ಮಾಧ್ಯಮ : ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?


ಡಾ. ಶ್ರೀಪಾದ ಭಟ್


 

ನಮ್ಮ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳನ್ನು ಗಂಭೀರವಾಗಿ ಓದುವ, ನೋಡುವ ಯಾರನ್ನೇ ಕೇಳಿ. ಅವರು ಹೇಳುವುದು ಒಂದೇ ಮಾತು: ಲೋಕದ ಡೊಂಕು ತಿದ್ದುವ ಮಾಧ್ಯಮ ತನ್ನ ಡೊಂಕನ್ನು ಮಾತ್ರ ತಿದ್ದಿಕೊಳ್ಳುವುದಿಲ್ಲ. ಕರೆ ಮಾಡಿದ್ದ ಐವತ್ತಕ್ಕೂ ಹೆಚ್ಚು ಜನರಲ್ಲಿ ಯಾರೊಬ್ಬರೂ ಮಾಧ್ಯಮಗಳನ್ನು ಶಂಕಿಸದೇ ಬಿಟ್ಟಿಲ್ಲ! ಮಾಧ್ಯಮಗಳ ವಿಶ್ವಾಸಾರ್ಹತೆಯ ಸಮೀಕ್ಷೆ ನಮ್ಮಲ್ಲಿ ನಡೆಯಬೇಕಾದ ಜರೂರಿದೆ ಎಂಬುದನ್ನು ಇದು ಸೂಚಿಸುತ್ತದೆ. ಹೀಗಾದಾಗ ಮಾಧ್ಯಮಗಳ ನಿಜ ಸ್ವರೂಪ ಬಯಲಾಗುತ್ತದೆ. ಹೀಗಲ್ಲದೇ ಪತ್ರಿಕೆಯ ಹೆಸರಿನೊಂದಿಗೆ ತಾವು ಅತ್ಯಂತ ವಿಶ್ವಾಸಾರ್ಹ ಎಂದು ಹೇಳಿಕೊಳ್ಳುವುದರಲ್ಲಿ ಯಾವ ಅರ್ಥವೂ ಇಲ್ಲ. ಹೀಗೆ ಯಾರು ಬೇಕಾದರೂ tv-mediaಹೇಳಿಕೊಳ್ಳಬಹುದು. ಅದಕ್ಕೆ ಮಾನದಂಡ? ನಮ್ಮಲ್ಲಿನ್ನೂ ಇಲ್ಲ.

ಮಾಧ್ಯಮಗಳ ಒಳ ಸತ್ಯವನ್ನು ಗಮನಿಸುವ ಯಾರು ಬೇಕಾದರೂ ಅವುಗಳನ್ನು ಕುರಿತು ನಿಷ್ಠುರ ಲೇಖನಗಳನ್ನು ಬರೆಯಬಹುದು. ಆದರೆ ಅಂಥ ಲೇಖನ ಕೂಡ ಯಾವುದಾದರೂ ಒಂದು ಮಾಧ್ಯಮದಲ್ಲೇ ಪ್ರಕಟವಾಗಬೇಕಲ್ಲ? ತನ್ನನ್ನು ತಾನು ನೋಡಿಕೊಳ್ಳಲು ಸಿದ್ಧವಿರುವ, ಅಂಥ ಲೇಖನಗಳಿಗೆ ಜಾಗ ನೀಡುವ ಮಾಧ್ಯಮ ನಿಜಕ್ಕೂ ಅಪರೂಪದ್ದು. ಸಾಮಾನ್ಯವಾಗಿ ನಿಷ್ಠುರ, ಜನಪ್ರಿಯ ಧಾಟಿ ಇಲ್ಲದ ವಸ್ತು, ವಿಷಯಗಳ ಲೇಖನಗಳನ್ನು ಅದೆಷ್ಟೇ ಪೂರಕ ದಾಖಲೆಗಳಿದ್ದರೂ ಮಾಧ್ಯಮಗಳು ಪ್ರಕಟಿಸಲು ಮುಂದಾಗುವುದಿಲ್ಲ. ಮಾಧ್ಯಮಗಳ ಇಂಥ ತೀರ್ಮಾನವನ್ನೇ ಸ್ವಯಂ ನಿರ್ಬಂಧನೆ (ಸೆಲ್ಫ್ ಸೆನ್ಸರ್‌ಶಿಪ್) ಎಂದು ಕರೆಯುವುದು. ಒಂದೊಂದು ಪತ್ರಿಕೆ, ಚಾನೆಲ್ಲುಗಳಿಗೂ ಇದು ಬದಲಾಗುತ್ತದೆ. ಇದನ್ನು ಯಾರೂ ಪ್ರಶ್ನಿಸುವಂತಿಲ್ಲ. ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳೆರಡರಲ್ಲೂ ಇಂಥ ನಿರ್ಬಂಧಗಳಿರುತ್ತವೆ. ವೈಯಕ್ತಿಕ ಹಿತಾಸಕ್ತಿ ಇದ್ದಲ್ಲಿ, ಸಂವಿಧಾನದ ಆಶಯಗಳಿಗೆ ಧಕ್ಕೆ ಬರುವಂತಿದ್ದಲ್ಲಿ ಅಂಥ ಸುದ್ದಿ ಅಥವಾ ಲೇಖನಗಳು ಖಂಡಿತ ತಿರಸ್ಕಾರ ಯೋಗ್ಯ. ಮಾಧ್ಯಮಗಳು ಮೊದಲು ಗಮನಿಸುವುದು ಇದನ್ನು. ಇದಲ್ಲದೆಯೂ ಮಾಧ್ಯಮಗಳು ಸುದ್ದಿ, ಲೇಖನಗಳ ಜಾಣ ಆಯ್ಕೆ ಮಾಡುವುದುಂಟು. ಈ ಜಾಣತನ ಓದುಗ ಅಥವಾ ವೀಕ್ಷಕರಿಗೆ ಸುಲಭವಾಗಿ ಅರ್ಥವಾಗುವಂಥದ್ದಲ್ಲ. ಮಾಧ್ಯಮಗಳ ಈ ಪ್ರವೃತ್ತಿಯನ್ನೇ ಚಿಂತಕರಾದ ಎಡ್ವರ್ಡ್ ಹರ್ಮನ್ ಮತ್ತು ನೋಮ್ ಚಾಮ್‌ಸ್ಕಿ ಸಮ್ಮತಿಯ ಸೃಷ್ಟಿ noam-chomsky(ಮ್ಯಾನ್ಯುಫಾಕ್ಚರಿಂಗ್ ಕನ್ಸೆಂಟ್) ಎಂದು ಕರೆದಿರುವುದು.

ಇವರ ಚಿಂತನೆ ಹೀಗಿದೆ: ಉದ್ಯಮಿ ಮಾಲೀಕತ್ವದ ಮಾಧ್ಯಮಗಳು ಮಾರುಕಟ್ಟೆಯ ಸೆಳೆತಕ್ಕೆ ಒಳಗಾಗಿ ವ್ಯವಸ್ಥಿತ ಸ್ವಯಂ ನಿರ್ಬಂಧನೆಯನ್ನು ಉತ್ತೇಜಿಸುತ್ತವೆ. ತಾವು ತುಂಬ ಮುಕ್ತ, ವಿಶ್ವಾಸಾರ್ಹ ಎಂದು ಕರೆದುಕೊಳ್ಳುವ ಮಾಧ್ಯಮಗಳು ಕೂಡ ಸ್ವಯಂ ನಿರ್ಬಂಧನೆಯ ಹೆಸರಲ್ಲಿ ಸುದ್ದಿ, ಲೇಖನಗಳ ಆಯ್ಕೆ, ತಿರಸ್ಕಾರದಲ್ಲಿ ಪಕ್ಷಪಾತ ತೋರಿಸುತ್ತವೆ. ತಮ್ಮ ನಿಲುವಿಗೆ ಸರಿ ಹೊಂದುವ ಸುದ್ದಿ ಮತ್ತು ಲೇಖನಗಳನ್ನು ಮಾತ್ರ ಅವು ಪ್ರಕಟಿಸುತ್ತವೆ. ದೀರ್ಘ ಅಧ್ಯಯನದ ನಂತರ ಹೇಳಿದ ಈ ಚಿಂತಕರ ಮಾತು ಸುಳ್ಳೆಂದು ಮಾಧ್ಯಮದ ಯಾರೊಬ್ಬರೂ ಹೇಳಲಾರರು!

