ತನ್ನ ಹುಳುಕು ನೋಡಿಕೊಳ್ಳದ ಮಾಧ್ಯಮ


ಡಾ. ಶ್ರೀಪಾದ ಭಟ್


 

ಮಾಧ್ಯಮಗಳನ್ನು ಸಂವಿಧಾನದ ನಾಲ್ಕನೆಯ ಸ್ತಂಭ ಎಂದವನು ಎಡ್ಮಂಡ್ ಬರ್ಕ್ ಅದ್ಯಾವ ಗಳಿಗೆಯಲ್ಲಿ ಹಾಗೆಂದಿದ್ದನೋ, ಇವು ಇನ್ನೂ ಮುಂದೆ ಹೋಗಿ ತಾವೇ ಪ್ರಧಾನ ಸ್ತಂಭ ಎಂಬಂತೆ ವರ್ತಿಸುತ್ತಿವೆ.

ಸಮಾಜದ ಎಲ್ಲ ವಿಷಯ, ಸ್ತರಗಳ ಬಗ್ಗೆ ಮಾತನಾಡುವ, ಬುದ್ಧಿ ಹೇಳುವ ಮತ್ತು ಕಲಿಸುವ ಮಾಧ್ಯಮಗಳು ತನ್ನೊಳಗಿನ ಹುಳುಕಿಗೆ ಔಷಧ ಹುಡುಕುವುದಿರಲಿ, ನೋಡಿಕೊಳ್ಳಲೂ ತಯಾರಿಲ್ಲ. ಸದ್ಯದ ವಿದ್ಯಮಾನಗಳು ಮಾಧ್ಯಮಗಳ ಹುಳುಕನ್ನು ಎತ್ತಿ ತೋರಿಸುತ್ತವೆ. tv-mediaಸುತ್ತಲಿನ ಸುದ್ದಿಯನ್ನು ದೊಡ್ಡದಾಗಿ ಬಿಂಬಿಸುವ ಮಾಧ್ಯಮಗಳು ಎಂದೂ ಸುದ್ದಿಮನೆಯ ಸುದ್ದಿ ಹೊರಗೆ ಹೋಗದಂತೆ ನೋಡಿಕೊಳ್ಳುತ್ತವೆ. ಬೆರಳೆಣಿಕೆಯ ಮುದ್ರಣ ಮಾಧ್ಯಮ ಹಾಗೂ ವಿದ್ಯುನ್ಮಾನ ಮಾಧ್ಯಮಗಳಿದ್ದಾಗ ಅವುಗಳ ಸಾರ್ವಭೌಮತ್ವ ನಡೆಯುತ್ತಿತ್ತು. ಆದರೇನು ಮಾಡುವುದು? ಈಗ ಬಗೆ ಬಗೆಯ ಮಾಧ್ಯಮಗಳು ಕಾಲಿಟ್ಟಿವೆ. ಮೊಬೈಲು, ಬ್ಲಾಗು, ಫೇಸ್‌ಬುಕ್, ಟ್ವೀಟ್ ಹೀಗೆ ಅನೇಕಾನೇಕ ಸಾಮಾಜಿಕ ತಾಣಗಳು ಮಾಧ್ಯಮ ಸತ್ಯವನ್ನು ಹೊರಗೆಳೆಯುತ್ತವೆ. ಜನ ಈಗ ಒಂದಕ್ಕಿಂತ ಹೆಚ್ಚು ಮಾಧ್ಯಮ ನೋಡುತ್ತಾರೆ ಅಥವಾ ಓದುತ್ತಾರೆ. ಹೀಗಾಗಿ ತಾವು ಕೊಟ್ಟಿದ್ದೇ ಸರಿ ಎಂದು ಯಾವ ಮಾಧ್ಯಮವೂ ಭಾವಿಸುವಂತಿಲ್ಲ.

