ಜನಜಂಗುಳಿಯ ನಡುವಿನ ಏಕಾಂತದ ಅಪಾಯ..!


– ಡಾ.ಎಸ್.ಬಿ. ಜೋಗುರ


ಲೂಯಿ ವರ್ಥ್ ಎನ್ನುವ ನಗರ ಸಮಾಜಶಾಸ್ತ್ರಜ್ಞ ‘ನಗರಗಳು ನಾಗರಿಕರು ವಾಸ ಮಾಡುವ ತಾಣಗಳು’ ಎಂದಿದ್ದರು. ಅದರರ್ಥ ಗ್ರಾಮಗಳಲ್ಲಿ ಬದುಕುವವರು ಅನಾಗರಿಕರು ಎಂದು ಭಾವಿಸುವ ಅಗತ್ಯವಿಲ್ಲ. ಯಾಕೆಂದರೆ ನಗರ ಜೀವನ ಈಗೀಗ ನರಕ ಜೀವನವಾಗಿಯೂ ಪರಿಣಮಿಸುತ್ತಿದೆ. ತೀರಾ ಸಣ್ಣ ಸಣ್ಣ ಕಾರಣಗಳಿಗಾಗಿ ಕಲಹವಾಡುವ, ವೈಮನಸ್ಸು ಹುಟ್ಟು ಹಾಕುವ, ದುಡುಕಿನಿಂದ ಕೊಲೆಗಳಾಗುವ ಅನೇಕ ಘಟನೆಗಳು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿವೆ. ಈಚೆಗೆ ದೆಹಲಿಯ ನಿಹಾಲ್ ವಿಹಾರ ಎನ್ನುವ ಪ್ರದೇಶದಲ್ಲಿ ಒಂದು ಘಟನೆ ಜರುಗಿತು. ಅದೊಂದು ಮನೆ ಆ ಮನೆಯಲ್ಲಿ ಆಗ ಇದ್ದದ್ದು ಇಬ್ಬರೇ ವ್ಯಕ್ತಿಗಳು. ಒಬ್ಬ 30 ವರ್ಷದ ಹರಿಚಂದ, ಇನ್ನೊಬ್ಬ ಅವನ ಅಳಿಯ 11 ವರ್ಷದ ಹುಡುಗ. ಆ ಹುಡುಗನ ತಂದೆ-ತಾಯಿ ಅಲ್ಲೇ ಹತ್ತಿರದಲ್ಲಿ ಒಂದು ಕಟ್ಟದ ಕೆಲಸದಲ್ಲಿ ತೊಡಗಿದ್ದರು. ಆ 11 ವರ್ಷದ ಬಾಲಕ ಹೆಚ್ಚು ಸೌಂಡ್ ಇಟ್ಟು ಟಿ.ವಿ.ವೀಕ್ಷಿಸುತ್ತಿದ್ದ. urban-home-aloneಅವನ ಮಾವ ಹರಿಚಂದ ವಾಲ್ಯುಮ್ ಕಡಿಮೆ ಮಾಡಲು ಕೇಳಿಕೊಂಡಾಗಲೂ ಆತ ಕೇಳಲಿಲ್ಲ. ಆಗ ಹರಿಚಂದ ಆ ಹುಡುಗನಿಗೆ ಬಲವಾಗಿ ಹೊಡೆದು ಗೊಡೆಗೆ ಅಪ್ಪಳಿಸಿದ. ಪರಿಣಾಮ ಆ ಅಳಿಯನೆಂಬ ಹುಡುಗ ಮೃತಪಟ್ಟ. ಈ ಬಗೆಯ ಕಾರಣಕ್ಕೆ ಕೊಲೆಗಳು ಜರುಗಬೇಕೆ..? ಎನ್ನುವುದೇ ಇಲ್ಲಿಯ ಮುಖ್ಯ ಪ್ರಶ್ನೆ. ಹಾಗಂತ ಈ ಬಗೆಯ ಘಟನೆ ಇದೇ ಮೊದಲಲ್ಲ.

