ತೀರ್ಪು ನೀಡುವ ಮಾಧ್ಯಮಗಳು!


ಡಾ. ಶ್ರೀಪಾದ ಭಟ್


 

ಇತ್ತೀಚಿನ ವಿದ್ಯಮಾನಗಳನ್ನು ಮಾಧ್ಯಮಗಳಲ್ಲಿ ವೀಕ್ಷಿಸುವವರಿಗೆ, ಪತ್ರಿಕೆ ಓದುವವರಿಗೆ ಈ ಶೀರ್ಷಿಕೆ ಅರ್ಥವಾಗುತ್ತದೆ. ಹೇಳಿ ಕೇಳಿ ಉದ್ಯಮವಾದ ಮಾಧ್ಯಮ ಸಮಾಜವನ್ನು ಎತ್ತ ಕೊಂಡೊಯ್ಯುತ್ತಿದೆ ಎಂಬುದನ್ನು ಗಮನಿಸಿದರೆ ಬೇಸರವಾಗುತ್ತದೆ. ಸಂವಿಧಾನದ ನಾಲ್ಕನೆಯ ಸ್ತಂಭ ಎನ್ನಲಾಗುವ (ಹಾಗೆ ಕರೆದಿದ್ದು ಎಡ್ಮಂಡ್ ಬರ್ಕ್‌ನೇ ವಿನಾ ಸಂವಿಧಾನವಲ್ಲ) ಮಾಧ್ಯಮಗಳು ಉಳಿದ ಮೂರು ಸ್ತಂಭಗಳನ್ನು ಅಲ್ಲಾಡಿಸುತ್ತಿವೆ. ಸಾಮಾನ್ಯವಾಗಿ ಮಾಧ್ಯಮದವರು ತಾವು ಸಮಾಜದ ಅಂಗ ಎಂಬುದನ್ನು ಮರೆತಿರುತ್ತಾರೆ. ಸಮಾಜಕ್ಕೆ ದಾರಿ ತೋರಿಸುವವರು ತಾವು ಎಂಬ ಗ್ರಹಿಕೆ ಅವರಲ್ಲಿ ಮನೆ ಮಾಡಿರುವುದುಂಟು. ಅದೇನೋ ಸರಿ, ಆದರೆ ಅದಕ್ಕೆ ತಕ್ಕಂತೆ ಅವರು ನಡೆದುಕೊಳ್ಳಬೇಕಲ್ಲ? tv-mediaಶಾಲೆ-ಕಾಲೇಜುಗಳು ನಮ್ಮ ಕಾಲದಲ್ಲಿದ್ದಂತಿಲ್ಲ ಎಂದು ಹೇಳುವುದನ್ನು ಕೇಳುವಂತೆಯೇ ಮಾಧ್ಯಮಗಳೂ ಈ ಹಿಂದಿನಂತೆ ಇಲ್ಲ ಎಂಬುದು ಕಿವಿಗೆ ಬೀಳುವುದೂ ಅಪರೂಪವಲ್ಲ. ಮಾಧ್ಯಮ ಒಂದು ಉದ್ಯಮದ ಸ್ವರೂಪ ಪಡೆದ ಮೇಲೆ ಹೀಗಾಗಿರಲೂ ಸಾಕು.

