕಂಡು ಬರುತ್ತಿದೆ. ಅಥವಾ ಅರೆ ಅಲೆಮಾರಿತನವಿದೆ. ಮುಖ್ಯವಾಗಿ ನೆಲೆನಿಲ್ಲುವಿಕೆ ಮತ್ತು ಅರೆ ಅಲೆಮಾರಿತನದಿಂದ ಈ ಸಮುದಾಯದ ಮಕ್ಕಳೂ ಶಾಲೆ ಕಲಿಯುತ್ತಿದ್ದಾರೆ. ಅದರಲ್ಲೂ ಅಲೆಮಾರಿ ಸಮುದಾಯಗಳಿಗೆ ಸ್ಥಾಪನೆಯಾಗ ವಸತಿ ಶಾಲೆಗಳೂ ಸ್ವಲ್ಪಮಟ್ಟಿಗೆ ಕಲಿಯಲು ಸಹಕಾರಿಯಾಗಿವೆ. ಇಲ್ಲಿಯೂ ಗಂಡಸರ ಶಿಕ್ಷಣದ ಪ್ರಮಾಣಕ್ಕಿಂತ ಹೆಣ್ಣುಮಕ್ಕಳ ಶಿಕ್ಷಣದ ಪ್ರಮಾಣ ಇನ್ನೂ ಕಡಿಮೆಯೇ ಇದೆ. ಕೆಲವು ಸಮುದಾಯಗಳ ಅಂಕೆ ಸಂಖ್ಯೆಯನ್ನು ನೋಡೋಣ.

ಅಲೆಮಾರಿ ಕುರುಬರಲ್ಲಿ 2001 ರ ಜನಗಣತಿಯ ಪ್ರಕಾರ ಸಾಕ್ಷರತೆ 25.03 ರಷ್ಟಿದೆ. ಪುರುಷರಲ್ಲಿ ಶೇ 18.44 ರಷ್ಟಿದ್ದರೆ, ಮಹಿಳೆಯರು ಶೇ 6.59 ರಷ್ಟಿದೆ. 2007 ರ ಸಮೀಕ್ಷೆ ಪ್ರಕಾರ ಅಲೆಮಾರಿ ಕುರುಬರ ಮಹಿಳೆಯರ ಶಿಕ್ಷಣ ಶೇ 6.59 ರಷ್ಟಿದೆ. ಹಕ್ಕಿಪಿಕ್ಕಿ ಸಮುದಾಯದಲ್ಲಿ ಸರಾಸರಿ ಶೈಕ್ಷಣಿಕ ಪ್ರಮಾಣ ಪುರುಷರು 19.23 ರಷ್ಟಿದ್ದರೆ, ಮಹಿಳೆಯರು 10.31 ರಷ್ಟಿದ್ದಾರೆ. ಒಟ್ಟು 14.74 ರಷ್ಟು ಸಾಕ್ಷರರಿದ್ದಾರೆ. ಗೋಸಂಗಿ ಸಮುದಾಯದಲ್ಲಿ ಶೇ 39.59 ರಷ್ಟು ಗಂಡಸರ ಶಿಕ್ಷಣವಿದ್ದರೆ, 36.08 ರಷ್ಟು ಮಹಿಳೆಯರ ಶಿಕ್ಷಣವಿದೆ.

ಬಹುಪಾಲು ಅಲೆಮಾರಿ ಸಮುದಾಯಗಳ ಶೈಕ್ಷಣಿಕ ಅಂಕೆಸಂಖ್ಯೆಗಳು ಮೇಲಿನಂತೆಯೇ ಇರುತ್ತದೆ. ಇಲ್ಲಿ ಒಟ್ಟಾರೆ ಅಲೆಮಾರಿ ಸಮುದಾಯದ ಶೈಕ್ಷಣಿಕ ಮಟ್ಟ ತುಂಬಾ ಕೆಳಮಟ್ಟದ್ದಾಗಿದೆ. ಅದರಲ್ಲೂ ನಾಗರಿಕ ಸಮುದಾಯಗಳಿಗೆ ಹೋಲಿಸಿದರೆ, ಶಿಕ್ಷಣದ ಮಟ್ಟ ಶೋಚನೀಯವಾಗಿದೆ. ಮಹಿಳೆಯರ ಶೈಕ್ಷಣಿಕ ಮಟ್ಟ ಗಣನೀಯ ಪ್ರಮಾಣದಲ್ಲಿ ಕಡಿಮೆ ಇರುವುದು ಕಾಣುತ್ತದೆ. ಇಲ್ಲಿ ಮಹಿಳೆಯರಿಗೆ ಶಿಕ್ಷಣ ಕಡಿಮೆ ಇರುವುದಕ್ಕೂ ಈ ಸಮುದಾಯಗಳಲ್ಲಿ ಹೆಣ್ಣನ್ನು ಅವಮಾನಕಾರಿಯಾಗಿ ನಡೆಸಿಕೊಳ್ಳುವುದಕ್ಕೂ ಸಂಬಂಧವಿದೆ. ಅಂತೆಯೇ ಮಹಿಳೆಯರಲ್ಲಿ ಮೂಡನಂಬಿಕೆಗಳು ಗಾಢವಾಗಿರುವುದಕ್ಕೂ ನಂಟಿದೆ.

ತೆರ, ಬಾಲ್ಯವಿವಾಹ ಮತ್ತು ಕೂಡಿಕೆ/ಸೀರುಡಿಕೆ ಪದ್ದತಿ

ಕರ್ನಾಟಕದ ಅಲೆಮಾರಿ ಸಮುದಾಯಗಳಲ್ಲಿ ಮಹಿಳೆ ಕುರಿತಂತೆ ಮಾನವೀಯ ಮತ್ತು ಅಮಾನವೀಯ ಸಂಗತಿಗಳು ಜೊತೆ ಜೊತೆಗೇ ಇವೆ. ಅದರಲ್ಲಿ ತೆರಕೊಟ್ಟು ಮದುವೆಯಾಗುವ ಪದ್ದತಿ ಮಾನವೀಯವಾದುದು. ಈಗಲೂ ಕೆಲವು ಸಮುದಾಯಗಳಲ್ಲಿ ತೆರ ಕೊಟ್ಟು ಮದುವೆಯಾಗುವುದು ಜೀವಂತವಾಗಿದೆ. ಈ ಪದ್ದತಿ ನಾಗರೀಕ ಸಮಾಜದ ವರದಕ್ಷಣೆ ಪದ್ದತಿಗೆ ವಿರುದ್ಧವಾದುದು. ಬೈಲಪತ್ತಾರ ಸಮುದಾಯದಲ್ಲಿ ಇದಕ್ಕೆ ಓಲಿ ಎಂದು ಕರೆಯುತ್ತಾರೆ. ತೆರಕೊಟ್ಟು ಮದುವೆಯಾಗುವುದಕ್ಕೆ ಆಯಾ ಸಮುದಾಯದ ನಿಯಮಗಳು ಭಿನ್ನವಾಗಿವೆ. ಅಂತೆಯೇ ಹೆಣ್ಣು ಹೆತ್ತ ತಂದೆ ತಾಯಿಗಳಿಗೆ ಗೌರವವೂ ಹೆಚ್ಚು. tribal-womanಹೀಗೆ ತೆರ ಪದ್ಧತಿ ಇರುವುದರಿಂದ ಹೆಣ್ಣನ್ನು ಹೆರುವುದು ತಂದೆ ತಾಯಿಯರಿಗೆ ಹೊರೆಯಾಗಿ ಕಾಣುವುದಿಲ್ಲ. ನೆಲೆ ನಿಂತ ಅಲೆಮಾರಿ ಸಮುದಾಯಗಳಲ್ಲಿ ನಿಧಾನಕ್ಕೆ ವರದಕ್ಷಿಣೆ ಪದ್ದತಿಯೂ ಚಾಲ್ತಿಗೆ ಬರುತ್ತಿದೆ. ಇದು ನೆಲಸಿಗರ ಪ್ರಭಾವದಿಂದ ಬಂದದ್ದಾಗಿದೆ.

ಅಲೆಮಾರಿಗಳಲ್ಲಿ ಸಾಮಾನ್ಯವಾಗಿ ಬಾಲ್ಯವಿವಾಹ ಪದ್ದತಿ ಇದೆ. ಬಾಲ್ಯವಿವಾಹ ಪದ್ದತಿಯ ಕಾರಣಕ್ಕೆ ಹೆಣ್ಣುಮಕ್ಕಳು ಅನಾರೋಗ್ಯಕ್ಕೆ ತುತ್ತಾಗುವುದು, ಅಕಾಲ ಮರಣಕ್ಕೆ ಬಲಿಯಾಗುವುದೂ ಇದೆ. ಚಿಕ್ಕವಯಸ್ಸಿಗೆ ಮಕ್ಕಳನ್ನು ಪಡೆವುದು, ತಾಯಿ ಮಗು ಅನಾರೋಗ್ಯಕ್ಕೆ ತುತ್ತಾಗುವುದೂ ಇದೆ. ಬಾಲ್ಯ ವಿವಾಹದ ಕಾರಣಕ್ಕೆ ಅಕಾಲಿಕ ಮರಣ ಹೊಂದಿದರೆ, ಚಿಕ್ಕ ವಯಸ್ಸಿಗೆ ವಿಧವೆ, ವಿಧುರರಾಗುತ್ತಾರೆ. ಈ ಕಾರಣಕ್ಕೆ ಇರಬೇಕು ಅಲೆಮಾರಿಗಳಲ್ಲಿ ಪುನರ್ವಿವಾಹವು ತೊಡಕಲ್ಲ. ಹೆಣ್ಣು ಗಂಡು ಮರು ಮದುವೆಯಾಗಲು ಈ ಸಮುದಾಯಗಳಲ್ಲಿ ಅವಕಾಶವಿದೆ. ಗಂಡ ಬಿಟ್ಟರೂ ಬೇರೊಬ್ಬರನ್ನು ಕೂಡಿಕೆಯಲ್ಲಿ ಮದುವೆಯಾಗಬಹುದು. ಗಂಡ ಸತ್ತರೆ ಮೈದುನನ್ನು ಸೀರುಡಿಕೆಯಲ್ಲಿ ವರಿಸಬಹುದು.

ಗೊಂಧಳಿ ಸಮುದಾಯದಲ್ಲಿ ಸ್ತ್ರೀಯು ಮೂರನೆ ಬಾರಿಗೆ ಲಗ್ನವಾಗುವಂತಿಲ್ಲ. ಅಂತೆಯೇ ಪುರುಷರು ನಾಲ್ಕನೆ ಬಾರಿಗೆ ಲಗ್ನವಾಗುವಂತಿಲ್ಲ ಎಂಬ ನಿಯಮವಿದೆ. ದೊಂಬಿದಾಸರ ಸಮುದಾಯದಲ್ಲಿ ಹಿಂದೆ ಮರುವಿವಾಹದಲ್ಲಿ ಗಂಡು ಹೆಣ್ಣಿಗೆ ತಾಳಿಕಟ್ಟುವಂತಿರಲಿಲ್ಲ, ವಿಧವೆಯೊಬ್ಬಳು ಹೆಣ್ಣಿಗೆ ತಾಳಿ ಕಟ್ಟಬೇಕಿತ್ತು. ಘಿಸಾಡಿಗಳ ಹೆಣ್ಣುಮಗಳು ಬೇರೆ ಸಮುದಾಯದ ಪುರುಷನೊಂದಿಗೆ ಓಡಿ ಹೋದರೆ ಈ ಸಮುದಾಯದಿಂದ ಹೊರ ಹಾಕಲಾಗುತ್ತದೆ. ಇದಕ್ಕಾಗಿ ಆ ಹುಡುಗಿಯ ತಂದೆ ತಾಯಿಗಳು ಸಮುದಾಯದ ಪಂಚಾಯ್ತಿಗೆ ಇಂತಿಷ್ಟು ದಂಡ ಕಟ್ಟಬೇಕಾಗುತ್ತದೆ. ಹೀಗೆ ಆಯಾ ಸಮುದಾಯಗಳಲ್ಲಿ ಪ್ರತ್ಯೇಕ ನಿಯಮಗಳಿವೆ.

ಪಂಚಾಯ್ತಿಗಳಲ್ಲಿ ಮಹಿಳೆ ನಗಣ್ಯ

ಬಹುಪಾಲು ಅಲೆಮಾರಿ ಸಮುದಾಯಗಳಲ್ಲಿ ಈಗಲೂ ವ್ಯಾಜ್ಯಗಳು ಆಯಾ ಸಮುದಾಯಗಳ ಪಂಚಾಯ್ತಿಯಲ್ಲಿ ಬಗೆ ಹರಿಯುತ್ತವೆ. ಆಯಾ ಸಮುದಾಯದ ಯಜಮಾನರು ಪಂಚಾಯ್ತಿಯ ಮುಖ್ಯಸ್ಥರಾಗಿರುತ್ತಾರೆ. ಈ ಬಗೆಯ ಮುಖ್ಯಸ್ಥಿಕೆ ಕೆಲವು ಸಮುದಾಯಗಳಲ್ಲಿ ವಂಶಪಾರಂಪರ್ಯವೂ ಆಗಿರುವುದಿದೆ. ಇಂತಹ ನ್ಯಾಯ ಪಂಚಾಯ್ತಿಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ತೀರಾ ವಿರಳವಾಗಿದೆ. ಯಾವುದೇ ನ್ಯಾಯ ತೀರ್ಮಾನ ಪುರುಷ ಮುಖ್ಯಸ್ಥರಿಂದಲೇ ನಿರ್ಧಾರವಾಗುತ್ತವೆ. ಈ ನಿರ್ಧಾರಗಳೂ ಕೂಡ ಬಹುಪಾಲು ಪುರುಷಪರವಾಗಿರುವ ಸಾಧ್ಯತೆಯೂ ಇದೆ. ಇದರಿಂದಾಗಿ ನ್ಯಾಯ ಪಂಚಾಯ್ತಿಗಳಲ್ಲಿ ಮಹಿಳೆಯರ ಸ್ವಾತಂತ್ರ್ಯ ದಮನಗೊಳ್ಳುವುದಿದೆ.

ಕಲಾಪ್ರಕಾರಗಳು ಮತ್ತು ಮಹಿಳೆ

ಅಲೆಮಾರಿ ಸಮುದಾಯಗಳಲ್ಲಿ ಕಲೆಯನ್ನು ಆಧರಿಸಿದ ಸಮುದಾಯಗಳು ಹೆಚ್ಚಿವೆ. ಅಂತಹ ಸಮುದಾಯಗಳಲ್ಲಿ ಮಹಿಳೆಯು ಕಲಾಪರಂಪರೆಯ ಜತೆ ತನ್ನದೇ ಆದ ಅನುಸಂಧಾನವನ್ನು ಮಾಡುತ್ತಿರುತ್ತಾಳೆ. ಹಲವು ಪ್ರದರ್ಶನಾತ್ಮಕ ಕಲೆಗಳಲ್ಲಿ ಮಹಿಳೆ ವಾದ್ಯಗಳನ್ನು ನುಡಿಸುವಲ್ಲಿ ಪರಿಣಿತಿ ಪಡೆದಿರುತ್ತಾಳೆ. ಸಿಂಧೊಳ್ಳು ಸಮುದಾಯದಲ್ಲಿ ಉರುಮೆ ಬಾರಿಸುವ ಮಹಿಳೆ, ಏಕಕಾಲದಲ್ಲಿ ಗಂಡಿನ ನಿರೂಪಣೆಗೆ ತನ್ನದೇ ಆದ ವಿವರಣೆಗಳನ್ನು ಸೇರಿಸುತ್ತಾ ಕಥನವನ್ನು ಪೂರ್ಣಗೊಳಿಸುತ್ತಾಳೆ.

