ಹಿಂದೂ ನೈತಿಕ ಪೋಲಿಸರ ಬೆನ್ನು ತಟ್ಟಿದ ಮುಸ್ಲಿಮ್ ಮೂಲಭೂತವಾದಿಗಳು


-ಇರ್ಷಾದ್


 

 

 

“ ಚೆಡ್ಡಿಗಳು  ಆ ಮುಸ್ಲಿಂ ಜೋಡಿಗೆ ಹೊಡೆದದ್ದು ಒಳ್ಳೆಯದಾಯಿತು, ಬಿಡಿ.  ಬುರ್ಖಾ  ತೊಡದೆ ಹುಡುಗನ ಜೊತೆ ತಿರುಗಾಡಿದ ಆಕೆಗೆ ಎರಡೇಟು  ನೀಡಿ ಒಳ್ಳೆ ಕೆಲಸ  ಮಾಡಿದರು ”. ಇದು ದಕ್ಷಿಣ  ಕನ್ನಡ  ಜಿಲ್ಲೆಯ ಉಜಿರೆಯಲ್ಲಿ ಸಂಘಪರಿವಾರದ ನೈತಿಕ ಪೊಲೀಸರು ಮುಸ್ಲಿಮ್ ಸಮುದಾಯದ ಜೋಡಿಗೆ ಭಿನ್ನ ಕೋಮಿನ ಪ್ರೇಮಿಗಳೆಂದು ಅಪಾರ್ಥ ಮಾಡಿಕೊಂಡು  ಹಲ್ಲೆ ನಡೆಸಿದ ಅಮಾನವೀಯ ಘಟನೆಯ  ನಂತರ ಕೆಲ ಮುಸ್ಲಿಮ್  ಮೂಲಭೂತವಾದಿ ಗುಂಪುಗಳಿಂದ ಸಂಘಪರಿವಾರದ ಅನೈತಿಕ  ಪೊಲೀಸರಿಗೆ  ಸಿಕ್ಕಿದ  ಶಹಬ್ಬಾಸ್  ಗಿರಿ. ಕರಾವಳಿಯಲ್ಲಿ ಮುಸ್ಲಿಂ ಹುಡುಗ- ಹಿಂದೂ  ಯುವತಿಯ  ಜೊತೆ ಕಾಣ ಸಿಕ್ಕರೆ  ಸಂಘಪರಿವಾರದ ನೈತಿಕ ಪೊಲೀಸರು  ಹಲ್ಲೆ ನಡೆಸುತ್ತಾರೆ. ಮುಸ್ಲಿಂ ಯುವತಿ ಹಿಂದೂ ಯುವಕನ ಜೊತೆ ತಿರುಗಾಡಿದರೆ ಮುಸ್ಲಿಂ ಮೂಲಭೂತವಾದಿ ನೈತಿಕ ಪೊಲೀಸರು ಅವರ ಮೇಲೆ ಮುಗಿಬೀಳುತ್ತಾರೆ. ಇದು ಕರಾವಳಿಯಲ್ಲಿ  ಸಾಮಾನ್ಯ. ಆದರೆ  ಕೆಲವೊಮ್ಮೆ ನೈತಿಕ ಪೊಲೀಸರ ಯಡವಟ್ಟಿನಿಂದಾಗಿ ಸ್ವಧರ್ಮದ ಜೋಡಿಗಳೂ ಏಟು ತಿನ್ನಬೇಕಾಗುತ್ತದೆ.

ಎರಡು  ತಿಂಗಳ ಹಿಂದೆ  ಉತ್ತರ ಭಾರತ ಮೂಲದ ವಿವಾಹ ನಿಶ್ಚಿತ  ಮುಸ್ಲಿಂ ಜೋಡಿಯ ಮೇಲೆ ಮಂಗಳೂರಿನ ಸುರತ್ಕಲ್ ಎಂಬಲ್ಲಿ ಹಿಂದೂಪರ  ಸಂಘಟನೆಗಳ images1ಕಾರ್ಯಕರ್ತರೆನ್ನಲಾದ  ಗುಂಪು ಹಲ್ಲೆ ನಡೆಸಿತ್ತು. ಅಲ್ಲೂ ಮುಸ್ಲಿಮ್ ಯುವಕನ ಜೊತೆಗಿದ್ದ ಮಸ್ಲಿಮ್ ಯುವತಿ ಬುರ್ಖಾ  ಧರಿಸಿರಲಿಲ್ಲ. ಈ ಕಾರಣದಿಂದ ತಪ್ಪಾಗಿ ಅರ್ಥೈಸಿಕೊಂಡ ನೈತಿಕ ಪೊಲೀಸರು ಅವರ ಮೇಲೆ ಹಲ್ಲೆ  ನಡೆಸಿದ್ದರು.  ದಿನಾಂಕ  16 -7-14  ಬುಧವಾರದಂದು  ಚಿಕ್ಕಮಗಳೂರಿನ ಮುಸ್ಲಿಂ ಯುವಕ ಹಾಗೂ ಉಡುಪಿಯ ಮುಸ್ಲಿಂ ಯುವತಿ ದಕ್ಷಿಣ  ಕನ್ನಡ  ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಗೆ ಬಂದಿದ್ದರು. ಈ ಜೋಡಿಗೆ ವಿವಾಹ ನಿಶ್ಚಿತಾರ್ಥವೂ  ಆಗಿತ್ತು. ಯುವತಿಯ  ಸಹೋದರಿಯ  ಕಾಲೇಜು ಸೇರ್ಪಡೆ ವಿಚಾರವಾಗಿ ಈ ಮುಸ್ಲಿಂ  ಜೋಡಿ ಬೆಳ್ತಂಗಡಿಗೆ ಬಂದಿತ್ತು. ಬೆಳ್ತಗಂಗಡಿ ತಾಲೂಕಿನ ಉಜಿರೆಯಲ್ಲಿ  ಜೊತೆಗೆ  ತಿರುಗಾಡುತ್ತಿದ್ದ  ಯುವಕ –ಯುವತಿ  ಸಂಘಪರಿವಾರದ  ನೈತಿಕ ಪೊಲೀಸರ ಕಣ್ಣಿಗೆ  