ವಿದ್ಯುನ್ಮಾನ ಮಾಧ್ಯಮಗಳಂತೂ ಮೊದಲು ಸುದ್ದಿ ಬಿತ್ತರಿಸಿ ಟಿಆರ್‌ಪಿ ಹೆಚ್ಚಿಸಿಕೊಳ್ಳುವ ಧಾವಂತದಲ್ಲಿ ಸುದ್ದಿಯ ಹಿಂದು ಮುಂದು ಪರಿಶೀಲಿಸದೇ ಪರದೆಯ ಮೇಲೆ ತಮ್ಮ ಚಾನಲ್ಲಿನ ಛಾಪು ಒತ್ತಿ ಮತ್ತೆ ಮತ್ತೆ ಪ್ರಸಾರ ಮಾಡುತ್ತವೆ. ಬಹಳಷ್ಟು ಬಾರಿ ಒಂದೇ ಸಾಲಿನ ಸುದ್ದಿ, ಒಂದೇ ಚಿತ್ರವನ್ನು ದಿನವಿಡೀ ಮತ್ತೆ ಮತ್ತೆ ಪ್ರಸಾರ ಮಾಡುತ್ತಲೇ ಇರುತ್ತವೆ. ಅವು ಹೀಗೆ ಬಿತ್ತರಿಸುವ ಸುದ್ದಿ ಸಾಮಾನ್ಯವಾಗಿ ವ್ಯಕ್ತಿಯೊಬ್ಬ ಹಣ ಪಡೆಯುತ್ತಿರುವ ಸನ್ನಿವೇಶವೋ, ಮಹಿಳೆಯೊಬ್ಬಳು ವ್ಯಕ್ತಿಗೆ ಥಳಿಸುವ ಸನ್ನಿವೇಶವೋ ಆಗಿರುತ್ತದೆ. ವರದಿಗಾರ ನೀಡುವ ಧಾವಂತದ ವಿವರಣೆಯೇ ಆಯಾ ಸನ್ನಿವೇಶದ ಸತ್ಯವಾಗಿರುತ್ತದೆ! ಕೆಲವೊಮ್ಮೆ ಸಂಘಟನೆಗಳ ಕಾರ್ಯಕರ್ತರೆಂದು ಕರೆದುಕೊಳ್ಳುವವರು ಇಂಥ ಸನ್ನಿವೇಶಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುತ್ತಾರೆ. ಹೊಡೆಯುವವರು, ಹೊಡೆಸಿಕೊಳ್ಳುವವರು, ಸುದ್ದಿ ತಿಳಿದು ನೆರೆದ ಅಕ್ಕಪಕ್ಕದ ಒಂದಿಷ್ಟು ಜನರ ಗುಂಪನ್ನು ಬಿಟ್ಟರೆ ಅಲ್ಲಿರುವುದು ಚಾನೆಲ್ಲಿನ ಛಾಯಾಗ್ರಾಹಕ ಮತ್ತು ವರದಿಗಾರರು ಮಾತ್ರ! ಇವರಿಬ್ಬರೂ ಇಂಥ ಪ್ರಸಂಗದ ಆರಂಭದ ಬಿಂದುವಿನಿಂದಲೂ ಪ್ರಸಾರ ಕೈಗೊಂಡಿರುತ್ತಾರೆ. ಅನೇಕ ಬಾರಿ ಇಂಥ ಸಂದರ್ಭಗಳು ಚಾನೆಲ್‌ಗಳಲ್ಲಿ ಪ್ರಸಾರವಾಗಿವೆ, ಆಗಾಗ ಆಗುತ್ತಲೇ ಇರುತ್ತದೆ. ಇದು ಹೇಗೆ ಸಾಧ್ಯ? ಇಂಥಲ್ಲಿ, ಇಂಥ ಪ್ರಸಂಗ ನಡೆಯಲಿದೆ ಎಂದು ವರದಿಗಾರನಿಗೂ ಛಾಯಾಗ್ರಾಕನಿಗೂ ತಿಳಿಯುವುದಾದರೂ ಹೇಗೆ? tv-mediaಘಟನೆ ನಡೆಯತೊಡಗಿದ ಮೇಲೆ ವರದಿಗಾರರು ಬಂದರೆ ಯಾರೋ ತಿಳಿಸಿದ ಮೇಲೆ ಬಂದಿದ್ದಾರೆ ಎಂದು ಭಾವಿಸಬಹುದು. ಇಲ್ಲಿ ಹಾಗಾಗುವುದಿಲ್ಲ. ಈಚೆಗೆ ಬೆಂಗಳೂರಿನಲ್ಲಿ ಹೆಣ್ಣೊಬ್ಬಳು ತಾನು ಕೆಲಸ ಬಿಟ್ಟ ಕಚೇರಿಯೊಂದರ ಮಾಲೀಕನ ಮೇಲೆ ಹಲ್ಲೆ ನಡೆಸಿದಳು. ಅವಳು ಆ ಕಚೇರಿಯೊಳಗೆ ಹೋಗುವುದು, ಅವಳೊಂದಿಗೆ ಸಂಘಟನೆಯೊಂದರ ಕಾರ್ಯಕರ್ತರು ನುಗ್ಗುವುದು, ಮಾಲೀಕನನ್ನು ಎಳೆದು ಥಳಿಸುವುದು, ಕೊನೆಗೆ ಹೆಣ್ಣು ಮಗಳು ಚಪ್ಪಲಿಯಲ್ಲಿ ಆತನಿಗೆ ಬಾರಿಸುವುದು ಎಲ್ಲವನ್ನೂ ಆಮೂಲಾಗ್ರವಾಗಿ (ಸಿಸಿ ಕ್ಯಾಮರ ಸೆರೆ ಹಿಡಿದ ಚಿತ್ರವಲ್ಲ) ಚಾನೆಲ್ಲು ಬಿತ್ತರಿಸಿತು. ಮೂರ್ನಾಲ್ಕು ಜನರನ್ನು ಸ್ಟುಡಿಯೋಗೆ ಕರೆಸಿ ಭಾರೀ ಚರ್ಚೆ ನಡೆಸಿತು. ಮಾಲೀಕನೂ ಬಂದ. ಆತ ದೌರ್ಜನ್ಯ ಎಸಗಿದ್ದಾನೆ, ತನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾನೆ, ಇತ್ಯಾದಿ ಆರೋಪಗಳನ್ನು ಆಕೆ ಮಾಡಿದರೆ, ಆತ ಇವೆಲ್ಲ ಸುಳ್ಳು, ಆಕೆ ತನಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾಳೆ, ವೃಥಾ ಹಣ ಕೀಳುವ ಆಕೆಯ ಪ್ಲಾನ್ ಇದು ಎಂದು ಹೇಳುತ್ತಿದ್ದ.

ಇಷ್ಟಾದ ಮೇಲೆ ಕೇಸು ದಾಖಲಾಗಿ ತನಿಖೆ ನಡೆದು ತಿಂಗಳುಗಳ ನಂತರ ಆತನ ತಪ್ಪು ಏನೂ ಇಲ್ಲ ಎಂದು ಸಾಬೀತಾಯಿತು. ಅಲ್ಲದೇ ಆ ಹೆಣ್ಣು ಮಗಳೇ ತಪ್ಪೊಪ್ಪಿಕೊಂಡಳು! ಮಾಲೀಕ ಸತ್ಯವಂತನೇ ಇರಬಹುದು. ಆದರೆ ಆಕೆ ಆರೋಪಿಸುವಾಗ, ಸಂಘಟನೆಯವರು ನುಗ್ಗಿ ದಾಂಧಲೆ ಮಾಡುವಾಗ, ಈತನ ಅಸಹಾಯಕತೆಯನ್ನು ಏಕಪಕ್ಷೀಯವಾಗಿ ಜಗತ್ತಿಗೆ ಬಿತ್ತರಿಸಿ ಅವನ ವ್ಯಕ್ತಿತ್ವಕ್ಕೆ ಹಾನಿ ಮಾಡುವಾಗ ಆ ಮಾಧ್ಯಮದ ಜನರ ಸಾಮಾಜಿಕ ಜವಾಬ್ದಾರಿ ಎಲ್ಲಿ ಹೋಗಿತ್ತು? ಇವರ ತಪ್ಪಿಗೆ ತಪ್ಪು ಮಾಡದ ಜನ ತೆರಬೇಕಾದ ಬೆಲೆ ಏನು?