ಮಾಧ್ಯಮಗಳು ವರದಿ ನೀಡುತ್ತವೆಯೇ, ಮಾಹಿತಿ ಕೊಡುತ್ತವೆಯೇ ಅಥವಾ ಜ್ಞಾನ ಒದಗಿಸುತ್ತವೆಯೇ? ವಸ್ತು ನಿಷ್ಠ ವರದಿಯನ್ನು ಮಾತ್ರ ನೀಡಬೇಕಿದ್ದ ಮಾಧ್ಯಮಗಳು ಅದನ್ನೊಂದನ್ನು ಬಿಟ್ಟು ತಮ್ಮಿಷ್ಟದಂತೆ ಸುದ್ದಿಯ ವಿಶ್ಲೇಷಣೆಗೆ ತೊಡಗುತ್ತವೆ. ತಮ್ಮ ಓದುಗ ಅಥವಾ ವೀಕ್ಷಕ ವರ್ಗದಲ್ಲಿ ಮುಕ್ತ ಚಿಂತನೆ ಬೆಳೆಯುವಂತೆ ಮಾಡುವ ಬದಲು ತಮ್ಮ ಚಿಂತನೆಯನ್ನೇ ಅವರು ಪ್ರತಿಪಾದಿಸುವಂತೆ ಪರೋಕ್ಷ ಪ್ರಭಾವ ಬೀರುತ್ತವೆ. ಸಾಮಾನ್ಯವಾಗಿ ಪತ್ರಿಕೆಗಳ ಸಂಪಾದಕೀಯ ಲೇಖನಗಳು ಇಂಥ ವಶೀಲಿಯನ್ನು ನಿರಂತರ ಮಾಡುತ್ತವೆ. ಅದಕ್ಕೆ ಒಮ್ಮೆ ಒಗ್ಗಿದ ಓದುಗನ ಅಭಿಪ್ರಾಯ ಕ್ರಮೇಣ ಆತ ಓದುವ ಪತ್ರಿಕೆಯ ಅಭಿಪ್ರಾಯವೇ ಆಗಿಬಿಡುತ್ತದೆ! ಇದು ಆ ಓದುಗನಿಗೆ ಅರ್ಥವೇ ಆಗುವುದಿಲ್ಲ. ಪತ್ರಿಕೆಗಿಂತ ಹೆಚ್ಚು ಪ್ರಭಾವಶಾಲಿಯಾದ ಟಿವಿ ಮಾಧ್ಯಮ ಈ ಕೆಲಸವನ್ನು ಇನ್ನಷ್ಟು ವ್ಯವಸ್ಥಿತವಾಗಿ ಚರ್ಚೆ (ಪ್ಯಾನೆಲ್ ಡಿಸ್ಕಶನ್) ರೂಪದಲ್ಲಿ ಮಾಡುತ್ತದೆ.

ನಮ್ಮ ಮಾಧ್ಯಮಗಳನ್ನೇ ಗಮನಿಸೋಣ. kannada-news-channelsಸಂವಿಧಾನ ಎಲ್ಲರಿಗೂ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು (ವಿಧಿ 19 ರಿಂದ 22) ಮಾತ್ರ ಮಾಧ್ಯಮಗಳಿಗೂ ಇರುವುದು. ಮಾಧ್ಯಮಕ್ಕೇನೂ ವಿಶೇಷ ಹಕ್ಕಿಲ್ಲ. ಸಂವಿಧಾನದ ನಾಲ್ಕನೆಯ ಸ್ತಂಭ ತಾವೆಂದು ಅವು ಎಷ್ಟೇ ಹೇಳಿಕೊಂಡರೂ ಅದು ನೀವೇ ಯಾಕೆ? ಮುಂದಿನ ಪೀಳಿಗೆ ರೂಪಿಸುವ ಶಿಕ್ಷಕರು ಯಾಕಲ್ಲ? ದೇಶದ ಆರೋಗ್ಯ ಕಾಪಾಡುವ ವೈದ್ಯರು ಯಾಕಲ್ಲ? ದೇಶದ ಬೆನ್ನೆಲುಬು ಎನ್ನಲಾಗುವ ರೈತ ವರ್ಗ ಯಾಕಲ್ಲ? ಎಂಬ ಪ್ರಶ್ನೆಗೆ ಅವರಲ್ಲೂ ಉತ್ತರವಿಲ್ಲ! ಅದಿರಲಿ.

ಸಮಾಜದ ಇನ್ನಿತರ ಸ್ತರಗಳಲ್ಲಿ ವ್ಯಕ್ತಿ ಸ್ವಾತಂತ್ರ್ಯ, ಸ್ವಾಯತ್ತೆಯ ಬಗ್ಗೆ ಮಾತನಾಡುವ ಮಾಧ್ಯಮಗಳು ತಮ್ಮ ವಲಯದಲ್ಲಿ ಇದನ್ನು ಎಷ್ಟರ ಮಟ್ಟಿಗೆ ಪಾಲಿಸುತ್ತವೆ? ಉತ್ತರ ನಿರಾಶಾದಾಯಕ. ಪ್ರತಿ ವರ್ಷ ಪ್ರಪಂಚದ 180 ದೇಶಗಳ ಮಾಧ್ಯಮ ವಲಯದಲ್ಲಿ ಖಚಿತ ಸಮೀಕ್ಷೆ ನಡೆಸಿ ವರದಿ ಮಾಡುವ ಫ್ರಾನ್ಸಿನ ರಿಪೋರ್‍ಟರ್ಸ್ ವಿತೌಟ್ ಬಾರ್ಡರ್ಸ್ ಎಂಬ ಸರ್ಕಾರೇತರ ಸಂಸ್ಥೆ 2012-13 ರಲ್ಲಿ ಭಾರತದ ಮಾಧ್ಯಮ ಸ್ವಾತಂತ್ರ್ಯದ ಸ್ಥಾನ 140 ಎಂದು ಹೇಳಿದೆ. ಕಳೆದ ವರ್ಷ ಇದು 131 ಕ್ಕಿತ್ತು. 2002 ರಲ್ಲಿ 80 ನೆಯ ಸ್ಥಾನದಲ್ಲಿದ್ದ ಭಾರತ ಬರಬರುತ್ತ 140 ಕ್ಕೆ ಜಾರಿದೆ. ಇದು ಮೇಲೇಳುವ ಲಕ್ಷಣವಿಲ್ಲ. ಮಾಧ್ಯಮ ಪಡೆಯುತ್ತಿರುವ ಈ ಸ್ಥಾನಗಳಿಗೆ ಸ್ವತಃ ಮಾಧ್ಯಮ ಮತ್ತು ಅವುಗಳ ಮಾಲೀಕರು ಕಾರಣವೇ ವಿನಾ ಸರ್ಕಾರವಾಗಲಿ, ಜನರಾಗಲೀ ಅಲ್ಲ. ವರ್ಷವಿಡೀ ನಡೆಯುವ ಈ ಸಮೀಕ್ಷೆಯಲ್ಲಿ ಆಯಾ ದೇಶದ ವಕೀಲರು, ಶಿಕ್ಷಣವೇತ್ತರು, ಪತ್ರಕರ್ತರು, ಮಾನವಹಕ್ಕು ಕಾರ್ಯಕರ್ತರು ಮೊದಲಾದ ಎಲ್ಲ ವರ್ಗದ ಜನ ನೀಡುವ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಬಹಳ ಮುಖ್ಯವಾಗಿ ಮಾಧ್ಯಮಗಳ ಒಳ ವ್ಯವಸ್ಥೆಯಲ್ಲಿನ ಪರಿಸರ, ಪಾರದರ್ಶಕತೆ, ಸ್ವಯಂ ನಿರ್ಬಂಧ, ಮೂಲಸೌಕರ್ಯ, KannadaPapersCollageವರದಿಗಾರ ನೀಡುವ ಸುದ್ದಿ ಯಥಾವತ್ ಪ್ರಕಟವಾಗುವ ಸಾಧ್ಯತೆ, ಪತ್ರಕರ್ತರ ಆಂತರಿಕ ಸ್ವಾತಂತ್ರ್ಯ ಮೊದಲಾದ ಸಂಗತಿಗಳನ್ನು ಗಮನಿಸಲಾಗುತ್ತದೆ. ಮತ್ತೆ ಮತ್ತೆ ಪರಿಶೀಲಿಸಿ ಸ್ಥಾನ ನಿರ್ಧರಿಸಲಾಗುತ್ತದೆ. ಬಹಳ ಜವಾಬ್ದಾರಿಯಿಂದ ಆ ಸಂಸ್ಥೆ ಈ ಕೆಲಸ ನಿರ್ವಹಿಸುವುದರಿಂದ ಪ್ರಪಂಚಾದ್ಯಂತ ಅದು ನೀಡುವ ವರದಿಗೆ ಮಹತ್ವವಿದೆ. ಮಾಧ್ಯಮಗಳು ಸ್ವಹಿತಾಸಕ್ತಿ ಕಾಪಾಡಿಕೊಳ್ಳುವ ಸ್ವಯಂ ನಿರ್ಬಂಧವೇ ನಮ್ಮ ಮಾಧ್ಯಮ ಸ್ವಾತಂತ್ರ್ಯಕ್ಕೆ ಇರುವ ಬಹುದೊಡ್ಡ ಅಡ್ಡಿ.