ದೆಹಲಿಯ ಪ್ರಮುಖ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿರುವಂತೆ ಕಳೆದ ಜನೆವರಿ 24 ರಂದು ಶತಾಬ್ದಿ ರೈಲಿನಲ್ಲಿ ವೇಟರ್ ಆಗಿ ಕೆಲಸ ಮಾಡುವಾತನೊಬ್ಬ ರೈಲು ಹಳಿ ದಾಟುವದನ್ನು ಒಬ್ಬ ಪೋಲಿಸ್ ಕಾನಸ್ಟೇಬಲ್ ತಡೆದ ಕಾರಣಕ್ಕೆ ಆತ ಆ ಪೋಲಿಸನ ಮರ್ಮಾಂಗಕ್ಕೆ ಅತ್ಯಂತ ಭೀಕರವಾಗಿ ಒದೆಯುವ ಮೂಲಕ ಆ ಪೋಲಿಸನ ಸಾವಿಗೆ ಕಾರಣವಾಗಿರುವದಿತ್ತು. ಮಾರ್ಚ್ 5 ರಂದು ಮತ್ತೂ ಚಿಲ್ಲರೆ ಕಾರಣಕ್ಕಾಗಿ ಆಶಿಶ್ ಎನ್ನುವ ಗೆಳೆಯನನ್ನು ಅಭಿಜಿತ್ ಎನ್ನುವವನು ಕೊಂದು ಹಾಕಿದ್ದ. ಕಾರಣ ಏನೆಂದರೆ ಇಬ್ಬರೂ ಯಾವ ಕಂಪನಿಯ ಕಾರು ಒಳ್ಳೆಯದು ಎನ್ನುವ ವಾಗ್ವಾದದಲ್ಲಿದ್ದರು. ವಾದ ವಿವಾದಕ್ಕೆ ತಿರುಗಿ ಆಶಿಶ್ ಕೊಲೆಯಾಯಿತು. ಎಪ್ರಿಲ್ 10-2014 ರಂದು ಅಣ್ಣನೊಬ್ಬ ತನಗೆ ಕುಡಿಯಲು ಹಣ ಕೊಡಲಿಲ್ಲ ಎಂದು ತಮ್ಮನನ್ನು ಮುಗಿಸಿಯೇ ಬಿಟ್ಟ. ಅದೇ ತಿಂಗಳು ಅದೇ ಮದ್ಯದ ಕಾರಣಕ್ಕಾಗಿ ದೆಹಲಿಯ ಗುಲಾಬಿ ಭಾಗಲ್ಲಿ ಹೆಂಡತಿಯನ್ನು ಗಂಡನೊಬ್ಬ ಕೊಲೆ ಮಾಡಿದ. ಅದೇ ದಿನ ಅಂದರೆ ಎಪ್ರಿಲ್ 17 ರಂದು ದೆಹಲಿಯ ಪಾಂಡವನಗರದಲ್ಲಿ ಪಕ್ಕದ ಮನೆಯವನೊಬ್ಬ ನೆರೆಮನೆಯ ಗೊಡೆಯ ಮೇಲೆ ಮೂತ್ರಿ ಮಾಡಿದ ಎನ್ನುವದನ್ನು ಆಕ್ಷೇಪಿಸಿ ಕಲಹಕ್ಕಿಳಿದು ಅವನನ್ನು ಮುಗಿಸಿಯೇ ಬಿಟ್ಟ. ಹಾಗೆಯೇ ಎಪ್ರಿಲ್ 18 ರಂದು ಕ್ರಿಕೇಟ್ ವಿಷಯದಲ್ಲಿ ವಾಗ್ವಾದವಾಗಿ 48 ವರ್ಷದ ಚಾ ಅಂಗಡಿಯವನನ್ನು ಕೊಲ್ಲಲಾಯಿತು. ಇಂಥಾ ಅನೇಕ ಘಟನೆಗಳು ಕೇವಲ ನಮ್ಮ ನಗರಗಳಲ್ಲಿ ಮಾತ್ರವಲ್ಲ, ಇಡೀ ವಿಶ್ವದ ಅನೇಕ ನಗರಗಳಲ್ಲಿ ನಡೆಯುವುದು ಮಾಮೂಲಾಗಿದೆ. murder-stabbingjpgಇವರಾರು ಮತಿಭ್ರಷ್ಟರು ಅಥವಾ ಹುಚ್ಚರಲ್ಲ. ಆದಾಗ್ಯೂ ಆ ಗಳಿಗೆಯಲ್ಲಿಯ ಮಾನಸಿಕ ಒತ್ತಡಕ್ಕೆ ಸಿಲುಕಿ ಹಾಗೆ ವಿಕ್ಷಿಪ್ತರು ಅನ್ನುವ ಹಾಗೆ ವರ್ತಿಸಿದವರು.