ದೊಂಬಿದಾಸರ ಸಮುದಾಯದಲ್ಲಿ ರಾತ್ರಿ ಬಯಲಾಟದಂತೆ ದಾಸರಾಟವನ್ನು ಆಡುತ್ತಾರೆ. ಇದೊಂದು ರಂಗಪ್ರಕಾರ. ಇದರಲ್ಲಿ ಹಾಸ್ಯಪ್ರಧಾನತೆ ಹೆಚ್ಚಿರುತ್ತದೆ. ಇಂತಹ ಆಟಗಳಲ್ಲಿ ಹೆಣ್ಣುಮಕ್ಕಳು ಹೆಚ್ಚಾಗಿ ಸಂಗೀತ ಪರಿಕರಗಳನ್ನು ಬಾರಿಸುತ್ತಾರೆ, ಹೆಚ್ಚಾಗಿ ಈ ಸಮುದಾಯದ ಗಂಡಸರು ಹೆಣ್ಣು ವೇಷ ಹಾಕಿಯೆ ದಾಸರಾಟವಾಡುತ್ತಾರೆ. ಜಗಲೂರು ತಾಲೂಕು ಬಂಗಾರಕ್ಕನ ಗುಡ್ಡದ ಬಂಗಾರಮ್ಮ ಈ ಸಮುದಾಯದ ದೊಡ್ಡ ಕಲಾವಿದೆ. ತತ್ವಪದ, ಲಾಲಿಪದ ಹೇಳುವುದರಲ್ಲಿ ಪರಿಣಿತಿ ಇದೆ. ಜಾನಪದ ಅಕಾಡೆಮಿಯ ರಾಜ್ಯಪ್ರಶಸ್ತಿಯೂ ಬಂದಿದೆ.

ಬುಡಗ ಜಂಗಮ ಸಮುದಾಯದಲ್ಲಿ ಬುರ್ರಕಥಾ ಹಾಡುಗಾರಿಕೆ ಪ್ರಮುಖ ಕಲೆಯಾಗಿದೆ. ಬುರ್ರಕಥಾ ಈರಮ್ಮ ಈ ಸಮುದಾಯದ ದೊಡ್ಡ ಕಲಾವಿದೆ. ರಾಜ್ಯಪ್ರಶಸ್ತಿ, ನಾಡೋಜ ಒಳಗೊಂಡಂತೆ ಅನೇಕ ಪ್ರಶಸ್ತಿಗಳು ಸಂದಿವೆ. ಈರಮ್ಮನ ಬಗ್ಗೆಯೇ ಒಂದು ಪಿಹೆಚ್.ಡಿ ಸಂಶೋಧನೆಯೂ ಆಗಿದೆ. ಬಾಲನಾಗಮ್ಮ, ಅಕ್ಕ ನಾಗಮ್ಮ, ನ್ಯಾಸಿ ಚಿನ್ನಮ್ಮ, ಕುಮಾರ ರಾಮ, ಮಾರ್‍ವಾಡಿ ಸೇಟ್ ಮುಂತಾದ ಮಹಾಕಾವ್ಯಗಳಲ್ಲಿ ಹೆಣ್ಣುಮಕ್ಕಳ ದಾರುಣ ಜೀವನವನ್ನು ಕಟ್ಟಿಕೊಡಲಾಗಿದೆ. ಈ ಮಹಾಕಾವ್ಯಗಳನ್ನು ಈರಮ್ಮ ಹಾಡಿದ್ದಾಳೆ.

ಮಹಿಳೆಯರ ಕಲೆಯನ್ನೇ ಆದರಿಸಿದ ಅಲೆಮಾರಿ ಸಮುದಾಯವೆಂದರೆ ಡೊಂಬರ ಸಮುದಾಯ. ಲಾಗ ಹಾಕುವುದು, ತಂತಿ ಅಥವಾ karnataka-tribe-danceಹಗ್ಗದ ಮೇಲೆ ನಡೆಯುವುದು, ತಲೆ ಮೇಲೆ ತಂಬಿಗೆ ಇಟ್ಟು ನಡೆಯುವುದು, ಮಂಡಿಗಾಲ ನಡಿಗೆ, ಕಬ್ಬಿಣ ಬಗ್ಗಿಸುವುದು ಮುಂತಾದ ಆಟಗಳನ್ನು ಡೊಂಬರ ಸಣ್ಣ ಸಣ್ಣ ಹುಡುಗಿಯರು ಮಾಡಿ ನೋಡುಗರನ್ನು ಬೆರಗುಗೊಳಿಸುತ್ತಾರೆ. ಇದು ಕಲೆಯಂತೆಯೇ ಅಪಾಯಕಾರಿ ಸಾಹಸ ಕೂಡ. ಈ ಸಮುದಾಯದ ಕೌಜಲಿಗಿ ನಿಂಗಮ್ಮ ರಂಗಭೂಮಿಯಲ್ಲಿ ದೊಡ್ಡ ಕಲಾವಿದೆ. ಒಂದು ನಾಟಕದ ಕಂಪಮಿಯ ಯಜಮಾನಿಯಾಗಿಯೂ ರಂಗಭೂಮಿಯನ್ನು ಬೆಳೆಸಿದ್ದಾರೆ. ಅಂತೆಯೇ ಸಣ್ಣ ತಿಪ್ಪಮ್ಮ, ನಾಟಕದ ಗಂಗಮ್ಮ, ಎಮ್.ಎನ್.ಲಕ್ಷ್ಮಿದೇವಿ, ಗೌರಮ್ಮ ಕೂಡ ಡೊಂಬರ ಸಮುದಾಯದ ರಂಗಭೂಮಿ ಕಲಾವಿದರಾಗಿದ್ದಾರೆ.

ಹಲವು ಅಲೆಮಾರಿ ಬುಡಕಟ್ಟುಗಳಲ್ಲಿ ಹಚ್ಚೆ ಕಲೆ ಈಗಲೂ ಜೀವಂತವಾಗಿದೆ. ಈ ಹಚ್ಚೆ ಕಲೆಯು ಆಯಾ ಸಮುದಾಯದ ಕಲೆ ಪರಂಪರೆಯನ್ನು ಪ್ರತಿನಿಧಿಸುತ್ತಿರುತ್ತದೆ. ಬಹುಪಾಲು ಅಲೆಮಾರಿ ಸಮುದಾಯಗಳ ಹೆಣ್ಣುಮಕ್ಕಳು ಕೌದಿ ಹೊಲೆಯುವುದನ್ನು ಮುಖ್ಯ ಕಸುಬನ್ನಾಗಿಸಿಕೊಂಡಿದ್ದಾರೆ. ಹೀಗೆ ಕೌದಿ ಹೊಲೆಯುವುದೂ ಕೂಡ ತುಂಬಾ ಕಲಾತ್ಮಕವಾಗಿರುತ್ತದೆ. ಕೌದಿ ಹೊಲೆದಂತೆಯೇ ಈಗ ರೈತರಿಗೆ ಪ್ಲಾಷ್ಟಿಕ್ ಪಾಟುಗಳನ್ನು ಹೊಲೆದುಕೊಡುವುದು ಚಾಲ್ತಿಗೆ ಬಂದಿದೆ. ಹೆಳವರು, ಗೊಂದಲಿಗರು, ಮುಂತಾದ ಸಮುದಾಯಗಳಲ್ಲಿ ಕೌದಿ ಹೊಲೆಯುವುದು ಕಲೆಯೂ ಆಗಿದೆ.

ಆಧುನಿಕ ಉಪಕಸಬುಗಳು ಮತ್ತು ಮಹಿಳೆ

ಅಲೆಮಾರಿ ಸಮುದಾಯಗಳು ನಗರಕ್ಕೆ ಅಂಟಿಕೊಂಡಂತಿರುವುದು ಅವುಗಳ ನಂಬಿದ ಕುಲಕಸಬುಗಳನ್ನು ಬದಲಿಸಿದೆ. ಮುಖ್ಯವಾಗಿ ಅಲೆಮಾರಿಗಳ ವಾಸದ ನೆಲೆ ಪಟ್ಟಣವೇ ಆಗಿದ್ದರೂ, ಪಟ್ಟಣದ ಕೆಲವು ವಸ್ತುಗಳನ್ನು ತೆಗೆದುಕೊಂಡು ಅವುಗಳನ್ನು ಮಾರಾಟ ಮಾಡಲು ಮತ್ತೆ ಹಳ್ಳಿಗಳಿಗೆ ಮರಳುವುದಿದೆ. ಅದರಲ್ಲಿ ಆಧುನಿಕ ಬದುಕಿಗೆ ಹೊಂದಿಕೊಂಡಂತಹ ಉಪವಸ್ತುಗಳ ಸಂಖ್ಯೆ ದೊಡ್ಡದಿದೆ. ಪ್ಲಾಸ್ಟಿಕ್ ಮತ್ತು ಫೈಬರಿನ ಕೊಡ, ಚೆಂಬು, ಬುಟ್ಟಿ, ಮುಂತಾದವುಗಳನ್ನು ಮಾರುತ್ತಾರೆ. ಮಹಿಳೆಯರು ಆಧುನಿಕ ಅಲಂಕಾರಿಕ ಸಾಮಗ್ರಿಗಳಾದ ಹೇರಪಿನ್, ಸೂಜಿ, ದಾರ, ಸ್ನೋ ಪೌಡರ್, ರಿಬ್ಬನ್, ಹಣಿಗೆ, ಕನ್ನಡಿ, ಕುಂಕುಮ, ಕರಡಿಗೆ ಬಟ್ಟಲು ಇತ್ಯಾದಿಗಳನ್ನು ಮಾರಾಟ ಮಾಡಿ ಅಲ್ಪ ಆದಾಯ ಪಡೆಯುತ್ತಾರೆ. ಇಂತಹ ಸಾಮಾನುಗಳನ್ನು ಮಾರಾಟ ಮಾಡಲು ಅಲೆಮಾರಿ ಸಮುದಾಯದ ಮಹಿಳೆಯರು ಹಳ್ಳಿಗಳಿಗೆ ತೆರಳುತ್ತಾರೆ.

ಅಲ್ಯುಮೀನಿಯಂ ಪಾತ್ರೆ ಪರಿಕರಗಳು, ಕೂಡಿಟ್ಟ ಕೂದಲನ್ನು ಪಡೆದು ಅದರ ಬದಲಿಗೆ ಸಣ್ಣಪುಟ್ಟ ಸಾಮಾನುಗಳನ್ನು ಕೊಡುವುದು, ಹರಿದ ಬ್ಯಾಗುಗಳನ್ನು ಹೊಲೆಯುವುದು, ಜಿಪ್ಪುಗಳನ್ನು ಜೋಡಿಸುವುದು, ಮುಂತಾದ ಆಧುನಿಕ ಪರಿಕರಗಳನ್ನು ಮಾರಾಟ ಮಾಡುವ ಸಣ್ಣಪುಟ್ಟ ವ್ಯಾಪಾರಗಳಲ್ಲಿ ಮಹಿಳೆಯರು ತೊಡಗಿದ್ದಾರೆ. ಇನ್ನು ಕೆಲವು ಮಹಿಳೆಯರು ನಗರದಲ್ಲಿಯೇ ಚುರಮುರಿ, ಪೇಡಾ, ಶರಬತ್, ಭರಣಿ, ಕಾಟನ್‌ವೇಸ್ಟ್ ಕಾಜಿನ ಕಪ್ಪು, ಸಾಸರ, ಬಳೆ ವ್ಯಾಪಾರ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಹೀಗೆ ಆಧುನಿಕ ಕಾಲದ ಸಂಗತಿಗಳು ವಸ್ತು ಸಂಸ್ಕೃತಿ ಅಲೆಮಾರಿ ಬುಡಕಟ್ಟುಗಳ ಬದುಕಿನ ಕ್ರಮದಲ್ಲಿ ಒಂದಷ್ಟು ಬದಲಾವಣೆಯನ್ನು ತಂದಿವೆ. ಈ ಬದಲಾವಣೆ ಅವರ ಜೀವನವನ್ನು ಉತ್ತಮಗೊಳಿಸುವ ಬದಲು ಒಂದಷ್ಟು ಉಸಿರಾಡುವಂತೆ ಮಾಡಿದೆಯಷ್ಟೆ.
ಮುಗಿಸುವ ಮುನ್ನ ಹುಟ್ಟುವ ಪ್ರಶ್ನೆಗಳು

ನಾವು ಮಹಿಳೆ ಸಮಸ್ಯೆ ಕುರಿತಾಗಿ ದುಂಡಾಗಿ ಗ್ರಹಿಸುತ್ತೇವೆ. ಇದರಲ್ಲಿರುವ ಹತ್ತಾರು ಒಳಪದರುಗಳನ್ನು ಮುಚ್ಚಿ ಹಾಕುತ್ತೇವೆ. ಹೀಗೆ ದುಂಡಾದ ಗ್ರಹಿಕೆಯ ಹಿನ್ನೆಲೆಯನ್ನು ಆಧರಿಸಿದ ಹೋರಾಟ ಅಥವಾ ಯೋಜನೆಯ ಫಲಿತವೂ ಕೂಡ ಹಲವು ಪದರಗಳಲ್ಲಿ ಮುಚ್ಚಿ ಹೋಗಿರುವ ಮಹಿಳೆಯರ ಸಮಸ್ಯೆಗಳನ್ನು ಪ್ರತಿನಿಧಿಸುತ್ತಿರುವುದಿಲ್ಲ. ಉದಾಹರಣೆಗೆ ಅರಣ್ಯವಾಸಿ ಬುಡಕಟ್ಟುಗಳ ಮಹಿಳೆಗೂ, ಅಲೆಮಾರಿ ಬುಡಕಟ್ಟುಗಳ ಮಹಿಳೆಗೂ ಫರಕುಗಳಿವೆ. ಅಥವಾ ಒಂದಷ್ಟು ಸಾಮ್ಯಗಳಿದ್ದಾಗ್ಯೂ ಕೆಲವು ವಿಶಿಷ್ಟ ಲಕ್ಷಣಗಳೂ ಪ್ರತ್ಯೇಕ ಸಮಸ್ಯೆಗಳೂ ಇವೆ. ಹಾಗಾಗಿ ಮಹಿಳೆ ಎಂದು ಅಧ್ಯಯನ ಮಾಡುವಾಗ ಇಂತಹ ಮಹಿಳೆಯ ಒಳಗೇ ಇರಬಹುದಾದ ನೂರಾರು ಒಳಪದರುಗಳ ಅರಿವಿರಬೇಕಾಗುತ್ತದೆ. ಇಂತಹ ಎಚ್ಚರಗಳನ್ನು ಇಟ್ಟುಕೊಂಡೇ ಬರಹ ಮತ್ತು ಮಾತುಗಳನ್ನು ಆಡಬೇಕಾಗುತ್ತದೆ.

ಈ ಲೇಖನದಲ್ಲಿ ಕರ್ನಾಟಕದ ಅಲೆಮಾರಿ ಬುಡಕಟ್ಟುಗಳ ಮಹಿಳೆಯ ಒಂದು ಚಿತ್ರವನ್ನು ಕಟ್ಟಿಕೊಡಲು ಪ್ರಯತ್ನಿಸಲಾಗಿದೆ. ಇಲ್ಲಿ ಸಾಂಸ್ಕೃತಿಕವಾಗಿ ಕೆಲವು ವಿಶಿಷ್ಟ ಚಹರೆಗಳಿದ್ದಾಗ್ಯೂ ಅಲೆಮಾರಿ ಬುಡಕಟ್ಟಿನ ಮಹಿಳೆಯ ಸಾಮಾಜಿಕ ಚಹರೆಯೆ ಇಂದು ಮುಖ್ಯವಾಗಿ ಚರ್ಚೆಯಾಗಬೇಕಿದೆ. ಅಲೆಮಾರಿ ಬುಡಕಟ್ಟುಗಳು ನಿಧಾನಕ್ಕೆ ಒಂದೆಡೆ ನೆಲೆ ನಿಲ್ಲುವ ಪ್ರಕ್ರಿಯೆಗಳು ಇವೆಯಾದರೂ, ಇನ್ನೂ ಪೂರ್ಣ ಪ್ರಮಾಣದಲ್ಲಿ ಅಲೆಮಾರಿತನ ನಿಂತಿಲ್ಲ. ಅಂತೆಯೇ ಒಂದೆಡೆ ವಾಸಕ್ಕೆ ಸ್ಥಿರ ನೆಲೆಯನ್ನು ಹೊಂದಿಯೂ ವರ್ಷದ ಕೆಲವು ತಿಂಗಳುಗಳು ಕುಟುಂಬದ ಕೆಲವು ಸದಸ್ಯರು ಅರೆ ಅಲೆಮಾರಿತನವನ್ನು ಅವಲಂಬಿಸಿದ್ದಾರೆ. ಹಾಗಾಗಿ ಇಂದು ಅಲೆಮಾರಿತನವೂ ಹೊಸ ಆಯಾಮಗಳನ್ನು ಪಡೆದುಕೊಂಡಿದೆ. ಇಲ್ಲಿ ಅಲೆಮಾರಿತನಕ್ಕೂ ಆಯಾ ಅಲೆಮಾರಿ ಸಮುದಾಯದ ಸಾಂಸ್ಕೃತಿಕ ಚಟುವಟಿಕೆಗಳಿಗೂ ಮತ್ತು ಸಾಮಾಜಿಕ ವೃತ್ತಿಗಳಿಗೂ ನಂಟಿದೆ. ಈ ನಂಟು ಸಡಿಲವಾಗುವ ತನಕ ಅಥವಾ ದುರ್ಭಲವಾಗುವ ತನಕ ಈ ಬಗೆಯ ಅಲೆಮಾರಿತನ ನಿಲ್ಲುವುದಿಲ್ಲ.