ಭಾರತದಲ್ಲಿ ಇಂದು ಸುಮಾರು 70,000 ಸುದ್ದಿಪತ್ರಿಕೆಗಳೂ 690 ಸ್ಯಾಟಿಲೈಟ್ ಚಾನೆಲ್ಲುಗಳೂ ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ರಾಷ್ಟ್ರ, ರಾಜ್ಯ, ಪ್ರಾಂತ ಮಟ್ಟದ ಪತ್ರಿಕೆಗಳು ಸೇರಿವೆ. ಚಾನೆಲ್ಲುಗಳಲ್ಲಿ ಸ್ಥಳೀಯ ಕೇಬಲ್ ನೆಟ್‌ವರ್ಕ್ ಜಾಗ ಪಡೆದಿಲ್ಲ. ಇವುಗಳಲ್ಲಿ ಸುಮಾರು 80 ಚಾನೆಲ್ಲುಗಳು ಇಪ್ಪತ್ತನಾಲ್ಕು ಗಂಟೆ ಸುದ್ದಿ ಬಿತ್ತರಿಸಲೆಂದೇ ಇವೆ. ಭಾರತದಲ್ಲಿ ನಿತ್ಯ ಈ ಎಲ್ಲ ಪತ್ರಿಕೆಗಳು ಸುಮಾರು 100 ದಶಲಕ್ಷ ಪ್ರತಿಗಳನ್ನು ಓದುಗರಿಗೆ ತಲುಪಿಸುತ್ತವೆ. ಇಷ್ಟಾದರೂ ನಮ್ಮ ಜನಕ್ಕೆ ಸುದ್ದಿ ದಾಹ ತೀರುವುದಿಲ್ಲ!

2011 ರಲ್ಲಿ ಹೊರಬಂದ 15 ನೆಯ ಜನಗಣತಿಯಂತೆ ನಮ್ಮ ಸಾಕ್ಷರತೆ ಶೇ.74.04. ಇವರಲ್ಲಿ ಹೆಚ್ಚು ಜನರನ್ನು ಸೆಳೆಯುವುದಷ್ಟೇ ಮಾಧ್ಯಮಗಳ ಕೆಲಸ. ಈ ಪೈಪೋಟಿಯಲ್ಲಿ ಜನ ಮತ್ತು ಒಟ್ಟಾರೆ ಸಮಾಜದ ಮೇಲೆ ತಾವು ಬಿತ್ತರಿಸುವ ಸುದ್ದಿ ಯಾವ ಪ್ರಭಾವ ಬೀರಬಹುದು ಎಂಬುದನ್ನು tv-mediaಅವು ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ. ಯಾರಾದರೂ ಅಪಘಾತದಲ್ಲಿ ಸಿಕ್ಕು ನೆರವಿಗೆ ಅಂಗಲಾಚುತ್ತಿದ್ದರೆ ಅದನ್ನು ಹಾಗೆಯೇ ಬಿತ್ತರಿಸಿ ನೋಡಿ ನಮ್ಮ ಸಮಾಜ ಎಷ್ಟು ಕ್ರೂರವಾಗಿದೆ ಎಂದು ಹೇಳುವುದಷ್ಟೇ ಒಬ್ಬ ನಿಜವಾದ ಪತ್ರಕರ್ತನ ಕೆಲಸ, ಬದಲಿಗೆ ತಾನೇ ನೆರವಿಗೆ ಧಾವಿಸುವುದಲ್ಲ. ಇದು ಮಾಧ್ಯಮಗಳ ವೃತ್ತಿಪರತೆ!

ಸಮಾನತೆ, ನೈತಿಕತೆ, ಬಂಡವಾಳಶಾಹಿ ವಿರೋಧ, ಸಮಾಜವಾದ ಇತ್ಯಾದಿ ಮುಖವಾಡ ಹಾಕಿಕೊಳ್ಳುವ ಮಾಧ್ಯಮಗಳ ಒಳಸತ್ಯಗಳೇ ಬೇರೆ. ದಲಿತರ, ಹಿಂದುಳಿದವರ ಕುರಿತು ಸರ್ಕಾರದ ನಿಲುವುಗಳನ್ನು ಮತ್ತೆ ಮತ್ತೆ ಪ್ರಶ್ನಿಸುವ ನಮ್ಮ ಮಾಧ್ಯಮಗಳಲ್ಲಿ 1991 ರವರೆಗೆ ಒಬ್ಬನೇ ಒಬ್ಬ ದಲಿತ ಪತ್ರಿಕೋದ್ಯಮಿ ಇರಲಿಲ್ಲ ಎಂದು ಸಮೀಕ್ಷೆಯೊಂದು ಹೇಳುತ್ತದೆ. ಅದಿರಲಿ, ಇಂದಿಗೂ ದೇಶದ, ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ತೀರ್ಮಾನ ಕೈಗೊಳ್ಳುವ ಹಂತದಲ್ಲಿ ಒಬ್ಬ ದಲಿತನೂ ಇಲ್ಲ ಎನ್ನುತ್ತದೆ ಈಚಿನ ಒಂದು ಸಮೀಕ್ಷೆ. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಧೀರ ಮಾಧ್ಯಮಗಳಿಗೆ ಇದು ಎಂದೂ ಮುಖ್ಯ ಎನಿಸಿಲ್ಲ. ದೇಶವಿರಲಿ, ರಾಜ್ಯದ ಅತ್ಯಂತ ವಿಶ್ವಾಸಾರ್ಹ ಎಂದುಕೊಳ್ಳುವ ಪತ್ರಿಕೆಗಳ, ಉತ್ತಮ ಸಮಾಜಕ್ಕಾಗಿರುವ, ನಿರ್ಭೀತ, ನೇರ-ದಿಟ್ಟ ಚಾನೆಲ್ಲುಗಳ ಕತೆಯೂ ಇದೇ.