ನಮ್ಮ ಮಾಧ್ಯಮಗಳಲ್ಲಿ ವರದಿಗಾರರ ನೇಮಕಾತಿಯಲ್ಲೂ ಆಯಾ ಮಾಧ್ಯಮಗಳ ಹಿತಾಸಕ್ತಿ ಕೆಲಸಮಾಡುತ್ತದೆ. ನಿಷ್ಠುರ ವರದಿಗಾರನಿಗೆ ದೊಡ್ಡ ಮಾಧ್ಯಮಗಳಲ್ಲಿ ಕೆಲಸ ದೊರೆಯುವುದು ದುರ್ಲಭ. ನಮ್ಮ ಬಹುತೇಕ ದೊಡ್ಡ ಪತ್ರಿಕೆಗಳು, ಚಾನೆಲ್ಲುಗಳು ಒಂದಲ್ಲ ಒಂದು ರಾಜಕೀಯ ಪಕ್ಷದ ಕೃಪೆಯಲ್ಲಿರುವವೇ ಆಗಿವೆ. ಕೆಲವು ನೇರವಾಗಿ ಗೋಚರವಾದರೆ ಇನ್ನು ಬಹಳಷ್ಟು ಮಾಧ್ಯಮಗಳದ್ದು ಗೌಪ್ಯ ಸಂಬಂಧ. ಇದನ್ನೇ ಹಿಡನ್ ಅಜೆಂಡಾ ಎನ್ನುವುದು. ನಮ್ಮ ದೇಶದಲ್ಲಿ ಪಂಚಾಯ್ತಿ ಮಟ್ಟದಿಂದ ಲೋಕಸಭೆಯವರೆಗೆ ಒಂದಲ್ಲ ಒಂದು ಚುನಾವಣೆ ನಡೆಯುತ್ತಲೇ ಇರುತ್ತದೆ. ಚುನಾವಣಾ ಸಂದರ್ಭದಲ್ಲಿ ಅವುಗಳ ನಿಲುವು, ವರದಿಗಾರರ ಸಾಚಾತನ ಮೊದಲಾದವು ಗೋಚರವಾಗುವುದುಂಟು. ಒಂದೇ ಸುದ್ದಿಯನ್ನು ಬೇರೆ ಬೇರೆ ಮಾಧ್ಯಮಗಳು ಬೇರೆ ಬೇರೆ ರೀತಿ ಓದಿಕೊಳ್ಳುವಂತೆ ಪ್ರಸ್ತುತಪಡಿಸುತ್ತವೆ! ಪರಿಸ್ಥಿತಿ ಹೀಗಿರುವಾಗ ಅವುಗಳಿಗೆ ಮುಕ್ತ ವಾತಾವರಣ ಎಲ್ಲಿಂದ ಬರಬೇಕು? tv-mediaಕೆಲವೊಮ್ಮೆ ಮಾಧ್ಯಮಗಳ ಮಾಲೀಕರು ತಮಗಾಗದ ವ್ಯಕ್ತಿ, ಸಂಸ್ಥೆಗಳ ವಿರುದ್ಧವೋ ಬೇಕಾದ ವ್ಯಕ್ತಿ, ಸಂಸ್ಥೆಗಳ ಪರವೋ ವರದಿ ತಯಾರಿಸಿಕೊಡುವಂತೆ ವರದಿಗಾರರ ಮೇಲೆ ನೇರ ಒತ್ತಡ ಹೇರುವುದೂ ಇದೆ. ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಬಲವಂತದ ಮಾಘಸ್ನಾನ ಮಾಡುವ ಪತ್ರಕರ್ತರಿಗೆ ಕೊರತೆಯೇನೂ ಇಲ್ಲ.

ಮಾಧ್ಯಮದ ಜನ ಕೂಡ ಮನುಷ್ಯರೇ ಆದ್ದರಿಂದ ಅವರಿಗೂ ಮಾನವ ಸಹಜ ದೌರ್ಬಲ್ಯ, ಶಕ್ತಿಗಳೆಲ್ಲವೂ ಇರುತ್ತವೆ. ಅಧಿಕಾರ, ಹಣ, ಪ್ರಶಸ್ತಿ-ಕೀರ್ತಿ ಮೊದಲಾದವುಗಳ ಆಮಿಷ ಅವರ ವೃತ್ತಿ ನಿಷ್ಠೆಯನ್ನು ಬಲಿಪಡೆದರೂ ಅಚ್ಚರಿ ಇಲ್ಲ. ಅಲ್ಲದೇ ನಮ್ಮ ವ್ಯವಸ್ಥೆಯಲ್ಲಿ ಮಾಧ್ಯಮ ಪ್ರತಿನಿಧಿಸುವವರಿಗೆ ಆಯಾ ಮಾಧ್ಯಮಗಳೇ ರಕ್ಷಾಕವಚವಾಗುವುದರಿಂದ ಹಾಗೂ ಜನರ ಜವಾಬಿಗೆ ಉತ್ತರ ಕೊಡಲೇಬೇಕು ಎಂಬ ಜರೂರು ಇಲ್ಲದ ಕಾರಣದಿಂದ ಮಾಧ್ಯಮಗಳು ತಮ್ಮ ಸ್ವಾತಂತ್ರ್ಯಕ್ಕೂ ಸ್ವೇಚ್ಛೆಗೂ ಗೆರೆ ಎಳೆದುಕೊಳ್ಳುವುದನ್ನು ಮರೆಯಲೂಬಹುದು. ಆದರೆ ಅದರ ಪರಿಣಾಮ ಮಾಧ್ಯಮಗಳ ಸ್ಥಾನ ತೋರಿಸುವ ವರದಿಗಳಲ್ಲಿ ಹೀಗೆ ಬಯಲಾಗುತ್ತದೆ. ಸಾಮಾನ್ಯ ಜನತೆಗೆ ಮಾಧ್ಯಮದ ಮೇಲೆ ಏನೇ ಸಿಟ್ಟಿರಲಿ, ಸರ್ಕಾರಕ್ಕೆ ಎಷ್ಟೇ ಅಸಮಾಧಾನವಿರಲಿ, ಇವರೇನೂ ಮಾಡಲಾಗದು. ಯಾಕೆಂದರೆ ಇದು ಬೆಕ್ಕಿಗೆ ಗಂಟೆ ಕಟ್ಟುವ ಪ್ರಶ್ನೆ!

14 thoughts on “ಮಾಧ್ಯಮ : ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

  1. M A Sriranga

    ಡಾ ಶ್ರೀಪಾದ್ ಭಟ್ ಅವರಿಗೆ— ನಿಮ್ಮ ಈ ಲೇಖನದ ಬಗ್ಗೆ ಮೂಲಭೂತವಾಗಿ ನನಗೆ ಯಾವ ಭಿನ್ನಾಭಿಪ್ರಾಯವೂ ಇಲ್ಲ. ಕನ್ನಡದ ಅತ್ಯಂತ ವಿಶ್ವಾಸಾರ್ಹ ಪತ್ರಿಕೆ ಎಂಬ ಘೋಷಣೆಯೊಂದಿಗೆ ಪ್ರತಿದಿನ ಬರುವ ”ಪ್ರಜಾವಾಣಿ” ಈಗ್ಗೆ ಸುಮಾರು ಎರಡು ವರ್ಷಗಳ ಹಿಂದೆ ”ವಚನಗಳು vs ಜಾತಿ ವ್ಯವಸ್ಥೆ” ಬಗ್ಗೆ ಎದ್ದಿದ್ದ ಭಾರಿ ವಿವಾದವನ್ನು ಹೇಗೆ ತನ್ನ ಇಷ್ಟಕ್ಕೆ ತಕ್ಕಂತೆ ನಿರ್ವಹಿಸಿಕೊಂಡು ಬಂತು ಎಂಬುದು ತಮಗೆ ತಿಳಿದಿದೆ. ತನ್ನ ಧ್ಯೇಯ,ಧೋರಣೆಗೆ ಒಗ್ಗದ ಲೇಖನಗಳನ್ನು ಆ ಚರ್ಚೆಯಿಂದ ನಾಜೂಕಾಗಿ ದೂರವಿಟ್ಟಿತು. ಅದೇ ರೀತಿ ಅದೇ ಸಮಯದಲ್ಲಿ ಪ್ರಾರಂಭವಾದ ”ಜಾತಿ ಏಕೆ? ಬೇಕೇ?” ಎಂಬ ಚರ್ಚೆಯಲ್ಲಿ ಸಹ ನಡೆದು ಕೊಂಡಿತು. ನಾನು ಕಳುಹಿಸಿದ ಒಂದು ಲೇಖನದ ರೆಕ್ಕೆ,ಪುಕ್ಕ ಕತ್ತರಿಸಿ ”ತನಗೆ ಬೇಕಾದಷ್ಟನ್ನು ಮಾತ್ರ” ಪ್ರಕಟಿಸಿತು. ಇಂತಹ ಕ್ರಿಯೆಗಳಿಗೆ ಎಲ್ಲಾ ಪತ್ರಿಕೆಗಳಲ್ಲಿ ಎರಡು ಸಿದ್ಧ ಉತ್ತರಗಳಿರುತ್ತವೆ . (೧) ಪುಟಗಳ ಮಿತಿ (೨) ಯಾವ ಚರ್ಚೆಗೆ ಆಗಲಿ ಒಂದು ಕೊನೆ ಇರಬೇಕಲ್ಲವೇ?. ಸುಮಾರು ಇಪ್ಪತ್ತು ಇಪ್ಪತೈದು ವರ್ಷಗಳ ಹಿಂದೆ ”ಪ್ರಜಾವಾಣಿ’ಗೆ ಪ್ರತಿಸ್ಪರ್ಧಿಗಳೇ ಇಲ್ಲದಿದ್ದಾಗ ”ಅತ್ಯಧಿಕ ಪ್ರಸಾರದ ಕನ್ನಡ ದಿನಪತ್ರಿಕೆ” ಎಂಬ ಉದ್ಘೋಷದೊಂದಿಗೆ ಪ್ರತಿದಿನ ಕನ್ನಡಿಗರ ಮನೆ ಮತ್ತು ಮನವನ್ನು ತಟ್ಟುತ್ತಿದ್ದುದು ತಮಗೆ ತಿಳಿದಿದೆ. ಕನ್ನಡದ ”ನವ್ಯ ಸಾಹಿತ್ಯಕ್ಕೆ” ಒಂದು ಕಾಲದಲ್ಲಿ ಆಸರೆಯಾಗಿ ನಿಂತಿದ್ದೂ ಸಹ ಇದೇ ಪತ್ರಿಕೆ. ಕಾಲ, ಜನ ಬದಲಾಗಿದ್ದಾರೆ. ಆಯ್ಕೆಗಳು ಬೇಕಾದಷ್ಟಿವೆ. ಇನ್ನು ಟಿ ವಿ ಮಾಧ್ಯಮಗಳಿಂದ ಒಳ್ಳೆಯದಾಗುತ್ತಿದೆಯೋ ಇಲ್ಲವೋ ಎಂಬುದನ್ನು ಕಡ್ಡಿ ಮುರಿದಂತೆ ಹೇಳುವುದು ಕಷ್ಟ. ಎರಡು ಮೂರು ದಿನಗಳಿಂದ ಭಾರಿ ಗದ್ದಲ ಎಬ್ಬಿಸಿರುವ ಘಟನೆಗಳಿಗೆ ಸಾಕಷ್ಟು ಚರ್ಚೆ ನಾನಾ ವಾಹಿನಿಗಳಲ್ಲಿ ಬರುತ್ತಿದೆ. ಜತೆಗೆ ಉಪ್ಪು,ಹುಳಿ, ಖಾರಗಳೂ ಆಯಾ ವಾಹಿನಿಗಳ ”ರುಚಿಗೆ ತಕ್ಕಷ್ಟು” ಪ್ರಮಾಣದಲ್ಲಿವೆ. ಆಕಾಶವೇ ತಲೆ ಮೇಲೆ ಬಿದ್ದರೂ ಸಹ ಸ್ಥಿತ ಪ್ರಜ್ಞತೆಯಿಂದ ಒಂದೇ ರೀತಿ ಸುದ್ದಿ ಬಿತ್ತರಿಸುವ ಸರ್ಕಾರಿ ಒಡೆತನದ ಆಕಾಶವಾಣಿ ದೂರದರ್ಶನಗಳು ನಮ್ಮ ಮುಂದಿವೆ. ಇವರು ತಮ್ಮ ಸುದ್ದಿ ಕೇಂದ್ರ, ಕಟ್ಟಡವೇ ಬಿದ್ದು ಹೋದರೂ ಸಹ ಸರ್ಕಾರ ”ಅಧಿಕೃತ”ವಾಗಿ ಹೇಳುವ ತನಕ ಆ ಸುದ್ದಿ ಬಿತ್ತರಿಸದಂತಹ ಮಹಾನುಭಾವರು!!. ಸುದ್ದಿಗಾಗಿ ಯಾವುದನ್ನಾದರೂ ಆಶ್ರಯಿಸಲೇ ಬೇಕಾದ ನಮ್ಮಂತಹವರಿಗೆ ಇಂತಹ ಪ್ರಶ್ನೆಗಳು ಏಳುತ್ತವೇನೋ? ಕೇವಲ ಮನರಂಜನೆ ಅಪೇಕ್ಷಿಸುವವರಿಗೆ ಇವೆಲ್ಲಾ ಬೇಕಾಗಿಲ್ಲ. ಅವರು ಇನ್ನೊಂದು ತರಹದ ಸ್ಥಿತ ಪ್ರಜ್ಞರು. ರಾಜ ಯಾರಾದರೇನು? ರಾಗಿ ಬೀಸುವುದು ತಪ್ಪೀತೆ? ಎಂಬ ತತ್ವ ಅವರದು.