ಅಲೆಮಾರಿತನದ ಕಾರಣಕ್ಕೆ ಈ ಸಮುದಾಯಗಳ ಹೆಣ್ಣುಮಕ್ಕಳು ತೆರುವ ಬೆಲೆ ದೊಡ್ಡದಾಗಿದೆ. ಬಾಣಂತಿ ಮಹಿಳೆಯರು, ಗರ್ಭಿಣಿ ಮಹಿಳೆಯರೂ ಅಲೆಮಾರಿತನದಲ್ಲಿ ಬಹುಕಷ್ಟಕ್ಕೆ ಸಿಲುಕುತ್ತಾರೆ. ಅಂತೆಯೇ ತೀರಾ ಚಿಕ್ಕಮಕ್ಕಳ ಲಾಲನೆ ಪಾಲನೆ ಕೂಡ ಅಲೆಮಾರಿ ಜೀವನದಲ್ಲಿ ಕಷ್ಟತೆರನಾದದ್ದು. ಮುಖ್ಯವಾಗಿ ಅಲೆಮಾರಿ ಸಮುದಾಯದ ಪುರುಷರು ಡೇರಿಗಳಲ್ಲಿ ಒಬ್ಬೊಬ್ಬ ಮಹಿಳೆಯರನ್ನೇ ಬಿಟ್ಟು ಹೋಗುವುದಿದೆ. ಇಂತಹ ಸಂದರ್ಭದಲ್ಲಿ ಮಹಿಳೆಯರು ಕಷ್ಟಕ್ಕೆ ಸಿಲುಕುವ ಸಂಗತಿಗಳೂ ಎದುರಾಗುತ್ತವೆ. ಇಂತಹದ್ದೇ ಹಲವಾರು ಸೂಕ್ಷ್ಮ ಸಂಗತಿಗಳ ಮೂಲಕ ಅಲೆಮಾರಿ ಸಮುದಾಯದ ಮಹಿಳೆಯರ ಸಮಸ್ಯೆಗಳ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕಿದೆ. ಆ ಸಮಸ್ಯೆಗಳನ್ನು ಆಧರಿಸಿ ಪರಿಹಾರದಂತಹ ಕಾರ್ಯಗಳನ್ನು ಸರಕಾರ ಕೈಗೊಳ್ಳಬೇಕಿದೆ. ಇದೊಂದು ಸಂಕೀರ್ಣವಾದ ನಡಿಗೆ. ಸೂಕ್ಷ್ಮಾತಿಸೂಕ್ಷ್ಮ ಅಧ್ಯಯನಗಳು ದಾಖಲೀಕರಣ ಮತ್ತು ಅಲೆಮಾರಿ ಸಮುದಾಯಗಳನ್ನು ತಾಯ್ತನದ ಮಮತೆಯಿಂದ ನೋಡಬಲ್ಲ ಗುಣ ಸರಕಾರಕ್ಕೆ ಮತ್ತು ಜನಸಮುದಾಯಗಳಿಗೆ ಬರಬೇಕಾಗಿದೆ.

ಆಕರ ಗ್ರಂಥಗಳು:

  1. ಬೈಲ ಪತ್ತಾರ, ವಿಶ್ವನಾಥ ಎಲ್. ಜಗನ್ನಾಥ ಎಂ, 2008, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
  2. ಕಂಜರ ಭಾಟ, ಜೆ.ವ್ಹಿ. ಬಾಗಡೆ, 2008, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
  3. ಹಕ್ಕಿಪಿಕ್ಕಿ, ಕುಮುದಾ.ಬಿ.ಸುಶೀಲಪ್ಪ, 2008, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
  4. ಗೋಸಂಗಿ, ಅಪ್ಪಾಜಿ ಎಸ್. ಸಿಂಧೆ, ಕೆ.ಚಾವಡೆ ಲೋಕೇಶ್, 2008, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
  5. ಘಿಸಾಡಿ, ಡಾ.ಬಸವರಾಜ ಎಸ್.ಹಿರೇಮಠ, ಅಂಜಲಿ ಸಾಳುಂಕಿ, 2008, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
  6. ಗೋಂಧಳಿ, ಶಿವಾನಂದ ಲ ಪಾಚಂಗಿ, 2008, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
  7. ಸಿಂಧೊಳ್ಳು, ದೊಡ್ಡಮನಿ ಲೋಕರಾಜ, ಶ್ರೀನಿವಾಸ ರಾವುಲೊಳ್, 2008, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
  8. ಬುಡಗ ಜಂಗಮ, ಬಾಲ ಗುರುಮೂರ್ತಿ, ಪ್ರತಾಪ ಬಹುರೂಪಿ, ಗುಡ್ಗಜಂಗಮ, 2008, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
  9. ಬೈಲ ಪತ್ತಾರ, ವಿಶ್ವನಾಥ ಎಲ್. ಜಗನ್ನಾಥ ಎಂ, 2008, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
  10. ದೊಂಬಿದಾಸರು, ಕುಪ್ಪೆ ನಾಗರಾಜ, 2008, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
  11. ಅಲೆಮಾರಿ ಕುರುಬರು, ಡಿ.ಯರ್ರಪ್ಪ, 2008, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
  12. ಡೊಂಬರ ಸಮುದಾಯದ ಸಮಕಾಲೀನ ಅಧ್ಯಯನ, ಡಿ.ಬಿ.ಜ್ಯೋತಿ, 2008, (ಅಪ್ರಕಟಿತ ಸಂಶೋಧನಾ ಪ್ರಬಂಧ) ಕನ್ನಡ ವಿಶ್ವವಿದ್ಯಾಲಯ, ಹಂಪಿ.

21ನೇ ಶತಮಾನದಲ್ಲಿದ್ದರೂ ಹೆಣ್ಣಿನ ವಿಷಯಕ್ಕೆ ಗೋಯಿಂಗ್ ಬ್ಯಾಕ್ ಟ್ರೆಂಡ್

– ಶರ್ಮಿಷ್ಠ 

ಮಹಾಭಾರತ, ರಾಮಾಯಣ ಟೀಕಿಸಿದ ಕೂಡಲೇ ಹಿಂದೂಧರ್ಮವನ್ನು ಅವಹೇಳನ ಮಾಡಲಾಗುತ್ತಿದೆ ಎನ್ನುವ ಕೂಗು ಎಲ್ಲೆಡೆ ಶುರುವಾಗತೊಡಗುತ್ತದೆ. ಆದರೆ ಅದನ್ನು ಒಂದು ವಿಭಿನ್ನ ದೃಷ್ಟಿಕೋನದಿಂದ ನೋಡುವ ವ್ಯವಧಾನ ಯಾರಿಗೂ ಇಲ್ಲ. ತಮ್ಮ ತಮ್ಮ ಮನೆಯ ಬುಡದವರೆಗೂ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಬರುವವರೆಗೂ ಎಲ್ಲಾ ‘ನೈತಿಕ ಮೌಲ್ಯ’ಗಳು ಹಿತವಾಗಿಯೇ ಕೇಳುತ್ತವೆ. ಅಕ್ಕ ಹೇಳುವ ಹಾಗೆ ‘ನೊಂದ ನೋವನ್ನು ನೊಂದವರಲ್ಲದೆ ನೋಯದವರು ಹೇಗೆ ತಾನೇ ಅರಿಯಬಲ್ಲರು?’ ಫೇಸ್‌ಬುಕ್‌ನಲ್ಲಿ ಗಿಡ್ಡ ಸ್ಕರ್ಟ್ ಹಾಕಿರುವ, ಕುಡಿದು ಕುಣಿಯುತ್ತಿರುವ, woman-unchainedಪಬ್‌ಗಳಲ್ಲಿ ನರ್ತಿಸುತ್ತಿರುವ ಹುಡುಗಿಯರ ಚಿತ್ರಗಳನ್ನು ಹಾಕಿ ಇಂಥವರಿಗೆ ರಕ್ಷಣೆ ಬೇಕೆ? ಎಂದು ಹಿಂದೂ ಧರ್ಮದ ಗುತ್ತಿಗೆದಾರರು ಪ್ರಶ್ನೆ ಮಾಡುತ್ತಾರೆ. ಅದು ಮಹಿಳೆಯರಿಗೆ ನಿಷಿದ್ಧವಾದರೆ ಪುರುಷರಿಗೂ ಬೇಡ ಎಂದು ಏಕೆ ಹೇಳಬಾರದು? ಹಿಂದೂ ಧರ್ಮದ ರಕ್ಷಣೆಯ ಭಾರ ಕೇವಲ ಮಹಿಳೆಯರು ಮಾತ್ರ ಹೊತ್ತಿದ್ದಾರೆಯೇ?

ಮಹಾಭಾರತದಲ್ಲಿ ದ್ರೌಪದಿಯ ಸೀರೆಯನ್ನು ಎಳೆಯುವಾಗ ಶ್ರೀಕೃಷ್ಣ ಬಂದು ಸೀರೆ ಕೊಟ್ಟು ‘ಹೀರೋಯಿಸಂ’ ಪ್ರದರ್ಶಿಸುವ ಬದಲು, ‘ಮಹಿಳೆಯ ಗೌರವಕ್ಕೆ ಧಕ್ಕೆ ಉಂಟುಮಾಡಿರುವ ಪಾಂಡವ ಕೌರವರಿಬ್ಬರಿಗೂ ನಿನಗೆ ತೋಚಿದ ಶಿಕ್ಷೆ ಕೊಡು, ನಿನ್ನ ಜೊತೆ ನಾನಿದ್ದೇನೆ ಎಂದಿದ್ದರೆ?’ ತನ್ನನ್ನು ಅಡ ಇಟ್ಟ ಪಾಂಡವರಿಗೂ, ಅವಮಾನ ಮಾಡ ಹೊರಟ ಕೌರವರಿಗೂ ದ್ರೌಪದಿ ಅಂದೇ ಬುದ್ಧಿ ಕಲಿಸಿದಿದ್ದರೆ? ಸ್ತ್ರೀ ಸಬಲೀಕರಣವನ್ನು ಮಾಡಿದ ಪ್ರಥಮ ಪುರುಷ ಕೃಷ್ಣನಾಗುತ್ತಿದ್ದ. ತನ್ನವರನ್ನೇ ಕೊಲ್ಲಲು ಹಿಂಜರಿದ ಅರ್ಜುನನಿಗೆ ಕೃಷ್ಣ ‘ಧರ್ಮ ರಕ್ಷಣೆಯ’ ನೆಪ ಹೇಳುತ್ತಾನೆ. ಹಾಗಿದ್ದಲ್ಲಿ ದ್ರೌಪದಿ ತನ್ನ ಮಾನ ರಕ್ಷಣೆಗಾಗಿ woman-insightಅಲ್ಲಿದ್ದವರಿಗೆ ತಕ್ಕ ಶಿಕ್ಷೆ ಕೊಟ್ಟಿದ್ದರೆ ಅದನ್ನು ಧರ್ಮದ ‘ಕ್ರೈಟೀರಿಯಾ’ಕ್ಕೆ ಖಂಡಿತಾ ಸೇರಿಸಬಹುದಿತ್ತಲ್ಲವೇ? ಕಾಳಿದಾಸನ ಶಾಕುಂತಲೆ ಕೂಡ ಈಗಿನ ಕಾಲದ ‘ಫೇರ್ ಆಂಡ್ ಲವ್ಲಿ ಗರ್ಲ್’ ಅಷ್ಟೆ. ಅವಳೊಂದು ಸೌಂದರ್ಯದ ಪ್ರತೀಕ ಇವತ್ತಿನ ಜಾಹೀರಾತು ಜಗತ್ತಿನ ಅರ್ಥವಿಲ್ಲದ ಸೌಂದರ್ಯವೇ ಸರ್ವಸ್ವ ಜಾಹೀರಾತಿನ ಹಾಗೆ. ಯಾವ ಸ್ವಂತಿಕೆಯೂ ಇಲ್ಲ. ಪತಿವ್ರತಾ ಧರ್ಮ ಪಾಲನೆಗೆಂದು ಗಾಂಧಾರಿ ಕಣ್ಣಿಗೆ ಪಟ್ಟಿ ಕಟ್ಟಿಕೊಳ್ಳದೆ ತನ್ನ ಮಕ್ಕಳನ್ನು ನೀತಿವಂತರನ್ನಾಗಿ ಬೆಳೆಸಿದ್ದರೆ, ಮಹಾಭಾರತದಲ್ಲಿ ಕೌರವರು ‘ವಿಲನ್’ಗಳೇ ಆಗುತ್ತಿರಲಿಲ್ಲ.

ಹೀಗೆ ಎಷ್ಟೋ ತರ್ಕಗಳನ್ನು ಕೊಡುತ್ತಾ ಹೋಗಬಹುದು. ಆದರೆ ಅದೆಲ್ಲ ಕುತರ್ಕ ಅನಿಸಿಕೊಳ್ಳುವ ಅಪಾಯಗಳೇ ಜಾಸ್ತಿ. ಬರೆದವರು ಹಿಂದೂ ಧರ್ಮ ವಿರೋಧಿ ಎಂದು ಹಣೆಪಟ್ಟಿ ಹಚ್ಚಿಕೊಂಡುಬಿಡಬಹುದು. ಆದರೆ ಒಂದು ವಿಷಯವನ್ನು ಮಾತ್ರ ಒಪ್ಪಿಕೊಳ್ಳಲೇಬೇಕು. ಹಿಂದೂ ಧರ್ಮದಲ್ಲಿ ನನಗೆ ನನಗನ್ನಿಸಿದನ್ನು ಹೇಳುವ ಸ್ವಾತಂತ್ರ್ಯವಾದರೂ ಇದೆ. ನನ್ನ ಬೆಂಬಲಕ್ಕೆ ಹತ್ತಾರು ದನಿಗಳು ಕೈಗೂಡಬಹುದು. ಅದರೆ ಮುಸ್ಲಿಂ ಧರ್ಮದ ಮಹಿಳೆಯರಿಗೆ? 5-6 ವರ್ಷದ ಚಿಕ್ಕ ಮಕ್ಕಳಿಗೂ ಬುರ್ಖಾ ಹಾಕಿಸುವ ಸಂಪ್ರದಾಯ ಮಕ್ಕಳ ಬಾಲ್ಯ ಕಸಿದುಕೊಳ್ಳುತ್ತಿದೆ ಎಂದು ನನಗನಿಸುತ್ತಿದೆ. ಅರ್ಥವಿಲ್ಲದ ಫತ್ವಾಗಳು ಅದನ್ನು ಪ್ರಶ್ನಿಸದೆ ಒಪ್ಪಿಕೊಳ್ಳುವ ವಿದ್ಯಾವಂತ ಸಮುದಾಯ ಅದನ್ನು ಧರ್ಮದ ಹೆಸರಿನಲ್ಲಿ ಬಲವಂತವಾಗಿ ಹೆಣ್ಮಕ್ಕಳ ಮೇಲೆ ಹೇರುತ್ತಿದೆ. inidan-muslim-womanಜನನಾಂಗ ಛೇಧನದಂತಹ ಸುದ್ದಿಯನ್ನು ಓದಲೂ ಹಿಂಸೆಯಾಗುತ್ತಿದೆ. ಅಂಥದರಲ್ಲಿ ಅದಕ್ಕೆ ಈಡಾಗುವ ಮಹಿಳೆಯರ ಸಂಕಷ್ಟವನ್ನು ಊಹಿಸಿಕೊಳ್ಳುವುದೂ ಅಸಾಧ್ಯ. ರಮ್ಜಾನ್‌ನ ಪ್ರಯುಕ್ತ ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ಕೆಲವು ಮಕ್ಕಳು ಪ್ರಾರ್ಥನೆ ಸಲ್ಲಿಸುತ್ತಿರುವುದರ ಚಿತ್ರ ಪ್ರಕಟವಾಗಿತ್ತು. ಅದರಲ್ಲಿ ಬಹುಶ: 4 ಹಾಗು 7 ವರ್ಷದ ಹೆಣ್ಣು ಮಕ್ಕಳಿಬ್ಬರು ಬುರ್ಖಾ ಧರಿಸಿದ್ದರು. ಈ ಚಿತ್ರಗಳನ್ನು ಪ್ರಕಟಿಸುವ ಮೂಲಕ ನಾವೇನು ಹೇಳ ಹೊರಟಿದ್ದೇವೆ? ಅದು ಏನನ್ನು ಬಿಂಬಿಸುತ್ತಿದೆ. ಆ ಚಿಕ್ಕ ಪ್ರಾಯದ ಮಕ್ಕಳಿಗೆ ಬುರ್ಖಾ ಯಾಕೆ ಹಾಕುತ್ತಿದ್ದೀರಾ? ದಯವಿಟ್ಟು ತಿಳಿಸಿ.