ಸಂಪಾದಕೀಯದಲ್ಲಿ, ವರದಿಗಳಲ್ಲಿ ಕಟ್ಟಾ ಸಮಾಜವಾದವನ್ನು ಪ್ರತಿಪಾದಿಸುವ, ಕುಟುಂಬ ರಾಜಕಾರಣವನ್ನು dalitsinmediaವಿರೋಧಿಸುವ ದೇಶದ ಪ್ರಮುಖ ಇಂಗ್ಲಿಷ್ ದೈನಿಕವೊಂದನ್ನು ನೂರಾರು ವರ್ಷಗಳಿಂದ ಒಂದೇ ಕುಟುಂಬ ನಿರ್ವಹಿಸುತ್ತಿದೆ. ಅದರ ಟ್ರಸ್ಟಿಗಳು, ಸಂಪಾದಕರೆಲ್ಲ ಆ ಕುಟುಂಬ ವರ್ಗದವರೇ. ಕೆಲ ತಿಂಗಳ ಹಿಂದೆ ಅದೇ ಪತ್ರಿಕೆಯಲ್ಲಿದ್ದ ಹಿರಿಯ ಪತ್ರಕರ್ತರೊಬ್ಬರು ಅದರ ಸಂಪಾದಕರಾದರು. ಮೂರ್ನಾಲ್ಕು ತಿಂಗಳಲ್ಲಿ ಅವರನ್ನು ಇಳಿಸಿ ಮತ್ತೆ ಆ ಕುಟುಂಬದವರೇ ಸಂಪಾದಕರಾದರು! ಆ ಪತ್ರಕರ್ತರು ರಾಜೀನಾಮೆ ನೀಡಿ ಹೊರಬಂದರು. ಕನ್ನಡದಲ್ಲೂ ಕುಟುಂಬದ, ಉದ್ಯಮಿಗಳ ಕೃಪೆಯಲ್ಲೇ ಬಹುತೇಕ ಮಾಧ್ಯಮಗಳಿರುವುದು. ಜನರಿಗೆ ಸತ್ಯ ತಲುಪಿಸುವ ಇವುಗಳ ಒಳಗಿನ ರಾಜಕಾರಣ ಬಲ್ಲವರೇ ಬಲ್ಲರು!

ಈಚೆಗೆ ನಡೆದ ಇನ್ನೊಂದು ಘಟನೆ. ಇದು ಇಂಗ್ಲಿಷ್ ವಾರಪತ್ರಿಕೆಯೊಂದರ ಸಂಪಾದಕನ ಕಥೆ. ಆ ಪತ್ರಿಕೆಯ ಉದ್ಯಮಿ ಮಾಲೀಕನಿಗೆ ಕೇಂದ್ರ ಸರ್ಕಾರ ನಡೆಸುತ್ತಿರುವ ರಾಜಕೀಯ ಪಕ್ಷದ ಹತ್ತಿರದ ನಂಟು. ಸಂಪಾದಕ ಎಲ್ಲ ಸುದ್ದಿಗಳನ್ನು ಪ್ರಕಟಿಸುವಂತೆಯೇ ಆ ದೊಡ್ಡ ಪಕ್ಷದ ಅಡ್ಡ ಸುದ್ದಿಗಳನ್ನೂ ಒಂದೆರಡು ಬಾರಿ ಪ್ರಕಟಿಸಿದ್ದ. ಮಾಲೀಕನ ಮೇಲೆ ಒತ್ತಡ ಬಂತು, ಮರುವಾರದಿಂದ ಆ ಸಂಪಾದಕ ಕೆಲಸ ಕಳೆದುಕೊಂಡ. ಅನಂತರ ತಾನೇಕೆ ಕೆಲಸ ಕಳೆದುಕೊಂಡೆ ಎಂಬುದನ್ನು ಆತ ತಿಳಿದುಕೊಂಡ. ಬೇರೆ ಬೇರೆ ಬ್ಲಾಗ್, ವೆಬ್‌ಸೈಟ್‌ಗಳಲ್ಲಿ ಇವುಗಳ ಕಥೆ ಹರಿದಾಡುತ್ತಿದೆ.