    Reply
    1. Shripad

      ಅತ್ಯಂತ ಸಮಂಜಸ ಶ್ರೀರಂಗ ಅವರೇ. ಬರೀ ಅವರಿವರ ಹುಳುಕು ಹುಡುಕಿ ಹೊಟ್ಟೆತುಂಬಿಸಿಕೊಳ್ಳುವ ಮಾಧ್ಯಮಗಳ ಒಳಸಂಗತಿಗಳ ಕುರಿತು ಎಷ್ಟು ಬೇಕಾದರೂ ಬರೆಯಬಹುದು. ಅವರಂತೂ ತಮ್ಮ ಹುಳುಕು ನೋಡಿಕೊಳ್ಳಲು ತಯಾರಿಲ್ಲ. ಆದರೆ ಸಮಾಜ ಅದರ ಹುಣ್ಣನ್ನು ಕನ್ನಡಿ ಹಿಡಿದು ತೋರಿಸುತ್ತಿದೆ. ಅವು ಕೂಡ ಒಂದಲ್ಲ ಒಂದು ದಿನ ಹುಳುಕು ಒಪ್ಪಿಕೊಳ್ಳಲೇಬೇಕು. ಅಂಥ ದಿನ ದೂರವಿಲ್ಲ.

      Reply
  2. H.s. Prabhakara

    <>
    ಶ್ರೀಪಾದ ಭಟ್ಟರೆ, ಕೆಲಸ ದೊರೆಯುವುದು ದುರ್ಲಭ ನಿಜ! ಅದರೆ ಇಂಥ ಕೆಲವು ಕಾರಣಗಳಿಗೆ ರಾಜಿ ಮಾಡಿಕೊಳ್ಳಲಾಗದೆ, ಇದ್ದ ಕೆಲಸಕ್ಕೆ ರಾಜೀನಾಮೆ ಬಿಸಾಕಿ ಬಂದು, ಇದೀಗ ಹಾಸನದ ಒಂದು ಜಿಲ್ಲಾ ಮಟ್ಟದ ದಿನ ಪತ್ರಿಕೆಗೆ ಸಂಪಾದಕನಾಗಿರುವೆ.

    <> ಅಂಥ ಒಂದು ಲೇಖನವನ್ನು ನಮ್ಮ ಪತ್ರಿಕೆಯ ಇದೇ ಜುಲೈ 21ರ ಸಂಚಿಕೆಯ ಮುಖಪುಟದಲ್ಲಿ ಪ್ರಕಟಿಸಿದ್ದೇನೆ. ಕೆಲವು ದೃಶ್ಯ ಮಾಧ್ಯಮಗಳಿಗೆ ಈ ಲೇಖನ ನುಂಗಲಾರದ ಬಿಸಿತುಪ್ಪವಾಗಿರ ಬಹುದಾದರೂ ಸಾರ್ವಜನಿಕವಾಗಿ ತುಂಬಾ ಮೆಚ್ಚುಗೆಯನ್ನಂತೂ ಗಳಿಸಿತು!
    ಲಿಂಕ್ ನೋಡಿ: http://www.janahithahassan.org / Today news/ 21/07/2014

    ಲೇಖನ ತುಂಬಾ ಚೆನ್ನಾಗಿದೆ. ಮಾಧ್ಯಮಗಳ ಕುರಿತಾದ ನೇರ ಹಾಗೂ ಸತ್ಯ ನಿಷ್ಠುರವಾದ ನಿಮ್ಮ ಲೇಖನಗಳನ್ನು ಗಮನಿಸುತ್ತಿದ್ದೇನೆ. ಭಾರತದ ಮಾಧ್ಯಮಗಳ ಕುರಿತಾಗಿ ನನ್ನ ಹಾಗೂ ನಿಮ್ಮ ಜಿಗುಪ್ಸೆ/ ಆಕ್ರೋಶ/ ಅಭಿಪ್ರಾಯ/ ಕಳಕಳಿ/ ವೇದನೆ/ ಸುಧಾರಣೆಯಾಗಬೇಕೆಂಬ ಹಂಬಲ/ ತುಡಿತ-ಮಿಡಿತ ಇತ್ಯಾದಿಗಳೆಲ್ಲ ಏಕ ರೀತಿ ಇರುವುದು ಒಂದು ರೀತಿ ಅಚ್ಚರಿ (ಅಚ್ಚರಿ ಏಕೆಂದರೆ ನಮ್ಮ-ನಿಮ್ಮಂಥವರು ಈ ಕ್ಷೇತ್ರದಲ್ಲಿ ಅಲ್ಪ ಸಂಖ್ಯಾತರು ಅದಕ್ಕೆ!) ಅಥವಾ ಮತ್ತೊಂದು ರೀತಿ ಸಮಾಧಾನವೂ ಹೌದು.

    Reply
    1. Shripad

      ಜನಹಿತ ಸೊಗಸಾಗಿದೆ. ಗಮನಿಸಿದೆ. ಪತ್ರಿಕಾರಂಗದಲ್ಲಿ ಏಳು ವರ್ಷ ದುಡಿದು ಅದರ ಒಳಹೊರಗಿನ ಕರಾಮತ್ತುಗಳನ್ನು ಕಂಡಿದ್ದೇನೆ. ಅನ್ಯಾಯ ಕಂಡೂ ಬೇರೇನೂ ಮಾಡಲಾಗದೇ ಅಸಹಾಯಕತೆಯಿಂದ ಕೆಲಸಕ್ಕಾಗಿ ಕೆಲಸ ಮಾಡುತ್ತಿರುವ ಪತ್ರಕರ್ತರಿಗೆ ಕೊರತೆಯೇನೂ ಇಲ್ಲ.