ಇತ್ತೀಚೆಗೆ ಒಂದು ಆಭರಣದ ಜಾಹೀರಾತು ನೋಡಿದೆ. ಅಪ್ಪ ಮಗಳಿಗೆ ಚಿನ್ನ ಕೊಡಿಸಿದ ಕಾರಣಕ್ಕೆ ಅವನು ಗಂಡನಿಗಿಂತ ಆಕೆಗೆ ಪ್ರಿಯನಾಗುತ್ತಾನೆ. ಅದಕ್ಕೆ ಆಕೆ ತನ್ನ ಹೆಸರಿನ ಜೊತೆಗೆ ಅಪ್ಪನ ಹೆಸರನ್ನೇ ಇಟ್ಟುಕೊಳ್ಳುತ್ತಾಳೆಯೇ ಹೊರತು ಗಂಡನ ಹೆಸರನ್ನು ಇಟ್ಟುಕೊಳ್ಳುವುದಿಲ್ಲ. ಇಲ್ಲಿ ಆಕೆ ಹೆಸರು ಬದಲಾಯಿಸದೇ ಇರುವುದಕ್ಕೆ ಕಾರಣ ‘ಚಿನ್ನ’ವೇ ಹೊರತು ಅಪ್ಪನ ಮೇಲಿನ ಪ್ರೀತಿ ಆಗಲಿ ಆಕೆಯ ಸ್ವಾಭಿಮಾನವಾಗಲಿ ಅಲ್ಲ. ಇನ್ನು ಧಾರವಾಹಿಗಳು ಶುರುವಾಗುವುದೇ ಹಿರೋಯಿನ್ ಮನೆಯವರಿಗೆಲ್ಲ ಬೆಡ್ ಕಾಫಿ ಕೊಡುವ ಮೂಲಕ. ಆಗ ಆಕೆ ಆದರ್ಶ ಗೃಹಿಣಿ. ಯಾವ ಗಂಡು ಪಾತ್ರವೂ ಅಡುಗೆ ಮನೆಗೆ ಬಂದು ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡೋಣ. ನೀನು ಅಡಿಗೆ ಮಾಡು ನಾನು ಪಾತ್ರೆ ತೊಳಿತೇನೆ ಅನ್ನುವುದಿಲ್ಲ. ಬೆಡ್ ಕಾಫಿ ಬೇಡ ನೀನು ಕಾಫಿ ಆದ ಮೇಲೆ ಕರೆ ನಾನು ನೀನಿದ್ದಲ್ಲಿಗೇ ಬರುತ್ತೇನೆ ಅನ್ನುವುದಿಲ್ಲ. ಒಳ್ಳೆಯ ಸರ್ವೆಂಟ್‌ನ ಹಾಗೆ ಹಿರೋಯಿನ್ ಕೆಲಸ ಮಾಡುತ್ತಿದ್ದರೆ, ಗಂಡು ಪಾತ್ರಧಾರಿಗಳು ಬಾಯಿತುಂಬ ಹೊಗಳುತ್ತವೆಯೇ ಹೊರತು, ಎಲ್ಲ ಕೆಲಸ ನೀನೆ ಯಾಕೆ ಮಾಡಬೇಕು, ನೀನು ಕೆಲಸದವಳಲ್ಲ, ನಮ್ಮ ತಟ್ಟೆ ಲೋಟ ನಾವೇ ತೊಳೆದುಕೊಳ್ಳತ್ತೇವೆ, ನಿನಗೆ ಸಹಾಯ ಮಾಡುತ್ತೇವೆ ಅನ್ನೋ ಮಾತನ್ನು ಆಡೋದೇ ಇಲ್ಲ, ಅವಳ ವ್ಯಕ್ತಿತ್ವವನ್ನು ಗೌರವಿಸೋದು ಇಲ್ಲ. ಸಿನಿಮಾಗಳ ಮಾತೇ ಬೇಡ. ಅಲ್ಲಿ ‘ಹಿರೋಯಿನ್ ಇಸಮ್’ ಗೆ ಜಾಗವೇ ಇಲ್ಲ.

ಇನ್ನು ಇವತ್ತಿನ ‘ಬದಲಾದ’ ಪ್ರಪಂಚವೋ ಅಲ್ಲಿ ಹೆಣ್ಣು ಕೆಲಸಕ್ಕೆ ಹೋಗಿ ಸಂಪಾದಿಸಬಹುದು ಆದರೆ ಆಕೆಗೆ ಸ್ವತಂತ್ರ ವ್ಯಕ್ತಿತ್ವ ಇರಬಾರದು. ಬೆಳಗ್ಗೆ ಹೋಗಿ ಸಂಜೆ ಬರಬೇಕು ಕೆರಿಯರ್ ಇಂಪ್ರುಮೆಂಟ್, ಔಟ್ ಸ್ಟ್ಯಾಂಡಿಂಗ್ ಅಚಿವ್‌ಮೆಂಟ್‌ಗಳೆಲ್ಲ ಆಕೆಗೆ ನಿಷಿದ್ಧ. ಪ್ರೊಗ್ರೆಸ್ಸಿವ್ ಥಿಂಕಿಂಗ್, Indian-policewomanಆದರ್ಶಗಳಂತೂ ಇರಲೇ ಬಾರದು. ಇದೆಲ್ಲ ಅಲಿಖಿತವಾಗಿರುವ ಹೆಣ್ಮಕ್ಕಳ ಮೇಲೆ ಹೇರಲ್ಪಟ್ಟ ನಿಯಮಗಳು. ಇದನ್ನು ನೀವು ಮೀರಿದರೆ ನೀವು ಅತ್ತೆ ಮನೆಗೆ ನಾಲಾಯಕ್ ಸೊಸೆ. ಗಂಡು ಮಗನ ಆದರ್ಶಗಳು ಅದು ಎಷ್ಟೇ ವಿವೇಚನಾರಹಿತವಾಗಿದ್ದರೂ ಅದೇ ತಾಯಿ ‘ನನ್ನ ಮಗನಿಗಾಗಿ’ ಅಂಥ ಎಲ್ಲಾ ರಾಜಿಗಳನ್ನು ಮಾಡಿಕೊಳ್ಳುತ್ತಾಳೆ. ಮನೆಯ ಎಲ್ಲಾ ಹೆಣ್ಮಕ್ಕಳು ಆತನ ಆದರ್ಶವನ್ನು ಎದುರಾಡದೆ ಅನುಸರಿಸಿಕೊಂಡು ಹೋಗಬೇಕು. ಕೆಲವು ಪತ್ರಿಕೆಗಳೂ ತಮ್ಮ ವಿಶೇಷ ಪುರವಣಿಗಳ ಮೂಲಕ ಈ ‘ಸಾರ್ಥಕ ಗೃಹಿಣಿ’ ಯ ತತ್ವಗಳನ್ನು ಬಿತ್ತುವ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಿವೆ. ಆದರೆ ಹೆಣ್ಣಾಗಿ ನಿಮಗೆ ಯಾವ ಆದರ್ಶಗಳೂ ಇರಕೂಡದು ನೀವು ಅದಕ್ಕೆ ಎಲಿಜಿಬಲ್ ಅಲ್ಲ. ಅದು ಅಹಂಕಾರ. ಮಗ ಉನ್ನತ ವ್ಯಾಸಾಂಗ ಮಾಡುತ್ತಾನೆ ಎಂದರೆ ತಾಯಿ ಅವನ ಕೆಲಸದಾಕೆಯೋ ಎಂಬಂತೆ ಆತನ ಎಲ್ಲಾ ಚಾಕರಿಗಳನ್ನು ಮಾಡುತ್ತಾ ಆತನ ಉನ್ನತಿಗಾಗಿ ಶ್ರಮಿಸುತ್ತಾಳೆ. ಆದರೆ ಹೆಣ್ಣು ಮನೆಯ ಜವಾಬ್ದಾರಿಯನ್ನು ಆಫೀಸಿನ ಎಲ್ಲಾ ಹೊಣೆಯೊಂದಿಗೂ ಸಮರ್ಪಕವಾಗಿ ನಿರ್ವಹಿಸಿಕೊಂಡು ಹೋದರೆ ಮಾತ್ರ ವ್ಯಾಸಾಂಗ ಮುಂದುವರೆಸಬಹುದು. ಹೆಣ್ಣುಮಕ್ಕಳಿಗೆ ಯಶಸ್ಸು ಸಿಕ್ಕಿದರೆಷ್ಟು ಬಿಟ್ಟರೆಷ್ಟು. ಇನ್ನು ಟೆಕ್ಕಿಗಳ ಕೆಲಸ ಅತ್ಯಾಧುನಿಕ ಕಂಪ್ಯೂಟರ್‌ನಲ್ಲಾದರೂ ಅವರು ಮದುವೆ ಆಗುವ ಹುಡುಗಿಗೆ ಜಾತಕ ನೋಡುವುದು ಕಡ್ಡಾಯ. ಮಡಿ ಮೈಲಿಗೆ ಗೊತ್ತಿರಬೇಕು. ಇದು ಹೆಣ್ಣಿಗಾಗಿ ಬದಲಾಗಿರುವ ‘ಉದಾತ್ತ’ ಪ್ರಪಂಚ.

21 ನೇ ಶತಮಾನದಲ್ಲಿದ್ದೇವೆ. ಆದರೂ ನಮ್ಮಲ್ಲಿ ಅದೊಂಥರಾ ‘ಗೋಯಿಂಗ್ ಬ್ಯಾಕ್ ಟ್ರೆಂಡ್’ ಕಾಣಿಸುತ್ತಿದೆ. ಮನಸುಗಳು ಬದಲಾಗದ ಹೊರತು, ಹೆಣ್ಣನ್ನು ನೋಡುವ ರೀತಿಯನ್ನು ಹೆಣ್ಣೇ ಬದಲಾಯಿಸಕೊಳ್ಳದ ಹೊರತು ಯಾವ ಬದಲಾವಣೆಯೂ ಸಾಧ್ಯವಿಲ್ಲ. ಪ್ರತಿಯೊಬ್ಬ ಅಮ್ಮ ತನ್ನ ಮಗನನ್ನು ಹೆಣ್ಣಿನ ವಿಷಯದಲ್ಲಿ ಸಂವೇದನಾಶೀಲನನ್ನಾಗಿ ಮಾಡಹೊರಟರೆ ಸಾಕು ನಾಳೆಗಳು ಆಶಾದಾಯಕವಾಗಿರುತ್ತವೆ

ಸೈಬರ್ ರೇಪ್ ಮಟ್ಟಹಾಕಿ – ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ

ಮೊನ್ನೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ದಶಕಗಳಿಂದ ಜನಪರ, ಮಹಿಳಾಪರ ಹೋರಾಟಗಳಲ್ಲಿ ಕ್ರಿಯಾಶೀಲರಾಗಿರುವ prabha-belavangala-postಎನ್.ಪ್ರಭಾ ಒಂದು ಸ್ಟೇಟಸ್ ಹಾಕಿದ್ದರು. ಹಲವು ಜನರ ಸಂಶೋಧನೆ-ಪ್ರಯತ್ನದ ಫಲವಾಗಿ ಉಪಗ್ರಹ, ರಾಕೆಟ್, ಮಂಗಲಯಾನ, ಚಂದ್ರಯಾನಗಳಂತಹ ವೈಜ್ಞಾನಿಕ ಆವಿಷ್ಕಾರಗಳಾಗಿರುವ ಕಾಲದಲ್ಲಿ ಮಂತ್ರತಂತ್ರಹೋಮಹವನ ಎಂದು ಪುರೋಹಿತಶಾಹಿಗಳು ಹಳ್ಳಿಯಿಂದ ದಿಲ್ಲಿ ದರಬಾರಿನವರೆಗೂ ಹರಡಿಕೊಂಡಿರುವುದು ಆಧುನಿಕ ಸಮಾಜದ ದುರಂತ ಎಂದು ಬಣ್ಣಿಸಿದ್ದರು. ಈ ಟೀಕೆಯಿಂದ ಕೆರಳಿದ ವಿ.ಆರ್. ಭಟ್ ಎಂಬ ವ್ಯಕ್ತಿ ಕೂಡಲೇ ‘ಎದೆಗೆ ಬಿದ್ದ ಅಕ್ಷರಗಳನ್ನು ಹೇಳಿದ ಓರಾಟಗಾರ್ತಿ’ಗೆ ಯಾರಾದರೂ ಒಬ್ಬ ರೇಪಿಸ್ಟ್ ಜುಟ್ಟು ಹಿಡಿದು ರೇಪ್ ಮಾಡಬೇಕೆಂದು ಅಪ್ಪಣೆ ಕೊಡಿಸಿದ!

ಗಮನಿಸಿ, ಯಾರೋ ಅನಾಮಧೇಯ ಹೀಗೆ ಬರೆಯಲಿಲ್ಲ. ಓದಿ ನೌಕರಸ್ಥನಾಗಿ ಮಧ್ಯವಯಸ್ಸು ದಾಟುತ್ತಿರುವ ಒಬ್ಬ ಸುಶಿಕ್ಷಿತ ವ್ಯಕ್ತಿ ಎಲ್ಲರೂ ಓದಲೆಂದು ಬಹಿರಂಗವಾಗಿ ಹೀಗೆ ಕಮೆಂಟಿಸಿದ್ದ. ಆತನನ್ನು ಬೆಂಬಲಿಸಿ ಹಲವರು ಮತ್ತಷ್ಟು ಬರೆದರು.