ಇಂಥ ಸನ್ನಿವೇಶ ವೀಕ್ಷಿಸುವ ಜನ ಕೂಡ ಆ ಕ್ಷಣದ ಪ್ರತಿಕ್ರಿಯೆಗೆ ಪಕ್ಕಾಗಿ ವ್ಯಕ್ತಿ ಕೈಗೆ ಸಿಕ್ಕರೇ ತಾವೂ ನಾಲ್ಕು ಬಾರಿಸುವ ನಿರ್ಧಾರಕ್ಕೆ ಬಂದಿರುತ್ತಾರೆ! ಅಲ್ಲದೇ ಗಂಡು-ಹೆಣ್ಣುಗಳ ಸಂಬಂಧ ಕುರಿತ ಗ್ರಹಿಕೆ ಸೂಕ್ಷ್ಮವಾಗಿರುವ ನಮ್ಮ ಸಮಾಜದಲ್ಲಿ ಗಾಳಿ ಸುದ್ದಿಗಳೇ ವ್ಯಕ್ತಿತ್ವ ನಾಶಕ್ಕೆ ಸಾಕು. ಅಂಥದ್ದರಲ್ಲಿ ಸಚಿತ್ರ ವಿವರ ನೋಡಿದರೆ ಜನ ಸುಮ್ಮನಿದ್ದಾರೆಯೇ? ಯಾರೋ ಒಬ್ಬಳು ಯಾರನ್ನೋ ನಂಬಿ ಮೋಸ ಹೋದಳಂತೆ ಎಂಬುದು ನಮ್ಮ ವೈಯಕ್ತಿಕ ಜೀವನವನ್ನು ಯಾವ ರೀತಿಯಲ್ಲೂ ಸುಧಾರಿಸುವ ಸಂಗತಿಯಲ್ಲ. ಆದರೆ ಆತ ಹೇಗೆ ಮೋಸ ಮಾಡಿದ ಅಥವಾ ಈಕೆ ಹೇಗೆ ನಂಬಿ ಕೆಟ್ಟಳು Corruption-in-News-Mediaಎಂಬುದನ್ನು ಕೆದಕಿ, ಬೆದಕಿ ಆಡಿಯೋ ವಿಡಿಯೋ (ಅಸಲಿಯೋ ನಕಲಿಯೋ ತಿಳಿಯುವುದು ಆಮೇಲೆ) ಇತ್ಯಾದಿ ಸಿಕ್ಕಿದ ದಾಖಲೆಗಳನ್ನು ಮತ್ತೆ ಮತ್ತೆ ಪ್ರಸಾರ ಮಾಡುತ್ತಿದ್ದರೆ ಕಣ್ಣು ಬಾಯಿ ಬಿಟ್ಟುಕೊಂಡು ನೋಡುವ, ತಮ್ಮ ನೂರು ಸಮಸ್ಯೆಗಳನ್ನು ಬದಿಗಿಟ್ಟು ಅದರ ಬಗ್ಗೆ ಹರಟುವ ಜನರ ಸಂಖ್ಯೆಯೇನೂ ಕಡಿಮೆ ಇಲ್ಲ. ಚಾನೆಲ್ಲಿಗೆ ಬೇಕಾದುದು ಇಂಥವರೇ. ಇಂಥವರ ಸಂಖ್ಯೆ ಹೆಚ್ಚಿದಷ್ಟೂ ಅದರ ಟಿಆರ್‌ಪಿ ಹೆಚ್ಚುತ್ತದೆ! ಈ ಬಗೆಯ ಸಂಗತಿಗಳಲ್ಲಿ ಬಹುಪಾಲು ಜನರಿಗೆ ಇರುವ ಕೆಟ್ಟ ಕುತೂಹಲವನ್ನು ಚಾನೆಲ್ಲುಗಳು ಹಣವನ್ನಾಗಿ ಪರಿವರ್ತಿಸಿಕೊಳ್ಳುತ್ತವೆ.

ಗಂಡ-ಹೆಂಡತಿಯ, ಪ್ರಿಯಕರ-ಪ್ರೇಯಸಿಯ, ಅಪ್ಪ-ಮಕ್ಕಳ ಒಟ್ಟಿನಲ್ಲಿ ನಾಲ್ಕು ಗೋಡೆ ನಡುವೆ ಇರಲೆಂದು ಸಮಾಜ ಬಯಸುವ ಸಂಗತಿಗಳನ್ನು ನ್ಯಾಯದ ಹೆಸರಿನಲ್ಲಿ ಮಾಧ್ಯಮಗಳು ಬಯಲಿಗೆ ಎಳೆಯುತ್ತವೆ. ಇಂಥ ವಿಷಯಗಳ ಸರಿ ತಪ್ಪುಗಳನ್ನು ಪರಿಶೀಲಿಸಲು ನಮ್ಮಲ್ಲಿ ಕಾನೂನು ವ್ಯವಸ್ಥೆ ಇದೆ ಎಂಬುದನ್ನು ಅವು ಮರೆಯುತ್ತವೆ.

ಈ ಬಗೆಯ ವರದಿಗಾರಿಕೆಯಲ್ಲಿ ಮುದ್ರಣ ಮಾಧ್ಯಮಗಳೂ ಕಡಿಮೆ ಏನಿಲ್ಲ. ಇಂಥ ಸುದ್ದಿಗಳನ್ನೇ ಪ್ರಕಟಿಸುವ ಟ್ಯಾಬ್ಲಾಯ್ಡ್‌ಗಳು ಸಹಜ ಸುದ್ದಿ, ವಿಶ್ಲೇಷಣೆ ಹೊತ್ತು ತರುವ ಪತ್ರಿಕೆಗಳಿಗಳಿಗಿಂತ ಹೆಚ್ಚು ಪ್ರಸಾರ ಕಾಣುತ್ತವೆ!

ಕೆಲವು ಪತ್ರಿಕೆಗಳು ಒಮ್ಮೆ ಎಬಿಸಿ ವರದಿಯಲ್ಲಿ ಮೇಲಿನ ಸ್ಥಾನ ಪಡೆದರೆ ತಾವು ಆಡಿದ್ದೇ ಆಟ ಎಂಬಂತೆ ವರ್ತಿಸುತ್ತವೆ. ಅನೇಕ ಒಳ ವ್ಯವಹಾರಗಳು, ಬ್ಲಾಕ್‌ಮೇಲ್, ಗುಂಪುಗಾರಿಕೆ ಏನೆಲ್ಲ ಅಲ್ಲಿ ಶುರುವಾಗುತ್ತದೆ. ಸುದ್ದಿ ಯಾವುದು, ಜಾಹೀರಾತು ಯಾವುದು ಎಂಬುದು ಜಾಣ ಓದುಗರಿಗೂ ತಿಳಿಯದಂತೆ ಕೊಡಬಲ್ಲ ಅತಿ ಜಾಣತನ ಅವುಗಳಿಗೆ ಕರಗತವಾಗಿರುತ್ತದೆ. ಪತ್ರಿಕೆಯ ಪ್ರಭಾವದ ಮೂಲಕ ಬೇಳೆ ಬೇಯಿಸಿಕೊಳ್ಳುವುದು, ಸ್ವಾರ್ಥಕ್ಕೆ ನೆರವಾದವರನ್ನು ಸಂದರ್ಭ ಸೃಷ್ಟಿಸಿಕೊಂಡು ಹೊಗಳುವುದು, ಅಡ್ಡಿಯಾದವರನ್ನು ಮಟ್ಟ ಹಾಕಲು ಸಂದರ್ಭ ಸಿಕ್ಕಾಗ ಅಥವಾ ಸೃಷ್ಟಿಸಿಕೊಂಡು ಯತ್ನಿಸುವುದು ಇತ್ಯಾದಿ, ಇತ್ಯಾದಿ ನಡೆದೇ ಇರುತ್ತದೆ. ಬೆಣ್ಣೆಯಲ್ಲಿ ಕೂದಲು ತೆಗೆದಂತೆ ನಡೆ ನುಡಿ ತೋರಿಸಿಕೊಳ್ಳುವ ಜಾಣ್ಮೆ ಇದ್ದರೆ ಜಾಣ ಓದುಗರನ್ನು TV-Reporterಮರಳು ಮಾಡುವುದು ಕಷ್ಟವೇನೂ ಅಲ್ಲ. ಆದರೆ ಇವೆಲ್ಲ ಸದಾ ಕಾಲ ನಡೆಯುವುದಿಲ್ಲ. ಪತ್ರಿಕೆ ಓದುವವರು ಅಥವಾ ಟಿವಿ ವೀಕ್ಷಕರು ಓದು ಬರಹ ಗೊತ್ತಿರುವವರೇ. ಆದರೆ ಇವೆಲ್ಲ ಓದುಗರ ಗಮನಕ್ಕೆ ಬರುವಷ್ಟರಲ್ಲಿ ಸ್ವಾರ್ಥಿಗಳ ಬೇಳೆ ಬೆಂದಿರುತ್ತದೆ.