      Reply
  3. Ananda Prasad

    ಮಾಧ್ಯಮಗಳು ವಾಣಿಜ್ಯ ಹಿತಾಸಕ್ತಿಗಳಿಗೆ ಬಲಿಯಾದ ನಂತರ ವಸ್ತುನಿಷ್ಠ ಪತ್ರಿಕೋದ್ಯಮ ಗತಕಾಲದ ವಿದ್ಯಮಾನವಾಗಿದೆ. ಜಾಹೀರಾತುಗಳ ಮೂಲಕ ಬದುಕುವ ಮಾಧ್ಯಮಗಳು ಪತ್ರಿಕಾಧರ್ಮವನ್ನು ಎತ್ತಿ ಹಿಡಿಯಲಾರದ ಪರಿಸ್ಥಿತಿಗೆ ತಲುಪಿವೆ. ಇದು ಟಿವಿ ಮಾಧ್ಯಮಗಳ ನಿಟ್ಟಿನಲ್ಲಿ ಹೆಚ್ಚು ಹೆಚ್ಚಾಗಿ ಕಂಡುಬರುತ್ತದೆ. ಟಿವಿ ಮಾಧ್ಯಮಗಳಿಗೆ ಜಾಹೀರಾತು ದೊರಕುವ ಮಾನದಂಡವಾದ ಟಿಆರ್ಪಿ ಅಳೆಯುವ ವಿಧಾನ ತೀರಾ ಅವೈಜ್ಞಾನಿಕವಾಗಿದ್ದು ಟಿವಿ ಮಾಧ್ಯಮದ ಎಲ್ಲಾ ಅನಿಷ್ಠಗಳಿಗೆ ಮೂಲ ಕಾರಣವಾಗಿದೆ. ಹೀಗಾಗಿ ಪತ್ರಕರ್ತರೇ ಸೇರಿ ಆರಂಭಿಸಿದ ಟಿವಿ ವಾಹಿನಿಗಳೂ ಉಳಿದವುಗಳಿಗಿಂಥ ಭಿನ್ನವಾಗಿ ಕಾರ್ಯ ನಿರ್ವಹಿಸಲಾರದ ದುಸ್ಥಿತಿಗೆ ಸಿಲುಕಿವೆ. ಇದನ್ನು ಸರಿಪಡಿಸಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ನಾವು ಸಿಲುಕಿದ್ದೇವೆ. ಹೀಗಾಗಿ ಮಾಧ್ಯಮಗಳು ಸಮಾಜದ ಪರಿವರ್ತನೆಯ ವಾಹಕವಾಗುವ ಬದಲಿಗೆ ಏನೂ ಮಾಡಲಾಗದ ಅಸಹಾಯಕ ಸ್ಥಿತಿಗೆ ತಲುಪಿವೆ. ಹೀಗಾಗಿ ಮಾಧ್ಯಮಗಳು ಸಂವಿಧಾನದ ಕಾವಲು ನಾಯಿಯಾಗುವ ಯೋಗ್ಯತೆಯನ್ನು ಕಳೆದುಕೊಂಡು ಕೆಲವು ದಶಕಗಳೇ ಆದವು. ಇದರಿಂದ ಹೊರಬರುವ ದಾರಿಯೇ ಇಲ್ಲವೇ ಎಂದರೆ ಅಂತರ್ಜಾಲ ಎಂಬ ಒಂದು ದಾರಿ ಮಾತ್ರ ಇದೆ. ಸದ್ಯಕ್ಕೆ ಇದು ಕೂಡ ಶ್ರೀಮಂತ, ಮೇಲ್ಮಧ್ಯಮ ವರ್ಗಗಳಿಗೆ ಸೀಮಿತವಾಗಿದೆ. ಭಾರತದಲ್ಲಿ ಅಂತರ್ಜಾಲವನ್ನು ಎಲ್ಲರಿಗೆ ಎಟಕಿಸುವ ರೀತಿಯಲ್ಲಿ ತಂತ್ರಜ್ಞಾನದ ಬೆಳವಣಿಗೆಗಳು ನಡೆದರೆ ಅಂತರ್ಜಾಲವು ಒಂದು ಅತ್ಯಂತ ಶಕ್ತಿಯುತ ಮಾಧ್ಯಮ ಆಗಬಹುದು. ಉದಾಹರಣೆಗೆ ಭಾರತದ ಎಲ್ಲೆಡೆ ಹಳ್ಳಿಗಳಿಗೂ ೩ಜಿ ಮೊಬೈಲ್ ಸಂಪರ್ಕ ವ್ಯವಸ್ಥೆ ಬಂದರೆ ಮೊಬೈಲಿನಲ್ಲಿಯೂ ವೇಗದ ಅಂತರ್ಜಾಲ ಸಂಪರ್ಕ ಜನಸಾಮಾನ್ಯರಿಗೆ ಎಟಕುವ ಬೆಳವಣಿಗೆ ನಡೆದರೆ ಅಂತರ್ಜಾಲ ಪತ್ರಿಕೆಗಳು, ಫೇಸ್ಬುಕ್, ಟ್ವಿಟ್ಟರ್ ಇತ್ಯಾದಿಗಳ ಮೂಲಕ ಹೆಚ್ಚಿನ ಬಂಡವಾಳದ ಅಗತ್ಯವಿಲ್ಲದೆ ವಸ್ತುನಿಷ್ಠ ಪತ್ರಿಕಾಧರ್ಮವನ್ನು ಎತ್ತಿ ಹಿಡಿಯಲು ಸಾಧ್ಯ ಹಾಗೂ ಹೆಚ್ಚು ಬಂಡವಾಳ ಹಾಗೂ ಜಾಹೀರಾತುಗಳ ಹಂಗಿಲ್ಲದೆ ಜನರನ್ನು ಜಾಗೃತಗೊಳಿಸಲು ಸಾಧ್ಯ. ಪಾಶ್ಚಾತ್ಯ ದೇಶಗಳಲ್ಲಿ ಟಿವಿ ಹಾಗೂ ಪತ್ರಿಕಾ ಮಾಧ್ಯಮಗಳಿಗೆ ಪರ್ಯಾಯವಾಗಿ ಈಗಾಗಲೇ ಅಂತರ್ಜಾಲ ಮಾಧ್ಯಮ ಸವಾಲಾಗಿ ಬೆಳೆದು ನಿಂತಿದೆ ಹಾಗೂ ಟಿವಿ ಹಾಗೂ ಪತ್ರಿಕಾ ಮಾಧ್ಯಮಗಳ ಯಜಮಾನಿಕೆಯ ಧೋರಣೆಯನ್ನು ಮೆಟ್ಟಿ ನಿಲ್ಲುವಲ್ಲಿ ಯಶಸ್ವಿಯಾಗಿವೆ.

    Reply
  4. suresh

    ಮಾಧ್ಯಮಗಳ ಈ ಧೋರಣೆ ಬದಲಾಗಬೇಕಾದರೆ, ಅಂತರ್ಜಾಲದ ಸಾಮಾಜಿಕ ತಾಣಗಳು ಪ್ರಮುಖ ಸಾಧನವಾಗಬಲ್ಲವು. ಆಗುತ್ತಿವೆ ಕೂಡ. ಮುಂದೊಂದು ದಿನ, ಮಾಧ್ಯಮಗಳ ಅಡ್ಡದಾರಿಗಳಿಗೆ ಕಡಿವಾಣ ಹಾಕಲಾಗುತ್ತದೆ. ನನಗೆ ತಿಳಿದ ಮಟ್ಟಿಗೆ ವರ್ತಮಾನ ಪತ್ರಿಕೆಯಲ್ಲಿ ನಿಷ್ಠುರವೆನಿಸಿದರೂ, ಅತ್ಯಂತ ಪ್ರಮುಖ ಹಾಗೂ ಅಷ್ಟೇ ವಿಶ್ಲೇಷಣಾತ್ಮಕವಾಗಿ ಬರವಣಿಗೆಗಳು ಬರುತ್ತಿರುವುದು ಒಳ್ಳೆಯ ಬೆಳೆವಣಿಗೆ. ಇದರಲ್ಲಿ ಮುಕ್ತ ಅವಕಾಶಗಳು ಇರುವುದರಿಂದ ಪಾರದರ್ಶಕ ಚರ್ಚೆಗಳು, ಪ್ರತಿಕ್ರಿಯೆಗಳು ನಡೆಯುತ್ತವೆ. ಮಾಧ್ಯಮದ ಅಗತ್ಯತೆ ಮತ್ತು ಘನತೆಯನ್ನು ಗಮನದಲ್ಲಿಟ್ಟುಕೊಂಡಿರುವುದರಿಂದಲೇ ಗೊತ್ತಿದ್ದರೂ ಮೌನ ವಹಿಸಲಾಗಿದೆ. ಅದನ್ನು ಮಾಧ್ಯಮಗಳು ಅರಿತು ನಡೆಯುವುದು ಒಳ್ಳೆಯದು. ಇಲ್ಲವಾದರೆ, ಬೇರೆ ರೀತಿಯ ಸಮಸ್ಯೆಗಳಿಗೆ ಅವಕಾಶ ಮಾಡಿಕೊಡುತ್ತದೆ

    Reply
    1. Shripad

      ಇಷ್ಟೆಲ್ಲ ಇದ್ದೂ “ಅತ್ಯಂತ ವಿಶ್ವಾಸಾರ್ಹ” ಎಂದು ಯಾವ ಪುರುಷಾರ್ಥಕ್ಕೆ ಟ್ಯಾಗ್ ಹಾಕಿಕೊಳ್ಳುತ್ತವೋ?