ದಶಕಗಳಿಂದ ಸಾರ್ವಜನಿಕ ಜೀವನದಲ್ಲಿ ತೊಡಗಿಕೊಂಡ ಮಹಿಳೆ ನೇರವಾಗಿ ಪ್ರಶ್ನಿಸಿದ್ದಕ್ಕೆ ಬಂದ ದುಷ್ಟ ಪ್ರತಿಕ್ರಿಯೆಗಳನ್ನು ಗಮನಿಸಿದರೆ ಸೈಬರ್ ಲೋಕಕ್ಕೆ ಅಮರಿಕೊಂಡ ಸನಾತನ ಸಂಸ್ಕೃತಿಯೆಂಬ ವೈರಸ್‌ನ ಪರಿಚಯವಾಗುತ್ತದೆ. ಪುರಾತನ ನಾಗರಿಕತೆಯ ಈ ಮಹಾನ್ ದೇಶ ಮಹಿಳೆ ‘ಭಾರತೀಯ ನಾರಿ’ಯಂತಿದ್ದರೆ ಕಿರೀಟಗಳ ತಲೆಗೆ ಕಟ್ಟುತ್ತದೆ. ಅದೇ ವಾಸ್ತವದ ಹುಳುಕುಗಳ ತೋರಿಸತೊಡಗಿದರೆ ಕೆರಳಿ ಮಾನಭಂಗಕ್ಕೆ ಯತ್ನಿಸುತ್ತದೆ.

ಆದರೆ ‘ಹೆಂಗಸ್ರದ್ದು ಹೆಚ್ಚಾಯ್ತು’ ಎಂದು ಹೆಚ್ಚಾದದ್ದನ್ನು ಕಡಿಮೆ ಮಾಡಲು ಚಡ್ಡಿ ಬಿಚ್ಚಿ ಹೊರಟಿರುವ ಈ ಎಲ್ಲ ಬಾಲಕರಿಗೆ ಹೆದರಬಾರದು. ಬದಲಾಗಿ ಅವರನ್ನು ಪೂರಾ ಬೆತ್ತಲಾಗಿಸಿ, ಅವರು ಸೇರಬೇಕಾದvr-bhat ಜಾಗ ತಲುಪಿಸುವುದೊಂದೇ ಈಗ ಉಳಿದಿರುವ ದಾರಿ. ‘ಹಿತ ವಚನ, ಮಿತ ವಚನ, ಮೃದು ವಚನ’ಗಳನ್ನು ಪ್ರತಿಪಾದಿಸುವ ಸನಾತನಿಗಳ ಮುಖವಾಡ ಕಳಚುವ; ಶೀಲ-ಅಶ್ಲೀಲಗಳ, ಮಾನ-ಅವಮಾನದ ವ್ಯಾಖ್ಯೆ ಬದಲಿಸುವ ಜವಾಬುದಾರಿಯೂ ನಮ್ಮ ಮೇಲೇ ಇದೆ. ಇಲ್ಲದಿದ್ದರೆ ಮತ್ತೆ ಮರ್ಯಾದೆಗಂಜಿ ಮೌನಕ್ಕೆ ಶರಣಾದ ತ್ರೇತಾಯುಗದ ರಾಮರಾಜ್ಯಕ್ಕೆ ಮರಳಬೇಕಾಗುತ್ತದೆ.

ಮಹಿಳಾ ಒಕ್ಕೂಟವು ಈ ಸಂದರ್ಭದಲ್ಲಿ ಸೈಬರ್ ಅತ್ಯಾಚಾರ ಬೆದರಿಕೆಗೆ ಒಳಗಾದ ಅಸಂಖ್ಯ ಹೆಣ್ಣುಮಕ್ಕಳು ಹಾಗೂ ಅವರ ಬೆದರಿಕೆಗೆ ಮಣಿಯದೆ ನಿಂತು ಕೇಸು ಹಾಕಿರುವ ದಿಟ್ಟ ಗೆಳತಿಯ ಪರವಾಗಿ ನಿಲ್ಲುತ್ತದೆ. ಜೊತೆಗೆ ರೇಪ್ ಎಂಬ ಹುಚ್ಚುನಾಯಿ ಕಡಿತಕ್ಕೊಳಗಾದ ಸಮಾಜಕ್ಕೆ ಸೂಕ್ತ ಚಿಕಿತ್ಸೆ ನೀಡಿ ಸೈಬರ್ ಅತ್ಯಾಚಾರ ಎಸಗಿದವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಬಯಸುತ್ತದೆ.

– ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ

ಅತ್ಯಾಚಾರ: ಅಕ್ಷರ ಕಾಣದ ಎದೆಗಳ ಅಸ್ತ್ರ

– ಶಿವರಾಮ್ ಕೆಳಗೋಟೆ

ಔಟ್ ಲುಕ್ ಪತ್ರಿಕೆಯ ಇತ್ತೀಚಿನ ಸಂಚಿಕೆ ವಿಶೇಷವಾಗಿದೆ. ಉತ್ತರಪ್ರದೇಶದ ಮುಝಫರ್‌ನಗರದಲ್ಲಿ ಕಳೆದ ವರ್ಷ ಕೋಮುಗಲಭೆಗಳ ಸಮಯದಲ್ಲಿ ಅತ್ಯಾಚಾರಕ್ಕೀಡಾದ ಮಹಿಳೆಯರನ್ನು ಕುರಿತ ವರದಿ ಇದೆ. ಕೋಮು ಗಲಭೆಗಳ ನಂತರ ಧೈರ್ಯವಾಗಿ ಅತ್ಯಾಚಾರ ಆದ ಬಗ್ಗೆ ಪೊಲೀಸರಿಗೆ ದೂರು ನೀಡಿ ಹೋರಾಟ ಮಾಡುತ್ತಿದ್ದಾರೆ. ಬಹುಸಂಖ್ಯಾತ ಕೋಮಿನ ಹುಡುಗರು ಅಲ್ಪಸಂಖ್ಯಾತರೆಡೆಗೆ ತಮಗಿರುವ ಆಕ್ರೋಷವನ್ನು outlook-coverpage-rapeವ್ಯಕ್ತಪಡಿಸಲು ಅನುಸರಿಸಿದ ಒಂದು ಸಾಧನ ಅತ್ಯಾಚಾರ.

ಹಿಂದೂ ಹುಡುಗಿಯನ್ನು ಒಬ್ಬ ಮುಸ್ಲಿಂ ಹುಡುಗ ಚುಡಾಯಿಸಿದ ಎಂದು ಸುದ್ದಿ ಹಬ್ಬುತ್ತದೆ. ಹುಡುಗಿಯ ಸಹೋದರರು ಆ ಹುಡುಗನನ್ನು ಹುಡುಕಿ ಕೊಲ್ಲುತ್ತಾರೆ. ಕೊಂದ ಹುಡುಗರನ್ನು ಹತನಾದ ಹುಡುಗನ ಕಡೆಯವರು ಕೊಲ್ಲುತ್ತಾರೆ. ಹಾಗೆ ಹುಟ್ಟಿಕೊಂಡ ಗಲಭೆಗಳು 72 ಜನರ ಪ್ರಾಣ ತೆಗೆದುಕೊಳ್ಳುತ್ತವೆ. ಅಷ್ಟೇ ಅಲ್ಲ ಅನೇಕ ಮಹಿಳೆಯರು, ಮುಖ್ಯವಾಗಿ ಅಲ್ಪಸಂಖ್ಯಾತ ಮಹಿಳೆಯರು, ಸಾಮೂಹಿಕ ಅತ್ಯಾಚಾರಕ್ಕೆ ಈಡಾಗುತ್ತಾರೆ. ಅವರಲ್ಲಿ ಕೆಲವೇ ಕೆಲವರು ಪೊಲೀಸ್ ಕೇಸು ದಾಖಲಿಸುವ ಧೈರ್ಯ ಮಾಡಿದ್ದಾರೆ. ಘಟನೆಗಳು ನಡೆದು ಏಳೆಂಟು ತಿಂಗಳಾದರೂ, ಯಾವ ಪ್ರಕರಣದಲ್ಲೂ ಪೊಲೀಸರು ಚಾರ್ಜ್‌ಶೀಟ್ ಹಾಕಿಲ್ಲ ಇದುವರೆಗೂ.

ಹೀಗೆ ಬಯಲಿಗೆ ಬಂದ ಪ್ರಕರಣಗಳಲ್ಲಿ, ಮೂರು ಹೆಣ್ಣು ಮಕ್ಕಳ ಎದುರಿಗೇ ಸಾಮೂಹಿಕ ಅತ್ಯಾಚಾರಕ್ಕೀಡಾದ, ದಾಳಿ ಮಾಡಲು ಬಂದ ಗುಂಪಿನಿಂದ ಓಡಿಹೋಗಿ ತಪ್ಪಿಸಿಕೊಳ್ಳಲಾಗದೆ ಸಿಕ್ಕುಬಿದ್ದು ನೋವುಂಡ ಮಹಿಳೆಯರಿದ್ದಾರೆ. ಐದು ವರ್ಷದ ಮಗನನ್ನು ದಾಳಿಕೋರರಿಂದ ಬಚಾವು ಮಾಡಲು ಗಂಡ ಮಗನೊಂದಿಗೆ ತಾರಸಿಗೆ ಓಡಿಹೋದಾಗ ಹೆಂಡತಿ ದಾಳಿಗೆ ತುತ್ತಾಗುತ್ತಾಳೆ.

ಈ ಘಟನೆಗಳಿಂದ ಆ ಕುಟುಂಬಗಳು ಎದುರಿಸಿದ ಪರಿಣಾಮಗಳು ವಿಷಾದಕರ. ಒಬ್ಬ ಮಹಿಳೆ ಹೇಳುತ್ತಾಳೆ, ಮೊದಲೆಲ್ಲಾ ಗಂಡನೊಂದಿಗೆ ಯಾವುದೇ ವಿಚಾರಕ್ಕೆ ಜಗಳ ಆಡುವಂತಹ ಸಂದರ್ಭ ಬಂದರೆ ನಾನೂ ಜೋರಾಗಿಯೇ ವಾದಕ್ಕಿಳಿಯುತ್ತಿದ್ದೆ. ಆದರೆ ಈಗ ಹಾಗಿಲ್ಲ. ಈ ಘಟನೆ ನನ್ನ ಬಾಯನ್ನು ಕಟ್ಟಿಹಾಕಿದೆ. ಈ ಕಾರಣಕ್ಕಾಗಿಯೇ ನನ್ನ ಗಂಡ ನನ್ನೊಂದಿಗೆ ಮುನಿಸಿಕೊಂಡಿರಬಹುದೇ ಎನ್ನಿಸಿ ಮೌನಿಯಾಗುತ್ತೇನೆ. ಇಷ್ಟೆಲ್ಲದರ ಮೇಲೆ, ಪದೇ ಪದೇ ಆರೋಪಿ ಕಡೆಯ ಜನ ಭೇಟಿ ನೀಡಿ ದೂರು ಹಿಂಪಡೆಯಲು ಒತ್ತಡ ಹಾಕುತ್ತಾರೆ, ಹಣದ ಆಮಿಷ ಒಡ್ಡುತ್ತಾರೆ. ಒಪ್ಪುವುದಿಲ್ಲ ಎಂದರೆ ಮನೆಯಲ್ಲಿನ ಇತರೆ ಹರೆಯ ಹೆಣ್ಣು ಮಕ್ಕಳ ಪಾಡೂ ಇದೇ ಆಗುತ್ತದೆ ಎಂದು ಧಮಕಿ ಹಾಕುತ್ತಾರೆ.

ಕರ್ನಾಟಕದ ಎಷ್ಟೋ ಊರುಗಳಲ್ಲಿ ದಲಿತ ಮಹಿಳೆಯರನ್ನು ಮೇಲ್ವರ್ಗದ ಜನ ಬೆತ್ತಲೆ ಪೆರೇಡ್ ನಡೆಸಿದ್ದಾರೆ. dalit-woman-paraded-nakedಅನೇಕ ಪ್ರಕರಣಗಳಲ್ಲಿ ಹಾಗೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಕೆಲವು ವರ್ಷಗಳ ಹಿಂದೆ ಇಂತಹದೇ ಒಂದು ಪ್ರಕರಣ ಬಯಲಿಗೆ ಬಂದಿತ್ತು. ಆಗ ಮಹಿಳೆ ಕೆಲ ಮಾಧ್ಯಮದವರ ಮುಂದೆ ಮಾತನಾಡುತ್ತಾ ಇಡೀ ಊರ ಜನರ ಮುಂದೆ ಬೆತ್ತಲಾದ ನೋವನ್ನು ಕಣ್ಣೀರಿನೊಂದಿಗೆ ಹಂಚಿಕೊಂಡಿದ್ದಳು. ಹಾಸನ ಜಿಲ್ಲೆಯ ಒಂದು ಹಳ್ಳಿಯಲ್ಲಿ ಇತ್ತೀಚೆಗೆ ವರದಿಯಾದಂತೆ ಒಬ್ಬ ಮಹಿಳೆಯ ಸೀರೆಯನ್ನು ನಡುಬೀದಿಯಲ್ಲಿ, ಅದೂ ಸಾರ್ವಜನಿಕವಾಗಿ ಶಾಂತಿ ಸಭೆ (ಗಲಭೆ ನಂತರ ಏರ್ಪಟ್ಟಿದ್ದ) ನಡೆಯುವ ಸಂದರ್ಭದಲ್ಲಿ ಎಳೆಯುವ ದುಷ್ಟತನಕ್ಕೆ ಆ ಊರಿನ ಕೆಲವರು ಮುಂದಾಗಿದ್ದರು.

ಹಣವಂತ, ಬಲಿಷ್ಟ ಸಮುದಾಯದವರು ಕೆಳ ಸ್ತರದವರನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಬಳಸುವ ಹಲವು ಅಸ್ತ್ರಗಳಲ್ಲಿ ಅತ್ಯಾಚಾರವೂ ಒಂದು. ಗುಜರಾತಿನಲ್ಲಿ ನಡೆದ ಗಲಭೆಗಳಲ್ಲಿ ನೂರಾರು ಹೆಣ್ಣು ಮಕ್ಕಳು ಅತ್ಯಾಚಾರಕ್ಕೀಡಾದರು ಎಂಬ ವರದಿಗಳಿವೆ. ಅಲ್ಲಿ ಅಂತಹ ಕೃತ್ಯ ಮಾಡಿರುವವರ ಮನಸ್ಸು ಹೇಗೆ ಯೋಚಿಸುತ್ತದೆ ಎನ್ನುವುದಕ್ಕೆ ಈಗಷ್ಟೆ ಫೇಸ್ಬುಕ್‌ನಲ್ಲಿ ಕಾಮೆಂಟ್ ಹಾಕಿದ ಕಾರಣಕ್ಕೆ ಕೇಸು ಎದುರಿಸುತ್ತಿರುವ ಪುರುಷ ಮಹಾಶಯನ ಉದಾಹರಣೆ ಸಾಕು. ವೈಜ್ಞಾನಿಕ ತಳಹದಿಯ ಮೇಲೆ ಮಂಡಿಸಿದ ವಿಚಾರವನ್ನು ಒಪ್ಪಿಕೊಳ್ಳಲಾಗದ ಪುರೋಹಿತಶಾಹಿ ಮನಸ್ಸು ‘ಇಂತಹವರ ಜುಟ್ಟು ಹಿಡಿದು ರೇಪ್ ಮಾಡಿದರೆ ಸರಿಯಾಗುತ್ತದೆ..’ ಎನ್ನುತ್ತದೆ. ಅವನ ಪ್ರಕಾರ ಎದೆಗೆ ಬಿದ್ದ ಅಕ್ಷರ ಓದಿಕೊಂಡವರಿಗೆಲ್ಲಾ ಇದೇ ಗತಿಯಾಗಬೇಕು! ಅವನ ಮನಸ್ಸಿನಲ್ಲಿ ಕೊಳಕು ಎಷ್ಟಿರಬಹುದು! vr-bhatಬಹುಶಃ ಇಂತಹವರಿಗೆ ಅಕ್ಷರ ಹೇಳಿಕೊಟ್ಟವರು ‘ಅ’ ಎಂದಾಗ ಅರಸ ಅಥವಾ ಅಮ್ಮ ಅಥವಾ ಅಕ್ಕ ಎಂದು ಹೇಳುವ ಬದಲು ‘ಅತ್ಯಾಚಾರ’ ಎಂದು ಹೇಳಿಕೊಟ್ಟಿರಬೇಕು. ನೋ ಡೌಟ್, ಇಂತಹದೇ ಆಲೋಚನೆಯ ವ್ಯಕ್ತಿಗಳು ಗಲಭೆಗಳ ಸಂದರ್ಭದಲ್ಲಿ ಬೀದಿಗಿಳಿದು ಅತ್ಯಾಚಾರದ ಮೂಲಕ ತಮಗಾಗದವರಿಗೆ ‘ಪಾಠ’ ಕಲಿಸುವ ಹುಮ್ಮಸ್ಸು ಪ್ರದರ್ಶಿಸುತ್ತಾರೆ.