ಕುಟುಕು ಕಾರ್ಯಾಚರಣೆ ಮೂಲಕ ಭ್ರಷ್ಟಾಚಾರ ಬಯಲಿಗೆಳೆದು ಸಮಾಜ ಉದ್ಧರಿಸುವ ಪಣ ತೊಟ್ಟ ಮಾಧ್ಯಮಗಳು ತಾವೇ ಹೆಣೆದ ಬಲೆಯಲ್ಲಿ ಸಿಕ್ಕಿಬೀಳುವುದುಂಟು. ಅರ್ಧಕ್ಕರ್ಧ ಬ್ಲಾಕ್‌ಮೇಲ್ ಮಾಡಿ ಹಣ ಸುಲಿಯಲೆಂದೇ ನಡೆಯುವ ಕುಟುಕು ಕಾರ್ಯಾಚರಣೆ ನಿಗದಿತ ಹಣ ಬಾರದಿದ್ದಾಗ ಪ್ರಸಾರ ಕಾಣುವುದೂ ಇದೆ. ಇಂಥ ಯತ್ನ ಮಾಡಿದ್ದ ಝೀ ಸುದ್ದಿ ವಾಹಿನಿಯ ಇಬ್ಬರು ಹಿರಿಯ ಪತ್ರಕರ್ತರು ಈ ಸಂಬಂಧ ಜೈಲಿಗೂ ಹೋದರು. ಮಾಧ್ಯಮಗಳನ್ನೇ ಹೀಗೆ ಹಿಡಿದು ಪ್ರಶ್ನಿಸುವ ಪ್ರಕರಣಗಳು ಸಾಕಷ್ಟು ದಾಖಲಾಗಿವೆ, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದಲ್ಲಿ ದಾಖಲಾಗುತ್ತಿರುವ ಕೇಸುಗಳು, Corruption-in-News-Mediaಅದು ಮಾಧ್ಯಮಗಳಿಗೆ ನೀಡಿದ ಶಿಕ್ಷೆಗಳು ಸಣ್ಣವೇನೂ ಅಲ್ಲ.

ಇವು ದೇಶದ ದೊಡ್ಡ ಪತ್ರಿಕೆ, ಚಾನೆಲ್ಲುಗಳ ಕತೆಯಾದರೆ ನಮ್ಮ ರಾಜ್ಯದೊಳಗಿನವೇನೂ ಕಡಿಮೆ ಇಲ್ಲ. ಈ ವಾರ ಕನ್ನಡದ ಉತ್ತಮ ಸಮಾಜಕ್ಕಾಗಿರುವ ಚಾನೆಲ್ಲೊಂದು ರಾಜ್ಯ ಸರ್ಕಾರದ ಅನ್ನ ಭಾಗ್ಯಕ್ಕೆ ಕನ್ನ ಹಾಕುವ ಕುಟುಕು ಕಾರ್ಯಾಚರಣೆ ವರದಿ ಪ್ರಸಾರ ಮಾಡುವುದಾಗಿ ಪ್ರಚಾರ ಮಾಡಿಕೊಂಡಿತು. ಪ್ರಸಾರಕ್ಕೆ ಸಾಕಷ್ಟು ಸಮಯಾವಕಾಶವೂ ಇದ್ದುದರಿಂದ ಇನ್ನೇನೇನು ಒಳ ವ್ಯವಹಾರಗಳು ನಡೆದವೋ ಗೊತ್ತಿಲ್ಲ. ಕಾರ್ಯಕ್ರಮ ಪ್ರಸಾರವಾದಾಗ ಅದರಲ್ಲಿ ಮಾಮೂಲಿ ಭ್ರಷ್ಟ ಅಧಿಕಾರಿಯೊಬ್ಬನ ಪ್ರಸಂಗ ಬಿಟ್ಟರೆ ಹೇಳಿಕೊಳ್ಳುವ ಯಾವ ಅವ್ಯವಹಾರವೂ ಇರಲಿಲ್ಲ. ಆದರೆ ಹಾಲಿ ಸಚಿವರೊಬ್ಬರ ಮಗನ ಹೆಸರು ಎಳೆದು ಅವರು ಮಹಾ ಅಕ್ರಮ ಎಸಗಿದ್ದಾರೆ kannada-news-channelsಎಂಬಂತೆ ಅಸಂಬದ್ಧ ಚಿತ್ರ ತೋರಿಸಿ, ಇದಕ್ಕೂ ಅವರ ಅವ್ಯವಹಾರಕ್ಕೂ ಏನು ಸಂಬಂಧ ಎಂದು ಬ್ರೇಕ್‌ನ ನಂತರ ಹೇಳುತ್ತೇವೆ ಎಂದವರು ಕಾರ್ಯಕ್ರಮ ಮುಗಿದ ಮೇಲೂ ಅಂಥ ಸಂಬಂಧ ಏನು ಎಂಬುದನ್ನು ಹೇಳಲಿಲ್ಲ, ತೋರಿಸಲೂ ಇಲ್ಲ! ಆದರೆ ಸಚಿವರು, ಅವರ ಉದ್ಯಮಿ ಮಗನ ಹೆಸರನ್ನು ಜಾಹೀರುಮಾಡಿದ್ದರು! ಇಂಥ ಮಹಾ ಕಾರ್ಯಾಚರಣೆಗಳ ಉದ್ದೇಶ ಏನಿರಬಹುದು ಎಂಬುದು ಜನತೆಗೆ ಅರ್ಥವಾಗದೆ?