      Reply
  5. sanju

    – ನಿಮ್ಮ ಈ ಲೇಖನ ನೋಡಿದರೆ ವಸ್ತುಸ್ಥಿತಿ ಅರಿತಿಲ್ಲ ಎಂದೇ ಭಾವಿಸುವಂತಾಗಿದೆ.
    – ಜಾಲತಾಣ ಕೇಂದ್ರಿತ ಮಾಧ್ಯಮಗಳು ಬರುತ್ತಿವೆ, ಮುದ್ರಣ ಮಾಧ್ಯಮಗಳಿಗೆ ಕಷ್ಟ ಎನ್ನುತ್ತೀರಿ, ಅದು ಹೇಗೆ?
    – ಬೇರೆ ಯಾವುದೋ ದೇಶದಲ್ಲಿ ಹೀಗಾಗಿದೆ ಎಂಬ ಅಭಿಪ್ರಾಯವೂ ಕೇಳಿಬರುತ್ತೆ…
    – ಭಾರತ ಇನ್ನೂ ಯಾವ ಸ್ಥಿತಿಯಲ್ಲಿದೆ, ಈ ಬಗ್ಗೆ ಎಂದಾದರೂ ಯೋಚಿಸಿದ್ದೀರಾ?
    – ಭಾರತದಲ್ಲಿನ ಇಂಟರ್ ನೆಟ್ ವ್ಯವಸ್ಥೆ ಮತ್ತು ಅದರ ಸಂಪರ್ಕ ಹೇಗಿದೆ ಗೊತ್ತಾ?
    – ಬೆಂಗಳೂರು, ಮೈಸೂರು ಬಿಟ್ಟು 3ಜಿ ಇನ್ನೂ ಮುಂದಕ್ಕೆ ಹೋಗಿಲ್ಲ. ಮನೆಯಲ್ಲಿ ಕುಳಿತು ಏನೇನೋ ಯೋಚನೆ ಮಾಡಿ ಗೀಚಿದರೆ ಆಗುತ್ತಾ?
    – ನಿಮ್ಮ ಲೇಖನ ಓದುವ ಟಾರ್ಗೆಟ್ ವರ್ಗ ಯಾವುದು?
    – ಅದಕ್ಕೆ ನೀವು ಬರೆಯುವ ಲೇಖನ ತಲುಪುತ್ತಿದೆ ಎಂದು ಭಾವಿಸಿದ್ದೀರಾ?
    – ಭಾರತವಿನ್ನೂ ಅಮೆರಿಕದಂಥ ರಾಷ್ಟ್ರಗಳಿಗಿಂತ ಎಷ್ಟೋ ವರ್ಷಗಳಷ್ಟು ಹಿಂದೆಯೇ ಇದೆ ಎಂದು ನಿಮಗೆ ಏಕೆ ಅನ್ನಿಸುತ್ತಿಲ್ಲ?
    – ಇದಕ್ಕೆ ಯಾರು ಕಾರಣರು ಎಂಬ ಬಗ್ಗೆ ಏಕೆ ಯೋಚನೆ ಮಾಡುತ್ತಿಲ್ಲ?
    – ನಾವು 3ಜಿಯೇ ತಲುಪಿಲ್ಲ ಎಂದು ಯೋಚಿಸುತ್ತಿರಬೇಕಾದರೆ, ಎಷ್ಟೋ ದೇಶಗಳಲ್ಲಿ 5ಜಿ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ ಗೊತ್ತಿದೆಯೇ?
    – ಮಾಧ್ಯಮ ಸಂಸ್ಥೆಗಳು ಮತ್ತು ಅದರ ಮಾಲೀಕರಿಗೆ ಇರುವ ಕಷ್ಟಗಳ ಬಗ್ಗೆ ಅರಿವಿದೆಯೇ?
    – ಒಂದು ಪತ್ರಿಕೆ ನಡೆಸಬೇಕಾದರೆ ಎಷ್ಟು ವೆಚ್ಚ ತಗುಲುತ್ತೆ ಎಂಬುದು ಗೊತ್ತಿದೆಯೇ?
    – ಸಾಮಾನ್ಯ ನಾಗರೀಕ ಮತ್ತು ಪರ್ತಕರ್ತ, ಇವರಿಬ್ಬರಿಗೂ ಇರುವುದು ಒಂದೇ ಅಧಿಕಾರ ಎಂದಿದ್ದೀರಿ?
    – ಹಾಗಾದರೆ ಇವರಿಬ್ಬರೂ ಕಂಪಲ್ಶನ್ ನಡಿಯಲ್ಲೇ ಬದುಕುತ್ತಿದ್ದಾರೆ ಎಂಬುದು ಅರಿವಾಗುತ್ತಿಲ್ಲವೇ?
    – ಸಿದ್ಧಾಂತ ಹೇರಿಕೆ ತಪ್ಪು ನಿಜ, ಆದರೆ ಸಂಪಾದಕೀಯ ಪುಟ ಇರುವುದೇ ಅಭಿವ್ಯಕ್ತಿ ಸ್ವಾತಂತ್ರ್ಯ ಬಿಚ್ಚಿಡುವುದಕ್ಕೆ ಎಂಬುದು ಗೊತ್ತಿಲ್ಲವೇ?
    – ನೀವು ಬರೆದಿರುವ ಲೇಖನ ಕೂಡ ಬೇರೊಬ್ಬರ ಮನಸ್ಸಿನ ಭಾವನೆ, ಸಿದ್ಧಾಂತ ಬದಲಿಸಬಹುದು, ಆ ಕೆಲಸ ನೀವು ಕೂಡ ಮಾಡಿದ್ದೀರಿ ಎಂಬ ಭಾವನೆ ಬಂದಿಲ್ಲವೇ?
    – ಒಂದು ವಿಚಾರ ತಪ್ಪು ಎಂದೋ, ಸರಿ ಎಂದೋ ಹೇಳುವಾಗ ನೀವು ತೆಗೆದುಕೊಳ್ಳುವ ಉದಾಹರಣೆಗಳು, ಸ್ಪಷ್ಟನೆಗಳು, ಕಾರಣಗಳು ಕೂಡ ಬೇರೊಬ್ಬರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆಯಲ್ಲವೇ?
    – ಹೀಗೆ ಪ್ರಶ್ನೆ ಕೇಳುತ್ತಾ ಹೋದರೆ ಸರಮಾಲೆಯೇ ಆಗಬಹುದು. ಹಾಗೆಯೇ ಮಾಧ್ಯಮಗಳಿಗೆ ಅವುಗಳದ್ದೇ ಆದ ಸಿದ್ಧಾಂತವಿದೆ. ಅವು ತಮ್ಮ ನಡವಳಿಕೆಯನ್ನೇಕೇ ಪ್ರಶ್ನಿಸಿಕೊಳ್ಳುವುದಿಲ್ಲವೆಂದರೆ, ಅವು ಮಾಡುತ್ತಿರುವ ಕೆಲಸ, ಆ ಪತ್ರಿಕೆಯ ಸಿದ್ಧಾಂತಕ್ಕೆ ಸರಿಹೊಂದುತ್ತದೆ. ಹಾಗಾಗಿ ಪ್ರಶ್ನಿಸಿಕೊಳ್ಳುವುದಿಲ್ಲ?
    – ಈಗ ನಿಮ್ಮ ಮನಸ್ಥಿತಿಯಂತೆ. ನೀವು ಮೊದಲಿನಿಂದಲೂ ಎಡಪಂಥೀಯ ಧೋರಣೆಯುಳ್ಳ ವ್ಯಕ್ತಿ. ನಿಮ್ಮದು ಕಾಂಗ್ರೆಸ್ ಕುರಿತು ಸಾಫ್ಟ್ ಮನೋಭಾವ. ಇನ್ನೊಂದು ಪಕ್ಷದ ಕುರಿತು ವಿರೋಧಿ ಮನೋಭಾವ. ಆದರೂ ಇನ್ನೊಂದು ಪಕ್ಷದ ಸರ್ಕಾರ ಒಳ್ಳೆ ಕೆಲಸ ಮಾಡಿದಾಗ ಏಕೆ ಹೊಗಳಿ ಬರೆಯಲ್ಲ. ಹೀಗೆ ಬರೆದರೆ ನಿಮ್ಮ ಸಿದ್ಧಾಂತಕ್ಕೆ ಹೊಡೆತ ಬೀಳುತ್ತೆ ಎಂಬ ಭಯವೇ?
    – ನಿಮ್ಮ ಮನಸ್ಸಿನಂತೆಯೇ ಮಾಧ್ಯಮಗಳೂ ಕೂಡ. ಅವುಗಳ ವ್ಯಾಪ್ತಿ ದೊಡ್ಡದಿರುವುದರಿಂದ ವಿಷಯ ದೊಡ್ಡದು ಅನ್ನಿಸುತ್ತೆ ಎಂಬುದು ನನ್ನ ಅಭಿಪ್ರಾಯ. ಆದರೆ ಇಷ್ಟೆಲ್ಲಾ ಪ್ರಶ್ನೆ ಕೇಳಿದ ನಾನು ಎಲ್ಲಾ ಮಾಧ್ಯಮಗಳನ್ನು ಒಪ್ಪುತ್ತೇನೆ ಎನ್ನಲ್ಲ. ನನಗೂ ಅಸಮಾಧಾನವಿದೆ. ಆದರೆ ಮಾಧ್ಯಮಗಳ ಒಳ್ಳೆಯ ಸಂಗತಿಗಳತ್ತ ಮಾತ್ರ ನೋಡುತ್ತೇನೆ.

    Reply
    1. Shripad

      (ನೀವು ಮೊದಲಿನಿಂದಲೂ ಎಡಪಂಥೀಯ ಧೋರಣೆಯುಳ್ಳ ವ್ಯಕ್ತಿ. ನಿಮ್ಮದು ಕಾಂಗ್ರೆಸ್ ಕುರಿತು ಸಾಫ್ಟ್ ಮನೋಭಾವ. ಇನ್ನೊಂದು ಪಕ್ಷದ ಕುರಿತು ವಿರೋಧಿ ಮನೋಭಾವ. ಆದರೂ ಇನ್ನೊಂದು ಪಕ್ಷದ ಸರ್ಕಾರ ಒಳ್ಳೆ ಕೆಲಸ ಮಾಡಿದಾಗ ಏಕೆ ಹೊಗಳಿ ಬರೆಯಲ್ಲ. ಹೀಗೆ ಬರೆದರೆ ನಿಮ್ಮ ಸಿದ್ಧಾಂತಕ್ಕೆ ಹೊಡೆತ ಬೀಳುತ್ತೆ ಎಂಬ ಭಯವೇ?)
      ಮಿ. ಸಂಜು, ಯು ಆರ್ ಮಿಸ್ಟೇಕನ್! ಊರಿಗೊಬ್ಬಳೇ ಪದ್ಮಾವತಿಯಲ್ಲ. “ಶ್ರೀಪಾದ ಭಟ್” ಹೆಸರು ನೋಡಿ ಅದರ ಹಿಂದು ಮುಂದು ನೋಡದೆ ಕಾಮೆಂಟ್ ಬರೆದಿದ್ದೀರಲ್ಲಾ? ಏಳು ವರ್ಷ ಮಾಧ್ಯಮದಲ್ಲಿ ದುಡಿದು ಈಗ ಈ ಬಗ್ಗೆ ನಿತ್ಯ ಪಾಠ ಮಾಡುವ ನನಗೆ ನೀವು ಕೇಳುವಂಥ ಹತ್ತಾರು ಪ್ರಶ್ನೆಗಳು ನನ್ನ ವಿದ್ಯಾರ್ಥಿಗಳಿಂದಲೇ ಬರುತ್ತಿರುತ್ತವೆ. ಈ ಲೇಖನ ಬರೆಯುವ ವೇಳೆಗೆ ಇನ್ನಷ್ಟು ಹೊಸ ಪ್ರಶ್ನೆಗಳು ಹುಟ್ಟಿವೆ.
      ಜ್ನಾನಿ ಸಂಜು ಅವರೇ, ಪ್ರಪಂಚ ವಿಶಾಲವಾಗಿರುವಂತೆಯೇ ಅಲ್ಲಿನ ಊರುಗಳು ತುಂಬ ಹತ್ತಿರವಾಗಿವೆ. ನಿಮ್ಮಷ್ಟೇ ಅಥವಾ ನಿಮಗಿಂತ ತುಸು ಹೆಚ್ಚು ಅನುಮಾನಗಳೂ ಉತ್ತರಗಳೂ ಬೇರೆಯವರ ಅನುಭವಕ್ಕೆ ಬಂದಿರಲೂ ಸಾಕು ಎಂಬ ಎಚ್ಚರದಲ್ಲಿ ಕಮೆಂಟು ಬರೀರಿ. ವೈಯಕ್ತಿಕ ಸಿಟ್ಟು, ಹೆಚ್ಚುಗಾರಿಕೆ ಪ್ರದರ್ಶನದ ಅಗತ್ಯವಿಲ್ಲ.