ಈ ಕಾರಣಕ್ಕಾಗಿಯೇ ಮಾಧ್ಯಮಗಳ ವಿಶ್ವಾಸಾರ್ಹತೆಯ ಸಮೀಕ್ಷೆ ಆಗಾಗ ನಡೆಯಬೇಕು. ಪಶ್ಚಿಮ ದೇಶಗಳಲ್ಲಿ ಕೆಲವು ಸಂಸ್ಥೆಗಳು ನಿಯತವಾಗಿ ಇಂಥ ಕೆಲಸವನ್ನು ವೃತ್ತಿಯಾಗಿಯೇ ಮಾಡುತ್ತವೆ. ಫ್ಯೂ ರಿಸರ್ಚ್ ಸೆಂಟರ್ ಫಾರ್ ಪೀಪಲ್ ಆಂಡ್ ಪ್ರೆಸ್ ಸಂಸ್ಥೆ ಅಮೆರಿಕದಲ್ಲಿ ಈಚೆಗೆ ಇಂಥ ಒಂದು ಸಮೀಕ್ಷೆ ನಡೆಸಿದೆ. ಅದರ ಪ್ರಕಾರ ಮೂರರಲ್ಲಿ ಎರಡು ಭಾಗ ಜನರಿಗೆ ತಾವು ಓದುವ, ಕೇಳುವ ಅಥವಾ ವೀಕ್ಷಿಸುವ ಸುದ್ದಿಯ ಖಚಿತತೆಯ ಬಗ್ಗೆ ಶಂಕೆ ಇದ್ದರೆ ಶೇ.53 ಜನರಿಗೆ ಸುದ್ದಿಯ ಬಗ್ಗೆ ವಿಶ್ವಾಸವೇ ಇಲ್ಲವಂತೆ.

ಆಂಧ್ರಪ್ರದೇಶದ ಸೆಂಟರ್ ಫಾರ್ ಮೀಡಿಯಾ ಸ್ಟಡಿ ನಡೆಸಿದ ಇಂಥ ಒಂದು ಸಮೀಕ್ಷೆಯಲ್ಲಿ ವಿದ್ಯುನ್ಮಾನ ಮಾಧ್ಯಮಕ್ಕಿಂತ ಮುದ್ರಣ ಮಾಧ್ಯಮದ ಸುದ್ದಿ ಹೆಚ್ಚು ವಿಶ್ವಾಸಾರ್ಹ ಎಂದು ಬಹುತೇಕ ಜನ ಹೇಳಿದ್ದಾರೆ. ಸ್ಕೂಪ್, ಬ್ರೇಕಿಂಗ್ ನ್ಯೂಸ್ ಕೊಟ್ಟು ಟಿಆರ್‌ಪಿ ಹೆಚ್ಚಿಸಿಕೊಳ್ಳುವ ಮತ್ತು ಹೆಚ್ಚು ಜನರನ್ನು ತಲುಪುವ ಪೈಪೋಟಿಯಲ್ಲಿ ಮಾಧ್ಯಮಗಳು ಸಾಮಾಜಿಕ ಜವಾಬ್ದಾರಿಯ ಮೂಲಭೂತ ಸಂಗತಿಯನ್ನೇ ಮರೆಯುತ್ತಿವೆ. ಏನೇನೋ ಸ್ವಾರ್ಥ ಉದ್ದೇಶದಿಂದ ಮಾಧ್ಯಮಗಳು ತಮ್ಮ ಮೂಗಿನ ನೇರಕ್ಕೇ ಸಮಾಜವನ್ನು ಅಡ್ಡಾದಿಡ್ಡಿ ಎಳೆದು ದಿಕ್ಕು ತಪ್ಪಿಸಲು ತೊಡಗಿದರೆ ಅದೇ ಸಮಾಜದ ಒಂದು ಭಾಗವಾದ ಮಾಧ್ಯಮಗಳು ಸುರಕ್ಷಿತವಾಗಿ ಇರಬಲ್ಲವೇ, ಕುಳಿತ ಟೊಂಗೆಯ ಬುಡವನ್ನೇ ಕಡಿಯುವ ಮೂರ್ಖತನ ಇದಾಗದೇ ಎಂಬುದೇ ಈಗ ಕೇಳಿಕೊಳ್ಳಬೇಕಾದ ಪ್ರಶ್ನೆ.

11 thoughts on “ತೀರ್ಪು ನೀಡುವ ಮಾಧ್ಯಮಗಳು!