ಈಗೀಗ ನಗರ ಪ್ರದೇಶಗಳು ಉದ್ವೇಗದ ತಾಣಗಳಾಗುತ್ತಿವೆ. ಜನರ ಮನ:ಸ್ಥಿತಿ ಅನೇಕ ಬಗೆಯ ತುಮುಲಗಳಲ್ಲಿ ಜಂಜಡಗಳಲ್ಲಿ ಸಿಲುಕಿ ಒದ್ದಾಡುವಂತಾಗುತ್ತಿದೆ. ಇದನ್ನೇ ಗಮನದಲ್ಲಿರಿಸಿಕೊಂಡು ಜರ್ಮನಿಯ ಡಾ.ಎ.ಎಮ್.ಲಿಂಡನ್‌ಬರ್ಗ್ ಅವರು 2011 ರ ಸಂದರ್ಭದಲ್ಲಿ ಒಂದು ಪ್ರಮುಖ ಮನ:ಶಾಸ್ತ್ರೀಯ ಅಧ್ಯಯನವನ್ನೇ ಕೈಗೊಂಡಿರುವರು. ಅವರು ನಗರ ಪ್ರದೇಶದಲ್ಲಿ ವಾಸ ಮಾಡುವ ಜನರ ಮೆದುಳಿನ ಚಿತ್ರಣ ಮತ್ತು ಗ್ರಾಮೀಣ ಭಾಗಗಳಲ್ಲಿ ವಾಸವಾಗಿರುವ ಜನರ ಮೆದುಳಿನ ವಿವಿಧ ಸ್ತರಗಳನ್ನು ಕುರಿತು ಅಧ್ಯಯನ ಮಾಡಿದ್ದಾರೆ. ಅವರು ಅತಿ ಮುಖ್ಯವಾಗಿ ಮೆದುಳಿನ ಎರಡು ಸ್ತರಗಳನ್ನು ಕುರಿತು ಗಹನವಾಗಿ ಅಧ್ಯಯನ ಮಾಡಿರುವರು. ಮೆದುಳಿನ ಮೊದಲನೆಯ ಸ್ತರ ಅಮಿಗ್‌ದೇಲ್ಸ್ ಮತ್ತು ಎರಡನೆಯದು ಪಿ.ಎ.ಸಿ.ಸಿ. [perigenual anterior cingulate cortex]. ಮೊದಲನೆಯದು ಭಯವನ್ನು ಗ್ರಹಿಸುವ, ಹುಟ್ಟುಹಾಕುವ ಕೆಲಸವನ್ನು ಮಾಡುತ್ತದೆ. ಎರಡನೆಯ ಸ್ತರ ಪಿ.ಎ.ಸಿ.ಸಿ. ಆ ಉದ್ವೇಗ, ಭಯವನ್ನು ನಿಯಂತ್ರಿಸುವ ಕೆಲಸವನ್ನು ಮಾಡುತ್ತದೆ. ನಗರವಾಸಿಗಳನ್ನು ಅಧ್ಯಯನ ಮಾಡುವ ಸಂದರ್ಭದಲ್ಲಿ ಅವರ ಮೆದುಳಲ್ಲಿ ಮೊದಲ ಸ್ತರ ಅಮಿಗ್‌ಡೇಲ್ಸ್ [amygdales] ಹೆಚ್ಚು ಜಾಗೃತವಾಗಿರುವ ಚಿತ್ರಣ ಬೆಳಕಿಗೆ ಬಂದಿದೆ. ಅಂದರೆ ನಗರವಾಸಿಗಳು ಗ್ರಾಮೀಣವಾಸಿಗಳಿಗಿಂತಲೂ ಹೆಚ್ಚೆಚ್ಚು ಭಯ ಮತ್ತು ಉದ್ವೇಗದಲ್ಲಿ ಬದುಕು ಸಾಗಿಸುತ್ತಾರೆ ಎನ್ನುವುದು ಬಯಲಾಯಿತು. ಲಿಂಡನ್ ಬರ್ಗ್ ಮಾಡಲಾದ ಅಧ್ಯಯನ ಮತ್ತು ಅದರ ಪರಿಣಾಮವನ್ನು 2011 ರ ಸಂದರ್ಭದಲ್ಲಿ ನೇಚರ್ ಎನ್ನುವ ಪತ್ರಿಕೆಯೊಂದು ಸವಿಸ್ತಾರವಾಗಿ ವರದಿ ಮಾಡಿತ್ತು.