ಬಿದ್ದರು. ತಕ್ಷಣ  ಧರ್ಮಪ್ರೆಜ್ಞೆಯಿಂದ  ಜಾಗೃತಗೊಂಡ  ಯುವಕರ  ತಂಡ  ಅವರನ್ನು  ಗಮನಿಸತೊಡಗಿತು. ಯುವಕ ಮೊದಲ ನೋಟಕ್ಕೆ  ಮುಸ್ಲಿಂ ಸಮುದಾಯಕ್ಕೆ  ಸೇರಿದವನೆಂದು ಖಾತ್ರಿ ಮಾಡಿಕೊಂಡ ಅವರು ಆತನ ಜೊತೆಗಿದ್ದ ಯುವತಿ ಹಿಂದೂ  ಎಂದು ನಿರ್ಧರಿಸಿಬಿಟ್ಟರು. ಯಾಕೆಂದರೆ  ಆಕೆ ಇಸ್ಲಾಂ ಧಾರ್ಮಿಕ ಶೈಲಿಯ ಬುರ್ಖಾ ಧರಿಸಿರಲಿಲ್ಲ. ತಕ್ಷಣವೇ  “ಹಿಂದೂ ಯುವತಿಯ ಜೊತೆಗೆ  ಸುತ್ತಾಡುತ್ತೀಯಾ  ಬ್ಯಾರಿ” ಎಂದು ಜೋಡಿ ಕಡೆ ಮುನ್ನುಗ್ಗಿದ ನೈತಿಕ ಪೊಲೀಸರ  ತಂಡ ಅವರಿಗೆ ಹಿಗ್ಗಾ ಮುಗ್ಗಾ ಥಳಿಸಿತು. ಏನು  ನಡೆಯುತ್ತಿದೆ  ಎಂದು  ಅರಿಯದ ಆ ಮುಗ್ದ  ಜೋಡಿ  ಸಾವರಿಸಿಕೊಂಡು  ನಾವಿಬ್ಬರೂ ಮುಸ್ಲಿಂ ಸಮುದಾಯಕ್ಕೆ  ಸೇರಿದವರು ನಮಗೆ ಹೊಡೀಬೇಡಿ  ಎಂದು ಪರಿ ಪರಿಯಾಗಿ ಬೇಡಿಕೊಂಡರು. ಅಷ್ಟಕ್ಕೂ  ಸುಮ್ಮನಾಗದ ನೈತಿಕ ಪೊಲೀಸರಿಗೆ ತಮ್ಮ ಗುರುತು ಚೀಟಿಯನ್ನೂ  ತೋರಿಸಿದರು. ಇಷ್ಟಕ್ಕೂ ಸಂಘಪರಿವಾರದ  ನೈತಿಕ  ಪೊಲೀಸರಿಗೆ ನಂಬಿಕೆ ಬರಲಿಲ್ಲ  ಕಾರಣ  ಆಕೆ  ಬುರ್ಖಾ  ಧರಿಸಿರಲಿಲ್ಲ.