  1. M A Sriranga

    ಡಾ. ಶ್ರೀಪಾದ್ ಭಟ್ ಅವರಿಗೆ— ಕರ್ನಾಟಕದಲ್ಲಿ ಕಳೆದ ಒಂದು ವಾರದಲ್ಲಿ ಮಹಿಳೆಯರ ಮೇಲೆ ಏಳೆಂಟು ಅತ್ಯಾಚಾರಗಳು ನಡೆದಿವೆ. ಅದರಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿರುವ ಒಂದು ಚಿಕ್ಕಮಗುವೂ ಇದೆ. ಈ ಸುದ್ದಿಗಳನ್ನು T V ಸುದ್ದಿ ವಾಹಿನಿಗಳು ಮತ್ತು ಪತ್ರಿಕೆಗಳು ವರದಿ ಮಾಡಿದ್ದೇ ತಪ್ಪು ಎಂದು ಹೇಗೆ ಹೇಳುತ್ತೀರಿ. ಈ ಮಾಧ್ಯಮಗಳಿಂದ ಜನಗಳಿಗೆ ಉಪಯೋಗವೇ ಆಗಿಲ್ಲ ಎಂಬ ರೀತಿಯ ನಿಮ್ಮ ವಾದ ಸರಿಯಿಲ್ಲ. ಯಾವುದೋ ದೇಶಿಯ/ವಿದೇಶೀಯ ಸಂಸ್ಥೆ sample survey ಮಾಡಿ ನಂತರ ಕೊಡುವ ತೀರ್ಮಾನಗಳೇ ನಿರಂತರ ಸತ್ಯವಾಗುವುದಿಲ್ಲ. ಇನ್ನು ತಾವು ಒಂದು ಘಟನೆಯನ್ನು ಮೊದಲಿನಿಂದ ಕೊನೆಯ ತನಕ T V ವಾಹಿನಿಯ ವರದಿಗಾರರು ಮತ್ತು ಕ್ಯಾಮೆರಾ ಸಿಬ್ಬಂದಿ ಹೇಗೆ live ಆಗಿ ತೋರಿಸಲು ಸಾಧ್ಯ ಎಂದು ಪ್ರಶ್ನಿಸಿದ್ದೀರಿ. ಸರ್ಕಾರಿ ಕಛೇರಿಗಳಲ್ಲಿ ನೌಕರರು ಲಂಚ ಪಡೆದ ತಕ್ಷಣ ಲೋಕಾಯುಕ್ತರು/ಸಿ ಬಿ ಐ ನವರ ಬಲೆಗೆ ಬೀಳಲು ಹೂಡುವ ತಂತ್ರ ತಮಗೆ ಗೊತ್ತಿರಬಹುದು. ಲಂಚಕ್ಕೆ ಪೀಡಿಸುವ ಅಧಿಕಾರಿಯ ಬಗ್ಗೆ ಜನಗಳೇ ಮುಂಚಿತವಾಗಿ ಆ ಅಧಿಕಾರಿಗಳಿಗೆ ತಿಳಿಸಿ ನಂತರ ಅವರು ಸರ್ಕಾರಿ ನೌಕರಿಗೆ ಲಂಚ ಕೊಟ್ಟ ತಕ್ಷಣ ಮಫ್ತಿಯಲ್ಲಿರುವ ಆ ಅಧಿಕಾರಿಗಳು ಅಂತಹ ನೌಕರರನ್ನು ಹಿಡಿಯುತ್ತಾರೆ. ಟಿ ವಿ ಯವರಿಗೂ ಸಹ ಜನಗಳು/ ಸಂಘಟನೆಗಳವರು ಕೆಲವೊಮ್ಮೆ ಮೊದಲೇ ತಿಳಿಸಿ ಅಂತಹ ಸುದ್ದಿಯ live ಪ್ರಸಾರ ನಡೆಯುತ್ತವೆ. ಇನ್ನು ಕೆಲವೊಮ್ಮೆ ಸುದ್ದಿ ಸಂಸ್ಥೆಗಳೇ ಅನುಮಾನ ಇರುವವರ ಮೇಲೆ sting operation ನಡೆಸಿ ನಂತರ ಪ್ರಸಾರ ಮಾಡುತ್ತಾರೆ. sting operation live ಆಗಿ ಪ್ರಸಾರ ಆಗುವುದಿಲ್ಲ. ಈಗಂತೂ ಸರಿ ಸುಮಾರು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಟಿ ವಿ ಸುದ್ದಿ ವಾಹಿನಿಗಳ ವರದಿಗಾರರಿರುತ್ತಾರೆ. ಅವರುಗಳ ಮೊಬೈಲ್ ಸಂಖ್ಯೆಯನ್ನು ಆ ವಾಹಿನಿಗಳವರೇ ಆಗಾಗ ಪ್ರಸಾರ ಮಾಡುತ್ತಿರುತ್ತಾರೆ.

    Reply
    1. Shripad

      ಏನೋಪ್ಪ. ಶ್ರೀರಂಗ ಅವರೇ, ನಾನು ಕಂಡದ್ದು, ನೋಡಿದ್ದು, ಓದಿದ್ದು ಮತ್ತು ಅನುಭವಿಸಿದ ಮಾಹಿತಿಗಳ ಆಧಾರದಲ್ಲಿ ಲೇಖನ ಬರೆದಿದ್ದೇನೆ. ಇಷ್ಟಾಗಿಯೂ ಈ ಮಾಧ್ಯಮಗಳು ಹೀಗೆಲ್ಲ ಆಡುವುದು ಅತ್ಯಂತ ಸರಿಯಾಗಿದೆ ಎಂದು ನಿಮಗೆ ಅನಿಸಿದರೆ ನನ್ನದೇನೂ ತಕರಾರಿಲ್ಲ. ನಿಮ್ಮ ಪ್ರಶ್ನೆಗಳಿಗೆ ಮತ್ತೇನೂ ಉತ್ತರ ನನ್ನ ಬಳಿ ಇಲ್ಲ.