ಚಾನೆಲ್ಲುಗಳಿರಲಿ, ಪತ್ರಿಕೆಗಳಿರಲಿ, ಅದಕ್ಕೆ ಬಂಡವಾಳ ಅಗತ್ಯ. ಭಾರೀ ಉದ್ಯಮಿಗಳೋ ಹಣವಿದ್ದು ರಾಜಕಾರಣಕ್ಕೆ ಹೋದವರೋ ರಾಜಕೀಯಕ್ಕೆ ಹೋಗಿ ಅಪಾರ ಹಣ ಮಾಡಿದವರೋ ದೊಡ್ಡ ಪ್ರಮಾಣದಲ್ಲಿ ಚಾನೆಲ್ ಅಥವಾ ಪತ್ರಿಕೆ ಆರಂಭಿಸಲು ಸಾಧ್ಯ. ಪರಿಸ್ಥಿತಿ ಹೀಗಿರುವಾಗ ಪತ್ರಿಕಾ ಉದ್ಯಮದಿಂದ ಮತ್ತಷ್ಟು ಹಣ, ಹೆಸರು ಮಾಡಲು ಅವರು ಬಯಸುತ್ತಾರೆ. ಇದು ತಮ್ಮದೇ ವಲಯ ಕಟ್ಟಿಕೊಳ್ಳಲು ದಾರಿ ಮಾಡುತ್ತದೆ. ಆಯಾ ಮಾಧ್ಯಮಗಳು ತಮ್ಮ ತಮ್ಮ ವಲಯದ ಹಿತಾಸಕ್ತಿಯನ್ನು ಕಾಪಾಡುತ್ತವೆಯೇ ವಿನಾ ಒಟ್ಟು ಸಮಾಜ ಅದಕ್ಕೆ ಮುಖ್ಯವಾಗುವುದಿಲ್ಲ. ಹೀಗಾಗಿಯೇ ಸಾರ್ವಜನಿಕ ಜೀವನದಲ್ಲಿ KannadaPapersCollageವೃತ್ತಿ ಕಟ್ಟಿಕೊಳ್ಳುವ ಮಾಧ್ಯಮಕ್ಕೆ ಸಾರ್ವಜನಿಕ ಹೊಣೆಗಾರಿಕೆ ತರಬಲ್ಲ ಆರ್‌ಟಿಐ ನಂಥ ಕಾನೂನು ಬೇಕಿಲ್ಲ. ಸಾರ್ವಜನಿಕ ಹಣಕಾಸಿಗೆ ಮತ್ತು ವ್ಯವಹಾರಕ್ಕೆ ಕೇವಲ ಸರ್ಕಾರಿ ಸಂಸ್ಥೆಗಳು ಮಾತ್ರ ಜವಾಬ್ದಾರಿಯೇ? ಹಾಗೆ ನೋಡಿದರೆ ಸಾರ್ವಜನಿಕ ಕೆಲಸ ಮಾಡುವ ಎಲ್ಲ ವೃತ್ತಿಗಳೂ ಆರ್‌ಟಿಐ ಅಡಿ ಬರಬೇಕು. ಆರ್‌ಟಿಐ ಕಾನೂನಿನಿಂದ ಹೊರಗುಳಿದ ಮಾಧ್ಯಮಗಳು, ರಾಜಕೀಯ ಪಕ್ಷಗಳು, ಎನ್‌ಜಿಒ ಇತ್ಯಾದಿಗಳಿಗೆ ಸಾರ್ವಜನಿಕ ಬಾಧ್ಯತೆಯೇ ಇಲ್ಲವೇ? ಇದೆ, ಆದರೆ ಇಂಥ ಹೊಣೆಗಾರಿಕೆಗೆ ಕಾನೂನಿನಲ್ಲಿ ಸದ್ಯ ಅವಕಾಶವಿಲ್ಲ! ಅಂಥ ಕಾನೂನು ಜಾರಿಯಾಗಲು ಇವು ಬಿಡುವುದೂ ಇಲ್ಲ.

3 thoughts on “ತನ್ನ ಹುಳುಕು ನೋಡಿಕೊಳ್ಳದ ಮಾಧ್ಯಮ

 1. M A Sriranga

  ಡಾ. ಶ್ರೀಪಾದ್ ಭಟ್ ಅವರಿಗೆ—- ಖಾಸಗಿ ವಲಯಕ್ಕೆ ಸಂಬಂಧಿಸಿದ ಪತ್ರಿಕೆ ಮತ್ತು ಟಿ ವಿ ವಾಹಿನಿಗಳಲ್ಲಿಯೂ ಸರ್ಕಾರದ ಮೀಸಲಾತಿಯ ನಿಯಮ ಅನ್ವಯವಾಗಬೇಕೆಂಬುದು ಸದ್ಯದ ಕಾನೂನಿನ ಪರಿಧಿಯಲ್ಲಿ ಸಾಧ್ಯವಿಲ್ಲ. ನಮ್ಮ ದೇಶದ ಕೇಂದ್ರ/ಯಾವುದಾದರೊಂದು ರಾಜ್ಯ ಸರ್ಕಾರ ಈ ರೀತಿಯ ಕಾನೂನು ತಂದರೆ ಅದು ಕೇವಲ ಮಾಧ್ಯಮಕ್ಕೆ ಅನ್ವಯವಾಗಲಾರದು; ಇಡೀ ಖಾಸಗಿ ರಂಗದ ಎಲ್ಲಾ ಕ್ಷೇತ್ರಗಳಿಗೂ ಅನ್ವಯವಾಗಬೇಕಾಗಬಹುದು. ಆಗ ಅಂತಹ ಕಾನೂನು ಸುಪ್ರೀಂ ಕೋರ್ಟಿನ ಸಮ್ಮತಿ ಪಡೆಯುವುದು ಬಹುಶಃ ಸಾಧ್ಯವಿಲ್ಲ. ತನ್ನ ಬಂಡವಾಳವೇ ಇಲ್ಲದ ಖಾಸಗಿ ರಂಗದ ಮೇಲೆ ಸರ್ಕಾರ ತನ್ನ ಆಡಳಿತಾತ್ಮಕ ನಿಯಮ ಹೇರಲು ಸಾಧ್ಯವೇ? ಕರ್ನಾಟಕ ಸರ್ಕಾರದ ಮಾತೃ ಭಾಷಾ ಮಾಧ್ಯಮದ ವಿಧೇಯಕಕ್ಕೆ ವಿರುದ್ಧವಾಗಿ ಸುಪ್ರೀಂ ಕೋರ್ಟಿನಲ್ಲಿ ಬಂದಂತಹ ತೀರ್ಪೇ ಖಾಸಗಿ ರಂಗದಲ್ಲಿ ಸರ್ಕಾರ ತನ್ನ ನಿಯಮ ಹೇರಲು ಹೊರಟರೆ ಬರುತ್ತದೆ. ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ತಂದು ಆ ಕಾನೂನಿನ ತೊಡಕನ್ನು ನಿವಾರಿಸಿಕೊಳ್ಳಬಹುದಾದರೂ ಅದು ಕೆಟ್ಟ ಸಂಪ್ರದಾಯವಾಗಬಹುದು. ಮುಂದೆ ಎಲ್ಲದಕ್ಕೂ ಸುಗ್ರೀವಾಜ್ಞೆಯೇ ಮದ್ದು ಎನ್ನುವಂತಾದರೆ ವಿರೋಧಪಕ್ಷಗಳ, ನಾಡಿನ ಪ್ರಜ್ಞಾವಂತರ ಮತ್ತು ಸಾರ್ವಜನಿಕರ ವಿರೋಧ ಜಾಸ್ತಿಯಾಗುತ್ತಾ ಹೋಗುತ್ತದೆ. ಯಾವುದೇ ಪಕ್ಷದ ಸರ್ಕಾರವಾಗಲಿ ನ್ಯಾಯಾಂಗ ವ್ಯವಸ್ಥೆಯನ್ನು ಎದುರು ಹಾಕಿಕೊಳ್ಳುತ್ತಾ ಹೋದರೆ ಅದು ಕ್ರಮೇಣ ಸರ್ವಾಧಿಕಾರದತ್ತ ಹೊರಳುತ್ತದೆ. ಭಾರತೀಯರಾದ ನಮಗೆ ಇದು ೧೯೭೫ ರಿಂದ ೧೯೭೭ ರ ತನಕ ಅನುಭವಕ್ಕೆ ಬಂದಿಂದೆ. ಖಾಸಗಿ ರಂಗದ ಸಂಸ್ಥೆಗಳು ಸರ್ಕಾರ ವಿಧಿಸಿರುವ tax, customs duty ಇತ್ಯಾದಿ ಆರ್ಥಿಕ ರಂಗಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಹಿಡಿತ ಹೊಂದಬಹುದು; ಹೊಂದಿದೆ. ಅದನ್ನು ಮೀರಿದವರಿಗೆ ಕಾನೂನು ರೀತ್ಯ ಆಗಾಗ ಶಿಕ್ಷೆಯೂ ಆಗುತ್ತಿದೆ. ಮಾಧ್ಯಮಗಳು ಸೇರಿದಂತೆ ಎಲ್ಲವನ್ನೂ ಸರ್ಕಾರವೇ ನಡೆಸಲಿ ಎಂದರೆ ಅದಕ್ಕೆ ಅಗಾಧ ಪ್ರಮಾಣದ ಬಂಡವಾಳ, ಸಿಬ್ಬಂದಿ ಬೇಕು. ಕಾನೂನು ಮತ್ತು ಸುವ್ಯವಸ್ಥೆಗೆ ಅಗತ್ಯವಾಗಿ ಬೇಕಾದ ಪೋಲಿಸ್ ಸಿಬ್ಬಂದಿಯ ಕೊರತೆಯನ್ನೇ ತುಂಬಲು ನಮ್ಮ ರಾಜ್ಯ ಸರ್ಕಾರಕ್ಕೆ ಆಗುತ್ತಿಲ್ಲ. ಇನ್ನು ಎಲ್ಲದರ ಹೊಣೆ ಹೊತ್ತರೆ ಹಣ ಎಲ್ಲಿದೆ? ಇಂದು ತೆರಿಗೆ ಹಣ ಸರಿಯಾಗಿ ಲೆಕ್ಕಕ್ಕೆ ಸಿಗುತ್ತಿರುವುದು ಮತ್ತು ಸರ್ಕಾರಕ್ಕೆ ಪಾವತಿಯಾಗುತ್ತಿರುವುದು ಸರ್ಕಾರಿ ಮತ್ತು ಖಾಸಗಿ ರಂಗದಲ್ಲಿ ಪ್ರತಿ ತಿಂಗಳೂ ಸಂಬಳ ಪಡೆಯುತ್ತಿರುವ ನೌಕರರಿಂದ. ಏಕೆಂದರೆ ಸಂಬಳದಲ್ಲೇ ಅವರ ಆದಾಯ ತೆರಿಗೆ ಹಿಡಿದುಕೊಳ್ಳುವ ವ್ಯವಸ್ಥೆ ಇರುವುದರಿಂದ. ಇನ್ನುಳಿದಂತೆ ಇತರ ವ್ಯಾಪಾರಸ್ತರು, ಸಣ್ಣ ಪುಟ್ಟ ಸ್ವಂತ ವ್ಯವಹಾರದವರು “ರಾಮನ ಲೆಕ್ಕ– ಕೃಷ್ಣನ” ಲೆಕ್ಕ ತೋರಿಸಿ ತೆರಿಗೆ ವಂಚಿಸುವುದು ನಮಗೆಲ್ಲಾ ತಿಳಿದಿದೆ. ಇವೆಲ್ಲವನ್ನೂ ಕಣ್ಣಿಗೆ ಎಣ್ಣೆ ಹಾಕಿಕೊಂಡು ಹುಡುಕುವಷ್ಟು ವ್ಯವಧಾನ,ಸಿಬ್ಬಂದಿ ಸರ್ಕಾರದ ಬಳಿ ಇಲ್ಲ. ಹೀಗಾಗಿ ಖಾಸಗಿ ರಂಗವನ್ನು ಅಷ್ಟು ಸುಲಭವಾಗಿ ನಿವಾರಿಸಿ ಬಿಡುವುದು ಸಾಧ್ಯವಿಲ್ಲ. ಅದೇ ರೀತಿ ಅವುಗಳ ನಡುವಿನ ಪೈಪೋಟಿಯನ್ನೂ ತಡೆಯಲು ಸಾಧ್ಯವಿಲ್ಲ. ಹಾಕಿದ ಬಂಡವಾಳ ವಾಪಸ್ಸು ಬಂದು ಲಾಭವಾದರೆ ತಾನೇ ಅವರು ವ್ಯವಹಾರ ನಡೆಸಲು ಸಾಧ್ಯ? ಈ ಪೈಪೋಟಿಯ ನಡುವೆ ಅವರುಗಳಲ್ಲಿ ನಾವು ನಿರೀಕ್ಷಿಸುವ ಒಂದು ಮಟ್ಟದ ethics ಒಮ್ಮೊಮ್ಮೆ ಇಲ್ಲವೆಂದು ಅನಿಸಬಹುದು. ಅವರತ್ತ ಒಂದು ಬೆರಳು ತೋರಿ ದೂಷಿಸುವಾಗ ಉಳಿದ ನಾಲ್ಕು ಬೆರಳುಗಳು ನಮ್ಮತ್ತ ಅಂದರೆ ಸಮಾಜದತ್ತ ತೋರಿಸುತ್ತಾ ಇರುತ್ತವೆ ಎಂಬುದನ್ನೂ ನಾವು ಜ್ಞಾಪಕದಲ್ಲಿ ಇಟ್ಟುಕೊಳ್ಳಬೇಕಲ್ಲವೇ? ಇಂದು ಸರ್ಕಾರದ ಕಛೇರಿಗಳಲ್ಲಿ ಕೆಲಸ ಮಾಡುವ ನೌಕರರು, ಶಾಲೆಗಳ ಶಿಕ್ಷಕರು, ಕಾಲೇಜಿನ ಪ್ರಾಧ್ಯಾಪಕರುಗಳು, ಸರ್ಕಾರಿ ವೈದ್ಯರುಗಳು …………… ಹೀಗೆ ಎಲ್ಲರೂ ಅವರವರ ಕೆಲಸಗಳ ಬಗ್ಗೆ ಪೂರ್ಣ ಶ್ರದ್ಧೆ , ethics ಪಾಲಿಸುತ್ತಾ ಇದ್ದಾರೆಯೇ?