ಈ  ವಿಚಾರ  ಎಲ್ಲಾ ಮಾಧ್ಯಮಗಳಲ್ಲೂ  ಪ್ರಸಾರ  ಆದ  ನಂತರ ಸಂಘಪರಿವಾರದ  ನೈತಿಕ  ಪೊಲೀಸರಿಗೆ  ತಮ್ಮ  ಯಡವಟ್ಟಿನ ಅರಿವಾಯಿತು. ಇದು  ಇನ್ನೇನು ತಿರುವು  ಪಡೆದುಕೊಳ್ಳುತ್ತಾ  ಎಂಬ ಕುತೂಹಲದಲ್ಲಿದ್ದ ಸಂಘಪರಿವಾರದ ನೈತಿಕ ಪೊಲೀಸರಿಗೆ ಮತ್ತೊಂದು  ಅಚ್ಚರಿ  ಕಾದಿತ್ತು. ಅದೇನೆಂದರೆ ಅನೇಕ  ಮುಸ್ಲಿಂ  ಮೂಲಭೂತವಾಧಿಗಳು  ಸಂಘಪರಿವಾರದ  ನೈತಿಕ ಪೊಲೀಸರ  ಅಮಾನವೀಯ  ಕೃತ್ಯವನ್ನು ಬೆಂಬಲಿಸಿದರು ಸಮರ್ಥಿಸಿದರು. ಬೆನ್ನುತಟ್ಟಿದರು ! ಕರಾವಳಿ ಭಾಗದಲ್ಲಿ ಹಿಂದೂಪರ  ಸಂಘಟನೆಗಳು  ನಡೆಸುತ್ತಿರುವ ವಿವಿಧ  ರೀತಿಯ  ನೈತಿಕ  ಪೊಲೀಸ್  ಗಿರಿಯಿಂದ ನಾನಾ  ರೀತಿಯ  ತೊಂದರೆಗಳನ್ನು  ಅನುಭವಿಸುತ್ತಿರುವ ಮುಸ್ಲಿಂ  ಸಮುದಾಯದ ಯುವಕರು ಉಜಿರೆಯಲ್ಲಿ ನೈತಿಕ ಪೊಲೀಸರು  ಮುಸ್ಲಿಂ  ಜೋಡಿಯ ಮೇಲೆ ಹಲ್ಲೆ ನಡೆಸಿ ಅಮಾನವೀಯ  ಪ್ರದರ್ಶನ  ಮಾಡಿದಾಗ ಅದನ್ನು ಸಮರ್ಥಿಸುತ್ತಿರುವ ಮನಸ್ಥಿತಿ ನೋಡಿ ನನಗೆ  ಆಶ್ವರ್ಯವೇನೂ ಆಗಿಲ್ಲ. ಬದಲಾಗಿ ಆ  ಮುಸ್ಲಿಂ ಯುವತಿಯ ಅಸಾಹಯಕ ಸ್ಥಿತಿ  ನೋಡಿ ಮರುಕ ಹುಟ್ಟಿತು.