      Reply
  2. ಮದನ್ ಮೋಹನ್

    ಪ್ರಿಯರೆ, ಈ ಲೇಖನ ಓದುತ್ತಿರುವ ಹೊತ್ತಿಗೆ.. ನನ್ನ ಕೈಕಾಲುಗಳೆಲ್ಲ ಅದುರುತ್ತಿದ್ದವು. ನಿನ್ನೆ ಮತ್ತು ಇಂದು ಟಿ.ವಿ. ಚಾನೆಲ್ ಗಳು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಡುತ್ತಿರುವ ಚರ್ಚೆಗೆ ಸ್ತ್ರೀ ಶೋಷಣೆಯನ್ನು ವಿರೋಧಿಸಿ ಮುಖವಾಡವಿದೆ. ಪ್ರಕರಣಗಳನ್ನು ಹೆಕ್ಕಿ ಹೆಕ್ಕಿ ಇರುವ ಸರಕಾರದ ಬಗ್ಗೆ ವ್ಯವಸ್ಥಿತವಾಗಿ ಅಸಹನೆ, ವಿರೋಧ ಹುಟ್ಟಿಸುವ ಯತ್ನವಿದು. ನಾನೇನು ಕಾಂಗ್ರೆಸಿಗನಲ್ಲ. ಆದರೆ ಬಿಜೆಪಿಯ ತಂತ್ರವಿದು ಎಂಬುದನ್ನು ಹೇಳುವುದಕ್ಕೆ ಪ್ರಯತ್ನಿಸುತ್ತಿದ್ದೇನೆ.
    ಪರಮ ನೀಚ ರಾಜಕಾರಣಕ್ಕೆ ಬಿಜೆಪಿ ಇಳಿದಿದೆ. ನಾರಿಯನ್ನು ಪೂಜಿಸಬೇಕು, ಅದು ನಮ್ಮ ಸಂಸ್ಕೃತಿ ಎಂದು ಬೊಬ್ಬೆ ಹೊಡೆದುಕೊಳ್ಳುವ ಬಿಜೆಪಿಯ ಮಂದಿ ಹೆಣ್ಣನ್ನೆ ತಮ್ಮ ಅಸ್ತ್ರವನ್ನಾಗಿಸಿಕೊಂಡಿದ್ದಾರೆ ಎಂಬುದನ್ನು ನಾನಿಲ್ಲಿ ಹೇಳಲು ಬಯಸುತ್ತಿರುವುದು. ಅತ್ಯಂತ ಸೂಕ್ಷ್ಮವಾದ ವಿಷಯವಿದು. ನನ್ನ ಮಾತುಗಳು ಸ್ತ್ರೀದ್ವೇಷಿಯಾಗಿ ಕೇಳಿಸಿದರೆ ಅಚ್ಚರಿಯಿಲ್ಲ. ನನಗೂ ತಾಯಿ, ತಂಗಿ, ಅಕ್ಕಂದಿರಿದ್ದಾರೆ. ಇದು ಅರಿತೇ ಈ ಮಾತುಗಳನ್ನಾಡುತ್ತಿದ್ದೇನೆ.
    ಉತ್ತರ ಪ್ರದೇಶದಲ್ಲಿ ಆಗಿದ್ದೂ, ಈಗ ಕರ್ನಾಟಕದಲ್ಲಿ ಆಗುತ್ತಿರುವುದು ಎಲ್ಲಕ್ಕೂ ಸಂಬಂಧವಿದೆ ಎಂಬುದು ನನ್ನ ಗುಮಾನಿ. ಬಿಜೆಪಿಯೇತರ ಸರ್ಕಾರವಿರುವಲ್ಲಿ ಬಿಜೆಪಿ ಇಂಥ ಕೆಲಸವನ್ನು ಆರಂಭಿಸಿದೆ ಎನ್ನಿಸುತ್ತಿದೆ. ನಿನ್ನೆ ಫೇಸ್ ಬುಕ್ ನಲ್ಲಿ ಕೆಲಗೆಳೆಯರು ಈ ಸಾಲುಗಳನ್ನು ಶೇರ್ ಮಾಡಿಕೊಂಡಿದ್ದರು.
    The systematic use of gang-rape as a weapon occurred in the Surat riots after the Babri Masjid demolition, and an ugly innovation was the videotaping of the gang-rapes. This was not a case of some random bystander filming the attacks, but a meticulously-planned spectacle with the venues flood-lit despite the fact that electric wires to the rest of the neighbourhood had been cut. According to Praful Bidwai, Modi was the mastermind of the unspeakable atrocities against women in the 1992 Surat riots. Modi is pictured there with Advani in their wake….

    ನಿನ್ನೆ ಬೆಂಗಳೂರು ನಗರದ ಯಾವುದೇ ಬಡಾವಣೆಯಲ್ಲಿ ಗ್ಯಾಂಗ್ ರೇಪ್ ನಡೆದು, ಅದನ್ನು ವಿಡಿಯೋ ರೆಕಾರ್ಡ್ ಮಾಡಿ, ಎಚ್ಚರಿಕೆ ಸಂದೇಶವನ್ನು ಗೋಡೆಯ ಮೇಲೆ ಬರೆದು ಹೋಗಿರುವುದಕ್ಕೂ ಮೇಲೆ ಓದಿದ ಸಾಲುಗಳಿಗೂ ಹೋಲಿಕೆ ಕಾಣುತ್ತಿದೆ. ಇದು ನಿಜಕ್ಕೂ ಆತಂಕದ ವಿಷಯ. ಭಯ ಹುಟ್ಟಿಸುತ್ತಿದ್ದಾರೆ ಸ್ವಾಮಿ, ಜನರಲ್ಲಿ ಭಯ ಹುಟ್ಟಿಸುತ್ತಿದ್ದಾರೆ.
    ನನ್ನ ಮಾತುಗಳು ರಾಜಕೀಯ ಪ್ರೇರಿತವಾಗಿ ಕೇಳಿಸಿದರೂ ಸರಿ, ಸ್ತ್ರೀ ದ್ವೇಷಿಯಾಗಿ ಕೇಳಿಸಿದರೂ ಸರಿ. ನಾವು ಈಗ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಬೇರೆ ಬೆಳಕಿನಲ್ಲಿ ನೋಡಬೇಕು. ಎಲ್ಲ ಅತ್ಯಾಚಾರಗಳು ರಾಜಕೀಯ ಹುನ್ನಾರದಿಂದಾದವು ಎನ್ನುತ್ತಿಲ್ಲ. ಆದರೆ ಅವುಗಳನ್ನು ಸೆನ್ಸ್ ಮಾಡುವಷ್ಟು ಸೂಕ್ಷ್ಮ, ವಿಚಾರವಂತಿಕೆಯನ್ನು ನಮ್ಮ ಮಾಧ್ಯಮ ಪಡೆದುಕೊಳ್ಳಬೇಕು. ವರ್ತಮಾನ ಈ ಆಯಾಮದ ಚರ್ಚೆಗೆ ಚಾಲನೆ ಕೊಟ್ಟರೆ ಒಳ್ಳೆಯದು.
    http://www.sacw.net/IMG/pdf/The_Sexual_Politics_of_Modi_and_the_Sangh_Parivar-28oct2013.pdf