ಕರ್ನಾಟಕದಲ್ಲಿ ಇತ್ತೀಚೆಗೆ ಅತ್ಯಾಚಾರ, ಮಹಿಳೆ ಮೇಲಿನ ದೌರ್ಜನ್ಯಗಳ ಬಗ್ಗೆ ಎಲ್ಲೆಲ್ಲೂ ಚರ್ಚೆ ನಡೆಯುತ್ತಿದೆ. ದಿನಗಟ್ಟಲೆ ಮಾಧ್ಯಮದ ಅಂಗಳದಲ್ಲಿ ಚರ್ಚೆ ನಡೆದವು. ಪೊಲೀಸ್ ಇಲಾಖೆಯವರು ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಇಷ್ಟರ ಮಟ್ಟಿಗೆ ಸಾರ್ವಜನಿಕ ವಲಯಗಳಲ್ಲಿ ಚರ್ಚೆ, ಸಂವಾದಕ್ಕೆ ಕಾರಣವಾಗಿದ್ದು ಅತ್ಯಾಚಾರ ಪ್ರಕರಣಗಳಿಗೆ ಮಾಧ್ಯಮ ನೀಡಿದ ಮಹತ್ವ. ಆದರೆ ಮಾಧ್ಯಮ ಅಂಗಳದಲ್ಲಿ ಚರ್ಚೆಗೆ ವಸ್ತುವಾಗಿದ್ದು ಬೆಂಗಳೂರಿನಲ್ಲಿ ನಡೆದ ಘಟನೆಗಳಷ್ಟೆ. ಇತರ ಊರುಗಳಲ್ಲಿ ಬೆಳಕಿಗೆ ಬಂದ ಪ್ರಕರಣಗಳ ಬಗೆಗಿನ ಚರ್ಚೆಗೆ ‘ಮಾರ್ಕೆಟ್’ ಇಲ್ಲ. ಅತ್ಯಾಚಾರ ಪ್ರಕರಣವೊಂದು ಬೆಳಕಿಗೆ ಬಂದ ನಂತರ ಬೆಂಗಳೂರಿನಲ್ಲಿರುವ ಮಾಧ್ಯಮ ಕಚೇರಿಗಳ ವರದಿಗಾರರ ಡೆಸ್ಕ್ ನಲ್ಲಿ ಚರ್ಚೆಗೆ ಬರುವ ವಿಚಾರ ‘ಹೈ ಪ್ರೊಫೈಲಾ..?’ ಕ್ರೈಮ್‌ಗೆ ತುತ್ತಾದವರು ಖಾಸಗಿ ಶಾಲೆಯ ವಿದ್ಯಾರ್ಥಿ ಅಥವಾ ಟೆಕ್ಕಿ ಆದರೆ ಅಂತಹ ಪ್ರಕರಣಗಳನ್ನು ‘ಹೈ ಪ್ರೊಫೈಲ್’ ಎಂದು ಪರಿಗಣಿಸುವುದು ರೂಢಿ. ಇಲ್ಲವಾದರೆ, ‘ಸಿಂಗಲ್ ಕಾಲಂ ಸಾಕು!’.

ಜಾತಿಯ ಕಾರಣಕ್ಕೆ, ವಿಭಿನ ಆಲೋಚನೆ ಅಥವಾ ಬದುಕುವ ರೀತಿಯ ಕಾರಣಕ್ಕೆ ಮಹಿಳೆಯರು ಅMuzaffarnagar-riotsತ್ಯಾಚಾರಕ್ಕೀಡಾಗುವ ಅನೇಕ ಪ್ರಕರಣಗಳು ಸಿಂಗಲ್ ಕಾಲಂನಲ್ಲಿ ಸತ್ತು ಹೋಗುತ್ತವೆ. ಪ್ರತಿ ಜಿಲ್ಲೆಯಲ್ಲಿಯೂ ಇಂತಹ ಅನೇಕ ಪ್ರಕರಣಗಳು ವರದಿಯಾಗಿವೆ. ಕೆಲವೆಡೆ ಆರೋಪಿ ಕಡೆಯವರು ದೂರುದಾರರನ್ನು ಹೆದರಿಸಿ ಮುಚ್ಚಿಹಾಕಿರುವ ಪ್ರಕರಣಗಳೂ ಇವೆ. ಇದೇ ಊರಿನಲ್ಲಿ ಬಾಳಿ ಬದುಕಬೇಕು. ಮದುವೆ ಆಗೋ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರ ವಿರುದ್ಧ ಜಗಳ ಕಾಯೋಕೆ ಆಗುತ್ತಾ. ಇವತ್ತು ಕೇಸು ಕೊಟ್ಟರೆ, ನಾಳೆ ಅವರ ಹೊಲಕ್ಕೆ ಕೂಲಿಗೆ ಕರೀತಾರ, ಅಂಗಡೀಲಿ ಸಾಮಾನು ಕೊಡ್ತಾರ..? ಇದು ಯಾರೊ ಒಬ್ಬರ ಮಾತಲ್ಲ. ಅನ್ಯಾಯಕ್ಕೊಳಗಾದ ಅನೇಕ ಕುಟುಂಬಗಳ ಸಂಕಟದ ಅಭಿವ್ಯಕ್ತಿ.

ಆಧುನಿಕ ಜಗತ್ತಿನ ಹುಚ್ಚು ! ಹುಚ್ಚುತನ ! ಹುಚ್ಚುತನ!

– ಬಿ. ಶ್ರೀಪಾದ ಭಟ್

1957 ರಲ್ಲಿ ತೆರೆಕಂಡ, ಏಳು ಆಸ್ಕರ್ ಪ್ರಶಸ್ತಿಗಳನ್ನು ಗಳಿಸಿದ ಡೇವಿಡ್ ಲೀನ್ ನಿರ್ದೇಶನದ “The Bridge on the River Kwai” ಸಿನಿಮಾದ ಕಡೆಯ ದೃಶ್ಯದಲ್ಲಿ ಬ್ರಿಟೀಷ್ ಯುದ್ಧ ಕೈದಿಗಳು ಅಪಾರ ಪರಿಶ್ರಮದಿಂದ ಕಟ್ಟಿದ ಸೇತುವೆ ವಿಧ್ವಂಸಕ ಕೃತ್ಯಕ್ಕೆ ಬಲಿಯಾಗಿ ಧ್ವಂಸಗೊಂಡು, ಆ ಮೂಲಕ ಹಾದು ಬರುತ್ತಿದ್ದ ಟ್ರೇನ್ ಅಪಘಾತಕ್ಕೀಡಾಗುತ್ತದೆ.ಅಲ್ಲಿಗೆ ಧಾವಿಸಿ ಬಂದ ಮಿಲಿಟರಿ ಡಾಕ್ಟರ್ ಕ್ಲಿಪ್ಟನ್ “Madness! Madness! Madness!” ಎಂದು ತೀವ್ರ ಹತಾಶೆಯಿಂದ ಉದ್ಗರಿಸುತ್ತಾನೆ. The_Bridge_on_the_River_Kwai_posterಹೌದು ಈ ಸಿನಿಮಾದ ಎರಡು ಮುಖ್ಯ ಪಾತ್ರಗಳಾದ ಬ್ರಿಟೀಷ್ ಆರ್ಮಿಯ ಕರ್ನಲ್ ನಿಕಲ್ಸನ್ ( ಅಲೆಕ್ ಗಿನಿಸ್) ಮತ್ತು ಜಪಾನ್ ಆರ್ಮಿಯ ಕರ್ನಲ್ ಸೈಟೋ ( ಹಯಕವ) ತಮ್ಮ ವರ್ತನೆಗಳಿಂದ ಹುಚ್ಚರಂತೆಯೇ ಕಾಣಿಸುತ್ತಾರೆ. ಆದರೆ ಈ ಶಬ್ದಗಳ ನಿಜವಾದ ಅರ್ಥವೂ ಸಹ ಡೇವಿಡ್ ಲೀನ್‌ನ ಇನ್ನಿತರ ಸಿನಿಮಾಗಳಂತೆಯೇ ನೇರವಾಗಿ ಇಂತದ್ದೇ ಎಂದು ಹೇಳುವುದೇ ಇಲ್ಲ. ಏಕೆಂದರೆ ಇಡೀ ಸಿನಿಮಾದ ಕಥಾ ಹಂದರವೇ ನಿರ್ದಿಷ್ಟ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಮೇಲ್ನೋಟಕ್ಕೆ ತೋಚಿದರೂ ಸಹ ನಿಜದ ಅರ್ಥದಲ್ಲಿ ಚಿತ್ರಕತೆಯು ತರ್ಕಬದ್ಧವಾಗಿ ತನ್ನ ಗತಿಯನ್ನು ಬದಲಿಸುತ್ತಿರುತ್ತದೆ. 1943 ರ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜಪಾನ್ ಮಿಲಿಟರಿಯ ಕೈಗೆ ಯದ್ಧ ಕೈದಿಗಳಾಗಿ ಬಂಧಿತರಾಗುವ ಬ್ರಿಟೀಷ್ ಆರ್ಮಿಯ ಸೈನಿಕರು ಮತ್ತು ಅವರ ಕರ್ನಲ್ ನಿಕಲ್ಸನ್ ಅವರಿಗೆ Kwai ನದಿಗೆ ಸೇತುವೆಯನ್ನು ಕಟ್ಟುವ ಜವಬ್ದಾರಿಯನ್ನು ಹೊರಿಸಲಾಗುತ್ತದೆ. ಇಲ್ಲಿಂದಲೇ ಮನುಷ್ಯನ ವರ್ತನೆ, ಪ್ರಕ್ಷುಬ್ಧತೆ, ಭಯದ, ತಿಕ್ಕಲುತನದ ಹುಚ್ಚುತನಗಳು ಪ್ರಾರಂಭಗೊಳ್ಳುತ್ತವೆ. ಇಲ್ಲಿ ನಿರ್ದೇಶಕ ಲೀನ್ ಇದು ಸರಿ, ಅದು ತಪ್ಪುಗಳ ಗೊಡವೆಗೇ ಹೋಗದೆ ಮನುಷ್ಯರ ವೈಯುಕ್ತಿಕ ವರ್ತನೆಗಳನ್ನು ನಿರೂಪಿಸುವುದರ ಮೂಲಕ ಪ್ರೇಕ್ಷಕರಿಗೇ ಆ ನಿರ್ಧಾರ ಬಿಡುತ್ತಾನೆ. ಹೌದು ಇದು ಲೀನ್‌ನ ಟಿಪಿಕಲ್ ಶೈಲಿ. (‘ಪ್ಯಾಸೇಜ್ ಟು ಇಂಡಿಯಾ’ ಸಿನಿಮಾದಲ್ಲಿ ಬ್ರಿಟೀಷ್ ಸಂಜಾತೆ ಅಡಿಲಾ ಭಾರತದ ಗುಹೆಗಳಲ್ಲಿ ಒಬ್ಬಂಟಿಯಾಗಿ ಒಳಹೊಕ್ಕು ಕೆಲ ಸಮಯದ ನಂತರ ಮೈಕೈ ರಕ್ತ ಮಾಡಿಕೊಂಡು ಕಿರುಚುತ್ತಾ ಹೊರಗೆ ಓಡಿ ಬರುತ್ತಾಳೆ. ಹಾಗಿದ್ದರೆ ಗುಹೆಯೊಳಗೆ ಆಗಿದ್ದಾರೂ ಏನು? ಲೀನ್ ಏನನ್ನೂ ಹೇಳುವುದಿಲ್ಲ. ಪಾತ್ರಗಳೂ ಏನನ್ನೂ ಹೇಳುವುದಿಲ್ಲ. ಸಾಂಧರ್ಬಿಕ ಘಟನೆಗಳೇ ಇಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತವೆ.)

‘ಜಪಾನ್‌ನ ಯುದ್ಧ ಕೈದಿಗಳಾಗಿಯೇ, ಅದರ ನಿಯಮಗಳನ್ನು ಮುರಿಯದೆಯೇ Kwai ನದಿಗೆ ನಾವು ಸೇತುವೆಯನ್ನು ಕಟ್ಟುತ್ತೇವೆ, ಆದರೆ ಅದು ನಮ್ಮ ಸ್ವಂತದ ವಿನ್ಯಾಸ ಮತ್ತು ಅನುಭವಗಳನ್ನು ಆಧರಿಸಿರುತ್ತದೆ. ಆ ಸೇತುವೆ ನನ್ನ ಮೇಲ್ವಿಚಾರಣೆಯಲ್ಲಿ ಕಟ್ಟಲ್ಪಡುತ್ತದೆ’ ಎನ್ನುವ ದೃಢ ನಿರ್ಧಾರವನ್ನು ಬಂಧನದಲ್ಲಿರುವ ಕರ್ನಲ್ ನಿಕಲ್ಸನ್ ಜಪಾನೀ ಕರ್ನಲ್ ಸೈಟೋಗೆ ನೇರವಾಗಿ ದಿಟ್ಟತನದಿಂದ ಹೇಳುತ್ತಾನೆ. bridge-river-kwai-ಆದರೆ ಇದನ್ನು ತಿರಸ್ಕರಿಸುವ ಜಪಾನ್ ಕರ್ನಲ್ ಸೈಟೋ ಇಡೀ ಸೇತುವೆ ನಿರ್ಮಾಣವು ನಮ್ಮ ಮೇಲ್ವಿಚಾರಣೆಯಲ್ಲಿ ನಡೆಯಬೇಕು. ಬ್ರಿಟೀಷ್ ಮಿಲಿಟರಿಯ ಎಲ್ಲಾ ಯುದ್ಧ ಕೈದಿಗಳು ಈ ಸೇತುವೆ ನಿರ್ಮಾಣದಲ್ಲಿ ಭಾಗವಹಿಸಬೇಕು ಎಂದು ಸರ್ವಾಧಿಕಾರದ ಗತ್ತಿನಲ್ಲಿ ಆದೇಶಿಸುತ್ತಾನೆ. ಆದರೆ ಇದನ್ನು ಘನತೆಯಿಂದಲೇ ತಿರಸ್ಕರಿಸುವ ಕರ್ನಲ್ ನಿಕಲ್ಸನ್ ಜಿನೀವಾ ಒಪ್ಪಂದದ ಪ್ರತಿಯನ್ನು ಓದುತ್ತಾ ಅದರ ಕರಾರಿನ ಅನುಸಾರವಾಗಿ ಸೈನಿಕರು ಮಾತ್ರ ಸೇತುವೆ ನಿರ್ಮಾಣದಲ್ಲಿ ತೊಡಗುತ್ತಾರೆ, ಅಧಿಕಾರಿಗಳು ಅವರ ಮೇಲ್ವಿಚಾರಣೆ ವಹಿಸುತ್ತಾರೆ ಎಂದು ವಾದಿಸುತ್ತಾನೆ. ಇದಕ್ಕೆ ಸೊಪ್ಪು ಹಾಕದ ಕರ್ನಲ್ ಸೈಟೋ ಜಿನಿವಾ ಒಪ್ಪಂದದ ಪ್ರತಿಯನ್ನು ಹರಿದು ನಿಕಲ್ಸನ್ ಮುಖಕ್ಕೆ ರಕ್ತ ಬರುವಂತೆ ಬಾರಿಸಿ ಅವಮಾನಿಸುತ್ತಾನೆ. ಕರ್ನಲ್ ನಿಕಲ್ಸನ್‌ನನ್ನು ಶಿಕ್ಷೆಯಾಗಿ ಕಬ್ಬಿಣದ ಗುಡಿಸಲಿನಲ್ಲಿ ಬಂಧನದಲ್ಲಿರಿಸುತ್ತಾನೆ. ಆದರೆ ತನ್ನ ನೈತಿಕತೆ, ಮೌಲ್ಯಗಳೊಂದಿಗೆ ರಾಜಿ ಮಾಡಿಕೊಳ್ಳದ ಕರ್ನಲ್ ನಿಕಲ್ಸನ್ ಈ ಕಠಿಣ ಶಿಕ್ಷೆಯನ್ನು ಅನುಭವಿಸುತ್ತಾನೆ. ಆರಂಭದ ಸುಮಾರು ಅರ್ಧಗಂಟೆಯ ಈ ದೃಶ್ಯಗಳು ಲೀನ್‌ನ ಬಿಗಿಯಾದ ನಿರ್ದೇಶನಕ್ಕೆ ಸಾಕ್ಷಿಯಾಗುತ್ತವೆ. ಈ ಯಶಸ್ಸಿಗೆ ಚಿತ್ರಕತೆಯೂ ಸಹಕರಿಸಿದೆ.