ಇಸ್ಲಾಂ  ಧರ್ಮದಲ್ಲಿ ಪರ್ದಾ  ಒಂದು ಸಂಪ್ರದಾಯ. ಅಂದ  ಮಾತ್ರಕ್ಕೆ ಅದಕ್ಕೆಇಸ್ಲಾಂ  ಧರ್ಮದಲ್ಲಿ  ಯಾವುದೇ ಬಲವಂತವಿಲ್ಲ.  ಹೆಚ್ಚಿನ  ಮುಸ್ಲಿಂ  ಸಮುದಾಯದ  imagesಮಹಿಳೆಯರು  ಬುರ್ಖಾ  ಧರಿಸುತ್ತಾರೆ.  ಇನ್ನು ಅನೇಕರು ಧರಿಸುವುದಿಲ್ಲ. ಆದರೆ ಬುರ್ಖಾ ವಿಚಾರ ಉಭಯ  ಧರ್ಮದ ಮೂಲಭೂತವಾದಿಗಳು ತಮ್ಮ  ಬೇಳೆ ಬೇಯಿಸಲಿಕ್ಕೋಸ್ಕರ  ಬಳಸುತ್ತಿರುವುದರಿಂದ ಪ್ರಸ್ತುತ ದಿನಗಳಲ್ಲಿ  ಮುಸ್ಲಿಂ ಮಹಿಳೆ  ಬುರ್ಖಾ ವಿಚಾರದಲ್ಲಿ ಮಾನಸಿಕ ಕಿರುಕುಳ  ಅನುಭವಿಸುವಂತಾಗಿದೆ.  ಒಂದೆಡೆ ಶಾಲಾ ಕಾಲೇಜುಗಳಲ್ಲಿ  ಮುಸ್ಲಿಂ  ಯುವತಿಯರು ಬುರ್ಖಾ ಅಥವಾ ಸ್ಕಾರ್ಫ್ ಧರಿಸುವುದನ್ನು ಏಕರೂಪದ  ಸಮವಸ್ತ್ರದ ವಿಚಾರದಲ್ಲಿ ವಿರೋಧಿಸಲಾಗುತ್ತದೆ. ಇಂಥಹಾ ವಿರೋಧದ  ನಡುವೆಯೂ  ಬುರ್ಖಾವನ್ನು  ಧರಿಸುವ ಮುಸ್ಲಿಂ ಹೆಣ್ಣನ್ನು  ಸಮಾಜ  ನೋಡುವ ದೃಷ್ಟಿಕೋನವೇ  ಬೇರೆ. ದೇಶದ ಯಾವುದೇ ಮೂಲೆಯಲ್ಲಿ  ಬಾಂಬ್ ಸ್ಟೋಟವಾದಲ್ಲಿ  ಮುಸ್ಲಿಂ  ಗಡ್ಡಧಾರಿಗಳು ಸಮಾಜದ  ಸಂಶಯಕ್ಕೆ  ಕಾರಣರಾಗುತ್ತಾರೋ  ಅದೇ  ರೀತಿ ಬುರ್ಖಾ ಧರಿಸಿದ  ಹೆಣ್ಣನ್ನು ನೋಡುವ ದೃಷ್ಟಿಕೋನವೂ ಬದಲಾಗುತ್ತದೆ. ಇದು  ಒಂದೆಡೆಯಾದರೆ ಬುರ್ಕಾವನ್ನು ತಿರಸ್ಕರಿಸಿ ಸಾಮಾನ್ಯ  ಮಹಿಳೆಯರಂತೆ  ಸಮಾಜದಲ್ಲಿ ಕಂಡುಬರುವ ಮುಸ್ಲಿಂ  ಹೆಣ್ಣಿನ  ಪರಿಸ್ಥಿತಿಯಂತೂ  ಗಂಭೀರ. ಆಕೆಯನ್ನು  ಮುಸ್ಲಿಂ  ಸಮಾಜ ನೋಡುವ ದೃಷ್ಟಿಕೋನವೇ ಬೇರೆ. ಮುಸ್ಲಿಂ  ಸಮುದಾಯದ  ಜನರ ಕಣ್ಣಲ್ಲಿ ಆಕೆ ಧರ್ಮ ಭ್ರಷ್ಟೆಯಾಗಿ ಕಂಡುಬರುತ್ತಾಳೆ. ನಿತ್ಯ ಆಕೆಗೆ ಮೂದಳಿಕೆ ತಪ್ಪಿದ್ದಲ್ಲ. ನಿತ್ಯ  ಅವಮಾನ ನೋವುಗಳನ್ನು ಸಹಿಸಿಕೊಂಡ  ಮುಸ್ಲಿಂ ಮಹಿಳೆಯರು ನಮ್ಮಸಮಾಜದಲ್ಲಿದ್ದಾರೆ. ಇನ್ನು ಕೆಲವರು ಕೆಲವರು  ತನ್ನದೇ  ಸಮಾಜದ ಮೂಲಭೂತವಾದಿಗಳ ಕೆಂಗಣ್ಣಿನಿಂದ ಪಾರಾಗಲು ಮತ್ತೆ ಪರ್ದಾ ಕಡೆ ಮುಖಮಾಡಿದ್ದಾರೆ.