    Reply
  3. M A Sriranga

    ಮದನ ಮೋಹನ ಅವರಿಗೆ —>>>ವರ್ತಮಾನ ಈ ಆಯಾಮದ ಚರ್ಚೆಗೆ ಚಾಲನೆ ಕೊಟ್ಟರೆ ಒಳ್ಳೆಯದು>>> ನೀವೇ ಚಾಲನೆ ಕೊಟ್ಟಿದ್ದೀರಲ್ಲ ಸ್ವಾಮೀ !! ನೀವು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಾಗಿರಿ ಅದು ನನಗೆ ಮುಖ್ಯವಲ್ಲ. ತಮ್ಮ ಮಾತಿನ ಧಾಟಿ ನೋಡಿದರೆ ನಿನ್ನೆ ನಮ್ಮ ಕರ್ನಾಟಕ ಸರ್ಕಾರ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ನಡೆದುಕೊಂಡ ರೀತಿಗೂ ತಮ್ಮ ನೀತಿಗೂ ವ್ಯತ್ಯಾಸವೇನಿಲ್ಲ. ವಿಧಾನಸಭೆಯಲ್ಲಿ ಈ ವಿಷಯದ ಚರ್ಚೆ ನಡೆಯುವಾಗ ಅದಕ್ಕೂ ತಮಗೂ ಸಂಬಂಧವಿಲ್ಲದಂತೆ ಕೂತುಕೊಂಡು ಮಹಿಳೆಯರ ರಕ್ಷಣೆಗೆ ಕುರಿತ ಪುಸ್ತಕ ಓದುವ ಆ ಖಾತೆಗೆ ಸಂಬಂಧಪಟ್ಟ ಮಂತ್ರಿಗಳು, ನಿದ್ರೆಗೆ ಜಾರಿದ ಮಂತ್ರಿಗಳು, ಯಾವ ನಿಯಮದಡಿ ಚರ್ಚೆಗೆ ಅವಕಾಶ ನೀಡಬೇಕೆಂಬ ವಿಚಾರಕ್ಕೆ ವಿಧಾನಪರಿಷತ್ತಿನ ಅಮೂಲ್ಯವಾದ ಎರಡು ಗಂಟೆಗಳಷ್ಟು ಕಾಲ ವ್ಯರ್ಥಮಾಡುವ ಹಿರಿಯರು. ಇವೆಲ್ಲಾ ಏನನ್ನು ಬಿಂಬಿಸುತ್ತವೆ? ಮೀಡಿಯಾಗಳ ಹುನ್ನಾರವೆಂದೆ? ಅಥವಾ ವಿರೋಧ ಪಕ್ಷದವರ ಸಂಚು ಎಂದೇ? ಅಥವಾ ಸರ್ಕಾರದ ನಿಷ್ಕ್ರಿಯತೆಯನ್ನೇ? ಮದನ ಮೋಹನರೇ ಕರ್ನಾಟಕದಲ್ಲಿ ಒಂದುವಾರದಿಂದ ನಡೆಯುತ್ತಿರುವ ಪೈಶಾಚಿಕ ಕೃತ್ಯಗಳನ್ನು ತಮ್ಮ ಪಕ್ಷಾಧಾರಿತ ಕನ್ನಡಕ ತೆಗೆದು ಒಮ್ಮೆ ನೋಡಿ.

    Reply
    1. Shripad

      ಏನಿಲ್ಲ ಶ್ರೀರಂಗ ಅವರೇ, ರಾಜ್ಯದಲ್ಲಿ ಮಳೆ ಬರ್ತಿಲ್ಲ, ಅತ್ಯಾಚಾರ ಹೆಚ್ಚುತ್ತಿದೆ, ಅಗತ್ಯ ವಸ್ತುಗಳ ಬೆಲೆ ಏರುತ್ತಿದೆ, ನಿರುದ್ಯೋಗ ಕಾಡುತ್ತಿದೆ, ದೌರ್ಜನ್ಯ ಏರುತ್ತಿದೆ-ಇತ್ಯಾದಿ ಎಲ್ಲದಕ್ಕೂ ಕಾರಣ ವಿರೋಧ ಪಕ್ಷದ ಸಂಚು ಅಷ್ಟೆ!!