  Reply
  1. Shripad

   ಶ್ರದ್ಧೆ? ಎಥಿಕ್ಸ್?! ಇವೆಲ್ಲ ಬಹಳ ಅಪರೂಪದ ಪದಗಳು. ಹಾಗೆಲ್ಲ ಎಲ್ಲೆಂದರಲ್ಲಿ ಕಾಣುವಂತಿದ್ದರೆ ನಮ್ಮ ಸಮಾಜದ ಅಂಗಗಳನ್ನು ಕುರಿತು ಹೀಗೆಲ್ಲ ಬರೆಯುವ ಪ್ರಮೇಯವೇ ಬರುತ್ತಿರಲಿಲ್ಲ!!

   Reply
 2. M A Sriranga

  ಮೇಲಿನ ನನ್ನ ಪ್ರತಿಕ್ರಿಯೆಗೆ ಒಂದು ತಿದ್ದುಪಡಿ—– “ಖಾಸಗಿ ರಂಗದ ಸಂಸ್ಥೆಗಳ ಮೇಲೆ ಸರ್ಕಾರವು ತಾನು ವಿಧಿಸಿರುವ tax, customs duty ಇತ್ಯಾದಿ ……… ” ಎಂದು ಓದಿಕೊಳ್ಳಬೇಕಾಗಿ ವಿನಂತಿ.

  Reply

Leave a Reply

Your email address will not be published.