      Reply
    2. Ananda Prasad

      ಮೊಬೈಲ್ ೩ಜಿ ತಂತ್ರಜ್ಞಾನ ಈಗಾಗಲೇ ಎಲ್ಲಾ ತಾಲೂಕು ಕೇಂದ್ರಗಳಲ್ಲಿಯೂ ಲಭ್ಯವಾಗುತ್ತಿದೆ. ಏರ್ಟೆಲ್, ಬಿಎಸ್ಸೆನ್ನೆಲ್, ಐಡಿಯಾ, ಎಂಟಿಎಸ್, ರಿಲಯನ್ಸ್, ಟಾಟಾ ಡೊಕಾಮೋ ಮೊದಲಾದವು ಈಗಾಗಲೇ ಎಲ್ಲ ತಾಲೂಕು ಕೇಂದ್ರಗಳಿಗೂ ೩ಜಿ ಸೌಲಭ್ಯವನ್ನು ವಿಸ್ತರಿಸಿವೆ. ಸದ್ಯಕ್ಕೆ ೩ಜಿ ಸೌಲಭ್ಯಕ್ಕೆ ಹೆಚ್ಚಿನ ದರವಿದ್ದು ಬಳಕೆ ಕಡಿಮೆಯಾಗಿದೆ. ಇದನ್ನು ಹೆಚ್ಚು ಹೆಚ್ಚು ಜನ ಬಳಸಿದಂತೆ ಹಾಗೂ ಇದು ಎಲ್ಲಡೆಗೂ ವಿಸ್ತರಿಸಿದಾಗ ೩ಜಿ ದರಗಳು ಇನ್ನಷ್ಟು ಕಡಿಮೆಯಾಗಿ ಜನರಿಗೆ ಎಟಕಲಿದೆ. ಮೊಬೈಲ್ ಆರಂಭದಲ್ಲಿಯೂ ಅದರ ಬಳಕೆ ಹಾಗೋ ವ್ಯಾಪ್ತಿ ಕಡಿಮೆ ಇದ್ದಾಗ ದರಗಳು ಹೆಚ್ಚಿದ್ದು ಜನಸಾಮಾನ್ಯರಿಗೆ ಎಟಕುವಂತಿರಲಿಲ್ಲ. ಅದರ ಬಳಕೆ ಹಾಗೂ ವ್ಯಾಪ್ತಿ ಹೆಚ್ಚುತ್ತಾ ಹೋದ ಹಾಗೆ ದರಗಳು ಜನಸಾಮಾನ್ಯರಿಗೆ ಎಟಕುವ ಮಟ್ಟಕ್ಕೆ ಬಂದು ಇಂದು ಬಡವ ಬಲ್ಲಿದ ಎನ್ನದೆ ಎಲ್ಲರ ಬಳಿಯೂ ಮೊಬೈಲ್ ಇರುವುದನ್ನು ಕಾಣಬಹುದು. ೩ಜಿ ವಿಷಯದಲ್ಲಿಯೂ ಇದೇ ರೀತಿಯ ಬೆಳವಣಿಗೆ ಮುಂದೆ ನಡೆಯಲಿದೆ. ಭಾರತ ಸರ್ಕಾರವು ೨೦,೦೦೦ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಭಾರತದಾದ್ಯಂತ ವೇಗದ ಅಂತರ್ಜಾಲ ಸೌಲಭ್ಯವನ್ನು ಹಳ್ಳಿಹಳ್ಳಿಗಳಿಗೂ ತಲುಪಿಸುವ ಭಾರತ್ ಬ್ರಾಡ್ಬ್ಯಾಂಡ್ ನೆಟ್ವರ್ಕ್ ಜಾಲ ರೂಪಿಸುವ ಯೋಜನೆ ಹೊಂದಿದ್ದು ಇದು ಇನ್ನಷ್ಟೇ ಕಾರ್ಯಗತವಾಗಬೇಕಾಗಿದೆ. ಇದು ಕಾರ್ಯಗತವಾದಾಗ ಎಲ್ಲ ಹಳ್ಳಿಗಳಲ್ಲಿಯೂ ೩ಜಿ ಸೌಲಭ್ಯ ದೊರಕಬಹುದು. ಅದೂ ಅಲ್ಲದೆ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇನ್ಫೋಕಾಮ್ಕಂಪನಿಯು ಭಾರತದಾದ್ಯಂತ ೪ಜಿ ಮೊಬೈಲ್ ತಂತ್ರಜ್ಞಾನವನ್ನು ಕಾರ್ಯಗತಗೊಳಿಸುವ ಯೋಜನೆ ಹೊಂದಿದ್ದು ಇದು ೨೦೧೫ರಿಂದ ಹಂತಹಂತವಾಗಿ ಜಾರಿಗೆ ಬರಲಿದೆ. ೩ಜಿ ಮೊಬೈಲಿನಲ್ಲಿ ಹಲವು ಟಿವಿ ವಾಹಿನಿಗಳೂ ಲಭ್ಯವಿರುವುದರಿಂದ ಮುಂಬರುವ ದಿನಗಳಲ್ಲಿ ಹೆಚ್ಚಲಿದೆ. ಜನ ಎಲ್ಲಿದ್ದರೂ ೩ಜಿ ಮೊಬೈಲ್ ಮೂಲಕ ಟಿವಿ ವಾಹಿನಿಗಳನ್ನೂ, ಕಾರ್ಯಕ್ರಮಗಳನ್ನೂ ವೀಕ್ಷಿಸಲು ಇದರಿಂದ ಸಾಧ್ಯವಾಗಲಿದೆ.

      Reply
  6. sanju

    ನನ್ನ ಕಮೆಂಟ್ ಗೆ ಉತ್ತರ ಕೊಟ್ಟಿದ್ದಕ್ಕೆ ಧನ್ಯವಾಧ. ಇಲ್ಲಿ ವೈಯಕ್ತಿಕ ಸಿಟ್ಟು ಮತ್ತು ಹೆಚ್ಚುಗಾರಿಕೆ ಮಾಡುವ ಅಗತ್ಯ ಯಾರಿಗೂ ಇಲ್ಲ ಎಂದೇ ಭಾವಿಸುತ್ತೇನೆ. ಇನ್ನೊಂದು ವಿಚಾರವೆಂದರೆ ವೈಯಕ್ತಿಕ ಸಿಟ್ಟಿಡಲು ನೀವು ಯಾರು ಎಂಬುದು ನನಗೆ ಗೊತ್ತಿಲ್ಲ, ಅಂತೆಯೇ ನಾನು ಯಾರೆಂಬುದು ನಿಮಗೂ ಗೊತ್ತಿಲ್ಲ. ಹೀಗಾಗಿ ವೈಯಕ್ತಿಕ ಸಿಟ್ಟು ಇಡಲು ಕಾರಣವಿಲ್ಲ ಎಂದು ತಿಳಿಯುತ್ತೇನೆ. ನಿಮ್ಮ ಪರಿಚಯ ಇದೇ ವರ್ತಮಾನದಲ್ಲೇ ಆಗಿದ್ದು. ನಿಮ್ಮ ಲೇಖನ ಆಗಾಗ ಓದುತ್ತಲೇ ಇರುತ್ತೇನೆ. ಅದರ ಅಡಿಯಲ್ಲೇ ಬರೆದಿದ್ದು. 7 ವರ್ಷಗಳ ಕಾಲ ಇದೇ ಮಾಧ್ಯಮದಲ್ಲಿ ದುಡಿದಿದ್ದೇನೆ ಎನ್ನುತ್ತೀರಿ. ಹೀಗಾಗಿ ಮಾಧ್ಯಮಗಳ ಸ್ಥಿತಿ ಬಗ್ಗೆ ವಿವರಿಸಬೇಕಾಗಿಲ್ಲ ಅಂದುಕೊಳ್ಳುತ್ತೇನೆ. ಮತ್ತೊಮ್ಮೆ ಧನ್ಯವಾದ.

    Reply
    1. Shripad

      ಗುಡ್. ನೀವು ಕೇಳಿದ ಪ್ರಶ್ನೆಗಳೆಲ್ಲ ನನ್ನಲ್ಲೂ ಇವೆ ಎಂದುಕೊಂಡು ಈಗ ಮತ್ತೊಮ್ಮೆ ಸಮಾಧಾನದಿಂದ ಮೊದಲೆರಡು ಮತ್ತು ಸದರಿ ಲೇಖನಗಳನ್ನು ಓದಿ. ಉತ್ತರ ದೊರೆಯುತ್ತದೆ ಎಂದು ಭಾವಿಸುತ್ತೇನೆ!