      Reply
  4. ಮದನ್ ಮೋಹನ್

    ಶ್ರೀರಂಗ.. ನಾನು ಕಾಂಗ್ರೆಸ್ ನ ಸೋಗಲಾಡಿತನವನ್ನು, ಉಪೇಕ್ಷೆಯನ್ನು ಖಂಡಿಸುತ್ತೇನೆ. ಭರವಸೆ ಇಟ್ಟುಕೊಳ್ಳಬಹುದಾಗಿದ್ದ ಸಿಎಂ ಒಬ್ಬರು ಇಷ್ಟೊಂದು ಕೆಟ್ಟದಾಗಿ ಕಾರ್ಯನಿರ್ವಹಿಸಬಹುದು ಎಂಬ ಊಹೆಕೂಡ ಇರಲಿಲ್ಲ. ಅವರ ಬಗ್ಗೆ ಸಿಂಪತಿಯೂ ಇಲ್ಲ.. ಅವರ ಬೇಜವಾಬ್ದಾರಿತನಕ್ಕೆ ನಿಮ್ಮೊಂದಿಗೆ ನನ್ನದು ಧಿಕ್ಕಾರ. ನಿರ್ಲಜ್ಜ, ನಿಶಕ್ತ ಸರಕಾರಕ್ಕೆ ನಾಚಿಕೆಯಾಗಬೇಕು. ಎರಡು ಮಾತಿಲ್ಲ. ಆದರೆ ಒಂದು ಮಾಧ್ಯಮಕ್ಕೆ ಇರಬಹುದಾದ ಸಾಮಾಜಿಕ ಕಾಳಜಿ, ಹೊಣೆಗಾರಿಕೆಯನ್ನಾದರೂ ಯೋಚಿಸಿ ಸರ್‌.. ಇಷ್ಟು ದಿನ ಸುದ್ದಿಗಳನ್ನು ಬಿಂಬಿಸುವ ಮೂಲಕ ನಮ್ಮ ಮನೆಯ ಹೆಣ್ಣುಮಕ್ಕಳನ್ನು ಇನ್ನು ಮುಂದೆ ಹೊರಗೆ ಕಳಿಸುವುದೇ ಬೇಡ ಎಂಬಷ್ಟು ಆತಂಕ ಹುಟ್ಟಿಸುವುದೇ ಅದರ ಕೆಲಸವೆ? ಪ್ರಕರಣವನ್ನು ಸುದ್ದಿ ಮಾಡಲಿ, ಜವಾಬ್ದಾರಿ ಇರುವವರಿಗೆ ಬಿಸಿ ಮುಟ್ಟಿಸಲಿ. ಆದರೆ ಇವತ್ತು ಇಷ್ಟು ಪ್ರಕರಣ ದಾಖಲಾದವು ಎಂದು ಹೇಳುವುದು, ಗೌರವಯುತ ಸ್ಥಾನದಲ್ಲಿರುವ ಹೆಣ್ಣುಮಕ್ಕಳನ್ನು ತೆರೆಯ ಮೇಲೆ ಅಳಿಸುವುದು ಯಾವ ರೀತಿಯ ಸಂದೇಶ ಕೊಡುತ್ತದೆ. ಪ್ರಜ್ಞಾವಂತ ಮಾಧ್ಯಮ ಭಾವುಕತೆಯನ್ನಲ್ಲ ಪ್ರದರ್ಶಿಸಬೇಕಾಗಿರುವುದು, ಸಂಯಮ ಮತ್ತು ವಿವೇಚನೆಯನ್ನ. ಅದನ್ನು ನಮ್ಮ ಮಾಧ್ಯಮಗಳು ತೋರಿಸಿವೆಯೇ? ಮಾಧ್ಯಮಗಳು ನಿದ್ರೆ ಹೊಡೆಯುವ, ಪುಸ್ತಕ ಓದುವ ಮಂತ್ರಿಗಳನ್ನು ಹಿಡಿದು ಕೇಳಬೇಕಿತ್ತು. ಮಾಧ್ಯಮಗಳಿಗೆ ಆ ಶಕ್ತಿ ಇದೆ ತಾನೇ. ಅದನ್ನು ಹೆಚ್ಚು ಮಾಡಲಿ. ಭಯ ಹುಟ್ಟಿಸುವ ಕೆಲಸವನ್ನಲ್ಲ.
    ಈ ಪ್ರಕರಣಗಳ ಹಿಂದೆ ರಾಜಕೀಯ ಇರಲಿ ಬಿಡಲಿ.. ಒಂದು ಎಮ್ಮೆಮ್ಮೆಸ್ ಎಲ್ಲೋ ಸಿಕ್ಕರೆ ಜೀವಕ್ಕೂ, ಮಾನಕ್ಕೂ ಬೆಲೆ ಕೊಡದೆ ಬಿತ್ತರಿಸುವ ಈ ಮಾಧ್ಯಮಗಳು, ಸಂತ್ರಸ್ತ ಹೆಣ್ಣು ಜೀವಗಳ ತಂದೆ -ತಾಯಿಯರನ್ನು ತಂದು ಕೂರಿಸಿ ಅವರ ಬದುಕನ್ನು ನರಕ ಮಾಡಬಹುದೆ?
    ಆನ್ ಲೈನಿನಲ್ಲೇ ಕೆಲವು ನ್ಯಾಯವಾದಿಗಳು, ಸಂತ್ರಸ್ತರು, ಅವರ ಸ್ನೇಹಿತರು ಸಂಬಂಧಿಗಳನ್ನು ಸ್ಟುಡಿಯೋಗೆ ಕರೆಸಿ, ಚರ್ಚಿಸುವ ಮತ್ತು ಅವರ ಮಾಹಿತಿಯನ್ನು ಬಿತ್ತರಿಸುವ ವಿಷಯದಲ್ಲಿ ಕಾನೂನು ಮರೆತಿರುವುದನ್ನು ಬರೆದಿದ್ದಾರೆ. ಗಮನಿಸಿ.
    ರಾಜಕಾರಣಿಗಳ ಬೇಜವಾಬ್ದಾರಿಯನ್ನು ಪ್ರಶ್ನಿಸಬೇಕು. ಹಾಗೇ ಮಾಧ್ಯಮಗಳನ್ನೂ.. ಅವರೇನು ಪ್ರಶ್ನಾತೀತರಲ್ಲ. ಅವರು ಹೇಳಿದ್ದೆಲ್ಲಾ ಸತ್ಯವಲ್ಲ.

    Reply
    1. Shripad

      ಮದನ್ ಅವರೇ, “ಹಾಗೇ ಮಾಧ್ಯಮಗಳನ್ನೂ.. ಅವರೇನು ಪ್ರಶ್ನಾತೀತರಲ್ಲ. ಅವರು ಹೇಳಿದ್ದೆಲ್ಲಾ ಸತ್ಯವಲ್ಲ” ಹೌದು. ಇದರ ಬಗ್ಗೆ ಮತ್ತೆರಡು ಲೇಖನಗಳನ್ನು ಬರೆದಿದ್ದೇನೆ. ಅವು ಇಲ್ಲೇ ಪ್ರಕಟವಾದರೆ ಮಾಧ್ಯಮ ಕುರಿತ ಮತ್ತಷ್ಟು ಪ್ರಶ್ನೆಗಳಿಗೆ ಉತ್ತರ ಸಿಗಬಹುದು (ಶ್ರೀರಂಗರ ಪ್ರಶ್ನೆಯೂ ಸೇರಿ).

      Reply
  5. Krishna Bhat

    ಮಾಧ್ಯಮಗಳೇ ತೀರ್ಪು ನೀಡುತ್ತಿವೆ ಎಂದಿಟ್ಟುಕೊಳ್ಳೋಣ. ಹಾಗಾದಾಗ ಕನಿಷ್ಠ ’ಆರೋಪಿ’ಯನ್ನಾದರೂ ಸರ್ಕಾರಗಳು, ಪೊಲೀಸರು ಬಂಧಿಸಬೇಕಲ್ಲ. ಅಂಥ ಜಡ ಸರ್ಕಾರಕ್ಕೆ ಇಷ್ಟು ಕಠೋರ ಮಾಧ್ಯಮ ಅಂತ ನಿಮಗೇಕೆ ಅನ್ನಿಸಿಲ್ಲ. ನನ್ನ ಪ್ರಕಾರ ಮಾಧ್ಯಮಗಳು ವರದಿಯಲ್ಲಿ ಇನ್ನೂ ತೀಕ್ಷ್ಣವಾಗಬೇಕು. ಅಂದಾಗ ಮಾತ್ರ ಸರ್ಕಾರದ ಹುಳುಕುಗಳು ಬಹಿರಂಗವಾಗಬಹುದು.

    Reply

Leave a Reply to pammi Cancel reply

Your email address will not be published. Required fields are marked *