ನಗರಗಳು ಮನುಷ್ಯನ ಮನ:ಸ್ಥಿತಿಯನ್ನು ಹಾಳುಗೆಡವುತ್ತವೆ ಎನ್ನುವ ವಿಷಯವನ್ನು ಹೆಚ್ಚೆಚ್ಚು ಮಾಧ್ಯಮಗಳು ವರದಿ ಮಾಡಿದ್ದವು. ಹಿಂದೊಮ್ಮೆ ದ ವೀಕ್ ಪತ್ರಿಕೆ ದೆಹಲಿಯಲ್ಲಿ ಮಾನಸಿಕ ಅಸ್ವಸ್ಥರ ಪ್ರಮಾಣ ಹೆಚ್ಚಾಗುತ್ತಿರುವ ಬಗ್ಗೆ ಒಂದು ವಿವರವಾದ ವರದಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. lonelinessಈ ಲಿಂಡನ್ ಬರ್ಗ್ ಅಧ್ಯಯನ ಮಾಡುವ ಒಂದು ವರ್ಷ ಮೊದಲು ಡಾ ಜಾಪ್ ಪೀನ್ ಎನ್ನುವವರು, ಡಚ್ ಸಂಶೋಧಕರ ನೇತೃತ್ವದಲ್ಲಿ ಒಂದು ಅಧ್ಯಯನ ಕೈಗೊಂಡು ನಗರವಾಸಿಗಳಲ್ಲಿ ಸ್ಕಿಜೋಫ಼್ರೇನಿಯಾ ಪ್ರಮಾಣ ಹೆಚ್ಚಾಗಿರುತ್ತದೆ ಎಂದು ವರದಿ ಮಾಡಿದರು. ನಗರಗವಾಸಿಗಳಲ್ಲಿ ಉದ್ವೇಗ ಮತ್ತು ಮಾನಸಿಕ ಅಸ್ವಸ್ಥತೆ ಹೆಚ್ಚು ಎನ್ನುವುದನ್ನು ಇವರ ಅಧ್ಯಯನ ಬಹಿರಂಗಗೊಳಿಸಿತ್ತು. ಇನ್ನೋರ್ವ ಜರ್ಮನ ಸಂಶೋಧಕ ಡಾ. ಮಜದಾ ಅದ್ಲಿ ಹೇಳುವಂತೆ ‘ನಗರಗಳಲ್ಲಿ ಮನದಟ್ಟಾಗುವ ಅಪಾರ ಜನಜಂಗುಳಿಯ ನಡುವಿನ ಏಕಾಂತತೆ ಅತ್ಯಂತ ಅಪಾಯಕಾರಿಯಾದುದು. ಮನುಷ್ಯನ ಮೆದುಳಿನ ರಚನೆ ನಗರ ಪರಿಸರದಲ್ಲಿ ಸೆಟ್ ಆಗುವಲ್ಲಿ ಸಶಕ್ತವಾಗಿಲ್ಲ’ ಎನ್ನುತ್ತಾರೆ. ಅವರ ಪ್ರಕಾರ ಅಪಾರವಾದ ಸಾಮಾಜಿಕ ಜನಸಂದಣಿ ಮತ್ತು ಅಗಾಧವಾದ ಏಕಾಂತತೆ ಎರಡೂ ಏಕಕಾಲಕ್ಕೆ ಅನುಭವಕ್ಕೆ ಬರುವ ಸಂಗತಿಯೇ ಮೆದುಳಿಗೆ ಹೆಚ್ಚು ಅಪಾಯಕಾರಿ ಎನ್ನುತ್ತಾರೆ. ಲಂಡನ್ ಮತ್ತು ಅಮೆರಿಕೆಯ ಕೆಲವು ಅಧ್ಯಯನಗಳು ಕೂಡಾ ಈ ನಗರ ಬದುಕಿನ ಜಂಜಾಟಗಳನ್ನು ಕುರಿತು ಮಾತನಾಡಿವೆ. ಅಲ್ಲಿಯ ಶಬ್ದ ಮಾಲಿನ್ಯ ಮಕ್ಕಳ ಕಲಿಕೆಯ ಮೇಲೆ ಅದು ಹೇಗೆ ಕೆಟ್ಟ ಪರಿಣಾಮವನ್ನು ಬೀರುತ್ತವೆ ಎನ್ನುವದನ್ನು ಅವರು ತೋರಿಸಿಕೊಟ್ಟಿರುವದಿದೆ. ಸದಾ ಗಿಜಿಬಿಜಿ ಎನುವ ಪರಿಸರದ ನಡುವೆ ನಮ್ಮನ್ನು ಕಾಡುವ ಏಕಾಂತತೆ ನಮ್ಮ ಮೆದುಳಿನ ಮೇಲೆ ಮಾರಕ ಪರಿಣಾಮಗಳನ್ನು ಬೀರುತ್ತದೆ ಎನ್ನುವುದು ಅನೇಕ ಅಧ್ಯಯನಗಳಿಂದ ಸಾಬೀತಾಗಿದೆ. ನಿಸರ್ಗದೆಡೆಗೆ ಮುಖ ಮಾಡುವ, ಬೆರೆಯುವ ಮೂಲಕ ತಕ್ಕ ಮಟ್ಟಿಗೆ ನಮ್ಮ ಮನಸನ್ನು ಆಹ್ಲಾದಕಾರಿಯಾಗಿ ಇಟ್ಟುಕೊಳ್ಳಬಹುದು ಇಲ್ಲದಿದ್ದರೆ ಭವಿಷ್ಯದಲ್ಲಿ ಯಾರಾದರೂ ಯಾವುದಾದರೂ ಒಂದು ಮನೆಯ ವಿಳಾಸ ಕೇಳಿದ್ದಕ್ಕೆ ನಾವು ಕೆರಳಿ ಕೆಂಡಾಮಂಡಲವಾಗುವ ವಿಚಿತ್ರ ವಿಕ್ಷಿಪ್ತ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು. ನಗರ ಬದುಕಿನ ಜಂಜಟ.. ತೀವ್ರತೆ.. ಕಿರಕಿರಿ.. ಮನುಷ್ಯನ ಮನಸನ್ನು ಕಲಕುತ್ತಿದೆ. ಮನುಷ್ಯ ತನ್ನ ಸುತ್ತಲಿನ ಯಾವುದಕ್ಕೂ ಪ್ರತಿಕ್ರಿಯಿಸದಷ್ಟು ನಿಸ್ತೇಜವಾಗಿ ಬಿಡುತ್ತಿದ್ದಾನೆ. ಮಾರ್ಗನ್ ಎನ್ನುವ ಸಮಾಜಶಾಸ್ತ್ರಜ್ಞರು ನಾವೆಲ್ಲಾ ಈ ನಗರಗಳಲ್ಲಿಯ ಸಾಮಾಜಿಕ ಪ್ರತ್ಯೇಕತೆಯನ್ನು ಕುರಿತು ಗಂಭೀರವಾಗಿ ಯೋಚಿಸಬೇಕಿದೆ ಎಂದಿರುವರು. ಪ್ರತಿಯೊಬ್ಬನೂ ನಡುಗಡ್ದೆಯಂತೆ ಬದುಕುವ ಸಂದರ್ಭಗಳಲ್ಲಿ ಅದು ಹೇಗೆ ಸಾಮಾಜಿಕ ಐಕ್ಯತೆ ಮತ್ತು ಸಾಮರಸ್ಯವನ್ನು ಏರ್ಪಡಿಸಬೇಕು ಎನ್ನುವುದೇ ಸಮಾಜಶಾಸ್ತ್ರಜ್ಞರ ಮುಂದಿರುವ ಬಹು ದೊಡ್ದ ಸವಾಲು.

Leave a Reply

Your email address will not be published. Required fields are marked *