ಕರ್ನಲ್ ನಿಕಲ್ಸನ್ ಮತ್ತು ಕರ್ನಲ್ ಸೈಟೋ ಅವರ ಮುಖಾಮುಖಿಯ ಇಡೀ ದೃಶ್ಯಾವಳಿಗಳು ಮತ್ತು ಅವರ ವರ್ತನೆಗಳನ್ನು bridgeoriverkwaiಅವಲಂಬಿಸಿ ನಡೆಯುವ ಚಿತ್ರದ ಇನ್ನಿತರ ಸನ್ನಿವೇಶಗಳು, ಘಟನೆಗಳಿಂದಾಗಿ “Madness! Madness! Madness!” ಎನ್ನುವ ಕ್ಲೈಮಾಕ್ಸ್ ವಾಕ್ಯಗಳ ಅನುಭವವು ನಮಗೆ ಆರಂಭಕ್ಕೆ ದಕ್ಕತೊಡಗುತ್ತದೆ. ನಿಗದಿತ ಅವಧಿಯೊಳಗೆ ಸೇತುವೆ ನಿರ್ಮಾಣವಾಗದಿದ್ದರೆ ತನ್ನ ತಲೆ ಹಾರುವುದು ಎನ್ನುವ ಆತಂಕ ,ಒತ್ತಡದಲ್ಲಿರುವ ಕರ್ನಲ್ ಸೈಟೋ ಕಡೆಗೆ ಅದು ಕರಾರುವಕ್ಕಾಗಿ, ಅತ್ಯುತ್ತಮವಾಗಿ ನಿರ್ಮಾಣಗೊಂಡು ಕಡೆಗೆ ಕರ್ನಲ್ ನಿಕಲ್ಸನ್ ತನಗಿಂತಲೂ ಉತ್ತಮ ಸೇತುವೆ ನಿರ್ಮಾಪಕ ಎಂದು ಸಾಬೀತಾಗತೊಡಗಿದಾಗ ಕರ್ನಲ್ ಸೈಟೋ ಒಬ್ಬಂಟಿಯಾಗಿ ಕತ್ತಲಲ್ಲಿ ಹುಚ್ಚನಂತೆ ರೋದಿಸತೊಡುಗುತ್ತಾನೆ. ಆ ಕ್ಷಣದಲ್ಲಿ ಅವನಿಗೆ ಹುಚ್ಚುತನ ಮತ್ತು ಆತ್ಮಹತ್ಯೆ ಇವೆರಡರ ನಡುವೆ ಅಂತಹ ವ್ಯತ್ಯಾಸವೇ ಇರುವುದಿಲ್ಲ. ಈ ದೃಶ್ಯದಲ್ಲಿ ನಿರ್ದೇಶಕ ಲೀನ್ ಸುತ್ತಲೂ ಶಾಂತತೆ ಇದ್ದರೂ ಆ ಕೂಡಲೇ ಭೂಕಂಪವಾಗುವ ಆತಂಕದಂತಹ ಪರಿಸ್ಥಿತಿಯನ್ನು, ಭವಿಷ್ಯದ ಅನಿಶ್ಚತೆಯನ್ನು ಸೃಷ್ಟಿಸಿಬಿಡುತ್ತಾನೆ. ಅದೂ ಕರ್ನಲ್ ಸೈಟೋ ಪಾಲಿಗೆ ಮಾತ್ರ!! ಹುರಿದ ದನದ ಮಾಂಸ, ಸ್ಕಾಚ್ ವಿಸ್ಕಿಯನ್ನು ಇಷ್ಟಪಡುವ ಕರ್ನಲ್ ಸೈಟೋಗೆ ಸಾಧನೆಯ ವಾಸ್ತವತೆ ಕಣ್ಣೆದುರಿಗಿದ್ದರೂ ತಾನು ಮಾತ್ರ ಮೃತ್ಯುವಿನ ದವಡೆಗೆ ಬಾಗಿಲು ಬಡೆಯುವ ಸ್ಥಿತಿಗೆ ತಳ್ಳಲ್ಪಟ್ಟಿರುವುದು ಕಂಗೆಡಿಸುತ್ತದೆ. ಇದೆಂತಹ Madness!

ಮತ್ತೊಂದು ಕಡೆ ತನ್ನ ಆರ್ಮಿ ಜೀವನದ 28 ವರ್ಷಗಳನ್ನು ನಿಯಮಬದ್ಧವಾಗಿ ಪೂರೈಸಿದ ಕರ್ನಲ್ ನಿಕಲ್ಸನ್, ಅದರ ಕುರಿತಾಗಿ ಅಪಾರವಾದ ಹೆಮ್ಮೆ ಇರುವ ಕರ್ನಲ್ ನಿಕಲ್ಸನ್ Kwai ನದಿಗೆ ಸೇತುವೆಯನ್ನು ತನ್ನ ಯುದ್ಧ ಕೈದಿಗಳಾದ ಸೈನಿಕರ ನೆರವಿನಿಂದ ನಿಗದಿತ ಅವಧಿಯೊಳಗೆ ಕಟ್ಟುತ್ತಾನೆ. ಆ ಸೇತುವೆಗೆ “ಬ್ರಿಟೀಷ್ ಸೈನಿಕರಿಂದ ನಿರ್ಮಾಣಗೊಂಡ ಸೇತುವೆ” ಎಂದು ನಾಮಫಲಕ ತೂಗು ಹಾಕಿಸುತ್ತಾನೆ. ಡಾಕ್ಟರ್ ಕ್ಲಿಪ್ಟನ್ ನಾವು ಸೇತುವೆ ಕಟ್ಟುವುದರ ಮೂಲಕ ಶತೃಗಳಿಗೆ ನೆರವಾಗುತ್ತಿದ್ದೇವಲ್ಲವೇ ಎಂದು ಅನುಮಾನ ವ್ಯಕ್ತಪಡಿಸಿದಾಗ ಕರ್ನಲ್ ನಿಕಲ್ಸನ್ ಅಲ್ಲಗೆಳಿಯುತ್ತಾ ‘ಇಲ್ಲ, ಯುದ್ಧ ಕೈದಿಗಳು ನಿಯಮಾವಳಿಯ ಪ್ರಕಾರ ಆದೇಶವನ್ನು ಪಾಲಿಸಬೇಕು, ಅಲ್ಲದೆ ಮುಂದೆ ಒಂದು ದಿನ ಯುದ್ಧವು ಕೊನೆಗೊಳ್ಳುತ್ತದೆ. ನಂತರ ಜನಸಾಮಾನ್ಯರು ಶತಮಾನಗಳ ಕಾಲ ಈ ಸೇತುವೆಯನ್ನು ಬಳಸುತ್ತಾರೆ. ಆಗ ಅವರು ಜೀತದಾಳುಗಳನ್ನಲ್ಲ ಬದಲಾಗಿ ಬ್ರಿಟೀಷ್ ಆರ್ಮಿಯನ್ನು ನೆನೆಸುತ್ತಾರೆ. ನಮ್ಮ ವಿನಯವಂತಿಕೆ, ಮಾನವೀಯತೆಯು ದಾಖಲಾಗುತ್ತದೆ’ ಎಂದು ವಿವರಿಸುತ್ತಾನೆ. ಈ ಸೇತುವೆ ಕುರಿತಾಗಿ ನಿಕಲ್ಸನ್ ಎಷ್ಟೊಂದು ಮೋಹಿತನಾಗುತ್ತಾನೆಂದರೆ ಕಡೆಗೆ ಯುದ್ಧವನ್ನೇ ಮರೆತುಬಿಡುತ್ತಾನೆ.

ಕರ್ನಲ್ ನಿಕಲ್ಸನ್ ಆಗಿ ಅಲೆಕ್ ಗಿನಿಸ್ನ ನಟನೆ ಅದ್ಭುತ. ಅತ್ಯುತ್ತಮ ನಟನಾಗಿ ಆಸ್ಕರ್ ಪ್ರಶಸ್ತಿ ಗಳಿಸುವ ಅಲೆಕ್ ಗಿನಿಸ್ ಕರ್ನಲ್ ನಿಕಲ್ಸನ್ ಪಾತ್ರವನ್ನು ಅಂತರ್ಮುಖಿಯಾಗಿ, ಆದರೆ ಸದಾ ಚಡಪಡಿಕೆಯ ವ್ಯಕ್ತಿತ್ವವಾಗಿ ಸಂಪೂರ್ಣವಾಗಿ underplay ನಟನೆಯ ಮೂಲಕ ನಮ್ಮೆಲ್ಲರ ಮನ ಗೆಲ್ಲುತ್ತಾನೆ.

ಮತ್ತೊಂದು ಕಡೆ ಅಮೇರಿಕನ್ ಯುದ್ಧ ಕೈದಿ ಶಿಯರ್ಸ್ ಜಪಾನ್ ಶಿಬಿರದ ಬಂಧನದಿಂದ ತಪ್ಪಿಸಿಕೊಂಡು ಪರಾರಿಯಾಗುವ ಸಂದರ್ಭದಲ್ಲಿ ಶ್ರೀಲಂಕಾದಲ್ಲಿ ಬ್ರಿಟೀಷ್ ಆರ್ಮಿಯ ಕೈಗೆ ಸಿಕ್ಕಿಕೊಳ್ಳುತ್ತಾನೆ. ಆಲ್ಲಿನ ಮೇಜರ್ ವಾರ್ಡನ್ ಶಿಯರ್ಸ್‌ನನ್ನು ಒತ್ತಾಯಿಸಿ ಮರಳಿ ಜಪಾನ್ ಶಿಬಿರಕ್ಕೆ ಕರೆದೊಯ್ಯುವಂತೆ ಒತ್ತಾಯಿಸುವಲ್ಲಿ ಯಶಸ್ವಿಯಾಗುತ್ತಾನೆ. ತನ್ನ ಇನ್ನಿಬ್ಬರು ಕರ್ನಲ್‌ಗಳು ಮತ್ತು ಶಿಯರ್ಸ್‌ನೊಂದಿಗೆ Kwai ನದಿಗೆ ಕಟ್ಟಲ್ಪಟ್ಟ ಸೇತುವೆಯನ್ನು ಧ್ವಂಸಗೊಳಿಸಲು ಗೆರಿಲ್ಲಾ ಮಾದರಿಯ ಯುದ್ಧ ತಂತ್ರವನ್ನು ರೂಪಿಸುತ್ತಾನೆ. ಅಲ್ಲಿಗೆ ಕ್ಲೈಮಾಕ್ಸ್ ಬಂದು ತಲುಪುತ್ತದೆ. ಒಂದು ಕಡೆ ಬ್ರಿಟೀಷ್ ಯುದ್ಧ ಕೈದಿಗಳು ಕರ್ನಲ್ ನಿಕಲ್ಸನ್ ನೇತೃತ್ವದಲ್ಲಿ Kwai ನದಿಗೆ ಸೇತುವೆಯನ್ನು ಕಟ್ಟುವುದರ ಮೂಲಕ ತಮ್ಮ ವೃತ್ತಿಪರತೆ ಮತ್ತು ಮಾನವೀಯತೆಯನ್ನು ನಿಭಾಯಿಸುತ್ತಿದ್ದರೆ ಮತ್ತೊಂದು ಕಡೆ ಬ್ರಿಟೀಷ್ ಆರ್ಮಿಗೆ ಸೇರಿದ ಮೇಜರ್ ವಾರ್ಡನ್ ತನ್ನ ದೇಶ ಇಂಗ್ಲೆಂಡ್‌ನ ಯುದ್ಧದ ಕಾರ್ಯತಂತ್ರದ ಭಾಗವಾಗಿಯೇ ತನ್ನ ಶತೃವಾದ ಜಪಾನ್ ಮಿಲಿಟಿರಿಯ ಸೇತುವೆಯನ್ನು ಧ್ವಂಸಗೊಳಿಸಲು ಗೆರಿಲ್ಲಾ ಮಾದರಿಯ ರಣತಂತ್ರವನ್ನು ರೂಪಿಸುತ್ತಾನೆ. ಇಲ್ಲಿ ನ್ಯಾಯ, ಅನ್ಯಾಯದ ಚರ್ಚೆಯನ್ನು ನಿರ್ದೇಶಕ ಲೀನ್ ಕೈಗೆತ್ತಿಕೊಳ್ಳುವುದೇ ಇಲ್ಲ. ಮನುಷ್ಯರ ವರ್ತನೆಗಳೇ ಪ್ರ್ರಾಧಾನ್ಯತೆ ವಹಿಸಿಬಿಡುತ್ತವೆ. the-bridge-on-the-river-kwaiಅಲ್ಲಿ ಹಿಂಸೆಯ ಮತ್ತೊಂದು ಜಗತ್ತು ಅನಾವರಣಗೊಳ್ಳುತ್ತದೆ. ಈ ರುದ್ರಪ್ರಹಸನದಲ್ಲಿ ಭಾಗವಹಿಸಿದ ಎಲ್ಲರೂ ನಟರಾಗಿದ್ದರೂ ಕಡೆಗೆ ಸ್ವತಃ ಅಸಹಾಯಕಾರಾಗಿ ತಮ್ಮ ಪಾತ್ರಗಳೊಂದಿಗೆ ತಾವೇ ಪ್ರೇಕ್ಷಕರಾಗಿ ಮುಖಾಮುಖಿಯಾಗಿ ನಿಲ್ಲುವುದು ನಮ್ಮನ್ನು ಬೆಚ್ಚಿಬೀಳಿಸುತ್ತದೆ ಮತ್ತು ಈ ವರ್ತನೆಗಳು ಹುಚ್ಚು! ಹುಚ್ಚುತನ! ಎನ್ನುವಲ್ಲಿಗೆ ಬಂದು ಮುಟ್ಟುತ್ತವೆ. ಚಿತ್ರ, ವಿಚಿತ್ರವಾದ ತಿರುವುಗಳಿಗೆ ಬಲಿಯಾಗಿ ಕರ್ನಲ್ ನಿಕಲ್ಸನ್ ತನಗರಿವಿಲ್ಲದೆಯೇ ತಾನು ಕಟ್ಟಿದ ಸೇತುವೆಯ ಧ್ವಂಸಕ್ಕೆ ಸ್ವತಃ ತಾನೇ ಕೈಯಾರೆ ಕಾರಣನಾಗಿ ಸಾಯುವುದು ಮತ್ತೊಂದು ದುರಂತ!! ಇಲ್ಲಿ ಜೀವನದ ಸರಳ ರೂಪುಗಳು ತಮಗರಿವಿಲ್ಲದಂತೆಯೇ ವಕ್ರಗೊಳ್ಳುತ್ತವೆ. ಇಲ್ಲಿ ನಿರ್ದೇಶಕ ಲೀನ್ ಯಾವ ಯಾತನೆಯನ್ನು ದಾಖಲಿಸುತ್ತಿದ್ದಾನೆ? ಮನುಷ್ಯನ ಆಶೆ, ಪರಿಶ್ರಮ, ಸಾಧನೆ ಎಲ್ಲವೂ ಕಡೆಗೆ ವಿನಾಶದ ಹಾದಿಯಲ್ಲಿ ಸಾಗುತ್ತ ಶೂನ್ಯದಲ್ಲಿ ಅಂತ್ಯಗೊಳ್ಳುತ್ತದೆ ಎಂದು ಹೇಳುತ್ತಿದ್ದಾನೆಯೇ?? ಇಲ್ಲ, ಲೀನ್ ನೇರವಾಗಿ ಏನನ್ನೂ ಹೇಳುವುದಿಲ್ಲ.ಕಡೆಗೆ ಉಳಿಯುವುದು “Madness! Madness! Madness!”