ವಿಪರ್ಯಾಸವೆಂದರೆ  ಇಲ್ಲಿ  ಮುಸ್ಲಿಮ್ ಮಹಿಳೆ  ಪರ್ದಾ  ಧರಿಸಬೇಕೋ  ಬೇಡವೋ  ಎಂಬುವುದನ್ನು ಇಲ್ಲಿನ ಮುಸ್ಲಿಂ  ಮೂಲಭೂತವಾದಿಗಳು ಹಾಗೂ ಹಿಂದೂ ಮೂಲಭೂತವಾದಿಗಳು ನಿರ್ಧರಿವಂತಾಗಿದೆ. ಬುರ್ಖಾ ತೊಟ್ಟರೂ ಆಕೆಗೆ ಅವಮಾನ ಬುರ್ಕಾ ತೆಗೆದರೂ ಅವಮಾನ ಎಂಬುವಂತಹಾimages3 ಪರಿಸ್ಥಿತಿ ಕರಾವಳಿ ಭಾಗದಲ್ಲಿ ನಿರ್ಮಾಣವಾಗುತ್ತಿದೆ. ಇನ್ನೂ  ವಿಪರ್ಯಾಸದ  ಸಂಗತಿಯೆಂದರೆ ಪರ್ದಾತೊಟ್ಟ ಮುಸ್ಲಿಂ  ಮಹಿಳೆಯರನ್ನು  ಅವಮಾನ  ಮಾಡುತ್ತಿದ್ದ  ಶಾಲಾ  ಕಾಲೇಜುಗಳಲ್ಲಿ ಬುರ್ಖಾ ವಿವಾದ ಬಂದಾಗ ಬುರ್ಖಾ ಧರಿಸಬಾರದು  ಎಂದು ತಾಕೀತು ಮಾಡುತ್ತಿದ್ದ ಸಂಘಪರಿವಾರದ ಯುವಕರು ಸಾಮಾಜಿಕ ತಾಣಗಳಲ್ಲಿ ಮುಸ್ಲಿಂ  ಯುವತಿಯರು ಬುರ್ಖಾ ಧರಿಸಿಯೇ ಪ್ರಿಯಕರನ ಜೊತೆ  ಸುತ್ತಾಡಿ ಎನ್ನುತ್ತಿದ್ದಾರೆ. ಇಷ್ಟೇ ಅಲ್ಲ ಹಿಂದೂ ಪರ  ಸಂಘಟನೆಯ ಮುಖಂಡನೊಬ್ಬ  ಪತ್ರಿಕಾಗೋಷ್ಠಿಯಲ್ಲಿ ಉಜಿರೆಯಲ್ಲಿ  ನಡೆದ ನೈತಿಕ ಪೊಲೀಸ್  ಗಿರಿ ಘಟನೆಯ ನೀಡಿದ  ಹೇಳಿಕೆ ಅಶ್ಚರ್ಯಕರವಾಗಿದೆ.  ರಂಜಾನ್  ತಿಂಗಳಲ್ಲಿ ಒಬ್ಬ ಮುಸ್ಲಿಂ ಯುವತಿಯಾಗಿ ಬುರ್ಖಾ  ಧರಿಸದೆ ಸಾರ್ವಜನಿಕವಾಗಿ ತಿರುಗುವುದು  ಸರಿಯಲ್ಲ  ಎಂಬುದು ಆತನ ಅಭಿಪ್ರಾಯ. ಮುಸ್ಲಿಂ  ಮಹಿಳೆಯರ ಪರ್ದಾ ಧರಿಸುವಿಕೆ ಹಾಗೂ ಧಾರ್ಮಿಕ  ಸಂಸ್ಕೃತಿ  ಕಟ್ಟುಪಾಡುಗಳನ್ನು ಮೀರಿ ಹೋಗದಂತೆ ನೋಡಿಕೊಳ್ಳುವ ಗುತ್ತಿಗೆ ಇದುವರೆಗೂ ಮುಸ್ಲಿಮ್ ಮೂಲಭೂತವಾದಿಗಳ ಕೈಯಲ್ಲಿತ್ತು. ಇದೀಗ ಹಿಂದೂ ಮೂಲಭೂತವಾದಿಗಳೂ ಹಿಂದೂ ಯುವತಿಯರ ಸಂಸ್ಕೃತಿ ರಕ್ಷಣೆಯ ಹೊಣೆಯ ಜೊತೆಗೆ ಮುಸ್ಲಿಮ್  ಹೆಣ್ಣುಮಕ್ಕಳ ರಕ್ಷಣೆಯ ಹೆಚ್ಚುವರಿ  ಹೊಣೆಯನ್ನು  ಹೊತ್ತುಕೊಂಡಂತಿದೆ.

3 thoughts on “ಹಿಂದೂ ನೈತಿಕ ಪೋಲಿಸರ ಬೆನ್ನು ತಟ್ಟಿದ ಮುಸ್ಲಿಮ್ ಮೂಲಭೂತವಾದಿಗಳು

  1. Nagshetty Shetkar

    ಮೂಲಭೂತವಾದಿಗಳು ಮೂಲಭೂತವಾಗಿ ಒಂದೇ ಎಂದು ಈ ಪ್ರಕರಣ ಸಾಬೀತು ಪಡಿಸಿದೆ.

    Reply
  2. Mohammad Mustafa

    Dear Irshad bhai I have been reading your very sensible and timely writings on issues like inciting communal venom in the society. There is some thing very interesting and shocking development pertaining to fundamentalism is there is an unholy alliance between two variant fundamentalist in executing their schemes in vivid colors. keep writing on significant issues.

    Reply

Leave a Reply to Shripad Cancel reply

Your email address will not be published. Required fields are marked *