      Reply
  7. sanju

    ಆನಂದ್ ಪ್ರಸಾದ್ ಅವರಿಗೆ, ತಂತ್ರಜ್ಞಾನದ ಬಗ್ಗೆ ನೀವು ಕೊಟ್ಟ ಸುದೀರ್ಘ ವಿವರಣೆ ಚೆನ್ನಾಗಿದೆ. ಬೆಂಗ್ಳೂರು ಮತ್ತು ಮೈಸೂರು ಬಿಟ್ಟು ತಾಲೂಕು ಕೇಂದ್ರಗಳಲ್ಲೂ 3ಜಿ ಸಿಗುತ್ತೆ ಅಂತಿದ್ದೀರಿ. ಈ ವಿಚಾರ ಸೇವೆ ನೀಡುವ ಕಂಪನಿಗಳಿಗೇ ಗೊತ್ತಿಲ್ಲ ಅನ್ನಿಸುತ್ತೆ. ಐಡಿಯಾ 3ಜಿ ಬೆಂಗ್ಳೂರಲ್ಲೂ ಸಿಗುತ್ತೆ ಎಂಬ ಬಗ್ಗೆ ಖಾತರಿ ಇಲ್ಲ. ರಿಲಾಯನ್ಸ್ ಅವರು ಎಲ್ಲಾ ಕಡೆ 4ಜಿ ಕೊಡ್ತೇವೆ ಅಂತಿದ್ದಾರೆ, ಆದರೆ ಅವರಿನ್ನೂ ಲಾಭ ನಷ್ಚಗಳ ಲೆಕ್ಕಾಚಾರದಲ್ಲಿದ್ದಾರೆ. ಆದರೆ 2ಜಿ ಎಲ್ಲಾ ಕಡೆ ಸಿಗುತ್ತೆ ಎಂಬುದು ನಿರ್ವಿವಾದ. ಆದರೆ ಇದರ ವೇಗ ನಿಮಗೂ ಅರಿವಿದೆ ಎಂಬುದು ನನ್ನ ಭಾವನೆ. ಆದರೆ ಟೆಕ್ ಕ್ರಾಂತಿ ಆಗಲೇಬೇಕು. ಅದು ಆದಾಗಲೇ ಜಗತ್ತು ಅವರವರ ಕೈಯಲ್ಲಿ ಇರುತ್ತದೆ. ಇದು ಬೇಗ ಬರಲಿ ಎಂದು ಆಶಿಸುವ.

    Reply
  8. Ananda Prasad

    ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಂಥ ತಾಲೂಕು ಕೇಂದ್ರದಲ್ಲಿ ಏರ್ಟೆಲ್ ಕಂಪೆನಿಯ ೩ಜಿ ಸೌಲಭ್ಯ ಒಂದೂವರೆ ವರ್ಷ ಹಿಂದಿನಿಂದಲೇ ಲಭ್ಯವಿದೆ ಮತ್ತು ಇದನ್ನು ಉಪಯೋಗಿಸುವವರ ಪ್ರಕಾರ ವೇಗ ಉತ್ತಮವಾಗಿದೆ. ರಿಲಯನ್ಸ್ ಕಂಪೆನಿಯ ೩ಜಿ ಸೌಲಭ್ಯ (ವಯರ್ಲೆಸ್ಸ್ ಬ್ರಾಡ್ ಬ್ಯಾಂಡ್) ಸುಮಾರು ಮೂರು ವರ್ಷ ಹಿಂದಿನಿಂದಲೇ ಲಭ್ಯವಿದೆ ಮತ್ತು ವೇಗ ಹಾಗೂ ಸೇವೆ ಉತ್ತಮವಾಗಿದೆ. ಬಿಎಸ್ಸೆನ್ನೆಲ್, ಐಡಿಯಾ, ಎಂಟಿಎಎಸ್ ಮೊದಲಾದವುಗಳ ೩ಜಿ ಸೌಲಭ್ಯವೂ ಪುತ್ತೂರಿನಂಥ ತಾಲೂಕು ಕೇಂದ್ರದಲ್ಲಿ ಲಭ್ಯವಾಗುತ್ತಿದೆ. ಯಾವುದೇ ಕಂಪನಿಯಾದರೂ ಲಾಭ ನಷ್ಟದ ಒಂದು ಉದ್ಯಮ ಆರಂಭಿಸುವಾಗ ಲಾಭ ನಷ್ಟದ ಲೆಕ್ಕಾಚಾರ ಹಾಕುವುದು ಅನಿವಾರ್ಯ. ಹೀಗಾಗಿ ರಿಲಯನ್ಸ್ ಸಂಸ್ಥೆಯು ೪ಜಿ ಸೇವೆಗಳನ್ನು ಆರಂಭಿಸುವ ಬಗ್ಗೆ ಎಲ್ಲ ನಿಟ್ಟಿನಿಂದಲೂ ಲಾಭ ನಷ್ಟದ ಲೆಕ್ಕಾಚಾರ ಹಾಕುವುದು ಸಹಜ. ೪ಜಿಯಂಥ ಹೈ ಸ್ಪೀಡ್ ವಯರ್ಲೆಸ್ಸ್ ಇಂಟರ್ನೆಟ್ ಸೌಲಭ್ಯಕ್ಕೆ ಮಾರುಕಟ್ಟೆ ಕಂಪ್ಯೂಟರ್ ಸಾಕ್ಷರತೆ ಹೆಚ್ಚು ಇಲ್ಲದ ಭಾರತದಲ್ಲಿ ಆರಂಭದಲ್ಲಿ ಸಿಗುವುದು ಕಡಿಮೆಯೇ ಇರಬಹುದು ಆದರೆ ಬರಬರುತ್ತಾ ಇದಕ್ಕೆ ಉತ್ತಮ ಮಾರುಕಟ್ಟೆ ಸಿಗಬಹುದು. ಆರಂಭದಲ್ಲಿ ಕೇಬಲ್ ಟಿವಿ ಸೌಲಭ್ಯ ಪಡೆದುಕೊಳ್ಳುವುದು ನಗರಗಳಲ್ಲಿ ಮಾತ್ರ ಅದೂ ಶ್ರೀಮಂತರಿಗೆ ಮಾತ್ರ ಸಾಧ್ಯವಿತ್ತು. ನಂತರ ಇದು ದೊಡ್ಡ ಗಾತ್ರದ ಡಿಶ್ ಆಂಟೆನಾ ಮೂಲಕ ಹಳ್ಳಿಗಳ ಶ್ರೀಮಂತರಿಗೂ ಲಭ್ಯವಾಗತೊಡಗಿತು. ಡಿಟಿಎಚ್ ಸೌಲಭ್ಯ ಬಂದ ನಂತರ ನಗರಗಳಲ್ಲಿ ಲಭ್ಯವಾಗುತ್ತಿದ್ದ ಎಲ್ಲ ಟಿವಿ ವಾಹಿನಿಗಳೂ ಹಳ್ಳಿಯ ಮೂಲೆಯಲ್ಲಿಯೂ ಸಾಮಾನ್ಯ ಕೃಷಿಕನಿಗೂ ಲಭ್ಯವಾಗುವ ಬೆಳವಣಿಗೆ ನಡೆಯಿತು. ಇಂದು ಹಳ್ಳಿಯಲ್ಲಿಯೂ ಡಿಟಿಎಚ್ ಸೌಲಭ್ಯ ಇಲ್ಲದ ಮನೆ ಬಹಳ ಕಡಿಮೆ ಎಂದೇ ಹೇಳಬಹುದು. ಡಿಟಿಎಚ್ ಬೆಲೆ ಈಗ ಸಾಮಾನ್ಯರಿಗೂ ಎಟಕುವ ಮಟ್ಟಕ್ಕೆ ಬಂದು ನಿಂತಿದೆ. ಹೀಗಾಗಿ ಎಲ್ಲರಿಗೂ ತಂತ್ರಜ್ಞಾನದ ಸೌಲಭ್ಯ ಲಭ್ಯವಾಗುತ್ತಿದೆ. ನಿಧಾನಕ್ಕೆ ೩ಜಿ ಮೊಬೈಲ್ ವಿಷಯದಲ್ಲಿಯೂ ಇದೇ ಬೆಳವಣಿಗೆ ದೇಶಾದ್ಯಂತ ನಡೆಯಲಿದೆ. ೨ಜಿ ಮೊಬೈಲ್ನಲ್ಲಿ ೩ಜಿ ಸೌಲಭ್ಯ ಪಡೆಯುವುದು ಸಾಧ್ಯವಿಲ್ಲ. ಅದಕ್ಕಾಗಿ ೩ಜಿ ಸೌಲಭ್ಯ ಇರುವ ಮೊಬೈಲೇ ಬೇಕಾಗುತ್ತದೆ. ಹೀಗಾಗಿ ದೇಶದಲ್ಲಿ ೩ಜಿ ಮಾರುಕಟ್ಟೆ ಬೆಳೆಯಲು ಸ್ವಲ್ಪ ಸಮಯ ಹಿಡಿದೀತು ಏಕೆಂದರೆ ಸಾಮಾನ್ಯ ಭಾರತೀಯರಿಗೆ ಈ ತಂತ್ರಜ್ಞಾನದ ಸಾಧ್ಯತೆಗಳು ಅಪರಿಚಿತ. ಇದು ಪರಿಚಯವಾದಂತೆ ಜನ ಅದಕ್ಕೆ ಪರಿವರ್ತನೆ ಹೊಂದುತ್ತಾರೆ.

    Reply

Leave a Reply

Your email address will not be published. Required fields are marked *