ಇಂದು ಇಸ್ರೇಲ್ ಸರ್ಕಾರ ಗಾಜಾ ಪಟ್ಟಿಯಲ್ಲಿ ನೆಲೆಸಿರುವ ಪಾಲೆಸ್ಟೇನ್ ನಾಗರಿಕರ ಮೇಲೆ ಬಾಂಬ್ ದಾಳಿ ನಡೆಸಿ 600ಕ್ಕೂ ಹೆಚ್ಚು ನಾಗರಿಕರನ್ನು ಹತ್ಯೆ ಮಾಡಿದೆ, ಮಾಡುತ್ತಿದೆ. ಇಸ್ರೇಲ್‌ನ ಗಾಡ್‌ಫಾದರ್ ಅಮೇರಿಕಾ ಅದಕ್ಕೆ ಸಂರಕ್ಷಣೆಯ ಹೆಸರಿನಲ್ಲಿ ಬೆಂಬಲ ನೀಡಿದೆ. ಗಾಜಾ ಪಟ್ಟಿಯಲ್ಲಿ ಆಡಳಿತ ನಡೆಸುತ್ತಿರುವ ಮಿಲಿಟರಿ ಗುಂಪು ಹಮಾಸ್ ಪಕ್ಷವನ್ನು ಭಯೋತ್ಪಾದಕರೆಂದೇ ಏಕಪಕ್ಷೀಯವಾಗಿ ಕರೆದ ಇಸ್ರೇಲ್ ತನ್ನ ಮೂವರು ಯೋಧರನ್ನು ಹಮಾಸ್ ಆಡಳಿತ ಸಾಯಿಸಿದ್ದಕ್ಕೆ ಪ್ರತೀಕಾರವಾಗಿ ರಾಕೆಟ್ ದಾಳಿಯ ಮೂಲಕ ಅಮಾಯಕ, ಮುಗ್ಧ ಪ್ಯಾಲೆಸ್ಟೇನಿಯನ್ನರನ್ನು ನಿರ್ದಾಕ್ಷೀಣವಾಗಿ ಸಾಯಿಸುತ್ತಿದೆ. ಇದು ಡಾ.ಕ್ಲಿಪ್ಟನ್ ಉದ್ಗರಿಸಿದಂತೆ “Madness! Madness! Madness!” ನ ಪ್ರತಿರೂಪವಷ್ಟೇ. ಕರ್ನಲ್ ಸೈಟೋನಂತೆಯೇ ತಮ್ಮ ಹುಚ್ಚುತನಕ್ಕೆ ಯಾವುದೇ ಕಾರಣಗಳಿಲ್ಲದ ಇಸ್ರೇಲಿ ಸರ್ಕಾರ ಅಮಾನವೀಯವಾಗಿ ರಾಕ್ಷಸರಂತೆ ವರ್ತಿಸುತ್ತಾ ಶಾಂತಿ ಮತ್ತು ಮತ್ತು ಒಳ್ಳೆಯತನ ಮತ್ತು ಮುಗ್ಧತೆಯ ಎಲ್ಲಾ ಮಾದರಿಗಳನ್ನು ನಿರಾಕರಿಸಿದ್ದಾರೆ. “The Bridge on the River Kwai” ಸಿನಿಮಾದ ಕಡೆಯ ದೃಶ್ಯಗಳಲ್ಲಿ ಬ್ರಿಟೀಷ್ ಮೇಜರ್ ವಾರ್ಡನ್ ವರ್ತಿಸಿದಂತೆಯೇ ಇದೇ ಇಸ್ರೇಲ್ ಇಂದು ವರ್ತಿಸುತ್ತಿದೆ. ಅದೇ ಮಾದರಿಯಲ್ಲಿ!

ಪ್ರತೀಕಾರದ ಹೆಸರಿನಲ್ಲಿ, ಯುದ್ಧದ ಕಾರ್ಯತಂತ್ರದ ಹೆಸರಿನಲ್ಲಿ ಜನಸಾಮಾನ್ಯರ ಸೇತುವೆಯನ್ನು ನಾಶಪಡೆಸಲು ಗೆರಿಲ್ಲಾ ತಂತ್ರ ರೂಪಿಸುವ ಮೇಜರ್ ವಾರ್ಡನ್‌ನಂತೆಯೇ ಗಾಜಾ ಪಟ್ಟಿಯಲ್ಲಿರುವ ಹಮಾಸ್ ಆಡಳಿತಕ್ಕೆ ಪಾಠ ಕಲಿಸಲು ಇಸ್ರೇಲ್ ಮುಗ್ಧ ಪ್ಯಾಲೆಸ್ಟೇನಿಯನ್ನರ ಬದುಕನ್ನು ಧ್ವಂಸಗೊಳಿಸುತ್ತಿದೆ. “The Bridge on the River Kwai” ಸಿನಿಮಾದ ಕಡೆಯ ದೃಶ್ಯದಲ್ಲಿ ಸೇತುವೆ ನಿರ್ಮಾಣ ಮುಗಿದು ಮರುದಿನ ಅದು ಬಿಡುಗಡೆಗೆ ಸಿದ್ಧವಾಗುತ್ತಿದ್ದಾಗ ಆ ಸೇತುವೆಯ ಮೇಲೆ ನಿಂತು ಕರ್ನಲ್ ನಿಕಲ್ಸನ್ ಭಾವುಕನಾಗಿ ಕಡೆಗೆ ನಾವು ಮುಕ್ತಾಯದ ಹಂತದಲ್ಲಿದ್ದೇವೆ, ಆರಂಭದ ಘಟ್ಟದಲ್ಲಿ ಅಲ್ಲ ಎಂದು ನಮಗೆ ಅರಿವಾಗುವ ಗಳಿಗೆ ಬಂದೇ ಬರುತ್ತದೆ, ಆದರೆ ಇಡೀ ಕಾಲಘಟ್ಟದಲ್ಲಿ ನಮ್ಮನ್ನು ನಾವು ಹೇಗೆ ಪ್ರತಿನಿಧಿಸಿದ್ದೆವು ಎನ್ನುವ ಪ್ರಶ್ನೆ ಮೂಡುತ್ತದೆ. gazaಅದೂ ಹಠಾತ್ತಾಗಿ ಅವಕಾಶಗಳೇ ಕೊನೆಗೊಂಡ ಮುಕ್ತಾಯದ ಹಂತದಲ್ಲಿ! ಈ ವರ್ಷಗಳಲ್ಲಿನ ನಮ್ಮ ಬದುಕು ಏನಾದರೂ ವ್ಯತ್ಯಾಸವನ್ನು ತಂದಿತ್ತೇ? ಎನ್ನುವ ಯಕ್ಷಪ್ರಶ್ನೆಗೆ ಉತ್ತರಿಸಲೇಬೇಕಾಗುತ್ತದೆ ಎಂದು ಕರ್ನಲ್ ಸೈಟೋನನ್ನು ಉದ್ದೇಶಿಸಿ ಮಾರ್ಮಿಕವಾಗಿ ನುಡಿಯುತ್ತಾನೆ. ಇಂದು ಇಸ್ರೇಲ್ ಆರಂಭದ ತನ್ನ ದಾರುಣ ಇತಿಹಾಸವನ್ನು ಒಡಲಲ್ಲಿಟ್ಟುಕೊಂಡು ಭವಿಷ್ಯದಲ್ಲಿ ತಾನೊಂದು ಮಾದರಿಯಾಗುವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದನ್ನು ನಿರಾಕರಿಸುತ್ತಲೇ ಇಂದು ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ಅದು ಕಳೆದ ಅರವತ್ತು ವರ್ಷಗಳಲ್ಲಿ ತನ್ನ ಪ್ರಾತಿನಿಧ್ಯವನ್ನು ನಿಭಾಯಿಸಿರುವುದು ಮಾತ್ರ ರಕ್ತಚರಿತ್ರೆಯ ಹಿನ್ನೆಲೆಯಾಗಿ.

ಎರಡು ದಶಕಗಳ ಹಿಂದೆಯೇ ಚಿಂತಕ ಎಡ್ವರ್ಡ ಸೈದ್ ಬರೆಯುತ್ತಾನೆ: “West Bank ಮತ್ತು ಗಾಜಾ ಪಟ್ಟಿಯಲ್ಲಿ ವಾಸಿಸುತ್ತಿರುವ ಪ್ಯಾಲೆಸ್ಟೇನಿಯರ ಪಾಲಿಗೆ ಸಾಮಾನ್ಯವಾದ, ಹಸನಾದ ಬದುಕು ಎನ್ನುವುದು ಕನಸಾಗಿದೆ. ಇವರಿಗೆ ತಮ್ಮ ನೆಲದಲ್ಲಿ ತಮ್ಮ ಮೇಲೆ ನಡೆಯುತ್ತಿರುವ ಅತ್ಯಾಚಾರ ಮತ್ತು ಹತ್ಯೆಗಳ ವಿರುದ್ಧ ದನಿಯೆತ್ತಲೂ ಸಹ ಸಾಧ್ಯವಾಗುತ್ತಿಲ್ಲ. ಪ್ಯಾಲೆಸ್ಟೇನ್ ನಾಯಕ ಯಾಸೆರ್ ಅರಾಫತ್ ಸಹ West Bank ಮತ್ತು ಗಾಜಾ ಪಟ್ಟಿ ಅನ್ನು ಪ್ರವೇಶಿಸಲು ಅಥವಾ ನಿರ್ಗಮಿಸಲು ಅನುಮತಿಯನ್ನು ಪಡೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅರಾಫತ್ ಅವರ ಕಾರ್ಯಾಲಯಗಳು ಮತ್ತು ಅಧಿಕಾರ ಕೇಂದ್ರಗಳ ಮೇಲೆ ನಿರಂತರ ಬಾಂಬ್ ದಾಳಿ ನಡೆಸಲಾಗುತ್ತಿದೆ. ಸೆಪ್ಟೆಂಬರ್ 1993 ರಲ್ಲಿ ಇಸ್ರೇಲ್ ಮತ್ತು ಪ್ಯಾಲೆಸ್ಟೇನ್ ನಡುವೆ ಆದ ಓಶ್ಲೋ ಶಾಂತಿ ಒಪ್ಪಂದದ ನಂತರ ಸಾವುನೋವುಗಳು ಹೆಚ್ಚಾಗಿವೆ. ಬಾಂಬ್ ದಾಳಿಗಳು ಹೆಚ್ಚಾಗಿವೆ. ಹಾಗಿದ್ದರೆ ಈ ಓಶ್ಲೋ ಒಪ್ಪಂದದ ಮಹತ್ವವೇನು?ಅದರ ಔಚಿತ್ಯವೇನು? RISOT ವರದಿಯ ಪ್ರಕಾರ ಓಶ್ಲೋ ಒಪ್ಪಂದಕ್ಕಿಂತಲೂ ಮೊದಲು 110000 ಯಹೂದಿಗಳು West Bank ಮತ್ತು ಗಾಜಾ ಪಟ್ಟಿಯಲ್ಲಿ ಅಕ್ರಮವಾಗಿ ನೆಲೆಸಿದ್ದರೆ ಒಪ್ಪಂದದ ನಂತರ ಆ ಸಂಖ್ಯೆ 195000 ಗೆ ಏರಿದೆ. ಇದು ಏನನ್ನು ಸೂಚಿಸುತ್ತದೆ ?? ಪ್ಯಾಲೆಸ್ಟೇನಿಯರಿಗೆ israel.gazaತಮ್ಮ ಶತೃಗಳು ಬರೆದ ತಮ್ಮ ಬದುಕಿನ ಸ್ಕ್ರಿಪ್ಟ್ ಅನ್ನು ಓದಬೇಕಾದಂತಹ ಪರಿಸ್ಥಿತಿಗೆ ಯಾರು ಹೊಣೆ? ಪ್ಯಾಲೆಸ್ಟೇನ್ ಅರಬರಾಗಿ ನಮ್ಮ ಘನತೆ ಮತ್ತು ಆತ್ಮಗೌರವವನ್ನು ನಮ್ಮ ಭಾಷೆಯ ಮೂಲಕ, ಪರಂಪರೆಯ ಮೂಲಕ, ಇತಿಹಾಸದ ಮೂಲಕ, ನಮ್ಮ ಪ್ರಾತಿನಿಧ್ಯವನ್ನು, ನಮ್ಮ ನೋವನ್ನು ಈ ಅರಬ್ ರಾಷ್ಟ್ರಗಳಲ್ಲಿ, ಈ ಅಮೇರಿಕಾದಲ್ಲಿ ಹಂಚಿಕೊಳ್ಳಬೇಕಾಗಿದೆ. ಆದರೆ ದುರಂತವೆಂದರೆ ನಾವು ಯಾರು, ನಮಗೇನು ಬೇಕು, ನಮ್ಮ ಇತಿಹಾಸವೇನು, ನಾವು ಮುಂದೆ ಎಲ್ಲಿಗೆ ಸಾಗಬೇಕೆಂದಿದ್ದೇವೆ, ನಮ್ಮ ಘನತೆ, ಆತ್ಮ ಗೌರವದ ಕುರಿತಾಗಿ 1948 ರಿಂದ ಇಂದಿನವರೆಗೂ ಯಾವೊಬ್ಬ ರಾಜಕೀಯ ನಾಯಕನೂ ನಮ್ಮ ವಕ್ತಾರರಾಗಿ ಮಾತನಾಡಿಲ್ಲ.”

ಪ್ಯಾಲೆಸ್ಟೇನಿಯರೆಂದರೆ ಭಯೋತ್ಪಾದಕರು ಎಂದು ಹೇಳಿಕೆಗಳನ್ನು ಕೊಡುತ್ತಿರುವ ಇಸ್ರೇಲ್ ಸರ್ಕಾರ ಗಾಜಾ ಪಟ್ಟಿಯಲ್ಲಿ ಹಿಂಸೆಯ ಜಗತ್ತನ್ನು ಸೃಷ್ಟಿಸುತ್ತಿದೆ. ಪಾಲೆಸ್ಟೀನಿಯರ ಬದುಕು ವಿನಾಶದ ಹಾದಿಗೆ ತಳ್ಳುತ್ತಿರುವ ಇಸ್ರೇಲ್‌ನ ಈ ಭೀಕರ ಕನಸನ್ನು ಧ್ವಂಸಗೊಳಿಸುವವರಾರು?? ಇಸ್ರೇಲ್‌ನ ನೀಚತನದ ಫಲವಾಗಿ ಪ್ಯಾಲೆಸ್ಟೇನ್ ಮುಸ್ಲಿಂರ ಬದುಕು ಛಿದ್ರ ಛಿದ್ರವಾಗುತ್ತಿರುವದಕ್ಕೆ ನಿಜಕ್ಕೂ ದುರಂತಮಯ. ನಮ್ಮಲ್ಲಿ ಪಾಪಪ್ರಜ್ಞೆಯ ಅಂಶಗಳೇ ಕಾಣೆಯಾಗುತ್ತಿವೆ. ಕಡೆಗೆ ಕರ್ನಲ್ ಸೈಟೋನಂತೆ ಹುಚ್ಚುತನ ಮತ್ತು ಆತ್ಮಹತ್ಯೆ ಇವೆರಡರ ನಡುವೆ ಅಂತಹ ವ್ಯತ್ಯಾಸವೇ ಇಲ್ಲದಂತಹ ಸ್ಥಿತಿಗೆ ಇಸ್ರೇಲ್ ಸಾಗುತ್ತಿದೆ. ಆಧುನಿಕ ಮಾನವೀಯ ಜಗತ್ತಿಗೆ ಭೀಕರ ಸವಾಲಾಗಿ ನಿಂತಿದೆ.